Skip to content

October 27, 2011

30

ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…

by ನಿಲುಮೆ

-ಸಾತ್ವಿಕ್ ಎನ್ ವಿ

ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ  ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.

ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!!  ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ.  ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. ಬೆಂಗಳೂರೆಂಬೋ ಬೆಂಗಳೂರಿಗೆ ಸರಕಾರಿ ಕೆಲಸ ಕನಸು ಹೊತ್ತು ಬಂದ ನಮ್ಮಂಥ ಸಾವಿರಾರು ಬಡ ಕುಟುಂಬಗಳ ಜನರಿಗೆ ತಿಂಗಳಿಗೆ ಸರ್ಕಾರ ಕೊಡೋ ಸಂಬಳ ಎಷ್ಟು ಗೊತ್ತಾ ಸರ್. ತಿಂಗಳಿಗೆ ೩,೦೦೦/-. ನೀವೇ ಯೋಚಿಸಿ ಸರ್. ಬೆಂಗಳೂರಿನಲ್ಲಿ ಈ ೩,೦೦೦/- ರೂಪಾಯಿಯಲ್ಲಿ ಬದುಕುವುದು ಹೇಗೆ ಅಂತ. ಬೆಂಗಳೂರಿನ ನಗರ ಸಾರಿಗೆ ಬಸ್ಸುಗಳಲ್ಲಿ ದುಡಿಯುವ ಹೆಚ್ಚಿನವರು ಉತ್ತರ ಕರ್ನಾಟಕದ ಸಂತ್ರಸ್ಥ ಜಿಲ್ಲೆಗಳಿಂದ ಬಂದ ಜನ. ಎಲ್ಲವೂ ಸರಿಯಾಗಿರುವಾಗ, ಕೈ ತುಂಬಾ ಸಂಬಳ ಪಡಯೋ ಜನ, ನಿಷ್ಠೆ ಅದು ಇದು ಅಂತ ಮಾತಾಡೊಕೆ ಸಾಧ್ಯ ಸರ್. ಒಂದು ಸಲ ನಮ್ಮ ಸ್ಥಾನದಲ್ಲಿ ನಿಂತು ಯೋಚಿಸಿ ನಿಮಗೆ ಅರ್ಥ ಆಗುತ್ತೆ ಯಾಕೆ ಇಲ್ಲಿನ ಕಂಡಕ್ಟರ್ಗಳು ಕೆಲವು ಸಲ ಟಿಕೇಟ್ ಕೊಡದೇ ಹಣ ಉಳಿಸಿಕೊಳ್ಳುತ್ತಾರೆ ಅಂತ. ನಮಗೂ ಗೊತ್ತು  ನಾವು ಮಾಡೋದು ತಪ್ಪು ಅಂತ ಆದ್ರೆ ಬದುಕಬೇಕಲ್ಲ ಸರ್. ಊರಲ್ಲಿ ಕೂಲಿನಾದ್ರೂ ಬದುಕೋಣ ಅಂದ್ರೆ ಅತಿವೃಷ್ಟಿಯೋ ಅನಾವೃಷ್ಟಿಯೋ ಏನಾದ್ರು ಒಂದು ಇದ್ದೇ ಇರುತ್ತೆ. ಹೀಗಿರುವಾಗ ನಾವು ಹೇಗೆ ಬದುಕೋದು ಸಾರ್. ಇವತ್ತು ದೇಶದ ಯಾವುದೋ ಮೂಲೆಯಿಂದ ಬಂದು ಬೆಂಗಳೂರಿನಲ್ಲಿ ಮಾಡಬಾರದ್ದ್ದು ಮಾಡಿ ಶ್ರೀಮಂತರಾಗುತ್ತಿದ್ದಾರೆ. ನಮ್ಮ ಈ ಚಿಕ್ಕ ದೋಷವನ್ನು ದೊಡ್ಡದು ಮಾಡ್ತಾ ಇದ್ದೀರಲ್ಲ’ ಅಂದ.

ಒಂದು ಕ್ಷಣ ನನಗೆ ಏನು ಹೇಳಬೇಕೋ ತಿಳಿಯಲ್ಲಿಲ್ಲ. ೩,೦೦೦/- ರೂಪಾಯಿಯಲ್ಲಿ  ಬೆಂಗಳೂರಿನಲ್ಲಿ ಬದುಕುವುದು ಹೇಗೆ ಅಂತ ಎಷ್ಟೇ ಯೋಚಿಸಿದರೂ  ಹೊಳೆಯಲಿಲ್ಲ. ನೂರಾರು ಕನಸುಗಳನ್ನು ಹೊತ್ತು ಬರುವ ಎಳೆಯ ಮನಸ್ಸುಗಳಿಗೆ ಭ್ರಷ್ಟಾಚಾರದ ಮೊದಲ ಪಾಠಗಳು ನಮ್ಮ ವ್ಯವಸ್ಥೆಯ ಒಳಗಿನಿಂದಲೇ ಬರುತ್ತವೆಯೇನೋ ಅನ್ನಿಸಿತು. ಒಂದು ಕಡೆ ಲಕ್ಷ ರೂಪಾಯಿಗಳವರಗೆ ಸಂಬಳ ಪಡೆಯುವ ಸುಖದ ಕೆಲಸ, ಇನ್ನೊಂದು ಕಡೆ ರಜೆಯೇ ಇಲ್ಲದೇ ದುಡಿಯುವವನಿಗೆ ಕಿರುಗಾಸು ಕೊಡುವ ನಮ್ಮ ವ್ಯವಸ್ಥೆಗಳಿಗೆ ಏನೂ ಹೇಳಬೇಕೋ ತಿಳಿಯದು. ಒಬ್ಬ ಕಂಡಕ್ಟರ್ ಬಸ್ಸಿನ ಒಳಗಿಯೇ ತಿರುಗುವ ದೂರ ಎಷ್ಟು ಗೊತ್ತೇ? ಬರೋಬ್ಬರಿ ಐದು ಕಿಲೋಮೀಟರ್ ಗಳು. ನಮ್ಮ ಟೆಕ್ಕಿಗಳು ಅಣ್ಣಾ ಹಜಾರೆಯವರ ಜೊತೆ ವೀಕ್ ಎಂಡಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡ ಘಟನೆ ನನ್ನ ತಲೆಯಲ್ಲಿ ಒಂದು ಘಳಿಗೆ ಬಂದು ಹೋಯ್ತು. ವಿಶ್ವವಿದ್ಯಾನಿಲಯಗಳಲ್ಲಿ ಪುಲ್ ಟೈಮ್ ನಿದ್ದೆ ಮಾಡುತ್ತಿರುವ ಮೇಷ್ಟ್ರುಗಳ ಮುಖ ನೆನಪಿಗೆ ಬಂತು. ಭ್ರಷ್ಟಾಚಾರದ ಬಗ್ಗೆ ಕಪ್ಪು ಬಿಳುಪು ಚಿತ್ರಣ ನೀಡುವ ಭಾಷಣಕಾರರ ಬಗ್ಗೆ ಅಸಹ್ಯವಾಯಿತು. ಭ್ರಷ್ಟಾಚಾರದ ಮೇಲೇಯೇ ಬದುಕು ಕಟ್ಟಿ ಕೊಳ್ಳಿ ಎಂಬ ಸಂದೇಶವನ್ನು ವ್ಯವಸ್ಥೆಯೇ ನೀಡುತ್ತಿರುವಾಗ ಇಲ್ಲಿ ತಪ್ಪಿತಸ್ಥರು ಯಾರು ಎಂಬ ಪ್ರಶ್ನೆ ಮತ್ತೆ ಉತ್ತರಕಳಕೊಂಡಿತು.

***************

chitrakrupe : bangaloremirror.com

About these ads
30 Comments Post a comment
  1. Oct 27 2011

    ಇದು ನಿಜವಾದ ಇಂದಿನ ಬದುಕಿನ ವಾಸ್ತವ. ಏನೇನೂ ಮಾಡೋಕೆ ಆಗದೇ ಇರೋ ಅಂಥ ಪರಿಸ್ಥಿತಿಲೀ ನಾವುಗಳು ಸಿಕ್ಕಿಹಾಕಿಕೊಂಡು ಸಾಯುತ್ತಿದ್ದೇವೆ. .

    Reply
  2. Ananda Prasad
    Oct 27 2011

    ನಗರ ಸಾರಿಗೆ ಬಸ್ಸಿನ ನಿರ್ವಾಹಕರಿಗೆ ತಿಂಗಳಿಗೆ ಕೊಡುವ ಸಂಬಳ ೩೦೦೦ ರೂಪಾಯಿ ಎಂಬುದು ನಿಜವೇ ಎಂಬ ಬಗ್ಗೆ ಅಧಿಕೃತವಾಗಿ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಬೇಕಾದ ಅಗತ್ಯವಿದೆ. ಇದು ನಿಜವಾದರೆ ಸರ್ಕಾರವೇ ಶೋಷಣೆಯ ಕೆಲಸ ಮಾಡುತ್ತಿದೆ ಹಾಗೂ ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕಾದ ಅಗತ್ಯವಿದೆ. ಬೆಂಗಳೂರು ನಗರದಲ್ಲಿ ಬಸ್ಸುಗಳು ಖಾಲಿಯಾಗೇನೂ ಓಡುತ್ತಿರುವುದಿಲ್ಲ, ಬಹುತೇಕ ಸಮಯಗಳಲ್ಲಿ ಜನರಿಂದ ತುಂಬಿ ತುಳುಕುತ್ತಿರುತ್ತವೆ. ಹೀಗಿರುವಾಗ ನಿರ್ವಾಹಕರಿಗೆ ೩೦೦೦ ಸಾವಿರ ಸಂಬಳ ಕೊಡುವುದು ನಾಚಿಕೆಗೇಡು. ಯಾವುದಕ್ಕೂ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸಂಸ್ಥೆಯಿಂದ ಮಾಧ್ಯಮಗಳು ಪಡೆದು ಬೆಳಕು ಚೆಲ್ಲಬೇಕಾದ ಅಗತ್ಯವಿದೆ. ತಿಂಗಳಿಗೆ ೩೦೦೦ ಸಂಬಳ ಎಂಬುದು ನಿರ್ವಾಹಕರು ಹಣ ಜೇಬಿಗಿಳಿಸಲು ಹೇಳಿದ ನೆಪ ಇದ್ದರೂ ಇರಬಹುದು

    Reply
  3. ರವಿ
    Oct 27 2011

    ಆದರೆ ಇವರ ಮೇಲಧಿಕಾರಿಗಳು ಮಾಡುವ ಭೃಷ್ಟಾಚಾರ? ಅದು ಹೊಟ್ಟೆ ಪಾಡಿಗಲ್ಲ. ಬೆಂಗಳೂರಲ್ಲಿ ೩೦೦೦ ಕಡಿಮೆ ನಿಜ. ಆದರೆ ಅವರಿಗೂ ಕಮೀಶನ್, ಶಿಫ್ಟ್ ಅಲೋಯನ್ಸ್ ಇತ್ಯಾದಿಗಳಿವೆ. ಮಂಗಳೂರಲ್ಲೂ ಜೀವನದ ಖರ್ಚು ಕಡಿಮೆಯೇನಿಲ್ಲ. ಅಲ್ಲಿರುವುದು ಖಾಸಗಿ ಬಸ್ಸುಗಳು. ಅಲ್ಲಿನ ಕಂಡಕ್ಟರ್ ಸಂಬಳವೂ ೨೦೦೦ ಮೀರುವುದು ಅಪರೂಪ. ಜೊತೆಗೆ ಪಿಂಚಣಿ, ಶಾಶ್ವತ ಕೆಲಸವೂ ಇಲ್ಲ. ಆದರೂ ಟಿಕೆಟ್ ನೀಡಿಕೆ ಕಂಪ್ಯೂಟರ್ ಮೂಲಕ ನಡೆಯುತ್ತದೆ, ನೀವೇ ಅಂದಂತೆ ಬಾಯಿ ಬಿಟ್ಟು “ಕೇಳಿ ಟಿಕೆಟ್ ಪಡೆಯುವ” ಇಲ್ಲ “ಕೇಳಿ ಚಿಲ್ಲರೆ ಪಡೆಯುವ” ಸ್ತಿತಿ ಕಡಿಮೆ. ಒಟ್ಟಾರೆ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಗೊತ್ತಾಗುತ್ತಿಲ್ಲ..

    Reply
  4. ಪ್ರಸ್ಕ
    Oct 27 2011

    ೩೦೦೦ ಖಂಡಿತ ಇರಲ್ಲ. ಬ್ರಷ್ಟಾಚಾರಕ್ಕೆ ಎಲ್ಲರಿಗೂ ಒಂದು ನೆಪ ಇದ್ದೇ ಇರುತ್ತೆ. ಯಡಿಯೂರಪ್ಪನಿಗೆ ಮಕ್ಕಳನ್ನು ಸಾಕುವ ತೆವಲಿರುತ್ತೆ. ಸೋನಿಯಾ ಗಾಂಧಿಗೆ ತಂಗಿಯರಿಗೆ ಹಣ ಒದಗಿಸುವ ಒಂದು ನೆಪ ಇರುತ್ತೆ, ಹಾಗಂತ ೧.೭೬ ಲಕ್ಷದ ಹಗರಣ ಸರಿ ಅಂತ ಹೇಳೋದಿಕ್ಕಾಗುತ್ತ? ನಿಮ್ ಹೆಸ್ರು ಮೊದ್ಲೆ ಸಾತ್ವಿಕ್ ;) ಅದಕ್ಕೆ ಸಾತ್ವಿಕವಾಗಿ ಹೇಳಿ ನಿಮ್ಮನ್ನ ಯಾಮಾರ್ಸಿದನೆ. ಬಾಯ್ ಮುಚ್ಕೊಂಡು ಟಿಕೆಟ್ ಕೊಡು ಅಂತ ಕೇಳಿದ್ರೆ ಕೊಟ್ಟಿರ್ತಾ ಇದ್ದ. ಕಷ್ಟ ಇದ್ರೆ ಯಾಕ್ಬಂದೆ ಇಷ್ಟ ಇರೋ ಕೆಲ್ಸಕ್ಕೆ ಹೋಗು ಅನ್ಬೇಕಿತ್ತು.

    Reply
  5. ಈ ಸಂಚಿಕೆಯನ್ನು ಓದಿ ತುಂಬಾ ನೋವಾಯಿತು……ನಾನು ತುಂಬಾ ಬಾರಿ ಹೀಗೆ ಕಂಡಕ್ಟರ್ ರನ್ನು ಮಾತಾಡಿಸಿದೆ…..

    ತುಂಬಾ ಸ್ನೇಹಿತರು ನನಗೆ ಹೀಗೆ ಹೇಳಿದ್ದಾರೆ ….ಒಂದು ಬಾರಿ ಹೀಗೆ ತುಂಬಾ ನೋವಾಯಿತು….

    ಅವರ ದ್ಯೆನೆಂದಿನ ಪರಿಸ್ಥಿತಿ ನೋಡಿದಾಗ ನನಗೆ ಆಳು ಬರುತ್ತದೆ ಮತ್ತು ಸಹಾಯ ಮಾಡಲು ಪ್ರಯತ್ನಿಸುತ್ತೇನೆ…….

    Reply
  6. Oct 27 2011

    ಮೊನ್ನೆ ಬೆಂಗಳೂರಿಗೆ ಸಂಬಧಿಯ ಮದುವೆಗೆ ಬಂದಿದ್ದೆ. ಬನಶಂಕರಿಯಿಂದ ಮೆಜೆಸ್ಟಿಕ್‍ಗೆ ವೋಲ್ವೋ ಎ.ಸಿ. ಬಸ್‍ನಲ್ಲಿ ಪ್ರಯಾಣಿಸುವಾಗ, ಆ ಬಸ್ಸಿನ ಕಂಡಕ್ಟರ್ ನನ್ನ ಹತ್ತಿರ ಹದಿನೆಂಟು ರುಪಾಯಿ ತಗೆದುಕೊಂಡು, ಟಿಕೆಟ್ ಕೊಡದೆ ಮುಂದೆ ಹೋದ. ಯಾಕೊ ಅವನನ್ನು ಏನೂ ಕೇಳದೆ ಸುಮ್ಮನೆ ಕುಳಿತೆ. ನನಗೆ ಈ ಲೇಖನ ಓದುವವರೆಗೂ ಏನೋ ಅಪರಾಧ ಮಾಡಿದ ಮನೋಭಾವವಿತ್ತು. ಈಗ ಅದು ನಿವಾರಣೆಯಾಗಿದೆ.
    ಅಂದಹಾಗೆ, ಬನಶಂಕರಿಯಿಂದ ಮೆಜೆಸ್ಟಿಕ್‍ಗೆ ವೋಲ್ವೋ ಎ.ಸಿ. ಬಸ್‍ನ ಟಿಕೆಟ್ ಬೆಲೆ ಎಷ್ಟು?

    Reply
  7. Oct 27 2011

    ಸರ್ ಕಂಡಕ್ಟರ್ ಗಳು ನಮ್ಮ ಬಳಿ ೨ ಅಥವಾ ೩ ರೂಪಾಯಿ ತಗೋಬಹುದು. ಆದ್ರೆ ಅವ್ರು ತಮ್ಮ ಬಸ್ಸನ್ನು ಡಿಪೊ ಇಂದ ಹೊರಗಡೆ ತೆಗೆದುಕೊಂಡು ಬರುವುದರಿಂದ ಹಿಡಿದು ಒಳಗೆ ಸೇರಿಸುವವರೆಗೂ ಲಂಚ ಕೊಡಲೇಬೇಕು. ಬಸ್ ಕ್ಲೀನ್ ಮಾಡುವವನಿಗೆ ಕೊಡಬೇಕು, ವಾಚ್ ಮ್ಯಾನ್ ಗೆ ಕೊಡಬೇಕು, ಒಂದೊಂದು ಸ್ಟಾಪ್ ನಲ್ಲೂ ಕಾಯ್ತಾ ಕೂತಿರೊ TC ಗಳಿಗೆ ೫ರೂ ಪಕ್ಕಾ ಕೊಡಲೇಬೇಕು ಒಂದು ರೂಪಾಯಿ ಕಮ್ಮಿ ಆದರೂ ತಗೊಳೊಲ್ಲ. ಡ್ರೈವರ್ ಗಳಿಗೂ ೪೦ ರಿಂದ ೫೦ ರೂ ಪ್ರತಿದಿನ ಕೊಡಬೇಕು. ಅಕಸ್ಮಾತ್ ಯಾರಾದ್ರೂ ಚೆಕ್ಕಿಂಗ್ ನವರೂ ಹತ್ತಿದರೆ ಮುಗೀತು ಕಥೆ. ಇನ್ನು ಅವರ ಊಟದ ಖರ್ಚು? ಮೇಲೆ ಪ್ರಸ್ಕ ಅವರು ಹೇಳಿದ್ದಾರೆ, “೩೦೦೦ ಖಂಡಿತ ಬರಲ್ಲ ಅಂತ”. ಎಲ್ಲೋ ಅವರು ಕಾರ್ ಅಲ್ಲಿ ಓಡಾಡೋ ದೊಡ್ಡವರು ಇರಬೇಕು ಅದಕ್ಕೆ ಅವರಿಗೆ ಈ ಕಷ್ಟ ಎಲ್ಲಾ ಗೊತ್ತಿಲ್ಲ. ಒಬ್ಬ ಬಿ.ಎಮ್.ಟಿ.ಸಿ ಉದ್ಯೋಗಿ ತನ್ನ ಕೆಲಸ ಕಾಯಂ ಆಗುವವರೆಗೂ ತಗೊಳ್ಳೋದು ಕೇವಲ ೩೦೦೦ ರಿಂದ ೫೦೦೦ ಮಾತ್ರ. ಕಾಯಂ ಆಗಬೇಕೆಂದರೂ ಸುಮ್ಮಸುಮ್ಮನೆ ಆಗೋದಿಲ್ಲ. ಎಷ್ಟೋ ಜನ ಕಂಡಕ್ಟರ್ ಡ್ರೈವರ್ ಗಳು ೫ ರಿಂದ ೬ ವರ್ಷ ಕೆಲಸ ಮಾಡಿದರೂ ಕಾಯಂ ಆಗಿಲ್ಲ. ಪ್ರಸ್ಕ ಅವರೆ, ಯಾರ ಬಗ್ಗೆಯಾದರೂ ಮಾತನಾಡುವ ಮೊದಲು ಪೂರ್ತಿ ತಿಳಿದು ಮಾತನಾಡಿ. ಒಮ್ಮೆ ಬೆಂಗಳುರಿನ ಬಸ್ಸುಗಳಲ್ಲಿ ಓಡಾಡಿ ನೋಡಿ ನಿಮಗೆ ತಿಳಿಯುತ್ತದೆ.

    Reply
  8. ಪ್ರಸ್ಕ
    Oct 28 2011

    ಆದೇಶ್,
    ನಾನೂ ಕೂಡ ಬಸ್ಸಿನಲ್ಲಿ ಓಡಾಡಿದವನೆ,
    ಭ್ರಷ್ಟಾಚಾರಕ್ಕೆ ಸಾವಿರ ನೆಪ ಸಿಗುತ್ತೆ. ದುಡಿಯುವುದಕ್ಕೆ ಬೆಂಗಳೂರಿನಲ್ಲಿ ಸಾವಿರ ಮಾರ್ಗಗಳಿವೆ ಸುಲಭದ ಮಾರ್ಗವನ್ನು ಆಯ್ದುಕೊಂಡವರನ್ನು ಸಮರ್ಥಿಸುವ ಭಾವುಕರು ಇರುವವರೆಗೂ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ನನ್ನ ಕಂಡಕ್ಟರ್ ಸ್ನೇಹಿತ ಹೇಳ್ತಿರ್ತನೆ ಅಯ್ಯೊ ವೋಲ್ವೊ ಬೆಸ್ಟ್ ಕಣೊ ಅಲ್ಲಿಯ ಜನ ಚಿಲ್ಲರೆ ಕೇಳಲ್ಲ ಅಂತ. ಅಲ್ಲಿಗೆ ಸಾಧಾರಣ ಬಸ್ಸಿನವರಿಗಿಂತ ವೋಲ್ವೋ ಪ್ರಯಾಣಿಕರು ಹೆಚ್ಚು ಶ್ರೀಮಂತರು. ಕಾರಿಗೂ ವೋಲ್ವೋಗೂ ಏನೂ ವ್ಯತ್ಯಾಸವಿಲ್ಲ ಅಲ್ವ? ಬೆಂಗಳೂರಿನಲ್ಲಿ ದಿನಕ್ಕೆ ೫೦ ಕ್ಕೂ ಕಡಿಮೆ ದುಡಿಯುವ ಎಷ್ಟೋ ಜನ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಮೊದಲು ಚಿಲ್ಲರೆ ಕೇಳಿ ಪಡೆದು ಜವಾಬ್ದಾರಿಯುತ ನಾಗರೀಕರಾಗಲು ಪ್ರಯತ್ನಿಸೋಣ. ಏನಂತೀರಿ?

    Reply
    • Oct 28 2011

      ಸರಿಯಾಗಿ ಹೇಳಿದ್ದೀರ, ಕಷ್ಟ ಎನ್ದು ಭ್ರಷ್ಟರಾಗಬೇಕೆ??? ಸ್ವಾಭಿಮಾನ ಎಲ್ಲಕ್ಕಿಂತ ಮುಖ್ಯ

      Reply
  9. Oct 28 2011

    ಭ್ರಷ್ಟಾಚಾರ ಎಂಬುದು ಅನುಕೂಲಕ್ಕಾಗಿ ಎಂಬ ನನ್ನ ನಂಬಿಕೆಗೆ ಇಲ್ಲಿ ಮತ್ತೊಂದು ಉದಾಹರಣೆ ಸಿಕ್ಕಿದೆ. ಅಲ್ಲರಿ ಸಾತ್ವಿಕ್ ನೀವು ಹಸು ಇದ್ದಹಾಗೆ ಪುಣ್ಯಕೋಟಿ ಥರ ಸಿಂಹದ ಹಸಿವ ಬಗ್ಗೆ ಮಾತಾಡ್ತಿದ್ದೀರ ಅಲ್ರಿ ;) ಒಬ್ಬ ವ್ಯಕ್ತಿ ಯಾವುದೇ ಕೆಲಸ ಮಾಡಿದ್ರು ಶಿಸ್ತು ಮತ್ತು ಶ್ರದ್ಧೆ ಮುಖ್ಯ. ಹೌದು ತಿಂಗಳಿಗೆ ಬರೀ ೪೦೦೦ ಸಂಬಳ ಅಂತಾನೆ ಇಟ್ಟುಕೊಳ್ಳೋಣ ಆದರೆ ಪ್ರತಿ ದಿನ ಆಗೋ collection ಅಲ್ಲಿ ೧ % commission ಕೊಡ್ತಾರೆ, ದಿನಕ್ಕೆ ೧೦,೦೦೦ collection ಆದ್ರು ೧೦೦ ರು, ತಿಂಗಳಿಗೆ ೩೦೦೦, ಇಷ್ಟಕ್ಕು ಕೆಲಸ ಮುಖ್ಯ ಅದ್ರಲ್ಲಿ ಅವ ತನಗೆ ಕಷ್ಟ ಅಂತ ಹಣ ಹೊಡಿದ್ರೆ ಪ್ರತಿಯೊಬ್ಬ ಸರ್ಕಾರಿ ಕೆಲಸದವನಿಗು ಅವನದೆ ಕಷ್ಟ ಇರುತ್ತದೆ. ತಹಶೀಲ್ದಾರಿಗೆ ಮನೆಯಲ್ಲಿ ದೊಡ್ಡ ಕಾರ್ ಇಲ್ಲದ ಕಷ್ಟ, ರೆಡ್ಡಿಗೆ helicopter ಇಲ್ಲದ ಕಷ್ಟ ಸೋನಿಯ ಮಾಡಮ್ ಗೆ ಇನ್ನೇನೋ ಕಷ್ಟ, ಕಷ್ಟಗಳಿಗೆ ಭ್ರಷ್ಟಾಚಾರವೇ ಉತ್ತರವಾದ್ರೆ ನಮ್ಮಂತ ಬಡಪಾಯಿಗಳು ಬದುಕೋದೆ ಕಷ್ಟ :) :೦

    Reply
  10. ಪ್ರಸ್ಕ
    Oct 28 2011

    ನಮ್ಮ ಕನ್ನಡಿಗರ ಅತಿ ದೊಡ್ಡ ಸಮಸ್ಯೆಯೆಂದರೆ ಅತಿಯಾದ ಭಾವುಕತೆ.

    Reply
  11. Arehole
    Oct 28 2011

    ಸಾತ್ವಿಕ್ ಅವರ ಲೇಖನ ಮನಮುಟ್ಟುವ೦ತೆ ಇದ್ದು, ಜೈಲು ಯಾತ್ರೆಕೈಗೊ೦ಡಿರುವ ರಾಜಕಾರಣಿಗಳನ್ನು ಒ೦ದು ಕ್ಷಣ ನೆನಪಿಸಿತು. ತಿ೦ದು೦ಡು ತೇಗಿ, ಮು೦ದಿನ ಹಲವು ತಲೆಮಾರಿಗೆ ಆಗುವಷ್ಟು ಕೂಡಿಟ್ಟರೂ ತಮ್ಮ ಧನ ದಾಹ ತೀರಿಸಿಕೊಳ್ಳಲಾರದ ರಾಜಕಾರಣಿಗಳು ಹಾಡುಹಗಲೇ ಮಾಡುತ್ತಿರುವ ಹಾದರಕ್ಕೆ ರಾಜ್ಯದ ಬಡಪಾಯಿಗಳ ಕಣ್ಣೀರ ಕಥೆ-ವ್ಯಥೆ ತಿಳಿದೀತಾದರೂ ಹೇಗೆ..?
    ಕಣ್ತೆರೆಸುವ ಮತ್ತು ವಾಸ್ತವದ ಕಹಿ ಸತ್ಯ ವಿವರಿಸುವ ಲೇಖನ. ಸಾತ್ವಿಕ್ ಲೇಖನಿಯ ಶಕ್ತಿಯೇ ಅ೦ತಾದ್ದು.

    Reply
  12. Santhosh
    Oct 28 2011

    first i confirm that I will not supporting corruption.
    Hello mr. Praska kindly go through the KSRTC website or take information by RTI, what that fellow conductor is said is 100% sure..there getting Rs.3000/- only. Before giving reply we fools should know atleast basic things whats going in surrounding…I hope we people using BMTC survices from long back we not show any little interest to know the facts about our service providers like conductors
    Today the BMTC conducters and drivers are face hitting very hard both mentally and physical stress some of the things there facing..
    1. ಎಂಥ ಬ್ಯುಸಿ ತ್ರಫ್ಫಿಕ್ ನಲ್ಲೂ ಕೂಡ ಅವರು ಟೈಮಿಗೆ ಸರಿಯಾಗೆ ಡಿಪೋಗೆ ಬರಬೇಕು ಮತ್ತು show mileage efficiency constantly in all trips ಹೆಚ್ಚು ಕಡಿಮೆ ಆದರೆ ಅವರಿಗೆ ಮತ್ತೆ ದಂಡ ದಂಡ ಕಾಯಂ ..

    3. we of us even we have daily/monthly pass we should not hold the pass in hand (not all), unless conductor has to ask each person to show. I hope we all know the crowd in the each bus
    ನಾವುಗಳು ಪಾಸು ಇದರು ಕೂಡ ಕಾಂದುಕ್ಟೊರ್ ಬಂದು ಕೇಳುವ ವರೆಗೂ ಅದು ನಮ್ಮ purse ಅಥವ್ ಬ್ಯಾಗ್ ನಲ್ಲೋ ಇರುತೆ ಬಂದ ನತರ ಹುಡುಕಾಟ . ಕಾಂದುಕ್ಟೊರ್ ನಮ್ಮ ಸಂಬಲಿಸಿ ಇನೋದು ಸ್ತಗೆ ಅಥವಾ ಸ್ಟಾಪ್ ಬರೋದ್ರಲೋಗೆ ಎಂಟ್ರಿ ಕ್ಲೋಸ್ ಮಾಡಬೇಕು . ಅದ್ಕೊಸ್ಕರ ಬಸ್ ೨ ನಿಮಿಷ ನಿಲಿಸದ್ರೆ . ಇದಲಿಂದ ನಮ್ಮ ಕಾಮ್ಮೆನ್ತಗಳು ಸುರೂ

    4 all are use to satnd in the entrence and footboard itself.!!!!!!!1 we moving inside only after the conductor instruction

    5. we are suprising see the by salary of Rs. 3000 for information the coffe in Kempegowda busstand is Rs.10 (there using water insted of milk!!!)
    House Advance & Rent in Bengaluru eg. Advance 10 times higher than the rent…
    6. If the any scratches due to hitting by other passenger veichle like us travelling in CAR the charge deducted from the their salary…………..
    7. some fellows are not taking ticket..while checking if they caught they collect 10 times higher than the fare from conductor and issue a memo to conductor..then there probationary period extends for another 3 to 12 months
    ” ಸ್ವಾಭಿಮಾನ ಎಲ್ಲಕ್ಕಿಂತ ಮುಖ್ಯ “ಇವೆಲ್ಲ ಇಲ್ಲಿ ಕಾಮೆಂಟ್ ಮಾಡ್ಲಿಕೆ ಮತ್ತೆ ಫಿಲಂ ನಲ್ಲಿ ಕೇಳಲಿಕ್ಕೆ ಸರಿ …ಜೀವನಕೆ ಅಲ್ಲ

    ೩೦೦೦ ಖಂಡಿತ ಇರಲ್ಲ ನಿಮ್ಮ ತಿಳುವಳಿಕೆ ತಪ್ಪು ಅವರ ಸಂಬಳ ನಿಜ್ಜಕು 3000

    ದಿನ ಆಗೋ collection ಅಲ್ಲಿ ೧ % commission ಕೊಡ್ತಾರೆ, ದಿನಕ್ಕೆ ೧೦,೦೦೦ collection ಆದ್ರು ೧೦೦ ರು, ತಿಂಗಳಿಗೆ ೩೦೦೦, === ಹೌದು ಅವರಿಗೆ ಕಾಮ್ಮಿಸ್ಸಿಒನ್ ಕೊಡ್ತಾರೆ ಆದರೆ ಅದು ಏನಾಗುತ್ತೆ ಅಂತ ನೀವು ಒಂದು ಬಾರಿ K.R. ಮಾರ್ಕೆಟ್ (KalasiPalya)ಅತ್ರ ಒಂದು ಎಂಟ್ರಿ ಮಾಡಿಸೋಕೆ ಒಂದು ಸಣ್ಣ ಕೌಂಟರ್ ಇದೆ …ಅಲ್ಲಿ ನೋಡುದ್ರೆ ಗೊತ್ತಗೂತೆ

    ನಾನು ಇಲ್ಲಿ ಬರದಿರುದು ನಾನು ತಿಳಿದಿರುವ್ದು ಮಾತ್ರ …

    Atleast ಅವರಿಗೆ ದುಡ್ಡು ಬಿಡುವುದ ಬೇಡ …”ನಮ್ಮ ಸೇವೆ ಕದೊತಿರುವ್ವರುಗೆ ಗೌರವ ಕೊಡೋಣ”

    Thank you

    Reply
  13. Santhosh
    Oct 28 2011

    ನಗರ ಸಾರಿಗೆ ಬಸ್ಸಿನ ನಿರ್ವಾಹಕರಿಗೆ ತಿಂಗಳಿಗೆ ಕೊಡುವ ಸಂಬಳ ೩೦೦೦ ರೂಪಾಯಿ ಎಂಬುದು ನಿಜವೇ ಎಂಬ ಬಗ್ಗೆ ಅಧಿಕೃತವಾಗಿ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಬೇಕಾದ ಅಗತ್ಯವಿದೆ= Yes enquire do you you think he is Media or any MNC employee to hide his salary. he is a Public servent his salary well known to every one

    Mr.Sathvik

    You have written such a beautiful way…but you dont know atleast hide his face while publishing in a media. I think its not good..Possible hide his face

    Thanks for your article

    Reply
    • ಸಂತೋಷ್
      ಅದು ನಾನು ತೆಗೆದ ಚಿತ್ರ ಅಲ್ಲ. ಅದರ ಕೃಪೆಯನ್ನು ಲೇಖನದ ಕಡೆಯಲ್ಲಿ ನೀಡಲಾಗಿದೆ.

      ಸಾತ್ವಿಕ್ ಎನ್ ವಿ

      Reply
  14. Oct 28 2011

    ಮಾನ್ಯರೇ, ಇದು ಒಂದು ರೀತಿಯಲ್ಲಿ ಭ್ರಷ್ಟರನ್ನು ಒಲೈಸಿದಂತೆ ಆಗುತ್ತದೆ. ಜೀವನ್ನಕೆ ಬೇರೆ ದಾರಿ ಇಲ್ಲ. ಬೇರೆ ಯಾವ ಅಧಾಯದ ಮೂಲ ಇಲ್ಲದೆ, ಅನಾವೃಷ್ಟಿ ಕಾರಣದಿಂದ ದಿನಕ್ಕೆ ಒಂದೊತ್ತು ಊಟವಾದರೂ ಸಿಗುತ್ತದೆಂಬ ಕಾರಣದಿಂದ ಕಾಂದೆಕ್ಟೆರ್ ಹುದ್ದೆಗೆ ಬಂದು ಏನೋ ಕಾರಣ ನೀಡಿ! ಈ ರೀತಿ ಭ್ರಷ್ತಾಚಾರ ಮಾಡುವುದು ಸರಿಯಲ್ಲ. ಚಿಕ್ಕ ಮೊತ್ತವಾದರು ಮನಸು ಒಪ್ಪುವುದಿಲ್ಲ. ಹಾಗೇನಾದ್ರೂ ತಾಪಾಸನ ಅಧಿಕಾರಿಗಳು ತನಿಕೆ ಮಾಡಿದಾಗ ಪ್ರಯಾಣಿಕರಾದ ನಾವು ಸಿಕ್ಕಿಕೊಂಡರೆ ದಂಡ ತೆರುವವರು ನಾವೇ ಅಲ್ಲವೇ. ಆಗ ಈ ಕಾಂದೆಕ್ಟೆರ್ ಬರುತ್ತಾರೆನು?

    Reply
  15. ಪ್ರತಿಕ್ರಿಯೆ ನೀಡಿದ ನನ್ನ ಎಲ್ಲ ಸ್ನೇಹಿತರಿಗೂ ವಂದನೆಗಳು.
    ಎಲ್ಲರ ಪ್ರಶ್ನೆಗಳಿಗೂ ಪ್ರತ್ಯೇಕ ಉತ್ತರ ಹೇಳುವ ಬದಲು ನಾನು ಲೇಖನದಲ್ಲಿ ಏನು ಹೇಳಲು ಹೊರಟಿದ್ದೇನೆ ಎಂಬುದನ್ನು ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ. ಸಮಾಜ ಎನ್ನುವುದು ಸಂಕೀರ್ಣ ಸ್ವರೂಪದ್ದು. ಇಲ್ಲಿಯ ಸಂಬಂಧಗಳು, ವ್ಯವಹಾರಗಳು ಎಲ್ಲ ಕಡೆಯೂ ಒಂದೇ ತೆರನಾಗಿ ಇರುವುದಿಲ್ಲ, ಅರ್ಥಗಳು ಕೂಡ.
    ಎಂಜಿನಿಯರಿಂಗ್ ನಲ್ಲಿ ಕಲಿತಂತೆ ಇಲ್ಲಿ ಕಾಲ್ಕ್ಯುಲೇಶನ್ ಗಳನ್ನು ಹೀಗೆಯೇ ಎಂದು ಹೇಳಲು ಬರುವುದಿಲ್ಲ. ಸತ್ಯ ಎಂಬುದು ಬದಲಾಗುತ್ತಿರುತ್ತದೆ. ಸೋಶಿಯಲ್ ಎಂಜಿನಿಯರಿಂಗ್ ನಲ್ಲಿ ಎಲ್ಲವೂ ಎಲ್ಲ ಕಾಲಕ್ಕೂ ಅಪವಾದಗಳನ್ನು ಹೊಂದಿಯೇ ಇರುತ್ತವೆ.
    ಗಣಿಕಳ್ಳರ ಜೊತೆಗೆ ಹಸಿವಿಗಾಗಿ ಅಂಗಡಿಯಿಂದ ಬನ್ ಕದ್ದವನನ್ನು ನಿಲ್ಲಿಸಲಾಗುವುದಿಲ್ಲ. ನಮ್ಮದೇ ನೀರನ್ನು ಬಾಟಲಿಯಲ್ಲಿ ತುಂಬಿ ನಮಗೆ ಮಾರಿ ಹಣಗಳಿಸುವವರ ಜೊತೆ ಮಕ್ಕಳ ಹೊಟ್ಟೆ ತುಂಬಿಸಲು ಮೈ ಮಾರಿಕೊಳ್ಳುವವರನ್ನು ನಿಲ್ಲಿಸಲಾಗುವುದಿಲ್ಲ.
    ಇಡೀ ಎಲ್ಲ ಪ್ರಸಂಗಗಳನ್ನು ಏಕಾಕೃತಿಯಲ್ಲಿ ನೋಡಲು ಸಾಧ್ಯವಿಲ್ಲ. ಅವುಗಳ ನಡುವೆ ಭಿನ್ನತೆ ಇದ್ದೇ ಇರುತ್ತದೆ.
    ನಾನು ಎಲ್ಲಿಯೂ ಭ್ರಷ್ಟಾಚಾರ ಸರಿಯೆಂದು ಮಾತಾಡಿಲ್ಲ. ಆದರೆ ಬೇರೆಯವರ ತಪ್ಪುಗಳನ್ನು ನಾವು ಹೇಳುವಾಗ ಅವರು ತಪ್ಪು ಮಾಡದೇ ಬದುಕುವ ವ್ಯವಸ್ಥೆ ಮಾಡಿಲ್ಲವೆಂಬುದರ ಬಗ್ಗೆ ನಾನು ಮಾತಾಡಿದ್ದು

    ನಿಮ್ಮ
    ಸಾತ್ವಿಕ್

    Reply
    • ರವಿ
      Oct 28 2011

      ಹಸಿದು ಬಂದವನಿಗೆ ಬನ್ ಕೊಡುವುದು ಮಾನವೀಯತೆ. ಆದರೆ ಬನ್ ಕದ್ದಿದ್ದು ಅವನ ತಪ್ಪೇ. ಇಲ್ಲಿ ಕಳ್ಳರ ಮಧ್ಯೆ ಹೋಲಿಕೆ ಬೇಡ ಸಾತ್ವಿಕ್. ದುಡಿದು ಗಳಿಸುವುದು ಸ್ವಾಭಿಮಾನ. ಇನ್ನೊಬ್ಬರ ಅನುಕಂಪ ಯಾವತ್ತೂ ಹೊಟ್ಟೆ ತುಂಬ್ಸಲ್ಲ. ಕಡಿಮೆ ಸಂಬಳ ಕೊಡುವ ಬಿಎಂಟಿಸಿ ವಿರುದ್ಧ ನೌಕರರು ಯಾಕೆ ಮುಷ್ಕರ ಹೂಡುತ್ತಿಲ್ಲ? ಇದ್ದ ಬದ್ದವರಿಗೆಲ್ಲ ಲಂಚ ಕೊಡುವ ಹೊಂದಾಣಿಕೆಯ ಬದುಕು ಯಾಕೆ? ಒಬ್ಬರ ತಪ್ಪನ್ನು ಇನ್ನೊಬ್ಬರು ಮುಚ್ಚುತ್ತಾ, ಮತ್ತೊಬ್ಬರಿಗೆ ಟೋಪಿ ಹಾಕುತ್ತ ಬದುಕುವ ಈ ನಾಟಕದ ಬದುಕಿಗೆ ಈ ಸಾಮಾಜಿಕ ವ್ಯವಸ್ಥೆ, ಸರಕಾರ, ಕಾನೂನುಗಳು,ಸರಿ-ತಪ್ಪುಗಳು ಅಗತ್ಯವಿಲ್ಲ ಅಲ್ಲವೇ…

      Reply
      • Oct 28 2011

        ಇದ್ದ ಬದ್ದವರಿಗೆಲ್ಲ ಲಂಚ ಕೊಡುವ ಹೊಂದಾಣಿಕೆಯ ಬದುಕು ಯಾಕೆ? ಅಂತ ಪ್ರಶ್ಣೆಯನ್ನು ಕೇಳುವುದು ಬಹಳ ಸುಲಭ ಸರ್. ಆಸ್ಪತ್ರೆಗಳಲ್ಲಿ ನರ್ಸ್‍ಗಳಿಗೆ ಮಾಮೂಲಿ ಕೊಡದೆ ಹೋದರೆ ದಾಖಲಾದ ರೋಗಿಗೆ ಒಂದು ಹೊತ್ತಿನ ಗುಳಿಗೆಯನ್ನೇ ಕೊಡುವುದಿಲ್ಲ. ಈ ಹೊತ್ತಿನಲ್ಲಿ ಅವರಿಗೆ ಹತ್ತು ರೂಪಾಯಿ ಕೊಟ್ಟು ಇನ್ಜೆಕ್ಷನ್ನು ಕೊಡಲು ಹೇಳುವುದೇ ಅಥವಾ ಸಿದ್ಧಾಂತವನ್ನ ನಂಬಿಕೊಂಡು ಇರುವುದೇ? ಮೇಲಧಿಕಾರಿಯ ಹತ್ತಿರ ದೂರು ತೆಗೆದುಕೊಂಡು ಹೋದರೆ ಛೀಮಾರಿ ಬೀಳುವುದು ದೂರುದಾರರಿಗೇ. ಇಲ್ಲಿಯೂ ದುಡ್ಡು ಬಿಚ್ಚಲು ತಯಾರಿಲ್ಲವೆಂದರೆ, ಆ ಟೆಸ್ಟು ಈ ಟೆಸ್ಟು ಅಂತ ಸಾವಿರ ಬಿಲ್ಲು ಬರೆಯುತ್ತಾರೆ. ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಧರಣಿ ಕೂತರೆ ದೂರುದಾರನ ಮೇಲೆ ಪೋಲೀಸು ಕೇಸು ದಾಖಲಾಗುತ್ತೆ. ಹತ್ತು ರೂಪಾಯಿ ಕೊಟ್ಟು ಕೆಲಸ ಮುಗಿಸುವುದು ಮೇಲಲ್ಲವೇ? ಇದು ಇಂದಿನ ವಾಸ್ತವತೆ.
        ನಗರ ಸಾರಿಗೆ ಬಸ್ಸಿನ ನಿರ್ವಾಹಕರ ಪರಿಸ್ಥಿತಿ ಇಷ್ಟು ಗಂಭೀರವಾದುದಲ್ಲ; ಇದಕ್ಕಿಂತ ಭಿನ್ನವಾದುದೂ ಅಲ್ಲ! ಅವರು ವೇತನ ಪರಿಷ್ಕರಣೆಗೆ ಎಷ್ಟು ಮನವಿ ಸಲ್ಲಿಸಿದರೂ ಸರ್ಕಾರಕ್ಕೆ ತಲುಪುವುದಿಲ್ಲ. ಅದಕ್ಕಾಗಿ ಸಂಘಗಳ ನಾಯಕರನ್ನು ಕರೆಸಿ ಧರಣಿ ನಡೆಸಬೇಕು. ಅವರು ಸ್ವಂತ ಲಾಭವಿಲ್ಲ ಎಂದರೆ ಬರುವುದಿಲ್ಲ. ನಿರ್ವಾಹಕರ ಆ ದಿನದ ವೇತನ ಕಡಿತವಾಗುತ್ತದೆ. ಹಾಗು ಹೀಗು ಧರಣಿ ಯಶ್ವಿಯಾದರೆ, ಅಧಿಕಾರಿಗಳು ಮನವಿ ಸ್ವೀಕರಿಸಿ ಸುಮ್ಮನಾಗುತ್ತಾರೆ. ಅಲ್ಲಿನ ಅಧಿಕಾರಿಗೆ ಮಾಮೂಲು ಕೊಟ್ಟರೆನೇ ಆ ಕಡತ ಮುಂದೆ ಸಾಗಲಿಕ್ಕೆ ಆಗುವುದು.
        ಎಲ್ಲ ನಿರ್ವಾಹಕರ ಪರಿಸ್ಥಿತಿ ಹೀಗೆ ಇರುತ್ತದೆ ಎಂದಲ್ಲ, ಅವರಲ್ಲಿ ಹಲವರದು ಈ ಗೋಳು. ಹಾಗಾಗಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಥರವಲ್ಲ. ಲಂಚ ಸ್ವೀಕಾರ ಪದ್ಧತಿ ನಿರ್ಮೂಲನೆ ಮೇಲ್ವರ್ಗದ ಅಧಿಕಾರಿಗಳಿಂದ ಪ್ರಾರಂಭವಾಗಬೇಕೆ ಹೊರತು ಕೆಳವರ್ಗದ ನೌಕರರಿಂದಲ್ಲ!

        Reply
        • ರವಿ
          Oct 28 2011

          ಸುಚಿತ್, ದುಡ್ಡು ಬಿಚ್ಚುವ ಪ್ರಶ್ನೆ ಇಲ್ಲಿ ಬರುವುದಿಲ್ಲ. ಇಲ್ಲಿ ಬರುವ ಪ್ರಶ್ನೆ ಕಪ್ಪು ಹಣದ್ದು. ಈ ಥರ ತೆರಿಗೆ ರಹಿತ ಹತ್ತತ್ತು ರೂಪಾಯಿಗಳ ಗಳಿಕೆ ಎಷ್ಟಾಗಬಹುದು? ಹತ್ತು ಯಾಕೆ.. ತೆರಿಗೆ ಮೊತ್ತ +೧ ಸೇರಿಸಿ ಕೊಡೋಣ. ಹಣದ ವ್ಯವಹಾರ ನಿಯಮಬದ್ಧವಾಗಿರಲಿ. ಹೀಗೆ ಕಪ್ಪು ಹಣ ಉತ್ಪತ್ತಿ ಮಾಡುವಾಗ ನಾವು ರಾಜಕಾರಣಿಗಳನ್ನು ತೆಗಳುವ ಅಥವಾ ಲಂಚ ನಿರ್ಮೂಲನೆ ಎಲ್ಲಿಂದ ಶುರುವಾಗಬೇಕೆಂದು ಹೇಳುವ ಅಧಿಕಾರ ಕಳೆದುಕೊಳ್ಳುತ್ತೇವೆ. ದುರದೃಷ್ಟ, ನಮ್ಮ ವ್ಯವಸ್ಥೆ ಕೆಟ್ಟಿದೆ. ನಮ್ಮಿಂದಾದಷ್ಟು ಸರಿಪಡಿಸಲು ಪ್ರಯತ್ನ ಪಡೋಣ.

          Reply
          • Oct 28 2011

            ನಾವು ತೆತ್ತ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತದೆ ಅನ್ನುವ ಭರಸೆ ಈ ಜನರದ್ದಲ್ಲದ ’ಜನಪ್ರತಿನಿಧಿ’ಗಳ ಸರ್ಕಾರಗಳ ಮೇಲೆ ಇದ್ದಿದ್ದರೆ, ಸರ್ಕಾರ ತೆರಿಗೆ ಕಟ್ಟಿರೆಂದು ಜಾಹಿರಾತು ಕೊಡುವ ಪರಿಸ್ಥಿತಿ ಬಹುಶಹ ಬರುತ್ತಿರಲಿಲ್ಲವೇನೊ. ನಾವು ತೆರುವ ತೆರಿಗೆ ಹಣ ಸ್ವಿಜ್ ಬ್ಯಾಂಕಿನಲ್ಲಿ ಪ್ರತಿಷ್ಟಿತರ ಖಾತೆಗಳಲ್ಲಿ ಕಪ್ಪು ಹಣವಾಗಿಯೇ ಕೊಳೆಯುತ್ತಿದೆಯಲ್ಲ. ಅದು ಆ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತಿದೆಯೇ ಹೊರತು, ನಮ್ಮ ಜನರಿಗೆ ಯಾವ ಲಾಭವನ್ನೂ ತಂದು ಕೊಟ್ಟಿಲ್ಲ. ನಮ್ಮ ಸಾಮಾನ್ಯ ನಾಗರೀಕರು ತಾವು ಗಳಿಸುವ ೧೦ ರೂ. ಕಪ್ಪು ಹಣವನ್ನ ನಮ್ಮ ನೆಲದಲ್ಲಿಯೇ ಹೂಡುತ್ತಿದ್ದಾರೆ. ಮನೆ, ಅಂಗಡಿ ಕಟ್ಟಿಸಿಕೊಳ್ಳುತ್ತಿದ್ದಾರೆ. ನಮ್ಮ ನೆಲದವರಿಗೆ ಉದ್ಯೋಗ ಕೊಡುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಬೆಳೆಸುತ್ತಿದ್ದಾರೆ.
            ಕಳೆದ ವರ್ಷ ಹಲವು ದೇಶಗಳಿಗೆ ದುಃಸ್ವಪ್ನವಾಗಿ ಕಾಡಿದ ’ಜಾಗತಿಕ ಆರ್ಥಿಕ ಹಿಂಜರಿತ’ ಭಾರತವನ್ನು ಅಷ್ಟಾಗಿ ಕಾಡಲಿಲ್ಲ. ಇದಕ್ಕೆ ಕಾರಣವೇನು ಗೊತ್ತೆ; ಭಾರತೀಯರ(ನೀವು ಕರೆಯುವ) ’ಕಪ್ಪು ಹಣ’! ಅನ್ಯ ದೇಶದವರು ತಮ್ಮ ನಿಶ್ಠಾವಂತ ತೆರಿಗೆದಾರ ಪ್ರಜೆಗಳನ್ನು ’Bailout’ ಮಾಡಲು ಹರಸಾಹಸ ಪಟ್ಟಿದ್ದವು, ಈಗಲೂ ಪಡುತ್ತಿವೆ.

            Reply
  16. ಪ್ರಸ್ಕ
    Oct 28 2011

    ಸಂತೋಷ್,
    ನಿಲುಮೆ ಕನ್ನಡದಲ್ಲಿದೆ, ದಯವಿಟ್ಟು ಸಹಕರಿಸಿ, ನಿಮ್ಮ ಅಭಿಪ್ರಾಯವನ್ನು ಕನ್ನಡಲ್ಲಿ ಬರೆಯಿರಿ. ಉತ್ತರಿಸುತ್ತೇನೆ. ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ಬದಲಾವಣೆಯೆನ್ನುವುದು ನನ್ನಿಂದಲೇ ಆರಂಭವಾಗಲಿ ಎಂಬುದು ನನ್ನ ನಂಬಿಕೆ.

    Reply
  17. Oct 28 2011

    ಗೆಳೆಯರೆ,
    ಇದು ಸರಿ ಎಂದು ನಾನು ಹೇಳುತಿಲ್ಲ. ನಮ್ಮ ಕಂಡಕ್ಟರ್ ಗಳ ಸ್ಥಿತಿ ಸಾತ್ವಿಕ್ ಅವರು ಈ ಲೇಖನಕ್ಕೆ ಕೊಟ್ಟಿರುವ ಹೆಸರಿಗೆ ಅದ್ಬುತವಾಗಿ ಹೊಂದಾಣಿಕೆಯಗುತ್ತದೆ. ನೀವೆಲ್ಲರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರ. ಆದರೆ ಅವನ ಕಷ್ಟವನ್ನು ಕೇಳುವ ಮನಸ್ಸು ಯಾರಿಗೂ ಇಲ್ಲವೆ. ಪ್ರಸ್ಕ ಅವರೆ ನಿಜ ನಾವು ಭಾವುಕರು. ಅದರಿಂದಾಗಿಯೇ ಈ ಚರ್ಚೆ. ನೀವು ಹೇಳಿದ್ದು ನಿಜ ವೋಲ್ವೊ ಬಸ್ಸುಗಳಲ್ಲಿ ಕೆಲವರು ಚಿಲ್ಲರೆ ಕೇಳುವುದಿಲ್ಲ. ಅಲ್ಲಿಗೆ ಕಂಡಕ್ಟರ್ ಆಗಿ ಹೋಗುವುದಕ್ಕೂ ಲಂಚ ಕೊಡಬೇಕು ಸ್ವಾಮಿ. ಒಳ್ಳೆ ಬಸ್ ಬೇಕೆಂದರೂ ಡಿಪೊದವರಿಗೆ ಲಂಚ ಕೊಡಬೇಕು. ಯಾವುದಾದರೂ ಮೈನ್ ಸ್ಟಾಪಿಗೆ ಹೋಗಿ ಸ್ವಲ್ಪ ಹೊತ್ತು ಟಿ.ಸಿ ಪಕ್ಕ ನಿಂತ್ಕೊಳಿ, ನಿಮಗೆ ಗೊತ್ತಾಗುತ್ತೆ.ಇಷ್ಟೆಲ್ಲ ಕೊಡಲು ಅವರಿಗೆ ದುಡ್ಡು ಎಲ್ಲಿಂದ ಬರಬೇಕು ಹೇಳಿ. ನೀವು ಹೇಳಿದ್ದಂತೆ ಸ್ವಾಭಿಮಾನ ಅನ್ಕೊಂಡು ಕೆಲಸ ಬಿಟ್ಟು ಹೋಗಬಹುದು. ಅವರಿಗೆ ತಕ್ಷಣಕ್ಕೆ ಕೆಲಸ ಕೊಡುವವರು ಯಾರು? ಅವರು ಧರಣಿ ನಡೆಸಬಹುದು, ಆದರೆ ಬರೋ ೩೦೦೦ ದಲ್ಲಿ ಒಂದು ದಿನದ ಸಂಬಳ ಡಂ ಅಂತು. ನೀವೆ ಹೇಳಿ ಬೆಂಗಳೂರಿನಲ್ಲಿ ಇಷ್ಟೆಲ್ಲಾ ಲಂಚ ಕೊಟ್ಟು ಜೀವನ ಸಾಗಿಸೋದು ಹೇಗೆ? ಪ್ರಸ್ಕ ಅವರೆ ನೀವು ಅಂದುಕೊಂಡಿರೊ ಹಾಗೆ ಅವರೇನು ನಾವು ಕೊಡೊ ಚಿಲ್ಲರೆಯಿಂದ ದಿನಕ್ಕೆ ೫೦೦ ಅಥವಾ ಸಾವಿರಾರು ರೂಪಾಯಿ ಸಂಪಾದಿಸುತ್ತಿಲ್ಲ. ಅವರಿಗೆ ಸಿಗುತ್ತಿರುವುದು ಕೇವಲ ೧೦೦ ರಿಂದ ೧೫೦. ಹೆಚ್ಚೆಂದರೆ ೨೦೦. ಇದರಲ್ಲಿ ದಿನಕ್ಕೆ ಅಷ್ಟೆಲ್ಲಾ ಕೊಟ್ಟು ಅವರು ಮನೆಗೆ ತೆಗೆದುಕೊಂಡು ಹೋಗೋದು ಎಷ್ಟೆಂದು ನೀವೇ ನಿರ್ಧರಿಸಿ. ವೋಲ್ವೋ ಜನರ ಬಗ್ಗೆ ಮಾತು ಇಲ್ಲಿ ಬೇಡ. ನಾವು ಸಾಮನ್ಯ ಕಂಡಕ್ಟರ್ ಗಳ ಬಗ್ಗೆ ಮಾತನಾಡೋಣ.

    Reply
    • ರವಿ
      Oct 28 2011

      ಇಲ್ಲಿ ಬಂದಿರುವ ಎಲ್ಲ ಸಮಸ್ಯೆಗಳಿಗೆ ಒಂದೇ ಸುಲಭದ ಪರಿಹಾರ. ಲಂಚವನ್ನು ವಿಧ್ಯುಕ್ತಗೊಳಿಸುವುದು. ಲಂಚ ಕೊಟ್ಟವನು ಸೇವಾ ಶುಲ್ಕವೆಂದು ರಸೀತಿ ಪಡೆಯುವುದು. ಸರಕಾರ ಪ್ರತೀಯೋಬ್ಬರ ಸೇವಾ ಶುಲ್ಕದ ಗಳಿಕೆಯ ಮೇಲೆ ಆದಾಯ-ತೆರಿಗೆ ವಿಧಿಸುವುದು.

      Reply
      • Oct 28 2011

        ನೀವು ಹೇಳುವ ರೀತಿ ತೆರಿಗೆ ಕಟ್ಟುವ ವಿಧೇಯತೆ ತೆರಿಗೆಗಳ್ಳರಲ್ಲಿ ಇದ್ದಿದ್ದರೆ ’ಕಪ್ಪುಹಣ’ದ ಪರಿಕಲ್ಪನೆಯೇ ಉದ್ಭವವಾಗುತ್ತಿರಲಿಲ್ಲ.

        Reply
      • ಪ್ರಸ್ಕ
        Oct 29 2011

        ಸಕ್ಕತ್, ಲಂಚದ ರಾಷ್ಟ್ರೀಕರಣ

        Reply
    • ಪ್ರಸ್ಕ
      Oct 29 2011

      “ಅದು ಸರಿ ಎಂದು ಹೇಳುತ್ತಿಲ್ಲ” ಎಂದು ನೀವು ಹೇಳಿದ ಮೇಲೆ ಚರ್ಚೆಗೆ ಏನೂ ಉಳಿದಿಲ್ಲ.
      ಮಿಕ್ಕಿದ್ದೆಲ್ಲ ಭಾವೋದ್ವೇಗದ ಮಾತುಗಳು ಅವುಗಳಲ್ಲಿ ನನಗೆ ಆಸಕ್ತಿಯಿಲ್ಲ. ಏಕೆಂದರೆ ಭಾವುಕತನದಲ್ಲಿ ಸಿನಿಕತನದಲ್ಲಿ ಎಲ್ಲವಕ್ಕೂ ಕಾರಣಗಳಿರುತ್ತವೆ. ವೇಶ್ಯೆಗೂ ಕಳ್ಳನಿಗೂ ದೇಶದ್ರೋಹಿಗೂ ಸಹ ಕಾರಣಗಳಿರುತ್ತವೆ, ಅದು ಚರ್ಚಾವಸ್ತು ಆಗುವುದು ಬೇಡ. ನಾನು ಭ್ರಷ್ಟಾಚಾರದ ಬಗೆಗೆ ಮಾತ್ರ ಮಾತನಾಡುತ್ತಿದ್ದೇನೆ.

      Reply
      • ಪ್ರಸ್ಕ
        Oct 29 2011

        ಕೊನೆಯದಾಗಿ ಒಂದು ಮಾತು ಭ್ರಷ್ಟಾಚಾರ ಹಸಿವಿನಿಂದ ಹುಟ್ಟುವುದಿಲ್ಲ ದುರಾಸೆಯಿಂದ ಮಾತ್ರ ಹುಟ್ಟುತ್ತದೆ. ಹಸಿವು ಉಂಡ ತಕ್ಷಣ ನಿಲ್ಲುತ್ತದೆ ಸಾಕೆನಿಸುತ್ತದೆ. ಆದರೆ ದುರಾಸೆ ಹಾಗಲ್ಲ. ಹಿರಣ್ಣಯ್ಯ ಅವರು ಒಂದು ಕಡೆ ಕೇಳ್ತರೆ, ಊಟಕ್ಕೆ ಕೂತಾಗ ಸಾಕು ಅಂತ ಎದ್ದು ಹೋಗ್ತಿರ, ಆಟ ಆಡದಿಕ್ಕೆ ನಿಂತಾಗ ಸಾಕು ಎಂದು ಎದ್ದು ಹೋಗ್ತೀರ, ಹೆಂಗಸಿನ ಜೊತೆ ಮಲಗಿದಾಗ (ಭಾಷೆಯ ಬಳಕೆಗೆ ಕ್ಷಮೆಯಿರಲಿ ಇದು ಹಿರಣ್ಣಯನವರ ಸಂಭಾಷನಣೆಯ ತುಣುಕು) ಸಾಕು ಎಂದು ಎದ್ದು ಹೋಗ್ತೀರ ಆದ್ರೆ ನನ್ಮಕ್ಳ ದುಡ್ಡು ಹೊಡಿ ಬೇಕಾದ್ರೆ ಇಷ್ಟು ಸಾಕಪ್ಪ ಅಂತ ಯಾಕೆ ಎದ್ದು ಹೋಗಲ್ಲ? ಭ್ರಷ್ಟಾಚಾರ ದುರಾಸೆಯ ಫಲವೇ ಹೊರತು ಹಸಿವಿನದ್ದಲ್ಲ

        Reply
  18. Oct 29 2011

    ಮೊದಲು ಮೇಲಾಧಿಕಾರಿಗಳು ಸರಿಯೋದರೆ, ಎಲ್ಲವೂ ತನ್ನಿಂದ ತಾನೆ ಸರಿಹೋಗುತ್ತದೆ. ಮೇಲಿನವರೂ ತಿನ್ನುತ್ತಿದ್ದರೆ, ತಾನೂ ತಿನ್ನುವುದರಲ್ಲಿ ತಪ್ಪೇನಿದೆ ಎಂದು ಕೇಳುತ್ತಾನೆ ಕೆಳವರ್ಗದ ನೌಕರ.

    Reply
  19. Oct 31 2011

    ಮಾನ್ಯರೇ, ಸಾಮಾನ್ಯವಾಗಿ, ಸಾಮಾನ್ಯ ಜನರು ಹೇಳುವುದು. ಸರಕಾರೀ ಕೆಲಸದಲ್ಲಿರುವವರಿಗೆ, ದೇಶದಲ್ಲಿ ಮಳೆ ಬರಲಿ, ಬರಗಾಲ ಬರಲಿ ತಿಂಗಳು ತಿಂಗಳು ನಿಗದಿತವಾಗಿ ಸಂಬಳ ಬರುತ್ತದೆ. ಅದೇ ಒಬ್ಬ ವ್ಯಾಪಾರಿ, ಅಥವಾ ರೈತ ದುಡಿದರೆ ಉಂಟು ಇಲ್ಲವಾದರೆ ಇಲ್ಲ. ಹೀಗಿರುವಾಗ ಜೀವನಕ್ಕೆ ಮೈ ಕೈ ಕೊಳೆ ಇಲ್ಲದೆ ತಿಂಗಳಿಗೆ ಇಂತಿಸ್ತು ಆದಾಯ ಬರುವಾಗ. ಈ ಮೇಲು ಸಂಪಾದನೆ ಅಸೆ ಪಡುವುದು ತಪ್ಪಲ್ಲವೇ. ಏನೋ ಕಾರಣ ನೀಡಿ ಮೇಲು ಸಂಪಾದನೆಯನ್ನು ಸಮರ್ತಿಸಿಕೊಳ್ಳುವುದು ತಪ್ಪಲ್ಲವೇ. ಇದಕ್ಕೆ ನಾವು ಒತ್ತು ಕೊಡುವುದು ತಪ್ಪಲ್ಲವೆ. ಅದೇ ಒಬ್ಬ ಸರಕಾರೀ ನೌಕರ ನನಗೆ ಸಂಬಳ ಸಾಲುವುದಿಲ್ಲ ಅದಕ್ಕಾಗಿ ಲಂಚ ಪಡೆದೆ ಎಂದು ಸಮರ್ತಿಸಿಕೊಂಡರೆ, ಲೋಕಾಯುಕ್ತ ಸಂಸ್ತೆ ಏಕೆ? ಹಾಗಾದರೆ ಒಬ್ಬ ವಿಧ್ಯವಂತ ನಿರುದ್ಯೋಗಿಯ ಪಾಡೇನು? ಅವನು ಕಳ್ಳತನ, ಕೊಲೆ, ದರೋಡೆ ಮಾಡಿದರೆ, ನನಗೆ ಹೊಟ್ಟೆಗೆ ಇರಲಿಲ್ಲ. ಹಸಿವಾಯಿತು ಮಾಡಿದೆ ಎಂದು ಸಮರ್ತಿಸಿಕೊಂಡರೆ ಹೇಗೆ? ಅದರಲ್ಲೂ ಮುಖ್ಯವಾಗಿ ನಿರ್ವಾಹಕರ ಸಂಘಟನೆ ಇದೆ. ಹೋರಾಡಲಿ. ರಜೆಗಾಗಿ ಮೇಲಧಿಕಾರಿ ತೊಂದರೆ ನೀಡುತ್ತಾರೆ ಎಂಬ ಕಾರಣ ನೀಡಿ. ಬೆಂಗಳೂರು ನಗರದ ಯಶವಂತಪುರ ಡಿಪೋ ನೌಕರರು ಸ್ಟ್ರೈಕ್ ಮಾಡಿ ಜಯ ಗಳಿಸಿದ್ದಾರೆ. ಅಲ್ಲವೇ. ?

    Reply

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Note: HTML is allowed. Your email address will never be published.

Subscribe to comments

Follow

Get every new post delivered to your Inbox.

Join 1,256 other followers