Skip to content

ಮೇ 14, 2011

2

ಮನದ ಕದವನು ತೆರೆದು….

by ನಿಲುಮೆ
-ರವಿ ಮೂರ್ನಾಡ್‍

ಎಲ್ಲ ಉದ್ಯೋಗಗಳಿಗೂ “ಡಿಗ್ರಿ” ,”ಸರ್ಟಿಫಿಕೇಟ್‍”ಗಳ ಅಗತ್ಯವಿದೆ. ಒಂದು ಕವಿತೆ,ಕಥೆ,ಲೇಖನ,ಕಾದಂಬರಿ ಬರೆಯಲು ಇದರ ಅಗತ್ಯವಿಲ್ಲ.ಯಾವುದೇ ಪಠ್ಯ ಪುಸ್ತಕಗಳ ಅಗತ್ಯವೂ ಇಲ್ಲ.ಒಬ್ಬ ಬರಹಗಾರ ಎಲ್ಲೂ ಒಂದು ಕೃತಿಯನ್ನು ಓದಿ,ಆಸಕ್ತಿ ಬೆಳಸಿ ಅದರಂತೆ ಬರೆಯಬೇಕೆನ್ನುವ ಹಂಬಲದಿಂದ ಸಾಹಿತ್ಯ ಪ್ರಪಂಚವನ್ನ ಪ್ರವೇಶಿಸುತ್ತಾನೆ.ಯಾವುದೇ ಆದಾಯ, ಬಡ್ತಿ, ಮಾನ್ಯತೆ ಈ ಒಂದು ಪ್ರಪಂಚದ ” ಪ್ರಾಸ್ಪೆಕ್ಟ್”ನಲ್ಲಿ  ಇಲ್ಲ.
 ಅನುಭವಗಳಿಂದ ಒಬ್ಬ ವ್ಯಕ್ತಿ ಬರವಣಿಗೆಯನ್ನ ಸಿದ್ಧಿಸುತ್ತಾನೆ ಎನ್ನುವ ಸಾಮಾನ್ಯ ಮಾತುಗಳು ಕೇಳಿ ಬರುತ್ತವೆ.ಆದರೆ,ಅತೀ ವಿಚಿತ್ರವೂ,ಅದ್ಭುತವೂ ಆದ ಅನುಭವಗಳಿರುವ ವ್ಯಕ್ತಿಗೆ ಯಾಕೆ ಬರವಣಿಗೆ ಸಾಧ್ಯವಾಗುವುದಿಲ್ಲ?ಒಂದು ಸಾಮಾನ್ಯ ಅನುಭವವಿರುವ ಒಬ್ಬ ವ್ಯಕಿ ಹೇಗೆ ಬರಹಗಾರನಾಗುತ್ತಾನೆ? ಅದೇ ತೀರಾ ಸಾಮಾನ್ಯವಾದ ಅನುಭವವಿರುವ ವ್ಯಕ್ತಿ ಯಾಕೆ ಬರಹಗಾರನಾಗುವುದಿಲ್ಲ?
ಒಂದು ಸಾದಾರಣ ವಸ್ತು ವಿಷಯದಲ್ಲೂ ಕೆಲವು ಒಳನೋಟಗಳನ್ನು ಕಂಡುಕೊಳ್ಳುವ ವ್ಯಕ್ತಿಗೆ ಬರವಣಿಗೆ ಸಾಧ್ಯವಾಗುತ್ತದೆ.ಈ ಸಮಾಜದಲ್ಲಿ ಪ್ರತಿಯೊಂದು ಘಟನೆ ಧಾರುಣವೊ, ಭೀಕರವೂ ಆಗಿದ್ದಲ್ಲಿ,ಒಬ್ಬೊಬ್ಬ ವ್ಯಕ್ತಿ ಅದಕ್ಕೆ ಸಾಕ್ಷಿಯಗಿ ತನ್ನದೇ ಆದ ಮಾನವೀಯ ಸಂವೇದನೆಗಳನ್ನು ಬೆಳೆಸಿಕೊಂಡಿರುತ್ತಾನೆ.ಆದರೆ, ಶೀಘ್ರ ಗತಿಯ ಬದುಕಿನ ಜಂಜಡದಲ್ಲಿ- ಗೊಂದಲದಲ್ಲಿ ಈ ಸವೇದನೆಗಳನ್ನು ಹುಟ್ಟು ಹಾಕಬಹುದಾದ ಸೂಕ್ಷ್ಮ ಭಾವನೆಗಳು ಕ್ಷಣದಲ್ಲಿ  ಮಾಯಾವಾಗಬಹುದು.
ನಮ್ಮ ಬದುಕು ಅಸ್ತವ್ಯಸ್ತತೆಯಿಂದ ಕೂಡಿದೆ ಅಂತ ಒಬ್ಬ ಬರಹಗಾರ ಯಾವಾಗ ಕಂಡುಕೂಳ್ಳುತ್ತಾನೋ ಆಗ ಅವನ ಬರವಣಿಗೆ ಸೃಜನಶೀಲವಾಗುತ್ತದೆ. ಈ ಸೃಜನಶೀನಲತೆಯ ಅಸ್ತವ್ಯಸ್ತತೆಗಳು ಮನಸ್ಸಿನಲ್ಲಿ ಹುಟ್ಟಿ, ಸಂವೇದನೆಗಳು ಭಾರವಾಗಿ ತಡೆಯೂಡ್ಡುತ್ತವೆ. ಆಗ ಬರಹಗಾರ, ತನ್ನ ಮನಸ್ಸಿನಂತೆ ಬದುಕು ಕೂಡ ಅಸ್ತವ್ಯಸ್ತತೆಯಿಂದ ಕೂಡಿದೆ ಅಂತ ಕಂಡುಕೊಳ್ಳುತ್ತಾನೆ.
ಬರಹ ನಿಜವಾದಾಗ,ಬದುಕು ನಿಜವಾಗುತ್ತದೆ.ಬರಹಗಳು ಕೇವಲ ತಮಾಷೆಗಾಗಿ ಕಟ್ಟಿದ ಪದಗಳಲ್ಲ,ಒಂದು ಕ್ಷಣದಲ್ಲಿ ತೇಲಿ ಬಿಡುವಂತದ್ದೂ ಅಲ್ಲ,ಅಥವಾ ಅವು  ನಿಮ್ಮ ಮಗು ಆಟವಾಡುವ ಆಟದ ಸಾಮಾನುಗಳೂ ಅಲ್ಲ. ಓರ್ವ ಬರಹಗಾರ,ಸಮಾಜದ ಚಿತ್ರಣವನ್ನೋ,ಮನದ ತಳಮಳಗಳನ್ನೋ,ಹಪಹಪಿಯನ್ನೋ ತನ್ನದೇ ಆದ ಶೈಲಿಯಲ್ಲಿ ತಿಳಿಸಲು ಪ್ರಯತ್ನಿಸುತ್ತಾನೆ,ನಿಮಗೆ ಒಪ್ಪಿಸುತ್ತಾನೆ. ನಿಮ್ಮ ಮನದ-ಮನೆಯ ಅಂತರಂಗವನ್ನು ಬಣ್ಣದ ರಂಗೋಲಿಯಿಂದ ವಿವರಿಸಲು ಉದ್ಯುಕ್ತನಾಗುತ್ತಾನೆ.ಅದು ಅವನ ಜೀವನವಾಗಿರುತ್ತವೆ.
ಅಸ್ಯವ್ಯಸ್ತತೆಗಳು ಪ್ರಕೃತಿಯ ನಿಯಮ.ಇದಕ್ಕೊಂದು ನೆಲೆ ಕಲ್ಪಿಸಬೇಕೆನ್ನುವುದು ನಮ್ಮ ಕನಸು.ಅಸ್ತವ್ಯಸ್ತ ಬದುಕಿನಂತೆಯೇ ನಮ್ಮ ಮನಸ್ಸು.ಅದಕ್ಕೊಂದು ರೂಪ ಕೊಡಲು ಪ್ರಯತ್ನಿಸುವುದೇ ಸೃಜನಶೀಲ ಬರಹಗಾರನ ಬರವಣಿಗೆಯ ಆರಂಭ. ಒಂದು ವಿಧದ ಮೌನ ಧ್ಯಾನ.
ಕೆಲವರಿಗೆ ಅನ್ನಿಸಬಹುದು ಕಂಡದ್ದರಲ್ಲಿ ಕವಿತೆಯಿದೆ,ಕೇಳುವುದರಲ್ಲಿ ಕತೆಯಿದೆ  ಅಂತ .ವಸ್ತುಗಳಿಗಾಗಿ ಹುಡುಕುತ್ತಿರುವಾಗ, ವಸ್ತುಗಳೇ ನಮ್ಮನ್ನು ಹುಡುಕುತ್ತಿರುತ್ತವೆ.ಇದು ಓರ್ವ ಸೃಜನಶೀಲ ಬರಹಗಾರ ಮಾತ್ರ ಕಂಡುಕೊಳ್ಳುತ್ತಾನೆ. ಅವುಗಳನ್ನು ಸ್ವಾಗತಿಸುವುದು ಅವನ ಧರ್ಮ…! ಮನಸ್ಸಿನ ಕಿಟಕಿಗಳ ಗುರುತು  ಹಿಡಿದು ಒಳ ಬರುತ್ತವೆ,ಇದೊಂದು ಮೌನ ಪ್ರೇರಣೆ..!.ಬರಹದ ಮೂಲಕ ಕೃತಜ್ಞತೆ ಹೇಳುತ್ತೇವೆ.
ಕುವೆಂಪು,ಬೇಂದ್ರೆ,ಕಾರಂತ ಮೊದಲಾದವರು ಬರೆದ ಕಟ್ಟುಕತೆಗಳೇ ಆಗಲಿ ಮಹಾಸತ್ಯಗಳಾಗಿ ನೆಲೆ ನಿಂತಿರುವುದನ್ನು ನೋಡಿದ್ದೇವೆ.ತಲೆಮಾರುಗಳಿಂದ ನಡೆದು ಬಂದ ಬೇತಾಳನ ಕತೆಗಳು,ಅಜ್ಜಿಯ ಕತೆಗಳು ಇಂದಿಗೂ ಕೂಡ ಜೀವಂತವಾಗಿವೆ.ವಿಜ್ಞಾನ ಶಾಸ್ತ್ರ, ರಾಜಕೀಯ ಮೀಮಾಂಸೆ,ತತ್ತ್ವಶಾಸ್ತ್ರಗಳು,ಕಟುಸತ್ಯಗಳೆಂದು ನಾವು ಓದಿದ್ದೇವೆ.ಆದರೆ ಆಧುನಿಕ ಯಾಂತ್ರಿಕ ಬದುಕಿನ ಹೊಸ ಅನ್ವೇಷಣೆಯಲ್ಲಿ ಅರ್ಧ ಸತ್ಯಗಳಾಗಿ  ಉಳಿದು ಹೋಗುತ್ತಿವೆ.ಅನುಚಿತವೆಂದೂ,ಅನೈತಿಕವೆಂದು ಸಾರಿದ ಸಿದ್ಧಾಂತಗಳಿಂದು,ಅವುಗಳ “ಲಕ್ಷ್ಮಣ ರೇಖೆ”ಯನ್ನು ದಾಟಿ ಹೊರ ಬಂದಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೂಕ್ಷ್ಮ ಸಂವೇದನೆಗಳನ್ನು ಕಲಾತ್ಮಕ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರು ಹಲವರು.ಇದಕ್ಕೆ ತಮ್ಮ ಜೀವನಾನುಭವವನ್ನೇ ಬಳಸಿಕೊಂಡವರೂ ಇದ್ದಾರೆ.ನಮ್ಮ ಸಮಾಜದ ಅನೇಕ ಘಟನೆಗಳು,ಗಂಡು-ಹೆಣ್ಣುಗಳು,ಅಸಂಖ್ಯಾತ ಜೀವಿಗಳು,ಅವರ ವಸ್ತು ವಿಷಯಗಳಾಗಿ ಬರಹದ ಮೂಲಕ ಬದುಕು ಪಡೆದಿವೆ.ಕತೆ-ಕವಿತೆ,ಲೇಖನದಲ್ಲಿ ಅವರು ಮಾತನಾಡುತ್ತಾರೆ.ಅವರು ಜೀವಂತವಾಗುತ್ತಾರೆ.
ಮನುಷ್ಯಾವಸ್ತೆಗಳನ್ನ ಬರಹದಲ್ಲಿ  ಜೀವಂತವಾಗಿಸಲು ಸಾಧ್ಯವಿದೆ.ಅದೇ ರೀತಿ ಸತ್ತು ಹೋದವರನ್ನು ಬರಹದಲ್ಲಿ ಕಂಡುಕೊಳ್ಳಲು ಸಾಧ್ಯವಿದೆ.ನಿಮ್ಮ ಬರಹದ ಪದಗಳು ನಿಮ್ಮ ಕಾಲದ ನಂತರವೂ ಮಾತನಾಡುತ್ತವೆ.ಅದಕ್ಕೆ ಸಾಕ್ಷಿಗಳೂ ನಮ್ಮ ಮುಂದಿದೆ.
ಚಿತ್ರ ಕೃಪೆ : ಅಂತರ್ಜಾಲ
Advertisements
Read more from ಲೇಖನಗಳು
2 ಟಿಪ್ಪಣಿಗಳು Post a comment
 1. ಮೇ 19 2011

  >>ನಮ್ಮ ಬದುಕು ಅಸ್ತವ್ಯಸ್ತತೆಯಿಂದ ಕೂಡಿದೆ ಅಂತ ಒಬ್ಬ ಬರಹಗಾರ ಯಾವಾಗ ಕಂಡುಕೂಳ್ಳುತ್ತಾನೋ ಆಗ ಅವನ ಬರವಣಿಗೆ ಸೃಜನಶೀಲವಾಗುತ್ತದೆ.<<

  ಅ೦ದರೆ ವಾಕ್ಯಾರ್ಥವಾಗಲೀ ಲೇಖಕರ ಅರ್ಥವಾಗಲೀ.. ಒಬ್ಬ ಬರಹಗಾರ ಕ೦ಡುಕೊಳ್ಳುವುದೆ೦ದರೆ ಸ್ವ೦ತ ಅನುಭವಿಸುವುದೆ೦ದೇ ಅಥವಾ ಕೇವಲ ಮಾನಸಿಕವಾಗಿ ತಿಳಿದುಕೊಳ್ಳುವುದೆ೦ದೇ ( ಓದು,ಕ್ಷೇತ್ರ ಕಾರ್ಯ ಮು೦ತಾದುವುಗಳಿ೦ದ)?

  ಯಾವ ರೀತಿಯಲ್ಲಿ ಹೋದರೂ ಬದುಕಿನ ಅಸ್ತವ್ಯಸ್ತತೆಗಳ ಬಗ್ಗೆ ಅರಿತವರೆಲ್ಲಾ ಯಾ ಅನುಭವಿಸದವರೆಲ್ಲಾ ಸೃಜನ ಶೀಲ ಬರಹಗಾರರಾಗಲು ಸಾಧ್ಯವೇ ಇಲ್ಲ! ಮೇಲಿನ ಸಾಲಿನ ಅರ್ಥ ಬರಹಗಾರ ಒಬ್ಬ ಅನುಭವಿಯಾಗಿರಬೇಕೆ೦ಬ ಅರ್ಥ ನೀಡುತ್ತದೆ! ಹಾಗಾದರೆ ಅನುಭವಿಗಳೆಲ್ಲರೂ ಸೃಜನಶೀಲ ಬರಹಗಾರರೋ? ಎ೦ಬ ಪ್ರಶ್ನೆ ಏಳುತ್ತದೆ!

  ಸ್ವತ: ಅನುಭವಿಸದಿದ್ದವನೂ ತಾನೇ ಅನುಭವಿಸಿದವನ೦ತೆ ಬರೆಯಬಲ್ಲ.. ಬರೆಯುವ ಕಲೆಯೊ೦ದಿದ್ದರೆ!ಬರಹಗಾರನಿಗೆ ಸ್ವಾನುಭವಗಳು ಅವನ ಬರವಣಿಗೆಯ ಕಲೆಗೆ ಪೂರಕ ಅಷ್ಟೇ! ಭಾವನೆಗಳು ಹಾಗೂ ಭಾವನೆಗಳನ್ನು ಸೂಕ್ತವಾಗಿ ವ್ಯಕ್ತ ಪಡಿಸುವುದರ ಬಗ್ಗೆ ಅರಿವಿದ್ದರೆ ಸಾಕಷ್ಟೇ.. ಒಬ್ಬ ಬರಹಗಾರನ ಸ್ವಾನುಭವಕ್ಕೂ ಆತನ ಬರವಣಿಗೆಗೂ ಯಾವುದೇ ಸ೦ಬ೦ಧವಿರುವುದಿಲ್ಲ.. ಆದರೆ ಸ್ವಾನುಭವದ ಮಾತುಗಳಲ್ಲಿ ಒಳ್ಳೆಯ ತುಡಿತವಿರುತ್ತದೆ ಹಾಗೆಯೇ ಅದಕ್ಕೊ೦ದುಓದುಗರನ್ನು ಅಪ್ರೋಚ್ ಮಾಡುವ ಶಕ್ತಿ ಇರುತ್ತದೆ ಎ೦ದಷ್ಟೇ ಹೇಳಬಲ್ಲೆ…
  ಒಳ್ಳೆಯ ಲೇಖನ.. ಶೀರ್ಷಿಕೆ ಸೊಗಸಾಗಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಉತ್ತರ
  • Ravi Murnad,
   ಮೇ 19 2011

   ನಿಮ್ಮ ಮಾತು ನಿಜ .ಓದುಗರನ್ನು ಅಪ್ರೋಚ್ ಮಾಡುವ ಶಕ್ತಿಗೆ ಪ್ರಯತ್ನ ಪಡಬೇಕೆನ್ನುವುದೇ ಉದ್ದೇಶ. ಅದೇ ನನ್ನ ಮಾತು ಕೂಡ.ಬರೆಯವ ಕಲೆ ಒಂದಿದ್ದರೆ ಅವನು ಎಲ್ಲವೂ ಅಲ್ಲ.ನಿಮ್ಮ ಬರಹ ಪತ್ರಿಕೆಯಲ್ಲಿ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಇಂದು ಪ್ರಕಟವಾಗಿ ನಾಳೆಗೆ ಸಾಯುವಂತಿದ್ದರೆ ನಿಮ್ಮ ಕಲೆ,ಸಮಯ ಮತ್ತು ವಿಚಾರಗಳ ಬೆಲೆ ಏನು.?.ಆದರೆ ಎಲ್ಲಾರೂ ಸೃಜನಶೀಲ ಮಟ್ಟಕ್ಕೆ ಬರಲು ಸಾಧ್ಯವಿಲ್ಲ.ಅದರ ಬಗ್ಗೆ ನನ್ನ ಮಾತು ಬಂದಿದೆ. ಒಂದು ಉದಾಹರಣೆಯಂತೆ ನೀವು ತೊಡಗಿಸಿಕೊಂಡಿರುವ ಬರಹ ಪ್ರಪಂಚದಲ್ಲಿ ನಿಮಗೆ ಮತ್ತೆ ಮತ್ತೆ ಓದುವಂತೆ ಮಾಡುವ ಬರಹಗಳಲ್ಲಿ ” ಶಕ್ತಿ” ತುಂಬಿರುತ್ತವೆ ಅಂತ ಅರ್ಥ್ಯಯಿಸುತ್ತೇನೆ.ಬರಹಗಾರರೆಲ್ಲರು ಅಸ್ತವ್ಯಸ್ತೆತೆಯಿಂದ ಕೊಡಿದ ಅನುಭವಗಳನ್ನು ಪಡೆಯಬೇಕೆಂದು ನಾನು ಒತ್ತಡ ಹೇರುತ್ತಿಲ್ಲ.ನಿಮ್ಮ ಬರಹ ಹಾಗೆ ಇರಬೇಕೆಂದರೆ ಪ್ರಯತ್ನಿಸಿ ನೋಡಿ.ಆದರೆ, ತುಂಬಾ ಕಷ್ಟ. “ಕಲೆ” ಅನ್ನುವುದು ಬೇರೆಯವರ ಅನುಭವಗಳನ್ನೂ ಬಣ್ಣ ಹಚ್ಚಿ ವ್ಯಭವೀಕರಿಸಿದಷ್ಟು ಸುಲಭವಲ್ಲ ತನ್ನೊಳಗಿನ ನಿಜತ್ವವನ್ನು ಜಗತ್ತಿಗೆ ತೋರಿಸುವುದು.
   ನಿಮ್ಮ ಪ್ರತಿಕ್ರಿಯೆ ಓದಿದಾಗ ಒಬ್ಬ ಬರಹಗಾರ ಏಕೆ ಜಗತ್ತಿಗೆ ಬರುತ್ತಾನೆ ಅನ್ನುವುದು ಪ್ರಶ್ನೆ ಮೂಡಿತು.” ಸೋಶಿಯಲ್ ಐಡೆಂಟೆಟಿ”ಯ ನೆಪದಲ್ಲಿ ಮೆಚ್ಚುಸಿಕೊಳ್ಳುವಿಕೆಗಾಗಿಯೋ? ತುಕ್ಕು ಹಿಡಿದ ಸಮಾಜಕ್ಕೆ ಬದಲಾವಣೆ ತರಬೇಕೆಂದೋ ? ಮನಸ್ಸಿನ ಭಾರವನ್ನ ಪದಗಳಲ್ಲಿ ಹರವಿ ನೆಮ್ಮದಿಯಾಗಿ ಊಟ ,ಮಾತು,ಪ್ರೀತಿ, ನಿದ್ದೆಗೆ ಜಾರುವ ವ್ಯಾಯಾಮಕ್ಕೋ? , ಸಂಕೀರ್ಣ ಸಮಾಜದಲ್ಲಿ ತೆರೆದು ನಾನು ನಿಮ್ಮೊಂದಿಗೆ ಮಾತಾಡಿದ್ದೇನೆ.ಅಸ್ತವ್ಯಸ್ತತೆಯಿಂದ ಭಾರವಾದ ಮನಸ್ಸು ಎಲ್ಲಾರಿಗೂ ಲಭ್ಯವಾಗುತ್ತದೆ ಅಂತ ನಾನು ಹೇಳಿಲ್ಲ.ಅದನ್ನು ಕಂಡುಕೂಳ್ಳಲು ಪ್ರಯತ್ನಿಸುವವನು ಸೃಜನಶೀಲ ಬರಹಗಾರನಾಗುವ ಸಾಧ್ಯತೆಯ ಬಗ್ಗೆ ಹೇಳುತ್ತಿದ್ದೇನೆ.ಅಂದ ಮಾತ್ರಕ್ಕೆ ಬರಹದ ಕಲೆಯಿಂದ ಬೇರೊಬ್ಬರ ಧಾರುಣ ಅನುಭವ ನಿಮ್ಮ ಅನುಭವವಾಗಿಸಲು ಸಾಧ್ಯವಿದ್ದಲ್ಲಿ ನೀವು ವಿಶಾಲ ಹೃದಯಿ ಅಂತ ಒಪ್ಪಿಕೊಳ್ಳುತ್ತದೆ ಸಮಾಜ. ಅದು ನಿಮ್ಮ ಬರಹಗಳಿಂದ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Note: HTML is allowed. Your email address will never be published.

Subscribe to comments