ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 8, 2011

5

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ: ತಲೆಗೆ ಬಿದ್ದ ತಾಳ

by ನಿಲುಮೆ

“ನನ್ನಿಂದಾದಷ್ಟು ಸಮಯ… ಈ ಜೀವನ ನನ್ನನ್ನು ಕುಣಿಸಿದಷ್ಟು ದಿನವೂ ಕುಣಿಯುತ್ತೇನೆ…. ಕುಣಿಯುತ್ತಲಿರುತ್ತೇನೆ…”  ಎಂದು ತೀರ್ಮಾನಿಸಿ ಯಕ್ಷಗಾನ ಕಲೆಗಾಗಿ ಅವಿರತವಾಗಿ ದುಡಿದು  18.11.1972  ರಂದು ಬಣ್ಣ ಕಳಚಿ  ಯಕ್ಷಗಾನ ರಂಗವನ್ನು ತಬ್ಬಲಿಯನ್ನಾಗಿ ಮಾಡಿ ಯಕ್ಷಮಾತೆಯ ಪಾದವನ್ನು ಸೇರಿದ ಕುರಿಯ ವಿಠಲ ಶಾಸ್ತ್ರಿಯವರು ಜನಿಸಿದ್ದು ಕಳೆದ ಶತಮಾನದ ದಿನಾಂಕ 8.9.1912  ರಂದು .ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ತಮ್ಮ ವಯಸ್ಸಿನ ನೂರನೇ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪದ್ಯಾಣ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಯಕ್ಷಗಾನ .ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರದಲ್ಲಿ  ಮೊದಲ ಬಾರಿಗೆ ಯಕ್ಷಗಾನದ ಕೇಳಿ ಬಡಿದವರು ಎಂದು 1955ನೇ ಇಸವಿಯಲ್ಲಿ ಗುರುತಿಸಿಕೊಂಡವರು ಕಳೆದ ಶತಮಾನದ ಮಂಗಳೂರಿನ ಹಿರಿಯ ಪತ್ರಕರ್ತ ಹಾಗೂ  ಅಂಕಣಕಾರ  ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. 1928 -1997 ).)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಇಂದು ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆಯಲ್ಲಿ…

—————-

ಇಂದಿಗೆ ಸುಮಾರು ಐದು ದಶಕಗಳ ಹಿಂದೆ…
ನಾನಾಗ ಎಂಟರ ತುಂಟಗಾಲಿನಲ್ಲಿದ್ದ ಹುಡುಗ. ಆಟದ (ಯಕ್ಷಗಾನ ಬಯಲಾಟಕ್ಕೆ ಹಾಗೆನ್ನುತ್ತಾರೆ.) ಮೋಜು ನಮ್ಮ ಹಳ್ಳಿಯಲ್ಲಿ ಎಲ್ಲರಿಗೂ ಇದ್ದಿತು (ಈಗಲೂ ಇದೆಯೆನ್ನಿ)-

ದಕ್ಷಿಣ ಕನ್ನಡದ ಹಳ್ಳಿಗಳೆಂದರೆ, ಹತ್ತು ಮನೆಗಳ ಸುತ್ತೂರುಗಳಾಗಿರುವುದಿಲ್ಲ. ಒಂದು ಮನೆಯಿಂದ ಇನ್ನೊಂದು ಮನೆಗೆ ಕೂಗಳತೆಯ ದೂರವೇ ಇರುತ್ತದೆ. ಅಂತಹ ಹತ್ತು ಮನೆಗಳಿರುವ ಸುಮಾರು ಚದರ ಮೈಲಿಗಳ ವಿಸ್ತಾರದ ಪ್ರದೇಶಕ್ಕೆ ಒಂದು ಹಳ್ಳಿಯ ಹೆಸರು ಇರುತ್ತದೆ. ಪ್ರತಿ ಮನೆಯ ತಾಣಕ್ಕೂ ಒಂದು ಒಳ ಹೆಸರಿರುತ್ತದೆ.

ನಮ್ಮ ಮನೆ ಇರುವ ಸ್ಥಳಕ್ಕೆ ಕುರಿಯ ಎನ್ನುತ್ತಾರೆ. ಅಲ್ಲಿಂದ ಸುಮಾರು ಒಂದು ಮೈಲು ದೂರದ ಕುರುಡಪದವಿನಲ್ಲಿ ಮೂರು ದಿನಗಳ (ಅಂದರೆ ರಾತ್ರಿಗಳ) ಬಯಲಾಟದ ಕಾರ್ಯಕ್ರಮವಿದ್ದಿತು.

ಒಂದು ದಿನದ “ಆಟ”ವಾದರೂ ನಮಗೆ ಸಂತಸದ ಸುಗ್ಗಿ. ಮೂರು ದಿನಗಳೆಂದರೆ ಕೇಳಬೇಕೆ?

ರಾತ್ರೆಯೆಲ್ಲಾ ರಂಗಸ್ಥಳದ ಬಳಿ- ಹಗಲೆಲ್ಲಾ (ಊಟದ ಹೊತ್ತಿನ ಹೊರತು) ಮನೆ ಚಾಪೆಯ ಮೇಲೆ- ನಾನು ಕಳೆದಿದ್ದೆ.  ಮೊದಲ ರಾತ್ರಿ- “ಪಟ್ಟಾಭಿಷೇಕ”, ಮರುರಾತ್ರಿ “ಪ್ರಹ್ಲಾದ ಚರಿತ್ರೆ”, ಮೂರನೆಯ ದಿನ “ಕಾರ್ತವೀರ್ಯಾರ್ಜುನ ಕಾಳಗ.”
ಮೂರೂ ಪ್ರಸಂಗಗಳ ಹೆಸರು ನೆನಪಿನಲ್ಲಿ ಉಳಿದಿದೆ. ಆದರೆ, ನೋಡಿದ ಆಟಗಳಲ್ಲಿ “ಪಟ್ಟಾಭಿಷೇಕ” ಮಾತ್ರವೇ ಅಚ್ಚಳಿಯದೆ ಉಳಿದುದು.ಅದರಲ್ಲೂ ಒಂದು ಪಾತ್ರ, ಇಂದಿಗೂ ಕಣ್ಣೆದುರು ಕಟ್ಟಿದಂತಿದೆ.

“ಸಣ್ಣವಳಾದ ಸೀತೆ ಮತ್ತು ವೃದ್ಧಾಪ್ಯದಲ್ಲಿರುವ ಪಿತ ದಶರಥ ಚಕ್ರವರ್ತಿ… ಇವರಿಬ್ಬರಿಗೂ ನಾನಿಲ್ಲದಿರುವಾಗ ನಮ್ಮ ವಿಯೋಗದ ದುಃಖವು ಬಾರದಂತೆ-ತಾಪ ತಗಲದಂತೆ ನೋಡಿಕೊಳ್ಳುವ ಹೊಣೆ ನಿಮ್ಮದಮ್ಮಾ!” ಎಂದು ಶ್ರೀರಾಮಚಂದ್ರನು ತಾಯಿ ಕೌಸಲ್ಯೆಯೊಡನೆ ಹೇಳುವ ಮಾತು-

ಕೌಸಲ್ಯೆ ಅವನನ್ನು ಬೀಳ್ಕೊಡುವ ದೃಶ್ಯ…. ರಾಮನ ಪಾತ್ರಕ್ಕಿಂತಲೂ, ವನವಾಸಕ್ಕೆ ಮಗನನ್ನು ಕಳುಹಿಸಿಕೊಡುವ ಕೌಸಲ್ಯಾದೇವಿಯ ಪಾತ್ರಚಿತ್ರಣ ನನ್ನನ್ನು ಸೆರೆ ಹಿಡಿದಿತ್ತು. ಕೌಸಲ್ಯೆ “ಅಭಿನಯ”ವನ್ನು ಕಂಡು, ಕೆಲವು ಹನಿ ಕಣ್ಣೀರು ಸುರಿಸಿದ್ದೆನೆಂದು ಹೇಳಲು ನಾಚಿಕೆ ಏನೂ ಆಗುವುದಿಲ್ಲ. ಆ “ವೇಷ”ವನ್ನು ಹಾಕಿದ್ದವರು ಶ್ರೀ ಕುಂಬಳೆ ರಾಮಚಂದ್ರರೆಂದು ನೆನಪು (ಅವರು ಈಗ ಇಲ್ಲ).

ಆಗಿನ ಕಾಲಕ್ಕೂ ಮೊದಲು, ಅಂದಿನ ಬಯಲಾಟ ನಡೆಸಿದ್ದ ಕೂಡ್ಲು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂದರೆ ಪ್ರಸಿದ್ಧವಾಗಿತ್ತು.
ಕೂಡ್ಲು “ಮೇಳ”ದ (ಅದು ಕೆಲವರ ಬಾಯಲ್ಲಿ ಕೂಡೇಲು ಮೇಳವೂ ಆಗಿತ್ತು) ಆಟ ಇದೆ ಎಂದರೆ ಹತ್ತಾರು ಮೈಲು ದೂರದಿಂದ ರಾತ್ರೆಯ ಹೊತ್ತಿನಲ್ಲಿ ಗುಡ್ಡಗಳಲ್ಲೆಲ್ಲಾ ತೆಂಗಿನ ಗರಿಗಳ “ಸೂಟೆ”ಗಳ ಸಾಲನ್ನು ಕಾಣಬಹುದಾಗಿತ್ತು.

ಇಂದೆಲ್ಲಿ ಆಟ?

ಇಂದಿನಂತೆ, ಭಿತ್ತಿಪತ್ರಗಳ ಪ್ರದರ್ಶನ ನಡೆಸಬೇಕು ಎಂದಿರಲಿಲ್ಲ. ಕರಪತ್ರಗಳನ್ನು ಕಡ್ಡಾಯವಾಗಿ ಗಾಳಿಗೆ ತೂರಬೇಕಾಗಿರಲಿಲ್ಲ. ಕಾರುಗಳಲ್ಲಿ ಧ್ವನಿವರ್ಧಕಗಳನ್ನು ಇರಿಸಿಕೊಂಡು “ಬನ್ನಿರಿ, ನೋಡಿರಿ! ಆನಂದ ಪಡೆಯಿರಿ!” ಇತ್ಯಾದಿಗಳ ಕಂಠಶೋಷಣೆ ಮಾಡಬೇಕಾಗಿರಲಿಲ್ಲ.

ಆಟವಾಡಿಸುವ ವೀಳಯವನ್ನು ಊರ ಪ್ರಮುಖರಿಂದ ಪಡೆದುಕೊಂಡರೆ-ಯಜಮಾನನ ಕೆಲಸ ಮುಗಿಯಿತು. ಊರವರೇ ಮಾಡಿಕೊಡುವ ರಂಗಸ್ಥಳದ ಬಳಿ “ಚೌಕಿ” (ಬಣ್ಣ ಹಾಕಿಕೊಳ್ಳುವ ಸ್ಥಳ)ಯ ಸಮೀಪದಿಂದ ಸಾಯಂಕಾಲದ ಒಂದು ಘಳಿಗೆಯ ಕಾಲ ಚೆಂಡೆಯ “ಕೇಳಿ” ಬಾರಿಸಿದರೆ- ಅದೇ ಪ್ರಚಾರ ಸಾರುತ್ತಿತ್ತು. “ಇಂದೆಲ್ಲಿ ಆಟವಿದೆ?” ಎಂದು ಜನರು ಕುತೂಹಲ ತಳೆಯುತ್ತಿದ್ದರು.

ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಐದಾರು ಮೈಲಿಗಳ ದೂರ ಕೇಳಿಸುವ ಚೆಂಡೆಯ ಸದ್ದಿನಿಂದಲೇ ಆಟವಾಗುವ ಸ್ಥಳದ ದಿಕ್ಕು- ದೆಸೆಗಳನ್ನು ತಿಳಿದುಕೊಳ್ಳುತ್ತಿದ್ದರು. ವಿಚಾರಿಸಿ ಅರಿತು, ಬಯಲಾಟಕ್ಕೆ ಭೇಟಿ ಕೊಡುವ ಸಿದ್ಧತೆ ನಡೆಸುತ್ತಿದ್ದರು.

ಸಂಜೆಗತ್ತಲಿನಲ್ಲೇ ಹೊರಟು ಆಟದ ಸ್ಥಳಕ್ಕೆ ಬಂದು ಸೇರಿದರೆಂದರೆ ಮುಂಜಾವಿನ ಮುಂಬೆಳಕಿನವರೆಗೂ ಅಲ್ಲೇ ಉಳಿಯುತ್ತಿದ್ದರು. ಆಟ ನೋಡಲು ಬಂದು, ಅಲ್ಲಿ ತೂಕಡಿಸುವುದೆಂದರೆ ಅಂದಿನ ಹಿರಿಯರ ದೃಷ್ಟಿಯಲ್ಲಿ ಮಹಾಪಾಪ.

ತೂಕಡಿಕೆ ಕೂಡಾ ಬಾರದೆ ರಾತ್ರಿಯಿಡೀ ಆಟ ನೋಡಿದೆ ಎಂದು ಹೇಳಿಕೊಳ್ಳಲು ಹುಡುಗರಿಗೆಲ್ಲಾ ಹೆಗ್ಗಳಿಕೆ. ವೇಷಗಳ ವಿವಿಧ ರೀತಿಯ ಕುಣಿತಗಳನ್ನು ಕಾಣಬೇಕು- ಅವರ ಆರ್ಭಟ- ಅಟ್ಟಹಾಸಗಳನ್ನು ಕೇಳಿದಾಗ ನಡುಗಬೇಕು- ಪಾತ್ರಗಳ ಪರಸ್ಪರ ವಿಮರ್ಶೆ ನಡೆಸಬೇಕು. ಇವೆಲ್ಲವೂ ರಂಗಸ್ಥಳಕ್ಕೆ ಸಾಧ್ಯವಾದಷ್ಟು ಸಮೀಪವಾಗಿ ಕುಳಿತಿದ್ದ ಹುಡುಗರು ನಡೆಸುವ ಕೆಲಸಗಳು.

ನಾನೂ ಅಂತಹ ಕೆಲಸ ನಡೆಸುತ್ತಿದ್ದೆ. ಇತರರಿಗಿಂತ ಹೆಚ್ಚು ಉತ್ಸಾಹ ತೋರುತ್ತಿದ್ದೆನಾದರೆ ಅದು ಸ್ವಾಭಾವಿಕ. ಬಯಲಾಟದ ಬಗ್ಗೆ ಹೆಚ್ಚಿನ ಉತ್ಸಾಹ ಬರಲು ವಿಶೇಷವಾದ ಕಾರಣ ಬಯಲಾಟ ಎಂದರೆ ಬೇಕಾದಾಗ ಸಿಗುವ ಮನರಂಜನೆ ಅಲ್ಲದಿದ್ದುದೇ ಆಗಿತ್ತು.

ಪ್ರತಿ ವರ್ಷದ ಮಾರ್ಗಶಿರ ಮಾಸದಲ್ಲಿ ಪ್ರಾರಂಭವಾದ ಬಯಲಾಟದ ಮೇಳಗಳ ತಿರುಗಾಟ ವೈಶಾಖ ಮಾಸದ ದಶಮಿಯಂದು ಅಂತ್ಯಗೊಳ್ಳುವ ಪರಂಪರೆ. ಅಂದಿಗೆ ಸಂಪ್ರದಾಯ ಪ್ರಕಾರ ತಿರುಗಾಟ ಮುಗಿಸಿ, ಮೇಳದ ಲೆಕ್ಕಾಚಾರವನ್ನು ಒಪ್ಪಿಸುವ ಕ್ರಮವೂ ಇದೆ.

ಬಾಲ್ಯದ ಆಸಕ್ತಿ

ಆದುದರಿಂದ ವರ್ಷದ ಉಳಿದ ದಿನಗಳಲ್ಲಿ ನಮಗೆ ಯಕ್ಷಗಾನದ ಆಸಕ್ತಿಯನ್ನು ಉಳಿಸಿಕೊಳ್ಳಲು ದಾರಿಗಳನ್ನು ಹುಡುಕುವ ಪ್ರಮೇಯ ಬರುತ್ತಿತ್ತು.

ಯಕ್ಷಗಾನ ಕಲಾವಿಲಾಸಿಗಳಿಗೆ ಒಂದು ರೀತಿಯ ಅಭ್ಯಾಸರಂಗವಾಗಿ ತಾಳಮದ್ದಳೆ ಕೂಟಗಳನ್ನು ನಮ್ಮತ್ತ ಕಡೆ ಜರುಗಿಸುತ್ತೇವೆ. ಬೇಸಾಯದ ದುಡಿಮೆ ಮುಗಿದಾಗ ಅಂತಹ ಕೂಟಗಳು ಹೆಚ್ಚು ಹೆಚ್ಚಾಗಿ ಆಗುತ್ತವೆ. ಮಳೆಗಾಲದಲ್ಲೂ ನಡೆಯುತ್ತದೆ.

ಮುಂಗಾರು ಮಳೆಯ ಅಬ್ಬರ ಕೇಳತೊಡಗಿದಾಗ ಯಕ್ಷಗಾನ ತಾಳಮದ್ದಳೆ ಕೂಟಗಳ ವ್ಯವಸ್ಥೆಗೂ ಕಳೆ ಬರುತ್ತದೆ. ನಮ್ಮ ಮನೆ ಮತ್ತು ಹಳ್ಳಿಯ ಸುತ್ತಲಿನ ಮನೆಗಳಲ್ಲಿ ಅಂತಹ ಕೂಟಗಳು ಬಹಳ ವರ್ಷಗಳಿಂದ ನಡೆದು ಬರುತ್ತ ಇದ್ದುವು. ನಾನು ಮೂರು ವರ್ಷದ ಬಾಲಕನಾಗಿ ಇದ್ದಾಗಲೇ ತಾಳಮದ್ದಳೆ ಎಂದರೆ ಅತೀವ ಆಸಕ್ತಿಯನ್ನು ತೋರುತ್ತಿದ್ದುದಾಗಿ ನಮ್ಮ ಮಾತೋಶ್ರೀಯವರು ಹೇಳಿದ್ದುದನ್ನು ಕೇಳಿದ್ದೇನೆ.

ನನಗೆ ನೆನಪಿದ್ದ ಹಾಗೆ, ಯಕ್ಷಗಾನ ಕೂಟಗಳು ನಮ್ಮ ಮನೆಯಲ್ಲಿ ನಡೆದಾಗಲೂ, ಮನೆ ಬಳಿಯ ಇತರ ಸ್ಥಳಗಳಲ್ಲಿ ಆದಾಗಲೂ ಭಕ್ತಿ ಪುರಸ್ಸರವಾಗಿ ಭಾಗವಹಿಸಲು ಯಾವ ಆತಂಕವೂ ನನ್ನ ಹಿರಿಯರಿಂದ ಬರುತ್ತಿರಲಿಲ್ಲ. ಆರಂಭದ ವರ್ಷಗಳಲ್ಲಿ ತಾಳಮದ್ದಳೆಯಲ್ಲಿ ನಾನು ವಹಿಸುತ್ತಿದ್ದ ಭಾಗವೆಂದರೆ ಶ್ರಾವಕನದು ಮಾತ್ರ. ಆದರೆ, ಶ್ರವಣದಿಂದ ಸಂಗ್ರಹ ಶಕ್ತಿಯನ್ನು ಬೆಳೆಸಿಕೊಳ್ಳುವ ಕೆಲಸ ನನಗರಿವಿಲ್ಲದಂತೆಯೇ ನಡೆದಿತ್ತು.

ಆಗ ಅರಿತುದನ್ನು ನಾನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದಾಗಲೂ ನನ್ನ ಹಿರಿಯರು ಏನೂ ಹೇಳಿದವರಲ್ಲ. ನನ್ನ ತೀರ್ಥರೂಪರು, ಹಿಂದೆ ಒಮ್ಮೊಮ್ಮೆ ಹರಿಕಥೆಗಳನ್ನು ನಡೆಸುತ್ತಿದ್ದರು. ಹರಿಕಥೆಗಾಗಿ ಹಲವಾರು ಬಾರಿ ಅವರು ಕವಿತೆಗಳನ್ನು ರಚಿಸಬೇಕಾಗುತ್ತಿತ್ತು. ಕೆಲವೊಮ್ಮೆ ಪದಗಳನ್ನು ಹೇಳುತ್ತಾ ಪ್ರಾಸಕ್ಕಾಗಿ ಅವರು ತಡಕಾಡುತ್ತಿದ್ದಾಗ ನನ್ನ ಮನಸ್ಸಿಗೆ ಸರಿ ಎಂದು ಕಂಡ ಶಬ್ದಗಳನ್ನು ಹೇಳಿ “ಇದು ಸರಿಯಾಗದೆ?” ಎಂದು ಕೇಳಿದ್ದೆ. “ಸರಿ” ಎಂದು ಅವರು ನುಡಿದಾಗ ಸಂತೋಷಗೊಂಡಿದ್ದೆ.

ಅಂತೆಯೇ, ಕೆಲವು ಬಾರಿ ಪ್ರಾಸಬದ್ಧ ಶಬ್ದಗಳ ಸೂಚನೆಗೆ ಹೊರಟಾಗ ಅವರೇ ವಿಪರೀತ ಅರ್ಥ ಬರುವ ಶಬ್ದಗಳನ್ನು ಹೇಳಿ “ಈ ಶಬ್ದದ ಅರ್ಥವೇನೆಂದು ತಿಳಿದುಕೊ” ಎಂದೂ ಹೇಳಿದ್ದ ಘಟನೆಗಳು ನೆನಪಿಗೆ ಬರುತ್ತವೆ.
ಇರಲಿ.

ಬರಿಯ ಶ್ರಾವಕನಾಗಿ ತಾಳಮದ್ದಳೆಗಳಲ್ಲಿ ಭಾಗವಹಿಸುವ ಕಾಲವು ಕಳೆದು, ಮುಂದಿನ ಹಂತಕ್ಕೆ ಕಾಲಿಕ್ಕುವ ಅವಕಾಶವೂ ನನಗೆ ಬೇಗನೆ ದೊರೆಯಿತು.
ಯಕ್ಷಗಾನದ ಸೂತ್ರಧಾರಿ ಭಾಗವತರ ಹಿಂದೆಯೇ ಕುಳಿತು ವೀರರಸದ ಪದ್ಯಗಳು ಬಂದಾಗಲೆಲ್ಲಾ ಚೆಂಡೆಯ ಪೆಟ್ಟಿಗೆ ಸರಿಯಾಗಿ (ಕಂಚಿನ) ಚಕ್ರತಾಳದ ಪೆಟ್ಟುಗಳನ್ನು ಹೊರಡಿಸುವ ಕೆಲಸ ಮೊದಲನೆಯ ಬಾರಿಗೆ ನನಗೆ ಊರಿನ ಒಂದು ಕೂಟದಲ್ಲೇ ಸಿಕ್ಕದಿನ, ಯಕ್ಷಗಾನ ‘ಕಲಾವಿದ’ನಾಗಿ ಆ ರಂಗಕ್ಕೆ ಪಾದಾರ್ಪಣ ಮಾಡಿದೆ ಎಂಬ ಭಾವನೆ ನನ್ನ ಮಟ್ಟಿಗೆ ಬಂತು.

ವೀರರಸದ ಪದ್ಯಗಳು ಹೆಚ್ಚಾಗಿ ಮಾರವಿ ರಾಗದಲ್ಲಿ (ಏಕತಾಳ) ಇರುತ್ತವೆ. ಪ್ರತಿಯೊಂದು ಪ್ರಸಂಗದಲ್ಲೂ ಕಡಿಮೆ ಎಂದರೆ ನೂರು ಪದ (ಪದ್ಯ)ಗಳಾದರೂ ವೀರರಸದಲ್ಲಿ ಇಲ್ಲವೆಂದಾದರೆ, ಈ ಪ್ರಸಂಗ ನೀರಸವಾದುದೆಂದೇ ರಸಿಕರ ಭಾವನೆ.

ಲಯವಿಲ್ಲದ ತಾಳ

ನನಗಂತೂ, ಆಗಿನ ದಿನಗಳಲ್ಲಿ ಒಂದು ಪದ ಕಳೆದು ಇನ್ನೊಂದು ಬರಬೇಕಾದರೆ ಬಹಳ ಹೊತ್ತಾಗುತ್ತಿದೆ ಎನಿಸುತ್ತಿತ್ತು. ನನ್ನ “ಪ್ರೌಢಿಮೆ”ಯ ಪ್ರದರ್ಶನಕ್ಕೆ ಸಿಗುವ ಅವಕಾಶ ಬಹಳ ಕಡಿಮೆ ಎಂದೇ ಸಂಕಟವಾಗುತ್ತಿತ್ತು.

ನನ್ನ ಉತ್ಸಾಹ ಹೆಚ್ಚಿ, ಎಷ್ಟೋ ಬಾರಿ ಲಯವಿಲ್ಲದೆ ಚಕ್ರತಾಳ ಬಾರಿಸಿ ಹಿರಿಯರಿಗೆ ಕೊಟ್ಟ ಉಪಟಳದ ಕಥೆ ಕೇಳಬೇಕಾದರೆ ಕೆಲವು ವರ್ಷಗಳೇ ಸಂದುಹೋಗಿದ್ದುವು.

ಮನೆಯ ಮಾಳಿಗೆಯಲ್ಲಿ ತಮ್ಮನನ್ನು ಕೂಡಿಹಾಕಿ ಪ್ರಸಂಗ ಪುಸ್ತಕಗಳನ್ನು ಓದಿ ಅರ್ಥ ಹೇಳುವುದೂ ನಡೆದಿತ್ತು. ಅರ್ಥ ಅಸಂಬದ್ಧವಾಗಿ ಅನರ್ಥವಾದರೂ ಆಗಿನ ದೃಷ್ಟಿಯಲ್ಲಿ ಅದೇ ಸರಿಯಾಗಿತ್ತು.

ಸಹೋದರ ಕೂಟ

ಹಲವು ಕೂಟಗಳಲ್ಲಿ ಸೂತ್ರಧಾರರ ಹಿಂದೆ (ಚಕ್ರತಾಳ ಹಿಡಿದು!) ಕುಳಿತು ಮನೆ ಮಾಳಿಗೆಯ ‘ಸಹೋದರ ಕೂಟ’ಗಳನ್ನು ನಡೆಸಿ ನೋಡಿ ಅನುಭವ ಪಡೆದೆನೆಂದೇ ನನಗನಿಸಿದಾಗ, ನನ್ನ ಅನುಭವವನ್ನು ಪ್ರಯೋಗಿಸಿ ನೋಡಬೇಕೆಂಬ ಆಸೆಯೂ ಆಗುತ್ತಿತ್ತು.

ಆಸೆ ತೀರಿಸಿಕೊಳ್ಳಲು ಅವಕಾಶಗಳನ್ನು ನಾನೇ ಹುಡುಕಿಕೊಳ್ಳುತ್ತಿದ್ದೆ.

ಮನೆಯಲ್ಲಿ ನನ್ನ ತಮ್ಮನನ್ನು ಹುಡುಗರ ಕೂಟಕ್ಕೆ ಎಳೆದುಕೊಳ್ಳಲು ಶ್ರಮವೇನೂ ಇರಲಿಲ್ಲ. ನಮ್ಮ ಬಯಲಿನ ಇತರ ಕೆಲವು ಮಂದಿ ಸಂಗಡಿಗರನ್ನೂ ಒಟ್ಟುಗೂಡಿಸಿ ನಾವು ನಮ್ಮದೇ ಆದ “ತಾಳಮದ್ದಳೆ”ಗಳನ್ನು ನಡೆಸುತ್ತಿದ್ದೆವು.

ಅಂದಿನ ಕೂಟಗಳಲ್ಲಿ ರಾಕ್ಷಸ ಪಾತ್ರಗಳ ಅರ್ಥ ಹೇಳುತ್ತಿದ್ದ ನನಗಿಂತ ಹಿರಿಯ- ಆದರೂ ಸಂಗಡಿಗನ ಸಾಲಿನಲ್ಲೇ ಇದ್ದ- ಒಬ್ಬರು ಗೆಳೆಯರು ಇಂದಿಗೂ ಅದೇ ರೀತಿಯ ಉತ್ಸಾಹವನ್ನು ಯಕ್ಷಗಾನದ ಬಗ್ಗೆ ತೋರಿದ್ದಾರೆ; ತೋರುತ್ತಲಿದ್ದಾರೆ (ಕುರಿಯ ಗುತ್ತು ಮಂಞಣ್ಣ ಶೆಟ್ಟಿ ಎಂದು ಅವರ ಹೆಸರು).

ಕೂಟಗಳಲ್ಲಿ ಹೆಚ್ಚಾಗಿ ನನ್ನ ತಮ್ಮನೇ ಭಾಗವತನಾಗಿರುತ್ತಿದ್ದ. ಅವನ ಸ್ವರ ಸಂಗೀತಯೋಗ್ಯವಾಗಿದ್ದರೂ, ಕೆಲವೊಮ್ಮೆ ನನ್ನ ನಿರ್ದೇಶನಾಧಿಕಾರವನ್ನು ತೋರಿಸುವ ಹುಮ್ಮಸ್ಸಿನಿಂದ ನಾನೇ ಭಾಗವತನಾಗಿ ಅವನು ಅರ್ಥಧಾರಿಯಾಗುವಂತೆ ಮಾಡಿದ್ದಿದೆ.

ಕೆಲವು ದಿನಗಳಲ್ಲಿ ನಮ್ಮ ಕೂಟಗಳಿಗೆ ಸಾಕಷ್ಟು ಜನರು ಸಿಗುತ್ತಿದ್ದರು. ಜನ ಕಡಿಮೆಯಾದರೆ ನಾವು ನಾವೇ ಪಾತ್ರಗಳನ್ನು “ಹರಿಹಂಚು” ಮಾಡಿಕೊಳ್ಳಲೂ ಸಿದ್ಧರೇ. ಎಷ್ಟೋ ಬಾರಿ ನಮ್ಮ ಕೂಟಗಳೆಲ್ಲದರಲ್ಲೂ ಪ್ರೇಕ್ಷಕ ಸ್ಥಾನದಲ್ಲೇ ಭಾಗವಹಿಸಲು ಮುಂದಾಗುತ್ತಿದ್ದ ನನ್ನ ಇಬ್ಬರು ತಂಗಿಯರನ್ನೂ ಅರ್ಥಧಾರಿಗಳಾಗಿರೆಂದು ಒತ್ತಾಯಿಸುವ ಪ್ರಮೇಯ ಬರುತ್ತಿತ್ತು.

ನನ್ನ ತಂಗಿಯರಲ್ಲಿ ಹಿರಿಯವಳು ನನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಓದಲು ತಿಳಿಯದಿದ್ದರೂ ಹಲವಾರು ಬಾರಿ ಪ್ರಸಂಗಗಳ ಪದ್ಯಗಳನ್ನು ಓದಿ ಹೇಳಲು ಪ್ರಯತ್ನಿಸಿ ಸಹಕರಿಸಿದ್ದಳು.

ಆದರೆ, ಹಾಗೆ ಓದಲು ಅವಳನ್ನು ಕೇಳಿಕೊಂಡಾಗಲೆಲ್ಲಾ ‘ಯಕ್ಷಗಾನದಲ್ಲಿ ಯಾವ ತೆರದಲ್ಲಾದರೂ ಸ್ತ್ರೀಯರು ಭಾಗವಹಿಸುವ ಕ್ರಮವಿಲ್ಲವಲ್ಲ! ನಾನೊಂದು ಅಪಚಾರವನ್ನು ಎಸಗುತ್ತಿರುವೆನೆ?’ ಎಂದು ಮನಸ್ಸು ಕುಟುಕಿ, ಕೂಟವನ್ನೇ ಸಂಕ್ಷಿಪ್ತಗೊಳಿಸಿ ಮುಗಿಸಿದ್ದೂ ಇದೆ.

ಕೇಳಿ ಕೇಳಿ ಬಾಯಿಪಾಠವಾಗಿದ್ದ ಪದಗಳು, ತಿಳಿದುಕೊಂಡಿದ್ದ ಅರ್ಥ, ಇವುಗಳಿಂದಾಗಿ ನಮ್ಮ ಕೂಟ ತನ್ನಿಂದ ತಾನೇ ಒಂದು ಮಟ್ಟವನ್ನು ಮುಟ್ಟಿತ್ತು.

ನೆನಪಿನ ಅಣಕು

ಆಗಿನ ಪ್ರಸಂಗಗಳಲ್ಲಿ ದಿವಂಗತ ಶ್ರೀ ಪೆರುವಡಿ ಸಂಕಯ್ಯ ಭಾಗವತರು ರಚಿಸಿದ್ದ “ತುಳು ಪಂಚವಟಿ” ಪ್ರಸಂಗ ನನಗೆ ಅತಿ ಪ್ರಿಯವಾಗಿತ್ತು. ನಮ್ಮ ಸುತ್ತಿನ ಪರಿಸರದಲ್ಲಿ ತುಳುಭಾಷೆಯ ಬಳಕೆಯೇ ಹೆಚ್ಚಾಗಿ ಇದ್ದುದರಿಂದ ಅದು ಸುಲಭವಾಗಿ ಅರ್ಥವಾಗುತ್ತಿತ್ತು.

ಚೆಂಡೆಯ ನಾದದ ಆಕರ್ಷಣೆಯಂತೂ ನನಗೆ ಅವರ್ಣನೀಯ. ಆಟಗಳಿಗೆ ಹೋದ ಮರುದಿನ ಕುಣಿದು ಆರ್ಭಟಿಸಿ ನಾವು ಅಣ್ಣ ತಮ್ಮಂದಿರಿಬ್ಬರೂ ಮನೆಯನ್ನೇ ಅಡಿಮೇಲು ಮಾಡಿದ್ದಿದೆ.

ಕುಣಿತ – ಕಲಿಸಿದುದಲ್ಲ; ಕಲಿತುದೂ ಅಲ್ಲ, ಕಂಡ ನೆನಪಿನ ಅಣಕು ಅಷ್ಟೆ.

ಕೂಟಗಳು ಎಷ್ಟೇ ಗುಟ್ಟಾಗಿ ನಡೆದಿದ್ದರೂ ನಮ್ಮ ತೀರ್ಥರೂಪರಿಗೆ ಅವುಗಳ ಸುಳಿವು ಸಿಕ್ಕಿತ್ತು. ನಾವು ನಿರೀಕ್ಷಿಸಿದ ಬಯ್ಗಳ ಬದಲಿಗೆ, ಅವರು ನಮ್ಮನ್ನು ಪ್ರೋತ್ಸಾಹಿಸಿದುದು, ನನ್ನ ಆಸೆಯ ಹಕ್ಕಿ ಗರಿಗೆದರುವಂತಾಯಿತು.

(ಮುಂದುವರಿಯಲಿದೆ)

ಕೃಪೆ : ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ  ಮತ್ತು ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟ್ (ರಿ).

 

5 ಟಿಪ್ಪಣಿಗಳು Post a comment
 1. Poornima Dutt, Bangalore
  ಸೆಪ್ಟೆಂ 9 2011

  ಧನ್ಯವಾದಗಳು. ಈ ಲೇಖನದಲ್ಲಿ ನಮ್ಮ ಅತ್ಯಮೂಲ್ಯವಾದ ಕಲೆ ಯಕ್ಷಗಾನದ ಬಗ್ಗೆ ಕೂಲಂಕುಷವಾಗಿ ತಿಳಿಸಲಾಗಿದೆ .ರಾಮಾಯಣ ಇಲ್ಲಿದೆ , ಪ್ರಾಚೀನ ಸಂಸ್ಕ್ರತಿಯ ಪರಿಚಯವಾಗಿದೆ, ಕುರಿಯ ವಿಠಲ ಶಾಸ್ತ್ರೀ ಅವರ ಸಾಧನೆ ಅಜರಾಮರ .

  ಕುರಿಯ ವಿಠಲ ಶಾಸ್ತ್ರೀ ಅವರಿಗೆ ಗೌರವಪೂರ್ವಕವಾದ ನಮನಗಳು .

  ಉತ್ತರ
 2. Thimmappa M S, Bangalore
  ಸೆಪ್ಟೆಂ 10 2011

  ಗತಿಸಿದ ಅಣಿಮುತ್ತುಗಳ ಹೃದಯಂಗಮ ನೋಟ, ಅಪ್ಪಟ ತಾಜಾ ಅನುಭವದ ನಿರೂಪಣೆ. ಅಭಿನಂದನೆಗಳು ಶುಭಾಶಯಗಳು, ಲೇಖಕರಿಗೆ.

  ಉತ್ತರ
 3. ವಿಜಯ್ ಬಾರಕೂರು, .ಕತಾರ್
  ಸೆಪ್ಟೆಂ 10 2011

  ನಮ್ಮ ಭರತಖಂಡದ ತಾಯಿಬೇರಿನ ಸಂಪೂರ್ಣ ಸಂಸ್ಕಾರಭರಿತ ತಿರುಳನ್ನು ಹಾಸುಹೊಕ್ಕಾಗಿ ಇರಿಸಿಕೊಂಡು ಪರಂಪರೆಯಿಂದ ಪರಂಪರೆಗೆ ಕಲಾತ್ಮಕವಾಗಿಯೇ ಬೆಳೆದುಬರುತ್ತಿರುವ ಯಕ್ಷಗಾನ ಕಲೆಗಾಗಿ ತಮ್ಮ ಪೂರ್ತಿ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಟ ಕಲಾವಿದರಲ್ಲಿ ಶ್ರೀಯುತ ಕುರಿಯ ವಿಠಲ ಶಾಸ್ತ್ರಿಯವರೂ ಒಬ್ಬರು ಎನ್ನುವುದನ್ನು ಶ್ರೀಯುತ ಕುರಿಯ ವಿಠಲ ಶಾಸ್ತ್ರಿಯವರ ಆತ್ಮಕಥನದಿಂದ ತಿಳಿದುಕೊಳ್ಳಬಹುದಾಗಿದೆ.

  ಕರ್ನಾಟಕ ಕರಾವಳಿಯ ಗಂಡುಮೆಟ್ಟಿದ ಕಲೆ ಎಂಬ ಬಿರುದನ್ನೂ ತನ್ನದಾಗಿಸಿಕೊಂಡಿರುವ ಈ ಕಲೆಯಲ್ಲಿಯ ಯಾವ ಪ್ರಸಂಗದ ಯಾವುದೇ ಪಾತ್ರಕ್ಕೂ ಯಾವ ಸಮಯದಲ್ಲಿಯೂ ಸೈ ಎಂದು ವೇಷಕಟ್ಟಿ ರಂಗಸ್ಥಳಕ್ಕೆ ಧುಮುಕಿ ತನ್ನ ಅಮೋಘ ಪ್ರತಿಭೆಯಿಂದ ಪ್ರೇಕ್ಷಕರ ಮುಕ್ತ ಕಂಠದಿಂದ ಹೊಗಳಿಸಿಕೊಂಡ ಕೀರ್ತಿ ವಿಠಲ ಶಾಸ್ತ್ರಿಯವರಿಗೆ ಸೇರುತ್ತದೆ. ಅಂಥಹ ಕಲಾವಿದರ ಪ್ರಬುದ್ಧ ಕಲಾವೈಖರಿಯನ್ನು ನಾವು ಇಂದಿನ ಪೀಳಿಗೆಯವರು ಕಣ್ಣಾರೆ ನೋಡಿ ಪ್ರತ್ಯಕ್ಷ ಅವರ ಕಲಾವೈಭವವನ್ನು ಮನದಟ್ಟು ಮಾಡಿ ಕೊಳ್ಳುವ ಮುನ್ನವೇ ಜೀವನವೆಂಬ ನಾಟಕವನ್ನು ಮುಕ್ತಾಯಗೊಳಿಸಿ ಅಂಕದಪರದೆಯನ್ನು ಎಳೆದು ಬೆಳಗಿನ ಜಾವದಲ್ಲಿನ ಭಾಗವತರ ರಾಗದ ಮೇರುಸ್ತರಕ್ಕೆ ಸಾತ್ ನೀಡುವ ಶ್ರುತಿಯ ನಾಲ್ಕನೇ ಕಪ್ಪು ಪಟ್ಟಿಯ ನಾದಕ್ಕೆ ತನ್ನ ಜೀವನದ ರಾಗವನ್ನು ಸೇರಿಸಿ ಅಸ್ತಂಗತರಾದದ್ದು ಯಕ್ಷಗಾನ ಕಲಾಭಿಮಾನಿಗಳ ತುಂಬಲಾರದ ದುರಾದೃಷ್ಟವೆನ್ನದೆ ವಿಧಿಯಿಲ್ಲ.
  ಶ್ರೀ ಕುರಿಯ ಶಾಸ್ತ್ರಿಗಳ ಜೀವನದ ದಿನಗಳ ಮರೆಯಲಾಗದ ಕ್ಷಣ, ಘಟನೆಗಳನ್ನು ಕ್ರೋಡೀಕರಿಸಿ ಆತ್ಮಕಥಾ ರೂಪದ ಹೊತ್ತಗೆಯಲ್ಲಿ ಸೇರಿಸಿ ಅವರ ಆತ್ಮ ಕಥನವನ್ನಾಗಿಸಿ ಪ್ರಕಟಿಸಿ ಈ ದಿನಗಳ ಕಲಾಭಿಮಾನಿಗಳ ಗಮನಕ್ಕೂ ಶ್ರೀ ಶಾಸ್ತ್ರಿಗಳನ್ನು ಪರೋಕ್ಷವಾಗಿ ಪರಿಚಯಿಸುವ ಅಪೂರ್ವ ಕಾರ್ಯವೆಸಗಿದ ಆ ದಿನಗಳಲ್ಲಿನ ನೇರನುಡಿಯ ನಿರ್ಭೀತ, ಪ್ರಖ್ಯಾತ ಪತ್ರಕರ್ತರಾಗಿದ್ದ ಶ್ರೀಯುತ ಪದ್ಯಾಣ ಗೋಪಾಲಕೃಷ್ಣ ರವರಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

  ಕುರಿಯ ವಿಠಲ ಶಾಸ್ತ್ರಿಯವರ ವಯಸ್ಸಿನ 100 ನೆಯ ಸಂವತ್ಸರದ ಈ ಸಂದರ್ಭದಲ್ಲಿ ಅವರ ಆತ್ಮಕಥನವನ್ನು ಪ್ರಕಟಿಸಿ ಅಂತಹ ಮೇರು ಕಲಾವಿದರೊಬ್ಬರನ್ನು ಸ್ಮರಿಸಿಕೊಳ್ಳುವ ಭಾಗ್ಯವನ್ನು ಯಕ್ಷಗಾನ ಕಲಾಪ್ರೇಮಿಗಳಿಗೆ ದೊರಕಿಸಿಕೊಡುತ್ತಿರುವ ಈ ಅಂತರ್ಜಾಲ ತಾಣದವರಿಗೂ ಅನಂತಾನಂತ ಧನ್ಯವಾದಗಳು.

  -ವಿಜಯ್ ಬಾರಕೂರು….ಕತಾರ್.

  ಉತ್ತರ
 4. ಮಮತಾ ದೇವ, ಸುಳ್ಯ
  ಸೆಪ್ಟೆಂ 12 2011

  ಪ್ರಖ್ಯಾತ ಯಕ್ಷಗಾನ ಕಲಾವಿದ ಕುರಿಯ ವಿಠಲ ಶಾಸ್ತ್ರಿಯವರ ಶತಮಾನೋತ್ಸವದ ಸಂಭ್ರಮದಲ್ಲಿ ಅವರ ಆತ್ಮ ಕತನ “ಬಣ್ಣದ ಬದುಕು “ಓದಲು ತುಂಬ ಸಂತೋಷವಾಗುತ್ತಿದೆ. ಖ್ಯಾತ ಪತ್ರಕರ್ತ ದಿ.ಪ. ಗೋ. ಅವರ ನಿರೂಪಣಾ ಶೈಲಿ ಅತ್ಯಂತ ಹಿತವಾಗಿದ್ದು ಭಾಷೆಯ ಸರಳತೆ ಇಷ್ಟವಾಯ್ತು. ಇಂತಹ ಉತ್ತಮ ಲೇಖನವನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಿರುವ “ನಿಲುಮೆ” ಅಂತರ್ಜಾಲ ತಾಣದವರಿಗೆ ಅಭಿನಂದನೆಗಳು.

  -ಮಮತಾ ದೇವ, ಸುಳ್ಯ

  ಉತ್ತರ
 5. Rohini
  ಆಗಸ್ಟ್ 11 2018

  ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನವು ಯಕ್ಷಗಾನದ ಆತ್ಮಕಥೆಯಂತೆಯೇ ಇದೆ. ಕಾರಂತರೊಂದಿಗೆ ನೃತ್ಯವನ್ನು ಬೆಳೆಸಿದ್ದು, ಈ ನೃತ್ಯಕ್ಕೆ ಕಿನ್ನರ ನೃತ್ಯವೆಂದು ಹೆಸರಿಟ್ಟರು., ದಶಾವತಾರ ಮೇಳವು ಯಕ್ಷಗಾನ ನಾಟಕ ಮಂಡಳಿಯಾಗಿ ರಂಗಭೂಮಿಯನ್ನು ಅನೇಕ ಪರಿಕರಗಳಿಂದ ಬೆಳೆಸಿದ್ದು, ಅದರಿಂದಾದ ಶ್ರಮ, ದಶಾವತಾರದಿಂದ ಯಕ್ಷಗಾನವೆಂಬ ರೂಪಕ್ಕೆ ಬದಲಾವಣೆಯ ಕಾಲ ಇತ್ಯಾದಿಗಳೂ ಆ ಕಾಲದ ಅನೇಕ ಹಿರಿಯ ಕಲಾವಿದರ ಹೆಸರುಗಳೂ, ಜೀವನ ಪರಿಸ್ಥಿತಿ ಇತ್ಯಾದಿ ವಿಷಯಗಳ ವಿವರಗಳಿಂದ ಅತ್ಯಂತ ಅಮೂಲ್ಯವಾದ ವಿಷಯ ಸಂಗ್ರಹದಿಂದ ಕೂಡಿ ಐತಿಹಾಸಿಕ ಮೌಲ್ಯವನ್ನು ಪಡೆದುಕೊಂಡಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments