ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 8, 2011

10

ಅರುಣಳ ಬಾಳಿಗೆ ಅರುಣೋದಯವೆಂದು

‍ನಿಲುಮೆ ಮೂಲಕ

ರೂಪಾ

ಕೊನೆಗೂ ಅರುಣಾಗೆ ಅರುಣೋದಯ ಕಾಣಲೇ ಇಲ್ಲ . ಕೊನೆಗೆ ಈ ಜೀವನದಿಂದ ಬಿಡುಗಡೆ ಸಿಕ್ಕೀತೆ ಎಂಬ ನಿರೀಕ್ಷೆಯೂ ಇಲ್ಲವಾಗಿ ಹೋಗಿದೆ. ಜೀವ ಹೋಗುವ ತನಕ ದಿನದಿನವೂ ಸಾಯುತ್ತಲೇ ಜೀವಿಸಿರಲೇಬೇಕಾಗಿದೆ. ಅಷ್ಟಕ್ಕೂ ಈ ಅರುಣಾ ಶಾನಭಾಗ್ ಎಂಬ ನಮ್ಮ ಕರ್ನಾಟಕದ ಹುಡುಗಿ ಮಾಡಿದ ತಪ್ಪಾದರೂ ಏನು?

ಹೊನ್ನಾವರದ ಹಳದಿಪುರದಲ್ಲಿ ಹುಟ್ಟಿದಾಕೆಗೆ,  ಬಾಂಬೆಯ ಕೆಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಾಗ ರೋಗಿಗಳ ಸೇವೆಯಲ್ಲಿ ಬದುಕುವಾಸೆ ಕಂಡಿದ್ದಳೇನೋ,ಆದರೆ ಅವಳನ್ನು ಜೀವನವಿಡೀ ಜೀವಚ್ಛವವನ್ನಾಗಿ ಮಾಡುವ ಭೀಭತ್ಸ ಘಟನೆಯೊಂದು ಕಾದಿತ್ತು ಎಂದು ಅವಳಿಗಾದರೂ ಎಲ್ಲಿ ಗೊತಿತ್ತು?.
ಅರುಣಾ ಮಹತ್ವಾಕಾಂಕ್ಶೆಯ ಹುಡುಗಿ.ವಿದೇಶದಲ್ಲಿ ತನ್ನ ಓದನ್ನು ಮುಂದುವರೆಸುವ ಆಸಕ್ತಿ ಹೊಂದಿದ್ದಳು . ಇದನ್ನು ತನ್ನ ಕಸಿನ್ ಜೊತೆ ಹೇಳಿಕೊಂಡಿದ್ದಳು ನೋಡಲೂ ಚೆಂದವಿದ್ದಳು. ನಾಲಿಗೆ ಮಾತ್ರ ಸ್ವಲ್ಪ ಚುರುಕು ಎಂದು ಅವಳ ಸಹೋದ್ಯೋಗಿಗಳು ಹೇಳಿದ್ದಾರೆ. ಅದೇ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಡಾಕ್ಟರ್ ಒಬ್ಬರ ಜೊತೆ ಮದುವೆಯೂ ನಿಶ್ಚಯವಾಗಿ  ಸುಂದರ ಜೀವನದ ಕನಸು ಕಾಣುತ್ತಿದ್ದವಳನ್ನು, ಸೋಹನ್ ಲಾಲ್ ಭರ್ತ ವಾಲ್ಮೀಕಿ ಎಂಬ ಹೆಸರಿನ ವಾರ್ಡ್‌ ಬಾಯ್ ಮುಂದೆಂದೂ ಕನಸು ಕಾಣುವುದಿರಲಿ ಯೋಚಿಸಲೂ ಸಾಧ್ಯವಾಗದಂತಹ ಸ್ಥಿತಿಗೆ ದೂಡಿದ್ದ ಅರುಣಾ ಅವನ ಅವ್ಯವಹಾರವನ್ನು ಕಂಡು ಬೈದಿದ್ದನ್ನೇ ನೆಪ ಮಾಡಿಕೊಂಡು ಅವಳ ಮೇಲೆ ಅತ್ಯಾಚಾರವವೆಸಗುವ ಸಂದರ್ಭದಲ್ಲಿ ಅವಳ ಕುತ್ತಿಗೆಗೆ ನಾಯಿಯ ಚೈನ್ ಕಟ್ಟಿ ಪಶುವಿಗಿಂತ ಕೀಳು ಮತ್ತು ಅಸ್ವಾಭಾವಿಕ ರೀತಿಯಲ್ಲಿ  ತನ್ನ ತೃಷೆ ತೀರಿಸಿಕೊಂಡ .
ಇತ್ತ ಅರುಣಾಳ ಬಾಳಲ್ಲಿ ಮತ್ತೆ ಅರುಣೋದಯ ನೋಡುವ ಅವಕಾಶ ಬರಲೇ ಇಲ್ಲ.ಕಟ್ಟಿದ್ದ ಚೈನಿನ ಬಿಗಿತದಿಂದ ಮೆದುಳಿಗೆ ಆಮ್ಲಜನಕದ ಕೊರತೆಯುಂಟಾಗಿ,ಮೆದುಳು ನಿಷ್ಕ್ರಿಯವಾಗಿ ಜೀವಂತ ಹೆಣವಾಗಿ ಹೋದಳು ಅರುಣಾ.
 ಮನೆಯವರು ನೋಡಿಕೊಳ್ಳಲಾಗದೆ ದೂರ ಹೋದರು. ಮದುವೆಯಾಗುವ ಹುಡುಗ ಕೆಲವಾರು ವರ್ಷಗಳವರೆಗೆ ಅವಳ ಜೊತೆಗೆ ಇದ್ದು ಕೊನೆಗೆ ಬೇರೊಂದು ಮದುವೆಯಾದರು. ಇತ್ತ ಅವಳನ್ನು ಇಂತಹ ಸ್ಥಿತಿಗೆ ದೂಡಿದ ಸೋಹನ್ ಲಾಲ್‍ಗೆ ಶಿಕ್ಷೆಯಾಗಿದ್ದು ಕೇವಲ ಏಳೇ ವರ್ಷಗಳು. ಆತನ ಅತ್ಯಾಚಾರದ ಆರೋಪ ಬಯಲಿಗೆ ಬಾರದೆ ಅಸ್ವಾಭಾವಿಕ ಕ್ರಿಯೆ ಎಂದು ಅವನಿಗೆ ಕಡಿಮೆ ಶಿಕ್ಷೆ. ಬಿಡುಗಡೆಯಾಗಿ ಡೆಲ್ಲಿಯ ಬೇರೊಂದು ಆಸ್ಪತ್ರೆಯಲ್ಲಿ ಆರಾಮಾವಾಗಿದ್ದಾನೆ. ನಮ್ಮ ದೇಶದ ನ್ಯಾಯಾಲಯದ ಸ್ಠಿತಿಗೆ ಇದೊಂದು  ಉದಾಹರಣೆಯಷ್ಟೆ.
ಇತ್ತ ತನ್ನ ತಪ್ಪೇ ಇಲ್ಲದೆ ಜೀವನ ಪರ್ಯಂತ ಶಿಕ್ಷೆಗೆ ಒಳಗಾಗಿದ್ದಾಳೆ ನಮ್ಮ ಅರುಣ. ಬೆಳಗಿನ ಸುಂದರ ಕನಸುಗಳು ಕಮರಿ ಅತ್ತ ಅಸ್ತಂಗತಳೂ ಆಗದೇ ಇತ್ತ ಬದುಕಲೂ ಆಗದೇ ಬದುಕಿದ್ದಾಳೇ. ಕೆಮ್ಸ್ ಆಸ್ಪತ್ರೆಯವರೇ ಅರುಣಾಳನ್ನು ನೋಡಿಕೊಳ್ಳುತ್ತಿದ್ದಾರೆ. ಸತತ 37 ವರ್ಷಗಳಿಂದ ಹಾಸಿಗೆಯ ಮೇಲೆ ಮಲಗಿರುವ ಅರುಣಾ ಆಗೀಗ ಚೀರುತ್ತಾಳೆ,   ಆದರೆ ಮಾತನಾಡಳು, ಕಣ್ಣುಗಳಿವೆ ಆದರೆ ನೋಡಲಾರಳು. ಹೀಗೆ  ಎಲ್ಲಾ ಅಂಗಗಳಿದ್ದೂ ಅವುಗಳನ್ನು ನಿಯಂತ್ರಿಸುವ ಮೆದುಳು ನಿಷ್ಕ್ರಿಯವಾಗಿದೆ. ನೆನಪಿನ ಶಕ್ತಿಯನ್ನೂ ಕಳೆದುಕೊಂಡಿದ್ದಾಳೆ.
ಅರುಣಾಳ ಪರಿಸ್ಥಿತಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪಿಂಕಿ ವಿರಾನಿಯನ್ನು ಬಡಿದೆಬ್ಬಿಸಿತು. ಅರುಣಾಗೆ ದಯಮರಣ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದಳು.
ಸುಪ್ರೀಮ್ ಕೋರ್ಟ್  ಇಂದು ದಯಾಮರಣದ ಅರ್ಜಿಯನ್ನು ತಿರಸ್ಕರಿಸಿತು. ತಾನು ಸಾಯಬೇಕೆ ಬೇಡವೇ ಎಂಬ ತೀರ್‍ಮಾನವನ್ನು ಅರುಣಾಗೆ ಕೈಗೊಳ್ಳಲು ಸಾಧ್ಯವಿಲ್ಲದಿದ್ದಾಗ, ಅವಳಿಗೆ ಸಾವನ್ನು ನೀಡುವ ಹಕ್ಕು ಬೇರೆಯವರಿಗಿಲ್ಲ ಎಂಬ ನಿರ್ಧಾರವನ್ನು ಹೇಳಿತು.
ಆದರೆ……………..
ಇನ್ನೆಷ್ಟು ದಿನ ಅರುಣಾ ಹೀಗೆ ಇರಬೇಕು?
ಅವಳಿಗೆ ದಯಾಮರಣದ ಅವಶ್ಯಕತೆ ಇದೆಯೇ ಇಲ್ಲವೇ?
ಕನಿಷ್ಟ ಅವಳಿಗೆ ಬದುಕುವ ಆಸೆ ಇದೆಯೇ?
ಇದಕ್ಕೆ ಉತ್ತರಿಸಲು ಅವಳಿಂದ ಮಾತ್ರ ಸಾಧ್ಯ .
ಆದರೆ ……………….
ಇಂಥ ಸ್ತಿತಿಯಲ್ಲಿರುವ ಆಕೆಗೆ ಜೀವಿಸುವ ಹಕ್ಕು ಬೇಕೆ ಬೇಡವೇ ……………
ಅಷ್ಟಕ್ಕೂ ದಯಮರಣ ನಮ್ಮ ದೇಶದಲ್ಲಿ ಎಷ್ಟು ಪ್ರಸ್ತುತ?
ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.

(ಚಿತ್ರ ಕೃಪೆ : ಅಂತರ್ಜಾಲ)

10 ಟಿಪ್ಪಣಿಗಳು Post a comment
  1. ಶೀಲ
    ಮಾರ್ಚ್ 8 2011

    “ಅಷ್ಟಕ್ಕೂ ದಯಮರಣ ನಮ್ಮ ದೇಶದಲ್ಲಿ ಎಷ್ಟು ಪ್ರಸ್ತುತ?”
    ಒಳ್ಳೆಯ ಪ್ರಶ್ನೆ!
    ನನ್ನದೊಂದಿಷ್ಟು ಪ್ರಶ್ನೆಗಳು-
    ಅರುಣಾಳ ದೈಹಿಕ ಸ್ಥಿತಿ ಎಲ್ಲರಿಗೂ ಗೋಚರವಾಗುತ್ತದೆ, ಅವಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಲು ಸಹ ಮಾನವರಿಗೆ ಅಸಾಧ್ಯವೇ? ನಮ್ಮ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಅವಳ ನೋವಿನ ಆಳದ ಅರಿವಾಗುವುದಿಲ್ಲವೇ? ತುಂಬು ವಯಸ್ಸಿನ ಜೀವವೊಂದು ತನ್ನೆಲ್ಲ ಅಂಗಗಳ ಉಪಯೋಗ ನಿಂತುಹೋದಾಗ, ಆ ಸ್ಥಿತಿಯಲ್ಲಿ ನೂರ್ಕಾಲ ಬದುಕಿರಲು ಇಚ್ಛಿಸಲು ಸಾಧ್ಯವೇ? ೩೭ ವರ್ಷಗಳ ಸುಧೀರ್ಘ ಶಯ್ಯಾವಾಸ ಯಾರಿಗೆ ತಾನೇ ಸಹ್ಯ? ಮಾನವೀಯತೆ ಎಂದರೆ ಬರೇ ಯಥಾಸ್ಥಿತಿಯಲ್ಲಿ ಜೀವಿಸಲು ಬಿಡುವುದೇ ಅಥವಾ ಅರ್ಥಪೂರ್ಣ ಜೀವನ ಇಲ್ಲವೇ ಮರಣ ಕೊಡುವುದೇ? ಆ ಪರಿಸ್ಥಿತಿಯಲ್ಲಿ ನಾನಿದ್ದರೆ ನಿಸ್ಸಂದೇಹವಾಗಿ ಮರಣವನ್ನೇ ಆಶಿಸುತ್ತಿದ್ದೆ. ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಎನ್ನುವ ಚಿಲ್ಲರೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರು ಇರುವಾಗ, ಈ ಪರಿಯ ನೋವಿನಲ್ಲಿ ಅನುಕ್ಷಣ ಬೇಯುವೆ ಎನ್ನುವುದು ಯಾರ ನಿರ್ಧಾರವಾಗಲು ಸಾಧ್ಯ?

    ಉತ್ತರ
  2. ಮಾರ್ಚ್ 8 2011

    ರೂಪಾ,
    ನ್ಯಾಯಾಲಯದ ತೀರ್ಪಿನ ಹಿಂದೆ ಗಂಭೀರ ಚಿಂತನೆ ಇದೆಯೆಂದು ನನ್ನ ಅನಿಸಿಕೆ.
    ದಯಾಮರಣಕ್ಕೆ ಅನ್ಯರು ಕೋರಿಕೆ ಸಲ್ಲಿಸಿ, ಮನ್ನಣೆ ದೊರೆಯುವ ಪರಿಪಾಠಕ್ಕೆ ನ್ಯಾಯಾಲಯ ಇಂದು ನಾಂದಿಹಾಡಿದರೆ, ನಮ್ಮ ನಾಡಿನಲ್ಲಿ ಅಂಥ ಅರ್ಜಿಗಳು ನೂರಾರು ಬಂದಾವು ಎನ್ನುವ ಯೋಚನೆಯೂ ಇರಬಹುದು.
    ಅಲ್ಲದೇ, ಜೀವನ್ಮರಣ ಎನ್ನುವುದು ಭಗವಂತನ ಕೈಯಲ್ಲಿ ಇದೆಯೆಂದು ನಂಬುವವರಿಗೆ, ಅಕೆಯನ್ನು ತನ್ನೆಡೆಗೆ ಕರೆದೊಯ್ಯುವ ನಿರ್ಧಾರವನ್ನು ಭಗವಂತ ಕೈಗೊಳ್ಳಲು ಬಹುಷ: ಇನ್ನೂ ಬಹಳ ಕಾಲ ಬಾಕಿ ಇದೆ ಎಂದೇ ತಿಳಿಯಬೇಕೇನೋ.
    ಆಶಾವಾದಿಯಾದ ನನಗೆ, ಒಂದು ಮುಂಜಾನೆ ಅರುಣಾ ಎದ್ದು ಕೂರಬಹುದೇನೋ, ಮಾತಾಡಬಹುದೇನೋ ಮತ್ತು ಪೂರ್ವ ಸಾಮಾನ್ಯ ಸ್ಥಿತಿಗೆ ಮರಳಬಹದೇನೋ ಎನ್ನುವ ನಿರೀಕ್ಷೆಯೂ ಇದೆ.

    ಉತ್ತರ
  3. ಪ್ರದೀಪ್ ಸಿ ಎಸ್
    ಮಾರ್ಚ್ 8 2011

    ಒಬ್ಬ ವ್ಯಕ್ತಿ ತುಂಬಾ ಖಾಯಿಲೆ ಇದ್ದು ಸ್ವಯಂಪ್ರೇರಿತನಾಗಿ ತಾನೇ ಅರ್ಜಿ ಸಲ್ಲಿಸಿದರೆ ಮತ್ತು ಅವನ ಸ್ಥಿತಿಯಬಗ್ಗೆ ಡಾಕ್ಟರ್ ನೀಡುವ ವರದಿ ಆದರಿಸಿ
    ದಯಾಮರಣ ನೀಡಿದರೆ ಒಳ್ಳೆಯದು ಅದು ಬಿಟ್ಟು ಬೇರೆಯವರು ನೀಡಿದಕ್ಕೆ ಮನ್ನಿಸುವುದು ಸರಿಯಲ್ಲ

    ಉತ್ತರ
  4. ಮಾರ್ಚ್ 8 2011

    ಶಿವಮೊಗ್ಗದ ಹಳದಿಪುರದಲ್ಲಿ ಹುಟ್ಟಿದ್ದು ಅಲ್ಲ ಅದು ಹೊನ್ನಾವರದ ಹಳದೀಪುರ ಎಂದಾಗಬೇಕು.

    ಉತ್ತರ
  5. ಮಾರ್ಚ್ 8 2011

    ಅರುವತ್ತು ವರುಷದ ಅರುಣಾರಿಗೆ ಏಕವಚನದ ಬಳಕೆ ಸಮಂಜಸವಲ್ಲವೆಂದು ನನ್ನ ಅನಿಸಿಕೆ.
    .

    ಉತ್ತರ
    • ಮಾರ್ಚ್ 9 2011

      ಅರುಣಾ ಬಗ್ಗೆ ಆತ್ಮೀಯತೆ ಬರಲಿ ಎಂದು ಹಾಗೆ ಬಳಸಿದ್ದೆ. ಆದರೆ ನಿಮ್ಮ ಸಲಹೆಯನ್ನುಕುರಿತು ಯೋಚಿಸಿದಾಗ ನೀವು ಹೇಳಿದ್ದು ಸರಿ ಎನ್ಸಿಸಿತು. ಮುಂದಿನ ಬರವಣಿಗೆಯಲ್ಲಿ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ.

      ಉತ್ತರ
  6. ಮಾರ್ಚ್ 9 2011

    ಆಸು ಹೆಗ್ಡೆ sir, ಅದು ಎಂದರೆ ಆ ಊರು ಎಂಬುದಾಗಿ ನನ್ನ ಪ್ರತಿಕ್ರಿಯೆ.

    ಉತ್ತರ
    • ಮಾರ್ಚ್ 9 2011

      ಜಗದೀಶ್,
      ನನ್ನ ಪ್ರತಿಕ್ರಿಯೆ ಮೂಲ ಲೇಖನಕ್ಕೆ ನೀಡಿದ ಪ್ರತಿಕ್ರಿಯೆಯಾಗಿತ್ತು.
      ಅದು ತಮ್ಮ ಪ್ರತಿಕ್ರಿಯೆಗೆ ನನ್ನ ಮರುಪ್ರತಿಕ್ರಿಯೆ ಅಲ್ಲವಾಗಿತ್ತು. ತಮ್ಮ ಪ್ರತಿಕ್ರಿಯೆ ಸರಿಯಾಗಿಯೇ ಇದೆ.
      ಮರು ಪ್ರತಿಕ್ರಿಯೆ ಹೀಗಿರುತ್ತದೆ (ಪ್ರತಿಕ್ರಿಯೆಗಿಂತ ಸ್ವಲ್ಪ ಬಲಕ್ಕೆ ಸರಿದಿರುತ್ತದೆ)

      ಉತ್ತರ
  7. ಮಾರ್ಚ್ 9 2011

    ನನ್ನ ಪ್ರತಿಕ್ರಿಯೆ ಎಂದರೆ ನನ್ನ ಬ್ಲಾಗಲ್ಲಿ ತಕ್ಷಣ ಲೇಖನಹಾಕಿದ್ದು…ನಿಜಕ್ಕೂ ಅರುಣಳ ಅರುಣ ಉದಯಿಸುವನೇ…?? ಕಡೇ ಪಕ್ಷ ಮರುಜನ್ಮದಲ್ಲಾದರೂ ಎನ್ನೋಣವೆಂದರೆ…?? ಅದು ಎಂದು…????????
    ನನ್ನ ಬ್ಲಾಗ್ ಗೆ ಲಿಂಕ್
    http://www.jalanayana.blogspot.com

    ಉತ್ತರ
  8. ssnkumar
    ಮಾರ್ಚ್ 17 2011

    > ಮೆದುಳು ನಿಷ್ಕ್ರಿಯವಾಗಿ ಜೀವಂತ ಹೆಣವಾಗಿ ಹೋದಳು ಅರುಣಾ.
    ಅವರ ಮೆದುಳು ನಿಷ್ಕ್ರಿಯವಾಗಿಲ್ಲ.
    ಅವರಿಗೆ ಇಷ್ಟವಾದ ಆಹಾರವೋ, ಪೇಯವೋ ಬಂದಾಗ ಅವರ ಮುಖದ ಭಾವ ಬದಲಾಗುತ್ತದೆ – ಸಂತೋಷವನ್ನು ವ್ಯಕ್ತಪಡಿಸುತ್ತಾರೆ.
    ಮೆದುಳು ನಿಷ್ಕ್ರಿಯವಾಗಿದ್ದಿದ್ದರೆ ಇದು ಸಾಧ್ಯವಿರುತ್ತಿರಲಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments