“ನನ್ನೂರು ಕೊಳ್ಳೇಗಾಲ …!!! ಹೆದರಿಕೊಳ್ಳಬೇಡಿ… ಮಾಟ-ಮಂತ್ರಕ್ಕೆ ಪ್ರಸಿದ್ಧಿ ಅಲ್ಲ…!”
-ಮೋಹನ್ ವಿ.ಬಬ್ಲಿ, ಚಿಕ್ಕಮಗಳೂರು
ಕೊಳ್ಳೇಗಾಲ ಎಂಬ ಹೆಸರು ಕೇಳಿದರೆ ಸಾಕು ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ಕೊಳ್ಳೇಗಾಲದವರು ನಾವು’ ಎಂದುಬಿಟ್ಟರೆ ಸಾಕು ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಒಂದು ರುಪಾಯಿಯ ಒಂದು ನಿಂಬೇಹಣ್ಣಿಗೆ ಬೇರೆಯ ಕಡೆ ಕಡಿಮೆ ಅಂದರು ಸಾವಿರ ರೂಗಳು! ಅಲ್ಲಿನ ಮಾಟಮಂತ್ರವೇ ಇದಕ್ಕೆಲ್ಲ ಕಾರಣ. ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ನಾನಿರುವ ಚಿಕ್ಕಮಗಳೂರಿನಲ್ಲಿ ಕೊಳ್ಳೆಗಾಲದ ಮಾಂತ್ರಿಕರು ಎಂದುದುರಿಕೊಂಡು ಎಷ್ಟೋ ಜನ ಜೊತಿಷ್ಯಾಲಯಗಳನ್ನು ತೆರೆದಿದ್ದಾರೆ. ಸಿನಿಮಾಗಳಲ್ಲಿಯೂ ಕೂಡ ಹಾಗೆ. ಮಾಟಮಂತ್ರದ ವಿಚಾರ ಬಂದರೆ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಮಂತ್ರಕ್ಕೆ ಫೇಮಸ್ ಅಲ್ವಾ’ ಎಂದು ಸಾವಿರಾರು ಜನ ನನ್ನನ್ನು ಕೇಳಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಓದುತ್ತಿರುವಾಗ ಎಷ್ಟೋ ಉಪನ್ಯಾಸಕರೂ ಕೂಡ ನನ್ನನ್ನು ಮಾಟ ಮಾಡಿಸಿಕೊಡಿ ಎಂದು ಅಹವಾಲಿಸಿಕೊಂಡಿದ್ದಾರೆ.
ನಿಮ್ಮೆಲ್ಲರ ಪ್ರಶ್ನೆ… ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ? ಖಂಡತಿವಾಗಿಯೂ ಇಲ್ಲ. ಕೊಳ್ಳೇಗಾಲದಲ್ಲಿ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಅವರೇ ಪ್ರಸಿದ್ಧಿ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ! ನಮ್ಮ ಪಕ್ಕದ ಮನೆಯವನೂ ಮಾಟಮಂತ್ರಕ್ಕೆ ಫೇಮಸ್! ( ನಾವು ಇನ್ನು ಫೇಮಸ್ ಆಗಿಲ್ಲ! ). ಇದೇನಿದು, ಮಾಟಮಂತ್ರವೇ ಇಲ್ಲ ಎಂದು ಅದರ ಬಗ್ಗೆಯೇ ಹೇಳುತ್ತಿರುವನಲ್ಲ ಎಂದುಕೊಂಡು ಹುಬ್ಬೇರಿಸಬೇಡಿ. ಹೌದು ಕೊಳ್ಳೇಗಾಲದಲ್ಲಿ ಸರಿಸುಮಾರು ೩೦ ವರ್ಷಗಳ ಹಿಂದೆ ವಾಮಾಚಾರ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರು. ಅವರ ಮನೆಯ ತುಂಬಾ ಹಾವು ಚೇಳು ಓಡಾಡುವಂತೆ, ತಿನ್ನುವ ಅನ್ನ ಹುಳವಾಗುವಂತೆ, ಮನೆಯ ಸುತ್ತ ಯಾವುದೋ ಆತ್ಮ ಓಡಾಡುವಂತೆ ಮಾಡುತ್ತಿದ್ದರಂತೆ. ಜೊತೆಗೆ ಕೆಲವು ಮಾಟಗಳಿವೆ. ಉದಾಹರಣೆಗೆ ಕಣ್ಣು ಕಟ್ಟಿನ ಮಾಟ – ಅಂದರೆ ಕಣ್ಣು ಕಾಣದಂತೆ ಮಾಡುವುದು.ಬಾಯಿ ಕಟ್ಟಿನ ಮಾಟ – ಮಾತನಾಡಲು ತೊಡರಿಸುವಂತೆ ಮಾಡುವುದು. ಈ ಮಾಟವನ್ನು ಶತ್ರುಗಳು ಕೋರ್ಟು ಕಚೇರಿಗಳಲ್ಲಿ ಮಾತನಾಡಲಾಗದೆ ತಡವರಿಸಲಿ ಎಂದು ಮಾಡಿಸುತ್ತಿದ್ದರಂತೆ.
ಕೈ ಕಾಲು ಕಟ್ಟಿನ ಮಾಟ – ಕೈ ಕಾಲು ಸೇದುಹೋವಂತೆ ಮಾಡುವುದು. ಸ್ತ್ರೀವಶೀಕರಣ – ಒಂದು ಹುಡುಗಿಯ ಕೂದಲು ತಂದುಕೊಟ್ಟರೆ ಅವಳು ನಮ್ಮ ಹಿಂದೆ ಬರುವಂತೆ ಮಾಡುವುದು.ಹೀಗೆ ಅನೇಕ ವಿಧಗಳಿವೆ. ಇದನ್ನೆಲ್ಲ ಮಾಡುತ್ತಿದ್ದವರು ಕೇವಲ ಮೂರು ಜನ. ಅವರ ಬಳಿ ರಾಜಕಾರಣಿಗಳು, ಸಿನಿಮಾ ನಟರೆಲ್ಲ ಬರುತ್ತಿದ್ದರಂತೆ. ಭೀಮನ ಅಮಾವಾಸ್ಯೆಯಂದು ಸ್ಮಶಾನಕ್ಕೆ ಹೋಗಿ ಆಗಷ್ಟೆ ಹೂತಿರುವ ಹೆಣಗಳನ್ನು ಕಿತ್ತು, ಅದರ ತಲೆ ಕೈ ಕಾಲು ಕತ್ತರಿಸಿಕೊಂಡು ಬಂದು, ಎಂತೆದೋ ಪೂಜೆ ಮಾಡಿ ಆ ಆತ್ಮವನ್ನು ಕುಂಡಲಿನಿಯಲ್ಲಿ ಕೂರಿಸಿಕೊಳ್ಳುತ್ತಿದ್ದರಂತೆ. ಇವೆಲ್ಲ ಅಂತೆ ಕಂತೆಗಳ ಬೊಂತೆ. ಆದರೂ ಭೀಮನ ಅಮಾವಾಸ್ಯೆಯಂದು ಕೊಳ್ಳೇಗಾಲದಲ್ಲಿ ಹೆಣ ಕಾಯುವ ವಾಡಿಕೆ ಇದೆ. ಮಾಟಮಂತ್ರದ ಬಗ್ಗೆ ವೈಜ್ಞಾನಿಕ ಸಂಶೋಧನೆ ಸಂಪೂರ್ಣವಾಗಿಲ್ಲ. ಅದನ್ನು ನಂಬಿ ಹೆದರುವವರಿಗೆ ಮಾನಸಿಕ ಏರುಪೇರಿನಿಂದ ಕೆಡುಕಾಗಬಹುದು. ಅದಿರಲಿ ಕರ್ನಾಟಕಕ್ಕೆ ಪ್ರಸಿದ್ಧಿಯಾದ ಈ ಮೂವರು ಏನಾದರು???
ಅವರ ಕಥೆ ಕೇಳಿದರೆ ಅವರ ಶತ್ರುಗಳಿಗೂ ಕನಿಕರ ಹುಟ್ಟದೆ ಇರುವುದಿಲ್ಲ. ಸಾವಿರಾರು ಸಂಸಾರಗಳನ್ನು ಹಾಳು ಮಾಡಿದ ಇವರ ಸಂಸಾರಗಳು ದಿಕ್ಕೆಟ್ಟು ಹೋದವು. ಮೂರು ಜನಕ್ಕೂ ಪಾರ್ಶ್ವವಾಯು ಬಡಿಯಿತು. ಮಕ್ಕಳೆಲ್ಲಾ ಸತ್ತುಹೋದರು. ಹೆಂಡತಿಯರು ಕೆಟ್ಟ ಕೆಲಸಕ್ಕೆ ಕೈಹಾಕಿಬಿಟ್ಟರು. ಅನಾಥ ಹೆಣವಾಗಿಬಿಟ್ಟರು. ಈಗ ಆ ಮೂವರೂ ಸತ್ತುಹೋಗಿದ್ದಾರೆ. ಸಾಯುವ ಸಮಯದಲ್ಲಿ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಕೈಕಾಲು ಆಡುತ್ತಿರಲಿಲ್ಲ, ಕುಂತಲ್ಲೇ ಮಲ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರು, ಜನಗಳು ತೂ! ಚಿ! ಎಂದು ಉಗಿಯುತ್ತಿದ್ದರು. ಮೈಕೊಳೆತು ಹುಳಗಳು ತುಂಬಿಹೋಗಿದ್ದವು. ನಾವು ಮಾಟ ಮಾಡಿದರೆ ಅಥವಾ ಮಾಡಿಸಿದರೆ ಕೊನೆಗೆ ಅದು ನಮಗೆ ತಿರುಗಿಬಿಡುತ್ತದೆ ಎಂಬ ನಂಬಿಕೆಯೊಂದು ಕೊಳ್ಳೇಗಾಲದಲ್ಲಿದೆ. ಈ ಘಟನೆಯಿಂದ ಮರಿ ಮಾಟಗಾರರು ಗಾಬರಿಯಾಗಿಹೋದರು. ತಮ್ಮ ಕಡೆಗಳಿಗೆ ಈ ರೀತಿ ಆಗುವುದಾದರೆ ಯಾರಿಗಾಗಿ ಈ ರೀತಿಯಲ್ಲಿ ದುಡಿಯಬೇಕು ಎಂದು ಎಚ್ಚೆತ್ತುಕೊಂಡರು. ಆದುದರಿಂದ ಈಗ ಕೊಳ್ಳೇಗಾಲದಲ್ಲಿ ಮಾಟ ಇಲ್ಲ, ಮಂತ್ರ ಇದೆ. ಅಂದರೆ ನಿಮ್ಮ ಮನೆಯಲ್ಲೇನಾದರೂ ಸಮಸ್ಯೆ ಇದ್ದರೆ (ಉದಾಹರಣೆಗೆ ಗಂಡಹೆಂಡತಿ ಜಗಳ, ಮನೆಯಲ್ಲಿ ಏನೋ ಇರುಸು ಮುರುಸು, ದೆವ್ವದ ಕಾಟ ) ಪರಿಹರಿಸಿಕೊಡುತ್ತಾರೆ. ಆದರೆ ಮಾಟಕ್ಕೆ ಹೆದರುತ್ತಾರೆ. ಆದುದರಿಂದ ನೀವೆಲ್ಲರೂ ಧೈರ್ಯವಾಗಿ ಕೊಳ್ಳೇಗಾಲಕ್ಕೆ ಬರಬಹುದು)
* * * * * * *
ಚಿತ್ರಕೃಪೆ : ಅಂತರ್ಜಾಲ
ಸರ್,ನಿಮ್ಮ ದೂರವಾಣಿ ಸಂಖ್ಯೆ ಕಳಿಸಿ ದಯವಿಟ್ಟು. ನಿಮ್ಮ ಜೊತೆ ಮಾತನಾಡಬೇಕಾಗಿದೆ
ಸರ್,ನಿಮ್ಮ ದೂರವಾಣಿ ಸಂಖ್ಯೆ ದಯವಿಟ್ಟು ಈ ಕೆಳಗಿನ ಸಂಖ್ಯೆಗೆ ಸಂದೇಶ ಕಳಿಸಿರಿ