ಸಂಸ್ಕೃತಿ ಸಂಕಥನ – ೫
– ರಮಾನಂದ ಐನಕೈ
ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.
ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.
ಪಾಶ್ಚಾತ್ಯರ ಸಾಮಾಜಿಕ ಭದ್ರತೆಯ ಕಲ್ಪನೆ ಹಾಗಿದ್ದದ್ದಕ್ಕೇ ಅವರಿಗೆ ಭಾರತ ಒಂದು ದರಿದ್ರ ದೇಶವಾಗಿ ಕಂಡುಬಂತು. ಇಲ್ಲಿ ಒಂದು ಸಾಮಾಜಿಕ ಭದ್ರತೆಯ ವ್ಯವಸ್ಥೆಯೇ ಇಲ್ಲವೆನಿಸಿತು ಅವರಿಗೆ. ಏಕೆಂದರೆ ಜನ ಹಸಿವಿನಿಂದ ಬಳಲುತ್ತಿದ್ದಾರೆ. ವಸತಿಗೆ ಸರಿಯಾದ ಸೂರಿಲ್ಲ, ನಿರುದ್ಯೋಗದ ತಾಂಡವ, ಅಶಿಕ್ಷಿತರ ಹಾವಳಿ – ಹೀಗೆ ಕೊಟ್ಯಂತರ ಜನ ದುರ್ಗತಿಯಲ್ಲಿರುವ ವಾಸ್ತವ ಅವರಿಗೆ ಪೂರಕ ಸಮರ್ಥನೆಯಾಯಿತು. ಇಲ್ಲಿಯ ಪ್ರಭುತ್ವ ಈ ಕುರಿತು ಚಿಂತಿಸಿಲ್ಲ. ಜನರನ್ನು ಮೌಢ್ಯ ಮತ್ತು ಶೋಷಣೆಯ ಕೂಪದಲ್ಲಿ ತಳ್ಳಿದೆ. ಆದ್ದರಿಂದ ಭಾರತೀಯರು ಅಸಂತೋಷದಲ್ಲಿದ್ದಾರೆಂಬ ತೀರ್ಮಾನ ನೀಡಿದರು. ಅಷ್ಟೇಅಲ್ಲ, ಇದೇ ಹಿನ್ನೆಲೆಯಲ್ಲಿ ಭಾರತೀಯರು ಅಸಂತೋಷದಲ್ದಿದ್ದಾರೆಂಬುದನ್ನು ತೋರಿಸಿಕೊಟ್ಟರು. ನಮಗೆ ಇದು ನಿಜ ಅನಿಸಿತು. ಇಡೀ ಪಾಶ್ಚಾತ್ಯ ಜಗತ್ತು ಆಧುನಿಕ ಶಿಸ್ತು ಮತ್ತು ಸವಲತ್ತುಗಳ ಮೂಲಕ ಸಂತೋಷದಲ್ಲಿದೆ. ನಾವು ಮಾತ್ರ ಅಸಂತೋಷದಲ್ಲಿದ್ದೇವೆಂದು ಮಾತನಾಡಿಕೊಳ್ಳತೊಡಗಿದೆವು.
ಭಾರತ ಸ್ವತಂತ್ರವಾದ ನಂತರ ನಮ್ಮ ಸಂವಿಧಾನ ಕೂಡ ಕಲ್ಯಾಣ ರಾಜ್ಯದ ಗುರಿಯನ್ನೇ ಕನಸಾಗಿಸಿಕೊಂಡಿತು. ಬಡವರ ಉದ್ದಾರ ಸರಕಾರದ ಘೋಷಣೆಯಾಯಿತು. ವಿವಿಧ ಯೋಜನೆಗಳು ಜಾರಿಗೆ ಬಂದವು. ಆದರೆ ನಾವಂದು ಕೊಂಡಂತೆ ಸ್ವತಂತ್ರ ಭಾರತದಲ್ಲಿ ಸಂತೋಷ ಹೆಚ್ಚಾಗುವುದರ ಬದಲು ಕಡಿಮೆಯಾಗುತ್ತ ಬಂದಿದೆ. ಸಮಸ್ಯೆಗಳು ಬಗೆಹರಿಯುವ ಬದಲು ಮುಂದುವರಿಯುತ್ತಲೇ ಬಂದಿದೆ. ಸ್ವಾತಂತ್ರ್ಯಪೂರ್ವದಲ್ಲಿ ಅಥವಾ ವಸಾಹತು ಆಳ್ವಿಕೆ ಪೂರ್ವದಲ್ಲಿದ್ದ ಸಂತೋಷ ಮತ್ತು ನೆಮ್ಮದಿ ಇಂದು ನಮ್ಮಲ್ಲಿ ಇಲ್ಲವಾಗಿದೆ. ಕಾರಣ ಏನು? ಪಾಶ್ಚಾತ್ಯರು ಸದಾ ಸಂತೋಷದಲ್ಲಿದ್ದಾರೆ ಎಂಬ ನಮ್ಮ ಗ್ರಹಿಕೆ ನಿಜವೇ? ಅಥವಾ ಭಾರತೀಯರೆಲ್ಲ ಅಸಂತೋಷದಲ್ಲಿದ್ದಾರೆ ಎಂಬ ವಾಸ್ತವ ನಿಜವೇ? ಉತ್ತರ ಸರಳವಾಗಿದೆ. ಎರಡೂ ಅರ್ಧ ಸತ್ಯ.
ಆರ್ಥಿಕ ವಿಚಾರಗಳ ಮೇಲೆ ನಿಂತ ಸಾಮಾಜಿಕ ಭದ್ರತೆಯ ವ್ಯವಸ್ಥೆ ನೀರ ಮೇಲಿನ ಗುಳ್ಳೆ ಇದ್ದಂತೆ. ಅದು ಶಾಶ್ವತ ಅಲ್ಲ. ನೋಡಲಿಕ್ಕೆ ಚಂದ. ಅನಿರೀಕ್ಷಿತವಾಗಿ ಉಂಟಾಗುವ ಆರ್ಥಿಕ ಏರುಪೇರು ಇಂಥ ನೀರಗುಳ್ಳೆಗಳನ್ನೆಲ್ಲ ಛಿದ್ರವಾಗಿಸಿಬಿಡುತ್ತದೆ. ಆಗ ಜನರ ಸಂತೋಷದ ಕತೆಯೇನು? ಇದನ್ನು ಇಂದು ಪಾಶ್ಚಾತ್ಯ ದೇಶಗಳಲ್ಲಿ ಕಾಣಬಹುದು. ಅಮೇರಿಕದ ಆರ್ಥಿಕ ಹಿಂಜರಿತದ ಜ್ವಲಂತ ಉದಾಹರಣೆ ನಮ್ಮೆದುರಿಗೆ ಇದೆ. ಅಲ್ಲಿನ ಜನ ಇಂದು ನಿರುದ್ಯೋಗ ಹಾಗೂ ಆರ್ಥಿಕ ಅಭದ್ರತೆಯಿಂದ ಕಂಗಾಲಾಗಿದ್ದಾರೆ. ಇಂಥ ಸಾಮಾಜಿಕ ಭದ್ರತೆಗೆ ಅರ್ಥ ಇದೆಯೇ?
ಸಾಮಾಜಿಕ ಭದ್ರತೆಯ ಕಲ್ಪನೆಯನ್ನು ಆರ್ಥಿಕ ಮಾಪನದ ಮೂಲಕ ಕಟ್ಟಲ್ಪಟ್ಟ ಯಾವ ದೇಶದಲ್ಲೂ ಪ್ರಜೆಗಳು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಗೊತ್ತಿಲ್ಲದೇ ತಾರತಮ್ಯ ನೀತಿ ನುಸುಳುತ್ತದೆ. ಆರ್ಥಿಕ ಸಮತೋಲನ ಕಾಪಾಡಲು ದೇಶೀಯರು-ವಿದೇಶೀಯರು ಎಂಬ ಪಕ್ಷಪಾತ ಬರುತ್ತದೆ. ಇದು ಮತ್ತೊಂದು ರೀತಿಯ ವೈಷಮ್ಯಕ್ಕೆ ಕಾರಣವಾಗುತ್ತದೆ. ಭೌತಿಕ ಸ್ಥಿತಿ-ಗತಿಯೇ ನೆಮ್ಮದಿಯೆಂದು ನಂಬಿದ ಜನ ನಿತ್ಯ ಆತಂಕದಲ್ಲಿರುತ್ತಾರೆ. ದೇಶದಲ್ಲಿ ನಡೆಯುವ ಚಿಕ್ಕ ತಲ್ಲಣ ಕೂಡ ಅವರನ್ನು ಬೆಚ್ಚಿಬೀಳಿಸುತ್ತದೆ. ಜೀವನದ ಪ್ರತಿ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಎತ್ತಿಡುವ ಅನಿವಾರ್ಯತೆ ಎದುರಾಗಿ ಜೀವನದ ಸಹಜತೆ ನಾಶವಾಗುತ್ತದೆ. ಇದನ್ನು ಸಂತೋಷ ಅನ್ನೋಣವೇ?
ಸರಕಾರ ಪ್ರಜೆಗಳಿಗೆ ಸಂತೋಷ ನೀಡಬಹುದು ಎಂಬ ವಾದವೇ ಅವಾಸ್ತವಿಕ. ಯೋಜನೆಗಳ ಮೂಲಕ ಯಾವುದೇ ಭದ್ರತೆ ನೀಡಲು ಪ್ರಯತ್ನಿಸಿದರೆ ಅದು ಅಂತ್ಯವಿಲ್ಲದ ಆಸೆಯಾಗುತ್ತದೆಯೇ ವಿನಾ ಖಂಡಿತ ಸಂತೋಷಕ್ಕೆ ನಾಂದಿಯಾಗಲಾರದು. ಹಾಗಾಗಿ ಇಂತಹ ಸಾಮಾಜಿಕ ಭದ್ರತೆ ಒಂದು ಅಪೂರ್ಣ ಫಲಿತಾಂಶವೇ ಹೊರತು ಅಂತಿಮ ಸತ್ಯ ಅಲ್ಲ. ಪಾಶ್ಚಾತ್ಯರ ಸಾಮಾಜಿಕ ಭದ್ರತೆ ವ್ಯವಸ್ಥೆಯೆಂಬುದು ಒಂದು ಚಿಂತನೆ. ಅದಕ್ಕೆ ಅವರು ಬೇಕಾದಷ್ಟು ವೈಜ್ಞಾನಿಕ ಸಮರ್ಥನೆ ನೀಡಬಹುದು. ಅಂದಾಕ್ಷಣ ಅದು ಶ್ರೇಷ್ಠ, ನಮ್ಮದೆಲ್ಲ ನಿರುಪಯುಕ್ತ ಎಂಬ ತೀರ್ಮಾನಕ್ಕೆ ಬರಬೇಕಾಗಿಲ್ಲ. ಅದರಿಂದ ಸಿಗಬಹುದಾದ ಸಂತೋಷವನ್ನು ಅನುಭವದಿಂದ ಅಳೆದು ನೋಡಬೇಕಾಗುತ್ತದೆ. ಆಗ ನಾವು ಈ ಭದ್ರತೆ ಅನ್ನುವುದನ್ನು ಸೂಕ್ಷ್ಮವಾಗಿ ಅರಿಯಬೇಕಾಗುತ್ತದೆ.
‘ಭದ್ರತೆ’ ಅಂದರೆ ಏನು? ಇದು ಮನುಷ್ಯನಿಗೆ ಸಂಬಂಧಪಟ್ಟ ಧೈರ್ಯ. ಈ ಭದ್ರತೆ ಅನುಭವಿಸಲು ತಿಳುವಳಿಕೆ ಬೇಕೆಂದೇನೂ ಇಲ್ಲ. ಅದು ಅನುಭವಕ್ಕೆ ಸಂಬಂಧಪಟ್ಟ ಸಂಗತಿ. ಅನುಭವಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರಿಂದ ಯಾವುದೋ ಒಂದು ಸಿದ್ಧ ಸೂತ್ರದ ಮೂಲಕ ವ್ಯಕ್ತಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಇದು ಅರ್ಥವಾಗದೇ ಯಾವುದೇ ಪ್ರಭುತ್ವ ಸಾಮಾಜಿಕ ಭದ್ರತೆ ನೀಡಲು ಸಾಧ್ಯವಿಲ್ಲ. ಆಥರ್ಿಕತೆಯ ಮೂಲಕ ನಾವು ನೀಡಬಹುದಾದದ್ದು ಸವಲತ್ತನ್ನೇ ವಿನಾ ಭದ್ರತೆಯನ್ನಲ್ಲ. ಪುಟ್ಟ ಮಗುವಿಗೆ ಈ ಪ್ರಪಂಚದ ಕುರಿತು ಏನೂ ತಿಳುವಳಿಕೆ ಇರಲಾರದು. ಆದರೂ ತಾಯಿಯ ಮಡಿಲು ಭದ್ರ ಅನಿಸುತ್ತದೆ. ತಾಯಿಯನ್ನು ಅಪ್ಪಿ ಹಿಡಿಯುವಲ್ಲೇ ಮಗುವಿಗೆ ಭದ್ರತೆಯ ಅನುಭವವಾಗುತ್ತದೆ. ಇಲ್ಲಿಯ ಸೂಕ್ಷ್ಮ ಗಮನಿಸಿ, ಭದ್ರತೆ ಅನ್ನುವುದು ಮಗು ಕಂಡುಕೊಳ್ಳುವುದೇ ವಿನಾ ತಾಯಿ ನೀಡುವುದಲ್ಲ. ಅದರಂತೆ ಸಾಮಾಜಿಕ ಭದ್ರತೆ ಕೂಡ. ಪ್ರಜೆಗಳು ಅದನ್ನು ಕಂಡುಕೊಳ್ಳಬೇಕು. ಅದಕ್ಕೆ ತಕ್ಕುದಾದ ವಾತಾವರಣ ಕಲ್ಪಿಸುವುದು ಅಥವಾ ಮಾರ್ಗ ತೋರಿಸುವುದಷ್ಟೇ ಪ್ರಭುತ್ವದ ಕೆಲಸ. ಹೀಗಾದಾಗ ಮಾರ್ಗ ಹುಡುಕುವ ಕ್ರಿಯೆಯಲ್ಲೇ ಮನುಷ್ಯ ನೆಮ್ಮದಿಯಿಂದಿರುತ್ತಾನೆ.
ಈಗ ಮೂಲ ವಿಷಯಕ್ಕೆ ಬರುವ. ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ ಸುಮ್ಮನೇ ಗೊಡ್ಡು ಕಂದಾಚಾರಗಳ ಮೂಲಕ ಮಾತ್ರ ಬೆಳೆದು ಬಂದಿದೆಯೇ? ಅದು ನಿಜವಾದರೆ ಈ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಹೇಗೆ ಸಾಧ್ಯವಾಯಿತು? ಈ ದೇಶದಲ್ಲಿ ಆಗಿಹೋದ ಮಹಾತ್ಮರೆಲ್ಲ ಏನೂ ಮಾಡದೇ ಸುಮ್ಮನೇ ಕಾಲ ಕಳೆದರೇ? ಈ ಗೊಡ್ಡು ಸಂಸ್ಕೃತಿಯ ಕುರಿತು ಪಾಶ್ಚಾತ್ಯರಿಗೆ ಯಾಕಿಷ್ಟು ಕುತೂಹಲ? ನಮ್ಮ ಆಧುನಿಕ ಚಿಂತಕರ ಪ್ರಕಾರ ಇಂಗ್ಲೀಶರು ಬಂದಮೇಲೆ ನಿಜವಾದ ಪ್ರಗತಿ ಆಯಿತು. ಹಾಗಾದರೆ ಅದಕ್ಕೂ ಪೂರ್ವದಲ್ಲಿ ಭಾರತದಲ್ಲಿ ಏನೂ ಆಗಿಲ್ಲವೇ? ಆಗಿನ ಜನಕ್ಕೆ ನೆಮ್ಮದಿ ಎಂಬ ಕಲ್ಪನೆಯೇ ಇರಲಿಲ್ಲವೇ? ಇವನ್ನೆಲ್ಲ ಚಚರ್ೆ ಮಾಡುತ್ತ ಕುಳಿತರೆ ಪ್ರಯೋಜನವಿಲ್ಲ. ಮೊದಲು ನಮ್ಮ ಕುರಿತಾಗಿ ನಮ್ಮ ದೃಷ್ಟಿಕೋನವನ್ನು ಸರಿಪಡಿಸಿಕೊಳ್ಳಬೇಕು. ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಎಂಬಂತೆ ನಾವು ನಮ್ಮಲ್ಲಿ ಇಲ್ಲದ್ದನ್ನು ಹುಡುಕುವ ಹರಸಾಹಸ ಮಾಡುತ್ತೇವೆ. ಇದ್ದದ್ದನು ಅರ್ಥಹೀನ ಎಂದು ನಿರ್ಣಯಿಸಿಬಿಡುತ್ತೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಇಲ್ಲದೇ ಇದ್ದದ್ದನ್ನು ಇದೇ ಎಂದು ಹುಡುಕುವ ಎಲ್ಲ ಜನರ ಸಮಸ್ಯೆ ಇದು. ಹಾಗಾಗಿ ಸಂತೋಷ ಹಾಗೂ ನೆಮ್ಮದಿ ಬೇಕು ಅಂದರೆ ಇದ್ದದ್ದನ್ನು ಹುಡುಕಬೇಕು.
ಪ್ರಾಧ್ಯಾಪಕ ಬಾಲಗಂಗಾಧರರು ಈ ಹುಡುಕಾಟ ಮಾಡಿ ನಮ್ಮಲ್ಲಿದ್ದ ಮಹತ್ವವೊಂದನ್ನು ಕಂಡುಕೊಂಡಿದ್ದಾರೆ. ಮೂರು ಸಾವಿರ ವರ್ಷಗಳಿಂದ ಭಾರತೀಯರು ಸುಮ್ಮನೆ ಮೂಢರ ಹಾಗೆ ಕುಳಿತಿಲ್ಲ. ಒಂದು ಅದ್ಭುತವಾದ ಸಮಾಜ ವಿಜ್ಞಾನವನ್ನು ಕಟ್ಟಿದ್ದಾರೆ. ಅದೇ ‘ಆಧ್ಯಾತ್ಮ’. ಮನುಷ್ಯನಿಗೆ ನೆಮ್ಮದಿ, ಶಾಂತಿ, ಆನಂದ ಹಾಗೂ ಸಂತೋಷ ನೀಡಬಹುದಾದ ಏಕೈಕ ಜೀವನ್ಮುಖಿ ವಿಜ್ಞಾನ ಅಂದರೆ ಆಧ್ಯಾತ್ಮ. ಇದು ಐರೋಪ್ಯರ ಸೊತ್ತಲ್ಲ. ನಮ್ಮ ಪೂರ್ವಜರು ಕಂಡುಹಿಡಿದಿದ್ದು. ಈ ಅಧ್ಯಾತ್ಮವೇ ನಮ್ಮಲ್ಲಿನ ಸಾಮಾಜಿಕ ಭದ್ರತಾ ವ್ಯವಸ್ಥೆ! ಆಧ್ಯಾತ್ಮ ಮಾತ್ರ ಎಲ್ಲ ಮನುಷ್ಯರಿಗೆ ಆನಂದ ಪಡೆಯುವ ಸಮಾನವಾದ ಅವಕಾಶ ಸೃಷ್ಟಿಸಿಕೊಡುತ್ತದೆ.
ಮನುಷ್ಯನಿಗೆ ಅಂತಿವಾಗಿ ಬೇಕಾದದ್ದು ಆನಂದ ಅಥವಾ ನೆಮ್ಮದಿ. ಆನಂದದಲ್ಲಿ ಮಾತ್ರ ನಾವು ಭದ್ರತೆಯ ಭಾವನೆ ಕಾಣಲು ಸಾಧ್ಯ. ಈ ಆನಂದ ಅಥವಾ ನೆಮ್ಮದಿ ಅನ್ನುವುದು ಮನಸ್ಸಿನೊಳಗೆ ಆಕಾರ ಪಡೆಯುವಂತಹದ್ದು. ಆನಂದ ಹೇಗಿರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಅದು ಅನುಭವಕ್ಕೆ ಬರುತ್ತದೆ. ಆನಂದ ಇಂತದ್ದರಲ್ಲೇ ಸಿಗುತ್ತದೆ ಎಂದು ನಿರ್ಧಿಷ್ಟವಾಗಿ ಹೇಳುವ ಹಾಗಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಆನಂದ ಸಿಗುವುದಲ್ಲ, ನಾವು ಪಡೆದುಕೊಳ್ಳುವುದು.
ನಮ್ಮ ಸಂಸ್ಕೃತಿ ಅಥವಾ ಆಧ್ಯಾತ್ಮ ಈ ಆನಂದವನ್ನು ಪಡೆದುಕೊಳ್ಳಲು ಸಾವಿರಾರು ಮಾರ್ಗವನ್ನು ತೋರಿಸಿಕೊಟ್ಟಿದೆ. ಬಡವ-ಶ್ರೀಮಂತ, ಹಿರಿಯ-ಕಿರಿಯ, ದಡ್ಡ-ಬುದ್ಧಿವಂತ ಹೀಗೆ ಯಾವ ತಾರತಮ್ಯವಿಲ್ಲದೆ ಎಲ್ಲರೂ ಆನಂದವನ್ನು ಪಡೆಯಬಹುದು. ಪ್ರತಿಯೊಬ್ಬನೂ ಆನಂದ ಪಡೆಯಲು ತನಗೆ ಯೋಗ್ಯವಾದ ಮಾರ್ಗವನ್ನು ಆಯ್ದುಕೊಳ್ಳಬಹುದು. ಭಾರತೀಯ ಸಂಸ್ಕೃತಿಯ ರಹಸ್ಯವೇ ಇದು. ಪೂಜೆ, ಯಾತ್ರೆ, ಧ್ಯಾನ, ತಪಸ್ಸು, ಯೋಗ, ಕೃಷಿ ಹೀಗೆ ನೂರಾರು ಮಾರ್ಗಗಳ ಮೂಲಕ ನಾವು ಆನಂದ ಪಡೆಯಬಹುದು. ಆಧ್ಯಾತ್ಮ ಸರ್ವರಿಗೂ ಸರಳ ಮಾರ್ಗ ತೋರಿಸುತ್ತದೆ. ಇದರ ಹೊರತಾಗಿ ಆನಂದವನ್ನು ಆರ್ಥಿಕ ತಳಹದಿಯ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಕೇವಲ ಎರಡು ಪ್ರಶ್ನೆಗಳು ಸಾಕು.
1. ಈ ಭೂಮಿಯ ಮೇಲಿದ್ದ ಶ್ರೀಮಂತರೆಲ್ಲ ಸಂತೋಷದಲ್ಲಿ ಇದ್ದಾರಾ?
2. ಈ ಭೂಮಿಯ ಮೇಲಿದ್ದ ಬಡವರೆಲ್ಲ ಅಸಂತೋಷದಲ್ಲಿ ಇದ್ದಾರಾ?
‘ಇಲ್ಲ’ ಎಂಬುದೇ ಎರಡಕ್ಕೂ ಉತ್ತರ. ಆಧ್ಯಾತ್ಮ ಮಾತ್ರ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬಲ್ಲದು. ನಾವು ಆನಂದವನ್ನು ಪಡೆಯಲು ಪ್ರಯತ್ನಿಸುತ್ತೇವೆಯೇ ವಿನಾ ಪ್ರಭುತ್ವ ಅದನ್ನು ನೀಡಲೀ ಎಂದು ಬಯಸುವುದಿಲ್ಲ. ಇದೇ ಆಧ್ಯಾತ್ಮ. ಭೂಮಿಯ ಮೇಲೆ ಇದಕ್ಕಿಂತ ದೊಡ್ಡ ಸಾಮಾಜಿಕ ಭದ್ರತಾ ವ್ಯವಸ್ಥೆ ಎಲ್ಲಿ ಸಿಗುತ್ತದೆ?
ನಮ್ಮ ಆಧ್ಯಾತ್ಮ ಎನ್ನುವುದು ಅನುಭವಗಳ ಮೂಲಕ ಕಟ್ಟಲ್ಪಡುತ್ತಾ ಬಂದದ್ದು. ಇದರ ಹಿಂದೆ ಯಾವುದೇ ಥಿಯಾಲಜಿ ಇಲ್ಲ. ಪ್ರಜ್ಞಾಪೂರ್ವಕವಾಗಿ ಹೆಣೆಯಲ್ಪಟ್ಟ ನೆಮ್ಮದಿಯ ಸೂತ್ರಗಳಲ್ಲ ಅಥವಾ ಪಠ್ಯಪುಸ್ತಕಗಳ ಮೂಲಕ ಬೋಧಿಸಲ್ಪಡುವ ವಿಷಯವೂ ಅಲ್ಲ. ನಮ್ಮಲ್ಲಿ ಒಂದು ಗಾದೆ ಮಾತಿಗೆ ‘ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸಿ ಕೊಡುವುದು’ ಜಾಣತನ ಎಂದು. ನೆಮ್ಮದಿಯನ್ನು ಕೊಡುತ್ತೇವೆಂಬ ಸಾಹಸ ಕೈಬಿಟ್ಟು ನೆಮ್ಮದಿ ಗಳಿಸಿಕೊಳ್ಳುವ ಮಾರ್ಗ ತೋರಿಸಿ ಕೊಡಬೇಕು. ನಮ್ಮ ಆಧ್ಯಾತ್ಮ ಈ ಮಾರ್ಗ ತೋರಿಸುವ ಕೆಲಸ ಮಾಡುತ್ತ ಬಂದಿದೆ. ಒಬ್ಬನಿಗೆ ನೆಲದ ಮೇಲೆ ಇನ್ನೊಬ್ಬನಿಗೆ ಸೋಪಾನದ ಮೇಲೆ ಮಲಗಿದರೆ ಆನಂದ ಸಿಗುತ್ತದೆ. ಒಬ್ಬನಿಗೆ ಗಣೇಶನ ಪೂಜೆಯಲ್ಲಿ, ಇನ್ನೊಬ್ಬನಿಗೆ ಹನುಮಂತನ ಪೂಜೆಯಲ್ಲಿ ಆನಂದ ಸಿಗುತ್ತದೆ. ಇವರ ಆನಂದದ ಮಾರ್ಗಕ್ಕೆ ಯಾವುದೇ ನಿರ್ಬಂಧ ಇಲ್ಲ.
ನೆಮ್ಮದಿ ಮತ್ತು ಆನಂದ ಅನ್ನುವುದು ಒಂದು ಮಾನಸಿಕ ಅವಸ್ಥೆ. ಅದನ್ನು ಭೌತಿಕ ಸಂಗತಿಗಳ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ದುರಂತದ ಸಂಗತಿ ಅಂದರೆ ಇದನ್ನು ಕೂಡಾ ನಮಗಿಂತ ಮೊದಲು ಪಾಶ್ಚಾತ್ಯರೇ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕಾಗೇ ಅವರಿಗೀಗ ಭಾರತೀಯರ ಜೀವನಶೈಲಿ ಆದರ್ಶವಾಗಿ ಕಾಣುತ್ತದೆ. ಇಲ್ಲಿಯ ಯೋಗ ಮತ್ತು ಧ್ಯಾನವನ್ನು ವಿಜ್ಞಾನ ಎಂದು ಸ್ವೀಕರಿಸುತ್ತಾರೆ. ಆಯುರ್ವೇದ ವೈದ್ಯಕೀಯ ಪದ್ಧತಿಗೆ ಆಕರ್ಷಿತವಾಗುತ್ತಾರೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಪ್ರಶಂಸಿಸುತ್ತಾರೆ. ಏಕೆಂದರೆ ಅವರಿಗೂ ತಿಳಿಯುತ್ತ ಬಂದಿದೆ, ಇವುಗಳಲ್ಲಿ ನೆಮ್ಮದಿಯ ಮಾರ್ಗಗಳಿವೆಯೆಂದು. ಆದ್ದರಿಂದ ಪ್ರಪಂಚದ ಯಾವ ತಲ್ಲಣಗಳಿಗೂ ವಿಚಲಿತವಾಗದ ಒಂದು ಅದ್ಭುತವಾದ ಸಾಮಾಜಿಕ ಭದ್ರತೆಯ ವ್ಯವಸ್ಥೆ ಅಂದರೆ ನಮ್ಮ ಸಂಸ್ಕೃತಿ. ಇದನ್ನು ಪುನಃ ಪಾಶ್ಚಾತ್ಯರೇ ಬಂದು ತಿಳಿಸಿಕೊಡುವ ಪ್ರಸಂಗ ಬರುವಷ್ಟರಲ್ಲಿ ನಾವು ನಾವಾಗೇ ಅದನ್ನು ಅರಿತುಕೊಂಡರೆ ದೇಶಕ್ಕೆ ಒಳಿತು. *
ಬಹಳ ಮುಖ್ಯವಾದ ವಿಚಾರ. ಆದರೆ ತಥಾಕಥಿಥ ಪ್ರಜ್ನಾವಂತರು ಪಾಶ್ಚಾತ್ಯ ಸಂಸ್ಕೃತಿ (ಇಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅಂದರೆ ಜೀನ್ಸು ಪ್ಯಾಂಟು ಧರಿಸುವಂತಹಾ ಸೀಮಿತ ಅರ್ಥದಲ್ಲಿ ಹೇಳುತ್ತಿರುವುದಲ್ಲ) ಮತ್ತು ಯೋಚನಾಲಹರಿಯನ್ನು ಅಳವಡಿಸಿಕೊಳ್ಳುದಕ್ಕೆ ಆ ಬಗೆಗಿನ ಆಕರ್ಷಣೆಯೇ ಕಾರಣವೆಂದು ಹೇಳಲಾಗದು. ಇದಕ್ಕೆ ಮೂಲ ಕಾರಣ ಭಾರತದ ಅಧ್ಯಾತ್ಮಿಕ ವಿಚಾರಗಳು – ೧. ಬಹಳ ಶಾಖೆಗಳು ಬೆಳೆದು ಒಂದೇ ವಿಚಾರವನ್ನು ಬೇರೆ ಬೇರೆ ರೀತಿ ಹೇಳುತ್ತಿರುವುದರಿಂದ ಜನಸಾಮಾನ್ಯನಿಗೆ ಇವು ಒಂದು ರೀತಿಯ ಗೋಜಲಾಗಿವೆ, ೨. ತಥಾಕಥಿತ ಅಧ್ಯಾತ್ಮವಾದಿಗಳು ಕೇವಲ ಆಚರಣೆಯನ್ನೇ ವೈಭವೀಕರಿಸಿ ಮೂಲದಲ್ಲಿರುವ ಸರಳತೆಯನ್ನೂ, ಉದ್ದೇಶಗಳನ್ನೂ ಮರೆಸಿದ್ದಾರೆ – ಆದ್ದರಿಂದ ಇಲ್ಲಿ ಮೂಲಸಮಸ್ಯೆಯಿರುವುದು ಭಾರತದ ಅಧ್ಯಾತ್ಮ ಕಲಿಕಾ ಪಧ್ಧತಿಯ ಅಧೋಗತಿ.
@Mahesha Prasad ನೀರ್ಕಜೆ,
ನನಗೇನೂ ಹಾಗನಿಸೋದಿಲ್ಲ , ಇಲ್ಲಿಯ ಕವಲುಗಳ ಬಗ್ಗೆ ಬೇಸತ್ತವರು, ಇನ್ನೊಂದು ಹೊಸ ಕವಲು ಹುಡುಕಿ ಅನುಸರಿಸಲು ಸಾದ್ಯವೇ ? ಇದು ಕೇವಲ ವ್ಯಾಮೋಹ(ಕುರುಡು) ಅನ್ನಿಸುತ್ತಿದೆ. ದೂರದ ಬೆಟ್ಟ ನುಣ್ಣಗೆ ಅಸ್ಟೇ. ನಮ್ಮ ಈಗಿನ ಜನರಿಗೆ ನಮ್ಮದೆಲ್ಲವೂ ಕೆಟ್ಟದ್ದು ಪಾಶ್ಚಿಮಾತ್ಯ ದ್ದು ಎಲ್ಲ ಒಳ್ಳೆಯದು ಎಂಬ ಭಾವ ಬೆಳೆದಿದೆ, ಯಾಕೆಂದರೆ ನಮ್ಮವರೇ ಬುದ್ದಿಜೀವಿಗಳೆನಿಸಿಕೊಂಡವರು ಇಂತಹ ಯೋಚನೆಗೆ ಇಂಬು ಕೊಡುತ್ತಿದ್ದಾರೆ. ಇದೊಂತರಾ ಚಕ್ರದ ತರಹ , ಒಮ್ಮೆ ಅದು ಮೇಲೆ ,ಇನ್ನೊಮ್ಮೆ ಇದು ಮೇಲೆ. ಅಲ್ಲಿಗೆ ಹೋಗಿ ನೋಡಿದರೆ ಇದು ಒಳ್ಳೆಯದು ಅನ್ನಿಸುತ್ತದೆ ಮೂಢ ಚಂಚಲ ಮನಸ್ಸಿಗೆ….ಇದುವೇ ಜೀವನ !!!!???