ವಿಷಯದ ವಿವರಗಳಿಗೆ ದಾಟಿರಿ

ಜೂನ್ 30, 2011

3

ಅಮ್ಮ ಹೊಲಿದ ತಂಗಿಯ ಅಂಗಿ..!

‍ನಿಲುಮೆ ಮೂಲಕ

-ರವಿ ಮೂರ್ನಾಡು

          ಗೆಜ್ಜೆಗಳಿಲ್ಲದ ಕಾಲುಗಳಲ್ಲಿ ಮಗು ಅಂಬೆಗಾಲಿಕ್ಕುತ್ತಿತ್ತು. ಬೆಳಕಿನ ಚುಕ್ಕಿಯೊಂದು ಹಾಲ್ಗಲ್ಲದ ನಗೆ ಸೂಸುತ್ತಾ ಅಂಗಿ ತೊಟ್ಟು ಬರುತ್ತಿರುವಂತೆಯೇ, ಅಮ್ಮನ ಕಣ್ಣಿನಲ್ಲಿ ಹನಿಗಳು ತೊಟ್ಟಿಕ್ಕ ತೊಡಗಿದವು. ಹಾಗೇ ನೋಡುತ್ತಿದ್ದೆ. ಏಕಮ್ಮ ಅಳುತ್ತಿದ್ದೀಯ?. ಬಾಚಿ ತಬ್ಬಿಕೊಂಡ ಅಮ್ಮ, “ಇಲ್ಲ ಮಗನೇ.. ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನನಗೊಂದು ಸೀರೆ.. ತಂಗಿಗೊಂದು ಚೆಂದದ ಅಂಗಿ ತಂದು ಕೊಡಬೇಕು” ಅಂತ ಉಸುರಿದಳು. ಮನೆಯ ಹೊರಗೆ ಆಗ ತಾನೆ ಕತ್ತಲು ತಬ್ಬಿಕೊಂಡಿತ್ತು… ಹಾಗೇ ತಂಗಾಳಿ ಮುಖಕ್ಕೆ ಬಡಿದಾಗ, ಅಮ್ಮನ ಮಾತು ನನ್ನ ಹಗಲುಗಳನ್ನು ಕಾಯುತ್ತಿತ್ತು.

ವಾರಕ್ಕೆ ರವಿವಾರದ ಶಾಲೆಯ ರಜಾ ದಿನಗಳಲ್ಲಿ ಮನೆಗೆ ಬರುವಾಗಲೆಲ್ಲಾ, ಅವಳು ಕೇಳುತ್ತಾಳೆ ” ಮಾವ ಏನು ಕೊಡಲಿಲ್ಲವೇನೋ?” ಅಂತ . ಇದು ಪ್ರತೀ ಬಾರಿಯ ಪ್ರಶ್ನೆ. ಒಂದು ಬಾರಿ ಹಾಗೆ ಕೇಳಿದ್ದೆ. ಇಲ್ಲ ಸುಮ್ಮನೇ ಕೇಳಿದೆ ಅಂತ ಹೇಳಿದ್ದಳು. ತಂಗಿ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದಾಗ, ಮಗು-ತಾಯಿಯನ್ನು ನೋಡಲು ಒಮ್ಮೆ ಮಾವ ಬಂದಿದ್ದು. ತದ ನಂತರ ಬರಲಿಲ್ಲ. ವರ್ಷ ಒಂದಾಗುತ್ತಾ ಬಂತು. ನಾಲ್ಕು ತಿಂಗಳ ಮಗುವಿರುವಾಗ, ಅಜ್ಜಿ  ಎರಡು ಅಂಗಿ ತಂದಿದ್ದರು. ಅಪ್ಪ ಮಡಿಕೇರಿಯ ಶುಕ್ರವಾರದ ಸಂತೆ ದಿನ , ದಾರಿ ಬದಿಯ ಮುಸ್ಲಿಂ ವ್ಯಾಪಾರಿಯಿಂದ ತಂದ ಎರಡು ಅಂಗಿ. ಮಗು ದೊಡ್ಡದಾಗುತ್ತಿದ್ದಂತೆ ಎಲ್ಲವೂ ಸಣ್ಣದಾಗಿದ್ದವು.

ಒಂದು ಕತೆ ಓದಿದ್ದೆ. ಸುಟ್ಟು ತಿನ್ನುವ ಬಡತನದ ಮನೆ. ಅದರಲ್ಲಿ, ಒಂದು ಬಾರಿ ತಂಗಿಯ ಮನೆಗೆ ಅಣ್ಣ ಬರುತ್ತಾನೆ. ಅಲ್ಲಿ ಒಂದು ಮಗು. ಎಲ್ಲಾ ಮಾತುಕತೆ- ಉಪಚಾರ ಮುಗಿದ ಮೇಲೆ, ಮಗುವಿಗೆ ಬಟ್ಟೆ ತೆಗೆಯಲೆಂದು ಐದು ರೂಪಾಯಿ ಕೊಡುತ್ತಾನೆ. ಅಣ್ಣ ಕೊಟ್ಟ  ಹಣ ಅಂದರೆ ತವರಿನ ದೊಡ್ಡ ಉಡುಗೊರೆ, ದೇವರಿಗೆ ಸಮಾನ ಅಂತ ಹೆಮ್ಮಕ್ಕಳು ಕಾಪಾಡುತ್ತಾರೆ. ಆ ತಂಗಿ ಹಣವನ್ನು ಮಗುವಿಗೆ ಬಟ್ಟೆ ತೆಗೆಯಲು ತೆಗೆದಿಟ್ಟಿರುತ್ತಾಳೆ. ಅದು ಅಕ್ಕಿ ಇರುವ ಡಬ್ಬಿಯೊಳಗೆ. ಪ್ರಾಣಕ್ಕಿಂತ ಮಿಗಿಲು. ಗಂಡ  ಕಂಠ ಪೂರ್ತಿ ಕುಡಿಯವ ಹೆಂಡ ಕುಡುಕ. ಅಣ್ಣ ಮನೆಗೆ ಬಂದಿದ್ದಾನೆ, ಹಣ ಕೊಟ್ಟಿದ್ದಾನೆ ಅಂತ ಗಂಡನಿಗೆ ಗೊತ್ತಿತ್ತು. ಒಂದು ದಿನ ಹಾಗೇ ಆಯಿತು. ಹೆಂಡ ಕುಡಿಯಲು ಹಣವಿಲ್ಲದಾಗ ಹೆಂಡತಿಯನ್ನು ಪೀಡಿಸ ತೊಡಗಿದ. ಎಷ್ಟರ ಮಟ್ಟಿಗೆ ಅಂದರೆ , ಮನೆ ಪೂರ್ತಿ ರಂಪಾಟ- ಹೊಡೆತ- ಬಡಿತ. ಗೋಡೆಯ ಒಂದು ಬದಿಯಲ್ಲಿ ಹಾಲ್ಗಲ್ಲದ ಮಗು ಅಳುತ್ತಿರುತ್ತದೆ. ಕೈಗೆ ಸಿಕ್ಕಿದ್ದಲ್ಲಿ ಹೊಡೆಯ ತೊಡಗಿದ. ಹೊಡೆದ ರಭಸಕ್ಕೆ  ಹೆಂಡತಿಯ ತಲೆ ಗೋಡೆಗೆ ಬಡಿದು ರಕ್ತ ಸುರಿಯ ತೊಡಗಿತು.  ಹಾಗೇ ಮನೆಯೆಲ್ಲಾ ಹುಡುಕುತ್ತಾನೆ. ಜೊತೆಗೆ ಅಕ್ಕಿ ಡಬ್ಬಿಯೂ. ಹಣ ಸಿಕ್ಕಿತು. ಸೀದಾ  ಹೆಂಡದ ಅಂಗಡಿ ಹೋಗಿ ಕಂಠ ಪೂರ್ತಿ ಕುಡಿದು ಮನೆಗೆ ಬರುತ್ತಾನೆ.  ಮನೆಯಲೆಲ್ಲಾ ಜನರು ಗುಂಪು ಸೇರಿದ್ದರು. ದುಃಖ್ಖದ  ಆರ್ತಸ್ವರ ಮುಗಿಲು ಮುಟ್ಟುತ್ತಿದೆ. ಹೆಂಡತಿ ಬಿಳಿ ಬಟ್ಟೆ ಹೊದ್ದು ಮಲಗಿದ್ದಳು. ಮಾತಾಡುತ್ತಿಲ್ಲ. ಮಗು ಅದರ ಅಜ್ಜಿ ಮಡಿಲಲ್ಲಿ ನಿದ್ರಿಸುತ್ತಿತ್ತು. ಪೋಲೀಸರು ಬಂದು ವಿಚಾರಿಸಿದಾಗಲೇ ಅವನಿಗೆ ಗೊತ್ತಾಗಿದ್ದು, ಹೆಂಡಕ್ಕೆ ತೆಗೆದ ಅಂಗಿಯ ಹಣದಲ್ಲಿ  ಕುಟುಂಬದಲ್ಲಿ ಹೆಣ ಬಿತ್ತು ಅಂತ.

ಅಪ್ಪ, ಅಮ್ಮನನ್ನು ತುಂಬಾ ಪ್ರೀತಿಸುತ್ತಿದ್ದ. ಸರಿಯಾಗಿ ಗೊತ್ತಾಗಿದ್ದು, ಒಂದು ಶನಿವಾರ ಸಂಜೆ ಮನೆಗೆ ಬಂದಾಗ. ತಾಯಿ ಜ್ವರ ಬಂದು ಮಲಗಿದ್ದಳು. ಬೆಳಿಗ್ಗೆ ಎದ್ದ ಅಪ್ಪ, ಅಮ್ಮನ ಸೀರೆ-ಲಂಗ ಸೇರಿದಂತೆ ನಮ್ಮೆಲ್ಲರ ಬಟ್ಟೆಗಳನ್ನು ಕಲ್ಲಿಗೆ ಬಡಿದು, ಸೀಗೆಕಾಯಿ ಹಾಕಿ ಒಗೆಯುತ್ತಿದ್ದ. ಮುಸುರೆ ತಿಕ್ಕಿ ಕಾಫಿ ಮಾಡಿ ತಾಯಿ ಮಲಗಿದ್ದಲ್ಲಿಗೆ ಕುಡಿಸುತ್ತಿದ್ದ. ಸಂತೆಗೆ ಹೋಗಿ ಹಣವಿದ್ದರೆ,  ಒಂದು ಮುಡಿ ಮಲ್ಲಿಗೆ ಹೂ ತರುತ್ತಿದ್ದ. ತುಂಬಾ  ಪ್ರೀತಿಸುತ್ತಿದ್ದ. ಇಬ್ಬರ ಹೆಣ್ಣು ಮಗು ಬೇಕೆಂಬ ಆಸೆಗೆ ನಾನೂ ಸೇರಿದಂತೆ ಐದು ಗಂಡು ಮಕ್ಕಳ ನಂತರ ಹುಟ್ಟಿದವಳು ತಂಗಿ. ಅಮ್ಮನ ಅಂಗಿ ತೆಗೆಯುವ ಆಸೆಗೆ ನಾವೆಲ್ಲರೂ ತೊಡಕಾದೆವೋ ಅನ್ನೋ ಭಾವ, ನನ್ನೊಳಗೆ ಅಡಗಿ ಕುಳಿತು ಪ್ರಶ್ನಿಸುವಂತೆ  ಮಾಡಿದ ವ್ಯವಸ್ಥೆ ಅದಾಗಿತ್ತು.

ಒಮ್ಮೆ ತರಗತಿಯಲ್ಲಿ ಮೇಷ್ಟ್ರು  ವಿಙ್ಞಾನದ ಪಾಠ ಮಾಡುತ್ತಿದ್ದರು. ಬಡತನ- ಅನಕ್ಷರತೆಗೆ ಜನಸಂಖ್ಯಾ ಸ್ಫೋಟವೇ ಕಾರಣ ಅಂದರು. ನಮ್ಮ ಮನೆಯಲ್ಲಿರುವ ಎಂಟು ಮಂದಿಯ ಬಗ್ಗೆ  ಕುಳಿತಲ್ಲೇ ಆಲೋಚಿಸಿದ್ದೆ. ಭಾರತದ ಬಡತನ- ಅನಕ್ಷರತೆಯ ಅಪವಾದಕ್ಕೆ ನಮ್ಮ ಮನೆ ಒಂದು ಉದಾಹರಣೆಯಾಗುತ್ತಿದ್ದಂತೆ, ತದನಂತರದ ವರ್ಷಗಳ  ಕನ್ನಡದ ಅಂತಿಮ ಪರೀಕ್ಷೆಗಳಲ್ಲಿ ನನಗೆ ಶೇ.ತೊಂಬತ್ತೇಳರಷ್ಟು ಅಂಕ ಲಭಿಸಲು ಪ್ರಾರಂಭವಾಯಿತು.. ಆರೋಗ್ಯ ಇಲಾಖೆಯ “ಗಂಡಾಗಲಿ- ಹೆಣ್ಣಾಗಲಿ ಮಕ್ಕಳೆರಡೇ ಇರಲಿ” ಅನ್ನುವ ಬರಹವನ್ನು ಓದುವ ಅಥವಾ ಅರ್ಥಯಿಸುವ ಕಾಲ ಚಿತ್ರಣ, ಹೆಣ್ಣು ಮಗುವನ್ನು ಕಾಣುವ ಆಸೆಯಲ್ಲಿ ಅಪ್ಪ – ಅಮ್ಮ ಮರೆತು ಹೋದರು. ದಿನದ ಒಪ್ಪೊತ್ತಿನ ಊಟಕ್ಕೆ ಪರದಾಡಿದ ಮನೆ, ಇಬ್ಬರು ಕೂಲಿ ಕಾರ್ಮಿಕರಾಗಿ ದುಡಿದು ಆರು ಹೊಟ್ಟೆಗಳನ್ನು ತುಂಬಿಸುವಾಗ, “ಕಂಪ್ಯೂಟರ್” ಜಗತ್ತಿನ ಕನಸು ಕಂಡ  ನನ್ನ ಗುರಿ, ಮಾವನ ಮನೆಯಲ್ಲಿ ಪುಸ್ತಕ ಹಿಡಿಯುತಿತ್ತು.. ಒಂದರ ಹಿಂದೆ ಒಂದರಂತೆ ಆರು ಮಕ್ಕಳು ಜಗತ್ತಿಗೆ ಬಂದಾಗ, ಮೃಷ್ಠಾನ್ನ ಭೋಜನದ ಸುವಾಸನೆ- ಬಣ್ಣದ ಬಟ್ಟೆಯ ಕನಸುಗಳು  ಅಣಕಿಸಿತು ಅನ್ನುವುದು ಸತ್ಯ. ಹಬ್ಬ – ಹರಿದಿನಗಳು ,ಪಕ್ಕದ ಮನೆಯವರ ಸಂತೋಷಕ್ಕೆ ಚಪ್ಪಾಳೆ ತಟ್ಟಿ  ಆನಂದಿಸುವುದು ಮಾತ್ರ ಬಡತನಕ್ಕೆ ಬರೆದ ಹಣೆಬರಹ. ಶಾಲೆಗೆ ಹೋಗುವಾಗ, ನನ್ನ ತಮ್ಮಂದಿರಲ್ಲಿ ಒಬ್ಬ ಪಕ್ಕದ ತೋಟದ ಸಾಹುಕಾರರ ದನ ನೋಡುವುದೋ,ಇನ್ನೊಬ್ಬ ದನಗಳಿಗೆ ಹುಲ್ಲು ತರುವುದೋ, ಮತ್ತೊಬ್ಬ ಪುಟಾಣಿಗಳಾದ ತಂಗಿ- ತಮ್ಮನನ್ನು ನೋಡಿಕೊಳ್ಳುವ ಜಗತ್ತಿನಲ್ಲಿ ನಟರಾಗಿದ್ದರು. ದಿನನಿತ್ಯದ ಬೆವರಿಗೊಂದು ಅಪ್ಪ-ಅಮ್ಮ  ಬದುಕಿನ ಭಾಷ್ಯ ಬರೆಯುತ್ತಿದ್ದಂತೆ, ತಂಗಿಗೊಂದು ಅಂಗಿ ತೆಗೆಯುವ ಆಸೆ  ಅಮ್ಮನಿಗೆ ಚಿಗುರೊಡೆಯುತ್ತದೆ.

ಮಾವಂದಿರು ಒಂದು ಸಣ್ಣ ಅಂಗಿಯಾದರೂ ಮಗಳಿಗೆ ತಂದಾರೂ ?!. ದೊಡ್ಡ ಮಾವ ಮಡಿಕೇರಿ ಸಮೀಪದ ಊರಿನಲ್ಲಿ ಪೋಲಿಸ್‍ ಹುದ್ದೆಯಲ್ಲಿದ್ದ. ಇನ್ನೊಬ್ಬ ಮಾವ, ಬಟ್ಟೆ ಹೊಲಿಯುವ ” ಟೈಲರ‍್”. ಮಡಿಕೇರಿಯಿಂದ  ಖಾಸಗಿ ಬಸ್‍ನಲ್ಲಿ ಬಂದು, ಇಳಿದ ಮೇಲೆ, ಎಂಟು ಕಿ. ಮೀ. ದೂರ ನಡೆದು ತಲುಪಬೇಕಾದ ಮನೆಗೆ,  ಒಬ್ಬ ಪೋಲಿಸ್‍ ಅಥವಾ ಮೂರ್ನಾಡು ಪಟ್ಟಣದಲ್ಲಿ ಖ್ಯಾತಿ ಪಡೆದ ಟೈಲರ‍್ ಬರುವುದು ಕನಸಿನ ಮಾತು. ಅದು ಬಡತನದ ಕಪ್ಪು ಹೊದಿಕೆ ಹೊದ್ದು, ಅಡುಗೆ ಕೋಣೆಯಿಂದ ಹೊಗೆ ಬರುವ  ಮನೆಗೆ. ಹೆಮ್ಮನಸ್ಸು ಹಾಗೇ ತವರಿನ ಮುಖಗಳಿಗೆ ಕೊರಗುತ್ತಿತ್ತು, ಸಣ್ಣರಿರುವಾಗ ಎತ್ತಿ ಆಡಿಸಿದ ತಮ್ಮಂದಿರಲ್ಲವೇ?!, ಅಕ್ಕನನ್ನು ನೋಡಲು ಬಂದಾರು….! ಬರಲಿಲ್ಲ ಅನ್ನುವ ಕಂದರದಲ್ಲಿಯೂ ಇಣುಕಿ ನೋಡುವುದು, ಮದುವೆಯಾಗಿ ಹೋದ ಹೆಮ್ಮನಸ್ಸುಗಳ ಕನಸು. ಅಮ್ಮನೂ ಹಾಗೇ ಮಾಡಿದಳು. ದೊಡ್ಡ ಪರೀಕ್ಷೆ ಮುಗಿದು ಮನೆಗೆ ಬಂದಿದ್ದ ನಾನು, ಅಮ್ಮನ ತೊಳಲಾಟವನ್ನು ಅವಳ ಭಾವದಲ್ಲಿ ಸೆರೆ ಹಿಡಿಯ ತೊಡಗಿದ್ದೆ.

ಹಾಗೇ ದಿನಗಳು ಓಡುತ್ತಿದ್ದಂತೆ, ಒಂದು ಶುಕ್ರವಾರದ ದಿನ ತನ್ನ ಕಬ್ಬಿಣದ ಪೆಟ್ಟಿಗೆಯನ್ನು ತಡಕಾಡಿದ್ದಳು. ಆಗ ಸಿಕ್ಕಿತು ಹನ್ನೆರಡು ವರ್ಷಗಳ ಹಿಂದೆ  ಅಜ್ಜಿ  ಅವಳ ಮದುವೆಗೆ ಉಡಲು ತೆಗೆದ ಒಂದು ಸೀರೆ. ಚೆಂದದ ಸೀರೆ,  ಹೂಗಳ ಕುಸುರಿ, ಮಧ್ಯೆ ಮಧ್ಯದಲ್ಲಿ ಬಣ್ಣದ ಗೆರೆಗಳು.  ತಂಗಿಯ  ಒಂದು ಸಣ್ಣದಾದ ಅಂಗಿಯ ಅಳತೆಗೆ ತಕ್ಕಂತೆ, ಕಬ್ಬಿಣದ ಕತ್ತಿಯಿಂದ  ಮದುವೆ ಸೀರೆಯ  ಒಂದು ಭಾಗವನ್ನು ಕತ್ತರಿಸಿದ್ದಳು. ಕೈಗೆ-ಕೊರಳ ಪಟ್ಟಿಗೆ- ಸೊಂಟದ ಭಾಗಕ್ಕೆ ಎಲ್ಲವೂ ಸೇರಿದಂತೆ  ಮಗುವಿನ ದೇಹಕ್ಕೆ ಹೊಂದುವಂತ ಎಲ್ಲಾ ಭಾಗಗಳ ಅಳತೆಯ ತುಂಡು ಮಾಡಿ , ಬೇರೆ ಬೇರೆ ಇಟ್ಟಿದ್ದಳು. ಹಾಗೇ ಅವುಗಳನ್ನು ಪೆಟ್ಟಿಗೆಯೊಳಗೆ ಕಟ್ಟಿ ಹಾಕಿ ಬೀಗ ಹಾಕಿದ್ದಳು.

ಬೆಳಿಗ್ಗೆ ತೋಟದ ಕೂಲಿ ಕೆಲಸ ಮುಗಿಸಿ ಬಂದು, ಸಂಜೆ ರಾತ್ರಿ ಎಲ್ಲರ ಊಟವಾದ ಮೇಲೆ ಅಮ್ಮನ ಅಂಗಿ ಹೊಲಿಯುವ ಕೆಲಸ ಪ್ರಾರಂಭವಾಯಿತು. ಸೂಜಿ ನೂಲಿನಿಂದ ಕೈಯಿಂದ ಪ್ರತೀ ದಿನ ರಾತ್ರಿ ಹೊಲಿಯ ತೊಡಗಿದಳು. ದಿನಗಳು ಉರುಳುತ್ತಲೇ ಅವಳ  ಅಂಗಿಯ ಕನಸು ಒಂದೊಂದಾಗಿ ರೂಪ ಪಡೆಯ ತೊಡಗಿತು. ಪ್ರಾರಂಭಿಸುವ ಒಂದೆರಡು ದಿನ ಹೆಚ್ಚು ಮೌನವಹಿಸುತ್ತಿದ್ದ ಅಮ್ಮ, ಅಂಗಿಯು ಒಂದು ರೂಪಕ್ಕೆ ಬರುತ್ತಿದ್ದಂತೆ ಕೊಂಚ ಸಂತೋಷ-ನಗು ಅವಳ ಮುಖದಲ್ಲಿ  ಅರಳ ತೊಡಗಿತ್ತು. ನಮ್ಮೆಲ್ಲರೊಂದಿಗೆ  ಅಗತ್ಯಕ್ಕಿಂತ ಹೆಚ್ಚು ಮಾತನಾಡ ತೊಡಗಿದಳು.

ಕಳೆದ ವಾರದ ಶುಕ್ರವಾರದ ಸಂತೆ ದಿನದಿಂದ,  ಇನ್ನೊಂದು ಶುಕ್ರವಾರದ ಸಂತೆ ದಿನದ ಹಿಂದಿನ ರಾತ್ರಿಗೆ ತಂಗಿಯ ಅಂಗಿ ಸಿದ್ಧವಾಯಿತು. ಅದು ಹೇಗಿತ್ತು ಅಂದರೆ ದರ್ಜಿಯೂ ನಾಚಬೇಕು..! ಅಮ್ಮನ ಕುಸುರಿಯ ಅಪ್ಪಟ ಕೈ ಚಳಕ, ಅಷ್ಟೇ ನಾಜೂಕಾಗಿ ರೂಪುಗೊಂಡ ಅಂಗಿಯಲ್ಲಿ ನೃತ್ಯವಾಡುತ್ತಿದ್ದವು. ಹೆಣ್ಣು ಮಗು ಬೇಕೆಂಬ ಅವಳ ಆಸೆಗೆ ಹುಟ್ಟಿದ ತಂಗಿಯಂತೆ , ಆ ಅಂಗಿ ಅವಳ ಕೈಯಲ್ಲಿ ಲಾಸ್ಯವಾಡ ತೊಡಗಿತ್ತು. ಎಂದಿನ ಶುಕ್ರವಾರದ ಬೆಳಿಗ್ಗೆ ಬೇಗ ಎದ್ದ  ಅವಳು, ತಂಗಿಯನ್ನು ಸ್ನಾನ ಮಾಡಿಸಿ , ಆ ಕನಸಿನ ಮೂರ್ತ ರೂಪದ ಅಂಗಿಯನ್ನು ತೊಡಿಸಿದ್ದಳು. ಹಾಗೆಯೇ, ಅಡುಗೆ ಒಲೆಯ ಮುಂದೆ ಕುಳಿತು  ಯಾರಾದರೂ ನೋಡಿದರೆ ದೃಷ್ಠಿಯಾಗದೆಂಬಂತೆ ಮಗುವಿನ ಕೆನ್ನೆಗೆ ಒಂದು ಸಣ್ಣ  ಕಪ್ಪು ಬೊಟ್ಟು ಇಟ್ಟಳು. ಒಂದು ಸಂತಸದ ಕಣ್ಣೀರು ಮಗುವಿನ ಅಂಗಿಯ ಮೇಲೆ ಬಿದ್ದಿತು.

ಮಗುವನ್ನು ಮನೆಯ ಹೊರಗೆ ಅಂಗಳದಲ್ಲಿ  ಆಟವಾಡಲು ಬಿಟ್ಟಳು. ಅದು ಗೋಡೆ ಹಿಡಿದು ಹೆಜ್ಜೆ ಹಾಕ ತೊಡಗಿತ್ತು, ಜೊತೆಗೆ ಅಂಗಿಯೂ. ಅದರ ಪಕ್ಕದಲ್ಲಿ ನಾನು ನಿಂತು ಸಂತಸ ಪಡುತ್ತಿರುವಾಗ, ಮನೆಯ ಬಾಗಿಲಲ್ಲಿ ಕುಳಿತ ಅಮ್ಮನ ಕಣ್ಣಿನಲ್ಲಿ ಹನಿಯಾಗುತ್ತಿತ್ತು. ಅವಳ ಸೀರೆ ಸೆರಗು ಅದನ್ನು ಒರೆಸುತ್ತಿತ್ತು.  ಒಂದು ಕನಸು ಸಾರ್ಥಕಗೊಂಡು ಜೀವ ಪಡೆದ ಭಾವ. ಏಕಮ್ಮ ಅಳುತ್ತಿದ್ದೀಯ?. ಉಕ್ಕಿ ಬಂದ ಅವಳ ಸಂತಸದ ದುಃಖ್ಖ, ನನ್ನನ್ನು ಭಾಚಿ ತಬ್ಬಿಕೊಂಡಿತು. ಹಾಗೆಯೇ ಉಸುರಿದಳು ” ಮಗನೇ… ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನನಗೊಂದು ಸೀರೆ ತಂದು ಕೊಡುತ್ತೀಯಾ? ನಿನ್ನ ತಂಗಿಗೆ ಒಂದು ಚೆಂದದ ಬಟ್ಟೆ ತೆಗೆದುಕೊಡು ಮಗನೇ”. ಹಾಗಂತ ಜಗನ್ಮಾತೆ ಹೆಣ್ಣು ಜನ್ಮದ ಮಾತು, ನಾನು ದಿನನಿತ್ಯ ಕೈ ಮುಗಿಯುವ ದೇವರ ಭಾವಚಿತ್ರದ ಮುಂದಿನ ಪ್ರಾರ್ಥನೆಯಾಯಿತು. ಆ ಕ್ಷಣ ಅಮ್ಮನ ದುಃಖ್ಖಕ್ಕೆ ನಾನು ನಗು ಸೇರಿಸಿದ್ದೆ. ಮಕ್ಕಳ ಬಗೆಗೆ ಭಾವ ತುಂಬಿದ ಅಮ್ಮನ ಬದುಕಿಗೆ, ನಾನು ಭಾವವಾದೆ, ಜಗತ್ತಾದೆ. ಹಾಗೆಯೇ ಬದುಕಾದೆ.

*******************

Read more from ಲೇಖನಗಳು
3 ಟಿಪ್ಪಣಿಗಳು Post a comment
 1. ಜೂನ್ 30 2011

  ಕಥೆ ಮುಂದುವರಿಯಬೇಕಿತ್ತು…ಮಗು ಅಮ್ಮನಿಗೆ ಸೀರೆ ತಂದು ಕೊಟ್ಟಾಗ ಅಮ್ಮನ ಭಾವಗಳನ್ನು ವಿವರಿಸಬೇಕಿತ್ತು……ಇದೆಲ್ಲ ಅನಿಸಿತು..ಓದಿದ ಮೇಲೆ….ಹೆಮ್ಮನಸ್ಸು ಕನ್ನೆರಗದೆ ಇರದು ನಿಮ್ಮೀ ಬರಹ ಓದಿದರೆ…

  ಉತ್ತರ
  • ಜೂನ್ 30 2011

   amita ravikiran :
   ಕಥೆ ಮುಂದುವರಿಯಬೇಕಿತ್ತು…ಮಗು ಅಮ್ಮನಿಗೆ ಸೀರೆ ತಂದು ಕೊಟ್ಟಾಗ ಅಮ್ಮನ ಭಾವಗಳನ್ನು ವಿವರಿಸಬೇಕಿತ್ತು……ಇದೆಲ್ಲ ಅನಿಸಿತು..ಓದಿದ ಮೇಲೆ….ಹೆಮ್ಮನಸ್ಸು ಕನ್ನೆರಗದೆ ಇರದು ನಿಮ್ಮೀ ಬರಹ ಓದಿದರೆ…

   ಕಣ್ಣೀರು ಬರದೆ ಇರಲಾರದು…

   ಉತ್ತರ
 2. ರವಿ ಮೂರ್ನಾಡು
  ಜೂನ್ 30 2011

  ಖಂಡಿತಾವಾಗಿ ಗೌರವಾನ್ವಿತ ಅಮಿತರವರೆ.ಅದು ಮುಂದಿನ ನನ್ನ ಇನ್ನೊಂದು ಕಥೆಯಲ್ಲಿ ಬರುತ್ತದೆ.ನಿಮಗೆ ಧನ್ಯವಾದಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments