ವಿಷಯದ ವಿವರಗಳಿಗೆ ದಾಟಿರಿ

ಜೂನ್ 26, 2011

3

ಎಂಥ ಫೋಟೊ ತೆಗೆಯೋಕೆ ನನಗಿಷ್ಟ-ಪೋಟೊಗ್ರಫಿ ಲೇಖನ-3

‍ನಿಲುಮೆ ಮೂಲಕ

-ಶಿವು.ಕೆ

ಎಂಥ ಫೋಟೊ ತೆಗೆಯೋಕೆ ನನಗಿಷ್ಟ?  ಇಂಥದೊಂದು ಪ್ರಶ್ನೆ ಮನದಲ್ಲಿ ಮೂಡಿದಾಗ ನಮ್ಮ ಕಣ್ಣೆದುರಿಗೆ ಫೋಟೊಗ್ರಫಿ ಲೋಕದ ಸಾಗರವೇ ಕಂಡಂತೆ ಭಾಶವಾಗುತ್ತದೆ.  ಏಕೆಂದರೆ ಇದರಲ್ಲಿ ನೂರಾರು ವಿಧಗಳಿವೆ. ಅವುಗಳನ್ನೆಲ್ಲಾ ವಿಸ್ತಾರವಾಗಿ ವಿವರಿಸಲು ಪ್ರಯತ್ನಿಸಿದರೆ ಅದೇ ನೂರಾರು ಪುಟಗಳಾಗಬಹುದು.  ಬದಲಿಗೆ  ಅವುಗಳಲ್ಲಿ ಕೆಲವನ್ನು ಮಾತ್ರ ಆರಿಸಿಕೊಂಡು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ವನ್ಯ ಜೀವಿ ಛಾಯಾಗ್ರಾಹಣ: ಇದು ಸುಲಭವಾಗಿ ಪ್ರತಿಯೊಬ್ಬ ಛಾಯಾಗ್ರಾಹಕನನ್ನು ತಕ್ಷಣಕ್ಕೆ ಸೆಳೆಯುವ ವಿಭಾಗ. ಪ್ರಾರಂಭದಲ್ಲಿ ಕಾಡಿನ ಫೋಟೊಗಳನ್ನು ತೆಗೆಯುವುದಕ್ಕೆ ವನ್ಯಜೀವಿ ಛಾಯಾಗ್ರಾಹಣವೆಂದುಕೊಂಡಿದ್ದೆ.  ಆದ್ರೆ ಇದರಲ್ಲಿ ಹತ್ತಾರು ವಿಭಾಗಗಳಿವೆ. ಕಾಡುಪ್ರಾಣಿಗಳ ನೈಜ ಚಿತ್ರಗಳನ್ನು ಕ್ಲಿಕ್ಕಿಸುವುದೊಂದೇ ಅಲ್ಲ, ಪಕ್ಷಿಗಳ ಛಾಯಾಗ್ರಾಹಣ, ಕೀಟಪ್ರಪಂಚ, ಲ್ಯಾಂಡ್‍ ಸ್ಕೇಪ್, ಕಾಡುಹೂಗಳು, ಕಾಡುಹಣಬೆಗಳು, ಗಿಡಮರಗಳು., ಹೀಗೆ ಸಾಗುತ್ತದೆ.

ಪಿಕ್ಟೋರಿಯಲ್ ಛಾಯಾಗ್ರಾಹಣ: ಪಿಕ್ಟೋರಿಯಲ್ ಫೋಟೊಗ್ರಫಿಯ ಬಗ್ಗೆ ನಾನು ಈಗಾಗಲೇ ನನ್ನ ಬ್ಲಾಗಿನಲ್ಲಿ ಬರೆದಿದ್ದಲ್ಲದೇ ನಾಲ್ಕು ವರ್ಷಗಳ ಹಿಂದೆ ಯುಗಾದಿ ವಿಶೇಷಾಂಕದಲ್ಲಿ ಆ ಲೇಖನ ಚಿತ್ರಸಹಿತ ಪ್ರಕಟವಾಗಿತ್ತು. ಅದನ್ನು ಮತ್ತೆ ತಿಳಿದುಕೊಳ್ಳಲು ನೀವು ಮತ್ತೆ ಈ ಲಿಂಕ್ ಓದಬಹುದು.:

 http://chaayakannadi.blogspot.com/2008/09/blog-post_24.html

ಅದರೂ ಸರಳವಾಗಿ ಹೇಳಬೇಕೆಂದರೆ ಈ ನಾಲ್ಕು ಅಂಶಗಳಂತೂ ಇರಲೇಬೇಕು.

೧]ಒಂದು ಚಿತ್ರ ನೋಡಿದ ತಕ್ಷಣ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತಿರಬೇಕು. 
೨]ನೋಡಿದ ತಕ್ಷಣ ನಿಮ್ಮನ್ನು ಇಂಪ್ರೆಸ್ ಮಾಡುವಂತಿರಬೇಕು. 
೩]ಚಿತ್ರದಲ್ಲಿನ ಮುಖ್ಯವಸ್ತು ಅತ್ಯುತ್ತಮ ಚೌಕಟ್ಟಿನಲ್ಲಿರಬೇಕು[ಕಾಂಪೋಜಿಷನ್]. 
೪]ಚಿತ್ರದಲ್ಲಿ ಜೀವಂತಿಕೆಯಿರಬೇಕು.

ಈ ವಿಚಾರವನ್ನು ಬಿಟ್ಟರೆ ಇದರಲ್ಲಿ ಅನೇಕ ಉಪ ವಿಭಾಗಗಳು ಬರುತ್ತವೆ.ಕಪ್ಪುಬಿಳುಪು, ಹಳ್ಳಿ ಚಿತ್ರಗಳು, ಭಾವಚಿತ್ರಗಳು, ಸೃಜನಶೀಲ ಚಿತ್ರಗಳು, ಅಮೂರ್ತ ಚಿತ್ರಗಳ ಛಾಯಾಗ್ರಾಹಣ, ಫ್ಯಾಷನ್,  ಸ್ಟಿಲ್ ಲೈಫ್, ಜಾಹಿರಾತು ಚಿತ್ರಣ, ಮದುವೆ ಚಿತ್ರಣ….ಹೀಗೆ ಈ ವಿಭಾಗ ಬೆಳೆಯುತ್ತಾ ಹೋಗುತ್ತದೆ.  ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ,  ತಿಳಿಸಿರುವ ವಿಭಾಗಗಳಲ್ಲಿ ಅನೇಕವು  ಪಕ್ಕಾ ವೃತ್ತಿ ಛಾಯಾಗ್ರಹಣವೆಂದು ನಿಮಗೆ ಗೊಂದಲವುಂಟಾಗಬಹುದು.  ಇದನ್ನು ಸರಳವಾಗಿ ವಿವರಿಸುವುದಾದರೆ,  ಮದುವೆ ಛಾಯಾಚಿತ್ರವು ಹೊಟ್ಟೆಪಾಡಿನ ವೃತ್ತಿ ಛಾಯಾಚಿತ್ರಣಕ್ಕೆ ಸಂಭಂದಿಸಿದರೂ ಇದರಲ್ಲೇ ಅತ್ಯುತ್ತಮ ನೆರಳು ಬೆಳಕಿನ ಸಂಯೋಜನೆ, ಮದುಮಗ ಮದುಮಗಳು…ಅಥವ ಇನ್ಯಾರೋದೋ ಆ ಕ್ಷಣದಲ್ಲಿ ಸಿಕ್ಕ ಅದ್ಬುತ ಭಾವನೆಗಳು ತುಂಬಿದ ಚಿತ್ರಗಳನ್ನು ಕ್ಲಿಕ್ಕಿಸುವಿಕೆ,…ಹೀಗೆ ಆ ಕ್ಷಣದಲ್ಲಿ ಛಾಯಾಗ್ರಾಹಕ ತನ್ನ ಕ್ರಿಯಾಶೀಲತೆಯನ್ನು ಮೆರೆದಾಗ ಅಲ್ಲೊಂದು ಅದ್ಬುತ ಪಿಕ್ಟೋರಿಯಲ್ ಚಿತ್ರಣವಾಗಿರುತ್ತದೆ. ಇನ್ನೂ ಜಾಹಿರಾತು ಚಿತ್ರಣದಲ್ಲಿ ಮಾಡೆಲಿಂಗ್, ಪ್ರಾಡಕ್ಟ್ ಫೋಟೊಗ್ರಫಿ, ಫ್ಯಾಶನ್ ಫೋಟೊಗ್ರಫಿ ಇತ್ಯಾದಿಗಳು ಪಕ್ಕಾ ವೃತ್ತಿಪರವಾಗಿದ್ದರೂ ಅದರಲ್ಲೂ ಇದೇ ರೀತಿ ಕ್ರಿಯಾಶೀಲ ಅಲೋಚನೆಗಳು ಪಿಕ್ಟೋರಿಯಲ್ ಫೋಟೊಗ್ರಫಿಯ ಅವಕಾಶ ಮಾಡಿಕೊಡುತ್ತವೆ.  ಹಾಗೆ ಅಮೂರ್ತ ಛಾಯಾಗ್ರಾಹಣ ಹುಟ್ಟಿಕೊಂಡಿದ್ದು ಅಮೂರ್ತ ಚಿತ್ರಕಲೆಯಿಂದ. ಅದರ ಮುಂದುವರೆದ ಭಾಗವಾಗಿ ಛಾಯಾಗ್ರಾಹಣ ಬೆಳೆದಿದೆ.  ಮತ್ತೆ ಪಿಕ್ಟೋರಿಯಲ್ ಛಾಯಾಗ್ರಾಹಣದಲ್ಲಿ ಇಲ್ಲಿ ವಿವರಿಸಿದ ಎಲ್ಲಾ ವಿಭಾಗಗಳ ಕಪ್ಪುಬಿಳುಪು ಛಾಯಾಗ್ರಾಹಣವೂ ಪಿಕ್ಟೋರಿಯಲ್ ಫೋಟೊಗ್ರಫಿ ವಿಭಾಗಕ್ಕೆ ಸೇರಿಕೊಳ್ಳುತ್ತವೆ.

ಪ್ರವಾಸ ಛಾಯಾಗ್ರಾಹಣ: ಇದರಲ್ಲಿ ಸಹಜವಾಗಿ ಇದ್ದುದ್ದನ್ನು ಇದ್ದ ಹಾಗೆ ಕ್ಲಿಕ್ಕಿಸಿದರೆ ಪ್ರವಾಸ ಚಿತ್ರ.  ಅದರಲ್ಲಿ ಕೆಲವೊಂದು ಭಾವನೆಗಳು, ಪ್ರಕೃತಿ, ಸಂಸ್ಕೃತಿ, ಪರಂಪರೆ, ಇತ್ಯಾದಿಗಳನ್ನು ಉತ್ತಮ ನೆರಳು ಬೆಳಕಿನ ಸಂಯೋಜನೆಯಲ್ಲಿ ಕ್ಲಿಕ್ಕಿಸಿದರೆ  ಇದು ಕೂಡ ಉತ್ತಮ ಪಿಕ್ಟೋರಿಯಲ್ ಚಿತ್ರವಾಗುತ್ತದೆ.

 ಫೋಟೊ ಜರ್ನಲಿಸಂ:   ಇಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ, ಅಣ್ಣಾ ಅಜಾರೆ……………..ಇತ್ಯಾದಿಗಳ ಕಾರ್ಯಕ್ರಮ ಚಿತ್ರಣ, ಪ್ರಖ್ಯಾತ ಸಿನಿಮಾ ತಾರೆಗಳು, ರಾಜಕೀಯ ನಾಯಕರು, ಸಮಾಜಸೇವಕರು, ಕಲಾವಿದರು…..ಹೀಗೆ ಅವರ ಕಾರ್ಯಕ್ರಮದ ಫೋಟೊಗ್ರಫಿ ಮಾಡುವುದು ವೃತ್ತಿಪರತೆಯಾದರೆ,  ಅದರಲ್ಲೂ ಕ್ರಿಯಾಶೀಲತೆಯನ್ನು ಮೆರೆಯುವುದು ಪಿಕ್ಟೋರಿಯಲ್ ಫೋಟೊಗ್ರಫಿಯಾಗುತ್ತದೆ. ಇದಕ್ಕೆ ಉದಾಹರಣೆಯೆಂದರೆ…ಸುನಾಮಿ, ಭೂಕಂಪ, ಯುದ್ದ, ಚಳುವಳಿ, ಹೋರಾಟ, ಅಂತರಿಕ ದಂಗೆಗಳು, ಕ್ರೀಡೆ.,…………….ಹೀಗೆ ಬೆಳೆಯುತ್ತಾ ಹೋಗುವ ಇವುಗಳಲ್ಲಿ ರಾಜಕೀಯ ನಾಯಕರು, ಹೋರಾಟಗಾರರು, ಸಮಾಜಸೇವಕರು, ಕಲಾವಿದರು, ಇವರೆಲ್ಲರ ಕಾರ್ಯಕ್ರಮದ ನೇರ ಚಿತ್ರಗಳನ್ನು ಚಿತ್ರಿಸಿದರೆ ಅದು ಜರ್ನಲಿಸಂ ಫೋಟೊಗ್ರಫಿಯಾಗುತ್ತದೆ.   ಆದ್ರೆ ಇವುಗಳಲ್ಲೇ ವೈವಿಧ್ಯತೆ ಮೆರೆಯಬೇಕಾದರೆ ಛಾಯಾಗ್ರಾಹಕರಾದ ನಾವು ಸ್ವಲ್ಪ ರಿಕ್ಸ್ ತೆಗೆದುಕೊಳ್ಳಲೇಬೇಕು ಹೇಗೆಂದರೆ ಪ್ರವಾಹ ಬಂದು ಇಡೀ ನಗರವೇ ಕೊಚ್ಚಿಹೋದಾಗ ನಾವು ಕೂಡ ಹರಿಯುವ ನೀರಿನ  ನಡುವೆ ಬದುಕುಳಿಯುವವರನ್ನು ಪೋಟೋ ತೆಗೆಯಬೇಕಾದರೆ ನಾವು ಕೂಡ ಪ್ರವಾಹದ ನಡುವೆ ನಿಲ್ಲಲೇಬೇಕು.  ಸುನಾಮಿ, ಚಂಡಮಾರುತ, ಭೂಕಂಪ, ಅಂತರಿಕ ದಂಗೆಗಳು, ಯುದ್ದಗಳು, ಹೋರಾಟಗಳು, ಚಳುವಳಿ ಇತ್ಯಾದಿಗಳಲ್ಲಿ.. ರಾಜಕೀಯ ದುರೀಣರು, ಸಮಾಜಸೇವಕರ ಬಿಟ್ಟು, ಸುನಾಮಿಯಲ್ಲಿ ತಂದೆತಾಯಿಯನ್ನು ಕಳೆದುಕೊಂಡ ಮಗು, ಚಂಡಮಾರುತದಲ್ಲಿ ಸತ್ತ ಗಂಡ ಮತ್ತು ಮಗುವನ್ನು  ಕಳೆದುಕೊಂಡ ಹೆಣ್ಣು ಮಗಳ ಆಕ್ರಂದನ, ಭೂಕಂಪದಲ್ಲಿ ಕುಸಿದ ಕಟ್ಟಡದ ನಡುವೆ ಅಪ್ಪ ಅಮ್ಮನನ್ನು ಕಳೆದುಕೊಂಡ ಸಿಕ್ಕಿಹಾಕಿಕೊಂಡ ಪುಟ್ಟ ಕಂದಮ್ಮ, ಯುದ್ದಭೂಮಿಯಲ್ಲಿ ಸಾಯುತ್ತಿರುವ ಯೋಧ…..ಹೀಗೆ ವಿವರಿಸುತ್ತಾ ಹೋದರೆ ಅದಕ್ಕೆ ಅಂತ್ಯವೇ ಇಲ್ಲ. ಇಂಥ ಸನ್ನಿವೇಶಗಳಲ್ಲಿ ಒಬ್ಬ ಛಾಯಾಗ್ರಾಹಕ ತನ್ನ ಸಮಯ, ತಾಳ್ಮೆ, ತನ್ಮಯತೆ, ಸಾಹಸಪ್ರವೃತ್ತಿ, ಪುಟ್ಟ ಕುತೂಹಲದ ಜೊತೆಗೆ ಕಾರ್ಯಪ್ರವೃತ್ತನಾದರೆ ಅವನಿಗೆ ಇಲ್ಲೂ ಪಿಕ್ಟೋರಿಯಲ್ ಫೋಟೊ ಸಿಗುತ್ತದೆ. ಎಲ್ಲಾ ವಿಭಾಗದ ಫೋಟೋಗ್ರಫಿಯಲ್ಲಿ ಜೀವಂತಿಕೆಯಿದ್ದಲ್ಲಿ ಅದು ಪಿಕ್ಟೋರಿಯಲ್ ಫೋಟೊಗ್ರಫಿಯಾಗುತ್ತದೆ ಮತ್ತು ಅವಕಾಶವಿದ್ದಲ್ಲಿ ಅದಕ್ಕೆ ನೆರಳು ಬೆಳಕು, ಬಣ್ಣಗಳು, ಭಾವನೆಗಳು, ಇತ್ಯಾದಿಗಳಿಂದ ಶೃಂಗರಿಸಿದರೆ ಅದು ಅತ್ಯುತ್ತಮ ಫಿಕ್ಟೋರಿಯಲ್ ಫೋಟೊಕೃತಿಯಾಗುತ್ತದೆ.

ನೋಡಿದ್ರಾ…ಈ ಫೋಟೊಗ್ರಫಿಯಲ್ಲಿ ಎಷ್ಟು ವಿಧಗಳು!  ಅದಕ್ಕೆ ಮೊದಲೇ ನಾನು ಹೇಳಿದ್ದು. ಈ ಫೋಟೊಗ್ರಫಿ ವಿಭಾಗಗಳು ಸಮುದ್ರದಂತೆ ನೂರಾರು ಅಂತ. ನಾನು ಇಲ್ಲಿ ವಿವರಿಸಿದ್ದು ಕೇವಲ ಒಂದು ಬೊಗಸೆ ನೀರಷ್ಟೆ.  ಹಾಗೆ ಆಳಕ್ಕೆ ಹೋದರೆ ನಮ್ಮ ಅಳತೆಗೆ ಸಿಗುವುದಿಲ್ಲ. ಫೋಟೊಗ್ರಫಿಯಲ್ಲಿ ಮೊದಲ ಸ್ಥಾನದಲ್ಲಿರುವ ಎರಡು ಅತ್ಯುತ್ತಮ ಕ್ಯಾಮೆರಗಳು ಇವು.
NIKON D3X- ಇದರ ಬೆಲೆ ಸದ್ಯ ಆರು ಲಕ್ಷ ಲೆನ್ಸುಗಳನ್ನು ಹೊರತುಪಡಿಸಿ.
ಇದಕ್ಕೆ ತಕ್ಕಂತೆ 2.8 ಅಪರೆಚರಿನ 300MM,  400MM, 500MM,600MM ಟೆಲಿ ಲೆನ್ಸುಗಳಿಗೆ 3 ರಿಂದ 8  ಲಕ್ಷದವರೆಗೆ ಬೆಲೆಯಿದೆಈ ಕ್ಯಾಮೆರವನ್ನು ನಾಸದವರು ತಮ್ಮ ಎಲ್ಲಾ ಕೆಲಸಗಳಿಗೂ ಬಳಸುತ್ತಾರೆ.

CANON 5D Mark II- ಅತ್ಯುತ್ತಮ ಗುಣಮಟ್ಟದ ಸ್ಟಿಲ್ ಫೋಟೋಗ್ರಫಿಗೆ ಕ್ಯಾನನ್ ಕಂಪನಿಯ ಬೆಸ್ಟ್ ಕ್ಯಾಮೆರ.  ಅಷ್ಟೇ ಅಲ್ಲದೇ ಹೈ ರೆಸಲ್ಯೂಷನ್ FULL HD [1920X1080p] ಇರುವ ಈ ಕ್ಯಾಮೆರ ಸಿನಿಮಾ, ಡಾಕ್ಯುಮೆಂಟರಿ, ಇತ್ಯಾದಿ ವಿಡಿಯೋ ತೆಗೆಯಲು ವಿಶ್ವದ ಅತ್ಯುತ್ತಮ ಕ್ಯಾಮೆರ.ಇದರ ಬೆಲೆ ಸಧ್ಯ ಮಾರುಕಟ್ಟೆಯಲ್ಲಿ  ಬಾಡಿಗೆ[ಲೆನ್ಸ್ ಹೊರತುಪಡಿಸಿ] ಒಂದುವರೆಲಕ್ಷ ರೂಪಾಯಿಗಳು.

ಇನ್ನು ಲೆನ್ಸುಗಳ ರಾಜನೆಂದು ಹೆಸರಾದ “2.8 ಅಪರೆಚರಿನ CANON1200MM ಟೆಲಿ ಲೆನ್ಸು” ಸದ್ಯ ವಿಶ್ವದಲ್ಲಿ ಆರು ಮಾತ್ರವಿದೆ. ಎರಡು ನಾಸದಲ್ಲಿ, ಒಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಬಳಿ, ಎರಡು ನ್ಯಾಷನಲ್ ಜಿಯಾಗ್ರಫಿಯವರ ಬಳಿ, ಕೊನೆಯದು ಟೈಮ್ ಪತ್ರಿಕೆಯವರ ಬಳಿ.  ಈ ಲೆನ್ಸು ಹಣ ಕೊಟ್ಟ ತಕ್ಷಣ ಅಂಗಡಿಯಲ್ಲಿ ಸಿಗುವುದಿಲ್ಲ.  ನೀವು ಆರ್ಡರ್ ಕೊಟ್ಟು ಪೂರ್ತಿ ಹಣವನ್ನು ಕಟ್ಟಿ ಒಂದು ವರ್ಷ ಕಾದರೆ ನಿಮಗೆ ನಂತರ ಸಿಗುತ್ತದೆ. ಅಂದ ಹಾಗೆ ಈ ಲೆನ್ಸಿನ ಬೆಲೆ ಕೇವಲ ೪೫ ಲಕ್ಷಗಳು!]. ಸದ್ಯಕ್ಕೆ ಕ್ಯಾಮೆರ ಮತ್ತು ಲೆನ್ಸುಗಳ ವಿಚಾರ ಇಷ್ಟು ಸಾಕಲ್ಲವೇ!   ಅಲ್ಲಿಂದ ಸಿನಿಮಾಟೋಗ್ರಫಿ, ಅದರ ಟ್ರಿಕ್ಸುಗಳು, ನಮ್ಮ ಸ್ಯಾಂಡಲ್ ಹುಡ್, ಟಾಲಿಹುಡ್, ಬಾಲಿಹುಡ್ ಬಳಸುವ ಕ್ಯಾಮೆರಗಳು, ಹಾಲಿಹುಡ್ ಸಿನಿಮಾಗಳ ಕ್ಯಾಮೆರಗಳು, ಅವುಗಳ ತಂತ್ರಜ್ಞತೆ, ಮುಂದೆ ಅವತಾರ್ ನಂತ ೩ಡಿ ಸಿನಿಮಾ…ಹೀಗೆ ತಿಳಿದುಕೊಳ್ಳುತ್ತಾ ಮತ್ತು ಕಲಿಯುತ್ತಾ ಹೋದರೆ ಈ ಜನ್ಮ ಸಾಕಾಗುವುದಿಲ್ಲ.  ಅದಕ್ಕೆ ನಾವು ತೀರ ಆಳಕ್ಕೆ ಮುಳಗದೆ ಸೊಂಟದ ಮಟ್ಟಿಗಿನ ನೀರಿನಲ್ಲಿ ನಮ್ಮ ಕಡೆಗೆ ಬರುವ ಅಲೆಗಳಲ್ಲಿ ಕಾಲು ತೋಯಿಸಿಕೊಳ್ಳುವಷ್ಟರ ಮಟ್ಟಿಗಿನ ಪುಟ್ಟ ವಿವರಣೆ ಇದು. ಈ ಫೋಟೊಗ್ರಫಿ ವಿಭಾಗದ ಕವಲುಗಳು ನೂರಾರು ಅಂತ ಮೊದಲೇ ಹೇಳಿದ್ದೆನಲ್ಲ!  ಪ್ರತಿಯೊಂದು ಕವಲುಗಳು ಮತ್ತೆ ಟಿಸಿಲೊಡೆದು ನೂರಾರು ಕವಲುಗಳಾಗುತ್ತವೆ.

ನಮಗೆ ಸರಳವಾದ ಫೋಟೊಗ್ರಫಿ ವಿಚಾರ ತಿಳಿಸುವುದು ಬಿಟ್ಟು ಇವನ್ಯಾಕೋ ನಮ್ಮನ್ನು ಆಳ ಸಮುದ್ರದಲ್ಲಿ ಮುಳುಗಿಸುತ್ತಿದ್ದಾನೆ ಅಂದುಕೊಳ್ಳಬೇಡಿ.  ಇಷ್ಟೇಲ್ಲಾ ವಿವರಣೆ ಯಾಕೆ ಕೊಟ್ಟೆನೆಂದರೇ  ಈ ಎಲ್ಲಾ ವಿಭಾಗಗಳಲ್ಲೂ ನನ್ನ ಮೆಚ್ಚಿನ ಪಿಕ್ಟೋರಿಯಲ್ ಫೋಟೊಗ್ರಫಿಯಿದೆ.  ನಾನು ಉದಾಹರಿಸಿದ ಸನ್ನಿವೇಶಗಳಲ್ಲಿ ಕ್ಲಿಕ್ಕಿಸಿದ ನೂರಾರು ಛಾಯಾಗ್ರಾಹಕರು ಹತ್ತಾರು ಅಂತರಾಷ್ಟ್ರೀಯ ಛಾಯಾಚಿತ್ರಸ್ಪರ್ಧೆಗಳಲ್ಲಿ ತಮ್ಮ ಚಿತ್ರಗಳಿಗೆ ಪ್ರಶಸ್ತಿ, ಸಮ್ಮಾನ ಮನ್ನಣೆ ಪಡೆದಿದ್ದಾರೆ. ಇಂಥ ಚಿತ್ರಗಳಿಂದಲೇ ಅಂತರರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆಂದ ಮೇಲೆ ಇದನ್ನೆಲ್ಲಾ ವಿವರಿಸಲೇಬೇಕಲ್ವ….

ಇಷ್ಟನ್ನು ತಿಳಿದುಕೊಂಡ ಮೇಲೆ ಈಗ ನಿಮ್ಮಲ್ಲಿ ಹೊಸ ಸ್ಫೂರ್ತಿ ತುಂಬಿ ತುಳುಕುತ್ತಿದೆಯಲ್ವಾ!  ಇನ್ನೇನೂ ಎಲ್ಲ ಗೊತ್ತಾಯಿತಲ್ಲಾ ಈಗಲೇ ಕ್ಯಾಮೆರ ತೆಗೆದುಕೊಂಡು ಯುದ್ದಕ್ಕೆ ಸಿದ್ಧರಾದಂತೆ ಹೊರಡಲು ಸಿದ್ಧರಾಗಿಬಿಟ್ರಾ!  ಸ್ವಲ್ಪ ತಡೆದುಕೊಳ್ಳಿ,  ಏಕೆಂದರೆ ದೂರದಿಂದ ರಣರಂಗ ಕಾಣಲು ಸುಂದರ. ಹತ್ತಿರ ಹೋಗುತ್ತಿದ್ದಂತೆ ನಿಮ್ಮ ಎದುರಾಳಿಗಳು ಎಂಥ ಅತಿರಥ ಮಹಾರಥರೆಂದು ತಿಳಿದುಕೊಳ್ಳಬೇಡವೇ?  ಇಲ್ಲಿ ಶೂರ ವೀರ, ಅತಿರಥ ಮಹಾರಥರೆಲ್ಲರೂ ಕಾಣುತ್ತಿದರೂ ಯಾರೊಡನೆ ಯುದ್ದ ಮಾಡುವುದು ಎನ್ನುವ ಗೊಂದಲ ನಿಮ್ಮ ಮನಸ್ಸಿನೊಳಗೆ ಬಂತಲ್ಲವೇ? ಅದಕ್ಕೆ ಹೇಳಿದ್ದು ಸ್ವಲ್ಪ ತಡೆಯಿರಿ ಅಂತ!

ಶೂರರು, ವೀರರು, ರಣದೀರರು, ಅತಿರಥರು, ಮಹಾರಥರು ಅಂದರೇ ಮತ್ಯಾರು ಅಲ್ಲ, ಇವೆಲ್ಲಾ ಫೋಟೊಗ್ರಫಿಯ ನೂರಾರು ವಿಭಾಗಗಳು.ಫೋಟೊಗ್ರಫಿಯಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವವನು ಇವನ್ನೆಲ್ಲಾ ತಿಳಿದುಕೊಂಡು ಎದುರಿಗೊಂದು ಯುದ್ಧ ಭೂಮಿ ಅದರೊಳಗೆ ಇಂಥ ಯೋಧರು ಇದ್ದಾರೆ ಎಂದುಕೊಳ್ಳುತ್ತಾನೆ. ಮತ್ತು ಅದಕ್ಕೆ ತಕ್ಕಂತೆ ತಯಾರಿಯನ್ನು ಮಾಡಿಕೊಳ್ಳುತ್ತಾನೆ.

ಇದೆಲ್ಲಾ ಸರಿ ಇಂಥ ಯೋಧರಲ್ಲಿ ಯಾರ ಮೇಲೆ ನಾನು ಯುದ್ಧಮಾಡಬೇಕು? ಅರ್ಧಾತ್ ಯಾವ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು ಎನ್ನುವಂತಹ ಪ್ರಶ್ನೆ ಮೂಡಿತಲ್ಲವೇ? ಹೌದು ಕಣ್ರಿ, ಹೀಗೆ ಹೆಜ್ಜೆ ಹೆಜ್ಜೆಗೂ ಪ್ರಶ್ನೆಗಳು ನಮ್ಮನ್ನು ಕಾಡದಿದ್ದಲ್ಲಿ ನಾವು ಮುಂದುವರಿಯುವುದಾದರೂ ಹೇಗೆ? ಅಲ್ವಾ!  ಓಕೆ. ಓಕೆ ನಾವು ಇವುಗಳಲ್ಲಿ ಒಂದು ಇಷ್ಟದ ವಿಚಾರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ನೀವು ಮುಂದುವರಿಸಿ ಎಂದು ಮತ್ತೆ ನನ್ನನ್ನೇ ಕೇಳಬಹುದು.  ಮತ್ತೆ ನಾನು ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಮತ್ತು ಕೇಳಲೇಬೇಕು ಅದೇನೆಂದರೆ ನಿಮ್ಮ ಆಯ್ಕೆಗೆ ತಕ್ಕಂತೆ ನಿಮ್ಮಲ್ಲಿ ಕ್ಯಾಮೆರ ಇದೆಯಾ?

ಅಯ್ಯೋ ಇದೇನಿದು ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಯಾಗುತ್ತಿದ್ದರೆ ನಾವು ಫೋಟೊಗ್ರಫಿ ಮಾಡಿದ ಹಾಗೆ ಅಂತ ನಿರಾಶೆಗೊಳ್ಳಬೇಡಿ! ಇಂಥ ಪ್ರಶ್ನೆಗಳು ನಾವು ಸಾಗುವ ದಾರಿಯಲ್ಲಿ ಸಿಗುವ ಕವಲು ದಾರಿಗಳ ಜಂಕ್ಷನ್‍ಗಳ ಹಾಗೆ! ನೇರದಾರಿಯಲ್ಲಿ ಸಾಗುವಾಗ ಮುಂದಿನ ಸರ್ಕಲ್ಲಿನಲ್ಲಿ ಕಂಡ ಮೂರುದಾರಿಯಲ್ಲಿ ಯಾವದಾರಿಯಲ್ಲಿ ಸಾಗಬೇಕು ಎನ್ನುವ ಪ್ರಶ್ನೆ ಮೂಡುವ ಹಾಗೆ. ಇಲ್ಲಿ ನಾವು ಸರಿದಾರಿಯನ್ನು ಹುಡುಕಿಕೊಳ್ಳಲೇಬೇಕು! ಅದಕ್ಕೆ ಇಷ್ಟೆಲ್ಲಾ ಕತೆ ಪುರಾಣ.

ನಮಗಿಲ್ಲಿ ಉಂಟಾದ ಗೊಂದಲವೆಂದರೆ ನಾವು ಕ್ಯಾಮೆರವನ್ನು ಕೊಂಡು ಯಾವ ವಿಧದ ಫೋಟೊಗ್ರಫಿ ಮಾಡಬೇಕು ಎಂದು ನಂತರ ತೀರ್ಮಾನಿಸಬೇಕಾ? ಅಥವ ಫೋಟೊಗ್ರಫಿ ಆಯ್ಕೆ ಮಾಡಿಕೊಂಡು ನಂತರ ಅದಕ್ಕೆ ತಕ್ಕಂತ ಕ್ಯಾಮೆರ ಕೊಳ್ಳಬೇಕಾ?  ಇದೊಂತರ ಮದುವೆಯಾಗುವವರೆಗೂ ಹುಚ್ಚು ಬಿಡೋಲ್ಲ, ಹುಚ್ಚು ಬಿಡುವವರೆಗೂ ಮದುವೆಯಾಗೋಲ್ಲ ಅನ್ನುವ ಗಾದೆಯಂತೆ. ಈಗ ಮತ್ತೆ ಮುಂದೇನು ಮಾಡಬೇಕೆನ್ನುವುದನ್ನು ಒಬ್ಬ ಛಾಯಾಗ್ರಾಹಕನ ಪುಟ್ಟಕತೆಯ ಮೂಲಕ ಮುಂದಿನ ಭಾಗದಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.

ಚಿತ್ರಕೃಪೆ : ಅಂತರ್ಜಾಲ

3 ಟಿಪ್ಪಣಿಗಳು Post a comment
 1. ಜೂನ್ 27 2011

  ವೈವಿಧ್ಯತೆಯ ಲೇಖನಗಳಿಗೆ ಆಗರವಾದ ನಿಲುಮೆಗೆ ಧನ್ಯವಾದಗಳು.
  ನಿಮಗೊ೦ದು ಸಲಹೆ, ಬರಿಯ ಫೋಟೋಗ್ರಾಫಿ ಅಥವಾ ಈ ಸರಣಿಯ ಲೇಖನಗಳನ್ನು ಹುಡುಕಲು ಕಷ್ಟಸಾಧ್ಯ. ಅದಕ್ಕೆ ನೀವು ಯಾಕೆ ಲೇಖಕರ ಹೆಸರು ಅಥವಾ ಸರಣಿಯ ಹೆಸರು ಇತ್ಯಾದಿ “ಟ್ಯಾಗ್” ಮಾಡಬಾರದು?

  ಉತ್ತರ
 2. ಜೂನ್ 28 2011

  Thanks shivu avrige..
  Accha kannadadalli swacchavaagi vivarisiddira.. Yestondu vicharagalu naanu tilkonde irlilla..agi vivarisiddira.. Yestondu vicharagalu naanu tilkonde irlilla..

  ಉತ್ತರ
 3. ನವೆಂ 26 2015

  vey nice sir…

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments