Skip to content

Posts from the ‘ಪ್ರವಾಸ’ Category

7
Mar

ಜನಶತಾಬ್ದಿ ರೈಲಿನೊಳಗೆ

-ಶಿವು.ಕೆ

ಹತ್ತಾರು ಬಾರಿ ಅರಸೀಕೆರೆಯಲ್ಲಿ ಈ ರೈಲಿಗೆ ಟಿಕೆಟ್ ಕೇಳಿದ್ದೇನೆ. ಕಣ್ಣ ಮುಂದೆ ನಿಂತು ಹೊರಡಲು ಸಿದ್ದವಾಗಿದ್ದರೂ ಒಮ್ಮೆಯೂ ಟಿಕೆಟ್ ಸಿಗದಿರುವುದು! ವಾರಕ್ಕೆ ಮೊದಲೇ ಟಿಕೆಟ್ಟುಗಳು ಬುಕ್ ಆಗಿಬಿಡುವ, ಅತ್ಯಂತ ವೇಗವಾಗಿ ಚಲಿಸುವ ಈ ರೈಲಿನ ಬಗ್ಗೆ ನನಗೆ ವಿಚಿತ್ರವಾದ ಕಲ್ಪನೆಯಿತ್ತು. ಈ ರೈಲು ಪ್ರಾರಂಭವಾಗಿ ಎರಡು ವರ್ಷಗಳಾದರೂ ಒಮ್ಮೆಯೂ ಪ್ರಯಾಣಿಸುವ ಅವಕಾಶ ಸಿಗಲಿಲ್ಲವಲ್ಲ ಎನ್ನುವ ನಿರಾಶೆ ಆಗಾಗ ಕಾಡುತ್ತಿತ್ತು. ಅದು ಮತ್ಯಾವುದು ಅಲ್ಲ ಬೆಂಗಳೂರು-ಹುಬ್ಬಳ್ಳಿ ನಡುವೆ ಚಲಿಸುವ ಜನಶತಾಬ್ದಿ ರೈಲು.

ಈ ರೈಲಿನ ಬಗ್ಗೆ ನನಗೆ ಕುತೂಹಲ ಹೆಚ್ಚಾಗಲು ಅನೇಕ ಕಾರಣಗಳಿವೆ. ರಾತ್ರಿ ಊಟ ಮುಗಿದ ಮೇಲೆ ಮುಕ್ಕಾಲು ಗಂಟೆ ನಮ್ಮ ಮಲ್ಲೇಶ್ವರಂ ರೈಲು ನಿಲ್ಡಾಣದ ಪ್ಲಾಟ್ ಫಾರ್‍ಂನಲ್ಲಿ  ನನ್ನ ಶ್ರೀಮತಿ ಜೊತೆ ವಾಕಿಂಗ್ ಮಾಡುವಾಗ ಸರಿಯಾಗಿ ಒಂಬತ್ತು ವರೆಯ ಹೊತ್ತಿಗೆ ದೂರದಿಂದಲೇ ಕೂಗೆಬ್ಬಿಸಿಕೊಂಡು ನಿಲ್ಡಾಣದಲ್ಲಿ ನಿಂತು ಕುಳಿತವರೆಲ್ಲರ ಗಮನವನ್ನು ಸೆಳೆಯುತ್ತಾ, ಆಗಿನ ಕಾಲದಲ್ಲಿ ಪಾಳೆಯಗಾರನೊಬ್ಬ ಊರ ನಡುವಿನ ರಸ್ತೆಯಲ್ಲಿ ಧೂಳೆಬ್ಬಿಸಿಕೊಂಡು ವೇಗವಾಗಿ ಕುದುರೆ ಮೇಲೆ ಸಾಗುವಾಗ ಆ ರಬಸಕ್ಕೆ ತಲ್ಲಣಗೊಂಡು ದಿಗಿಲಿನಿಂದ ಒಬ್ಬರಿಗೊಬ್ಬರು ಗುಸುಗುಸು ಮಾತಾಡಿಕೊಳ್ಳುವಂತೆ ಇಲ್ಲಿಯೂ ಈ ಜನಶತಾಬ್ಧಿ ರೈಲು ಅದೇ ವೇಗದಲ್ಲಿ ಬಂದುಬಿಡುತ್ತದೆ.  ನನ್ನ ಶ್ರೀಮತಿ ” ರೀ ಸ್ವಲ್ಪ ಇರ್ರೀ….ಆ ಧನ ಶತಾಬ್ಧಿ ಹೋಗಿಬಿಡಲಿ” ಎಂದು ನನ್ನ ತೋಳನ್ನು ತನ್ನ ಕೈಗಳಲ್ಲಿ ಗಟ್ಟಿಯಾಗಿ ಹಿಡಿದು ನಿಂತುಬಿಡುವಳು. ಹಾಗೆ ನೋಡಿದರೆ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ಸಾಗುವಾಗ ಇತರೆಲ್ಲಾ ರೈಲಿಗಿಂತ ಇದು ವೇಗವಾಗಿಯೇ ಚಲಿಸುತ್ತದೆ. Read more »

23
Dec

ವಿಶಿಷ್ಟ ಸ್ಯೆಕಲ್ಲಿನ ಬೆಲ್ಜಿಯಂ ಜೋಡಿ

-ಗೋವಿಂದ ನೆಲ್ಯಾರು

ನಡುರಾತ್ರೆ ಎಪಿ ಸುಬ್ರಮಣ್ಯಂ ಅವರಿಂದ ಸತತ ನನ್ನ ಸಂಪರ್ಕ ಪ್ರಯತ್ನ. ನಾನು ರಾತ್ರಿ ಬೇಗ ಮಲಗುವ ವ್ಯಕ್ತಿ. ಅದುದರಿಂದ ನಿದ್ದೆಯ ಮದ್ಯೆ ಕಿವಿಗೊಟ್ಟು ಎಲ್ಲಕ್ಕೂ ಹೂಂಗುಟ್ಟಿದೆ. ಎರಡು ಜನ ಎರಡು ಪೆಡಲ್ ಎರಡು ಚಕ್ರದ ಗಾಡಿ ಯಾವುದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ.   ಕಿವಿ ಸಮಸ್ಯೆಯೂ  ನನಗುಂಟು.    ಮರುದಿನ ಮಾಮೂಲಿ ಒಂಬತ್ತು ಕಿಮಿ ದೂರದ ತ್ರಿಚಕ್ರ ತಿರುಗಾಟದಿಂದ ಹಿಂತಿರುಗಿದ ನಂತರ ನಮ್ಮ ಸುಬ್ಬಣ್ಣ ಮೊದಲು ಮಾತನಾಡಿದ ಅನಿಲ ಪರದೇಶಿ ಸೈಕಲಿಗರ ಬೇಟಿಯಾದೆಯಾ ? ಎನ್ನುವಾಗಲೇ ನನಗೆ ಎಚ್ಚರವಾದುದು, ಒಂದು ಅವಕಾಶ ತಪ್ಪಿಸಿಕೊಂಡೆನಾ ? ಕೂಡಲೇ ಸುಬ್ರಮಣ್ಯಂ ಅವರ ಪುನಹ ಸಂಪರ್ಕಿಸಿದೆ. ಅವರು ಸೈಕಲ್ ಸವಾರರ ಜಾಲತಾಣದ ವಿಳಾಸವೂ ಚೂರು ಪ್ರವಾಸದ ವಿವರವನ್ನೂ ಕೊಟ್ಟರು.         http://eurasia.cyclic.eu/
ನೋಡಿದರೆ ಅವರಿರುವುದು ಜರ್ಮನಿಯ ಪ್ರಖ್ಯಾತ ಹೇಸ್ ಕಂಪೇನಿಯ ಪಿನೊ ಎನ್ನುವ ಇಬ್ಬರು ಪ್ರಯಾಣಿಸಬಹುದಾದ ಸೈಕಲು. ಪ್ರಾಯುಶ: ಈ ಸೈಕಲು ಇನ್ನೊಮ್ಮೆ ನೋಡುವ ಅವಕಾಶ ಸಿಗುವುದು ದುರ್ಲಬ. ಕೂಡಲೆ ಪೆಡಲಿಸಿದೆ ರಸ್ತೆ ಬದಿಗೆ. ಕಾಲು ಗಂಟೆಯೊಳಗೆ ಅವರು ಆಗಮಿಸಿದರು. ಒಬ್ಬ ಸೈಕಲ್ ಆಸಕ್ತ ನಿಮಗೆ ದಾರಿಯಲ್ಲಿ ಸಿಗಬಹುದೆಂಬ ಸೂಚನೆ ಮೊದಲೇ ಸುಬ್ಬಣ್ಣ ಅವರಿಗಿತ್ತಿದ್ದರು ಅನಿಸುತ್ತದೆ.
Read more »

16
Dec

ಹೇಳುವುದು ಒಂದು……

-ಅಭಿನಂದನ್

ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ!!

ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.

ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.

ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.

ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…

ಅಮೇರಿಕ ಕಡೆ ವಿಮಾನಗಳಲ್ಲಂತೂ orange juice ಅಂದ್ರೆ ಅರ್ಥ ಆಗದೆ ಇರೋ ಅಷ್ಟರ ಮಟ್ಟಿಗೆ ಅದು “onjuce” ಆಗೋಗಿದೆ. :) Read more »

30
Nov

ಕಲಸೆ (ನಾಡಕಲಸಿ) ದೇವಸ್ಥಾನ

-ಪ್ರಹಸ್ತಿ ಪಿ 

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಕಲಸೆ, ನಾಡಕಲಸಿಯೂ ಒಂದು. ಸಾಗರದವನಾಗಿಯೂ ಅದನ್ನು ನೋಡಲಾಗಿರದ ಬಗ್ಗೆ ಸ್ವಲ್ಪ ಬೇಸರವಿತ್ತು. ಬೆಳಗ್ಗೆ ೮ಕ್ಕೆ, ಮಧ್ಯಾಹ್ನ ಒಂದಕ್ಕೆ ಮಾತ್ರ ಅಲ್ಲಿಗೆ ಬಸ್ಸಿನ ಸೌಕರ್ಯವಿದೆ ಎಂಬ ಗೆಳೆಯರ ಮಾತೂ ನೋಡದಿರುವುದಕ್ಕೊಂದು ಪಿಳ್ಳೆ ನೆವವಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು. ಅದೆಷ್ಟು ಸುಂದರ ಎಂದು.

ಹೋಗುವ ಮಾರ್ಗ:
ಸಾಗರದಿಂದ ಸುಮಾರು ಎಂಟು ಕಿ.ಮೀ ದೂರವಷ್ಟೇ ನಾಡಕಲಸಿ ಅಥವಾ ಕಲಸಿಯ ದೇವಸ್ಥಾನ. ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಮೂರು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಯಾವಾಗಲಾದರೂ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.

ಇತಿಹಾಸ:
ಇಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಸಂಶೋಧನಕಾರರು ಹೇಳುತ್ತಾರೆ.

ಮೊದಲಿಗೆ ಹೋಗುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ದೇಗುಲದ ಎದುರಿಗೆ ಅಥವಾ ಹೋಗುವವರ ಬಲಗಡೆಗೆ ಇರುವ ನಾಗರ ಬನ.ಅದಕ್ಕೆ ನಮಸ್ಕರಿಸಿ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು.

Read more »

15
Nov

ಬೈಲೂರ ಬಸ್ಸು ಹತ್ತಿ

ಪ್ರಶಸ್ತಿ.ಪಿ, ಸಾಗರ

ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ “ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ” ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ?  ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ :-)

ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು :-) Read more »

27
Oct

ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…

-ಸಾತ್ವಿಕ್ ಎನ್ ವಿ

ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ  ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.

ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!!  ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ.  ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. Read more »

30
Jun

ಟ್ರಾಪಿಕ್ ಸಮಸ್ಯೆ ಯ ಜಾಗ್ರುತಿ ಕನ್ನಡದಲ್ಲಿರಲಿ

-ಅರುಣ್ ಜಾವಗಲ್

ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸುವಲ್ಲಿ ದೇಶದ ಹಲವಾರು ನಗರಗಳ ಪೋಲೀಸರಿಗೆ ಹೋಲಿಸಿದರೆ ನಮ್ಮ ಪೋಲೀಸರು ಬಹಳ ಮುಂದಿದ್ದಾರೆ. ತಂತ್ರಜ್ನಾನವನ್ನ ಬಳಸೋದರ ಮೂಲಕ ಟ್ರಾಫಿಕ್ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತಹದ್ದು.

ಆದ್ರೆ, ಬೆಂಗಳೂರಿನ ಟ್ರಾಪಿಕ್ ಸಮಸ್ಯ್ತೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮಿಶನರ್ ಆದ ಜ್ಯೋತಿ ಪ್ರಕಾಶ್ ಮಿರ್ಜಿಯವರು ಇಂದು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.


ಟ್ರಾಪಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪೋಲೀಸಿನವರಶ್ಟೇ ಸಾರ್ವಜನಿಕರ ಪಾತ್ರವೂ ಇದೆ. ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರುತಿ ಅತ್ಯಗತ್ಯ. ಈ ಜಾಗ್ರುತಿ ಕೆಲಸವನ್ನು ಪೋಲೀಸಿನವರ ಮಾಡುತ್ತಿಲ್ಲವೆಂದೇನಿಲ್ಲ. ಸಾರ್ವಜನಿಕರಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಜಾಗ್ರುತಿ ಮೂಡಿಸೋ ಕೆಲ್ಸನೂ ಸಹ ಪೋಲೀಸಿನವರು ಮಾಡುತ್ತಿದ್ದಾರೆ. ಆದರೆ ಇದು ಪರಿಣಾಮಕಾರಿಯಾಗಿಲ್ಲ ಅನ್ನೊದು ನನ್ನ ಅನಿಸಿಕೆ.
ಟ್ರಾಪಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಕೆಲ್ಸದಲ್ಲಿ ಬಾಶೆ ಅತ್ಯಂತ ಮುಕ್ಯ. ಜನರಿಗೆ ಅರ್ತ ಆಗೋ ಬಾಶೆಲಿ ಈ ಕೆಲ್ಸ ನಡೆದ್ರೆ ಪರಿಣಾಮಕಾರಿಯಾಗಿರುತ್ತೆ. ಬೆಂಗಳೂರಿನ ಬಹುಸಂಕ್ಯಾತ ಜನರ ಬಾಶೆ ಕನ್ನಡದಲ್ಲಿ ಜಾಗ್ರುತಿ ಕಾರ್ಯಕ್ರಮ ನಡೆದ್ರೆ ಜಾಗ್ರುತಿಯ ಸಂದೇಶ ಜನರಿಗೆ ತಲುಪುತ್ತೆ. ವಿಶಾದದ ಸಂಗತಿಯೆಂದರೆ, ಪೋಲೀಸಿನವರು ಸಾರ್ವಜನಿಕರನ್ನ ಜಾಗ್ರುತಿ ಮಾಡೋ ಕಾರ್ಯದಲ್ಲಿ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಬಹುಸಂಖ್ಯಾತ ಕನ್ನಡಿಗರನ್ನ ಮರೆತಿರುವುದು ದುರದ್ರುಶ್ಟವೇ. Read more »
26
Jun

ಗೌಡಪ್ಪನ ದುಬೈ ಪ್ರವಾಸ : ಜನಾರ್ಧನ ಹೋಟೆಲ್ ಜಾಮೂನು – ಮಸಾಲೆ ದೋಸೆ!

ಮಂಜುನಾಥ್ ಹೊಳೆನರಸೀಪುರ

ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು!  ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ ” ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ” ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ…’ ಅ೦ದ ಗೌಡಪ್ಪ. ರೇಸ್ ಕೋರ್ಸ್ ರಸ್ತೇನಾಗೆ ಬ೦ದು ಎಡಿಕ್ ತಿರುಕ್ಕೊ೦ಡು ಸಿ.ಎ೦.ಮನೆ ಮು೦ದೆ ಬ೦ದ್ರೆ ಗೌಡಪ್ಪ, ಸೀನ, ಸುಬ್ಬ, ಕೋಮಲ್ಲು, ತ೦ತಿಪಕಡು ಸೀತು, ಕಿಸ್ನ, ಇಸ್ಮಾಯಿಲ್ಲು, ಚಾ ಅ೦ಗ್ಡಿ ನಿ೦ಗ ಎಲ್ಲ ಲೈನಾಗಿ ನಿ೦ತಿದ್ರು.  ಗೌಡಪ್ಪನ ಕೈನಾಗೆ ದೊಡ್ಡದೊ೦ದು ಬ್ಯಾಗು!

ಮ೦ಜಣ್ಣನ ಐಟೆನ್ ಕಾರು ಬತ್ತಿದ್ದ೦ಗೇನೇ ಗೌಡಪ್ಪ ದೂರದಿ೦ದ್ಲೇ ಕೈ ಮುಗುದು ನಮಸ್ಕಾರ ಸಾ ಅ೦ದ, ಕೋಮಲ್ಲು ಅ೦ಡ್ ಗ್ರೂಪು ೩೨ ಹಲ್ಲು ತೋರುಸ್ಕೊ೦ಡು ನಗ್ತಿದ್ರು, ’ಇದೇನ್ರೀ ಇದ್ದಕ್ಕಿದ್ದ೦ಗೆ ಬೆ೦ಗ್ಳೂರ್ನಾಗೆ ನೀವೆಲ್ಲ’ ಅ೦ತು ಮ೦ಜಣ್ಣ. ”ಇ೦ಗೇ ಸಿ.ಎ೦.ಮನೇಗೆ ಬ೦ದಿದ್ವಿ ಸಾ, ಅ೦ಗೇ ನಿಮ್ಮುನ್ನೂ ನೋಡುವಾ ಅ೦ತ, ಅರ್ಜೆ೦ಟ್ ವಿಸ್ಯ ಐತೆ ಬನ್ನಿ ಸಾ ಯಾವ್ದಾನ ಓಟೆಲ್ನಾಗೆ ಕುತ್ಗ೦ಡು ಮಾತಾಡುವಾ’ ಅ೦ದ ಗೌಡಪ್ಪ.  ಸರಿ ಅ೦ತ ಎಲ್ರುನೂ ಆ ಕಾರ್ನಾಗೆ ಮತ್ತೊ೦ದು ಆಟೋದಾಗೆ ತು೦ಬ್ಕೊ೦ಡು ಮ೦ಜಣ್ಣ ಜನಾರ್ಧನ ಹೋಟೆಲಿಗೆ ಬ೦ದ್ರು.  ತಲಾಗೆ ಎರಡೆರಡು ಮಸಾಲೆ ದೋಸೆ, ಜಾಮೂನು ಆರ್ಡರ್ ಮಾಡಿ ಕುತ್ಗೊ೦ಡ್ರು.  ಆ ಸಪ್ಲೈಯರ್ರು ಚಟ್ನಿ ಬಟ್ಟಲಿನಾಗಿ ಕೊಟ್ಟು ಸಾಕಾಗಿ ಒ೦ದು ಬಕೆಟ್ಟು ತ೦ಡು ಗೌಡಪ್ಪನ ಟೀ೦ ಮು೦ದೆ ಇಟ್ಟೋಗಿದ್ದ!  ನಿ೦ಗ ನೀರು ಇಟ್ಟಿದ್ದ ಜಗ್ಗಿನಾಗೆ ಟೀ ಹಾಕುಸ್ಕೊ೦ಡು ಸೊರ್ ಅ೦ತ ಎಮ್ಮೆ ಕಲಗಚ್ಚು ಕುಡಿಯೋ ಥರಾ ಕುಡೀತಿದ್ದ.  Read more »

14
Jun

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!

- ರವಿ ಮುರ್ನಾಡು

ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ  ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.

ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ  ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.

ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. Read more »

7
Jun

ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?

- ಡಾ.ಶೈಲಾ ಯು.

ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ.   ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ. Read more »

Follow

Get every new post delivered to your Inbox.

Join 265 other followers