ವಿಷಯದ ವಿವರಗಳಿಗೆ ದಾಟಿರಿ

ಜುಲೈ 27, 2011

7

ರಾಶಿ ಮತ್ತು ನಕ್ಷತ್ರ…

‍ನಿಲುಮೆ ಮೂಲಕ

– ಗೋವಿಂದ ರಾವ್ ವಿ ಅಡಮನೆ

ಜನ್ಮರಾಶಿ ಮತ್ತು ನಕ್ಷತ್ರಗಳಿಗೆ ಜ್ಯೋತಿಷಿಗಳು ಬಲು ಪ್ರಾಧಾನ್ಯ ನೀಡುತ್ತಾರೆ. ಅವರು ನೀಡುತ್ತಿರುವ ಪ್ರಾಧಾನ್ಯ ಯುಕ್ತವಾದದ್ದೇ ಎಂಬುದನ್ನು ನೀವೇ ತೀರ್ಮಾನಿಸಲು ಅಗತ್ಯವಾದ ಕೆಲವು ಮೂಲಭೂತ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.

ರಾಶಿಗೆ ಸಂಬಂಧಿಸಿದಂತೆ ನೀವು ತಿಳಿದಿರಲೇ ಬೇಕಾದ ಅಂಶಗಳು ಇಂತಿವೆ

ರಾಶಿಯನ್ನು, ಅರ್ಥಾತ್ ತಾರಾರಾಶಿಯನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಅಧ್ಯಯಿಸಲು ಅನುಕೂಲ ಆಗಲಿ ಎಂದು ಖಗೋಲದ ಒಟ್ಟು ಕ್ಷೇತ್ರವನ್ನು ೮೮ ಭಾಗಗಳಾಗಿ ಇಂಟರ್ ನ್ಯಾಶನಲ್ ಅಸ್ಟ್ರನಾಮಿಕಲ್ ಯೂನಿಯನ್ ವಿಭಜಿಸಿದೆ. ಆಧುನಿಕ ಖಗೋಲವಿಜ್ಞಾನದ ಪ್ರಕಾರ ಈ ವಿಭಾಗಗಳಿಗೆ ತಾರಾರಾಶಿಗಳು (ಕಾನ್ಸ್ಟಲೇಷನ್ಸ್) ಎಂದು ಹೆಸರು. ಎಂದೇ, ಖಗೋಲದ ಒಂದು ಸೀಮಿತ ಕ್ಷೇತ್ರದಲ್ಲಿ ಇರುವ ತಾರೆಗಳ ಸಮೂಹವೇ ರಾಶಿ, ಪ್ರತೀ ಭಾಗದಲ್ಲಿಯೂ ಅನೇಕ ತಾರೆಗಳು ಇರುವುದರಿಂದ. ತಾರಾನಿಬಿಡ ಆಕಾಶವನ್ನು ತದೇಕಚಿತ್ತದಿಂದ ಅವಲೋಕಿಸುತ್ತಿದ್ದರೆ ಕೆಲವು ಒಂಟಿ ತಾರೆಗಳು ತಮ್ಮ ಉಜ್ವಲತೆಯಿಂದಾಗಿ ನಮ್ಮ ಗಮನ ಮೊದಲು ಸೆಳೆಯುತ್ತವೆ. ತದನಂತರ ಸಾಪೇಕ್ಷವಾಗಿ ಆಸುಪಾಸಿನಲ್ಲಿ ಇರುವ ಕೆಲವು ತಾರೆಗಳು ನಮ್ಮ ಮನಃಪಟಲದಲ್ಲಿ ವಿಶಷ್ಟ ಆಕೃತಿಗಳನ್ನು ಮೂಡಿಸುವುದರ ಮುಖೇನ ನಮ್ಮ ಗಮನ ಸೆಳೆಯುತ್ತವೆ.

ವೀಕ್ಷಕನ ಮನಃಪಟಲದಲ್ಲಿ ನಿರ್ದಿಷ್ಟ ಚಿತ್ರ ಬಿಂಬಿಸುವ ತಾರೆಗಳ ಇಂಥ ಸಮೂಹವನ್ನು, ಅರ್ಥಾತ್ ಪುಂಜವನ್ನು ಅಥವ ತಾರಾರಾಶಿಗಳು ಅನ್ನುವುದು ವಾಡಿಕೆ. ಇದೇ ಬಹುಜನಪ್ರಿಯ ವ್ಯಾಖ್ಯಾನ. ಎಲ್ಲ ಸಂಸ್ಕೃತಿಗಳಲ್ಲಿ ಪುರಾತನರು ಇಂಥ ಅನೇಕ ಪುಂಜಗಳನ್ನು ಗುರುತಿಸಿ ಅವು ಅವರ ಮನಸ್ಸಿನಲ್ಲಿ ಮೂಡಿಸಿದ ಬಿಂಬಗಳ ಹೆಸರನ್ನೇ ಇಟ್ಟರು. ಆಧುನಿಕ ಖಗೋಲ ವಿಜ್ಞಾನಿಗಳು ಕೂಡ ತಾವು ಗುರುತಿಸಿದ ಪ್ರತೀ ರಾಶಿಯಲ್ಲಿ ಒಂದು ತಾರಾಪುಂಜವನ್ನು ಗುರುತಿಸಿ ಅದಕ್ಕೊಂದು ಹೆಸರು ಕೊಟ್ಟು ಆ ಹೆಸರಿನಿಂದಲೇ ರಾಶಿಯನ್ನು ಗುರುತಿಸುತ್ತಾರೆ. ಈಗಾಗಲೇ ಜನಪ್ರಿಯವಾಗಿದ್ದ ಪುರಾತನ ರಾಶಿ ನಾಮಗಳನ್ನು ಅಂತೆಯೇ ಉಳಿಸಿಕೊಂಡಿದ್ದಾರೆ. ಪುರಾತನರು ಒಂದೇ ರಾಶಿಗೆ ವಿಭಿನ್ನ ಸಂಸ್ಕೃತಿಗಳಲ್ಲಿ ವಿಭಿನ್ನ ಹೆಸರುಗಳು ಇರುವ ಉದಾಹರಣೆಗಳೂ ಇವೆ. ಚಿತ್ರ ೧ ರಲ್ಲಿ ಇರುವ ತಾರಾ ಸಮೂಹದ ವಿನ್ಯಾಸ ಗಮನಿಸಿ. ಭಾರತೀಯರಿಗೆ ಇದು ಸಪ್ತರ್ಷಿ ಮಂಡಲ, ಬ್ರಿಟನ್ ದ್ವೀಪವಾಸಿಗಳಿಗೆ ‘ನೇಗಿಲು (ದಿ ಪ್ಲೌ)’, ಯುರೋಪಿನವರಿಗೆ ‘ಉದ್ದ ಹಿಡಿಯ ಸೌಟು (ಬಿಗ್ ಡಿಪ್ಪರ್)’, ಉತ್ತರ ಇಂಗ್ಲೆಂಡಿನವರಿಗೆ ‘ಕಸಾಯಿ ಕತ್ತಿ (ಬುಚರ್ಸ್ ಕ್ಲೀವರ್), ಅಮೇರಿಕದ ಮೂಲನಿವಾಸಿಗಳಿಗೆ ‘ದೊಡ್ಡ ಕರಡಿ (ಬಿಗ್ ಬೇರ್)’.

ಜ್ಯೋತಿಷಿಗಳು ಉಲ್ಲೇಖಿಸುವ ಎಲ್ಲ ದ್ವಾದಶ ರಾಶಿಗಳು ಇರುವುದು ಸೂರ್ಯನ ತೋರಿಕೆಯ ವಾರ್ಷಿಕ ಚಲನೆಯ ಕಕ್ಷೆಯನ್ನು ಖಗೋಲದಲ್ಲಿ ಪ್ರತಿನಿಧಿಸುವ ಕ್ರಾಂತಿವೃತ್ತ (ಇಕ್ಲಿಪ್ಟಿಕ್:) ಎಂಬ ಕಾಲ್ಪನಿಕ ಮಹಾವೃತ್ತದಲ್ಲಿ. ಜ್ಯೋತಿಷಿಗಳು ಉಲ್ಲೇಖಿಸುವ ದ್ವಾದಶ ರಾಶಿಗಳ ಕ್ಷೇತ್ರಫಲಗಳು ಸಮವಾಗಿವೆ (೩೬೦/೧೨ = ೩೦). ಅವರು ಉಲ್ಲೇಖಿಸುವ ಈ ರಾಶಿಗಳು ಉಂಟುಮಾಡಿರುವ ಚಕ್ರವೇ ರಾಶಿಚಕ್ರ. ಈ ರಾಶಿಚಕ್ರದ ಅಗಲ ೧೮. ಕ್ರಾಂತಿವೃತ್ತ ರಾಶಿಚಕ್ರವನ್ನು ಸಮದ್ವಿಭಾಗಿಸುತ್ತದೆ. ಸೌರಮಂಡಲದ ಎಲ್ಲ ಗ್ರಹಗಳ ಮತ್ತು ಉಪಗ್ರಹಗಳ ಚಲನೆಯನ್ನು ಖಗೋಲದಲ್ಲಿ ಪ್ರತಿನಿಧಿಸುವ ಕಕ್ಷೆಗಳೂ ಕ್ರಾಂತಿವೃತ್ತದ ಆಸುಪಾಸಿನಲ್ಲಿ, ಅರ್ಥಾತ್ ರಾಶಿಚಕ್ರದಲ್ಲಿ ಇರಬೇಕಾದದ್ದು ಅನಿವಾರ್ಯ. ಆಧುನಿಕ ಖಗೋಲವಿಜ್ಞಾನದಲ್ಲಿ ಉಲ್ಲೇಖಿಸುವ ೮೮ ರಾಶಿಗಳು (ಜ್ಯೋತಿಷಿಗಳು ಉಲ್ಲೇಖಿಸುವ ದ್ವಾದಶ ರಾಶಿಗಳೂ ಈ ಪಟ್ಟಿಯಲ್ಲಿ ಸೇರಿವೆ) ಸಮ ವಿಸ್ತೀರ್ಣ ಉಳ್ಳವುಗಳಲ್ಲ. ತತ್ಪರಿಣಾಮವಾಗಿ ಜ್ಯೋತಿಷಿಗಳು ಉಲ್ಲೇಖಿಸುವ ರಾಶಿಚಕ್ರದಲ್ಲಿ ಅವರು ಉಲ್ಲೇಖಿಸುವ ದ್ವಾದಶರಾಶಿಗಳು ಮಾತ್ರವಲ್ಲದೆ ಬೇರೆ ಕೆಲವು ರಾಶಿಗಳ ಭಾಗಗಳೂ ಸೇರಿವೆ.

ಯಾವುದೇ ರಾಶಿಯಲ್ಲಿ ಅದರ ಪ್ರಧಾನ ತಾರಾಪುಂಜದ ತಾರೆಗಳಲ್ಲದೆ ಇನ್ನೂ ಅನೇಕ ತಾರೆಗಳು ಇರುತ್ತವೆ. ಇವು ಪ್ರಧಾನ ತಾರಾಪುಂಜದ ಆಕೃತಿಯ ಒಳಗೂ ಇರಬಹುದು ಹೊರಗೂ ಇರಬಹುದು. ಒಂದು ರಾಶಿಯ ತಾರೆಗಳೇ ಆಗಲಿ ರಾಶಿಯ ಪ್ರಧಾನ ತಾರಾಪುಂಜದ ತಾರೆಗಳೇ ಆಗಲಿ ಭೂಮಿಯಿಂದ ಸಮ ದೂರಗಳಲ್ಲಿ ಇಲ್ಲ, ಎಂದೇ, ಈ ತಾರೆಗಳಿಂದ ಏಕಕಾಲದಲ್ಲಿ ಹೊಮ್ಮುವ ಯಾವ ಕಿರಣಗಳೂ ಏಕಕಾಲದಲ್ಲಿ ನಮ್ಮನ್ನು ತಲಪುವುದಿಲ್ಲ. ಇಂದು ನಾವು ನೋಡುತ್ತಿರುವ ತಾರೆಗಳು ವಾಸ್ತವವಾಗಿ ಇಂದಿನವು ಅಲ್ಲ! ಇಂದು ನಾವು ನೋಡುತ್ತಿರುವ ಎಲ್ಲ ತಾರೆಗಳು ವಿಶ್ವದ ಇತಿಹಾಸದ ಒಂದು ಕಾಲಘಟ್ಟದವೂ ಅಲ್ಲ!!

ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿಗಳ ಹೆಸರುಗಳು ಮಾತ್ರ ಹೆಚ್ಚುಕಮ್ಮಿ ಎಲ್ಲ ದೇಶಗಳಲ್ಲಿ ಒಂದೇ ಆಗಿರುವುದು ಏಕೆ?  ಈ ಕುರಿತು ಸಂಶೋಧಕರ ಅಂಬೋಣ ಇಂತಿದೆ: ಈ ದ್ವಾದಶ ರಾಶಿಗಳನ್ನು ಮೊದಲು ಗುರುತಿಸಿ ನಾಮಕರಣ ಮಾಡಿದವರು ಈಜಿಪ್ಟಿನವರು. ಅದನ್ನು ಗ್ರೀಕರು ಎರವಲು ಪಡೆದು ತಮ್ಮ ಭಾಷೆಗೆ ಹೆಸರುಗಳನ್ನು ಭಾಷಾಂತರ ಮಾಡಿಕೊಂಡರು. ಅಷ್ಟೇ ಅಲ್ಲದೆ ತಮ್ಮ ಸಂಸ್ಕೃತಿಯ ಪುರಾಣದ ಕಥೆಗಳನ್ನು ಜೋಡಿಸಿದರು. ಗ್ರೀಕರಿಂದ ಭಾರತೀಯರು ಇದನ್ನು ಎರವಲು ಪಡೆದು ಗ್ರೀಕರು ಬಳಸುತ್ತಿದ್ದ ಹೆಸರುಗಳ ಪೈಕಿ ಒಂಭತ್ತನ್ನು ಯಥಾವತ್ತಾಗಿ ಸಂಸ್ಕೃತಕ್ಕೆ ಭಾಷಾಂತರಿಸಿಕೊಂಡರು(ಏರೀಜ್-ಮೇಷ, ಟಾರಸ್-ವೃಷಭ, ಜೆಮಿನೈ-ಮಿಥುನ, ಕ್ಯಾನ್ಸರ್-ಕರ್ಕಟಕ, ಲೀಓ-ಸಿಂಹ, ವರ್ಗೋ-ಕನ್ಯಾ, ಲೀಬ್ರಾ-ತುಲಾ, ಸ್ಕಾರ್ಪಿಯಸ್-ವೃಶ್ಚಿಕ, ಪೈಸೀಜ್-ಮೀನ). ಮೂರರ ಹೆಸರುಗಳನ್ನು ಮೂಲ ಹೆಸರುಗಳ ಧ್ವನಿತಾರ್ಥ ಕೊಡುವ ಹಾಗೂ ತಮ್ಮ ಸಂಸ್ಕೃತಿಗೆ ವಿಹಿತವಾದ ಸಂಸ್ಕೃತ ಹೆಸರುಗಳಾಗಿ ಬದಲಿಸಿಕೊಂಡರು (ಸಜಿಟೆರಿಅಸ್ -ಧನು – ಗ್ರೀಕರ ಪ್ರಕಾರ: ಅರ್ಧಮನುಷ್ಯ ಅರ್ಧ ಕುದುರೆ ಆಕೃತಿ. ಕ್ಯಾಪ್ರಿಕಾರ್ನಸ್ – ಮಕರ, ಗ್ರೀಕರ ಪ್ರಕಾರ: ಮೀನಿನಂಥ ಬಾಲ ಇರುವ ಆಡಿನ ಆಕೃತಿ. ಅಕ್ವೇರಿಅಸ್-ಕುಂಭ, ಗ್ರೀಕರ ಪ್ರಕಾರ: ಬಿಂದಿಗೆಧಾರಿ ವ್ಯಕ್ತಿಯ ಆಕೃತಿ). ಈಜಿಪ್ಟಿನವರು ಕುರಿ ಗೂಳಿ ಮುಂತಾದ ಹೆಸರುಗಳನ್ನು ಏಕೆ ಆಯ್ಕೆ ಮಾಡಿದರು ಅನ್ನುವುದಕ್ಕೂ ಸ್ವಾರಸ್ಯಕರವಾದ ವಾದ ಒಂದಿದೆ – ಈಗಿನ ಮಾರ್ಚ್ ೨೧ ರಿಂದ ಎಪ್ರಿಲ್ ೨೧ – ಈಜಿಪ್ಟಿನಲ್ಲಿ ಕುರಿಗಳು ಮರಿ ಹಾಕುವ ಕಾಲ, ಆದ್ದರಿಂದ ಇದು ಮೇಷ ಮಾಸ. ತದನಂತರದ ತಿಂಗಳು ಈಜಿಪ್ಟಿನ ರೈತರು ಗೂಳಿಗಳನ್ನು ಉಪಯೋಗಿಸಿ ಭೂಮಿ ಉಳುವ ಕಾಲ, ಆದ್ದರಿಂದ ಅದು ವೃಷಭ ಮಾಸ. ಮುಂದಿನ ತಿಂಗಳು ಈಜಿಪ್ಟಿನವರಿಗೆ ಬಲು ಪ್ರಿಯವಾಗಿದ್ದ ಮೇಕೆಗಳು ಬಹಳವಾಗಿ ಅವಳಿಜವಳಿ ಮರಿಗಳನ್ನು ಹಾಕುತ್ತಿದ್ದ ಕಾಲ, ಆದ್ದರಿಂದ ಅದು ಮಿಥುನ ಮಾಸ. ತದನಂತರದ ಮಾಸದಲ್ಲಿ ಸೂರ್ಯನ ದಕ್ಷಿಣಾಭಿಮುಖ ಪಯಣ ಆರಂಭ, ಹಿಂದಕ್ಕೆ ತೆವಳಿಕೊಂಡು ನಡೆಯುವ ಏಡಿಯ ಚಲನೆಗೂ ಇದಕ್ಕೂ ಅವರಿಗೆ ಸಾಮ್ಯ ಗೋಚರಿಸಿದ್ದರಿಂದ ಅದು ಕರ್ಕಟಕ ಮಾಸ. ಆ ನಂತರದ ತಿಂಗಳು ಈಜಿಪ್ಟಿಗೆ ಉರಿಬಿಸಿಲಿನ ಕಾಲ. ಮರುಭೂಮಿಯ ಸಿಂಹಗಳು ನೀರಿಗೆಂದು ನೈಲ್ ನದಿ ದಂಡೆಗೆ ಬರುತ್ತಿದ್ದ ಕಾಲ ಅದಾದ್ದರಿಂದ ಸಿಂಹ ಮಾಸ.  ಹೀಗೆ ಮುಂದುವರಿಯುತ್ತದೆ ಈ ವಾದ. ಈ ವಾದದ ತಿರುಳು – ಈಜಿಪ್ಟಿನವರು ತಮ್ಮ ನೆಲದಲ್ಲಿ ನಡೆಯತ್ತಿದ್ದ ನೈಸರ್ಗಿಕ ವಿದ್ಯಮಾನಗಳನ್ನು ಆಧರಿಸಿ ರಾಶಿಗಳಿಗೆ ನಾಮಕರಣ ಮಾಡಿದರೇ ವಿನಾ ‘ದೈವೀಕ’ ಕಾರಣಗಳಿಗಾಗಿ ಅಲ್ಲ.

ನಕ್ಷತ್ರಗಳಿಗೆ ಸಂಬಂಧಿಸಿದಂತೆ ನೀವು ತಿಳಿದಿರಲೇ ಬೇಕಾದ ಅಂಶಗಳು ಇಂತಿವೆ

ಇಂಗ್ಲಿಷ್ ಭಾಷೆಯ ‘ಸ್ಟಾರ್’ ಪದ ಯಾವ ಅರ್ಥದಲ್ಲಿ ಬಳಕೆ ಆಗುತ್ತಿದೆಯೋ ಆ ಅರ್ಥದಲ್ಲಿ ಭಾರತೀಯ ಪುರಾತನರು ‘ನಕ್ಷತ್ರ’ ಪದದ ಬಳಕೆ ಮಾಡುತ್ತಿರಲಿಲ್ಲ. ಭಾರತೀಯರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ನಕ್ಷತ್ರದ ಪರಿಕಲ್ಪನೆಯೇ ಇರುವಂತೆ ತೋರುತ್ತಿಲ್ಲ. ಸ್ವಗುರುತ್ವದಿಂದ ಗೋಲರೂಪ ತಳೆದಿರುವ ಸ್ವಪ್ರಕಾಶಕ ಬೃಹತ್ ಆಕಾಶಕಾಯಗಳನ್ನು ಉಲ್ಲೇಖಿಸಲು ಬಳಕೆ ಆಗುತ್ತಿರುವ ಆಂಗ್ಲ ಪದ ‘ಸ್ಟಾರ್’. ಇವು ತಮ್ಮ ಗರ್ಭದಲ್ಲಿ ಜರಗುವ ಬೈಜಿಕ ಸಮ್ಮಿಲನ ಕ್ರಿಯೆಗಳ ಪರಿಣಾಮವಾಗಿ ವಿದ್ಯುತ್ಕಾಂತೀಯ ವಿಕಿರಣಗಳನ್ನು (ದೃಗ್ಗೋಚರ ಬೆಳಕು ವಿದ್ಯುತ್ಕಾಂತೀಯ ರೋಹಿತದ ಒಂದು ಘಟಕ) ಹೊರಸೂಸುತ್ತವೆ. ಅನೂಹ್ಯ ದೂರದಲ್ಲಿ ಇರುವುದರಿಂದ ಬೆಳಕು ಬೀರುವ ಚುಕ್ಕಿಗಳಂತೆ ಇವು ರಾತ್ರಿಯ ವೇಳೆ ಗೋಚರಿಸುತ್ತವೆ. ಇವನ್ನು ನಕ್ಷತ್ರಗಳು ಅನ್ನುವುದಕ್ಕಿಂತ ತಾರೆಗಳು ಅನ್ನುವುದು ಸೂಕ್ತ. ಸೌರಕಕ್ಷೆ ಆಧಾರಿತ ರಾಶಿಚಕ್ರದ ಪರಿಕಲ್ಪನೆಯನ್ನು ಗ್ರೀಕರಿಂದ ಎರವಲು ಪಡೆಯುವ ಮುನ್ನ ನಮ್ಮ ಪುರಾತನರು ಬಳಸುತ್ತಿದ್ದದ್ದು ಚಾಂದ್ರಕಕ್ಷೆ ಆಧಾರಿತ ನಕ್ಷತ್ರ ಚಕ್ರದ ಪರಿಕಲ್ಪನೆಯನ್ನು. ಇವರು ಚಾಂದ್ರಕಕ್ಷೆಯನ್ನು ೨೭ ಸಮಖಂಡಗಳಾಗಿ ವಿಭಾಗಿಸಿ ಅವನ್ನು ‘ನಕ್ಷತ್ರ’ಗಳು ಎಂದು ಕರೆದರು. ಪ್ರತೀ ನಕ್ಷತ್ರದ ವಿಸ್ತಾರ ೧೩೨೦’. ಅಶ್ವಿನಿಯಿಂದ ಮೊದಲ್ಗೊಂಡು ರೇವತಿಯೊಂದಿಗೆ ಅಂತ್ಯವಾಗುವ ೨೭ ನಕ್ಷತ್ರಗಳೇ ಈ ಖಂಡನಾಮಗಳು. ಪ್ರತೀ ಖಂಡದಲ್ಲಿ ಇದ್ದ ನಕ್ಷತ್ರಗಳ ಪೈಕಿ ಅಂದು ಸುಲಭವಾಗಿ ಗುರುತಿಸಬಹುದಾಗಿದ್ದ ತಾರೆಯೊಂದನ್ನು ಖಂಡಸೂಚಕವಾಗಿ ಆಯ್ದು ಅದಕ್ಕೆ ಆ ಖಂಡನಾಮವನ್ನೇ ಇಟ್ಟರು. ಅಶ್ವಿನಿ ಎಂದು ಗುರುತಿಸಲಾಗುತ್ತಿದ್ದ ತಾರೆಯು ಅಶ್ವಿನಿ ಎಂಬ ನಕ್ಷತ್ರವನ್ನು, ಅರ್ಥಾತ್ ಖಂಡವನ್ನು ಗುರುತಿಸಲು ಇದ್ದ ಸೂಚಕವೇ ವಿನಾ ಸ್ವತಂತ್ರ ತಾರೆಯಲ್ಲ ಎಂಬುದು ಗಮನಿಸಬೇಕಾದ ಅಂಶ. ಈ ತಾರೆಗಳ ಪೈಕಿ ಅನೇಕವನ್ನು ‘ಬೆಳಕಿನ ಮಾಲಿನ್ಯ’ದಿಂದಾಗಿ ಇಂದು ಗುರುತಿಸುವುದು ಅತೀ ಕಷ್ಟ. ಅಂದ ಹಾಗೆ ಭಾರತೀಯ ಪೌರಾಣಿಕರ ಕಲ್ಪನೆಯಲ್ಲಿ ತಾರಾಪತಿ ಚಂದ್ರನಿಗೆ ೨೭ ಜನ ಪತ್ನಿಯರು. ಚಂದ್ರನ ಅರಮನೆಯಲ್ಲಿ ಇವರಿಗೆ ತಲಾ ಒಂದರಂತೆ ೨೭ ಕೊಠಡಿಗಳಿವೆ. ಚಂದ್ರ ಅನುಕ್ರಮವಾಗಿ ಈ ಕೊಠಡಿಗಳಿಗೆ ಭೇಟಿ ನೀಡುತ್ತಾನೆ!

ಸೌರಕಕ್ಷೆ ಆಧಾರಿತ ರಾಶಿಚಕ್ರ ಮತ್ತು ಚಾಂದ್ರಕಕ್ಷೆ ಆಧಾರಿತ ನಕ್ಷತ್ರಚಕ್ರಗಳನ್ನು ಜೋಡಿಸುವುದು ಹೇಗೆ? ದ್ವಾದಶ ರಾಶಿಗಳಿಗೂ ೨೭ ನಕ್ಷತ್ರಗಳಿಗೂ ಸಂಬಂಧ ಕಲ್ಪಿಸುವುದು ಹೇಗೆ? ನಮ್ಮ ಮೇಧಾವೀ ಪುರಾತನರು ಬಲು ಸುಲಭವಾಗಿ ಈ ಸಮಸ್ಯೆಯನ್ನು ಪರಿಹರಿಸಿದರು. ಪ್ರತೀ ನಕ್ಷತ್ರವನ್ನು ಪುನಃ ೪ ಸಮಪಾಲುಗಳಾಗಿ ಅಥವ ಉಪಖಂಡಗಳಾಗಿ ವಿಭಾಗಿಸಿ ಅವನ್ನು ನಕ್ಷತ್ರದ ‘ಪಾದ’ಗಳು ಎಂದು ಕರೆದರು. ಪ್ರತೀ ನಕ್ಷತ್ರಪಾದದ ವಿಸ್ತಾರ ೩೨೦’. ಪ್ರತೀ ರಾಶಿಯಲ್ಲಿ ೯ ನಕ್ಷತ್ರ ಪಾದಗಳಿರುತ್ತವೆ. ೨೭ ನಕ್ಷತ್ರಗಳೂ ೧೨ ರಾಶಿಗಳಲ್ಲಿ ವಿಲೀನವಾಗುತ್ತವೆ. ಈ ವ್ಯವಸ್ಥೆಯಿಂದ ಜ್ಯೋತಿಷಿಗಳು ತಾವು ಉಲ್ಲೇಖಿಸುವ ‘ನವಗ್ರಹ’ (?)ಗಳ ಸ್ಥಾನವನ್ನು ‘ರಾಶಿಚಕ್ರ (ಜ್ಯೋತಿಷ್ಚಕ್ರ!)ದಲ್ಲಿ ಗುರುತಿಸುತ್ತಾರೆ.

ಅಂದಹಾಗೆ, ಭಾರತೀಯ ಜ್ಯೋತಿಷಿಗಳ ಪ್ರಕಾರ ಜನ್ಮನಕ್ಷತ್ರ ಅಂದರೆ ಜನನದ ಸಮಯದಲ್ಲಿ ಚಂದ್ರ ಇರುವ ನಕ್ಷತ್ರ. ಜನ್ಮರಾಶಿ ಅಂದರೆ ಜನನ ಕಾಲದಲ್ಲಿ ಚಂದ್ರ ಇರುವ ರಾಶಿ. ಜನ್ಮಲಗ್ನ ಅಂದರೆ ಜನನಕಾಲದಲ್ಲಿ ಪೂರ್ವದಲ್ಲಿ ಉದಯಿಸುತ್ತಿರುವ ರಾಶಿ. ಜನನಕಾಲದಲ್ಲಿ ‘ನವಗ್ರಹ’ಗಳ ಪೈಕಿ ಯಾವುದು ಯಾವ ರಾಶಿಯಲ್ಲಿ ಯಾವ ನಕ್ಷತ್ರಪಾದದಲ್ಲಿ ಇದೆ ಎಂಬುದನ್ನು ಸೂಚಿಸುವ ಚಿತ್ರವೇ ಜನ್ಮಕುಂಡಲಿ. ಜನ್ಮಕುಂಡಲಿ ಬರೆಯಲು ಕಲಿಯುವುದು ಬಲು ಸುಲಭ. (ಗಣಿತದ, ಖಗೋಲಶಾಸ್ತ್ರದ ಪ್ರಾಥಮಿಕ ಜ್ಞಾನ ಇಲ್ಲದವರೂ ಜನ್ಮಕುಂಡಲಿ ಬರೆಯಲು ನೆರವಾಗಬಲ್ಲ ಸಾಫ್ಟ್ ವೇರ್ ಲಭ್ಯವಿದೆ)

ಈ ಎಲ್ಲ ಮಾಹಿತಿಯ ಹಿನ್ನೆಲೆಯಲ್ಲಿ ಈ ದ್ವಾದಶರಾಶಿಗಳು, ೨೭ ನಕ್ಷತ್ರಗಳು ನಮ್ಮ ಜೀವನದ ಮೇಲೆ ಜ್ಯೋತಿಷಿಗಳು ಹೇಳುವಂತೆ ಪ್ರಭಾವ ಬೀರುವುದು ಸಾಧ್ಯವೇ, ಜನ್ಮಕುಂಡಲಿ ಆಧರಿಸಿ ಭವಿಷ್ಯ ನುಡಿಯುವುದೇ ಆಗಲಿ ಅದನ್ನು ನಂಬುವುದೇ ಆಗಲಿ ಸರಿಯೇ ಎಂಬುದರ ಕುರಿತು ನೀವೇ ಆಲೋಚಿಸಿ.

 

7 ಟಿಪ್ಪಣಿಗಳು Post a comment
 1. ಜುಲೈ 28 2011

  ಲೇಖಕರು ಹಾಕಿದ್ದ ಚಿತ್ರದ ಬದಲು ಬೇರೆ ಚಿತ್ರ ಬಂದಿದೆ ಎನ್ನಿಸುತ್ತೆ. ಒಳ್ಳೇ ಬರಹ.

  ಉತ್ತರ
 2. ಮೇ 29 2015

  Reblogged this on vedalh72.

  ಉತ್ತರ
 3. ನವೆಂ 11 2017

  Namma rashi janma hesarinalli nod beka atava hesirina rashi mele navu nodabeka yava akshar yava rashige ide yendu nivu hela beku janma hesar mele atava kariyuv modal aksharadinda nodbeka heli

  ಉತ್ತರ
 4. ಗಿರೀಶ್
  ಮಾರ್ಚ್ 8 2018

  ನನ್ನ ಹೆಸರಿಗೆ ಯಾವ ರಾಶಿ

  ಉತ್ತರ
 5. ಸಂಜೀವ್
  ಮೇ 18 2018

  ವಯಸ್ಸು 39.ಮದುವೆ ಅಗುತಿಲ್ಲ.
  ರಾಶಿ -ಕುಂಭ
  ನಕ್ಷತ್ರ -ಶತಭಿಶ
  ಜನ್ಮ ದಿನಾಂಕ -9-3-1978

  ಉತ್ತರ
 6. prithvi
  ಜುಲೈ 3 2018

  Learning to use a software is very easy. But learning Jyothishya is not easy. S/W will give you a report but comprehending it to the persons life will come only with experience. Software will not teach this part.

  If you don’t believe it that is fine. No need to say that it’s lie. Do you able to see air. No. Does that means air is not there.

  ಉತ್ತರ

Trackbacks & Pingbacks

 1. ರಾಶಿ ಮತ್ತು ನಕ್ಷತ್ರ… | vedalh72

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments