ವಿಷಯದ ವಿವರಗಳಿಗೆ ದಾಟಿರಿ

ಮೇ 16, 2011

13

ಒಸಾಮ ಸತ್ತ… ಭಾರತ ಬದುಕಿದೆಯಾ!?

by ರಾಕೇಶ್ ಶೆಟ್ಟಿ

– ರಾಕೇಶ್ ಶೆಟ್ಟಿ

ತನ್ನ ಮಕ್ಕಳಿಗೆ ಮಾತ್ರ ’ಜಿಹಾದ್’ನೆಡೆಗೆ ಬರಬೇಡಿ ನನ್ನಾಣೆ ಅಂತೇಳಿ, ಕಂಡೋರ ಮಕ್ಕಳ ಬೆನ್ನ ಹಿಂದೆ ಅವಿತು ಕುಳಿತು ಮನುಶ್ಯರನ್ನ ಹುಳಗಳಿಗಿಂತ ಕಡೆಯದಾಗಿ ಸಾಯಿಸಿದ ಒಸಾಮ ಅನ್ನುವ ಸೈತಾನನೊಬ್ಬ ಸತ್ತರೆ ನಾವ್ಯಾಕೆ ಕುಣಿಯಬಾರದು!? ಕುಣಿದರೇನು ತಪ್ಪು?ಇನ್ನೇನು ಅಳಬೇಕಿತ್ತಾ?

ಒಸಾಮ ಸತ್ತರೆ ನಾವ್ಯಕೆ ಕುಣಿಯಬೇಕು? ಅನ್ನುವ ಬರಹವನ್ನೋದಿದೆ.ಅದರಲ್ಲಿ ’ದೇಶ ಪ್ರೇಮ’ ಅನ್ನುವ ಪದದ ಬಗ್ಗೆಯೂ ಉಡಾಫ಼ೆಯಿದೆ.ದೇಶಪ್ರೇಮ ಅನ್ನುವುದನ್ನ ತಾವು ವಿರೋಧಿಸುವ ಪಕ್ಷ/ಸಂಘಟನೆಯ ಗುತ್ತಿಗೆ ಕೊಡಲಾಗಿದೆಯೆಂಬಂತೆ,ಅವರು ಮಾತ್ರವೇ ದೇಶ ಪ್ರೇಮಿಗಳು ಅಂದುಕೊಂಡು,ಅವರ ಮೇಲಿನ ಅಸಹನೆಯನ್ನ ’ದೇಶ ಪ್ರೇಮಿ’ಗಳು ಅನ್ನುವ ಪದಕ್ಕೆ ಜೋಡಿಸಿ ಮಾತನಾಡಿದ್ದಾರೆ ಲೇಖಕರು.

ಕೆಲವು ಸಿದ್ದಾಂತ ಪ್ರೇಮಿಗಳಿಗೆ ’ದೇಶ ಪ್ರೇಮ’ ಅನ್ನುವ ಅಮೂರ್ತ ರೂಪವನ್ನ ಹೀಯಾಳಿಸುವುದರಿಂದ ತಾವೇನೋ ’ಡಿಫ಼ರೆಂಟು’ ಅನ್ನಿಸಿಕೊಳ್ಳುವ ಹಂಬಲ! ಸದಾ ಕಾಲ ಲೆಕ್ಕಚಾರದ ಸಿದ್ಧಾಂತಗಳಲ್ಲಿ ಮಗ್ನರಾಗಿ ತಮ್ಮ ಲೆಕ್ಕಕ್ಕೆ ಉತ್ತರ ಸಿಕ್ಕರೂ ಅಕ್ಕ ಪಕ್ಕ ನೋಡದೆ ಮತ್ತದೇ ಪ್ರಶ್ನೆಯ ಸೂತ್ರ ಬಿಡಿಸಲು ಹೋರಾಡುವಂತೆ ಕಾಣುವ ಈ ’ಸಿದ್ಧಾಂತ ಪ್ರೇಮಿ’ಗಳ ಹೊಟ್ಟೆ ತಣ್ಣಗಿರಲಿ ಅಂತ ಎಲ್ಲ ದೇಶ ಪ್ರೇಮಿಗಳ (ವಿ.ಸೂ : ಆ ಪಕ್ಷ/ಸಂಘಟನೆಯ ಪರವಾಗಿ ಅಲ್ಲ) ಹಾರೈಸುತ್ತೇನೆ.

ಇರಲಿ ವಿಷಯವನ್ನ ವ್ಯಕ್ತಿಯ ಮೇಲೆ ಕೇಂದ್ರೀಕರಿಸಿ ಮಾತನಾಡುವುದಕ್ಕಿಂತ,ಒಸಾಮ ಅನ್ನೋ ಸೈತಾನ,ಅಮೇರಿಕಾ ಅನ್ನೋ ವ್ಯಾಪಾರಿ,ಪಾಕಿಸ್ತಾನ ಅನ್ನುವ ಭಯೋತ್ಪಾದಕ,ಚೈನ ಅನ್ನೋ ನಂಬಲನರ್ಹ ಮತ್ತು ಭಾರತ ಅನ್ನುವ ವೋಟ್ ಬ್ಯಾಂಕ್ ದೇಶಗಳ ಬಗ್ಗೆ ಮಾತನಾಡುವುದೇ ಮೇಲು.ಅಲ್ವಾ?

ಅತ್ತ, ದಾವೂದ್ ಇಬ್ರಾಹಿಂ ಕರಾಚಿ ಬಿಟ್ಟು ಅದ್ಯಾವುದೋ ಗುಡ್ಡವೇರಿ ಕುಳಿತನಂತೆ! ಇಲ್ಲ ಇಲ್ಲ ದುಬೈನಲ್ಲಿ ತಲೆ ಮರೆಸಿಕೊಂಡಿದ್ದಾನಂತೆ! ಮಗನ ಮದುವೆಯನ್ನ ಎಲ್ಲಿ ಮಾಡುವುದು ಅಂತ ತಲೆ ಕೆಡಿಸಿಕೊಂಡಿದ್ದಾನಂತೆ…! ಇತ್ತ,ಲಾಡೆನ್ ಅನ್ನೋ ಸೈತಾನ ಸತ್ತು ಸಮುದ್ರ ಪಾಲಾದ.ಅದ್ಸರಿ ಇಷ್ಟೆಲ್ಲ ಆಗುವಾಗ ಭಾರತ ಅನ್ನುವ ಶಾಂತ(!?) ದೇಶ ಬದುಕಿದೆಯಾ!?

ಪಾಕಿಗಳ ನೆಲದಲ್ಲೇ ಅವರ ಅರಿವಿಗೂ ಬಾರದಂತೆ ಒಸಾಮನನ್ನ ಅಮೇರಿಕಾ ಕಮಾಂಡೋಗಳು ಬಲಿ ಹಾಕಿದ ಮೇಲೆ,ಭಾರತವೂ ಏಕೆ ದಾವೂದ್,ಹಫೀಜ್,ಮೌಲಾನ ಅಝರ್ ಅವರನ್ನ ಬಲಿ ಹಾಕಬಾರದು ಅನ್ನುವ ಮಾತುಗಳೆದ್ದಿವೆ.ತಾವು ಕೂತ ಕುರ್ಚಿಯ ಕೆಳಗೆ ಬಾಂಬ್ ಇಡಲು ಬಂದಿದ್ದ ಅಫ಼್ಜಲ್ ಗುರು ಅನ್ನುವ ಹುಳವನ್ನ ಹತ್ತು ವರ್ಷಗಳಿಂದ ಮತ್ತು ಇಡಿ ದೇಶದ ಭದ್ರತೆಗೆ ಕ್ಯಾಕರಿಸಿ ಉಗಿದಂತಿದ್ದ ಮುಂಬೈ ದಾಳಿಯ ಕಸಬ್ ಅನ್ನುವ ಕಳ್ಳನನ್ನ ಸಾಕಿಕೊಂಡು ಬಂದಿರುವ, ಹಾಗೇಯೆ ಈ ಮೇಲಿನ ಮೂರು ಭಯೋತ್ಪಾದಕರು ಪಾಕಿಸ್ತಾನದಲ್ಲೇ ಇದ್ದಾರೆ ಅಂತ ಯಾವತ್ತಿನಿಂದಲೂ ರೋದಿಸುತ್ತಲೇ ಬಂದಿರುವ ಭಾರತ ಅನ್ನೋ ವೋಟ್ ಬ್ಯಾಂಕ್ ರಾಜಕೀಯದ ದೇಶಕ್ಕೆ ಹೆದರಿ ಓಡಿ ಹೋದ ಆ ದಾವೂದ್ ಎಂತ ದಡ್ಡ ಅಲ್ವಾ?

ಅರ್ಧ ನಿದ್ದೆಯಿಂದೆದ್ದಂತೆ ಭಾರತ ಸರ್ಕಾರ ಮೊನ್ನೆ ಮೊನ್ನೆ ಪಾಕಿಸ್ತಾನದಲ್ಲಿರುವ ಭಾರತಕ್ಕೆ ಬೇಕಾದ ೫೦ ಭಯೋತ್ಪಾದಕರ ಪಟ್ಟಿ ಬಿಡುಗಡೆ ಮಾಡಿತು.ಪಾಕ್ ಯಥಾ ಪ್ರಕಾರ ಅವ್ರ್ಯಾರು ನಮ್ಮತ್ರ ಇಲ್ಲ ನೀವು ತೆಪ್ಪಗಿರಿ ಅಂತ ಬಡಬಡಿಸಿತು.

ಒಸಾಮ ಸತ್ತ ಸುದ್ದಿ ಬಂದೊಡನೆ ಹರಿದಾಡಿದ ಸುದ್ದಿಗಳಲ್ಲಿ,ಒಸಾಮನ ಸೃಷ್ಟಿ ಮಾಡಿದ ಅಮೇರಿಕಾದ ಇಬ್ಬಗೆಯ ಧೋರಣೆಯ ಬಗ್ಗೆ ಹಲವಾರು ಜನ ಬರೆದರು.ನಿಜ ಅಮೇರಿಕಾ ಅನ್ನುವ ದೇಶವೇ ಹಾಗೆ.ಅದರದ್ದು ಯಾವಗಲೂ ಸ್ವ-ಹಿತಾಸಕ್ತಿ.ಹಿಟ್ಲರ್,ಸದ್ದಾಂ ಎಲ್ಲರು ದೈತ್ಯರಾಗಲು ಅದು ಕೊಡುಗೆಯನ್ನು ನೀಡಿತು,ಕಡೆಗೆ ತನ್ನ ಬುಡಕ್ಕೆ ಪೆಟ್ಟು ಬೀಳ ತೊಡಗಿದಾಗ ಖುದ್ದು ನಿಂತು ಬೆನ್ನು ಮೂಳೆ ಮುರಿಯಿತು.ರಷ್ಯಾಕ್ಕೆ ಮುಖಭಂಗ ಮಾಡಲೆಂದೆ ಒಸಾಮನನ್ನು ಹುಟ್ಟು ಹಾಕಿದ ತಪ್ಪಿಗೆ ಅವನಂತೂ ಮರೆಯಲಾರದ ಪಾಠ ಕಲಿಸಿದ.ಆದರೆ ಆ ದೇಶ ಪಾಠ ಕಲಿಯಿತಾ? ಇಲ್ಲ. ಅದರದ್ದೇನಿದ್ದರೂ ಶುದ್ಧ ವ್ಯವಹಾರ.ಮೊದಲೇ ಹೇಳಿದಂತೆ ಅದೊಂದು ಸ್ವ-ಹಿತಾಸಕ್ತಿ ಇರುವ ದೇಶ.ಹಾಗೆ ನೋಡಿದರೆ ಸ್ವ-ಹಿತಾಸಕ್ತಿ ಇರುವುದು ತಪ್ಪಾ? ನನ್ನ ಬಗ್ಗೆ ನಾನು ಯೋಚಿಸದೆ ಇನ್ಯಾರು ಯೋಚಿಸಬೇಕು ಸ್ವಾಮಿ?
ಭಯೋತ್ಪಾದನೆಯ ವಿರುದ್ಧ ಸಮರ ಅನ್ನುವ ಹೆಸರಿನಲ್ಲಿ ಪಾಕಿಸ್ತಾನಕ್ಕೆ ಡಾಲರ್ ಮಳೆಯನ್ನೇ ಸುರಿಸಿತು.ಆದರೆ,ಪಾಪಿ ಪಾಕಿಸ್ತಾನ ಆ ಹಣವನ್ನ ಭಾರತ ವಿರೋಧಿ ಕಾರ್ಯಕ್ಕೆ ಬಳಸಿಕೊಳ್ಳುತ್ತ ಬಂದಿದ್ದು ಅಮೇರಿಕೆಗೆ ತಿಳಿಯಲಿಲ್ಲವಾ? ತಿಳಿಯದೆ ಏನು,ಆದರೆ ಅವ್ರಿಗೆ ಬೇಕಾಗಿದ್ದು ಲಾಡೆನ್ ಮಾತ್ರ! ಭಾರತ-ಪಾಕ್ ಬಡಿದಾಡಿಕೊಂಡರೆ ಅವರಿಗೆ ಎರಡು ಕಡೆಯಿಂದ ಲಾಭ.ಒಂದು ಅವರ ಶಸ್ತ್ರಾಸ್ತ್ರಗಳಿಗೆ ಭರ್ಜರಿ ಬೇಡಿಕೆ ಮತ್ತಿನ್ನೊಂದು ಭಾರತ ಅನ್ನುವ ಆರ್ಥಿಕ ಶಕ್ತಿಯ ಬುಡ ಅಲುಗಾಡುವುದು!

ಅಸಲಿಗೆ ನಾವು ದೂಷಿಸಬೇಕಾಗಿರುವುದು ಅಮೇರಿಕವನ್ನಲ್ಲ.ಅದೇ,ಅಮೇರಿಕಾವನ್ನ ಒಂದು ದೇಶವನ್ನಾಗಿ ನೋಡುವ ಬದಲು,ಹಿರಿಯಣ್ಣ ಅಂತ ನೋಡುತ್ತ.ಪಾಕಿನ ಕಳ್ಳರು ಮುಂಬೈಗೆ ನುಗ್ಗಿ ಬಂದು ಬೆಂಕಿ ಹಚ್ಚಿದಾಗ,ತಿರುಗಿ ಉತ್ತರ ಕೊಡುವ ಬದಲು,’ಅಂಬೋ’ ಅಂತ ಮತ್ತದೇ ಅಮೇರಿಕಾದ ಪಾದವೇ ಗತಿ ಅಂತ ಹೊರಟ ಭಾರತ ಅನ್ನೋ ವೋಟ್ ಬ್ಯಾಂಕ್ ರಾಜಕೀಯದ ದೇಶವನ್ನ.

ಭಾರತದ ಮುಂಬೈ ದಾಳಿ ಮತ್ತು ಅಮೇರಿಕಾದ ಟ್ವಿನ್ ಟವರ್ಸ್ ದಾಳಿಯ ನಂತರದ ಎರಡು ದೇಶಗಳ ವರ್ತನೆಯನ್ನ ಗಮನಿಸುತ್ತ ಹೋಗಿ.ಅಮೇರಿಕಾ ಅಲ್ ಖೈದಾವನ್ನ ಹಣಿಯಲು ಹೊರಟು ನಿಂತಿತು.ಯಾರೆಂದರೆ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅದು ಇರಲಿಲ್ಲ.ಒಂದು ದೇಶದ ಸಾರ್ವಭೌಮತ್ವಕ್ಕೆ ಪೆಟ್ಟು ಬಿದ್ದಾಗ,ದೇಶದ ನಾಗರಿಕರ ಪ್ರಾಣ ರಕ್ಷಿಸಲಾಗದಾಗ ಅವರು ಕೈಗೊಂಡ ನಿರ್ಧಾರ ಸರಿಯಾದುದಲ್ಲವೇ?
ಅದೇ, ಸಂಸತ್ ದಾಳಿಯಾದಾಗ ಇರಬಹುದು ಅಥವಾ ಮುಂಬೈ ದಾಳಿಯಾದಾಗ ಇರಬಹುದು ಭಾರತ ಎಂದೂ ಸಾರ್ವಭೌಮ ರಾಷ್ಟ್ರದಂತೆ ನಡೆದುಕೊಂಡಿಲ್ಲ.ಯಾವಗಲೂ ಪಾಕಿಸ್ತಾನವನ್ನ ಗದರಿಸಿ ಅಂತರಾಷ್ಟ್ರೀಯ ಸಮುದಾಯ ಮತ್ತು ಅಮೇರಿಕಾವನ್ನ ಗೊಗರಿಯುವುದರಲ್ಲೇ ಕಾಲ ಕಳೆಯಿತು ಮತ್ತು ಕಳೆಯುತ್ತಲಿದೆ.ಮುಂಬೈ ದಾಳಿಯ ನಂತರ ಏನೆಲ್ಲ ರಾಜತಾಂತ್ರಿಕ ಕಸರತ್ತು ನಡೆಸಿ ಪಾಕಿಸ್ತಾನದ ವಿರುದ್ಧ ಎಲ್ಲ ದೇಶಗಳಿಗೂ ಸಾಕ್ಷಿ ನೀಡಿತು.ಅದರಿಂದ ಏನಾದರೂ ಉಪಯೋಗವಾಯಿತ?

ಆಗ, ಯುದ್ಧವಾಗಲಿ ಅನ್ನುವ ಮಾತುಗಳು ಕೇಳಿಬಂದಾಗ ಮಾನವ ಹಕ್ಕುಗಳ ಬಗ್ಗೆ ಮಾತು ಗರಿಗೆದರಿತು.ಪಾಕಿಸ್ತಾನದ ಭಯೋತ್ಪಾದಕರು ಮಾಡಿದ ತಪ್ಪಿಗೆ,ಪಾಕಿಸ್ತಾನದ ಮೇಲೆ ಯುದ್ದ ಮಾಡಿದರೆ,ಅಮಾಯಕ ಪಾಕಿಗಳು ಸಾಯುವುದಿಲ್ಲವೇ ಅನ್ನುವ ’ಕರುಳಿನ ಕೂಗು’ ಇಂದಿನಂತೆ ಅಂದೂ ಸಹ ಕೇಳಿತ್ತು.ಹೌದೌದು.ಪಾಕಿಸ್ತಾನದ ಜನ ಮಾತ್ರ ಅಮಾಯಕರು.ಭಾರತದಲ್ಲಿ ಇವರ ದಾಳಿಗೆ ಸಿಕ್ಕಿ ಸತ್ತವರೆಲ್ಲ ಹುಳಗಳಾ!? ಭಾರತೀಯರ ಜೀವಕ್ಕೆ,ಸಾವಿಗೆ ಬೆಲೆ ಇಲ್ವಾ?

ಪಾಕಿಸ್ತಾನ ಅನ್ನುವುದು ಕಳ್ಳರ ರಾಷ್ಟ್ರ ಅನ್ನುವುದು ಅಮೇರಿಕಾ,ಬ್ರಿಟನ್,ಚೈನಾ ಸೇರಿದಂತೆ ಎಲ್ಲರಿಗೂ ಗೊತ್ತಿದೆ.ಸದ್ಯಕ್ಕೆ ವಿಶ್ವ ಶಕ್ತಿಗಳಾಗಿರುವ ಎರಡೂ ದೇಶಗಳಾದ ಅಮೇರಿಕಾ ಮತ್ತು ಚೈನಾಕ್ಕೆ ಭಾರತಕ್ಕೆ ಪಾಕ್ ಮಗ್ಗುಲ ಮುಳ್ಳಾಗಿರಲಿ,ಆ ಮೂಲಕ ಭಾರತದ ಆರ್ಥಿಕತೆಯ ಬುಡ ಅಲುಗಾಡಲಿ ಅನ್ನುವ ಆಸೆ.ಅಸಲಿಗೆ,ಈಗ ಅಮೇರಿಕಾದಂತೆ ಭಾರತ ಕೂಡ ಕಾರ್ಯಾಚರಣೆ ಮಾಡಿ ದಾವೂದ್ನನ ಮುಗಿಸಬೇಕು ಅನ್ನುವ ಮಾತುಗಳು ಸರಿಯಾಗಲಿಕ್ಕಿಲ್ಲ.ಭಾರತ ತಾನಾಗೇ ಪಾಕಿಸ್ತಾನದ ಮೇಲೆ ಬೀಳೋ ಸಾಹಸವನ್ನ ಮಾಡುವುದೂ ಇಲ್ಲ.ಮಾಡಬೇಕಾಗೂ ಇಲ್ಲ! ಆ ಕೆಲಸವನ್ನ ಪ್ರಪಂಚದ ಮುಂದೆ ಬೆತ್ತಲಾಗಿ ನಿಂತಿರುವ ಮತ್ತು ಎಲ್ಲರ ಗಮನ ಬದಲಾಯಿಸಲು ಹವಣಿಸುತ್ತಿರುವ  ಪಾಪಿ ಪಾಕಿಸ್ತಾನವೇ ಮಾಡಿದರೂ ಮಾಡುತ್ತದೆ ಅನ್ನಿಸುತ್ತಿದೆ.ಅದರ ಪಾಲಿಗೆ ಭಾರತ ಅನ್ನುವುದು ತಾಲೀಮು ನಡೆಸುವ ಮೈದಾನದಂತೆ.ಭಾರತೀಯರು ಹುಳಗಳಂತೆ (ಅಮಾಯಕರಲ್ಲ!)
ಈ ದೇಶವನ್ನ ಎಷ್ಟೆ ಕೆಣಕಿದರೂ ಅಪಾಯವಿಲ್ಲ ಅನ್ನುವುದು ಪಾಕಿಸ್ತಾನಕ್ಕೆ ಚೆನ್ನಾಗೆ ಗೊತ್ತಿದೆ.ಭಾರತದ ದೌರ್ಬಲ್ಯತೆಯಿಂದಾಗಿಯೇ ಇಂದು ಚೀನಿಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಠಿಕಾಣಿ ಹೂಡಿದ್ದಾರೆ.ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ಹಿಂದೆಯೇ ಚೀನಿಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದಾರೆ ಅಂದಾಗ ಚೈನಾ ನಿರಾಕರಿಸಿತ್ತು.ಆದರೆ ಈಗ ಭಾರತವೂ ಅದನ್ನ ನಿಜ ಅಂತಂದಿದೆ. ಚೀನಿ ಡ್ರಾಗನ್ಗಳು ಭಾರತವನ್ನ ಎಲ್ಲ ಮೂಲೆಯಿಂದಲೂ ಸುತ್ತುವರೆದಿವೆ.

ಕಾಶ್ಮೀರದಲ್ಲಿ,ಶ್ರೀಲಂಕಾದಲ್ಲಿ,ಕಡೆಗೆ ನೆಹರೂ ಅನ್ನೋ ಪುಣ್ಯಾತ್ಮನ ಕೊಡುಗೆಯಾದ ಬರ್ಮಾದ ಕೋಕೊ ದ್ವೀಪದಲ್ಲಿ! ಅಂದರೆ ಒಂದು ವೇಳೆ ಯುದ್ಧ ಘೋಷಣೆಯಾದರೆ ಎಲ್ಲೆಲ್ಲೂ ಚೈನಾವೇ! ಹೇಳಿ ಕೇಳಿ ಭಾರತ ಚೈನಾದ ಆರ್ಥಿಕತೆಗೂ ಪೈಪೋಟಿ ನೀಡುತ್ತಿರುವ ದೇಶ.ಇಂತ ದೇಶ ನೆಮ್ಮದಿಯಿಂದ ಇರುವುದು ಚೈನಾಕ್ಕೂ ಬೇಕಿಲ್ಲ! ಹಿಂದೆ ಜಾರ್ಜ್ ಫ಼ರ್ನಾಂಡೀಸ್ ’ಪಾಕಿಸ್ತಾನಕ್ಕಿಂತ ಚೈನಾವೇ ಭಾರತದ ಅಸಲಿ ಶತ್ರು’ ಅಂದಿದ್ದು ಸತ್ಯವಲ್ಲವೇ?

ಹೇಗಿದ್ದರೂ,ಮುಂಬೈ ದಾಳಿಯ ನಂತರದ ದಿನಗಳಲ್ಲಿ ಚಿದಂಬಂರಂ ’ಈ ಸರಿ ಏನೋ ಬಿಟ್ಟಿದ್ದೀವಿ,ಮತ್ತೊಮ್ಮೆ ಬಂದು ಇಲ್ಲಿ ಬಾಂಬಿಡಿ,ಆಗ ನೋಡ್ಕೋತೀವಿ ನಿಮ್ಮನ್ನ’ ಅಂತ ಹೇಳಿದ್ದಾರಲ್ವಾ…ಕಾಯೋಣ ಬಿಡಿ… ಮತ್ತಿನ್ಯಾವ ಭಾರತೀಯ ಹುಳಗಳು ಸಾಯಬೇಕೋ ಅಂತ!

13 ಟಿಪ್ಪಣಿಗಳು Post a comment
 1. Ravi
  ಮೇ 16 2011

  “ಹಾಗೆ ನೋಡಿದರೆ ಸ್ವ-ಹಿತಾಸಕ್ತಿ ಇರುವುದು ತಪ್ಪಾ? ನನ್ನ ಬಗ್ಗೆ ನಾನು ಯೋಚಿಸದೆ ಇನ್ಯಾರು ಯೋಚಿಸಬೇಕು ಸ್ವಾಮಿ?”

  – ಇನ್ನೊಬ್ಬರ ಖರ್ಚಿನಲ್ಲಿ ತಮ್ಮ ಹಿತಾಸಕ್ತಿ ಕಾಪಾಡುವುದು ಸರಿಯಲ್ಲ. ಹಾಗೆ ನೋಡಿದರೆ, ಇದು ಅಮೆರಿಕಾದ ಒಂದೇ ಸಮಸ್ಯೆಯಲ್ಲ. ತಮ್ಮ ಪವರ್, ಸಾರ್ವಭೌಮತ್ವ ಈ ಥರ ಆಡಿಸುತ್ತದೆ. ಚೀನಾ ಸೂಪರ್ ಪವರ್ ಆಗುವ ಮೊದಲೇ ಹಾಗಾಡುತ್ತಿದೆ. ಮುಂದೆ ದೇವರೇ ಗತಿ. ಶಾಂತ ರಾಷ್ಟ್ರ ನಾವೂ ಏನೂ ಕಮ್ಮಿ ಇಲ್ಲ. ನಮ್ಮ ಬಿಸಿಸಿಐ ಕ್ರಿಕೆಟ್ ಜಗತ್ತನ್ನೇ ತನ್ನ ತೋರುಬೆರಳಲ್ಲಿ ಕುಣಿಸುತ್ತಿಲ್ಲವೇ? ಈ ಅಮೆರಿಕ ಯಾವುದೇ ವಿಚಾರಣೆ ಇಲ್ಲದೆ ಒಸಮನನ್ನು ಕೊಂದು ಉಪ್ಪು ನೀರಿಗೆ ಹಾಕಿದ್ದು ತಪ್ಪೇ ಅಲ್ಲ. ಕಸಬ್, ಅಫ್ಜಲ್ ರನ್ನು ಆ ಥರ ಮಾಡದೇ ಇದ್ದದ್ದು ನಮ್ಮ ದೇಶದ ತಪ್ಪು.
  ಮೊನ್ನೆ ಪ್ರತಾಪ್ ಸಿಂಹರ ಲೇಖನದಲ್ಲಿ ಓದಿದೆ, ಚೀನೀ ನಾಯಿಯೊಂದು ಭಾರತಕ್ಕೆ ಬಂತಂತೆ. ಅಲ್ಲಿ ಹೊಟ್ಟೆ ತುಂಬಾ ಇದ್ದರೂ, ಬೊಗಳಲು ಸ್ವಾತಂತ್ರ್ಯವಿಲ್ಲ ಎಂದು. ಇಲ್ಲಿ ಸಿಕ್ಕಾಪಟ್ಟೆ ಬೊಗಳುವ ಸ್ವಾತಂತ್ರ್ಯ ಇದೆ. ಅದನ್ನೇ ಮಾಡುತ್ತಿರುವುದು ಈ ಟೊಳ್ಳು ಸಿದ್ದಾಂತ ಪ್ರೇಮಿಗಳು.
  ಅತ್ತ್ಯುತ್ತಮ ಲೇಖನ ರಾಕೇಶ್.

  ಉತ್ತರ
  • ಒಮ್ಮೊಮ್ಮೆ.ಕೀಳರಿಮೆಯಿಂದ ಬದುಕುತ್ತಿರುವ ದೇಶ ನಮ್ಮದು ಅನ್ನಿಸುತ್ತದೆ.
   ಧನ್ಯವಾದ ರವಿ 🙂

   ಉತ್ತರ
 2. ಮೇ 16 2011

  ಯಾವಗಲು ದಿನ ಪತ್ರಿಕೆಯಲ್ಲಿ ಒದ್ದುತ್ತಾ ಇರುತ್ತೇವೆ ಪಾಕಿಸ್ತಾನ ಕದಮ ವಿರಾಮ ನಿಯಮವನ್ನು ಮೀರಿ ದಾಳಿ ಮಾಡಿದೆ ಅ೦ತ ನಿಜವಾಗಲು ಅಶ್ಚರ್ಯ ಆಗುತ್ತೆ ಎಲ್ಲಿಯ ಭಾರತ ಎಲ್ಲಿಯ ಪಾಕಿಸ್ತಾನ ನಮ್ಮದು ೧೧೦ ಕೋಟಿ ಜನಸ೦ಖೆಯ ದೇಶ ಆದರೂ ನಮ್ಮ ಸೈನ್ಯದವರು ಎನು ಮಾಡಲು ಆಗುತ್ತಿಲ್ಲ ಎ೦ತಹ ನಾಚಿಕೆಗೆಡಿತನದ ವಿಷಯ ಒ೦ದು ದೇಶ ನಿಜವಾಗಲು ಅಭಿವ್ರುದ್ದಿ ಹೊ೦ದಿದ ದೇಶ ಎ೦ದರೆ ಅದು ಎಲ್ಲ ವಿಬಾಗದಲ್ಲು ಆಗಬೇಕು.
  ಬರಿ ಆರ್ಥಿಕಥೆ, ಐಟಿ, ಪ್ರಜಾಪ್ರಭುತ್ವದಲ್ಲಿ ಬಲಿಷ್ತವಾಗಿದ್ದರೆ ಸಾಲದು ಅದರಲ್ಲಿ ನಮ್ಮ ರಕ್ಷಣ ವ್ಯವಸ್ತೆಯು ಸೇರಬೇಕು
  ನಿಮ್ಮ ಲೇಖನ ತು೦ಬ ಅರ್ಥ ಪೂಣ್ರಾವಾಗಿದೆ

  ಉತ್ತರ
  • ವೋಟ್ ಬ್ಯಾಂಕ್ ಜಪ ಮಾಡೋ ನಾಯಕರಿಂದ ನಿರೀಕ್ಷೆ ಮಾಡುವುದೇ ತಪ್ಪು ಅನ್ನಿಸುತ್ತದೆ ಅಭಿ

   ಉತ್ತರ
 3. ಮೇ 16 2011

  o rakeshravare nimma mathimna uddakko noduvaga neeevu muslim virodi annudaralli yavude samsayavilla……………..adaru ondu mathu heltheeeni keli……….nam barathadalali adesti hindu bayathpadane chatuvatike nadeyuthiidee,,,,,,,,,,,,, nam barathadalli muslimarigintha adikavagi hindu bayathpadakariddare yandu edee desakke gothirva mathu……………………aaadare media adannu orage aaktha ella……………………..neevu chinthisi???//

  ಉತ್ತರ
  • Ravi
   ಮೇ 16 2011

   ಅರ್ವಿನಣ್ಣ, ಇದಕ್ಕೆ ಹೇಳಿದ್ದು ಸ್ವಲ್ಪ ಒರೆಂಜ್ ಕನ್ನಡಕ ಬದಿಗಿಟ್ಟು ಮತ್ತೊಮ್ಮೆ ಓದಿ ಈ ಬರಹ ಅಂತ. ಇಲ್ಲಿ ನನಗೆ ಅಮೆರಿಕ-ಪಾಕ್-ಭಾರತ-ಭಯೋತ್ಪಾದನೆ ಇಷ್ಟೇ ಕಾಣುತ್ತೆ ವಿನಃ ಮುಸ್ಲಿಮರ ವಿರೋಧ ಅಲ್ಲ. ಬೇರೆ ಏನೋ ಹೇಳಿ ವಿಷಯಾಂತರ ಮಾಡಬೇಡಿ..

   ಉತ್ತರ
   • ಹೌದು ರವಿ!
    ಅರ್ವಿನ್ ಹೇಳಿದ ಮೇಲೋಮ್ಮೆ ಕಣ್ಣಾಡಿಸಿ ನೋಡಿದೆ,ನನಗೂ ಲೇಖನದಲ್ಲಿ ಎಲ್ಲಿಯೂ ಅವರು ಹೇಳಿದಂತೆ ಮುಸ್ಲಿಮ್ ವಿರೋಧಿ ಪದಗಳು/ನಿಲುವು ಸಿಗಲಿಲ್ಲ…!

    ಅರ್ವಿನ್, ಪಾಪಿ ಪಾಕಿಸ್ತಾನವನ್ನ ಬೈಯಿದಿದ್ದಕ್ಕೆ ನೀವು ನನ್ನನ್ನು ’ಮುಸ್ಲಿಂ ವಿರೋಧಿ’ ಅಂದಿರಾ? ಉತ್ತರಿಸಿ. ನಂತರ ಮುಂದಿನ ಮಾತು.
    ಹಾಂ! ಹಾಗೆ ಪ್ರತಿಕ್ರಿಯೆ ಕನ್ನಡದಲ್ಲಿ ಬರೆಯಿರಿ

    ಉತ್ತರ
  • bhadravathi
   ಮೇ 17 2011

   ಅರ್ವಿನ್, ರಾಕೇಶ್ ಬರೆದಿರೋದು ಪಾಕಿಗಳ ಪಾಪ ಕೃತ್ಯಗಳ ಬಗ್ಗೆ ಮತ್ತು ನಮ್ಮ ಅಸಹಾಯಕತೆ ಬಗ್ಗೆ. ಹಿಂದೂ ಭಯೋತ್ಪಾದನೆಯ ವಿಷಯ ಬಂದಾಗ ಅದನ್ನೂ ಅವರು ಖಂಡಿತವಾಗಿ ಖಂಡಿಸುವರು. ಈಗ ನಮ್ಮ ಮುಂದೆ ಇರುವ ಪ್ರಶ್ನೆ ಪಾಕಿನಿಂದ ಬಂದ ಬೆದರಿಕೆ.
   ಮತ್ತೊಂದು ವಿಷಯ. ಹೆಸರನ್ನು ಬದಲಿಸಿಕೊಂಡು ಮುಸ್ಲಿಂ ಥರ ಕಾಣೋ ರೀತಿ ಬರೆದಿದ್ದೀರಿ. ಇಂಥ ಆಟಗಳನ್ನು ಅಂತರ್ಜಾಲದಲ್ಲಿ ಬಹಳಷ್ಟು ನೋಡಿಯಾಗಿದೆ. ಇದನ್ನು ನೋಡಿ ಅಸಹ್ಯ ಪಟ್ಟು ಕನ್ನಡದ ಓರ್ವ ಸಂಪಾದಕ ಒಂದು ಕಿವಿಮಾತನ್ನು ಹೇಳಿ ಲೇಖನ ಬರೆದಿದ್ದಾರೆ. ಯಾವ “ಮುಖೋಟ” ಹಾಕೊಂಡು ಬಂದರೂ ಕಳಚಿ ಬಿದ್ದೇ ಬೀಳಬೇಕು, ಏಕೆಂದರೆ “ಮುಖೋಟ” ಕುಚೋದ್ಯ ಮತ್ತು ಕಪಟತನದಿಂದ ಕೂಡಿದ್ದು.

   ಉತ್ತರ
 4. ಪ್ರಸ್ಕ
  ಮೇ 16 2011

  <blockquote
  ಪಾಕಿಸ್ತಾನದ ಮೇಲೆ ಯುದ್ದ ಮಾಡಿದರೆ,ಅಮಾಯಕ ಪಾಕಿಗಳು ಸಾಯುವುದಿಲ್ಲವೇ ಅನ್ನುವ ’ಕರುಳಿನ ಕೂಗು’ ಇಂದಿನಂತೆ ಅಂದೂ ಸಹ ಕೇಳಿತ್ತು

  ಉತ್ತಮ ಲೇಖನ ರಾಕೇಶ್, ಅದರಲ್ಲೂ ಕರುಳಿನ ಕೂಗು ಪದಪ್ರಯೋಗ ಸಖತ್.
  ಪಾಕಿಸ್ತಾನದಲ್ಲಿ ಭಯೋತ್ಪಾದಕರೇ ಇಲ್ಲ ಅತ್ಯಂತ ಮುಗ್ದ ದೇಶ. ಅಲ್ಲಿನ ಸರ್ಕಾರಕ್ಕೆ ಭಯೋತ್ಪಾದನೆ ಗೊತ್ತೇ ಇಲ್ಲ ಎಂದು ಸಂಪದದಲ್ಲಿ ಬಡಬಡಿಸಿದವರು (ನೀವು ಹೇಳಿದ್ದು ಇಂತಹವರನ್ನೇ) ಕಾಣೆಯಾಗಿರುವುದು ವಿಷಾದನೀಯ. ಅವರ ವಕ್ತಾರರುಗಳಿಂದಲೂ ಆ ಬಗ್ಗೆ ಮಾತೇ ಇಲ್ಲ ಪಾಪ!
  ಬಹುಶಃ ಪಾಕಿಸ್ತಾನದಲ್ಲಿ ಭಯೋತ್ಪಾದನೆಯಿಲ್ಲ ಎನ್ನುವುದಕ್ಕೆ ಭೂತಗನ್ನಡಿ ಹಾಕಿ ಹುಡುಕುತ್ತಿರಬೇಕು ಮಹನೀಯರು

  ಉತ್ತರ
  • ನನಗದೆ ಅರ್ಥವಾಗುವುದಿಲ್ಲ.ಪಾಕಿಸ್ತಾನದ ಮುಗ್ದರನ್ನ ಉಳಿಸಿಲಿಕ್ಕಾದರೂ ದುರುಳರ ನಾಶವಾಗುವುದು ಬೇಡವೇ ಅಂತ!?

   ಉತ್ತರ
 5. ಅವಿನಾಶ್ ಕಾಮತ್
  ಮೇ 16 2011

  ಉತ್ತಮ ಲೇಖನ ರಾಕೇಶ್..
  ಆದರೆ ಪಾಕಿಸ್ತಾನದ ಮೇಲೆ ದಾಳಿ ಮಾಡುವುದು ಅನ್ನೋದು ಅಷ್ಟು ಸುಲಭವಲ್ಲ. ಸಾವಿರಾರು ಸಮಸ್ಯೆಗಳಿವೆ. ಯುದ್ಧವೊಂದನ್ನು ಮಾಡಲು ನಮ್ಮ ದೇಶ ಸಿದ್ಧವಾಗಿದೆಯೇ? ನಮ್ಮಲ್ಲಿ ಪರಮಾಣು ಬಾಂಬ್‍ಗಳಿವೆ, ಆದರೆ ಅವು ಪಾಕಿಸ್ತಾನದಲ್ಲೂ ಇವೆ. ಒಂದು ವೇಳೆ ಯುದ್ಧವಾಯ್ತು ಅನ್ನಿ, ಚೈನಾ ತಕ್ಷಣ ಪಾಕಿಸ್ತಾನಕ್ಕೆ ನೆರವು ನೀಡುತ್ತದೆ. ಕ್ರಿಶ್ಚಿಯನ್ ದೇಶವಾದ ಅಮೇರಿಕೆಗೆ ನೆರವಾಗಲು ಹಲವು ದೇಶಗಳಿವೆ. ಹಿಂದೂ ರಾಷ್ಟ್ರವಾದ ಭಾರತದ ನೆರವಿಗೆ ಬರುವರು ಯಾರು? ಯಾರೂ ಇಲ್ಲ. ನೆನಪಿರಲಿ ’ಭಯೋತ್ಪಾದನೆಯ’ ವಿರುದ್ಧ ದೊಡ್ಡ ದೊಡ್ಡ ಮಾತಾಡುವ ಅಮೇರಿಕೆಯೂ ಸಹ ಭಾರತ-ಪಾಕಿಸ್ತಾನ ಯುದ್ಧವಾದರೆ ತಟಸ್ಥವಾಗಿಯೇ ನಿಲ್ಲುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕೋಟ್ಯಾಂತರ ಜನರು, ಎರಡು ಹೊತ್ತಿನ ಊಟಕ್ಕಾಗಿ ಪರದಾಡುವ ಸಾಮಾನ್ಯ ಜನರು ಒಂದು ಯುದ್ಧಕ್ಕಾಗಿ ಮಾನಸಿಕವಾಗಿ ತಯಾರಾಗಿದ್ದಾರೆಯೆ? ಯುದ್ಧ ಘೋಷಿತವಾಯ್ತು ಅಂದ್ರೆ ಇಪ್ಪತ್ತು ರೂಪಾಯಿಗೆ ಸಿಗುವ ಅಕ್ಕಿಯ ಬೆಲೆ ಎಪ್ಪತ್ತಾಗುತ್ತದೆ, ಪೆಟ್ರೋಲ್ ಬೆಲೆ ನೂರಾಗುತ್ತದೆ. ಏನು ಮಾಡಬೇಕು ಬಡವರು? ದೇಶಪ್ರೇಮ ಒಳ್ಳೆಯದೇ, ಇರಬೇಕಾದದ್ದೇ. ಆದರೆ ಎರಡು ಹೊತ್ತಿನ ಕೂಳು ಸಿಕ್ಕಿದ ನಂತರ ಉತ್ಪನ್ನವಾಗುವ ಭಾವನೆಯದು.

  <>
  ಹೇಗೆ ಉತ್ತರ ಕೊಡಬೇಕು ಎನ್ನುವುದು ನಿಮ್ಮ ಅನಿಸಿಕೆ?

  ಇನ್ನು ಕೆಲವರು “ನೋಡಿದಿರಾ, ಅಮೇರಿಕಾ ಹೇಗೆ ಓಸಾಮಾನನ್ನು ಕೊಂದುಹಾಕಿತು, ಆದರೆ ಭಾರತದ ಸರಕಾರ ಮಾತ್ರ ಕಸಬ್‍ನನ್ನು ಗಲ್ಲಿಗೇರಿಸುವ ಬಗ್ಗೆ ಯೋಚಿಸುತ್ತಲೇ ಇಲ್ಲ” ಎನ್ನುತ್ತಾರೆ. ಅತ್ಯಂತ ಹಾಸ್ಯಾಸ್ಪದ ವಿಶ್ಲೇಷಣೆ ಅದು. 9/11 ಘಟನೆಗೆ ಸಂಬಂಧಿಸಿದಂತೆ ಅಮೇರಿಕೆಯ ಜೈಲಿನಲ್ಲಿ ನೂರಾರು ಭಯೋತ್ಪಾದಕರು ಕೊಳೆಯುತ್ತಿದ್ದಾರೆ. ಅಲ್ಲದೇ ಕುರುಡ ಧರ್ಮ ಗುರು ಓಮರ್ ಅಬ್ದುಲ್ ರೆಹಮಾನರಂಥ ಅತ್ಯುಗ್ರ ಭಯೋತ್ಪಾದಕರು ಇನ್ನೂ ಅಮೇರಿಕೆಯ ಜೈಲಿನಲ್ಲಿ ಜೀವಂತವಾಗಿದ್ದಾರೆ. ಸತ್ತದ್ದು ಕೇವಲ ಒಬ್ಬ ಓಸಾಮಾ. (ಅಫಘಾನಿಸ್ತಾನದಲ್ಲಿ ಸತ್ತವರನ್ನು ಹೊರತುಪಡಿಸಿ). ನಮ್ಮಲ್ಲಿ 26/11 ಘಟನೆಗೆ ಸಂಬಂಧಿಸಿದಂತೆ ನಮ್ಮ ದೇಶದ ನ್ಯಾಯವ್ಯವಸ್ಥೆಯ ಕೈಯಲ್ಲಿ ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಎಂದರೆ ಕಸಬ್. ಅವನ ಬಳಿ ಏನೇನೆಲ್ಲ ಮಾಹಿತಿಗಳಿವೆಯೋ, ಅವು ನಮ್ಮಲ್ಲಿರುವ ಪಕ್ಕಾ ಪುರಾವೆಗಳು. ಪಾಕಿಸ್ತಾನದ ವಿರುದ್ಧ ನಮ್ಮಲ್ಲಿರುವ ಪಕ್ಕಾ ಪುರಾವೆಗಳು. ಅವನನ್ನು ಗಲ್ಲಿಗೇರಿಸಿದ ನಂತರ ಠುಸ್ಸ್! ನಮ್ಮಲ್ಲಿ ಯಾವುದೇ ಪುರಾವೆಗಳೇ ಇಲ್ಲ. ಇಷ್ಟು ಸಣ್ಣ ವಿಷಯ ನಮ್ಮಂಥ ಕಲಿತವರಿಗೆ ಯಾಕೆ ಅರ್ಥವಾಗುವುದಿಲ್ಲವೋ ಏನೋ!

  ನಿಮ್ಮ ಲೇಖನ ಆಶಯಕ್ಕೆ ಕಿಂಚಿತ್ತೂ ವಿರೋಧವಿಲ್ಲ ರಾಕೇಶ್, ಕುತಂತ್ರಿ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಅದಕ್ಕೆ ಬುದ್ಧಿ ಹೇಗೆ ಕಲಿಸಬೇಕು? ನನಗೆ ತೋಚುತ್ತಿಲ್ಲ. ಆದರೆ ಕುತಂತ್ರಿ ಪಾಕಿಸ್ತಾನವು ನಿರ್ನಾಮವಾಗುವ ಸಮಯ ಬಂದೇ ಬರುತ್ತದೆ ಎಂಬ ನಂಬಿಕೆ ಮಾತ್ರ ಖಂಡಿತ ನನಗಿದೆ.
  ಪ್ರೀತಿಯಿಂದ
  ಅವಿನಾಶ್

  ಉತ್ತರ
  • ನಾನು ಬರೆಯದೇ ಅಂದುಕೊಂಡಿದ್ದನ್ನ ನೀವು ಹೇಳಿದ್ದೀರಿ ಅವಿನಾಶ್.ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ನೋಡಿ

   ಉತ್ತರ
 6. ಮೇ 17 2011

  ಒಬಾಮಾ ಮತ್ತೆ ಬರುವ ಸಾಧ್ಯತೆಯಿದೆ.ಅದಕ್ಕೆ ಮರು ಜೀವ ಜನ್ಮ ಕೊಡುವವರು ಮೀಡಿಯಾಗಳು ಮತ್ತು ಅಮೆರಿಕಾದಂತಹ ಲಾಭಕೊರ ರಾಷ್ಟ್ರಗಳು.ಎಲ್ಲಿಯವರೆಗೆ ಮತಾಂಧ ಗುಂಪುಗಳು ಸೃಷ್ಥಿಯಾಗಲು ಹೊಲಸು ಜಾಗದ ಅವಕಾಶ ಕಲ್ಪಿತವಾಗುವುದೋ ಅಲ್ಲಿಯವರೆಗೆ ಈ ಜಗತ್ತಿನಲ್ಲಿ ಒಬಾಮಾನಂತಹ ನೂರು ಜನ ಹುಟ್ಟಿ ಬರುವುದು ಖಂಡಿತ.ಆಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.ಲಾಭಕೋರ ರಾಷ್ಟ್ರಗಳು ಕಾರ್ಯಾಚರಣೆ ನಡೆಸುತ್ತಲೇ ಇರುತ್ತಾರೆ.ಜಗತ್ತಿನ ಕಣ್ಣಿಗೆ ಬೂದಿ ಎರಚುತ್ತಲೇ, ನಮ್ಮಂತವರು ಮಂಗಗಳ ಹಾಗೆ ನೋಡುತ್ತಲೇ ಇರುತ್ತೇವೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments