ಕ್ರಾಂತಿಗೆ ಅಕ್ಷರದ ಹಂಗೇಕೆ?
– ಚಿತ್ರ ಸಂತೋಷ್
ಮಧ್ಯಪ್ರದೇಶದ ತಲನ್‌ಪುರ ಗ್ರಾಮದಲ್ಲಿ ಓದು ಬರಹ ತಿಳಿಯದ ಬುಡಕಟ್ಟು ಮಹಿಳೆಯರೇ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ. ನಿತ್ಯ ಕುಡಿದು, ಸಂಸಾರದ ಒಂದಿಷ್ಟು ಚಿಂತೆಯಿಲ್ಲದ ಪುರುಷರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಇಡೀ ಹಳ್ಳಿಯ ಮಹಿಳೆಯರು ಒಂದಾಗಿ ಸಾರಾಯಿ ನಿಷೇಧ ಮಾಡಿದ್ದಾರೆ.
ಆ ಹಳ್ಳಿಯೇ ಹಾಗೆಯೇ. ಬುಡಕಟ್ಟು ಬದುಕುಗಳ ಸಂಗಮ. ನೂರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳನ್ನು ಹೊಂದಿರುವ ಆ ಹಳ್ಳಿಯಲ್ಲಿ ಹೊತ್ತಿನ ಊಟಕ್ಕೂ ಕಷ್ಟ. ಪತಿ-ಪತ್ನಿಯರು ಎಲ್ಲಾರೂ ಕೂಲಿಗಾಗಿ ಅರಸುವವರು. ವಿದ್ಯೆ, ಶಿಕ್ಷಣ ಎಂಬುವುದು ಅವರ ಪಾಲಿಗೆ ಮರೀಚಿಕೆ. ಸಾಂಪ್ರದಾಯಿಕ ಬದುಕಿನ ಚೌಕಟ್ಟಿನಲ್ಲಿಯೇ ಇಂದಿಗೂ ಬದುಕು ಸವೆಸುವ ಅಲ್ಲಿನ ಕುಟುಂಬಗಳಲ್ಲಿ ಆಧುನಿಕತೆಯ ಥಳುಕಿಲ್ಲ. ಸಿನಿಮಾ, ಫ್ಯಾಷನ್ ಯಾವುದೂ ಗೊತ್ತಿಲ್ಲ. ದುಡಿಯುವುದು, ದಿನದ ಮೂರು ಹೊತ್ತಿನ ಅನ್ನ ತುಂಬಿಸಿಕೊಳ್ಳುವುದಷ್ಟೇ ಅವರಿಗೆ ಗೊತ್ತು.
ಅದು ಮಧ್ಯಪ್ರದೇಶದ ತಲನ್‌ಪುರ್ ಎಂಬ ಹಳ್ಳಿ. ಇಲ್ಲಿನ ಜನಸಂಖ್ಯೆ ಸುಮಾರು ೩೦೦೦. ಇಂದೋರ್‌ನಿಂದ ಇಲ್ಲಿಗೆ ಸುಮಾರು ೧೮೦ ಕಿ.ಮೀ. ದೂರವಿದೆ.
ಕ್ರಾಂತಿಗೆ ಮುನ್ನುಡಿ
ಇಂಥ ಹಳ್ಳಿಯಲ್ಲಿ ಇದೀಗ ಒಂದು ಮಹಾಕ್ರಾಂತಿಯೇ ಆರಂಭವಾಗಿದೆ. ಅದು ಸಾರಾಯಿ ನಿಷೇಧ. ಇದ್ರಲ್ಲೇನು ವಿಶೇಷ ಅಂತೀರಾ? ಸಾರಾಯಿ ನಿಷೇಧ ಆಗುವುದನೇನು ಮಹಾ? ಅಲ್ಲಿನ ಸರ್ಕಾರವೇ ನಿಷೇಧ ಮಾಡಿದೆ ಅಂದುಕೊಂಡರೆ ನಿಮ್ಮ ಊಹೆ ತಪ್ಪಾದೀತು. ಅಲ್ಲಿನ ಅವಿದ್ಯಾವಂತ ಬುಡಕಟ್ಟು ಮಹಿಳೆಯರೇ ಸಾರಾಯಿ ನಿಷೇಧವನ್ನು ಘೋಷಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ.
ಬಡಕುಟುಂಬಗಳಲ್ಲಿ ಗಂಡಸರು ತಾವು ದುಡಿದ ದುಡ್ಡನ್ನೆಲ್ಲಾ ಕುಡಿಯಲು ಖರ್ಚು ಮಾಡುವುದು ವಿಶೇಷವೇನಲ್ಲ. ಇಲ್ಲಿಯೂ ನಡೆದಿದ್ದು ಅದೇ. ಪತಿ ಮಹಾಶಯರು ದಿನಾ ಸಂಜೆಯಾಗುತ್ತಿದ್ದಂತೆ ಕುಡಿದು ಮನೆ ಸೇರುತ್ತಿದ್ದರು. ಮಕ್ಕಳು, ಪತ್ನಿಯರು ಯಾರೆನ್ನದೆ ಎಲ್ಲರಿಗೂ ಪತಿರಾಯನ ಬೆತ್ತದ ರುಚಿ. ಇವರನ್ನು ಪ್ರಶ್ನೆ ಮಾಡುವಂತಿರಲಿಲ್ಲ. ಆದರೆ, ಪತ್ನಿಯರು ದುಡಿದರೆ ಮಾತ್ರ ಒಪ್ಪೊತ್ತಿನ ತುತ್ತು. ಇದಕ್ಕಾಗಿ ಅಲ್ಲಿನ ಎಲ್ಲಾ ಬುಡಕಟ್ಟು ಮಹಿಳೆಯರು ಒಂದಾದರು. ಆ ಹಳ್ಳಿಯ ಮಹಿಳಾ ಸಮಿತಿ ಇವರ ಹೋರಾಟಕ್ಕೆ ವೇದಿಕೆ ಒದಗಿಸಿತ್ತು. ಹಳ್ಳಿಯ ಎಲ್ಲಾ ಮಹಿಳೆಯರು ಒಂದಾಗಿ ಸಾರಾಯಿ ನಿಷೇಧ ಘೋಷಿಸಿಯೇ ಬಿಟ್ಟಿದ್ದಾರೆ. ಒಂದು ವೇಳೆ ಇನ್ನು ಮುಂದೆ ಸಾರಾಯಿ ಮಾರಾಟ ಮಾಡಿದ್ದು ತಿಳಿದರೆ ಅವರಿಗೆ ೨,೧೦೦ ದಂಡ. ಒಂದು ವೇಳೆ ಯಾವುದೇ ಪುರುಷ ಅದು ಗಂಡ, ಸಹೋದರ ಇನ್ನ್ಯಾರೇ ಆಗಿರಬಹುದು ಅವರಿಗೆ ೧,೧೦೦ ದಂಡ ಕಡ್ಡಾಯ. ಒಂದು ವೇಳೆ ಅನಕೃತವಾಗಿ ಸಾರಾಯಿ ಮಾರಾಟ ಅಥವಾ ಯಾರಿಗೂ ತಿಳಿಯದಂತೆ ಪುರುಷರು ಕುಡಿದ ವಿಷಯವನ್ನು ಮಹಿಳಾ ಸಂಘಟನೆಗೆ ತಿಳಿಸಿದರೆ ಅವರಿಗೂ ಬಹುಮಾನ ನೀಡುವುದಾಗಿ ಈ ಮಹಿಳಾ ಸಂಘಟನೆ ಘೋಷಿಸಿದೆ.
ಭಲೇ ಮಹಿಳೆಯರು! ಅದೂ ಅಕ್ಷರ ಕಲಿಯದ ಹೆಣ್ಣು ಮಕ್ಕಳು ಇಂಥ ಸಾಹಸಕ್ಕೆ ಮುಂದಾಗಿದ್ದಾರೆಂದರೆ ಅದಕ್ಕಿಂತ ದೊಡ್ಡ ಸಾಮಾಜಿಕ ಕ್ರಾಂತಿ ಇನ್ನೇನಿದೆ?
ಕೊಟ್ಟೂರಿನ ಬೆಳಕು ಚೀತಮ್ಮ
ಮಧ್ಯಪ್ರದೇಶದ ಮಹಿಳೆಯರ ಈ ಕಥೆಯನ್ನು ಹೇಳಬೇಕಾದರೆ ಇನ್ನೊಂದು ಇಂಥದ್ದೇ ಘಟನೆ ನೆನಪಿಗೆ ಬರುತ್ತದೆ.
ಚೀತಮ್ಮ ಎಂಬ ಎಂಬ ಮಹಿಳೆ ಹುಟ್ಟೂರು ಆಂಧ್ರಪ್ರದೇಶ. ಮೀನುಗಾರಿಕೆ ನಿತ್ಯ ಕಸುಬು. ಮದುವೆಯಾಗಿದ್ದು ಒರಿಸ್ಸಾದ ಕೊಟ್ಟೂರು ಎಂಬ ಹಳ್ಳಿಹೈದನನ್ನು. ಆದರೆ, ಮದುವೆಯಾಗಿ ಗಂಡನ ಮನೆಗೆ ಹೋದಾಗ ಅವಳಿಗೆ ಅಚ್ಚರಿ ಉಂಟುಮಾಡಿದ್ದು ಆ ಹಳ್ಳಿಯ ಬದುಕು! ಕೊಟ್ಟೂರು ಉತ್ತರಪ್ರದೇಶದ ತಲನ್‌ಪುರ್ ಗ್ರಾಮಕ್ಕೆ ಹೊರತಾಗಿರಲಿಲ್ಲ. ದಿನ ಕುಡಿಯುವುದೇ ಅಲ್ಲಿನ ಕೂಲಿಗೋಗುವ ಗಂಡಸರ ನಿತ್ಯ ಕಾಯಕ. ಓದಲು ಶಾಲೆಗಳಿರಲಿಲ್ಲ. ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ಓದು ಬರಹ ಕಲಿಯೋಣ ಅನ್ನುವ ಆಸೆಗೆ ಆ ಹಳ್ಳಿ ಶಾಲೆಗಳನ್ನೇ ನೋಡಿಲ್ಲ.
ಚೀತಮ್ಮನೂ ಹೆಚ್ಚೇನೂ ಓದಿಲ್ಲ. ಬದುಕಿನ ಅನುಭವ ಮಂಟಪವೇ ಅವಳು ಕಲಿತ ಶಾಲೆಯಾಗಿತ್ತು. ಬೆಸ್ತರ ಸಂಘಟನೆಯನ್ನು ಹುಟ್ಟುಹಾಕಿದಳು. ಅದರ ಹೆಸರು ಸಮುದ್ರಂ. ಶೋಷಿತ ಮಹಿಳೆಯರಿಂದ ಹಿಡಿದು ಮೀನುಗಾರರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ವೇದಿಕೆಯಾಯಿತು ಸಮುದ್ರಂ. ಚೀತಮ್ಮನ ನಿರಂತರ ಹೋರಾಟದ ಫಲವಾಗಿ ಹಳ್ಳಿಗೆ ಶಾಲೆ ಬಂತು. ದಿನನಿತ್ಯ ಕುಡಿಯಲು ನೀರಿನ ಸೌಲಭ್ಯ ದೊರೆಯಿತು. ಕೊಟ್ಟೂರಿನಲ್ಲಿ ಕುಡುಕರೂ ಜಾಗೃತಿಗೆ ಮುಂದಾದರು. ಹಳ್ಳಿ ಸಾರಾಯಿ ಮುಕ್ತವಾಯಿತು. ಪುಟ್ಟ ಹಳ್ಳಿಯ ಬದುಕು ಚೀತಮ್ಮನಿಂದ ಹಸನಾಯಿತು.
ನಮಗ್ಯಾಕೆ ಸಾಧ್ಯವಿಲ್ಲ?
ಈಗ ಹೇಳಿ ಇದು ನಮಗ್ಯಾಕೆ ಸಾಧ್ಯವಿಲ್ಲ? ನಮ್ಮಲ್ಲಿಯೂ ದುಡಿದುದ್ದನೆಲ್ಲಾ ಬಾರಿಗೆ ಹಾಕುವ ಪುರುಷರಿಗೇನು ಕಡಿಮೆ ಇಲ್ಲ. ಈಗಲೂ ಬಡ ಕುಟುಂಬಗಳಲ್ಲಿ ಬದುಕು ಎಷ್ಟೊಂದು ದುಸ್ತರವಾಗಿದೆ ಎಂದರೆ ಅವರಿಗೆ ನೆಮ್ಮದಿ ಎಂಬುವುದೇ ಕನಸು. ಮಕ್ಕಳು ಚಿಮಿಣಿ ದೀಪಡದಡಿಯಲ್ಲಿ ಓದಿ ಬದುಕು ಸಾಗಿಸುತ್ತಿದ್ದರೂ ಪರವಾಗಿಲ್ಲ, ನಾನು ಸಂಜೆಯಾಗುತ್ತಿದ್ದಂತೆ ಕುಡಿಯಬೇಕು ಎನ್ನುವ ಮನೋ‘ವದವರಿದ್ದಾರೆ. ಕೂಲಿ ಕೆಲಸಕ್ಕೆ ಹೋದ ಗಂಡ ಮನೆಗೆ ಬರುತ್ತಾನೆಂದು ಅನ್ನದ ಬಟ್ಟಲು ಕೈಯಲ್ಲಿಟ್ಟುಕೊಂಡು ಕಾಯುವ ಪತ್ನಿಗೆ ಗಂಡ ನೀಡುವ ಉಡುಗೊರೆ ಬರೀ ಬೈಗುಳ, ಮೂಗಿಗೆ ಬಡಿಯುವ ಕುಡಿತದ ವಾಸನೆ. ಆದರೆ, ಇದನ್ನು ಬದಲಾಯಿಸಲು ಏಕೆ ಸಾಧ್ಯವಿಲ್ಲ?
ಇಲ್ಲಿ ಸಾರಾಯಿ ನಿಷೇಧ ಮಾಡ್ತಿವಿ ಅಂದ ಸರ್ಕಾರ, ಬರೇ ಪ್ಯಾಕೇಟ್‌ಗಳನ್ನು ನಿಷೇಸಿತ್ತು. ಆದರೆ, ಕುಡಿಯಬೇಕೆನ್ನುವವರಿಗೆ ಪ್ಯಾಕೇಟಾದ್ರೇನು? ದೊಡ್ಡ ಬಾಟಲ್ ಆದ್ರೇನು? ಮೊದಲು ಪ್ಯಾಕೇಟ್ ಕುಡಿಯುವವನು ಈಗ ಬಾರ್‌ಗೆ ಹೋಗಿ ಸ್ವಲ್ಪ ಹೆಚ್ಚೇ ದುಡ್ಡು ಕೊಟ್ಟು ಕುಡಿಯುತ್ತಾನೆ. ಕೊಟ್ಟೂರು ಮತ್ತು ತಲನ್‌ಪುರದಲ್ಲಿಯೂ ಇಂಥ ಕುಡುಕರಿದ್ದರು. ಆದರೆ, ಅಲ್ಲಿನ ಮಹಿಳೆಯರು ಗಂಡ ಕುಡಿಯುತ್ತಾನೆ, ಸಂಸಾರ ಹಾಳಾಗುತ್ತದೆ ಎಂದು ಕೊರಗುತ್ತಾ ಕೂರಲಿಲ್ಲ, ಬದಲಾಗಿ ಧೈರ್ಯದಿಂದ ಎದ್ದು ನಿಂತು ಪ್ರತಿಭಸಿದರು. ಇಲ್ಲಿ ಕೆಲಸ ಮಾಡಿದ್ದು ಅವರ ಧೈರ್ಯ, ಒಗ್ಗಟ್ಟು, ಜಾಗೃತಿ ಮೂಡಿಸಬೇಕೆನ್ನುವ ದಿಟ್ಟ ಮನೋಭಾವ. ಅವರೇನು ಶಾಲೆಗೆ ಹೋಗಿ ಶಿಕ್ಷಣ ಪಡೆದವರಲ್ಲ, ಬದಲಾಗಿ ಹುಟ್ಟಿ ಬೆಳೆಸಿದ ಹಳ್ಳಿ ಬದುಕೇ ಅವರಿಗೆ ಶಿಕ್ಷಣವಾಯಿತು. ಜಾಗೃತಿ ಮೂಡಬೇಕಾಗಿರುವುದು ನಮ್ಮ-ನಮ್ಮ ಮನೆಯಿಂದಲೇ. ಒಂದಕ್ಷರ ಓದದವರೂ ಸಾಮಾಜಿಕ ಕ್ರಾಂತಿಗೆ ಕಾರಣವಾಗಬಲ್ಲವರು. ಕ್ರಾಂತಿಗೆ ಅಕ್ಷರದ ಹಂಗೇಕೆ?