ವಿಷಯದ ವಿವರಗಳಿಗೆ ದಾಟಿರಿ

ಜುಲೈ 13, 2011

ಫೀವರ್ ಗೆ ಹಿಂದಿ ಜ್ವರ – ಎಚ್ಚೆತ್ತುಕೊಳ್ಳಲು ಸಕಾಲ !

‍ನಿಲುಮೆ ಮೂಲಕ

-ವಸಂತ್ ಶೆಟ್ಟಿ

ಎಂದಿನಂತೆ ಕಚೇರಿಗೆ ಹೋಗ್ತಾ ಎಫ್.ಎಮ್ ಹಾಕಿದ್ರೆ ಅವಕ್ಕಾದೆ. 104% ಬೊಂಬಾಟ್ ಕನ್ನಡ ಹಾಡುಗಳು ಅಂತೆಲ್ಲ ನಮ್ಮ ಮೆಚ್ಚುಗೆ ಗಳಿಸಿದ್ದ ಫೀವರ್ ಎಫ್.ಎಮ್ ಕನ್ನಡ ಹಾಡಿಗೆ ಸೋಡಾ ಚೀಟಿ ಕೊಟ್ಟು ಕೇವಲ ಹಿಂದಿ ಹಾಡುಗಳನ್ನು ಹಾಕೋಕೆ ಶುರು ಮಾಡಿದ್ರು. ಒಂದ್ ಸಲಿ ಹಾಕಿರೋ ಸ್ಟೇಶನ್ ಸರಿಗಿದೆಯಾ ಅಂತ ನೋಡ್ಕೊಂಡೆ. ಸರಿಯಾಗೇ ಇದೆ, ಆದರೆ ಬೊಂಬಾಟ್ ಕನ್ನಡ ವಾಹಿನಿಯಲ್ಲಿ ಹಿಂದಿ ದೇವತೆಯನ್ನು ಪ್ರತಿಷ್ಟಾಪಿಸಿಯಾಗಿತ್ತು. ಸರಿ ಯಾವುದಕ್ಕೂ ಒಂದ್ ಸಲಿ ಫೀವರ್ ಎಫ್.ಎಮ್ ಅನ್ನೇ ಸಂಪರ್ಕಿಸಿ ಯಾಕ್ರಪ್ಪ ಹೀಗೆ ಅಂತ ಕೇಳೊಣ ಅಂತ ಅವರ ಫೇಸ್ ಬುಕ್ ಪುಟದಲ್ಲಿ ಒಬ್ಬ ಕೇಳುಗನಾಗಿ ವಿಚಾರಿಸಿದ್ರೆ ಸಿಕ್ಕ ಉತ್ತರ: “We have changed the sound of the station”, “Music has no language” “Hindi is our national language” ಅನ್ನೋ ಹಸಿ ಸುಳ್ಳಿನ ಕಾಗಕ್ಕ-ಗುಬ್ಬಕ್ಕನ ಕತೆಗಳು. ಇದನ್ನು ಪ್ರತಿಭಟಿಸಿ ಗ್ರಾಹಕರಾಗಿ ನಮ್ಮ ಆಯ್ಕೆ ಕನ್ನಡ, ಅದನ್ನು ಕೊಡದ ವಾಹಿನಿಗೆ ಬೆಂಗಳೂರಿನ ಮಾರುಕಟ್ಟೆಯೇ ಬುದ್ದಿ ಕಲಿಸುತ್ತೆ ಅಂತ ಹೇಳಿದೆ. ಅದಿರಲಿ, ಫೀವರ್ ಎಫ್.ಎಮ್ ನದ್ದು ಒಂದು ಉದಾಹರಣೆಯಷ್ಟೇ. ಇವತ್ತು ನಮ್ಮ ನಾಡಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಈ ನೆಲದ ನುಡಿಯನ್ನು ಬದಿಗೊತ್ತಿ ಪ್ರತಿ ಹಂತದಲ್ಲೂ ವಲಸೆ ಬಂದ ಯಾರೋ ನಾಲ್ಕು ಜನರಿಗಾಗಿ ವ್ಯವಸ್ಥೆಯೆಲ್ಲ ಕಟ್ಟಬೇಕು, ವ್ಯವಸ್ಥಯೆಲ್ಲ ಇರಬೇಕು ಅನ್ನುವಂತೆ ವರ್ತಿಸುವ ವಲಸಿಗರಿಗೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಈ ವ್ಯವಸ್ಥೆಗೆ ಏನೆನ್ನಬೇಕು. ಯಾಕೆ ಹಾಗ್ ಹೇಳಿದೆ ಅನ್ನೋದನ್ನ ಒಂದ್ ನಾಲ್ಕು ಉದಾಹರಣೆ ಜೊತೆ ಹೇಳ್ತಿನಿ.

  • ಬೆಂಗಳೂರಿನ ಟ್ರಾಫಿಕ್ ಪೋಲಿಸರಿಗೆ (ಬಿಟಿಪಿ) ಹಿಂದಿ/ಇಂಗ್ಲಿಷ್ ಬರಲ್ಲ. ಅದರಿಂದ ಎಷ್ಟು ತೊಂದರೆಯಾಯ್ತು ಗೊತ್ತಾ ಅಂತ ಒಂದಿಷ್ಟು ಜನ ಬಿಟಿಪಿಯ ಫೇಸ್ ಬುಕ್ ತಾಣದಲ್ಲಿ ಹೋಗಿ ಗೋಳು ತೋಡಿಕೊಳ್ಳುತ್ತಾರೆ. ಯಾರಪ್ಪ ಈ ನಾಲ್ಕು ಜನರು ಅಂದ್ರೆ ಅದೇ ಅನ್ನ ಅರಸಿ ಬೆಂಗಳೂರಿಗೆ ವಲಸೆ ಬಂದ ಮಹನೀಯರು. ವಲಸೆ ಬಂದ ನಾಡಿನ ವ್ಯವಸ್ಥೆ ತನಗೆ ಅನುಕೂಲವಾಗುವಂತಿರಬೇಕು, ತನಗೆ ಚೂರೇ ಚೂರು ಕಷ್ಟವಾದರೂ ಅದನ್ನು ಸಹಿಸಲು ಆಗದು ಅನ್ನುವ ಈ ಜನರ ಮನಸ್ಥಿತಿ ಎಂತದ್ದು? ವಲಸಿಗರಿಗಾಗಿಯೇ ನಾಡಿನ ಎಲ್ಲ ವ್ಯವಸ್ಥೆಗಳನ್ನು ಜಗತ್ತಿನಲ್ಲಿ ಎಲ್ಲಿಯಾದರೂ ಕಟ್ಟಿದ್ದಾರಾ?

  • ಬಿಟಿಪಿ ಸುರಕ್ಷಿತವಾಗಿ ಗಾಡಿ ಓಡಿಸುವ ಬಗ್ಗೆ ಅರಿವು ಮೂಡಿಸುವ ವಿಡಿಯೋ ಒಂದನ್ನು ಮಾಡುತ್ತೆ, ಆದರೆ ಅದರ ಹಿನ್ನೆಲೆಯಲ್ಲಿ ಇಲ್ಲಾರಿಗೂ ತಿಳಿಯದ ಹಿಂದಿ ಹಾಡೊಂದನ್ನು ಬಳಸುತ್ತೆ. ಕೇಳಿದರೆ ಸಂದೇಶ ಮುಖ್ಯ, ಹಾಡಲ್ಲ ಅಂತಾರೆ. ಪ್ರತಿಭಟಿಸಿ ಕೇಳಿದರೆ ನೀವೇ ಕನ್ನಡ ಹಾಡು ಹಾಡೋರನ್ನ ಕರೆದುಕೊಂಡು ಬನ್ನಿ ಅಂತಾರೆ. ಜನರ ಒಳಿತಿಗಾಗಿ ಇಂತಹದೊಂದು ಕಾರ್ಯಕ್ರಮವನ್ನು ನಮ್ಮದೇ ತೆರಿಗೆ ಹಣದಲ್ಲಿ ರೂಪಿಸುವಾಗ ಅದು ಜನರನ್ನು ತಲುಪಲು ಅವರ ನುಡಿಯಲ್ಲಿರಬೇಕು ಅನ್ನುವುದು ಇವರಿಗೆ ತಿಳಿಯದ ವಿಚಾರವೇ ಅಥವಾ ತಿಳಿದರೂ ಅದರ ಬಗ್ಗೆ ಅಸಡ್ಡೆಯೇ ಅಥವಾ ಮತ್ತದೇ ನಾಲ್ಕು ಮತ್ತೊಂದು ವಲಸಿಗರಿಗೆ ತೊಂದರೆಯಾಗದಿರಲಿ ಅನ್ನುವ “ಮನೆಗೆ ಮಾರಿ, ಊರಿಗೆ ಉಪಕಾರಿ” ಮನಸ್ಥಿತಿಯೇ? ಹೇಳಿ, ವಲಸಿಗರಿಗಾಗಿ ನಾಡಿನ ಎಲ್ಲ ವ್ಯವಸ್ಥೆ ಇರಬೇಕಾದದ್ದೇ ಇಲ್ಲ ನೆಲಸಿಗನಿಗಾಗಿಯೇ?
  • ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ವಲಸಿಗರು ವರ್ಷದೊಳಗೆ ಕನ್ನಡ ಕಲಿಯುವಂತಾಗಬೇಕು ಅನ್ನುವ ಸಲಹೆಯೊಂದನ್ನು ಸರ್ಕಾರಕ್ಕೆ ನೀಡಿದರೆ ಅದರ ಬಗ್ಗೆ ಜಗತ್ತೇ ತಲೆಕೆಳಗಾಗುವಂತೆ ಕೆಲವು ಇಂಗ್ಲಿಷ್ ಪತ್ರಿಕೆಗಳು ಆಡುತ್ತವೆ, ಅವುಗಳನ್ನು ಓದುವ ಅದೇ ವಲಸಿಗರೂ ಮೈ ಮೇಲೆ ದೆವ್ವ  ಬಂದಂತೆ ಪ್ರತಿಕ್ರಿಯಿಸುತ್ತಾರೆ. ಏನು ಅವರ ಅಳಲು ಅಂದರೆ, ವಲಸಿಗರಿಗೆ ಅದೆಷ್ಟು ತೊಂದರೆಯಾಗಲ್ಲ, ಹೀಗೆಲ್ಲ ವಲಸಿಗರ ಮೇಲೆ ಹೇರಿಕೆ ಮಾಡಬಾರದು ಅಂತಾರೆ. ಇದೇ ಜನರು ಬೇರೆ ದೇಶಕ್ಕೆ ವಲಸೆ ಹೋದಾಗ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಅಲ್ಲಿನ ನುಡಿ ಕಲಿಯುವುದಿಲ್ಲವೇ? ಆದರೆ ಅಂತದೊಂದು ಸಲಹೆ ಇಲ್ಲಿ ಕೇಳಿದ ತಕ್ಷಣವೇ ಸಂವಿಧಾನಕ್ಕೆ ಅಪಚಾರವಾಯ್ತು ಈ ದೇಶದ್ರೋಹಿಗಳಿಂದ ಅನ್ನುವಂತೆ ಪ್ರತಿಕ್ರಿಯಿಸುವ ಇವರ ಮನಸ್ಥಿತಿ ಎಂತಹುದು? ಕರ್ನಾಟಕಕ್ಕೂ ಒಂದು ಅಸ್ಮಿತೆಯಿದೆ, ಗುರುತಿದೆ ಅನ್ನುವುದನ್ನು ಎಂದಿಗಾದರೂ ಈ ಜನರು ಗುರುತಿಸಿಯಾರೇ? ವೈವಿಧ್ಯತೆಯನ್ನು ಅಪ್ಪಿಕೊಳ್ಳುವುದಿರಲಿ, ಒಪ್ಪಿಕೊಳ್ಳಲು ಸಿದ್ದವಿರದ ಜನರಿಗೆ ಏನು ಹೇಳುವುದು?
  • ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಜನ ಸಾಮಾನ್ಯನಿಗೂ ದೊರಕಿಸುವುದು ಈ-ಗವರ್ನನ್ಸ್ ನ ಮೂಲ ಉದ್ದೇಶ. ಇರುವ ಎಲ್ಲ ತಾಣಗಳಲ್ಲೂ ಇಂಗ್ಲಿಷ್, ಅಲ್ಲಲ್ಲಿ ಹಿಂದಿ ಬಳಸುತ್ತಾ, ಎಲ್ಲೂ ನೆಟ್ಟಗೆ ಕನ್ನಡ ಬಳಸದ ರಾಜ್ಯ ಸರ್ಕಾರಿ ವ್ಯವಸ್ಥೆ ಯಾರಿಗಾಗಿ ಈ ವ್ಯವಸ್ಥೆ ಮಾಡಿರುವುದು? ವಲಸಿಗರಿಗೆ ತೊಂದರೆಯಾಗಬಾರದು ಅನ್ನುವ ಕಾಳಜಿಯೇ ಇಲ್ಲೂ ಕೆಲಸ ಮಾಡಿರುವುದಾ?

ಒಂದಿಡೀ ನಾಡಿನ ವ್ಯವಸ್ಥೆಯನ್ನು ಆ ಜನರ ನುಡಿಯ ಸುತ್ತ ರೂಪಿಸದೇ ವಲಸೆ ಬರುವ ಮೂರು, ಹನ್ನೊಂದು ಜನರಿಗಾಗಿ, ಅವರ ಅನುಕೂಲಕ್ಕಾಗಿ ರೂಪಿಸುವುದು ಎಂತಹ ಪೆದ್ದುತನವಲ್ಲವೇ? ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಬಗ್ಗೆ ನಮ್ಮೆಲ್ಲ ಗೆಳೆಯರಿಗೂ ಅರಿವು ಮೂಡಿಸಬೇಕಿದೆ. ಆ ಸುಳ್ಳನ್ನು ಒಪ್ಪುವುದು ನಮ್ಮ ಒಗ್ಗಟ್ಟನ್ನು ಇನ್ನಷ್ಟು ಒಡೆಯುವುದು ಅನ್ನುವದನ್ನು ನಾವು ಮನಗಾಣಬೇಕಿದೆ. ನಮ್ಮೆಲ್ಲ ವ್ಯವಸ್ಥೆ ನಮಗಾಗಿ ನಮ್ಮ ನುಡಿಯಲ್ಲಿರಬೇಕು ಎಂದು ಒತ್ತಾಯಿಸಬೇಕಿದೆ. ವ್ಯವಸ್ಥೆಯ ಎಲ್ಲ ಹಂತದಲ್ಲೂ ಎಲ್ಲ ಅನುಕೂಲಗಳನ್ನು ಈ ನಾಡಿನ ಜನ ಪಡೆಯುವಂತಾಗಲು ನಮ್ಮ ನುಡಿಗೆ ತಕ್ಕ ಸ್ಥಾನ ಸಿಗಬೇಕಿದೆ ಮತ್ತು ಅದನ್ನು ಕೊಡಿಸಿಕೊಳ್ಳುವಲ್ಲಿ ನಮ್ಮ ಪಾತ್ರ ದೊಡ್ಡದಿದೆ. ಯಾರೂ ಮುರಿಯದ ನಮ್ಮ ಒಗ್ಗಟೊಂದೇ ಇದನ್ನು ಆಗುಮಾಡಿಸಬಲ್ಲುದು. ಈ ಒಗ್ಗಟ್ಟನ್ನು ಸಾಧಿಸಲು ಇರುವ ಸಾಧನ ನಾವಾಡುವ ಕನ್ನಡ ನುಡಿಯಾಗಿದೆ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments