ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 13, 2011

1

ಸೂರ್ಯಾಸ್ತ

‍ನಿಲುಮೆ ಮೂಲಕ

-ನವನೀತ್ ಪೈ

ಆಗಸ ಕೆಂಪಾಗಿತ್ತು. ಕೆಂಪು ಎನ್ನುವುದು ಪ್ರೀತಿಯ ಸಂಕೇತವೂ ಹೌದು ಅಪಾಯದ ಸಂಕೇತವೂ ಹೌದು. ಸೂರ‍್ಯ ತನ್ನ ಕೆಲಸವನ್ನು ಮುಗಿಸಿ ಮನೆಗೆ ತೆರಳುವ ಸಂತಸದಲ್ಲಿ ಕೆಂಪಾಗಿದ್ದ ಮಾತ್ರವಲ್ಲ ಬಾನನ್ನು ಕೆಂಪಾಗಿಸಿದ್ದ. ಆ ಸುಂದರ ಸಂಜೆಯಲ್ಲಿ ಮಹಾನಗರದ ಮಧ್ಯದಲ್ಲಿ ರಂಗು ರಂಗಿನ ದೀಪಗಳಿಂದ ಅಲಂಕೃತವಾದ ಆಬಾಲವೃದ್ಧರನ್ನೂ ಕೈ ಬೀಸಿ ಕರೆಯುತ್ತಿರುವ ಸುಸಜ್ಜಿತ ವಸ್ತು ಪ್ರದರ್ಶನ. ತಾಜ್ ಮಹಲ್ ನ ಪ್ರತಿಕೃತಿಯನ್ನು ಸ್ವಾಗತ ಗೋಪುರವನ್ನಾಗಿಸಿ ಒಳಗೆ ಸ್ವರ್ಗವನ್ನೇ ಏರ್ಪಡಿಸಿದ್ದರು ಆ ಕಲಾವಿದರು. ಈ ಒಂದು ಪ್ರದರ್ಶನಕ್ಕೆ ಬಂದ ಸಾವಿರಾರು ಜನರ ಮಧ್ಯೆ ಇರುವ ಒಂದು ಪುಟ್ಟ ಸಂಸಾರ ನಮ್ಮ ಮುಮದಿನ ಕಥೆಯ ಮೂಲವಸ್ತು.

ಎಷ್ಟೋದಿನಗಳ ಸತತ ಹಠದ ನಂತರ ಐದಾರು ವರ್ಷದ ಮುಗ್ಧಬಾಲಕ ರವಿಯನ್ನು ಆತನ ತಂದೆ ತಾಯಿ ಆ ವಸ್ತು ಪ್ರದರ್ಶನಕ್ಕೆ ಕರೆತಂದಿದ್ದರು. ಸ್ವಾಗತ ಗೋಪುರದ ಪಕ್ಕದ ಟಿಕೆಟ್ ಕೌಂಟರಿನಲ್ಲಿ ಎರಡೂವರೆ ಟಿಕೆಟ್‌ನ್ನು(೬ ವರ್ಷದ ಮಗುವನ್ನು ೩ ವರ್ಷ ಎಂದು ಟಿಕೆಟ್ ನೀಡುವವನ ಬಳಿಯಲ್ಲಿ ವಾದಿಸಿ ಅರ್ಧ ಟಿಕೆಟ್ ಪಡೆದಿದ್ದರು.) ಪಡೆದು ಸ್ವಾಗತ ಗೋಪುರದ ಎದುರು ನಿಂತಾಗ ಮನದ ಆಯಾಸವೆಲ್ಲ ನಾಶವಾಗಿ ಮನಕ್ಕೆ ಆನಂದವಾಯಿತು. ವಸ್ತು ಪ್ರದರ್ಶನದ ಒಳಗೆ ಕಾಲಿಟ್ಟಾಗ ಮಿಠಾಯಿ ಅಂಗಡಿಗಳ ಸಾಲು ರವಿಯನ್ನು ಬಹುವಾಗಿ ಆಕರ್ಷಿಸಿದವು.

ಬಣ್ಣ ಬಣ್ಣದ ಘಮ ಘಮ ಸುವಾಸನೆಯ ಮಿಠಾಯಿಗಳು ರವಿಯ ಬಾಯಲ್ಲಿ ನೀರೂರಿಸಿದವು. ಅವರು ಮುಂದೆ ನಡೆಯುತ್ತಿದ್ದಂತೆ ಒಂದು ಅಂಗಡಿಯಲ್ಲಿ ಎಣ್ಣೆ ಬಾಂಡಲೆಯಲ್ಲಿ ಜಿಲೇಬಿಯನ್ನು ಬಿಡುತ್ತಿದ್ದರು. ಜಿಲೇಬಿಗಳ ಮೇಲಿಂದ ಇಳಿಯುತ್ತಿರುವ ಪಾಕವು ಆ ಜಿಲೇಬಿಗಳನ್ನೇ ನೋಡುತ್ತಾ ನಡೆಯುತ್ತಿರುವ ರವಿಯ ಜಿಲೇಬಿಯಂತಹ ನಾಲಗೆಯಿಂದ ಇಳಿಯುತ್ತಿರುವ ಲಾಲಾ ಪಾಕದಂತಿತ್ತು.
ಸ್ವಲ್ಪ ಮುಂದೆ ನಡೆದಾಗ ಇನ್ನೊಂದು ಅಂಗಡಿಯಲ್ಲಿ ಬೊಂಬಾಯಿ ಮಿಠಾಯಿ ತಯಾರಿಸುತ್ತಿದ್ದರು. ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುವ ಮೋಡಗಳಂತೆ ತೇಲುತ್ತಿರುವ  ಬೊಂಬಾಯಿ ಮಿಠಾಯಿಯ ಎಳೆಗಳನ್ನು ಕಡ್ಡಿಯಿಂದ ಸುತ್ತುತ್ತಿದ್ದರು.

ಆಕರ್ಷಣೀಯವಾದ ಗುಲಾಬಿ ಬಣ್ಣದ ಆ ಮಿಠಾಯಿ ಬೇಕೆಂದು ತಾಯಿಯನ್ನು ಕೇಳಿದಾಗ ಬೀದಿ ಬದಿಯ ತಿಂಡಿಗಳನ್ನು ತಿನ್ನಬಾರದು ಎಂದು ಖಡಾಖಂಡಿತವಾಗಿ ಹೇಳಿಯೇಬಿಟ್ಟರು. ಅದು ಬೇಕು ಇದು ಬೇಕು ಎಂದು ಹಠ ಮಾಡಬಾರದು ಎಂಬ ಷರತ್ತಿನ ಮೇರೆಗೆ ಕರೆ ತಂದಿದ್ದರಿಂದ ಗಲಾಟೆ ಮಾಡದೆ ಮನಸ್ಸಿಲ್ಲದ ಮನಸ್ಸಿನಿಂದ ಮುಂದೆ ಹೆಜ್ಜೆ ಹಾಕತೊಡಗಿದ. ಚಿಕ್ಕ ಮಕ್ಕಳು ಹಾಗೇ ತಾನೇ ಚಿಕ್ಕ ಚಿಕ್ಕ ವಿಷಯಗಳಿಗೆ ಬಹಳ ಸಂತಸ ಪಡುತ್ತಾರೆ ಅದೇ ಚಿಕ್ಕ ಚಿಕ್ಕ ವಿಷಯಗಳಿಗೆ ಬಹಳ ಬೇಸರ ಪಡುತ್ತಾರೆ.

ಹಾಗೇ ಮುಂದೆ ನಡೆದು ಹೋಗುತ್ತಿರುವಾಗ ಆಟಿಕೆಗಳ ಅಂಗಡಿಗಳ ಸಾಲು ಎದುರಾಯಿತು. ಬಣ್ಣ ಬಣ್ಣದ ಬಲೂನುಗಳು ಬಾನಿನತ್ತ ಹಾರುತ್ತಿದ್ದವು. ಸೂತ್ರದಿಂದ ಅವುಗಳನ್ನು ಬಂಧಿಸದಿದ್ದರೆ ಬಹುಶಃ ನಭೋಮಂಡಲವನ್ನು ಸೇರುತ್ತಿದ್ದವೋ ಏನೋ? ರವಿಯ ಕೈಯನ್ನು ಆತನ ತಾಯಿ ಗಟ್ಟಿಯಾಗಿ ಹಿಡಿದುಕೊಂಡು ಬಂಧಿಸಿದಂತೆಯೇ ಕರೆತರುತ್ತಿದ್ದರು. ಇಲ್ಲದಿದ್ದರೆ ಚುರುಕು ಬುದ್ಧಿಯ ಮುಟ್ಟಿದರೆ ಪುಟಿಯುವಂತಿರುವ ಆ ಪುಟ್ಟ ಪಠಾಕಿಯನ್ನು ಹಿಡಿಯುವುದಾದರೂ ಹೇಗೆ? ಅಷ್ಟರಲ್ಲೇ ರವಿಯು ಬಲೂನು ಬೇಕೆಂದು ಹಠ ಮಾಡತೊಡಗಿದ. ಆಗ ತಾಯಿ  ಬೇಡ, ನಿನಗೆ ಅದನ್ನು ಸರಿಯಾಗಿ ಹಿಡಿದುಕೊಳ್ಳಲು ಬರುವುದಿಲ್ಲ, ಬಿಟ್ಟರೆ ಅದು ಹಾರಿಹೋಗುತ್ತದೆ ಎಂದರು.

ಆ ಕಂದನ ಕೋಮಲ ಕಣ್ಣುಗಳಲ್ಲಿ ೨ ಜಲಪಾತಗಳೂ  ಬಾಯಿಂದ ಜಲಪಾತದ ಭೋರ್ಗರೆವ ಸದ್ದು ಪ್ರಾರಂಭವಾಯಿತು. ಅವನ ವಾದ್ಯಕ್ಕೆ ಮಣಿದ ತಾಯಿ ಅವನ ನೆಚ್ಚಿನ ಕೆಂಪು ಬಣ್ಣದ ಬಲೂನೊಂದನ್ನು ಆತನ ಕೈಗಿತ್ತರು. ತಕ್ಷಣ ಅವನ ವಾದ್ಯ ಮಾಯವಾಯಿತು. ಅವನ ಇನ್ನೊಂದು ಕೈಯನ್ನು ಹಿಡಿದು ದರದರನೆ ಎಳೆದುಕೊಂಡು ಮುನ್ನಡೆದರು.

ಮುಂದೆ ನಡೆದಂತೆ ಗಾಳಿಯನ್ನು ತುಂಬಿ ಮಾಡಿದಂತಹ ಸುಂದರ ಗೊಂಬೆಗಳು. ಬಾತುಕೋಳಿ ಗೊಂಬೆಯ ಕತ್ತನ್ನು ಒತ್ತಿದಾಗ ಅದು ಕೂಗುತ್ತದೆ. ಗಾಳಿಯನ್ನೇ ತುಂಬಿ ಮಾಡಿದಂತಹ ಸುತ್ತಿಗೆಗಳು, ದಿಂಬುಗಳು, ಮತ್ತು ವಿವಿಧ ರೀತಿಯ ಪ್ರಾಣಿ ಪಕ್ಷಿಗಳು ಅವನನ್ನು ಬಹುವಾಗಿ ಸೆಳೆದವು. ಅಲ್ಲೇ ಎದುರು ನಿಂತಿದ್ದ ದೊಡ್ಡ ಗೊಂಬೆಯನ್ನು ನೋಡಿ ಸುಮ್ಮನಿರಲಾರದೆ ಹೋಗಿ ಗುದ್ದಿದ. ಎಷ್ಟೇ ಬಲವಾಗಿ ಗುದ್ದಿದರೂ ಆ ಗೊಂಬೆ ಕೆಳಗೆ ಬೀಳಲಿಲ್ಲ. ಬಹಳ ಪ್ರಯತ್ನದ ನಂತರವೂ ಆ ಗೊಂಬೆಯನ್ನು ಉರುಳಿಸಲು ಸಾಧ್ಯವಾಗಲಿಲ್ಲ. ಅದೇ ಅಂಗಡಿಯ ಹಳೇ ರೇಡಿಯೋ ಒಂದರಲ್ಲಿ ಅಣ್ಣಾವ್ರ ಕಸ್ತೂರಿ ನಿವಾಸ ಚಲನ ಚಿತ್ರದ  ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎಂಬ ಹಾಡು ಕ್ಷೀಣದನಿಯಲ್ಲಿ ಕೇಳಿದ ತಾಯಿ ಕೊ ಇನ್ಸಿಡೆನ್ಸ್ ನ್ನು ನೆನೆದು ನಕ್ಕರು. ಅದೇ ಗೊಂಬೆಗಳಿಂದ ಗಾಳಿಯನ್ನು ತೆಗೆದಾಗ ಆ ಗೊಂಬೆಗಳು ಸತ್ತಂತೆ ನೆಲದ ಮೇಲೆ ಬೀಳುವವು. ಎಲ್ಲಿಯವರೆಗೆ ಮನುಷ್ಯನಲ್ಲಿ ಆತ್ಮ ವಿಶ್ವಾಸವೆಂಬ ಗಾಳಿ ತುಂಬಿರುತ್ತದೆಯೋ ಅಲ್ಲಿಯವರೆಗೆ ಅಂತಹ ಮನುಷ್ಯನನ್ನು ಉರುಳಿಸಲು ಸಾಧ್ಯವಿಲ್ಲ ಅಂದುಕೊಂಡು ಮುನ್ನೆಡೆದರು.

ಮುಂದೆ ನಡೆದಂತೆ ಒಬ್ಬಾತನು ಸೋಪಿನ ನೀರನ್ನು ಊದುಕೊಳವೆಯ ಮೂಲಕ ಊದಿ ನೂರಾರು ಗುಳ್ಳೆಗಳನ್ನು ಸೃಷ್ಟಿಸುತ್ತಿದ್ದ. ಹಾಲೋಜನ್ ದೀಪದ ಬೆಳಕಿಗೆ ಆ ನೀರಿನ ಗುಳ್ಳೆಗಳು ಹೊಳೆಯುತ್ತಿದ್ದವು ಹಾಗೇ ಅವು ನಾಶವಾಗುತ್ತಿದ್ದವು.

ನಾಲ್ಕು ಕ್ಷಣಗಳ ನಮ್ಮ ಜೀವನವೂ ಸಹ ಆ ಗುಳ್ಳೆಗಳಂತೆಯೇ, ನಾವು ಇರುವಷ್ಟು ಕಾಲ ಮಿಂಚಬೇಕು ಎಂದು ಆ ತಾಯಿ ಆಲೋಚಿಸುತ್ತಿರುವಾಗ ರವಿ ಆಕೆಯ ಕೈ ಬಿಡಿಸಿಕೊಂಡು ಓಡಿ ಹೋಗಿ ಕೈಗೆ ಸಿಕ್ಕಷ್ಟು ಗುಳ್ಳೆಗಳನ್ನು ತನ್ನ ಕೋಮಲ ಬೆರಳುಗಳಿಂದ ಒಡೆಯುತ್ತಿದ್ದ. ಅವನ ಗುಳ್ಳೆ ಒಡೆಯುವ ಸಂತಸವು ಅವನ ಗುಳ್ಳೆಯಾಕಾರದ ಕಣ್ಣುಗಳಲ್ಲಿ ವ್ಯಕ್ತವಾಗುತ್ತಿತ್ತು. ಅದನ್ನು ನೋಡುತ್ತಿರುವ ತಾಯಿಯ ಕಂಗಳಲ್ಲೂ ಆನಂದ ವ್ಯಕ್ತವಾಗುತ್ತಿತ್ತು. ಆದರೆ ಆ ಆನಂದ ಕ್ಷಣಕಾಲ ಮಾತ್ರ ಎಂದು ಪಾಪ ಆಕೆಗೂ ತಿಳಿದಿರಲಿಲ್ಲ!

ಮುಂದೆ ನಡೆದಾಗ ವ್ರತ್ತಾಕಾರದಲ್ಲಿ ತಿರುಗುವ ಮರದ ಕುದುರೆಗಳು, ಮೋಟಾರು ಬೈಕುಗಳು, ಕುದುರೆಯ ಮೇಲೆ ಕುಳಿತುಕೊಳ್ಳಬೇಕು ಎನ್ನುವ ಪುಟ್ಟನ ಹಠಕ್ಕೆ ಮಣಿದು ಅವನ ತಾಯಿ ಕುದುರೆ ಮೇಲೆ ಕೂರಿಸಿದಳು. ಕೈಯಲ್ಲಿ ೨೫ ಪೈಸೆಯೂ ಇಲ್ಲದ ಆ ಕಂದನು ಅಲ್ಲಿ ಅನಭಿಷಿಕ್ತ ದೊರೆಯಂತೆ ಕಂಗೊಳಿಸುತ್ತಿದ್ದ. ಕೈಯಲ್ಲಿ ಖಡ್ಗದಂತಹ ಆಡಿಕೆಯನ್ನು ಹಿಡಿದು ರಾಜಗಾಂಭೀರ್ಯದಿಂದ ತಿರುವುತ್ತಿದ್ದ ಠೀವಿ ಯುದ್ಧಕ್ಕೆ ಹೊರಟ ಕ್ಷತ್ರಿಯನಂತಿತ್ತು. ಕುದುರೆಯ ವೇಗಕ್ಕೂ ಅವನು ಅಂಜುತ್ತಿರಲಿಲ್ಲ. ಗೆಲುವು ನನ್ನದೇ ಎನ್ನುವ ಆತ್ಮ ವಿಶ್ವಾಸ ಅವನಲ್ಲಿತ್ತು. ಅಂತಹ ಆತ್ಮವಿಶ್ವಾಸದಿಂದ ಮಾತ್ರ ತಾನೆ ಜೀವನವೆಂಬ ಯುದ್ಧವನ್ನು ಗೆಲ್ಲುವುದು.

ಇಷ್ಟು ಹೊತ್ತು ಆಟವಾಡಿ ಬಸವಳಿದ ಬಾಲಕ ಅವನ ತಂದೆ ಮತ್ತು ತಾಯಿಯ ಕೈಯನ್ನು ಹಿಡಿದು ಜೋಕಾಲಿಯಂತೆ ನೇತಾಡತೊಡಗಿದ. ಸ್ವಲ್ಪ ಹೊತ್ತು ಸುಮ್ಮನಿದ್ದ ಅವನ ತಾಯಿ ಆಮೇಲೆ ನಡೆದು ಬರುವಂತೆ ಗದರಿದರು. ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿದ್ದ ಆ ಬಾಲಕ ತಂದೆ ತಾಯಿಗಿಂತ ಸ್ವಲ್ಪ ಹಿಂದೆ ಉಳಿದೆ ಉಳಿದ. ತಂದೆ ತಾಯಿ ಮಗುವನ್ನು ಗಮನಿಸುತ್ತಾ ಮುಂದೆ ನಡೆಯುತ್ತಿದ್ದರು. ಕುದುರೆ ಏರುವಾಗ ತಾಯಿಯ ಕೈಗೆ ಕೊಟ್ಟಿದ್ದ ಬಲೂನು ಬೇಕೆಂದು ಕೇಳತೊಡಗಿದ. ಬಲೂನಿನ ದಾರವನ್ನು ಬಿಟ್ಟರೆ ಬಲೂನು ಹಾರಿಹೋಗುತ್ತದೆ ಎನ್ನುವ ಎಚ್ಚರಿಕೆಯ ಮೇರೆಗೆ ತಾಯಿ ಅದನ್ನು ತನ್ನ ಮಗುವಿಗೆ ಹಸ್ತಾಂತರಿಸಿದರು. ಆಟವಾಡುತ್ತಾ ಕ್ಷಣಮಾತ್ರದಲ್ಲೇ ಬಲೂನಿನ ಸೂತ್ರವನ್ನು ಕೈಬಿಟ್ಟ. ಬಲೂನು ಬಾನಿನ ಪಾಲಾಯಿತು. ಕಂಗಳಲ್ಲಿ ಪುನಃ ಗಂಗೆ ತುಂಗೆ ಪ್ರತ್ಯಕ್ಷವಾದವು. ತಾಯಿ ಅವನನ್ನು ನಿರ್ಲಕ್ಷಿಸಿದರು. ಪುಟ್ಟ ಪುಟ್ಟ ಹೆಜ್ಜೆಗಳು ಬಾರವಾದವು. ಅವನು ನಿಧಾನವಾಗಿ ಮುನ್ನೆಡೆಯತೊಡಗಿದ. ಅವನ ತಂದೆ ತಾಯಿ ವೇಗವಾಗಿ ಮುನ್ನಡೆಯುತ್ತಿದ್ದರು. ಆದರೂ ಒಂದು ಕಣ್ಣು ತಮ್ಮ ಮಗನ ಮೇಲೆಯೇ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಜಾದು ಪ್ರದರ್ಶನ ಮುಗಿಯಿತು. ಜಾದು ಪ್ರದರ್ಶನದ ಜನಜಂಗುಳಿಯಲ್ಲಿ ಆ ಪುಟ್ಟ ಬಾಲಕ ಕಳೆದು ಹೋದ. ಅಮ್ಮ ಅಮ್ಮ ಎಂದು ಬಿಕ್ಕಳಿಸಿ ಅಳತೊಡಗಿದ. ಅವನ ತಂದೆ ತಾಯಿಯ ಕಣ್ಣುಗಳಿಗೆ ಆ ಪುಟ್ಟ ಕಾಣದಾದ, ದಾರಿ ತಪ್ಪಿದ ಮಗ ನನ್ನು ಎಷ್ಟು ಹುಡುಕಿದರೂ ಪ್ರಯೋಜನವಾಗಲಿಲ್ಲ. ತಾಯಿಯ ಕಣ್ಣಿಂದ ಮಗ ಕಣ್ಮರೆಯಾಗಿದ್ದ.

ಕೆಂಪಾಗಿದ್ದ ಆಗಸ ಕಪ್ಪಾಗಿತ್ತು. ರವಿಯು ಅಸ್ತಮಾನನಾಗಿದ್ದ. ನಮ್ಮ ಪುಟ್ಟ ರವಿಯು ತಂದೆ ತಾಯಿಯನ್ನು ಹುಡುಕುತ್ತಾ ಸುಸ್ತಾಗಿ ಅಳುತ್ತಾ ನೆಲದ ಮೇಲೆ ಕುಳಿತುಕೊಂಡ. ಆ ಜನಸಾಗರದಲ್ಲಿ ನಮ್ಮ ಪುಟ್ಟನ ಅಳು ಯಾರ ಕಿವಿಗೂ ಬೀಳಲಿಲ್ಲ. ಅಳು ಕೇಳಿಸಿಕೊಂಡವರೂ ನಮಗೆ ಇದರ ಉಸಾಬರಿ ಏಕೆ? ಎಂದು ತಮ್ಮ ಜಾಣ ಕಿವುಡುತನವನ್ನು ಪ್ರದರ್ಶಿಸುತ್ತಿದ್ದರು. ಆ ಮಗುವಿನ ಅಳುವಿಗೆ ಕರಗಿದ ಒಬ್ಬ ವ್ಯಕ್ತಿ ಆ ಮಗುವನ್ನು ಎತ್ತಿಕೊಂಡು ಏನಾಯಿತು ಮಗು? ಏಕೆ ಅಳುತ್ತಿರುವೆ? ಎಂದು ಕೇಳಿದಾಗ ಅಳುವಿನ ನಡುವೆ ಅಮ್ಮ ಅಮ್ಮ ಎನ್ನುವ ಎರಡು ಶಬ್ದಗಳು ಮಾತ್ರ ಕೇಳಿಸಿದವು. ಇದರಿಂದ ಏನು ನಡೆದಿರಬಹುದೆಂದು ಊಹಿಸಲು ಕಷ್ಟವಾಗಲಿಲ್ಲ. ಮಗುವಿನ ತಾಯಿಯನ್ನು ಹುಡುಕುವ ಮೊದಲು ಅವನ ಅಳುವನ್ನು ನಿಲ್ಲಿಸುವುದು ಮುಖ್ಯವಾಗಿತ್ತು. ಆದರೆ ಅವನ ಅಳುವನ್ನು ನಿಲ್ಲಿಸುವುದು ಕಷ್ಟಸಾಧ್ಯ. ಆದರೂ ಮಗುವನ್ನು ಎತ್ತಿಕೊಂಡು ಬಂದ ದಾರಿಯನ್ನು ಕೇಳುತ್ತಾ ಮಿಠಾಯಿ ಆಂಗಡಿ ಸಾಲಿಗೆ ಬಂದರು. ಮಿಠಾಯಿಯನ್ನು ಕೊಂಡುಕೊಟ್ಟರೆ ಸುಮ್ಮನಾಗುತ್ತಾನೋ ಎನ್ನುವ ದೃಷ್ಟಿಯಿಂದ ಮಿಠಾಯಿಯನ್ನು ಕೊಟಿಸಿದರು. ಈಗ ಬಣ್ಣಬಣ್ಣದ ಮಿಠಾಯಿಗಳು ಬೇಡವಾದವು. ಅಪ್ಪ ಅಮ್ಮ ಸಾಕಾದವು. ಮುಂದೆ ನಡೆದಾಗ ಬಲೂನು ಅಂಗಡಿ ಸಿಕ್ಕಿತು. ಕೆಲವೇ ನಿಮಿಷಗಳ ಮುಂಚೆ ಬೇಕೆಂದು ಅತ್ತಿದ್ದ ಬಲೂನು ಈಗ ಬೇಡವಾಯಿತು. ಬೇರೆ ಬೇರೆ ಆಟಿಕೆಗಳೂ ಬೇಡವಾದವು. ಅಲ್ಲೇ ಐಸ್‌ಕ್ರೀಮ್ ಮಾರುತ್ತಿದ್ದ ಅಂಗಡಿಯವನು ಮೈಕಿನಲ್ಲಿ ಐಸ್‌ಕ್ರೀಮ್ ಬೇಕಾ ಐಸ್‌ಕ್ರೀಮ್ ಪರಿಶುದ್ಧವಾದ ಹಾಲಿನಿಂದ ತಯಾರಿಸಿದ ಮಂಟಪ ಐಸ್‌ಕ್ರೀಮ್ ಎಂದು ಕೂಗುತ್ತಿದ್ದ. ಆ ಅಂಗಡಿಗೆ ಹೋಗಿ ಐಸ್‌ಕ್ರೀಮ್ ಕೊಡಿಸಿದರು. ಐಸ್‌ಕ್ರೀಮ್ ಕರಗಿ ನೀರಾಯಿತೇ ವಿನಃ ರವಿಯ ಅಳು ಕಡಿಮೆಯಾಗಲಿಲ್ಲ. ಆಮೇಲೆ  ರವಿ ಎಂಬ ಬಾಲಕ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಅಳುತ್ತಿದ್ದಾನೆ ಆತನ ತಂದೆ ತಾಯಿ ಎಲ್ಲೇ ಇದ್ದರೂ ಬಂದು ತಮ್ಮ ಮಗನನ್ನು ಕರೆದೊಯ್ಯಬೇಕು ಎಂದು ಪ್ರಕಟಿಸಿದರು. ಕೆಲವೇ ನಿಮಿಷಗಳಲ್ಲಿ ಅವನ ತಂದೆ ತಾಯಿ ಓಡೋಡಿ ಬಂದು ಮಗುವನ್ನು ಅಪ್ಪಿದರು. ಅಲ್ಲಿಗೆ ಅವನ ಅಳು ಶಾಂತವಾಯಿತು. ಆ ವ್ಯಕ್ತಿಗೆ ಮತ್ತು ಐಸ್‌ಕ್ರೀಮ್  ಅಂಗಡಿಯ ಮಾಲೀಕನಿಗೆ ಧನ್ಯವಾದ ಸಮರ್ಪಿಸಿದರು. ಜೀವನದಲ್ಲಿ ಬೇಕು ಎನ್ನುವುದು ಬೇಕಾದಾಗ ಸಿಗುವುದಿಲ್ಲ. ಸಿಕ್ಕಾಗ ಅವನ್ನು ಮನಸಾರೆ ಅನುಭವಿಸಬೇಕು.

ಜೀವನದಲ್ಲಿ ನಾವು ದಾರಿ ತಪ್ಪುವುದು ಸಹಜ. ದಾರಿ ತಪ್ಪಿದೆವು ಎಂದು ಅಳುತ್ತಾ ಕೂರುವುದರ ಬದಲು ಹೊಸದಾರಿಯನ್ನು ಹುಡುಕಿಕೊಳ್ಳಬೇಕು. ಹೊಸದಾರಿ ಸಿಗಲಿಲ್ಲವೆಂದರೆ ನಿರ್ಮಿಸಿಕೊಳ್ಳಬೇಕು. ಆ ದಾರಿಯಲ್ಲಿ ನಾವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರತಿ ಸೂರ‍್ಯಾಸ್ತದ ನಂತರ ಸೂರ‍್ಯೋದಯವಾಗಲೇಬೇಕು. ಉದಯರವಿಯ ಹೊಂಗಿರಣದ ಸ್ಪರ್ಶದಿಂದ ಕಷ್ಟಗಳು ಮಂಜಿನಂತೆ ಕರಗಲೇಬೇಕು. ಇದು ಪ್ರಕೃತಿಯ ನಿಯಮ.
*********

newnaturewallpaper.com

1 ಟಿಪ್ಪಣಿ Post a comment
  1. ನವೆಂ 14 2011

    tumba channgide…sarala enisidaru artha poorna..baraha..shubhashaya nimage..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments