ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 25, 2011

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 12 -ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು

‍ನಿಲುಮೆ ಮೂಲಕ

-ರಾಮಚಂದ್ರ ಪಿ

ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ಇಲ್ಲ. ನಾನು ಬಣ್ಣ ತೆಗೆಯುತ್ತಿದ್ದಲ್ಲಿಗೆ ಬಂದ ಕಟ್ಪಾಡಿಯ ಶ್ರೀ ಮುದ್ದು ಸುವರ್ಣರು ನಮ್ಮೂರಿಗೆ ಬನ್ನಿ ಎಂದು ವೀಳ್ಯ ಕೊಟ್ಟರು. ಅವರ ಹಿಂದೆಯೇ ಇನ್ನಿಬ್ಬರು ಬಂದರು. ಅವರಿಗಿಂತಲೂ ಮೊದಲೇ 3 ಆಟಗಳಿಗೆ ವೀಳ್ಯ ಪಡೆದಿದ್ದ ಫಲಿಮಾರಿಗೆ, ಮಾತು ಕೊಟ್ಟಂತೆ ಹೋಗಿ ಆಟಗಳನ್ನು ಆಡಿದೆವು.

ಅಲ್ಲಿಯೂ “ಬ್ರಹ್ಮ ಕಪಾಲ”. ಅದನ್ನು ನೋಡಲು ಉಡುಪಿ, ಮಲ್ಪೆ, ಕಲ್ಯಾಣಪುರಗಳಿಂದ ಜನರು ಬಂದಿದ್ದರು. ಅವರೆಲ್ಲ ಹಿಂತಿರುಗಿದಾಗ ಮಾಡಿದ್ದ ಪ್ರಚಾರವೇ ನಾವು ಕಟ್ಪಾಡಿ-ಕಾಪುಗಳ ಆಟ ಮುಗಿಸಿ, ಮಲ್ಪೆಯ ಸಮೀಪದ ಕ್ರೋಢಪುರಕ್ಕೆ (ಅದಕ್ಕೆ ಶಂಕರ ನಾರಾಯಣವೆಂಬ ಹೆಸರೂ ವಾಡಿಕೆಯಲ್ಲಿದೆ) ಬಂದಾಗ, ನಮಗೆ ಬಡಗು ನಾಡಿನಿಂದ ಅನಿರೀಕ್ಷಿತ ಸ್ವಾಗತವನ್ನು ಕೊಡಿಸಿತು.

“ವಿಶ್ವಾಮಿತ್ರ-ಮೇನಕೆ” ಮತ್ತು “ಕಂಸವಧೆ” ಎಂಬ ಎರಡು ಕಥಾಭಾಗಗಳನ್ನು ಇರಿಸಿಕೊಂಡು ಕ್ರೋಢಪುರದಲ್ಲಿ ನಾವು ಆಟವಾಡಿದೆವು. ಮೊದಲು ವಿಶ್ವಾಮಿತ್ರನಾಗಿಯೂ,ಅನಂತರ ಕೃಷ್ಣನಾಗಿಯೂ ಪಾತ್ರ ವಹಿಸಿದ ನಾನು, ಪ್ರೇಕ್ಷಕರ ಹರ್ಷಭರಿತ ಕರತಾಡನಗಳ ಆನಂದವನ್ನು ಅನುಭವಿಸುತ್ತಿದ್ದೆ. ಜನಸಮೂಹದಲ್ಲಿದ್ದ, ಅಲ್ಲಿನ ಪಂಡಿತರೊಬ್ಬರು ನಮಗೆಲ್ಲ ಹಾರ ಸಮರ್ಪಣೆ ಮಾಡಿದರು.

ನಡುವೆ, ಅಂತಹ ಕಾರಣದಿಂದ ಕೆಲವು ನಿಮಿಷಗಳ ಕಾಲ ಬಿಡುವು ದೊರೆತರೆ, ಮುಂದಿನ ಆಟ ನಡೆಯಲಿರುವ ಸ್ಥಳವನ್ನು ರಂಗಸ್ಥಳದಿಂದ ಕರೆದು ಹೇಳುವ ಪದ್ಧತಿ. ಮುಂದಿನ ಒಂದು ದಿನದ ವಿವರವನ್ನು ಸಾರಲೆಂದು ಹಾಸ್ಯಗಾರರು ರಂಗಸ್ಥಳವನ್ನು ಸೇರುವಾಗಲೇ ಅವರ ಕೈಗೆ ಆರು ಕಡೆಗಳ ಆಟ ನಿರ್ಣಯವಾದ ಚೀಟಿ ಸೇರಿತು. ಅವುಗಳನ್ನೂ ಹೇಳತೊಡಗಿದಾಗ ಇನ್ನೂ ಕೆಲವು ಸ್ಥಳಗಳೂ ತಾರೀಕುಗಳೂ ಸೂಚಿಸಲ್ಪಟ್ಟವು. ಬೇಡಿಕೆ ಹೆಚ್ಚುವ ಸೂಚನೆ ಕಂಡು ಬಂದಾಗ, ಮುಂದಿನ ಎಲ್ಲ (ನಿಶ್ಚಯವಾದ) ಆಟಗಳ ಕುರಿತು ಸ್ಥಳ ಮತ್ತು ತಾರೀಕುಗಳ ಒಂದು ಯಾದಿಯನ್ನು ತಯಾರಿಸಿ ಅವರ ಕೈಗೆ ಕೊಟ್ಟಾಗ, ಒಟ್ಟು 33 ಆಟಗಳು ನಿಶ್ಚಯವಾದುದು ಗೊತ್ತಾಯಿತು.

ಆಟಗಳ ದಾಖಲೆ 
“ಅಡ್ವಾನ್ಸ್ ಬುಕ್ಕಿಂಗ್”ನಲ್ಲಿ 33 ಆಟಗಳ ದಾಖಲೆಯನ್ನು ನಿರ್ಮಿಸಿದ ತಂಡ ನಮ್ಮದು ಮಾತ್ರವೇ ಎಂದು ಈಗಲೂ ಹೇಳಬಲ್ಲೆ.

ಉಡುಪಿಯಲ್ಲಿ- ಶ್ರೀ ಕೃಷ್ಣ ಸನ್ನಿಧಿಯಲ್ಲಿ ಶ್ರೀ ಶಿರೂರು ಮಠಾಧೀಶರ ಆಶ್ರಯದಲ್ಲಿ ಆಟವಾಡಿ, ಶಾಲು ಜೋಡಿ- ಫಲ ಮಂತ್ರಾಕ್ಷತೆ- ಮಾನಪತ್ರಗಳನ್ನು ಪಡೆದೆವು. ಒಂದು ವಾರ ಕಳೆದು ಶ್ರೀ ಪೇಜಾವರ ಮಠದ ರಾಜಾಂಗಣದಲ್ಲಿ ಆಡಿ, ಶ್ರೀ ಮಠಾಧೀಶರಿಂದ ಶಾಲು ಜೋಡಿ ಪಡಕೊಂಡೆವು.

ಯಶಸ್ವೀ ಪ್ರದರ್ಶನಗಳನ್ನೇ ಮಾಡುತ್ತಾ ಮುಂದುವರಿದ, ಎಷ್ಟೋ ಊರುಗಳಲ್ಲಿ ಆಟವಾಡಿಸಿದ ಮತ್ತು ಆಟ ನೋಡಲು ಬಂದ ಕಲಾಭಿಮಾನಿಗಳು ಭಾಗವತರಾದಿಯಾಗಿ ಕೂಲಿಯಾಳುಗಳವರೆಗೆ ಎಲ್ಲರಿಗೂ ಜರಿಶಾಲು- ಧೋತಿಗಳ ಸನ್ಮಾನ ಮಾಡಿದರು.

ಕುಂದಾಪುರ, ಶಂಕರನಾರಾಯಣ, ಬೈಂದೂರು ಈ ಕಡೆಗಳಿಗೆ-ಆಹ್ವಾನದ ಮೇಲೆಯೇ- ಮುಟ್ಟಿದಾಗ ಅಲ್ಲೆಲ್ಲ ಸ್ಥಳೀಯ ಪವಿತ್ರ ಕಾರ್ಯಗಳಿಗಾಗಿ ಸಹಾಯಾರ್ಥ ಆಟಗಳನ್ನೂ ಆಡಿದೆವು.

ಬಂದವರನ್ನು ಸ್ವಕೀಯರೆಂದು ಬಗೆಯುವಷ್ಟರ ಮಟ್ಟಿಗೆ ಜನರು ಮುಂದುವರಿದಾಗ, ನಾವು ಇದಕ್ಕೆ ಮೊದಲೇ ಈ ಕಡೆ ಬರಲಿಲ್ಲವೇಕೆ? ಎಂದುಕೊಂಡೆ. ಹೋಗದೆ ಇದ್ದ ಕಡೆಯ ಸ್ವಾಗತ ಅತ್ಯಪೂರ್ವವಾಗಿತ್ತು; ಆತ್ಯಾನಂದಕರವಾಗಿತ್ತು.

ಕಲಾಸಂಗಮ

 

ಕುಂದಾಪುರ ತಾಲ್ಲೂಕಿನ ಕಂಡ್ಲೂರಿನಲ್ಲಿ ನಮ್ಮ ಮೇಳವಿದ್ದ ದಿನ ಅಲ್ಲಿಂದ 13 ಮೈಲು ದೂರದ ಬಿಸಿಗಲ್ಲು ಕಟ್ಟೆಯಲ್ಲಿ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಆಟವಿದೆ ಎಂದು ತಿಳಿದು ಬಂತು. ಶ್ರೀ ಹಾರಾಡಿ ರಾಮ ಗಾಣಿಗರೂ (ರಾಷ್ಟ್ರ ಪ್ರಶಸ್ತಿ ಪಡಿದಿದ್ದಾರೆ) ಆ ಮೇಳದಲ್ಲಿನ ಪಾತ್ರಧಾರಿಯಾದ ಕಾರಣ ಅವರ ವೇಷವನ್ನು ನೋಡಬೇಕೆಂಬ ಆಸೆ ಮೂಡಿತು.ಹಾಗೆ, ಪ್ರಥಮ ಭಾಗದಲ್ಲಿ ನನಗಿದ್ದ ವೇಷವನ್ನು ಮಾಡಿ ಮುಗಿಸಿ, ಬಿಸಿಗಲ್ಲು ಕಟ್ಟೆಗೆ ಹೋಗಿ, ಆಟದ ಸ್ಥಳವನ್ನು ಸೇರಿದೆ.

ನಾನು ಅಲ್ಲಿಗೆ ಬಂದ ವಿಷಯ ಯಾರ ಮೂಲಕವೋ ಶ್ರೀ ರಾಮ ಗಾಣಿಗರ ಕಿವಿಗೆ ಬಿತ್ತು. ಅವರು ಆಟವಾಡಿಸುವವರನ್ನು ಕರೆಸಿ ನನ್ನನ್ನು ಗೌರವದಿಂದ ಕುಳ್ಳಿರಿಸಲು ಏರ್ಪಾಡು ಮಾಡಬೇಕೆಂದರಂತೆ. ವ್ಯವಸ್ಥಾಪಕರು ನನ್ನನ್ನು ಹುಡುಕಿ ಬಂದು, ಕೈ ಹಿಡಿದು ಕರೆದುಕೊಂಡು ರಂಗಸ್ಥಳದ ಕಡೆಗೆ ಹೋದರು.

ಕೇಂದ್ರ ಬಿಂದು

ವಿಶೇಷ ಅತಿಥಿಗಳು ಅಥವಾ ಗಣ್ಯವ್ಯಕ್ತಿಗಳು ಯಾರಾದರೂ ಆಟ ನೋಡಲು ಬಂದರೆ, ಅವರನ್ನು ರಂಗಸ್ಥಳದಲ್ಲಿ -ವೇಷಧಾರಿಗಳು ಕುಣಿಯುವ ಸ್ಥಳದಲ್ಲಿ -ಒಳಗೇ ಕುಳ್ಳಿರಿಸಿ ಗೌರವಿಸುವುದು ಅಲ್ಲಿನ ಪದ್ಧತಿಯಂತೆ.ಆ ಪದ್ಧತಿಯ ನೆನಪು ಆದಾಗ, ಸಾವಿರ ಕಣ್ಣುಗಳ ಕೇಂದ್ರಬಿಂದುವಾಗಿ ಆ ಸ್ಥಳದಲ್ಲಿ ಕುಳ್ಳಿರುವುದಾದರೂ ಹೇಗೆ? ಎಂಬ ಭೀತಿ ನನ್ನನ್ನು ಕಾಡತೊಡಗಿತು.

ಧರ್ಮಕರ್ಮ ಸಂಯೋಗದಿಂದ, ಅಂದಿನ ಪ್ರದರ್ಶನಕ್ಕೆ ಕುಂದಾಪುರದಿಂದ ಯಕ್ಷಗಾನ ಕಲಾಸಕ್ತರಾದ ವಕೀಲ್ ಶ್ರೀ ಮುತ್ತಯ್ಯ ಹೆಗ್ಡೆಯವರೂ ತಮ್ಮ ಮಿತ್ರರೊಂದಿಗೆ ಆಗಮಿಸಿದ್ದರು. ಅವರಿಗೂ ಅದೇ ರೀತಿಯ ಗೌರವಾಸನ ವ್ಯವಸ್ಥೆಯಾಗಿತ್ತು. ಪರಿಚಿತರಾದ ಅವರೂ ಅಲ್ಲಿದ್ದರಾದ ಕಾರಣ ಧೈರ್ಯಮಾಡಿ ರಂಗಸ್ಥಳದ ಒಳಗೇ ಕುಳಿತು, ಬೆಳಗಿನ ತನಕವೂ ಆ ಕಲಾಪ್ರದರ್ಶನ ನೋಡಿ ಸಂತೋಷಗೊಂಡೆ.

ಪ್ರದರ್ಶನವನ್ನು ನೋಡುತ್ತಿದ್ದಂತೆ- “ವೇಷಭೂಷಣಗಳಲ್ಲಿ ಮತ್ತು ನಾಟ್ಯದ ಹೆಜ್ಜೆಗಾರಿಕೆಯಲ್ಲಿ ಅಲ್ಲಲ್ಲಿನ ಸಂಪ್ರಾದಯದಂತೆ, ನಮ್ಮ ತೆಂಕುತಿಟ್ಟಿಗೂ ಇಲ್ಲಿನ ಬಡಗುತಿಟ್ಟಿಗೂ ಅಲ್ಪ ಸ್ವಲ್ಪ ವ್ಯತ್ಯಾಸವಿರಬಹುದು. ಅದನ್ನೇ ಮಹಾಮೇರುವಾಗಿ ಮಾಡಿ ಕಲಾವಿದರೊಳಗೆ ಮತ್ತು ಕಲಾಸಕ್ತರೊಳಗೆ ಸಲ್ಲದ ವೈಷಮ್ಯ- ತಿರಸ್ಕಾರ ಅಸಹಕಾರಗಳನ್ನು ಉಂಟು ಮಾಡುವುದು ಅನ್ಯಾಯ.”

“ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಹಲವು ಮಕ್ಕಳಲ್ಲಿ ಒಬ್ಬೊಬ್ಬನ ಉಡುಗೆ ತೊಡುಗೆಗಳು, ಒಂದೊಂದು, ಬೇರೆ ಬೇರೆ ಬಣ್ಣಗಳಲ್ಲಿದ್ದರೇನು? ನಡೆ ನುಡಿಗಳಲ್ಲಿ ಮಂದ ಮತ್ತು ತೀವ್ರಗತಿಗಳಿದ್ದರೇನು? ಸ್ವರಭಾರದಲ್ಲಿ ಏರುಪೇರುಗಳು ಇದ್ದರೆ ತಪ್ಪೇನು? ತಾಯಿಯಾದವಳಿಗೆ ಮಕ್ಕಳೆಲ್ಲರೂ ಮುದ್ದು. ಅಣ್ಣ ತಮ್ಮಂದಿರೇಕೆ ಬಡಿದಾಡಿಕೊಳ್ಳಬೇಕು?ಅಥವಾ ಇತರರು ಅವರನ್ನೇಕೆ ಬಡಿದಾಡಿಸಬೇಕು?”-ಎಂಬ ಭಾವನೆ ಮೂಡಿತು. ಕಲೆಯ ರಸಾಸ್ವಾದನೆ ಮಾಡುತ್ತಾ ಬೆಳಗಿನವರೆಗೂ ಕಳೆದ ನಮಗೆ, ಮುಂಜಾನೆ ಶ್ರೀ ಮುತ್ತಯ್ಯ ಹೆಗ್ಡೆಯವರೇ ಶ್ರೀ ಶೇಷಗಿರಿ ಭಾಗವತರ ಮತ್ತು ಶ್ರೀ ರಾಮ ಗಾಣಿಗರ ಪರಿಚಯ ಮಾಡಿಸಿಕೊಟ್ಟರು.

ಅಂದಿನದು ನನ್ನ ಯಕ್ಷಗಾನ ಜೀವನದಲ್ಲಿ ಒಂದು ರಸನಿಮಿಷದಂತೆ.

ಆ ವರ್ಷ, ಮೇಳವನ್ನೊಪ್ಪಿಸಿಕೊಡುವಾಗ, ನನ್ನ ಉತ್ತರ ಭಾಗದ ಪ್ರವಾಸ ಕಥನವನ್ನೂ ಶ್ರೀ ಮಂಜಯ್ಯ ಹೆಗ್ಗಡೆಯವರೊಡನೆ ವರದಿ ಮಾಡಿದೆ. ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಅವರು ಮುಂದಿನ ವರ್ಷಕ್ಕೆ ಇನ್ನೂ ಹೆಚ್ಚಿನ ತರಬೇತಿ ನಡೆಸಿ, ಉತ್ತರ ಕನ್ನಡಕ್ಕೂ ಹೋಗಿ ಬರಬೇಕೆಂಬ ಅಪ್ಪಣೆ ಕೊಡಿಸಿದರು.

ಪುನಃ ನೃತ್ಯಾಭ್ಯಾಸ 
ಸಂತೋಷದಿಂದ ಮನೆಗೆ ಬಂದ ನಾನು, ಇನ್ನೂ ಹೆಚ್ಚಿನ ತರಬೇತಿಯ ವಿಚಾರದಲ್ಲೇ ಯೋಚನೆ ಮಾಡತೊಡಗಿದೆ. ಇತರರ ತರಬೇತಿಯಾಗುವ ಮೊದಲು ನನ್ನದಾಗಬೇಕಷ್ಟೆ? ಭಾವಪೂರ್ಣವಾಗಿ ಅಭಿನಯಿಸಿಯೇ ಪದ್ಯದ ಅರ್ಥವನ್ನು ವ್ಯಕ್ತಪಡಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ, ಮಂಜೇಶ್ವರದಲ್ಲಿ ಶ್ರೀ ಲಕ್ಷ್ಮಣ ಭಕ್ತರು ತಮ್ಮ ಮನೆ ಮಕ್ಕಳಿಗೆ ಶ್ರೀ ಪರಮಶಿವಮ್ ಅವರಿಂದ ಭರತನಾಟ್ಯ ಅಭ್ಯಾಸ ಮಾಡಿಸುತ್ತಲಿರುವ ಸುದ್ದಿ ಕೇಳಿದೆ.

ಅಲ್ಪಸ್ವಲ್ಪ ಹಸ್ತಾಭಿನಯ ಮತ್ತು ಅಂಗವಿನ್ಯಾಸಗಳನ್ನು ಪುನಃ ಅವರಿಂದಲೇ ಪಡೆದುಕೊಳ್ಳವುದು ಒಳ್ಳೆಯದೆನಿಸಿತು. ಶ್ರೀ ಭಕ್ತರನ್ನು ಕೇಳಿಕೊಂಡಾಗ, ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗದಂತೆ ನೀವು ಬಂದು ಕಲಿಯಬಹುದು ಎಂದರವರು. ಅವರಿಂದ ಅನುಮತಿ ದೊರೆತೊಡನೆ, ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಟು, 13 ಮೈಲು ದೂರದ ಮಂಜೇಶ್ವರಕ್ಕೆ ಸೈಕಲಿನಲ್ಲಿ ಹೋಗಿ, ಶ್ರೀ ಪರಮಶಿವಮ್ ಅವರಲ್ಲಿ ಸುಮಾರು ಒಂದುವರೆ ಗಂಟೆಯ ಕಾಲದ ಅಭ್ಯಾಸ ಮಾಡತೊಡಗಿದೆ.

ಕಥಕ್ಕಳಿಯಂತಹ ಹಸ್ತಾಭಿನಯ ಸಾಮರ್ಥ್ಯ ಯಕ್ಷಗಾನಕ್ಕಾಗಿ ನನಗೆ ಬೇಕಾಗಿತ್ತು. ಆದರೆ ಅದನ್ನು ಹೊಂದಿಸಿಕೊಡಲು ಶ್ರೀ ಪರಮಶಿವಮ್ ಅವರಿಗೆ ಮೊದಮೊದಲು ಕಷ್ಟವಾಯಿತು. ನನಗೆ ಅವರಿಂದ ಏನಾದರೂ ಬೇಕೆಂದಾದರೆ, ಅದನ್ನು ಪಡೆವ ದಾರಿಯನ್ನು ನಾನೇ ಕಂಡುಹಿಡಿಯಬೇಕಾಯಿತು.

ನಾನೇ ಅವರೆದುರಿಗೆ ಯಕ್ಷಗಾನದ ಪದ್ಯಗಳನ್ನು ಹಾಡಿ, ತಾಳಗಳನ್ನು ಬಾರಿಸಿ- ಅವುಗಳ ಅರ್ಥವನ್ನು ವಿವರಿಸಿ, ಪದ್ಯಕ್ಕೆ ಕಥಕ್ಕಳಿಯ ಹೆಜ್ಜೆಗಳನ್ನೂ ಮುದ್ರೆಗಳನ್ನೂ ತೋರಿಸಿಕೊಡಲು ಪ್ರೇರೇಪಿಸಿದೆ. ಅವರು ಕುಣಿಯುವಾಗ, ಹೆಜ್ಜೆ-ಮುದ್ರೆಗಳನ್ನು ಯಕ್ಷಗಾನಕ್ಕೆ ಹೇಗೆ ಹೊಂದಿಸಿಕೊಳ್ಳಲು ಸಾಧ್ಯವೆಂದು ಯೋಚಿಸತೊಡಗಿದೆ. ಮಂಜೇಶ್ವರದಿಂದ ಮನೆಗೆ ಬರುವಾಗ ಅದರ ಬಗ್ಗೆಯೇ ವಿಮರ್ಶೆ ನಡೆಸಿ, ಮನೆಯಲ್ಲಿ ತಿರುಗಿ ಪುನರಾವರ್ತನ ಮಾಡತೊಡಗಿದೆ.

ಮಳೆಗಾಲ ಕಳೆಯುವವರೆಗೂ ಇದೇ ರೀತಿ ಪ್ರತಿದಿನ ಅಭ್ಯಾಸ ನಡೆಯತೊಡಗಿತು. ಕಥಕ್ಕಳಿಯಲ್ಲಿ ನಡೆಯುವುದನ್ನು ತಿಳಿದು, ಮುದ್ರೆಗಳಿಗೆ ಅವಕಾಶವಿಲ್ಲ ಎಂದು ತಿಳಿದುಕೊಂಡು ಸುಮ್ಮನಾಗಿದ್ದು ಯಕ್ಷಗಾನದ ಭಾಗಗಳಲ್ಲೂ ಮುದ್ರೆಗಳನ್ನು ನಿಯೋಜಿಸಿಕೊಳ್ಳಲು ಸಾಧ್ಯವಾಯಿತು. ಕಥಕ್ಕಳಿಯಲ್ಲಿ ಮಾತೇ ಇಲ್ಲದೇ, ವಿಶಿಷ್ಟವಾದ ಮುದ್ರೆಗಳಿಂದಲೇ ಕಾರ್ಯ ನಿರ್ವಹಣೆಯಾಗಬೇಕಾಗುತ್ತಿತ್ತು. ಯಕ್ಷಗಾನದಲ್ಲಿ ಮಾತೂ ಇದ್ದ ಕಾರಣ, ಪದ್ಯವನ್ನು ಹಾಡುವ ಹೊತ್ತಿಗೆ ‘ಮುದ್ರೆಗಳು ಇದ್ದರೆ’ ಪದ್ಯದ ಅಭಿನಯಕ್ಕೆ ಕಳೆ ಕಟ್ಟುವಂತಾಗುತ್ತಿತ್ತು. ಕಥಕ್ಕಳಿಯ ಮುದ್ರೆಗಳನ್ನು ನಾನು ಉಪಯೋಗಿಸಿಕೊಂಡೆ ಎನ್ನುವುದಕ್ಕಿಂತಲೂ ಅಲ್ಲಿಯ ಮುದ್ರೆಗಳ ‘ತಂತ್ರ’ವನ್ನು ಅರಿತು, ಆ ತಂತ್ರವನ್ನಷ್ಟೇ ಉಪಯೋಗ ಮಾಡಿಕೊಂಡೆ ಎಂದರೆ ಶ್ರೀ ಪರಮಶಿವಮ್ ಅವರಿಗೆ ಅಪಚಾರ ಮಾಡಿದಂತಾಗಲಾರದು ಎಂದು ನಂಬಿದ್ದೇನೆ.

ಇದು ನನ್ನ ಮಾತಾಯಿತು. ಕೂಟದ ಇತರ ಶಿಷ್ಯರು ಮತ್ತು ಸಹೋದ್ಯೋಗಿಗಳಿಗೂ ಅವುಗಳ ಉಪಯೋಗ ಎಲ್ಲಿ ಮತ್ತು ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟೆ. ಅದುವಲ್ಲದೆ, ತೆಂಕುತಿಟ್ಟಿನ ನಾಟ್ಯದಲ್ಲೂ, ಕೆಲವೊಂದು ಕಡೆ ಇನ್ನಷ್ಟು ಮೃದುತ್ವ ಬರಲು ಸಾಧ್ಯವಿರುವಂತೆ, ಬಡಗುತಿಟ್ಟಿನ ಕೆಲವು ಅಂಗವಿನ್ಯಾಸಗಳನ್ನೂ ಅನುಸರಿಸಲು ಸಾಧ್ಯವೆ ಎಂದು ನೋಡಿರೆಂದೆ.

ಕೆಲವೊಂದು ಸನ್ನಿವೇಶಗಳಲ್ಲಿ ಅದೂ ಸಾಧ್ಯವೆಂದು ಕಂಡುಬಂದಿತು. ನನಗೆ ಎಲ್ಲ ವಿಭಾಗಗಳೂ ಸಮಾನವಾದ ಕಾರಣ ಕಲೆಯನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡಿ ತೋರಿಸಲು ಅನುಕೂಲವಾಗುವುದಾದರೆ ಯಾವ ವಿಭಾಗದ ಸಹಾಯವನ್ನು ಬೇಕಾದರೂ ಪಡೆಯಬಹುದು ಎಂದೇ ತೋರಿತು.

ಉತ್ತರ ಕರ್ನಾಟಕದಲ್ಲಿ

ಆ ವರ್ಷದ ತಿರುಗಾಟದಲ್ಲಿ, ಪೀಠಿಕೆಯ ಮೊದಲು ಸೇರಿದ ಜನರನ್ನು ಸಮಾಧಾನ ಪಡಿಸುವ ಸಲುವಾಗಿ ಅಲ್ಲಲ್ಲಿ ‘ಸಭಾ ಲಕ್ಷಣ’ದ ಮಿತಿಯಿಂದ ಹೊರಗೆ ಸೇರಿಸಲಾಗುತ್ತಿದ್ದ ಕೆಲವು ಹಾಸ್ಯದ ಕಾರ್ಯಕ್ರಮಗಳ ಬದಲು ಭರತನಾಟ್ಯದ ಕೆಲವೊಂದು ಸಣ್ಣ ನೃತ್ಯ ಕಾರ್ಯಕ್ರಮಗಳನ್ನೂ ಸೇರಿಸಿ ನೋಡಿದೆ. ಅದರಿಂದ ಸ್ತ್ರೀ ವೇಷ ಮತ್ತು ಪ್ರಸಂಗಪೀಠಿಕೆ ಇವುಗಳ ಮೊದಲು ಸಂಪ್ರದಾಯದ ರಂಗಪೂಜೆ ಮತ್ತು ದೇವತಾ ಪೂಜೆಗಳನ್ನು ಮಾಡಿದ ನಂತರದ ಕಾಲವನ್ನೂ ಸದ್ವಿನಿಯೋಗ ಮಾಡಿಕೊಳ್ಳಬಹುದು. ಜನರೂ ಅದನ್ನು ಮೆಚ್ಚುತ್ತಾರೆ ಎಂದು ಖಚಿತವಾಯಿತು.ಶ್ರೀಮಾನ್ ಮಂಜಯ್ಯ ಹೆಗ್ಗಡೆಯವರ ಆಣತಿ ಇದ್ದರೂ, ಆ ವರ್ಷ ಉತ್ತರ ಕನ್ನಡದತ್ತ ಹೋಗಲು ಸಾಧ್ಯವಾಗಲಿಲ್ಲ. ಮರುವರ್ಷ ಉತ್ತರ ಕನ್ನಡವೇ ನಮ್ಮನ್ನು ಕರೆಸಿಕೊಂಡಿತು.

ಉತ್ತರ ಕನ್ನಡದಲ್ಲಿ ನಾಲ್ಕಾರು ಯಕ್ಷಗಾನ ಮೇಳಗಳು ಇವೆ. ಹಲವಾರು ಮಂದಿ ಪ್ರಸಿದ್ಧ ಕಲಾವಿದರೂ ಇದ್ದಾರೆ. ಇದ್ದ ಮೇಳಗಳಲ್ಲಿನ ಕಲಾವಿದರಲ್ಲಿ ಹೆಚ್ಚಿನವರು ಕಲಾವಿಲಾಸಿಗಳಂತೆ ಇರುವುದರಿಂದಲೂ, ತಮಗೆ ಬೇಕೆನಿಸಿದ ವಿಷಯಕ್ಕೆ ಹೆಚ್ಚಿನ ಗಮನ ಕೊಟ್ಟು ಅದನ್ನು ಬೆಳೆಸಿಕೊಳ್ಳಲು ಅವರಿಗೆ ಅವಕಾಶವಾಗುತ್ತಿತ್ತೆಂದು ನಂಬಿದ್ದೇನೆ.

ಉತ್ತರ ಕನ್ನಡದಿಂದಲೂ ನಾನು ಕೆಲವೊಂದು ವೈಶಿಷ್ಟ್ಯಪೂರ್ಣ ಅಂಶಗಳನ್ನು ತಂದುದಿದೆ. ಅಲ್ಲಿಗೆ ಹೋದಾಗ ಪರಿಚಯ- ಸ್ನೇಹವಾದ ಕರ್ಕಿ ಮೇಳದ ಹಾಸ್ಯಗಾರ ಬಂಧುಗಳಲ್ಲಿ ಜಿಜ್ಞಾಸೆ ನಡೆಸಿದೆ. ಅಲ್ಲಿನ ಭಾಗವತರೊಬ್ಬರನ್ನು ತೆಂಕುತಿಟ್ಟಿನ ಕಡೆಗೇ ಎಳೆದಿದ್ದೇನೆ. ಕಲಾವಿದರಿನ್ನೊಬ್ಬರು ತೆಂಕುತಿಟ್ಟಿನ ಆಟಗಳಲ್ಲಿ ಪಾತ್ರವಹಿಸುವಂತಾಗಿದೆ.

ಕಲೆ-ಬೆರಕೆ 
ಇವೆಲ್ಲ ಅನುಭವಗಳಿಂದ- ಯಕ್ಷಗಾನವೆಂದರೆ ನಾಡಿನ ಕಲೆ-ದಕ್ಷಿಣ ಕನ್ನಡದ ದಕ್ಷಿಣ-ಉತ್ತರಭಾಗಗಳೂ, ಉತ್ತರ ಕನ್ನಡದ ವೈಶಿಷ್ಟ್ಯಗಳ ಸಮನ್ವಯವಾಗುವುದಾದರೆ ಅದರಿಂದ ಯಾವ ತೊಂದರೆಯೂ ಇಲ್ಲ. ಕಲ್ಲಹಳ್ಳಿಯ ಮತ್ತು ಕೋಲಾರದ ಯಕ್ಷಗಾನ ಪ್ರದರ್ಶನಗಳನ್ನು ನಾನು ನೋಡಿಲ್ಲ. ಉತ್ತರ ಕರ್ನಾಟಕದ ದೊಡ್ಡಾಟ- ಅಟ್ಟದ ಆಟಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿಲ್ಲ. ನೋಡಿ ಮಾಡಿದ್ದರೆ, ನಮ್ಮ ಕಲಾಪ್ರದರ್ಶನಕ್ಕೆ ಕಳೆ ಕಟ್ಟಿಸುವ ಅಂಶಗಳು ಅವುಗಳಲ್ಲಿ ದೊರೆತಿದ್ದರೆ, ಖಂಡಿತವಾಗಿಯೂ ಅವುಗಳನ್ನು ಉಪಯೋಗಿಸುತ್ತಿದ್ದೆ ಎಂದು ಹೇಳುವ ನಿರ್ಧಾರಕ್ಕೆ ಬರುವಂತಾಯಿತು.

ಇದರಿಂದ, ‘ಕಲೆ-ಬೆರಕೆ’ಯ ಹೊಸ ಸಂಪ್ರದಾಯ ಒಂದನ್ನು ಸ್ಥಾಪಿಸಲು ಹೊರಟಿದ್ದೆಯಾ? ಎಂದು ಯಾರೂ ಕೇಳಬೇಕಾದ ಸಂದರ್ಭ ಬರುವುದಿಲ್ಲ. ಒಂದು ಕ್ಷಣದಲ್ಲಿ ಜನರೆದುರು ಮಿಂಚಿ ಮಾಯವಾದರೂ, ಮುಂಜಾನೆಯ ಅನಂತರವೂ ನೆನಪಿನಲ್ಲಿ ಉಳಿಯಬಹುದಾದ ಕೆಲವು ಭಾವ ವಿನ್ಯಾಸಗಳು, ರಸಾಸ್ವಾದನೆಗೆ ಸಿದ್ಧರಾಗಿ ಜನರು ಕುಳಿತಿರುವಾಗ ಅವರ ಮನತಣಿಸಲೆಂದೇ ಬರುವ ಕೆಲವೊಂದು ಚಮತ್ಕಾರಿಕ ಪದಗತಿಗಳು. ಇವುಗಳನ್ನು ಯಕ್ಷಗಾನದಲ್ಲಿ ತರಲು ಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷ ಸಾಧಿಸಿ ತೋರಿಸುವಂತಾಗಿದೆ.

ಬಾಲಲೀಲೆಯ ಕೃಷ್ಣನಾಗಿ, ನಾನು ಜನರ ಮನಸ್ಸು ಸೆಳೆದುದು ಇದ್ದರೆ, ಅದು ಅಂತಹ ‘ಪಡೆದ ಪದಗತಿ’ಯ ಬಲದಿಂದ.

ರಾಸಲೀಲೆಯ ಕೃಷ್ಣನಾಗಿ, ಕುಡಿಗಣ್ಣ ನೋಟವನ್ನು ತಾಳಬದ್ಧವಾಗಿ ಅತ್ತಿತ್ತ ಹಾಯಿಸಿ ಮುಗುಳುನಕ್ಕಾಗ- ಪ್ರಮದೆಯರು ಹಲವು ಮಂದಿ ನನ್ನಲ್ಲಿ ಮೋಹಗೊಂಡುದು ಇದ್ದರೆ ಅದು, ಕೈ ಕಾಲುಗಳಂತೆ ಮುಖವನ್ನೂ ನಾನು ಕುಣಿಸುವಂತೆ ಮಾಡಿದ ಕಲಾಸಂಗಮದಿಂದ.

ಮಾಯಾ ಶೂರ್ಪನಖಿ ಅಥವಾ ಮಾಯಾ ಅಜಮುಖಿಯಾಗಿ ರಂಗಸ್ಥಳಕ್ಕೆ ಬಂದು ಒನಪು ವಯ್ಯಾರಗಳನ್ನು ಕುಣಿ ಕುಣಿದು ಬೀರಿದಾಗ, ತಮ್ಮ ಇರವನ್ನು ಮರೆತು ಕೆಲವರು’ಕ್ಷಣಿಕ ರಸಿಕ’ರಾದುದು ಇದ್ದರೆ, ಅದು ನನ್ನ ಹತ್ತು ಮಂದಿ (ಪ್ರತ್ಯಕ್ಷ ಮತ್ತು ಪರೋಕ್ಷ) ನಾಡಿನ ಕೆಲವೆಡೆಗಳಿಗೆ ಹರಡಿದ ಗುರುಗಳು ನನ್ನಲ್ಲಿ ಮೂಡಿಸಿದ ಲಾಸ್ಯಭಾವಗಳಿಂದ.

ಶಿವನಾಗಿ ಕುಣಿದು ಚೌಕಿಗೆ ಬಂದಾಗ ಶ್ರೀ ಮಹಾಗಣಪತಿಯ ಪ್ರಸಾದ ಪಡೆಯಲೆಂದು ಅಲ್ಲಿ ಸೇರಿದ ವೃದ್ಧರು ನನ್ನ ಕಾಲಿಗೂ ಎರಗಿದ್ದರೆ, ಅದು ಕೆಲವು ನಿಮಿಷಗಳ ಕಾಲವಾದರೂ ನನ್ನೊಳಗೆ ನಾನು ಆಹ್ವಾನಿಸಿಕೊಂಡೆ ಎಂದು ಭಾವಿಸಲು ಸಾಧ್ಯವಾದ ನಾಟ್ಯದೇವನ ಒಲವಿನಿಂದ.

‘ಕೃಷ್ಣ ಸ್ವಪ್ನ’ವನ್ನು ಕಂಡ ಕಂಸನಾಗಿ ನಾನು ಮಂಚದಿಂದ (ಮೂರಡಿ ಎತ್ತರದ ಆಸನ-ಅಷ್ಟೆ) ಕೆಳಗೆ ಉರುಳಿ ಹೊರಳಿದಾಗ “ಅಯ್ಯಯ್ಯೋ! ಸಾಯುತ್ತಿದ್ದಾರೆ!” ಎಂದು ಎದುರು ಸಾಲಿನವರು ಕಿರುಚಿಕೊಂಡಿದ್ದರೆ, ಅದು ಅಲ್ಲಿ-ಇಲ್ಲಿ, ಕಂಡು ಕಲ್ಪಿಸಿ ಪಡೆದ ಅಭಿನಯದ ಆಕರ್ಷಣೆಯಿಂದ. ಎಲ್ಲಿಂದ ಯಾವುದನ್ನೂ ತೆಗೆದರೂ, ಶ್ರದ್ಧೆಯಿಂದ ಅದನ್ನು ಉಪಯೋಗಿಸಿದಾಗ ನನಗೆ ಅದು ಉಪಕಾರವನ್ನೇ ಮಾಡಿದೆ; ಇತರರಿಗೂ ಮಾಡುತ್ತದೆ.

ಯಕ್ಷಗಾನ ಕಲಾಮಾತೆ ಒಂದು ಬಂಗಾರದ ಹೂವು. ನೋಡಿ ಆನಂದಿಸಿದ ವಿವಿಧ ವಿಭಾಗಗಳ ಕಲೆಯ ಸಮನ್ವಯವಾಯಿತು ಎಂದರೆ ಆ ಹೂವಿಗೆ ಪರಿಮಳವೂ ಬರುತ್ತದೆ. ಅದು ಬೇಡವೆನ್ನಲಾದೀತೆ?

ಪರಿಮಳವನ್ನೊದಗಿಸುತ್ತೇವೆ ಎಂದಾಗ, ಜನತೆ ‘ಬೇಡ’ ಎಂದಿಲ್ಲ. ನಾನು ಒಪ್ಪುವಂತೆ ಒದಗಿಸು ಎಂದು ಮಾತ್ರ ಹೇಳಿದೆ. ನಮ್ಮ ದೃಷ್ಟಿಕೋನದಿಂದ ಮಾತ್ರವೇ ಕಾಣಿಸುವ ಬಂಗಾರದ ಹೂ ಇದ್ದರೆ ಸಾಕು. ಉಳಿದ ಕೋನಗಳಿಂದ ಅದು ಸರಿಯಾಗಿ ಕಾಣಿಸಲಾರದು ಎಂದಿಲ್ಲ. ಬಂದುದು ಪರಿಮಳವಲ್ಲ- ಸುವಾಸನೆಯಲ್ಲ ಎಂದೂ ಹೇಳಿಲ್ಲ.

 (ಮುಂದಿನ ವಾರಕ್ಕೆ)
* * * * * * * *
ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. 1928 -1997)
ಕೃಪೆ : ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ  ಮತ್ತು ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟ್ (ರಿ).
ಚಿತ್ರಕೃಪೆ : ಅಂತರ್ಜಾಲ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments