ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 24, 2011

1

ಸಂಸ್ಕೃತಿ ಸಂಕಥನ – ೧೨- ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ

‍ನಿಲುಮೆ ಮೂಲಕ

– ರಮಾನಂದ ಐನಕೈ

ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ

ಕೆಲವು ವೈದ್ಯರಿರುತ್ತಾರೆ. ಔಷಧಿ ಕೊಟ್ಟಾಕ್ಷಣ ರೋಗ ವಾಸಿಯಾಗುತ್ತದೆ. ನಾವಂದುಕೊಳ್ಳುತ್ತೇವೆ ‘ಅವರು ತುಂಬಾ ಚೆನ್ನಾಗಿ ಔಷಧಿ ಕೊಡುತ್ತಾರೆ’ ಎಂದು. ಹಾಗಾದರೆ ಮಾರುಕಟ್ಟೆಯಲ್ಲಿ ಎಷ್ಟೊಂದು ವೈವಿಧ್ಯಮಯವಾದ ಔಷಧಿಗಳು ಸಿಗುತ್ತವೆ. ಎಲ್ಲ ವೈದ್ಯರು ಕೊಡಬಹುದಲ್ಲ? ಇಲ್ಲೇ ಇದೆ ಸೂಕ್ಷ್ಮ. ವೈದ್ಯರ ಯಶಸ್ಸು ಇರುವುದು ಔಷಧಿ ಕೊಡುವುದರಲ್ಲೊಂದೇ ಅಲ್ಲ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯಲ್ಲಿರುವ ರೋಗ ಪತ್ತೆಮಾಡುವುದರಲ್ಲಿರುತ್ತದೆ. ಒಮ್ಮೆ ರೋಗ ಗೊತ್ತಾದರೆ ಅದಕ್ಕೆ ಔಷಧ ಯಾವುದೆಂಬುದು ವೈದ್ಯಕೀಯ ಸಾಮಾನ್ಯಜ್ಞಾನ.

ಸದ್ಯದ ಸಮಾಜವಿಜ್ಞಾನ ಪ್ರಕಾರ ಭಾರತೀಯ ಸಮಾಜದ ಪರಿಸ್ಥಿತಿಯೂ ಇದೇ ಆಗಿದೆ. ಭಾರತೀಯ ಸಮಾಜ ವ್ಯವಸ್ಥೆ ಸರಿಯಾಗಿಲ್ಲ. ಮೌಢ್ಯ ಮತ್ತು ಅಸಮಾನತೆಯಿಂದ ಕೊಳೆಯುತ್ತ ರೋಗಗ್ರಸ್ತವಾಗಿವೆ ಎಂಬುದು ಚಿಂತಕರ ಅಭಿಮತ. ಜಾತಿವ್ಯವಸ್ಥೆ ಭಾರತೀಯಸಮಾಜಕ್ಕೆ ಅಂಟಿಕೊಂಡ ದೊಡ್ಡ ರೋಗ. ಹಾಗಾಗಿ ಈ ರೋಗ ಹೋಗಬೇಕಾದರೆ ಜಾತಿವ್ಯವಸ್ಥೆಯನ್ನು ಆಮೂಲಾಗ್ರವಾಗಿ ನಾಶಮಾಡಬೇಕು ಎಂಬ ಮಾತು ದಿನನಿತ್ಯ ಕೇಳಿಬರುತ್ತವೆ. ಭಾರತೀಯ ಸಮಾಜಕ್ಕೆ ಈ ರೀತಿಯ ರೋಗವಿದೆಯೆಂಬ ತಿಳುವಳಿಕೆ ಎಲ್ಲಿಂದ ಬಂತು? ಇದು ನಿಜವಾಗಿಯೂ ರೋಗ ಹೌದೋ ಎಂಬುದರ ಬಗ್ಗೆ ನಾವು ಚಿಂತಿಸಿಲ್ಲ. ನೂರಾರು ವರ್ಷಗಳಿಂದ ಹಲವಾರು ರೀತಿಯ ಔಷಧ ಮಾಡುತ್ತಲೇ ಬಂದಿದ್ದೇವೆ. ರೋಗ ಗುಣಾಗುವುದರ ಬದಲು ಉಲ್ಭಣಿಸುತ್ತ ಬಂದಿದೆ. ಅಂದರೆ ನಾವು ರೋಗವನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಹಾಗಾಗಿ ನಾವು ನೀಡುವ ಔಷಧಿಗಳು ವ್ಯರ್ಥವಾಗುತ್ತಿವೆ. ರೋಗ ಇಲ್ಲದೆಯೇ ಔಷಧ ಕೊಡುವುದು ಅಥವಾ ಸರಿಯಾದ ರೋಗಕ್ಕೆ ಸರಿಯಾದ ಔಷಧ ಕೊಡದೇ ಇರುವುದು ಯಾವತ್ತೂ ಅಪಾಯ. ಅದು ದೊಡ್ಡ ರೋಗಕ್ಕೆ ನಾಂದಿಯಾಗುತ್ತದೆ.

ಹಾಗಾದರೆ ಭಾರತೀಯ ಸಮಾಜಕ್ಕೆ ಎಲ್ಲರೂ ಬೊಬ್ಬೆ ಹೊಡೆದುಕೊಳ್ಳುವಂತಹದ್ದು ಏನು ಆಗಿದೆ? ಇದನ್ನು ಕಂಡು ಹಿಡಿಯಲು ಒಬ್ಬ ನುರಿತ ವೈದ್ಯರೇ ಬೇಕು. ಅಂತಹ ಅಪರೂಪದ ಹಕೀಮರು ಪ್ರಸ್ತುತ ಭಾರತೀಯ ಸಮಾಜ ವಿಜ್ಞಾನದಲ್ಲಿ ಪ್ರವೇಶಕ್ಕೆ ಬಂದಿದ್ದಾರೆ. ಅವರೇ ಪ್ರೊ. ಬಾಲಗಂಗಾಧರರು. ಮೊದಲು ಈ ಹಕೀಮರು ಕೇಳುವ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುವಾ.

ಪ್ರಶ್ನೆ : ನಿಜವಾಗಲೂ ಭಾರತದಲ್ಲಿ ‘ಜಾತಿ ವ್ಯವಸ್ಥೆ’ ಅನ್ನುವುದು ಇದೆಯಾ?

ಉತ್ತರ: ಗೊತ್ತಿಲ್ಲ, ಹಲವಾರು ಜಾತಿಗಳಿವೆ. ಇದೂ ಒಂದು ವ್ಯವಸ್ಥೆ.

ಪ್ರಶ್ನೆ: ಈ ವ್ಯವಸ್ಥೆಯ ಸಂವಿಧಾನ ಶಿಲ್ಪಿಗಳು ಯಾರು?

ಉತ್ತರ: ಬ್ರಾಹ್ಮಣರು ಹಾಗೂ ಮೇಲ್ವರ್ಗ ದವರು.

ಪ್ರಶ್ನೆ: ಅದು ಹೇಗೆ ಹೇಳುತ್ತೀರಿ?

ಉತ್ತರ: ನಮ್ಮ ವರ್ಣಾಶ್ರಮ ವರ್ಣನೆಯಲ್ಲಿ ಅವರೇ ಮೊದಲಿದ್ದಾರೆ. ಅದಕ್ಕೆ.

ಪ್ರಶ್ನೆ: ನಿಮ್ಮ ಹೇಳಿಕೆಗೆ ಆಧಾರ ಯಾವುದು?

ಉತ್ತರ: ನಾವು ಓದುತ್ತಿರುವ ಸಮಾಜವಿಜ್ಞಾನ.

ಪ್ರಶ್ನೆ : ಕೇವಲ ಸಮಾಜ ವಿಜ್ಞಾನವೊಂದೇ ಆಧಾರವಾ?

ಉತ್ತರ: ಸಮಾಜದ ಬಗ್ಗೆ ಅಧ್ಯಯನ ಮಾಡಿದವರು ಹಾಗೂ ಸಾಹಿತಿಗಳು ಕೂಡಾ ಇದನ್ನೇ ಹೇಳುತ್ತಾರೆ.

ಪ್ರಶ್ನೆ: ನಮ್ಮ ಸಮಾಜ ವಿಜ್ಞಾನಗಳನ್ನು ಬರೆದವರು ಯಾರು?

ಉತ್ತರ:ಬಹಳ ಹಿಂದೆಯೇ ಪಾಶ್ಚಾತ್ಯರು ಬರೆದಿದ್ದಾರೆ.

ಪ್ರಶ್ನೆ: ಅವರು ಬರೆದದ್ದೆಲ್ಲ ನಿಜ ಎಂದು ಹೇಗೆ ನಂಬುತ್ತೀರಿ?

ಉತ್ತರ: ವಿಶ್ವಾಸವಿದೆ. ಅವರು ನಿಜ ಅನಿಸಿದ್ದನ್ನು ಮಾತ್ರ ಬರೆದಿದ್ದಾರೆ. ಹಾಗಾಗಿ ನಂಬಲೇಬೇಕು.

ಪ್ರಶ್ನೆ: ಅವರು ಯಾರಿಗೆ ನಿಜ ಅನಿಸಿದ್ದನ್ನು ಬರೆದಿದ್ದಾರೆ.

ಉತ್ತರ:’…….’

ಪ್ರಶ್ನೆ: ತಮಗೆ ನಿಜ ಅನಿಸಿದ್ದನ್ನು ಬರೆದಿರಬಹುದಲ್ಲವೇ?

ಉತ್ತರ: ‘…….’

ಪ್ರಶ್ನೆ: ಹೌದು, ಅವರಿಗೆ ನಿಜ ಅನಿಸಿದ್ದನ್ನು ಬರದಿದ್ದಾರೆ. ಆದರೆ ಅದು ನಮ್ಮ ನಿಜ ಆಗಿರಲೇಬೇಕೆಂದೇನೂ ಇಲ್ಲವಲ್ಲ? ಹಾಗಾಗಿ ಭಾರತೀಯ ‘ಜಾತಿ ವ್ಯವಸ್ಥೆಗೆ’ನಾವು ನೀಡುತ್ತಿರುವ ಔಷಧಿ ತಪ್ಪಾಗಿರುವ ಸಾಧ್ಯತೆಯೂ ಇದೆ ಅಲ್ಲವೇ?

ಉತ್ತರ: ಇರಬಹುದು.

ಈ ಹೊಸ ಹಕೀಮರೆದುರು ನಾವು ನಿರುತ್ತರಿಗಳಾಗುವುದರಿಂದ ಬೇರೆ ರೀತಿಯಲ್ಲಿ ಗ್ರಹಿಸಲು ಪ್ರಯತ್ನಿಸುವುದು ಅನಿವಾರ್ಯ.

ಭಾರತದಲ್ಲಿ ಜಾತಿಗಳಿಲ್ಲ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ ಹಾಗೂ ಭಾರತದಲ್ಲಿ ಸಮಾಜ ವ್ಯವಸ್ಥೆಯೂ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ಭಾರತೀಯ ಸಮಾಜ ಜಾತಿ ವ್ಯವಸ್ಥೆಯಿಂದ ನಿರ್ಮಾಣವಾಗಿದೆ ಎಂಬುದಕ್ಕೆ ಖಂಡಿತ ಆಧಾರಗಳಿಲ್ಲ.

‘ವ್ಯವಸ್ಥೆ’ ಅಂದರೆ ಒಂದು ನಿರ್ದಿಷ್ಟವಾದ ರಚನೆ (ಸ್ಟ್ರಕ್ಚರ್) ಅದಕ್ಕೆ ಅದರದ್ದೇ ಆದ ನಿಯಮಾವಳಿಗಳು, ಲಕ್ಷಣಗಳು ಇರುತ್ತವೆ. ಹಾಗೂ ಇದೇ ರಚನೆಯ ಆಧಾರದ ಮೇಲೆ ಆ ವ್ಯವಸ್ಥೆ ಪುನರ್ ಕಟ್ಟಲ್ಪಡುತ್ತ ಹೋಗುತ್ತದೆ. ನಮ್ಮ ಭಾರತೀಯ ಯಾವುದೇ ಜಾತಿಗಳಲ್ಲಿ ಈ ರೀತಿಯ ಸುಸಂಬದ್ಧವಾದ ರಚನೆಯನ್ನು ಕಾಣಲು ಸಾಧ್ಯವಿಲ್ಲ. ಯಾವುದೇ ಜಾತಿಯೂ ಈ ರೀತಿಯಿಂದ ವ್ಯವಸ್ಥಿತವಾದ ರಚನೆಯ ಮೂಲಕ ಕಟ್ಟಲ್ಪಡುತ್ತ ಬಂದಿಲ್ಲ. ಎಲ್ಲ ಜಾತಿಗಳೂ ಒಂದಕ್ಕೊಂದು ತಾಕರ್ಿಕ ಸಂಬಂಧಗಳನ್ನು ಹೊಂದಿ ವ್ಯವಸ್ಥೆಯ ರೂಪ ಪಡೆಯುವಂತಹ ರಚನೆಗಳೂ ನಮ್ಮಲ್ಲಿಲ್ಲ. ಹಾಗಾಗಿ ಭಾರತೀಯ ಜಾತಿಗಳಿಗೆ ‘ವ್ಯವಸ್ಥೆ’ಯ ಸ್ವರೂಪ ಇಲ್ಲ. ಇದೆ ಅನ್ನುವುದಕ್ಕೆ ಯಾವ ಆಧಾರಗಳೂ ಸಿಕ್ಕಿಲ್ಲ. ಸಮಾಜದಲ್ಲಿ ವೈಷಮ್ಯ ಇದೆ ಎಂಬ ಕಾರಣಕ್ಕೆ ಅದು ಜಾತಿವ್ಯವಸ್ಥೆ   ಅನ್ನುವಹಾಗಿಲ್ಲ. ಹಾಗೊಂದೊಮ್ಮೆ ತರ್ಕಿಸಿದರೆ ಜಗತ್ತಿನ ಎಲ್ಲ ದೇಶಗಳಲ್ಲಿ ಜಾತಿವ್ಯವಸ್ಥೆ ಇದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಇಂಥ ವೈಷಮ್ಯ ಎಲ್ಲ ಕಡೆಯಲ್ಲೂ ಇದೆಯಲ್ಲ!

ಭಾರತದಲ್ಲಿ ಜಾತಿ ಅನ್ನುವುದು ಆಚರಣೆಯಲ್ಲಿ ಮುಂದುವರಿಯುತ್ತಾ ಬಂದದ್ದು. ನಮ್ಮಲ್ಲಿ ಜಾತಿ ಅನ್ನುವುದೂ ಒಂದು ಸಂಪ್ರದಾಯದ ಮುಂದುವರಿಕೆ. ಹಾಗಾಗಿ ಅವರವರ ಸಂಪ್ರದಾಯದ ಲಕ್ಷಣಗಳೇ ಅವರ ಜಾತಿಯ ಲಕ್ಷಣಗಳಾಗಿರುತ್ತವೆಯೇ ವಿನಾ ಬೇರೆ ರೀತಿಯ ರಚನೆ ಕಾಣಲಾರದು. ಜಾತಿ ಅಂದರೆ ‘ವರ್ಣ’ ಅಲ್ಲ ಎಂಬ ಬಗ್ಗೆ ಈಗಾಗಲೇ ಚಿಂತಕರೆಲ್ಲ ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ. ಆದ್ದರಿಂದ ವರ್ಣಾಶ್ರಮ ಖಂಡಿತ ಜಾತಿವ್ಯವಸ್ಥೆ ಅಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ. ನಮ್ಮಲ್ಲಿ ಜಾತಿಗಳನ್ನು ನಿರ್ದೇಶಿಸುವ ಯಾವುದೇ ತತ್ವಗಳೂ ಕೂಡ ಸಿಗುವುದಿಲ್ಲ.

ಹೀಗಿದ್ದಾಗ ಜಾತೀಯ ಶೋಷಣೆ ಎಂಬುದಕ್ಕೆ ಅರ್ಥವೇ ಇಲ್ಲ. ಸಮಾಜದಲ್ಲಿ ಬೇರೆ ಬೇರೆ ಲೌಕಿಕ ಕಾರಣ ಕ್ಕಾಗಿ ಒಬ್ಬರನ್ನೊಬ್ಬರು ಅವಲಂಬಿಸುವ ಸಂದರ್ಭ ಎದುರಾಗಬಹುದೇ ವಿನಾ ಜಾತೀಯ ಕಾರಣಕ್ಕಾಗಿ ಈ ಅವಲಂಬನೆಯನ್ನು ಕಾಣಲು ಸಾಧ್ಯವಿಲ್ಲ. ಅಂತಹ ಯಾವ ಸಂವಿಧಾನಿಕ ಚೌಕಟ್ಟು ಯಾವ ಜಾತಿಗೂ ಇಲ್ಲ. ಇನ್ನೂ ಸರಳವಾಗಿ ಹೇಳ ಬಹುದಾದರೆ ಅವರವರ ಜಾತಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂಬ ಯಾವ ನಿರ್ಬಂಧಗಳೂ ಇಲ್ಲ. ಹಾಗಿದ್ದಾಗ ಜಾತಿಗಳು ಸಮಾನತೆಗೆ ಅಡ್ಡಿಯಾಗಿವೆ ಎಂಬ ವಾದಕ್ಕೆ ಹುರುಳಿಲ್ಲ. ಇವುಗಳೆಲ್ಲ ಚಿಂತಕರು ಜನರ ಮನಸ್ಸಿನಲ್ಲಿ ಬಿಡುತ್ತಿರುವ ವಿಷಜಂತುಗಳು. ಇಲ್ಲಿಯವರೆಗೆ ಅವರೆಲ್ಲ ಸಮಾನತೆಗಾಗಿ ಯಾವ್ಯಾವ ಔಷಧಿಗಳನ್ನು ನೀಡುತ್ತ ಬಂದಿದ್ದಾರೋ ಅವೆಲ್ಲವೂ ಅಸಮಾನತೆ ಸೃಷ್ಟಿಸುವ ಬೀಜ ಮಂತ್ರಗಳೆ. ಈ ಅರ್ಥದಲ್ಲಿ ಇಂದು ಅಸಮಾನತೆಯ ಕುರಿತು ಮಾತನಾಡುವ ಯಾವುದೇ ಜಾತಿಯ ಒಬ್ಬ ಚಿಂತಕ ತನ್ನ ಜಾತಿಯವರನ್ನಾದರೂ ಸಮಾನವಾಗಿ ನೋಡಿದ್ದಾನೋ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಇಂದು ಜಾತಿ ವಿನಾಶದ ಕುರಿತು ಮಾತನಾಡುವ ಪ್ರತಿಯೊಬ್ಬರದ್ದೂ  ತಮ್ಮ ಅಸ್ತಿತ್ವದ ಒರಸೆಯೇ ವಿನಾ ಅದರಲ್ಲಿ ಅದಕ್ಕಿಂತ ಹೆಚ್ಚಿನ ದೃಷ್ಟಿ ಏನೂ ಇಲ್ಲ.

ಆಧುನಿಕ ಚಿಂತಕರೇನು ಕಡಿಮೆ ಪ್ರತಿಭಾವಂತರಲ್ಲ. ಸಮಾನತೆಗಾಗಿ ಅವರೊಂದು ಸೂತ್ರವನ್ನೇ ಮಾಡಿದ್ದಾರೆ! ಸಮಾನತೆ ಬರಬೇಕಾದರೆ ‘ಜಾತಿವ್ಯವಸ್ಥೆ’ ಹೋಗಬೇಕು. ಜಾತಿವ್ಯವಸ್ಥೆ ಅಳಿಯಬೇಕಾದರೆ ಜಾತಿಗಳನ್ನು ನಾಶ ಮಾಡಬೇಕು. ಯಾವ ಜಾತಿ ನಾಶವಾಗಬೇಕೆಂಬ ಇವರ ಒಳದನಿ ಇನ್ನೂ ಹೊರಗೆ ಬಂದಿಲ್ಲ. ಈ ಜಾತಿ ನಾಶ ಮಾಡಲು ಹತ್ತಾರು ಅಂಶಗಳನ್ನು ಸೂಚಿಸುತ್ತಿದ್ದಾರೆ. ಅಂತರ್ಜಾತೀಯ ವಿವಾಹಗಳಿಂದ ಜಾತಿನಾಶ ಆಗುತ್ತದೆ ಎಂಬುದು ಒಂದು ಹೇಳಿಕೆ. ಎರಡು ವಿಭಿನ್ನ ಜಾತಿಯವರು ಮದುವೆಯಾದರೆ ಯಾವುದಾದರೂ ಒಂದು ಜಾತಿಯೊಂದಿಗೆ ಮುಂದುವರಿಯುತ್ತಾರೇ ವಿನಾ ಜಾತಿ ಬಿಟ್ಟು ಬದುಕುವುದೆಂದರೇನು? ಇನ್ನೊಂದು ಸ್ವಾರಸ್ಯಕರ ಚಿಂತನೆ ಇದೆ. ಅಂತರ್ಜಾತೀಯ ವಿವಾಹವಾದವರಿಗೆ ಮಾತ್ರ ಸರಕಾರಿ ನೌಕರಿ ಕೊಡುವ ಕಾನೂನು ಮಾಡ ಬೇಕಂತೆ! ಓದು ಬರಹ ಬೇಡೇಬೇಡ. ಮದುವೆ ವಯಸ್ಸು ಬರುವವರೆಗೆ ಕಾದರಾಯಿತು. ನೌಕರಿ ಗ್ಯಾರೆಂಟಿ. ಮುಂದೆ ಮದುವೆ ವಯಸ್ಸಿನ ಗಡಿ ಹಿಂದೂಡಬೇಕೆಂಬ ಚಳವಳಿ ಪ್ರಾರಂಭ. ಅಂದರೆ ಎಲ್ಲರೂ ವಾಪಸ್ ಬಾಲ್ಯ ವಿವಾಹಕ್ಕೆ! ಇಂಥವುಗಳೆಲ್ಲ ಸಮಾನತೆ ಸಾಧಿಸಲು ಸರಿಯಾದ ಮದ್ದುಗಳಲ್ಲ ಎಂಬುದು ಎಂಥ ದಡ್ಡನಿಗೂ ತಿಳಿಯುತ್ತದೆ.

ಜಾತಿ ಅನ್ನುವುದು ಸಂಪ್ರದಾಯಗಳ ಮೂಲಕ ಮುನ್ನಡೆಯುವುದರಿಂದ ಪ್ರತೀ ಜಾತಿಯ ಜೊತೆಗೆ ಅದರದೇ ಆದ ಆಚಾರ, ವಿಚಾರ, ಸಂಪ್ರದಾಯ ಇರುತ್ತದೆ. ಪ್ರತಿಯೊಬ್ಬರೂ ಜಾತೀಯ ವಿವಾಹಗಳನ್ನು ಪುರಸ್ಕರಿಸುವುದು ಈ ಕಾರಣಕ್ಕಾಗಿಯೇ. ಒಂದೇ ಸಂಪ್ರದಾಯದವರಾದರೆ ಹೊಂದಿಕೊಂಡು ಹೋಗುವುದು ಸುಲಭ. ಅರ್ಥ ಮಾಡಿಕೊಳ್ಳುವುದು ಸುಲಭ. ಎಷ್ಟೋ ಸಲ ದಾಂಪತ್ಯದಲ್ಲಿ ವಿರಸ ಬರುವುದು ಚಿಕ್ಕ ಪುಟ್ಟ ಕ್ಷುಲ್ಲಕ ಸಂಗತಿಗಳಿಗಾಗಿ. ಎರಡು ವಿಭಿನ್ನ ಸಂಪ್ರದಾಯದವರು ಒಟ್ಟಾಗಿರಬೇಕಾದರೆ ಆಚಾರ, ವಿಚಾರ, ಜೀವನಶೈಲಿ, ಊಟ, ತಿಂಡಿ, ಆಚರಣೆ – ಹೀಗೆ ವೈರುಧ್ಯಗಳಿಗೆ ಅಸಂಖ್ಯಾತ ಕಾರಣಗಳು ಎದುರಾಗುತ್ತವೆ. ಈ ಸೂಕ್ಷ್ಮ ಕಾರಣಗಳಿಗಾಗಿಯೇ  ಜಾತಿಗಳನ್ನು ರಾಷ್ಟ್ರಿಕರಣ ಮಾಡದೆ ಬಿಟ್ಟಿದ್ದಾರೆ!

ಬಹುಮುಖ್ಯವಾದ ಸತ್ಯ ಅಂದರೆ ಜಾತಿಗಳನ್ನು ನಾಶ ಮಾಡುವುದು ಅಂದರೆ ನಮ್ಮ ಸಂಪ್ರದಾಯಗಳನ್ನು ಕೊಲ್ಲುವುದು. ಜಾತಿಯನ್ನು ತಿರಸ್ಕರಿಸಿ ಅಂದರೆ ನಿಮ್ಮ ಸಂಪ್ರದಾಯಗಳನ್ನು ತಿರಸ್ಕರಿಸಿರಿ ಅಂತಲೇ. ಸಂಪ್ರದಾಯಗಳನ್ನು ತಿರಸ್ಕರಿಸಲಿಕ್ಕೆ ನಮಗೆ ಕಾರಣಗಳು ಬೇಕಾಗುತ್ತದೆ. ನಮ್ಮಲ್ಲಿ ಅಂತಹ ಕಾರಣಗಳೇ ಇಲ್ಲ. ನಮ್ಮ ಸಂಪ್ರದಾಯಗಳಿಗೆ ಸಹಿಷ್ಣತೆ ಇದೆ. ಒಂದು ಸಂಪ್ರದಾಯ ಇನ್ನೊಂದು ಸಂಪ್ರದಾಯವನ್ನು ಗೌರವಿಸುತ್ತದೆ. ಹಾಗಾಗಿ ಸಂಪ್ರದಾಯಗಳೇ ಅರಿವಿನ ಮೂಲಕ ಸಮಾನತೆ ಸಾಧಿಸುವ ಶಕ್ತಿಗಳನ್ನು ಹೊಂದಿವೆ. ಸಂಪ್ರದಾಯಗಳ ಈ ಪರಿವರ್ತಕ ಶಕ್ತಿಯೇ ಕಾಲಾಂತರದಲ್ಲಿ ಸಾಮಾಜಿಕ ಸಮಾನತೆಗೆ ಒಗ್ಗಿ ಕೊಳ್ಳುತ್ತವೆ. ಕೊನೆಯದಾಗಿ ಒಂದು ವಿಜ್ಞಾಪನೆ! ಸ್ವಲ್ಪ ಕಾಲ ಚಿಂತಕರೆಲ್ಲ ಬಾಯಿಗೆ ಬೀಗ ಹಾಕಿಕೊಂಡು ಕೂಡ್ರಲಿ.  ತನ್ನಿಂದ ತಾನೇ ಸಮಾನತೆ ಬರುತ್ತದೆ. ಬಾಯಿ ಬಿಟ್ಟಿರೋ ನೀವೇ ಅಸಮಾನತೆಗೆ ಕಾರಣೀಕರ್ತರಾಗುತ್ತೀರಿ.

* * * * * * *

ಚಿತ್ರಕೃಪೆ : ಅಂತರ್ಜಾಲ

1 ಟಿಪ್ಪಣಿ Post a comment
  1. ಲೋಹಿತ್
    ಡಿಸೆ 7 2011

    ಹಾಗಾದರೆ ಸಮಾನತೆಗೆ ಸುಮ್ಮನೆ ಕೂಡುವುದೇ ಉತ್ತರವೇ ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments