ವಿಷಯದ ವಿವರಗಳಿಗೆ ದಾಟಿರಿ

ಜೂನ್ 21, 2011

8

“ಪ.ಗೋ. ಕಾಲಂ” ಜಗತ್ತಿನಲ್ಲಿ ಪತ್ರಕರ್ತನಿಗೊಂದು “ಸರ್ಟಿಫಿಕೇಟ್”

‍ನಿಲುಮೆ ಮೂಲಕ

-ರವಿ ಮುರ್ನಾಡು

  ಪ.ಗೋ. ಜಗತ್ತಿನ ಪದಗಳ  ಹಂದರದಲ್ಲಿ ಒಬ್ಬ ” ವಿಲನ್‍” ಸೃಷ್ಠಿಯಾಗುತ್ತಾನೆ . ಅವನನ್ನು ಬುದ್ಧಿವಂತ ಹುಚ್ಚ ಅನ್ನುತ್ತೇವೆ. ಅದು ಕೊಡಿಯಾಲ್‍ ಬೈಲ್‍ ನವಭಾರತ ಪತ್ರಿಕೆಯಿದ್ದಾಗ ಪತ್ರಿಕಾ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್‍. ಅದಕ್ಕೆ ದಿವಂಗತ ಪ.ಗೋ.ರವರು “ಹಿತ್ತಾಳೆ ದೂರುಗಂಟೆ” ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ತಮ್ಮ ” ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು” ಸಂಕಲನದಲ್ಲಿ  ಹಿತ್ತಾಳೆ ದೂರುಗಂಟೆಯ ಪಾತ್ರಧಾರಿ  ವಿಲಕ್ಷಣವಾಗಿ ಎದ್ದು ನಿಲ್ಲುವಂತದ್ದು. ಹೀಗೂ ಉಂಟೆ…?! ಅನ್ನುವ ಒಂದು ಪ್ರಶ್ನೆ. ಪತ್ರಿಕಾ ಕಾರ್ಯಾಲಯದಲ್ಲಿ ಅಚಾನಕ್ಕಾಗಿ ಸೃಷ್ಠಿಯಾಗುತ್ತವೆ, ಇಲ್ಲದಿದ್ದರೆ ಸೃಷ್ಠಿಸುತ್ತಾರೆ . ಎಲ್ಲಾ  ಖಾಸಾಗಿ ಸಂಸ್ಥೆಯಲ್ಲಿ  ಇಂತಹ “ಶಕುನಿ”ಗೊಂದು ಹುದ್ದೆ ಉಂಟೇ ಉಂಟು. ಪ.ಗೋ.ರವರು ಮೌನವಾಗಿ ನವಭಾರತ ಕಚೇರಿ ಬಿಟ್ಟು ಹೋದಾಗ, ಕಚೇರಿಯ ಬಾಗಿಲಿಗೆ ತುಕ್ಕು ಹಿಡಿಯಬಾರದಿತ್ತೋ ಆನ್ನಿಸಿತು. ಬದುಕಿನ ಗೋಡೆ ಬಿರುಕಿಟ್ಟ ಸನ್ನಿವೇಶಕ್ಕೆ, ಪತ್ರಿಕಾ ಬದುಕಿಗೆ ಛೀಮಾರಿ ಹಾಕುವಷ್ಟು ವ್ಯಥೆಯಾಗುವಂತದ್ದು.

ಇವತ್ತಿಗೂ ಮಾತಾಡುತ್ತಿದೆ…. ಮನುಷ್ಯ ಬದುಕಿಗೆ  ಸವಾಲು ಹಾಕಿದ ಮಾತು.  “ನಾನು ಪತ್ರಿಕೆ ಹುಟ್ಟು ಹಾಕುವ ಕನಸು ಕಂಡಿದ್ದು ತಪ್ಪಾಯಿತು..!” ಅಂತ. ಬದುಕಿನ ಸ್ಥಿತ್ಯಂತರದಲ್ಲಿ ಒಮ್ಮೊಮ್ಮೆ ಕನಸುಗಳು ಈಟಿ ಇರಿದಂತೆ ಅಣಕಿಸುತ್ತವೆ. ಮಂಗಳೂರಿನ ಕಡಲ ಮರಳ ಕಣಗಳಿಗೆ ಇದರ ಪರಿಚಯ ಉಂಟು. ಅಲೆಗಳು ದಡಕ್ಕೆ ಬಡಿದು ಎಚ್ಚರಿಸಿ ಹೋಗುತ್ತಿವೆ… ಆ ಒಂದು ಜಗತ್ತಿನ ವಿಸ್ತಾರದಲ್ಲಿ ಜೀವನದ ಸಾರ್ಥಕ್ಯಕ್ಕೆ  ಮನಸ್ಸುಗಳು ತೆರೆದುಕೊಳ್ಳಲಿಲ್ಲ . ಪಡ್ಯಾನ ಗೋಪಾಲಕೃಷ್ಣರ  ರೆಕ್ಕೆ ಮುರಿದ ಮಾತುಗಳ ಹಕ್ಕಿಯ ಕಲರವ ಕೇಳಿಸುತ್ತಲೇ ಇದೆ…. ಕನಸುಗಳ ಮೂಟೆ ಹೊತ್ತ ದೋಣಿ ಕಡಲ ಮಧ್ಯದಲ್ಲಿ ಈಜುತ್ತಿದೆ….!

” ಪೇಪರ‍್ ಕೆಲ್ಸ  ಅದೇನು ಮಹಾ? ಕಾಸೆಸೆದ್ರೆ ಕೈ ನೆಕ್ಕೋ ನಾಯಿಗಳು  ಎಷ್ಟೋ ಸಿಗ್ತಾವೆ”  ಅಂತ ಒಂದು ಕಡೆ ಹೇಳುತ್ತಾರೆ. ಮಾತುಗಳು ಪದಗಳಾಗಿ ಮಾತಾಡುವಾಗ ನೈಜವಾದುದು ಅನ್ನಿಸಿತು.  ತನ್ನ ಸ್ವಂತಿಕೆ ಬಿಟ್ಟು, ಗುಲಾಮರಾಗುತ್ತಿರುವ ಇಂದಿನ ಸಮಾಜದಲ್ಲಿ, ಗುಲಾಮಗಿರಿಗೆ ಪರೋಕ್ಷವಾಗಿ ಪ.ಗೋ.ರವರು ಎಸೆದ ಬಾಣವಿದು. ಸ್ವಹಿತಾಸಕ್ತಿಗೆ “ತಿಗಣೆ”ಗಳ ಹಾಗೆ ರಕ್ತ ಕುಡಿಯುತ್ತಿರುವ ಸಮಾಜದ ಮುಖವಾಣಿ ಹೊತ್ತ  ಘನತೆಯ ಡಂಭರು, ಹೇಗೇ ಹೇಳಿದರೋ ಹಾಗೆ ಸೆರೆಹಿಡಿದು ಬಿಟ್ಟಿದ್ದಾರೆ. ನಾವೆಲ್ಲರೂ ಅಧುನಿಕ ಸಮಾಜದಲ್ಲಿ ವಿದ್ಯಾವಂತೆರೆನ್ನುವ ಶಾಲೆ-ಕಾಲೇಜುಗಳ ಸರ್ಟಿಫಿಕೇಟ್ ಗಿಟ್ಟಿಸಿ ದುಡಿಯುತ್ತಿರುವ ಗುಲಾಮರು. ಅದಕ್ಕೆ ಬ್ರಿಟೀಷರು  ಭಾರತ ಬಿಟ್ಟು ಹೋಗುವಾಗ ತರಬೇತಿ ನೀಡಿದ್ದ ಅವರ ನಾಯಿಗಳನ್ನು  ವಿವಿಧ ಹಂತದಲ್ಲಿ  ಪ.ಗೋ. ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಲಂ ಸಾಹಿತ್ಯ ಅನ್ನುವ ಹೊಸ ಒಂದು ಕನ್ನಡದ ಆಯಾಮವನ್ನು ಪ.ಗೋ.ಜಗತ್ತಿನಲ್ಲಿ ಕನ್ನಡ ಸಾಹಿತ್ಯ ನೋಡುತ್ತದೆ. ವಸ್ತುನಿಷ್ಠ ವಿಚಾರವನ್ನು ಹಾಗೇ ಪದಗಳಲ್ಲಿ ಕಟ್ಟಿ ಗಟ್ಟಿಗೊಳಿಸಿದ ಉದಾಹರಣೆಗೆ ಇನ್ನೊಂದು  ಇತಿಹಾಸವನ್ನು ನೋಡಿಲ್ಲ. ಅದು ದೇಹವಿಲ್ಲದೆಯೂ ಮಾತಾಡುವಂತದ್ದು. ಕೆಲವೊಂದು ವಿಷಯಗಳು ಪಿಸುಮಾತಾಗಿದ್ದು. ನೇರವಾಗಿ ಜಗತ್ತನ್ನು ತೆರೆದು ಘಟನೆಯನ್ನು ನಿರೂಪಿಸುವ ತಂತ್ರ, ಈಗಿನ ಹಲವರು ಅನುಸರಿಸುತ್ತಿರುವುದಕ್ಕೆ ಸಾಕ್ಷಿಗಳು ಸಿಗುತ್ತವೆ. ಮನುಷ್ಯ ಈ ಜಗತ್ತು ಬಿಟ್ಟು ಹೋಗುವಾಗ ಏನಾದರು ಉಳಿಸಿ ಹೋಗಿದ್ದರೆ ನೆನಪಾಗುತ್ತಾನೆ. ಅದರಲ್ಲೂ ತನ್ನದೇ ಆದ ಸ್ವಂತಿಕೆಯನ್ನು ಇತರರು ಅನುಸರಿಸುವಂತೆ ಮಾಡುವುದು ಇನ್ನೋ ದೊಡ್ಡ ಮಾತು. ಅದಕ್ಕೆ ಮೈಕೆಲ್ ಜಾಕ್ಸನ್ ಉದಾಹರಣೆ. ಅಂದರೆ,ತನ್ನದೇ ಜಗತ್ತಿನ ಒಂದು ಹೆಜ್ಜೆ ಗುರುತನ್ನು ಪ.ಗೋ.ರವರು ಬಿಟ್ಟು ಹೋದರು. ಇಂದಿಗೂ ಅದರ ನಿಜದ ಆಳವನ್ನು ಅಳತೆ ಮಾಡಲಾಗಲಿಲ್ಲ. ಈ ತಲೆಮಾರು, ಮತ್ತೊಂದು ತಲೆಮಾರಿಗೂ… ಪ.ಗೋ. ಕಾಲಂ ಸಾಹಿತ್ಯದ ಮೊನಚು ಜೀವಂತವಾಗಿರುತ್ತದೆ.

ಗಬ್ಬೆದ್ದು ನಾರುತ್ತಿರುವ ಸಮಾಜದ ಕೊಳೆಯನ್ನು ತೊಳೆಯುವ ಪತ್ರಕರ್ತನಿಗೆ ತನ್ನ ಮೈ ಮೇಲಿರುವ ಕೊಳೆಯ ಬಗ್ಗೆ ಅರಿವಿರುವುದಿಲ್ಲ. ಈ ವಾಕ್ಯಕ್ಕೆ ಒಗ್ಗುವ ಪತ್ರಕರ್ತರ ಒಂದು ಗುಂಪು ಉಂಟು. ಅಂದ ಹಾಗೆ ತೊಳೆಯಲು ಸಮಯವೂ ಇರುವುದಿಲ್ಲ. ಈ ವಾಕ್ಯಕ್ಕೂ ಒಗ್ಗುವ ಪತ್ರಕರ್ತರ ಗುಂಪೂ ಉಂಟು. ಅದಕ್ಕೆ ಉದಾಹರಣೆಗೆ ಸಿಗುವವರು ದಿ. ಪ. ಗೋ.ರವರು. ಬದುಕಿನ ಸವಾಲುಗಳನ್ನು  ಸ್ವೀಕರಿಸುವುದು ಅಂದರೆ, ಅರ್ಧ ವಯಸ್ಸು ಮುಗಿದಂತೆ.  ಒಂದೇ ದಿಕ್ಕಿಗೆ ಛಲ ಬಿಡದ ವಿಕ್ರಮನಂತೆ ಅಲೆದಾಡುವುದು ವಿಸ್ತ್ರುತ ಬದುಕಿನಲ್ಲಿ ಮೈಲುಗಲ್ಲಾಗುವಂಹದ್ದು. ಅದನ್ನು ಅವರು ಮಾಡಿದರು. ’ವಿಶ್ವ ಕರ್ನಾಟಕ” ಪತ್ರಿಕೆಯಿಂದ  ತಮ್ಮದೇ ಆದ ” ವಾರ್ತಾ ಲೋಕ ” ಪತ್ರಿಕೆಯವರೆಗೆ  ಕಪ್ಪು ಮಸಿಯೊಂದಿಗೆ ನಡೆಸಿದ ಹೋರಾಟದ  ಇತಿಹಾಸ ಅವರು ಬಿಟ್ಟು ಹೋದ ಲೇಖನಿಯಲ್ಲಿ ಅಡಗಿ ಕುಳಿತಿದೆ. ಒಂದು ಹಂತದಲ್ಲಿ ” ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು” ಸಂಕಲನ ವಸ್ತುನಿಷ್ಠ ಪತ್ರಕರ್ತನ ಬದುಕು ಅನ್ನುವುದಕ್ಕೆ ಇನ್ನೊಂದು ಹೆಸರು. ಪತ್ರಿಕೆ ಕೈಯಲ್ಲಿಡಿದು ಓದುತ್ತಿರುವ  ಓದುಗನಿಗೆ,ಆ ದಿನದ ಸುದ್ಧಿಗಳು ಮತ್ತು ಪುಟಗಳು ಸುಂದರವಾಗಿ ಕಾಣುತ್ತವೆ. ಅದರ ಹಿಂದಿನ ಶ್ರಮದ ಕೈಗಳು ಅಗೋಚರ. ಅದರ ಪ್ರತಿಫಲ ಉಣ್ಣುವುದು ಪತ್ರಿಕೆ ಮತ್ತು  ಅದರ ಸಂಪಾದಕ. ಈ ವಸ್ತುಸ್ಥಿತಿಯನ್ನು ಸ್ಪಷ್ಟವಾಗಿ ಪ.ಗೋ.ರವರು ಪದಗಳಲ್ಲಿ ಕಟ್ಟಿ ಇಟ್ಟಿದ್ದಾರೆ.

ಯಾವುದೇ ಪತ್ರಿಕೆಯನ್ನು ಕೈಗೆತ್ತಿಕೊಂಡರೂ, ಸ್ಪಷ್ಟವಾಗಿ ಹೇಳುವ ಒಂದು ಉತ್ತರ ಉಂಟು. ಅದು ಒಂದು ದಿಕ್ಕಿಗೆ ವಾಲಿಕೊಂಡಿರುವುದು. ಅದು ರಾಜಕೀಯವಿರಬಹುದು, ಜಾತಿ-ಪಂಥ ಮತ್ತು ವ್ಯಕ್ತಿಗತ ” ಪರಾಖ್”ಗಳಿಗೆ ಅಂಟಿಕೊಂಡಂತೆ. ಇದು ಅವುಗಳ ಧರ್ಮ ಅಂತ ಅವುಗಳು ಪ್ರತಿಪಾದಿಸುತ್ತವೆ. ಅದರಲ್ಲಿ ಎಷ್ಟು ಪತ್ರಿಕೆಗಳು ಸಮಾಜವನ್ನು ದಿಕ್ಕು ತಪ್ಪಿಸುವ ಮಾರ್ಗ ಹಿಡಿದು “ಪೀತ” ಪತ್ರಿಕೆಗಳ ಪಟ್ಟಿಯಲ್ಲಿವೆಯೋ ಎಂದು ವಿಶಾಲ ಮನಸ್ಸಿನ ಓದುಗರೇ ನಿರ್ಧರಿಸಬೇಕು.

ದಿನ ಬೆಳಗಾಗುವುದರೊಳಗೆ ಲಕ್ಷಾಂತರ ಪತ್ರಿಕೆಗಳು ಕಾಗದಗಳಲ್ಲಿ- ಅಂತಾರ್ಜಾಲಗಳಲ್ಲಿ ಪ್ರಕಟಗೊಳ್ಳುತ್ತವೆ. ಕನ್ನಡ ಜಾಗ್ರತಿಯ ಬಗ್ಗೆ ರಾಗ ಎಳೆಯುವ ನಾವು “ಕನ್ನಡದ ಸ್ವಂತಿಕೆಯ ಪತ್ರಿಕೋದ್ಯಮವನ್ನು ಕಾಣುತ್ತಿದ್ದೇವೆಯೇ ಅನ್ನೋದಕ್ಕೆ ಒಂದು ನಿಮಿಷ  ಆಲೋಚನೆ ಮಾಡುತ್ತೇವೆ. ಕನ್ನಡದ ಬಗ್ಗೆ ಮಾತಾಡುವಾಗ ಅನ್ಯ ಭಾಷೆಯನ್ನು ಯದ್ವಾ-ತದ್ವಾ ತರಾಟೆಗೆ ತೆಗೆದುಕೊಳ್ಳುವುದು ನಮ್ಮೊಳಗೇ ಉದ್ಭವಿಸುವ ಆವೇಶ. ಇವತ್ತು ಕನ್ನಡ ಅಭಿಮಾನವನ್ನು ಭಿತ್ತರಿಸಲು ಕನ್ನಡ ಪತ್ರಿಕೆಗಳಲ್ಲಿ ಬ್ರಿಟೀಷ್ ಸಿದ್ಧಾಂತ- ವಿಧಾನಗಳ ಅಳವಡಿಸಿಕೊಳ್ಳಬೇಕಾಯಿತು. ಪ.ಗೋ. ಇತ್ತೀಚಿನವರೆಗೂ ಹೇಳಿದ್ದರು, ಭಾರತದಲ್ಲಿ ಪತ್ರಿಕೆಗಳ ಪರಿಚಯ ಮಾಡಿಕೊಟ್ಟವರು ಇಂಗ್ಲೀಷರು. ಮೊತ್ತಮೊದಲ ಭಾರತದ ಸಂಪಾದಕ ಭಾರತೀಯರು ಅಂತ ಎದೆತಟ್ಟಿಕೊಳ್ಳುವ ಉದಾಹರಣೆಯಿಲ್ಲ. ಭಾರತದ ಮೊತ್ತಮೊದಲ ಸಂಪಾದಕ ಜೇಮ್ಸ್ ಗಸ್ಟಸ್ ಹಿಕ್ಕಿ ಎಂಬ ಬ್ರಿಟೀಷನಿಗೆ ಈ ಗೌರವ ಸಲ್ಲುತ್ತದೆ. ಈ ವಿಷಯವನ್ನು ತಮ್ಮ ಬರಹ ಬದುಕಿನಲ್ಲಿ ಸೇರಿಸುವಾಗ  ಕನ್ನಡ ಜಾಗೃತಿಯ ಬಗ್ಗೆ ಪ.ಗೋ.ರವರು  ಉತ್ತರ ಕೊಟ್ಟು ಹೋಗಿದ್ದಾರೆ. ಕನ್ನಡ ಅಭಿಮಾನದ ಬಗೆಗಿನ  “ಸ್ಲೋಗನ್‍”ಗೆ ಯಾವ ನಂಟು? ಬ್ರಿಟೀಷರು  ಊಟ ಮಾಡಿ ತೊಳೆಯದೇ ಇಟ್ಟ ಅವರ ತಟ್ಟೆಗಳು ಈಗಲೂ ಇದೆ. ಅದನ್ನು ತೊಳೆಯದೆ ಅದರಲ್ಲೆ ಊಟ ಮಾಡುವ ಕನ್ನಡದ ಸ್ವಂತಿಕೆಯ ಬಗ್ಗೆ ಬೊಬ್ಬೆ ಹೊಡೆಯುವ ಸಂಸ್ಥೆಗಳಿಗೆ- ಪತ್ರಿಕೆಗಳಿಗೆ ಪ.ಗೋ. ಪರೋಕ್ಷವಾಗಿ  ಖೇಧ ವ್ಯಕ್ತ ವ್ಯಕ್ತಪಡಿಸಿದ ಸನ್ನಿವೇಶಗಳುಂಟು.

“ಬಾಯಾರಿಕೆಯಾದರೆ ಮಸಿ ಕುಡಿದು, ಹಸಿವೆಯಾದರೆ ನ್ಯೂಸ್‍ಪ್ರಿಂಟ್ ಕಾಗದಗಳನ್ನೇ ಹರಿದು ತಿನ್ನುವವನೇ ಪತ್ರಿಕೋದ್ಯಮಿ” ಅಂತ ಪತ್ರಿಕಾ ಜಗತ್ತಿಗೆ ಒಂದು ಹೆಸರು ಬರೆದ ಪ.ಗೋ., ಅದನ್ನು ಸ್ವತಃ ಅನುಭವಿಸಿಯೇ ಭಾಷ್ಯಾ ಬರೆದರು. ತಡ ರಾತ್ರಿಯವರೆಗೂ ಕೆಲಸ ಮಾಡಿ ನೀರೆನ್ನುವ ಜಾಗದಲ್ಲಿ ಮಸಿ ಕುಡಿದ ಅವರ ಘಟನೆ ಪತ್ರಿಕಾ ಬದುಕಿನ ಇತಿಹಾಸದಲ್ಲಿ  ಅಚ್ಚಳಿಯದೆ ಉಳಿಯುವ ವ್ಯಥೆ. ಇದೇ ಪ.ಗೋ.ರಂತಹ ಹಲವರು ಈಗ ಇತಿಹಾಸವಾಗಿದ್ದಾರೆ. ಕೆಲವರು ಹೇಳ ಹೆಸರಿಲ್ಲದಂತೆ. ಅದು ಆ ಪತ್ರಿಕೆಯ ಉನ್ನತಿ ಮತ್ತು ಅದರ ಚಲಾವಣೆಯಲ್ಲಿ ಕಂಡು ಬರುವುದಿಲ್ಲ. ಬದುಕಿದ್ದಾಗ ಹೆಸರಿತ್ತು, ಇಲ್ಲವಾದ ಮೇಲೆ ಆ ಜಗತ್ತೇ ಮಾಯಾವಾಗುತ್ತವೆ. ಪತ್ರಿಕೆಯ ಕಾರ್ಯ ತಂತ್ರದಲ್ಲಿ ಹೊಸತೊಂದು ಮಾದರಿಯನ್ನು ಅವರು ತಂದಿದ್ದರೂ ಕೂಡ ತಂತ್ರ ನಡೆಯುತ್ತಿರುತ್ತದೆ, ವ್ಯಕ್ತಿ ಇರುವುದಿಲ್ಲ. ಪ.ಗೋ.ರವರ ವಿಷಯದಲ್ಲಿ ಇದು ಭಿನ್ನವಾಗಿರುವಂತಹದ್ದು, ಅವರೂ ಇದ್ದಾರೆ  ಅನ್ನುವ ತಂತ್ರವೂ ಉಂಟು.

ಕನಸುಗಳ ಬಗ್ಗೆ ಒಂದಿಷ್ಟು ಮಾತಾಡುವಾಗ,ಆಶಾಭಾವನೆಯ ಬಗ್ಗೆ ಸಂಶಯ ಪಡುವಂತಾಗುತ್ತದೆ. ಭಿಕ್ಷುಕನೂ ರಾಜನಾಗುವ ಕನಸು ಕಾಣುವುದು ತಪ್ಪು ಅಂತ ಕಾನೂನು ಸಿದ್ಧವಾದರೋ?. ಹಾಗಿದ್ದಲ್ಲಿ, ಮನುಷ್ಯನ ಮನಸ್ಸಿಗೊಂದು ಸಂವಿಧಾನ ಸೃಷ್ಥಿಯಾಗಬೇಕಾಗುತ್ತದೆ. ತಾನೆ ಪ್ರೀತಿಸಿದ  ವೃತ್ತಿಯಲ್ಲಿ ತನ್ನದೊಂದು ವ್ಯವಸ್ಥೆಯನ್ನು ಕಲ್ಪಿಸುವ ಕನಸನ್ನು ಕಾಣುವುದು ತಪ್ಪೆ ಅನ್ನುವ ಪ್ರಶ್ನೆ ಪ.ಗೋ. ಬದುಕಿನಲ್ಲಿ ಕಾಣುವಂತದ್ದು. ತಾನೊಂದು ಬಗೆದರೆ ವಿಧಿ ಇನ್ನೊಂದು ಬರೆಯಿತು ಅನ್ನುವಂತಾಯ್ತು. ಕನಸು ಹಾಗಿರಲಿ, “ಬದುಕಿಗಾಗಿ ಹೋರಾಡುವುದು” ಮುಖ್ಯ ಅಂತ  ” ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು” ಸಂಕಲನದಲ್ಲಿ  ಸಾರ ದಾಖಲಾಗಿದೆ. ತುಕ್ಕು ಹಿಡಿದ ಸಮಾಜದ ಬದಲಾವಣೆಗೆ  ಪತ್ರಕರ್ತ ಸಮಾಜದ ಒಳಿತಿಗಾಗಿ ಬದುಕನ್ನು ಕಂಡುಕೊಳ್ಳುತ್ತಾನೋ ಅಥವಾ ಬದುಕಿಗಾಗಿ ಪತ್ರಕರ್ತನಾಗುತ್ತಾನೋ ಅನ್ನುವುದು ಪ.ಗೋ. ಬದುಕಿನಲ್ಲಿ ಕಂಡುಕೊಳ್ಳಬೇಕಾದ ಉತ್ತರ.

*********************

8 ಟಿಪ್ಪಣಿಗಳು Post a comment
 1. Thimmappa Suryanarayanarao Manchale
  ಜೂನ್ 21 2011

  ಹೃದಯಸ್ಪರ್ಷಿ ಲೇಖನ, ಅವರ ವ್ಯಕ್ತಿತ್ವ, ಅದರ ಮೊನಚು, ಸಮಗ್ರತೆ ಮನ ಮತ್ತುವಂತೆ, ಮೈ ಜುಂ ಅನ್ನುವಂತೆ ನಿರೂಪಿಸಿದ್ದಾರೆ. ಈ ರೀತಿ ಪರಿಚಯಿಸಿದ ಲೇಖಕರಿಗೂ, ಪ್ರಕಟಿಸಿದ ಸಂಪಾದಕರಿಗೂ ಅಭಿನಂದನೆಗಳು. ~ ಎಂ. ಎಸ್. ತಿಮ್ಮಪ್ಪ.

  ಉತ್ತರ
 2. manju787
  ಜೂನ್ 21 2011

  ಒಬ್ಬ ಧೀಮ೦ತ ಪತ್ರಕರ್ತನನ್ನು ನೆನಪಿಸಿದ ರೀತಿ, ಈಗಲೂ ಜನ ಅವರನ್ನು ನೆನಪಿಸಿಕೊ೦ಡು ಮಾತನಾಡುವ ರೀತಿ, ನಿಜಕ್ಕೂ ಅದ್ಭುತ! ಬದುಕಿದರೆ ನೋಡಿ ಬದುಕಬೇಕು ಪಗೋರ೦ತೆ! ಈ ಮಾತು ಇ೦ದಿನ ಅದೆಷ್ಟೋ ಜೊಳ್ಳು ಪತ್ರಕರ್ತರಿಗೆ ಅನ್ವಯ!! ಪಗೋರ ಬದುಕು ಅವರಿಗೆ ಮಾರ್ಗದರ್ಶಿಯಾಗಲಿ ಎ೦ದು ಹಾರೈಸುವೆ.

  ಉತ್ತರ
 3. ಜೂನ್ 22 2011

  ಭಿಕ್ಷುಕನೂ ರಾಜನಾಗುವ ಕನಸು ಕಾಣುವುದು ತಪ್ಪು ಅಂತ ಕಾನೂನು ಸಿದ್ಧವಾದರೋ?. ಹಾಗಿದ್ದಲ್ಲಿ, ಮನುಷ್ಯನ ಮನಸ್ಸಿಗೊಂದು ಸಂವಿಧಾನ ಸೃಷ್ಥಿಯಾಗಬೇಕಾಗುತ್ತದೆ. ತಾನೆ ಪ್ರೀತಿಸಿದ ವೃತ್ತಿಯಲ್ಲಿ ತನ್ನದೊಂದು ವ್ಯವಸ್ಥೆಯನ್ನು ಕಲ್ಪಿಸುವ ಕನಸನ್ನು ಕಾಣುವುದು ತಪ್ಪೆ ಅನ್ನುವ ಪ್ರಶ್ನೆ ಪ.ಗೋ. ಬದುಕಿನಲ್ಲಿ ಕಾಣುವಂತದ್ದು.
  ಸೂಪರ್

  ಉತ್ತರ
 4. ಜೂನ್ 22 2011

  ಪತ್ರಕರ್ತರ ಬಗ್ಗೆ ಸ್ವಲ್ಪವಾದರೂ ತಿಳಿಯಲಾರಂಭಿಸಿದ್ದು, ವಿಜಯ ಕರ್ನಾಟಕದಲ್ಲಿ ಬರುತ್ತಿದ್ದ.. ಪತ್ರಿಕೆ ಮತ್ತು ಪತ್ರಕರ್ತರ ಬಗೆಗಿನ ಅಂಕಣ “ಸುದ್ದಿಮನೆ…”. ಅಂದಿನಿಂದ, ನನಗೆ ಪತ್ರಕರ್ತರ ಬಗೆಗೆ ಕುತೂಹಲ, ಹಲವರ ಬಗೆಗೆ ಗೌರವ ಕೂಡ ಹೆಚ್ಚಾಯಿತು. ಅಂದಿನಿಂದಲೂ, ಪತ್ರಕರ್ತರ ಬಗೆಗಿನ ಬರಹಗಳೆಂದಾಗ ಅದೇನೋ ಕುತೂಹಲ, ರೋಮಾಂಚನ ಹಲವು ಬಾರಿ. ಈ ಲೇಖನ ಪ.ಗೋ ಅವರ ಬಗ್ಗೆ ತಿಳಿಸಿ ಮತ್ತೆ ಪತ್ರಕರ್ತರ ಬಗೆಗಿನ ನನ್ನ ಕುತೂಹಲ, ರೋಮಾಂಚಕತೆಯನ್ನ ಸಮಾಧಾನಿಸಿದೆ. ಮತ್ತೊಮ್ಮೆ ಗೌರವ ತಂದಿಟ್ಟಿದೆ. ರವಿ ಮೂರ್ನಾಡುರವರಿಗೆ ಧನ್ಯವಾದಗಳು. ಇಂತಹ ಅಪರೂಪದ ಪತ್ರಕರ್ತರನ್ನ ಇಷ್ಟು ವಿಶದವಾಗಿ ವಿವರಿಸಿ ಪರಿಚಯಿಸಿದ್ದಕ್ಕೆ, ನಾವು ಕೃತಜ್ಞರಾಗಿದ್ದೇವೆ. ನಿಜವಾಗಿಯೂ ಇಂದಿನ “ಸೋ-ಕಾಲ್ಡ್ ಮೀಡಿಯಾದ ಜನ”ಗಳಿಗೆ ಇವರುಗಳು ಆದರ್ಶರಾಗಿ ನಿಲ್ಲದೇ ಇರುವುದು ವಿಶಾದನೀಯ. ಇನ್ನೊಬ್ಬರನ್ನ ತೆಗಳುವುದೇ ಫ್ಯಾಷನ್ ಮಾಡಿಕೊಂಡಿರುವ, ಅದೇ ವೃತ್ತಿಧರ್ಮವೆಂದುಕೊಂಡಿರುವ ಇಂದಿನ ಹಲವು ಹಿರಿಯ, ಕಿರಿಯ ಪತ್ರಕರ್ತರು ಇಂತವರಿಂದ ಎಂದು ಕಲಿಯುತ್ತಾರೋ.

  ನಿಮ್ಮೊಲವಿನ,
  ಸತ್ಯ.. 🙂

  ಉತ್ತರ
 5. ಜೂನ್ 22 2011

  ಶ್ರೀಮಾನ್ ಪ. ಗೋ. ರವರು ತನ್ನ ಜೀವಿತಾವಧಿಯಲ್ಲಿ ನಾಲ್ಕು ದಶಕಗಳಿಗೂ ಅಧಿಕವಾಗಿ ಪತ್ರಕರ್ತನಾಗಿ, ಪತ್ರಿಕೋದ್ಯಮಿಯಾಗಿ ವಿವಿಧ ಪತ್ರಿಕೆಗಳಲ್ಲಿ ದುಡಿದು ಶಾಯಿ,ಕಾಗದಗಳ ನಡುವಿನ ಬದುಕಿನ ಒಳಹೊರಗಿನ ಸೂಕ್ಷ್ಮಾತಿಸೂಕ್ಷ್ಮಗಳು …ಆ ಕಾಲದಲ್ಲಿಯೂ ಯಾವುದೇ ಇಲಾಖೆಯಲ್ಲಿಯೂ ಶಕ್ತನಾಗಿ ದುಡಿಯುವ ನಿಷ್ಟಾವಂತ ಉದ್ಯೋಗಿಗಳ ಕಾಲನ್ನು ಅನಾವಶ್ಯಕವಾಗಿ, ಅಕಾರಣವಾಗಿ ಎಳೆಯುವ ಶಕುನಿ ಬುದ್ದಿಯವರ ಬಗೆಗೂ ವಿಸ್ತಾರವಾಗಿ ಬರೆದು ಪತ್ರಿಕಾರಂಗದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದುಗಳ ಬಗ್ಗೆ ಮುಂದಿನ ಪೀಳಿಗೆಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಇಂದಿನ ಪತ್ರಿಕೊದ್ಯಮವವು ಎತ್ತ ಸಾಗುತ್ತಿದೆ…? ಪತ್ರಿಕಾಗೋಷ್ಠಿ ನಡೆಸಿ, ಕೊನೆಯಲ್ಲಿ ಪ್ರಕಟಿಸಬೇಕಾದ “ವಿಷಯ” ದ ಕವರ್ ನೊಂದಿಗೆ “ಇನ್ನೊಂದು” ಕವರನ್ನು ಕೊಟ್ಟಾಗ ಮಾತ್ರ ಆ ಗೋಷ್ಠಿಯಲ್ಲಿ ನಡೆದ ಚರ್ಚೆಗಳ ಮಹತ್ವದ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗುವ ಭಾಗ್ಯ ಕಂಡೀತು. “ವಿಷಯ”ದೊಂದಿಗೆ “ಇನ್ನೊಂದು” ಕವರ್ ದಕ್ಕಿಲ್ಲವಾದಲ್ಲಿ ಅವರಿಗೆ ಏನು ಬರೆಯಲು ತೋಚುತ್ತದೋ “ಆ” ವಿಷಯಮಾತ್ರ ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿನ ಒಂದು ಕಾಲಂ ನಲ್ಲಿ ಕೆಲವೇ ಸೆಂಟಿ ಮೀಟರ್ ನ ಸುದ್ದಿಯಾಗಿ ಕಣ್ಣಿಗೆ ಕಂಡೂ ಕಾಣಿಸದಂತೆ

  ಮೂಡಿಬಂದರೆ ಆಶ್ಚರ್ಯವಾಗದು. ಶ್ರೀಯುತ ಪ.ಗೋ. ರವರ ಪತ್ರಿಕಾಕರ್ತನ ಜೀವಿತವಿಧಾನ, ಏಳುಬೀಳುಗಳು, ಆದರ್ಶ, ಇಂದಿನ ಪತ್ರಿಕಾಕರ್ತರಿಗೆ ಅದ್ಭುತ ಮಾರ್ಗದರ್ಶನದಂತಿದೆಯಾದರೂ ಯಾವೊಬ್ಬನೂ ಅದನ್ನು ಅನುಸರಿಸುವ ಯೋಚನೆಯನ್ನೇ ಮಾಡಲಾರ. ಯಾಕೆಂದರೆ ಇಂದು ನಡೆಯುತ್ತಿರುವುದು ಪತ್ರಿಕೋದ್ಯಮವಲ್ಲ….ಕೇವಲ “ಉದ್ಯಮ” ಮಾತ್ರ! ಪ.ಗೋ ರವರವ ಆದರ್ಶ ವ್ಯಕ್ತಿತ್ವವನ್ನು ಬರೆದು ಮೂಡಿಸುವ ಪ್ರಯತ್ನ ಮಾಡಿರುವ ಶ್ರೀ ರವಿ ಮೂರ್ನಾಡು ರವರಿಗೆ ಧನ್ಯವಾದಗಳು. —–ವಿಜಯ್ ಸುವರ್ಣ, ಕತಾರ್ ನಿಂದ.

  ಉತ್ತರ
 6. ರವಿ ಮುರ್ನಾಡು
  ಜೂನ್ 22 2011

  ಬರಹದ ಆಳಕ್ಕಿಳಿದ ಸಹೃದಯರಿಗೆ ಧನ್ಯವಾದಗಳು.

  ಉತ್ತರ
 7. Dr. B A Viveka Rai ,Würzburg -Germany
  ಜೂನ್ 23 2011

  ಪಗೋ ಅವರು ಒಬ್ಬ ತತ್ವನಿಷ್ಟ ಪತ್ರಕರ್ತ ಆಗಿದ್ದರು. ಸೂಕ್ಷ್ಮ ಒಳನೋಟ , ಪ್ರಗತಿಪರ ಚಿಂತನೆ , ನೇರ ಬರವಣಿಗೆ -ಅವರ ವಿಶಿಷ್ಟ ಗುಣಗಳು.

  ಉತ್ತರ
 8. ಜೂನ್ 23 2011

  ಗಬ್ಬೆದ್ದು ನಾರುತ್ತಿರುವ ಸಮಾಜದ ಕೊಳೆಯನ್ನು ತೊಳೆಯುವ ಪತ್ರಕರ್ತನಿಗೆ ತನ್ನ ಮೈ ಮೇಲಿರುವ ಕೊಳೆಯ ಬಗ್ಗೆ ಅರಿವಿರುವುದಿಲ್ಲ woooow, ravi anna neevu saha patrike prarambhisi e kashta kotalegalannella edurisi bandavare allave

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments