ಅದು ಅಮ್ಮನದೇ ಮುತ್ತು..!
ಶ್ರೀಧರ್ ಜಿ ಸಿ
ಅಮ್ಮನಿಗೆ ಪರಿಪರಿಯಾಗಿ ಕೇಳಿಕೊಂಡಿದ್ದೆ.
ಅಮ್ಮ ಮುಂದೆಂದೂ ಇಂತಹ ತಪ್ಪು ಮಾಡಲಾರೆ..!
ಕ್ಷಮಿಸಿ ಬಿಡು ಎನ್ನನು…
ಅಮ್ಮ ಮೌನವಾಗಿ ಕೇಳಿದಳು, ನಗುತ್ತಾ ಹೇಳಿದಳು.
ಮಗು, ಒಪ್ಪಬೇಕಾದವಳು,
ಮಾಡಬಾರದು ಅಂತ ಹೇಳುವ ವಯಸು ಮುಗಿದಿದೆ. .
ನೀನಿನ್ನೂ ಚಿಕ್ಕ ಮಗು ಅಲ್ಲ..!
ಬೆಳೆದ ದೇಹ ನಿನ್ನದು.
ಹಾರುತ್ತಿರುವ ಪಕ್ಷಿ, ಓಡುವ ಪ್ರಾಣಿ ನೀನು.
ಈಗಾಗಲೇ ನಿನಗರಿವಿಲ್ಲದೇ, ನಿನ್ನೊಳಗೆ ಇನ್ನೊಬ್ಬ ಅಮ್ಮನನ್ನು
ತಂದು ಇಟ್ಟಿದ್ದೇನೆ.
ಅವಳು ಇದ್ದಾಳೆ, ನಿನ್ನೊಳಗೆ, ನಿನಗರಿವಿಲ್ಲದೇ..!
ಜೊತೆಗೆ ನಿಮ್ಮಪ್ಪನೂ ಬೆನ್ನಿಗಂಟಿದ್ದಾನೆ.
ನಿನ್ನೊಳಗೆ ಇಬ್ಬರೂ ಇದ್ದಾರೆ, ಕೊರಗುವ ಪ್ರಶ್ನೆಯೇ ಇಲ್ಲ.
ಕೇಳುವುದೇನಿದ್ದರೂ ಅವರನ್ನು ಕೇಳು..!
——-2———-
ಮೆದು ಮಾಂಸದವರೆಗೆ ನೀನು ನನ್ನವನಾಗಿದ್ದೆ.
ನಾ ಹೇಳುತ್ತಿದ್ದೆ, ನೀನು ಕೇಳುತ್ತಿದ್ದೆ.
ನೀನು ಈಗ ಬಲಿತದೇಹ. ತಪ್ಪು ಮಾಡುವ ಮುಂಚೆ, ತಪ್ಪು
ಮಾಡಿದ ಮೇಲೆ, ನಿನ್ನೊಳಗಿನ ಅಮ್ಮನನ್ನೇ ಕೇಳು.
ಅವಳು ಕ್ಷಮೆ ನೀಡಿದರೆ…
ನಾನು ಕ್ಷಮೆ ನೀಡಿದಂತೆ.
ನೀನಿನ್ನೂ ಚಿಕ್ಕವನಲ್ಲ… ಎತ್ತಿ ಮುದ್ದಾಡುವ ಮಗುವಲ್ಲ..!
ಮತ್ತೋಮ್ಮೆ ಅಮ್ಮ ಈ ಮಾತನ್ನು ಹೇಳಿದಳು, ಎಚ್ಚರಿಸಿದಳು.
ಅಮ್ಮನ ಮಾತು ಕಠೋರವಾಗಿತ್ತು, ಒಡಲ ನೋವು ತುಂಬಿತ್ತು.
ಸುತ್ತಲೂ ಕತ್ತಲು ಕವಿದಿತ್ತು. ಅಮ್ಮನ ದನಿ ಬೆಳಕಾಗಿರಲು..
ಅಮ್ಮ… ಅಮ್ಮ… ಅಮ್ಮ… ಅಂತ ಜೋರಾಗಿ ಕಿರುಚಿದೆ.
ಅಮ್ಮ ಅಂತ ಕೂಗಿದ ನನ್ನ ದನಿಯ ನೋವಿಗೆ
ಒಳಗೆ ಯಾರೋ ನನ್ನ ಎದೆಗೆ
ಮುತ್ತಿಕ್ಕಿದಂತಾಯಿತು.
—–3——–
ಹೌದು, ಇದು ನನ್ನ ಅಮ್ಮನದೇ ಮುತ್ತು.
ಅಮ್ಮ ಹೇಳಿದ್ದು ನಿಜ… ಅವಳು ಪೇಳಿದಾಗೆ
ನನ್ನೊಳಗೆ ಇನ್ನೊಬ್ಬ ಅಮ್ಮ ಇದ್ದಾಳೆ. ಸೇರಿಕೊಂಡಿದ್ದಾಳೆ.
ನಾನು ತಪ್ಪು ಮಾಡಿದ್ದಕ್ಕೆ ದುಃಖಿಸುತ್ತಿದ್ದಾಳೆ. ಉಮ್ಮಳಿಸಿ ಅಳುತ್ತಿದ್ದಾಳೆ.
ಅಮ್ಮ… ಹೇಗೆ ನಿನ್ನನು ಸಮಾಧಾನ ಮಾಡಲಿ,
ಕಾಡುತಿಹೆ ನೀನು… ಕ್ಷಮೆ ಕೇಳುವೆ.
ಎದೆಯಲಿ ನೀನಿರುವೆ, ಹೇಗೆ ಹೊರಿಸಲಿ
ನನ್ನ ತಪ್ಪಿನ ಭಾರವ..!
ಬೆನ್ನಿಗಂಟಿದ ಅಪ್ಪನನ್ನು ಬಿಟ್ಟು ಬಂದು ಬಿಡು ಅಂತ ಕೂಗಿದೆ.
ಬೇಡಿಕೊಂಡರೂ, ಪಾಡಿಕೊಂಡರೂ
ಒಳಗಿನ ಅಮ್ಮ ಬರಲಿಲ್ಲ.
ಬರುವ ಇಚ್ಚೆ ಇದ್ದಂತೆ ಕಾಣಲಿಲ್ಲ.
ಅವಳು ಪಿಸುಗುಟ್ಟಿದ ಒಂದು ಮಾತು
ಅರ್ಥವಾಗಿತ್ತು. ಲೋಕಸತ್ಯವಾಗಿತ್ತು.
ನಾ ಹೊರಗೆ ಬಂದರೆ, ಜೀವನವಿಡೀ ನನ್ನ ಕುಡಿಯನು,
ಕ್ಷಮಿಸುವವರು ಈ ಜಗತ್ತಿನಲ್ಲೇ ಯಾರಿಹರು?
ಅವಳು ನೇರವಾಗಿ ಪ್ರಶ್ನಿಸಿದಳು.
ಮಾತು ಅರ್ಥವಾಯಿತು. ಕ್ಷಮೆ ಸಿಕ್ಕಿತು.
ನೀನೊಬ್ಬಳು ನನ್ನ ಜೊತೆಗಿರು.
ನೀನು ಅಲ್ಲೇ ಇರು.. ನಿನ್ನ ಬೆನ್ನಿಗಂಟಿದ ಅಪ್ಪನೂ…
******
hdwallpapersarena.com
ಒಂದು ಸುಂದರ ನಗುವಿಗೆ…ಇಷ್ಟು ಸಾಕಲ್ಲವೇ.. ???
ಕಳೆದೂ ಕೊಂಡ ಪ್ರೇಮಿಯುತಾನೆ ಹೃದಯದ ಬೆಲೆಯ ತಿಳಿದಿರುತಾನೆ…
- ಮನೋರಂಜನ್
ಮಾತಾಗಿ ಬಂದದ್ದು ಮನಸಲ್ಲೇ ಉಳಿದಿತ್ತು
ನಂಬಿಕೆಯ ಕನ್ನಡಿಯಲಿ; ಸುಳ್ಳಿನ
ಪ್ರತಿಬಿಂಬ ಕಾಡಿತ್ತು.
ಮೌನ
-ಮಾಲಿನಿ ಭಟ್
ಮೌನವಾಗಿರುವುದು ನನಗೇನು ಹೊಸದಲ್ಲ
ಭಾವನೆಗಳು ಸೋತಾಗ ನಾನಾಗುವುದು ಮೌನವೇ
ಮೌನವಾಗುವುದು ಅಂದರೆ
ನಾ ಮುನಿಸಿಕೊಂಡೆ ಎಂಬ ಅರ್ಥವಲ್ಲ
ಮೌನವೆಂದರೆ ನಾ ಮೂಕವಾಗಿದ್ದೇನೆ
ಎಂಬ ಸಂದೇಶವಲ್ಲ
ಕಣ್ಣು ಬರಿದಾದ ನೋಟ ಬೀರಿದಾಗ
ನಾನಾಗುವುದು ಮೌನವೇ
ಮೌನವೆಂಬುದು ಎಲ್ಲರಲ್ಲೂ
ಆವರಿಸುವ ಶಕ್ತಿ ಅಲ್ಲ , ಅದೊಂದು
ಸುಂದರ ಪದಗಳನು ಮೌನದಲ್ಲೇ
ಸ್ಪಂದಿಸಿ ಚೈತನ್ಯ ನಿಡೋ
ಅನುರಾಗದ ಸರಮಾಲೆ ………
* * * * * * *
ಮುಳುಗದಿರು ಕರುವೇ!
-ಪುಷ್ಪರಾಜ್ ಚೌಟ
ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ
ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!
ಅಪ್ಪು …
-ಹರೀಶ್ ಎಸ್ ಎಚ್
ಕಳೆದವು ಎಷ್ಟೋ ನಿದಿರೆ
ಬಾರದ ರಾತ್ರಿಗಳು ,
ಹುಡುಕುತಿವೆ ಕಣ್ಣುಗಳು
ಬರಲಿಲ್ಲ ನನ್ನವಳು ,
ಮನವ ಕಾಡುತಿವೆ
ನೆನ್ನೆಯ ನೆನಪುಗಳು ,
ಹೃದಯದಲಿ ಉಳಿದಿವೆ
ನನಸಾಗದ ಕನಸುಗಳು …
ಪ್ರಾರ್ಥನೆ…
-ಬದರಿನಾಥ ಪಲವಳ್ಳಿ
ನನ್ನ ಹೆಣ ಭಾರಕ್ಕೆ
ಹೊತ್ತವರು ಬಳಲ ಬಾರದು
ಪ್ರಭುವೇ!
ದೇಹ ಉಬ್ಬಿಸಬೇಡ ಇನ್ನೂ…
ನಿತ್ಯತೃಪ್ತನು ನೀನು
ನಿತ್ಯಯಾತ್ರಿಕನಿವನು
ಬೇಡುವುದೇ ಸುಲಭ ವಿದ್ಯೆ!
ನಿನ್ನ ತಂತಿಯೋ ನೇರ
ತೂರಾಡದಂತೆ ಕಾಪಾಡು
ನಿಲುಮೆ ನೆಟ್ಟಾಗಿದೆ!
- ಆತ್ರಾಡಿ ಸುರೇಶ್ ಹೆಗ್ಡೆ
ಹೌದು ನಿಲುಮೆ ನೆಟ್ಟಾಗಿದೆ
ಹಾಗಾಗಿ ನಮ್ಮೆಲ್ಲರ ನಿಲುಮೆಗಳೂ ನೆಟ್ಟಗಾಗಿವೆ
ತತ್ವಗಳಿಗೆ ಬದ್ಧರಾದವರೇ
ಆದರೂ ನಾವು ಎಲ್ಲಾ ತತ್ವಗಳ ಎಲ್ಲೆ ಮೀರಿದವರೇ
ಎಡ-ಬಲ-ನಡುವೆಂಬುದಿಲ್ಲ ಇಲ್ಲಿ
ನಮ್ಮ ನಿಲುಮೆಗೆ ಸೀಮಾರೇಖೆಯೆಂಬುದೇ ಇಲ್ಲ ಇಲ್ಲಿ
ತಮ್ಮ ತಮ್ಮ ಅಂಗಳದಲ್ಲಿದ್ದವರು
ಮೈದಾನ ಸಿಕ್ಕಾಗಲೂ ಮೈಮರೆಯದೇ ಉಳಿದವರು
ಇಲ್ಲಿ ಪ್ರಕಟವಾಗದ ವಿಷಯಗಳಿಲ್ಲ
ಇಲ್ಲಿ ಬರೆಯದ ಬ್ಲಾಗಿಗರೂ ಬಹುಷಃ ಹೆಚ್ಚು ಉಳಿದಿಲ್ಲ
ಬಾಡಿಗೆ ಮನೆಯ ತೊರೆದಂತೆ
ಸ್ವಂತ ಮನೆಯಲ್ಲೀಗ ಕೈಕಾಲು ನೀಡಿ ವಿರಮಿಸುವಂತೆ
ಈ ಆರಾಮ ಅಲ್ಪವೇ ಆಗಿರಲಂತೆ
ಇಲ್ಲಿನ ಬರಹಗಳ ಸಂತೆಗೆ ಎಂದೂ ರಜೆ ಇಲ್ಲದಿರಲಂತೆ
ನಿಲುಮೆ ಇರಲಿ ಎಲ್ಲ ತತ್ವಗಳ ಮೀರುತ್ತಾ
ಸದಾ ಇರಲಿ ತನ್ನದೇ ಆದ ತತ್ವವನು ಜಗಕೆ ತೋರುತ್ತಾ!







