ಕನ್ನಡಕ್ಕೆ ಚಪ್ಪಲಿ ತೋರಿಸಿದವರು ಮಣ್ಣು ಮುಕ್ಕಲಿ…!
– ಜಯತೀರ್ಥ ನಾಡಗೌಡ, ವಿಜಾಪುರ
ಕನ್ನಡಕ್ಕೆ ಚಪ್ಪಲಿ ತೋರಿಸಿ ಕರ್ನಾಟಕದಲ್ಲೇ ಮೇಯರ್ ಆಗಲು ಸಾಧ್ಯವೇ! ಹೌದು ಇಂಥ ಘನಘೋರ ಕೃತ್ಯಗಳು ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುತ್ತವೆ. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ, ನಡೆಸಕೂಡದು ಎಂದು ಅಡ್ಡಿಪಡಿಸಿ ಚಪ್ಪಲಿ ತೋರಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನ ನಿರ್ಲಜ್ಜ ಮಹಿಳೆ ಮಂದಾ ಬಾಳೆಕುಂದ್ರಿ ಬೆಳಗಾವಿಯ ಮೇಯರ್ ಆಗಿರುವುದು, ಎಲ್ಲ ಕನ್ನಡಿಗರು ತಮ್ಮ ಎಕ್ಕಡದಿಂದ ತಾವೇ ಹೊಡೆದುಕೊಂಡಂತೆ.
ಎಲ್ಲ ವರದಿ, ತೀರ್ಪುಗಳು ಬಂದು ಬೆಳಗಾವಿ ಕನ್ನಡದ ಅವಿಭಾಜ್ಯ ಅಂಗ ಅಂತ ಸಾಬೀತಾದರೂ, ಹಾಳು .ಈ.ಎಸ್ ನ ಕಾರ್ಯಕರ್ತರು ಪುಂಡಾಟಿಕೆ ಮಾಡುತ್ತಿರುವುದು ನಮ್ಮ ಆಳಿದ/ಆಳುವ ಘನಂದಾರಿ ಪಕ್ಷಗಳ ಕಾಣಿಕೆಯೇ ಸರಿ. ಕ.ರ.ವೇ ಸತತ ಪರಿಶ್ರಮದಿಂದ ಜಾಗ ಖಾಲಿ ಮಾಡಿದ್ದ ಶಿವಸೇನೆ, ಎಂಇಎಸ್ ನವರನ್ನು ಮತ್ತೆ ಬೆಳೆಯಲು ಬಿಟ್ಟು ಇಂಥ ರಾಜದ್ರೋಹಿಗಳೊಂದಿಗೆ ಚುನಾವಣ ಹೊಂದಾಣಿಕೆ ಮಾಡಲು ಕೂಡ ನಮ್ಮ ಕೆಲ ಧುರೀಣರು ಮನಸ್ಸು ಮಾಡಿದ್ದು ಎಲ್ಲರಿಗೂ ಗೊತ್ತಿದ್ದ ಸತ್ಯ.
ಇದು ಸಾಲದೆಂಬಂತೆ, ಎಂ.ಈ.ಎಸ್ ಮತ್ತೊಂದು ಹೀನ ಕೃತ್ಯಕ್ಕೆ ಕೈ ಹಾಕಿದೆ.ಕಳಸಾ ಬಂಡೂರಿ ವಿಷಯದಲ್ಲಿ, ಗೋವೆ ಈಗ ಶಾಂತವಾಗಿದ್ದರೂ, ಎಂಇಎಸ್ ಇವರನ್ನು ಜಗಳಕ್ಕೆ ಬಡಿದೆಬ್ಬಿಸಿವ ಹೊಂಚು ಹಾಕಿದೆ.ವಿಶ್ವ ಕನ್ನಡ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಹಿತಾಸಕ್ತಿ ಬಗ್ಗೆ ಗಂಟೆಗಟ್ಟಲೆ ಪೀಟಿಲು ಕುಯ್ಯೋ ನಮ್ಮ ಅಳುವ ಮತ್ತು ವಿರೋಧ ಪಕ್ಷದ ನಾಯಕರುಗಳು; ಇದನ್ನು ಕಾರ್ಯರೂಪಕ್ಕೆ ತರಲು ಮಾತ್ರ ಹಿಂಜರಿದಿದ್ದಾರೆ.
ದೆಹಲಿಯಲ್ಲಿರುವ ತಮ್ಮ ಹಿರಿಯ ನಾಯಕರುಗಳ ಕಿವಿಗೆ ಓಗೊಟ್ಟು, ವೋಟು ಬ್ಯಾಂಕ್ ರಾಜಕಾರಣ ಮಾತ್ತಿರುವುದೇ ನಮ್ಮ ರಾಜ್ಯದ ಹಿನ್ನೆಡೆಗೆ ಕಾರಣ.ರಾಜ್ಯದ ಎಲ್ಲ ಸಮಸ್ಯೆ ಬಗೆಹರಿಸಲು ಜನತೆ ಕರವೇ ಕಡೆಗೆ ನೋಡಬೇಕಾದ ಪರಿಸ್ಥಿತಿ ಬಂದೊದಗಿದೆ.ಇಂಥ ಕ್ಷುಲ್ಲಕ ರಾಜಕಾರಣ ಮಾಡುವ ಎಂಇಎಸ್ ಅನ್ನು ಭಯೋತ್ಪಾದನ ಸಂಘಟನೆ ಎಂದು ಘೋಷಿಸಿ,ಇದನ್ನು ರಾಜ್ಯದಿಂದ ರದ್ದುಪಡಿಸುವತ್ತ ಸರಕಾರ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.