ವಿಷಯದ ವಿವರಗಳಿಗೆ ದಾಟಿರಿ

ಮೇ 31, 2011

10

ಕನ್ನಡ ಟಿವಿ ವಾಹಿನಿಗಳು ಹಾಗೂ ಮೂಢನಂಬಿಕೆಗಳ ಪ್ರಸಾರ

by ನಿಲುಮೆ

ಆನಂದ ಪ್ರಸಾದ್

ಕನ್ನಡದ ಎಲ್ಲ ಟಿವಿ ವಾಹಿನಿಗಳೂ ಜ್ಯೋತಿಷ್ಯವೆಂಬ ಅವೈಜ್ಞಾನಿಕ ಹಾಗೂ ಮೂಢನಂಬಿಕೆಗಳನ್ನು ಬಲಪಡಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಇದು ಮಾಧ್ಯಮಗಳಿಗೆ ಇರಬೇಕಾದ ಜವಾಬ್ದಾರಿಗೆ ವಿರುದ್ಧವಾದುದು.  ವಿಜ್ಞಾನದ ಆವಿಷ್ಕಾರವಾದ ಟಿವಿಯನ್ನು ತಮ್ಮವ್ಯಾಪಾರ   ಹೆಚ್ಚಿಸಿಕೊಳ್ಳಲು ಜ್ಯೋತಿಷಿಗಳಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವ ಟಿವಿ ವಾಹಿನಿಗಳು ಯಾವುದೇ ನಾಚಿಕೆ ಇಲ್ಲದೆ ಈ ಕೆಲಸದಲ್ಲಿ ತೊಡಗಿವೆ.  ವಿಜ್ಞಾನಿಗಳು ಶ್ರಮ ವಹಿಸಿ ಸಂಶೋಧಿಸಿದ ಟಿವಿ ಮಾಧ್ಯಮ ಇಂದು ಅವೈಜ್ಞಾನಿಕ ವಿಚಾರಗಳು ಹಾಗೂ ಮೂಢನಂಬಿಕೆಗಳನ್ನು ಬಲಪಡಿಸಲು ದುರುಪಯೋಗವಾಗುತ್ತಿದೆ.  ಇದನ್ನು ಪ್ರಜ್ಞಾವಂತರು ವಿರೋಧಿಸಬೇಕಾಗಿದೆ.  ಮಾಧ್ಯಮಗಳಿಗೆ ಜನರನ್ನು ವಿಚಾರವಂತರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಇದೆ.  ಇದನ್ನು ಕಡೆಗಣಿಸಿ ೨೧ ಶತಮಾನದಲ್ಲೂ ಜ್ಯೋತಿಷ್ಯ, ವಾಸ್ತು ಎಂಬ ವೈಜ್ಞಾನಿಕ ಆಧಾರಗಳಿಲ್ಲದ ಪುರೋಹಿತಶಾಹಿ ವಿಚಾರಗಳನ್ನು ಜನರ ಮೇಲೆ ಹೇರಲು ಯತ್ನಿಸುತ್ತಿರುವ ಟಿವಿ ವಾಹಿನಿಗಳ ಧೋರಣೆಯನ್ನು ವಿಚಾರವಂತರು, ಸಾಹಿತಿಗಳು, ವಿಜ್ಞಾನಿಗಳು, ತಂತ್ರಜ್ಞರು, ಪ್ರಜ್ಞಾವಂತರು  ವಿರೋಧಿಸಬೇಕಾಗಿದೆ.

ಇಂದು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ಮೂಢನಂಬಿಕೆಗಳನ್ನು ಬಲಪಡಿಸುವ ಪುರೋಹಿತಶಾಹಿ ಕುತಂತ್ರದ ವಿರುದ್ಧವೂ ಹೋರಾಟ ನಡೆಯಬೇಕಾದ ಅಗತ್ಯ ಇದೆ.  ಕಷ್ಟಪಟ್ಟು ದುಡಿದು ತಿನ್ನುವುದರ ಬದಲು ಕೆಲವು ಪುರೋಹಿತಶಾಹಿಗಳು ಜ್ಯೋತಿಷ್ಯ, ವಾಸ್ತುವಿನ ಹೆಸರಿನಲ್ಲಿ ಜನರ ನಂಬಿಕೆಗಳನ್ನು, ಜನರ ಭಯವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಸುಲಭೋಪಾಯವಾಗಿ ಬಳಸಿಕೊಳ್ಳುತ್ತಿರುವುದೂ ಒಂದು ರೀತಿಯ ಭ್ರಷ್ಟಾಚಾರವಲ್ಲವೇ?  ಇಂಥ ಭ್ರಷ್ಟಾಚಾರಕ್ಕೆ ಟಿವಿ ವಾಹಿನಿಗಳು ಕೈಗೂಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸವೆಂದು ಟಿವಿ ವಾಹಿನಿಗಳನ್ನು ನಡೆಸುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.  ಜ್ಯೋತಿಷ್ಯ, ವಾಸ್ತು ಇಲ್ಲದೆ ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಿವೆ.   ಹೀಗಿರುವಾಗ ನಮ್ಮ ಟಿವಿ ವಾಹಿನಿಗಳು ಜ್ಯೋತಿಷ್ಯ, ವಾಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸುತ್ತ್ತಿರುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ನಾವು ಕೇಳಬೇಕಾಗಿದೆ.  ಜ್ಯೋತಿಷ್ಯ, ವಾಸ್ತುವಿನಂಥ ಅವೈಜ್ಞಾನಿಕ ಸಂಗತಿಗಳು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಮಹತ್ತರ ತಡೆಗಳೇ ಆಗಿವೆ.  ಇದು ದೇಶದಲ್ಲಿ ವಿಜ್ಞಾನದ ಬೆಳವಣಿಗೆಗೂ ದೊಡ್ಡ ತಡೆಗೋಡೆಯಾಗಿದೆ.  ಪೂಜೆ ಪುನಸ್ಕಾರ, ಶಾಂತಿ, ಹೋಮ, ಮಾಟ ಮಂತ್ರ ಗಳಿಂದ ಜೀವನದಲ್ಲಿ ಯಶ ಸಾಧಿಸಬಹುದು ಎಂಬ ನಂಬಿಕೆಗಳನ್ನು ಜನಮಾನಸದಲ್ಲಿ ಹಬ್ಬಿಸಿದರೆ ದೇಶದಲ್ಲಿ ವಿಜ್ಞಾನ ಬೆಳೆಯುವುದಾದರೂ ಹೇಗೆ?  ಅಧುನಿಕ ಜಗತ್ತಿನ ಬಹುತೇಕ ಆವಿಷ್ಕಾರಗಳು ಪಾಶ್ಚಾತ್ಯ ಜಗತ್ತಿನಿಂದ ರೂಪುಗೊಂಡಿವೆ.  ಪ್ರಪಂಚದಲ್ಲೇ ಎರಡನೇ ದೊಡ್ಡ ಜನಸಂಖ್ಯೆಯ ದೇಶವಾದ ನಮ್ಮ ದೇಶದಲ್ಲಿ ಆವಿಷ್ಕಾರವಾದ ವೈಜ್ಞಾನಿಕ ಸಲಕರಣೆಗಳು ಬೆರಳೆಣಿಕೆಯಲ್ಲೂ ಇಲ್ಲ.  ರೇಡಿಯೋ, ಟೆಲಿವಿಶನ್, ವಿದ್ಯುತ್, ಮೋಟಾರು, ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್, ವಿಮಾನ, ಹಡಗು, ರೈಲು, ಬಸ್ಸು, ಕಾರು, ಪೆಟ್ರೋಲಿಯಂ, ವಿದ್ಯುತ್ ಬಲ್ಬು, ಫ್ರಿಡ್ಜು, ವಾಶಿಂಗ್ ಮೆಷಿನ್, ವಾಚು, ಕ್ಯಾಲ್ಕುಲೇಟರ್, ಮಿಕ್ಸಿ ಹೀಗೆ ಜನೋಪಯೋಗಿಯಾದ ಯಾವ ವೈಜ್ಞಾನಿಕ ಅವಿಷ್ಕಾರಗಳೂ ನಮ್ಮ ದೇಶದವಲ್ಲ.  ಇವನ್ನೆಲ್ಲ ಬಳಸುವ ನಾವು ಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಮಾತ್ರ ಬೆಳೆಸುವಲ್ಲಿ ಬಹಳ ಹಿಂದೆ ಇದ್ದೇವೆ.

ನಂಬಿಕೆಗಳು ಜನಸಾಮಾನ್ಯರಿಗೆ ಜೀವನದಲ್ಲಿ ಬರುವ ಕಷ್ಟಗಳನ್ನು ಸಹಿಸಲು, ಅವುಗಳನ್ನು ಎದುರಿಸಲು ಸಹಾಯಕ ಎಂಬುದು ನಿಜವಾದರೂ ಅದಕ್ಕಾಗಿ ದೇವರನ್ನು ನಂಬಿದರೆ ಸಾಕಾಗುವುದಿಲ್ಲವೆ?  ಜ್ಯೋತಿಷ್ಯ, ವಾಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸಬೇಕಾದ ಅಗತ್ಯವಿದೆಯೆ?  ಮಾಧ್ಯಮಗಳಿಗೆ ಕೆಲವು ಮೌಲ್ಯಗಳೂ, ಜವಾಬ್ದಾರಿಗಳೂ ಇರಬೇಕು.   ಬಂಡವಾಳಶಾಹಿಗಳು ಬಂಡವಾಳ ಹಾಕಿದಾಕ್ಷಣ ತಮಗೆ ಬೇಕಾದಂತೆ ಮಾಧ್ಯಮಗಳನ್ನು ಬಳಸಬಹುದೆಂದು ತಿಳಿಯುವುದು ಸಮಂಜಸವಲ್ಲ.  ಮಾಧ್ಯಮ ಕ್ಷೇತ್ರವನ್ನು ಹಣ ಮಾಡುವ ಸಾಧನವಾಗಿ ಕಾಣುವುದು ದೇಶದ್ರೋಹದ ಹಾಗೂ ಮಾನವದ್ರೋಹದ ಕೆಲಸವೇ ಸರಿ.  ಹಣ ಮಾಡಬೇಕೆಂದಿದ್ದರೆ ವ್ಯಾಪಾರ, ಉದ್ಯಮಗಳ ಹಲವು ಕ್ಷೇತ್ರಗಳಿವೆ.  ಅದನ್ನು ಬಿಟ್ಟು ಬಂಡವಾಳಗಾರರು ಮಾಧ್ಯಮ ಕ್ಷೇತ್ರಕ್ಕೆ ಕಾಲಿರಿಸಿ ಆ ಕ್ಷೇತ್ರದ ಮೌಲ್ಯಗಳನ್ನು ಕುಲಗೆಡಿಸುತ್ತಿರುವುದು ಸರ್ವಥಾ ಸಾಧುವಲ್ಲ.  ಈ ಬಗ್ಗೆ ದೇಶದ ಪ್ರಜ್ಞಾವಂತರು, ವಿಚಾರವಂತರು ಜಾಗೃತಿ ಮೂಡಿಸಬೇಕಾಗಿದೆ.  ಮಾಧ್ಯಮಗಳ ಈ ಧೋರಣೆಯ ಬಗ್ಗೆ ವಿಚಾರವಂತರು, ಪ್ರಜ್ಞಾವಂತರು ಧ್ವನಿಯೆತ್ತಿದರೆ ಇದನ್ನು ಟಿವಿ ವಾಹಿನಿಗಳು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ.  ತಾವು ಮಾಡಿದ್ದೇ ಸರಿ ಎಂಬ ಹಣಬಲದ ಅಹಂಕಾರದಿಂದ ಇಂಥ ಧೋರಣೆಗಳು ರೂಪುಗೊಳ್ಳುತ್ತವೆ.  ಇಂಥ ಸರ್ವಾಧಿಕಾರಿ ಪ್ರವೃತ್ತಿಯನ್ನು ವಿರೋಧಿಸಲು ಇಂಟರ್ನೆಟ್ ಇಂದು ಒಂದು ವರದಾನವಾಗಿ ಬಂದಿದೆ.   ಮಹಾನ್ ಬಂಡವಾಳವಿಲ್ಲದೇ ಇಂದು ಇಂಟರ್ನೆಟ್ ನಲ್ಲಿ ವೆಬ್ ಸೈಟುಗಳು, ಬ್ಲಾಗುಗಳನ್ನು ತೆರೆದು ವಿಚಾರಗಳನ್ನು ಹಬ್ಬಿಸಲು ಸಾಧ್ಯವಿದೆ.  ಫೇಸ್ ಬುಕ್, ಆರ್ಕುಟ್ ಮೊದಲಾದ ತಾಣಗಳು ಜನಸಂಪರ್ಕವನ್ನು ಸುಲಭವಾಗಿಸಿವೆ.  ಹೆಚ್ಚೆಚ್ಚು ಬ್ಲಾಗುಗಳು ಕನ್ನಡದಲ್ಲಿ ಬರಬೇಕಾಗಿದೆ ಹಾಗೂ ಈ ಬ್ಲಾಗುಗಳು ಪರಸ್ಪರ ಸಹಕಾರದಿಂದ, ಲೇಖನಗಳ ವಿನಿಮಯದಿಂದ ಹೆಚ್ಚೆಚ್ಚು ಜನರನ್ನು ತಲುಪಲು ಪ್ರಯತ್ನಿಸಬೇಕಾಗಿದೆ.  ಹಾಗಾದಾಗ ಬಂಡವಾಳಗಾರರಿಂದ ನಡೆಸಲ್ಪಡುವ ಮಾಧ್ಯಮಗಳ ಸರ್ವಾಧಿಕಾರಿ ಧೋರಣೆಯನ್ನು ತಕ್ಕಮಟ್ಟಿಗಾದರೂ ತಡೆಯಲು ಸಾಧ್ಯವಿದೆ.

*************

ಚಿತ್ರಕೃಪೆ: experiencefestival.com

10 ಟಿಪ್ಪಣಿಗಳು Post a comment
 1. ಹೌದು., ಜನರ ಮನಸನ್ನು ಮುಟ್ಟುವಂತೆ ಕಾರ್ಯ ನಿರ್ವಹಿಸುವುದು ಮಾತ್ರ ದೃಶ್ಯಮಾಧ್ಯಮ. ಇಂಥ ಮಾಧ್ಯಮಗಳು ಜನರ ಮನಸನ್ನು ಮೌಢ್ಯತೆಗೆ ತಳ್ಳುವಂತೆ ಮಾಡುವುದು ಸರಿಯಲ್ಲ. ಇನ್ನಾದರೂ.. ಟಿ.ವಿ. ಮಾಧ್ಯಮಗಳು ಮೌಢ್ಯತೆಯ ಹಾದಿಗೆ ರತ್ನಗಂಬಳಿ ಹಾಸದಿರಲಿ.

  ಉತ್ತರ
 2. ರವಿ ಜಿ ಬಿ
  ಮೇ 31 2011

  ಅಪ್ರಬುದ್ಧ ಲೇಖನ ಎಂದಷ್ಟೇ ಹೇಳಬಹುದು ಇದನ್ನು!!! ಟೀಕಿಸುವಾಗ ನೋಡಿ ಟೀಕಿಸ ಬೇಕು .ಏಕೆಂದರೆ ನೀವು ಟೀಕಿಸುವ ಭರದಲ್ಲಿ ನಮ್ಮದೆಲ್ಲವೂ ಕೆಟ್ಟದ್ದು ,ಪಾಶ್ಚಿಮಾತ್ಯ ದ್ದು ಎಲ್ಲವೂ ಅತ್ಯುತ್ತಮ ಎಂಬ ಭಾವ ಸ್ಪಷ್ಟವಾಗಿ ಕಾಣಿಸಿತು. ಅದು ತಪ್ಪು. ಟಿ ವಿ ವಾಹಿನಿಗಳಲ್ಲಿ ಬರುತ್ತಿರುವ ಕಪಟ ಜ್ಯೋತಿಷಿಗಳನ್ನು ವಿರೋಧಿಸಬೇಕಾಗಿದೆಯೇ ಹೊರತು, ಜ್ಯೋತಿಷ್ಯ/ವಾಸ್ತು ಶಾಸ್ತ್ರವನ್ನಲ್ಲ ಇದನ್ನು ನಾವು ನೀವೆಲ್ಲರೂ ನೆನಪಿಡಬೇಕು.
  ವಿಜ್ಞಾನ ಕಂಡು ಹಿಡಿದ “ಅಣು ಬಾಂಬ್ ” ಜಪಾನನ್ನು ನಾಶಪಡಿಸಿದರೆ, ವಿಜ್ಞಾನ ನಾಶಮಾಡುವುದಕ್ಕಷ್ಟೇ ಸೀಮಿತ ಎನ್ನಲಾದೀತೇ? ಅಣು ವಿಜ್ಞಾನವನ್ನ ನಾವು ಸರಿಯಾಗಿ ಉಪಯೋಗಿಸಿ ಕೊಂಡಿಲ್ಲ ಎನ್ನ ಬೇಕೇ ಹೊರತು ವಿಜ್ಞಾನವೇ ವಿನಾಶಕಾರಕ ಅಂದರೆ ಹೇಗಿರುತ್ತದೆ?
  ಇನ್ನು ಪುನಃ “ನರೇಂದ್ರ ಶರ್ಮ ” ನಂತಹ ಕಪಟ ಜ್ಯೋತಿಷಿಗಳ ಉದಾಹರಣೆಗಳೊಂದಿಗೆ ನಿಮ್ಮ ವಾದ ದ ಪುಷ್ಟೀಕರಿಸುವ ಕೆಲಸ ಮಾಡಬೇಡಿ ಪ್ಲೀಸ್ !!!
  ಕೆಟ್ಟದ್ದನ್ನು ,ಕಪಟಿಗಳನ್ನು ಒಟ್ಟಾಗಿ ವಿರೋಧಿಸೋಣ ಆದರೆ ವಿರೋಧಿಸುವುದೇ ಕಾಯಕ ವಾಗಬಾರದು ಅಸ್ಟೇ.

  ಶೀರ್ಷಿಕೆ ನೋಡಿ ಖುಷಿಯಿಂದ ಓಹೋ ಇವರು ಕಪಟ ಜ್ಯೋತಿಷಿಗಳನ್ನು ಟೀಕಿಸ ಹೊರಟಿದ್ದಾರೆ ಎಂದು ಒಳಹೊಕ್ಕು ನೋಡಿದರೆ ಬಯಲಾಯ್ತು ನಿಮ್ಮ ಬಂಡವಾಳ !!! ಕಪಟ ಜ್ಯೋತಿಷಿಗಳಿಗಿ೦ತಲೋ ನೀವೇ ಡೇಂಜರ್ ಅನ್ನಿಸಿತು ನನಗೆ.
  ಅಣು ಬಾಂಬ್ ಗಿ೦ತ ಜೈವಿಕ ಅಸ್ತ್ರವೇ ಡೇ೦ಜರು !!! ಯಾಕಂದ್ರೆ ಅದು ಬರೋದು ಮತ್ತು ಇರೋದೇ ಗೊತ್ತಾಗೋದಿಲ್ಲ !!!!

  ಉತ್ತರ
  • ananda prasad
   ಜೂನ್ 1 2011

   ಜ್ಯೋತಿಷ್ಯ ಹಾಗೂ ವಾಸ್ತುಗಳಿಗೆ ಯಾವುದೆ ವೈಜ್ಞಾನಿಕ ಆಧಾರ ಇಲ್ಲ. ಇಂಥ ಅವೈಜ್ಞಾನಿಕ ಅಂತೆ ಕಂತೆಗಳನ್ನು ಪ್ರಸಾರ ಮಾಡುವುದು ವಾಸ್ತವವಾಗಿ ಸಂವಿಧಾನದ ಉಲ್ಲಂಘನೆಯೂ ಹೌದು. ನಮ್ಮ ಸಂವಿಧಾನ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸ್ಪಷ್ಟವಾಗಿ ಹೇಳಿದೆ. ಈ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಸ್ವತಂತ್ರ ಚಿಂತನ ಶಕ್ತಿ ಇಲ್ಲದವರಿಗೆ ಇಂಥ ವಿಚಾರಗಳು ಹಿಡಿಸುವುದಿಲ್ಲ ಏಕೆಂದರೆ ಅವರು ತಮ್ಮ ಆಲೋಚನಾ ಶಕ್ತಿಯನ್ನು ಉಪಯೋಗಿಸುವುದಿಲ್ಲ. ಅವರಲ್ಲಿ ಇರುವುದು ಪರಂಪರೆಯಿಂದ ‘ಪ್ರೊಗ್ರಾಮ್’ ಮಾಡಲ್ಪಟ್ಟ ವಿಷಯಗಳು ಮಾತ್ರ. ಹೀಗಾಗಿ ಹೊಸ ವಿಚಾರಗಳನ್ನು ಚಿಂತನೆಯ ಬೆಳಕಿನಲ್ಲಿ ನೋಡಲು ವಿಫಲರಾಗುತ್ತಾರೆ.

   ಉತ್ತರ
   • ಮಹೇಶ ಪ್ರಸಾದ ನೀರ್ಕಜೆ
    ಜೂನ್ 2 2011

    ರೀ, ಈ ವೈಜ್ನಾನಿಕ ಅಂತಂದ್ರೆ ಏನಂತ ಸ್ವಲ್ಪ ಹೇಳ್ತೀರಾ? ಗಣಿತ ಸೂತ್ರವೊಂದರ ಮೂಲಕ ನಿರೂಪಿಸಬಲ್ಲದ್ದೇ ಅಥವಾ ಪ್ರಯೋಗಾಲಯದಲ್ಲಿ ನಿರೂಪಿಸಬಲ್ಲದ್ದೇ? ಅಥವಾ ಯಾವುದೇ ವಿಷಯದ ಬಗ್ಗೆ ’ವಿಶೇಶವಾದ ಜ್ನಾನ’ ವೇ? ಇದನ್ನು ಮೊದಲು ಹೇಳಿಬಿಡಿ. ಯಾಕೆಂದರೆ ಅವೈಜ್ನಾನಿಕವಾದ ಎಷ್ಟೋ ವಿಷಯಗಳಿವೆ. ಹೆತ್ತ ತಾಯನ್ನು ಮಕ್ಕಳು ಕೊನೆತನಕ ಚೆನ್ನಾಗಿ ನೋಡಿಕೊಳ್ಳಬೇಕೆನ್ನುವುದು ಒಂದು ರೀತಿಯಲ್ಲಿ ಅವೈಜ್ನಾನಿಕವೇ! ಯಾಕೆ ಹೇಳಿ, ಮಕ್ಕಳು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಸರಿ ಎಂದು ವೈಜ್ನಾನಿಕವಾಗಿ ನಿರೂಪಿಸಲು ಅಸಾಧ್ಯ! ಅದಕ್ಕೆ ಎಲ್ಲವನ್ನೂ ವೈಜ್ನಾನಿಕ ಅವೈಜ್ನಾನಿಕ ಎಂದು ವಿಂಗಡಿಸುವುದೇ ಅವೈಜ್ನಾನಿಕ.

    ಸಂವಿಧಾನ ವೈಜ್ನಾನಿಕ ಮನೋಭಾವ ಬೆಳೆಸಬೇಕು ಎಂದಿದೆ. ಅದು ಸರಿಯೂ ಹೌದು. ಆದರೆ ಇಲ್ಲಿ ವೈಜ್ನಾನಿಕತೆ ಅಂದರೆ ಏನು, ಅದನ್ನು ಎಲ್ಲಿ ಬೆಳೆಸಬೇಕೆನ್ನುವ ಕಾಮನ್ ಸೆನ್ಸ್ ನಮಗಿರಬೇಕು.

    ಅಂದಹಾಗೆ ನೀವು ಜ್ಯೋತಿಷ್ಯದ, ವಾಸ್ತು ವಿರುಧ್ಧ ನಿಮ್ಮ ವಾದ ಮಂಡಿಸಿದರೆ ನನ್ನ ಬೆಂಬಲವಿದೆ. ಆದರೆ ಇಲ್ಲಿ ವೈಜ್ನಾನಿಕತೆ/ಅವೈಜ್ನಾನಿಕತೆಯನ್ನು ಮಾತ್ರ ಮಧ್ಯೆ ತರಬೇಡಿ. ಏಕೆಂದರೆ ಇದರಿಂದ ಉಪಯೋಗ ಇಲ್ಲ. ದೇವರ ಅಸ್ತಿತ್ವ, ಮನುಷ್ಯರ ನಡುವಿನ ಪ್ರೀತಿ ಇವೆಲ್ಲ ವೈಜ್ನಾನಿಕ ಪರಿಧಿಯೊಳಗೆ ಬರುವುದಿಲ್ಲ. ಈ ವಿಷಯಗಳಿಗೆ ಅವುಗಳದ್ದೇ ಆದ ಅಧ್ಯಯನ ಅಗತ್ಯವಿದೆ. ಒಂದು ವಿಷಯದ ಬಗ್ಗೆ ವಿಶೇಷ ಜ್ನಾನ ಹೊಂದಿರುವುದೇ ವೈಜ್ನಾನಿಕ ಎಂದಾದರೆ ಜ್ಯೋತಿಷ್ಯ, ವಾಸ್ತು, ದೇವರು, ಅಧ್ಯಾತ್ಮ ಇವೆಲ್ಲವೂ ವೈಜ್ನಾನಿಕವೇ ಆಗುತ್ತದೆ. ಈ ಕಿರಿಕಿರಿಗಳೆಲ್ಲ ಬೇಡ ಎಂದಾದರೆ ಈ ಪದಪ್ರಯೋಗ ಮಾಡದಿರುವುದೇ ಒಳ್ಳೆಯದು. ಕಂದಾಚಾರ ವಿರೋಧಿಸಬೇಕಿದ್ದರೆ ಅದನ್ನು ಅವೈಜ್ನಾನಿಕ ಎಂದು ನಿರೂಪಿಸುವುದು ಅಂಥಾ ಅಗತ್ಯವೇನಲ್ಲ. ಅಂತಹ ಮೂಢನಂಬಿಕೆಗಳಿಂದ ಹೇಗೆ ತೊಂದರೆಗಳುಂಟಾಗುತ್ತವೆ, ಅವು ಏಕೆ ಬೇಡ, ಅವಕ್ಕಿಂತ ಉತ್ತಮವಾದ ವಿಚಾರಗಳು ಏನಿವೆ ಇತ್ಯಾದಿ ಹೇಳಿದರೆ ಜನಕ್ಕೆ ಅರ್ಥ ಆಗುತ್ತದೆ. ವಿಚಾರವಾದಿಗಳು ಎಡವುತ್ತಿರುವುದು ಇಲ್ಲೇ. ಇಂಥಾ ವಾದಗಳಿಂದ ಅತ್ತ ಢಾಂಭಿಕರೂ ಬದಲಾಗುವುದಿಲ್ಲ, ಇತ್ತ ಜನಸಾಮಾನ್ಯರಿಗೂ ಅರ್ಥ ಆಗುವುದಿಲ್ಲ. ಇಂಥಾ ವಾದಗಳಿಂದ ಇನ್ನೊಂದಿಷ್ಟು ವಿಚಾರವಾದಿಗಳಿಗೆ ಖುಷು ಆಗಬಹುದು ಅಷ್ಟೇ.

    ಉತ್ತರ
    • anand prasad
     ಜೂನ್ 3 2011

     ವೈಜ್ಞಾನಿಕ ಅಂದರೆ ಸ್ಪಷ್ಟವಾದ ಆಧಾರ ಇರುವ ಜ್ಞಾನ. ಎಷ್ಟು ಸಲ ಪ್ರಯೋಗ ಮಾಡಿದರೂ ಒಂದೇ ರೀತಿಯ ಫಲಿತಾಂಶ ಪ್ರಪಂಚದ ಯಾವುದೇ ಮೂಲೆಯಲ್ಲಿ ಯಾರೇ ಮಾಡಿದರೂ ಫಲಿತಾಂಶ ಒಂದೇ ರೀತಿ ಇದ್ದರೆ ಅದು ವೈಜ್ಞಾನಿಕ ಎನ್ನಬಹುದು. ವೈಜ್ಞಾನಿಕತೆ ಎಂಬ ಒಂದು ಮಾಪನದ ಆಧಾರ ಇದ್ದಾಗ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ತಿಳಿಯುತ್ತದೆ. ಹೀಗಾಗಿ ವೈಜ್ಞಾನಿಕ ಎಂಬುದನ್ನೇ ನೀವು ಅವೈಜ್ಞಾನಿಕ ಎಂಬುದು ಸಮಂಜಸವಲ್ಲ. ನೀವು ಪ್ರೀತಿ ಇನ್ನಿತರ ವಿಷಯಗಳನ್ನು ವೈಜ್ಞಾನಿಕ ಚರ್ಚೆಗಳ ನಡುವೆ ತರುವುದು ಸಮಂಜಸವಲ್ಲ. ದೇವರು, ಅಧ್ಯಾತ್ಮ ಎಂಬುದರ ಬಗ್ಗೆ ನನ್ನ ತಕರಾರು ಏನೂ ಇಲ್ಲ. ವಿಷಯ ಏನೆಂದರೆ ಪ್ರಭಾವಶಾಲಿ ಮಾಧ್ಯಮವಾದ ಟಿವಿಯಂಥ ದೃಶ್ಯ ಮಾಧ್ಯಮ ಜ್ಯೋತಿಷ್ಯದಂಥ ಆಧಾರವಿಲ್ಲದ, ಇಂದಿನ ದಿನಗಳಲ್ಲಿ ಅಗತ್ಯವಿಲ್ಲದ ವಿಚಾರಗಳನ್ನು ವೈಭವೀಕರಿಸುವುರ ಬಗ್ಗೆ. ಜ್ಯೋತಿಷ್ಯ ಅದರಷ್ಟಕೆ ಅದು ಇದ್ದರೆ ಇರಲಿ. ದೃಶ್ಯ ಮಾಧ್ಯಮದಲ್ಲಿ ಅದರ ಮೇರೆ ಮೀರಿದ ಪ್ರಚಾರ ದೇಶದ ಹಿತದೃಷ್ಟಿಯಿಂದ ಸಮಂಜಸವಲ್ಲ ಎಂದು ನನ್ನ ಅಭಿಪ್ರಾಯ ಅಷ್ಟೆ. ನೀವು ನಿಮ್ಮದೇ ಆದ ಸ್ವಂತ ಅಭಿಪ್ರಾಯ ಹೊಂದಬಹುದು. ಅದಕ್ಕೆ ನನ್ನ ಅಡ್ಡಿಯೇನೂ ಇಲ್ಲ.

     ಉತ್ತರ
   • ರವಿ ಜಿ ಬಿ
    ಜೂನ್ 2 2011

    ಇನ್ನೊಬ್ಬರ ನ೦ಬಿಕೆಯಲ್ಲಿ ಮದ್ಯ ಪ್ರವೇಶಿಸುವುದೂ ಸ೦ವಿಧಾನ ಬಾಹಿರ !!! ಇರಲಿ ನಿಮ್ಮ೦ತಹ ತಜ್ಞರಿಗೆ ಗೊತ್ತಿಲ್ಲದಿರುತ್ತದೆಯೇ? ಬಿಡಿ ಅದನ್ನ .

    ವೈಜ್ಞಾನಿಕವಾಗಿ (ನಿಮ್ಮಂತೆ) ಹೇಳಿದಾಗ ಅದು ಅವೈಜ್ಞಾನಿಕ ಎಂದು ಸಾಧಿಸಿ ತೋರಿಸುವುದು ನಿಮ್ಮ ಜವಾಬ್ದಾರಿಯೇ ಆಗಿರುತ್ತದೆ!!
    ಹೋಗಲಿ ನಿಮ್ಮಲ್ಲಿ ನನ್ನದೇನು ತಕರಾರು? ನೀವು ಜ್ಯೋತಿಷ್ಯವೆಂದರೆ ಕೇವಲ ಟಿ ವಿ ಯಲ್ಲಿ ಭವಿಷ್ಯ ಹೇಳೋ ಕಪಟ ಜ್ಯೋತಿಷಿಗಳು ಹೇಳಿದ್ದೆ ಆಗಿದೆ ,ಎಂದು ತಪ್ಪು ತಿಳಿದಿರುವ ಹಾಗಿದೆ!!!!! ಆ ನಿಮ್ಮ ಮನಸ್ಸಿನಲ್ಲಿರುವ ಪ್ರೊಗ್ರಾಮ್ ಮಾಡಲ್ಪಟ್ಟ ವಿಷಯಗಳನ್ನು ನಾನು ಬದಲಾಯಿಸಲಾಗದು, ನೀವೂ ತಯಾರಿರಲಾರಿರಿ !!!! ಬಿಡಿ .
    ತಪ್ಪು ತಿಳಿಯಬೇಡಿ ವೈಜ್ಞಾನಿಕ ಚಿಂತಕರೆ , ನಾನೆ೦ದೂ ಫಲ ಜ್ಯೋತಿಷ್ಯವನ್ನ ನ೦ಬೊದಿಲ್ಲ , ಹಾಗಂತ ಜ್ಯೋತಿಷ್ಯ ದಲ್ಲಿ ಹೇಳಿರುವಂತಹ ಕರಾರುವಕ್ಕಾದ ಲೆಕ್ಕಾಚಾರಗಳನ್ನು ಅವೈಜ್ಞಾನಿಕ ಅನ್ನಲು ನಾನು ನಿಮ್ಮಂತೆ ಪ್ರೊಗ್ರಾಮ್ ಮಾಡಲ್ಪಟ್ಟ ವೈಜ್ಞಾನಿಕ ವಿಚಾರವಂತನಲ್ಲ ಕ್ಷಮಿಸಿ !!!!!

    ” ನಾವೇ ಹೀಗೆ ನಮ್ಮದೆಲ್ಲವೂ ಕೆಟ್ಟದು ಪಾಶ್ಚಿ ಮತ್ಯರದೆಲ್ಲವೂ ಅತ್ಯುತ್ತಮ ಅ೦ದುಕೊ೦ಡಿರ್ತೆವೆ !!!” ಅದೇ ಸಮಯದಲ್ಲಿ ಅದೇ ವೈಜ್ಞಾನಿಕವಾಗಿ ಮುಂದುವರೆದ ಪಾಶ್ಚಿಮಾತ್ಯರು ಮನಶ್ಶಾ೦ತಿಗಾಗಿ ನಮ್ಮತ್ತ ಬರುತ್ತಾರೆ!! ಯಾಕೆ೦ದರೆ ಅವರು ಹೇಳುವವವರೆಗೆ ನಮ್ಮದು ವೈಜ್ಞಾನಿಕ ಅಂತ ಅನ್ನಿಸೋದೇ ಇಲ್ಲಾ ನಮಗೆ !!

    ಉತ್ತರ
  • santhosh kumar
   ಜೂನ್ 3 2011

   ನೀವು ಬುದ್ಧ, ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧಿ ಮೊದಲಾದ ಚಿಂತಕರನ್ನೂ ಅಪ್ರಬುದ್ಧ ಎಂದು ಹೇಳಿದರೂ ಅಚ್ಚರಿಯಿಲ್ಲ ಎಂದು ನನಗನಿಸುತ್ತದೆ. ಏಕೆಂದರೆ ಇವರುಗಳೂ ಜ್ಯೋತಿಷ್ಯದಂಥ ವಿಚಾರಗಳನ್ನು ಅಲ್ಲಗಳೆದಿದ್ದಾರೆ. ಅಲ್ಲದೆ ಇವರು ಪಶ್ಚಿಮದ ಚಿಂತಕರೇನೂ ಅಲ್ಲ, ನಮ್ಮ ದೇಶದವರೇ.

   ಉತ್ತರ
 3. anand prasad
  ಜೂನ್ 3 2011

  ಪ್ರಪ್ರಥಮವಾಗಿ ನಾನು ಸಾಮಾನ್ಯ ಮನುಷ್ಯ, ತಜ್ಞನೇನೂ ಅಲ್ಲ. ಅವೈಜ್ಞಾನಿಕ ಎಂದು ವೈಜ್ಞಾನಿಕವಾಗಿ ಸಾಧಿಸಿ ತೋರಿಸಬೇಕು ಎಂದು ಹೇಳಿದ್ದೀರಿ. ಇದನ್ನು ತಾರ್ಕಿಕವಾಗಿ ಸುಲಬ್ಫವಾಗಿ ಸಾಧಿಸಿ ತೋರಿಸಬಹುದು. ಒಬ್ಬ ಪ್ರಖ್ಯಾತ ಜ್ಯೋತಿಷಿಗೆ ಹತ್ತು ಜನ ಸತ್ತ ವ್ಯಕಿಗಳ ಹಾಗೂ ಹತ್ತು ಜನ ಜೀವಂತವಿರುವ ವ್ಯಕ್ತಿಗಳ ಜಾತಕ ಕೊಟ್ಟು ಇದರಲ್ಲಿ ಸತ್ತವರು ಯಾರು ಮತ್ತು ಯಾವಾಗ ಹಾಗೂ ಜೀವಂತವಿರುವವರು ಯಾರು ಎಂದು ನೂರಕ್ಕೆ ನೂರು ಅವರು ಹೇಳಿದರೆ ವೈಜ್ಞಾನಿಕ ಎಂದು ಹೇಳಬಹುದು. ಒಂದು ವೇಳೆ ನೂರಕ್ಕೆ ನೂರು ಅಥವಾ ೯೫ ಶೇಕಡಾ ಹೇಳಲು ಜ್ಯೋತಿಷಿಗೆ ಸಾಧ್ಯವಾಗದಿದ್ದರೆ ಅದು ಅವೈಜ್ಞಾನಿಕ ಎಂದು ಸಾಧಿಸಿ ತೋರಿಸಬಹುದು. ಈ ಬಗ್ಗೆ ಯಾವ ಜ್ಯೋತಿಷಿಯೂ ಸವಾಲನ್ನು ತೆಗೆದುಕೊಳ್ಳುವುದಿಲ್ಲ. ಇಂಥ ಪ್ರಯೋಗಗಳಿಗೆ ಪ್ರಖ್ಯಾತ ವಿಚಾರವಾದಿಗಳಾದ ಡಾ. ಅಬ್ರಹಾಂ ಕೊವೂರ್, ಡಾ, ಹೆಚ್ ನರಸಿಂಹಯ್ಯ, ಪ್ರೊಫೆಸರ್ ನರೇಂದ್ರ ನಾಯಕ್ ಮೊದಲಾದವರು ಹಾಕಿದ ಸವಾಲನ್ನು ಯಾವ ಜ್ಯೋತಿಷಿಯೂ ತೆಗೆದುಕೊಳ್ಳಲಿಲ್ಲ. ಇನ್ನು ನಮ್ಮದು ಎಲ್ಲವೂ ಕೆಟ್ಟದು ಎಂದು ನಾನು ಹೇಳಿಲ್ಲ, ಅದು ನೀವೆ ಊಹಿಸಿಕೊಂಡದ್ದು. ಪಶ್ಚಿಮ ದೇಶಗಳಿಂದ ಮನಸಿನ ಶಾಂತಿಗಾಗಿ ಬರುತ್ತಾರೆ ಎಂದು ಹೇಳಿದ್ದೀರಿ. ಕೆಲವು ಜನ ಬರಬಹುದು. ದೊಡ್ಡ ಸಂಖ್ಯೆಯಲ್ಲೇನೂ ಬರುತ್ತಿಲ್ಲ. ಪಶ್ಚಿಮ ದೇಶಗಳಲ್ಲಿ ದೇವರನ್ನು ನಂಬದವರ ಸಂಖ್ಯೆ ತಕ್ಕ ಮಟ್ಟಿಗೆ ದೊಡ್ಡದಾಗಿಯೇ ಇದೆ ಎಂಬುದನ್ನೂ ನೀವು ಗಮನಿಸಬೇಕು.

  ಉತ್ತರ
 4. ಮಹೇಶ ನೀರ್ಕಜೆ
  ಜೂನ್ 5 2011

  ಆನಂದ ಪ್ರಸಾದ್ ಅವರೇ, ನನ್ನ ನಿಲುವು ಸ್ಪಷ್ಟಪಡಿಸಿ ಬಿಡುತ್ತೇನೆ.

  {ನೀವು ಪ್ರೀತಿ ಇನ್ನಿತರ ವಿಷಯಗಳನ್ನು ವೈಜ್ಞಾನಿಕ ಚರ್ಚೆಗಳ ನಡುವೆ ತರುವುದು ಸಮಂಜಸವಲ್ಲ. ದೇವರು, ಅಧ್ಯಾತ್ಮ ಎಂಬುದರ ಬಗ್ಗೆ ನನ್ನ ತಕರಾರು ಏನೂ ಇಲ್ಲ.}
  ಅದನ್ನೇ ನಾನೂ ಹೇಳ್ತಾ ಇರುವುದು. ಪ್ರೀತಿ, ದೇವರು, ಅಧ್ಯಾತ್ಮ ಇನ್ನಿತರ ವಿಷಯಗಳನ್ನು ವೈಜ್ನಾನಿಕತೆಯ ಮಾನದಂಡ ದಿಂದ ನೋಡುವುದು ಬೇಡ ಅಂತ.

  {ವಿಷಯ ಏನೆಂದರೆ ಪ್ರಭಾವಶಾಲಿ ಮಾಧ್ಯಮವಾದ ಟಿವಿಯಂಥ ದೃಶ್ಯ ಮಾಧ್ಯಮ ಜ್ಯೋತಿಷ್ಯದಂಥ ಆಧಾರವಿಲ್ಲದ, ಇಂದಿನ ದಿನಗಳಲ್ಲಿ ಅಗತ್ಯವಿಲ್ಲದ ವಿಚಾರಗಳನ್ನು ವೈಭವೀಕರಿಸುವುರ ಬಗ್ಗೆ. ಜ್ಯೋತಿಷ್ಯ ಅದರಷ್ಟಕೆ ಅದು ಇದ್ದರೆ ಇರಲಿ. ದೃಶ್ಯ ಮಾಧ್ಯಮದಲ್ಲಿ ಅದರ ಮೇರೆ ಮೀರಿದ ಪ್ರಚಾರ ದೇಶದ ಹಿತದೃಷ್ಟಿಯಿಂದ ಸಮಂಜಸವಲ್ಲ ಎಂದು ನನ್ನ ಅಭಿಪ್ರಾಯ ಅಷ್ಟೆ.}
  ಇದಕ್ಕೆ ನನ್ನ ಸಹಮತವಿದೆ.

  {ನೀವು ನಿಮ್ಮದೇ ಆದ ಸ್ವಂತ ಅಭಿಪ್ರಾಯ ಹೊಂದಬಹುದು. ಅದಕ್ಕೆ ನನ್ನ ಅಡ್ಡಿಯೇನೂ ಇಲ್ಲ.}
  ನಿಮ್ಮ ನಿಲುವು ನನ್ನ ನಿಲುವೂ ಆಗಿದೆ. ಭಿನ್ನತೆಯೆಂದರೆ ನೀವು ಜ್ಯೋತಿಷ್ಯ ಇತ್ಯಾದಿಗಳನ್ನು ಅವೈಜ್ಞಾನಿಕ ಎನ್ನುವ ಕಾರಣಕ್ಕೆ ವಿರೋಧಿಸುತ್ತಿರಿ. ನಾನು ಇಂತಹ ವಿಷಯಗಳಲ್ಲಿ (ಪ್ರೀತಿ, ದೇವರು, ಅಧ್ಯಾತ್ಮ, ಭಕ್ತಿ ಇತ್ಯಾದಿ) ವೈಜ್ನಾನಿಕತೆಯ ಪ್ರಶ್ನೆ ಬರುವುದಿಲ್ಲ ಅಂತ ಹೇಳುತ್ತೇನೆ. ಹಾಗೆಂದ ಮಾತ್ರಕ್ಕೆ ನಾನು ಅವುಗಳನ್ನು ಸಮರ್ಥಿಸುತ್ತಿದ್ದೇನೆ ಎಂಬರ್ಥವಲ್ಲ. ಆದ್ದರಿಂದ ಇಂಥಾ ವಿಷಯಗಳಲ್ಲಿ ನಾನು ವೈಚಾರಿಕ ನಿಲುವು ತಳೆಯಬೇಕೆಂದೇ ಹೇಳುತ್ತೇನೆ ಹೊರತು ಪ್ರಯೋಗಾಲಯದಲ್ಲಿ ನಡೆಸುವ ವೈಜ್ಞಾನಿಕ ಪ್ರಯೋಗದ ಮೂಲಕ ಅಲ್ಲ ಅಂದು ಹೇಳುತ್ತೇನೆ.

  ಉತ್ತರ
  • ಮಹೇಶ ನೀರ್ಕಜೆ
   ಜೂನ್ 5 2011

   correction – “ನಿಮ್ಮ ನಿಲುವು ನನ್ನ ನಿಲುವೂ ಆಗಿದೆ. ಭಿನ್ನತೆಯೆಂದರೆ ನೀವು ಜ್ಯೋತಿಷ್ಯ ಇತ್ಯಾದಿಗಳನ್ನು ಅವೈಜ್ಞಾನಿಕ ಎನ್ನುವ ಕಾರಣಕ್ಕೆ ವಿರೋಧಿಸುತ್ತಿರಿ. ನಾನು ಇಂತಹ ವಿಷಯಗಳಲ್ಲಿ (ಪ್ರೀತಿ, ದೇವರು, ಅಧ್ಯಾತ್ಮ, ಜ್ಯೋತಿಷ್ಯ, ಭಕ್ತಿ ಇತ್ಯಾದಿ) ವೈಜ್ನಾನಿಕತೆಯ ಪ್ರಶ್ನೆ ಬರುವುದಿಲ್ಲ ಅಂತ ಹೇಳುತ್ತೇನೆ. ಹಾಗೆಂದ ಮಾತ್ರಕ್ಕೆ ನಾನು ಅವುಗಳಲ್ಲಿ ಎಲ್ಲವನ್ನೂ ಸಮರ್ಥಿಸುತ್ತಿದ್ದೇನೆ ಎಂಬರ್ಥವಲ್ಲ. ಆದ್ದರಿಂದ ಇಂಥಾ ವಿಷಯಗಳಲ್ಲಿ ನಾನು ವೈಚಾರಿಕ ನಿಲುವು ತಳೆಯಬೇಕೆಂದೇ ಹೇಳುತ್ತೇನೆ ಹೊರತು ಪ್ರಯೋಗಾಲಯದಲ್ಲಿ ನಡೆಸುವ ವೈಜ್ಞಾನಿಕ ಪ್ರಯೋಗದ ಮೂಲಕ ಅಲ್ಲ ಅಂದು ಹೇಳುತ್ತೇನೆ.”

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments