ವಿಷಯದ ವಿವರಗಳಿಗೆ ದಾಟಿರಿ

ಜೂನ್ 22, 2011

3

ಮಂಜುನಾಥನ ದಯೆ ಇರಲಿ!!!

‍ನಿಲುಮೆ ಮೂಲಕ

 ಅರೆಹೊಳೆ ಸದಾಶಿವ ರಾವ್

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ,

ನಿನಗೊಂದು  ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದೀತು ಎಂದು ನಾವು ಅಂದುಕೊಂಡಿರಲಿಲ್ಲ. ಒಂದು ನಂಬುಗೆ ಇದೆ. ಅದೆಂದರೆ, ನಿನ್ನ ಬಳಿ  ಯಾವುದೇ ಭಕ್ತ ಬಂದು, ತನ್ಮಯತೆಂದ ಏನಾದರೂ ಕೇಳಿಕೊಂಡರೆ, ಕಷ್ಟ ಪರಿಹಾರವಾಗಿ, ಕೋರಿಕೆ ನೆರವೇರುತ್ತದೆ ಎಂದು. ಆದರೆ ತಪ್ಪು ಮಾಡಿದವರನ್ನು ನೀನೇ ನೋಡಿಕೊಳ್ಳುತ್ತಿ ಎಂದು ಒಮ್ಮೆ ಬಾಮಾತಿನಲ್ಲಿ ಹೇಳಿದರೂ, ಮತ್ತೆ ಅದನ್ನು ಹಿಂಪಡೆಯಲು ನಿನ್ನ ಬಳಿಯೇ ಬರಬೇಕಾಗುತ್ತದೆ. ವಿಷಯವನ್ನು ನಿನ್ನ ಮಡಿಲಿಗೆ ಹಾಕಿ ಬಿಟ್ಟರೆ, ಫಲಾಫಲ ನಿನ್ನ ಇಚ್ಛೆಯಂತೆ ನಡೆಯುತ್ತದೆ ಮತ್ತು ಇದು ಇಡೀ ಕುಟುಂಬಕ್ಕೇ ಅನ್ವುಸುತ್ತದೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಡೀ ರಾಜ್ಯ ಅಥವಾ ದೇಶದ ಕುಟುಂಬವೇ ಒಂದಾಗಿ ಒಬ್ಬ ಯಜಮಾನನನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ. ನಮ್ಮ ದುರಾದ್ರಷ್ಟವೆಂದರೆ ಅದಾದ ಮೇಲೆ ನಮಗೆ ಅಂತಹ ಯಜಮಾನನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಆಗೆಲ್ಲಾ ನಾವು ನಮ್ಮನ್ನು ದೇವರೇ ಕಾಪಾಡಬೇಕು ಎಂದುಕೊಂಡು ನಿನ್ನ ತಲೆಯ ಮೇಲೆ ಭಾರ ಹಾಕಿ ಸುಮ್ಮನುಳಿಯುತ್ತೇವೆ.

ಗೌಡರ ವಂಶ ಇರಬಹುದು, ಯಡ್ಯೂರಪ್ಪನವರ ವಂಶವಿರಬಹುದು, ಎಲ್ಲರ ಮೇಲೂ ನಾವು ವಿಶ್ವಾಸ ಇಟ್ಟು, ದೇಶದ ಪರಮಾಧಿಕಾರಗಳ ವಿವಿಧ ಹಂತಗಳನ್ನು ನೀಡಿದವರು. ಆದರೆ ಅವರೆಲ್ಲಾ ಅಧಿಕಾರ ಸಿಕ್ಕ ನಂತರ, ಈ ಎಲ್ಲದೂ ತಮಗೆ ಕಟ್ಟಿಟ್ಟದ್ದು ಎಂಬಂತೆ ವರ್ತಿಸಿದ್ದು ಮಾತ್ರ ನಿಜ. ಎಲ್ಲರೂ ಅವರವರ ಮಟ್ಟಿಗೆ ರಾಜ್ಯದ ಬೊಕ್ಕಸದಿಂದ ಸಾಧ್ಯವಾದಷ್ಟೂ ಎತ್ತಿದವರೇ ಎಂದು ಇಬ್ಬರೂ ಆರೋಪಿಸಿಕೊಳ್ಳುತ್ತಿದ್ದಾರೆ. ಸತ್ಯ ಏನು ಎನ್ನುವುದು ರಾಜ್ಯದ ಎಲ್ಲರಿಗೂ ಗೊತ್ತಿದೆ. ಯಡ್ಯೂರಪ್ಪ ಮತ್ತು ಕುಮಾರ ಸ್ವಾಮಿ-ಇಬ್ಬರೂ ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಮೆಂದವರೇ ಎಂಬುದೇ ಈ ಸತ್ಯ!(ನಿನಗೆ ಗೊತ್ತಿಲ್ಲದ್ದೇನಲ್ಲ ಬಿಡು)

ಆದರೆ ಈ ವಿಷಯ  ನಿನ್ನನ್ನೇ ಸಂದಿಗ್ಧಕ್ಕೆ ತಂದೀತು ಎಂದು ನಾವು ಭಾವಿಸಿರಲಿಲ್ಲ. ನಮ್ಮ ಈ ನಾಯಕರು ತಾವು ತಾವೇ ಎರಚಿಕೊಂಡ ಕೆಸರನ್ನು , ಈಗ ನಿನ್ನ ಮಡಿಲಿಗೆ ತಂದು ತೊಳೆದುಕೊಳ್ಳುವ ಮಾತಾಡುತ್ತಿದ್ದಾರೆ. ನಿನ್ನ ಸನ್ನಿಧಿಯಲ್ಲಿ ಬಂದು ‘ಆಣೆ-ಪ್ರಮಾಣ’ಕ್ಕೆ ನಿಲ್ಲುವ ಹುನ್ನಾರಿನಲ್ಲಿ ಇವರಿಬ್ಬರೂ ಇದ್ದಾರೆ. ಇವರಿಬ್ಬರೂ ಒಂದೇ ದೋಣಿಯ ಪಯಣಿಗರಾಗಿ, ರಾಜ್ಯದ ಜನತೆಯ ಹಿತವೊಂದನ್ನು ಬಿಟ್ಟು, ಮತ್ತೆಲ್ಲವನ್ನೂ ಒಟ್ಟಿಗೇ ಮಾಡಿಕೊಂಡವರು. ಯಾವುದೋ ಭಂಡ ಧೈರ್ಯದಿಂದ ನಿನ್ನಲ್ಲಿಗೆ ಹೊರಟಿದ್ದಾರೆ. ೨೭ರಂದು ನಿನ್ನ ಬಳಿ ಆಣೆ ಮಾಡಿ, ಅದಕ್ಕೂ ಮೊದಲು ಅಥವಾ ನಂತರ ಒಮ್ಮೆ ಆಣೆ ಮಾಡಿದ್ದಕ್ಕೇ ಒಂದು ತಪ್ಪೊಪ್ಪಿಗೆ ಮಾಡಿ, ‘ಮಂಜುನಾಥಾ, ನಮ್ಮನ್ನು ಕ್ಷಮಿಸು’ ಎಂದು ಉದ್ದಂಡ ನಮಸ್ಕಾರ ಹಾಕಿ ಮರಳುವ ಸಾಧ್ಯತೆಯೇ ಇದೆ. ಯಾಕೆಂದರೆ ನಮ್ಮ ರಾಜಕಾರಣದಲ್ಲಿ  ರಾಜಕಾರಣಿ ಮಾಡುವ ಎಲ್ಲಾ ಅಪರಾಧಗಳಿಗೂ ಕ್ಷಮೆ ಇದೆ ಮತ್ತು ಇದೇ ಕ್ಷಮೆಯನ್ನು ನೀನೂ ಕೊಡುತ್ತೀಯೆಂದು ದ್ರಢವಾಗಿ ನಂಬಿರುವ ಪರಮ ಸ್ವಾರ್ಥಿಗಳು ಇವರು.

ಸ್ವಾಮಿ, ಇವರ ಅವಸ್ಥೆ ನೋಡಿ ನಗು ಬರುತ್ತದೆ. ಪರಮ ದೈವ ಭಕ್ತ ಯಡ್ಯೂರಪ್ಪನವರು ಕುಮಾರಸ್ವಾಮಿಯವರಿಗೆ, ರಾಜಕಾರಣವನ್ನು ನಿನ್ನ ಮಡಿಲಿಗೆ ತರಲು ಪಂಥಾಹ್ವಾನ ನೀಡುತ್ತಾರೆ. ಕುಮಾರಸ್ವಾಮಿ, ‘ರಾಜ್ಯದ ಜನ’ ಈ ಆಹ್ವಾನವನ್ನು ಸ್ವೀಕರಿಸದಿದ್ದರೆ ತನ್ನನ್ನು ಕ್ಷಮಿಸರು ಎಂಬ ಕಾರಣಕ್ಕೆ, ದೇವೇಗೌಡರು ಬೇಡವೆಂದರೂ, ಆಣೆಗೆ ತಯಾರಾಗುತ್ತಾರೆ. ಯಡ್ಯೂರಪ್ಪನವರು ತಮ್ಮ ಇಡೀ ಕುಟುಂಬದ ಜೊತೆಗೇ ನಿನ್ನತ್ತ ಹೊರಟಿದ್ದಾರೆ. ಯಾಕೆಂದರೆ ಅವರಿಲ್ಲಿಯ ತನಕ ಮಾಡಿದ್ದೆಲ್ಲವೂ ಕುಟುಂಬಕ್ಕೇ ಮತ್ತು ಏನೇ ಬರಲಿ ಇಡೀ ಕುಟುಂಬದ ಜೊತೆಗೇ ‘ಅನುಭವಿಸಿ’ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಇನ್ನು ಕುಮಾರಸ್ವಾಮಿ ತನಗೊಬ್ಬನಿಗೇ ಸೀಮಿತವಾದ ಈ ‘ಆಣೆ’ಗೆ ತಾನೊಬ್ಬನೇ ಬರುತ್ತೇನೆ ಎನ್ನುತ್ತಾರೆ. ಅವರು ಕುಟುಂಬವನ್ನು ನಿನ್ನ ಬಳಿಗೆ ತರುವುದಾದರೆ, ಎರಡು ಕುಟುಂಬವನ್ನು ತರಬೇಕಾಗುತ್ತದೆ ಎಂಬುದು ಹಲವರ ಅಂಬೋಣ(!). ಮತ್ತು ಅವರ ಕುಟುಂಬ ಈಗಾಗಲೇ ಬೇಕಾದಷ್ಟನ್ನು ಬೇರೆ ಬೇರೆ ರೂಪದಲ್ಲಿ ಮಾಡಿಯಾಗಿದೆಯಾದ್ದರಿಂದ, ತಾನು ವೈಯುಕ್ತಿಕವಾಗಿ ಮಾಡಿದ್ದಕ್ಕೆ ಮಾತ್ರ ತನ್ನನ್ನು ಜವಾಬ್ದಾರನನ್ನಾಗಿ ಮಾಡಿಕೊಳ್ಳುವ ತೀರ್ಮಾನವನ್ನೂ ಕುಮಾರಣ್ಣ ಮಾಡಿರಬೇಕು. ಹಾಗಾಗಿ ಅವರವರು ಮಾಡಿದ್ದನ್ನು ಅವರವರು ಅನುಭವಿಸಿಕೊಳ್ಳಲಿ ಬಿಡಿ ಎಂಬುದೂ, ಉಳಿದ ತನ್ನ ಕುಟುಂಬಿಕರನ್ನು ಗೌಡರು ಹೋಗಗೊಡರು ಎಂಬುದೂ ಕುಮಾರಣ್ಣನ ಕಷ್ಟವಿರಬಹುದೇನೋ.

ಇರಲಿ, ಎಲ್ಲವನ್ನೂ ನೀನೇ ತೀರ್ಮಾನಿಸಲಿ ಎಂದು ಇಬ್ಬರೂ ನಿನ್ನ ಬಳಿಗೆ ಹೊರಟಿದ್ದಾಗಿದೆ. ಇಬ್ಬರೂ ಮರೆತಿರುವ ವಿಷಯವೆಂದರೆ, ತಾವಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಡೀ ಜನತೆಯೇ ತಮ್ಮ ಕುಟುಂಬವೆಂಬುದು!. ಈ ಒಂದು ಅಂಶ, ಇಬ್ಬರಿಗೂ ಮತ್ತು ನಮ್ಮ  ಹೆಚ್ಚಿನ ರಾಜಕಾರಣಿಗಳಿಗೂ, ಚುನಾವಣೆ ಮುಗಿಯುತ್ತಲೇ ಮರೆತು ಹೋಗುತ್ತದೆ. ಪರಿಣಾಮವಾಗಿಯೇ ಅವರು ತಮ್ಮ ಮನೆ ಮತ್ತು ತಾವು ಎಂಬ ವೃತ್ತದೊಳಗೇ ಸುತ್ತುತ್ತಾ, ತಮ್ಮ ಅಧಿಕಾರ ವ್ಯಾಪ್ತಿಯ ರಾಜ್ಯ-ದೇಶ ತಮ್ಮದೇ ಸಂಪತ್ತು-ಆಸ್ತಿ ಎಂದು ಭಾವಿಸುತ್ತಾರೆ. ಆಗಲೇ ಈ ಎಲ್ಲಾ ‘ಹಗಲುದರೋಡೆ’ಗಳು ಆರಂಭವಾಗುವುದು.

ಸ್ವಾಮಿ, ನೀನು ಸರ್ವಾಂತರ್ಯಾಮಿ. ನಿನಗೆ ತಿಳಿಯದ್ದೇನಿದೆ? ನೀನು ಕುಳಿತಲ್ಲಿಯೇ ಎಲ್ಲವನ್ನೂ ಗಮನಿಸಬಲ್ಲೆ. ಈ ಇಬ್ಬರೂ ನಾಯಕರ ಕ್ಷೇತ್ರಗಳಿಗೂ ನೀನು ಒಮ್ಮೆಯಾದರೂ ದೃಷ್ಟಿ ಹಾಸಿರುತ್ತೀಯಾ. ಒಮ್ಮೆ ಶಿವಮೊಗ್ಗಕ್ಕೆ ಹೋದೆಯಾದರೆ, ದೇವರಂಥ ನೀನೂ ಬೆಕ್ಕಸ ಬೆರಗಾಗುತ್ತೀಯಾ. ಮೂರು ವರ್ಷಗಳ ಕೆಳಗೆ ಶಿವಮೊಗ್ಗಕ್ಕೆ ಹೋದರೆ ನೀನೇ ಕಾಪಾಡಬೇಕಿತ್ತು. ಆದರೆ ಇಂದು…….? ಅಲ್ಲಿ ಐಷಾರಾಮಿ ಜೀವನಕ್ಕೆ ಬೇಕಾಗುವ ಎಲ್ಲವೂ ಸಿಗುತ್ತದೆ ಮತ್ತು ಅದೆಲ್ಲದರ ಮೇಲೂ ಯಡ್ಯೂರಪ್ಪ-ಈಶ್ವರಪ್ಪ ಎಂಬ ‘ಸೀಲ್’ ಇರುತ್ತದೆ!. ಜನತೆ, ಇದೆಲ್ಲವೂ ತಮಗಾದ ಅನುಕೂಲ ಎಂದೇ ಭಾವಿಸುವಂತೆ ಎಲ್ಲವೂ ಸುಂದರವಾಗಿದೆ, ಆದರೆ ಇದೆಲ್ಲವೂ ಈ ರಾಜಕೀಯ ನಾಯಕರ ಮುಂದಿನ ಹಲವು ತಲೆಮಾರುಗಳಿಗೆ ಉಣಬಡಿಸುವಷ್ಟು ಆಸ್ತಿ ಸಂಪಾದನೆಯ ಒಂದು ಭಾಗವಾಗಿ ಹೋಗಿದೆ. ಇನ್ನು ಕುಮಾರಸ್ವಾಮಿ!. ಹಾಸನ, ಹೊಳೆ ನರಸೀಪುರ, ರಾಮನಗರದಂತ ಕ್ಷೇತ್ರಗಳಿಗೆ ಹೋದರೆ, ಗಣಿಗಾರಿಕೆಯ ಮಾತೆತ್ತಿದರೆ ಅಲ್ಲೆಲ್ಲವೂ ಇವರ ಕಥೆಗಳು ಬಣ್ಣಬಣ್ಣದ ಚಿತ್ರದೊಂದಿಗೆ ಕಾಣ ಬರುತ್ತದೆ. ಈರ್ವರೂ ನಾಯಕರ ವೈಯಕ್ತಿಕ ಜೀವನದ ಬಗ್ಗೆ ನೀನೇ ಕರುಣೆ ತೋರಿ ಕ್ಷಮಿಸಬೇಕಾದಷ್ಟೂ ಕಥೆಗಳಿವೆ. ಇಂಥವರು, ತಮ್ಮ ತಮ್ಮೊಳಗೆ ಸವಾಲು ಹಾಕಿಕೊಳ್ಳುತ್ತಿದ್ದ ಪರಮ ಸ್ವಾರ್ಥಿಗಳು, ಈಗ ನೇರವಾಗಿ ನಿನಗೇ ಸವಾಲಾಗಿದ್ದಾರೆ!!. ನಿನ್ನನ್ನು ಆ ದೇವರೇ ಕಾಪಾಡಬೇಕು????

ಸರ್ವ ರಕ್ಷಕನೇ, ನಿನ್ನ ಬಳಿಗೆ ಬರುತ್ತಿರುವ ಈ ಇಬ್ಬರೂ ಘನ ಘೋರ ತಪ್ಪು ಮಾಡಿದವರು ಎಂಬುದು ಇಡೀ ನಾಡಿನ ಜನತೆಗೆ ಗೊತ್ತಿರುವ ಸತ್ಯ. ಇಬ್ಬರೂ ಒಂದು ವಿಚಿತ್ರ ಭ್ರಮೆಯಲ್ಲಿದ್ದು, ತಮ್ಮ ತಮ್ಮೊಳಗೆ ತಾವು ಮಾಡಿದ್ದು, ಇನ್ನೊಬ್ಬನಿಗಿಂತ ಸಣ್ಣದು ಎಂದುಕೊಂಡೇ ಬರುತ್ತಿದ್ದಾರೆ. ಇಬ್ಬರಿಗೂ ತಾವು ಪರಮ ಸ್ವಾರ್ಥಿಗಳು ಎಂಬ ಅರಿವು ಖಂಡಿತಾ ಇದೆ. ಒಬ್ಬರಿಗೆ ತಾವು ಪಂಥಾಹ್ವಾನ ಮಾಡಿ ಕೆಟ್ಟೆ ಎಂಬ ಭೀತಿ ಇದ್ದರೆ ಮತ್ತೊಬ್ಬರಿಗೆ ಅದನ್ನು ಸ್ವೀಕರಿಸಿ ತಪ್ಪು ಮಾಡಿದ ಭೀತಿ ಖಂಡಿತಕ್ಕೂ ಇದೆ. ಇಬ್ಬರೂ ನಿನ್ನ ಬಳಿ ಗುಟ್ಟಾಗಿ, ಈ ಪರಿಸ್ಥಿತಿಯಿಂದ ಬರಲೇ ಬೇಕಾಯ್ತು, ಕ್ಷಮಿಸು ಎಂದೇ ಹೇಳಿಕೊಂಡು ಆಣೆ ಮಾಡಬಹುದು…..ಅವರನ್ನು ಕ್ಷಮಿಸ್ತೀಯಲ್ಲ?? ಪ್ಲೀಸ್…..! ಯಾಕೆಂದರೆ ಇವರಿಬ್ಬರೂ ಕರ್ನಾಟಕದ ಜನತೆಗೇ ಮೋಸ ಮಾಡಿ ನಿನ್ನ ಬಳಿ ಬಂದಿದ್ದಾರೆ. ತಾವು ಮಾಡಿದ್ದೆಲ್ಲಾ ರಾಜ್ಯದ ಜನತೆಯ ಹಿತಕ್ಕಾಗಿ ಎಂದೇ ಇಬ್ಬರೂ ‘ಮುಗ್ದ’ರಾಗಿ ನಂಬಿದ್ದಾರೆ. ತಾವು ಮಾಡಿದ ಮೋಸ, ಹೇಳಿದ ಸುಳ್ಳುಗಳು, ಬೆಳೆಸಿಕೊಂಡ ಸಂಬಂಧಗಳು. ಗಳಿಸಿದ ಆಸ್ತಿಗಳು, ಬೈದುಕೊಂಡ ಬೈಗುಳಗಳು…ಇಂದು ಮಾಡ ಹೊರಟಿರುವ ಆಣೆ… ಹೀಗೆ ಎಲ್ಲವನ್ನೂ ಇವರು ರಾಜ್ಯದ ಜನತೆಯ ತಲೆಗೇ ಕಟ್ಟುತ್ತಾರೆ!. ಒಳ್ಳೆಯದು ಎಂಬುದೆಲ್ಲಾ ತಮಗೆ ಮತ್ತು ಅದರ ಪರಿಣಾಮಗಳು ಜನತೆಗೆ ಎಂದೇ ಇವರು ಭಾವಿಸಿ, ರಾಜಕಾರಣ ಮಾಡಿದವರು!. ಈ ಘಟನೆಯಲ್ಲೂ ಅವರು ಅದನ್ನೇ ಮಾಡುತ್ತಿದ್ದಾರೆ.!

ದೇವರೇ, ನೀನು ಕರುಣಾ ಮುಯಿ!. ಇಬ್ಬರೂ ರಾಜ್ಯವನ್ನು ವ್ಯವಸ್ತಿತವಾಗಿ ಕೊಳ್ಳೆ ಹೊಡೆದದ್ದನ್ನೇ ನೋಡಿ ಕಲ್ಲಾಗಿ ಕುಳಿತಿದ್ದೀಯಾ. ತಾವೇನು ಮಾಡುತ್ತಿದ್ದೇವೆಂಬ ಅರಿವಿರದೇ ಈ ಈರ್ವರೂ ‘ಮುಗ್ಧರು’ ನಿನ್ನ ಬಳಿಗೆ ಬರುತ್ತಿದ್ದಾರೆ. ಅವರ ತಪ್ಪುಗಳನ್ನು ಕಲ್ಲಾಗಿ ಕುಳಿತೇ ಸಹಿಸಿಕೊಂಡಿರುವ ನಿನಗೆ, ಇಬ್ಬರೂ ನಿನ್ನೆದುರು ನಿಂತರೆ ಸಹಿಸಿಕೊಳ್ಳದಿರಲಾಗದೇ? ದಯವಿಟ್ಟು, ಇವರಿಬ್ಬರ ತಪ್ಪುಗಳನ್ನೂ ಸಹಿಸಿಕೊಂಡು ಅವರಿಗೆ ಒಳ್ಳೆಯದನ್ನೇ ಮಾಡು. ರಾಜ್ಯದ ಜನತೆಯನ್ನು ನೀನೇ ಕಾಪಾಡಬೇಕು ಎಂದು ನಂಬಿ ಕುಳಿತವರು ನಾವು. ನಮ್ಮ ನಂಬುಗೆಯನ್ನು ನೀನು ಈ ತನಕ ಹುಸಿ ಮಾಡಿಲ್ಲ.

ದೇವರೇ, ಅವರೇನು ಮಾಡುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ. ಅವರು ಮಾಡುತ್ತಿರುವುದೆಲ್ಲವೂ ಅವರ ತಂದೆಯ ಮಾತಿಗೋ, ಮನೆಯವರ ಮಾತಿಗೋ, ಪಕ್ಷದ ಹಿತಕ್ಕಾಗಿಯೋ, ಜನತೆಯ ಒಳಿತಿಗಾಗಿಯೋ ವಿನ:, ಅವರಿಗಾಗಿ ಅಲ್ಲವೆಂದೇ ಅವರು ನಂಬಿದ್ದಾರೆ…….ಅವರನ್ನು ನೀನು ಕ್ಷಮಿಸಲೇ ಬೇಕು. ಕ್ಷಮಿಸ್ತೀಯಲ್ಲಾ???

(ಇವರನ್ನು ನಿನ್ನ ಬಳಿ ಬರದಂತೆ ‘ಒತ್ತಾಯ’ದಿಂದ ನಿಲ್ಲಿಸಲೂ ಪ್ರಯತ್ನ ನಡೆದಿದೆ. ಮಠಾಧಿಪತಿಗಳಿಂದ ಹಿಡಿದು ಅನೇಕರು ಪ್ರಯತ್ನಿಸುತ್ತಿರುವುದು ನಿನಗೆ ಮುಜುಗುರ ತಪ್ಪಿಸಲು. ಹಾಗೇನಾದರೂ ಆದರೆ ಈ ಪತ್ರವನ್ನು ಗಣನೆಗೆ ತೆಗೆದುಕೊಳ್ಳದಿರು ಎಂಬ  ವಿನಂತಿ)

ಆಶಾಭಾವನೆಯೊಂದಿಗೆ

ಕರ್ನಾಟಕದ ಸಮಸ್ತ ಜನತೆ.

********************

belthangadi.com

3 ಟಿಪ್ಪಣಿಗಳು Post a comment
 1. ಜೂನ್ 22 2011

  lekana olleydide tappu mdidavrige manjunata ne buddikalisuvantgli

  ಉತ್ತರ
 2. ಜೂನ್ 22 2011

  Very balanced act 🙂

  ಉತ್ತರ
 3. Kaa Vee Krishnadas
  ಜೂನ್ 23 2011

  ನಿಮ್ಮ ಬರಹ ಚೆನ್ನಾಗಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments