ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 19, 2011

6

ಕನ್ನಡ ಆಡಳಿತ ಭಾಷೆ ಯಾಕಾಗಿಲ್ಲ ಗೊತ್ತೆ!?

‍ನಿಲುಮೆ ಮೂಲಕ

– ವಸಂತ್ ಶೆಟ್ಟಿ

ಕನ್ನಡ ನಾಡು ಏಕೀಕರಣಗೊಂಡು ದಶಕಗಳೇ ಕಳೆದರೂ ಕನ್ನಡ ಎಲ್ಲ ಹಂತದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿಲ್ಲ ಅನ್ನುವ ಕೂಗು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದೂ ಕೇಳಿರುತ್ತೇವೆ. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರ ಕನ್ನಡ ಜಗತ್ತು: ಅರ್ಧ ಶತಮಾನ ಅನ್ನುವ ಹೊತ್ತಗೆ ಓದುತ್ತಾ ಇದ್ದೆ. ಅಲ್ಲಿ ಈ ಬಗ್ಗೆ ಅವರು ಕೊಡುವ ವಿವರಣೆ ಒಂದು ರೀತಿಯಲ್ಲಿ ಬೇರೆಯಾಗಿದೆ ಅನ್ನಬಹುದು. ಸರ್ಕಾರದ ಹೆಚ್ಚಿನ ಪ್ರಯತ್ನ (ಬಾಯಿ ಮಾತಲ್ಲಿ ಅಂತ ಬೇಕಾದ್ರೂ ಅಂದುಕೊಳ್ಳೊಣ 🙂 )ದ ನಂತರವೂ ಆಡಳಿತದಲ್ಲಿ ಕನ್ನಡ ಬಳಕೆ ಒಂದು ರೀತಿಯಲ್ಲಿ ಪಿರಮಿಡ್ ನಂತೆ ನಮಗೆ ಗೋಚರಿಸುತ್ತೆ. ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾದರೆ, ಮೇಲೆ ಮೇಲೆ ಹೋದಂತೆ ಅದರ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಿದ್ದರೆ ಆಡಳಿತದಲ್ಲಿ ಕನ್ನಡದ ಬಳಕೆ ಅಂದುಕೊಂಡ ಮಟ್ಟದಲ್ಲಿ ಗೆಲುವು ಪಡೆಯದಿರಲು ಕಾರಣವೇನು ಎಂದು ಅವರು ಕೊಟ್ಟ ವಿವರಣೆಯನ್ನು ಈ ಕೆಳಗೆ ಕೊಟ್ಟಿರುವೆ.

ಈ ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. ಕಾರ್ಯಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತದೆ. ಅಥವಾ ಅನುಷ್ಠಾನದ ಹಂತದಲ್ಲಿ ಹಲವು ಎಡರು ತೊಡರುಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇದನ್ನು ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.

ಏಕೆ ಕನ್ನಡ ಆಡಳಿತ ಭಾಷೆಯಾಗಬೇಕು, ಹಾಗೆ ಆಗದಿದ್ದರೆ ಆಗುವ ತೊಂದರೆಗಳೇನು, ಕನ್ನಡ ಬಳಕೆಯಾಗದಿದ್ದಲ್ಲಿ ಅದರ ಪ್ರಯೋಜನಗಳು ಪೂರ್ವನಿರ್ಧಾರಿತ ಯಾರಿಗಾದರೂ ಇರುವುದು ಸಾಧ್ಯವೆ ಎಂಬ ಪ್ರಶ್ನೆಗಳು ಬಲು ಮುಖ್ಯ. ಜನರ ಭಾಷೆ ಆಡಳಿತ ಭಾಷೆಯಾಗಬೇಕು ಎಂಬ ಗ್ರಹಿತ ನೆಲೆಯಲ್ಲಿ ನಾವು ಮಾತನಾಡುತ್ತಿರುತ್ತೇವೆ. ಆದರೆ ಆಡಳಿತ ಯಂತ್ರದಲ್ಲಿ ಜನಸಾಮಾನ್ಯರ ಪಾತ್ರವೇನು ಎಂಬ ಬಗ್ಗೆ ಯೋಚಿಸುವುದಿಲ್ಲ. ಜನರು ಆಡಳಿತದಲ್ಲಿ ಭಾಗಿಯಾಗಬೇಕಾದರೆ ಅಥವಾ ಆಡಳಿತದ ನಿರ್ಧಾರಗಳಲ್ಲಿ ತಮ್ಮ ಪಾಲು ಇದೆ ಎಂದು ತಿಳಿಯಬೇಕಾದರೆ ಮುಖ್ಯವಾಗಿ ಎರಡು ಸಂಗತಿಗಳು ಅಗತ್ಯ. ಒಂದು: ಆಡಳಿತ ಯಂತ್ರದ ಉತ್ತರದಾಯಿತ್ವ; ಎರಡು: ಆಡಳಿತ ಯಂತ್ರದ ಪಾರದರ್ಶಕತೆ. ಕಳೆದ ಐವತ್ತು ವರ್ಷಗಳ ಚರಿತ್ರೆಯಲ್ಲಿ ಈ ಎರಡು ಸಂಗತಿಗಳು ದೃಢಗೊಳ್ಳುತ್ತಾ ಹೋಗುವ ಬದಲು ಸಡಿಲವಾಗುತ್ತ ಬಂದಿವೆ. ಈ ಕಾರಣದಿಂದ ಜನರು ಆಡಳಿತ ಯಂತ್ರದೊಡನೆ ಹೊಂದಿರುವ ಸಂಬಂಧ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಹಾಗೆ ಉಳಿದಿರುವ ಸಂಬಂಧದಲ್ಲೂ ಅವರ ಅಪೇಕ್ಷೆಗಳು, ದೃಷ್ಟಿಕೋನಗಳು ಮಾನ್ಯವಾಗುವುದಿಲ್ಲ. ಹೀಗಾಗಿ ಜನಭಾಷೆಯೂ ಆಡಳಿತದ ಭಾಷೆಯಾಗಿ ನೆಲೆಗೊಳ್ಳುವ ಅವಕಾಶಗಳು ಕಡಿಮೆಯಾಗುತ್ತಿದೆ.

ಈ ವಿವರಣೆಯನ್ನು ಮತ್ತಷ್ಟು ಪುಷ್ಟಿಗೊಳಿಸುವ ಅಗತ್ಯವಿದೆ. ಆಡಳಿತವು ಒಪ್ಪಿಕೊಂಡ ಕಲ್ಯಾಣ ರಾಜ್ಯದ ಕಲ್ಪನೆಯಲ್ಲಿ ಆಳುವವರು ಕೊಡುವವರಾಗಿದ್ದರೆ ಜನರು ಪಡೆಯುವವರಾಗಿರುತ್ತಾರೆ. ಈ ಅಸಮ ಸಂಬಂಧದಲ್ಲಿ ಕೊಡುವವರ ಕೈ ಮೇಲಾಗುತ್ತದೆ. ಅವರ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಭಾಷಾ ಅಧ್ಯಯನಕಾರರು ಇಂತಹ ಸಂದರ್ಭಗಳನ್ನು ಗಮನಿಸಿದ್ದಾರೆ. ಇಂತಲ್ಲಿ ಯಾವಾಗಲೂ ಮೇಲುಗೈ ಪಡೆದವರ ಭಾಷೆಯನ್ನೇ ಪಡೆಯುವವರು ಒಪ್ಪಿಕೊಳ್ಳಬೇಕಾಗುತ್ತದೆ ಅಥವಾ ಪಡೆಯುವವರಿಗಿಂತ ತಾವು ಭಿನ್ನ ಎಂದು ಸ್ಥಾಪಿಸಲು ಆಳುವವರು ಬೇರೆಯ ಭಾಷೆಯನ್ನೇ ಆಡುತ್ತಿರುತ್ತಾರೆ;ಬಳಸುತ್ತಿರುತ್ತಾರೆ. ಕೊಂಚ ಸಂಕೀರ್ಣವಾದ ಈ ಸಂಬಂಧದಲ್ಲಿ ಕನ್ನಡದ ಸ್ಥಿತಿ ಏನಾಗಿದೆ ಎನ್ನುವದನ್ನು ಪರಿಶೀಲಿಸಬೇಕು. ಮೇಲು ನೋಟಕ್ಕೆ ಜನಪ್ರತಿನಿಧಿಗಳು ಮತ್ತು ನೌಕರಶಾಹಿಯೂ ಜನ ಸಮುದಾಯದಿಂದಲೇ ರೂಪುಗೊಂಡು ಬಂದವರೆಂದು ಅನಿಸುತ್ತದೆ. ಆದರೆ ಅಧಿಕಾರದ ಚೌಕಟ್ಟಿನಲ್ಲಿ ಅವರು ಜನರ ಜೊತೆಗಿನ ಸಂಪರ್ಕದ ಬದಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಲಸಂಪರ್ಕದಲ್ಲಿ ಸೇರುತ್ತಾರೆ. ಇದರಿಂದ ಅಸಮ ನೆಲೆಯ ಸಂಬಂಧ ಏರ್ಪಡುತ್ತದೆ. ತಾವು ಗುರುತಿಸಿಕೊಂಡ ಜಾಲದ ಅಧಿಕೃತ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿ ಆಡಳಿತಗಾರರು ಬಳಸುತ್ತಾರೆ. ನಮ್ಮ ರಾಜಕೀಯ, ಆರ್ಥಿಕ ಪರಿಸ್ಥಿತಿಯ ಈ ವಿನ್ಯಾಸಗಳು ಕನ್ನಡಕ್ಕೆ ಈ ಹೊತ್ತಿಗೆ ಯಾವ ಸ್ಥಾನಮಾನಗಳು ದೊರಕಬೇಕಿತ್ತೋ ಅದು ಲಭ್ಯವಾಗದಂತೆ ಮಾಡಿವೆ.

ಒಕ್ಕೂಟ ವ್ಯವಸ್ಥೆಯ ಪಾತ್ರ

ಕೆ.ವಿ.ನಾರಾಯಣ್ ಅವರ ಈ ಮೇಲಿನ ವಿವರಣೆಯಲ್ಲಿ ಆಡಳಿತ ಯಂತ್ರದೊಡನೆ ಜನರ ಒಡನಾಟ ಬಲು ಕಡಿಮೆ, ಮತ್ತು ಅದರಿಂದ ಜನರ ನುಡಿಗೆ ದೊರೆತ ಸ್ಥಾನವೂ ಅಷ್ಟೇ ಕಡಿಮೆ ಅನ್ನುವುದು ನಿಜಕ್ಕೂ ಸರಿಯಾಗಿದೆ. ಈಗಿರುವ centralised ವ್ಯವಸ್ಥೆಯಿಂದ ಆಚೆ ಬಂದು ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು ಹೆಚ್ಚು ಹೆಚ್ಚು ಜನರ ಬಳಿಗೆ ಕೊಂಡೊಯ್ಯುವುದು, ನಿಜವಾದ ಒಕ್ಕೂಟ ರಾಷ್ಟ್ರವಾಗುವುದು ಇದಕ್ಕೆ ಪರಿಹಾರದ ನಿಟ್ಟಿನಲ್ಲಿ ಅತ್ಯಂತ ಮುಖ್ಯ ಹೆಜ್ಜೆ ಅನ್ನಬಹುದು. ಇನ್ನು ಆಡಳಿತ ವರ್ಗದ ಜನರು ಜನರ ಮಧ್ಯದಿಂದಲೇ ಬಂದಿದ್ದರೂ ಅವರು ಅಧಿಕಾರದ ಚೌಕಟ್ಟಿನಲ್ಲಿ ಬೇರೆ ಸಂಪರ್ಕಜಾಲದಲ್ಲಿ ಸಿಕ್ಕು ತಮ್ಮ ನುಡಿಯನ್ನು ಕಡೆಗಣಿಸುತ್ತಾರೆ ಅನ್ನುವುದು ಕೆವಿಎನ್ ಅವರ ಅನಿಸಿಕೆಯಾದರೂ ನನಗನಿಸೋದು ಇಂತಹುದೇ ವ್ಯವಸ್ಥೆಯಲ್ಲಿರುವ ತಮಿಳುನಾಡು, ಬಂಗಾಲ, ಮಹಾರಾಷ್ಟ್ರ, ಆಂಧ್ರದಂತಹ ರಾಜ್ಯದಲ್ಲಿ ಆಡಳಿತದ ನುಡಿಯಾಗಿ ಆಯಾ ರಾಜ್ಯದ ನುಡಿಗಳು ಪಡೆದಿರುವ ಸ್ಥಾನ ಕನ್ನಡ ಕರ್ನಾಟಕದಲ್ಲಿ ಪಡೆದಿರುವ ಸ್ಥಾನಕ್ಕಿಂತ ಎಷ್ಟೋ ಮೇಲಿದೆ. ಅಲ್ಯಾಕೆ ಹಾಗೆ? ಇಲ್ಯಾಕೆ ಹೀಗೆ? ಅಲ್ಲಿ ನುಡಿ ಅಲ್ಲಿನ ನುಡಿಯಾಡುವ ಜನರನ್ನು ಬೆಸೆದಿರುವುದು, ಆ ನುಡಿಗಳಿಗೆ ರಾಜಕೀಯದ ಬಲವಿರುವುದು, ಆ ನುಡಿ, ಅಲ್ಲಿನ ಜನರ ಹಿತ ಕಾಯುವ ಸಿದ್ಧಾಂತವಿರುವ ಪಕ್ಷಗಳು ರಾಜಕೀಯದ ವ್ಯವಸ್ಥೆಯಲ್ಲಿರುವುದು ಕೂಡ ಇದಕ್ಕೆ ಕಾರಣ ಅನ್ನಿಸುವುದಿಲ್ಲವೇ? ಅಂತಹುದೇ ಒಂದು ವ್ಯವಸ್ಥೆ, ಸಿದ್ಧಾಂತವಿರುವ ಪಕ್ಷ ಕರ್ನಾಟಕದಲ್ಲಿ ಇಲ್ಲದಿರುವುದು ಕೂಡ ಕರ್ನಾಟಕದಲ್ಲಿನ ಕನ್ನಡದ ಈ ಸ್ಥಿತಿಗೆ ಅಷ್ಟೇ ಮಹತ್ವದ ಕಾರಣ ಎಂದು ಅನ್ನಿಸುವುದಿಲ್ಲವೇ?


6 ಟಿಪ್ಪಣಿಗಳು Post a comment
 1. Narendra Kumar.S.S
  ಏಪ್ರಿಲ್ 19 2011

  > ಅಂತಹುದೇ ಒಂದು ವ್ಯವಸ್ಥೆ, ಸಿದ್ಧಾಂತವಿರುವ ಪಕ್ಷ ಕರ್ನಾಟಕದಲ್ಲಿ ಇಲ್ಲದಿರುವುದು ಕೂಡ ಕರ್ನಾಟಕದಲ್ಲಿನ ಕನ್ನಡದ ಈ ಸ್ಥಿತಿಗೆ ಅಷ್ಟೇ ಮಹತ್ವದ ಕಾರಣ
  ಪಕ್ಷಗಳು ರೂಪುಗೊಳ್ಳುವುದೂ ಸಹ ಜನರಿಂದಲೇ.
  ಜನ ತಮ್ಮ ಭಾಷೆಗಂಟಿಕೊಳ್ಳದಿದ್ದರೆ ಪಕ್ಷಗಳೂ ಅಂಟಿಕೊಳ್ಳುವುದಿಲ್ಲ.
  ತಮಿಳುನಾಡಿನ ಉದಾಹರಣೆ ತೆಗೆದುಕೊಂಡಿದ್ದೀರಿ; ಅದನ್ನೇ ಮುಂದುವರೆಸಿ, ಅಲ್ಲಿನ ಜನರನ್ನು ಗಮನಿಸಿ.
  ತಮಿಳರು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ಹೊರಗೂ ಸಹ ತಮ್ಮ ಭಾಷೆಯನ್ನೇ ಬಳಸುತ್ತಾರೆ ಮತ್ತು ತಮ್ಮದೇ ಗುಂಪು ಕಟ್ಟಿಕೊಳ್ಳುತ್ತಾರೆ.
  ತಮಿಳಿನವ ಮೇಲಧಿಕಾರಿಯಾದರೆ, ಆತನ ಕೆಳಗೆ ತಮಿಳರಿಗೇ ಹೆಚ್ಚಿನ ಆದ್ಯತೆ ನೀಡುತ್ತಾನೆ.
  ಅವರ ಈ ಸ್ವಭಾವವೇ ರಾಜಕೀಯದಲ್ಲೂ ಪ್ರತಿಫಲನಗೊಂಡಿದೆ ಅಷ್ಟೇ.
  ಕನ್ನಡಿಗರ ಸ್ವಭಾವವೇನು? ಕನ್ನಡದಲ್ಲಿ ಮಾತನಾಡುವುದು ನಮಗೆಂದೂ ಸ್ವಾಭಿಮಾನ ಎನಿಸಿಲ್ಲ. ಇಂದಿನ ಮಕ್ಕಳಂತೂ (ಅದರಲ್ಲೂ ಬೆಂಗಳೂರು, ಮೈಸೂರಿನಂತಹ ನಗರ ಪ್ರದೇಶದಲ್ಲಿ ಕಲಿಯುತ್ತಿರುವ), ಕನ್ನಡದಲ್ಲಿ ಮಾತನಾಡುವುದು ಅಪಮಾನಕಾರಿ ಎಂದೇ ಭಾವಿಸುತ್ತಾರೆ.
  ಕರ್ನಾಟಕ ಬಿಟ್ಟು ಹೋದ ಹೆಚ್ಚಿನವರು, ತಾವು ಕನ್ನಡಿಗರೆಂದು ತೋರಿಸಿಕೊಳ್ಳಲೂ ಹೋಗುವುದಿಲ್ಲ.
  ಕರ್ನಾಟಕದ ಹೊರಗಿರಲಿ, ಬೆಂಗಳೂರಿನಲ್ಲೇ ಅನೇಕ ಸಲ ಕಛೇರಿಗಳಲ್ಲಿ ಕನ್ನಡಿಗರನ್ನು ಗುರುತಿಸುವುದು ಕಷ್ಟ – ಏಕೆಂದರೆ, ಅವರು ಅಪ್ಪಿತಪ್ಪಿಯೂ ಕನ್ನಡ ಬಳಸುವುದಿಲ್ಲ.
  ಕನ್ನಡಿಗರು ಮೇಲಧಿಕಾರಿಯಾಗಿ ಕನ್ನಡಿಗರಿಗೆ ತಮ್ಮ ಕಂಪನಿಯಲ್ಲಿ ಪ್ರಾಶಸ್ತ್ಯ ನೀಡಿದ ಉದಾಹರಣೆಗಳು ಹೆಚ್ಚಿಲ್ಲ ಎಂದೇ ಹೋಗಬಹುದು.
  ಇಂತಹ ಜನರಿಂದ ರೂಪಿತಗೊಂಡಿರುವ ರಾಜಕೀಯ ಪಕ್ಷಗಳು ಬೇರೆಯಾಗಿರಲು ಹೇಗೆ ತಾನೇ ಸಾಧ್ಯ?

  ಉತ್ತರ
 2. ಏಪ್ರಿಲ್ 19 2011

  ನಿನ್ನೆ ನಾನು ಹೇಳಿದ್ದನ್ನೇ,ನೀವು ಇನ್ನೊಂದು ರೀತಿಯಲ್ಲಿ ಹೇಳಿದ್ದಿರಿ ಅನ್ನಿಸುತ್ತಿದೆ ವಸಂತ್, ಅಂತು ಜೊತೆಗೆ ಜನರಿದ್ದಾರೆ ಅಂತಾಯಿತು 🙂

  ನರೇಂದ್ರ ಹೇಳಿದಂತೆ ನಮ್ಮ ಜನ ಇರೋದೇ ಹೀಗೆ ಜನರು ಬದಲಾಗಬೇಕು ಅನ್ನುವುದು ನಿಜ.ಯಾವುದೇ ಬದಲಾವಣೆಗೆ ಸಮಯ ಹಿಡಿಯುವುದು ಸಹಜ.ಆದರೆ ಬದಲಾವಣೆಯ ಕಾರ್ಯ ಮೊದಲು ಶುರುವಾಗಬೇಕಲ್ವಾ? ಮೊದಲಿಗೆ ಬದಲಾವಣೆ ತರಲು ಬಯಸುವ ಮನಸುಗಳು ಒಂದುಗೂಡಬೇಕು ಅನ್ನುವುದು ನನ್ನ ಅನಿಸಿಕೆ.

  ಉತ್ತರ
 3. Arjun
  ಏಪ್ರಿಲ್ 20 2011

  ನಮಸ್ಕಾರ! ನಮ್ಮ ನಾಡನ್ನು ಬ೦ಗಾಲ, ತಮಿಳು ನಾಡು, ಮಹಾರಾಷ್ಟ್ರಕ್ಕೆ ಯಾಕೆ ಹೋಲಿಸುತ್ತೀರಿ?
  ನಮ್ಮ ದೇಶದ ಹಿನ್ನಡೆಗೆ, ಈ ರಾಜ್ಯಗಳೆ ಹಾಗು ಅಲ್ಲಿನ ರಾಜಕೀಯ ಸ್ಥಿತಿಯೇ ಕಾರಣ. ನಮ್ಮ ದೇಶದ ಏಳಿಗೆಗೆ ನಮ್ಮ ರಾಜ್ಯದ ಕೊಡುಗೆ ಅಪಾರವಾದದ್ದು. ನಮ್ಮ ಜನ ಸರಿಯಾದ ಜನರನ್ನೇ ಆಯ್ಕೆ ಮಾಡುತ್ತಾರೆ. ಇವತ್ತಿನ ಅತ್ಯ೦ತ್ಯ ಭ್ರಷ್ಟ ಕೇ೦ದ್ರ ಸರ್ಕಾರವನ್ನು ನಮ್ಮ ರಾಜ್ಯವೇ ಧಿಕ್ಕರಿಸಿತು. ನಾನು ಭಾಜಪ ಪರ ಮಾತಾಡುತ್ತಿಲ್ಲ. ಆದರೆ ನಮ್ಮ ರಾಜ್ಯದ ಜನರು ಬುದ್ಧಿವ೦ತರು. ಎಲ್ಲ ಕ್ಷೇತ್ರದಲ್ಲೂ ಉನ್ನತಿ ಪಡೆದಿದ್ದಾರೆ. “ದೇಶ ಮೊದಲು, ಆಮೇಲೆ ರಾಜ್ಯ!” ಇದನ್ನು ಪಾಲಿಸಿದ್ದಾರೆ. ನೀವು ಬೆ೦ಗಳೂರನ್ನು, ಬೆಳಗಾವಿಯನ್ನು ನೋಡಿ ಇಡೀ ಕರ್ನಾಟಕವನ್ನು ಅದರ ಮೇಲೆ ವಿಶ್ಲೇಷಿಸುವುದು ಸರಿಯಲ್ಲ. ರಾಜಕಾರಣಿಗಳನ್ನು ದೋಷಿಸುವುದೂ ಉಚಿತವಲ್ಲ. ಇವತ್ತಿಗೂ ನಮ್ಮಲಿ ಪ್ರತಿಷ್ಟಿತ ಕವಿಗಳು, ಲೇಖಕರು ಇದ್ದಾರೆ. ಮೊನ್ನೆ ತಾನೆ ಬೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆಯಿತು. ಕನ್ನಡದ ಅಭಿಮಾನ ನಮ್ಮಲೂ ಚೆನಾಗಿ ಇದೆ. ನಮ್ಮವರು ತೊರಿಸುವುದಿಲ್ಲ ಅಷ್ಟೆ. ಅದಕ್ಕೆ ನಮ್ಮ ಸ೦ಸ್ಕೃತಿಯೂ ಕಾರಣ. ಚೋಳರು ಚಾಲುಕ್ಯರನ್ನು ಸೋಲಿಸಿದಾಗ ಇಡೀ ಕಲ್ಯಾಣವನ್ನೇ ಸುಟ್ಟರು. ಆದರೆ ನಮ್ಮವರು ಅಲ್ಲಿ ಗೆದ್ದಾಗ, ಅಲ್ಲಿನ ದೇವಾಲಯವನ್ನು ಚೆನ್ನಾಗಿ ನೋಡಿಕೊ೦ಡುದ್ಡೇ ಅಲ್ಲ, ಅದನ್ನು ಪೂಜಿಸಿ ಗೌರವಿಸಿದರು. ಹೊಸ ಯುಗದವರಿಗೆ ತಮ್ಮ ತ೦ದೆ ತಾಯಿಯ೦ದಿರು ಸರಿಯಾಗಿ ಮಾರ್ಗದರ್ಶನ ಕೊಡುತ್ತಿಲ್ಲ. ಅದು ಶಾಲೆಯಲ್ಲಿ ಸಿಗುವ ವಿದ್ಯೆಯಲ್ಲ. ಓದಿದವರು ಸರಿಯಾದ ದಾರಿಯಲ್ಲಿ ಸಾಗಬೇಕು. ಆಗಲೇ ನಮ್ಮ ಸ೦ಸ್ಕೃತಿ ಬೆಳೆಯುವುದು.

  http://jarjunmpradhant.wordpress.com

  ಉತ್ತರ
  • ಏಪ್ರಿಲ್ 20 2011

   >> “ದೇಶ ಮೊದಲು, ಆಮೇಲೆ ರಾಜ್ಯ!”

   ಅಂದ್ರೇನ್ ಅರ್ಥ? ರಾಜ್ಯ ಹಾಳಾದ್ರು ಪರ್ವಾಗಿಲ್ಲ, ದೇಶ ಉದ್ಧಾರ ಆಗ್ಲಿ ಅಂತಾನ?, ನಾವು ಸರಿ ಇದ್ದರಷ್ಟೆ ಪಕ್ಕದ ಮನೆಯವನ ತೊಂದರೆ ಪರಿಹರಿಸಲು ಪ್ರಯತ್ನಿಸಬಹುದಲ್ವಾ?

   ಉತ್ತರ
  • Priyank
   ಏಪ್ರಿಲ್ 21 2011

   ಅರ್ಜುನ್ ಅವರೇ,

   ನೀವು ಹಲವು ವಿಷಯಗಳನ್ನು ಹೇಳಹೊರಟು, ಇಲ್ಲಿ ಚರ್ಚೆ ಆಗುತ್ತಿರುವ ವಿಷಯವನ್ನೇ ಬಿಟ್ಟಂತಿದೆ.
   ಕನ್ನಡವು ಆಡಳಿತ ಭಾಷೆಯಾಗಬೇಕು ಎನ್ನುವುದಕ್ಕೂ, ‘ದೇಶ ಮೊದಲು ರಾಜ್ಯ ಮೊದಲು’ ಎಂಬುದಕ್ಕೂ ಏನು ಸಂಬಂಧ?
   ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಸರಿಯಾಗಿ ಆಗುತ್ತಿಲ್ಲ ಎಂಬುದಕ್ಕೂ, ನಮ್ಮ ಜನರು ಎಲ್ಲವನ್ನೂ ಗೌರವಿಸುವರು ಎನ್ನುವುದಕ್ಕೂ ಏನು ಸಂಬಂಧ?
   ಪ್ರತಿಷ್ಟಿತ ಕವಿಗಳು ಇರುವುದಕ್ಕೂ, ಆಡಳಿತದಲ್ಲಿ ಕನ್ನಡದ ಬಳಕೆಯಾಗುವುದಕ್ಕೂ ಹೇಗೆ ನೆಂಟಸ್ತಿಕೆ ಎಂಬುದು ಗೊತ್ತಾಗ್ತಿಲ್ಲ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments