ವಿಷಯದ ವಿವರಗಳಿಗೆ ದಾಟಿರಿ

ಮೇ 5, 2011

21

ಒಸಾಮಾ – ಒಬಾಮಾ…!

by ನಿಲುಮೆ

ಡಾ.ಅಜಕ್ಕಳ ಗಿರೀಶ್ ಭಟ್

ಅಂತೂ ಅಮೆರಿಕ ಒಸಾಮಾನನ್ನು ಕೊಂದಿದೆ ಅನ್ನುವುದನ್ನು ಅದು ಅಧಿಕೃತವಾಗಿ ಘೋಷಿಸಿದೆ. ಹೀಗೆ ಕೊಲ್ಲುವುದು ಅಮೆರಿಕಕ್ಕೆ ಏನೂ ಕಷ್ಟದ ಸಂಗತಿಯಲ್ಲ. ಅದು ಅದನ್ನು ದಕ್ಕಿಸಿಕೊಳ್ಳಬಲ್ಲುದು. ಆದರೆ ಹಲವು ಪ್ರಶ್ನೆಗಳು ಎಲ್ಲರ ಮನಸ್ಸಲ್ಲೂ ಏಳುವುದು ಸಹಜ. ಕೆಲದಿನಗಳಾದ ನಂತರ ಆ ಪ್ರಶ್ನೆಗಳನ್ನು ಎಲ್ಲರೂ ಮರೆಯುತ್ತಾರೆ ಅನ್ನೋದು ಕೂಡ ನಮಗೆಲ್ಲ ಗೊತ್ತು.ನಾವು ಕೂಡ ಮರೀತೇವೆ.ಹಾಗೆ ಮರೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯ.ಆದರೂ ಈಗ ಮನಸಲ್ಲಿ ಬಂದ ಆಲೋಚನೆಗಳಲ್ಲಿ ಕೆಲವನ್ನು ಮರುನೆನೆದುಕೊಳ್ಳುತ್ತೇನೆ.ಇವು ನನ್ನ ಮನಸಲ್ಲಿ ಮಾತ್ರ ಬಂದ ಪ್ರಶ್ನೆಗಳಲ್ಲವಾದ್ದರಿಂದ ಈ ಪ್ರಶ್ನೆಗಳ ಬಗ್ಗೆ ನಾನು ಯಾವುದೇ ಕಾಪಿರೈಟ್ ಕ್ಲೈಮ್ ಮಾಡುವುದಿಲ್ಲ!!!

ನೋಡಿ,ಇದು ಅನ್ಯಾಯವಲ್ಲವೇ? ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಕೊಲ್ಲುವುದು ನ್ಯಾಯವೇ?

ಆಧುನಿಕ ನ್ಯಾಯಶಾಸ್ತ್ರದಲ್ಲಿ ಎಲ್ಲಾದರೂ ವಿಚಾರಣೆಯಿಲ್ಲದೆ ಹೀಗೆ ಶಿಕ್ಷೆ ನೀಡುವುದನ್ನು ಸಮರ್ಥಿಸಲಾಗಿದೆಯೇ? ಲಾಡೆನ್ ಗೆ ಫೇರ್ ಟ್ರಯಲ್ ನೀಡಲಾಗಿಲ್ಲ. ಅವನನ್ನು ಯಾವ ಕೋರ್ಟಿನಲ್ಲಿ ವಿಚಾರಣೆ ಮಾಡಲಾಗಿದೆ? ತಾನು ಕೊಲೆ ಮಾಡಿದ್ದೇನೆ ಅಂತ ಒಬ್ಬ ವ್ಯಕ್ತಿ ಹೇಳಿದ ಕೂಡಲೇ ಯಾವ ಕೋರ್ಟು ಕೂಡ ವಿಚಾರಣೆಯಿಲ್ಲದೆ ಆ ವ್ಯಕ್ತಿಯನ್ನು ಗಲ್ಲಿಗೆ ಹಾಕುವುದಿಲ್ಲ. ಹಾಗಿರುವಾಗ ,ಅಮೆರಿಕವಿರಬಹುದು ಅಥವಾ ಅದರಪ್ಪನಿರಬಹುದು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದೆಂದರೇನು? ಓಯ್!! ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅನ್ನುವ ಸಂಸ್ಥೆಯವರೇ!!!ಎಲ್ಲಿದ್ದೀರಿ? ಒಸಾಮಾನ ಮಾನವ ಹಕ್ಕಿಗೆ ಬೆಲೆ ಇಲ್ಲವೇ???

ಹೋಗಲಿ , ಒಸಾಮಾ ಅಪರಾಧಿ ಅಂತಲೇ ಇಟ್ಟುಕೊಳ್ಳೋಣ. ಆದರೆ,ಅವನ ಜತೆಗೆ ಮನೆಯಲ್ಲಿದ್ದ ಇತರರು ಏನು ಅಪರಾಧ ಮಾಡಿದ್ದಾರೆ? ಅವನ ಹೆಂಡತಿ ಮಕ್ಕಳ ಮೇಲೂ ಅಮೆರಿಕ ಕರುಣೆ ತೋರಲಿಲ್ಲ. ಅವರೇನಾದರೂ ಕೊಲೆ ಮಾಡಿದ್ದಕ್ಕೆ ಆಧಾರಗಳಿವೆಯೆ? ಅವರನ್ನು ಯಾವ ಕೋರ್ಟಲ್ಲಾದರೂ ವಿಚಾರಣೆ ನಡೆಸಲಾಗಿದೆಯೇ? ಒಸಾಮಾನ ಮಕ್ಕಳು ಅನಾಥರಾಗಲಿಲ್ಲವೇ? ಆ ಮುಗ್ಧರ ಪರವಾಗಿ ಯಾಕೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಹೋರಾಡುತ್ತಿಲ್ಲ? ಕನಿಷ್ಟ ನಮ್ಮ ದೇಶದ ಅಥವಾ ರಾಜ್ಯದ ಸಾಹಿತಿಗಳು,ಬುದ್ಧಿಜೀವಿಗಳು ದನಿಯೆತ್ತಬೇಕಾಗಿತ್ತಲ್ಲ? ಸತ್ಯ ಶೋಧನಾ ಸಮಿತಿಗಳು ಯಾಕೆ ಹುಟ್ಟಿಲ್ಲ? ಕಾರ್ಯ ಪ್ರವೃತ್ತರಾಗಿಲ್ಲ ? ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಭಾರತ ಕೂಡ ಪಾಕಿಸ್ತಾನದಲ್ಲಿರುವ ದಾವೂದನ ಮೇಲೆ ದಾಳಿ ಮಾಡಬಹುದು ಅಂತ ಆತಂಕವಾದರೂ ನಮ್ಮ ದೇಶದ ಮಾಧ್ಯಮ ಮಿಂಚುಗರಿಗೆ ಉಂಟಾಗಬೇಕಿತ್ತಲ್ಲವೇ?

ಒಸಾಮಾ ಒಂದುವೇಳೆ ಭಯೋತ್ಪಾದಕ ಅಂತ ಆಗಿದ್ದರೂ ಕೂಡ ಆತ ಯಾಕಾಗಿ ಭಯೋತ್ಪಾದಕನಾದ? ಅದಕ್ಕೆ ಕಾರಣ ಯಾರು? ಅದಕ್ಕೆ ಅವನೆಷ್ಟು ಕಾರಣ? ಇತರರೆಷ್ಟು ಕಾರಣ? ಅಲ್ಪಸಂಖ್ಯಾತನಾಗಿರುವುದರಿಂದಾಗಿ ಅಭದ್ರತೆಯ ಭಾವನೆಯಿದ್ದುದರಿಂದ ಆತ ಈ ಕೃತ್ಯಗಳನ್ನು ಮಾಡುತ್ತಿದ್ದನೇ?ಎಂಬುದನ್ನೆಲ್ಲ ವಿಚಾರಿಸಬೇಕಿತ್ತಲ್ಲವೇ? ಒಂದು ವೇಳೆ ಆತ ಭಯೋತ್ಪಾದಕ ಅಂತಾಗಿದ್ದರೆ, ಅದಕ್ಕೆ ಹೊರಗಿನ (external)ಕಾರಣಗಳಿದ್ದರೆ ಅವನ ಅಪರಾಧ ಅಷ್ಟು ಕಡಿಮೆ ತಾನೆ? ಆಗ ರೇರೆಸ್ಟ್ ಆಫ್ ರೇರ್ ಕೇಸ್ ಗಳಲ್ಲಿ ನೀಡಬೇಕಾದ ಮರಣದಂಡನೆಯಂಥ ಶಿಕ್ಷೆಯನ್ನು ವಿಚಾರಣೆಯಿಲ್ಲದೆ ನೀಡಿದ್ದು ಯಾಕೆ?

ಅಲ್ಲದೆ ,ಒಸಾಮಾಗೆ ಮತಿವಿಕಲತೆ ಇತ್ತು,ಅಥವಾ ಅವನು ಅಪ್ರಾಪ್ತ ವಯಸ್ಕ ಅಂತ ಅವನ ಕಡೆಯಿಂದ ವಾದಿಸಬಹುದಾದ ವಕೀಲರಿಗೆ ವಾದಿಸಲು ಅವಕಾಶವನ್ನು ಕೊಡಬೇಕಿತ್ತು. ಒಂದು ವೇಳೆ, ಅವನು ಅಪ್ರಾಪ್ತ ವಯಸ್ಕ ಅಂತ ವಕೀಲರು ವಾದಿಸಿದರೆ ಆಗ ಅವನ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮೂಲಕ ದೃಢೀಕರಿಸಿಕೊಳ್ಳುವುದು ಕೂಡ ನ್ಯಾಯಾಲಯದ ಕರ್ತವ್ಯವಾಗುತ್ತದೆ. ಅಥವಾ ಡಿ. ಎನ್.ಎ. ಪರೀಕ್ಷೆಯೋ ಮತ್ತೊಂದೋ ಪರೀಕ್ಷೆಗಳ ಮೂಲಕ ನೋಡಬೇಕಾಗುತ್ತದೆ. ಯಾವ ಪರೀಕ್ಷೆ ಆಗಬೇಕು ಅಂತ ನಾವು ನೀವು ಹೇಳುವಂತಿಲ್ಲ ಬಿಡಿ , ಅದಕ್ಕೆ ಸಂಬಂಧಿಸಿದ, ಅಧಿಕೃತ ತಜ್ಞರೇ ಕೋರ್ಟಿಗೆ ತಿಳಿಸಬೇಕಾಗುತ್ತೆ. ಮತಿವಿಕಲ ಹೌದೋ ಅಲ್ಲವೋ ಅಂತ ನೋಡಲು ಖ್ಯಾತ ಮನೋರೋಗ ತಜ್ಞರನ್ನು ಕರೆಸಬೇಕಾಗುತ್ತಿತ್ತು. ಹಾಗೆ ವಿಚಾರಿಸುತ್ತಿದ್ದರೆ ನಾನು ಜಗತ್ತಿಗೇ ಬೆಂಕಿ ಇಡುತ್ತೇನೆ ಅಂತ ಘೋಷಿಸಿಕೊಂಡವನು ಮತಿವಿಕಲ ಅಂತ ಪ್ರಮಾಣಪತ್ರ ನೀಡಲು ವೈದ್ಯರಿಗೆ ಕಷ್ಟವೇನೂ ಆಗುತ್ತಿರಲಿಲ್ಲ. ಮತಿವಿಕಲರನ್ನು ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿ ಚಿಕಿತ್ಸೆ ಕೊಡಿಸುವ ಬದಲು ಶಿಕ್ಷೆ ನೀಡುವುದು ಯಾವ ನಾಗರಿಕ ಸಮಾಜಕ್ಕೆ ಶೋಭೆ?

ಕ್ಷಮೆ ಅನ್ನುವುದು ಜಗತ್ತಿನ ದೊಡ್ದ ತತ್ವ ಅಲ್ಲವೇ? ಎಲ್ಲ ಜಾಗತಿಕ ತತ್ವಜ್ಞರು ಅದನ್ನು ಹೇಳಿದ್ದಾರೆ. ಕಸಬನಂಥವರನ್ನು ಗಲ್ಲಿಗೆ ಏರಿಸಬಾರದು,ಅವರನ್ನು ಜೈಲಿನಲ್ಲಿ ಇಡಬೇಕು, ಅವರಿಗೆ ರಿಪೆಂಟ್ ಮಾಡಿಕೊಳ್ಳಲು ಅವಕಾಶ ನೀಡಬೇಕು, ಕೊಂದರೆ ಮತ್ತೆ ಅವರಿಗೆ ಜ್ಞಾನೋದಯವಾಗಲು ಅವಕಾಶವೆಲ್ಲಿ ಅಂತ ನಮ್ಮ ದೇಶದ ಹಲವು ಮಾಧ್ಯಮ ಮಿಂಚುಗರು ಹೇಳಿದ್ದನ್ನಾದರೂ ಅಮೆರಿಕದ ಗೂಢಚಾರರು ಟಿ.ವಿ.ಗಳಿಗೆ ಕಿವಿಹಚ್ಚಿ ಕೇಳಿಲ್ಲವೇ? ಅಮೆರಿಕಕ್ಕೆ ಕನಿಷ್ಟ ಭಾರತವಾದರೂ ಮಾದರಿಯಾಗಬೇಕಿತ್ತು. ನಾವು ಕಸಬನಿಗೆ ಎಷ್ಟು ಚೆನ್ನಾಗಿ ಫೇರ್ ಟ್ರಯಲ್ ನೀಡಿದ್ದೇವೆ ಅನ್ನೋದನ್ನಾದರೂ ಅವರು ನೋಡಬೇಕಿತ್ತು.ನಮ್ಮದು ಬಡ ದೇಶವಾದರೂ ನಮ್ಮ ನ್ಯಾಯ ಪ್ರಜ್ಞೆ ದೊಡ್ದದು. ಅನ್ಯಾಯವಾಗಿ ಕಸಬನೂ ಶಿಕ್ಷೆ ಅನುಭವಿಸಬಾರದು. ಹೀಗಾಗಿ ಕೋಟಿಗಟ್ಟಲೆ ಖರ್ಚಿನೊಂದಿಗೆ , ಸರಕಾರವೇ ವಕೀಲರನ್ನು ನೇಮಿಸಿದೆ.

ಒಸಾಮಾನ ಹೆಣವನ್ನು ಮುಸ್ಲಿಮ್ ವಿಧಿವಿಧಾನಗಳ ಮೂಲಕ ಸಮುದ್ರದಲ್ಲಿ ದಫನ ಮಾಡಲಾಗಿದೆ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ. ಆ ವಿಧಿಗಳನ್ನು ನೆರವೇರಿಸಿದ ಧರ್ಮ ಪಂಡಿತರು ಯಾರು? ಹೇಳುವ ಹೊಣೆ ಒಬಾಮನ ಮೇಲಿದೆ. ಅಲ್ಲದೆ ಆಳ ಸಮುದ್ರಕ್ಕೆ ಹೆಣವನ್ನು ಎಸೆದುದನ್ನು “ದಫನ” ಎಂದು ಕರೆಯುವುದು ಸರಿಯೇ? ಈ ಶಬ್ದ ಸರಿಯೇ ಅಂತ ತೀರ್ಮಾನಿಸಲು ನಿಘಂಟುತಜ್ಞರು ಹಾಗೂ ಧರ್ಮಪಂಡಿತರು ಇರುವ ಪರಿಣತ ಸಮಿತಿಯೊಂದನ್ನು ನೇಮಿಸಬೇಕು.

ಹೆಣವನ್ನು ಪೋಸ್ಟ್ ಮಾರ್ಟಮ್ ಮಾಡುವ ಪುರುಸೊತ್ತೂ ಅಮೆರಿಕದವರಿಗೆ ಇರಲಿಲ್ಲ.ಅಮೆರಿಕದವರಿಗೆ ಎಲ್ಲ ಅರ್ಜೆಂಟ್. ನಮ್ಮನ್ನು ನೋಡಿ ಅವರು ನ್ಯಾಯದೃಷ್ಟಿ ಕಲಿಯಬೇಕು.ನಾವು ಮುಂಬಯಿ ದಾಳಿಕೋರರ ಹೆಣಗಳನ್ನು ಹಲವುದಿನಗಳ ಕಾಲ ಕಾಪಿಟ್ಟು, ಪಾಕಿಸ್ತಾನದವರಲ್ಲಿ, ಒಮ್ಮೆ ಕೊಂಡೋಗಿ ಅಂತ ಬೇಡಿಕೊಳ್ಳಲಿಲ್ಲವೇ? ಬದುಕಿರುವ ಒಸಾಮಾನನ್ನು ದ್ವೇಷಿಸಲಿ, ಪಾಪ ಸತ್ತ ಹೆಣದ ಮೇಲೆ ಯಾಕೆ ಕೋಪ?

ಇದು ಪಾಕಿಸ್ಥಾನದ ಮೇಲಿನ ದಾಳಿ ಅಲ್ಲವೇ? ತನ್ನದು ಮುಸ್ಲಿಮರ ವಿರುದ್ಧ ಹೋರಾಟ ಅಲ್ಲ,ಭಯೋತ್ಪಾದಕರ ವಿರುದ್ಧ ಹೋರಾಟ ಅಂತ ಒಬಾಮಾ ಎಷ್ಟೇ ಹೇಳಿದರೂ ಮುಸ್ಲಿಮ್ ರಾಷ್ಟ್ರವಾದ ಪಾಕಿಸ್ತಾನವನ್ನು ಒಂಚೂರೂ ನಂಬದೆ ಅವರ ನೆಲದಲ್ಲೇ ದಾಳಿ ಮಾಡಿದ,ಅದೂ ಕೂಡ ಹೇಡಿಯಂತೆ ಮಧ್ಯರಾತ್ರಿ,ಬೆಳಕಿಲ್ಲದಾಗ, ಇದ್ದ ಬೆಳಕನ್ನೂ ಆರಿಸಿ,ದಾಳಿ ಮಾಡಿದ,ಪಾಕಿಸ್ತಾನದವರಿಗೆ ಯಾವ ಗುಟ್ಟನ್ನೂ ಹೇಳದ, ಒಬಾಮಾನನ್ನು ಜನಾಂಗ ದ್ವೇಷಿ ಅಂತ ನಂಬಲುಕೂಡ ಜನರಿಗೆ ಸಾಕಷ್ಟು ಕಾರಣಗಳಿವೆ. ಹೀಗಾಗಿ ಮುಂದೆ ಒಬಾಮಾ ಏನಾದರೂ ಭಾರತಕ್ಕೆ ಭೇಟಿ ನೀಡಲು ಅಪೇಕ್ಷಿಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ ಅವನಿಗೆ ಭಾರತದ ವೀಸ ನೀಡಬಾರದು ಅಂತ ನಾವು ಈಗಲೇ ನಮ್ಮವರೇ ಆದ ವಿದೇಶಾಂಗ ಸಚಿವ ಎಸ್ಸೆಮ್ ಕೃಷ್ಣರನ್ನು ಒತ್ತಾಯಿಸುವ ಅಗತ್ಯವಿದೆ.

ಇದು ನಕಲಿ ಎನ್ ಕೌಂಟರ್ ಅಲ್ಲ ಅಂತ ಹೇಳಲು ಹೇಗೆ ಸಾಧ್ಯ? ಇದು ಅಸಲಿ ಎನ್ ಕೌಂಟರ್ ಅಂತ ತೋರಿಸಲಿಕ್ಕಾಗಿ ಅಮೆರಿಕದ ಸೀಲ್ ಯೋಧರಲ್ಲಿ ಯಾರಾದರೊಬ್ಬ ಒಸಾಮಾನ ಪಿಸ್ತೂಲಿನಿಂದ ತನ್ನ ಎಡ ಕಿರುಬೆರಳ ಬದಿಗೆ ಗುಂಡು ಹಾಕಿಕೊಂಡು ಸಾಕ್ಷ್ಯವನ್ನೇನಾದರೂ ತಯಾರಿಸಿಕೊಂಡದ್ದಕ್ಕೆ ಆಧಾರಗಳಿವೆಯೆ? ಹಾಗೊಂದು ವೇಳೆ ಇದ್ದರೆ ಅಸಲಿ ಅಂತ ಒಪ್ಪಬಹುದು. ಅಲ್ಲದಿದ್ದರೆ ಈವರೆಗೆ ಹೆಸರೇ ಇಲ್ಲದ ಆ ಸೀಲ್ ಯೋಧರ ಮೇಲೆ ಹಾಕ ಬಹುದಾದ ಅಂತಾರಾಷ್ಟ್ರೀಯ ಕೇಸು ಕಾಯುತ್ತದೆ.

ಈ ಬರ್ಬರ ಮಾನವ ಹತ್ಯೆಯನ್ನು ಒಬಾಮಾ ಮತ್ತು ಅವನ ಉನ್ನತ ಅಧಿಕಾರಿಗಳು ಲೈವ್ ಆಗಿ ಟಿ.ವಿ.ಯಲ್ಲಿ ನೋಡಿದರಂತೆ.ಇದು ಬೇರೆಯವರು ಸ್ಯಾಡ್ ಆಗಿರುವುದನ್ನು ನೋಡಲು ಇಷ್ಟಪಡುವ ಸ್ಯಾಡಿಷ್ಟ್ನೇಚರ್ಅಲ್ಲವೇ? ಅಮೆರಿಕದಂಥ ಜಗತ್ತಿನ ಶಾಂತಿ ಕಾಯುವ ಹೊಣೆ ಹೊತ್ತಿರುವ ದೇಶಕ್ಕೆಇಂಥ ಅಧ್ಯಕ್ಷನೇ? ಆದರೆ ಒಬಾಮಾನಿಗೆ ಈ ಮೂಲಕ ಜಾಗತಿಕ ಶಾಂತಿಸ್ಥಾಪನೆಗಾಗಿ ಎರಡೆರಡು ನೊಬೆಲ್ಶಾಂತಿ ಪ್ರಶಸ್ತಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ನಿಜವಾಗಿ ಹೇಳಬೇಕೆಂದರೆ ಪಾಕ್ ಮತ್ತು ಅಮೆರಿಕ ಎರಡು ದೇಶಗಳು ಸೇರಿ ಜಗತ್ತನ್ನು ಮೂರ್ಖರನ್ನಾಗಿ ಮಾಡಿವೆ ಈ ವಿಷಯದಲ್ಲಿ. ಅಲ್ಲದಿದ್ದರೆ, ಮಿಲಿಟರಿ ನೆಲೆ ಬಳಿ ಹೆಲಿಕಾಪ್ಟರು ಹಾರಿದ್ದು ಪಾಕಿಗೆ ಗೊತ್ತಾಗಿಲ್ಲ ಅಂತಾದರೆ ಅಲ್ಲಿ ಅವರು ನಿದ್ದೆ ಮಾಡುತ್ತಿದ್ದರೆ? ನಮ್ಮ ಮಾಧ್ಯಮಗಳು ಅಮೆರಿಕದ ಅಧಿಕೃತ ಹೇಳಿಕೆಗಳು ಮತ್ತು ಪಾಕಿನ ಹೇಲಿಕೆಗಳು ಸತ್ಯ ಅಂತ ನಂಬಿವೆಯೋ ಇಲ್ಲವೋ ಗೊತ್ತಿಲ್ಲ. ನಮ್ಮನ್ನು ಹೆಚ್ಚುಕಡಿಮೆ ನಂಬಿಸಿವೆ. ಈಗ ಹೊಸ ಪ್ರಶ್ನೆಗಳು ಏಳಲಾರಂಭಿಸಿವೆ ಅಂತ ಸುದ್ದಿ ಉಂಟು.

21 ಟಿಪ್ಪಣಿಗಳು Post a comment
 1. Satish
  ಮೇ 5 2011

  E savu nayave ? nija.., nanngu gotilla..
  adre.. WTO kattada manninelali mannada a janara savu nayave ?

  ಉತ್ತರ
 2. ಮೇ 5 2011

  “ಅಮೆರಿಕಕ್ಕೆ ಕನಿಷ್ಟ ಭಾರತವಾದರೂ ಮಾದರಿಯಾಗಬೇಕಿತ್ತು” ..ಜೋಕ್ ಆಫ್ ದಿ ಡೇ..
  ಭಾರತವನ್ನು ಮಾದರಿ ಆಗಿ ಮಾಡ್ಕೊಳ್ಳೋದು ಅ೦ದ್ರೆ .. ಕಸಬ್, ಕಲ್ಮಾಡಿ, ರಾಜಾ, ಕನ್ಮೋಳಿ.. ಇತ್ಯಾದಿ ಇತ್ಯಾದಿ ಪ್ರಚ೦ಡ ಕಳ್ಳ ಜನರು ದಿನಾಲು ಸಾವಿರ ರೂ ಬಿರ್ಯಾನಿ ತಿ೦ದು ತೇಗ್ಬೇಕು.. ನಾವು ಅದನ್ನು ಟೀವಿ ನಲ್ಲಿ 30-40 ವರ್ಷ ನೋಡಿ ನಮ್ಮ ಜೀವನದಲ್ಲಿ ಜಿಗುಪ್ಸೆ ಬರ್ಬೇಕು..ಇ೦ತಹವರಿಗೆ ಬೆರಳು ಕೊಟ್ರೆ ಕೈಯನ್ನೇ ನು೦ಗುತ್ತಾರೆ ಎ೦ಬುದು ಅಮೆರಿಕಾಕ್ಕೆ ಗೊತ್ತಿದೆ. ನಮ್ಮವರಿಗೂ ಇನ್ನೂ ಬುದ್ದಿ ಬ೦ದಿಲ್ಲ.
  (ಅ೦ದ ಹಾಗೆ ನಾನು ಅಮೆರಿಕನ್ ಫಾನ್ ಅಲ್ಲ. ನೊ ಪರ್ಸನಲ್ ಒಫೆನ್ಸ್ )

  ಉತ್ತರ
 3. Ravi
  ಮೇ 5 2011

  ಅಜಕ್ಕಳರೆ, ಬುದ್ಧಿ ಜೀವಿಯ ಲಕ್ಷಣಗಳು ಎದ್ದು ಕಾಣುತ್ತಿವೆ. ತುಂಬಾ ಯೋಚಿಸಬೇಡಿ. WTC ಉರುಳಿದಾಗ ಒಸಾಮಾ ನೀವು ಹೇಳಿದ ಮಾನವ ಹಕ್ಕುಗಳ ಬಗ್ಗೆ ಯೋಚಿಸಿದ್ದನೆ? ಇನ್ನು “ಆ ಕೃತ್ಯ ಅವನದೇ?” ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಯಾವ ಜಗತ್ತಿನ ಕೋರ್ಟ್ ನ ಅಗತ್ಯವೂ ಇಲ್ಲ. ಒಸಾಮನನ್ನು ಅಲ್ಪಸಂಖ್ಯಾತ ಎನ್ನುತ್ತೀರಲ್ಲ, ನಗು ಬರುತ್ತಿದೆ. ನಿಮ್ಮ ಲೇಖನದಲ್ಲಿ “ಅಲ್ಪ ಸಂಖ್ಯಾತ”, “ಎಸ್ಸೆಲ್ಲೆಲ್ಸಿ” ಇವನ್ನೆಲ್ಲ ನೋಡಿದರೆ ಒಸಾಮಾ ಭಾರತದಲ್ಲಿದ್ದ ಎಂದು ನೀವು ತಿಳಿದಂತಿದೆ. ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಅದ್ಯಾವ ಅಭದ್ರತೆ? ಜಗತ್ತಿಗೆ ಬೆಂಕಿ ಇಡಲು ಹೋರಾಟ ವ್ಯಕ್ತಿಗೆ ಮತಿ ಭ್ರಮಣೆಯೇ ಸರಿ, ಆತ ಇನ್ನೂ ಬದುಕಿದ್ದು ಇನ್ನಷ್ಟು ಕೃತ್ಯಗಳನ್ನು ಮಾಡುವ ಮೊದಲು ಅವನ ಆತ ಮುಗಿಸಿದ್ದು ಮತ್ತೂ ಸರಿ. ಸೃಷ್ಟಿಕರ್ತನೆ ಆತನನ್ನು ಮುಗಿಸಿದ, ಅಷ್ಟೇ. ಅಮೆರಿಕ ಸಾಚಾ ದೇಶವಲ್ಲ. ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.

  ಉತ್ತರ
 4. ಮೇ 5 2011

  ಲೇಖನದಲ್ಲಿ “ದಿಗ್ವಿಜಯ್ ಸಿ೦ಗ್” (ಅಲ್ಪ) ಅಭಿಮಾನ ಎದ್ದು ಕಾಣುತ್ತಿದೆ

  ಉತ್ತರ
 5. ಮಹೇಶ ಪ್ರಸಾದ ನೀರ್ಕಜೆ
  ಮೇ 5 2011

  ಪ್ರಮೋದ್, ರವಿ.. ಅಜಕ್ಕಳರ ಲೇಖನದಲ್ಲಿ ನನಗೆ ವಿಡಂಬನೆ ಕಾಣುತ್ತಿದೆಯೇ ಹೊರತು ನೀವು ಹೇಳಿದ ಬುಧ್ಧಿ ಜೀವಿ ಲಕ್ಷಣಗಳು ಕಾಣುತ್ತಿಲ್ಲ. 🙂

  ಉತ್ತರ
 6. ಮೇ 5 2011

  ಅಜಕ್ಕಳ ಸಾಹೇಬರಿಗೆ ವಂದನೆಗಳು. ತಮ್ಮ ಲೇಖನ ಓದಿ ನಗು ಬಂತು ಅಲ್ಲರೀ ಇಡೀ ಜಗತ್ತು ಹುಂ ಅನ್ನುವಾಗ
  ನೀವು ಊಹುಂ ಅನ್ನುವುದು ಯಾವ ನ್ಯಾಯ .ಖರೇ ಸಂಗತಿ ಹೊರಗಬ್ರಲಿಕ್ಕೆ ಟೈಮು ತಗೋತಾವ. ಕಾದು ನೋಡರಿ. ಹಿಂಗ ಮೈ ಮ್ಯಾಲ ಬಂಧಾವರಂಗ ವಾದಾ ಮಾಡಬ್ಯಾಡ್ರಿ. ಓಸಾಮಾ ನ ಸಾವು ಹಿಂಗ ಆಗೂದಿತ್ತು.
  ಅಲ್ಲ ಅನೇಕ ಯುವಕರ ತಲಿಕೆಡಸಿ ಅವರ ಕೈಯಾಗ ಬಂದೂಕು ಕೊಟ್ಟಾವ ತನ್ನ ಮಕ್ಕಳಿಗೆ ಮಾತ್ರ ಅದು ಸಲ್ಲ
  ಅಂತ ವಿಲ್ಲು ಬರೀತಾನ ಅಂದ್ರ ಆ ಮನಿಷ್ಯಾನ ಉದ್ದೇಶ ಏನು ಇದು ಎಲ್ಲಾರಿಗೂ ಗೊತ್ತು ಆಗತದ. ನೀವೆಲ್ಲೋ
  ಮಾನವೀಯತಾ, ವಿಚಾರಣೆ ಕೋರ್ಟು ಅಂತ ಹೇಳತೀರಿ ಅದೆಲ್ಲ ವೋಟು ನಂಬಿದವರಿಗೆ ಕಿಚ್ಚು ಇದ್ದವರು ಮಾತ್ರ
  ಅಮೆರಿಕದಂಗ ಮಾಡತಾರ.

  ಉತ್ತರ
 7. ಮೇ 5 2011

  ಸೂಪರ್ ಹೀಗೆ ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಜಾಸ್ತಿಯಾಗಿ ನಮ್ಮ ದೇಶ ಈ ಗತಿ ಬನ್ದಿರೊದು ಎಷ್ತು ಕಾಳಜಿ ಅವರಿಗೆ
  ಬಿನ್ ಲಾಡನ್ ಮೇಲೆ ಅದೇನೂ ಗೊತಿಲ್ಲ ಯಾರದರು ದುಷ್ತ ವ್ಯಕ್ತಿಗಳು ಸತ್ತಾಗಲೆ ನಮ್ಮ ಬುದ್ದಿ ಜೀವಿಗಳು ಎಚರ ಗೊಳದು ಈಗ ಸದ್ಯಕ್ಕೆ ಪಾರ್ಲಿಮೆಂಟ ತನಕ ಬನ್ದಿದಾರೆ ಮುಂದೆ ಎಲ್ಲಿ ಬರುತ್ತಾರೊ ಕಾದು ನೊಡಬೇಕು
  ಯಾವುದೆ ಕಾರಣಕ್ಕು ದೇಶದ ಸುರಕ್ಶತೆ ವಿಚಾರದಲ್ಲಿ ರಾಜಿ ಮಾಡಿ ಕೊಳ್ಳಬಾರದು ಇದು ಅಮೇರಿಕ ತತ್ವ ಇದನ್ನು ಮೊದಲು ಬಾರತೀಯರು ಕಲಿಯಬೇಕು

  ಉತ್ತರ
 8. supreeth
  ಮೇ 5 2011

  ಸಿದ್ಧಮಾದರಿಯ ವಾದಗಳು ವಿಡಂಬನೆಯ ಮೊನಚನ್ನು ಕಡಿಮೆ ಮಾಡಿವೆ. ತುಸು ಐಡಿಯಾಲಜಿ ತಗ್ಗಿಸಿದ್ದರೆ ಫ್ರೆಶ್ ಆದ ವಿಡಂಬನೆ ಮೂಡಿಬರಬಹುದಿತ್ತು.

  ಉತ್ತರ
 9. Mohammad Hafeez
  ಮೇ 5 2011

  Super Article

  ಉತ್ತರ
 10. ಮೇ 5 2011

  ಸಾವಿರಾರು ಜನರ ಮಾರಣಹೋಮದಲ್ಲಿ ಕ೦ಡು ಬರದ ಮಾನವ ಹಕ್ಕುಗಳ ಉಲ್ಲ೦ಘನೆ ಅಜ್ಜಕ್ಕಳ ಗಿರೀಶರಿಗೆ ಒಸಾಮಾನ ಸಾವಿನಲ್ಲಿಯಾದ ರೂ ಕ೦ಡಿದ್ದು ನಮ್ಮೆಲ್ಲರ ಭಾಗ್ಯವೆ೦ದು ತಿಳಿಯೋಣ! ಅಜ್ಜಕ್ಕಳ ಗಿರೀಶರೇ ನೀವು ಕಷ್ಟಪಟ್ಟದರೂ ಚುನಾವಣೆಯಲ್ಲಿ ನಿ೦ತರೆ ನಿಮಗೆ ಠೇವಣಿಯ ಗ್ಯಾರ೦ಟಿಯ ಬಗ್ಗೆ ನನ್ನ ಸಹಾಯವಿದೆ! ನಿಮ್ಮಿ೦ತಹವರಿ೦ದಲೇ ಈ ನಾಡು ಸುಭಿಕ್ಷವಾಗಬೇಕು! ನೀವು ಮು೦ದೆ ಬನ್ನಿ..!!
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಉತ್ತರ
 11. ಆಹಾ! ಭಲಾ ಭಲಾ…! ಮೆಚ್ಚಿದೆ… ನೀವು ಪಕ್ಕಾ ಜಾತ್ಯಾತೀತವಾದಿಗಳೂ,ಮಾನವ ಹಕ್ಕುಗಳ ಹೋರಾಟಗಾರರು,ಪ್ರಗತಿ ಪರರು,ಬುದ್ದಿ ಜೀವಿಗಳು ಅನ್ನುವ ಜ್ನಾನೋದಯ ನನಗಾಗಿದೆ

  ಉತ್ತರ
 12. ರವಿ ಕುಮಾರ್ ಜಿ ಬಿ
  ಮೇ 6 2011

  ಅಜಕ್ಕಳರೆ ವಾಹ್ ಒಳ್ಳೆ ಲೇಖನ ….

  ಆದರೆ ನನಗೊಂದು ಸಂದೇಹ ಅಥವಾ ಪ್ರಶ್ನೆ
  “ನೇರವಾಗಿ ಹೊಡೆದರೆ ನಾಟದ ದಪ್ಪ ಚರ್ಮದ ನಮ್ಮವರಿಗೆ ನೀವು ಹೀಗೆ ಸುತ್ತಿಬಳಸಿ ಹೊಡೆದರೆ ನಾಟುವುದೇ?”
  ಇನ್ನೊಂದು ವಿಷಯ “ಇದನ್ನೇ ಭಾರತ ಮಾಡುತ್ತಿದ್ದರೆ ಖಂಡಿತಃ ನೀವು ಹೇಳಿದನ್ಥವರೆಲ್ಲರೂ(ಮುಖ್ಯವಾಗಿ so cald ಬುದ್ದಿಜೀವಿಗಳು ಮತ್ತು so cald ಸಾಹಿತಿಗಳು) ನಾ ಮುಂದು ತಾ ಮುಂದು ಅಂತ ಟೀಕಿಸಿ …ಆ ಹಕ್ಕು ಈ ಹಕ್ಕು ಅಂತ ಹೇಳಿ ಏನೇನೋ ಮಾಡುತ್ತಿದ್ದರು(ಬೋಬ್ಬಿದುತ್ತಿದ್ದರು !!!!!).

  ಉತ್ತರ
 13. ಮಾತಿನಿಂದ ಮಾತಿಗೆ ದ್ವಂದ್ವಗಳ ಸರಮಾಲೆ…
  ನನ್ನ, ಒಟ್ಟು ಒಂಭತ್ತೂವರೆ ನಿಮಿಷ ವ್ಯರ್ಥವಾಯ್ತು.

  ಉತ್ತರ
 14. ಕೆಂಡಸಂಪಿಗೆ ಯಲ್ಲಿ ಪಕೀರ್ ಮಹಮದ್ ಕಟಪಾಡಿಯವರು ಬರೆದ ಲೇಖನ ನನ್ನ ಲೇಖನ ಪೋಸ್ಟ್ ಆದ ದಿನವೇ ಪೋಸ್ಟ್ ಆಗಿದೆ. ಆಸಕ್ತರು ಓದಿ. ಆನಂತರ ಮೇಲಿನ ನನ್ನ ಲೇಖನ ಓದಬೇಕಾಗಿ ಕೋರಿಕೆ. ಆ ಬಳಿಕ ನೀವು ನಿಮ್ಮದೇ ಕನ್ ಕ್ಲೂಶನ್ ಗೆ ಬರಬಹುದು.

  ಉತ್ತರ
  • shanti
   ಮೇ 7 2011

   ಅಜಕ್ಕಳರೆ ದಯವಿಟ್ಟು “ಕೊಂಡಿ” ಕೊಡಿರಿ ಓದುತ್ತೇವೆ….. ಯಾಕೆಂದರೆ ಹುಡುಕಿದೆ ಸಿಗಲಿಲ್ಲ ಲೇಖನ !!!

   ಉತ್ತರ
 15. ಡಬ್ಲ್ಯು ಡಬ್ಲ್ಯು ದಬ್ಲ್ಯು ಡಾಟ್ ಕೆಂಡಸಂಪಿಗೆ ಡಾಟ್ ಕಾಮ್ ಇದರ ಸಂಪಿಗೆ ಸ್ಪೆಶಲ್ ಕೆಟಗರಿಯಲ್ಲಿ ದಯವಿಟ್ಟು ನೋಡಿ.

  ಉತ್ತರ
 16. Harsha
  ಮೇ 19 2011

  @ಗಿರೀಶ ಭಟ್ , melina udaaharane, “Ootikyatakke beli gutta sakshi” andange ide. baalisha barahada paramavadi idu. Bharata bega uddara aaguva kaala barali…….

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments