ವಿಷಯದ ವಿವರಗಳಿಗೆ ದಾಟಿರಿ

ಮೇ 13, 2011

9

ಶಾಪ ವಿಮೋಚನೆಯಾಗದ ಅಹಲ್ಯೆಯರು…

‍ನಿಲುಮೆ ಮೂಲಕ

– ರೂಪ ರಾವ್,ಬೆಂಗಳೂರು

ರಾಮಾಯಣದ ಸೀತಾ ಸ್ವಯಂವರದ ನಾಟಕದ ತಾಲೀಮು ನಡೆಯುತ್ತಿತ್ತು.
ಅದರಲ್ಲಿ ಬರುವ ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ  ವೇದಿಕೆಯಮೇಲೆ ತರೋಣ

“ಗೀತಾ ಅಹಲ್ಯಾ ಪಾತ್ರ ನೀನೇ ಮಾಡಬೇಕು .” ಮೇಡಂ ನನ್ನನ್ನು ಈ ಪಾತ್ರಕ್ಕೆ ಕರೆದಾಗ ನಾನು ಕಕ್ಕಾಬಿಕ್ಕಿ, ಜೊತೆಗೆ ಒಮ್ಮೆಗೆ,ಮಾಡಬಾರದೆನಿಸಿತು.
“ಮೇಡಂ ನಾ………….ನು …………ಈ ಪಾರ್ಟ್ ಮಾಡಲ್ಲ. ………” ಹಿಂಜರಿಕೆಯಿಂದಲೇ ನುಡಿದೆ.

“ಯಾಕೆ ಗೀತಾ “? ನನ್ನತ್ತಲೇ ತೀಕ್ಷ್ಣವಾಗಿ ನೋಡುತ್ತಾ

“ಮೇಡಂ iam not happy with Ahalya’s charactor. ತುಂಬಾ ಸಲ ಅನ್ಕೂಂಡಿದ್ದೀನಿ ಯಾಕೆ ಈ ಪಂಚ ಮಹಾ ಕನ್ನಿಕೆಯರ ಹೆಸರಲ್ಲಿ  ಅಹಲ್ಯಾ ಹೆಸರು ಸೇರಿದೆ ಅಂತ?”
“ಯಾಕಮ್ಮಾ”? ಮತ್ತೆ ಪ್ರಶ್ನೆ ಎಸೆದರು.
” ಹಾಗಲ್ಲ ಮೇಡಂ ಗಂಡ ಇರದಿದ್ದಾಗ  ಮತ್ತೊಬ್ಬನ ಜೊತೆ ಸಂಬಂಧ ಹೊಂದಿದವಳು. ಅಸಲಿಗೆ ಆ ಕಥೆಯೇ ಬೇಕಿರಲಿಲ್ಲ .ರಾಮನ ಔನ್ನತೆಯನ್ನ ಎತ್ತಿ ತೋರೋದಿಕ್ಕೆ ಈ ಕತೆ ಸೇರಿಸಿದ್ದಾರೆ ಅಷ್ಟೇ.

“ಸರಿ.ಆಯ್ತು,ನಿನಗೆ ಯಾವ ಪಾತ್ರ ಬೇಕೋ ಅದನ್ನೇ ಚೂಸ್ ಮಾಡು.ಆದರೂ ಪಾತ್ರಕ್ಕಿಂತ ಪಾತ್ರಧಾರಿಯ ಆ ಪಾತ್ರದಲ್ಲಿ ಹೇಗೆ ಇನ್‌ವಾಲ್ವ್ ಆಗ್ತಾನೆ ಅನ್ನೋದು ಮುಖ್ಯ. ಮತ್ತೆ ಪುರಾಣದಲ್ಲಿ ಕೇಳಿದ ಕಥೆಯನ್ನ ಆ ನೆಲೆಯಲ್ಲಿಯೇ ನೋಡುವುದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ನೋಡಿದರೆ ಪಾತ್ರ ಇಂಟರೆಸ್ಟಿಂಗ್ ಆಗಿರುತ್ತೆ. ಅಹಲ್ಯಾ ಜೀವನದಲ್ಲಿ ನಿಜಕ್ಕೂ ಏನು ನಡೆದಿರಬಹುದು ಅನ್ನೋದನ್ನ ಯೋಚಿಸಿದರೆ ಆ ಪಾತ್ರ ನಿಜಕ್ಕೂ ತುಂಬಾ ಕಾಂಪ್ಲಿಕೇಟೆಡ್ ಅನ್ಸುತ್ತೆ. “ಮೇಡ್ಂ ಒಂದೇ ಸಲಕ್ಕೆ ಒಪ್ಪಿ, ಜೊತೆಗೇ ನನ್ನ ಮನಸಲ್ಲಿ ಅಲೆಯನ್ನು ಎಬ್ಬಿಸಿದರು.
ಯಾಕೋ ಅವರ ಮನಸು ಸ್ವಲ್ಪ ಗಂಭೀರವಾಯ್ತೆನಿಸಿತು.ಅವರಿಗೆ ಹಾಗೆಯೇ ಪಾತ್ರಗಳಲ್ಲಿ ತಲ್ಲೀನರಾಗುವ ಮನಸು..

“ರೇವತಿ ಯಾರ್ ಯಾರಿಗೆ ಯಾವ ಯಾವ ಪಾರ್ಟ್ ಬೇಕು ಅನ್ನೋದನ್ನ ನೀನೆ ಪಟ್ಟಿ ಮಾಡಿ ನನಗೆ ತಂದುಕೊಡು. ನಾನೀಗ ಹೊರಡ್ತೀನಿ”
ಮೇಡಮ್ ಮತ್ತೊಮ್ಮೆ ನನ್ನತ್ತ ನೋಡಿ ಹೊರಟೇ ಹೋದರು.
ಯಾವ ಬೇರೆ ನೆಲೆಯಲ್ಲಿ ಯೋಚಿಸಲೂ ಸಾಧ್ಯವಾಗಲಿಲ್ಲ. ನಿಜಕ್ಕೂ ಅಹಲ್ಯಾ ನನ್ನನ್ನ ಕಾಡತೊಡಗಿದಳು.ಕಾಲೇಜಿನ ಅವಧಿ ಮುಗಿದ ಮೇಲೆ ಮೇಡಮ್ ಅನ್ನೇ ಕೇಳಲು ಸ್ಟಾಫ್ ರೂಮಿಗೇ ನಡೆದೆ.
“ಮೇಡಮ್ ನಾನು ಮತ್ತೆ ತೊಂದರೆ ಕೊಡ್ತಾ ಇದ್ದೇನೆ. ಸಾರಿ”
“ಇಲ್ಲ ಹೇಳು ಗೀತಾ…………”
“ನನಗೆ ಮತ್ತೆ ಯಾವ ಹಿನ್ನೆಲಯಲ್ಲಿ ಯೋಚಿಸಲೂ ಸಾದ್ಯವಾಗ್ತಿಲ್ಲ. ಆದರೆ ಈ ಪಾತ್ರಾನ ಅರ್ಥ ಮಾಡಿಕೊಂಡ ನಂತರ ನನಗೆ ಇಷ್ಟವಾದಲ್ಲಿ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಅನ್ಸುತ್ತೆ. ಅದನ್ನ ಅರ್ಥ ಮಾಡಿಸೋಕೆ ನಿಮ್ಮಿಂದ ಮಾತ್ರ ಅದು ಸಾಧ್ಯಾ”
ಮೇಡಂ ಕೈಲಿದ್ದ ಪೆನ್ನನ್ನೇ ನೋಡತೊಡಗಿದರು. ಸ್ವಲ್ಪ ಹೊತ್ತು. …………. ಹಾಗೆ ಕುರ್ಚಿಯಮೇಲೆ ಒರಗಿದವರು ಕಣ್ಣುಮುಚ್ಚಿದರು
“ಗೀತಾ ಅಹಲ್ಯಾ ಅನುಪಮ ಚೆಲುವೆ. ಬ್ರಹ್ಮನ ಮಾನಸ ಪುತ್ರಿ ಅಂತಾರೆ. ಆದರೆ ಅದನ್ನ ಪುರಾಣದ ಹಿನ್ನೆಲೆ ಬಿಟ್ಟು ಬೇರೆಯಾಗಿ ನೋಡಿದರೆ ಅವಳು ಖಂಡಿತಾ ರಾಜ ಪುತ್ರಿನೆ ಆಗಿರುತ್ತಾಳೆ. ಅಂತಹ ಚೆಲುವೆ ಈ ಗೌತಮ ಮುನಿಯ ಕಣ್ನಿಗೆ ಬಿದ್ದಿರ್ತಾಳೆ. ಮುನಿಗಳಾದರೇನು ಅವರೂ ಗಂಡಸರಲ್ಲವೇ. ಚೆಲುವಿನದೆಲ್ಲಾ ತನಗೆ ಬೇಕೆಂಬ ಅಹ್ಂ. ಡಿಮ್ಯಾಂಡ್ ಮಾಡುತ್ತಾನೆ
ಮೊದಲೇ ಮುನಿ . ಮುನಿದರೆ ಶಾಪ ಕೊಟ್ಟಾನೆಂಬ ಭಯದಲ್ಲಿ ರಾಜ ಈ ಅರಗಿಣಿಯನ್ನ ಆ ಸದಾ ಕಾಡಲ್ಲಿ ಅಲೆದಾಡುವ ಈ ಗೌತಮರಿಗೆ ಕೊಡುತ್ತಾನೆ.ಮಗಳನ್ನು ನಿನಗೆ ಇಷ್ಟಾ ಇದೆಯಾ ಇಲ್ಲವೇ? ಅನ್ನೋದು ಊಹೂ ……….. ಕೇಳಿರೊಲ್ಲ……………………”
ಒಂದು ಕ್ಷ್ಗಣ ಮೇಡಮ್‌ನ ವಾಯ್ಸ್ ಅರ್ಥವಾಗದಂತೆ ಬದಲಾಯ್ತು. ಆದರೆ ಅದಕ್ಕಿಂತ ಮೊದಲು ನಾನು ಆ ಕಥೆಯಲ್ಲಿ ತೇಲುತ್ತಿದ್ದೆ.ಅಹಲ್ಯಾಳ ಸ್ಥ್ತಿತಿ ಯನ್ನು ಕಲ್ಪಿಸಿಕೊಳ್ಳತೊಡಗಿದೆ, ಸುಂದರಿ ಸುಕುಮಾರಿ ಈ ಒರಟು ಮುಖದ ಗಡ್ಡದಾರಿ ಜೊತೆ ಸಂಸಾರ ನಡೆಸುವ ಸ್ಥಿತಿಯನ್ನು ನೆನೆಸಿಕೊಂಡು ನಡುಗುವುದನ್ನ ಚಿತ್ರಿಸಿಕೊಳ್ಳತೊಡಗಿದೆ.
ಆಗಲೆ ಮೇಡ್ಂ ಮಾತು ನಿಲ್ಲಿಸಿದ್ದು ಗೊತ್ತಾಯ್ತು
“ಮೇಡಂ……………….”
ಎಚ್ಚರಿಸಿದೆ
“ಹೌದು ಗೀತ ……..ಈ ದೇಶದಲ್ಲಿ …………………….. ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದ್ದಾರೆ ನಿಜ ಆದರೆ ಅವಳ ಭಾವನೆಗಳನ್ನು ಗೌರವಿಸುವುದಿಲ್ಲ, ಅನಿಸಿಕೆಗೆ ಬೆಲೆಯೂ ಇಲ್ಲ. ಇಂತಹ ದೇಶದಲ್ಲಿ ಹುಟ್ಟಿದ್ದ … ಆಹಲ್ಯಾ ಳಾನ್ನು ಒಂದು ಆಶ್ರಮಕ್ಕೆ ತಂದು ಬಿಡುತ್ತಾನೆ ಗೌತಮ. ಕಾಡಲ್ಲಿ ಸದಾ ಇದ್ದು, ಹೆಣ್ನಿನ ನವಿರು ಭಾವನೆಗಳಿಗಿಂತ ತನ್ನ ಅಗತ್ಯಗಳನ್ನು ತಣಿಸಿಕೊಳ್ಳುವುದರಲ್ಲಿಯೇ ತೊಡಗಿರೋ ಆ ಗೌತಮನಿಂದ ಹೆಣ್ಣಿಗೆ ಸಹಜವಾಗಿ ಬೇಕಾದ ಮೆಚ್ಚುಗೆ, ಗೌರವ, ಕಾಳಜಿ, ಪ್ರೇಮ ಇವುಗಳನ್ನ ಹೇಗಾದರೂ ನಿರೀಕ್ಷಿಸಿಕೊಳ್ಳುತ್ತಾಳೆ ಹೇಳು ಆ ಅಹಲ್ಯಾ?
ಒಂಟಿಯಾಗಿ ಇರಬೇಕು ಇದ್ದಕ್ಕಿದ್ದಂತೆಯೇ ಎಲ್ಲೋ ಹೋಗಿಬಿಡುವ ಗಂಡ, ವಾರಾನುಗಟ್ಟಲೇ ಒಬ್ಬಳೇ, ಪುಂಡರಿಂದ ರಕ್ಸಿಸಿಕೊಳ್ಳಬೇಕು,
ಜೊತೆಗೇ ಒಂಟಿತನ…………………….. ನಿನಗೆ ಅರ್ಥವಾಗಲ್ಲ ಗೀತ ಅದು ಬಹಳ ಕ್ರೂರ . ಅದರಲ್ಲೂ ಹೆಣ್ಣಿಗೆ ಮಾತು ತನ್ನ ಭಾವನೆಗಳನ್ನ ದುಗುಡಾನ, ಹತಾಶೆನಾ ಕೋಪಾನ ಪ್ರಕಟಿಸೋ ಸಾಧನ.ಅಂತಹ ಮಾತು ಆವಳಿಗೆ ಸಿಗಲಿಲ್ಲ ಭಾವನೆಗಳನ್ನುಹಂಚಿಕೊಳ್ಳಲು ಅವಳಾದರು ಯಾರ ಮೊರೆ ಹೋಗುತ್ತಾಳೆ ಹೇಳು.
ಕಿವಿಯಾಗಬೇಕಾದ ಗಂಡ ಕಿವಿ ಇದ್ದೂ ಕಿವುಡಾಗಿದ್ದ, ಅಂತಹ ಸುಂದರ ಹೆಣ್ಣನ್ನು ಹೊಗಳಲಾಗದೆ ಬಾಯಿದ್ದ್ಡೂ ಮೂಕನ ಸಮನಾಗಿದ್ದೆ.ಹೆಣ್ಣನ್ನು ಪಂಜರದ ಗಿಣಿಯಂತೆ ಕೂಡಿಹಾಕಿಹೋಗುವುದಷ್ಟೇ ಅಲ್ಲ ಅವಳ ಮಾತಿಗೆ ಕಿವಿಯಾಗಿ,ಪ್ರತಿಮಾತಿಗೆ ಪ್ರೀತಿ ಸುರಿಸಬೇಕು ಎನ್ನುವ ಆ ಹೆಣ್ಣು ಮನಸು ಆ ಗೌತಮನ ಗಂಡು ಬುದ್ದಿಗೆ ಅರ್ಥವಾಗಲೇ ಇಲ್ಲ”
ಮೇಡಮ್ ತುಂಬಾ ಭಾವುಕರಾಗಿದ್ದಂತೆ ಕಂಡು ಬಂದರು.ವಯಸಿನ ಪ್ರಭಾವವೋ ಏನೋ ಸುಸ್ತಾದಂತೆ ಕಂಡು ಬಂದರು. ಕುರ್ಚಿಯಿಂದ ಎದ್ದು ಕಿಟಕಿಯತ್ತ ನೋಡತೊಡಗಿದರು.
“ಅಂತ ಆಹಲ್ಯೆಗೆ , ಚೈತನ್ಯದ ಚಿಲುಮೆಯಂತಹ ಇಂದ್ರ ಬೆಳಕಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆತನೂ ತನ್ನ ಕಾರ್ಯ ಸಾಧ್ಯಕ್ಕಾಗಿಯೇ ಬಂದಿದ್ದರೂ ಅವನಪ್ರೇಮ ಸುಳ್ಳಾಗಿದ್ದರೂ ಅವನ ನಡೆ ನುಡಿಯಲ್ಲಿ ಪ್ರೀತಿಯನ್ನ ತೋರಿಸಿದ, ಅವಳನ್ನು ಹೆಣ್ಣಾಗಿಸಿದ, ಮೆಚ್ದುಗೆಯ ಹೊನಲುಹರಿಸಿದ, ಅಹಲ್ಯೆ ಕರಗಿದಳು…………. ಅವಳ ಸ್ಥಾನದಲ್ಲಿ ಯಾವುದೇ ಸಾಮಾನ್ಯ ಹೆಣ್ಣಿದ್ದರೂ ಹೀಗೆ ಆಗುತ್ತಿತ್ತು………………. ಅಂತಹ ವ್ಯಕ್ತಿಯಿಂದ ಅಲ್ಪ ಸಮಯವಾದರೂ ನೆಮ್ಮಧಿ ಸುಖ ಸಿಗುತ್ತಿತ್ತು……………………. “
ಯಾಕೋ ಮಾತಾಡಿ ಆ ಮಾತಿನ ಓಘವನ್ನು ಕೆಡಿಸಲು ಮನಸು ಬರಲಿಲ್ಲ
“ಆದರೆ ಕೊನೆಗೆ ಗೌತಮನಿಗೆ ಇದು ತಿಳಿದೇ ಹೋಯ್ತು. ಯಾವ ಗಂಡನಾದರೂ ಸುಮ್ಮನೆ ಇರುವುದಿಲ್ಲ ಶಾಪ ಕೊಟ್ಟ. ಕಲ್ಲಾಗಿ ಹೋಗು ಅಂತ ಅದು ಕಥೆಯ ಪ್ರಕಾರ. ನನ್ ಪ್ರಕಾರ ಅಹಲ್ಯೆಯೇ ಕಲ್ಲಿನಂತಾಗಿಹೋದಳು, ಗಂಡನಿಗೆ ಮೋಸ ಮಾಡಿದ ಗಿಲ್ಟ್ ಅವಳನ್ನುಕಾಡತೊಡಗಿದೆ. ಹಾಗಾಗಿ ನಿರ್ಲಿಪ್ತಳಂತೆ ಇದ್ದುಬಿಟ್ಟಿದ್ದಾಳೆ. ಅವಳನ್ನು ಸರಿ ಮಾಡಲು ರಾಮನೇ ಬರಬೇಕಾಯ್ತು”
ನನ್ನೆಡೆಗೆ ತಿರುಗಿದರು.
” ನಿಜ ಹೇಳಲಾ ನಮ್ ಸುತ್ತಾ ಮುತ್ತಾನೆ ಎಷ್ಟೊಂದು ಅಹಲ್ಯೆರಿದ್ದಾರೆ. ಕಲ್ಲಾಗಿ ಹೋಗಿದ್ದಾರೆ. ಆದರೆ ಅವರಿಗೆ ಜೀವ ಕೊಡಲು ರಾಮ ಬರಲೇ ಇಲ್ಲ, ರಾಮ ಬರುವುದೇ ಇಲ್ಲ. ಹಾಗಾಗಿ ಆ ಅಹಲ್ಯೆಯರ ಪ್ರತಿಮೆಗಳು ಸಜೀವಗೊಳ್ಳುತ್ತಲೆ ಇಲ್ಲ……………………. ಅವರೆಲ್ಲಾ ಶಾಪವಿಮೋಚನೆಯಾಗದ ಅಹಲ್ಯೆಯರು. ಅಹಲ್ಯೆಯೇ ನಮ್ಮ ದೇಶ ಹೆಣ್ಣಿನ ಭಾವಾಭಿವ್ಯಕ್ತಿಗೆ ಒಂದು ಪ್ರತಿಮೆಯಾಗಿದ್ದಾಳೆ …………… “ಮೇಡಮ್ ಕಣ್ಣಿನ ಅಂಚಿನಲ್ಲಿ ನೀರು ಜಿನುಗುತ್ತಿತ್ತು.
ಯಾವುದೋ ಪ್ರಪಂಚದಲ್ಲಿ ಮುಳುಗಿದರು ಎಂದೆನಿಸುತ್ತದೆ. ಅವರನ್ನು ಡಿಸ್ಟರ್ಬ್ ಮಾಡಲು ಹೋಗಲಿಲ್ಲ.ಏನೂ ಮಾತಾಡದೆ ಹೊರಗಡೆ ಬಂದೆ. ರೇವತಿಗೆ ಕರೆ ಮಾಡಿದೆ,
“ರೇವತಿ. ಅಹಲ್ಯಾ ಪಾತ್ರಕ್ಕೆ ನಾನು ರೆಡಿ” ಅಂದೆ.
ಮೇಡಮ್‌ನ ಮೊಗ ನೆನೆಸಿಕೊಳ್ಳಲು ಪ್ರಯತ್ನಿಸಿದೆ, ಏಕೋ ಅವರ ಮೊಗ ಶಿಲಾಪ್ರತಿಮೆಯಾದ ಅಹಲ್ಯಾಳಂತೆ ಮೂಡತೊಡಗಿತು…………….

(ಚಿತ್ರ ಕೃಪೆ : mkbhasi.com)

9 ಟಿಪ್ಪಣಿಗಳು Post a comment
  1. ಹೆಚ್ಚಿನೆಲ್ಲಾ ಸ್ತ್ರೀಯರೊಳಗೂ ಓರ್ವ ಅಹಲ್ಯೆ ಕಲ್ಲಾಗಿ ನೆಲೆನಿಂತಿರುತ್ತಾಳೆ ಎಂದನ್ನಬಹುದೇನೋ.

    ಉತ್ತರ
    • ಮೇ 16 2011

      ಹೌದು ಸುರೇಶ್
      ಎಲ್ಲೆಲ್ಲಿ ಗೌತಮನಂತಹ ಪತಿ ಇರುತ್ತಾನೋ ಅಲ್ಲೆಲ್ಲಾ ಅಹಲ್ಯೆಯಂತಹ ಮನಸುಳ್ಳ ಹೆಣ್ಣುಗಳು ಇರುತ್ತಾರೆ

      ಉತ್ತರ
  2. ಮೇ 13 2011

    ತುಂಬಾ ಇಷ್ಟಾ ಆಯ್ತು…ಆದರೆ ನಾ ಕೇಳಿದ ಅಹಲ್ಯ ಕತೆಗೂ ಇದಕ್ಕೂ ವ್ಯತ್ಯಾಸ ಇದೆ ಅನಿಸಿತು….ಅಲ್ಲಿ ಇಂದ್ರ ಗೌತಮನ ವೇಷದಲ್ಲೇ ಬಂದು ಅವಳನ್ನು ಸೇರಲು ತವಕಿಸುತ್ತಾನೆ ಎಂಬುದ್ದಗಿ ಕೇಳಿದ ನೆನಪು…ನಿಜ..ಇಲ್ಲಿ ಸಾವಿರ ಅಹಲ್ಯೆಯರಿದ್ದರೆ…ಪ್ರತಿಯೋಬ್ಬರೋಲೋಬ್ಬಳು ಅಹಲ್ಯೆ..ರಾಮ ಮಾತ್ರ ಬರುತ್ತಿಲ್ಲ…

    ಉತ್ತರ
    • ಅಮಿತಾ ರವಿಕಿರಣ್,
      ಇಂದ್ರ ಒಂದು ರಾತ್ರಿ ಮುಂಜಾನೆಯಾಗುವ ಮೊದಲೇ ಕೋಳಿಯಂತೆ ಕೂಗಿ, ಗೌತಮನನ್ನು ಪ್ರಾಥವಿಧಿಗಾಗಿ ಮನೆಯಿಂದ ಹೊರಹೋಗುವಂತೆ ಮಾಡುತ್ತಾನೆ. ನಂತರ ಗೌತಮನ ವೇಷದಲ್ಲಿ ಕುಠೀರವನ್ನು ಪ್ರವೇಶಿಸುತ್ತಾನೆ. ತನ್ನ ಪತಿ ಅಷ್ಟು ಬೇಗನೇ ಮರಳಿದುದನ್ನು ಕಂಡು ಅಹಲ್ಯಾ ಆಶ್ಚರ್ಯಗೊಳ್ಳುತ್ತಾಳೆ. ನಂತರ, ಮಾರುವೇಷದಲ್ಲಿದ್ದ ಇಂದ್ರನನ್ನು ಆಕೆ ಗುರುತಿಸುತ್ತಾಳಾದರೂ, ಆತನೆಡೆಗೆ ಆಕರ್ಷಿತಳಾಗಿ ಆತನ ಆಹ್ವಾನವನ್ನು ಮನ್ನಿಸಿ ಸಹಕರಿಸುತ್ತಾಳೆ.

      ಉತ್ತರ
      • ಮೇ 16 2011

        ಮೋಹ ಅಂದರೇನು ಅನ್ನೋದಕ್ಕೆ ಕಟು ಸತ್ಯದ ಉತ್ತರ ಕೊಟ್ಟಿದ್ದೀರಿ ಸುರೇಶ ಸರ್.” ಇಬ್ಬರು ಗಂಡಸರ ಮುದ್ದಿನ ಮೋಹಿನಿ”,

        ಉತ್ತರ
        • ಮೇ 16 2011

          ರವಿಯವರೇ
          ಇದು ಸುರೇಶ್‌ರವರಿಗೆ ಕೊಟ್ಟ ಉತ್ತರವಾದರೂ ನನ್ನ ಅನಿಸಿಕೆ ಹೇಳಬೇಕೆನಿಸಿಸಿತು ಹಾಗಾಗಿ ಇಲ್ಲಿ ಹೇಳುತ್ತಿದ್ದೇನೆ
          “ಇಬ್ಬರು ಗಂಡಸರ ಮುದ್ದಿನ ಮೋಹಿನಿ”
          ಇಲ್ಲಿ ಆ ಇಬ್ಬರೂ ಗಂಡಸರಿಗೂ ಆಕೆ ಮುದ್ದಾಗಿದ್ದಳೇ ಎಂಬುದು ಸಾವಿರ ಡಾಲರ್ ಪ್ರಶ್ನೆ
          ಗೌತಮನಿಗೆ ಅಹಲ್ಯೆ ತನ್ನ ಹೆಂಡತಿ ಎಂಬ ದರ್ಪದ ಅಧಿಕಾರ ಆಕೆ ಎಂದೂ ಅಹಲ್ಯಯನ್ನೂ ಮುದ್ದು ಪ್ರೀತಿ ಎಂಬ ಮಾತುಗಳನ್ನು ಹೇಳಲಿಲ್ಲ. ಅದೆಲ್ಲಾ ಇದಿರಲಿ ಈ ರೂಪಸಿಗೆ ಬೇಕಾದ್ದು ಏನು ಎಂಬುದು ಅವನಿತೆ ಅರ್ಥವೇ ಆಗಲಿಲ್ಲ
          ಇನ್ನು ಇಂದ್ರ ಮೊದಲೇ ಕಾಮಿ. ಆತನಿಗೆ ಅಹಲ್ಯೆಯಾದರೇನು ಊರ್ವಶಿಯಾದರೇನು ಆತನಿಗೆ ಬೇಕಿದ್ದುದು ಅಹಲ್ಯೆಯಲ್ಲ ಆದರೆ ಆಕೆಯ ಹೆಣ್ನುತನ ಹಾಗಾಗಿ ಅಹಲ್ಯೆ ಪ್ರೀತಿ ಎಂದು ನಂಬಿಕೊಂಡು ಇಲ್ಲಿಯೂ ಮೋಸ ಹೋಗುತ್ತಾಳೆ…………….
          ಹಾಗಾಗಿ ಆಕೆ ಯಾರಿಗೆ ಮುದ್ದು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಜೊತೆಗೆ ಮೋಹಿನಿ ಎಂಬುದು ಗಂಡಸರ ಹಿಂದೆ ಹೋಗುವ ಆತ್ಮಕ್ಕೆ ಇಡುವಂತಹ ಹೆಸರು . ಆದರೆ ಅಹಲ್ಯೆಯಂತಹ ಹೆಣ್ಣಿಗೆ ಈ ಹೆಸರು ತರವೇ ಎಂಬುದು ಪ್ರಶ್ನೆ?

          ಉತ್ತರ
  3. ಮೇ 17 2011

    ರೂಪ ಮೇಡಂ , ನಿಮ್ಮ ಕತೆಯಿದೆಯಲ್ಲ, ಅದು ಚೆನ್ನಾಗಿದೆ.ಸಂವಾದ ಮತ್ತು ಅದಕ್ಕೆ ಪದಗಳು ಭಾವಕ್ಕೆ ತಕ್ಕ ಹೊಂದಾಣಿಕೆಯಾಗಿದೆ, ವಾಸ್ತವಕ್ಕೆ ಸಾಮಿಪ್ಯ ಕಂಡಿದೆ.ತುಂಬಾ ಸಂತೋಷ.
    ಈಗ ವಿಷಯಕ್ಕೆ ಬರುತ್ತೇನೆ.. ಸುರೇಶ್‍ ಸರ‍್ ಅವರು ಹೇಳಿದ ” ಅಹಲ್ಯೆ”ಯ ಕತೆ ತುಂಬಾ ಚೆನ್ನಾಗಿದೆ.ಅದರಲ್ಲಿ ಒಂದು ಶಬ್ಧ ” ಆಕರ್ಷಣೆ” ಅಂತ ಬರುತ್ತೆ. ನೋಡಿ.ಕನ್ನಡದ ಶಾಸ್ತ್ರೀಯ ಭಾಷೆಯಲ್ಲಿ ಇದಕ್ಕೆ ಏನರ್ಥ? ನಿಮ್ಮ ಸಾವಿರ ಡಾಲರ್ ಪ್ರಶ್ನೆಗೆ ನನ್ನದೊಂದು “ಮಿಲಿಯನ್ ಡಾಲರ‍್ ಪ್ರಶ್ನೆ.ಇದು ಪುರಾಣ. ಅದಕ್ಕೆ ಸಾಕ್ಷಿ ನೀವು ಓದಿದ ಗ್ರಂಥಗಳ ಹಾಳೆಗಳು.ನಿಮ್ಮ ಕತೆಗೆ ವಸ್ತುವಾದ ಕಲ್ಲಾದ ಅಹಲ್ಯೆ, ದರ್ಪದ ಗಂಡ ಗೌತಮ, ಕಾಮುಕ ಅನ್ನುವ ” ನೆಗೆಟೀವ್‍” ರೋಲ್‍ ತೆಗೆದುಕೊಂಡ ಇಂದ್ರ.. ಇವರೆಲ್ಲರೂ ವಾಸ್ತವ ಬದುಕಿನ ನಿಮ್ಮ ಕತೆಯ ಸಮಾಜದಲ್ಲಿ ಮಾತಾಡಿದ್ದು ನಿಜ.ನಿಮ್ಮ ಕಣ್ಣೆದುರಿನಲ್ಲಿ, ನಿಮ್ಮ ಕೈಗೆ ಸಿಗುವ ಸಾಕ್ಷಿಗಳು ನಿಜ ಅಂತ ನಾವು ಒಪ್ಪುತ್ತೇನೆ.ಅಹಲ್ಯೆ ಹೀಗೆ ಇದ್ದಳು, ಗೌತಮ ಹಾಗೇ ಇದ್ದ, ಇಂದ್ರ “ಕಾಮಿ” ಅಂತ ಹೇಗೆ ಸಾಕ್ಷಿ ಹೇಳಿತ್ತೀರಿ ಅಂದ್ರೆ , ಗ್ರಂಥಗಳ ಹಾಳೆಗಳನ್ನು ಮಗುಚುತ್ತೀರಿ.ಆದರೆ,ಅಹಲ್ಯೆಯಂತ ಹೆಣ್ಣಿಗೆ ಈ ಪ್ರಸ್ತುತ ಸಮಾಜದಲ್ಲಿ ಗೌತಮನಂತ ಗಂಡ, ಮಧ್ಯೆ ಇಂದ್ರನಂತ ರೂಪವಂತ ಬಂದು, ಆಕರ್ಷಣೆ ಅನ್ನುವ ನೆಪದಲ್ಲಿ ” ಮೋಹ” ಮಿಳಿತಗೊಂಡರೆ ಅದು ವಿಪರ್ಯಾಸಗಳಲ್ಲಿ ಒಂದು. ಆಸ್ವಾಧನೆಗೂ- ದುರುಪಯೋಗಕ್ಕೂ ವ್ಯೆತ್ಯಾಸವಿದೆ.” ಮೋಹಿನಿ” ಅನ್ನುವ ಶಬ್ಧವೇ ಭಯಂಕರವಾಗಿದೆ. ಅಂದರೆ ಸೌಂದರ್ಯ,ಆಕರ್ಷಣೆ,ಪೈಶಾಚಿಕ ದರ್ಶನ.ಈ ಮೋಹಿನಿ ಹೆಣ್ಣು, ಗಂಡಸರ ಹಿಂದೆಯೇ ಏಕೆ ಹೋಗಬೇಕು?. ಹಾಗಾದರೆ, ವಚನಗಳಲ್ಲಿ ” ಹೆಣ್ಣು ಮಾಯೆ ಎಂಬರು” ಅಂತ ಯಾಕೆ ಸಂದೇಶ ಕೊಟ್ಟರು. ಎಲ್ಲವೂ ಸರಿಯೆ, ಹೆಣ್ಣಿನ ಹಿಂದೆ ಹೋಗುವ ಆತ್ಮಕ್ಕೆ ” ಮೋಹನ” ಅಂತ ಹೆಸರು ಕೊಡಬಹುದಲ್ಲವೇ?. ನೀವು ಓದಿದ ಪ್ರುರಾಣಗಳಲ್ಲಿ ” ಗಂಡು ಮಾಯೆ ಎಂಬರು” ಅಂತ ದಾಖಲೆ ಇಲ್ಲ, ಹೆಂಗಸರ ಹಿಂದೆ ಹೋಗುವ ಆತ್ಮಕ್ಕೆ ” ಮೋಹನ” ಅಂತಾನೂ ಉಲ್ಲ್ಲೇಖವಿಲ್ಲ.ನನ್ನ ಪ್ರಶ್ನೆ ಇಷ್ಟೆ, ಪತಿಯೇ ದೈವ ಅಂತಾ ಪುರಾಣಗಳಲ್ಲಿ ” ಸ್ಲೋಗನ್” ಇದೆ. ಈಗ ಅಹಲ್ಯೆ ಯಾಕೆ ಗಂಡ ಇದ್ದರೂ ಇಂದ್ರನಿಗೆ ಆಕರ್ಷಣೆಗೊಂಡಳು? ಅಲ್ಲಿ ಕೆಲವು ದೌರ್ಬಲ್ಯಗಳು ಇದ್ದವು ಅಂತ ಒಪ್ಪಬಹುದು. ಅಲ್ಲಿ ನಿಜವಾಗಿ ಏನು ನಡೀತು ಅಂತ ನಮಗೇ ಗೊತ್ತಿಲ್ಲ. ಕೇಳಿದರೆ ನೀವು ಪುರಾಣ ಪುಸ್ತಕದ ಮಾಹಿತಿ ಕೊಡುತ್ತೀರಿ.ಬರೆದವರು ನಮ್ಮಂತೆಯೆ ಕತೆ ಸೃಷ್ಟಿಸಿದರೋ ಪುರಾವೆಯೂ ಇಲ್ಲ.
    ಸುರೇಶ್‍ ಸರ್ ಪ್ರಕಾರ ಇಂದ್ರನಿಗೆ ಅಹಲ್ಯೆಯ ಸೌಂದರ್ಯದ ಮೇಲೆ ಮುದ್ದುತನ ಇತ್ತು , ಹೆಂಡತಿ ಅಂತ ಸ್ವೀಕರಿಸಿದ ಮೇಲೆ ಗೌತಮನಿಗೂ ಇತ್ತು.ಮಧ್ಯೆ ಆಕರ್ಷಣೆ ಯಾಕೆ ಬಂತು.? ಅಂದ ಹಾಗೆ ಇಬ್ಬರಿಗೂ ಅವಳ ಸೌಂದರ್ಯದ ಮೇಲೆ ಮುದ್ದುತನದ ಅಧಿಕಾರ ಬಂತು. ಅದಕ್ಕೆ ಅವಕಾಶ ಕೊಟ್ಟವರು ಯಾರು? ಗಂಡ ಇಲ್ಲದ ಸಮಯದಲ್ಲಿ ಯಾರೋ ಪರಿಚಿತ ಇಂದ್ರ ಬಂದ ಅಂದ ಮಾತ್ರಕ್ಕೆ ನೀವೂ ಹೇಳಿದಂತೆ ಪ್ರೀತಿ ಯಾಕೆ ಕೊಡಬೇಕು?ಅದರ ಪರಿಣಾಮವನ್ನು ಎದುರಿಸಲೂ ಅವಳು ಸಿದ್ಧಳಿರುವುವಾಗ ಮೋಸ ಹೋದಳು ಅನ್ನುವ ವಿಪರ್ಯಾಸ ಮಾತೇ ಬರುವುದಿಲ್ಲ.

    ಉತ್ತರ
  4. HARI PRASAD B.S
    ಮೇ 17 2011

    HI folk…neevellaru ahalyee yannu kaaamuka stree antha arthaiskondiddira adu mahaparadhaa…Adu Indrana mohada natakavaste ahalyee inda yavudee tappagilla endu shastra heluttade… illadiddalli Panchakanyaa smararenityaam nalli ahalyee hesaru prastapa vaguttiralilla …yav tayiyu tanna maglu ahalyeyaagali atava yava patiyu tanna hendati ahalye antirali endu smaririsuttirallilla ….idakke sariyada reference na ee blog nalli kalistine…Please be clear ahalyee kaamatrushe inda baluttiralilla stree alla….. dont make fun of hindhu culture

    Regards
    Hari Prasad

    ಉತ್ತರ
    • ಮೇ 18 2011

      ಇದು ಕನ್ನಡದ ಬರಹ .ಕನ್ನಡದ ” ಸ್ಲೇಟಿನಲ್ಲಿ” ಇಂಗ್ಲೀಷ್ ಬಳಪ ಬಳಸಬೇಡಿ. ನೀವು ಇಲ್ಲಿ ಏನು ಹೇಳುತ್ತಿದ್ದಿರೋ ಅದು ಸರಿಯಾಗಿ ಅರ್ಥವಾಗುತ್ತಿಲ್ಲ. ನಾವು ಆಕರ್ಷಣೆ” ಅನ್ನುವ ಕನ್ನಡ ಶಬ್ದ ಪ್ರಯೋಗದ ಬಗ್ಗೆ ಬರೆದದ್ದು.ನಮ್ಮ ಆಚಾರ-ವಿಚಾರ- ಶಿಷ್ಥತೆ ಬಗ್ಗೆ ಜತನದಿಂದ ಪಳಗಿಸಿಕೊಂಡು ಬಂದಿದ್ದೇವೆ. ಅದೇ ರೀತಿ ಅದಕ್ಕೆ ಕಿಂಚಿತ್ತು ನೋವಾದರೆ ” ಪ್ರತಿರೋಧ”ವನ್ನು ವ್ಯಕ್ತಪಡಿಸುವಲ್ಲಿ ನಿಮಗಿಂತ ಮುಂದಿದ್ದೇವೆ.ನಿಮ್ಮ ಸಾಕ್ಷ್ಯಾವನ್ನು ಕಳುಹಿಸಿ.ಅದು ಪುರಾಣವಲ್ಲವೇ? ಬರೆದವರು ನಿಮಗೆ ಪರಿಚಯವಿದೆಯೇ? ಈ ಜಗತ್ತಿನಲ್ಲಿ ಎಷ್ಟು ಪುರಾಣಗಳು,ಇತಿಹಾಸಗಳು ಸತ್ಯವನ್ನು ಹೇಳಿವೆ? ಅವು ಸತ್ಯವೆಂದು ನೀವು ವಾದಿಸುವುದಾದರೆ ಪುರಾಣ ಗ್ರಂಥಗಳ ಜೊತೆಗೆ ಕಣ್ಣಿಗೆ ಕಾಣುವ ಪುರಾವೆ ತೋರಿಸಿ.ಪುರಾಣ ಗ್ರಂಥಗಳ ಸಾರ, ಅದರ ಗೌರವ ಪೂಜ್ಯತೆ ಬಗ್ಗೆ ನಿಮ್ಮಷ್ಟೇ ನಮಗೂ ಇದೆ.

      ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments