ವಿಷಯದ ವಿವರಗಳಿಗೆ ದಾಟಿರಿ

ಜೂನ್ 20, 2011

3

‘ಅನ್ಯಾಯ’ದ ಮನೆಯೊಳಗಿನ ಆಶಾಕಿರಣ.

‍ನಿಲುಮೆ ಮೂಲಕ

– ಚಿತ್ರಾ ಸಂತೋಷ್

ದೆಹಲಿಯ ಜಿ.ಬಿ. ರಸ್ತೆಯಲ್ಲಿ ನನ್ನ ಪುಟ್ಟ ವಯಸ್ಸು, ಬದುಕು ಮೂರಾಬಟ್ಟೆಯಾಯಿತು ಅನಿಸಿತ್ತು. ನನ್ನ ವಿರುದ್ಧ ನಡೆಯುತ್ತಿರುವ ಅನ್ಯಾಯಗಳಿಗೆ ನನಗೆ ದನಿಯೆತ್ತಲೂ ನನ್ನ ಜೊತೆ ಯಾರಿರಲಿಲ್ಲ. ಆ ‘ಅನ್ಯಾಯ’ದ ಮನೆಯೊಳಗೆ ಪ್ರತಿ ನಿಮಿಷವೂ ನನ್ನ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಯುತ್ತಿತ್ತು. ಐದು ವರ್ಷ ಆ ‘ಸೆರೆಮನೆ’ ಅನುಭವಿಸಿದೆ.
ಅಮ್ಮ ಅಂದ್ರೆ ನನಗೆ ತುಂಬಾ ಪ್ರೀತಿ. ಅವಳಿಗೆ ಒಂದಿಷ್ಟು ನೋವಾದರೂ ಮನಸ್ಸು ಸಹಿಸುತ್ತಿರಲಿಲ್ಲ. ಕೆಲವೊಮ್ಮೆ ಅಮ್ಮ ಮನೆಯಲ್ಲಿದ್ದ ಕಷ್ಟಗಳನ್ನು ನೆನೆದು ಅಳುತ್ತಿದ್ದಳು. ತುಂಬಾ ಸಲ ಅಮ್ಮ ಅಳುವುದನ್ನು ನೋಡಿ ನಾನೂ ಕಣ್ಣೀರಾಗುತ್ತಿದ್ದೆ. ತಲೆಗೆ ಸೆರಗು ಹೊದ್ದು ಅಳುವ ಅವಳನ್ನು ನೋಡಲಾಗದೆ ಸಮಾಧಾನಿಸುತ್ತಿದ್ದೆ. ಬದುಕು ಬರಿದಲ್ಲ, ಅಮ್ಮ ದೊಡ್ಡವಳಾದ ಮೇಲೆ ನಾ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ತುಂಬುತ್ತಿದ್ದೆ. ಕೆಲವೊಮ್ಮೆ ನನಗೆ ದಿನನಿತ್ಯದ ಶಾಲೆಯ ಖರ್ಚು ಭರಿಸಲೂ ಕಷ್ಟವಾಗುತ್ತಿತ್ತು. ಆದರೂ, ಸಂಜೆ ಶಾಲೆಯಿಂದ ಹೊರಟಾಗ ಅಮ್ಮ ಏನು ತಿಂಡಿ ಮಾಡಿಟ್ಟಿರುತ್ತಾಳೆ ಅಂದುಕೊಂಡೇ ಹೊರಡುತ್ತಿದ್ದೆ.ಸಂಜೆಯಾಗುತ್ತಿದ್ದಂತೆ ಮನಸ್ಸೆಲ್ಲಾ ಮನೆಯಲ್ಲಿರುತ್ತಿತ್ತು. ಅಮ್ಮನ ನೋಡುವ ತವಕವಿತ್ತು. ಅಂದು ಸಂಜೆ ಎಂದಿನಂತೆ ಶಾಲೆಯಿಂದ ಹೊರಟಿದ್ದೆ. ಸುಮಾರು ಐದು ಗಂಟೆ. ಸೂರ್ಯ ಮುಳುಗಲು ಇನ್ನೂ ಕೆಲ ಸಮಯವಿತ್ತು. 

 

 

 

ನನ್ನ ಬೆಲೆ ೩೦೦ ರೂ!
ಅಮ್ಮ ಜಗುಲಿ ಮೇಲೆ ಕುಳಿತಿದ್ದಳು. ನನಗೆ ಅಮ್ಮನ ಕಾಣುವ ಹಂಬಲ, ಅವಳಿಗೆ ಮಗಳನ್ನು ಕಾಣುವ ವಾತ್ಸಲ್ಯ. ನನ್ನನ್ನೇ ಎದುರು ನೋಡುತ್ತಿದ್ದ ಆಕೆಯ ಮುಖದಲ್ಲಿ ನಾನು ಗೇಟು ದಾಟಿ ಹೋಗುತ್ತಿದ್ದಂತೆ ನಗು ಅರಳಿತು. ‘ಬಾ ಮಗಳೇ’ ಎಂದು ತೆಕ್ಕೆಗೆಳೆದುಕೊಂಡಳು. ಸೂರ್ಯ ಮುಳುಗಲು ಕ್ಷಣಗಳನ್ನು ಎಣಿಸುತ್ತಿದ್ದ. ಅಮ್ಮನೆದುರು ಕುಳಿತ ವ್ಯಕ್ತಿಯ ಹೆಸರು ಪ್ರವೀಣ್ ಪಂಡಿತ್. ಹೆಸರಷ್ಟೇ ಗೊತ್ತಿತ್ತು. ಅಮ್ಮ ಅವನ ಜೊತೆ ಅಷ್ಟು ಕೊಡು, ಇಷ್ಟು ಕೊಡು ಎಂದು ಚೌಕಾಸಿ ಮಾಡುತ್ತಿದ್ದಳು. ನನಗೊಂದೂ ಅರ್ಥವಾಗಲಿಲ್ಲ. ಅಮ್ಮ ಹೇಳಿದ ದುಡ್ಡಿಗೆ ಆತ ಒಪ್ಪಲೇ ಇಲ್ಲ. ಕೊನೆಗೆ ೩೦೦ ರೂ. ಕೊಡುತ್ತೇನೆ ಅಂದ. ಅಮ್ಮ ಒಪ್ಪಿಕೊಂಡು, “ಮಗಳೇ ನೀನು ಅಂಕಲ್ ಜೊತೆ ದೆಹಲಿಗೆ ಹೋಗಬೇಕು” ಎಂದು ಹೇಳಿದಳು.

ಅರ್ಥವಾಗದ ನಾನು ಅಮ್ಮನ ದುರುಗಟ್ಟಿ ನೋಡಿದ್ದೆ. ಅಮ್ಮನ ಬಿಟ್ಟು ಹೋಗುವುದು ಇಷ್ಟವೇ ಇರಲಿಲ್ಲ. ‘ಅಮ್ಮನ ನಾಳಿನ ದಿನ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಕನಸು ಕಾಣುತ್ತಿದ್ದ ನನಗೆ ಅಮ್ಮನ ಬಿಟ್ಟಿರಲು ಮನಸ್ಸು ಒಪ್ಪಲಿಲ್ಲ. ಅಮ್ಮ, “ನೀನು ಶಾಲೆಗೆ ಹೋಗುವುದು ಬೇಡ, ಈ ಅಂಕಲ್ ದೆಹಲಿಯಲ್ಲಿ ಮನೆಗೆಲಸಕ್ಕೆಂದು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನೀನು ಕೆಲಸ ಮಾಡಿದರೆ ನಾನು ಮತ್ತು ನೀನು ಸುಖವಾಗಿರಬಹುದು. ನಿನ್ನ ಓದಿಸಲು ನನ್ನ ಕೈಯಲ್ಲಿ ಕಾಸಿಲ್ಲ ಮಗಳೇ..” ಎಂದಾಗ ಅಮ್ಮನ ಮಾತು ಒಪ್ಪದಿರಲು ಸಾಧ್ಯವೇ ಆಗಲಿಲ್ಲ. ಅಮ್ಮ ಸುಖವಾಗಿರೋದಾದರೆ ನಾನು ಏನೂ ಮಾಡಲೂ ಸಿದ್ಧವಿದ್ದೆ. ನಾನು  ಹ್ಞೂಂ ಅಂದಿದ್ದೇ ತಡ, ಪ್ರವೀಣ್ ಅಮ್ಮನಿಗೆ ೩೦೦ ಕೊಟ್ಟರು!

ಐದು ವರ್ಷ ಸೆರೆಮನೆ…
ಅದು ೧೯೯೬ನೇ ಇಸವಿ. ನನಗೆ ಆಗ ೧೧ ವರ್ಷ. ಅಂದೇ ರೆಡಿಯಾದೆ. ಅರುಣಾಚಲ ಪ್ರದೇಶದ ಗರೋ ಬಸ್ತಿ ಎಂಬ ಪುಟ್ಟ ಹಳ್ಳಿಯಿಂದ ಪ್ರವೀಣ್ ಪಂಡಿತ್ ಜೊತೆ ದೆಹಲಿಯ ರೈಲು ಹತ್ತಿಯಾಯಿತು. ರೈಲು ಹತ್ತುವಾಗ ಅಮ್ಮ ಕಣ್ಣೀರು ತುಂಬಿದ ಕಣ್ಣುಗಳಲ್ಲೇ ನನಗೆ ಟಾಟಾ ಮಾಡಿದಳು. ತಲೆಗೆ ಸೆರಗುಹೊದ್ದು ಅವಳ ಮುಖ ಮಾತ್ರ ಕಾಣುತ್ತಿತ್ತು. ದೂರದೂರಿಗೆ ಹೊರಟ ಮಗಳು ಮರಳಿ ಬರುತ್ತಾಳೋ ಅನ್ನುವ ಭರವಸೆ ಅವಳಿಗೆ ಆಗ ಇತ್ತೋ ಇಲ್ಲವೋ ಅನ್ನೋದನ್ನೂ ಆ ನನ್ನ ವಯಸ್ಸು ಅರಿಯದಾಯಿತು. ಅರುಣಾಚಲದಿಂದ ದೆಹಲಿಗೆ ಪ್ರಯಾಣಿಸುವಾಗ ನನಗೆ ಕೇಳಿದ್ದೆಲ್ಲಾ ಆ ಅಂಕಲ್ ಕೊಡಿಸುತ್ತಿದ್ದ. ದೆಹಲಿಯಲ್ಲಿ ಆತನ ಜೊತೆಗೆ ಇಳಿದಾಗ ಭಯ ಆವರಿಸಿತ್ತು. ಆದರೂ ಅಮ್ಮನ ಕಷ್ಟಕ್ಕೆ ಹೆಗಲಾಗುತ್ತೇಂಬ ಖುಷಿ. ರೈಲಿನಿಂದಿಳಿದಾಗ ಸುತ್ತಮುತ್ತ ಪೊಲೀಸರು ಇದ್ದರು. ಅವರೇನೂ ನಮ್ಮನ್ನು ಪ್ರಶ್ನಿಸಲಿಲ್ಲ. ಅವರ ಪಾಡಿಗೆ ಅವರು ಕರ್ತವ್ಯ ನಿರತರಾಗಿದ್ದರು.

ಅಲ್ಲಿಂದ ಪ್ರವೀಣ್ ಪಂಡಿತ್ ನನ್ನನ್ನು ಒಂದು ಬೃಹತ್ ಲಾಡ್ಜಿಗೆ ಕರೆದುಕೊಂಡು ಹೋದ. ಮರುದಿನವೇ ೨೫ ಸಾವಿರ ರೂ.ಗೆ ನನ್ನನ್ನು ಬೇರೊಬ್ಬನಿಗೆ ಮಾರಾಟ ಮಾಡಲಾಯಿತು.ಅಲ್ಲಿಂದ ನನ್ನ ನರಕದ ಬದುಕು ಆರಂಭವಾಯಿತು. ಪ್ರತಿದಿನ ದೊಡ್ಡ ದೊಡ್ಡ ಅಧಿಕಾರಿಗಳು, ಉದ್ಯಮಿಗಳು…ಎಲ್ಲರಿಂದಲೂ ನಾನು ಅತ್ಯಾಚಾರಗೊಳಗಾದೆ. ಅಮ್ಮನ ಮೇಲೆ ಕೆಟ್ಟ ಸಿಟ್ಟು ಬರುತ್ತಿತ್ತು. ಆದರೆ, ನನಗೆ ನೀಡಿದ್ದ ಆ ಮನೆಯಿಂದ ಹೊರಬರುವುದು ಸಾಧ್ಯವಾಗಲಿಲ್ಲ. ದೆಹಲಿಯ ಜಿ.ಬಿ. ರಸ್ತೆಯಲ್ಲಿ ನನ್ನ ಪುಟ್ಟ ವಯಸ್ಸು, ಬದುಕು ಮೂರಾಬಟ್ಟೆಯಾಯಿತು ಅನಿಸಿತ್ತು. ನನ್ನ ವಿರುದ್ಧ ನಡೆಯುತ್ತಿರುವ ಅನ್ಯಾಯಗಳಿಗೆ ನನಗೆ ದನಿಯೆತ್ತಲೂ ನನ್ನ ಜೊತೆ ಯಾರಿರಲಿಲ್ಲ. ಆ ‘ಅನ್ಯಾಯ’ದ ಮನೆಯೊಳಗೆ ಪ್ರತಿ ನಿಮಿಷವೂ ನನ್ನ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಯುತ್ತಿತ್ತು. ಐದು ವರ್ಷ ಆ ‘ಸೆರೆಮನೆ’ ಅನುಭವಿಸಿದೆ.

ಹೊಸ ಹುಟ್ಟು
ಅದು ೨೦೦೧ನೇ ಇಸವಿ. ಒಂದು ರಾತ್ರಿ ನಾನಿರುವ ಸೆರೆಮನೆಗೆ ದಿಢೀರ್ ಪೊಲೀಸ್ ದಾಳಿಯಾಯಿತು. ಆ ಕ್ಷಣ ಪೊಲೀಸರೇ ನನ್ನ ಪಾಲಿಗೆ ದೇವರಂತೆ ಕಂಡರು. ಅಲ್ಲಿಂದ ನನ್ನ ಬಿಡಿಸಿ ನಿರ್ಮಲ್ ಛಾಯಾ ಅಬ್ಸ್‌ಸರ್ವೆಶನ್ ಹೋಮ್ ರ್ ಗರ್ಲ್ಸ್ ಎಂಬ ಎನ್‌ಜಿಒಗೆ ಕಳುಹಿಸಲಾಯಿತು. ಅದು ನನ್ನ ಬದುಕಿನಲ್ಲಿ ‘ವಿಷ್ಯದ ಕುರಿತು ನಂಬಿಕೆ ಹುಟ್ಟಿಸಿದ ಸಂಸ್ಥೆ. ೨೦೦೩ರಲ್ಲಿ ನನ್ನನ್ನು ಶಿಲ್ಲಾಂಗ್ ಮೂಲದ ಎನ್‌ಜಿಒ ಇಂಪಲ್ಸ್‌ಗೆ ಹಸ್ತಾಂತರಿಸಲಾಯಿತು. ಅಲ್ಲಿಂದ ನನ್ನ ಹೊಸ ಹುಟ್ಟು, ಹೊಸ ‘ಭರವಸೆ, ಹೊಸ ಬದುಕಿನ ಶುಭಾರಂಭ.

******

ಉತ್ತರ ಭಾರತದ ಕಡೆ ಹೋದರೆ ಗಲ್ಲಿ ಗಲ್ಲಿಗಳಲ್ಲಿ ಈ ಕಥೆಯನ್ನು ಹೇಳುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಹೆಣ್ಣು ಮಗಳೊಬ್ಬಳನ್ನು ಕಾಣಬಹುದು.

ಅವಳೇ ಇಳಾ ಸಂಗ್ಮಾ.
ತನ್ನ ಹನ್ನೊಂದನೇ ವಯಸ್ಸಿನಲ್ಲೇ ದೆಹಲಿಗೆ ಮಾರಾಟವಾದ ಆಕೆ, ಇಂಪಲ್ಸ್ ಎಂಬ ಎನ್‌ಜಿಒದ ಪರವಾಗಿ ಸಂಪನ್ಮೂಲ ವ್ಯಕ್ತಿಯಾಗಿ ದೇಶದ ಬಹುಭಾಗ ಸುತ್ತುತ್ತಿದ್ದಾಳೆ.  ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರಲ್ಲಿ ವೇಶ್ಯಾವಾಟಿಕೆ, ಮಹಿಳಾ ಕಳ್ಳಸಾಗಣೆ ಬಗ್ಗೆ ಅರಿವು ಮೂಡಿಸಬೇಕಾದರೆ ಯಾವುದೋ ಉದಾಹರಣೆ ನೀಡಿ ಭಾಷಣ ಮಾಡುವುದಿಲ್ಲ. ಬದಲಾಗಿ ತನ್ನ ಕಥೆಯನ್ನೇ ಜನರೆದುರು ಹೇಳುತ್ತಾಳೆ. ಇಂಥ ಸನ್ನಿವೇಶ ಎದುರಾದರೆ ಅದನ್ನು ಸಮರ್ಥವಾಗಿ ಹೇಗೆ ಎದುರಿಸಬೇಕು, ಅದಕ್ಕಾಗಿ ದೇಶದಲ್ಲಿ ಯಾವ್ಯಾವ ಸಂಸ್ಥೆಗಳು ಕೆಲಸ ಮಾಡುತ್ತವೆ ಎಂದು ಮಾಹಿತಿ ನೀಡುತ್ತಾಳೆ. ಒಂದು ವೇಳೆ ಇಂಥ ‘ಅನ್ಯಾಯ’ಗಳಾದರೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲಾರೆನೆಂದು ಅಸಹಾಯಕರಾಗಿ ಕೂರದೆ, ಸಮಾಜದೆದುರು ನಿಂತು ಎಲ್ಲರಂತೆ ಬದುಕಬೇಕೆಂದು ಥೇಟ್ ಟೀಚರ್ ತರ ಪಾಠ ಮಾಡ್ತಾಳೆ. ತನ್ನ ಕಥೆ ಹೇಳಲು ಅವಳಿಗೆ ಯಾವ ಮುಜುಗರವೂ ಇಲ್ಲ, ಅವಳ ಉದ್ದೇಶ ಇಷ್ಟೇ; ಅಸಹಾಯಕತೆಯ ಮಡುವಿನಲ್ಲಿ ಹೆಣ್ಣು ಮಕ್ಕಳ ಬದುಕು ಬರಿದಾಗಬಾರದು.
ಅವಳು ಇಳಾ ಸಂಗ್ಮಾ…
ಅವಳು ‘ಅನ್ಯಾಯ’ದ ಮನೆಯೊಳಗಿನ ಆಶಾಕಿರಣ.
3 ಟಿಪ್ಪಣಿಗಳು Post a comment
 1. Harish Shetty , Shirva
  ಜೂನ್ 20 2011

  Heart Touching…..

  ಉತ್ತರ
 2. ಜೂನ್ 20 2011

  really heart touching………………………

  ಉತ್ತರ
 3. ಜೂನ್ 20 2011

  ಮನ ಮಿಡಿಯುವ ಲೇಖನ.. ಮತ್ತು ಜನ ಜಾಗೃತಿಯ ಹೊಸ ಆಯಾಮ. ಧನ್ಯವಾದಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments