ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 14, 2011

4

ಮುಂದಿದೆ ಮಾರಿ ಹಬ್ಬ : ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆಯೇನು?

‍ನಿಲುಮೆ ಮೂಲಕ

-”ಸಿದ್ಧಾರ್ಥ

೨೪ ದಿನಗಳ ಸೆರೆಮನೆ ವಾಸದ ನಂತರ ಅಂತೂ ಇಂತೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದನ್ನೇ ಒಂದು ವಿಜಯೋತ್ಸವವೆಂಬಂತೆ ಅವರ ಬೆಂಬಲಿಗರು ಬಾಣ ಬಿರುಸು, ಪಟಾಕಿಗಳನ್ನು ಸಿಡಿಸಿ ಹರ್ಷಿಸಿದ್ದಾರೆ. ಯಡಿಯೂರಪ್ಪ ಅವರು ದೇಗುಲಗಳ, ಮಠಗಳ ದರ್ಶನ ಕಾರ್ಯದಲ್ಲಿ ಮುಳುಗಿದಂತೆ ನಟಿಸುತ್ತಿದ್ದರು, ಅವರ ಅಂತರ್ಯ್ಯದಲ್ಲಿ ಮುಕ್ಕಾಗಿ ಹೋದ ವೈಬವವನ್ನು, ಅಧಿಕಾರವನ್ನು ಮರಳಿ ಪಡೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಪೂರಕವೆನ್ನುವಂತೆ ಅವರ ಆಪ್ತ ಮಂತ್ರಿಗಳನೇಕರು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪನವರೇ ಪಕ್ಷದ ಪ್ರಶ್ನಾತೀತ ನಾಯಕರು ಆದ್ದರಿಂದ ಅವರನ್ನೇ ರಾಜ್ಯದ ಪಕ್ಷಾದ್ಯಕ್ಷರನ್ನಾಗಿ ಮಾಡಿ ಎಂಬ ಬೆದರಿಕೆ ರೂಪದ ಒತ್ತಡವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಸೆರಮನೆ ವಾಸ, ಅದೆಷ್ಟೇ ಅಲ್ಪಾವಧಿಯಾದಾಗಿರಲಿ ಅದಷ್ಟೇ ಸುಖ ವೈಬೋಗಗಳಿಂದ ಕೂಡಿರಲಿ, ಮಾನಸಿಕವಾಗಿ ಅದು ಸೆರಮನೆ ವಾಸವೇ. ಪರಿಸ್ಥಿತಿಯ ಶಿಶುವಾಗಿ ತಮ್ಮದಲ್ಲದ ತಪ್ಪಿಗೆ ಸೆರಮನೆ ವಾಸ ಕಂಡ ಯಡಿಯೂರಪ್ಪನವರಿಗೆ ಕಡ್ಡಾಯ ಬಂದನ ಒಂದು ರೀತಿಯಲ್ಲಿ ಪಾಠವಾಗಬೇಕಾಗಿತ್ತು. ಸಾಮಾನ್ಯವಾಗಿ ಸೆರೆಮನೆಯಲ್ಲಿ ಸಿಗುವ ಏಕಾಕಿತನದಲ್ಲಿ ವ್ಯಕ್ತಿಯೊಬ್ಬರ ಮನಸ್ಸು ಹಲವು ಬದಲಾವಣೆಗೆ ಒಳಪಡುತ್ತದೆ. ಸರಿ ತಪ್ಪುಗಳ ವಿಮರ್ಶೆಯ ಆತ್ಮಾವಲೋಕನಕ್ಕೆ ಅದು ಸಕಾಲವಾಗುತ್ತದೆ. ಕೆಲವೊಮ್ಮೆ ಏಕಾಂಗಿ ತನದಲ್ಲಿ ವ್ಯಕ್ತಿಯ ಮನಸ್ಸು, ಪ್ರತಿಭೆ ಅರಳುತ್ತದೆ. ಉತ್ತಮ ರಚನಾತ್ಮಕ ಸಾಧನೆಗಳಾಗುತ್ತವೆ. ನಮ್ಮ ನೆಚ್ಚಿನ ನೇತಾರರಾದ ಮಹಾತ್ಮ ಗಾಂಧಿ ಹಾಗೂ ಜವಹರಲಾಲ್ ನೆಹರು ತಮ್ಮ ಸೆರಮನೆ ವಾಸವನ್ನು ಹಲವು ಉತ್ತಮ ಕೃತಿಗಳ ರಚನೆಗೆ ಬಳಸಿಕೊಂಡರು. ನಮ್ಮ ಪ್ರಖ್ಯಾತ ಆಂಗ್ಲ ಲೇಖಕ ಜೆಪ್ರಿ ಆರ್ಚರ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲಿನಲ್ಲಿ ಕಳೇದ ಬದುಕು ಪ್ರಿಸನ್ ಡೈರಿ ಎಂಬ ಅತ್ಯುತ್ತಮ ಕೃತಿಯ ಉಗಮಕ್ಕೆ ಕಾರಣವಾಯಿತು.

ಯಡಿಯೂರಪ್ಪ ಅವರು ಸೆರಮನೆ ಕಾಣಲು ಯಾರು ಕಾರಣ ಕರ್ತರಾದರು ಲಕ್ಷಾಂತರ ಹಣ ಸುರಿದು ದೆಹಲಿಯಿಂದ ಆಮದಾದ ಉದ್ದಾಮ ಕಾನೂನು ಪಂಡಿತರು ಅವರ ಬಿಡುಗಡೆಗಾಗಿ ಏನೆಲ್ಲಾ ಪ್ರಯತ್ನಗಳನ್ನು ನಡೆಸಿದರು ಇತ್ಯಾದಿ ವಿಷಯಗಳ ವಿಶ್ಲೇಷಣೆಗೆ ಹೋಗದೆ ವ್ಯಕ್ತಿಗತವಾಗಿ ಸೆರೆಮನೆ ವಾಸ ಯಡಿಯೂರಪ್ಪನವರ ಮೇಲೆ ಯಾವ ಪರಿಣಾಮ ಉಂಟುಮಾಡಿದೆ ಎಂಬುದನ್ನು ದಾಖಲಿಸಲು ಬಯಸುತ್ತೇನೆ.

ಸೆರೆಮನೆಯಲ್ಲಿ ದೊರಕುವ ಏಕಾಂತ ವಾಸ ಸರ್ವೇ ಸಾಮಾನ್ಯವಾಗಿ ಸಂಘಜೀವಿಯಾದ ಮಾನವನಿಗೆ ಹೇಳ ತೀರದ ಶಿಕ್ಷೆಯೇ ಸರಿ. ಜೈಲು ವಾಸ ಖೈದಿಯೊಬ್ಬನ ಮನಸ್ಸಿನ ಮೇಲೆ ಏನೆಲ್ಲಾ ಪ್ರಭಾವಗಳನ್ನು ಬೀರುತ್ತದೆ ಎಂಬುದನ್ನು ಮನಶಾಸ್ತ್ರಜ್ಞರು ಸೂಕ್ತವಾಗಿ ವಿವರಿಸಬಲ್ಲರು. ನಾನು ನಿರೀಕ್ಷಿಸಿದ್ದೆ ಆಯಾಚಿತವಾಗಿ ಸಿಕ್ಕ ಏಕಾಂತವಾಸದ ಲಾಬವನ್ನು ಪಡೆದು ಯಡಿಯೂರಪ್ಪ ಮತ್ತಷ್ಟು ಅಂತರ್ಮುಖಿಯಾಗುತ್ತಾರೆ, ವೇದಾಂತಿಯಾಗುತ್ತಾರೆ, ತಾತ್ವಿಕತೆಯನ್ನು ಅರಗಿಸಿಕೊಂಡು ತಮ್ಮ ತಪ್ಪು ಒಪ್ಪುಗಳ ಮನನ ನಡೆಸುತ್ತಾರೆ, ತಮ್ಮ ಸೆರೆಮನೆ ವಾಸಕ್ಕೆ ಕಾರಣವಾದ ನೈತ್ಯಾತ್ಮಿಕ ಅಂಶಗಳನ್ನು ತಮ್ಮ ವ್ಯಕ್ತಿತ್ವದಿಂದ ಕಿತ್ತೊಗೆಯಲು ನಿರ್ದರಿಸುತ್ತಾರೆ. ಆ ಮೂಲಕ ಹೊಸ ವ್ಯಕ್ತಿಯಾಗಿ ಹೊಸ ಮೆರಗು ಪಡೆದುಕೊಂಡು ಹೊರ ಬರುತ್ತಾರೆ ಎಂದರೆ, ಮತ್ತಷ್ಟು ಮೆಚುರಿಟಿ ಅವರಲ್ಲಿ ಕಂಡುಬರುತ್ತದೆ ಎಂದು ನಾನು ಭಾವಿಸಿದ್ದೆ.

ದುರದೃಷ್ಟವಶಾತ್ ಯಡಿಯೂರಪ್ಪನವರ ಮೇಲೆ ಜೈಲು ವಾಸ ಯಾವುದೇ ಧನಾತ್ಮಕ ಪ್ರಭಾವ ಮಾಡಿದಂತಿಲ್ಲ. ಬದಲಾಗಿ ಯಡಿಯೂರಪ್ಪ ಇನ್ನುಷ್ಟು ಗಟ್ಟಿಯಾಗಿದ್ದಾರೆ, ಉಗವಾಗಿದ್ದಾರೆ, ಸಿಟ್ಟು ಸೆಡವು, ಕೋಪ ತಾಪ, ದ್ವೇಷ ಅಸೂಯೆಗಳನ್ನು ಇನ್ನಷ್ಟು ತುಪ್ಪ ಸುರಿದು ಪ್ರಜ್ವಲಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ವಿರೋದಿಗಳನ್ನು ಮಟ್ಟ ಹಾಕಲುಬೇಕಾಗುವ ಸಮರವ್ಯೂಹವನ್ನು ಹಣಿಯಲು ಅವರಿಗೆ ಸೆರೆಮನೆ ವಾಸ ಸಾಕಷ್ಟು ಕಾಲಾವಕಾಶ ಮಾಡಿಕೊಟ್ಟಿದೆ.

ನಾನು ಹಿಂದೊಮ್ಮೆ ಬರೆದಿದ್ದೆ ಯಡಿಯೂರಪ್ಪನವರಿಗೆ ಯಡಿಯೂರಪ್ಪನವರೇ ಶತೃ, ಅವರು ತಮ್ಮ ವ್ಯಕ್ತಿತ್ವಕ್ಕೆ ಅಂಟಿಕೊಂಡು ಬಂದ ಗುಣ ದೋಷಗಳನ್ನು ನಿವಾರಿಸಿಕೊಂಡರೆ ಮಾತ್ರ ಅವರು ಈ ರಾಷ್ಟ್ರದ ಜನ ಬಯಸುವಂತಹ ರಾಜಕಾರಣಿಯಾಗಲು ಸಾದ್ಯ ಎಂಬ ಅನಿಸಿಕೆಯನ್ನು ಅವರ ಪದಚ್ಯುತಿಯ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದೆ.

ದುರದೃಷ್ಟವಶಾತ್ ಅಂದಿನ ಮಾತುಗಳು ಇಂದಿಗೂ ಕೂಡ ಹಲವಾರು ತಿಂಗಳುಗಳು ಉರುಳಿದ ನಂತರವೂ ಪ್ರಸ್ತುತವಾಗುತ್ತಿದೆ. ಜೈಲಿನಲ್ಲಿದ್ದುಕೊಂಡೇ ಯಡಿಯೂರಪ್ಪನವರು ಪಕ್ಷ ಮತ್ತು ಸರ್ಕಾರದ ಮೇಲೆ ಕೈಜಾರಿ ಹೋಗುತ್ತಿದ್ದ ಹಿಡಿತವನ್ನು ಪುನರ್‌ಗಳಿಸಿಕೊಳ್ಳಲು ಪ್ರಯತ್ನಿಸಿ ಹೇಗೆ ಯಶಸ್ವಿಯಾದರು. ಅದ್ವಾನಿಯವರ ಮಹತ್ವಾಕಾಂಕ್ಷಿ ಜನಚೈತನ್ಯಯಾತ್ರೆ ರಾಜ್ಯದ ಮಟ್ಟಿಗೆ ಸಂಪೂರ್ಣ ವಿಫಲವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ತಮ್ಮ ರಾಜಕೀಯ ವೈರಿ ಅನಂತ ಕುಮಾರ್ ರವರನ್ನು ಹೆಣೆದರು ಬಿಜೆಪಿ ಭದ್ರ ಕೋಟೆಗಳಾದ ಕರಾವಳಿ ಜಿಲ್ಲೆಗಳಲ್ಲಿಯೇ ಅದ್ವಾನಿ ಸಭೆಗಳಲ್ಲಿ ಮೂರು ಮುಕ್ಕಾಲು ಜನ ಸೇರಿದ್ದರು. ಎಂಬುದೇ ಅದ್ವಾನಿ ಜನ ಚೈತನ್ಯ ಯಾತ್ರೆ ಅನುಭವಿಸಿದ ಮುಖಭಂಗಕ್ಕೆ ಸಾಕ್ಷಿಯಾಗಿದೆ.

ಯಡಿಯೂರಪ್ಪ ಇನ್ನೂ ಬದಲಾಗಿಲ್ಲ ಎಂಬುದಕ್ಕೆ ಜ್ವಲಂತ ಸಾಕ್ಷಿ ಅವರು ಗೃಹ ಸಚಿವ ಆರ್. ಅಶೋಕ್ ಮೇಲೆ ಹರಿಹಾಯ್ದು ಹೋದದ್ದು. ಪತ್ರ ಕರ್ತರು, ಕ್ಯಾಮರಗಳು ತಮ್ಮತ್ತ ಕೇಂದ್ರಿಕರಿಸಿವೆ ಎಂಬುದನ್ನು ಲೆಕ್ಕಿಸದೆ ಯಡಿಯೂರಪ್ಪ ತಮ್ಮ ಮನೆ ಬಾಗಿಲಿಗೆ ಬಂದ ಅಶೋಕ್ ಅವರಿಗೆ ಛೀಮಾರಿ ಹಾಕಿದರು. ನಿನಗಿಂತ ಕುಮಾರ ಸ್ವಾಮಿನೇ ವಾಸಿ ನಾನು ಜೈಲಿಗೆ ಹೋದಾಗ ನೀನು ಪಾರ್ಟಿ ಮಾಡಿ ಆನಂದಿಸಿದೆ ನಿನಗೆ ಏನೆಲ್ಲಾ ಮಾಡಿದರೂ ಅನಂತ ಕುಮಾರ್ ಬಾಲ ಹಿಡಿದುಕೊಂಡು ಅಲೆಯುವುದು ತಪ್ಪಲಿಲ್ಲ ಎಂದು ಛೇಡಿಸಿದರು. ತಮ್ಮ ಕಣ್ಣೆದುರಿನಿಂದ ಅಶೋಕ್ ನಿರ್ಗಮಿಸುವ ತನಕ ಅವರ ಕ್ರೋದಾಗ್ನಿ ಶಾಂತವಾಗಿರಲಿಲ್ಲ. ಅವರ ಸಮೀಪ ವರ್ತಿಗಳ ಮಾತನ್ನು ನಂಬುವುದಾರರೆ ವಿಮುಕ್ತಿಯ ನಂತರ ಅವರನ್ನು ಭೇಟಿ ಮಾಡಲು ಮನೆಗೆ ಬಂದ ಮುಖ್ಯಮಂತ್ರಿ ಸದಾನಂದ ಗೌಡರೂ ಅವರ ವಾಗ್ ಬಾಣಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕಾರಣ ಮೊನ್ನೆಯಷ್ಟೇ ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿಯ ವಿಜೇತರ ಪಟ್ಟಿಯಲ್ಲಿ ಯಡಿಯೂರಪ್ಪ ಅವರು ಸೆರೆಮನೆಯಿಂದ ಕಳುಹಿಸಿದ ಯಾವುದೇ ಶಿಪಾರಸ್ಸುಗಳಿಗೆ ಸದಾನಂದ ಗೌಡ ಸೊಪ್ಪು ಹಾಕದೇ ಇದ್ದದ್ದು. ಎರಡನೇಯದಾಗಿ ಯಡಿಯೂರಪ್ಪ ಕುಟುಂಬ ಆಸಕ್ತಿ ಹೊಂದಿದ್ದ ಹಲವು ಕಡತಗಳ ವಿಲೇವಾರಿಯಲ್ಲಿ ಸದಾನಂದ ಗೌಡ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದ್ದು.

ಯಡಿಯೂರಪ್ಪ ಜೈಲಿಗೆ ಹೋಗಲೇ ಬೇಕಾಗಿ ಬಂದಾಗ ಅವರ ನಿರ್ಗಮನದಿಂದ ಹೆಚ್ಚು ಸಂತೋಷ ಪಟ್ಟವರು ಪಕ್ಷದಲ್ಲಿನ ಅವರ ವಿರೋಧಿಗಳಾದರೂ, ಅವರ ಕೃಪೆಯಿಂದಲೇ ಮುಖ್ಯಮಂತ್ರಿ ಪದವಿ ಕಂಡ ಸದಾನಂದಗೌಡ ಕೂಡ ಸಂತೋಷ ಪಟ್ಟಿರಲು ಸಾಕು. ಏಕೆಂದರೆ ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಜೈಲುವಾಸದ ತೂಗುಕತ್ತಿ ತೂಗುತ್ತಿರುವ ತನಕ ಅವರು ಮುಖ್ಯಮಂತ್ರಿಯ ಗದ್ದುಗೆಯತ್ತ ಕಣ್ಣು ಹಾಯಿಸುವಂತಿಲ್ಲ. ಅಲ್ಲಿಯ ತನಕ ತಮ್ಮ ಮುಖ್ಯಮಂತ್ರಿತ್ವ ಅಭಾದಿತ ಎಂಬ ಲೆಕ್ಕ್ಕಾಚಾರ ಅವರದಾಗಿತ್ತು. ಆದರೆ ಯಡಿಯೂರಪ್ಪ ಜೈಲು ವಾಸವನ್ನು ತಮ್ಮ ದರ್ಪ ದಾಷ್ಟ್ಯಗಳ ಪ್ರದರ್ಶನಕ್ಕೆ ಬಳಸಿಕೊಂಡರು. ಜೈಲಿಗೆ ಬಂದು ತಮ್ಮನ್ನು ಭೇಟಿ ಮಾಡಿ ಸಾಂತ್ವ್ವನ ಹೇಳದ ಶಾಸಕರು ಮತ್ತು ಮಂತ್ರಿಗಳ ನಿಷ್ಠೆಯನ್ನು ಸಂಶಯದಿಂದ ನೋಡಿದರು. ಹಲವು ಅಡ್ಡಗೋಡೆಯ ಮೇಲೆ ಕೂರುವ ಪ್ರವೃತ್ತಿಯ ಹಿಂಬಾಲಕರಿಗೆ ಅವರೇ ಸ್ವಯಂ ಕರೆ ಕಳಿಸಿ ಕರೆಸಿಕೊಂಡರು. ತಮ್ಮ ಸಿದ್ದಲಿಂಗಸ್ವಾಮಿಯ ನೆರವಿನಿಂದ ಜೈಲಿನ ಕಛೇರಿಯನ್ನೇ ಬಳಸಿ ತಮ್ಮ ಪತ್ರ ವ್ಯವಹಾರ ಮುಂದುವರಿಸಿದ್ದರು.
ಕೇವಲ ಆರೋಪ ಬಂದ ತಕ್ಷಣವೇ ಆರೋಪಿಯನ್ನು ಜೈಲುಗಟ್ಟುವುದೇ ಆದಲ್ಲಿ  ಇಡೀ ಜನ ಸಮುದಾಯದ ಅರ್ದದಷ್ಟು ಮಂದಿ ಜೈಲಿನಲ್ಲಿರಬೇಕಾದೀತು ಎಂಬ ನ್ಯಾಯಮೂರ್ತಿ ಪಿಂಟೋ ಅವರ ಮಾತುಗಳನ್ನು ನಾನೂ ಒಪ್ಪುತ್ತೇನೆ. ಲೋಕಾಯುಕ್ತ ನ್ಯಾಯಾಲಯ ಆರೋಪಿಗಳ ಬಂದನ ಬಿಡುಗಡೆಗಳಂತಹ ವಿಷಯಗಳಲ್ಲಿ ಸ್ಥಾಪಿತ ಕಾನೂನು ನಿಯಮಗಳಿಗಿಂತ ವ್ಯಯಕ್ತಿಕ ಮರ್ಜಿಯ ಮೇಲೆ ಅವಲಂಬಿತವಾಗಿದೆ ಎಂಬತೆ ಸಂಶಯ ಬರುವ ರೀತಿಯಲ್ಲಿ ನ್ಯಾಯಾಲಯ ನಡೆದುಕೊಳ್ಳುತ್ತಿರುವುದನ್ನು ನೋಡಿ ಚಕಿತನಾದ್ದೇನೆ. ಗೃಹ ಸಚಿವ ಅಶೋಕ್, ಕೈಗಾರಿಕ ಸಚಿವ ನಿರಾಣಿ ಮತ್ತು ಹಲವು ಶಾಸಕರ ವಿರುದ್ದ ಬಂದ ದೂರುಗಳಿಗೆ ನ್ಯಾಯಾಲಯದಿಂದ ಸಿಕ್ಕ ಪುರಸ್ಕಾರ ಕೂಡ ಇದೇ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಚುನಾಯಿತ ಜನ ಪ್ರತಿನಿದಿಗಳ ಮೇಲೆ ಗಂಭೀರ ಸ್ವರೂಪದ ದೂರು ಬಂದಾಗ ದೂರುದಾರರು ಸಂಬಂದಪಟ್ಟ ಪ್ರಿಸೈಡಿಂಗ್ ಆಫೀಷರ‍್ಗಳ ಅನುಮತಿ ಪಡೆದಿದ್ದಾರೆಯೇ ಎಂದು ಪರಿಶೀಲಿಸುವ ಪ್ರಾಥಮಿಕ ಅಗತ್ಯವನ್ನು ನ್ಯಾಯಾದೀಶರು ತಮ್ಮ ಅತ್ಯುತ್ಸಾಹದಲ್ಲಿ ಕಡೆಗಣಿಸುತ್ತಿದ್ದಾರೆಯೇ? ಎಂಬ ಸಂಗತಿ ನ್ಯಾಯಾಂಗದ ಸಕ್ರಿಯಾತ್ಮಕತೆಯ [ judicial activism]] ಬಗ್ಗೆ ಅದ್ಯಯನ ನಡೆಸುವ ಯಾರೊಬ್ಬರಿಗೂ ಅಚ್ಚರಿಯಾಗುವ ಸಂಗತಿ ಇದಾಗಿದೆ.

ಅದು ಹೇಗೂ ಇರಲಿ, ಜೈಲಿನಿಂದ ಹೊರಬಂದ ಯಡಿಯೂರಪ್ಪ ಅವರ ಮುಂದಿನ ನಡೆ ಏನು?  ಅವರೇ ಹೇಳಿಕೊಂಡಿರುವಂತೆ ಇಡೀ ರಾಜ್ಯ ಸುತ್ತಾಡಿ ತಮ್ಮ ಆಳವೆಷ್ಟಿದೆ ಎಂಬುದರ ಸಾಕ್ಷಾತ್ ದರ್ಶನ ಂಆಡಿಕೊಳ್ಳುವುದು. ಎರಡನೇಯದಾಗಿ ತಮ್ಮ ಮೇಲಿನ ಆರೋಪಗಳಿಗೆ ಒಂದು ತಾರ್ಕಿಕ ಅಂತ್ಯ ಸಿಗುವ ತನಕ ಪಕ್ಷದ ಕ್ರಮ ಸರ್ಕಾರದ ಮೇಲಿರುವ ಹಿಡಿತ ತಪ್ಪದಂತೆ ಅವರ ಮುಂದಿನ ರಾಜಕೀಯ ನಡೆಯನ್ನು ಪುನರ್ ರೂಪಿಸಿಕೊಳ್ಳುವುದು. ಮೂರನೇಯದಾಗಿ ಅವರು ಗುರುತಿಸಿಕೊಂಡ ಹಾಗೆ ಅವರ ರಾಜಕೀಯ ವೈರಿಗಳನ್ನು (ಹೀಗೆ ಓದಿಕೊಳ್ಳಿ ಸಂಸತ್ ಸದಸ್ಯ ಅನಂತ ಕುಮಾರ್) ಮಣಿಸುವುದು.

ಈ ಎಲ್ಲ ಹವಣಿಕೆಗಳ ಮುಂದುವರಿಕೆ ಎಂಬಂತೆ ಯಡಿಯೂರಪ್ಪ ಇದೇ ತಿಂಗಳ ಅಂತ್ಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ತಮ್ಮ ಬೆಂಬಲಿಗರ ಬೃಹತ್ ಸಭೆ ಕರೆಯಲು ಉದ್ದೇಶಿಸಿದ್ದಾರೆ. ಪಕ್ಷದಲ್ಲಿ ತಮಗಿರುವ ಆಳ ಅಗಲವನ್ನು ಪುನರ್ ಮನನ ಮಾಡಿಕೊಳ್ಳುವ ಜೊತೆಗೆ ಮುಂದೊಮ್ಮೆ ಪಕ್ಷದಿಂದ ಹೊರ ಹೋಗುವ ಸಂದರ್ಭ ಬಂದದ್ದೇ ಆದರೆ ತಮಗೆ ಒದಗಬಹುದಾದ ಬೆಂಬಲದ ಪ್ರಮಾಣವನ್ನು ಅಂದಾಜು ಮಾಡುವುದು ಈ ಸಭೆಯ ಉದ್ದೇಶವಾಗಿದೆ.

ತದ ನಂತರ ಪಕ್ಷದ ರಾಜ್ಯಾದ್ಯಕ್ಷ ಪದವಿಯನ್ನು ತನಗೆ ಒಪ್ಪಿಸುವಂತೆ ಹೈಕಮಾಂಡ್ ಮೇಲೆ ಸತತ ಒತ್ತಡ ಮುಂದುವರಿಸುವುದು. ಬಳ್ಳಾರಿ ಉಪ ಚುನಾವಣೆಯಲ್ಲಿ ಶ್ರೀರಾಮುಲು ಹಣಿಯುವ ಮೂಲಕ ತಮಗೆ ಮಗ್ಗಲು ಮುಳ್ಳಾಗಿದ್ದ ರೆಡ್ಡಿ ಬಳಗವನ್ನು ನಿರ್ಣಾಮಗೊಳಿಸುವುದು. ಹೀಗೆ ಯಡಿಯೂರಪ್ಪ ಇಡುವ ಪ್ರತಿ ಹೆಜ್ಜೆಯ ಮೇಲೂ ಅವರ ರಾಜಕೀಯ ವಿರೋದಿಗಳ ವಿಶೇಷವಾಗಿ ಅನಂತ ಕುಮಾರ್ ಅವರ ಭವಿಷ್ಯ ನಿರ್ದಾರವಾಗುವ ದಿನಗಳು ಸನಿಹದಲ್ಲಿ ಕಾಣುತ್ತಿವೆ.

*******************

ndtv.com

4 ಟಿಪ್ಪಣಿಗಳು Post a comment
  1. Ananda Prasad
    ನವೆಂ 14 2011

    ಯಡಿಯೂರಪ್ಪ ತಮ್ಮದಲ್ಲದ ತಪ್ಪಿನಿಂದ ಜೈಲಿಗೆ ಹೋದದ್ದು ಎಂದು ಲೇಖಕರು ಹೇಳಿರುವುದು ಸಮಂಜಸವೆಂದು ಕಾಣುವುದಿಲ್ಲ. ಯಡಿಯೂರಪ್ಪನವರ ಸ್ವಯಂಕೃತ ಅಪರಾಧವೇ ಅವರು ಜೈಲಿಗೆ ಹೋಗಲು ಕಾರಣವಾದದ್ದು ಎಂಬುದರಲ್ಲಿ ಸಂದೇಹವೇ ಇಲ್ಲ. ಯೋಚನಾ ಶಕ್ತಿ, ವಿವೇಕ ಪ್ರಜ್ಞೆ ಇದು ಯಡಿಯೂರಪ್ಪನವರ ರಕ್ತದಲ್ಲೇ ಇಲ್ಲ ಎಂಬುದು ಅವರ ನಡವಳಿಕೆಗಳನ್ನು ನೋಡಿದಾಗ ಗೊತ್ತಾಗುತ್ತದೆ. ಪಶ್ಚಾತ್ತಾಪವಾಗಲಿ, ಸ್ವವಿವೇಚನೆ ಎಂಬುದು ಯಡಿಯೂರಪ್ಪನವರಲ್ಲಿ ಕಾಣಸಿಗುವುದಿಲ್ಲ, ಹೀಗಾಗಿ ಜೈಲುವಾಸದಿಂದ ಅವರಲ್ಲಿ ಬದಲಾವಣೆ ಬರಲು ಸಾಧ್ಯವಿಲ್ಲ. ಇದು ಅವರ ಹುಟ್ಟುಗುಣದಂತೆ ಕಾಣುತ್ತದೆ. ಹೀಗಾಗಿ ಅವರಿಂದ ಯಾವುದೇ ಬದಲಾವಣೆ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅವರಿಗೆ ಜನ ಮುಂದಿನ ಚುನಾವಣೆಗಳಲ್ಲಿ ಸೂಕ್ತ ಉತ್ತರ ಕೊಡಲು ಕಾದಿದ್ದಾರೆ ಎಂಬುದು ಇಲ್ಲಿವರೆಗಿನ ಕರ್ನಾಟಕದ ಚುನಾವಣಾ ಫಲಿತಾಂಶಗಳನ್ನು ನೋಡಿದಾಗ ಗೊತ್ತಾಗುತ್ತದೆ. ಕನ್ನಡ ಜನ ಎಂದೂ ಇಂಥ ವ್ಯಕ್ತಿಗಳಿಗೆ ಎರಡನೇ ಅವಕಾಶ ಕೊಟ್ಟಿಲ್ಲ.

    ಉತ್ತರ
  2. santhosh kumar
    ನವೆಂ 14 2011

    ಯಡಿಯೂರಪ್ಪನವರು ಒಂಥರಾ ದುರ್ಯೋಧನನಂತೆ. ದುರ್ಯೋಧನನಿಗೆ ತನ್ನ ತಪ್ಪುಗಳು ಕೊನೆಯವರೆಗೂ ತಿಳಿಯಲಿಲ್ಲ ಹಾಗೂ ತಾನು ನಡೆದದ್ದೇ ಸರಿ ಎಂಬ ದುರಹಂಕಾರವೂ ಇತ್ತು. ಹೀಗಾಗಿ ಅವನ ಅಂತ್ಯ ದುರಂತದಲ್ಲಿ ಕೊನೆಗೊಂಡಿತು ಮಾತ್ರವಲ್ಲ ಅವನ ಸಕಲ ಪರಿವಾರವೂ ಅವಸಾನಗೊಂಡಿತು. ಯಡಿಯೂರಪ್ಪನವರ ಕಥೆಯೂ ಕೊನೆಗೆ ಹೀಗೆಯೇ ಕೊನೆಗೊಳ್ಳಲಿರುವುದು ಖಚಿತ. ಯಡಿಯೂರಪ್ಪನವರಲ್ಲಿ ಓರ್ವ ರಾಜನೀತಿಜ್ಞನ ವಿವೇಕ ಕಂಡುಬರುವುದಿಲ್ಲ. ಅವರಲ್ಲಿ ಕಂಡುಬರುವುದು ಹಿಂದೆ ಹಳ್ಳಿಗಳಲ್ಲಿ ಕಂಡುಬರುತ್ತಿದ್ದ ಜಮೀನ್ದಾರರ ಅಹಂಕಾರ, ಧಾರ್ಷ್ಟ್ಯ, ಸೇಡಿನ ಕಿಚ್ಚು, ಹಾಗೂ ದರ್ಪದ ಮನೋಭಾವ. ಇದರಲ್ಲಿ ಯಾವುದೇ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ ಏಕೆಂದರೆ ಅವರಲ್ಲಿ ಉನ್ನತ ಧ್ಯೇಯಗಳು, ಉದಾತ್ತ ಚಿಂತನೆಗಳು ಕಂಡು ಬರುವುದಿಲ್ಲ. ಪುಸ್ತಕ ಓದುವ ಅಭ್ಯಾಸವೂ ಅವರಿಗಿಲ್ಲ. ಹೀಗಾಗಿ ಇಂಥವರಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸುವುದು ವ್ಯರ್ಥ.

    ಉತ್ತರ
  3. ಗಿರೀಶ್
    ನವೆಂ 14 2011

    ಭಟ್ಟಂಗಿತನಕ್ಕೂ ಅಭಿಮಾನಕ್ಕೂ ವ್ಯತ್ಯಾಸವೇ ಗೊತ್ತಿಲ್ಲ ಪಾಪ! ಲೇಖಕರಿಗೆ. ಇಷ್ಟೊಂದು ವ್ಯಕ್ತಿಪೂಜೆ ಸರಿಯಲ್ಲ ಲೇಖಕರೆ ಪೂರ್ವಗ್ರಹದಿಂದ ಮೊದಲು ಹೊರಬನ್ನಿ. ಇದು ನಿಮ್ಮ ಯಡಿಯೂರಪ್ಪ ಅವರ ಮೇಲಿನ ಅಭಿಮಾನದ ೨ನೆಯ ಲೇಖನ. ಸಾಕಾಗಿಲ್ಲವೆ ಇನ್ನೂ?
    ರೆಡ್ಡಿ ಬಳಗವನ್ನು ನಿರ್ನಾಮ ಮಾಡುತ್ತಾರೆಯೆ? ಅವರು ಬಿಜೇಪಿಯನ್ನು ಸಧ್ಯದಲ್ಲೆ ಮುಳುಗಿಸಲಿದ್ದಾರೆ. ಅದರ ಮೊದಲ ಹೆಜ್ಜೆಯೆ ರಾಮುಲು ರಾಜೀನಾಮೆ ನೋಡ್ತಾ ಇರಿ.

    ಉತ್ತರ
  4. Abhijnana
    ನವೆಂ 16 2011

    ಸಿದ್ದಾಥ್ರರವರೆ, ನಿಮ್ಮ ಹಿಂದಿನ ಲೇಖನದಲ್ಲಿ ಯಡಿಯೂರಪ್ಪನವರೊಳಗಿನ ನಾಯಕ ಇನ್ನು ಕಳೆಗುಂದಿಲ್ಲ ಎಂಬುದನ್ನ ಸಮರ್ಥವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದೀರಿ ಆದ್ರೆ, ಈ ಬಾರಿಯ ಲೇಖನದಲ್ಲಿ ‘ತಮ್ಮದಲ್ಲದ ತಪ್ಪಿಗೆ ಸೆರೆಮನೆ ವಾಸ ಕಂಡ ಯಡಿಯೂರಪ್ಪನವರು’ ಈ ವಾಕ್ಯ ಹೊರೆತುಪಡಿಸಿ ಯಡಿಯೂರಪ್ಪನವರನ್ನು ಬೆಂಬಲಿಸುವ ಅಂಶಗಳು ನಿಮ್ಮ ಲೇಖನದಲ್ಲಿ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಎಲ್ಲಾ ಬೆಳವಣಿಗೆಗಳನ್ನು, ವಿವರಿಸುತ್ತಾ ಹೋಗುವ ನೀವು ಯಡಿಯೂರಪ್ಪನವರೊಳಗಿನ ಅತಃಶಕ್ತಿಯನ್ನು ಸರಿಯಾಗಿ ದಾಖಲಿಸುವಲ್ಲಿ ವಿಫಲವಾಗಿದ್ದೀರಿ ಎಂದೆನಿಸುತ್ತದೆ. ಒಬ್ಬ ರಾಜಕೀಯ ನೇತಾರ ಜೈಲಿಗೆ ಹೋಗಿ ಬಂದ ಮಾತ್ರಕ್ಕೆ ಆತನ ವ್ಯಕ್ತಿತ್ವ ಮಸುಕಾಗಿ ಬಿಡುತ್ತದೆ ಎಂದು ನಾನು ನಂಬುವುದಿಲ್ಲ. ನೀವು ಕೂಡ ಇದೇ ನೆಲೆಯಿಂದ ಯಡಿಯೂರಪ್ಪನವರ ಕುರಿತು ಹೇಳ ಹೊರಟಿದ್ದರೂ ಅದನ್ನು ತರ್ಕಬದ್ದವಾಗಿ ಮಂಡಿಸುವಲ್ಲಿ ಸೋತಿದ್ದೀರಿ. ನಿಮ್ಮ ದೀರ್ಘ ಲೇಖನದ ಹಿಂದಿನ ಮನಸ್ಸನ್ನು ನೋಡಿದ್ರೆ ಯಡಿಯೂರಪ್ಪನವರ ಅಭಿಮಾನಿಯಾಗಿ, ಯಡಿಯೂರಪ್ಪನವರ ನಾಯಕತ್ವ ರಾಜ್ಯಕ್ಕೆ ಅಗತ್ಯ ಎಂಬುದನ್ನು ನೀವು ನಂಬಿರುವುದಾಗಿ ಕಂಡು ಬರುತ್ತದೆ. ಹೀಗಾದ್ರೆ ಯಡಿಯೂರಪ್ಪನವರ ಸಮರ್ಥಿಸಿಕೊಳ್ಳುವ ಪ್ರಬಲ ವಿಷಯಗಳಿಂದ ನೀವು ಮಂಡನೆ ಮಾಡಲ್ಲ.ನಿಮ್ಮ ಸುದೀರ್ಘ ಲೇಖನದ ಹಿಂದಿನ, ಅವ್ಯಕ್ತ ಅಂಶವೆಂದರೆ ತಪ್ಪು ಮಾಡಿಯೂ ಸಿಕ್ಕಿಕೊಳ್ಳ್ದದ ಬಿಜೆಪಿ ಪಕ್ಷದ ಒಳಗಿನ ಮತ್ತು ಹೊರಗಿನ ವ್ಯಕ್ತಿಗಳು ಪ್ರಾಮಾಣಿಕರೆ? ಎಂಬ ಭಾವವನ್ನು ಮೂಡಿಸುತ್ತಲೇ ಹೋಗುತ್ತದೆ. ತಪ್ಪು ಮಾಡಿಯೂ ಸಿಕ್ಕಿಕೊಳ್ಳದೆ ಕಳ್ಳರ ತಪ್ಪು ಮಾಡದೆಯೂ ಮುಗ್ಧವಾಗಿ ಕಾನೂನಿನ ಹಿಡಿತಕ್ಕೆ ಸಿಕ್ಕ ಯಡಿಯೂರಪ್ಪನವರ ವ್ಯಕ್ತಿತ್ವಗಳನ್ನು ಸಾರ್ವಜನಿಕ ಬದುಕಿನ ಹಿತದೃಷ್ತಿಯಿಂದ ಪರ್ಯಾಯ ಶಕ್ತಿಯಾಗಿ ಯಡಿಯೂರಪ್ಪನವರ ಇಂದಿನ ಮಹತ್ವ ಮತ್ತು ಅಗತ್ಯವನ್ನು ಹೇಳಬಹುದಿತಲ್ವೆ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments