ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 2, 2011

1

ಅಶ್ಫಾಕುಲ್ಲಾ ಖಾನ್” — ದೇಶಭಕ್ತಿಯ ಮೂರ್ತರೂಪ..

‍ನಿಲುಮೆ ಮೂಲಕ

– ಭೀಮಸೇನ್ ಪುರೋಹಿತ್

ಆಗಸ್ಟ್ 9 – 1925.. ಅವತ್ತಿನ ರಾತ್ರಿ ಭಾರತದ ಕ್ರಾಂತಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ದಾಖಲಾದ ದಿನ.. ಇನ್ನೂ ಮೀಸೆ ಚಿಗುರದ ನವತರುಣರು ಆಂಗ್ಲಶಾಹಿಯೆದುರಿಗೆ ತೊಡೆತಟ್ಟಿ ನಿಂತ ದಿನ ಅದು.. ಅದೇ “ಕಾಕೋರಿ” ಪ್ರಕರಣ..

ಆ ಹೊತ್ತಿಗಾಗಲೇ, ಅಮೇರಿಕಾದ “ಗದರ್” ಪಾರ್ಟಿಯ ಪ್ರಖರತೆ ಕಮ್ಮಿಯಾಗಿತ್ತು. ಭಾರತದಲ್ಲಿ, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಗದರ್ ಪಾರ್ಟಿಯ ಹಳೆಯ ಕೆಲವು ನಾಯಕರು ಸೇರಿ “ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್” ಎಂಬ ಕ್ರಾಂತಿಸಮಿತಿಯನ್ನು ಶುರು ಮಾಡಿದ್ರು. ಗದರ್ ಪಾರ್ಟಿಯ ಪತನದ ನಂತರ  ಕ್ರಾಂತಿ ತಣ್ಣಗಾಗಿದೆ ಅಂತ, ಆಂಗ್ಲರು ಈ  HRA ಅನ್ನು  ಉಪೇಕ್ಷಿಸಿದ್ದರು.. ಅವರ ಆ ಅಲಕ್ಸ್ಯವೇ ಕ್ರಾಂತಿಕಾರಿಗಳಿಗೆ ವಾರವಾಯಿತು..

ರಾಮಪ್ರಸಾದ್ ಮತ್ತು ಅಶ್ಫಾಕ್ ಇಬ್ರೂ ಜೀವಕ್ಕೆ ಜೀವ ಕೊಡೊ ಗೆಳೆಯರು.. ಅವರ ಸ್ನೇಹದ ನಡುವೆ ಧರ್ಮ ಯಾವತ್ತೂ ಅಡ್ಡಿ ಬರ್ಲಿಲ್ಲ.. ಹಾಗೆ ನೋಡಿದರೆ, ರಾಮ್, ಪಕ್ಕಾ ಅರ್ಯಸಮಾಜದ ಹಿಂದೂವಾದಿ. ಆದ್ರೆ ಅವನು ಅಶ್ಫಾಕ್ ನನ್ನು ಅಪಾರವಾಗಿ ಗೌರವಿಸುತ್ತಿದ್ದ. ಹಾಗೆಯೇ ಅಶ್ಫಾಕ್ ಕೂಡ ಯಾವಾಗಲೂ “ನನ್ನ ರಾಮ” ಅಂತಾನೆ ಜಪಿಸುತ್ತಿದ್ದ.. ಅಶ್ಫಾಕ್  ಉತ್ತರಪ್ರದೇಶದ ಷಹಜಹಾನ್ ಪುರದವನು. ಅಶ್ಫಾಕ್ ಒಬ್ಬ ಮಹಾನ್ ಉರ್ದು ಕವಿ ಕೂಡ ಆಗಿದ್ದ.. ಅತ್ಯಂತ ಉದ್ಬೋಧಕ ದೇಶಭಕ್ತಿ ಗೀತೆಗಳನ್ನು ಬರೆದ ಸಾಹಿತಿ ಅವನು.. ಅದೇ ಅಶ್ಫಾಕ್ ಬಿಸ್ಮಿಲ್ಲನ ಸಹವಾಸಕ್ಕೆ ಬಂದೊಡನೆ, ಅವನ ಪಟ್ಟಶಿಷ್ಯನಾಗಿ ದೇಶಕ್ಕೆ ಅರ್ಪಿಸಿಕೊಂಡಿದ್ದ..

ಶಾಂತವಾಗಿದ್ದ ಕ್ರಾಂತಿಯನ್ನು ಮತ್ತೆ ಭುಗಿಲೆಬ್ಬಿಸಬೇಕೆಂದು ಶತಾಯಗತಾಯ ರಾಮ್ ಮತ್ತು ಅವನ ಗೆಳೆಯರು ಪ್ರಯತ್ನಿಸುತ್ತಿದ್ರು. ಆ ಕ್ರಾಂತಿಕಾರಿಗಳು ನಡೆಸಿದ ಬದುಕು ಘೋರ. ತಿನ್ನಲು ಆಹಾರವಿಲ್ಲದೇ, ನೀರು ಕುಡಿದೇ ದಿನತಳ್ಳುತ್ತಿದ್ರು. ಉಡಲು ಬಟ್ಟೆಯೂ ಇಲ್ಲದೆ, ಬರೀ ಲಂಗೋಟಿಯಲ್ಲಿಯೇ ದಿನ ಕಳೆದಿದ್ದುಂಟು. ಆದರೂ ಅವರಲ್ಲಿನ ದೇಶಪ್ರೇಮ ಮಾತ್ರ ಹಿಮಾಲಯದಷ್ಟು ಎತ್ತರ, ಸೂರ್ಯನಷ್ಟು ಪ್ರಖರ..

ಆಗಲೇ ಇನ್ನೊಂದು ಕ್ರಾಂತಿಕಾರಿ ಸಂಘಟನೆ, ಜರ್ಮನಿಯಿಂದ ಶಸ್ತ್ರಗಳನ್ನು ತರಿಸುತ್ತಿದ್ದರೆಂಬ ಮಾಹಿತಿ ಬಿಸ್ಮಿಲ್ಲನಿಗೆ ಸಿಕ್ತು. ಕೂಡಲೇ ಆ ಕ್ರಾಂತಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡ. ಆದರೆ ಶಸ್ತ್ರ ಕೊಳ್ಳಲು ಹಣವೆಲ್ಲಿ..?? ಎಲ್ಲರೂ ತಮ್ಮ ಮನೆಗಳಿಂದ ಹಣ ತಂದುಕೊಟ್ಟರು, ಅಲ್ಲಲ್ಲಿ ಆಂಗ್ಲ ಅಧಿಕಾರಿಗಳ ಮನೆ ದರೋಡೆಯನ್ನೂ ಮಾಡಿದರು. ಆದರೂ ಹಣ ಸಾಕಾಗಲಿಲ್ಲ. ಆಗ ಬಿಸ್ಮಿಲ್ ಹೆಣೆದ ತಂತ್ರವೇ, “ಕಾಕೋರಿ” ಪ್ರಕರಣ..

ಷಹಜಹಾನ್ ಪುರದಿಂದ, ಲಕ್ನೋವರೆಗೆ ಹೊರಡುತ್ತಿದ್ದ ರೈಲಿನಲ್ಲಿ, ಪ್ರತಿನಿತ್ಯ  ಬ್ರಿಟಿಷರು ತಾವು, ಬಡಭಾರತೀಯರನ್ನು  ಹೆದರಿಸಿ ವಸೂಲಿ ಮಾಡಿದ ಹಣವನ್ನು ಸಾಗಿಸುತ್ತಿದ್ದರು. ಸುಮಾರು ಹತ್ತು ಸಾವಿರಕ್ಕೂ ಮೀರಿದ ಹಣ ದಿನಾ ಆಂಗ್ಲರ ಪಾಲಾಗುತ್ತಿತ್ತು. ಅದೇ ದುಡ್ಡನ್ನು ದರೋಡೆ ಮಾಡಲು ಬಿಸ್ಮಿಲ್ ಉದ್ಯುಕ್ತನಾಗಿದ್ದ..

ಆದರೆ ಅಶ್ಫಾಕ್ ಗೆ ಇದು ಇಷ್ಟವಿರಲಿಲ್ಲ. ಅದು ಭಿನ್ನಾಭಿಪ್ರಾಯ ಅಂತಲ್ಲ. ಇನ್ನೂ ಸಂಘಟನೆಯನ್ನು ಬಲಿಷ್ಠಗೊಳಿಸದೆ ಇಂತಹ ದೊಡ್ಡಸಾಹಸಕ್ಕೆ ಕೈಹಾಕುವುದು ಸರಿಯಲ್ಲ ಅನ್ನೋದು ಅವನ ಭಾವನೆಯಾಗಿತ್ತು. ಆದರೆ ಅಶ್ಫಾಕ್ ತನ್ನ ನಾಯಕ ಬಿಸ್ಮಿಲ್ಲನ ಒಂದೇ ಮಾತಿಗೆ, ಸಮ್ಮತಿಸಿ ಅವನ ಬಲಗೈಯಾಗಿ ನಿಂತ. ಅಂತೂ ಕೊನೆಗೆ ರಾಮಪ್ರಸಾದ್,ಅಶ್ಫಾಕ್, ಶಚಿಂದ್ರನಾಥ್ ಬಕ್ಷಿ, ರಾಜೇಂದ್ರ ಲಾಹಿರಿ, ಥಾಕೂರ್ ರೋಶನ್ ಸಿಂಹ, ಮುಕುಂದೀಲಾಲ್, ಮನ್ಮಥನಾಥ್ ಗುಪ್ತ, ಮತ್ತು ಆಜಾದ್, ಇವರೆಲ್ಲರನ್ನು ಒಳಗೊಂಡ ಒಂದು ತಂಡ ತಯಾರಾಯಿತು.

ಲಕ್ನೋದ ಹತ್ತಿರ  ‘ಕಾಕೋರಿ’ ಎಂಬ ಒಂದು ಸ್ಟೇಷನ್. ಅದು ನಿರ್ಜನ ಪ್ರದೇಶ. ಸುತ್ತಲೂ ಮರ-ಗಿಡ ಪೊದೆಗಳು ಯಥೇಷ್ಟವಾಗಿ ಬೆಳೆದಿದ್ದರಿಂದ ಬಿಸ್ಮಿಲ್ ಆ ಪ್ರದೇಶವನ್ನು ತನ್ನ ಕಾರ್ಯಾಚರಣೆಗೆ ಆಯ್ದುಕೊಂಡ.

ಆಗಸ್ಟ್ 8 ರಂದು, ಎಲ್ಲರೂ ತಮ್ಮ ರಹಸ್ಯ ಸ್ಥಳಗಳಿಂದ ಕಾಕೋರಿ ರೈಲುನಿಲ್ದಾಣ ತಲುಪಿದರು. ಅವರು ದರೋಡೆ ಮಾಡಬೇಕಿದ್ದ “ಏಯ್ಟ್ ಡೌನ್” ರೈಲು ಕೂಡಲೇ ಬಂದೇಬಿಟ್ಟಿತು. ನೋಡನೋಡುತ್ತಲೇ ಲಕ್ನೋಗೆ ಹೊರಟೇ ಹೋಯಿತು. ಅವತ್ತು ಕ್ರಾಂತಿಕಾರಿಗಳು 10 ನಿಮಿಷ ತಡವಾಗಿ ಬಂದಿದ್ದರಿಂದ ಈ ಪ್ರಮಾದವಾಗಿತ್ತು. ನಿರಾಶೆಯಿಂದ ಹಿಂತಿರುಗಿದ ಅವರು, ಮರುದಿನಕ್ಕೆ ಹೊಸಯೋಜನೆಯನ್ನು ಮಾಡಿದರು..

ಅವತ್ತು ಆಗಸ್ಟ್ 9. ಈ ಬಾರಿ ಎಲ್ಲರೂ, ಲಕ್ನೋ ತಲುಪಿ, ಅಲ್ಲಿಂದಲೇ ಆ ರೈಲನ್ನು ಹತ್ತಿ ಕುಳಿತರು. ಕಾಕೊರಿಯ ನಿಲ್ದಾಣ ಬರುತ್ತಲೇ, ಪೂರ್ವನಿರ್ಧಾರದಂತೆ ಶಚಿಂದ್ರ ರೈಲಿನ ಸರಪಳಿ ಎಳೆದ. ಹೊರಗಡೆ ದಟ್ಟ ಕತ್ತಲು. ಎಲ್ಲರೂ ಏನಾಗುತ್ತಿದೆ ಅಂದುಕೊಳ್ಳುವಷ್ಟರಲ್ಲೇ, ಬಿಸ್ಮಿಲ್ಲನ ಸೂಚನೆಯಂತೆ ಎಲ್ಲ ಕ್ರಾಂತಿಕಾರಿಗಳೂ ಕೆಳಗಿಳಿದು, ಗಾರ್ಡ್ ಡಬ್ಬಿಯೊಳಗೆ ನುಗ್ಗಿದರು. ಅಲ್ಲಿದ್ದ ಹಣದ ಸಂದೂಕನ್ನು ಕೆಳಗಿಳಿಸಿ, ತಾವು ತಂದಿದ್ದ ದೊಡ್ಡ ಸುತ್ತಿಗೆ-ಹಾರಿಗಳಿಂದ ಒಡೆಯಲು ಶುರುಮಾಡಿದರು. ಆದರೆ ಸಂದೂಕು ತುಂಬಾ ಗಟ್ಟಿಯಾಗಿತ್ತು. ಆಗ ಅಶ್ಫಾಕ್ ಕೂಡಲೇ ತನ್ನ ಪಿಸ್ತೂಲನ್ನು ಇನ್ನೊಬ್ಬನಿಗೆ ಕೊಟ್ಟು, ಸುತ್ತಿಗೆಯಿಂದ ಹೊಡೆಯಲು ಆರಂಭಿಸಿದ. ನಿರಂತರ ಹೊಡೆತಗಳು.. ಕ್ರಮೇಣ ಅಶ್ಫಾಕ್ ನ ಹೊಡೆತಕ್ಕೆ ಸಂದೂಕು ಬಾಯಿಬಿಟ್ಟಿತು. ಅದರಲ್ಲಿದ್ದ ಹಣದ ಚೀಲಗಳನ್ನು ತೆಗೆದುಕೊಂಡವರೇ ಅಲ್ಲಿಂದ ಪರಾರಿಯಾಗಿಬಿಟ್ಟರು. ಅಲ್ಲಿಗೆ ಬಿಸ್ಮಿಲ್ಲನ ಉಪಾಯ ಫಲಿಸಿತ್ತು. ಆಂಗ್ಲರು ಉಪೇಕ್ಷೆ ಮಾಡಿದ್ದ ಅದೇ ಯುವಕರು, ಒಂದೇ ರಾತ್ರಿ ಬ್ರಿಟಿಶ್ ಪ್ರಭುತ್ವ ಥರಗುಟ್ಟುವ ಸಾಹಸ ಮಾಡಿಬಿಟ್ಟಿದ್ದರು. 1857 ರ ಗರ್ಜನೆ ಮತ್ತೂಮ್ಮೆ ಮೊಳಗಿದಂತಾಗಿತ್ತು..

ಆದರೆ ಸರ್ಕಾರ ಎಚ್ಚೆತ್ತು, ತ್ವರಿತಗತಿಯಲ್ಲಿ ಹುಡುಕಾಟ ನಡೆಸಿತು.. ಮತ್ತೊಮ್ಮೆ ದೇಶದ್ರೋಹಿಗಳ ಕುಯುಕ್ತಿಗಳು ತಾಂಡವವಾಡಿದವು. ಬಿಸ್ಸ್ಮಿಲ್ ಕೂಡಲೇ ಸಿಕ್ಕಿಬಿದ್ದ. ಉಳಿದ ಕೆಲವರು ಕಾಶಿಗೆ ಓಡಿಹೋದರು. ಆದರೆ ಕಾಶಿಯ ಪೊಲೀಸರಿಗೆ ಮೊದಲಿಂದಲೂ ಇವರ ಬಗ್ಗೆ ಅನುಮಾನ ಇದ್ದಿದ್ದರಿಂದ ವಿಚಾರಣೆ ನಡೆಸಿದರು. ಮನ್ಮಥನಾಥ್ ಗುಪ್ತ, ಸುರೇಶ ಭಟ್ಟಾಚಾರ್ಯ ಬಂಧನಕ್ಕೊಳಗಾದರು. ಮನ್ಮಥನಾಥನಿಗೆ 12 ವರ್ಷ ಶಿಕ್ಷೆ ಆಯಿತು. ರಾಜೇಂದ್ರ ಲಾಹಿರಿ, ಬಾಂಬ್ ತರಬೇತಿಗಾಗಿ ಕಲ್ಕತ್ತೆಗೆ ಹೋಗಿದ್ದರಿಂದ ಅವನ ಸುಳಿವು ಸಿಗಲಿಲ್ಲ..

ಇತ್ತ ಅಶ್ಫಾಕ್ ದಿಲ್ಲಿಯಲ್ಲಿ ತಲೆಮರೆಸಿಕೊಂಡಿದ್ದಾಗ, ಮಿತ್ರದ್ರೋಹಿಯಿಂದ ಬಂಧನಕ್ಕೆ ಒಳಗಾಗಿ, ಲಕ್ನೋ ಸೆರೆಮನೆಗೆ ಬಂದಿದ್ದ. ಬ್ರಿಟಿಷರ ಎಲ್ಲ ಹಿಂಸೆಗಳನ್ನೂ ನಗುತ್ತಲೇ ಸಹಿಸಿಕೊಂಡಿದ್ದ.. ಅವನ ಮತ್ತು ಬಿಸ್ಮಿಲ್ಲನ ಸ್ನೇಹ ಎಷ್ಟಿತ್ತೆಂದರೆ, ಕೊನೆಗೆ ಸಾವಿನಲ್ಲಿಯೂ ಅವರಿಬ್ರೂ ಒಂದಾದರು..

ಇಬ್ಬರೂ ಬೇರೆ ಬೇರೆ ಜೈಲಿನಲ್ಲಿದ್ರೂ, ಡಿಸೆಂಬರ್ 19 ರಂದು ಇಬ್ಬರನ್ನೂ ನೇಣಿಗೆ ಹಾಕಲಾಯಿತು.. ಭಾರತಮಾತೆಯ ಪಾದಗಳಲ್ಲಿ ಇವರೂ ಹೂವಾಗಿ ಅರ್ಪಿಸಿಕೊಂಡಿದ್ದರು..

ಅಶ್ಫಾಕ್ ನ ಚಿಂತನೆಗಳು ಇವತ್ತಿಗೂ ನನಗೆ, ಸ್ಫೂರ್ತಿದಾಯಕ..ಅವನ ಕೆಲವು ಹೇಳಿಕೆಗಳು ನಿಜಕ್ಕೂ ಪ್ರೇರಣಾದಾಯಿ.

-> “ದೇಶಭಕ್ತಿ ತನ್ನ ಜೊತೆಗೆ ಎಲ್ಲ ರೀತಿಯ ವಿಪತ್ತು-ದುಃಖಗಳನ್ನು ಇಟ್ಟುಕೊಂಡಿರುತ್ತೆ. ಆದರೆ ಆ ದೇಶಭಕ್ತಿಯ ಮಾರ್ಗವನ್ನು ಅನುಸರಿಸುವ ಕ್ರಾಂತಿಕಾರಿ ಮಾತ್ರ ಅವೆಲ್ಲವನ್ನೂ ಸುಲಭವಾಗಿ ಸ್ವೀಕರಿಸಲು ಸಾಧ್ಯ.. ಕೇವಲ ನನ್ನ ದೇಶದ ಮೇಲಿನ ಪ್ರೀತಿಯಿಂದಲೇ ನಾನು ಇಷ್ಟೆಲ್ಲಾ ಕಷ್ಟಗಳನ್ನು ಸಂತೋಷದಿಂದ ಅನುಭವಿಸುತ್ತಿದ್ದೇನೆ. ನನ್ನ ಒಂದೇ ಒಂದು ಕನಸೆಂದರೆ, ನನ್ನ ದೇಶ ಬಿಡುಗಡೆಯಾಗುವವರೆಗೂ ನನ್ನ ಮುಂದಿನ ಯುವಕರು ಇದೇ ರೀತಿ ಹೋರಾಟ ಮುಂದುವರೆಸಿ ದೇಶಕ್ಕಾಗಿ ಜೀವ ಮುಡಿಪಿಡಲಿ ಎಂದು.”…!!!

ಅಕ್ಟೋಬರ್ 22 — ಆ ಅಪ್ಪಟ ದೇಶಭಕ್ತ “ಅಶ್ಫಾಕ್ ಉಲ್ಲಾ ಖಾನ್” ನ ಜನ್ಮದಿನ.. ತನ್ನಿಮಿತ್ತವೆ ಈ ಬರಹ.. ಇಂತಹ ಮಹತ್ವದ ದಿನವನ್ನು ಮರೆತಿದ್ದ ನನಗೆ, ಮತ್ತೊಮ್ಮೆ ನೆನಪಿಸಿ, ಈ ಲೇಖನ ಬರೆಯಲು ಪ್ರೇರೇಪಿಸಿದ ನನ್ನ ನೆಚ್ಚಿನ ಸ್ನೇಹಿತ “ಗಣೇಶ್ ಬೆಳ್ತಂಗಡಿ”ಯವರಿಗೆ ಧನ್ಯವಾದಗಳು..

ಅಶ್ಫಾಕ್ ನ ದೇಶಪ್ರೇಮ ನಮ್ಮೆಲ್ಲ ಯುವಕರಿಗೆ ಆದರ್ಶವಾಗಲಿ…

ವಂದೇ ಮಾತರಂ..

( ಸಂಗ್ರಹ- ‘ಬಾಬು ಕೃಷ್ಣಮೂರ್ತಿ’ಯವರ “ಅಜೇಯ”.)

1 ಟಿಪ್ಪಣಿ Post a comment
  1. ನವೆಂ 2 2011

    ಚಿಕ್ಕಂದಿನಲ್ಲಿ ಅಜೇಯದ ಎರಡೂ ಪ್ರತಿ ಓದಿದ್ದೆ, ಈಗ ಅಶ್ಫಾಕ್‌ ಬಗ್ಗೆ ಬರೆದು ಆ ನೆನಪನ್ನು ಮತ್ತೆ ಹಸಿರಾಗಿಸಿತು…

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments