ವಿಷಯದ ವಿವರಗಳಿಗೆ ದಾಟಿರಿ

ಮೇ 30, 2011

5

ಶಿಕ್ಷಣ ಎಂಬ ವ್ಯಾಪಾರದ ಕುರಿತು…..

‍ನಿಲುಮೆ ಮೂಲಕ

ಅರೆಹೊಳೆ ಸದಾಶಿವರಾವ್

ಈಗ ಎಲ್ಲಿ ನೋಡಿದರೂ ಶೈಕ್ಷಣಿಕ ವರ್ಷದ ಪುನರಾರಂಭದ ಕಾಲ. ಇತ್ತೀಚೆಗೆ ಶಿಕ್ಷಣದ ಕೆಲವು ಮಹತ್ವದ ಫಲಿತಾಂಶಗಳು ಹೊರಬಿದ್ದುವು. ಯಾಕೋ ಇವುಗಳನ್ನು ಗಮನಿಸಿದಾಗ ಕೆಲವು ಪ್ರಶ್ನೆಗಳು ಏಳುತ್ತವೆ. ಹೀಗೇ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸುತ್ತಿದ್ದಾಗ, ನನಗೆ ತಿಳಿದ ಕೆಲವು ಶಾಲೆಗಳು ನೂರು ಶೇಕಡಾ ಬಂದದ್ದನ್ನು ಓದಿದೆ. ಆದರೆ ಆ ಶಾಲೆಗಳು ವಾಸ್ತವಿಕವಾಗಿ ಆ ರೀತಿಯ ಗುಣಮಟ್ಟದ ಶಿಕ್ಷಣವನ್ನು ಕೊಟ್ಟ ಬಗ್ಗೆ ಅನುಮಾನಗಳಿದ್ದುವು. ಕೊನೆಗೆ ಈ ನೂರು ಶೇಕಡಾದ ಮರ್ಮವನ್ನು ತಿಳಿಯಹೋದರ ಅಚ್ಚರಿ ಹುಟ್ಟಿದ ಅಂಶವೆಂದರೆ, ಅಲ್ಲಿಂದ ಈ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು ಕೇವಲ ೧೩ಎಂಬುದು!  ಮತ್ತೊಂದು ಶಾಲೆಯ ಪರಿಚಿತ ಮುಖ್ಯೋಪಾದ್ಯಾಯರು ತಮ್ಮ ಶಾಲೆಯ ಫಲಿತಾಂಶವನ್ನು ನೂರು ಶೇಕಡಾ ನಿರೀಕ್ಷಿಸಿದ್ದೆ. ಆದರೆ ಕೇವಲ ೮೭ ಶೇಕಡಾ ಬಂತೆಂದು ಅಳಲು ತೋಡಿಕೊಂಡಾಗ ಅವರ ಶಾಲೆಯಲ್ಲೆಷ್ಟು ವಿದ್ಯಾರ್ಥಿಗಳು ಕುಳಿತಿದ್ದರು ಎಂದು ಪ್ರಶ್ನಿಸಿದರೆ ಆಶ್ಚರ್ಯ ಕಾದಿತ್ತು. ಒಟ್ಟೂ ಕುಳಿತ ನೂರು ಮಕ್ಕಳಲ್ಲಿ ೮೭ ಜನ ಮಕ್ಕಳು ಉನ್ನತ ದರ್ಜೆಯಲ್ಲಿ ಪಾಸಾಗಿದ್ದರು!. ಆದರೆ ಪತ್ರಿಕೆಯಲ್ಲಿ ಹಾಕಿಕೊಳ್ಳಲು ಅವರ ಫಲಿತಾಂಶದ ಶೇಕಡಾವಾರು ೮೭ ಮಾತ್ರ!.

ಸುಮ್ಮನೇ ಒಂದು ಆಸಕ್ತಿಯಿಂದ ಈ ನೂರು ಶೇಕಡಾದ ಶಾಲೆಗಳ ಪಟ್ಟಿಯನ್ನು ಹಿಡಿದು ಹೊರಟರೆ, ಅನೇಕ ಶಾಲೆಗಳಲ್ಲಿ ಮೇಲೆ ಕಾಣಿಸಿದ ಉದಾಹರಣೆಗಳು ಸಿಕ್ಕಿದುವು. ಇವತ್ತು ನೀವು ಒಮ್ಮೆ ರಸ್ತೆ ಬದಿ ಹಾದುಹೋದರೆ, ಲೆಕ್ಕಕ್ಕೆ ಸಿಗದಷ್ಟು ಶಿಕ್ಷಣ ಸಂಸ್ಥೆಗಳು ಕಾಣುತ್ತವೆ. ನೀವು ಗಮನಿಸಿದರೆ ಹೆಚ್ಚಿನೆಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ದೊಡ್ಡ ದೊಡ್ಡ ಕಟೌಟ್‌ಗಳ ಮುಖಾಂತರ ಆಯಾಯ ಶಾಲೆಗಳ ಸಾಧಕ ವಿದ್ಯಾರ್ಥಿಗಳ ಫೋಟೋ ಹಾಕಿಕೊಂಡಿರುತ್ತಾರೆ. ಇದನ್ನು ವಿದ್ಯಾರ್ಥಿಗಳನ್ನು ಹೃದಯಾಂತರಾಳದ ಮೂಲಕ ಅಭಿನಂದಿಸುವ ಹೆಜ್ಜೆ ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ ಇದು ಶಿಕ್ಷಣದ ವ್ಯಾಪಾರೀಕರಣಕ್ಕೆ, ಹೊಸ ಪೋಷಕರನ್ನು ಸೆಳೆದು ಪ್ರವೇಶ ಮಾಡಿಸಿಕೊಳ್ಳಲು ಹೆಚ್ಚಿನ ವಿದ್ಯಾಸಂಸ್ಥೆಗಳು ಅನುಸರಿಸುವ ಒಂದು ಮಾರ್ಗೋಪಾಯ ಎಂಬುದು ಮೇಲ್ನೋಟಕ್ಕೂ ಕಂಡು ಬರುತ್ತದೆ. ಈ ನೂರು ಶೇಕಡಾ ಫಲಿತಾಂಶದ ಕಥೆಯೂ ಭಿನ್ನವೇನಲ್ಲ.

ನಾವೀ ಬಗ್ಗೆ ಇನ್ನೂ ಒಂದಷ್ಟು ಯೋಚಿಸೋಣ. ನಗರ ಪ್ರದೇಶಗಳಲ್ಲಿ ಇಂದು ನಾಯಿಕೊಡೆಗಳಂತೆ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ನಾನು ಗಮನಿಸಿದ ವಿದ್ಯಾಸಂಸ್ಥೆಯೊಂದರ ಉದಾಹರಣೆ ಸೋಜಿಗವಾಗಿದೆ. ಅಲ್ಲಿ ಸೀದಾ ಹೋಗಿ ನಿಮ್ಮ ಮಗುವಿಗೆ ಸೀಟ್ ಕೇಳಿದರೆ ಸಿಗುವುದೇ ಇಲ್ಲ. ಕ್ಷಮಿಸಿ, ಎಲ್ಲಾ ಸೀಟುಗಳೂ ಭರ್ತಿಯಾಗಿವೆ, ಇನ್ನೇನಾದರೂ ಚೇರ್‌ಮನ್ ಮನಸು ಮಾಡಿದರೆ ‘ಏನಾದರೂ ಮಾಡಬಹುದು’ ಎಂಬ ಉತ್ತರ ಬರುತ್ತದೆ. ಒಂದು ಪೃತಿಷ್ಠಿತ ಕಾಲೇಜಿಗೆ ಹೀಗೇ ಭೇಟಿ ಕೊಟ್ಟಾಗ, ಅಲ್ಲಿನ ಛೆರ್‌ಮನ್‌ನ್ನು ನೋಡಲು ಇದ್ದ ಕ್ಯೂ ನೋಡಿ ಆಶ್ಚರ್ಯವಾಯಿತು. ಚಿಕ್ಕಮಗಳೂರಿನ ಒಬ್ಬರು ಹೊರಗೆ ಬೆಂಚಿನಲ್ಲಿ ಕುಳಿತಿದ್ದರು. ತಮ್ಮದೇನು ಸಮಸ್ಯೆ ಎಂದೆ. ಅದಕ್ಕವರು ನೋಡಿ ಸ್ವಾಮಿ, ಚಿಕ್ಕಮಗಳೂರಿನಿಂದ ಬಂದಿದ್ದೇನೆ, ಒಳ್ಳೆಯ ಕಾಲೇಜಿದು, ಏನಾದರೂ ಮಾಡಿ ಮಗನಿಗೊಂದು ಸೀಟ್ ಕೊಡಿಸಬೇಕೆಂದಿದ್ದೇನೆ, ಎಲ್ಲಾ ಭರ್ತಿಯಾಗಿದೆಯಂತೆ, ಅದಕ್ಕೇ ಚೇರ್‌ಮನ್‌ರನ್ನು ಭೇಟಿಯಾಗಲು ಕಾದಿದ್ದೇವೆ, ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ, ಸೀಟ್ ಸಿಕ್ಕಿದರೆ ಸಾಕೆಂದು ಆ ವ್ಯಕ್ತಿ ಒಂದೇ ಸಮನೆ ಪ್ರವರ ಬಿಚ್ಚಿಟ್ಟರು! ಇಲ್ಲಿ ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ಎಂಬುದಕ್ಕೆ ವಿಶೇಷ ಮಹತ್ವ ಕೊಟ್ಟೇ ಮಾತಾಡುತ್ತಾರೆ. ಕೊನೆಗೂ ಅವರು ಛೇರ್‌ಮನ್‌ರನ್ನು ಕಂಡು ನಗುಮೊಗದೊಂದಿಗೆ ಹೊರಬಂದರು. ಅಲ್ಲಿ ಹಣ ಎಷ್ಟು ಖರ್ಚಾಯಿತೋ ಗೊತ್ತಿಲ್ಲ, ಅವರಿಗೆ ‘ತುಂಬಾ ಕಷ್ಟ’ದಲ್ಲಿ ಒಂದು ಸೀಟ್ ಸಿಕ್ಕಿತು. ನಿಮಗೆ ಗೊತ್ತಿರಬಹುದು, ಹೀಗೆ ಅಲ್ಲಿ ಸಿಗುವ ಎಲ್ಲಾ ಸೀಟ್‌ಗಳೂ ತುಂಬಾ ‘ಕಷ್ಟದಲ್ಲಿಯೇ’ ಸಿಗುವಂತುವು! ಇನ್ನೊಬ್ಬ ಪೋಷಕರ ಮಗಳು ೭೦% ಅಂಕ ಪಡೆದು ಬಂದಿದ್ದಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನ!. ಇಲ್ಲಿಯ ತನಕ ಹೇಗೋ ಓದಿ  ಬಂದಿದ್ದವಳಿಗೆ ಅಲ್ಲಿ ಉನ್ನತ ಶಿಕ್ಷಣದ ಆಸೆ. ಯಾರೋ ದಾನಿಗಳೊಬ್ಬರ ಸಹಾಯದಿಂದ ಇಲ್ಲಿಯ ತನಕ ಆಗಿತ್ತು. ಆ ಶಿಕ್ಷಣ ಸಂಸ್ಥೆಯ ಬಗ್ಗೆ ಕೇಳಿದ ಮೆಚ್ಚುಗೆಯ ಮಾತುಗಳಿಂದ ಆಕೆಗಿಲ್ಲಿ ಏನಾದರೂ ಶುಲ್ಕವಿನಾಯಿತಿಯೊಂದಿಗೆ ಶಿಕ್ಷಣ ಪಡೆಯುವ ಆಸೆ. ವಿನಂತಿ ಪತ್ರ ಹಿಡಿದು ಒಳ ಹೊಕ್ಕವಳಿಗೆ ಬರಸಿಡಿಲು. ಇದೇನಮ್ಮಾ, ಕೇವಲ ೭೦ಶೇಕಡಾದ ನಿನಗೆ ನಾನು ಏನೂ ಮಾಡಲಾಗದು. ೯೦% ಪಡೆದ ಮಕ್ಕಳು ನನ್ನಲ್ಲಿ ಸಾಲು ಸಾಲಾಗಿ ಬಿದ್ದಿದ್ದಾರೆ ಎಂದು ಅಕ್ಷರಶ: ಜೋರುದನಿಯಲ್ಲಿಯೇ ಹೇಳಿದಾಗ ಹುಡುಗಿ ಮತ್ತು ಹೆತ್ತವರು ಕಂಗಾಲು!. ಅಲ್ಲಿನ ಶಿಕ್ಷಣದ ಆಸೆಗೆ ತಿಲಾಂಜಲಿ ಇತ್ತು ಹೊರ ಬಂದ ಹುಡುಗಿಯ ಮುಖ ನೋಡಿದರೆ ಎಂತವರಿಗೂ ಕರುಣೆ ಬರುತ್ತಿತ್ತು.!

ಇಂದು ಹೆಚ್ಚಿನ ಕಾಲೇಜುಗಳ ಸಮಸ್ಯೆ ಇದು. ೮೦-೯೦ ಶೆಕಡಾ ಪಡೆದ ಮಕ್ಕಳನ್ನು ಇವರು ಸೇರಿಸಿಕೊಂಡು, ಮತ್ತೆ ಫಲಿತಾಂಶ ಬಂದಾಗ ತಮ್ಮ ಕಾಲೇಜು ಮಾಡಿದ ಸಾಧನೆಯನ್ನು ಹೇಳಿಕೊಳ್ಳುತ್ತವೆ. ಆದರೆ ಯಾವುದಾದರೂ ಶಾಲೆ, ೫೦-೬೦ಶೇಕಡಾ ಫಲಿತಾಂಶವಿರುವ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಒದಗಿಸಿ, ಅವರನ್ನು ೮೦-೯೦ಕ್ಕೆ ಏರಿಸಿದ ಉದಾಹರಣೆಗಳಿವೆಯೇ? ಖಂಡಿತಕ್ಕೂ ಇಲ್ಲ. ಬುದ್ದಿವಂತರನ್ನು ತುಂಬಿಸಿಕೊಂಡು ಅವರನ್ನೇ ಮತ್ತೆ ಬುದ್ದಿವಂತರನ್ನಾಗಿಸಿದ್ದೇವೆ ಎಂಬುದು ಯಾವ ಪುರುಷಾರ್ಥ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇಲ್ಲಿ ಕಾಲೇಜುಗಳು ಮಾತ್ರ ಈ ಪರಿಯ ಶೈಕ್ಷಣಿಕ ವ್ಯಾಪಾರೀಕರಣಕ್ಕೆ ಕಾರಣವಲ್ಲ. ಪೋಷಕರೂ ಹೆಚ್ಚಿನ ಸಂದರ್ಭಗಳಲ್ಲಿ ಕಾರಣರಾಗುತ್ತಾರೆ. ಮೇಲೆ ಹೇಳಿದ ಉದಾಹರಣೆಯೊಂದರಲ್ಲಿ ಪೋಷಕನೊಬ್ಬ ಎಷ್ಟು ಹಣ ಖರ್ಚಾದರೂ ತೊಂದರೆ ಇಲ್ಲ, ಪ್ರವೇಶ ಸಿಕ್ಕಿದರೆ ಸಾಕೆನ್ನುತ್ತಾನೆ. ಇದಕ್ಕೆ ಕಾರಣ ತನ್ನ ಮಗು ಉನ್ನತ ಶಿಕ್ಷಣ ಪಡೆಯಲಿ ಎಂಬ ಉದ್ದೇಶವೇ ಮುಖ್ಯವಾದದ್ದಾದರೂ, ಅದನ್ನೇ ಇಂತಹ ಸಂಸ್ಥೆಗಳು ದಾಳವನ್ನಾಗಿ ಮಾಡಿಕೊಳ್ಳುತ್ತವೆ ಎಂಬ ಅರಿವು ಆ ಪೋಷಕನಿಗಿರುವುದಿಲ್ಲ. ಅದು ಬೇಸರದ ವಿಷಯ.

ನೀವಿಂದು ಗಮನಿಸುತ್ತಾ ಹೋದರೆ ಎಲ್ಲೆಲ್ಲಿಯೂ ಈ ದುರಂತವನ್ನು ಕಾಣಬಹುದು. ಅದೆಷ್ಟೋ ಕಾಲೇಜುಗಳಲ್ಲಿ, ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸಂಬಂಧಿ ಕಾಲೆಜುವಳ ಪ್ರವೇಶವೆಂದರೆ ಇಂದು ಲಕ್ಷಗಳಮಾತಾಗಿದೆ. ಶತಾಯ ಗತಾಯ ತಮ್ಮ ಮಕ್ಕಳನ್ನು ಈ ಪದವಿಗೆ ಕಳುಹಿಸಬೇಕೆನ್ನುವ ಪೋಷಕರು ಎಷ್ಟು ತೆತ್ತಾದರೂ ಪ್ರವೇಶ ಗಿಟ್ಟಿಸುವ ಮನಸ್ಸು ಮಾಡಿ, ಹಣದ ಚೀಲದೊಂದಿಗೆ ಮಾತಾಡುತ್ತಾರೆ. ಇಲ್ಲಿ ಶಿಕ್ಷಣ ಒಂದು ರೀತಿಯ ಸೇವೆಯಾಗುವ ಬದಲು, ವ್ಯವಾಹಾರವಾಗುವುದರಲ್ಲಿ ಪೋಷಕರ ಅತೀ ಹೆಚ್ಚಿನ ನಿರೀಕ್ಷೆಯೂ ಕಾರಣವೆನಿಸದೆ?

ಇದೆಲ್ಲರ ಪರಿಣಾಮವಾಗಿ ಶಿಕ್ಷಣ ಇಂದು ಬೇರೆಲ್ಲಾ ಕ್ಷೇತ್ರಗಳಂತೆ ಸ್ಪರ್ಧಾತ್ಮಕ ಕ್ಷೇತ್ರವಾಗಿದೆ. ನಾಲ್ಕೈದು ವರ್ಷಗಳ ಕಾಲ ಕಷ್ಟ ಪಟ್ಟು, ಒಳ್ಳೆಯ ಗುಣ ಮಟ್ಟದ ಶಿಕ್ಷಣ ಕೊಟ್ಟ ಪ್ರಚಾರ ಮಾಡಿಬಿಟ್ಟರೆ, ಇಂತಹ ಹಣದ ಚೀಲದ ಪ್ರವೇಶಗಳು ತಾನಾಗಿಯೇ ಬರುತ್ತವೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಸರಕಾರದ ಯಾವುದೇ ಕಾನೂನುಗಳೂ ಇಲ್ಲಿ ಕೆಲಸ ಮಾಡುವುದಿಲ್ಲ.

ಮೊದಲು ಕಾಲೇಜುಗಳಿಗೆ  ಶೈಕ್ಷಣಿಕ ವರ್ಷಾರಂಭದಲ್ಲಿ ಮಾತ್ರ ಹಣಗಳಿಕೆಗೆ ಅವಕಾಶ ಇರುತ್ತಿತ್ತಿ. ಆದರೆ ಇಂದು ಅನೇಕ ಪ್ರವೇಶ ಪರೀಕ್ಷೆಗಳ ಹೆಸರಲ್ಲಿ ನಿರಂತರವೂ ಇದೊಂದು ದಂಧೆಯಾಗಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಈ ಹೆಸರಲ್ಲಿ ರಜಾದಿನಗಳ ಕೋರ್ಸ್, ಅದೂ ಇದೂ ಎಂದು ಮಕ್ಕಳನ್ನು ಪ್ರವೇಶ ಪರೀಕ್ಷೆಗೆ ತಯಾರಿಸುವ ಯಂತ್ರಗಳಂತೆ ಕಾರ್ಯಾಚರಿಸುತ್ತವೆ. ಒಬ್ಬ ಪೋಷಕರು, ಶಿವಮೊಗ್ಗದಿಂದ ತಮ್ಮ ಮUಳನ್ನು ಮಂಗಳೂರಿನ ಕಾಲೇಜೊಂದಕ್ಕೆ ಪ್ರವೇಶ ಪರೀಕ್ಷೆಯ ರಜಾಕಾಲದ ಕೋರ್ಸ್‌ಗೆ, ಬಾಡಿಗೆ ರೂಂ (ಪಿಜಿ)ಯಲ್ಲಿಟ್ಟು ಓದಿಸುವ ಪರಿ ಕೇಳಿ ಆಶ್ಚರ್ಯವಾಯ್ತು. ಇದು ಅನಿವಾರ್ಯವೇ ಎಂದರೆ, ಎಲ್ಲರೂ ಹೋಗುವಾಗ ನಾವೂ ಕಳುಹಿಸಬೇಕಲ್ಲ ಎಂದು ಉತ್ತರಿಸಿದ್ದನ್ನು ಕೇಳಿ ಆಶ್ಚರ್ಯವಾಯ್ತು. ಅಂದರೆ ಆಯಾಯ ಹಂತದಲ್ಲಿ ಇಂತಹ ಕಾಲೇಜುಗಳು ಅಥವಾ ಟ್ಯೂಶನ್ ಒದಗಿಸುವ ಸಂಸ್ಥೆಗಳು ಮಕ್ಕಳಿಗೇ ನೇರವಾಗಿ ಇದಿಲ್ಲವಾದರೆ ಮುಂದೆ ಹೋಗುವುದೇ ಕಷ್ಟ ಎಂಬ ಮನೋಸ್ಥಿತಿಗೆ ತಂದು ಬಿಟ್ಟಿರುತ್ತಾರೆ. ಹಾಗಾಗಿ ನಿಮ್ಮ ಮಕ್ಕಳೂ ಮಾನಸಿಕವಾಗಿ ಇಂತಹ ಶಿಕ್ಷಣ ಬೇಕೇ ಬೇಕು ಎಂಬಷ್ಟು ನಿಮ್ಮನ್ನು ‘ಅನಿವಾರ್ಯ’ಕಾರಣಗಳ ನೆಪವೊಡ್ಡಿ, ಒಪ್ಪಿಸಿಬಿಡುತ್ತಾರೆ. ಇದೂ ಒಂದು ರೀತಿಯ ಶಿಕ್ಷಣ ವ್ಯಾಪಾರೀಕರಣದ ಮುಖ.

ಈ ಎಲ್ಲದರ ಪರಿಣಾಮವಾಗಿ ಇಂದಿನ ಮಕ್ಕಳ ಮೇಲಿನ ಒತ್ತಡ ಮಿತಿ ಮೀರಿದೆ. ಒಬ್ಬ ಪರಿಚಿತ ಹುಡುಗಿ ಪಿಯುಸಿಯಲ್ಲಿ ೮೩% ಅಂಕ ಪಡೆದಿದ್ದಳು. ಆಕೆಗೆ ಶುಭಾಶಯ ಹೇಳೋಣವೆಂದು ಫೋನ್‌ಮಾಡಿದರೆ ಧ್ವನಿಯಲ್ಲಿ ಯಾಕೋ ಬೇಸರದ ಛಾಯೆ. ಇದೇನಿದು ಎಂದು ಕೇಳಿದರೆ, ಆಕೆಗೆ ತೀರಾ ಅಸಮಾಧಾನ. ಯಾಕೆಂದರೆ ಅವಳ ಮತ್ತು ಪೋಷಕರ ನಿರೀಕ್ಷೆ ಕನಿಷ್ಠ ೯೦%, ೭%  ಅಂಕ ಕಡಿಮೆಯಾಗಿದ್ದಕ್ಕೆ ಪೋಷಕರಾದಿಯಾಗಿ ಎಲ್ಲರೂ ಅಸಮಾಧಾನದಿಂದಿದ್ದಾರೆ! ಒಮ್ಮೆ ಶಾಕ್ ಆಯಿತು, ವಿಶ್ ಮಾಡದೇ ಫೋನ್ ಇಡುವ ಅನಿವಾರ್ಯತೆ!

ಇನ್ನು ಶಾಲೆ, ಕಾಲೇಜುಗಳಲ್ಲಿ ಪುಸ್ತಕ, ಯೂನಿಫಾರಂ ಇತ್ಯಾದಿಗಳ ದಂಧೆಗಳ ಬಗ್ಗೆ ಬರೆದರೆ ಅದೇ ಪುಟಗಟ್ಟಲೆ ಆಗಬಹದು. ವಿಶೇಷವಾಗಿ ಈ ಲೇಖನದ ಉದ್ದೇಶ ಒಂದೇ. ಪೋಷಕರು ದಯವಿಟ್ಟ ತಮ್ಮ ಮಕ್ಕಳು ಕೇವಲ ಇಂಜಿನಿಯರ್, ವೈದ್ಯರಾದರೆ ಮಾತ್ರಜೀವನ ಎಂಬ ಮನೋಸ್ಥಿತಿಯಿಂದ ಹೊರಬರಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಪರಿಮಿತಿಯಲ್ಲಿಯೇ, ಸಾಧ್ಯವಾದಷ್ಟೂ ಬಡ ಮತ್ತು ಆರ್ಹ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಶಿಕ್ಷಣ ನೀಡಬೇಕು, ಮಕ್ಕಳೂ ಶಿಕ್ಷಣದ ಹಾದಿಯಲ್ಲಿ ಒಮ್ಮೆ ಎಡವಿದರೆ ಜೀವನವೇ ಮುಗಿಯಿತು ಎಂಬ ಭ್ರಮನಿರಸನಕ್ಕೆ ಬರಬಾರದು- ಈ ಅಂಶಗಳನ್ನು ನಾವು ಮನನ ಮಾಡಿಕೊಂಡರೆ, ಬಹುಶ: ಕೆಲವಾದರೂ ಕುಟುಂಬಗಳು ನೆಮ್ಮದಿಯನ್ನು ಕಾಣಬಹದು.

ಆ ದಿಸೆಯಲ್ಲಿ ಶಿಕ್ಷಣದ ವ್ಯಾಪಾರೀಕರಣಕ್ಕೆ ತುಸುವಾದರೂ ಕಡಿವಾಣ ಹಾಕಬಹುದು.

***********

ಚಿತ್ರಕೃಪೆ:  nursinglink.monster.com

 

5 ಟಿಪ್ಪಣಿಗಳು Post a comment
 1. Raghu idkidu
  ಮೇ 30 2011

  hettavare vicchara maaduvalli edaviddare. shikshana kshetra halaagadiruttadeye ?

  ಉತ್ತರ
 2. Raghu idkidu
  ಮೇ 30 2011

  ಶಿಕ್ಷಣ ವ್ಯಾಪಾರವೇ ಆಗಿದೆ. ಇಂದು ಹಣ ಮಾಡುವುದೊಂದೇ ಉದ್ದೇಶ.ಗುಣ ಮಟ್ಟಕ್ಕೆ ಪ್ರಾಶಸ್ತ್ಯವೆಂದು ಭಾಷಣ ಮಾತ್ರ.ಅರ್ಥೈಸಿಕೊಳ್ಳಬೇಕಾದ ಹೆತ್ತವರೇ ಬುದ್ಧಿ ಹೀನರಂತೆ ವರ್ತಿಸುತ್ತಿರುವುದು ದುರಂತವೇ ಸರಿ.

  ಉತ್ತರ
 3. Ravi Murnad,Cameroun
  ಮೇ 31 2011

  ಅಣಬೆಗಳಂತೆ ಎದ್ದು ನಿಂತಿವೆ ಹಣಕ್ಕಾಗಿ ಬಾಯ್ಬಿಟ್ಟ ಹೆಣದ ವಿಧ್ಯಾಸಂಸ್ಥೆಗಳು.ಕೆ.ಜಿ.ಅಕ್ಕಿಗೆ ೫೦ ರೂಪಾಯಿ ಆದರೆ, ಇದರ ಸಂಪಾದನೆಗೆ ವಾರವಿಡೀ ದುಡಿಯುವ ಕಾರ್ಮಿಕರ ಮಕ್ಕಳು ಎಲ್ಲಿಗೆ ಹೋಗಬೇಕು? ಸಾವಿರಗಟ್ಟಲೆ ಡೊನೇಷನ್‍ ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತವೆ ವಿಧ್ಯಾಸಂಸ್ಥೆ ಎಂಬ ಹಣೆಪಟ್ಟಿ ಹೊತ್ತ ಕಾನ್ವೆಂಟ್ ಭೂತಗಳು.ಇದಕ್ಕೊಂದು ಕಾನೂನುನನ್ನು ಯಾವುದೇ ಸರಕಾರಗಳು ತರಲಿಲ್ಲ ಅನ್ನುವ ನೋವು ಇದೆ.
  ಮನೆ-ಮನೆಯಲ್ಲಿ ಅಕ್ಷರದ ದೀಪ ಹಚ್ಚುವ ಕಾರ್ಯ ಆಗಬೇಕು.ಸಮಾಜದ ಮೂಲೆಮೂಲೆಯಲ್ಲಿ ಸತ್ಯವಂತ ನಾಗರೀಕರು ಬರಬೇಕು.ಅನ್ಯಾಯ ಕಂಡಲ್ಲಿ ಪ್ರತೀರೋಧ ವ್ಯಕ್ತಪಡಿಸುವ ಮನೋಭಾವ ಸೃಷ್ಟಿಯಾಗಬೇಕು. ಆಂಗ್ಲ ಙ್ಞಾನವಿಲ್ಲದಿದ್ದರೆ ಇಂದಿನ ಕಾಲದಲ್ಲಿ ಕೆಲಸ ಸಿಕ್ಕುವುದೇ ಕಷ್ಟವಾಗಿದೆ. ಅದನ್ನು ದುರುಪಯೋಗ ಪಡಿಸಿಕೊಂಡಿವೆ ಈ ವ್ಯಾಪಾರೀಕರಣದ ವಿಧ್ಯಾಸಂಸ್ಥೆಗಳು.
  ಗೌರವಾನ್ವಿತ ಅರೆಹೊಳೆ ಸದಾಶಿವರಾಯರು ಅತ್ತ್ಯುತ್ತಮ ಲೇಖನ ಬರೆದು ಕಣ್ಣು ತೆರೆಸಿದ್ದೀರಿ. ನಿಮಗೆ ವಂದನೆಗಳು.ನಿಮ್ಮ ಲೇಖನ ಸರಕಾರದ ಮಾಹಿತಿಗೆ ಬರಬೇಕಿತ್ತು ಅಂತ ಒತ್ತಡ ಹೇರುತ್ತಿದ್ದೇನೆ.ಮಕ್ಕಳು ಈ ದೇಶದ ಮಾನಸೀಕ ಬಲ. ಅವರ ಆತ್ಮಸ್ಥರ್ಯವನ್ನು ಮತ್ತು ದೇಶದ ಅಭಿವೃದ್ಧಿಯನ್ನು ಇಂತಹ ಸಂಸ್ಥೆಗಳು ಹಣಕ್ಕಾಗಿ ಮಾರಾಟ ಮಾಡುತ್ತಿವೆ ಅಂತ ದುಃಖ್ಖದಿಂದ ಹೇಳುತ್ತಿದ್ದೇನೆ.

  ಉತ್ತರ
 4. ರವಿ
  ಮೇ 31 2011

  ಬೇಸರವೆಂದರೆ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳು ಸೇವಾ ಕ್ಷೇತ್ರಗಳಾಗಿ ಉಳಿದಿಲ್ಲ. ಎರಡರಲ್ಲೂ ಕುರುಡು ಕಾಂಚಾಣ ಹುಚ್ಚೆದ್ದು ಕುಣಿಯುತ್ತಿದೆ.

  ಉತ್ತರ
 5. Arehole
  ಜೂನ್ 2 2011

  ಇನ್ನೂ ಒ೦ದು ವಿ‍‍ಶಯದ ಬಗ್ಗೆ ನಾನಿಲ್ಲಿ ಹೇಳಲೇ ಬೇಕು. ಅದೆ೦ದರೆ, ಇ೦ಥ ವಿದ್ಯಾಸ೦ಸ್ಥೆಗಳನ್ನು ನಡೆಸುವವರಿಗೂ ಅನೇಕ ಸಮಸ್ಯೆಗಳಿರುತ್ತವೆ. ಅದರ ಇನ್ನೊ೦ದು ಮುಖದ ಬಗ್ಗೆ ಸ್ನೇಹಿತರೊಬ್ಬರು ಹೇಳಿದಾಗ ಅಚ್ಚರಿಯಾಯಿತು. ಕೇವಲ ಒ೦ದು ಸ೦ಸ್ಥೆಯನ್ನು ಆರ೦ಭಿಸಲು ಸ೦ಬ೦ಧಿಸಿದ ಅಧಿಕಾರಿಗಳು, ಇಲಾಖೆ, ಮತ್ತು ಆಡಳಿತ ಯ೦ತ್ರದ ಕೈ ಬಿಸಿಮಾಡಲೇ, ದೊಡ್ಡ ಚೀಲದಲ್ಲಿ ಹಣ ಬೇಕಾಗುತ್ತದೆ. ಅದು ಮತ್ತೆ ಬೀಳುವುದು ನಮ್ಮ೦ತಹ ಪಾಲಕರ ಮೇಲೇ….ಈ ಲೇಖನದಲ್ಲಿ ತಿಳಿಸಿದ ರೀತಿಯಲ್ಲಿ.ಅದರ ಬಗ್ಗೆಯೂ ದೀರ್ಘಾಧ್ಯಯನದ ಅವಶ್ಯಕತೆ ಇದೆ…ಏನೇ ಇರಲಿ, ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments