‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ
– ಗೋವಿಂದ ರಾವ್ ವಿ ಅಡಮನೆ
‘ಮಾಡಿದ್ದುಣ್ಣೋ ಮಹಾರಾಯ’, ‘ಬಿತ್ತಿದಂತೆ ಬೆಳೆ’ ಈ ಜಾಣ್ನುಡಿಗಳು ಪುನರ್ಜನ್ಮದ ಪರಿಕಲ್ಪನೆಯ ಹುಟ್ಟಿಗೆ ಕಾರಣವಾದ ಕರ್ಮಸಿದ್ಧಾಂತದ ತಿರುಳನ್ನು ಬಿಂಬಿಸುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಈ ಉಕ್ತಿಗಳನ್ನು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಅರ್ಥೈಸಿ ಮೂಢನಂಬಿಕೆಗಳನ್ನೂ ಕರುಡು ಸಂಪ್ರದಾಯಗಳನ್ನೂ ಹುಟ್ಟುಹಾಕಲು ಬಳಸಿಕೊಂಡಿವೆ, ಯಶಸ್ವಿಯೂ ಆಗಿವೆ.
ಪುನರ್ಜನ್ಮಪರ ವಾದಿಗಳು ಒದಗಿಸಿರುವ ಉದಾಹರಣೆಗಳನ್ನು ಆಧರಿಸಿ ಈ ಉಕ್ತಿಗಳ ಇಂಗಿತಾರ್ಥವನ್ನು ನಾನು ವಿವರಿಸುವ ಪರಿ ಇಂತಿದೆ: ಭೌತಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಲು ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇರುವಂತೆಯೇ ಮಾನವನ ಜೀವನವನ್ನು ನಿಯಂತ್ರಿಸಲೂ ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇವೆ. ಈ ನಿಯಮಗಳನ್ನೇ ನಾವು ನೈತಿಕ ನಿಯಮಗಳು ಎಂದು ಉಲ್ಲೇಖಿಸುತ್ತೇವೆ. ಇವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವತ್ರಿಕ. ಭೌತಪ್ರಪಂಚದ ನೈಸರ್ಗಿಕ ನಿಯಮಗಳು ಹೇಗೆ ಅನುಲ್ಲಂಘನೀಯವೋ ಅಂತೆಯೇ ಇವೂ ಕೂಡ. ಎಲ್ಲ ನೈಸರ್ಗಿಕ ನಿಯಮಗಳೂ ಅನಾದಿ ಹಾಗೂ ಅನಂತ್ಯ, ಯಾರೋ ಮಾಡಿದ ನಿಯಮಗಳು ಇವಲ್ಲವಾದ್ದರಿಂದ. ಭೌತಪ್ರಪಂಚದಲ್ಲಿ ಲಾಗೂ ಆಗುವ ನಿಯಮಗಳೇ ಆಧುನಿಕ ವಿಜ್ಞಾನಗಳ ಅಧ್ಯಯನ ವಸ್ತು. ನೈಸರ್ಗಿಕ ನೈತಿಕ ನಿಯಮಗಳನ್ನು ಅಧ್ಯಯಿಸಲು ಆಧುನಿಕ ವಿಜ್ಞಾನಗಳಿಗೆ ಸಾಧ್ಯವಾಗಿಲ್ಲ. ವಿವಿಧ ಮತಗಳ ಆಧಾರ ಗ್ರಂಥಗಳಲ್ಲಿ ಈ ನೈತಿಕ ನಿಯಮಗಳನ್ನು ಪಟ್ಟಿ ಮಾಡುವ ಪ್ರಯತ್ನಗಳು ಆಗಿವೆಯಾದರೂ ಸರ್ವಮಾನ್ಯವಾದ ಪಟ್ಟಿಮಾಡಲು ಸಾಧ್ಯವಾಗಿಲ್ಲದಿರುವುದು, ಪಟ್ಟಿ ಮಾಡಿರುವ ನಿಯಮಗಳ ಅನುಸರಣೆ ಅಥವ ಉಲ್ಲಂಘನೆಯ ಪರಿಣಾಮಗಳ ಕುರಿತಾಗಿ ಇರುವ ಭಿನ್ನಾಭಿಪ್ರಾಯಗಳು ಅನೇಕ ಹಿಂಸಾಕೃತ್ಯಗಳ ಹುಟ್ಟಿಗೆ ಕಾರಣವಾಯಿತು. ಭೌತನಿಯಮಗಳಂತೆಯೇ ಇವೂ ಅನುಲ್ಲಂಘನೀಯವಾದವುಗಳು ಆಗಿದ್ದರೂ ನಿಯಮೋಲ್ಲಂಘನೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಸಾರಿದ ‘ಪುರೋಹಿತ ವರ್ಗ’ (ಇವರು ಬೇರೆ ಬೇರೆ ಹೆಸರುಗಳಲ್ಲಿ ಎಲ್ಲ ಮತಗಳಲ್ಲಿಯೂ ಇದ್ದಾರೆ) ಅದಕ್ಕಾಗಿ ಅನೇಕ ಕಂದಾಚಾರಗಳನ್ನೂ ಮೂಢನಂಬಿಕೆಗಳನ್ನೂ ಹುಟ್ಟುಹಾಕಿತು, ಬೆಳೆಯಿಸಿತು, ಪೋಷಿಸಿತು. ಮುಖಸ್ತುತಿಗೆ ಮರುಳಾಗಿ ಅಥವ ಮಾಡಿದ ಅನೈತಿಕ ಕೃತ್ಯಕ್ಕೆ ಅನುಗುಣವಾಗಿ ಸಂಕೀರ್ಣತೆ ಮತ್ತು ವೆಚ್ಚ ಹೆಚ್ಚುವ ‘ಪೂಜೆ, ಹೋಮ, ಹರಕೆ, ನೈವೇದ್ಯ, ದಾನ’ ಇವೇ ಮೊದಲಾದ ‘ಪ್ರಾಯಶ್ಚಿತ್ತ’ಗಳನ್ನು ಮಾಡಿದರೆ ಎಲ್ಲ ರೀತಿಯ ಅನೈತಿಕತೆಯನ್ನು ಮನ್ನಿಸುವ ‘ದೇವರ’ ಪರಿಕಲ್ಪನೆಯನ್ನು ಸ್ವಲಾಭಕ್ಕಾಗಿ ಸೃಷ್ಟಿಸಿ ಪೋಷಿಸಿದ್ದೂ ಇದೇ ವರ್ಗ. ಪುನರ್ಜನ್ಮ ಇರುವುದೇ ನಿಜವಾದರೆ, ಇಂಥ ‘ದೇವರ’ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದಕ್ಕೆ ಬದಲಾಗಿ ಕರ್ಮಸಿದ್ಧಾಂತ ಸೂಚಿಸುವ ನೈಸರ್ಗಿಕ ನೈತಿಕ ನಿಯಮಾನುಸಾರ ಬಾಳ್ವೆ ನಡೆಸುವುದು ಉತ್ತಮ.
ಪುನರ್ಜನ್ಮಪರ ವಾದಿಗಳ ಒದಗಿಸುವ ಸಾಕ್ಷ್ಯಾಧಾರ ಎಂದು ನೀಡುತ್ತಿರುವ ಉದಾಹರಣೆಗಳನ್ನು ಕರ್ಮಸಿದ್ಧಾಂತದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದರೆ ಮತಾತೀತವೂ ಕುಲಾತೀತವೂ ಲಿಂಗಾತೀತವೂ ಆದ ಕೆಲವು ನಿಯಮಗಳನ್ನು ಅನುಮಾನಿಸಬಹುದು (ಇನ್ ಫರ್). ಈ ರೀತಿ ಅನುಮಾನಿಸಿದ ಪ್ರಧಾನ ನಿಯಮಗಳು ಇಂತಿವೆ:
೧. ಒಬ್ಬ ವ್ಯಕ್ತಿಯ ಕ್ರಿಯೆಗಳು ಇನ್ನೊಬ್ಬ ವ್ಯಕ್ತಿಯ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆಯೋ ಅದೇ ಪರಿಣಾಮ ಆ ವ್ಯಕ್ತಿಯ ಮೇಲೂ ಆಗುವ ಸನ್ನಿವೇಶ ಸೃಷ್ಟಿಯಾಗುತ್ತದೆ. ‘ಇತರರ ಯಾವ ಕ್ರಿಯೆ ನಿನಗೆ ನೋವು, ವಿಶೇಷತಃ ಮಾನಸಿಕ ನೋವು ಉಂಟು ಮಾಡುತ್ತದೆಯೋ ಆ ಕ್ರಿಯೆಯನ್ನು ನೀನು ಇತರರನ್ನು ಗುರಿಯಾಗಿಸಿ ಮಾಡಬೇಡ’ ಎಂಬ ಉಕ್ತಿ ಈ ನಿಯಮದ ಒಂದು ಮುಖವನ್ನು ಬಿಂಬಿಸುತ್ತದೆ. ಕೀಳಾಗಿ ಕಾಣುವಿಕೆ, ಅಣಕಿಸುವಿಕೆ, ಅಪಹಾಸ್ಯ ಮಾಡುವಿಕೆ, ವ್ಯಂಗ್ಯೋಕ್ತಿಗಳಿಂದ ನೋಯಿಸುವಿಕೆ, ಕ್ರೂರ ನಗು, ನಿಂದಿಸುವಿಕೆ, ಅವಮಾನಿಸುವಿಕೆ, ದೈಹಿಕವಾಗಿ ಅಥವ ಮಾನಸಿಕವಾಗಿ ಹಿಂಸಿಸುವಿಕೆ, ದೈಹಿಕ ಸೌಂದರ್ಯ ಅಥವ ಸಾಮರ್ಥ್ಯದ ಸ್ವಸ್ತುತಿ ಇವೆಲ್ಲವೂ ಕುಕರ್ಮಗಳ ಪಟ್ಟಿಯಲ್ಲಿ ಇರುವಂತೆ ತೋರುತ್ತದೆ. ಉದಾಹರಣೆ: ಇಂದು ನಿಮ್ಮನ್ನು ಯಾರೋ ಅಪಹಾಸ್ಯ ಮಾಡಿದರೆ ಹಿಂದೆಂದೋ ನೀವು ಇನ್ನಾರನ್ನೋ ಅಪಹಾಸ್ಯ ಮಾಡಿದ್ದರಿ ಎಂದರ್ಥ. ಇಂದು ಅಂಗವಿಕಲತೆಯನ್ನು ಅಣಕಿಸಿದರೆ ಮುಂದೆಂದೋ ಅದೇ ಅಂಗವಿಕಲತೆ ನಿಮ್ಮನ್ನು ಕಾಡುತ್ತದೆ.
೨. ಒಬ್ಬ ವ್ಯಕ್ತಿಯ ಕ್ರಿಯೆಗಳು ಒಂದು ಸಮುದಾಯದ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆಯೋ ಅದೇ ಪರಿಣಾಮ ಎದುರಿಸಬೇಕಾದ ಸಮುದಾಯದ ಸದಸ್ಯನಾಗಿ ಇರ ಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಉದಾಹರಣೆಗೆ: ಸಮುದಾಯದ ಯಾವುದೋ ಒಂದು ವರ್ಗವನ್ನು ಬಲು ಕೀಳಾಗಿ ಕಾಣುವಂತೆ ಆಗುವುದಕ್ಕೆ ಅಥವ ನಿಮ್ಮ ಕ್ರಿಯೆಗಳು ಆ ವರ್ಗದ ದುಸ್ಥಿತಿಯನ್ನು ಪೋಷಿಸಿಲು ಕಾರಣವಾಗುತ್ತದೆ ಎಂದಾದರೆ ಮುಂದೆಂದೋ ಒಂದು ದಿನ ಅಂಥದ್ದೇ ನೋವನ್ನು ಅನುಭವಿಸುತ್ತಿರುವ ವರ್ಗದ ಸದಸ್ಯನಾಗಿ ಬದುಕಬೇಕಾದ ಸನ್ನಿವೇಶ ಏರ್ಪಡುತ್ತದೆ.
೩. ಒಬ್ಬ ವ್ಯಕ್ತಿಯ ಕ್ರಿಯೆಗಳು ಪರಿಸರದ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆಯೋ ಅದೇ ಪರಿಣಾಮ ಉಂಟಾದ ಪರಿಸರದಲ್ಲಿ ಆ ವ್ಯಕ್ತಿ ಬದುಕಬೆಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಉದಾಹರಣೆ: ನಿಮ್ಮ ಕ್ರಿಯೆಗಳಿಂದಾಗಿ ಪರಿಸರ ಸಮತೋಲ ನಾಶವಾದರೆ ಮುಂದೆ ಅಂತಹುದೇ ಪರಿಸರದಲ್ಲಿ ಯಾತನಾಭರಿತ ಬದುಕು ಸಾಗಿಸಬೇಕಾಗುತ್ತದೆ.
೪. ತನ್ನ ದೇಹದ ಯಾವುದೇ ಅಂಗವನ್ನು ಅಥವ ದೈಹಿಕ ಪ್ರಕ್ರಿಯೆಯ ದುರುಪಯೋಗ ಮಾಡಿದಲ್ಲಿ ಆ ಅಂಗ ಅಥವ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೀವ್ರ ನ್ಯೂನತೆಗಳಿಂದಲೋ ದೌರ್ಬಲ್ಯಗಳಿಂದಲೋ ಕಷ್ಟಪಡಬೇಕಾಗುತ್ತದೆ. ಭೋಗಲೋಲುಪತೆ, ವಿಷಯಲಂಪಟತೆ, ಅತಿಭೋಗ, ವೈಯಕ್ತಿಕ ಆರೋಗ್ಯದ ಕುರಿತಾದ ನಿರ್ಲಕ್ಷ್ಯ, ಹೊಟ್ಟೆಬಾಕತನ ಇವೇ ಮೊದಲಾದವು ಸ್ವದೇಹ ದುರುಪಯೋಗದ ಪಟ್ಟಿಯಲ್ಲಿ ಇರುವಂತೆ ತೋರುತ್ತದೆ. ಉದಾಹರಣೆ: ಹೊಟ್ಟೆಬಾಕತನ ಮುಂದೆ ಪಚನಕ್ರಿಯಗೆ ಸಂಬಂಧಿಸಿದ ದೀರ್ಘಕಾಲೀನ ಸಮಸ್ಯೆಗಳಿಂದ ನರಳುವಿಕೆಗೆ ಕಾರಣವಾಗುತ್ತದೆ.
೫. ಕರ್ಮಫಲ ಅನುಭವಿಸಿದ್ದರಿಂದ ಆಧ್ಯಾತ್ಮಿಕ ಪ್ರಗತಿ ಆಗುವ ಸಾಧ್ಯತೆ ಇರುವ ಸನ್ನಿವೇಶಗಳಲ್ಲಿಯೇ ಆತ್ಮ ಪುನರ್ಜನ್ಮ ಪಡೆಯುತ್ತದೆ. ಸಾವಿನ ನಂತರವೂ ಆತ್ಮದ ಪಯಣ (ಸಂಸ್ಕರಿಸುವ ಪ್ರಕ್ರಿಯೆ) ಇತರ ಆಯಾಮ/ಲೋಕಗಳಲ್ಲಿ ಮುಂದುವರಿಯುತ್ತದೆ. ಭೂಮಿಯ ಮೇಲೆ ಆತ್ಮಸಂಸ್ಕರಣೆಗಾಗಿ ಯಾವ ಅನುಭವ ಪಡೆಯಲೋಸುಗ ಯಾವಾಗ ಯಾವ ಸಮುದಾಯದಲ್ಲಿ ಯಾವ ಲಿಂಗದ ದೇಹಧಾರಣೆ ಮಾಡಿ ಪುನಃ ಜನಿಸಬೇಕೆಂಬುದನ್ನು ನಿರ್ಧರಿಸುವುದರಲ್ಲಿ ಆತ್ಮಕ್ಕೂ ಸೀಮಿತ ಸ್ವಾತಂತ್ರ್ಯ ಇರುವಂತೆ ತೋರುತ್ತದೆ.
೬. ಕುಕರ್ಮಗಳನ್ನು ಮಾಡಿದ್ದೇನೆ ಅನ್ನಿಸಿದಾಗ ನಿಜವಾಗಿ ಪಶ್ಚಾತ್ತಾಪ ಪಟ್ಟರೆ, ತಕ್ಕ ಪ್ರಾಯಶ್ಚಿತ್ತ ಮಾಡಿದರೆ ಕುಕರ್ಮದ ಫಲವಾಗಿ ಆಗಬಹುದಾದ ದುಷ್ಪರಿಣಾಮಗಳ ತೀವ್ರತೆ ಕಮ್ಮಿ ಆಗುತ್ತದೆ. ತಿಳಿದೋ ತಿಳಿಯದೆಯೋ ತನ್ನಿಂದ ತಪ್ಪು ಆಯಿತಲ್ಲ ಎಂದು ನಿಜವಾಗಿ ಪರಿತಪಿಸುವುದು ಪಶ್ಚಾತ್ತಾಪ. ತನ್ನ ಕುಕರ್ಮದಿಂದ ಬಾಧಿತರಾದವರ ಕ್ಷಮೆ ಯಾಚಿಸುವುದು (ಯಾಂತ್ರಿಕವಾಗಿ Sorry ಹೇಳಿ ಮರೆತುಬಿಡುವುದಲ್ಲ), ಆದ ತಪ್ಪನ್ನು ಸರಿಪಡಿಸಲು ಅಥವ ಮಾಡಿದ ತಪ್ಪಿನ ದುಷ್ಪರಿಣಾಮದ ತೀವ್ರತೆ ಕಮ್ಮಿ ಪಡಿಸಲು ಹೆಣಗಾಡುವುದೇ ಪ್ರಾಯಶ್ಚಿತ್ತ. ಪೂಜೆ, ವ್ರತ, ಹೋಮ ಇವೇ ಮೊದಲಾದವುಗಳನ್ನು ಮಾಡುವುದಾಗಲೀ ದೇವಾಲಯಗಳಿಗೆ ತಪ್ಪುಕಾಣಿಕೆ ಸಲ್ಲಿಸುವುದಾಗಲೀ ಅಲ್ಲ. ಪ್ರಾರ್ಥನೆ, ಧ್ಯಾನ ಇತ್ಯಾದಿಗಳು ಪ್ರಾಯಶ್ಚಿತ್ತ ಮಾಡುವ ಬಯಕೆ ತೀವ್ರವಾಗಿರುವವರ ಮನೋಬಲವನ್ನು ಹೆಚ್ಚಿಸಲು ನೆರವಾಗುತ್ತವೆಯೇ ವಿನಾ ತಪ್ಪನ್ನು ಮನ್ನಿಸಿ ಕಷ್ಟಗಳನ್ನು ನಿವಾರಿಸುವುದಿಲ್ಲ. ಸತ್ಸಂಗ, ‘ಧರ್ಮ’ಗ್ರಂಥ ವಾಚನ, ದಾನ, ಅನ್ನಸಂತರ್ಪಣೆ, ಜನಸೇವೆ ಇತ್ಯಾದಿಗಳನ್ನು ಮಾಡುವುದರ ಹಿಂದಿರುವ ಮನೋಧರ್ಮ ಬಲು ಮುಖ್ಯವೇ ವಿನಾ ಈ ಕ್ರಿಯೆಗಳಲ್ಲ. ಯಾವುದೇ ವಿಧಿವಿಧಾನಗಳ ಯಾತ್ರಿಕ ಆಚರಣೆ ನಿಷ್ಪ್ರಯೋಜಕ. ಎಂದೇ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದಕ್ಕಾಗಿ, ನೈಸರ್ಗಿಕ ನೈತಿಕನಿಯಾಮನುಸಾರ ಬದುಕುವುದಕ್ಕಾಗಿ ಅಗತ್ಯವಾದ ಮನೋಬಲದ ಅಥವ ಸಂಕಲ್ಪಶಕ್ತಿಯ ವರ್ಧನೆಗಾಗಿ ತಮಗೆ ಒಗ್ಗುವ ಮತೀಯ ಆಚರಣೆಗಳನ್ನು ಸದ್ದುಗದ್ದಲವಿಲ್ಲದೆಯೂ ಆಡಂಬರರಹಿತವಾಗಯೂ ಆಚರಿಸಬೇಕೇ ವಿನಾ ದೇವರನ್ನು ಓಲೈಸಲಾಗಲೀ ತನ್ನ ದೈವಭಕ್ತಿಯ ಪ್ರದರ್ಶನಕ್ಕಾಗಲೀ ಅಲ್ಲ. ಪುನರ್ಜನ್ಮದಲ್ಲಿ ನಂಬಿಕೆ ಇರುವವರನ್ನು ಖಂಡಿಸುವುದೂ ಸಲ್ಲದು. ಕಾರಣ-ತಾವು ನಂಬಿರುವ ಹಾದಿಯಲ್ಲಿ ನಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಪುನರ್ಜನ್ಮ ಇರುವುದು ನಿಜವೇ ಆದರೆ, ಅದನ್ನು ನಂಬದವರಿಗೂ ಈ ನಿಯಮಗಳು ಲಾಗೂ ಆಗುವುದರಿಂದ ಆ ಕುರಿತು ನಾವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅಂಥವರನ್ನು ‘ಉದ್ಧರಿಸುವ’ ಕಾರ್ಯವನ್ನು ‘ಧರ್ಮಗುರು’ಗಳು ಮಾಡಲಿ.
೭. ಜೀವನದಲ್ಲಿ ತೀವ್ರ ಕಷ್ಟಕಾರ್ಪಣ್ಯಗಳು ಎದುರಾದಾಗ ಅವುಗಳ ತೀವ್ರತೆ ಕಮ್ಮಿ ಮಾಡಲು ಅಂತಃವೀಕ್ಷಣೆ ಮಾಡಿಕೊಂಡು ತನ್ನಲ್ಲಿ ಇರುವ ಅಯುಕ್ತ ಮನೋಧರ್ಮವನ್ನು ಬದಲಿಸಿಕೊಳ್ಳುವುದು ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರ ಹೊರತಾಗಿ ಬೇರೆ ಯಾವುದೇ ಉಪಾಯಗಳಾಗಲೀ ಕಿರುಹಾದಿಗಳಾಗಲೀ ಇಲ್ಲ. (ಪುನರ್ಜನ್ಮ ಇರುವುದು ನಿಜವಾದರೆ) ಆತ್ಮಹತ್ಯೆ ಸಮಸ್ಯೆಯನ್ನು ಪರಿಹರಿಸುವುದಿಲ್ಲ, ‘ಆತ್ಮ’ ಮುಂದೊಂದು ಜನ್ಮದಲ್ಲಿ ಅದೇ ಸನ್ನಿವೇಶವನ್ನು ಪುನಃ ಎದುರಿಸಲೇ ಬೇಕು. ಆತ್ಮವನ್ನು ಸಂಸ್ಕರಿಸಲು ಅಗತ್ಯವಾದ ಅನುಭವಗಳನ್ನು ಒದಗಿಸುವುದು ಪುನರ್ಜನ್ಮದ ಉದ್ದೇಶವಾಗಿರುವಂತೆ ತೋರುತ್ತದೆಯೇ ವಿನಾ ದಂಡಿಸುವುದು ಅಥವಾ ಪುರಸ್ಕರಿಸುವುದು ಆಗಿರುವಂತೆ ತೋರುವುದಿಲ್ಲ.
ಕರ್ಮಸಿದ್ಧಾಂತ ಸರಿಯೋ ತಪ್ಪೋ, ಪುರ್ನಜನ್ಮ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಭೌತ ಪ್ರಪಂಚದ ಪ್ರತೀ ವಿದ್ಯಮಾನವನ್ನು ವಿವರಿಸಬಲ್ಲ ಕಾರಣ-ಪರಿಣಾಮ ಸಂಬಂಧ ಆಧಾರಿತ ನಿಯಮ ಇದೆ ಅಂದ ಮೇಲೆ ಜೀವಜಗತ್ತಿನ ಜೀವನಶೈಲಿಯನ್ನು ನಿಯಂತ್ರಿಸಲು ಮತ್ತು ಹುಟ್ಟು-ಸಾವುಗಳನ್ನು ನಿಯಂತ್ರಿಸಲು ಮಾತ್ರ ಯಾವ ನೈಸರ್ಗಿಕ ನಿಯಮವೂ ಇಲ್ಲ ಎಂಬುದನ್ನು ‘ಜೀರ್ಣಿಸಿಕೊಳ್ಳಲು’ ನನಗೆ ಸಾಧ್ಯವಾಗಿಲ್ಲ. ಕರ್ಮಸಿದ್ಧಾಂತ ಪ್ರತಿಪಾದಿಸುವ ನಿಯಮಗಳನ್ನು (ಇವನ್ನು ನಾನು ಅರ್ಥ ಮಾಡಿಕೊಂಡಂತೆ ವಿವರಿಸಿದ್ದೇನೆ) ಆಧರಿಸಿ ನಮ್ಮ ಜೀವನಶೈಲಿ ರೂಪಿಸಿಕೊಂಡಲ್ಲಿ ಈ ಜಗತ್ತು ಇನ್ನೂ ಸುಂದರವಾಗುತ್ತದೆ ಎಂದು ನಂಬಿದ್ದೇನೆ. ಉಳಿದದ್ದು ನಿಮಗೆ ಬಿಟ್ಟದ್ದು. ನಿಮ್ಮ ಭವಿಷ್ಯದ ರೂವಾರಿಗಳು ನೀವೇ ಎಂಬುದನ್ನು ಒಪ್ಪುತ್ತೀರಾದ್ದರಿಂದ.
* * * * * * * *
ಚಿತ್ರಕೃಪೆ : ಅಂತರ್ಜಾಲ