ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 17, 2011

2

ಸರ್ವಸಂಭವಾಂ

‍ನಿಲುಮೆ ಮೂಲಕ

– ಜಯಂತ್ ರಾಮಚಾರ್

ನಾಹಂ ಕರ್ತಾ ಹರಿಃ ಕರ್ತಾ, ತತ್ ಪೂಜಾ ಕರ್ಮಚಾಖಿಲಂ I
ತಥಾಪಿ ಮತ್ ಕೃತಾ ಪೂಜಾ, ತತ್ ಪ್ರಸಾದೇನನಾನ್ಯಥಾ II

ತಾತ್ಪರ್ಯ: ನಾ ಮಾಡುಗನಲ್ಲ, ಹರಿಯೇ ಮಾಡುಗ, ನಾ ಮಾಡುವ ಎಲ್ಲವೂ ಅವನ ಪೂಜೆಯೇ I
ಇಷ್ಟಾಗಿಯೂ ನಾ ಮಾಡುವ ಪೂಜೆಯೆಲ್ಲವೂ ಕೂಡಾ ಅವನ ಪ್ರಸಾದವಲ್ಲದೆ ಮತ್ತೊಂದಲ್ಲ II

ಈ ಸಾಲುಗಳು “ಸರ್ವಸಂಭಾವಾಂ” ಎಂಬ ಪುಸ್ತಕದಿಂದ ಆರಿಸಿಕೊಂಡದ್ದು. ಈ ಪುಸ್ತಕ ತೆಲುಗಿನಲ್ಲಿದ್ದು ಇದರ ಲೇಖಕರು ಶ್ರೀ ಪತ್ರಿ ವೆಂಕಟ ರಾಮಕೃಷ್ಣ ಪ್ರಸಾದ್ (ಪಿ.ವಿ.ಆರ್.ಕೆ.ಪ್ರಸಾದ್). ಆಂಧ್ರಪ್ರದೇಶದ ಗುಂಟೂರಿನ ಸಂಪ್ರದಾಯಸ್ಥ ಮಧ್ವ ಕುಟುಂಬದಲ್ಲಿ ಜನಿಸಿದ ಇವರು ಐ.ಎ.ಎಸ ಪದವಿಧರರು. ಆಂಧ್ರಪ್ರದೇಶದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿ ೧೯೭೮ ರಲ್ಲಿ ತಿರುಮಲ ತಿರುಪತಿ ದೇವಸ್ಥಾನದ E O (Executive Officer ) ಆಗಿ ಅಧಿಕಾರ ಕೈಗೆತ್ತಿಕೊಂಡರು. ೧೯೭೮ ರಿಂದ ೧೯೮೨ ರವರೆಗೆ ಇವರು ಅಧಿಕಾರದಲ್ಲಿದ್ದಾಗ ನಡೆದ ಅನುಭವಗಳ ಸಂಗ್ರಹವೇ ಈ “ಸರ್ವಸಂಭಾವಾಂ” ಪುಸ್ತಕ.

ಆ ನಾಲ್ಕು ವರ್ಷಗಳ ಅವಧಿಯಲ್ಲಿ ಇವರು ತಿರುಮಲ ತಿರುಪತಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಯಾವುದೇ ಒಳ್ಳೆಯ ಕೆಲಸ ನಡೆಯುವಾಗಲೂ ಏನಾದರೂ ಒಂದು ಅಡ್ಡಿ ಆತಂಕ ಇದ್ದೆ ಇರುತ್ತದೆ. ಆ ಅಡ್ಡಿ ಆತಂಕಗಳು ಹೇಗೆ ಶ್ರೀನಿವಾಸನ ದಯೆಯಿಂದ ದೂರವಾದವು ಎಂಬುದನ್ನು ವಿಸ್ತೃತವಾಗಿ ಉಲ್ಲೇಖಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಮಾಡಿದ ಕೆಲಸಗಳೆಂದರೆ ಮೊದಲಿದ್ದ ಇರುಕುಮುರುಕು ಕ್ಯೂ ಪದ್ದತಿಯನ್ನು ಈಗಿರುವ Q Complex ಆಗಿ ಪರಿವರ್ತಿಸಿರುವುದು. ಸನ್ನಿಧಿ ಬೀದಿಯನ್ನು ವಿಶಾಲವಾಗಿ ಮಾಡಿದ್ದು, ಕಲ್ಯಾಣ ಕಟ್ಟೆ. ಸಾಮೂಹಿಕ ಅನ್ನದಾನ ಶಾಲೆ, ವಸತಿಗೃಹಗಳು, ಪದ್ಮಾವತಿ ವಸತಿಗೃಹ, ಪಾಪನಾಶಿನಿ ಆಣೆಕಟ್ಟು, ಇಷ್ಟೇ ಅಲ್ಲದೆ ದೇವರ ಸೇವೆಗಳಲ್ಲಿ, ದರ್ಶನದಲ್ಲಿ ಹಿಂದೆಂದು ಕಾಣದ ಮಾರ್ಪಾಡುಗಳನ್ನು ಅಭಿವೃದ್ಧಿಗಳನ್ನು ಯಶಸ್ವಿಯಾಗಿ ಮಾಡಿದ್ದು. ಆದರೆ ಇವಿಷ್ಟು ಕೆಲಸಗಳು ಅಂದುಕೊಂಡ ಮಾತ್ರದಲ್ಲಿ ಸಾಧಿಸಲಾಗಲಿಲ್ಲ.

ಪ್ರತಿಯೊಂದು ಕೆಲಸದಲ್ಲೂ ಏನಾದರೂ ಒಂದು ಅಡೆತಡೆ, ಅಡ್ಡಿ, ವಿರೋಧಗಳು ವ್ಯಕ್ತವಾಗಿದ್ದವು. ಪ್ರತಿಯೊಂದು ಅಡ್ಡಿ ಆತಂಕ ಉಂಟಾದಾಗಲೂ ಪ್ರಸಾದ್ ಅವರು ಮೊರೆ ಹೋಗುತ್ತಿದ್ದದ್ದು ಶ್ರೀನಿವಾಸನನ್ನು. ಎಲ್ಲ ಭಾರವನ್ನು ಆತನ ಮೇಲೆ ಹಾಕಿ ಮುಂದುವರಿಯುತ್ತಿದ್ದರು. ಊಹಿಸಿದ ರೀತಿಯಲ್ಲಿ ಬೆಟ್ಟದಂತಿದ್ದ ಸಮಸ್ಯೆಯೂ ಕರಗಿ ನೀರಾಗಿ ಹೋಗುತ್ತಿದ್ದವು. ಎಲ್ಲವೂ ಆ ಶ್ರೀನಿವಾಸನ ಕೃಪಾ ಕಟಾಕ್ಷ. ದೇವಸ್ಥಾನದ ವಿಷಯವಷ್ಟೇ ಅಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲೂ ಆ ಶ್ರೀನಿವಾಸನ ಕೃಪೆಯನ್ನು ಈ ಪುಸ್ತಕದಲ್ಲಿ ವರ್ಣಿಸಿದ್ದಾರೆ ಶ್ರೀ ಪ್ರಸಾದ್ ಅವರು.

ಈ ಪುಸ್ತಕದಲ್ಲಿ ವರ್ಣಿಸಿರುವಂತೆ ತಿರುಮಲ ದೇವಸ್ಥಾನದಲ್ಲಿ ಈಗಿರುವ ಧ್ವಜಸ್ಥಂಬ ಇವರ ಅಧಿಕಾರಾವಧಿಯಲ್ಲಿ ನಿರ್ಮಿತವಾಗಿರುವುದು. ಅಂದರೆ ಇದಕ್ಕೂ ಮುಂಚೆ ಇದ್ದ ಧ್ವಜಸ್ಥಂಬ ಬಹಳ ಹಳೆಯದಾಗಿದ್ದು ಸಂಪೂರ್ಣ ಶಿಥಿಲಗೊಂಡಿತ್ತು. ಮೇಲಿದ್ದ ಬಂಗಾರದ ಕವಚ ಮಾತ್ರ ಹಾಗೆ ಇದ್ದು ಒಳಗಡೆ ಇದ್ದ ಮರ ಸಂಪೂರ್ಣ ನಾಶವಾಗಿತ್ತು. ಪ್ರಸಾದ್ ಅವರು ೧೯೮೧ರಲ್ಲಿ ಇದನ್ನು ಬದಲಿಸಲು ಆಲೋಚಿಸಿ ಅದಕ್ಕೆ ತಕ್ಕದಾದ ಮರ ಹುಡುಕಲು ಶುರುಮಾಡಿದರು. ಆ ಮರ ಕನಿಷ್ಟಪಕ್ಷ ೭೫ ಅಡಿ ಉದ್ದವಿರಬೇಕು, ಅಂಕುಡೊಂಕಿರಬಾರದು, ಸ್ವಲ್ಪವೂ ಹಾಳಾಗಿರಬಾರದು. ಹೀಗೆ ವಿಶಿಷ್ಟ ಮರದ ಹುಡುಕಾಟದಲ್ಲಿದ್ದಾಗ ಬೆಂಗಳೂರಿನ ಉದ್ಯಮಿಯೊಬ್ಬರು ಕರೆ ಮಾಡಿ ಅಂಥಹ ಮರ ಕರ್ನಾಟಕದ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಸಿಗುತ್ತದೆ ಎಂದು ಮಾಹಿತಿ ಕೊಟ್ಟಾಗ ಪ್ರಸಾದ್ ಅವರು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಗುಂಡೂರಾವ್ ಅವರನ್ನು ಸಂಪರ್ಕಿಸಿ, ಗುಂಡೂರಾವ್ ಅವರು ನಿಮಗೆ ಬೇಕಾದ ಮರವನ್ನು ತೆಗೆದುಕೊಳ್ಳಿ. ತಿಮ್ಮಪ್ಪನ ಸೇವೆ ಈ ರೀತಿ ಮಾಡಿದ ಭಾಗ್ಯ ಸಿಗಲಿ ಎಂದು ಉಚಿತವಾಗಿ ಮರವನ್ನು ನೀಡಿದರು. ಅದೇ ಮರ ಇಂದು ತಿರುಮಲ ದೇವಸ್ಥಾನದಲ್ಲಿ ಧ್ವಜಸ್ಥಂಭ ವಾಗಿ ನಿಂತಿರುವುದು. ಆ ಮರವನ್ನು ದಾಂಡೇಲಿಯ ದಟ್ಟ ಕಾಡಿನಿಂದ ಆಚೆ ತರುವುದು, ಅಲ್ಲಿಂದ ತಿರುಪತಿಗೆ ತರುವುದು, ತಿರುಪತಿಯಿಂದ ತಿರುಮಲಕ್ಕೆ ಸಾಗಿಸುವುದು ಇದೆಲ್ಲ ಸಾಮಾನ್ಯಾವಾದ ಕೆಲಸವಾಗಿರಲಿಲ್ಲ. ಆದರೆ ಶ್ರೀನಿವಾಸನ ದಯೆಯಿಂದ ಎಲ್ಲ ಸುಸೂತ್ರವಾಗಿ ನಡೆದು ಹೋಯಿತು.

ಹೀಗೆ ಹಲವಾರು ಅನುಭವಗಳನ್ನು “ಸರ್ವಸಂಭಾವಾಂ” ಪುಸ್ತಕದಲ್ಲಿ ಶ್ರೀ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ. ನಾನು ಇದೆ ಮೊದಲ ಬಾರಿ ತೆಲುಗು ಪುಸ್ತಕವೊಂದನ್ನು ಓದುತ್ತಿರುವುದು. ಇದು ಸುಮಾರು ೩೦೦ ಪುಟಗಳ ಪುಸ್ತಕ. ಮೂರು ದಿನದಿಂದ ಸತತವಾಗಿ ಓದಿ ಮುಗಿಸಿದ್ದೇನೆ. ಅವರ ಅನುಭವಗಳನ್ನು ಓದುತ್ತಿದ್ದಂತೆ ಮೈ ರೋಮಾಂಚನಗೊಂಡು ಮನಸು ಪುಳಕಗೊಳ್ಳುತ್ತಿತ್ತು. ಆ ತಿರುಮಲ ಶ್ರೀನಿವಾಸನ ಲೀಲೆಗಳು ಒಂದೇ ಎರಡೇ. ಎಲ್ಲರಿಗೂ ಆ ಶ್ರೀನಿವಾಸ ಸನ್ಮಂಗಳವನ್ನುಂಟು ಮಾಡಲಿ.

ಹರೇ ಶ್ರೀನಿವಾಸ.

(ಚಿತ್ರ ಕೃಪೆ :subrahmanyamgorthi.blogspot.com)

2 ಟಿಪ್ಪಣಿಗಳು Post a comment
 1. ಆನಂದ್
  ಏಪ್ರಿಲ್ 17 2011

  ಜಯಂತ್,

  ಶ್ಲೋಕದ ಸರಿರೂಪ:
  ನಾಹಂ ಕರ್ತಾ ಹರಿಃ ಕರ್ತಾ, ತತ್ ಪೂಜಾ ಕರ್ಮಚಾಖಿಲಂ I
  ತಥಾಪಿ ಮತ್ ಕೃತಾ ಪೂಜಾ, ತತ್ ಪ್ರಸಾದೇನನಾನ್ಯಥಾ II

  ತಾತ್ಪರ್ಯ: ನಾ ಮಾಡುಗನಲ್ಲ, ಹರಿಯೇ ಮಾಡುಗ, ನಾ ಮಾಡುವ ಎಲ್ಲವೂ ಅವನ ಪೂಜೆಯೇ I
  ಇಷ್ಟಾಗಿಯೂ ನಾ ಮಾಡುವ ಪೂಜೆಯೆಲ್ಲವೂ ಕೂಡಾ ಅವನ ಪ್ರಸಾದವಲ್ಲದೆ ಮತ್ತೊಂದಲ್ಲ II

  ಆನಂದ್

  ಉತ್ತರ
  • jayanth ramachar
   ಏಪ್ರಿಲ್ 17 2011

   ಆನಂದ್ ಮಾಹಿತಿಗೆ ಧನ್ಯವಾದಗಳು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments