ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2011

49

ರಾಮದೇವ್,ಮೀಡಿಯಾ ಮತ್ತು ಸಂಪಾದಕೀಯ

‍ನಿಲುಮೆ ಮೂಲಕ

– ಮಹೇಶ ಪ್ರಸಾದ ನೀರ್ಕಜೆ

ಸಂಪಾದಕೀಯ ತಂಡ ಬರೆದ “ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ” ಈ ಲೇಖನದ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ಇವು ಒಟ್ಟಾರೆಯಾಗಿ ಮಾಧ್ಯಮಗಳ ಬೇಜವಾಬ್ದಾರಿತನದ ಬಗ್ಗೆ ನನ್ನ ಕೆಲವು ಟಿಪ್ಪಣಿಗಳು ಕೂಡ ಹೌದು. ಸದಾ ಮಾಧ್ಯಮದ ತಪ್ಪು ಒಪ್ಪುಗಳನ್ನು ಪ್ರಕಟಿಸುವ ತಂಡ ಅದರ ಜೊತೆಜೊತೆಗೆ ಬೇರೆ ಕೆಲವು ವಿಚಾರಗಳನ್ನು ಕೂಡ ಬರೆಯುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸಂಪ್ರದಾಯವಾದಿಗಳ ಬಗ್ಗೆ, ಮೂಢ ನಂಬಿಕೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಯತ್ನಗಳ ಬಗೆಗೆ ನನಗೆ ಹೆಮ್ಮೆಯಿದೆ. ಅದರಲ್ಲೂ ಜಿ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದ ಬಗೆಗಿನ ವಿರೋಧ ಎಲ್ಲರ ಗಮನ ಸೆಳೆದಿತ್ತು. ಆದರೆ ಮೊದಲಿನಿಂದಲೂ ಕೂಡ ನನಗೆ ಸಂಪಾದಕೀಯ ತಂಡದ ಬಗೆಗೆ ಕೆಲವು ಅನುಮಾನಗಳಿವೆ. ಮೊದಲನೆಯದಾಗಿ ತನ್ನ TRP ಹೆಚ್ಚಿಸಿ ಕೊಳ್ಳಲೋ ಎಂಬಂತೆ ಬ್ಲಾಗಿನಲ್ಲಿ ಎಲ್ಲೆಂದರಲ್ಲಿ ಅನಾಮಿಕ ಪ್ರತಿಕ್ರಿಯಗಳ ಮಹಾಪೂರ. ಈ ಪ್ರತಿಕ್ರಿಯೆಗಳನ್ನು ಯಾರು ಬರೆಯುತ್ತಾರೆ, ಅವರ ಪ್ರತಿಕ್ರಿಯೆಗಳಲ್ಲಿ ಏನಾದರು ಕುತ್ಸಿತ ಉದ್ದೇಶಗಳಿವೆಯೇ ಇತ್ಯಾದಿ ಪ್ರಶ್ನೆಗಳು ನನಗೆ ಮೊದಲಿನಿಂದಲೂ ಇವೆ. ಅಲ್ಲದೆ ಮೂಢ ನಂಬಿಕೆಯನ್ನು ವಿರೋಧಿಸುವ ನೆಪದಲ್ಲಿ ಎಲ್ಲಾ ಅಧ್ಯಾತ್ಮಿಕ ವ್ಯಕ್ತಿಗಳನ್ನು ಟೀಕಿಸುವ ಹುನ್ನಾರವೋ ಎಂದು ಕೂಡ ಸಂಶಯವಿದೆ. ಆದರೆ ಕೆಲವು ಬರಹಗಳಲ್ಲಿ ಉತ್ತಮ ಅಧ್ಯಾತ್ಮಿಕ ಮೌಲ್ಯಗಳನ್ನು ಅದರಲ್ಲೂ ವಿವೇಕಾನಂದ, ಬುಧ್ಧ ಗಾಂಧೀಜಿ ಬಗ್ಗೆ ಬರೆದಿದ್ದೂ ಹೌದು. ಒಟ್ಟಿನಲ್ಲಿ ನನ್ನ ಮಟ್ಟಿಗೆ ಸಂಪಾದಕೀಯ ವಿರೋಧಾಭಾಸಗಳ ಗೂಡು. ಇರಲಿ, ಈಗ ಪ್ರಸ್ತುತ ಲೇಖನದ ಬಗ್ಗೆ ಹೇಳುವುದಾದರೆ ನನ್ನ ಪ್ರಕಾರ ಇದರಲ್ಲಿ ಹಲವಾರು ತಪ್ಪುಗ್ರಹಿಕೆಗಳು, ಮತ್ತು ತಪ್ಪು ಮಾಹಿತಿಗಳು ಕಾಣಸಿಗುತ್ತವೆ. ಅವುಗಳನ್ನು ಪಟ್ಟಿ ಮಾಡಿ, ನಿಜ ಸಂಗತಿಯನ್ನು ಹೊರಗೆಡಹುವ ಒಂದು ಪ್ರಯತ್ನ ಇದು.

ಸಂಪಾದಕೀಯದ ಪ್ರಮುಖ ಆರೋಪ ಬಾಬಾ ಸಂವಿಧಾನ ವಿರೋಧಿ ಮಾತುಗಳನ್ನಾಡಿದ್ದಾರೆ ಎಂಬುದಾಗಿ. ಅವರು ಏನು ಹೇಳಿದ್ದಾರೆ? “ನಾನು ಈ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ಒಪ್ಪುವುದಿಲ್ಲ, ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರ ಎಂದು ಕರೆಯಲು ಬಯಸುತ್ತೇನೆ”. ಇದು ಯಾಕೆ ಸಂವಿಧಾನ ವಿರೋಧಿ ಅಲ್ಲ ಎಂದು ನೋಡೋಣ. ಸೆಕ್ಯುಲರಿಸಂ ಎಂದರೆ ಏನು ಎನ್ನುವುದರ ಬಗ್ಗೆಯೇ ಬಹಳ ಜನರಲ್ಲಿ ಸಂಶಯ ಇದೆ. ವಿದೇಶಗಳಲ್ಲಿ ಸೆಕ್ಯುಲರಿಸಂ ಎಂಬ ಪದದ ಅರ್ಥ ಏನು, ಇಲ್ಲಿ ಅದೇ ಅರ್ಥ ಅನ್ವಯ ಆಗುತ್ತದೆಯೇ, ಇತ್ಯಾದಿಗಳ ಬಗ್ಗೆ ಸಮಾಜ ವಿಜ್ಞಾನಿಗಳಲ್ಲೇ ಒಮ್ಮತವಿಲ್ಲ. ಉದಾಹರಣೆಗೆ ವಿದೇಶಗಳಲ್ಲಿ ಸೆಕ್ಯುಲರಿಸಂ ಎಂದರೆ “ರಾಜ್ಯ ಮತ್ತು ಧರ್ಮದ ಪ್ರತ್ಯೇಕತೆ” ಎಂಬ ಅರ್ಥ ಬರುತ್ತದೆ. ಆದರೆ ಭಾರತದಲ್ಲಿ “ಸರ್ವ ಧರ್ಮ ಸಮಭಾವ” ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ. ಇದು ರಾಷ್ಟ್ರಪಿತ ಗಾಂಧಿಜಿಯವರ ನಿಲುವೂ ಆಗಿತ್ತು. ಆದ್ದರಿಂದ ಇಲ್ಲಿ ಬಾಬಾ “ಭಾರತ ಜಾತ್ಯಾತೀತ ರಾಷ್ಟ್ರ ಅಲ್ಲ” ಎಂದಾಗ ಅದರ ಅರ್ಥ “ಸೆಕ್ಯುಲರ್ ಎಂಬ ಕಾರಣಕ್ಕಾಗಿ ಅಧ್ಯಾತ್ಮಿಕವನ್ನು ಕಡೆಗಣಿಸುವಂತಿಲ್ಲ, ಈ ದೇಶದ ಬೆನ್ನೆಲುಬು ಅಧ್ಯಾತ್ಮಿಕ” ಎಂಬ ದೃಷ್ಟಿಯಿಂದಲೇ ಹೊರತು ಬೇರಾವುದೇ ದುರುದ್ದೇಶ ದಿಂದಲ್ಲ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರೋಧವೂ ಅಲ್ಲ. ಇದು ಸಂವಿಧಾನ ವಿರೋಧವೆಂದಾದಲ್ಲಿ ಗಾಂಧಿಜಿಯವರೂ ಕೂಡ ಸಂವಿಧಾನ ವಿರೋಧಿ ಎಂದು ಹೇಳಬೇಕಾಗುತ್ತದೆ. ಇಲ್ಲಿ ಪ್ರಶ್ನೆಯಿರುವುದು ಆ ಪತ್ರಕರ್ತರಿಗೆ ಇವೆಲ್ಲದರ ಅರಿವಿದೆಯೇ ಅಥವಾ ಬಾಬಾ ಹೇಳಿದ್ದನ್ನು ತಮ್ಮ ಮಟ್ಟಕ್ಕೆ ತಂದು ಬರೆದಿದ್ದಾರೆಯೇ ಎಂಬುದಾಗಿ. ಅಲ್ಲದೆ ಜಾತ್ಯಾತೀತ ತತ್ವಕ್ಕೆ ಹಾನಿಯುಂಟು ಮಾಡುವ ಕೆಲಸ ಬಾಬಾ ಈ ತನಕ ಏನು ಮಾಡಿದ್ದಾರೆ ಎಂಬುದನ್ನು ಕೂಡ ಪ್ರಶ್ನಿಸಿಕೊಳ್ಳಬೇಕಾಗಿದೆ.

ಇನ್ನು ಲೇಖನದಲ್ಲಿರುವ ಕೆಲವು ಅಂಶಗಳ ಬಗ್ಗೆ ನನ್ನ ಆಕ್ಷೇಪಗಳು ಇಂತಿವೆ :

{ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ}

ಅಣ್ಣಾ ಹಜಾರೆ ಉಪವಾಸ ಮಾಡುವುದಕ್ಕಿಂತ ಮೊದಲೇ ಬಾಬಾ ಇದೇ ರಾಮ್ ಲೀಲಾ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಿ ಅಲ್ಲಿ ಹೋರಾಟದ ಕಿಡಿಯನ್ನು ಹೊತ್ತಿಸಿದ್ದು ಎನ್ನುವುದನ್ನು ಯಾಕೆ ಮರೆಯಲಾಗುತ್ತಿದೆ? ಭ್ರಷ್ಟಾಚಾರದ ಬಗ್ಗೆ ಕಳೆದ ೨-೩ ವರ್ಷಗಳಿಂದ ಬೊಬ್ಬೆ ಹೊಡೆಯುತ್ತಿದ್ದಿದ್ದು ಬಾಬಾ ಅಲ್ಲವೇ? ಆಗ ಅಣ್ಣಾ ಎಲ್ಲಿದ್ದರು?

{ರಾಮದೇವರಿಗೆ ಈಗಾಗಲೇ ಬಿಜೆಪಿ, ಆರ್‌ಎಸ್‌ಎಸ್, ಅಣ್ಣಾ ಹಜಾರೆ ಹೀಗೆ ಹಲವು ವಲಯಗಳಿಂದ ಬೆಂಬಲ ಹರಿದುಬಂದಿದೆ}

ಈ ಆರೆಸ್ಸೆಸ್ ಬೆಂಬಲ ಬಗ್ಗೆ ಬಹಳವಾಗಿ ಕೇಳಿಬರುತ್ತಿದೆ. ಇಲ್ಲಿ ಒಂದು ವಿಷಯ ಅರ್ಥವಾಗುತ್ತಿಲ್ಲ. ಕಪ್ಪು ಹಣದ ಬಗ್ಗೆ ಮೊಟ್ಟ ಮೊದಲಾಗಿ ದನಿ ಎತ್ತಿದ್ದು ಯಾರು? ಅಡ್ವಾಣಿ ಯವರಲ್ಲವೇ? ಅವರು ಸಂಘ ಪರಿವಾರ ಹಿನ್ನೆಲೆಯವರಲ್ಲವೇ? ಸಂಘಪರಿವಾರ ಹಿನ್ನೆಲೆ ಇದ್ದವರು ಶುರು ಮಾಡಿದ ಹೋರಾಟದಲ್ಲಿ ಸಂಘಪರಿವಾರ ಭಾಗವಹಿಸುವುದು ಅಂಥಾ ದೊಡ್ಡ ತಪ್ಪೇ?

{ಒಂದು ಜಾತಿ ಪ್ರಮಾಣ ಪತ್ರ ಮಾಡಿಸುವುದಕ್ಕೇ ಲಂಚ ಕೊಡಬೇಕಾದ ಪರಿಸ್ಥಿತಿಯಿರುವ ಈ ದೇಶದಲ್ಲಿ ಬಾಬಾ ಅವರು ಇಷ್ಟೊಂದು ದೊಡ್ಡ ವಹಿವಾಟು ಮಾಡುವ ಸಂದರ್ಭದಲ್ಲಿ ಯಾರ ಕೈಯನ್ನೂ ಬೆಚ್ಚಗೆ ಮಾಡಿಲ್ಲವೆಂದು ನಂಬುವುದು ಹೇಗೆ ಎಂದು ಜನಸಾಮಾನ್ಯರು ಕೇಳುವುದೂ ಸಹಜವೇ ತಾನೆ?}

ಕೈಯನ್ನು ಬೆಚ್ಚಗೆ ಮಾಡಿ ಅನುಭವ ಇರುವುದರಿಂದಲೇ ಅದನ್ನು ನಿವಾರಿಸಬೇಕೆಂದು ಹೊರಟಿದ್ದಾರೆ ಎಂದು ಯಾಕೆ ತಿಳಿದುಕೊಳ್ಳಬಾರದು? ಎಲ್ಲವನ್ನು ನಕಾರಾತ್ಮಕವಾಗಿಯೇ ಯಾಕೆ ನೋಡಬೇಕು? ಭ್ರಷ್ಟಾಚಾರ ವಿರುಧ್ಧ ಹೋರಾಡಲು ಈ ತನಕ ಲಂಚ ಕೊಡದೆ ಇರುವವನೇ ಆಗಬೇಕೆಂದು ಇದೆಯೇ? ಸಂಚಾರಿ ಪೋಲಿಸಿಗೆ ಅರೆ ಕಾಸು ಕೊಡದವನು ಹುಡುಕಿದರೆ ಸಿಗದಿರುವಾಗ ಭ್ರಷ್ಟಾಚಾರ ವಿರುಧ್ಧ ಹೋರಾಡಲು ಅಂಥವನು ಬೇಕು ಎಂದರೆ ಹೇಗೆ? ಅಂತಹವನು ಬರುವ ತನಕ ನಾವೆಲ್ಲಾ ಇದನ್ನು ನಮ್ಮ ಹಣೆಬರಹವನ್ನು ಜರೆಯುತ್ತಿರಬೇಕೆ?  ಅಣ್ಣ ಹಜಾರೆ ಈ ತನಕ ಲಂಚ ಕೊಟ್ಟೆ ಇಲ್ಲವೆಂದು ಹೇಗೆ ನಂಬುತ್ತೀರಿ? ಅಣ್ಣಾ ಮೇಲೆ ಬಾರದ ಸಂಶಯ ಬಾಬಾ ಮೇಲೆ ಯಾಕೆ? ಅದಿರಲಿ, ಲೇಖಕ ಈ ತನಕ ಒಂದು ಪೈಸ ಕೂಡ ಲಂಚ ಕೊಟ್ಟಿಲ್ಲ ಎಂದು ಪ್ರಮಾಣ ಮಾಡಿ ಹೇಳಬಹುದೇ? ಇಲ್ಲವಾದಲ್ಲಿ ಬಾಬ ಲಂಚ ಕೊಟ್ಟಿರಬಹುದು ಎಂದು ಆರೋಪ ಮಾಡುವ ಹಕ್ಕೆಲ್ಲಿದೆ?

{ರಾಮದೇವರು ನಿಜವಾಗಿಯೂ ಕ್ಯಾನ್ಸರ್‌ಗೆ, ಏಡ್ಸ್‌ಗೆ ಔಷಧ ಕಂಡುಹಿಡಿದಿದ್ದರೆ ಅದನ್ನು ಸಾಬೀತುಪಡಿಸಿ, ದೇಶದ ಎಲ್ಲ ಕ್ಯಾನ್ಸರ್, ಏಡ್ಸ್ ಆಸ್ಪತ್ರೆಗಳಲ್ಲಿ ಸಾಯುತ್ತ ಬಿದ್ದಿರುವ ಲಕ್ಷಾಂತರ ರೋಗಿಗಳನ್ನೇಕೆ ಗುಣಪಡಿಸಬಾರದು? ಇದೊಂದನ್ನು ಮಾಡಿದರೆ ಇಡೀ ದೇಶ ಮತ್ತು ಮುಂದಿನ ಪೀಳಿಗೆ ರಾಮದೇವ ಅವರಿಗೆ ಋಣಿಗಳಾಗಿ ಇರುವುದಿಲ್ಲವೆ?}

ಈ ಬಗ್ಗೆ ಸಂಶೋಧನೆ ನಡೀತಾ ಇದೆ. ಅಂದರೆ ಇದನ್ನು ಸಾಬಿತು ಪಡಿಸುವ ಕ್ರಿಯೆ ನಡೀತಾ ಇದೆ. ಅದಿರಲಿ, ಲೇಖಕರು ಕ್ಯಾನ್ಸರ್ ಮತ್ತು ಎಡ್ಸ್ ಬಗ್ಗೆ ಮಾತ್ರ ಯಾಕೆ ಉಲ್ಲೇಖಿಸುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಇತರ ಖಾಯಿಲೆಗಳನ್ನು ಗುಣಪಡಿಸಿದರೂ ಕೂಡ “ಮುಂದಿನ ಪೀಳಿಗೆ ರಾಮದೇವ ಅವರಿಗೆ  ಋಣಿಯಾಗಿ ” ಇರಬಹುದು ತಾನೇ. ಕ್ಯಾನ್ಸರ್ ಗುಣಪಡಿಸಿದರೆ ಮಾತ್ರ ಆತ ಮಹಾನ್ ವ್ಯಕ್ತಿಯಾಗಬೇಕೆಂದಿಲ್ಲ. ಅಂದರೆ ಇಲ್ಲಿಯೇ ಗೊತ್ತಾಗುತ್ತದೆ, ರಾಮ್ ದೇವ್ ಅವರನ್ನು ಹಣಿಯುವ ಉದ್ದೇಶದಿಂದಲೇ ಈ ಲೇಖನ ಹೆಣೆಯಲಾಗಿದೆಯೇ ಎಂಬುದಾಗಿ. ಆದ್ದರಿಂದ ಇದರಲ್ಲಿ ಲೇಖಕ ಪೂರ್ವಾಗ್ರಹ ಪೀಡಿತನಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

{೨೨ ಅಧಿಕೃತ ಭಾಷೆಗಳಿರುವ ಈ ಭಾಷಾ ವೈವಿಧ್ಯದ ದೇಶದಲ್ಲಿ ಹಿಂದಿಯನ್ನು ಜಪಾನಿ ಮತ್ತು ಚೀನೀ ಭಾಷೆಯ ಹಾಗೆ ದೇಶದಾದ್ಯಂತ ಬೆಳೆಸಬೇಕು ಎಂದು ರಾಮದೇವ ಹಗುರವಾಗಿ, ಬಾಲಿಷವಾಗಿ ಮಾತನಾಡುತ್ತಾರೆ}

ಇದು ಇನ್ನೊಂದು ರೀತಿಯ ಭ್ರಷ್ಟಾಚಾರ. ಲೇಖಕರು ಅನಗತ್ಯವಾಗಿ ಇಂಗ್ಲಿಶ್ ಮೀಡಿಯಾದ ತಂತ್ರಗಾರಿಕೆಗೆ ಬಲಿಯಾಗಿದ್ದಾರೆ. ರಾಮ್ ದೇವ್ ಸ್ಪಷ್ಟವಾಗಿ ಹೇಳಿದ್ದಾರೆ – ಸ್ವತಹ ನನ್ನ ಕಿವಿಯಾರೆ ಕೇಳಿದ್ದೇನೆ, ವಿದ್ಯಾಭ್ಯಾಸ ಮಾತೃಭಾಷೆಯಲ್ಲಿ ಆಗಬೇಕು ಅಂತ. ‘ಹಿಂದಿ ಸೇರಿದಂತೆ ಭಾರತದ ಇತರ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ’ ಅಂತ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಿಮಗೆ ಸಾಕ್ಷಿ ಬೇಕಿದ್ದರೆ ಈ ವಿಡಿಯೋ ನೋಡಿ. ಇದೊಂದೇ ವಿಡಿಯೋ ಅಲ್ಲ, ನಾನು ರಾಮದೇವರ ಮಾತುಗಳನ್ನು ಬಹಳ ಸಾರಿ ಅಸ್ಥಾ  ಚಾನೆಲ್ ನಲ್ಲಿ ಕೇಳಿದ್ದೇನೆ. ಅವರು ಎಂದಿಗೂ ದೇಶದೆಲ್ಲೆಡೆ ಹಿಂದಿ ಮಾತ್ರ ಇರಬೇಕೆಂದು ಅಥವಾ ಉನ್ನತ ವ್ಯಾಸಂಗ ಹಿಂದಿಯಲ್ಲೇ ಇರಬೇಕೆಂದಾಗಲಿ ಹೇಳಿದ್ದು ನನಗಂತೂ ತಿಳಿದಿಲ್ಲ. ಅದಲ್ಲದೆ ಈಗ ಮಾಧ್ಯಮಗಳೂ ಕೂಡ ತಪ್ಪನ್ನು ತಿದ್ದಿಕೊಂಡಿವೆ. ನೆನ್ನೆ ಮತ್ತು ಇಂದು ಪ್ರಸಾರವಾದ ಬಹುತೇಕ ಕಾರ್ಯಕ್ರಮಗಳಲ್ಲಿ ಬಾಬಾ ಹಿಂದಿ ಜೊತೆ ಇತರ ಭಾಷೆಗಳಲ್ಲೂ ಕೂಡ ಕಲಿಕೆ ಮಾಧ್ಯಮ ಇರಬೇಕೆಂದು ಹೇಳಿರುವುದನ್ನು ವರದಿ ಮಾಡಿವೆ. ಆ ನಂತರವಾದರೂ ಸಂಪಾದಕೀಯ ತನ್ನ ತಪ್ಪನ್ನು ತಿದ್ದಿಕೊಳ್ಳ ಬಹುದಿತ್ತಲ್ಲವೇ? ಅಥವಾ ಸಂಪಾದಕೀಯ ಸ್ವತಹ ತಾನೇ ಬಾಬಾ ಏನು ಹೇಳಿದ್ದಾರೆ ಎಂದು ಅವರ ಅಧಿಕೃತ ಮೂಲಗಳಿಂದ ತಿಳಿದುಕೊಳ್ಳ ಬಹುದಾಗಿತ್ತಲ್ಲವೇ? ಯಾಕೆ ಹಾಗೆ ಮಾಡಲಿಲ್ಲ? ಮಾಧ್ಯಮದ ಮಗ್ಗೆಯೇ ಸದಾ ಕಾಮೆಂಟಿಸುವ ಸಂಪಾದಕೀಯ ಮಾಧ್ಯಮಗಳು ಮಾಡುತ್ತಿರುವ ತಪ್ಪನ್ನೆ ತಾನು ಕೂಡ ಮಾಡುತ್ತಿರುವುದು ವಿಪರ್ಯಾಸವಲ್ಲವೇ? ಮಾಧ್ಯಮಗಳು ಈ ಒಂದು ವಿಷಯದಲ್ಲಿ ಮಾತ್ರವಲ್ಲ. ಬಾಬಾ ಮತ್ತು ಅಣ್ಣ ಹಜಾರೆ ಮಧ್ಯೆ ಜಗಳ ತಂದಿಡುವ ಪ್ರಯತ್ನ ಮಾಡಿದರು. ಆರೆಸ್ಸೆಸ್ ಬಾಬಾಗೆ ಸಪೋರ್ಟ್ ಯಾಕೆ ಅಂತ ಕಿರಣ್ ಬೇಡಿಯವರನ್ನ ದಬಾಯಿಸಿದರು. ಇದು ಈಗಲೂ ಕೂಡ ಮುಂದುವರೆಯುತ್ತಿರುವುದನ್ನು ಗಮನಿಸಬಹುದು.

ಒಟ್ಟಾರೆಯಾಗಿ ಲೇಖನ ಓದಿದ ಮೇಲೆ ನನಗನಿಸುತ್ತಿರುವುದು ಏನೆಂದರೆ – ಸಂಪಾದಕೀಯ ಒಂದು ಮೀಡಿಯ ಕ್ರಿಟಿಕ್. ಆದರೆ ಮೀಡಿಯಾ ಗಳಲ್ಲಿ ಏನೇನು ತಪ್ಪುಗಳಿವೆಯೆಂದು ಅದು ತೋರಿಸುತ್ತದೋ, ಆ ತಪ್ಪುಗಳನ್ನು ಸ್ವತಹ ತಾನು ಕೂಡ ಮಾಡುತ್ತಿದೆ. ಮೇಲೆ ನಾನು ನೀಡಿದ ಉದಾಹರಣೆಗಳೇ ಇದಕ್ಕೆ ಸಾಕ್ಷಿ. ಈ ಲೇಖನದ ಉದ್ದೇಶದ ಬಗ್ಗೆ ಹೇಳುವುದಾದರೆ ಇದು ರಾಮ್ ದೇವ್ ರನ್ನು ಹಣಿಯಲು ಎಂದೇ ಬರೆದ ಲೇಖನ ಎಂದು ಅನಿಸುತ್ತಿದೆ.

49 ಟಿಪ್ಪಣಿಗಳು Post a comment
 1. ಮಹೇಶ ನೀರ್ಕಜೆ
  ಜೂನ್ 5 2011

  “ಮಾಧ್ಯಮದ ಮಗ್ಗೆಯೇ ಸದಾ ಕಾಮೆಂಟಿಸುವ” = “ಮಾಧ್ಯಮದ ಬಗ್ಗೆಯೇ ಸದಾ ಕಾಮೆಂಟಿಸುವ”

  ಉತ್ತರ
 2. ಅಜಯ್
  ಜೂನ್ 5 2011

  ವಿಷಯ ಸರಿಯಾಗಿದೆ. ‘ಸಂಪಾದಕೀಯ’ ಏನೇ ಮೀಡಿಯ ವಿಮರ್ಶೆ ಮಾಡಿದರೂ ಅವರಲ್ಲೂ ಕೂಡ ಹಲವು ಪೂರ್ವಗ್ರಹಗಳು , ಭಾರತದ ಸಾಧು ಸಂತರು ದೇವರು ಆಧ್ಯಾತ್ಮಿಕತೆ ಬಗ್ಗೆ ಅಗೌರವದ ಧೋರಣೆಗಳು ಇರುವಂತೆ ಕಾಣುತ್ತದೆ .. ಮತ್ತು ಅಲ್ಲಿ ಆರೆಸ್ಸೆಸ್ಸು, ಅಥವಾ ಬಿ.ಜೆ.ಪಿ. ಗಳ ವಿರೋಧಿ ಮನೋಭಾವವೂ ಇದೆ.

  ಅವರು ಬಾಬಾರಲ್ಲಿ ಕೇಳುವ ಮತ್ತೊಂದು ಬಾಲಿಶ ಪ್ರಶ್ನೆ ಗಮನಿಸಿ.

  “ಭ್ರಷ್ಟಾಚಾರ ನಿರ್ಮೂಲನೆಗೆ ಅಧ್ಯಾತ್ಮದ ಬಳಿ ಪರಿಹಾರವಿಲ್ಲವೆ?, ನಿಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಭ್ರಷ್ಟಾಚಾರಿಗಳನ್ನೇಕೆ ಬದಲಾಯಿಸಬಾರದು?”

  ಆಧ್ಯಾತ್ಮದಲ್ಲಿ ಖಂಡಿತ ಪರಿಹಾರವಿದೆ. ಆಧ್ಯಾತ್ಮವು ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಅದು ಪ್ರಾಮಾಣಿಕ ಮನಸ್ಸನ್ನೂ ಕೊಡುತ್ತದೆ ಎನ್ನುವುದು ಗೊತ್ತಿರುವ ವಿಷಯ. ಆದರೆ ಭ್ರಷ್ಟಾಚಾರಿಗಳು ಹೋಗಿ ಬಾಬಾರಲ್ಲಿ ಬೋಧನೆ ಮಾಡಿಸಿಕೊಳ್ಳುತ್ತಾರಾ ? ಅಂತಹ ಮನಸ್ಸಿದ್ದರೆ ಅವರು ಭ್ರಷ್ಟಾಚಾರಿಗಳು ಆಗಿರುತ್ತಿದ್ದರ? ಈಗ ಸಂಪಾದಕೀಯ ತಂಡ ದಿನಾ ಮೀಡಿಯ ಬಗ್ಗೆ ಬರೆದಾಕ್ಷಣ ಮೀಡಿಯ ಬದಲಾಗಿ ಹೋಯಿತಾ?

  ಸಂಪಾದಕೀಯದ ಆ ಬರಹ ಓದಿದ ಮೇಲೆ ಒಬ್ಬರನ್ನು ಹಣಿಯಲೆಂದೇ ಏನಾದರೂ ಬರೆದರೆ ಹೀಗೆ ಹಾದಿತಪ್ಪಿದ ಬರಹಗಳು ಬರುತ್ತವೆ ಎಂದು ಅನ್ನಿಸಿತು.

  ಉತ್ತರ
 3. sundar
  ಜೂನ್ 5 2011

  ಇಲ್ಲೊಂದು ಬ್ಲಾಗ್ ಸಹ ನಿಮ್ಮ ಲೇಖನಕ್ಕೆ ಪೂರಕವಾಗಿ ಬರೆದಿದೆ. ಗಮನಿಸಿ.
  http://prajaprabhutva.blogspot.com/

  ಉತ್ತರ
 4. ಪ್ರಸ್ಕ
  ಜೂನ್ 5 2011

  ಸಂಪಾದಕೀಯ ಕೇವಲ ಒಂದು ಬ್ಲಾಗ್ ಅದನ್ನು ಇಷ್ಟು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಸುದ್ದಿಮಾತು ಎಂಬ ತಲೆಕೆಟ್ಟ ಬ್ಲಾಗ್ ನಡೆಸುತ್ತಿದ್ದವರೆ ಅದನ್ನು ನಡೆಸುತ್ತಿದ್ದಾರೆ. ಅದರಲ್ಲೂ ಪ್ರತಿಕ್ರಿಯೆಗಳನ್ನು ಮಾಡರೇಟ್ ಮಾಡುವ ಯಾವುದೇ ಇಂತಹ ಬ್ಲಾಗ್ ಗಳು ತೆರೆದ ಮನಸ್ಸಿನ ಪ್ರತೀಕಗಳಲ್ಲ. ತಮಗೆ ಅನುಕೂಲಕರ ಪ್ರತಿಕ್ರಿಯೆಗಳನ್ನೇ ಪ್ರಕಟಿಸುವ ಅಂತಹವರಿಗೆ, ನೀವೇಕೆ ಇಷ್ಟೊಂದು ಪ್ರಚಾರ ಕೊಡುತ್ತಿದ್ದೀರಿ.

  ಉತ್ತರ
 5. ಮಹೇಶ್ ತಾಳಿಕಟ್ಟೆ
  ಜೂನ್ 5 2011

  ಬಹುಸಂಖ್ಯಾತರ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ವಿರೋಧಿಸುವಂತಹ ಹೇಳಿಕೆಗಳನ್ನು/ಬರಹಗಳನ್ನು ನೀಡುವವರ/ಬರೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.

  ಉತ್ತರ
 6. VITHALRAO KULKARNI
  ಜೂನ್ 5 2011

  ಸಂಪಾದಕೀಯ ದ ಕಂತು ಗಳು ಓದುತ್ತ ಸಾಗಿದರೆ ಇದರ ಹಿಂದೆ ಹಿಂದೂ ವಿರೋಧಿ
  ಭಾವನೆ ಕಂಡು ಬರುತ್ತದೆ..ಭ್ರಷ್ಟಾ ಚಾರ್ ದ ವಿರುದ್ದ ಅಣ್ಣ ಹಜಾರೆ ಮಾಡಿದ ಚಳುವಳಿ ಯನ್ನೇ
  ಅರಗಿಸಿ ಕೊಳ್ಳುವದು ಕಷ್ಟ ವಾಗಿತ್ತು..ಈಗ ರಾಮದೇವ್ ಬಾಬಾ ಅಂದ ತಕ್ಷಣ್ ಅವರ ಮನದಲ್ಲಿ
  ಹಿಂದೂ ವಿರೋಧಿ ಭಾವನೆ ಜಾಗ್ರತ್ ಗೊಂಡಿತು.. ಏಕೆಂದರೆ
  ೧) ಅವರ ಹೆಸರಲ್ಲಿ ರಾಮ್ ಇದೆ.
  ೨) ಅವರು ಯೋಗ ಕಲಿಸುತ್ತಾನೆ.
  ೩) ಸ್ವದೇಶೀ ಎನ್ನುತ್ತಾನೆ.
  ೪) ಕೇಸರಿ ಬಣ್ಣ ದ ಉಡುಗೆ ತೊಡುತ್ತಾನೆ.
  ೫) ಮರದಿಂದ ಮಾಡಿದ ಚಪ್ಪಲಿ ಧರಿಸುತ್ತಾನೆ.
  ಕೋಮುವಾದಿ ಎಂಬ ಹಣೆ ಪಟ್ಟಿ ಕಟ್ಟಲು ಇಷ್ಟು ಸಾಕಲ್ಲವೇ..?

  ಉತ್ತರ
 7. ananda prasad
  ಜೂನ್ 5 2011

  ಭಾರತವು ಜಾತ್ಯತೀತ ರಾಷ್ಟ್ರ ಎಂಬುದು ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಜಾತ್ಯತೀತ ಎಂದಾರೆ ಸರ್ವಧರ್ಮ ಸಮಭಾವ ಎಂಬ ಅರ್ಥ ಬರುವುದಿಲ್ಲ. ಜಾತ್ಯತೀತ ಎಂದರೆ ಪ್ರಭುತ್ವ ಹಾಗೂ ಧರ್ಮ ಪ್ರತ್ಯೆಕವಾಗಿರಬೇಕು, ಧರ್ಮ ತನ್ನ ಪ್ರಭಾವವನ್ನು ಪ್ರಭುತ್ವದ ಮೇಲೆ ಬೀರಬಾರದು ಎಂಬುದು ಆಶಯ. ಇದು ಸಂವಿಧಾನ ನಿರ್ಮಾತೃಗಳ ಆಶಯವೂ ಹೌದು. ಒಂದು ಮಾನವೀಯ ಹಾಗೂ ಪ್ರಗತಿಪರರ ರಾಷ್ಟ್ರವಾಗಲು ಜಾತ್ಯತೀತ ಧೋರಣೆ ಅತೀ ಅಗತ್ಯ. ಧರ್ಮವು ಪ್ರಭುತ್ವದ ಮೇಲೆ ತನ್ನ ಪ್ರಭಾವ ಬೀರುತ್ತ ಬಂದದ್ದರಿಂದಲೇ ಪುರೋಹಿತಶಾಹಿ ಈ ದೇಶದಲ್ಲಿ ಶತಮಾನಗಳಿಂದ ಶೋಷಣೆಗೆ ಕಾರಣವಾದದ್ದು. ಹೀಗಾಗಿ ಪುರೋಹಿತಶಾಹಿಯಾ ಪ್ರಭಾವ ಪ್ರಭುತ್ವದ ಮೇಲೆ ಬೀರಲು ಅನುವು ಮಾಡಿಕೊಟ್ಟರೆ ಶೋಷಣೆ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಪ್ರಭುತ್ವ ಧರ್ಮದ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗಬಾರದು. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದನ್ನು
  ಅಧ್ಯಾತ್ಮಿಕ ರಾಷ್ಟ್ರವಾಗಿ ಬದಲಾಯಿಸುವುದು ಸಮಂಜಸವಲ್ಲ.

  ಅಜಯ್ ಎಂಬವರು ಹೇಳಿದ ವಿಷಯದ ಬಗ್ಗೆ (ಪ್ರತಿಕ್ರಿಯೆಯಲ್ಲಿ). ಅಧ್ಯಾತ್ಮದ ಬಳಿ ಭ್ರಷ್ಟಾಚಾರಕ್ಕೆ ಪರಿಹಾರವಿಲ್ಲವೇ ಎಂದು ಸಂಪಾದಕೀಯದವರು ಕೇಳಿದ್ದು ಸಮಂಜಸವಾಗಿಯೇ ಇದೆ. ಏಕೆಂದರೆ ಆಧ್ಯಾತ್ಮ ನಾಯಕ ಎಂದು ಹೇಳಿಕೊಳ್ಳುವವರು ರಾಜಕೀಯ ನಾಯಕರು ಅವರ ಪಾದಕ್ಕೆ ಬಂದು ಎರಗುವಾಗ ಅವರಿಗೆ ಭ್ರಷ್ಟಾಚಾರ ಮಾಡಬಾರದು, ಇದು ದೇಶಕ್ಕೆ ಮಾರಕ ಎಂದು ಏಕೆ ತರಾಟೆಗೆ ತೆಗೆದುಕೊಳ್ಳುವುದಿಲ್ಲ. ಅಧ್ಯಾತ್ಮಿಕ ನಾಯಕರಿಗೆ ಯಾರ ಮುಲಾಜೂ ಇರಬೇಕಾಗಿಲ್ಲ. ಉದಾಹರಣೆಗೆ ಸಾಯಿ ಬಾಬಾ ಅವರ ಪಾದಕ್ಕೆ ಎರಗದ ರಾಜಕೀಯ ನಾಯಕರೆ ಇಲ್ಲ (ಎಡ ಪಕ್ಷದವರನ್ನು ಹೊರತುಪಡಿಸಿ). ಆದರೆ ಸಾಯಿ ಬಾಬಾ ಎಂದೂ ಹಾಗೆ ರಾಜಕೀಯ ನಾಯಕರಿಗೆ ಹೇಳಿದ್ದು ಕೇಳಿಲ್ಲ. ಅದೇ ರೀತಿ ಮುಖ್ಯ ಮಂತ್ರಿಯೊಬ್ಬರು ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಮಠಗಳು ಅವರ ಬೆಂಬಲಕ್ಕೆ ನಿಂತದ್ದು ನಾವು ಕಂಡಿದ್ದೇವೆ. ಇಂಥ ಸಂದರ್ಭದಲ್ಲಿ ಯಾವ ಮುಲಾಜೂ ಇಲ್ಲದೇ ಅಧ್ಯಾತ್ಮಿಕ ನಾಯಕರು ಏಕೆ ಅವರನ್ನು ತರಾಟೆಗೆ ತೆಗೆದುಕೊಳ್ಳಬಾರದು?

  ಉತ್ತರ
  • sundar
   ಜೂನ್ 5 2011

   ಮಾನ್ಯ ಆನಂದ ಪ್ರಸಾದ್ ರವರೆ, ನಿಮ್ಮೆಲ್ಲ ಮಾತುಗಳು ಒಪ್ಪತಕ್ಕಂದೆ. ಎಲ್ಲರೂ ಕೇವಲ ಹಿಂದೂ ಧರ್ಮ ವನ್ನು ಯಾಕೆ ಬೊಟ್ಟು ಮಾಡಿ ತೋರಿಸ್ತೀರಾ. ನಿಮ್ಮ ಪ್ರಕಾರ ಬಾಬ ಈ ಸತ್ಯಾಗ್ರಹ ಮಾಡದೆ ಇದ್ದಿದ್ದರೆ, ಬೇರೆ ಯಾರು ಮಾಡಬೇಕಾಗಿತ್ತು. ಈ ಬ್ಲಾಗ್ ನಲ್ಲಿ ಸಂಪಾದಕೀಯದ ಪ್ರಶ್ನೆ ಗಳಿಗೆ ಉತ್ತರ ಗಳಿವೆ ನೋಡಿ http://prajaprabhutva.blogspot.com/

   ಉತ್ತರ
  • ಪ್ರಸ್ಕ
   ಜೂನ್ 5 2011

   ರಾಮ್ದೇವ್ ಅವರ ಬಳಿಗೆ ಬಂದವರಿಗೆ ಹೇಳಿಲ್ಲ ಎಂದು ಹೇಗೆ ಹೇಳುತ್ತೀರಿ ಆನಂದ್, ಅದರಲ್ಲೂ ಬದಲಾಗದ ವ್ಯವಶೆ ಸರಿಪಡಿಸಲು ಹೋಗಿದ್ದು ತಪ್ಪೇ? ನಿಮ್ಮ ಪ್ರಕಾರ ಸನ್ಯಾಸಿಯೊಬ್ಬ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸುವುದು ತಪ್ಪೆ?
   ಇನ್ನು ಕೆಲವು ತಿಕ್ಕಲ ರಾಜಕಾರಣಿಗಳು (ದಿಗ್ವಿಜಯ್ ಸಿಂಗ್) ಬಾಬಾರ ಬಳಿಯೂ ಕಪ್ಪು ಹಣ ಇದೆ ಎಂದು.
   ಅರೆ ಸ್ವಾಮಿ ಅವರೇನು ನನ್ನ ಕಪ್ಪುಹಣ ಹಿಡಿಯಬೇಡಿ ಎಂದು ಕೇಳಿದ್ದಾರ ಅವರ ಹಣವೂ ಸೇರಿಸಿ ಹಿಡಿಯಲಿ.

   ಸಂಪಾದಕೀಯವೆಂಬ ಬ್ಲಾಗ್ ಇರುವುದೇ ಹಿಂದೂಗಳನ್ನು ವಿರೋಧಿಸಲು, ಅದರ ಹುನ್ನಾರಗಳನ್ನು ಅಲ್ಲೆ ಬಯಲಿಗೆಳೆಯಲು ಆ ಬ್ಲಾಗ್ ನಲ್ಲಿಅವಕಾಶವಿಲ್ಲ. ಪ್ರತಿಕ್ರಿಯೆಗಳನ್ನು ಮಾಡರೇಟ್ ಮಾಡುವ ಮೂಲಕ ತನ್ನ ವಿರುದ್ದದ ದನಿಯನ್ನು (ಕೇಂದ್ರ ಸರ್ಕಾರ ಮಾಡಿದಂತೆ) ಮೊಳಕೆಯಲ್ಲಿಯೆ ಚಿವುಟಿ ಹಾಕಲಾಗುತ್ತದೆ. ಅವರಿಗೂ ಗೊತ್ತು, ಪ್ರತಿಕ್ರಿಯೆಗಳನ್ನು ನಿಯಂತ್ರಿಸದಿದ್ದರೆ ಆ ಬ್ಲಾಗ್ ೩ ದಿನದಲ್ಲಿ ಮಕಾಡೆ ಮಲಗುತ್ತದೆಂದು

   ಉತ್ತರ
 8. ಮಹೇಶ ನೀರ್ಕಜೆ
  ಜೂನ್ 5 2011

  ಆನಂದ್ ಪ್ರಸಾದ್ ಅವರೇ, ಹಾಗಿದ್ದರೆ ನಿಮ್ಮ ಪ್ರಕಾರ ಗಾಂಧೀಜಿಯವರು ರಾಜಕೀಯ ಚಳುವಳಿಯಲ್ಲಿ ಭಾಗವಹಿಸಿ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡರೆ? ಗಾಂಧೀಜಿ ಸ್ವತಹ ಒಬ್ಬ ಅಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತರ ಕ್ರಾಂತಿಕಾರಿಗಳೂ ಕೂಡ ಆರ್ಯ ಸಮಾಜ ಸ್ಥಾಪಕ ಸ್ವಾಮೀ ದಯಾನಂದರಿಂದ, ವಿವೇಕಾನಂದರಿಂದ ಮತ್ತು ಇತರ ಅಧ್ಯಾತ್ಮಿಕ ವ್ಯಕ್ತಿಗಳ ಮಾತುಗಳಿಂದ ಪ್ರೇರಿತರಾದವರು. ಇವರೆಲ್ಲರೂ ಅಧ್ಯಾತ್ಮಿಕರಾಗಿದ್ದೂ ರಾಜಕೀಯ ಹೋರಾಟ ಮಾಡಿದರು. ಅಂದರೆ ಗಾಂಧಿಜಿ ಮತ್ತು ಇತರರ ಹೋರಾಟದ ಫಲವಾಗಿ ಸಿಕ್ಕಿದ ಸ್ವಾತಂತ್ರ್ಯದ ನಂತರ ಬಂದ ಸಂವಿಧಾನ ಅದೇ ಜನರ ಆಶಯಕ್ಕೆ ಮತ್ತು ನಡತೆಗೆ ವಿರುಧ್ಧವಾಗಿತ್ತೆ? ಮೇಲ್ಕಂಡ ಜನರೆಲ್ಲಾ ನಿಮ್ಮ ಆರೋಪದಂತೆ ಪುರೋಹಿತಶಾಹಿಗಳಾಗಿದ್ದರೆ? ಅಧ್ಯಾತ್ಮಿಕ ವ್ಯಕ್ತಿಗಳೆಲ್ಲಾ ನಿಮ್ಮ ಪ್ರಕಾರ ಪುರೋಹಿತಶಾಹಿಗಳೇ? ದಯವಿಟ್ಟು ಈ ಎಲ್ಲ ಪ್ರಶ್ನೆಗಳಿಗೂ ನೀವು ಉತ್ತರಿಸಿ ನನ್ನ ಸಂಶಯಗಳನ್ನು ಪರಿಹರಿಸಿ.

  ಉತ್ತರ
  • anand prasad
   ಜೂನ್ 5 2011

   ಗಾಂಧಿ, ವಿವೇಕಾನಂದ ಮೊದಲಾದವರು ಪುರೋಹಿತಶಾಹಿಯ ವಿರೋಧಿಗಳೇ ಆಗಿದ್ದರು. ಸ್ವಾಮಿ ವಿವೇಕಾನಂದರಂತೂ ಪುರೋಹಿತಶಾಹಿಯನ್ನು ಉಗ್ರವಾಗಿ ಟೀಕಿಸಿದ್ದಾರೆ. ಇವರೆಲ್ಲ ನಿಜವಾದ ಅರ್ಥದಲ್ಲಿ ಅಧ್ಯಾತ್ಮಿಕರಾಗಿದ್ದರು. ಆದರೆ ಇಂದು ಅಧ್ಯಾತ್ಮದ ಹೆಸರಿನಲ್ಲಿ ನಾನಾ ದಂಧೆಗಳನ್ನು ನಡೆಸುವವರು ಇದ್ದಾರೆ. ಇಂದು ಹೆಚ್ಚಾಗಿ ಅಧ್ಯಾತ್ಮದ ಹೆಸರಿನಲ್ಲಿ ಪುರೋಹಿತಶಾಹಿಯ ವೈಭವೀಕರಣ ನಡೆಯುತ್ತಿದೆ. ಹೆಚ್ಚಿನೆಲ್ಲ ಮಠಗಳಲ್ಲಿ ಇದು ಕಣ್ಣಿಗೆ ರಾಚುತ್ತದೆ. ನಿಜವಾದ ಅಧ್ಯಾತ್ಮ ಕಣ್ಮರೆಯಾಗಿದೆ. ಹೀಗಾಗಿ ದೇಶವು ಅಧ್ಯಾತ್ಮಿಕ ರಾಷ್ಟ್ರವಾಗುವುದೆಂದರೆ
   ಅದು ಪುರೋಹಿತಶಾಹಿ ರಾಷ್ಟ್ರವಾಗುವುದೆಂದೇ ಅರ್ಥ. ಅಂಥದಕ್ಕೆ ಅವಕಾಶ ಕೊಡದಿರುವುದು ಒಳ್ಳೆಯದು. ಕಪ್ಪು ಹಣ ವಾಪಸು ತರಲು ಹೋರಾಟ ಕೈಗೊಂಡ ಬಗ್ಗೆ ವಿರೋಧ ಇಲ್ಲ, ಬೆಂಬಲ ಇದೆ. ಆದರೆ ಒಂದು ವಿಷಯ. ಹಿಂದೆ ಭಾ.ಜ. ಪ. ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಕಪ್ಪು ಹಣವನ್ನು ದೇಶಕ್ಕೆ ತರಲು ಪ್ರಯತ್ನಿಸಬಹುದಿತ್ತು. ಧರ್ಮದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಆ ಕೆಲಸವನ್ನು ಮಾಡಲಿಲ್ಲ.

   ಉತ್ತರ
   • ಮಹೇಶ ನೀರ್ಕಜೆ
    ಜೂನ್ 5 2011

    ಗಾಂಧಿ ವಿವೇಕಾನಂದ ಮೊದಲಾದವರು ಪುರೋಹಿತಶಾಹಿ ವಿರೋಧಿಗಳಾಗಿದ್ದರು ಎಂದು ನೀವು ಒಪ್ಪಿಕೊಂಡದ್ದು ನನ್ನ ಅದೃಷ್ಟ. ಕೊನೆಗೆ ಅವರನ್ನೂ ಪುರೋಹಿತಶಾಹಿ ಎನ್ನಲಿಲ್ಲವಲ್ಲ, ಅದಕ್ಕೆ ನಿಮಗೆ ಧನ್ಯವಾದ. ಸ್ವಾಮಿ ಆನಂದ್ ಪ್ರಸಾದ್, ನಾವು ಮಾತನಾಡುತ್ತಿರುವುದು ರಾಮ್ ದೇವ್ ಬಗ್ಗೆ. ಇಲ್ಲಿ ನಾನಾ ದಂಧೆಗಳನ್ನು ನಡೆಸುವ ಮಠಗಳ ಉಲ್ಲೇಖ ಏಕೆ? ರಾಮ್ ದೇವ್ ಅದೇನು ಪುರೋಹಿತಶಾಹಿ ಕೆಲಸ ಮಾಡಿದ್ದಾರೆಂದು ಸ್ವಲ್ಪ ಹೇಳಿ ದಯವಿಟ್ಟು. ಗಾಂಧಿ, ವಿವೇಕಾನಂದ ಇದ್ದ ಸಮಯದಲ್ಲಿ ಕೂಡ ದಂಧೆ ಮಾಡುವ ಮಠಗಳಿದ್ದವು, ಈಗಲೂ ಇವೆ. ಹಾಗಂತ ಎಲ್ಲಾ ಅಧ್ಯಾತ್ಮಿಕವಾದಿಗಳನ್ನು ಪುರೋಹಿತಶಾಹಿಗಳೆಂದು ಯಾಕೆ ಕರೆಯುತ್ತೀರಿ?

    {ದೇಶವು ಅಧ್ಯಾತ್ಮಿಕ ರಾಷ್ಟ್ರವಾಗುವುದೆಂದರೆ ಅದು ಪುರೋಹಿತಶಾಹಿ ರಾಷ್ಟ್ರವಾಗುವುದೆಂದೇ ಅರ್ಥ}
    ಆಹಾ ಅದೇನು ಲಾಜಿಕ್ಕು ಸ್ವಾಮಿ ಇಲ್ಲಿ, ಅಧ್ಯಾತ್ಮಿಕ ವ್ಯಕ್ತಿಗಳಿಂದ ಹುಟ್ಟಿದ ದೇಶ By default ಪುರೋಹಿತಷಾಹಿ ದೇಶವೇ ನಿಮ್ಮ ಪ್ರಕಾರ! “ಇವರೆಲ್ಲ ನಿಜವಾದ ಅರ್ಥದಲ್ಲಿ ಅಧ್ಯಾತ್ಮಿಕರಾಗಿದ್ದರು” ಎಂದು ನೀವೇ ಹೇಳ್ತೀರಾ, ಅದೇ ಪ್ರತಿಕ್ರಿಯೆಯಲ್ಲಿ “ದೇಶವು ಅಧ್ಯಾತ್ಮಿಕ ರಾಷ್ಟ್ರವಾಗುವುದೆಂದರೆ ಅದು ಪುರೋಹಿತಶಾಹಿ ರಾಷ್ಟ್ರವಾಗುವುದೆಂದೇ ಅರ್ಥ” ಎಂದೂ ಹೇಳ್ತೀರಾ, ಇದು ವಿರೋದಾಭಾಸ ಅಲ್ಲವೇ? ದಯವಿಟ್ಟು ಉತ್ತರಿಸಿ

    ಉತ್ತರ
    • anand prasad
     ಜೂನ್ 6 2011

     ಕ್ಷಮಿಸಿ, ನಿಮ್ಮ ಅಭಿಪ್ರಾಯ ಹಾಗೂ ನನ್ನ ಅಭಿಪ್ರಾಯಗಳಲ್ಲಿ ಭಿನ್ನತೆ ಇದೆ. ಹಾಗಾಗಿ ಇನ್ನು ಚರ್ಚಿಸಿ ಪ್ರಯೋಜನವಿಲ್ಲ. ನಾನು ಚರ್ಚೆಯಿಂದ ದೂರ ನಿಲ್ಲುತ್ತಿದ್ದೇನೆ.

     ಉತ್ತರ
   • ಜೂನ್ 5 2011

    ಸ್ವಾಮಿ ಆನಂದ್ ಅವರೇ! ಯಾವುದೇ ವಿಷಯನ್ನು ಸೂಕ್ತವಾಗಿ ತಿಳಿಯದೇ, ಅಧ್ಯಾತ್ಮವಾದಿಗಳು ಪುರೋಹಿತಶಾಯಿಗಳೆನ್ನುವ ಉಡಾಫೆ ಅಭಿಪ್ರಾಯವನ್ನು ನೀಡಿರುವುದು ತೀರಾ ವಿಪರ್ಯಾಸವೇ ಸರಿ!

    ತೀರಾ ಸನ್ಯಾಸಿಯಂತೆ ಜೀವಿಸಿದ್ಧ ಚಾಣುಕ್ಯನೂ ದುಷ್ಟ ನಂದರ ಆಳ್ವಿಕೆಯ ವಿರುದ್ಧ ಮುಗಿಬಿದ್ದನು. ನಂದರ ಪ್ರಕಾರ ನೋಡಿದರೆ ಅವನೂ ಪರಮ ರಾಷ್ಟ್ರ/ರಾಜದ್ರೋಹಿಯೇ ಸರಿ. ಆದರೆ, “ನನಗ್ಯಾಕಪ್ಪ ಇಲ್ಲದ ರಾಜಕೀಯ” ಅಂತ ಸುಮ್ಮನಿದ್ದರೆ, ಜನಹಿತವಾದ ಮತ್ತೊಂದು ಸಾಮ್ರ್ಯಾಜ್ಯದ ಸ್ಥಾಪನೆ ಬಹುಶಃ ಸಾಧ್ಯವಾಗುತ್ತಿರಲ್ಲ. ನಂದರ ಅಧರ್ಮದ ವಿರುದ್ಧ ಅವನು ಎತ್ತಿದ ಧ್ವನಿಗೆ ಜನಸಾಮಾನ್ಯರು ತಾವಾಗಿಯೇ ಧ್ವನಿಗೂಡಿಸಿದರು.

    ಇಲ್ಲಿ ಏನು ತಿಳಿಯುತ್ತದೆಂದರೆ, ಜನಸಾಮಾನ್ಯರಿಗೆ ಬೇಕಿರುವುದು ಅಂತಹ ಧ್ವನಿಯೆತ್ತುವ ಮೊದಲಿಗ. ಅಂತಹ ಸ್ಥಾನವನ್ನು ಸ್ವೀಕರಿಸುವ ಬಾಬಾ ಆಗಲಿ, ಅನ್ನಾ ಹಜಾರೆ ಅವರಾಗಲಿ ಜನಮತವನ್ನು ಗಳಿಸುವುದು ಸಹಜವೂ ಹೌದು, ಇಂದಿನ ಪರಿಸ್ತಿತಿಯಲ್ಲಿ ಅವಶ್ಯಕವೂ ಹೌದು.

    ಉತ್ತರ
 9. P.Ramachandra, Ras Laffan- Qatar
  ಜೂನ್ 5 2011

  ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ಎಂಬ ಸಿದ್ದಾಂತದ – ಅನುಸಿದ್ಧಾಂತ ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರು (ಪ್ರಾಯಶಃ) ಸಂವಿಧಾನವನ್ನು ಒಪ್ಪಿದವರು.!

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  ಉತ್ತರ
 10. ರವಿ
  ಜೂನ್ 5 2011

  ಸಂಪಾದಕೀಯದ ಬಹಳ ಕೆಟ್ಟ ಬರಹ ಅದು. ಅದರ ಬಗ್ಗೆ ಅಲ್ಲೇ ಕಮೆಂಟಿಸಿದ್ದೇನೆ. ವಿವೇಕಾನಂದ, ಬುದ್ಧ ಬಿಟ್ಟರೆ ಉಳಿದ ಸ್ವಾಮಿಗಳೆಲ್ಲ ಅಧಮರು ಎಂಬ ಪೂರ್ವಾಗ್ರಹದಲ್ಲಿರುವಂತೆ ಕಾಣುತ್ತಿದೆ ಸಂಪಾದಕೀಯ! ನರೇಂದ್ರ ಶರ್ಮ ರಂತಹವರ ಜೊತೆ ಸ್ವಾಮಿ ರಾಮದೇವ ರನ್ನು ಸೇರಿಸಿದ್ದು ವಿಪರ್ಯಾಸ.
  ಮಹೇಶರೆ ಬಹಳ ಚೆನ್ನಾಗಿ ಬರೆದಿದ್ದೀರಿ. ಸಂಪಾದಕೀಯಕ್ಕೆ ತಕ್ಕ ಉತ್ತರ. ಅಣ್ಣಾ ಸತ್ಯಾಗ್ರಹ ನಡೆದದ್ದು ಇತ್ತೀಚಿಗೆ. ಬಾಬಾ ತಿಂಗಳುಗಟ್ಟಲೆ ದೇಶಾದ್ಯಂತ ಸುತ್ತಾಡಿದ್ದಾರೆ. ಜನರಲ್ಲಿ ಜಾಗ್ರತಿ ಮೂಡಿಸಿದ್ದಾರೆ. ಅವರ ಸತ್ಯಾಗ್ರಹ ಯೋಜನೆ ಇವತ್ತು ನಿನ್ನೆ ಹುಟ್ಟಿದ್ದಲ್ಲ. ಅಣ್ಣಾ ಸತ್ಯಾಗ್ರಹದ ಪರಿಯಲ್ಲಿ ಬಾಬ ಸತ್ಯಾಗ್ರಹ ಎಂದು ಸಂಪಾದಕೀಯ ಹಾಸ್ಯಾಸ್ಪದವಾಗಿ ಬರೆದಿದೆ.

  ಉತ್ತರ
 11. ಮಹೇಶ ನೀರ್ಕಜೆ
  ಜೂನ್ 5 2011

  ಪ್ರತಿಕ್ರಿಯಿಸಿದ ಎಲ್ಲರೂ ಧನ್ಯವಾದಗಳು…

  ಉತ್ತರ
 12. ಜೂನ್ 5 2011

  ಯೋಗದಿಂದ ರೋಗ ಗುಣಪಡಿಸುವುದಾಗಿ ಹೇಳಿದ ಕೂಡಲೇ ಸಾಯಿಬಾಬಾರ ರೋಗ ಗುಣಪಡಿಸದಿರುವ ಸವಾಲು ಹಾಕುವವರು ಚಿಕಿತ್ಸೆಯಿಂದ ರೋಗ ಗುಣಪಡಿಸುವ ವೈದ್ಯರಿಗೇಕೆ ಬಾಬಾರನ್ನು ಉಳಿಸಲು ಕೇಳುವುದಿಲ್ಲ? ಯೋಗದಿಂದ ಸಾವನ್ನೇ ಗೆಲ್ಲಬಹುದೆಂದು ಯಾರೂ ಹೇಳಿಲ್ಲ, ಕೆಲವು ರೋಗಗಳು ಗುಣಹೊಂದುವ ಬಗ್ಗೆ ದಾಖಲೆಯಿದೆ, ಅಷ್ಟೆ.

  ಉತ್ತರ
  • ಮಹೇಶ ಪ್ರಸಾದ ನೀರ್ಕಜೆ
   ಜೂನ್ 6 2011

   ನಿಜ. ಕ್ಯಾನ್ಸರ್ ಯಾವುದರಿಂದ ಬರುತ್ತದೆ ಅಂತ ನಿಖರವಾಗಿ ಯಾರಿಗೂ ಗೊತ್ತಿಲ್ಲ. ಯೋಗದಿಂದ ದೇಹದ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ನಿರ್ವಿವಾದಿತ. ಇದರಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಅಥವಾ ಮೊದಲ ಹಂತದಲ್ಲಿರುವ ಕ್ಯಾನ್ಸರ್ ಗುಣವಾಗುವ ಸಾಧ್ಯತೆ ಹೆಚ್ಚು ಎಂದಷ್ಟೇ ಹೇಳಿದ್ದು ಬಾಬಾ.

   ಉತ್ತರ
 13. shrivathsa
  ಜೂನ್ 6 2011

  Nice to see a like minded blogger. Please have a look at what we wrote:
  http://paryayavak.blogspot.com/2011/06/sampadakas-tirade-against-baba-ramdev.html

  Thanks for a well written rebuttal of sampadaka’s article.

  ಉತ್ತರ
  • ಮಹೇಶ ಪ್ರಸಾದ ನೀರ್ಕಜೆ
   ಜೂನ್ 6 2011

   Good points in deed. Thanks for that blog post!

   ಉತ್ತರ
 14. ಜೂನ್ 6 2011

  ದೊಡ್ಡ ದೊಡ್ಡ ಸಮಸ್ಯೆಗಳು, ಹಸಿವು, ಬಡತನ, ಅನಾರೋಗ್ಯ, ಭೃಷ್ಟಾಚಾರ ಇತ್ಯಾದಿ ಜ್ವಲ೦ತ ಸಮಸ್ಯೆಗಳ ಬಗ್ಗೆ ಹೋರಾಡುವುದನ್ನು ಬಿಟ್ಟು, ಪ್ರಾಮುಖ್ಯ ವಿಷಯಗಳನ್ನು ಬದಿಗಿರಿಸಿ ದುರ್ಬೀನು ಹಿಡಿದು ಹುಳ ಹೆಕ್ಕುವ ಆಲೋಚನೆ ಸ೦ಪಾದಕೀಯದ್ದು. ಇದೂ ಕೂಡ ಭಾರತದ ಸಮಸ್ಯೆಗಳಲ್ಲೊ೦ದು. ಒಳ್ಳೆಯ ಕೆಲ್ಸ ಮಾಡಲು ಹೊರಟರೆ ಅದಕ್ಕೆ ನೂರೆ೦ಟು ವಿಘ್ನ. ಕಾ೦ಗ್ರೆಸ್ ಇದೇ ತರಾ ಡಿರೈಲ್ ಮಾಡೋ ಕೆಲ್ಸ ಮಾಡ್ತಿದೆ.
  ಸ೦ಪಾದಕಿಯದ್ದು ತೀರಾ ಸ೦ಕುಚಿತ ಮನೋಭಾವ. ಚೆನ್ನಾಗಿ ಉತ್ತರಿಸಿದ್ದೀರಾ ಮಹೇಶ್ 🙂

  ಉತ್ತರ
 15. shyam shetty
  ಜೂನ್ 6 2011

  shame on coward sampadakiya team, avarige yeduru nintu matado yogyathe ella, facebuk nalli comment maadidre ignore madthare answer kodo thakattu ella naayigalige

  ಉತ್ತರ
 16. Pradeep CS
  ಜೂನ್ 6 2011

  Sampadakeeya ಸ್ವಾಮಿ,

  ಬಾಬಾ ಮೋಸಗಾರ ಓಕೇ, ಕಾಂಗ್ರೆಸ್ ದೊಡ್ಡ ಮೋಸಗಾರ ಪಕ್ಷ ಓಕೇ ಹಾಗಾದ್ರೆ ಸಾಚಾ ವ್ಯಕ್ತಿ ಗಳು ಪ್ರತಿಭಟಿಸೋ ಶಕ್ತಿ ಇಲ್ಲವೇ
  ಇಲ್ಲ , ಅಂಥವರು ಇದ್ದರು(ಅಣ್ಣಾ) ಅವ್ರಿಗೆ ಯಾರಾದ್ರೂ ಸಪೋರ್ಟ್ ಮಾಡಿದ್ರೂ ಇವರು ಅವರಿಂದ ಹೇಳೆ ಮಾಡಿಸ್ತಿರೋದು ಅನ್ನೋ ದೂರು..

  ಹಾಗಾದ್ರೆ ನಿಮ್ಮ ಪ್ರಕಾರ ಯಾವ ವ್ಯಕ್ತಿ ಅತವ ಸಂಸ್ಥೆ ಗೆ ಬ್ರಷ್ಟಾಚಾರ ಡ ಬಗ್ಗೆ ಧ್ವನಿ ಎತ್ತೋ ತಾಕತ್ತು ಇದೆ ಹೇಳಿ ಸ್ವಾಮಿ??

  ಉತ್ತರ
 17. ಜೂನ್ 6 2011

  sir, sampadakeeyas misdeeds exposed. its found as in literary, journalism even in blogging these type of develeopments happening. groupism this world has its origi in communism and so called secularism

  ಉತ್ತರ
 18. ಸಂಪಾದಕೀಯದಲ್ಲಿನ ಬರಹಗಳಿಗೆ, ಒಂದೆರಡು ಸಂದರ್ಭಗಳಲ್ಲಿ, ವಿಷಯಾಧಾರಿತ ಹಾಗು ವಸ್ತು ನಿಷ್ಟ ಬೆಂಬಲ ನೀಡಿರುವೆನಾದರೂ, ಸಂಪಾದಕೀಯ ದ ಮಾತುಗಳು ಸದಾ ಸಂಶಯಾಸ್ಪದವಾಗಿಯೇ ಕಂಡಿವೆ ನನಗೆ. ಹತ್ತು ಹಲವು ಬಾರಿ ದ್ವಂದ್ವ ಹಾಗೂ ವಿರೋಧಾಭಾಸಗಳು ಎದ್ದು ಕಂಡಿವೆ.

  ಮುಖವಾಡ ಕಿತ್ತೊಗೆದು ಜನರನ್ನು ಎದುರಿಸುವ ಕೆಚ್ಚೆದೆ ಇಲ್ಲದವರ ಬರಹಗಳಿಗೆ ಬೆಲೆಕೊಡುವುದೂ ತಪ್ಪು ಎಂದು ನನ್ನ ಅನಿಸಿಕೆ.

  ಅದರ ಬಗ್ಗೆ ಮಾತಾಡುವುದು ಕೂಡ, ಅದಕ್ಕೆ ಪುಕ್ಕಟೆ ಪ್ರಚಾರ ನೀಡಿದಂತಾಗುತ್ತದೆ.

  ಉತ್ತರ
 19. ಪ್ರಸ್ಕ
  ಜೂನ್ 6 2011

  ಸಂಪಾದಕೀಯ ತಿಪ್ಪೆ ಸಾರಿಸಲು ಹೊರಟಿದೆ ಇವತ್ತಿನ ಲೇಖನದಲ್ಲಿ. ಅಲ್ಲೂ ಅದರ ಕಾಂಗ್ರೆಸ್ ಪ್ರೀತಿ ಕಡಿಮೆಯಿಲ್ಲ. ಅಪ್ಪಟ ಕಾಂಗ್ರ್ಸ್ ಮನಸ್ಸಿನ ಸಂಪಾದಕರಿಗೆ ತಮ್ಮ ಹಳೆಯ ಲೇಖನ ಈಗಿನ ಕಾಂಗ್ರೆಸಿನ ಸ್ತಿತಿಯನ್ನೆ ತಂದಿದೆ ಅವರಂತೆ ಇವರೂ ಕೂಡ ಮುಖ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ತಿಪ್ಪೆ ಸಾರಿಸುವುದನ್ನಂತೂ ಬಿಟ್ಟಿಲ್ಲ. ಕಾಂಗ್ರೆಸ್ ಮತ್ತವರ ಮನಸ್ತಿತಿಯೇ ಹಾಗೆ ವಿರೋಧಿಗಳನ್ನು ಹಣಿಯುವುದು ಸಾಧ್ಯವಾಗದಿದ್ದರೆ ಹಳಿಯುವುದು. ಆದರೂ ಯಾಕೋ ಸಂಪಾದಕರು ಪ್ರಚಾರಕ್ಕೋಸ್ಕರವೇ ಇವೆಲ್ಲ ಮಾಡ್ತಿದ್ದಾರೆ ಅನ್ಸುತ್ತೆ. ಹಾಗಾದ್ರೂ ತಮ್ಮ ಬ್ಲಾಗಿಗೆ ರೇಟಿಂಗ್ ಬರಲಿ ಅನ್ನುವ ಹುನ್ನಾರವಿರಬೇಕು.

  ಉತ್ತರ
  • ಅಕ್ಷಯರಾಮ ಕಾವಿನಮೂಲೆ
   ಜೂನ್ 7 2011

   ಶ್ರೀ ಹರ್ಷ ಅವರೇ…..

   “ಗೋಮೂತ್ರದಲ್ಲಿ ಯಾವ ಯಾವ ಕೆಮಿಕಲ್ಲುಗಳಿವೆ ಎಂದು ತಿಳಿಯಲು ಎರಡು ದಿನ ಸಾಕು.”
   ನಿಮ್ಮ ಮನದ ಕುತರ್ಕ ತಿಳಿಯಲು ನೀವು ಬರೆದ ಎರಡು ಸಾಲು ಓದಿದರೆ ಸಾಕು 🙂

   ಉತ್ತರ
 20. ಜೂನ್ 6 2011

  ಬಹುಷಃ “ಫೇಸ್ ಬುಕ್” ನಲ್ಲಿ “ಸಂಪಾದಕೀಯ ಮತ್ತಿತರ ಮುಖವಾಡ ಹೊತ್ತವರ ವಿರುದ್ಧ ಹೋರಾಟ” ಎನ್ನುವ ಒಂದು ಹೊಸ ಗುಂಪನ್ನು ರಚಿಸಿಕೊಂಡು ಹೋರಾಟ ನಡೆಸಬೇಕಾಗಬಹುದು ಅಂತರ್ಜಾಲೀ ಕನ್ನಡಿಗರು.
  ಇಂತಹವರಿಗಿಂತ ಕಾಂಗ್ರೇಸಿನ ಆ ಬಾಯಿಬಡುಕ ದಿಗ್ವಿಜಯ ಸಿಂಗ್ ಎಷ್ಟೋ ವಾಸಿ ಅನ್ಸುತ್ತೆ. ಏನೇ ಮಾತಾಡಿದ್ರೂ ಮುಖ ಮರೆಸಿಕೊಂಡು ಆಡೋಲ್ಲ ಆತ!

  ಉತ್ತರ
 21. sriharsha
  ಜೂನ್ 6 2011

  “//ಲೇಖಕರು ಕ್ಯಾನ್ಸರ್ ಮತ್ತು ಎಡ್ಸ್ ಬಗ್ಗೆ ಮಾತ್ರ ಯಾಕೆ ಉಲ್ಲೇಖಿಸುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಇತರ ಖಾಯಿಲೆಗಳನ್ನು ಗುಣಪಡಿಸಿದರೂ ಕೂಡ “ಮುಂದಿನ ಪೀಳಿಗೆ ರಾಮದೇವ ಅವರಿಗೆ ಋಣಿಯಾಗಿ ” ಇರಬಹುದು ತಾನೇ.//”

  ಕ್ಯಾನ್ಸರ್‍ ಏಡ್ಸ್ ಗಳಿಗೆ ಔಷಧಿಗಳಿಲ್ಲ ಉಳಿದ ಸಾಕಷ್ಟು ಕಾಯಿಲೆಗಳಿಗೆ ಔಷಧಿ ಇದೆ. ಹಾಗಾಗಿ ಅವೆರಡು ಕಾಯಿಲೆಗಳ ಬಗ್ಗೆ ಮಾತ್ರ ಉಲ್ಲೇಖಿಸಿರುವುದು ಸಮರ್ಥನೀಯವಾಗಿದೆ. ಈ ವಿಷಯದಲ್ಲಿ ತಮ್ಮ ವಾದ ಒಪ್ಪತಕ್ಕದ್ದಲ್ಲ.

  ಕಪ್ಪು ಹಣದ ಬಗ್ಗೆ ಮೊಟ್ಟಮೊದಲು ದನಿ ಎತ್ತಿದವರು ಜೆಪಿ. ಇಂದಿರಾ ಗಾಂಧಿಯವರ ಬ್ರಷ್ಟಾಚಾರ ಮತ್ತು ಹಣ ಸಂಗ್ರಹಣೆ ಬಗ್ಗೆ ಎಪ್ಪತ್ತರ ದಶಕದಲ್ಲೇ ಮಾತನಾಡಿದ್ದರು. ಅವರ ನಂತರ ಇದರ ಬಗ್ಗೆ ಹೇಳಿದ್ದು ರಾಜೀವ್ ದೀಕ್ಷಿತ್. ರಜ್ಜು ಭಯ್ಯಾ, ಅಡ್ವಾಣಿ ಇತರರಿಗೆ ಈ ಬಗ್ಗೆ ತಿಳಿಸಿದ್ದೇ ರಾಜೀವ ದೀಕ್ಷಿತರು. ಸಂಸತ್ತಿನಲ್ಲಿ ಬಹುಷಃ ಅಡ್ವಾಣಿ ಮೊದಲು ಹೇಳಿರಬಹುದು.

  “//ಅಣ್ಣ ಹಜಾರೆ ಈ ತನಕ ಲಂಚ ಕೊಟ್ಟೆ ಇಲ್ಲವೆಂದು ಹೇಗೆ ನಂಬುತ್ತೀರಿ? ಅಣ್ಣಾ ಮೇಲೆ ಬಾರದ ಸಂಶಯ ಬಾಬಾ ಮೇಲೆ ಯಾಕೆ?/””
  ಇದೊಂದು ಅತ್ಯಂತ ಚೀಪ್ ಕುತರ್ಕ. ಅಣ್ಣಾ ಮತ್ತು ಅವರ ಸಾಧನೆಯ ಬಗೆಗಿನ ತಮ್ಮ ಅಜ್ಞಾನಕಕ್ಕೆ ನನ್ನ ಮರುಕವಿದ್ದರೂ ರಾಮದೇವರ ಭಟ್ಟಂಗಿತನಕ್ಕಾಗಿ ಅವರನ್ನು ಹೀಗೆ ಅವಮಾನಿಸಬಹುದೇ? ಅಣ್ಣಾನ ಹೆಸರಲ್ಲಿ ಎಂದೇ ಒಂದು ಆಸ್ತಿ ಇಲ್ಲ. ಈಗಲೂ ಎರಡು ಜೊತೆ ಬಟ್ಟೆಯಲ್ಲಿಯೇ ಬದುಕುತ್ತಾರೆ. ರಾಮದೇವರ ಬಳಿ ಸಾವಿರಾರು ಕೋಟಿಯಿದೆ. ಏ ಸಿ ರೂಮಿನಲ್ಲಿ ಬದುಕುತ್ತಾರೆ. ಎರಡು ಸಾವಿರ ಎಕರೆ ಕಾಂಕ್ರೀಟ್ ಆಶ್ರಮವಿದೆ. ಹಲವಾರು ಫ್ಯಾಕ್ಟರಿಗಲಳಿವೆ. ನೂರಾರು ವಾಹನಗಳಿವೆ. ಅಣ್ಣಾ ಬಗ್ಗೆ ಇರದ ಅನುಮಾನ ರಾಮದೇವರ ಬಗ್ಗೆ ಯಾಕೆ ಬರುತ್ತದೆ ಎಂಬುದು ಕಾಮನ್ ಸೆನ್ಸ್!

  “”/ಈ ಬಗ್ಗೆ ಸಂಶೋಧನೆ ನಡೀತಾ ಇದೆ. ಅಂದರೆ ಇದನ್ನು ಸಾಬಿತು ಪಡಿಸುವ ಕ್ರಿಯೆ ನಡೀತಾ ಇದೆ. /”
  ಎಷ್ಟು ವರುಷಗಳಿಂದ ನಡೀತಿದೆ? ಗೋಮೂತ್ರದಲ್ಲಿ ಯಾವ ಯಾವ ಕೆಮಿಕಲ್ಲುಗಳಿವೆ ಎಂದು ತಿಳಿಯಲು ಎರಡು ದಿನ ಸಾಕು. ಇವು ಏನೇನು ಪರಿಣಾಮ ಬೀರಬಲ್ಲವು ಎಂದು ಒಬ್ಬ ಡಾಕ್ಟರು ಎರಡು ದಿನದಲ್ಲಿ ಹೇಳಬಲ್ಲ. ಸಂಶೋಧನೆ ಇನ್ನು ನೂರು ವರುಷ ಕಳೆದರೂ ಮುಗಿಯುವುದಿಲ್ಲ ಎಂಬುದು ನನಗೆ ಖಾತರಿಯಿದೆ.
  ಯೋಗವು ವ್ಯಾಯಾಮ ವಿದ್ಯೆ ಅಷ್ಟೇ. ದೇಹಕ್ಕೆ ಧೃಢತೆ ಕೊಡುವಂತಹದ್ದು. ಬೇರೆ ವ್ಯಾಯಾಮ ಮಾಡುವ ಕೆಲಸವನ್ನೇ ಯೋಗ ಮಾಡುತ್ತದೆ. ವ್ಯಾಯಾಮ ಗಳು ಹೇಗೆ ರೋಗವನ್ನು ತಡೆಯುತ್ತವೋ ಹೇಗೆ ನಿಯಂತ್ರಿಸುತ್ತವೋ ಹೇಗೆ ದೇಹವನ್ನು ಆರೋಗ್ಯವಾಗಿಡುತ್ತವೋ ಹಾಗೆಯೇ ಯೋಗವೂ ಸಹ ಮಾಡುತ್ತದೆ. ಬಾಬಾ ರಾಮದೇವರು ಸಕ್ಸಸ್ ಆಗಿದ್ದೆಲ್ಲಿ ಅಂದರೆ ಯೋಗವನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸುಲಭವಾಗಿ ಹೇಳಿಕೊಡುತ್ತಾರೆ. ಹಾಗೆಯೇ ಲಕ್ಕೂ ಕೂಡ ಅವರ ಜೊತೆಗಿದೆ 😉

  ಉತ್ತರ
  • ಮಹೇಶ ನೀರ್ಕಜೆ
   ಜೂನ್ 6 2011

   {ಕ್ಯಾನ್ಸರ್‍ ಏಡ್ಸ್ ಗಳಿಗೆ ಔಷಧಿಗಳಿಲ್ಲ ಉಳಿದ ಸಾಕಷ್ಟು ಕಾಯಿಲೆಗಳಿಗೆ ಔಷಧಿ ಇದೆ.} ಅದನ್ನೇ ನಾನೂ ಕೇಳಿದ್ದು, ಔಷಧಿ ಇಲ್ಲದೇ ಇರುವ ರೋಗಕ್ಕೆ ಮದ್ದು ಕೊಟ್ರೆ ಮಾತ್ರ ಬಾಬಾ ದೊಡ್ಡ ವ್ಯಕ್ತಿ ಆಗ್ತಾರೇನು? ಎಷ್ಟೋ ಸಾಮಾನ್ಯ ಖಾಯಿಲೆಗಳಿಗೆ ಔಷಧಿಯಿದ್ದರೂ ಜನಕ್ಕೆ ಅದರ ವೆಚ್ಚವನ್ನು ಭರಿಸುವ ಶಕ್ತಿಯಿರುವುದಿಲ್ಲ. ಅಲ್ಲದೆ ಬಹಳ ಖಾಯಿಲೆಗಳಿಗೆ ಜೀವನ ಪೂರ್ತಿ ಔಷಧಿ ತೆಗೆದುಕೊಳ್ಳಬೇಕಾಗಿರುತ್ತದೆ. ಅಂತಹ ಬಹಳ ಜನರಿಗೆ ಬಾಬಾ ರ ಪ್ರಾಣಾಯಾಮ ಖಂಡಿತ ಸಹಾಯ ಮಾಡಿದೆ. ಸುಮ್ಮ ಸುಮ್ಮನೇ‌ ಲಕ್ಷಾಂತರ ಜನ ಅವರ ಕ್ಯಾಂಪಿಗೆ ಬರುತ್ತಿದ್ದರು ಎಂದರೆ ನಂಬುವುದು ಕಷ್ಟ. ಕ್ಯಾನ್ಸರ್ ಇತ್ಯಾದಿ ಬಿಟ್ಟು ಬರೇ ಈ ದೃಷ್ಟಿಯಿಂದ ನೋಡಿದರೂ ಬಾಬಾ‌ ಸಾಧನೆ ಮೆಚ್ಚತಕ್ಕದ್ದೇ.

   {ಕಪ್ಪು ಹಣದ ಬಗ್ಗೆ ಮೊಟ್ಟಮೊದಲು ದನಿ ಎತ್ತಿದವರು ಜೆಪಿ} ಹೌದೇ, ಇದರ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಕೊಡಿ. ನನಗೆ ಜೆಪಿ ಭ್ರಷ್ಟಾಚಾರ ಬಗ್ಗೆ ಹೋರಾಡಿದ್ದು ಗೊತ್ತು. ಕಪ್ಪು ಹಣದ ಬಗ್ಗೆ ಹೋರಾಡಿದ್ದು ಗೊತ್ತಿಲ್ಲ. ಇವೆರಡು ಬೇರೆ ಬೇರೆ ಎಂದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಇನ್ನು ರಾಜೀವ್ ದೀಕ್ಷಿತ್ ಬಗ್ಗೆ. ರಾಜೀವ್ ದೀಕ್ಷಿತ್ ಸ್ವದೇಶಿ ಚಳುವಳಿ ವ್ಯಕ್ತಿ. ಅವರ ನಿಲುವು ಏನೇ‌ ಇರಲಿ, ಹೊರಗಿನವರಿಗೆ ಅವರೊಬ್ಬ ಸಂಘಪರಿವಾರದ ವ್ಯಕ್ತಿ. ನಾನು ಅಡ್ವಾಣಿ ಅವರನ್ನು ಹೆಸರಿಸಿದ ಕಾರಣ ಸಂಘಪರಿವಾರದ ವ್ಯಕ್ತಿಯೊಬ್ಬ ಕಪ್ಪು ಹಣದ ವಿಷಯವನ್ನು ಮುಖ್ಯವಾಹಿನಿಗೆ ತಂದಿದ್ದು ಎಂದಿರುವಾಗ ಈಗ ಸಂಘಪರಿವಾರ ಬಾಬಾರನ್ನು ಬೆಂಬಲಿಸಿದೆ ಎಂದು ಕೂಗಾಡುವುದು ಎಷ್ಟು ಸರಿ ಎಂಬುದಾಗಿ. ಇಲ್ಲಿ ಅಡ್ವಾಣಿಯವರನ್ನು ತೆಗೆದು ರಾಜೀವ್ ದೀಕ್ಷಿತ್ ಅನ್ನು ಕೂರಿಸಿದರೂ ಏನೂ ವ್ಯತ್ಯಾಸವಿಲ್ಲ.

   {ಅಣ್ಣಾ ಮತ್ತು ಅವರ ಸಾಧನೆಯ ಬಗೆಗಿನ ತಮ್ಮ ಅಜ್ಞಾನಕಕ್ಕೆ ನನ್ನ ಮರುಕವಿದ್ದರೂ ರಾಮದೇವರ ಭಟ್ಟಂಗಿತನಕ್ಕಾಗಿ ಅವರನ್ನು ಹೀಗೆ ಅವಮಾನಿಸಬಹುದೇ}
   ನೀವು ಮೂಲ ಲೇಖನ ಓದದೇ ಬರೇ ನನ್ನ ಪ್ರತಿಕ್ರಿಯೆ ಓದಿ ಹೀಗೆ ಹೇಳುತ್ತಿದ್ದೀರಿ ಅನಿಸುತ್ತದೆ. ದಯವಿಟ್ಟು ಪುನಹ ಓದಿ. ನನಗೆ ಅಣ್ಣಾ ಮೇಲೂ ಅಭಿಮಾನ ಇದೆ, ಬಾಬಾ ಮೇಲೂ ಇದೆ. ನಾನು ಕೇವಲ ಹೋಲಿಕೆಗೋಸ್ಕರ ಹಾಗೆ ಹೇಳಿದೆ ಅಷ್ಟೆ. ಅಣ್ಣಾ ಫ್ಯಾಕ್ಟರಿ ಇಟ್ಟುಕೊಂಡಿಲ್ಲ, ಹಾಗಾಗಿ ಸಾಚಾ, ಬಾಬಾ ಇಟ್ಟುಕೊಂಡಿದ್ದಾರೆ, ಹಾಗಾಗಿ ಢೋಂಗಿ ಎಂದು ನೀವು ಹೇಳುವುದಾದರೆ ನಾನೇನೂ ಹೇಳುವುದಿಲ್ಲ. ನಿಮ್ಮ ಕಾಮನ್ ಸೆನ್ಸ್ ಅನ್ನು ಓದುವವರೇ ಅರ್ಥ ಮಾಡಿಕೊಳ್ಳಲಿ. ಅಂದ ಹಾಗೆ ಸ್ವಂತ ಅಕೌಂಟ್ ನಲ್ಲಿ ದುಡ್ಡು ಇಟ್ಟುಕೊಳ್ಳುವುದಕ್ಕೂ, ಒಂದು ಕಂಪೆನಿ ಹೆಸರನ್ನು ರೆಜಿಸ್ಟರ್ ಮಾಡಿ ಫ್ಯಾಕ್ಟರಿ ಇಟ್ಟುಕೊಳ್ಳುವುದಕ್ಕೂ, ಒಂದು ಟ್ರಸ್ಟ್ ರಚಿಸಿ ಫ್ಯಾಕ್ಟರಿ ಕಟ್ಟುವುದಕ್ಕೂ ವ್ಯತ್ಯಾಸ ಇದೆ ಅಂತ ನನ್ನ ಕಾಮನ್ ಸೆನ್ಸ್ ಹೇಳ್ತಾ ಇದೆ. ನಿಮಗೆ ಬಹುಷ: ಇದಕ್ಕಿಂತ ದೊಡ್ಡ ಕಾಮನ್ ಸೆನ್ಸ್ ಇದೆಯೋ ಏನೋ, ನಾ‌ ಕಾಣೆ.

   {ಗೋಮೂತ್ರದಲ್ಲಿ ಯಾವ ಯಾವ ಕೆಮಿಕಲ್ಲುಗಳಿವೆ ಎಂದು ತಿಳಿಯಲು ಎರಡು ದಿನ ಸಾಕು}
   ಇಲ್ಲಿ ಹಸು ಉಚ್ಚೆ ಹೊಯ್ದಿದ್ದು ಯಾವಾಗ? ಇಲ್ಲಿ ಮಾತನಾಡುತ್ತಿರುವುದು ಯೋಗ, ಪ್ರಾಣಾಯಾಮ ಬಗ್ಗೆ. ಇರಲಿ, ಗೋಮೂತ್ರ ತೆಗೆದುಕೊಂಡರೂ ಎರಡು ದಿನದಲ್ಲಿ ಅದರ ಸಂಶೋಧನೆ ಮಾಡಬಹುದು ಎನ್ನುವ ನಿಮ್ಮ ಮಹಾಜ್ಞಾನಕ್ಕೆ ನಾನು ಏನು ಹೇಳಲಿ.. ತಮಗೆ ಕ್ಲಿನಿಕಲ್ ಟ್ರಯಲ್ ಎಂಬ ವಿಚಾರ ತಿಳಿದಿದೆಯೇ? ಇದರಲ್ಲಿ ರೋಗಿಗಳ ಮೇಲೆ ಒಂದು ಔಷಧಿಯ ಪರಿಣಾಮ, ರೋಗಿಗಳಲ್ಲದವರ ಮೇಲಿನ ಪರಿಣಾಮ ಇತ್ಯಾದಿಗಳನ್ನು ಹಲವಾರು ವರ್ಷಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ. ಆ ಅಧ್ಯಯನ ಹೇಗೆ ನಡೆಯುತ್ತಿದೆಯೋ ನನಗೆ ತಿಳಿಯದು. ಆದರೆ ನಿಮ್ಮ ಎರಡು ದಿನದ ಸಂಶೋಧನೆ ಹಾಸ್ಯಾಸ್ಪದ ಎಂದಷ್ಟೇ ಹೇಳಬಲ್ಲೆ.

   {ವ್ಯಾಯಾಮ ಗಳು ಹೇಗೆ ರೋಗವನ್ನು ತಡೆಯುತ್ತವೋ ಹೇಗೆ ನಿಯಂತ್ರಿಸುತ್ತವೋ ಹೇಗೆ ದೇಹವನ್ನು ಆರೋಗ್ಯವಾಗಿಡುತ್ತವೋ ಹಾಗೆಯೇ ಯೋಗವೂ ಸಹ ಮಾಡುತ್ತದೆ}
   ಇದು ನೀವು ಯಾವ ಲೋಕದಲ್ಲಿದ್ದೀರಾ ಎಂದು ತೋರಿಸುತ್ತದೆ. ಯೋಗ ಕಲಿಯುವುದಕ್ಕಿಂತ ಮೊದಲೂ ಪಾಸ್ಚಾತ್ಯರಿಗೆ ವ್ಯಾಯಾಮ ಗೊತ್ತಿತ್ತು. ಹಾಗಿದ್ದಲ್ಲಿ ಅವರು ವ್ಯಾಯಾಮ ಬಿಟ್ಟು ಯೋಗ ಶುರು ಹಚ್ಚಿಕೊಳ್ಳಲು ಅವರಿಗೇನು ಹುಚ್ಚೇ? ಇರಲಿ, ಹೊರಗಿನವರ ವಿಚಾರ ಬೇಡ. ಯೋಗ ಮತ್ತೆ ವ್ಯಾಯಾಮದ ನಡುವಿನ ವ್ಯತ್ಯಾಸವನ್ನು ನಾನು ಹೇಳಬೇಕಾಗಿಲ್ಲ. ಈ ಬ್ಲಾಗು ಓದುವ ಪ್ರತಿಯೊಬ್ಬನಿಗೂ ಗೊತ್ತು. ಇನ್ನು ಬಾಬಾ ಹೇಳಿಕೊಡುತ್ತಿರುವುದು ನೀವು ಹೇಳುವ ವ್ಯಾಯಾಮ ಯೋಗ ಅಲ್ಲ. ಅದು ಪ್ರಾಣಾಯಾಮ. ಇದು ಉಸಿರಾಟದ ಯೋಗ. ಇದು ನೀವಂದಂತೆ ದೇಹಕ್ಕೆ ಧೃಢತೆ ಕೊಡುವುದಲ್ಲ. ಇರಲಿ, ಯೋಗ ಪ್ರಾಣಾಯಾಮ ಬರೇ ದೈಹಿಕ ವ್ಯಾಯಾಮ ಆಗಿದ್ದರೆ ಮೈ ಬಗ್ಗಿಸಿ ದುಡಿಯುವವರೂ ಕೂಡ ಈ ಕ್ಯಾಂಪ್ ಗಳಿಗೆ ಹಾಜರಾಗುತ್ತಿದ್ದಾರಲ್ಲ, ಅವರಿಗೇನು ಬೇರೆ ಕೆಲಸ ಇಲ್ಲವೇ?

   ಯೋಗ ಪ್ರಾಣಾಯಾಮ ಎಂದರೆ ಏನೆಂದು ತಿಳಿಯದೆಯೇ ರಾಮ್ ದೇವ್ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡುವ ನಿಮ್ಮ ಬಗ್ಗೆ ಮರುಕ ಹುಟ್ಟುತ್ತಿದೆ.

   ಉತ್ತರ
   • sriharsha
    ಜೂನ್ 7 2011

    ಸರಿ. ಯೋಗದ ವಿಷಯದಲ್ಲಿ ಬಾಬಾ ಸಾಧನೆ ಮೆಚ್ಚತಕ್ಕದ್ದೇ.
    ಆದರೆ ಅವರು ಕ್ಯಾನ್ಸರ್‍ ಗುಣಪಡಿಸುತ್ತೇನೆ ಎಂದು ಘಂಟಾಘೋಷವಾಗಿ ಸಾರುತ್ತಾರಲ್ಲ ಅದರ ಬಗ್ಗೆ ಏನು ಹೇಳುತ್ತೀರಿ?

    ಜೆಪಿಯದು ಸಾರ್ವತ್ರಿಕ ಹೋರಾಟ. ಸಮಾಜವಾದಿ ಸಿದ್ಧಾಂತಗಳನ್ನು ಜಾರಿಗೆ ತರಬೇಕೆಂಬುದು. ಇದೇ ವಿಷಯ ಎಂದು ಅವರು ಬೊಟ್ಟುಮಾಡಿ ಹೋರಾಡಿರಲಿಲ್ಲ. ಹೆಚ್ಚಿನ ಮಹಿತಿಗೆ ಜೆ ಪಿ, ಲೋಹಿಯಾ ಬಗೆಗಿನ ಹೊತ್ತಗೆಗಳಿವೆ ಓದಬಹುದು. ಆದರೆ ಇಂದಿರಾಗಾಂಧಿಯ ಕಪ್ಪುಹಣದ ಬಗ್ಗೆ ಅವರು ಉಲ್ಲೇಖಿಸಿದ್ದಿದೆ.
    ಬಾಬಾ ಸಾವಿರಾರು ಕೋಟಿ ಒಡೆಯರಾಗಿದ್ದುಕೊಂಡು ಜನಪರ ಹೋರಾಟ ಮಾಡುತ್ತೇನೆಂದರೆ ನಂಬುವುದು ಕಷ್ಟವೇ! ಸನ್ಯಾಸಿಗೆಕೆ ಇಷ್ಟೋಂದು ಹಣ ? ಅದನ್ನು ಅನುಭವಿಸುತ್ತಿರುವವರು ಯಾರು? ಟ್ರಸ್ಟ್ ಆದರೇನು ಬೋರ್ಡ್ ಆಫ್ ಡೈರೆಕ್ಟರ್‍ ಇದ್ದರೇನು ಕೋಟ್ಯಂತರ ಹಣ ತಿರುಗುವುದಿಲ್ಲವೇ? ಸಾವಿರಾರು ಎಕರೆ ಕಾಡು ನಾಶಕ್ಕೆ ಹೊಣೆಯಲ್ಲವೇ? ಯಾರಿಗಾಗಿ ಈ ಫ್ಯಾಕ್ಟರಿ? ಹಣ ಬಂದದ್ದೆಲ್ಲಿಂದ? ಇದಕ್ಕೆ ಅಕೌಂಟ್ ಇದೆಯೇ? ರಾಮದೇವರು ತಮ್ಮ ಆಸ್ತಿ ಘೋಷಿಸಿದ್ದಾರೆಯೇ? ಎರಡು ಸಾವಿರ ಎಕರೆ ಸಂಪೂರ್ಣ ಎ ಸಿ ಇರುವ ಆಶ್ರಮ ಹಜಾರೆ ಅಣ್ಣನ ಬಳಿ ಇದೆಯೇ? ಬ್ರಹ್ಮಚಾರಿ ಹಜಾರೆಗೂ ಸನ್ಯಾಸಿ ರಾಮದೇವರ ಜೀವನ ಶೈಲಿಗೂ ಸಾಕಷ್ಟು ವ್ಯತ್ಯಾಸವಿದೆ.
    ನನಗೆ ಹೇಗೆ ಇದೆಲ್ಲ ಗೊತ್ತೆಂಬುದಕ್ಕೆ ತಾವು ಈ ಫೋಟೋಗಳನ್ನು ನೋಡಬಹುದು. (https://picasaweb.google.com/111195233156021522483/Haridvar# ) ಝಡ್ ಗ್ರೇಡ್ ಸೆಕ್ಯುರಿಟಿ ಹೊಂದಿದ ರಾಮದೇವರ ಖಾಸಗಿ ಆಪೀಸಿನಲ್ಲಿ ನಾನು ರಾಮದೇವರ ಜೊತೆ ಇರುವ ಫೋಟೋಗಳಿವು. ನಾನು ಅವರನ್ನು ವಯಕ್ತಿಕವಾಗಿ ಬಲ್ಲೆ. ತಮ್ಮಂತೆ ಟಿವಿ ನೋಡಿ ಅಭಿಮಾನಿಯಾದವನಲ್ಲ. ಫೋಟೋದಲ್ಲಿ ರಾಜೀವ ದೀಕ್ಷಿತರನ್ನೂ ಕಾಣಬಹುದು.
    ಸಂಶೋಧನೆಯ ಪರಿಯನ್ನು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು. ನಾನು ಹೇಳಿರುವುದನ್ನು ನೆಟ್ಟಗೆ ಓದಿ. ಆಯುರ್ವೇದದ ಬಗ್ಗೆ ಸಂಶೋಧನೆ ನಡೆಯುತ್ತಿರುವ ಬಗ್ಗೆ ತಾವು ಹೇಳಿದ್ದರಿಂದ ನಾನು ಗೋಮೂತ್ರದ ಬಗ್ಗೆ ಹೇಳಬೇಕಯಿತು. ಗೋಮೂತ್ರದಲ್ಲಿ ಯಾವ ಯಾವ ಕೆಮಿಕಲ್ಲುಗಳಿವೆ ಎಷ್ಟು ಪ್ರಮಾಣದಲ್ಲಿವೆ ಎಂದು ತಿಳಿಯಲು ಎರಡು ದಿನ ಸಾಕು. ಈ ಕೆಮಿಕಲ್ಲುಗಳು ದೇಹದ ಮೇಲೆ ಏನು ಪರಿಣಾಮ ಬೀರುವವು ಎಂದು ತಿಳಿಯಲು ಸ್ಟಾಂಡರ್ಡ್ ಚಾರ್ಟ್‌ಗಳಿವೆ. ಕ್ಲಿನಿಕಲ್ ಟ್ರಯಲ್ ಮಾಡಬೇಕಾದ ಯಾವ ಅರ್ಹತೆಗಳೂ ಗೋಮೂತ್ರಕ್ಕಿಲ್ಲ. ಯಾಕೆಂದರೆ ಇದು existing component. ಕ್ಲಿನಿಕಲ್ ಟ್ರಯಲ್ಲುಗಳಿಗೆ ಸ್ಟಾಂಡರ್ಸುಗಳಿವೆ ಅದನ್ನು ಪಾಲಿಸಬೇಕು. ಕಂಡ ಕಂಡದ್ದನ್ನೆಲ್ಲ ಟ್ರಯಲ್ ಮಾಡುವುದಲ್ಲ.

    ಪಾಶ್ಚಾತ್ಯರು ಮಾಂಸವನ್ನೂ ತಿನ್ನುತ್ತಾರೆ, ಹೆಂಡ ಕುಡಿಯತ್ತಾರೆ. ಇದೂ ಹುಚ್ಚೇ! ಭಾರತದ ಸಂಪ್ರದಾಯಗಳನ್ನು ಪಾಲಿಸುವ ಪಾಶ್ಚಾತ್ಯರು ಬುದ್ದಿವಂತರು ಉಳಿದವರು ದಡ್ಡರು ಎನ್ನುವ ಅನುಕೂಲಸಿಂಧು ಧೋರಣೆಗಳನ್ನು ದಯವಿಟ್ಟು ಬಿಡಿ.
    ಬಾಬಾ ಸೂರ್ಯನಮಸ್ಕಾರ ಹೇಳಿಕೊಡುತ್ತಾರೆ. ಅದು ಯೋಗ. ಆಸನಗಳನ್ನು ಹೇಳಿಕೊಡುತ್ತಾರೆ. ಅವರು ಹೇಳಿಕೊಡುವದು ಕಪಾಲಭಾತಿ, ಬ್ರಮರಿಯಂತಹ ಕೆಲವು ಚಿಕ್ಕ ಪ್ರಾಣಯಾಮಗಳನ್ನು ಮಾತ್ರ. ಉತ್ಕೃಷ್ಟ ಪ್ರಾಣಾಯಾಮ ವಿಧಿಗಳಾದ ರಾಜಯೋಗ ಪ್ರಾಣಾಯಾಮಗಳನ್ನು ಅವರು ಹೇಳಿಕೊಡುವುದಿಲ್ಲ.(ಮುದ್ರಾಪ್ರಾಣಾಯಾಮ, ವಾಯು ಬಂಧಗಳು, ವಾಯುನೇತಿ ಇತ್ಯಾದಿ. ಇವನ್ನು ನಾನು ಕಲಿತಿದ್ದೇನೆ. ತಮಗೂ ಹೇಳಿಕೊಡಬಲ್ಲೆ) ಬಾಬಾ ಮುಖ್ಯವಾಗಿ ಹೇಳಿಕೊಡುವುದು ಯೋಗಾಸನಗಳನ್ನೇ. ತಾವು ದಯವಿಟ್ಟು ಯೋಗ ಮತ್ತು ಪ್ರಾಣಾಯಮಗಳ ನಡುವಿನ ವ್ಯತ್ಯಾಸಗಳನ್ನು ಅರಿಯಿರಿ.
    ಬಾಬಾನ ಕ್ಯಾಂಪ್ ಗೆ ರೈತರು ಕೂಲಿಗಳು ಬರುವುದಿಲ್ಲ. ಬರುವವರು ಇಪ್ಪತೈದು ಸಾವಿರದಷ್ಟು ಹಣ ತೆರುವ ಸಿರಿವಂತರು ಮಾತ್ರ!
    ಯೋಗವು ದೈಹಿಕ ವ್ಯಾಯಾಮಕ್ಕಿಂತ ಹೆಚ್ಚೇನೂ ಅಲ್ಲ. ಪ್ರಾಣಾಯಾಮವು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಇವು ರೋಗಗಳನ್ನು ವಾಸಿ ಮಾಡುವುದಿಲ್ಲ. ನಿಯಂತ್ರಿಸುತ್ತವೆ. ಯೋಗವಾಗಲೀ ಪ್ರಾಣಯಾಮವಾಗಲೀ ಕೆಟ್ಟದ್ದು ಎಂದು ನಾನು ಹೇಳುತ್ತಿಲ್ಲ. ಅವಕ್ಕೆ ಔಷಧೀಯ ಗುಣಗಳನ್ನು ಆರೋಪಿಸುವುದು ಸಲ್ಲದು.
    ಬಾಬಾ ರಾಮದೇವರಿಗೆ vision ಇಲ್ಲ. ತಾವು ಏನು ಮಾಡಬೇಕೆಂಬ ಅರಿವು ಅವರಿಗಿಲ್ಲ.ಅದೊಂದು ಸದ್ದು ಮಾಡುತ್ತಿರುವ ಖಾಲಿ ಚೊಂಬು ವಯಕ್ತಿಕವಾಗಿ ಅವರೊಡನೆ ಮಾತನಾಡಿ ನಾನು ಕಂಡುಕೊಂಡ ಸತ್ಯ ಇದು.

    ಉತ್ತರ
    • ಮಹೇಶ ನೀರ್ಕಜೆ
     ಜೂನ್ 7 2011

     ಆಯ್ತು. ಸರ್ವವೂ ತಿಳಿದವರ ಮಾತನ್ನು ಒಪ್ಪದೇ ಇನ್ನೇನು ವಾದ ಮಾಡಲು ಸಾಧ್ಯವೇ? ವೈಯಕ್ತಿಕವಾಗಿ ನೀವು ಅವರನ್ನು ಬಲ್ಲವರಾದ್ದರಿಂದ ನೀವು ಅವರ ಬಗ್ಗೆ ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳೋಣ. ಅದು ಬಿಟ್ಟರೆ ನನಗೆ ಬೇರೆ ದಾರಿ ಏನಿದೆ? ನಾನು ಚರ್ಚೆ ಮಾಡಿದರೂ ನಿಮ್ಮ ಸ್ವಂತ ಅನುಭವದ ಮುಂದೆ ನನ್ನ ಚರ್ಚೆ ನಿಲ್ಲಬಲ್ಲದೇ? ಅಸಾಧ್ಯ. ಆಯ್ತಲ್ಲ! ನಮಸ್ಕಾರ!

     ಉತ್ತರ
     • sriharsha
      ಜೂನ್ 7 2011

      ನಾನು ತಮ್ಮನ್ನು ರನ್ನಿಂಗ್ ರೇಸ್ ಚಾಂಪಿಯನ್ ಎಂದು ಕರೆದದ್ದು ಸರಿಯಾದುದೇ ಅಲ್ಲವೇ?
      ಪ್ರಾಣಾಯಾಮ ಕಲಿಯಲು ಯಾವಾಗ ಬರುತ್ತೀರಿ?

      ಉತ್ತರ
      • ರವಿ
       ಜೂನ್ 7 2011

       ಶ್ರೀಹರ್ಷ, ಸಕತ್ತಾಗಿದ್ದೀರಾ.. ಇಷ್ಟು ಜನರ ವಿರೋಧದ ನಡುವೆಯೂ ನೀವೊಬ್ಬರೇ ಇದ್ದೂ ರನ್ನಿಂಗ್ ರೇಸ್ ಚಾಂಪಿಯನ್ ಆಗಿಲ್ಲ ನೋಡಿ.. ಮೆಚ್ಚಿದೆ. 🙂
       ನೀವು ರಾಮದೇವರ ಪಕ್ಕ ಸ್ವಲ್ಪ ದಿನ ಇದ್ದು ಖಾಲಿ ಚೊಂಬು ಅಂತ ಅರ್ಥ ಮಾಡಿಕೊಂಡಿದ್ದೀರಿ. ಅದೇ ಖಾಲಿ ಚೊಂಬಿನ ಸದ್ದನ್ನು ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಕೇಳುತ್ತಾರೆ, ಅನುಸರಿಸುತ್ತಾರೆ. ಸತ್ಯಾಗ್ರಹಕ್ಕೆ ಕರೆದರೆ ಓಗೊಟ್ಟು ಓಡುತ್ತಾರೆ. ಜನ ಸಾಮಾನ್ಯರೂ ಇದ್ದಾರೆ. ನೀವಂದಂತೆ ಇಪ್ಪತ್ತೈದು ಸಾವಿರ ತೆತ್ತವರೂ ಇದ್ದಾರೆ.
       ತುಂಬಿದ ಚೊಂಬುಗಳು ಸದ್ದೇ ಮಾಡುವುದಿಲ್ಲವಲ್ಲ.. ತುಂಬಿರುವುದರಿಂದ ಸದ್ದು ಮಾಡಲೂ ಬರುವುದಿಲ್ಲ ಅವಕ್ಕೆ. ಎಲ್ಲೂ ಹೋಗದೆ ಕೂತಲ್ಲೇ ಕೂತು ಜಡವಾಗಿರುತ್ತವೆ. ಧ್ವನಿ ಇಲ್ಲದರಿಂದ ಯಾರೂ ಕೇಳುವುದಿಲ್ಲ, ಅನುಸರಿಸುವುದಿಲ್ಲ ಅವನ್ನ…

       ಮಹೇಶರೆ, ಪ್ರಾಣಾಯಾಮದ ಬಗ್ಗೆ ವೃಥಾ ಗೊತ್ತಿಲ್ಲದೇ ಯಾಕೆ ಮಾತಾಡುತ್ತೀರಿ? ಮೊದಲು ರಾಮದೇವರ ಬಳಿ ಕಲಿಯಿರಿ. ಆಮೇಲೆ ಇನ್ನೂ ಹೆಚ್ಚು ಕಲಿಬೇಕಾದ್ರೆ ಶ್ರೀಹರ್ಷ ಇದ್ದಾರೆ. 🙂

       ಉತ್ತರ
       • sriharsha
        ಜೂನ್ 8 2011

        ಸತ್ಯ ನನ್ನ ಪರವಾಗಿರುವಾಗ ನಾನ್ಯಾಕೆ ಓಡಿ ಚಾಂಪಿಯನ್ ಆಗಲಿ ಸ್ವಾಮಿ?

        ಹೌದು ಹೌದು… ಸಾವಿರಾರು ಜನ ಬರುತ್ತಾರಲ್ಲವೇ? ಸತ್ಯ ಸಾಯಿಬಾಬಾ ಕರೆದರೂ ಹೋಗುತ್ತಾರೆ. ಯಡ್ಡಿ ಕರೆದರೂ ಸಾವಿರಾರು ಜನ ಹೋಗುತ್ತಾರೆ. ಲಾಡೆನ್ ಗಾಗಿ ಸಾವಿರಾರು ಜನ ಪ್ರಾಣವನ್ನೇ ಕೊಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವನು ಮಹಾನ್ ಅಲ್ಲವೇ? ಸಾವಿರಾರು ಜನರನ್ನು ಸೇರಿಸಿದ ಕೂಡಲೇ ಅವರು ಸಾಚಾಗಳು ಎಂದು ನಿರ್ಧರಿಸುವ ತಮ್ಮ ಪರಿಗೆ ಮೆಚ್ಚಿದೆ!
        ರಾಮದೇವರ ಬಳಿ ಕಲಿಯಲು ಇಪ್ಪತೈದು ಸಾವಿರ ಕೊಡಬೇಕು. ನಾನು ಉಚಿತವಾಗಿ ಕಲಿಸುತ್ತೇನೆ. ವಿದ್ಯೆಯನ್ನು ದಾನ ಮಾಡುವುದು ನಮ್ಮ ಸಂಸ್ಕೃತಿ. ರಾಮದೇವನಂತೆ ಮಾರಿಕೊಳ್ಳುವುದಲ್ಲ!

        ಉತ್ತರ
        • ರವಿ
         ಜೂನ್ 9 2011

         ಅರರೆ ಶ್ರೀಹರ್ಷ ತಾಳ್ಮೆ ತಾಳ್ಮೆ. ಇಷ್ಟೊಂದು ಸಿಟ್ಟಾಗಬೇಡೀಪ್ಪ. ಮತ್ತೊಮ್ಮೆ ನನ್ನ ಕಮೆಂಟು ಓದಿ. ನಾನೆಲ್ಲಿ ಸಾಚಾಗಳ ಬಗ್ಗೆ ಮಾತಾಡಿದೆ. ಖಾಲಿ ಚೊಂಬು, ತುಂಬಿದ ಚೊಂಬಿನ ಗುಣಗಳ ಬಗ್ಗೆ ಹೇಳಿದೆ ಅಷ್ಟೇ. ನಾನೂ ಯಾರನ್ನೂ ಸಾಚ ಅಂದಿಲ್ಲ ಕೆಟ್ಟದೂ ಅಂದಿಲ್ಲ. ನನ್ನ ನಿರ್ಧಾರವನ್ನು ನಿಮ್ಮ ಮೂಗಿನ ನೇರಕ್ಕೆ ಅರ್ಥ ಮಾಡಿಕೊಂಡು ನೀವೇ ಪ್ರಕಟಿಸಿ ಬಿಟ್ಟು, ಮೆಚ್ಚಿಕೆ ಬೇರೆ ಕೊಟ್ಟಿರಿ. ಇಂತಾದ ಮೇಲೆ ನೀವು ರಾಮದೇವರ ಬಳಿ ಇದ್ದು ಅರ್ಥ ಮಾಡಿಕೊಂಡಿದ್ದು ನಿಮ್ಮ ಮೂಗಿನ ನೇರಕ್ಕೆ ಇರಬಹುದಲ್ಲವೇ? ನಿಮ್ಮದು ‘ಕಂಡುಕೊಂಡ ಸತ್ಯ’ ಅಂತ ಬೇರೆ ಹೇಳುತ್ತೀರಿ. ಅದು ನಿಮಗೆ ಸತ್ಯ ಇರಬಹುದು ಎಲ್ಲರಿಗೂ ಅಲ್ಲವಲ್ಲ.
         ಕಾಲಕ್ಕೆ ತಕ್ಕ ಕೋಲ (ವೇಷ) ಅಂತಾರೆ. ವಿದ್ಯಾ ದಾನ ನಮ್ಮ ಸಂಸ್ಕೃತಿ. ಈಗ ಅದು ಸಾಧ್ಯವಿಲ್ಲ. ರಾಮದೇವರು ಮಾತ್ರವೇ ಮಾರುವುದು? ಇಂದು ಎಲ್ಲ ಕಡೆ ಇರುವುದು ವಿದ್ಯೆಯ ಮಾರಾಟವೇ ಅಲ್ಲವೇ? ಮತ್ತೇಕೆ ರಾಮದೇವರ ಬಗ್ಗೆ ಅಸಹನೆ?

         ಉತ್ತರ
         • sriharsha
          ಜೂನ್ 9 2011

          “//ಮತ್ತೇಕೆ ರಾಮದೇವರ ಬಗ್ಗೆ ಅಸಹನೆ?//”
          ಯಾಕೆಂದರೆ ಈ ಲೇಖನದಲ್ಲಿ ಬರೆದಿರುವುದು ರಾಮದೇವರ ಬಗ್ಗೆ ಬೇರೆಯವರ ಬಗ್ಗೆ ಬರೆದಿದ್ದರೆ ಅವರ ಬಗ್ಗೆಯೇ ಹೇಳುತ್ತಿದ್ದೆ.

          ಸದ್ದು ಮಾಡುತ್ತಿರುವ ಚೊಂಬನ್ನು ಮತ್ತು ಅದನ್ನು ಹಿಂಬಾಲಿಸುತ್ತಿರುವದನ್ನು ತಾವು ಮೆಚ್ಚುಗೆಯಿಂದ ಹೇಳುತ್ತಿಲ್ಲವೇ? ಸುಮ್ಮನೆ ನನಗೆ ವಾರ್ತೆಯನ್ನು ನೀಡುವುದಕ್ಕಾಗಿ ಹೇಳಿದಿರಾ? ರಾಮದೇವರ ಬಗೆಗಿನ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಈಗ ಇದ್ದಕ್ಕಿದ್ದಂತೆ ಗುಣಗಳನ್ನು ಹೇಳಿದೆ ಅಂಥ ಹೇಳುತ್ತಿದ್ದೀರಿ. ಕರ್ಮಕಾಂಡ!

          ಉತ್ತರ
          • ರವಿ
           ಜೂನ್ 11 2011

           ಯಾಕೆಂದರೆ ಈ ಲೇಖನದಲ್ಲಿ ಬರೆದಿರುವುದು ರಾಮದೇವರ ಬಗ್ಗೆ ಬೇರೆಯವರ ಬಗ್ಗೆ ಬರೆದಿದ್ದರೆ ಅವರ ಬಗ್ಗೆಯೇ ಹೇಳುತ್ತಿದ್ದೆ.

           ಈ ಲೇಖನ ರಾಮದೇವರು ಮತ್ತು ಭೃಷ್ಟಾಚಾರ/ಕಪ್ಪು ಹಣದ ವಿರುದ್ಧ ಹೋರಾಟದ ಬಗ್ಗೆ ಹಾಗೂ ಸಂಪಾದಕೀಯದ ಪ್ರಶ್ನೆಗಳಿಗೆ ಕೊಟ್ಟ ಉತ್ತರ. ವಿದ್ಯೆ ಮಾರಾಟದ ಬಗ್ಗೆ ಅಲ್ಲ.

           ಸುಮ್ಮನೆ ನನಗೆ ವಾರ್ತೆಯನ್ನು ನೀಡುವುದಕ್ಕಾಗಿ ಹೇಳಿದಿರಾ?

           ಮತ್ತೇನು, ಸುಮ್ಮನೆ ಮೂದಲಿಕೆ ಮಾಡುವ ಬದಲು ಒಳ್ಳೆಯದನ್ನು ನೋಡಿ ಅಂದೇ ಅಷ್ಟೇ.

 22. ರವಿ
  ಜೂನ್ 7 2011

  ಇಲ್ಲಿಯ ವಾದಗಳನ್ನು ನೋಡಿ ನನಗೆ ನನ್ನ ಅನುಭವ ಹೇಳಬೇಕೆನ್ದೆನಿಸುತ್ತದೆ , ಯಾಕಂದ್ರೆ ಕೆಲವರನ್ನು ನೀವು ಸರಿಪಡಿಸಲಾರಿರಿ,
  “ಒಮ್ಮೆ ಹೀಗೆ ಲೋಕಾಭಿರಾಮ ಮಾತಾಡುತ್ತಿರಬೇಕಾದರೆ “ಒಬ್ಬ”ರೊ೦ದಿಗೆ ಹೇಳಿದೆನಪ್ಪ ಯೋಗ ಮಾಡಿದರೆ ದೇಹಕ್ಕೆ ಒಳ್ಳೆಯದು ,ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ,ಅಷ್ಟಕ್ಕೆ ಆ ಮಹಾನುಭಾವ ನಿಧಾನವಾಗಿ ಮಾಡುವ ಯೋಗ ಪ್ರಾಣಾಯಾಮಗಳಿಂದ ಯಾವುದೇ ಪ್ರಯೋಜನ ಗಳಿಲ್ಲ , ದೇಹಕ್ಕೆ ರೋಗನಿರೋಧಕ ಶಕ್ತಿ ಬರಬೇಕಾದರೆ ಏರೋಬಿಕ್ಸ್ ಇತ್ಯ್ಯಾದಿ ವೇಗವಾಗಿ ಮಾಡುವ ಕಸರತ್ತು ಮಾಡಿದರೆ ಮಾತ್ರ ಸಾದ್ಯ ಎಂದರು.

  ಇಂತಹವರಿಗೆ ನೀವು ಏನೇ ಹೇಳಿದರೂ ಅಸ್ಟೇ ಅವರದ್ದೇ ಅವರಿಗೆ, ಹೇಸಿಗೆ ತಿನ್ನಬೇಡಿ ಅಂತ ಹೇಳಿ ನೋಡಿ ಅಂತಹವರಿಗೆ, ನಾನು ಹಲವು ವರ್ಷಗಳಿಂದ ಅದನ್ನೇ ತಿನ್ನುತ್ತಿದ್ದೇನೆ ನನಗೆ ಏನೂ ಆಗಿಲ್ಲ ,ಏನಾದರೂ ಆಗುತ್ತದೆ ಎಂಬುದಕ್ಕೆ ಸಾಕ್ಷಿ ಕೊಡಿ ಅಂತ ನಿಮ್ಮ ಮೇಲೆ ಹರಿಹಾಯುತ್ತಾರೆ ವಿನಃ ಹೇಸಿಗೆ ತಿನ್ನುವುದನ್ನು ಬಿಡೋದಿಲ್ಲ !!!!

  ಉತ್ತರ
  • sriharsha
   ಜೂನ್ 7 2011

   ಓಹೋ ಹೇಸಿಗೆ ಎಕ್ಸ್ ಪರ್ಟ್! ನಿಮ್ಮ ಹೇಸಿಗೆ ತಿನ್ನುವ ತಿನ್ನಿಸುವ ಅನುಭವ ಚೆನ್ನಾಗಿದೆ!

   ಉತ್ತರ
  • ಜೂನ್ 7 2011

   ಕೆಲವರು ಹಾಗೇ ಬಿಡಿ .. 🙂
   When somebody left with only hammer everything looks like a nail..
   ಯಾವತ್ತಾದರೂ ಒ೦ದು ದಿನ ಜ್ಙಾನೋದಯ ಆಗ್ಬೋದು 🙂

   ಉತ್ತರ
   • sriharsha
    ಜೂನ್ 7 2011

    ರವಿಯವರಿಗೆ ಚೆನ್ನಾಗಿ hammer ಮಾಡಿದ್ದೀರಿ 😉

    ಉತ್ತರ
    • ಜೂನ್ 8 2011

     ಅ೦ದ ಹಾಗೆ ರವಿಯವರಿಗೆ ನಾನು hammer ಮಾಡಿಲ್ಲ. ಶ್ರೀಹರ್ಷ ನಿಮಗೆ ಹೇಳಿದ್ದು. ಇ೦ಡೈರೆಕ್ಟ್ ಹೇಳಿದ್ರೆ ನಿಮಗೆ ತಲುಪಿಲ್ಲ ಅ೦ದ ಮೇಲೆ ನಿಮ್ಮ ಅಲೋಚನೆ ಸರಣಿ ಹೇಗೆ ಅ೦ತ ನನ್ನ ಎಣಿಕೆಗೆ ಬ೦ತು ಬಿಡಿ.

     ಉತ್ತರ
     • sriharsha
      ಜೂನ್ 8 2011

      ನನಗೇ ಹೇಳಿದ್ದು ಅಂತ ಗೊತ್ತು. ಹಿಂದೆ ನಿಂತು ಘೋಷಣೆ ಕೂಗುವ ಜಾತಿಯಲ್ಲವೇ ತಮ್ಮದು?
      ಆದರೆ ತಮ್ಮ ಹೇಳಿಕೆ ನನಗಿಂತ ಚೆನ್ನಾಗಿ ತಮ್ಮ ಸ್ನೇಹಿತರಿಗೆ ಅನ್ವಯವಾಗುತ್ತದೆ.

      ಕಳ್ಳರ ಸಂತೆಯೊಳಗೊಬ್ಬ ಸುತ್ತಿಗೆ ಬಡಿಯುವ ಕಿಸುಬಾಯಿದಾಸ!

      ಉತ್ತರ
   • ಮಹೇಶ ನೀರ್ಕಜೆ
    ಜೂನ್ 7 2011

    {When somebody left with only hammer everything looks like a nail}
    haha.. I liked this one.. May I put it on my FB status if you dont mind?

    ಉತ್ತರ
 23. Balachandra
  ಜೂನ್ 8 2011

  ಸಂಪಾದಕೀಯದ್ದು ಇದೇ ತರಹದ ಅತಿರೆಕದ ಬರಹ ಬಹಳಷ್ಟಿದೆ. ಲೇಖಕರು ಪೂರ್ವಗ್ರಹ ಪೀಡಿತರು ಎಂಬುದರಲ್ಲಿ ಸಂಶಯವಿಲ್ಲ. ಸಾಧ್ಯವಾದಾಗಲೆಲ್ಲ RSS ಗೆ, ವಿಜಯ ಕರ್ನಾಟಕದ ಬರಹಗಾರರಿಗೆ ಬಯ್ಯುವ ಚಾಳಿಯನ್ನು ರೂಢಿಸಿಕೊಂಡಿದ್ದಾರೆ. ಲಾಡೆನ್ ಬಗ್ಗೆ ಬರೆದ ಇವರು ಉಪಾಯವಾಗಿ ಅಮೆರಿಕಾದ ಮೇಲೆ ಆಪಾದನೆ ಹೊರಿಸಿ, ಆತನ ಹಾಗೂ ಆತನ ಅನುಯಾಯಿಗಳ ಮತಾಂಧತೆಯ ಬಗ್ಗೆ ಚಕಾರವನ್ನೂ ಎತ್ತರು. ಆತಂಕವಾದಕ್ಕೆ ಧರ್ಮ ಕಾರಣವೇ ಅಲ್ಲವಂತೆ. ಆದರೆ ಹಿಂದೂ ಸಂಘಟನೆಗಳಿಗೆ “ಹಿಂದೂ ಫ್ಯಾಸಿಸ್ಟ್ ಗಳು” ಎಂದು ಕರೆಯುವದನ್ನು ಬಿಡರು. ಅತ್ಯಂತ ಹಾಸ್ಯಾಸ್ಪದದ ಬರಹವೆಂದರೆ ಅವರ ವಾದ ‘ಪಾಕ್ ನಿಂದ ಭಾರತ ಪಾಠ ಕಲಿಯಬೇಕಂತೆ’. ಯಾಕೆಂದರೆ ಪಾಕ್ ನಂತೆ ಭಾರತದಲ್ಲೂ ಮೂಲಭೂತವಾದಿಗಳು ಹಾಳುಗೆಡವುತ್ತಾರೆ ಎಂಬುದು ಅವರ ಅಭಿಮತ. ವಿಶ್ವಕಪ್ ನಲ್ಲಿ ಪಾಕ್ ಸೋತ ನಂತರ ಗೋಪಾಲ್ ಹೆಗಡೆಯವರು ಬರೆದ ಲೇಖನವನ್ನು ಕಟುವಾಗಿ ಟೀಕಿಸುವ ಇವರು ಆಫ್ರಿದಿಯ ಹೇಳಿಕೆಯನ್ನು ಮರೆತುಬಿಡುತ್ತಾರೆ. ಇವರೂ ಒಂದರ್ಥದಲ್ಲಿ ಆತಂಕವಾದಿಗಳೇ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments