ವಿಷಯದ ವಿವರಗಳಿಗೆ ದಾಟಿರಿ

ಜೂನ್ 1, 2011

2

ಮನೆಮಗಳಿಗೊಂದು ಗಿಡ ನೆಡುವ ಧರ್ ಹರಾ ನಮಗೂ ಆದರ್ಶವಾಗಲಿ…

‍ನಿಲುಮೆ ಮೂಲಕ

– ಚಿತ್ರ ಸಂತೋಷ್

ಹೆಣ್ಣುಮಗಳಿಗಾಗಿ ಗಿಡಗಳನ್ನು ನೆಡುವ ಬಿಹಾರದ ಧರ್‌ಹರಾ ಗ್ರಾಮದ ‘ವಿಶಿಷ್ಟ ಸಂಸ್ಕೃತಿ’ಯನ್ನು ನೋಡಿ ಅಮೆರಿಕಾವೇ ನಿಬ್ಬೆರಗಾಗಿತ್ತು. ಅಮೆರಿಕ ರಾಯಭಾರಿ ಮೆಲನ್ನೆ ವರ್ರ್ ಈ ಗ್ರಾಮವನ್ನು ಮನತುಂಬಾ ಕೊಂಡಾಡಿ, ಈ ಗ್ರಾಮ ವಿಶ್ವಕ್ಕೆ ಮಾದರಿ ಎಂದಿದ್ದರು. ಆದರೆ, ನಮ್ಮದೇ ನೆಲದ ಇಂಥದ್ದೊಂದು ಅಪೂರ್ವ ಸಂಸ್ಕೃತಿಯನ್ನು ನಮ್ಮನೆಯ ಸಂಸ್ಕೃತಿಯನ್ನಾಗಿ ಬೆಳೆಸುವ ‘ಕರ್ತವ್ಯ’ವನ್ನು ನಾವಿನ್ನೂ ಮಾಡೇ ಇಲ್ಲ!

ಬಿಟಿಯಾಕೀ ಜನ್ಮ್ ಹೋನಾ, ಹಮಾರೆ ಲಿಯೇ ತೋ ಬಹುತ್ ಖುಷಿಕೀ ಬಾತ್ ಹೈ. ಬಿಟಿಯಾ ಹಮಾರೆ ಲಿಯೇ ಬೋಜ್ ನಹೀ ಹೈ,  ಉನ್ಕೋ ಬಿ ಪಡಾಯೆತೋ ಓಬಿ ಸಾಕ್ಷರ್ ಬನಾಯೇಂಗೆ, ಶಾದಿಬೀ ಕರೇಂಗೆ. ಕ್ಯಾಂಕೀ ಬಿಟಿಯಾ ಧೋ ಘರ್ ಕೀ ಚಿರಾಗ್ ಹೈ….(ನಮಗೆ ಹೆಣ್ಣು  ಮಕ್ಕಳು ಹುಟ್ಟುವುದೆಂದರೆ ಅದೊಂದು ಸಂಭ್ರಮ, ಹೆಮ್ಮೆ. ಹೆಣ್ಣು ಮಕ್ಕಳು ನಮಗೆ ಹೊರೆಯಲ್ಲ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡ್ತೀವಿ. ಮದುವೆ ಮಾಡ್ತೀವಿ. ಏಕೆಂದರೆ ಹೆಣ್ಣು ಮಕ್ಕಳು ಎರಡು ಕುಟುಂಬಗಳ ಬಾಂಧವ್ಯವನ್ನು ಬೆಸೆಯುವ ಕೊಂಡಿ)

ಥತ್! ಇದ್ಯಾವುದೋ ಭಾಷಣಕಾರನ ಬೊಗಳೆ ಮಾತುಗಳು ಎಂದೆನಿಸಬಹುದು. ಆದರೆ, ನಿಮ್ಮ ಊಹೆ ಖಂಡಿತಾ ತಪ್ಪು. ಇದು ಕ್ಷಣ ಕ್ಷಣದ ಬದುಕನ್ನೂ ಕೂಲಿ-ನಾಲಿ ಮೂಲಕ ಕಂಡುಕೊಳ್ಳುವ ಜನಸಾಮಾನ್ಯರ ಮಾತು. ಇವರಿಗೆ ಹೆಣ್ಣು ಮಕ್ಕಳು ಹುಟ್ಟಿದರೆ ಹಬ್ಬದ ಸಂಭ್ರಮ. ನಮ್ಮ ಮನೆಮಗಳು ಹುಟ್ಟಿದರೆ, ಅವಳ ಬದುಕು ಅವಳೇ ಕಟ್ಟಿಕೊಳ್ಳುತ್ತಾಳೆ ಅನ್ನೋ ಗಟ್ಟಿ ನಂಬಿಕೆ ಅವರದು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುವುದು ಅಥವಾ ಹೆಣ್ಣು ಮಗಳ ಮದುವೆಗಾಗಿ ಲಕ್ಷಾಂತರ ರೂಪಾಯಿ ಸಾಲಮಾಡಿ ಜೀವನಡೀ ಸಾಲ ತೀರಿಸಲು ಪರದಾಡುವುದು…ಇದೆಲ್ಲಾ ಈ ಊರಿನಲ್ಲಿ ಇನ್ನೂ “ಅಪರಿಚಿತ” ಸುದ್ದಿಗಳು. ಇದ್ಯಾವ ಸಂಸ್ಕೃತಿ, ಇದ್ಯಾವ ಊರು? ಅಂತೀರಾ…

ಇದು ಬಿಹಾರದ ಧರ್‌ಹರಾ ಗ್ರಾಮ. ಇಲ್ಲಿನ ಜನಸಂಖ್ಯೆ ಕೇವಲ ಏಳು ಸಾವಿರ. ಇಂಥ ಪುಟ್ಟ ಗ್ರಾಮದಲ್ಲಿ ಕಳೆದ ನೂರಾರು ವರ್ಷಗಳಿಂದ ಹೆಣ್ಣು ಮಕ್ಕಳಿಗಾಗಿ “ಹಸಿರು ಕ್ರಾಂತಿ”  ನಡೆಯುತ್ತಿದೆ. ಹೆಣ್ಣು ಮಕ್ಕಳಿಗಾಗಿ “ಸ್ಕೃತ ಸಂಸ್ಕೃತಿ” ತ್ತಿದೆ, ಅಲ್ಲಿನ ಗ್ರಾಮಸ್ಥರು ಈ ಸಂಸ್ಕೃತಿಯನ್ನು ಬೆಳೆಸುತ್ತಲೇ ಇದ್ದಾರೆ. ಇದರಿಂದಾಗಿ ಅಲ್ಲಿನ ಹೆಣ್ಣು ಮಕ್ಕಳ ಬದುಕು-ಭವಿಷ್ಯ ಎರಡೂ ಭದ್ರವಾಗುತ್ತಿದೆ.

ಅದು ಹೆಣ್ಣು ಮಕ್ಕಳಿಗಾಗಿ ಗಿಡಗಳನ್ನು ನೆಡುವುದು!!

ಒಂದು ಹೆಣ್ಣು ಮಗು ಹುಟ್ಟಿದರೆ ಅಲ್ಲಿ ೧೦ರಿಂದ ೧೫ ಮಾವಿನ ಮತ್ತು ಲಿಚಿ ಗಿಡಗಳನ್ನು ನೆಡುತ್ತಾರೆ. ಇಲ್ಲಿ ಯಾರೊಬ್ಬರ ಸಲಹೆಗಳು ನಗಣ್ಯ. ಹೆಣ್ಣು ಮಗು ಹುಟ್ಟಿದ ತಕ್ಷಣ ೧೦ ಮಾವಿನ ಮರ ಮತ್ತು ಲಿಚಿ ಗಿಡಗಳನ್ನು ನೆಡಬೇಕು ಅನ್ನೋದೇ ಅಲ್ಲಿ ಅದೆಷ್ಟೋ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ, ಅಲ್ಲಲ್ಲ ಸಂಸ್ಕೃತಿ. ಅಪ್ಪ-ಅಮ್ಮ ಹೆಣ್ಣು ಮಗು ಹುಟ್ಟಿದ ತಕ್ಷಣ ಗಿಡಗಳನ್ನು ನೆಡುತ್ತಾರೆ. ಮಗಳು ದೊಡ್ಡವಳಾಗುವ ತನಕ ಹೆತ್ತವರೇ ಮಗಳಂತೆ ಗಿಡಗಳನ್ನೂ ಸಾಕುತ್ತಾರೆ. ಮಗಳಿಗೆ ಅರಿವು ಬರುವ ಹೊತ್ತಿಗೆ ಅವಳೇ ನೀರೆರೆದು ಪೋಷಿಸುತ್ತಾಳೆ. ಮತ್ತೆ ಆ ಗಿಡಗಳನ್ನು ದಿನಾ ಬೆಳಿಗೆದ್ದು ನೀರೆರೆದು ಸಾಕುವ ಕೆಲಸ ಮನೆಮಗಳದು. ಅವಳು ದೊಡ್ಡವಳಾಗುವ ಹೊತ್ತಿಗೆ ಮರಗಳೂ ಹಣ್ಣು ಬಿಡುತ್ತವೆ. ಅದರಲ್ಲೇ ಅವಳ ಓದು. ಹಾಗಂತ ಕೇವಲ ಎಸ್‌ಎಸ್‌ಎಲ್‌ಸಿ ಓದಿಗೆ ಅವಳ ವಿದ್ಯಾಭ್ಯಾಸ ಕೊನೆಗೊಳ್ಳುವುದಿಲ್ಲ, ಪದವಿ, ಸ್ನಾತಕೋತ್ತರ ಪದವಿಯನ್ನೂ ಪಡೆಯುತ್ತಾಳೆ. ಕೊನೆಗೆ ಅದೇ ದುಡ್ಡಿನಲ್ಲಿ ಅವಳ ಮದುವೆಯೂ…!

ಮಗಳು ಗಿಡ ನೆಟ್ಟಿದ್ದಾಳೆ ಅಂದ ತಕ್ಷಣ ಆ ದುಡ್ಡನ್ನು ಕುಟುಂಬ ನಿರ್ವಹಣೆಗೆ ಬಳಸುವಾಗಿಲ್ಲ. ಮಗಳ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ ತೆಗೆಯುತ್ತಾರೆ. ಹಣ್ಣು ಗಳ ಮಾರಾಟದಿಂದ ಬಂದ ದುಡ್ಡನ್ನು ಅವಳ ಖಾತೆಯಲ್ಲಿ ಹಾಕುತ್ತಾರೆ. ಅದರ ನಿರ್ವಹಣೆ ಮಾತ್ರ ಹೆತ್ತವರ ಜವಾಬ್ದಾರಿ. ಮಗಳ ಮದುವೆ ಆದ ಮೇಲೆ ಆ ದುಡ್ಡು ಅವಳಿಗೆ ಸೇರುತ್ತದೆ. ಹಾಗೇ ಅದೆಷ್ಟೋ ತಲೆಮಾರುಗಳಿಂದ ಬೆಳೆದು ಬಂದ ಸಂಸ್ಕೃತಿಯ  ಫಲವಾಗಿ ಇಂದು ಧರ್ ಹರಾ ಗ್ರಾಮದಲ್ಲಿ ಬೆಳೆದು ನಿಂತ ಮಾವಿನ ಮತ್ತು ಲಿಚಿ ಮರಗಳ ಒಟ್ಟು ಸಂಖ್ಯೆ ಒಂದು ಲಕ್ಷ ಮೀರಿದೆ!.  ಇದರಿಂದ ಪ್ರತಿ ವರ್ಷ ಬರುವ ಆದಾಯ ಎರಡು ಲಕ್ಷ ಮೀರುತ್ತದೆ. ಬಿಹಾರದ ಮಾರುಕಟ್ಟೆಯಲ್ಲೂ ಲಿಚಿ ಮತ್ತು ಮಾವಿನ ಹಣ್ಣುಗಳಿಗೆ ಬಲು ಬೇಡಿಕೆ. ಇಂದು ಬಿಹಾರದಲ್ಲಿ ಉತ್ಪಾದನೆಯಾಗುವ ಅತೀ ಹೆಚ್ಚು ಮಾವು ಮತ್ತು ಲಿಚಿ ಹಣ್ಣುಗಳ ಹಿಂದಿನ ರಹಸ್ಯವೇನು? ಅಂದ್ರೆ ಅದು ಹೆಣ್ಣು ಮಗಳಿಗಾಗಿ ಮರ ನೆಡುವ ಸಂಸ್ಕೃತಿ ಬೆಳೆದು ಬಂದಿರುವುದು.

ಹಿಂದೊಮ್ಮೆ ಈ ಗ್ರಾಮದಲ್ಲಿಯೂ ವರದಕ್ಷಿಣೆ ಪೀಡೆ ಕಾಡಿದ್ದಿದೆಯಂತೆ. ಅದಕ್ಕಾಗಿ ಅಲ್ಲಿನ ಹಿರಿಯರು ಇಂಥದ್ದೊಂದು “ಸಂಸ್ಕೃತಿ” ಯನ್ನು ಹುಟ್ಟುಹಾಕಿರಬಹುದು ಎನ್ನುವುದು ತಜ್ಞರ ಅಂಬೋಣ. ಆದರೆ, ಈ ಸಂಸ್ಕೃತಿ ಹರಿಕಾರರ ಮೂಲ ಏನು ಎಂಬುವುದು ಇಂದಿಗೂ ಗೊತ್ತಿಲ್ಲ. ಕೇಳಿದರೆ ನಮ್ಮ ತಾತ…ಮುತ್ತಾತ…ಈ ರೀತಿಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರು. ಇದನ್ನೇ ನಾವೂ  ಅನುಸರಿಸುತ್ತೇವೆ ಅಂತಾರೆ ಅಲ್ಲಿನ ಜನ್ರು. ಆದರೆ, ಧರ್‌ಹರಾ ಗ್ರಾಮದ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದೇ ಕಡಿಮೆ.

ಅಮೆರಿಕಕ್ಕೂ ಆದರ್ಶವಾಯ್ತು!
ವಿಶೇಷ ಅಂದ್ರೆ ಈ ಗ್ರಾಮದ ಕುರಿತು ಅಮೇರಿಕವೇ ನಿಬ್ಬೆರಗಾಗಿತ್ತು. ಕಳೆದ ವರ್ಷ ಬಾಲ್ಯವಿವಾಹ ಕುರಿತಂತೆ ಮಾನವ ಹಕ್ಕುಗಳ ಆಯೋಗದೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ  ಅಮೆರಿಕ
ರಾಯಭಾರಿ ಮೆಲನ್ನೆ ವರ್ರ್ ಬಿಹಾರದ ಧರ್‌ಹರಾ ಗ್ರಾಮವನ್ನು ಮನತುಂಬಾ ಕೊಂಡಾಡಿದ್ದರು. “”ಈ ಪುಟ್ಟ  ಗ್ರಾಮದ ಕ್ರಾಂತಿ ಅದ್ಭುತ. ಹೆಣ್ಣು ಮಗು ಹುಟ್ಟಿದ ತಕ್ಷಣ ಹೆತ್ತವರು ಮಾವು ಮತ್ತು ಲಿಚಿ ಗಿಡಗಳನ್ನು ನೆಡುತ್ತಾರೆ. ಹಾಗಾಗಿ ಇಲ್ಲಿ  ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಸಾವು ಪ್ರಕರಣ ಕಾಣಸಿಗುವುದೇ ಇಲ್ಲ. ಈ ಗ್ರಾಮ ವಿಶ್ವಕ್ಕೆ ಮಾದರಿ” ಎಂದಿದ್ದರು! ಆದರೆ, ಭಾರತದಲ್ಲೇ ಹುಟ್ಟಿ ಬೆಳೆದ ನಮಗೆ ಈ ಗ್ರಾಮ ಇನ್ನೂ ಆದರ್ಶವಾಗಿ ಕಂಡೇ ಇಲ್ಲ. ಬಹಳಷ್ಟು ಸಂದರ್ಭಗಳಲ್ಲಿ ನಾವು ಹಾಗೆನೇ….ದೂರದ ಬೆಟ್ಟ ಕಾಣಲು ನುಣ್ಣಗೆ ಎಂಬಂತೆ. ಇನ್ಯಾವುದೋ ಪರರಾಷ್ಟ್ರಗಳ ಸಾಧನೆಯನ್ನು ನಾವುಗಳು ಹಾಡಿ ಹೊಗಳುತ್ತೇವೆ, ಆದರೆ, ನಮ್ಮದೇ ನೆಲದ ಇಂಥದ್ದೊಂದು ಅಪೂರ್ವ ಸಂಸ್ಕೃತಿಯನ್ನು ನಮ್ಮನೆಯ ಸಂಸ್ಕೃತಿಯನ್ನಾಗಿ ಬೆಳೆಸುವ “ಕರ್ತವ್ಯ” ವನ್ನು ನಾವು ಮಾಡುವುದೇ ಇಲ್ಲ!

ಹೆಣ್ಣು ಎಷ್ಟೇ ವಿದ್ಯಾವಂತಳಾಗಲೀ ವರದಕ್ಷಿಣೆ, ಸ್ತ್ರೀ ಭ್ರೂಣ ಹತ್ಯೆ..ಯಂಥ ಪ್ರಕರಣಗಳಿಂದ ಇನ್ನೂ ಹೆಣ್ಣಿನ ಬದುಕು ಇನ್ನೂ ಮುಕ್ತಿ ಕಂಡಿಲ್ಲ. ಇದಕ್ಕಾಗಿ ನೂರಾರು ಸಂಸ್ಥೆಗಳು ನಮ್ಮಲ್ಲಿ ಜಾಗೃತಿಯ ಕಹಳೆ ಮೂಡಿಸುತ್ತಲೇ ಇವೆ. ಆದರೆ, ಧರ್‌ಹರಾ ಗ್ರಾಮದಲ್ಲಿ ಬೆಳೆದು ಬಂದ ಈ ಸಂಸ್ಕೃತಿಯ ಕುರಿತು ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು. ಈ ಕುರಿತಾಗೇ ಸಾಕ್ಷ್ಯ ಚಿತ್ರಗಳನ್ನು ಮಾಡಿ ಹಂಚಬೇಕು. ಆಗ ಹೆಣ್ಣು ಮಗುವೆಂದು ಮೂದಲಿಸುವವರ ಮನೆಯಂಗಳದಲ್ಲಿ ಕನಿಷ್ಠ ಪಕ್ಷ ಒಂದು ಮಾವಿನ ತೋಪಾದರೂ ಬೆಳೆದೀತು, ಮನೆಮಗಳ ಬದುಕು ಹಸನಾದೀತು.

2 ಟಿಪ್ಪಣಿಗಳು Post a comment
 1. shobha ks rao
  ಜೂನ್ 1 2011

  thank u for giving this article

  ಉತ್ತರ
 2. ಮಹೇಶ ಪ್ರಸಾದ ನೀರ್ಕಜೆ
  ಜೂನ್ 2 2011

  ಲೇಖನ, ಫೊಟೋ ಎರಡೂ ಇಷ್ಟವಾಯಿತು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments