ವಿಷಯದ ವಿವರಗಳಿಗೆ ದಾಟಿರಿ

ಜೂನ್ 14, 2011

1

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!

‍ನಿಲುಮೆ ಮೂಲಕ

– ರವಿ ಮುರ್ನಾಡು

ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ  ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.

ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ  ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.

ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಬೆಳಿಗ್ಗೆ ಎದ್ದು ಎಂಟು ಕಿ.ಮೀ. ದೂರ ನಡೆದು ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹೋಗಿದ್ದೆ. ಪಟ್ಟಣಕ್ಕೆ ಬಂದಾಕ್ಷಣ ಅದೇ ಹೋಟೆಲ್ಲಿನ ಹಾದಿಗೆ ಕಣ್ಣು ಹಾಯಿಸಿದ್ದು. ನಾನು ಒಂದನೇ ಕ್ಲಾಸು. ಹುಡುಗರಿಗೆಲ್ಲ ದೋಸೆಯ ಮಹತ್ವವನ್ನು ವಿವರಿಸಿದ್ದೆ. ಮಧ್ಯಾಹ್ನ  ಊಟಕ್ಕೆ ಬಿಟ್ಟಾಗಲೂ ಪಟ್ಟಣಕ್ಕೆ ಬಂದು ಆ ಹೋಟೇಲನ್ನು ನೋಡಿ ಹೋಗುವುದು ವಾಡಿಕೆಯಾಯಿತು. ಒಂದು ಬಾರಿ  ಹೋಟೆಲಿನ ಸಪ್ಲಯರ‍್  ಹತ್ತಿರ ಮಸಾಲೆ ದೋಸೆಯ “ರೇಟು” ಕೇಳಿದ್ದಾಯಿತು. ಎಪ್ಪತ್ತೈದು ಪೈಸೆ ಅಂದ. ಈ ಹಣವನ್ನು ಹೊಂದಿಸಿದ್ದರೆ, ಈಗಲೆ ಒಂದು ದೋಸೆ ತಿನ್ನಬಹುದಿತ್ತು.

ಕಾರೆಕೊಲ್ಲಿ ಕಾಫಿ ತೋಟ ತುಂಬಾ ದೊಡ್ಡದು. ಅಲ್ಲಿ ಅವರೆಲ್ಲಾ ಹೇಳಿದರು, ನಾಲ್ಕು ಕಠಿಣ ದೇವರುಗಳು ಆ ತೋಟವನ್ನು ಕಾಯುವುದು. ಅಮ್ಮಣ್ಣಿಯಮ್ಮನ ತಾಯಿಯೂ ಹೇಳುತ್ತಾರೆ. ಅವರು ನೋಡಿದ್ದಾರಂತೆ. ಕೆಂಪು ಸೀರೆ, ತಲೆ ತುಂಬಾ ಕೂದಲು, ಮೈಯೆಲ್ಲ ಚಿನ್ನದ ಆಭರಣಗಳು…ನಡೆಯುವಾಗ ಗೆಜ್ಜೆ ಶಬ್ಧ ಕೇಳಿದ್ದಾರಂತೆ. ಅದು ಮಾರಿಯಮ್ಮ ದೇವರು. ನಮ್ಮ ಲೈನಿನ ಅನತಿ ದೂರದಲ್ಲೇ ಅದು ಇರುವುದು. ಈ ದೇವರ ಅಣ್ಣ ” ಗುಳಿಗ” ದೇವರು. ನಾವು ಬಾವಿಯ ನೀರು ತರಲು ಹೋಗುವ ದಾರಿಯಲ್ಲೇ ಇರುವುದು. ಅಲ್ಲಿಂದ ಸ್ವಲ್ಪ ದೂರದಲ್ಲಿ ಅಜ್ಜಪ್ಪ ದೇವರು. ಇವರು ಎಲ್ಲರಿಗೂ ದೊಡ್ಡ ದೇವರಂತೆ. ಅಲ್ಲಿ ತುಂಬಾ ಹಾವುಗಳು ಉಂಟು. ಮಧ್ಯಾಹ್ನದ ಸಮಯದಲ್ಲಿ ಹಾವುಗಳು ಹೊರಗೆ ಬಂದು ಆಟವಾಡುತ್ತದಂತೆ. ಚಂದ್ರಿ ಹೇಳಿದ್ದು. ನನಗಿಂತ ಮೂರು ಕ್ಲಾಸು ದೊಡ್ಡವಳು. ಸುಳ್ಳು ಅಂತ ಹೇಳಿದ್ದೆ. ಹಾವುಗಳು ಇವಳನ್ನು ನೋಡುವಾಗ ಏಕೆ ಕಚ್ಚಲಿಲ್ಲ ಅಂತ ಒಂದು ಅನುಮಾನ. ಅವಳು ಹೇಳುತ್ತಾಳೆ, ಆ ಹಾವುಗಳು ಅಜ್ಜಪ್ಪ ದೇವರ ತಲೆಯ ಮೇಲೆ ಹೆಡೆ ಬಿಚ್ಚಿ ನಿಂತದ್ದನ್ನು ನೋಡಿದ್ದಾಳಂತೆ. ಬರೀ ಸುಳ್ಳು…!

ಭಗವತಿ ದೇವರು ತೋಟದ ಕಾಫಿ ಒಣಗಿಸುವ ಕಣದ ಪಕ್ಕದಲ್ಲಿ ಇರುವುದು. ಮಾರಿಯಮ್ಮ ದೇವರ ತಂಗಿ. ರಾತ್ರಿ ಈ ಎಲ್ಲ ದೇವರುಗಳು ಒಟ್ಟು ಸೇರುತ್ತಾರಂತೆ. ಯಾರೆಲ್ಲ ತಪ್ಪು ಮಾಡಿದ್ದರೂ, ಅವರೆಲ್ಲರ ಮನೆಯ ಬಾಗಿಲು ಬಡಿದು ಎಚ್ಚರಿಕೆ ಕೊಡುತ್ತಾರಂತೆ. ಜೊತೆಗೆ ಅವರುಗಳ ಹಾವುಗಳು. ಅಮ್ಮಣಿಯಮ್ಮನ ತಾಯಿಗೆ ಎಲ್ಲಾ ಗೊತ್ತು. ಅವರು ಹೇಳುತ್ತಾರೆ, ಈ ದೇವರುಗಳು ಬರುವಾಗ ತೋಟದಲ್ಲಿ ಸ್ಮಶಾನದ ಭೂತಗಳು ಅಡಗಿಕೊಳ್ಳುತ್ತವಂತೆ. ದೇವರುಗಳು ಹೋದ ಮೇಲೆ ಭೂತಗಳು ತೋಟ ಸುತ್ತುವುದು. ಅವುಗಳು ರಾತ್ರಿ ” ಸೀಟಿ” ಊದುತ್ತವೆ…! ಚಂದ್ರಿ ಹೇಳಿದ್ದು.

ತೋಟದಲ್ಲಿ ಈ ದೇವರುಗಳ ದೊಡ್ಡ ಹಬ್ಬ ನಡೆಯುತ್ತದೆ. ನಮ್ಮ ದೊಡ್ಡ ಪರೀಕ್ಷೆ ಮುಗಿದಾಗ ಬರುವುದು. ಅಜ್ಜಿ ನನಗೆ ಹೊಸ ಬಟ್ಟೆ ತೆಗೆದುಕೊಡುತ್ತಾರೆ. ತೋಟದವರ ದೂರದೂರಿನ ನೆಂಟರಿಸ್ಟರೂ ಈ ಸಂದರ್ಭ ಕಾರೆಕೊಲ್ಲಿ ತೋಟಕ್ಕೆ ಬರುತ್ತಾರೆ.ಅಮ್ಮ-ಅಪ್ಪನೂ ತಮ್ಮಂದಿರೂ .  ಹರಕೆ ಇದ್ದರೆ ಹಾಕುತ್ತಾರೆ. ಆಡು-ಕೋಳಿ ಬಲಿ ಕೊಡುತ್ತಾರೆ. ನಮ್ಮ ಅಜ್ಜಿಯೂ..!. ಅಜ್ಜಪ್ಪ ದೇವರಿಗೆ ಬಲಿ ಕೊಡುವುದಿಲ್ಲ. ಅದು ಪಾಪದ ಅಜ್ಜ ದೇವರು. ಮಾರಿಯಮ್ಮ ದೇವರು, ಗುಳಿಗ ದೇವರು ಮತ್ತು ಭಗವತಿ ದೇವರಿಗೇ ಮಾತ್ರ ಬಲಿ ಕೊಡುವುದು. ಬಲಿ ಕೊಟ್ಟ ಪ್ರಾಣಿಗಳ ರಕ್ತವನ್ನು ಅವರುಗಳು ಕುಡಿಯುತ್ತಾರಂತೆ. ಅಮ್ಮಣಿಯಮ್ಮನ ತಾಯಿ ಹೇಳುತ್ತಾರೆ ,ಕೋಳಿ-ಆಡುಗಳನ್ನು ಬಲಿ ಕೊಡದಿದ್ದರೆ, ತೋಟದಲ್ಲಿ ಕೆಲಸ ಮಾಡುವವರಿಗೆ ತೊಂದರೆ ಕೊಡುತ್ತಾರಂತೆ. ತೋಟದ ಸಾವುಕಾರ  ಸಾಯುತ್ತಾನಂತೆ. ಅದಕ್ಕೆ ಬಲಿ ಕೊಡುವುದು. ಪೂಜೆಯಾದ ನಂತರ ಸಂಜೆ ಬಲಿ ಕೊಟ್ಟ ಆಡು- ಕೋಳಿಗಳ ಮಾಂಸವನ್ನು ಎಲ್ಲರಿಗೂ ಹಂಚುತ್ತಾರೆ ತೋಟದ ಸಾಹುಕಾರರು.

ಪೂಜೆಗೆ ಬಂದ ಜನರು ದೇವರಿಗೆ ದುಡ್ಡು ಕಾಣಿಕೆ ಹಾಕುತ್ತಾರೆ. ನಾನು ನೋಡಿದ್ದೆ. ತುಂಬಾ ಹಾಕುತ್ತಾರೆ. ನಮ್ಮ ಮನೆಯ ಪಕ್ಕದ ಮಾರಿಯಮ್ಮ ದೇವರಿಗೂ ಒಂದು ಕಾಣಿಕೆ ಡಬ್ಬಿ ಉಂಟು. ಅಲ್ಲಿ ತುಂಬಾ ಜನ  ದುಡ್ದು ಹಾಕಿದ್ದರು. ನಮ್ಮ ಅಜ್ಜಿಯೂ. ನನಗೆ  ತುಂಬಾ ಹುಷಾರಿರಲಿಲ್ಲ. ಆಗ ಮಾರಿಯಮ್ಮ ದೇವರಿಗೆ ಹೀಗೆ ಹರಕೆ ಹೊತ್ತುಕೊಂಡಿದ್ದರು.

” ತಾಯಿ… ನಮ್ಮ ಮಗುವಿಗೆ ಜ್ವರ ವಾಸಿಯಾಗಲಿ, ನಿನಗೆ ಮಗುವಿನ ತಲೆ ಸುತ್ತಿ ಇಪ್ಪತ್ತೈದು ಪೈಸೆ ಹಾಕುತ್ತೇನೆ” ಎಂದು.

ಅವರು ಹೇಳಿ ಅರ್ಧಗಂಟೆಯಲ್ಲಿ ಜ್ವರ ಇಳಿಯಿತಂತೆ. ಅಜ್ಜಿ ನನಗೆ ಹೇಳಿದ್ದು. ಮಾರಿಯಮ್ಮ ದೇವರಿಗೆ ನನ್ನ ಮೇಲೆ ಪ್ರೀತಿ. ನಾನು ದಿನವೂ ಕೈ ಮುಗಿಯುತ್ತಿದ್ದೆ.

ಯಾರಲ್ಲಿ ಕೇಳಿದರೂ ಮಸಾಲೆ ದೋಸೆಗೆ ಹಣ ಸಿಗುವುದಿಲ್ಲ. ಅಜ್ಜಿ-ಚಿಕ್ಕಮ್ಮನಲ್ಲಿ ಕೇಳಿದರೆ “ನಿನಗೇನು ಮಸಾಲೆ ದೋಸೆಯ ರಾವು ಬಡಿದಿದೆ” ಅಂತ ಗದರಿಸಬಹುದು. ಇವತ್ತು ಶನಿವಾರ. ಮಧ್ಯಾಹ್ನದವರೆಗೇ ಮಾತ್ರ ಶಾಲೆ..! ಶಾಲೆಯಿಂದ ನಡೆದು ಬರುವಾಗ ಚಂದ್ರಿ ಹೇಳಿದಳು, ನಾಳೆ  ಅವರೆಲ್ಲರೂ ಹೋಟೆಲ್ಲಿಗೆ ಹೋಗುವುದಾಗಿ.

ಇವರು ಮಸಾಲೆ ತಿನ್ನಬಹುದು ?!!!. ದೋಸೆ ಒಂದಕ್ಕೆ ಎಪ್ಪತ್ತೈದು ಪೈಸೆ, ನೀವು ಹೇಗೆ ಎಲ್ಲರೂ ತಿನ್ನುತ್ತೀರಿ?

“ನಮ್ಮ ಪಪ್ಪನಿಗೆ ಹೇಳಿದರೆ ತೆಗೆದು ಕೊಡುತ್ತಾರೆ” ಅಂದಳು.

ಮಸಾಲೆ ದೋಸೆಯ ನೆನಪು ಮರುಕಳಿಸ ತೊಡಗಿತು. ಹಣಕ್ಕೆ ಏನು ಮಾಡುವುದು?. ಮನೆಗೆ ಬಂದಂತೆ ಮಾರಿಯಮ್ಮ ದೇವರ ಗುಡಿಗೆ ಒಂದು ಬಾರಿ ಹೋಗಿ ಬಂದೆ. ಕಾಣಿಕೆ ಡಬ್ಬ ಹೊರಗೆಯೆ ಇತ್ತು. ದೇವರಿಗೆ ಸ್ವಲ್ಪ ಮಾತಾಡಬೇಕು. ಸ್ನಾನ ಮಾಡಿ ಮಾತನಾಡುವುದಾಗಿ ಪುನಃ ವಾಪಾಸು ಬಂದೆ.

” ಮಾರಿಯಮ್ಮ ದೇವರೆ, ನನಗೆ ಮಸಾಲೆ ದೋಸೆ ತಿನ್ನಬೇಕು.ನಾಳೆ ಸಂತೆಗೆ ಹೋಗುವಾಗ ನಿನ್ನ  ದುಡ್ಡು ತೆಗೆಯುತ್ತೇನೆ.” ಅನ್ನುವ ಪ್ರಾರ್ಥನೆ ಮಾಡಿದೆ. ರಾತ್ರಿ ಒಂದು ಕನಸು ” ಅಮ್ಮುಣ್ಣಿಯಮ್ಮನ ತಾಯಿ ಹೇಳಿದಂತೆ, ಕೆಂಪು ಸೀರೆ, ಉದ್ದದ ತಲೆಗೂದಲು, ಆಭರಣ ತೋಟ್ಟ ದೇವರು ಮಸಾಲೆ ದೋಸೆ ಹಿಡಿದು ನನ್ನಲ್ಲಿಗೆ ಬಂದರು” . ಬೆಳಿಗ್ಗೆ ಎದ್ದಾಕ್ಷಣ ಸ್ನಾನ ಮಾಡಿ ಗುಡಿಗೆ ಹೋಗಿದ್ದು. ಸುತ್ತಮುತ್ತ ಯಾರ ಸುಳಿವು ಇಲ್ಲ. ಎಲ್ಲರೂ ಸಂತೆಗೆ ಹೋಗುವ ತುರತುರಿಯಲ್ಲಿರಬಹುದು. ಮತ್ತೊಂದು ಪ್ರಾರ್ಥನೆಯೊಂದಿಗೆಯ ಡಬ್ಬದ ಮುಚ್ಚಳ ತೆಗೆದೆ. ಕೈ ಹಾಕಿದಾಗ ಸಿಕ್ಕಿದ್ದು ಒಂದು ರೂಪಾಯಿ ನಾಣ್ಯ. ಹಾಗೆ ಮುಚ್ಚಿ ಬಂದೆ. ದೋಸೆಗೆ ಎಪ್ಪತ್ತೈದು ಪೈಸೆ. ನಂತರ ಇಪ್ಪತ್ತೈದು ಪೈಸೆ ಉಳಿದೀತು. ಅದನ್ನು ವಾಪಾಸು ಮಾಡುವ ಆಲೋಚನೆ. ಅಜ್ಜಿ-ಚಿಕ್ಕಮ್ಮನೊಂದಿಗೆ ಸಂತೆಗೆ ಹೋಗುವಾಗ ಒಂದು ಸಂತೋಷ , ಚಂದ್ರಿ ಹೋಟೇಲ್ಲಿಗೆ ಹೋಗುವ ಮುನ್ನ  ಮಸಾಲೆ ದೋಸೆ ತಿಂದು ಬರಬೇಕು. ಅವಳಿಗೆ ಹೇಳಬೇಕು, ನಾನೂ ದೋಸೆ ತಿಂದೆ ಅಂತ. ಅವಳೂ ತಾಯಿಯೊಂದಿಗೆ ಸಂತೆಗೆ ಬಂದಳು.

ಅಜ್ಜಿ- ಚಿಕ್ಕಮ್ಮ ದಿನಸಿ ಎಲ್ಲಾ ಖರೀದಿಸಿದ ನಂತರ, ಮೀನು ತರಲು ನನ್ನನ್ನು ಕಳುಹಿಸುವುದು. ಹೋಟೆಲ್ಲಿಗೆ ಹೋಗಲು ಇದೇ ಸರಿಯಾದ ಸಮಯ. ಮೀನು ತರಲು ಮೂರು ರೂಪಾಯಿ ಕೊಟ್ಟು ಕಳುಹಿಸಿದಾಕ್ಷಣ ಗಣೇಶ ಕ್ಯಾಂಟೀನಿನ ಕಡೆ ಓಡ ತೊಡಗಿದೆ. ಕಣ್ಣು ತುಂಬಾ ಮಸಾಲೆ ದೋಸೆ…!! ಅದು ಸುಂಟಿಕೂಪ್ಪ ಮಾರುಕಟ್ಟೆಯಿಂದ ಅನತಿ ದೂರದಲ್ಲಿದೆ. ಸಂತೆಯ ಜನಸಂದಣಿಯೂ. ಆಗಾಗ ದೋಸೆಯ ಹಣವನ್ನು ಮುಟ್ಟಿ ನೋಡ ತೊಡಗಿದೆ. ಆಹಾ..! ಇದೆ ಅನ್ನುವ ಭರವಸೆ ಮತ್ತು ಸಂತೋಷ. ಅದರ ಜೊತೆಗೆ ಮೀನಿಗೆ ಕೊಟ್ಟ ಹಣವೂ….! ಓಡುತ್ತಿದ್ದಂತೆ ಸಣ್ಣ ಕಲ್ಲೊಂದು ಕಾಲಿಗೆ ತಾಗಿತು. ಮುಗ್ಗರಿಸಿ ಬಿದ್ದುಬಿಟ್ಟೆ. ಪಕ್ಕದಲ್ಲೇ ಚರಂಡಿಯೂ. ಹೆಬ್ಬರಳಿನ ಉಗುರು ಕಿತ್ತು ಹೋಯಿತು. ತುಂಬಾ ರಕ್ತ….! ಮಸಾಲೆ ದೋಸೆ ಮರೆತು ಹೋಗಲಿಲ್ಲ. ಬಿದ್ದ ರಭಸಕ್ಕೆ ಶರ್ಟು ಜೇಬಿನಲ್ಲಿಟ್ಟಿದ್ದ ದುಡ್ಡು ಚೆಲ್ಲಾಪಿಲ್ಲಿ. ಅಜ್ಜಿ ಮೀನಿಗೆ  ಕೊಟ್ಟಿದ್ದು ಎರಡು ಮತ್ತು ಒಂದು ರೂಪಾಯಿ ನೋಟು. ಅದು ಹಾಗೇ ಇದೆ..!. ಮಾರಿಯಮ್ಮ ದೇವರ ಮಸಾಲೆ ದೋಸೆ ಹಣ ಒಂದು ರೂಪಾಯಿ ನಾಣ್ಯ..! .ಜೇಬಿನಿಂದ ಚಿಮ್ಮಿ ಚರಂಡಿಯೊಳಗೆ ನುಗ್ಗಿತು. ಮೇಲ್ಭಾಗ ಮುಚ್ಚಿದ್ದ ಚರಂಡಿಯ  ಒಳಗೆ ನೀರು ಹರಿಯುತ್ತಿತ್ತು. ಕೈ ಹಾಕಿ ತೆಗೆಯುವ ಹಾಗಿಲ್ಲ. ಮಸಾಲೆ ದೋಸೆ ಕಣ್ಣೆದುರಿನಲ್ಲೇ ಕೊಚ್ಚಿ ಹೋಯಿತು…!

ರಕ್ತಸಿಗ್ಧ ಕಾಲಿನ ಹೆಬ್ಬರಳಿನ ನೋವು ಎಲ್ಲವನ್ನು ಮರೆಸಿಬಿಟ್ಟಿತಲ್ಲ..! ಮೀನು ತೆಗೆದು ಹಾಗೆ ಅಜ್ಜಿಯ ಹತ್ತಿರ ಬಂದೆ. ರಕ್ತ ನೋಡಿ ಚಿಕ್ಕಮ್ಮ ಕಣ್ಣು ಕೆಂಪು ಮಾಡಿದಳು.”ಆಗಸ ನೋಡಿಕೊಂಡು ಹೋಗುತ್ತೀಯ.. ನೆಲ ಕಣ್ಣು ಕಾಣುದಿಲ್ಲವೇ?” ಮರುಕ ಕೋಪದ ಮಾತು. ಅಲ್ಲೇ ಕಾಫಿ ಹುಡಿ ಹಾಕಿ, ತನ್ನ ಕೈ ಕವಚದಿಂದ ಗಾಯಕ್ಕೆ ಕಟ್ಟಿ ಮುಚ್ಚಿದಳು.

ಕುಂಟುತ್ತಾ ಮನೆಗೆ ಬಂದದ್ದು. ದಾರಿಯಲ್ಲಿ ಚಂದ್ರಿ ಹೇಳುತ್ತಾಳೆ, ಅವರೆಲ್ಲರೂ ಮಸಾಲೆ ದೋಸೆ ತಿಂದರಂತೆ. ತುಪ್ಪ ಹಾಕಿದ್ದು. ಜೊತೆಗೆ ಆಲೂಗೆಡ್ಡೆ ಪಲ್ಯ-ತೆಂಗಿನಕಾಯಿ ಚಟ್ನಿ….!

ಬೆಳಿಗ್ಗೆ ಮಾರಿಯಮ್ಮ ಗುಡಿಗೆ  ಚಂದ್ರಿಯ ಅಮ್ಮ  ಪಾಂಚಾಲಿಯಮ್ಮ ಕೈಮುಗಿಯಲು ಹೋಗಿದ್ದರು. ಲೈನಿನ ಎಲ್ಲರಿಗೂ ಹೇಳುತ್ತಾರೆ ಕಾಣಿಕೆ ಡಬ್ಬದ ಮುಚ್ಚಳ ಸ್ವಲ್ಪ ತೆರೆದಿದೆ ಅಂತ. ದೇವರ ಭಂಡಾರ ಕದ್ದವರು ಒಳ್ಳೆಯದಾಗಲ್ಲ. ನಮ್ಮ ಅಜ್ಜಿಯೂ ಸ್ವರ ಸೇರಿಸಿದರು..ಯಾರು ಕದ್ದರೋ…? ದೇವರಿಗೆ ಗೊತ್ತಿರುತ್ತದೆ… ಕದ್ದವರು ರಕ್ತಕಾರಿ ಸತ್ತಾರು…! ಅಮ್ಮುಣ್ಣಿಯಮ್ಮ ಹೇಳಿದನ್ನು ನಿಜಗೊಳಿಸಿದರು…! ಹೆಬ್ಬರಳಿನ ನೋವು ಇನ್ನೂ ಹೆಚ್ಚಾಗ ತೊಡಗಿತು. ಶಾಲೆಗೆ ಹೋಗಲಾಗಲಿಲ್ಲ. ಎಲ್ಲರೂ ಲೈನಿನಿಂದ ತೋಟ ಕೆಲಸಕ್ಕೆ ಹೋದ ಮೇಲೆ ಭಯ ಆವರಿಸಿತು. ಅಲ್ಲಿ ಹಾವುಗಳು ಉಂಟು. ಅವು ಬಂದರೋ? ಮಾರಿಯಮ್ಮ ದೇವರಿಗೆ ಕೈಮುಗಿಯಬೇಕು. ಹಣವನ್ನು ಹೇಗೆ ಸೇರಿಸುವುದು? ಅಜ್ಜಿ ಮತ್ತು ಚಿಕ್ಕಮ್ಮ ವಾರಕ್ಕೆ ಬೆಲ್ಲದ ಮಿಠಾಯಿಗೆ ಕೊಡುವ ಹತ್ತತ್ತು ಪೈಸೆಯನ್ನು ಒಟ್ಟು ಸೇರಿಸುವುದು ಅಂದ ಮೇಲೆ  ಸಣ್ಣ ನಿದ್ದೆ ಬಂತು.

ಎಚ್ಚರವಾದ ಮೇಲೆ ಮುಖ ತೊಳೆದು ಮೆಲ್ಲನೆ ಮಾರಿಯಮ್ಮ ದೇವರ ಗುಡಿಗೆ ಅಡಿಯಿಟ್ಟೆ. ಕಾಣಿಕೆ ಡಬ್ಬ ಹಾಗೇ ಇದೆ. ಮತ್ತೊಂದು ಪ್ರಾರ್ಥನೆ…

“ನಿನ್ನ ಒಂದು ರೂಪಾಯಿ ಚರಂಡಿಯಲ್ಲಿ ಬಿದ್ದು ಹೋಯಿತು. ಮಸಾಲೆ ದೋಸೆ ತಿನ್ನಲಿಲ್ಲ. ಅಜ್ಜಿ-ಚಿಕ್ಕಮ್ಮ ಕೊಡುವ ಬೆಲ್ಲದ ಮಿಠಾಯಿ ಹಣವನ್ನು ಹಾಕುತ್ತೇನೆ”.

ಕಪ್ಪಗಿನ ದೇವರ ಶಿಲಾ ಮೂರ್ತಿ ನಕ್ಕಂತೆ ಅನ್ನಿಸಿತು. ಕಾಲಿನ ನೋವು  ಸ್ವಲ್ಪ ಕಡಿಮೆಯಾದಂತೆ….ಹಗುರವಾದ ಮನಸ್ಸು….! ವಾರದಲ್ಲಿ ಸಿಗುವ ಬೆಲ್ಲದ ಮಿಠಾಯಿಯೂ ಇಲ್ಲ…. ಮಸಾಲೆ ದೋಸೆಯೂ ಇಲ್ಲ…. ಹಾಗೇ ಕಾಲಿನ ನೋವು ಗುಣವಾಗುತ್ತಿದ್ದಂತೆ….ಆಸೆ ಕರಗಿಯೂ ಹೋಯಿತು…..!

1 ಟಿಪ್ಪಣಿ Post a comment
  1. ಜೂನ್ 14 2011

    ravi sir maguvina mugdhateyannu bahala chennagi vyakta padisiddiri, nammellara jeevanadallu nadediruvanta vichara idu adbhutavada baravanige, abhinandhanegalu

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments