ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 18, 2011

5

ವೋಟ್ ಬ್ಯಾಂಕ್ ಭಾಷೆಯಾಗಲಿ ಕನ್ನಡ

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಪತ್ರಿಕೆಗಳಲ್ಲಿ ಆಗೀಗ ‘ಅನ್ನ ಕೊಡುವ ಭಾಷೆಯಾಗಲಿ ಕನ್ನಡ’ ಅನ್ನೋ ಕಳಕಳಿಯ ಲೇಖನಗಳು ಬರುತ್ತಲೇ ಇರುತ್ತವೆ.ಒಂದೆಡೆ ‘ಸರ್ವಂ ಇಂಗ್ಲೀಶ್ ಮಯಂ’ ಮತ್ತೊಂದೆಡೆ ‘ಏಕಮ್ ಭಾರತಂ ಹಿಂದಿಮಯಂ’ (ಈ ಮಂತ್ರ ಸರಿ ಇಲ್ಲ ಅಂತೆಲ್ಲ ಹೇಳ್ಬೆಡಿ 😉 )  ಅನ್ನೋ ಕೇಂದ್ರದ ನೀತಿಯ ನಡುವೆ ಕನ್ನಡ ‘ಅನ್ನ’ ಕೊಡುವ ಭಾಷೆಯಾಗುವುದು ಹೇಗೆ?  ನನಗನ್ನಿಸುವ ಹಾಗೆ, ಈಗಿನ ಪರಿಸ್ಥಿತಿಯಲ್ಲಿ  ಅನ್ನ ಕೊಡುವ ಭಾಷೆಯಾಗುವ ಶಕ್ತಿ ಬರಬೇಕೆಂದರೆ ಮೊದಲು ‘ವೋಟ್ ಕೊಡುವ ಭಾಷೆಯಾಗಬೇಕು ಕನ್ನಡ’.ಎಲ್ಲ ಪಕ್ಷಗಳು ಕುಣಿಯುವುದು ವೋಟಿಗಾಗಿ,ಪುಡಿ ವೋಟಿಗಾಗಿ ಅನ್ನೋ ಕಾಲವಿದು.ವೋಟಿಗಿರುವಷ್ಟು ಶಕ್ತಿ ಸದ್ಯಕ್ಕೆ ಯಾವುದಕ್ಕಿದೆ ನೀವೇ ಹೇಳಿ?

ಕೆಲವರು ನನ್ನ ಮಾತನ್ನು ಒಪ್ಪಬಹುದು ಇನ್ನ ಕೆಲವರು ಇದನ್ನ ನಿರಾಕರಿಸಬಹುದು. ನಿರಾಕರಿಸುವವರು ಭಾರತದ ರಾಜಕೀಯ ಇತಿಹಾಸವನ್ನೊಮ್ಮೆ ನೋಡುತ್ತಾ ಬನ್ನಿ.ಗಾಂಧೀಜಿ ಕಾಲದಿಂದ ಇಂದಿನವರೆಗೂ ನಮ್ಮಲ್ಲಿ ನಡೆಯುತ್ತಿರುವುದೇ ಓಲೈಕೆಯ ವೋಟ್ ಬ್ಯಾಂಕ್ ರಾಜಕಾರಣ ಅಲ್ವಾ?

ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಶುರುವಾದ ಚಳುವಳಿಗೆ ರಾಜಕೀಯ ರೂಪ ನೀಡಿ ಕಾಂಗ್ರೆಸ್ಸ್ ಅನ್ನೋ ರಾಷ್ಟ್ರೀಯ ಪಕ್ಷವನ್ನ ಧೂಳಿಪಟ ಮಾಡಿದ್ದು ತಮಿಳು ವೋಟ್ ಬ್ಯಾಂಕ್ ರಾಜಕಾರಣ ಅಲ್ಲದೆ ಮತ್ತಿನ್ನೇನು? ಉತ್ತರ ಭಾರತದ ರಾಜ್ಯಗಳ ಲಾಭಿಯ ನಡುವೆ ಕಳೆದು ಹೋಗುವ ರೈಲ್ವೆ ಬಜೆಟ್ ಇರಬಹುದು,ಶಾಸ್ತ್ರೀಯ ಭಾಷ ಸ್ಥಾನ ಮಾನವಿರಬಹುದು ಎಲ್ಲವನ್ನು ಸರಾಗವಾಗಿ ತನ್ನ ರಾಜ್ಯಕ್ಕೆ ತಮಿಳುನಾಡು ಸೆಳೆದುಕೊಳ್ಳುತ್ತಿರುವುದು ಹೇಗೆ? ಇತ್ತ ತಮಿಳುನಾಡಿನಲ್ಲಿ ಭಾಷೆಯ ಹೋರಾಟದ ಮೂಲಕ ಪ್ರಾದೇಶಿಕ ಪಕ್ಷಗಳು ನೆಲೆ ಕಂಡುಕೊಂಡರೆ,ಅತ್ತ ಪಕ್ಕದ ಆಂಧ್ರದಲ್ಲಿ ಸಿನೆಮಾಗಳಿಂದಲೇ ಹೆಸರು ಮಾಡಿದವರ ಪಕ್ಷಗಳು ನೆಲೆ ಕಂಡುಕೊಂಡಿವೆ.
ಆದರೆ ಕರ್ನಾಟಕದಲ್ಲಿ ಇದುವರೆಗೂ ಪ್ರಾದೇಶಿಕ ಪಕ್ಷ ಭದ್ರ ನೆಲೆ ಕಂಡುಕೊಂಡಿಲ್ಲ.(ಜೆ.ಡಿ ಎಸ್ ಇದ್ಯಲ್ಲಪ್ಪ ಅನ್ನೋವ್ರು, ಪ್ರಾದೇಶಿಕ ಪಕ್ಷಕ್ಕೆ ‘ರಾಷ್ಟ್ರಾಧ್ಯಕ್ಷರು’ ಯಾಕೆಬೇಕು ಅಂತ ಯೋಚಿಸಿ ನೋಡಿ! ;)),ಮಧ್ಯದಲ್ಲೊಮ್ಮೆ ಕನ್ನಡ ನಾಡು ಪಕ್ಷ ಬಂದು ಹಾಗೆ ಮಾಯವಾಯಿತು.ಈ ನಡುವೆ ಕ.ರ.ವೆ ಅವರೊಂದು ಪಕ್ಷ ಕಟ್ಟ್ತೀವಿ ಅಂತ ಹೇಳಿದ್ರು ಆದ್ರೆ ಇನ್ನೂ ಯಾಕೋ ಮೂಹೂರ್ತ ಕೂಡಿ ಬಂದ ಹಾಗಿಲ್ಲ.ಇನ್ನ ರಾಷ್ಟ್ರೀಯ ಪಕ್ಷಗಳೆಂಬ ಗುಂಗಿನಲ್ಲಿರೋ ಕಾಂಗ್ರೆಸ್ಸ್-ಬಿಜೆಪಿಯವರಿಗೆ ಕನ್ನಡಿಗರ ನಾಡಿ ಮಿಡಿತ ಗ್ರಹಿಸಲು ಸಾಧ್ಯವಾಗುತ್ತಿಲ್ಲ ಅನ್ನಿಸುತ್ತದೆ.
ಕರ್ನಾಟಕದಲ್ಲೇ ಕನ್ನಡ ನರಳುತ್ತಿದೆ.ಬೇರೆ ಇನ್ಯಾವ ಊರು ಬೇಡ.ರಾಜಧಾನಿ ಬೆಂಗಳೂರಲ್ಲೇ ನೋಡಿ. ಜಾಹೀರಾತುಗಳಲ್ಲಿ-ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಯಾಗಬೇಕು  ಅನ್ನೋ ಸರ್ಕಾರದ ನೀತಿಯನ್ನ ನೀವಾಳಿಸಿ ಕಸದ ಬುಟ್ಟಿಗೆ ರಾಜಾರೋಷವಾಗಿ ಎಸೆಯಲಾಗಿದೆ.ಖುದ್ದು ಕನ್ನಡದ ಮಾಧ್ಯಮಗಳು-ಟೀವಿಗಳಲ್ಲಿ ಕನ್ನಡೇತರ ಜಾಹಿರಾತುಗಳು ಬರುತ್ತವೆ! ಕಳೆದ ಕೆಲ ದಿನಗಳಿಂದ ಇಂಗ್ಲೀಶ್ ನಾಮ ಫಲಕಗಳಿಗೆ ಕನ್ನಡ ಹೋರಾಟಗಾರರಿಂದ ಮಸಿ ಬಳಿದು ಪ್ರತಿಭಟನೆ,ಪೋಲೀಸರ ಬಂಧನ,ಅನ್ನುವಂತ ಲೇಖನಗಳನ್ನ ಓದುತ್ತಲೇ ಇದ್ದೇವೆ.ಅಸಲಿಗೆ ೧೯೮೫ ರಲ್ಲೇ ಬಂದ ಕನ್ನಡ ನಾಮಫಲಕ ಅನುಷ್ಟಾನ ಕುರಿತ ಕಾನೂನು ಹೇಳುವುದು ‘ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ ೨೪ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಎಲ್ಲೆಲ್ಲಿ ಇತರ ಭಾಷೆಗಳನ್ನು ಬಳಸಬೇಕಾಗುತ್ತದೆಯೋ ಅಲ್ಲೆಲ್ಲಾ ಮೊದಲು ಕನ್ನಡದಲ್ಲಿ ದೊಡ್ಡದಾಗಿ ಬರೆದು ನಂತರ ಇತರ ಭಾಷೆಗಳಲ್ಲಿ ಅದರಡಿಯಲ್ಲಿ ಬರೆಯತಕ್ಕದ್ದು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕುವುದು.’
ಆದರೆ ಇವತ್ತು ಬೆಂಗಳೂರಿನ ಬಹುತೇಕ ಕಡೆ ಇಂಗ್ಲೀಷಿಗೆ ಮೊದಲ ಆದ್ಯತೆ ಕೊಟ್ಟು ದೊಡ್ಡದಾಗಿ ಬರೆದು,ಕನ್ನಡವನ್ನ ಕಾಣದಿರಲಿ ಅನ್ನೋ ಅಷ್ಟು ಸಣ್ಣದಾಗಿ ಬರೆದು (ಕೆಲ ಜಾಹಿರಾತುಗಳಲ್ಲಿ ಕನ್ನಡ ಕಾಣುವುದೇ ಇಲ್ಲ ಬಿಡಿ) ನಿಯಮ ಉಲ್ಲಂಘಿಸುತ್ತಿರೋ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ,ಅದರ ವಿರುದ್ಧ ಹೋರಾಡುತ್ತಿರುವ ಕನ್ನಡಪರ ಹೋರಾಟಗಾರರ ಮೇಲೆ ಕ್ರಮ ಕೈಗೊಳ್ಳೋದು ಯಾವ ಸೀಮೆಯ ನ್ಯಾಯ?ಕನ್ನಡಿಗರೇ ಯಾಕೆ ಕನ್ನಡ ಅನುಷ್ಟನವಾಗ್ಲಿ ಅಂತ ಕರ್ನಾಟಕದಲ್ಲಿ ಬಡ್ಕೊಬೇಕು? ನಾವ್ಯಾಕ್ರಿ ನಮ್ಮ ನಾಡಿನಲ್ಲೇ ೨ನೆ ದರ್ಜೆಯ ಪ್ರಜೆಗಳಾಗಿ ಬಾಳಬೇಕು?
ಇನ್ನ ಶಾಪಿಂಗ್ ಮಾಲ್ಗಳ ಕಡೆ ನೋಡಿದ್ರೆ, ಅಲ್ಲೋ ಬರಿ ಕಿವಿಗಪ್ಪಳಿಸೋದು ಇಂಗ್ಲೀಶ್-ಹಿಂದಿ ಹಾಡುಗಳು.ಯಾಕ್ರಪ್ಪ ಕನ್ನಡ ಹಾಡು ಹಾಕೋದಿಲ್ಲ ಅಂತ ಕೇಳಿದ್ರೆ ‘ನೀನ್ಯಾರಲೇ ಕೇಳೋಕೆ’ ಅಂತಾರೆ,ನಾವು ತಿರುಗಿ ಬಿದ್ರೆ ‘ನೋಡಪ್ಪ, ಇಲ್ಲಿ ಬರೋ ಜಾಸ್ತಿ ಜನ ಕನ್ನಡೇತರರು,ಈ ಏರಿಯಾದಲ್ಲಿರೋ ಜನರು ಕನ್ನಡೇತರರು,ಅದು ಅಲ್ದೆ ಇಲ್ಲಿ ಬರೋ ಕನ್ನಡ ಜನ ಶೋಕಿ ತೋರಿಸೋದಿಕೆ ಅಂತಾನೆ ಇಂಗ್ಲೀಷು-ಹಿಂದಿ ಮಾತಾಡಿಕೊಂಡು ಸುಮ್ನಿರುವಾಗ ನಿಂದೇನು’ ಅಂತ ಮತ್ತೆ ನಮಗೆ ಕೇಳ್ತಾರೆ!?, ‘ಲೇ ತಮ್ಮ, ಕನ್ನಡ ಕೇಳೋದು ನನ್ನ ಹಕ್ಕು.ಹಾಕ್ತಿಯೋ ಇಲ್ವೋ’ ಅಂತ ಮತ್ತೆ ದಬಾಯಿಸಿದರೆ ‘ಸಂಜೆ ಮತ್ತೆ ವೀಕೆಂಡ್ ಕನ್ನಡ ಹಾಕೋಲ್ಲ, ಜನ ಇಲ್ಲದೆ ಇರೋ ಸಮಯದಲ್ಲಿ ಹಾಕ್ತಿವಿ’ ಅಂದಾಗ, ಹಾಗೆ ಹೇಳಿದವನ ಮುಖಕ್ಕೆ ಬಾರಿಸಬೇಕು ಅನ್ನಿಸೋದಿಲ್ವಾ? ಅನ್ನಿಸಬೇಕು.ಆದ್ರೆ, ನೀವು ಬಾರಿಸ್ಬಾರ್ದು 😉 ಕನ್ನಡಿಗರಾಗಿ ಹುಟ್ಟಿದ ತಪ್ಪಿಗೆ ಅನುಸರಿಸಿಕೊಂಡು ಹೋಗ್ಬೇಕು.
ತೀರ ನೀವು ಎಗರಾಡಿದ್ರೆ ಖುದ್ದು ಕೆಲ ಕನ್ನಡಿಗರೇ (ಹೌದು,ಹೊರಗಿನವರು ಬೇಕಾಗಿಲ್ಲ,ಇವರೇ ಸಾಕು) ನಿಮಗೆ ಪ್ರಾದೇಶಿಕತೆಯ ಪಿಶಾಚಿ ಮೆಟ್ಟಿಕೊಂಡಿದೆ ಅಂದುಬಿಡುತ್ತಾರೆ! ಆ ಮಾಲಿನಲ್ಲಿ ಕೆಲಸ ಮಾಡೋ ಕನ್ನಡದ ಹುಡುಗರಿಗೂ ತಾವೆಲ್ಲೋ ಪರದೇಶದಲ್ಲಿ ಬಂದು ಕೆಲಸಮಾಡುತಿದ್ದಿವೋ ಅನ್ನಿಸುತ್ತದೆ.ಕೇವಲ ಕನ್ನಡವನ್ನೊಂದೆ ಬಲ್ಲ ಗ್ರಾಹಕ ಒಳಗೆ ಹೋದರೆ ಅಲ್ಲಿ ಬರಿ ಇಂಗ್ಲೀಶ್ ಕೇಳಿ ‘ತಾನು ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಖೇದ ವ್ಯಕ್ತಪಡಿಸದೆ ಇರುತ್ತಾನೆಯೇ?’,ಹೀಗೊಂದು infirority ಶುರುವಾಗಿಬಿಟ್ಟರೆ,ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ.
ಇಂದು ಬೆಂಗಳೂರಿನಲ್ಲಿ ತಲೆ ಎತ್ತಿರೋ ಐ.ಟಿ-ಬಿ.ಟಿ ಕಂಪೆನಿಗಳಿಗೆ ಭೂಮಿ ಬಿಟ್ಟು ಕೊಟ್ಟವರ ಮಕ್ಕಳಿಗೆ ಅದೇ ಕಂಪೆನಿಯಲ್ಲಿ ಹೆಚ್ಚೆಂದರೆ ಕೆಳಹಂತದ ಕೆಲಸಗಳೇ ಸಿಕ್ಕಿರುವುದು.ದಿನೇ ದಿನೇ ತಲೆಯೆತ್ತೋ ಮಾಲುಗಳು-ಮಲ್ಟಿಪ್ಲೆಕ್ಸ್ಗಳಲ್ಲೂ ಇದೆ ಕತೆ.ಅವರ ಮೇಲೆ ಬಂದು ಕೂರೋರು ಬೇರೆ ರಾಜ್ಯದವರೇ.ಅಲ್ಲಿಗೆ ಅವ್ರು ಅಲ್ಲಿನ ಇಲ್ಲಿ ಬಂದು ನಮ್ಮವರ ಮೇಲೆ ಸವಾರಿ ಮಾಡ್ತಾರೆ.ನಾನ್ ಹೇಳೋದು ಸುಳ್ಳು ಅನ್ನಿಸಿದ್ರೆ ಇಲ್ಲೆಲ್ಲಾ ಕೆಲಸ ಮಾಡೋ ಹುಡುಗ(ಗಿ)ರನ್ನ ಒಮ್ಮೆ ಕೇಳಿ ನೋಡಿ ಅವ್ರೆ ಹೇಳ್ತಾರೆ ಅವರ ಗೋಳನ್ನ.ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಸಲುವಾಗಿ ಬಂದ ಸರೋಜಿನಿ ಮಹಿಷಿ ವರದಿ ಜಾರಿಯಾಗುವುದು ಇನ್ಯಾವಾಗ ಸ್ವಾಮೀ? ಎಲ್ಲದಕ್ಕೂ ಕನ್ನಡದವರೇ ಆದ ರಾಜಕಾರಣಿಗಳನ್ನ ಯಾಕ್ ಗೋಗರಿಬೇಕು?ಎಲ್ಲ ಒಳ್ಳೆಯ ಕೆಲಸದ ಜಾರಿಗೆ ರಚ್ಚೆ ಹಿಡಿಲೇ ಬೇಕಾ?ಇಂತ ಕೆಲಸಗಳೆಲ್ಲ ಆಗ್ಬೇಕು ಅಂದ್ರೆ ಕನ್ನಡ ವೋಟ್ ಕೊಡುವ ಭಾಷೆಯಾಗಲೇಬೇಕು.
ಇನ್ನ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ ಅನ್ನುವ ಕೂಗಿಗೆ ಬ್ರೇಕ್ ಹಾಕಿ ನಿಲ್ಲಿಸಿರುವ ಶಕ್ತಿಗಳನ್ನ ಬಡಿದಾಕಲು ಸರ್ಕಾರವೆಂಬೋ ಸರ್ಕಾರವಕ್ಕೆ ಸಾಧ್ಯವಿಲ್ವಾ?, ಸಾಧ್ಯವಾಗದೆ ಏನು,ಸಾಧಿಸುವ ಮನಸಿರಬೇಕಷ್ಟೆ.ಸರ್ಕಾರ/ರಾಜಕೀಯ ಪಕ್ಷ/ರಾಜಕಾರಣಿಗಳಿಗೆ ಆ ಮನಸೇಗೆ ಬರುತ್ತೆ? ವೋಟ್ ಬ್ಯಾಂಕ್ನಿಂದ ಅಲ್ವೆ?
ಕನ್ನಡ ವೋಟ್ ಬ್ಯಾಂಕ್ ಅನ್ನುವುದು ಆಗಿಬಿಟ್ಟರೆ, ಕನ್ನಡಿಗರಿಗೆ ನ್ಯಾಯವಾಗಿ ಸಿಗಬೇಕಾದ, ಆದರೆ ಈಗ ಸಿಗದಿರುವ ಸವಲತ್ತುಗಳು ತಾನಾಗೆ ಸಿಕ್ಕುತ್ತವೆ.ಬೇರೆನಕ್ಕು ಬಗ್ಗದ ರಾಜಕಾರಣಿಗಳು-ಪಕ್ಷಗಳು ಗೋಣು ಬಗ್ಗಿಸಿ ನಿಲ್ಲೋದು ವೋಟ್ ಬ್ಯಾಂಕ್ ಅನ್ನೋ ಶಕ್ತಿಯ ಮುಂದೆಯೇ.ಕನ್ನಡಿಗರು ಅಂತದ್ದೊಂದು ವೋಟ್ ಬ್ಯಾಂಕ್ ಸೃಷ್ಟಿ ಮಾಡಿಕೊಂಡಾಗಲಷ್ಟೇ ‘ಕನ್ನಡ ಅನ್ನ ಕೊಡುವ ಭಾಷೆಯಾಗಬಲ್ಲದು’
ಕನ್ನಡ ಕಾಣೆಯಾಗುತ್ತಿದೆ ಅನ್ನುವ ಕೂಗಿನ ನಡುವೆಯೆ ಕನ್ನಡದ ಕೆಲಸಕ್ಕಾಗಿ ಟೊಂಕ ಕಟ್ಟಿ ನಿಂತ ಗೆಳೆಯರು ಇದ್ದಾರೆ,ಆದ್ರೆ ಕೇವಲ ಕನ್ನಡವೊಂದು ಉಳಿದರೆ ಸಾಕೆ?ಕನ್ನಡದ ಮಕ್ಕಳು/ಕರ್ನಾಟಕ ಉಳಿದರಷ್ಟೆ ’ಕನ್ನಡ’ ಅನ್ನುವ ಭಾಷೆ ಉಳಿಯಲು ಸಾಧ್ಯ,ಈ ಬಗ್ಗೆ ಎಲ್ಲರು ಯೋಚಿಸುವಂತಾಗಲಿ.

5 ಟಿಪ್ಪಣಿಗಳು Post a comment
  1. Narendra Kumar.S.S
    ಏಪ್ರಿಲ್ 18 2011

    ಕನ್ನಡದ ಪರವಾಗಿ ಮಾತನಾಡದೇ ಓಟು ಗಳಿಸಲು ಸಾಧ್ಯವಾಗದ ಸ್ಥಿತಿ ಬರಬೇಕು. ಆಗ ಮಾತ್ರ, ಕನ್ನಡಕ್ಕೆ ಉಳಿಗಾಲ.
    ಇದು ಬಹಳ ಉತ್ತಮವಾದ ಚಿಂತನೆ.
    ಆದರೆ, ಕನ್ನಡಿಗರು ಕನ್ನಡದ ಪರವಾಗಿ ಮಾತನಾಡುವ ಪಕ್ಷಗಳಿಗೆ ಮತ ಹಾಕಿಯಾರೇ?
    ಕನ್ನಡಿಗರಿಗೇ ಇಂದು ಕನ್ನಡ ಬೇಕಿಲ್ಲ ಎನ್ನುವ ಸ್ಥಿತಿ ಬಂದುಬಿಟ್ಟಿದೆಯಲ್ಲಾ? ಇದನ್ನು ಸರಿಪಡಿಸುವುದು ಹೇಗೆ?
    ರಾಜಕಾರಣಿಗಳು ಸ್ಥಳೀಯ ಸ್ಥಿತಿಗನುಗುಣವಾಗಿ ಬದಲಾಗುತ್ತಾರೆ.
    ಅವರು “ಕನ್ನಡದ ಪರ”ವಾಗಲು, ಕನ್ನಡದ ವಾತಾವರಣ ಇಲ್ಲಿ ಉಂಟಾಗಬೇಕು. ಅದನ್ನು ಮಾಡುವುದು ಹೇಗೆ?

    ಉತ್ತರ
    • ಏಪ್ರಿಲ್ 18 2011

      ನೀವಂದಿದ್ದೂ ನಿಜ,ಇವೆಲ್ಲ ಚಿಂತಿಸಬೇಕಾದ ವಿಷಯಗಳು ನರೇಂದ್ರ.ಕನ್ನಡಿಗರಿಗೆ ಮೊದಲು ಕನ್ನಡ ಬೇಕು ಅನ್ನುವ ಪ್ರೀತಿ ಮೂಡಬೇಕು.ಹೊಸತನ ಬಯಸುವ ಜನ ಒಂದುಗೂಡಿದರೆ ಬಹುಶಃ ಸಾಧ್ಯವಾಗಬಹುದೇನೋ ಅನ್ನಿಸುತ್ತದೆ.

      ಉತ್ತರ
  2. ಜೂನ್ 25 2011

    ಇದೂ ಒ೦ದು ರೀತಿಯಲ್ಲಿ ಸರಿಯಾದ ಯೋಚನೆಯೇ! ಕನ್ನಡಿಗರಿಗೆ ಮರ್ಯಾದೆ ಕೊಡುವ, ಎಲ್ಲ ಸವಲತ್ತುಗಳನ್ನು ನೀಡುವ ಪಕ್ಷಕ್ಕೆ ಕನ್ನಡಿಗರ ಮತ ಎ೦ದು ಘೋಷಣೆ ಮಾಡಬೇಕು. ಕರ್ನಾಟಕ ರಕ್ಷಣಾ ವೇದಿಕೆ ಮು೦ದಿನ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕಿಳಿಯುವ ನಿರ್ಧಾರ ಕೈಗೊ೦ಡಿದೆ. ಎಲ್ಲ ಪ್ರಜ್ಞಾವ೦ತ ಕನ್ನಡಿಗರೂ ಬೆ೦ಬಲಿಸಬೇಕಿದೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಸುತ್ತಿರುವ, ರಾಜ್ಯದ ಸ೦ಪತ್ತನ್ನು ಲೂಟಿ ಹೊಡೆಯುತ್ತಿರುವ ಕಪಟಿಗಳಿಗೆ ಬುದ್ಧಿ ಕಲಿಸಬೇಕಿದೆ.

    ಉತ್ತರ
  3. ರವಿ ಮೂರ್ನಾಡು
    ಜೂನ್ 26 2011

    ಇದೊಂದು ಚಿಂತನೆ ಒಳ್ಳೆಯದು ಅನ್ನಿಸಿತು.ಕನ್ನಡ ಮಾತಾಡುವವರಿಗೆ ಮಾತ್ರ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅವಕಾಶ ಅಂತ.ದಿ.ಇಂದಿರಾಗಾಂಧಿಯವರು ಚಿಕ್ಕಮಗಳೂರಿನಲ್ಲಿ ಒಮ್ಮೆ ಚುನಾವಣೆಗೆ ನಿಂತಿದ್ದರು.ನಮ್ಮ ವಿಧಾನಸಭೆಯಲ್ಲಿ ನಾವು ಆರಿಸಿ ಕಳುಹಿಸಿದ ಎಷ್ಟು ಮಂದಿ ಖಾಧಿ ಟೋಪಿಧಾರಿಗಳು ಕನ್ನಡ ಮಾತಾಡುತ್ತಾರೆ ಅನ್ನುವ ಅಂಕಿಅಂಶ ತೆಗೆಯುವ ಕಾರ್ಯ ನಡೆಯಬೇಕಾಗಿದೆ.ಮಲಯಾಳಂ, ತಮಿಳು,ಮರಾಠಿ ಹೀಗೆ…. ಸದಸ್ಯರ ಸಂಖ್ಯೆ ಸಭಾ ಮಂಡಲದಲ್ಲಿ ತುಂಬಿದೆ. ಅಂದರೆ, ಈ ಭಾಷೆ ಮಾತಾಡುವವರ ಬೆಂಬಲದಿಂದಲೇ ಅವರು ಅಲ್ಲಿ ಕುಳಿತುಕೊಂಡರು. ಕೇರಳವೂ- ಅಥವಾ ಇನ್ಯಾವುದೋ ರಾಜ್ಯಗಳಿಂದ ಶುಂಠಿ-ರಬ್ಬರ್-ಟೀ ತೋಟಗಳಲ್ಲಿ, ಕಲ್ಲುಕೋರೆಗಳಲ್ಲಿ ಕೆಲಸ ಮಾಡಲು ಬರುವವರು ಹೆಚ್ಚಾಗುತ್ತಿದ್ದಂತೆ ಅವರ ಪ್ರಾಬಲ್ಯ ಕರ್ನಾಟಕದಲ್ಲಿ ಹೆಚ್ಚಾಯಿತು. ಅವರ ಭಾಷಿಗರಿಂದಲೇ ಬೆಂಬಲ ಪಡೆದ ಮಂದಿ ಗ್ರಾಮ ಪಂಚಾಯ್ತಿ-ತಾಲೂಕು ಪಂಚಾಯ್ತಿ- ಜಿಲ್ಲಾ ಪಂಚಾಯ್ತಿಯಲ್ಲಿ ಮಟ್ಟದಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿರುವುದು ನಮ್ಮ ಮುಂದಿದೆ. ರಾಜಕೀಯ ಪಕ್ಷಗಳಿಗೆ “ಬೇಕಾ ಬಿಟ್ಟಿ ಕಪ್ಪು ಹಣ” ಸುರಿಯುವವರು ಇವರೇ.ಗ್ರಾಮ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಪ್ರಮುಖ ಹಣದ ಹೊಳೆ ಹರಿಯುವ ಗುತ್ತಿಗೆ ವಿಭಾಗವನ್ನೂ ಇವರೇ ಪಡೆದುಕೊಂಡಿರುತ್ತಾರೆ (ಉದಾ: ಹೆಂಡ). ಇವರು ಏನು ಕನ್ನಡ ಮಾತಾಡೀಯಾರು? ನಮ್ಮ ಕನ್ನಡವನ್ನು ಹೇಗೇ ಉಳಿಸಿಯಾರು? . ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯುವ ನಾವು ಅವರ ಭಾಷೆಗೆ, ಕನ್ನಡವನ್ನು ಮಾರಾಟ ಮಾಡುತ್ತಿದ್ದೇವೆ.
    ಇವತ್ತು ಕನ್ನಡವನ್ನು ಅಭಿವೃದ್ಧಿಪಡಿಸುವ ಹಲವು ಇಲಾಖೆಗಳಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು .. ಹೀಗೆ ಇನ್ನೂ ಹಲವಾರು. ಇವುಗಳು ಕೇವಲ ಪುಸ್ತಕ ಪ್ರಕಟಣೆಗೆ,ವೇದಿಕೆಯ ಕಾರ್ಯಕ್ರಮ ನಡೆಸಲು ಮಾತ್ರ ಸೀಮೀತವಾಗಿವೆ. ಕಾರ್ಯಕ್ರಮಕ್ಕೆ ತನ್ನ ಕೈಕೆಳಗಿರುವ “ಪಿ.ಏ.” ಯಿಂದ ಮಾಹಿತಿ ಭಾಷಣ ಮಾಡುವ ಮಂತ್ರಿಗಳು,,ಸಭಾ ಮಂಡಲದ ಸದಸ್ಯರು ಅಥವಾ ಸರಕಾರಿ ಅಧಿಕಾರಿಗಳು ವೇದಿಕೆಯಲ್ಲಿರುತ್ತಾರೆ. ಇಂತಹ ಇಲಾಖೆಗಳು-ಸಂಸ್ಥೆಗಳು ಕನ್ನಡ ಪರ ಅಥವಾ ವಿರೋಧ ಬಂದಲ್ಲಿ ಸರಕಾರದ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿವೆ. ತಾಲೂಕಿಗೊಂದು- ಜಿಲ್ಲೆಗೊಂದು- ರಾಜ್ಯಕ್ಕೊಂದು ಕಚೇರಿಗಳನ್ನು ತೆರೆದುಕೊಂಡ ಇವು “ಸರಕಾರದ ಕರ ಪತ್ರ” ಗಳನ್ನು ಹಂಚುವ ಕಾರ್ಯ ಮಾಡುತ್ತಿವೆ.
    ರಾಜ್ಯದ ಐಪಿಎಸ್‍, ಐ.ಎ.ಎಸ್‍. ಅಧಿಕಾರಿಗಳು ಎಷ್ಟು ಜನ ಕನ್ನಡಿಗರು ? ಇದ್ದರೂ ಎಷ್ಟು ಜನರಿಗಿದೆ ಕನ್ನಡದ ಅಭಿಮಾನ? ಕೇರಳದಲ್ಲೋ- ತಮಿಳು ನಾಡಿನಲ್ಲೋ ಇರುವ ಭಾಷೆಯ ಅಭಿಮಾನ ನಮ್ಮ ಕರ್ನಾಟಕದಲ್ಲಿ ಅಂಧವಾಗಿದೆ.ನಮ್ಮ ಅಡಿಪಾಯವೇ ಅಲುಗಾಡುತ್ತಿದೆ.

    ಉತ್ತರ
  4. ಜೂನ್ 9 2014

    ಮಾನ್ಯರೇ, ಕನ್ನಡದ ಬಗ್ಗೆ ಒಳ್ಳೆಯ ಚಿಂತನೆ ನಡೆಸಿದ್ದೀರಿ. ಆದರೂ ನಾವು ಈ ಬಗ್ಗೆ ಯೋಚಿಸಬೇಕಾದುದೆ. ಕನ್ನಡ ರಾಜ್ಯ ಭಾಷೆ ಎಂದಿದ್ದರೂ ಅದಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಒಂದು ರೀತಿಯಲ್ಲಿ ಅಲ್ಲ. ಕನ್ನಡಿಗರು ಎನ್ನುವುದಕ್ಕಿಂತ ನಮ್ಮ ಕನ್ನಡ ಬೆಳೆಯುವುದಿರಲಿ ಉಳಿಯಲು ಕಷ್ಟವಾಗಿದೆ. ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಒಂದು ಮುಖ್ಯ ಕಾರಣ ಎಂದರೆ ಆ ರಾಜ್ಯದಲ್ಲಿ ಮೂಲ ಭಾಷಿಕರೇ ವಾಸವಾಗಿರುತ್ತಾರೆ. ಬೇರೆ ಭಾಷೆಯವರು ವಲಸೆ ಬಂದರೂ ಅವರಿಗೆ ಅಲ್ಲಿಯ ಭಾಷೆಯನ್ನು ಕಲಿಸುತ್ತಾರೆ. ವಲಸೆ ಬಂದವರ ಮಕ್ಕಳಿಗೆ ಶಾಲೆಗೆ ಸೇರಿಸಿದರೆ ಆ ಶಾಲೆಯಲ್ಲಿ ಆ ರಾಜ್ಯದ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇ ಬೇಕಾಗುತ್ತದೆ.ಬೇರೆ ಭಾಷೆ ಮಾತನಾಡಲು ಬಂದರೂ ಅವರು ಮಾತನಾಡಲು ಇಚ್ಚಿಸುವುದಿಲ್ಲ. ಸರ್ಕಾರಿ ಕಛೇರಿಯಲ್ಲಿ ರಾಜ್ಯ ಭಾಷೆಗೆ ಪ್ರಧಾನ್ಯತೆ ಇರುತ್ತದೆ. ನ್ಯಾಯಾಲಯಗಳಲ್ಲಿ ರಾಜ್ಯ ಭಾಷೆಗೆ ಪ್ರಾಧಾನ್ಯತೆ. ಇಂಗ್ಲೀಷ್ ಬಂದರೂ ಬಳಸುವುದಿಲ್ಲ. ಭಾಷೆಗಾಗಿ ಅವರು ಒಗ್ಗಾಟ್ಟಾಗಿ ಯಾವ ಮಟ್ಟದಲ್ಲಿ ಬೇಕಾದರೂ ಹೊರಾಟಕ್ಕೆ ಇಳಿಯುತ್ತಾರೆ. ಕೊನೆಗೆ ಗೆಲ್ಲುತ್ತಾರೆ. ಇದಿಷ್ಟು ಬೇರೆ ರಾಜ್ಯದ ಕಥೆಯಾದರೆ.
    ನಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ನಂತರ ಗಣರಾಜ್ಯವಾಗಿ ಕನ್ನಡ ರಾಜ್ಯ ಭಾಷೆ ಎಂದಿದ್ದರೂ ಹಲವಾರು ಕಟ್ಟು ನಿಟ್ಟಿನ ಸರಕಾರದ ಆದೇಶ ಬಂದಿದ್ದರೂ ಏಕೋ ಏನೋ ಕನ್ನಡ ಅದೋಗತಿಗೆ ಇಳಿಯುತ್ತಿದೆ. ಒಂದು ರೀತಿಯಲ್ಲಿ ಅಲ್ಲ. ಎಲ್ಲ ರೀತಿಯಲ್ಲು ಕನ್ನಡ ಭಾಷೆ ಅನ್ಯ ಭಾಷೆಯಿಂದ ತುಳಿಯಲ್ಪಡುತ್ತಿದೆ. ಸರಕಾರದ ಕಛೇರಿಗಳಲ್ಲಿ ಕನ್ನಡ ಬಳಸುವುದೇ ಕಷ್ಟಕರವಾಗಿದೆ. ಸಂವಿಧಾನ, ನ್ಯಾಯಾಲಯ, ಏನೋ ಒಂದು ಕಾರಣ ಹೇಳಿ ಅನ್ಯ ಭಾಷೆಯನ್ನು ಬಳಸುತ್ತಾರೆ. ಉದಾಹರಣೆಗೆ ನಾವು ಬಳಸುವ ವಾಹನದ ಸಂಖ್ಯೆಯನ್ನು ಕನ್ನಡದಲ್ಲಿ ಬರೆಸುವಂತಿಲ್ಲ. ಬರೆಸಿದರೆ ದಂಡ ಕಟ್ಟಬೇಕಾಗುತ್ತದೆ. ಅದೇ ನಾವು ಜೀವ ವಿಮೆ ಮಾಡಿಸಿದರೆ ಅವರು ನೀಡುವ ಬಂಡ್ ಕನ್ನಡದಲ್ಲಿ ಇರುವುದಿಲ್ಲ. ನಾವು ಕೇಳುವಂತೆಯೂ ಇರುವುದಿಲ್ಲ. ಕನ್ನಡಲ್ಲಿ ಬರೆದ ಚಲನ್ ಮತ್ತು ಕನ್ನಡದಲ್ಲಿ ಸಹಿ ಮಾಡಿದರೆ ಕೆಲವು ಬ್ಯಾಂಕ್ ಗಳಲ್ಲಿ ಮಾನ್ಯತೆ ಇರುವುದಿಲ್ಲ. ಇನ್ನು ನ್ಯಾಯಾಲಯಗಳಲ್ಲಿ ಹೇಳಿಕೆ,ಸಾಕ್ಷಾ ಹೇಳಿಕೆ ಕನ್ನಡದಲ್ಲಿದ್ದರೆ ವಾದ ಇಂಗ್ಲೀಷಿನಲ್ಲಿರುತ್ತದೆ. ತೀರ್ಪು ಬಹುತೇಕ ಇಂಗ್ಲೀಷಿನಲ್ಲಿರುತ್ತದೆ. ಇನ್ನು ರಾಜ್ಯದ ಉಚ್ಚ ನ್ಯಾಯಾಲ್ಯದಲ್ಲಿ ಕನ್ನಡ ನಡೆಯುವುದಿಲ್ಲ. ಇದರಿಂದ ಕನ್ನಡ ನ್ಯಾಯವಾದಿಗಳಿಗೆ ಕಷ್ಠ.
    ಇನ್ನು ಸರಕಾರಿ ಕಛೇರಿಗಳಲ್ಲಿ ಕನ್ನಡ ಶೀಘ್ರಲಿಪಿಗಾರರು ಇರುವುದಿಲ್ಲ. ಇದ್ದರೂ ಅವರನ್ನು ಬಳಸಿಕೊಳದೇ ಇಂಗ್ಲೀಷ್ ಕೆಲಸಕ್ಕೆ ಹಚ್ಚಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಕಂಪ್ಯೂಟರ್ ಬಂದ ನಂತರ ಕನ್ನಡ ಅದೋಗತಿಗೆ ಇಳಿಯಿತು. ನೀವು ತಿಳಿಸಿರುವಂತೆ ಮೇಲಧಿಕಾರಿಗಳು ಹೇಳಿದ ಮೇಲೆ ಕೈಕೆಳಗಿನ ನೌಕರರು ಇಂಗ್ಲೀಷ್ ಬಳಸಲೇ ಬೇಕು. ಇಲ್ಲವಾದರೆ ಅವನಿಗೆ ವರ್ಗಾವಣೆ ಅಥವಾ ವಿಭಾಗ ಬದಲಾವಣೆ, ಮಾಡುವುದು ಸರ್ವೇಸಾಮಾನ್ಯ
    ಇಲ್ಲಿ ಮತ್ತೊಂದು ಯೋಚಿಸಬೇಕಾದ ವಿಷಯ ಎಂದರೆ, ನಮ್ಮಲ್ಲಿ ವಲಸೆ ಬಂದವರು ಆಯಕಟ್ಟಿನ ಜಾಗದಲ್ಲಿ ಸೇರಿದ್ದಾರೆ. ಅವರಿಗೆ ಕನ್ನಡ ಕಲಿಸುವ ಬದಲು ನಮ್ಮ ಕನ್ನಡಿಗರು ಅವರ ಭಾಷೆ ಕಲಿತು. ಕನ್ನಡ ಮರೆಯುತ್ತಿದ್ದಾರೆ. ಇನ್ನು ಕನ್ನಡ ಶಾಲೆಗಳು ಬಾಗಿಲುಮುಚ್ಚುತ್ತಿವೆ. ಆಂಗ್ಲ ಶಾಲೆಗಳು ಹಳ್ಳಿಗಳಲ್ಲಿ ತಲೆ ಎತ್ತಿವೆ. ಖಾಸಗಿ ಶಾಲೆಗಳು ಕನ್ನಡ ಮಾಧ್ಯಮ ಇರುವುದೇ ಇಲ್ಲ. ಇನ್ನು ಕಾಲ ಸೆಂಟರ್ ಗಳು ಬಂದ ಮೇಲೆ ಕನ್ನಡ ಎಲ್ಲಿ ಎನ್ನುವಂತಾಗಿದೆ. ಹಾಗೆಯೇ ಎಂಬಿಎ,ಬಿಬಿಎಂ ಬಂದಾಗಿನಿಂದಲೂ ಅದರಲ್ಲಿ ಕನ್ನಡವೇ ಇಲ್ಲ. ಕನ್ನಡ ಉಳಿಸುವವರು, ಬೆಳಸುವವರು, ಬಳಸುವವರು ಎಲ್ಲಿಯೂ ಆಂಗ್ಲ ಭಾಷೆ ನುಸುಳದಂತೆ ಕಾವಲುಗಾರರು ನಮಗೆ ಬೇಕು ಅವರೆಲ್ಲಿದ್ದಾರೆ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments