ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 31, 2011

5

ಅಜಕ್ಕಳರಿಗೇಕೆ ಈ ಅಸಹನೆ?

by ನಿಲುಮೆ

(ಡಾ.ಅಜಕ್ಕಳ ಗಿರೀಶ್ ಭಟ್ ಅವರ ಲೇಖನಕ್ಕೆ ಶುಭಶ್ರೀಯವರ ಉತ್ತರ ಇಲ್ಲಿದೆ – ನಿಲುಮೆ)

– ಶುಭಶ್ರೀ

ಈ ಪುಸ್ತಕವನ್ನು ಬರೆದಿರುವ ಡಾ. ಅಜಕ್ಕಳ ಗಿರೀಶ್ ಭಟ್ಟರು ತಾವು ಬರೆದ ಪುಸ್ತಕಕ್ಕೆ ಇಟ್ಟಿರುವ ಹೆಸರೇ ಶ್ರೀಯುತರ ಉದ್ದೇಶವು ತಾತ್ವಿಕ ನಿಲುವನ್ನು ಪ್ರತಿಪಾದಿಸುವುದಾಗಲೀ, ವಾದವೊಂದನ್ನು ಆರೋಗ್ಯಕರವಾಗಿನಡೆಸುವುದಾಗಲೀ ಅಲ್ಲವೆಂದೂ ವ್ಯಕ್ತಿಯ ತೇಜೋವಧೆಯನ್ನು ಮಾಡುವುದಕ್ಕಾಗಿ ಮಾತ್ರವೇ ಎಂದೂ ವೇದ್ಯವಾಗುವುದಿಲ್ಲವೇ? ಇಲ್ಲದಿದ್ದರೆ “ಕನ್ನಡಕ್ಕೇಕೆ ಕತ್ತರಿ?” ಎನ್ನುವ ಹೆಸರು ಸಾಕಾಗುತ್ತಿತ್ತು.

“ಶಂಕರಬಟ್ಟರಕತ್ತರಿ” ಎಂದು ಬರೆದಿರುವ ಉದ್ದೇಶವೇ ಡಾ. ಡಿ ಎನ್ ಎಸ್ ಅವರನ್ನು ಏಕಾಂಗಿ ಎಂದು ಬಿಂಬಿಸುವ ದುರುದ್ದೇಶದಿಂದ ಅಲ್ಲವೇ? ಪುಸ್ತಕದ ಹೆಸರಿನ ಬಗ್ಗೆ ಆಕ್ಷೇಪಾ ಯಾಕೆಂದರೆ ಅದರಲ್ಲಿ ಶಂಕರಭಟ್ಟರನ್ನು ಹಳಿಯುವ ಉಮ್ಮೇದಿಯೊಂದೇ ಕಾಣುತ್ತಿರುವುದು. ಡಾ. ಡಿ ಎನ್ ಶಂಕರಭಟ್ಟರ ವಿಚಾರಗಳ ಬಗ್ಗೆ ನಡುನಡುವೆ ತಮ್ಮ ವಾದಕ್ಕೆ ಅನುಕೂಲವಾಗುವಂತಹ ಸಾಲುಗಳನ್ನು ಮಾತ್ರಾ ಎತ್ತಿಕೊಂಡು ತಮಗೆ ತೋಚಿದಂತೆ ವಿಶ್ಲೇಷಿಸಿರುವಂತೆ ಕಾಣುತ್ತಿದೆ. ಯಾಕೆಂದರೆ ಅಚ್ಚಕನ್ನಡ ವರ್ಣಮಾಲೆಯೆಂದು ಅನೇಕ ಕಡೆ, ಬಹಳಷ್ಟು ಹಿಂದೆಯೇ ಈ ಮಹಾಪ್ರಾಣ ಬಿಟ್ಟ ವರ್ಣಮಾಲೆ ಪ್ರಕಟವಾಗಿದೆಯಲ್ಲವೇ?

ಮೂಲತಃ ಶಂಕರಭಟ್ಟರ ನಿಲುವುಗಳನ್ನು ಖಂಡಿಸುತ್ತಾ ಇವುಗಳನ್ನು ಒಪ್ಪಿರುವ ಯಾವ ಭಾಷಾ ವಿಜ್ಞಾನಿಯೂ ಇಲ್ಲವೆನ್ನುವಂತೆ ಕೆಲವರು ಬರೆದಿರುವುದು ಸರಿಯಲ್ಲ. ಕರ್ನಾಟಕದ ಬಹುತೇಕ ಭಾಷಾ ವಿಜ್ಞಾನಿಗಳು ಇಂದು ಡಾ.ಡಿ ಎನ್ ಎಸ್ ಅವರ ನಿಲುವುಗಳ ಬಗ್ಗೆ –ಅವುಗಳಲ್ಲಿ ಒಪ್ಪಿತವಾಗುವುವೆಷ್ಟು? ಆಗದವೆಷ್ಟು?ಎಂದೆಲ್ಲಾ ಚರ್ಚೆ ನಡೆಸಿದ್ದಾರೆ. ಹಾಂ… ಅದೂ ಭಾಷಾ ವಿಜ್ಞಾನದ ನೆಲೆಯಲ್ಲಿ.  ಇವತ್ತಿನ ದಿವಸ ಕರ್ನಾಟಕದಲ್ಲಿ ಭಾಷಾವಿಜ್ಞಾನಿಗಳಲ್ಲಿ ದೊಡ್ಡ ಹೆಸರು ಡಾ. ಕೆ ವಿ ನಾರಾಯಣ, ಡಾ. ಸಿ ಎಸ್ ರಾಮಚಂದ್ರ,  ಡಾ. ಮಲ್ಲಿಕಾರ್ಜುನ್‍ಮೇಟಿ…ಮೊದಲಾದವರದ್ದು. ಇವರೆಲ್ಲರೂ ಸೇರಿದಂತೆ ಹಂಪಿ ವಿಶ್ವವಿದ್ಯಾಲಯದ ಹತ್ತಾರು ಅಧ್ಯಾಪಕರುಗಳು, ಮುಖ್ಯಸ್ಥರುಗಳು, ದ್ರಾವಿಡ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಅನೇಕ ಮುಖಂಡರುಗಳು ಇಂದು ಡಾ. ಡಿ ಎನ್ ಎಸ್ ಅವರ ನಿಲುವುಗಳನ್ನು ಸಮರ್ಥಿಸುತ್ತಿದ್ದಾರೆ ಎಂಬುದನ್ನು ಮರೆಮಾಚುವುದು ಬೇಕಿಲ್ಲ. ಇದುವರೆಗೂ  ಕನ್ನಡದ ವೈಜ್ಞಾನಿಕ ಅಧ್ಯಯನ ಆಗಿರುವ ದಿಕ್ಕು ಸರಿಯಿಲ್ಲ ಎಂದು ಶಂಕರಭಟ್ಟರು ತಮ್ಮ ಅಧ್ಯಯನದಲ್ಲಿ ತೋರಿಸಿಕೊಟ್ಟಿದ್ದಾರೆ.ಅವುಗಳ ಬಗ್ಗೆ ಚರ್ಚೆಯಾಗಬೇಕೇ ಹೊರತು ವೈಯುಕ್ತಿಕ ನಿಂದನೆಗಳಲ್ಲ. ಆದರೆ ಗಿರೀಶ್ ಬಳಸಿರುವುದು  ಬಹುಭಾಷಾ ಪಂಡಿತರಾದ ಶ್ರೀ ರಾ. ಗಣೇಶ್ ಅವರ ಮಾತುಗಳನ್ನು. ನೆನಪಿಡಿ, ಗಣೇಶ್ ಅವರೊಬ್ಬ ಬಹುಭಾಷಾ ವಿದ್ವಾಂಸರೇ ಹೊರತು ಭಾಷಾ ವಿಜ್ಞಾನಿಯಲ್ಲ.

ಭಾಷಾವಿಜ್ಞಾನವೆನ್ನುವುದು ಭಾಷೆಯ ಸ್ವರೂಪ, ಅಕ್ಷರಗಳು, ಉಲಿಗಳು, ವ್ಯಾಕರಣಗಳು… ಇದರಲ್ಲಿ ಹೊಕ್ಕಿರುವ ಇತರೆ ಭಾಷಾ ಪದಗಳು, ನೆರೆಯ influenceಗಳು ಇವೆಲ್ಲದರ ಅಧ್ಯಯನವಷ್ಟೇ ಆಗಿರದೆ ಆ ನುಡಿಯಾಡುವ ಸಮಾಜದ ಅಧ್ಯಯನವೂ ಆಗಿರುತ್ತದೆ. ಇಂದು ಕನ್ನಡ ನುಡಿಯ ಬಳಕೆಯ ವ್ಯಾಪ್ತಿ ಎಷ್ಟು ಹಿಗ್ಗಿದೆಯೋ ಅಷ್ಟು ಹಿಂದೆಂದೂ ಇರಲಿಲ್ಲ ಎನ್ನುವುದು.ಈ ಹಿಗ್ಗುವಿಕೆಯಿಂದಾಗಿಯೇ ಕನ್ನಡಿಗರಿಗೆ ತಾವು ಬಳಸುವ ನುಡಿಯ ಬರವಣಿಗೆಯ ಅಗತ್ಯವೂ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ ತಾನೆ? ಹಾಗಾದರೆ ಒಬ್ಬನು ನುಡಿಯುವ ನುಡಿಯನ್ನು, ಅವನು ಉಲಿದಂತೆ ಬರೆಯಬೇಕೆನ್ನುವುದು ಸರಿಯಾದ್ದೋ, ನಿನ್ನ ಉಲಿಯುವಿಕೆಯೇ ತಪ್ಪು… ಅದನ್ನೇ ಬದಲಿಸಿಕೋ ಎನ್ನುವುದು ಸರಿಯಾದ್ದೋ? ಇಂತಹ ಸಾಮಾಜಿಕ ವಿಷಯಗಳ ಬಗ್ಗೆ ಚಿಂತನೆ ಶ್ರೀ ಅಜಕ್ಕಳರ ಬರಹದಲ್ಲಿ ಇಲ್ಲ…ಅಲ್ಲವೆ? ಕನ್ನಡಿಗರು ಉಲಿಯುತ್ತಿರುವ ರೀತಿಯನ್ನೇ ಬದಲಾಯಿಸುತ್ತೇನೆ ಅನ್ನುವ ವಾದವೇ anti democratic ಅಲ್ಲವೇ? ಹೌದು, ನೂರು ಥರದ ಕನ್ನಡದ ಉಚ್ಚರಣೆಗಳಿವೆ, ಈ ವೈವಿಧ್ಯತೆ ಶಾಪವೇನೂ ಅಲ್ಲ. ಒಂದುಪದದ ಉಚ್ಚರಣೆ ಹೀಗಿದ್ದರೆ ಮಾತ್ರಾ ಸರಿ ಎನ್ನುವ ನಿಲುವೇ ದಬ್ಬಾಳಿಕೆ ಮನಸ್ಥಿತಿಯದ್ದು. ವ್ಯಕ್ತಿಯ ಸುತ್ತಲಿನ ಸಮಾಜದಲ್ಲಿ ಹೇಗೆ ಉಲಿಯುವಿಕೆ ಇರುತ್ತದೋ ಹಾಗೇ ಉಲಿಯುವುದು (ಬೇರೆ ದೈಹಿಕನ್ಯೂನತೆಗಳಿಲ್ಲದಿದ್ದಾಗ) ಸಹಜವೂ ಸರಿಯೂ ಆಗಿದೆ. ಇದು ಭಾಷಾ ವಿಜ್ಞಾನದ  ಮೊದಲ ಪಾಠವೆಂದರೆ ತಪ್ಪಾಗಲಾರದು. ಗಮನಿಸಿ… ಇಂಗ್ಲೇಂಡಿನವರು ಉಚ್ಚರಿಸುವ ಇಂಗ್ಲೀಷ್, ಭಾರತೀಯರಿಗಿಂತ ಬೇರೆ.ಅಮೇರಿಕನ್ನರದ್ದು ಅದಕ್ಕಿಂತಾ ಬೇರೆ… ಇಂತಹ ಭಿನ್ನ ಶೈಲಿಗಳನ್ನು ಇಂಡಿಯನ್ ಅಕ್ಸೆಂಟ್, ಅಮೇರಿಕನ್ ಅಕ್ಸೆಂಟ್ ಅಂತಾ ಗುರುತಿಸುತ್ತಾರೇ ಹೊರತು ಇದು ತಪ್ಪು, ಇದು ಸರಿ ಅಂತಲ್ಲಾ. ಹಾಗೇ ಕನ್ನಡವನ್ನೂ ಗುರುತಿಸುವುದು ಸರಿಯಲ್ಲವೇ? ಇನ್ನು ಕಲಿಕೆಯ ತೊಡಕುಗಳು ಎನ್ನುವುದನ್ನು ಸ್ವಲ್ಪ ನೋಡೋಣ. “ಹೆಚ್ಚಿನವರು ಶಾಲೆಯಲ್ಲಿ ಕಲಿಯುವಾಗ ಬಳಸುವುದು ಹೀಗೆ… ದೊಡ್ಡು ಪ, ಚಿಕ್ಕು ಪ, ಪಟ್ಟೆ ಶ, ಶಂಕು ಶ,ದೊಡ್ಡು ಬ, ಚಿಕ್ಕು ಬ…. ಹೌದೋ ಅಲ್ಲವೋ? ಇಂತಹ ಗೊಂದಲಗಳಿಗೆ ಅವಕಾಶ ನೀದದಂತೆ ಒಂದೇ ಪ, ಒಂದೇ ಬ, ಒಂದೇ ಶ ಕಲಿಸಿಕೊಡೋಣ. ಹೀಗೆ ಒಮ್ಮೆ ಕಲಿತವರಿಗೆ ಮುಂದೆ ಬ ಮತ್ತು ಭ ನಡುವಿನ ವ್ಯತ್ಯಾಸಕಲಿಯುವುದು ಸುಲಭವಾಗುತ್ತದೆ” ಎನ್ನುವಾಗ ನೀಡಿದ ಚೀನಿ ಭಾಷೆ ಮೊದಲಾದ ಉದಾಹರಣೆಗಳನ್ನು ಮಾತ್ರಾ ಉದ್ಧರಿಸಿ ಡಿ ಎನ್ ಎಸ್ ಅವರ ಮಾತಿನಲ್ಲೇ ವೈರುಧ್ಯವಿದೆ ಎನ್ನುವುದು ಗಿರೀಶರ ಕೃತ್ರಿಮತೆ ಮತ್ತೆ ದುರುದ್ದೇಶವಿದೆ ಎನ್ನುವ ಅಬುಮಾನಕ್ಕೆ ಆಸ್ಪದ ನೀಡಿದೆಯಲ್ಲವೇ?
 
ನಿಜಕ್ಕೂ ಉಚ್ಚರಣೆಯಲ್ಲಿನ ಭಿನ್ನತೆಗಳನ್ನು ಸರಿ, ತಪ್ಪು ಎಂದು ಹೇಳಿ ಹೇಳಿ ನಾವು ಸಾಧಿಸಿರುವುದೇನೆಂದರೆ… ಕನ್ನಡಿಗ ಮಕ್ಕಳಲ್ಲಿ ಕೀಳರಿಮೆ ತುಂಬಿರುವುದು ಮಾತ್ರವೇ…. ರಾಜ್ಯೋತ್ಸವ ಎಂಬ ಕನ್ನಡದ್ದಲ್ಲದಪದವನ್ನು ಉಚ್ಚರಿಸಲಾಗದೇ ಅಪಮಾನಕ್ಕೊಳಗಾಗುವ ಜನಕ್ಕೆ ಈ ನೋವು ತಿಳಿದಿದೆ.  ಇವನಿಗೆ ಕನ್ನಡಾನೇ ನೆಟ್ಟಗೆ ಮಾತಾಡಕ್ಕೆ ಬರಲ್ಲ, ಹಾತ್ಮೀಯ ಅಂತಾನೆ ಆತ್ಮೀಯ ಅನ್ನಲಿಕ್ಕೆ ಎನ್ನುವ ಹೀಯಾಳಿಕೆಯ ಮಾತುಗಳಿಂದ ಹಾಗೆ ಮಾತಾಡುವ ಕನ್ನಡದ ದೊಡ್ಡ ಸಮೂಹದಲ್ಲಿ ಕೀಳರಿಮೆಯನ್ನು ಹುಟ್ಟುಹಾಕುತ್ತಿಲ್ಲವೇ? ಇಂತಹ ಕೀಳರಿಮೆಗೆ ಈಡಾಗುವ ಕನ್ನಡಿಗರಿಂದ ಎಂತಹ ಸಾಧನೆ ತಾನೇ ಸಾಧ್ಯವಾದೀತು? ಒಮ್ಮೆ ಅವರ ಜಾಗದಲ್ಲಿ ನಿಂತುಯೋಚಿಸಬೇಕು ಅಷ್ಟೆ. ಇದು ಬಿಟ್ಟು ಕನ್ನಡದ್ದೇ ಆದ ಪದ ನಾಡಹಬ್ಬ ಬಳಸೋದು ಒಳಿತು ಎನ್ನುವುದು ಹೇಗೆ ನಾಡಿಗರನ್ನು ಹಿಂದಿಕ್ಕುತ್ತದೆ ಹೇಳಿ. ಈ ರೀತಿಯಲ್ಲಿ ಹೇಳುವ ಮನಸ್ಸುಗಳಲ್ಲಿ ಕನ್ನಡ ಬಳಕೆ ಕೀಳು ಎನ್ನುವಚಿಂತನೆಯಿದ್ದಂತೆ ಅನಿಸುವುದಿಲ್ಲವೇ?

ತಮಿಳರು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗದಂತೆ ಮಾಡಿದ ಕಿತಾಪತಿಗೆ ಕಾರಣ ಭಾಷಾ ಸಂಕುಚಿತತೆ ಅನ್ನೋದ್ರ ಬಗ್ಗೆ ಖಚಿತವಾಗಿ ಏನೂ ಹೇಳಲಾರೆ. ಅದು ನಿಮ್ಮ ದೃಷ್ಟಿಕೋನ. ನನ್ನದು… ಅದು ಶಾಸ್ತ್ರೀಯಭಾಷೆಗಾಗಿ ಕೇಂದ್ರ ಕೊಡಮಾಡುವ ಹಣಕಾಸು ಸವಲತ್ತುಗಳನ್ನು ಮತ್ತೊಂದು ನುಡಿಯ ಜೊತೆ ಹಂಚಿಕೊಳ್ಳಬೇಕಾದೀತು ಅನ್ನೋ ಸ್ವಾರ್ಥ ಅನ್ನೋ ನಂಬಿಕೆ.
ಕನ್ನಡ ಉಲಿಯುತ್ತಿರುವ ರೀತಿಯನ್ನು ಬದಲಿಸಬೇಕೆಂದು ತಾವು ಹೇಳುತ್ತಿಲ್ಲ ಎನ್ನುವುದಾದರೆ, ದಯಮಾಡಿ ತಿಳಿಸಿ… ಅಕಾರ, ಹಕಾರ ಬೇಧಗಳನ್ನು… ಮಹಾಪ್ರಾಣ ಬಿಟ್ಟು ಮಾತಾಡುವುದನ್ನು ತಾವು ಕೊರತೆ ಎಂದುಭಾವಿಸುವಿರೋ? ವೈವಿಧ್ಯತೆಯ ಶೈಲಿ ಎಂದು ಭಾವಿಸಿವಿರೋ?
ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಿಸಬೇಕು ಎಂದು ಯಾರು ಹೇಳಿದ್ದಾರೆ? ಕನ್ನಡಿಗರು ಮಹಾಪ್ರಾಣ ಕಲಿಯಬಾರದು ಎಂದು ಭಟ್ಟರು ಹೇಳಿದ್ದಾರೋ? ಮಹಾಪ್ರಾಣಗಳನ್ನು ಪ್ರಾಥಮಿಕ ಹಂತದಲ್ಲಿ ಕಲಿಸುವ ಅಗತ್ಯವಿಲ್ಲ ಅಂದಿದ್ದಾರೆಯೋ? ತಿಳಿಸಿ. ಉಲಿದಂತೆ ಬರೆಯುವುದು ಉತ್ತಮವಾದದ್ದುಎನ್ನುವುದನ್ನು ಒಪ್ಪುತ್ತೀರೋ ಇಲ್ಲವೋ ತಿಳಿಸಿ. ದಿನನಿತ್ಯ ಬಳಸುವ ಪದಗಳನ್ನು ಬದಲಿಸೋ ಬಗ್ಗೆ ನಿಮ್ಮ ಆಕ್ಷೇಪ ಯಾಕೆ? ಭಟ್ಟರು ಮೂಲ ಕನ್ನಡದ್ದೇ ಪದವನ್ನು ಹುಟ್ಟು ಹಾಕಿದ್ದಾರೆಂದೋ ಬಳಕೆಗೆತಂದಿದ್ದಾರೆಂದೋ ಯಾಕೆ ಬೇಸರ? ಉದಾಹರಣೆ ಅನ್ನುವ ಪದಕ್ಕೆ ಅವರು ಎತ್ತುಗೆ ಅನ್ನುವ ಪದ ಬಳಸಿದ್ದಾರೆ… ಜನರು ಎರಡರಲ್ಲಿ ತಮಗೆ ಯಾವುದು ಹೆಚ್ಚು ಅನುಕೂಲವಾಗುತ್ತೋ  ಅದನ್ನು ಬಳಸುತ್ತಾರೆ. ಹೊಸ ಪದಕಟ್ಟಿದರೆ, ಬಳಕೆಗೆ ತಂದರೆ ಯಾಕೆ ಆಕ್ಷೇಪ?

ಕನ್ನಡ ಭಾಷೆಯ ಪದಗಳನ್ನು ಉಲಿಯಲು, ಕಲಿಯಲು ಭಟ್ಟರು ಹೇಳಿರುವ 31 ಅಕ್ಷರಗಳು ಸಾಕು. ಕನ್ನಡದ್ದಲ್ಲದ ಅಕ್ಷರಗಳ ಉಲಿಯುವಿಕೆಗೆ ಬೇಕಾದಷ್ಟು ಅಕ್ಷರಗಳನ್ನು ಕಟ್ಟಿಕೊಳ್ಳಬಹುದು. ಹಳೆಗನ್ನಡದ ರ, ಳ ಗಳು,ಫ ಕೆಳಗಿನ ಎರಡು ಚುಕ್ಕೆಯ ಫೋಟೋ ಅನ್ನುವಾಗಿನ ಫ… ತಮಿಳರು ಬಳಸುವ ರ, ಳ ನಡುವಿನ ಅಕ್ಷರ, ಜೀಬ್ರಾದ ಜೀ… ಹೀಗೆ ಬೇರೆ ಬೇರೆ ಭಾಷೆಗಳ ಉಚ್ಚರಣೆಗೆ ಬೇಕಾದ ಅಕ್ಷರಗಳನ್ನೆಲ್ಲಾ ಕನ್ನಡಕ್ಕೆ ಸೇರಿಸಿ ಕನ್ನಡಶ್ರೀಮಂತಭಾಷೆ ಎನ್ನುವುದು ವಿವೇಕವೇ? ಹಳಗನ್ನಡದ ಸಾಹಿತ್ಯವನ್ನು ಓದಲಿಕ್ಕೆ ಬೇಕಾದ ರ, ಳಗಳನ್ನು ಕನ್ನಡ ವರ್ಣಮಾಲೆಯಲ್ಲಿ ಯಾಕೆ ಸೇರಿಸಬಾರದು? ಇಂಗ್ಲೀಷಿನ zoo, federal ಮೊದಲಾದವುಗಳನ್ನು ಉಲಿಯಲು ಬೇಕಾದ ಅಕ್ಷರಗಳನ್ನು ಕನ್ನಡಕ್ಕೆ ಏಕೆ ಸೇರಿಸಬಾರದು?  

ಇನ್ನು ಬಿಡುವ ವಿಷಯದ ಬಗ್ಗೆ. ಋ ಮತ್ತು ೠ ಗಳನ್ನು ಯಾಕೆ ಬಿಡಬಾರದು ಹೇಳಿ. ಇವನ್ನು ಎಷ್ಟು ಕನ್ನಡದ ಪದಗಳಲ್ಲಿ ಬಳಸುತ್ತೇವೆ ಹೇಳಿ. ರ, ಳ (ಹಳಗನ್ನಡದ್ದು – ನನಗೆ ಬರೆಯಲು ಬರುತ್ತಿಲ್ಲಾ.. ಮನ್ನಿಸಿ) ಬಿಟ್ಟದ್ದು ಓಕೇ ಆದರೆ ಇದ್ಯಾಕೆ ಅಲ್ಲಾ? “ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಾಯಿಸಬೇಕು ಅನ್ನೋದು ಆಂಟಿ ಡೆಮಾಕ್ರಟಿಕ್ ಅಲ್ಲವೇ ಶುಭಶ್ರೀಯವರೆ?” ಅಂದಿದೀರಾ… ಸಾರ್, ಹೌದು.. ಅದೂ ಆಂಟಿಡೆಮಾಕ್ರಟಿಕ್ಕೇ.
ಆದರೆ ಇಲ್ಲಿ ಶಂಕರಭಟ್ಟರು ತಾವು ಹೊಸಗನ್ನಡದಲ್ಲಿ ಬರೆಯುತ್ತೇನೆ ಎಂದಿದ್ದಾರೆಯೇ ಹೊರತು ನೀವು ಬರೆಯಿರಿ ಎಂದಿದ್ದಾರಾ? ಅವರು ಪ್ರತಿಪಾದಿಸುತ್ತಿರುವುದನ್ನು ಮಹಾಪ್ರಾಣ ಸಹಿತಕನ್ನಡದಲ್ಲಿ ಬರೆದರೆ “ಇವರಿಗೇ ಬರೆಯಕ್ಕಾಗಲ್ಲಾ, ಬೇರೆಯವರಿಗೆ  ಹೇಳ್ತಾರೆ” ಅನ್ನೋ ಆಕ್ಷೇಪ ಮಾಡ್ತಾರೆ, ಮಹಾಪ್ರಾಣವಿಲ್ಲದ ಕನ್ನಡದಲ್ಲಿ ಬರೆದರೆ ಅದಕ್ಕೆ ಕತ್ತರಿ ಏಕೆಂಬ ಆಕ್ಷೇಪ ಮಾಡೋದು ಸರಿಯೇ? ಭಟ್ಟರುತಾವು ಹೇಳುತ್ತಿರುವಂತೆ ನಡೆದುಕೊಳ್ಳುತ್ತಿರುವುದಂತೂ ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಏನಂತೀರಾ?

ನಿಜಕ್ಕೂ ಇನ್ನೊಂದು ದೃಷ್ಟಿಕೋನವನ್ನು ಸಹಿಸಲಾಗದೆ ವೈಯುಕ್ತಿಕ ಆಕ್ರಮಣಕ್ಕಿಳಿಯುವ ಮನಸ್ಥಿತಿಯ ಬಗ್ಗೆ  ನನ್ನ ಆತಂಕವಿದೆ. ಭಟ್ಟರು ಹೇಳಿದ್ದನ್ನು ವೈಜ್ಞಾನಿಕ ನೆಲೆಯಲ್ಲಿ ಚರ್ಚಿಸುವುದನ್ನು ಯಾರು ತಾನೇ ಬೇಡವೆಂದಾರು? ಆದರೆ ಇವರಿಗೆ ತಮಿಳು ಮಾದರಿ, ಇವರದ್ದು ದ್ರಾವಿಡ ಚಳವಳಿಯಂತಹದ್ದು, ಇದು ಕನ್ನಡ ರಾಷ್ಟ್ರೀಯತೆ, ಇದು ಜಾತಿ ದ್ವೇಷ… ಇತ್ಯಾದಿ ಆರೋಪಗಳನ್ನು ಕಲ್ಪಿಸಿಕೊಂಡು ದಾಳಿಗಿಳಿದರೆ ಹೇಗೆ? ಸಾರ್!

ನಿಮ್ಮ “ಕನ್ನಡಕ್ಕೇಕೆ ಶಂಕರಬಟ್ಟರ ಕತ್ತರಿ?” ಎನ್ನುವ ಹೊತ್ತಗೆಯಲ್ಲಿಯೂ, ನೀವು quote ಮಾಡುವ ಶ್ರೀ ತಿರುಮಲೇಶ್, ಡಾ. ಗಣೇಶರ ಬರಹಗಳಲ್ಲಿಯೂ ಇಂತಹುದ್ದೆಲ್ಲಾ ಇದೆಯೆಂಬುದನ್ನು ನಾನು ತೋರಿಸಿಕೊಡುತ್ತೇನೆ , ಸ್ವಲ್ಪ ತಾಳಿರಿ. ಕನ್ನಡಿಗರು ಇಂದು ಆಡುತ್ತಿರುವ ಕನ್ನಡಕ್ಕೆ ಭಟ್ಟರು ಸೂಚಿಸಿದ 31 ಅಕ್ಷರಗಳು ಸಾಕು ಅನ್ನಿಸುತ್ತದೆ.ಯಾಕೆಂದರೆ ಈ ಸಂವಾದದ ಕೆಲ ಗೆಳೆಯರ ಕಮೆಂಟುಗಳನ್ನೇ ನೋಡಿ… ಬೇಡದ ಕಡೆ ಮಹಾಪ್ರಾಣ, ಬೇಕಾದ  ಕಡೆ ಬಿಟ್ಟಿರುವುದನ್ನು ಕಾಣಬಹುದು. ಇದ್ಯಾವುವೂ Typing errors ಅಲ್ಲ. ಯಾವುದು ಸರಿ ಯಾವುದು ತಪ್ಪು ತಿಳಿಯದ ಗೊಂದಲದಿಂದಾಗಿರುವುದು ಎನ್ನುವುದರ ಹಿನ್ನೆಲೆಯಲ್ಲಿ ನೋಡಿದಾಗ ಭಟ್ಟರ ನಿಲುವುಗಳು ಸರಿಯೆನ್ನಿಸುತ್ತದೆ.
 
ಶಂಕರಭಟ್ಟರು descriptive linguistics ಮತ್ತು Social linguisticsಗಳನ್ನು ಬೆರೆಸಿದ್ದಾರೆ ಅನ್ನೋದು ಕೂಡಾ ಆರೋಪದ ಧಾಟಿಯಲ್ಲಿದೆ. ಹಾಗೆ ಬೆರೆಸಿದ್ದಲ್ಲಿಅದು ಸರಿಯಾದ ವಿಧಾನವೇ ಆಗಿದೆ.ಮೊದಲಿಗೆ ಭಾಷಾವಿಜ್ಞಾನ ಅನ್ನೋದನ್ನು ಅನುಕೂಲಕ್ಕಾಗಿ ವಿವರಣಾತ್ಮಕ ಮತ್ತು ಸಾಮಾಜಿಕ ಅಂತಾ ಬಿಡಿಸಿಕೊಳ್ಳಲಾಗಿದೆ. ಅದು ಯಾಕೆಂದರೆ ಅಧ್ಯಯನಕ್ಕೆ ಸುಲಭವಾಗಲಿ ಎಂದು ಮಾತ್ರವೇ. ಹಾಗೆಂದ ಮಾತ್ರಕ್ಕೆಸಮಾಜವನ್ನು ವಿವರಣಾತ್ಮಕ ಭಾಷಾ ವಿಜ್ಞಾನದಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ ಅನ್ನುವುದು ನನ್ನ ಅನಿಸಿಕೆ.
 
ಶಂಕರಭಟ್ಟರು ಅಕ್ಷರ ಕಡಿಮೆ ಮಾಡಲು ತಮಿಳು ಮಾದರಿ ಎಂದು ಹೇಳಿದ್ದರೆ ದಯಮಾಡಿ ದಾಖಲೆ ಕೊಡಿ. ತಮಿಳಿನ ಎಲ್ಲಾ ಪದಗಳನ್ನೂ ತಮಿಳರು ಸರಿಯಾಗಿ ಬಳಸುತ್ತಾರೆ. ಅವರಿಗೆ ಹೆಚ್ಚುವರಿ ಅಕ್ಷರ ಬೇಕೆಂದಿದ್ದರೆ ಅವರೇ ಮಾಡಿಕೊಳ್ಳುತ್ತಿದ್ದರು. ಇಷ್ಯಕ್ಕೂ ಶಂಕರಭಟ್ಟರು ಕ, ಗ, ಚ, ಸ ಎಲ್ಲವನ್ನೂ ಇಟ್ಟುಕೊಳ್ಳುವಂತೇ ಹೇಳಿದ್ದಾರೆ. ಸುಮ್ಮನೆ ಹೇಳಿದ್ದನ್ನು ಸರಿಯಾಗಿ ಅರಿಯದೇ, ಆರೋಪ ಮಾಡುವುದು ಯಾರಿಗೂ ತರವಲ್ಲ. ನನ್ನಅರಿವಿನಂತೆ ಅವರ ಯಾವ ಹೊತ್ತಗೆಯಲ್ಲೂ ಇಂತಹ ಹೇಳಿಕೆ ಇಲ್ಲ. ಡಾ. ರಾ ಗಣೇಶ್ ಅವರು ದೇಶಕಾಲದಲ್ಲಿ ಇಂತಹ ಆರೋಪ ಮಾಡಿದ್ದಾರೆ ಎನ್ನುವ ಕಾರಣಕ್ಕೇ ತಮ್ಮ ಈ ಬರಹಕ್ಕೆ ಅಂತಹ ತಲೆಬರಹ ಕೊಡುವುದರಉದ್ದೇಶ ಶಂಕರಭಟ್ಟರ ಅವಹೇಳನ ಮಾಡಬೇಕೆನ್ನುವ ತುಡಿತವಲ್ಲ ಎನ್ನುವುದನ್ನು ನನ್ನಂತವಳಿಗೆ ತೋರಿಸಿಕೊಡಲಾದರೂ ನೀವು ಇದಕ್ಕೆ ಸಾಕ್ಷಿ ಕೊಡಿ. ಇಲ್ಲದಿದ್ದರೆ ನಿಮ್ಮದು ಪೂರ್ವಾಗ್ರಹ ಅನ್ನದೆ ವಿಧಿಯಿಲ್ಲ. ಇದೇದೇಶಕಾಲದಲ್ಲಿ ಶಂಕರಭಟ್ಟರ ಬಗ್ಗೆ ತೀರಾ ಕೀಳಾಗಿ ರಾಜಕೀಯದ ಲಾಭಕ್ಕಾಗಿ ಹೀಗೆ ಮಾಡ್ತಿದ್ದಾರೆ ಎಂದೂ ಬರೆಯಲಾಗಿದೆ ಎನ್ನುವ ಹಿನ್ನೆಲೆಯಲ್ಲಿ ಈ ವಿವರಣೆ ಕೇಳುತ್ತಿದ್ದೇನೆ.

5 ಟಿಪ್ಪಣಿಗಳು Post a comment
 1. ಮಾಯ್ಸ
  ಮಾರ್ಚ್ 31 2011

  ಅಂತೂ ಬಂತು! 🙂

  ಉತ್ತರ
 2. ಮಾಯ್ಸ
  ಏಪ್ರಿಲ್ 2 2011

  ಶುಬಶ್ರೀ,

  ಈ ಬರಹ ತುಂಬಾ ಚನ್ನಾಗಿದೆ..

  ಆದರೆ ನನಗೆ ಕನ್ನಡದಲ್ಲಿ ಇನ್ನೂ ಕಡಮೆ ಅಕ್ಕರಗಳು ಆಗಲಿ ಎಂದು 🙂 ..

  ಕನ್ನಡಕ್ಕೆ ಅಕ್ಕರ ಎಣಿಕೆ ಬಗ್‌ಗೆ

  ಈ ಬಗ್ಗೆ

  ಅ ಆ ಇ ಈ ಉ ಊ ಎ ಏ ಒ ಓ ಅಂ ( ೧೧ )

  ಕ ಗ
  ಚ ಜ
  ಟ ಡ ಣ
  ತ ದ ನ
  ಪ ಬ ಮ
  ಯ ರ ಲ ವ ಶ ಸ ಹ ಳ ( ೨೧ )

  + ೨೧ ಒತ್ತಕ್ಕರಗಳು + ೨೧ X ೧೦ ಕಾಗುಣಿತ

  ಆದುದರಿಂದ ಕನ್ನಡಕ್ಕೆ ಬೇಕಾಗಿರುವ ಒಟ್ಟು ಗುರುತುಗಳು ೨೪೨! ಇದು ಕಲಿಯಲು ತುಂಬಾ ತೊಡಕು… ಮುಂದೆ ಇದರ ಬದಲು ಇಂಗ್ಲೀಶಿಗೆ ಮಕ್ಕಳು ಒಲವು ತೋರಿಸುವರು.

  ಉತ್ತರ
 3. ಮಾಯ್ಸ
  ಏಪ್ರಿಲ್ 2 2011

  ಏನ್ಗುರು ತಾಣದಲ್ಲಿ ರೋಮನ್ ಲಿಪಿಯಲ್ಲೇ ಕನ್ನಡ ಬರೆಯುವ ಒಂದು ಮೊಗಸು ನಡೆದಿತ್ತು.!

  ಉತ್ತರ
 4. subhash rao
  ಏಪ್ರಿಲ್ 9 2011

  d.n,s heluva vishyadalli swalpavdru satya untu… adre ade satya ennuva bhrame beda… matanadva bhashe hage lipigu vytyasa kannadadalli sahaja. adnnu beda endre kannada nasha aste..,. sari… d.n.s vada munduvarike antadre navu kannada lipiyannu entadakke upayogisbeku… e roman lipiyanne upayogisbahudalwa… munde kannadavannu entaKKE MATANADBEKU…HA… HA… E LEKANADALLI LEKHKARU ENTADAKKE avrannu protsahisbeku… idondu kuda anti democratic alwa….?

  ಉತ್ತರ
 5. k.venkatesh
  ಜುಲೈ 26 2011

  ಕೆಲವರ ಕನ್ನಡವನ್ನು ಎಲ್ಲರ ಕನ್ನಡವೆಂದು ನಂಬಿಸಲಾಗಿದೆ. ಬಹುಜನರ ಕನ್ನಡಕ್ಕೆ ಮಾನ್ಯತೆ ಕೊಡಬೇಕು. ಆಡಿದಂತೆ ಬರೆಯಬೇಕು. ಕನ್ನಡ ಬರಹವನ್ನು ಸರಳೀಕರಣಗೊಳಿಸಬೇಕು ಎಂಬ ಭಟ್ಟರು ಹಾಗೂ ಇತರೆ ನುಡಿಜಾಣರ ಮಾತುಗಳು ಕೆಲವು ಸನಾತನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇವರು ಜನವಿರೋಧಿ ನಿಲುವುಗಳನ್ನು ಮಂಡಿಸುತ್ತಿದ್ದಾರೆ. ಆಡುನುಡಿಯಲ್ಲಿ ಈ ಸನಾತನಿಗಳ ಕಟ್ಟುಪಾಡುಗಳು ಚಿಂದಿ ಚಿಂದಿಯಾಗಿ ತುಂಬಾ ದಿನಗಳಾಯ್ತು. ಶುಭಶ್ರೀ ಅವರೇ ನೀವು ಡೀಪಾಗಿ ಅಧ್ಯಯನ ಮಾಡಿದ್ದೀರಿ. ಅದನ್ನು ಸಂಯಮದಿಂದ ಬರೆದಿದ್ದೀರಿ. ಥ್ಯಾಂಕ್ಸ್

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments