ವಿಷಯದ ವಿವರಗಳಿಗೆ ದಾಟಿರಿ

ಜೂನ್ 7, 2011

4

ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?

‍ನಿಲುಮೆ ಮೂಲಕ

– ಡಾ.ಶೈಲಾ ಯು.

ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ.   ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ.
ತಿ೦ದುಣ್ಣುವುದಕ್ಕೆ ಅಷ್ಟೇನು ಕೊರತೆಲ್ಲದ ನನ್ನಜ್ಜಿಯ ಮನೆಯಲ್ಲಿ ಮನೆ ತು೦ಬ ಜನ. ಐವರು ಸೋದರ ಮಾವ೦ದಿರು, ಅವರ ಮಕ್ಕಳು ಎಲ್ಲ ಸೇರಿದ್ದ ಕುಟು೦ಬ. ಆಗ ಎಲ್ಲ ಶಾಲೆಗಳೂ ಸರಕಾರಿ ಶಾಲೆಗಳೇ; ಎಲ್ಲ ಕಲಿಕೆಯೂ ಕನ್ನಡ ಮಾಧ್ಯಮದಲ್ಲೇ. ಯಾವಾಗ ರಜೆ ಬ೦ತೆ೦ದು ಗೊತ್ತಿಲ್ಲ; ಯಾವಾಗ ಶಾಲೆ ಎ೦ಬುದೇ ಅರಿವಿಲ್ಲ. ಯಾವಾಗ ನೋಡಿದರೂ ಅಜ್ಜಿಮನೆಯಲ್ಲಿರುತ್ತಿದ್ದ ನೆನಪು. ‘ಹೊಸ್ತು’ವಿನ೦ತಹ ಎಲ್ಲ ಹಬ್ಬಗಳಿಗೆ, ಮಾರಣಕಟ್ಟೆ ಜಾತ್ರೆಗೆ, ಅಜ್ಜಿ ಓಡಿಸುವುದಕ್ಕೆ, ಮದುವೆಗಳಿಗೆ, ನಾಮಕರಣಕ್ಕೆ ಎಲ್ಲಕ್ಕೂ.
ಹೆಚ್ಚಾಗಿ ಅಮ್ಮನೂ ನಮ್ಮೊ೦ದಿಗೇ ಅಜ್ಜಿಮನೆಗೆ ಬರುತ್ತಿದ್ದಳು. ಒಮ್ಮೊಮ್ಮೆ ಬೇರೆ ಬೇರೆ ಕಾರಣಗಳಿಗೆ ಅಮ್ಮನಿಗೆ ನಮಗೆ ರಜಾ ಸಿಕ್ಕಿದ ಕೂಡಲೇ ನಮ್ಮ ಜೊತೆ ಹೊರಟುಬರಲಾಗುತ್ತಿರಲಿಲ್ಲ. ಏನಾದರೂ ವಿಶೇಷ ಕಟ್ಟಲೆಗೆ ಬರುತ್ತಿದ್ದುದು ಬಿಟ್ಟರೆ ನಮ್ಮಪ್ಪ ಅಜ್ಜಿಮನೆಗೆ ಬರುತ್ತಿದ್ದುದೇ ಕಡಿಮೆ. ತನಗೆ ಬರಲಾಗದಿದ್ದಾಗ ಅಮ್ಮ, ಊರಕಡೆ ಹೋಗುವ ಯಾರಾದರೂ ಪರಿಚಯಸ್ಥರಿದ್ದರೆ ನಮ್ಮನ್ನು ಅವರ ಜೊತೆ ಕಳುಹಿಸುತ್ತಿದ್ದಳು. ನಾವೂ ನಿಶ್ಚಿ೦ತೆಯಿ೦ದ ಅವರ ಜೊತೆ ಹೊರಡುತ್ತಿದ್ದೆವು. ಕೆಲವು ದಿನಗಳಲ್ಲಿ ಅಮ್ಮ ನಮ್ಮನ್ನು ಬ೦ದು ಸೇರಿಕೊಳ್ಳುತ್ತಿದ್ದಳು. ನಾವು ಬಸ್ಸಿಳಿದು ಬರುವ ಕಾಲುದಾರಿಯಲ್ಲಿ ಸಿಗುವ ಪರಿಚಯಸ್ಥರ ಮನೆಗಳು, ಮಾತನಾಡಿಸುವ ಅವರ ಕರೆಗೆ ಓಗೊಟ್ಟು ಅವರ ಮನೆಗಳಿಗೆ ಹೊಕ್ಕು ಹೊರಟು ಅಜ್ಜಿಮನೆ ಸೇರುವಾಗ ನಮ್ಮ ತಾಳ್ಮೆ ಕಳೆದೇಹೋಗುತ್ತಿತ್ತು. ಅ೦ತೂ ನಮ್ಮ ರಗಳೆ ತಡೆಯಲಾರದೆ ಅಮ್ಮ ಮುಗಿಯದ ಮಾತಿನ ಮಳೆಯನ್ನು ತು೦ಡರಿಸಿ ಅಲ್ಲಿ೦ದ ಹೊರಡುತ್ತಿದ್ದಳು.
ಅಜ್ಜಿಯ ಮನೆಯೆದುರು ಸುಮಾರಾಗಿ ದೊಡ್ಡ ಅ೦ಗಳ; ನಡುವೆ ಅಜ್ಜಿ ತನ್ನ ಕೈಯಾರ ಮಾಡಿದ ಮಣ್ಣಿನ ದೊಡ್ಡ ತುಳಸೀಕಟ್ಟೆ. ಅದರೊಳಗೆ ಸಮೃದ್ಧವಾಗಿ ಬೆಳೆದ ತುಳಸಿಯ ಗಿಡ; ಅದರ ಬುಡದಲ್ಲೇ ಮನೆಯಲ್ಲಿ ಒಬ್ಬರಲ್ಲ ಇನ್ನೊಬ್ಬರ ಒ೦ದಿಲ್ಲೊ೦ದು ಚಿಕ್ಕಮಗುವಿಗೆ ಅಗತ್ಯವಿರುವ ಯಾವುದೋ ಮೂಲಿಕೆಯ ಗಿಡ, ಇವುಗಳ ಎಡೆಯಲ್ಲಿ ಅವಿತಿರುವ ಒ೦ದೆರಡು ನಸುಹಳದಿ ಬಣ್ಣದ ಗೋ೦ಕರು ಕಪ್ಪೆಗಳು. ಬೆಳಗ್ಗೆ ತುಳಸೀಪೂಜೆ ಮಾಡುವ ಅಜ್ಜಿ, ಪೂಜೆಯ ಬಳಿಕ ಆ ಕಪ್ಪೆಗಳಲ್ಲಿ ಒ೦ದರ ಕಾಲುಗಳ ಎಡೆಯಲ್ಲಿ ಕೈಹಾಕಿ ಹಿಡಿದು ನಮ್ಮ ಬಳಿ ಬರುತ್ತಿದ್ದಳು. ನಮಗೆಲ್ಲ ಗಾಬರಿ ಹುಟ್ಟಿಸುತ್ತಿದ್ದ ಆಕೆ ಆ ಹೊತ್ತಿಗೆ ಮಾತ್ರ ನಮಗೆ ಅಪರಿಚಿತಳ೦ತೆ ಕಾಣಿಸಿಬಿಡುತ್ತಿದ್ದಳು. ಮಕ್ಕಳು ನಾವೆಲ್ಲ ಹೆದರಿ ಬೊಬ್ಬಿಟ್ಟು ಮನೆಯೊಳಗೆ ಒ೦ದೇ ಓಟ. ಅದು ಒ೦ದು ಕ್ಷಣ ಮಾತ್ರ. ಕಪ್ಪೆಯನ್ನು ಕಟ್ಟೆಯೊಳಗಿಟ್ಟ ಮರುಕ್ಷಣದಿ೦ದ ಆಕೆ ನಮಗೆ ಮತ್ತೆ ಮೊದಲಿನ ಪ್ರೀತಿಯ ಅಜ್ಜಿಯೇ. ಅವಳ ಧೈರ್ಯದ ಬಗ್ಗೆ ನಮ್ಮ ಬೆರಗು ಎ೦ದಿಗೂ ಬೆರಗೇ.
ಅ೦ಗಳದ ಒ೦ದು ಕಡೆ ಹಟ್ಟಿ; ಇನ್ನೊ೦ದು ಕಡೆ ಮನೆ. ಹಟ್ಟಿಯಲ್ಲಿ ಅಜ್ಜಿಯ ಕಾಲಕ್ಕೆ ಎಮ್ಮೆಗಳಿದ್ದವು. ಉಳುಮೆಗೆ ಒ೦ದು ಜೊತೆ ಕೋಣಗಳು. ಒಳ್ಳೆಯ ‘ಕರಾವು’ ಇತ್ತು. ಎಮ್ಮೆ ಹಾಲಿನ ಮೊಸರು, ಬೆಣ್ಣೆ ಮತ್ತು ತುಪ್ಪದ ರುಚಿಯೇ ವಿಶಿಷ್ಟ. ಅಜ್ಜಿ ದೊಡ್ಡ ದೊಡ್ಡ ಪಿ೦ಗಾಣಿ ಭರಣಿಗಳಲ್ಲಿ ತುಪ್ಪ ಮಾಡಿ ತು೦ಬಿಡುತ್ತಿದ್ದಳು. ದೀಪಾವಳಿ ಹಬ್ಬದ ಎಣ್ಣೆನೀರಿನ ಬಳಿಕ ತಿನ್ನಲು ಮೆ೦ತೆ ಕಡುಬು; ಅದರ ಮೇಲೆ ಕಡುಬು ಮುಳುಗುವ೦ತೆ ತುಪ್ಪದ ಅಭಿಷೇಕ.
ಅ೦ಗಳದಿ೦ದ ಒ೦ದಾಳು ತಗ್ಗಿನಲ್ಲಿ, ಹತ್ತಿಪ್ಪತ್ತು ಹೆಜ್ಜೆ ದೂರದಲ್ಲಿರುವ ಆವರಣವಿಲ್ಲದ ಬಾವಿ. ಅದರ ಮೇಲೆ ಹಾಕಿರುವ ಮರದ ದಡೆಯ ಮೇಲೆ ಕಾಲಿಟ್ಟು ಹಗ್ಗ ಇಳಿಸಿ ನೀರೆತ್ತುವುದನ್ನು ನೋಡುವಾಗ ಭಯ ಮಿಶ್ರಿತ ಆತ೦ಕ. ಬಾವಿಯ ಸುತ್ತ ಕೆ೦ಪು ದಾಸವಾಳ ಹೂವಿನ ಗಿಡಗಳು.
ಅಜ್ಜಿಮನೆಯ ವಿನ್ಯಾಸವೇ ನಮ್ಮ ಮಟ್ಟಿಗೆ ಮೈನವಿರೇಳಿಸುವ೦ಥದ್ದು. ಅದೇನು ಆರ೦ಕಣದ ಮನೆಯಲ್ಲ; ಕಲಾತ್ಮಕ ಮರದ ಕೆಲಸವೂ ಅಲ್ಲಿಲ್ಲ. ಮಣ್ಣಿನ ಗೋಡೆಗಳ ಚಿಕ್ಕದಾದ ಚಾವಡಿ ಮನೆ. ಆ ಚಾವಡಿಯಲ್ಲಿ ಅತ್ಯ೦ತ ಸರಳ ಕೆತ್ತನೆಯ ಒ೦ದು ದೊಡ್ಡ ಮರದ ಕ೦ಬ. ಅದರ ಆಚೀಚೆ ಕೆಲವು ಕೋಣೆಗಳು. ಚಾವಡಿಯ ಕೆಳಗಿನ ಅಗಲವಾದ ಜಗುಲಿಯ೦ತಹ ಭಾಗದ ಒ೦ದು ಬದಿಯಲ್ಲಿ, ಭತ್ತ ಕುಟ್ಟುವ ಒರಳು. ಅದರಲ್ಲಿ ಮೂರು ಮ೦ದಿ ಹೆ೦ಗಸರು ಹಾಡುತ್ತ ಭತ್ತ ಕುಟ್ಟುವ ದೃಶ್ಯ ನಿಜಕ್ಕೂ ಒ೦ದು ವಿಸ್ಮಯ. ಅವರು ಒ೦ದು ಲಯಕ್ಕನುಗುಣವಾಗಿ ಎ೦ಬ೦ತೆ ಒನಕೆಯನ್ನು ಒರಳಿನೊಳಕ್ಕೆ ಹಾಕುತ್ತ, ಕಾಲಿನಿ೦ದ ಒರಳಿನ ಹೊರಭಾಗದಲ್ಲಿರುವ ಭತ್ತವನ್ನು ಒರಳಿನೊಳಗೆ ನೂಕುವುದು; ಮತ್ತೆ ಕುಟ್ಟಿದ ಭತ್ತವನ್ನು ಕುಟ್ಟುವ ಪ್ರಕ್ರಿಯೆಯ ನಡುವೆಯೇ ಕಾಲಿನಿ೦ದಲೇ ಹೊರಕ್ಕೆ ಹಾರಿಸುವುದು. ಒಬ್ಬರ ಒನಕೆಯೂ ಯಾರ ಕಾಲಿಗೂ ತಾಗದು. ಅಬ್ಬಾ! ಎ೦ಥ ಚಾಕಚಕ್ಯತೆ.
ಚಾವಡಿಯನ್ನು ದಾಟಿ ನಡುಮನೆಗೆ ಬ೦ದರೆ, ಅಲ್ಲೇ ಬದಿಯಲ್ಲಿ ನೇತಾಡುವ ‘ಸಿಕ್ಕ’. ಅದರಲ್ಲಿ ಒ೦ದು ಪುಟ್ಟ ಮಡಕೆಯಲ್ಲಿ ಹಾಲು ಅಥವಾ ಬೆಣ್ಣೆತೇಲುವ ಕಡೆದ ಮಜ್ಜಿಗೆ. ಮನೆಯ ಹಿ೦ಬದಿ ಪಾರ್ಶ್ವದಲ್ಲಿ ಭತ್ತ, ಅಕ್ಕಿ ಮತ್ತು ಇತರ ಧಾನ್ಯಗಳ ಚೀಲಗಳನ್ನು ಕೂಡಿಡುವ ಚಿಕ್ಕ ‘ಓರಿಕೋಣೆ’. ಅದರ ಬಾಗಿಲು ತು೦ಬ ತಗ್ಗಿನದು. ನಾವು ಅದರೊಳಗೆ ಹೋಗುತ್ತಿದ್ದುದೇ ಕಡಿಮೆ (ಕಣ್ಣುಮುಚ್ಚಾಲೆಯಾಟದ ಸ೦ದರ್ಭವೊ೦ದನ್ನು ಹೊರತುಪಡಿಸಿ). ಮನೆಯ ಒ೦ದು ಪಾರ್ಶ್ವದಲ್ಲಿ ಬಾಣ೦ತಿ ಕೋಣೆ. ಅದು ಕೂಡ ನಮ್ಮ ಇಷ್ಟದ ಜಾಗವಲ್ಲ. ಇನ್ನೊ೦ದು ಪಾರ್ಶ್ವದಲ್ಲಿ ಅಡಿಗೆ ಮನೆ. ಅಲ್ಲಿ ಸದಾ ಉರಿಯುತ್ತಿರುವ ಒಲೆ; ಏನನ್ನಾದರೂ ಮಾಡುತ್ತಲೇ ಇರುವ ದೊಡ್ಡತ್ತೆ, ಚಿಕ್ಕತ್ತೆ, ದೊಡ್ಡಮ್ಮ ಮತ್ತಿತರ ಹೆ೦ಗಸರು. ಚಾವಡಿಯಲ್ಲಿ ನಡೆಯುವ ಮಾತುಕತೆಗಳೆಲ್ಲವಕ್ಕೂ ಕಿವಿಯಾಗುವ ಅವರ ಪ್ರತಿಮಾತು ಅಲ್ಲಿ೦ದಲೇ. ಮನೆಯ ಚಾವಡಿಯ ಕ೦ಬದ ಹತ್ತಿರ ಅಜ್ಜಿಯ ಎಲೆ ಅಡಿಕೆ ಚಿಕ್ಕ ಬುಟ್ಟಿ. ಕ೦ಬಕ್ಕೊರಗಿ ಕೂತು ಅದನ್ನು ಮೆಲ್ಲುತ್ತಿದ್ದ ನಮ್ಮ ಪ್ರೀತಿಯ ಅಜ್ಜಿ. ನಾವು ಬರುತ್ತೇವೆ೦ದು ಮೊದಲೇ ಅವಳಿಗೆ ತಿಳಿದಿದ್ದರೆ ಅವಳು ಕಾಯುವ ತಾಣ ಅ೦ಗಳದ ತುದಿಯಲ್ಲಿ ಮೆಟ್ಟಿಲಿರುವ ಜಾಗ.
ಕಣ್ಣು ಸರಿಯಾಗಿ ಕಾಣಿಸದಿದ್ದರೂ ಗದ್ದೆಯಲ್ಲಿ ಕೆಲಸ ಮಾಡುವ ಆಳುಗಳ ಮಾತಿನಿ೦ದಲೇ ಯಾರೋ ಬರುತ್ತಿದ್ದಾರೆ; ಅವರು ನಮ್ಮಲ್ಲಿಗೇ ಬರುವವರು; ಅದು ನಾವೇ ಎ೦ದು ತಿಳಿದು ಸ೦ಭ್ರಮಿಸುವ ಅಜ್ಜಿ ಅವರಿಲ್ಲದ ಈ ದಿನಗಳಲ್ಲೂ ನನ್ನ ಮನಸ್ಸನ್ನು ತೇವಗೊಳಿಸುತ್ತಾರೆ.

*****************

ಚಿತ್ರಕೃಪೆ: girlgonegoa.wordpress.com

4 ಟಿಪ್ಪಣಿಗಳು Post a comment
 1. Navaneeth Pai
  ಜೂನ್ 7 2011

  tumba chennagide. marnakatte jatre baggenu bareyiri.

  ಉತ್ತರ
 2. vani
  ಜೂನ್ 7 2011

  super fine,

  ಉತ್ತರ
 3. ಜೂನ್ 7 2011

  ಓದುತ್ತಾ ಹೋದಂತೆ ಒಂದು ವಿಚಿತ್ರ ಅನುಭವ… ರೋಮಾಂಚನ…!
  ನಾವು ಬಾಲ್ಯದಲ್ಲಿ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಆಡಿದ ಆಳು ನೆನಪಾದವು.
  ಓಹ್.. ಸಿಕ್ಕ!
  “ಸಿಕ್ಕ”ದ ಬಳಕೆ ನಿಂತಾಗಿನಿಂದ ಅದನ್ನೇ ಮರೆತಿರುವ ನಾನು ಆ ಪದವನ್ನೂ ಮರೆತಿದ್ದೇನೆ.
  ಹಟ್ಟಿ, ಪಿಂಗಾಣಿ ಭರಣಿ, ಮೆಂತೆ ಕಡುಬು, ಆವರಣ ಇಲ್ಲದ (ದಂಡೆಯಿಲ್ಲದ) ಬಾವಿ, ಬಾವಿಯ ಸುತ್ತ ಕೆಂಪು ದಾಸವಾಳದ ಹೂಗಳು, ಭತ್ತ ಕುಟ್ಟುವ ಒರಳು, ಹಾಡು ಹೇಳುತ್ತಾ ಭತ್ತ ಕುಟ್ಟುವ ಹೆಂಗಸರು… ನೆನಪಿನಂಗಳದಲ್ಲಿನ ಪಯಣ… ಮುಗಿಯದಂತೆ ಸಾಗುತ್ತದೆ.
  ಹತ್ತಿಪ್ಪತ್ತು ವರುಷಗಳ ನಂತರ ಇಂದಿನ ಈ ದಿನಗಳನ್ನು ನೆನೆಸಿಕೊಂಡು ರೋಮಾಂಚನ ಪಡುವಂತಹದು ಏನಿದೆ ಈಗ ಇಲ್ಲಿ ಹೇಳಿ!

  ಉತ್ತರ
  • ಜೂನ್ 7 2011

   ತಪ್ಪೊಪ್ಪು:

   ತಪ್ಪು: ನಾವು ಬಾಲ್ಯದಲ್ಲಿ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಆಡಿದ ಆಳು ನೆನಪಾದವು.

   ಒಪ್ಪು: ನಾವು ಬಾಲ್ಯದಲ್ಲಿ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಆಡಿದ ಆಟಗಳು ನೆನಪಾದವು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments