Skip to content

Posts from the ‘ರಾಜಕೀಯ’ Category

8
May

ಡಬ್ಬಿಂಗ್ ಅವಶ್ಯಕವೇ?

 ಡಾ ಅಶೋಕ್. ಕೆ. ಆರ್.

ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.
ಡಬ್ಬಿಂಗ್ ಪರವಾಗಿರುವವರು ವಾದಿಸುವುದೆಂದರೆ ‘ ನಾವು ಗ್ರಾಹಕರು. ಏನು ಪಡೆಯಬೇಕು ಎಂಬುದನ್ನು ನಾವು ನಿರ್ಧರಿಸಬೇಕೆ ಹೊರತು ಚಿತ್ರರಂಗದ ಕೆಲವರಲ್ಲ. ಇತರೆ ರಾಜ್ಯದವರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಕಾರ್ಟೂನ್, ಡಿಸ್ಕವರಿ, ಪೋಗೋದಂಥಹ ವಾಹಿನಿಗಳನ್ನು, ಆಂಗ್ಲ ಸಿನಿಮಾಗಳನ್ನು ನೋಡುತ್ತಿರುವಾಗ ನಾವ್ಯಾಕೆ ಪರಭಾಷೆಯಲ್ಲೇ ಅವುಗಳನ್ನು ವೀಕ್ಷಿಸಬೇಕು? ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಕನ್ನಡದಲ್ಲಿ ಚಿತ್ರ – ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯದಿಂದ ವಂಚಿತನಾಗಬೇಕೇಕೆ? ಅರ್ಥವಾಗದ ಭಾಷೆಯ ಸಿನಿಮಾಗಳನ್ನು ನೋಡಿ ಅರ್ದಂಬರ್ಧ ತಿಳಿದುಕೊಳ್ಳುವ ಬದಲು ಡಬ್ಬಿಂಗ್ ಮಾಡಿದರೆ ನನ್ನ ಭಾಷೆಯಲ್ಲೇ ನೋಡಿ ಆನಂದಿಸಿ ಸಂಪೂರ್ಣ ಅರಿತುಕೊಳ್ಳುವುದು ಒಳ್ಳೆಯದಲ್ಲವೇ? ತಮಿಳಿನಲ್ಲೇ ಪೋಗೋ ವೀಕ್ಷಿಸುವ ಹುಡುಗನಿಗೆ ತನ್ನ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆಯೇ ಹೊರತು ಅದೇ ಕಾರ್ಯಕ್ರಮಗಳನ್ನು ಇಂಗ್ಲೀಷಿನಲ್ಲಿ ನೋಡುವ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಬೆಳೆಯಲು ಹೇಗೆ ಸಾಧ್ಯ? ನಮ್ಮ ಹಕ್ಕನ್ನು ಕಸಿದುಕೊಂಡಿರುವ ಚಿತ್ರೋದ್ಯಮದ ಈ ನೀತಿ ಸಂವಿಧಾನಬಾಹಿರ’
ಇನ್ನು ಡಬ್ಬಿಂಗ್ ವಿರೋಧಿಸುವವರು ಮುಂದಿಡುವ ವಾದವೆಂದರೆ ‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂಥ ಹಿರಿಯ ಲೇಖಕರು ಆರಂಭಿಸಿದ ಈ ಚಳುವಳಿ ರಾಜ್ ಕುಮಾರ್ ರಂಥ ಮೇರು ನಟರ ನೇತೃತ್ವದಲ್ಲಿ ಮುಂದುವರಿದು ಕನ್ನಡ ಚಿತ್ರೋದ್ಯಮದ ಉಳಿವಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧಿಸಲಾಗಿದೆ. ಈ ನಿಷೇಧ ತೆರವುಗೊಳಿಸಿದರೆ ಹೆಚ್ಚು ಬಂಡವಾಳದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ. ಚಿತ್ರೋದ್ಯಮವನ್ನೇ ಅವಲಂಬಿಸಿದ ಜನರ ಹೊಟ್ಟೆಪಾಡಿಗೆ ಚ್ಯುತಿಯುಂಟಾಗುತ್ತದೆ. ಮೇಲಾಗಿ ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವಲಾಗಲಾರವು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ’ Read more »
30
Apr

ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ

- ಸಾತ್ವಿಕ್ ಎನ್ ವಿ

ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ  ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು. Read more »

25
Apr

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

- ಡಾ ಅಶೋಕ್. ಕೆ. ಆರ್

          ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಆಪರೇಷನ್ ಮೇಘದೂತ: -

ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.

ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.

Read more »

24
Apr

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

- ಚಕ್ರವರ್ತಿ ಸೂಲಿಬೆಲೆ
   ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!

ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.

Read more »

18
Apr

ಶಾರ್ಟ್ ವೇವ್ ರೇಡಿಯೋ ಪ್ರಸಾರದಲ್ಲಿ ಕನ್ನಡದ ದನಿಯಿಲ್ಲ

-ಸಾತ್ವಿಕ್ ಎನ್ ವಿ

ಕನ್ನಡಿಗನೊಬ್ಬ ತನ್ನ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ಬದುಕಬೇಕಾಗಿ ಬಂದರೆ ಆತನಿಗೆ ಕನ್ನಡ ಆಕಾಶವಾಣಿ ಕೇಳಲು ಸಾಧ್ಯವಿಲ್ಲ. ಕಾರಣ, ಕಿರುತರಂಗಾಂತರ ಅಂದರೆ ಶಾರ್ಟ್‌ವೇವನಲ್ಲಿ ಕನ್ನಡದ ಯಾವುದೇ ಆಕಾಶವಾಣಿ ಕೇಂದ್ರ ಪ್ರಸಾರ ಮಾಡುತ್ತಿಲ್ಲ. ಆದರೆ ಇಂಥ ಪರಿಸ್ಥಿತಿ ಇತರೆ ಭಾಷಿಕರಿಗೆ ಇದೆಯೇ? ಇಲ್ಲ. ಕನ್ನಡವನ್ನು ಬಿಟ್ಟು ಮಿಕ್ಕೆಲ್ಲ ದಕ್ಷಿಣಭಾರತದ ಭಾಷೆಗಳಿಗೂ ಈ ಸೌಲಭ್ಯವಿದೆ.

ಏನಿದು ಕಿರುತರಂಗಾತರದಲ್ಲಿ ರೇಡಿಯೋ ಪ್ರಸಾರ?
ಬಾನುಲಿ ಪ್ರಸಾರದಲ್ಲಿ ಶಾರ್ಟ್ ವೇವ್(SW), ಮೀಡಿಯಂ ವೇವ್(MW) ಮತ್ತು ಫ್ರಿಕ್ವೇನ್ಸಿ ಮೊಡೊಲೇಷನ್ (FM) ಎಂಬ ಮೂರು ರೀತಿಯ ತರಂಗಾತರಗಳನ್ನು ಬಳಸಲಾಗುತ್ತದೆ. ಈಗ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಕೇವಲ ಎಂ.ಡಬ್ಲ್ಯೂ ಮತ್ತು ಎಫ್.ಎಂ ಗಳಲ್ಲಿ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಪ್ರಸರಿಸುತ್ತಿವೆ. ಆದರೆ ಎಂ.ಡಬ್ಲ್ಯೂ ಮತ್ತು ಎಫ್.ಎಂ ತರಂಗಗಳ ದೊಡ್ಡ ಕೊರತೆ ಎಂದರೆ ಈ ಅಲೆಗಳು ಬಹಳ ದೂರ ಚಲಿಸಲಾರವು. ಆದರೆ ಶಾರ್ಟ್ ವೇವ್ ಹಾಗಲ್ಲ. ಅದರ ಚಲನೆಯ ಶಕ್ತಿ ಖಂಡಾಂತರ ವ್ಯಾಪ್ತಿಯದ್ದು. ಇಂದು ನಾವು ಕೇಳುತ್ತಿರುವ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಸಿಲೋನ್, ಚೈನಾ ರೇಡಿಯೋ ಇಂಟರ್ ನ್ಯಾಷನಲ್ ಇತ್ಯಾದಿಗಳು ಇದೇ ತರಂಗಗಳನ್ನು ಬಳಸಿಕೊಳ್ಳುತ್ತವೆ. ಈ ತರಂಗಗಳನ್ನು ಬಳಸಿ ಪ್ರಪಂಚದ ಯಾವುದೇ ನಿರ್ದಿಷ್ಟ ಭಾಗಕ್ಕೆ ಪ್ರಸಾರವನ್ನು ತಲುಪಿಸಲು ಸಾಧ್ಯ. ಇದನ್ನು ಬೀಮಿಂಗ್ ಎಂದು ಕರೆಯಲಾಗುತ್ತದೆ. Read more »

17
Apr

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ! …

-ಅಶೋಕ್ ಕೆ.ಆರ್

ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!
          ಭಾರತದಲ್ಲಿ ಗೋಮಾಂಸ ಸೇವನೆಯ ಬಗ್ಗೆ ಇರುವ ಇತಿಹಾಸ ಆಸಕ್ತಿಕರವಾಗಿದೆ. ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು. ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ (ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ’ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ). ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ ತತ್ವವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ. ಮಾಂಸದ ಸವಿಯಾದ ರುಚಿಯನ್ನುಂಡವರು ಅಷ್ಟು ಸುಲಭವಾಗಿ ಬಿಟ್ಟಾರೆಯೇ?! ಬ್ರಾಹ್ಮಣರು ಎಲ್ಲ ಮಾಂಸ ತೊರೆದು ಉಳಿದ ಕೆಲವರು ಗೋಮಾಂಸ ತೊರೆಯುತ್ತಾರೆ. ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ. Read more »
4
Apr

ಸೇನೆ-ಸರ್ಕಾರದ ನಡುವೆ ಬಡವಾಗದಿರಲಿ ನನ್ನ ಭಾರತ

- ರಾಕೇಶ್ ಶೆಟ್ಟಿ

ಆವತ್ತು ಸಂಸತ್ತಿನಲ್ಲಿ ಭಾಷಣಕ್ಕೆ ನಿಂತ ನೆಹರೂ ದೇಶದ ಒಂದಿಂಚು ನೆಲವನ್ನು ಚೀನಿಗಳೀಗೆ ಬಿಟ್ಟುಕೊಡುವುದಿಲ್ಲ.ಎಂತಾ ಯುದ್ಧಕ್ಕಾದರೂ ಸೈನ್ಯ ತಯಾರಿದೆ ಅನ್ನುತ್ತಲೇ  ತಮ್ಮ ಕೋಟಿನಿಂದ ತೆಗೆದ ಕೆಂಪು ಗುಲಾಬಿಯನ್ನ ಜನರ ಕಿವಿಗಿಟ್ಟರು.ಅವರ ಭಾಷಣದ ನಂತರದ ಇತಿಹಾಸ ನಿಮಗೆ ಗೊತ್ತಿರಲೇಬಹುದು.ಆ ಕಹಿ ನೆನಪಿಗೆ ೫೦ ವರ್ಷ ಆಗೋ ಸಮಯದಲ್ಲಿ ಮತ್ತೊಮ್ಮೆ ಕಳೆದವಾರ ಸಂಸತ್ತಿನಲ್ಲಿ ರಕ್ಷಣಾ ಸಚಿವ ಆಂಟನಿಯವರೂ ಸಹ ಭಾರತದ ಸೈನ್ಯ ಬಲಿಷ್ಟವಾಗಿದೆ,ಯುದ್ಧ ಸನ್ನದ್ಧವಾಗಿದೆ ಅಂದಿದ್ದಾರೆ.ನೆಹರೂ ಅವರಿಗೂ-ಅವ್ರ ಕಾಲಕ್ಕೂ ತುಲನೆ ಮಾಡಿದರೆ ಆಂಟನಿ ಅವರನ್ನ ಸ್ವಲ್ಪ ನಂಬಬಹುದು ಅನ್ನಿಸುತ್ತದೇ.ಆದರೆ…

ಕಳೆದ ವಾರ ನಡೆದ ವಿದ್ಯಾಮಾನಗಳಿವೆಯಲ್ಲ ಅವೆಲ್ಲ ಗಾಬರಿ ಹುಟ್ಟಿಸುವಂತವು.ಇದಕ್ಕೆ ಮುನ್ನುಡಿ ಬರೆದಿದ್ದು ಜನರಲ್.ವಿ.ಕೆ ಸಿಂಗ್…! ಜನ್ಮ ದಿನಾಂಕದ ರಗಳೆಯ ನಂತರ ಸ್ವಲ್ಪ ದಿನ ಸುಮ್ಮನಾಗಿದ್ದವ್ರು, ಟಿವಿ ಚಾನೆಲ್ನೊಂದಿಗೆ ಮಾತನಾಡುತ್ತ ತಮಗೆ ೧೪ ಕೋಟಿ ಲಂಚ ನೀಡಲು ಬಂದ ಪ್ರಸಂಗದ ಬಗ್ಗೆ ಬಾಯಿಬಿಡುವ ಮೂಲಕ.ಮತ್ತೆ ಆ ವಿಷಯವನ್ನ ನಾನು ರಕ್ಷಣಾ ಮಂತ್ರಿ ಆಂಟನಿ ಅವರಿಗೂ ಹೇಳಿದ್ದೆ ಅನ್ನುವುದು ಬೆಂಕಿಗೆ ತುಪ್ಪ ಸುರಿದಂತಾಗಿ ಹೋಯಿತು.ಸಂಸತ್ತಿನಲ್ಲಿ ಆಂಟನಿ ’ಅವರು ಮೌಕಿಕವಾಗಿ ಹೇಳಿದ್ದರು ನಾನು ಏನು ತಾನೇ ಮಾಡಲಿ” ಅಂತೆಲ್ಲ ಗೋಳಾಡುವಾಗಲೇ, ಜನರಲ್ ಪ್ರಧಾನಿ ಅವ್ರಿಗೆ ಬರೆದ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ರಹಸ್ಯವಾಗಿರಬೇಕಿದ್ದ ಪತ್ರ ಸೋರಿಕೆಯಾಗಿದ್ದು.!

Read more »

2
Apr

‘ಕೋಮುವಾದ ಮತ್ತು ಮಹಿಳೆ’ ಎಂಬ ಲೇಖನಕ್ಕೊಂದು ಪ್ರತಿಕ್ರಿಯೆ

- ಡಾ.ಜಿ. ಭಾಸ್ಕರ ಮಯ್ಯ

ಸಬಿಹಾರವರ ಮಹಿಳೆ ಮತ್ತು ಕೋಮುವಾದ ಇಂದು ವಿವಾದಕ್ಕೆ ಒಳಗಾಗಿರುವುದು ಜನರ ಕೋಮುವಾದೀಕರಣದ ಪ್ರಕ್ರಿಯೆ ಎಷ್ಟೊಂದು ಉಲ್ಬಣಿಸಿದೆ ಎನ್ನುವುದಕ್ಕೆ ಸಾಕ್ಷಿ. ಸಬಿಹಾರವರ ಲೇಖನದ ಯಾವ ಒಂದು ವಾಕ್ಯವೂ ಅಸತ್ಯದಿಂದ ಕೂಡಿಲ್ಲ. ಪೂರ್ವಾಗ್ರಹಪೀಡಿತವಾಗಿಲ್ಲ. ಅದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಹಾಗೆ ನೋಡಿದರೆ, ಗುಜರಾತಿನ ಬಗ್ಗೆ ಲೇಖಕಿ ಹೇಳಿರುವುದು ಕಡಿಮೆಯೆ. ಅಲ್ಲಿಯ ನರಮೇಧ ಮತ್ತು ಮಹಿಳೆಯರ ಮೇಲಿನ ಭಯಾನಕ ಅತ್ಯಾಚಾರ ಮಧ್ಯಯುಗದ ಯಾವುದೇ ಧರ್ಮಯುದ್ಧ, ಕ್ರುಸೇಡ್ ಮತ್ತು ಜಿಹಾದ್‌ಗೆ ಕಡಿಮೆಯಿಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇರುವವರಿಗೆ ಆಕ್ರೋಶ ಉಂಟಾಗುವಂತಹ ಸನ್ನಿವೇಶದ ಚಿತ್ರಣವನ್ನು ಲೇಖಕಿ ಅತ್ಯಂತ ಸಹನೆಯಿಂದ ಉಲ್ಲೇಖಿಸುತ್ತಾರೆ. ಕೋಮುವಾದದ ವಿವಿಧ ಮುಖಗಳನ್ನು ಮತ್ತು ಆಯಾಮಗಳನ್ನು ಚರ್ಚಿಸುತ್ತಾರೆ. ಆದರೆ, ಲೇಖನದ ಆರಂಭದಲ್ಲಿ ಫಣಿರಾಜರವರು ಕೋಮುವಾದದ ಕುರಿತು ಹೇಳಿದ ಮಾತಿನ ಒಂದು ಉಲ್ಲೇಖವಿದೆ. ಅದು …ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ದ್ವೇಷ ತಿರಸ್ಕಾರಗಳನ್ನು ಬೆಳೆಸುವುದೇ ಕೋಮುವಾದ – ಕೋಮೂವಾದಕ್ಕೆ ಇಂತಹ ಸರಳ ವ್ಯಾಖ್ಯೆ ಸರಿಯಲ್ಲ. ಫಣಿರಾಜ್ ಮತ್ತು ಜಿ. ರಾಜಶೇಖರ್ ಕೋಮುವಾದವನ್ನು ವಿರೋಧಿಸುವಲ್ಲಿ ನಿಷ್ಪಕ್ಷಪಾತಿಗಳಾಗಿರದೆ, ಒಂದು ಕೋಮಿನ ಕೋಮುವಾದದ ಕುರಿತು ಮೌನವಹಿಸುವುದು ಅಥವಾ ಅಂತಹ ಸಂಸ್ಥೆಗಳೊಂದಿಗೆ ಸಂಬಂಧವನ್ನಿರಿಸಿಕೊಳ್ಳುವುದು ನಿಜಕ್ಕೂ ಆಕ್ಷೇಪಾರ್ಹ. ಆದರೆ ಸಬಿಹಾರವರ ಬರವಣಿಗೆ ಈ ನಿಟ್ಟಿನಲ್ಲಿ ದೋಷಮುಕ್ತವಾಗಿದೆ. ಅವರು ಪಾಕಿಸ್ತಾನ, ಬಾಂಗ್ಲಾ ಮತ್ತು ತಸ್ಲೀಮಾ ನಜರೀನ್ ಅವರನ್ನು ಉಲ್ಲೇಖಿಸುತ್ತಾ ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಕುರಿತೂ ಹೇಳುತ್ತಾರೆ. ಸಬಿಹಾರವರ ಲೇಖನ ಈ ನಿಟ್ಟಿನಲ್ಲಿ ವಾಸ್ತವವಾದೀ, ಮಾನವತಾವಾದೀ ಬರವಣಿಗೆಯೆಂಬುದು ನಿಸ್ಸಂಶಯ.

Read more »

2
Apr

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ – ಪ್ರಗತಿಪರರು

- ಡಾ.ಭಾಸ್ಕರ್ ಮಯ್ಯ

ಆಧುನಿಕ ತತ್ವಶಾಸ್ತ್ರದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ. ವೇದಾಂತ ದರ್ಶನಕ್ಕೆ ನೂರಾರು ವ್ಯಾಖ್ಯಾನಗಳಿವೆ. ಆದರೆ ಅವುಗಳಲ್ಲಿ ಪ್ರಮುಖ ಸ್ಥಾನವಿರುವುದು `ಶಾಂಕರ ವೇದಾಂತ’ಕ್ಕೆ. ಆದರೆ, ಶಂಕರರು ವೇದಾಂತ ದರ್ಶನಕ್ಕೆ ವ್ಯಾಖ್ಯಾನ ಬರೆದಿರುವುದು ಭಾವವಾದೀ ದೃಷ್ಟಿಯಿಂದ ಶಂಕರರು ಭಾವವಾದದ ಮೇರು ಶಿಖರ ಎಂಬಲ್ಲಿ ಎರಡು ಮಾತಿಲ್ಲ. ಅವರಿಗೆ ಸರಿಗಟ್ಟುವ ಭಾವವಾಣಿ ದಾರ್ಶನಿಕರುಪಾಶ್ಚಾತ್ಯ ದರ್ಶನ ಶಾಸ್ತ್ರದಲ್ಲಿ ದೊರಕುವುದಿಲ್ಲ. ಆದರೆ, ವಿವೇಕಾನಂದರು ವೇದಾಂತಕ್ಕೆ ವ್ಯವಹಾರಿಕ ರೂಪವನ್ನು ಕೊಟ್ಟರು. ಈ ಬಗೆಯ ವ್ಯಾಖ್ಯಾನ ಕೂಡಾ ತತ್ವಶಾಸ್ತ್ರಕ್ಕೆ ನವನವೀನ.

ಅಗಾಧ ಪ್ರತಿಭೆ
1863ನೆಯ ಇಸವಿ ಜನವರಿ 12 ರಂದು ಕಲ್ಕತ್ತಾದ ಒಂದು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದ ವಿವೇಕಾನಂದರು ಅಗಾಧ ಪ್ರತಿಭೆಯ ವ್ಯಕ್ತಿ. ಆ ಕಾಲದಲ್ಲಿಯೇ ಬಿ.ಎ. ಶಿಕ್ಷಣ ಮುಗಿಸಿದ ವಿವೇಕಾನಂದರು ( ಮೂಲ ಹೆಸರು ನರೇಂದ್ರನಾಥ) ವಿದ್ಯಾರ್ಥಿ ಜೀವನದಲ್ಲಿ ನಾಸ್ತಿಕರಾಗಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ಅವರ ಚಿಂತನಾ ಕ್ರಮವೇ ಬದಲಾಯಿತು.ರಾಮಕೃಷ್ಣರು ಮಹಾನ್ ಸಂತರಾಗಿದ್ದರೂ ಅನಕ್ಷರಸ್ತರು. ವಿವೇಕಾನಂದರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪ್ರಖಾಂಡ ಪಂಡಿತರು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಒಂದೇ ಜೀವನದ ಎರಡು ಮುಖಗಳು ಅಥವಾ ಒಂದೇ ಸತ್ಯದ ಎರಡು ರೂಪಗಳು. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ರಾಮಕೃಷ್ಣರು ಅನುಭೂತಿ  ಆದರೆ ವಿವೇಕಾನಂದರು ಅವರ ವ್ಯಾಖ್ಯಾನ ಅಭಿವ್ಯಕ್ತಿ.

ವಿವೇಕಾನಂದರು ಹಾರ್ಬರ್ತ್ ಸ್ಪೆನ್ಸರ್ ಹಾಗೂ ಜಾನ್ ಸ್ಟುವರ್ಟ್ರಮಿಲ್ ಅವರ ಪ್ರೇಮಿಯಾಗಿದ್ದರು. ಶೆಲಿ, ವರ್ಡ್ಸ್ವರ್ತ್ರ ದಾರ್ಶನಿಕತೆ, ಹೆಗಲ್ನ ವಸ್ತುನಿಷ್ಠ ಆದರ್ಶವಾದ ಹಾಗೂ ಫ್ರಾನ್ಸಿನ ರಾಜ್ಯಕ್ರಾಂತಿ ವಿವೇಕಾನಂದರನ್ನು ತೀವ್ರವಾಗಿ ಪ್ರಭಾವಿಸಿತ್ತು.
ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಜೀವಿಸಿದ್ದರೂ ಅವರ ಸಂದೇಶ ಇವತ್ತಿನ ಕೋಮುವಾದಿ ರಾಜಕೀಯಕ್ಕೆ ಅತ್ಯಂತ ಪ್ರಬಲವಾದ ಶಸ್ತ್ರ. ರಾಮಮೋಹನ್ ರಾಯ್, ಕೇಶವ ಚಂದ್ರ ಸೇನ್, ದಯಾನಂದ ಸರಸ್ವತಿ, ರಾನಡೆ, ಅನಿಬೆಸೆಂಟ್ ಮತ್ತು ರಾಮಕೃಷ್ಣರು ಹದಮಾಡಿದ ನೆಲದಲ್ಲಿ ವಿವೇಕಾನಂದರು ಅಶ್ವತ್ಥದಂತೆ ಬೆಳೆದು ನಿಂತರು. ಇಂದು ಕೋಮುವಾದಿಗಳು ಆ ಅಶ್ವತ್ಥದ ರೆಂಬೆಕೊಂಬೆಗಳನ್ನು ಕಡಿದು ಯೂಪಸ್ಥಂಭ (ಬಲಿಸ್ಥಂಭ)ವನ್ನಾಗಿ ರೂಪಿಸುತ್ತಿದ್ದಾರೆ.

Read more »

26
Mar

ಕಾಲದ ಕನ್ನಡಿ: ನೈತಿಕತೆಗೆ ಇ೦ಬು ನೀಡದ,ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

- ಕೆ.ಎಸ್ ರಾಘವೇಂದ್ರ ನಾವಡ

ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು… ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ … ಈಗ ಈ ಲೇಖನ..

ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ..  ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!

ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.

Read more »

Follow

Get every new post delivered to your Inbox.

Join 265 other followers