ಕೀಲಿ ಕೈ
ಹರೀಶ(ಮೇಷ್ಟ್ರು)
ಮನ ಹುಡುಕುತಿತ್ತು
ಗೋಳದಂತೆ ಆವರಿಸಿರುವ
ಚೆಂಡಿನಿಂದ ಹೊರಬರಲು ಕೀಲಿಕೈ
ಆ ಚೆಂಡನ್ನು ಒದೆಯಲು, ಅಟ್ಟಾಡಿಸಲು
ಕೊನೆಗೆ ಅದನ್ನು ಮೆಟ್ಟಿ ನಿಲ್ಲಲು
ಅತಿಯಾಸೆ ಅಲ್ಲವೆ ಇದು…. ಮನಸ್ಸಿನ ವಿಕಾರವಲ್ಲವೇ ಇದು..?
ಜಗದ ನಾಟಕರಂಗದಲ್ಲಿ
ಎಲ್ಲರೂ ತಡಕಾಡುವರು
ಬೀಳುವರು, ಏಳುವರು
ಲಿಂಗಭೇದವಿಲ್ಲದೆ ಮನದಲ್ಲಿ ಮಂಡಕ್ಕಿ ತಿನ್ನುವರು,
ತಮ್ಮ ಅಸಾಹಾಯಕತೆಯಿಂದ
ಕೆಲವರು ಕಳೆದುಕೊಂಡಿದ್ದಾರೆ
ಕೆಲವರು ಕಸಿದುಕೊಂಡಿದ್ದಾರೆ
ಅರಿವಿಗೆ ಬಾರದವರೂ ಇದ್ದಾರೆ
ಅನುಕರಿಸುವವರು…ಅನುಸರಿಸುವವರು
ಎಲ್ಲರದೂ ಒಂದೇ ಹುಡುಕಾಟ
ಎಲ್ಲಿ ನಮ್ಮ ಕೀಲಿಕೈ…?
ಗೋಳಾಕಾರದ ಚೆಂಡನಲ್ಲಿ
ಆದಿಯೂ ಅಲ್ಲೆ…ಅಂತ್ಯವೂ ಅಲ್ಲೆ,
ಲಲ್ಲೆಗರೆವ ಮಗುವಿನಂತೆ,
ಬೆದರಿದ ಹುಲ್ಲೆಯಂತೆ,
ಗರ್ಜಿಸುವ ಸಿಂಹದಂತೆ,
ಕೊನೆಗೆ ಏನೂ ಅರಿಯದ ಕುರಿಯ ಹಾಗೆ ಬಲಿಪಶು.
ಕಳೆದು ಹೋದ ಕೀಲಿಕೈ
ಎಲ್ಲಿದೆ…? ಅದು ಹೇಗಿದೆ…?
‘ಕಸ್ತೂರಿಯಂತೆ’…!?