ವಿಷಯದ ವಿವರಗಳಿಗೆ ದಾಟಿರಿ

ಮೇ 25, 2011

1

ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!

‍ನಿಲುಮೆ ಮೂಲಕ

– ಪಾಲಚಂದ್ರ

ನೀವು ತೆಗೆದ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅಂತರ್ಜಾಲಕ್ಕೆ ಸೇರಿಸ ಹೊರಟಿದ್ದೀರ? ಸ್ವಲ್ಪ ನಿಧಾನಿಸಿ, ಯಾಕೆಂದರೆ “ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!”.  ದಿನೇ ದಿನೇ ಹೆಚ್ಚುತ್ತಿರುವ ವೃತ್ತ ಪತ್ರಿಕೆಗಳೇ ಈ ಕಳ್ಳತನ ಮಾಡುತ್ತಿರುವುದು ವಿಷಾದದ ವಿಚಾರ.

ಕಳ್ಳತನ ಏಕೆ, ಹೇಗೆ?
ಇದು instant ಕಾಲ. ಆಹಾರದಿಂದ ಹಿಡಿದು ಸುದ್ದಿಯವರೆಗೂ ನಮಗಿರುವುದು ಅವಸರವೇ. ಮಾಹಿತಿಯ ಪರಿಶೀಲನೆಗೇ ಸಮಯವಿಲ್ಲದಿರುವಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಜೊತೆಗೆ ಮುದ್ರಿತವಾಗುವ ಚಿತ್ರಗಳನ್ನು ಪಡೆಯಲು ಬಿಡುವೆಲ್ಲಿದೆ. ಗೂಗಲ್, ಯಾಹೂ ಮೊದಲಾದ ಹುಡುಕು ತಾಣಗಳಲ್ಲಿ ನಿಮ್ಮ ಲೇಖನಕ್ಕೆ ಬೇಕಾದ ಕೀ-ವರ್ಡ್ ಹೊಡೆದರೆ ಲಕ್ಷಾಂತರ ಚಿತ್ರಗಳು ಕ್ಷಣಾರ್ಧದಲ್ಲಿ ಲಭಿಸುತ್ತದೆ. ಅದರಲ್ಲಿ ಕೆಲವನ್ನು ಆಯ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರಾಯ್ತು. ಪುಕ್ಕಟೆಯಾಗಿ ಸಿಗುವ ಸರಕು ಬೇರೆ, ಛಾಯಾಗ್ರಾಹಕನಿಗೆ ಹಣ ಕೊಡುವ ಅಗತ್ಯವೂ ಇಲ್ಲ.

ಏಕೆ ಕದಿಯಬಾರದು
ಅಂತರ್ಜಾಲದ ಹುಡುಕು ತಾಣಗಳು ನಿಮಗೆ ಬೇಕಾದ ಚಿತ್ರವನ್ನು ಹುಡುಕಿ ಕೊಡುತ್ತದಾದರೂ ಆ ಚಿತ್ರದ ಸಂಪೂರ್ಣ ಹಕ್ಕು  ಚಿತ್ರ ತೆಗೆದವರ ಅಥವಾ ಅದನ್ನು ಅಂತರ್ಜಾಲಕ್ಕೆ ಸೇರಿಸಿದವರದ್ದಾಗಿರುತ್ತದೆ. ಅವರ ಅನುಮತಿಯಿಲ್ಲದೆಯೇ ಯಾವುದೇ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಅನೀತಿ ಮಾತ್ರವಲ್ಲ ಅಪರಾಧ ಕೂಡ.ಚಿತ್ರ ತೆಗೆದವನ, ತೆಗೆಯಿಸಿಕೊಂಡವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದರೆ ಕಳ್ಳತನ ಮಾಡುವವರು ಇದರ ಹಿಂದೆ ಇನ್ನೊಬ್ಬರ ಪರಿಶ್ರಮ ಅಡಗಿದೆ ಎಂಬುದನ್ನು ಸುಲಭದಲ್ಲಿ ಮರೆಯುತ್ತಾರೆ.

ಕದಿಯುವುದನ್ನು ತಡೆಗಟ್ಟುವುದು ಹೇಗೆ?
ಫ್ಲಿಕರ್, ಫೋಟೋ ಬಕೆಟ್ ಮೊದಲಾದ  ಚಿತ್ರ ತಾಣಗಳಲ್ಲಿ ನೀವು ಸೇರಿಸಿದ ಚಿತ್ರಗಳು ಹುಡುಕು ತಾಣಗಳಲ್ಲಿ ಕಾಣಿಸದಿರುವಂತೆ, ಡೌನ್ ಲೋಡ್ ಮಾಡಿಕೊಳ್ಳದಂತೆ ಸೆಟ್ಟಿಂಗ್ ಮಾಡಬಹುದು. ಚಿತ್ರದ ಮೇಲೆ ಕಾಪಿ ರೈಟ್ ವಾಟರ್ ಮಾರ್ಕ್ ಹಾಕುವುದೂ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು.

ಕದ್ದರೆ ಏನು ಮಾಡಬಹುದು
ಪತ್ರಿಕೆಯ ಪ್ರತಿಯನ್ನು ಸಂಗ್ರಹಿಸಿ ಈ ಮೂಲಕ ನಿಮ್ಮ ಹಕ್ಕು ಉಲ್ಲಂಘನೆಯಾದ ಬಗ್ಗೆ ಸಂಪಾದಕರಿಗೆ ಪತ್ರ ಬರೆದು ಬಹಿರಂಗ ಕ್ಷಮಾಪಣಾ ಪತ್ರ, ಪರಿಹಾರ ಕೇಳಬಹುದು. ನಿಮಗೆ ಸಂಪಾದಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ ಲಾಯರಿಂದ ನೋಟೀಸ್ ಕಳುಹಿಸಬಹುದು. ಇದಕ್ಕೂ ಪ್ರತಿಕ್ರಿಯೆ ಬಾರದಿದ್ದರೆ ಪತ್ರಿಕೆಯ ಮೇಲೆ ಕೇಸ್ ಹಾಕಿಸಿ, ಈ ವಿಚಾರವಾಗಿ ಬೇರೆ ಪತ್ರಿಕೆಯಲ್ಲಿ ಅಥವಾ ಬ್ಲಾಗಿನಲ್ಲಿ ಬರೆಯಬಹುದು.

ಇಷ್ಟಕ್ಕೂ ನಾನಿದನ್ನೆಲ್ಲಾ ಬರೆದದ್ದಕ್ಕೆ ಕಾರಣವಿದೆ. ಈಚೆಗೆ ಶಿವಮೊಗ್ಗದ ಪತ್ರಿಕೆಯೊಂದು ನನ್ನ ಕುಟುಂಬದ ಹೆಣ್ಣು ಮಗಳೊಬ್ಬಳ ಫೋಟೋವನ್ನು ನನ್ನ ಫ್ಲಿಕರ್ ಅಕೌಂಟಿನಿಂದ ಕದ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಲೇಖನದೊಂದಿಗೆ ಪ್ರಕಟಪಡಿಸಿತ್ತು. ಆ ಲೇಖನದ ಲೇಖಕರು ತಮ್ಮ ಫೇಸ್-ಬುಕ್ ಅಕೌಂಟಿನಲ್ಲಿ ಇದರ ಚಿತ್ರ ಪ್ರತಿಯೊಂದನ್ನು ಹಾಕಿ ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದರು. ಇದನ್ನು ನೋಡಿದ ನನ್ನ ಸ್ನೇಹಿತರೊಬ್ಬರು ನನಗೆ ವಿಷಯ ತಿಳಿಸಿದಾಗ ಗಾಬರಿಯಾಯ್ತು.  ಆಕೆಗೆ ಪತ್ರಿಕೆಯಲ್ಲಿ ತನ್ನ ಚಿತ್ರ ಪ್ರಕಟವಾಗಿರುವುದು ಇಷ್ಟದ ವಿಷಯವಲ್ಲ. ನನಗೂ ನನ್ನ ಫೋಟೋ ಅನುಮತಿಯಿಲ್ಲದೇ  ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಇಷ್ಟವಿಲ್ಲ.

ಇದೇ ಲೇಖನದಲ್ಲಿ ಪತ್ರಿಕೆಯವರು ಬಳಸಿದ ಇನ್ನೊಂದು ಚಿತ್ರದ್ದೂ ಇದೇ ಕಥೆ. ಅಂತರ್ಜಾಲದಿಂದ ಹುಡುಕಿದ ಈ ಚಿತ್ರಕ್ಕೆ ವಾಟರ್-ಮಾರ್ಕ್ ನಲ್ಲಿ ಕಾಪಿರೈಟ್ ಹಾಕಿದ್ದರೂ ಪತ್ರಿಕೆಯವರು ಅದನ್ನು ಅಳಿಸುವ ಜಾಣತನ ತೋರಿದ್ದಾರೆ.

ಪೇಸ್-ಬುಕ್ಕಿನಲ್ಲಿ ಲೇಖಕರು ಹಾಕಿಕೊಂಡ ಪ್ರತಿಯನ್ನು ತೆಗೆಯುವಂತೆ ಆದೇಶಿಸಿದ ನಂತರ ಲೇಖಕರು ಚಿತ್ರವನ್ನು ತೆಗೆದು, “ಇನ್ನು ಮುಂದೆ ತನಗೆ ಬರೆಯುವುದು ಬೇಡವೆನಿಸುತ್ತಿದೆ” ಎಂದು status ಹಾಕಿಕೊಂಡಿದ್ದರು. ಇದೇ ರೀತಿ ಕಳ್ಳತನವಾದರೆ ನನ್ನಂತವರಿಗೂ ಇನ್ನು ಮುಂದೆ ಚಿತ್ರವನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಮನಸ್ಸು ಬಾರದೇನೋ! ನಾನೇನಾದರೂ ನನ್ನ ಚಿತ್ರಕ್ಕೆ ಆ ಪತ್ರಿಕೆಯ ಒಂದು ಬರಹ ಹೊಂದುತ್ತದೆ ಎಂದು ಅವರ ಅನುಮತಿಯಿಲ್ಲದೇ ಅದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದರೆ ಪತ್ರಿಕೆಯವರು ಸುಮ್ಮನಿರುತ್ತಿದ್ದರೇ?

ಇದರ ಬಗ್ಗೆ ನನ್ನ ಆಕ್ಷೇಪ ವ್ಯಕ್ತ ಪಡಿಸಿದಾಗ “ವಿಷಾದವಿದೆ”  ಎಂಬ ವಿಷಯದೊಂದಿಗೆ ಸಂಪಾದಕರು ಒಂದು ದಿನದ ನಂತರ ಪತ್ರಿಸಿದ್ದರು. ಅವರ ಪ್ರತಿಕ್ರಿಯೆಯಲ್ಲಿ ತಮ್ಮ ಸಮರ್ಥನೆಯಿತ್ತೇ ಹೊರತು ತಾವು ಮಾಡಿದ್ದು ತಪ್ಪು, ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂಬುದರ ಕುರಿತು ಒಂದು ವಾಕ್ಯವೂ ಇಲ್ಲ. ನಿಮಗೆ ಕ್ರೆಡಿಟ್ ಕೊಡಬೇಕಿತ್ತು ಎನ್ನುವುದು ಅವರ ಅಭಿಪ್ರಾಯವೇ ಹೊರತು ನನ್ನ ಅಪ್ಪಣೆ ಪಡೆಯಬೇಕಿತ್ತೆಂಬ ತಿಳಿವು ಅವರಿಗಿಲ್ಲ.

ನಿಮಗೂ ಮುಂದೊಂದು ದಿನ ಈ ಪರಿಸ್ಥಿತಿ ಎದುರಾಗಬಹುದು. ಪತ್ರಿಕೋದ್ಯಮದವರ ಈ ನಡವಳಿಕೆಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳುವುದೊಳಿತು.

******************

ಚಿತ್ರಕೃಪೆ: hollycenterwood.blogspot.com

1 ಟಿಪ್ಪಣಿ Post a comment
  1. ರವಿ
    ಮೇ 25 2011

    ಪಾಲ, ಒಳ್ಳೆಯ ಕೆಲಸ ಮಾಡಿದಿರಿ, ಇಂಥ ಲೇಖನ ಬರೆದು. ನಿಲುಮೆಯ ಲೇಖನಗಳೂ ಕಳ್ಳತನವಾಗಿತ್ತು ಹಿಂದೆ. ಬಿಟ್ಟಿಯಾಗಿ ದೊರಕುವ ಮಾಹಿತಿಯ ದುರ್ಬಳಕೆ ಅದೂ ವಾಣಿಜ್ಯ ಉದ್ದೇಶಕ್ಕೆ ತುಂಬಾ ಕೆಟ್ಟ ಬುದ್ಧಿ. ನಾನೂ ನೋಡಿದ್ದೆ ಆ ಲೇಖಕರ ಫೇಸ್-ಬುಕ್ ಪುಟ. ಸಮಾಜೋದ್ಧಾರದ ಜವಾಬ್ದಾರಿ ಹೊತ್ತಿರುವ ಪತ್ರಿಕೆಯ ಸಂಪಾದಕರೂ ಒಂದು ಕ್ಷಮಾರ್ಪಣೆಯ ಯೋಚನೆ ಮಾಡಿಲ್ಲ ಹಾಗೂ ಇಂಥಹ ಲೇಖಕರಿಗೆ ಕಡಿವಾಣ ಹಾಕುವುದು ಸಾಧ್ಯವಿಲ್ಲ ಎಂದರೆ ತುಂಬಾ ಬೇಸರದ ವಿಷಯ. ಕಳ್ಳನಿಗೂ ಒಂದು ನೈತಿಕತೆ ಇರುತ್ತದೆ. ಸಾಮಾನ್ಯ ವಿಷಯಗಳಾದರೆ ಬೇರೆ ಸಂಗತಿ. ಅದು ಬಿಟ್ಟು ಇತರರ ವೈಯುಕ್ತಿಕ ಚಿತ್ರ/ವಿಷಯಗಳನ್ನು ಕದಿಯುವ ಉಸಾಬರಿ ಏಕೆ? ಅದು ಎಷ್ಟು ನೋವು ತರುವ ವಿಷಯ ಎಂಬ ಸಾಮಾನ್ಯ ಜ್ಞಾನ ಇಲ್ಲವೇ ಇವರಿಗೆ? ಒಂದು ವೇಳೆ ಕ್ಷಮೆ ಕೇಳಿದರೂ, ಪತ್ರಿಕೆಯ ಪ್ರತಿಗಳು ಈಗಾಗಲೇ ಹಂಚಿ ಹೋಗಿವೆ. ಇದರ ನಷ್ಟ ತುಂಬಲು ಸಿದ್ಧರಿದ್ದಾರೆಯೇ ಲೇಖಕರು? ಇಷ್ಟೆಲ್ಲಾ ಮಾಡಿ, ಕ್ಷಮೆಯೂ ಕೇಳದೆ “ಬರೆಯಲು ಇಷ್ಟವಿಲ್ಲವಾಗಿದೆ” ಎನ್ನುವ status ಯಾವ ಪುರುಷಾರ್ಥಕ್ಕೆ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments