ಇಂದಿನ ಯುವಕರು ಹಾಳಾಗಿದ್ದಾರೆಯೇ?
ಯೊಗೀಶ್ ಕೈರೋಡಿ
‘ಈಗಿನ ಯುವಕರು ಹಾಳಾಗಿದ್ದಾರೆ; ದಾರಿ ತಪ್ಪುತ್ತಿದ್ದಾರೆ’, ಇಂತಹ ಮಾತನ್ನು ಸಲೀಸಾಗಿ ಹೇಳಿ ಬಿಡುತ್ತೇವೆ. ಇದು ಸುಲಭದಲ್ಲಿ ಹೊರಳಿಕೊಳ್ಳುವ ನಾಲಗೆಯ ಮಾತೇ ಹೊರತು ಬುದ್ಧಿಪೂರ್ವಕ ವಿವೇಚನಯುಕ್ತ ಮಾತಲ್ಲ. ಭವಿಷ್ಯದ ಕುರಿತಂತೆ ಗಂಭೀರ ಚಿಂತನೆ ಹೊಂದಿರುವ ಅಧ್ಯಯನ ಶೀಲ ಹಾಗೂ ಮಾನವಪರವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗುವ ಯುವಕರು ನಮ್ಮ ಸುತ್ತ ಸಾಕಷ್ಟು ಇದ್ದಾರೆ. ಪ್ರತೀ ಕಾಲವೂ ಕೂಡ ತನ್ನ ನಂತರದ ತಲೆಮಾರನ್ನು ಕೆಟ್ಟಿದ್ದಾರೆ ಎಂದೇ ಪರಿಗಣಿಸಿ ಸಾಗುತ್ತಾ ಬಂತು. ಆದುದರಿಂದ ಇದೆಲ್ಲ ತಲೆಕೆಡಿಸಬೇಕಾದ ಸಂಗತಿಯಲ್ಲ.
ಒಂದು ವೇಳೆ ಯುವಕರು ದಾರಿತಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಾದರೂ ಅದರ ಹೊಣೆ ಸುತ್ತಲಿನ ಸಮಾಜದ್ದೇ ಹೊರತು ಯುವಕರದ್ದಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿ ಭಾಗಿಯಾಗಿದ್ದರು, ಅವರಿಗೆ ದೇಶ ಪ್ರೇಮವಿತ್ತು ಎಂದರೆ ಈ ರೀತಿಯ ಸದ್ಭಾವನೆಯನ್ನು ಆ ಕಾಲದ ಜವಾಬ್ದಾರಿಯುತ ಜನವರ್ಗ ಅಥವಾ ನಾಯಕರು ರೂಪಿಸಿದ್ದರು. ಇಂದು ರೀತಿಯ ಸದ್ಭಾವ ನೆಲೆಗೊಳ್ಳುವ ವಾತಾವರಣಕ್ಕಿಂತ ಮಾನವ ದ್ವೇಷಿ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿದೆ. ಇದರಿಂದ ಮುಕ್ತಗೊಂಡು ಸ್ವತಂತ್ರ ಹಾಗೂ ಸ್ವಸ್ಥ ಮನಸ್ಸು ಯುವ ಸಮುದಾಯದಲ್ಲಿ ನೆಲೆಗೊಳ್ಳುವ ವಾತಾವರಣ ನಿರ್ಮಾಣ ಒಂದು ಬಗೆಯ ಆಂದೋಲನದಂತೆ ನಡೆಯಬೇಕು. ವರ್ತಮಾನದ ನಮ್ಮ ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಗಮನಿಸುವುದರೊಂದಿಗೆ ಸ್ವಸ್ಥ ಸಮಾಜದ ನಿರ್ಮಿತ ಸಾಧ್ಯ.
ವಿಭಜಕ ಮನಸ್ಸುಗಳ ಸೃಷ್ಟಿ:
ಜಾತಿ, ಮತ, ಪಕ್ಷ ಈ ಮೂರು ಅಂಶಗಳು ಮಾನವ ಮನಸ್ಸನ್ನು ನಿರಂತರ ಒಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಒಂದು ಸಮಾಜದ ಏಳಿಗೆಯಲ್ಲಿ ಜಾತಿ ಅಥವಾ ಮತದ ಸೇವಾಪರ ಚಟುವಟಿಕೆಯ ಮಹತ್ವವನ್ನು ಅಲ್ಲಗೆಳೆಯುವಂತಿಲ್ಲ. ಜನತೆಯ ಕಣ್ಣೀರನ್ನು ಒರೆಸುವ ಕಾರ್ಯಗಳನ್ನು ಸಾಂಘಿಕ ನೆಲೆಯಲ್ಲಿ ಮಾಡಿದೆ ಎಂಬುದು ಸತ್ಯ. ಒಂದು ಸಮುದಾಯದ ಒಳಗಿರುವ ಉಳ್ಳವರು ದುರ್ಬಲರ ಏಳಿಗೆಗೆ ಸ್ಪಂದಿಸಲು ಇದೊಂದು ಉತ್ತಮ ವ್ಯವಸ್ಥೆ. ಆದರೆ ಒಂದು ವ್ಯವಸ್ಥೆಯ ಒಳಗಡೇ ಒಬ್ಬರನ್ನು ಒಬ್ಬರು ಅವಲಂಬಿಸಿ ಸಹಕಾರ ಪ್ರವೃತ್ತಿಯಿಂದ ಬದುಕಬೇಕಾದುದು ಅಷ್ಟೇ ಅಗತ್ಯ. ಸ್ವಸಂಘಟನೆಯ ಬಲವರ್ಧನೆಗಾಗಿ ಅನ್ಯ ಸಮುದಾಯವನ್ನು ಅನಾವಶ್ಯಕ ಶತ್ರುವಾಗಿ ಬಿಂಬಿಸುವ ಸಂದರ್ಭ ಒದಗಿ ಬರಬಹುದು. ಇದು ಪರಸ್ಪರ ಅಪನಂಬಿಕೆಗೆ ಕಾರಣವಾಗಿ ಮಾತು ಮುರಿಯದೆಯೂ ಅಶಾಂತಿಗೆ ಕಾರಣವಾಗಬಹುದು. ಪೂರ್ವಾಗ್ರಹ ಮನೆ ಮಾಡಬಹುದು. ಇನ್ನು ತನ್ನ ಪಕ್ಷಬಲಪಡಿಸಿ ಅಧಿಕಾರಕ್ಕೆ ತರುವ ದಿಸೆಯಿಂದ ಪಕ್ಷದ ಮುಖಂಡರುಗಳು, ಪ್ರಭಾವಿ ಭಾಷಣಕಾರರು ನಿರ್ದಿಷ್ಟ ಪ್ರಕ್ಷದ ಪ್ರೀತಿಯನ್ನು ರೂಪಿಸುತ್ತಾರೆ. ರಾಜಕಾರಣಿಯು ತನ್ನ ಪಕ್ಷ ಅಧಿಕಾರ ಪಡೆಯಲು ಮಾಡುವ ಪರಿಣಾಮಕಾರಿ ತಂತ್ರವಿದು. ಆದರೆ ಪಕ್ಷ ಪ್ರಜೆಯನ್ನು ನೇತಾರರೂ ಮನಸ್ಸಿಗೆ ಹಚ್ಚಿಕೊಂಡಿರುವುದಕ್ಕಿಂತ ಅತಿಯಾಗಿ, ಈ ಪಕ್ಷ ನನ್ನ ರಕ್ತದಲ್ಲೇ ಸೇರಿಕೊಂಡಿದೆ ಎಂದು ಭಾವಿಸುತ್ತಾರೆ. ಇಂತಹ ಪ್ರಜೆ ಕೂಡ ಯುವಕರನ್ನು, ಅದರಲ್ಲೂ ಗ್ರಾಮೀಣ ಭಾಗದ ಅನಕ್ಷರಸ್ಥ ಹಾಗೂ ಅಶಿಕ್ಷಣ ಪಡೆದ ಯುವಕರನ್ನು ಬಾಧಿಸುತ್ತಿದೆ. ಕಾರಣವಿಲ್ಲದೆ ಸುತ್ತಲಿನ ವ್ಯಕ್ತಿಯೊಬ್ಬ ದ್ವೇಷಿಯಾಗುತ್ತಾನೆ. ತನ್ನ ಬದುಕು, ಮನೆಮಂದಿಯ ಹಿತಕ್ಕಿಂತ ಸಂಬಂಧವೇ ಇಲ್ಲದ ಪಕ್ಷ ಸಂಬಂಧ ಬಲವಾಗಿ ಬದುಕು ಬಲಹೀನವಾಗುತ್ತದೆ. ಇತರರ ಗದ್ದುಗೆಗಾಗಿ ಬ್ಯಾನರ್ ಕಟ್ಟುವುದರಲ್ಲೇ ಆಯುಷ್ಯ ಕಳೆಯುತ್ತಾನೆ. ಜಾತಿ ಅಥವಾ ಮತದ ಸಂಘಟನೆಗಳು ನಮ್ಮ ಬದುಕಿಗೆ ದೀಪವಾಗಬೇಕೇ ಹೊರತು ನಮ್ಮ ಮನ ಉರಿಯುವಂತೆ ಮಾಡಬಾರದು. ವ್ಯಕ್ತಿ ದ್ವೀಪವಾಗಿ ಬೆಳೆಯುವ ವಾತಾವರಣ ನಿರ್ಮಿಸಿಕೊಳ್ಳಬಾರದು. ಮನುಷ್ಯ ಸಂಬಂಧವನ್ನು ಉಳಿಸುವ ಸೇತುಗಳಾಗಬೇಕೇ ಹೊರತು ಗೋಡೆಗಳನ್ನು ನಿರ್ಮಿಸಬಾರದು.
ನಮ್ಮ ಬದುಕು ನಮ್ಮದು ಹೋಲಿಕೆ ಸಲ್ಲದು:
ತೃಪ್ತ ಮನೋಸ್ಥಿತಿ ಎಂಬುದು ಬಹಳ ಮುಖ್ಯವಾದುದು. ಆದರೆ ಅತೃಪ್ತ ಮನಸ್ಸುಗಳು ಹೆಚ್ಚಾಗುತ್ತಿದೆಯೋ ಎಂಬ ಗುಮಾನಿ ಕಾಡುತ್ತಿದೆ. ಇದಕ್ಕೆ ಆಧುನಿಕ ವ್ಯವಸ್ಥೆ ಉಂಟುಮಾಡಿದ ನವನವೀನ ಯಂತ್ರೋತ್ಪನ್ನಗಳೇ ಕಾರಣ. ಹೊಸ ಹೊಸತು ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದೆ. ಅದನ್ನು ಕೊಂಡುಕೊಳ್ಳುವಂತೆ ಜಾಹಿರಾತು ಮೊದಲಾದ ತಂತ್ರಗಳು ಪ್ರೇರೇಪಿಸುತ್ತಲೇ ಇರುತ್ತದೆ. ಹೊಸತೊಂದನ್ನು ಕೊಂಡು ದಿನ, ಕ್ಷಣಗಳುರುಳುತ್ತಿದ್ದಂತೆ ಹೊಚ್ಚ ಹೊಸತೊಂದು ಮಾರುಕಟ್ಟೆಗೆ ಬರುತ್ತದೆ. ಆಗ ಹೊಸತು ಹಳತಾಗುತ್ತದೆ. ಭೌತಿಕ ಸರಕಿನ ಸಂಗ್ರಹವೇ ಸುಖ ಎಂಬ ಭಾವ ಮನೆಮಾಡುತ್ತದೆ. ಆದರೆ ಇಲ್ಲಿ ತೃಪ್ತಿ ಅಥವಾ ಸುಖ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ. ನಮ್ಮ ಬದುಕನ್ನು ಇತರರೊಂದಿಗೆ ಹೋಲಿಸುತ್ತೇವೆ. ಆಗ ಹಲವು ಕೊರತೆಗಳು ನಮ್ಮನ್ನು ಕಾಡುತ್ತದೆ. ಆದರೆ ನಾವು ಮೇಲೆ ನೋಡುವುದಕ್ಕಿಂತ ಹೆಚ್ಚಾಗಿ ಕೆಳಗೆ ನೋಡಬೇಕು. ನಮಗಿಂತ ಕಷ್ಟದಲ್ಲಿರುವ ಸಾವಿರ ಸಾವಿರ ಜನರಿದ್ದಾರೆ. ಅವರ ನೋವಿಗೆ ಸ್ಪಂದಿಸಬೇಕು. ನಮಗಿಂತ ಉಳ್ಳವರ ಸ್ಥಿತಿ ನೋಡಿ ನಾನು ನಿಷ್ಪ್ರಯೋಜಕ ಎಂಬ ಅತೃಪ್ತ ಭಾವವಲ್ಲ. ಸಮಾಜಸೇವೆ, ಕಲೆ, ಸಾಹಿತ್ಯ, ಸದಭಿರುಚಿಯ ಹಲವು ಹವ್ಯಾಸಗಳು ಬದುಕನ್ನು ಪ್ರೀತಿಸುವಂತೆ ಮಾಡುತ್ತದೆ. ಹಣದ ಅಗತ್ಯವನ್ನು ನಿತ್ಯ ಜೀವನದಲ್ಲಿ ಅಲ್ಲಗಳೆಯುವಂತಿಲ್ಲ. ಆದರೆ ಹಣವೇ ಎಲ್ಲವೂ ಅಲ್ಲ.
ಸ್ವ ಸುಧಾರಣೆಯೆ ರಾಷ್ತ್ರದ ಔನತ್ಯ:
ರಾಷ್ಟ್ರಕ್ಕಾಗಿ ತ್ಯಾಗ ಮಾಡು, ರಾಷ್ಟ್ರಕ್ಕಾಗಿ ಸೇವೆ ಮಾಡು, ರಾಷ್ಟ್ರ ಉದ್ಧಾರ ಮುಂತಾದ ಮಾತುಗಳನ್ನು ಭಾಷಣಗಳಲ್ಲಿ, ಪತ್ರಿಕಾ ಬರಹಗಳಲ್ಲಿ ಗಮನಿಸುತ್ತೇವೆ. ರಾಷ್ಟ್ರದ ಉದ್ಧಾರವೆಂದರೆ ಅದು ಕೇವಲ ನಕಾಶೆಯಲ್ಲ. ನೆಲ ಜಲ ಸಂಸ್ಕೃತಿಯ ಜೀವರುಗಳ ತಾಣ. ಸ್ವಸುಧಾರಣೆಯೇ ರಾಷ್ಟ್ರದ ಉದ್ಧಾರ. ಆದುದರಿಂದ ಸುಧಾರಣೆಯೆಂಬುದು ಮೊದಲು ನಮ್ಮಿಂದಲೇ ಆರಂಭವಾಗಬೇಕು. ಒಬ್ಬ ಹದಿನೆಂಟರ ವಯಸ್ಸಿನಲ್ಲಿ ಯಾರದೋ ಮಾತು ಕೇಳಿ ರಾಷ್ಟ್ರದ ಉದ್ಧಾರಕ್ಕೆ ಹೊರಟನಂತೆ. ವರ್ಷ ಇಪ್ಪತ್ತೈದು ಆದರೂ ರಾಷ್ಟ್ರದ ಉದ್ಧಾರ ಮಾಡಲು ಅವನಿಂದ ಸಾಧ್ಯವಾಗಿಲ್ಲ. ನಂತರ ನಾನು ರಾಜ್ಯವನ್ನಾದರೂ ಉದ್ಧಾರ ಮಾಡುತ್ತೇನೆಂದು ಸಂಕಲ್ಪಿಸಿ ಕಾರ್ಯೋನ್ಮುಖನಾದ. ವರ್ಷ ಮೂವತ್ತೈದು ಆದರೂ ರಾಜ್ಯವನ್ನು ಸರಿಮಾಡಲು ಸಾಧ್ಯವಾಗಿಲ್ಲ. ಕನಿಷ್ಟ ಜಿಲ್ಲೆಯನ್ನಾದರೂ ಸರಿಮಾಡಲು ಪಣತೊಟ್ಟ. ವರ್ಷ ನಲವತ್ತೈದು ತಲುಪಿದರೂ ಜಿಲ್ಲೆ ಶ್ರೇಯಸ್ಸು ಸಾಧ್ಯವಾಗಿಲ್ಲ. ತದನಂತರ ತಾಲೂಕಿನ ಉದ್ಧಾರ ಸಾಧ್ಯ ಎಂದು ಯೋಚಿಸಿ ಕಾರ್ಯಮಗ್ನನಾದ. ವರ್ಷ ಐವತ್ತೈದು ಆದರೂ ತಾಲೂಕಿನ ಉದ್ಧಾರ ಅವನಿಂದ ಸಾಧ್ಯವಾಗಿಲ್ಲ. ತನ್ನ ಗ್ರಾಮವನ್ನಾದರೂ ಸರಿ ಮಾಡುತ್ತೇನೆಂದು ಹೊರಟ ವಯಸ್ಸು ಅರವತ್ತೈದು ತಲುಪಿದರೂ ಸಮಸ್ತ ಗ್ರಾಮದ ಸುಧಾರಣೆ ಸಾಧ್ಯವಾಗಿಲ್ಲ. ಸೋತು ಇನ್ನು ನಾನಾದರೂ ಸರಿಯಾಗುತ್ತೇನೆ ಎಂದು ಯೋಚಿಸಿದ. ಆದರೆ ಕಾಲಮೀರಿತ್ತು. ಆದುದರಿಂದ ಸುಧಾರಣೆಯೆಂಬುದು ಮೊದಲು ನಮ್ಮಿಂದ ಆರಂಭವಾಗಬೇಕು. ಸುಧಾರಣೆಯೆಂದರೆ ಕೇವಲ ಆರ್ಥಿಕ ಎಂದರ್ಥವಲ್ಲ. ಸ್ವಚ್ಛತೆ, ಸದಾಚಾರ, ಸ್ವಾಭಿಮಾನ, ಗುರುಹಿರಿಯರಿಗೆ ಗೌರವ ಮೊದಲಾದ ಗುಣಲಕ್ಷಣಗಳನ್ನೊಳಗೊಂಡ ವ್ಯಕ್ತಿತ್ವವನ್ನು ರೂಪಿಸಬೇಕು. ಇತರರ ನೋವು ನಲಿವುಗಳಿಗೆ ಸ್ಪಂದಿಸಬೇಕು. ಗ್ರಾಮದ ಶಾಂತಿ, ಸುಭೀಕ್ಷೆ, ಸಾಮರಸ್ಯವೇ ರಾಮರಾಜ್ಯ ಎಂಬುದನ್ನು ಮನನ ಮಾಡಬೇಕು.
ಸಂತೃಪ್ತಿ ಮತ್ತು ಸಾಧನೆಯ ಹೆಜ್ಜೆ:
ಈ ಮೊದಲೇ ತಿಳಿಸಿದಂತೆ ತನ್ನ ಸ್ಥಿತಿಯ ಕುರಿತು ಸಂತೃಪ್ತಿ ಬಹಳ ಮುಖ್ಯ. ಅನೇಕರು ನಮ್ಮ ದೃಷ್ಟಿಯಲ್ಲಿ ಒಳ್ಳೆಯ ಸ್ಥಿತಿಯಲ್ಲಿದ್ದರೂ ‘ಇನ್ನೂ ಸೆಟ್ಲ್ ಆಗಿಲ್ಲ’ ಎಂಬ ಅತೃಪ್ತಿಯನ್ನು ವ್ಯಕ್ತ ಪಡಿಸುತ್ತಾರೆ. ‘ಸೆಟ್ಲ್’ ಎಂಬುದು ಭ್ರಮಾಸ್ಥಿತಿ. ಅದು ನಾವು ಭಾವಿಸಿದಂತಿದೆ. ಅನಕ್ಷರಸ್ಥ ಕೂಲಿಕಾರ್ಮಿಕ ತಾವು ಸೆಟ್ಲ್ ಆಗಿಲ್ಲ ಎಂದು ಭಾವಿಸುವ ಅಥವಾ ಹೇಳುವ ಸಾಧ್ಯತೆ ಕಡಿಮೆ. ನಾವು ಶಿಕ್ಷಣದ ಮಟ್ಟಕ್ಕೂ ಉದ್ಯೋಗಕ್ಕೂ ತಾಳೆ ಹಾಕಿ ನೋಡುತ್ತೇವೆ. ಈ ಪ್ರವೃತ್ತಿ ಸಲ್ಲದು. ನಮ್ಮ ಜೀವನಮಟ್ಟವನ್ನು ಇತರರೊಂದಿಗೆ ಹೋಲಿಸಿ ನಿರ್ಧರಿಸುವುದೂ ಸರಿಯಲ್ಲ. ಆದರೆ ಈಗ ಆಗುತ್ತಿರುವುದು ಅದೆ. ನಾವು ಮೊದಲು ನಾನು ಸೆಟ್ಲ್ ಆಗಿದ್ದೇನೆ ಎಂದು ಒಪ್ಪಿಕೊಳ್ಳಬೇಕು. ಆದರೆ ಸಾಧನೆಯ ಹಾದಿಯಲ್ಲಿ ಎಂದೆಂದೂ ಸೆಟ್ಲ್ ಆಗಬಾರದು. ನಮ್ಮಲ್ಲಿ ಅಪೂರ್ವ ಸಾಧ್ಯತಾ ಗುಣವಿದೆ. ಕಲೆ, ಸಾಹಿತ್ಯ, ಕ್ರೀಡೆ ಮೊದಲಾದ ನಮ್ಮ ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿಕೊಳ್ಳಬೇಕು. ಸಾಧನೆ ಅದು ಆಕಾಶದಂತೆ. ಇಲ್ಲಿಯ ಸಾಧ್ಯತೆಗೆ ಮಿತಿಯಿಲ್ಲ.
ಪ್ರಾಣಿ ಸಮುದಾಯದಲ್ಲೇ ವಿವೇಚನಾ ಗುಣವುಳ್ಳ ಏಕೈಕ ಜೀವವೇ ಮನುಷ್ಯ. ಆಧುನಿಕ ಇಂದಿನ ಸ್ಥಿತಿಯಲ್ಲಿ ನಮ್ಮ ಆಯುಷ್ಯವೂ ಸೀಮಿತ. ಪ್ರ್ರಜಾಪ್ರಭುತ್ವದ ಸುಂದರ ದೇಶವೊಂದರಲ್ಲಿ ನಾವೆಲ್ಲಾ ಜನಿಸಿದ್ದೇವೆ. ನಮ್ಮ ಬದುಕನ್ನು ಪ್ರೀತಿಸಬೇಕು. ಬದುಕಿನ ಹಾದಿಯಲ್ಲಿ ಸಹಜವಾಗಿ ಎದುರಾಗಬಹುದಾದ ಅಡ್ಡಿ ಆತಂಕಗಳಿಗೆ ಎದೆಗುಂದದೆ ಮುನ್ನಡೆಯಬೇಕು. ಇತರರ ತಪ್ಪುಗಳನ್ನೇ ಭೂತಕನ್ನಡಿಯಿಂದ ನೋಡುವ ಮನೋಭಾವ ಸಾಧುವಲ್ಲ. ಸದಾ ಧನಾತ್ಮಕ ಚಿಂತನೆ, ಅವಕಾಶದ ಸದ್ಭಳಕೆ ನಮ್ಮದಾಗಬೇಕು. ಸದ್ಭಾವ ಹಾಗೂ ಸನ್ನಡತೆಯೇ ಧರ್ಮ ಎಂಬ ಸತ್ಯ ನಮ್ಮ ಅರಿವಿಗೆ ಬರಬೇಕು. ಮನೆಮಂದಿಯ ನೋವು-ನಲಿವಿಗಿಂತ ಮತಾಂಧತೆಯೇ ಮುಖ್ಯವಾಗಿ, ಬೆಳಗಬೇಕಾದ ಮನಸ್ಸುಗಳು ಉರಿಯುವ ಉಂಡೆಗಳಾಗದಂತೆ ಜಾಗೃತಿ ರೂಪಿಸಬೇಕು. ಕೆಡುಕಿನ ವಿಚಾರಬೋಧೆಯನ್ನು ತಡೆಯಲಾಗುತ್ತದೆಯೋ ಗೊತ್ತಿಲ್ಲ. ಆದರೆ ಒಳಿತನ್ನು ತಿಳಿಹೇಳುವ ಪ್ರಯತ್ನದಲ್ಲಿ ಹಿಂದುಳಿಯಬಾರದು.