ಕಲಸೆ (ನಾಡಕಲಸಿ) ದೇವಸ್ಥಾನ
-ಪ್ರಹಸ್ತಿ ಪಿ
ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಕಲಸೆ, ನಾಡಕಲಸಿಯೂ ಒಂದು. ಸಾಗರದವನಾಗಿಯೂ ಅದನ್ನು ನೋಡಲಾಗಿರದ ಬಗ್ಗೆ ಸ್ವಲ್ಪ ಬೇಸರವಿತ್ತು. ಬೆಳಗ್ಗೆ ೮ಕ್ಕೆ, ಮಧ್ಯಾಹ್ನ ಒಂದಕ್ಕೆ ಮಾತ್ರ ಅಲ್ಲಿಗೆ ಬಸ್ಸಿನ ಸೌಕರ್ಯವಿದೆ ಎಂಬ ಗೆಳೆಯರ ಮಾತೂ ನೋಡದಿರುವುದಕ್ಕೊಂದು ಪಿಳ್ಳೆ ನೆವವಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು. ಅದೆಷ್ಟು ಸುಂದರ ಎಂದು.
ಹೋಗುವ ಮಾರ್ಗ:
ಸಾಗರದಿಂದ ಸುಮಾರು ಎಂಟು ಕಿ.ಮೀ ದೂರವಷ್ಟೇ ನಾಡಕಲಸಿ ಅಥವಾ ಕಲಸಿಯ ದೇವಸ್ಥಾನ. ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಮೂರು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಯಾವಾಗಲಾದರೂ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.
ಇತಿಹಾಸ:
ಇಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಸಂಶೋಧನಕಾರರು ಹೇಳುತ್ತಾರೆ.
ಮೊದಲಿಗೆ ಹೋಗುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ದೇಗುಲದ ಎದುರಿಗೆ ಅಥವಾ ಹೋಗುವವರ ಬಲಗಡೆಗೆ ಇರುವ ನಾಗರ ಬನ.ಅದಕ್ಕೆ ನಮಸ್ಕರಿಸಿ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು.
ಅಲ್ಲಿ ಆನೆ . ಬಸವಣ್ಣಗಳು ನಮ್ಮನ್ನು ಸ್ವಾಗತಿಸಿದವು. ಈ ದೇವಸ್ಥಾನದಲ್ಲಿ ಹೊಯ್ಸಳ ಕಾಲದ ಕೆತ್ತನೆಗಳು ನಯನಮನೋಹರವಾಗಿಹೆ. ಚಚ್ಚೌಕವಾಗಿರುವ ಈ ದೇಗುಲಕ್ಕೆ ಗರ್ಭಗ್ರಹ, ಸುಖನಾಸಿ, ಮುಖಮಂಟಪವಿದೆ. ಇಲ್ಲಿನ ಒಂದು ದುಃಖದ ಸಂಗತಿಯೆಂದರೆ ಇದು ಸಂರಕ್ಷಿತ ಸ್ಮಾರಕ ಎಂದಾಗಿದ್ದರೂ ಇದಕ್ಕೆ ಬೇಕಾದ ಸಂರಕ್ಷಣೆ ಸಿಕ್ಕಿಲ್ಲ. ನಾವು ಹೋದಾಗ ಮಳೆಗಾಲದಲ್ಲಿ ಸೋರಿದ ನೀರು, ಪಾಚಿ ದೇಗುಲದ ಒಳಗೇ ಕೆಲಕಡೆ ಕಟ್ಟಿತ್ತು. ಜೊತೆಗೆ ಬಾವಲಿಯ ಹಿಕ್ಕೆಗಳು ಬೇರೆ. ಶ್ರೀ ಮಲ್ಲಿಕಾರ್ಜುನ ದೇವರನ್ನು ನೋಡಲು ಬೆಳಕಿನ ವ್ಯವಸ್ಥೆ ಮಾಡಲಾಗಿಲ್ಲ. ಹಾಗಾಗಿ ಕತ್ತಲಲ್ಲೇ ದೇವನನ್ನು ನೋಡುವ ಸಂಕಷ್ಟ ಭಕ್ತರಿಗೆ. ಇದನ್ನು ಮರೆತು ನೋಡಿದಾಗ ದೇಗುಲದ ಸೌಂದರ್ಯ ಒಂದೊಂದಾಗಿ ಕಾಣಸಿಗುತ್ತವೆ. ಹೊರಗಿನ ಗೋಡೆಗಳಲ್ಲಿ ಕೆತ್ತಲಾಗಿರುವ ಮಿಥುನ ಶಿಲ್ಪಗಳೂ ರಸಿಕರ ಮನ ಸೆಳೆಯುತ್ತವೆ.
ದೇಗುಲದ ಚಾವಣಿಯಲ್ಲಿ ಕೆತ್ತಲಾಗಿರುವ ಕಲ್ಲಿನ ಹಿಡಿಗಳಂತಹ ರಚನೆ ಬೆರಗಾಗಿಸುತ್ತದೆ.
ನಂತರ ಅದರ ಪಕ್ಕದಲ್ಲೇ ಇರುವ ಶ್ರೀ ರಾಮೇಶ್ವರ ದೇವಸ್ಥಾನದ ದರ್ಶನ ಪಡೆದೆವು . ಈ ದೇಗುಲದಲ್ಲಿ ಲೈಟಿನ ವ್ಯವಸ್ಥೆ, ಸ್ವಚ್ಛತೆ ಹೀಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಜಿರಲೆಕಲ್ಲು ಎಂಬ ಕಂಬ. ಇಲ್ಲಿನ ಅರ್ಚಕರು ಮಣ್ಣನ್ನು ಇದಕ್ಕೆ ತೇಯ್ದು , ಮಂತ್ರಿಸಿ ನೀಡುತ್ತಾರಂತೆ. ಅದರಿಂದ ಕಾಲು ಮುರಿದವರಿಗೆ ಸರಿಯಾಗಿದೆಯಂತೆ. ಬುದ್ದಿ ಭ್ರಮಣೆಯಾದವರು, ಮಕ್ಕಳಾಗದವರು ಹೀಗೆ ಅನೇಕರು ಇಲ್ಲಿಗೆ ಬಂದು ಈ ಜಿರಲೆಕಲ್ಲಿನ ಮಹಿಮೆಗೆ ಪಾತ್ರರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಈ ದೇಗುಲದಲ್ಲಿ ಸುಖನಾಸಿಯಿಲ್ಲದ ಗರ್ಭಗೃಹವಿದೆ. ಸುತ್ತಲೂ ಇರುವ ಪ್ರದಕ್ಷಿಣಾಪಥವು ನವರಂಗಕ್ಕೆ ಸೇರಿಕೊಳ್ಳುವ ವಿನ್ಯಾಸ ಸಾಮಾನ್ಯವಾಗಿ ದ್ರಾವಿಡ ಶೈಲಿಯಲ್ಲಿ ಕಂಡು ಬರುತ್ತದೆಯಂತೆ. ಅದು ಹೊಯ್ಸಳ ಶೈಲಿಯಲ್ಲಿ ಅತೀ ವಿರಳವಾಗಿದ್ದು ಅದನ್ನು ಇಲ್ಲಿ ಕಾಣಬಹುದು ಎಂದು ಮಾಹಿತಿ ಫಲಕ ಹೇಳುತ್ತದೆ. ಇದರ ಎದುರೊಂದು ನಂದಿಯಿದ್ದಾನೆ. ಮಂಗಳಾರತಿಯ ಬೆಳಕಿನಲ್ಲಿ ಶ್ರೀ ರಾಮೇಶ್ವರನನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆ ಮಂಗಳಮೂರ್ತಿಯೆದುರು ನಿಂತಾಗ ಬಂದ ದಣಿವೆಲ್ಲಾ ಮಾಯವಾಗಿ ಮನದಲ್ಲೊಂದು ಪ್ರಶಾಂತತೆ ಮೂಡುತ್ತದೆ.
ನಂತರ ಹೊರಬಂದು ದೇಗುಲದ ಪ್ರದಕ್ಷಿಣೆ ಹಾಕಿದಾಗ ಗೋಡೆಗಳಲ್ಲಿನ ಹಲವಾರು ಕುಸುರಿ ಕೆಲಸಗಳು, ವಿಗ್ರಹಗಳು ಮನಸೂರೆಗೊಂಡವು.ಶ್ರೀ ಗಣೇಶ, ಉಮಾಮಹೇಶ್ವರಿ, ಶಿವಲಿಂಗ, ನಾಗದೇವತೆ ಹೀಗೆ ಹಲವಾರು ದೇವದೇವತೆಯರನ್ನಿಲ್ಲಿ ಕಾಣಬಹುದು.
ದೇಗುಲ ದರ್ಶನ ಮುಗಿಸಿ ಅರ್ಚಕರ ಹತ್ತಿರ ಅಲ್ಲಿನ ಇತಿಹಾಸ ಕೇಳುತ್ತಾ ಹೊರಬಂದಾಗ ನಮಗೆ ಇನ್ನೊಂದು ಅಚ್ಚರಿ ಕಾದಿತ್ತು. ವರದ ಹಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳು ಇಲ್ಲೂ ಬಂದು ತಪಸ್ಸು ಮಾಡಿ ಹಲವರ್ಷ ತಂಗಿದ್ದರಂತೆ!! ಅವರ ಕುಳಿತು ಆಶೀರ್ವಚನ ನೀಡುತ್ತಿದ್ದ ಪೀಠ, ಪೂಜಾ ಮಂದಿರಗಳನ್ನೆಲ್ಲಾ ನೋಡಿದಾಗ ನಮಗೆ ಇನ್ನೂ ಆನಂದವಾಯಿತು.
ಚೆನ್ನಾಗಿ ಮಾತನಾಡಿಸಿದ ಭಟ್ಟರು ಮತ್ತವರ ಪತ್ನಿಯನ್ನು ವಂದಿಸಿ ಬೀಳ್ಕೊಡುವಾಗ ಅವರಾಡಿದ ಒಂದು ಮಾತು ಕಿವಿಯಲ್ಲೇ ಗುಯ್ಗುಡುತ್ತಿತ್ತು. ಇದು ದೂರ ಅಂತ ಹೆಚ್ಚಿಗೆ ಜನ ಬರುವುದೇ ಇಲ್ಲ ಇತ್ತೀಚೆಗೆ. ಹೆಚ್ಚು ಜನಕ್ಕೆ ಈ ಬಗ್ಗೆ ತಿಳಿದರೆ, ಅವರಿಲ್ಲಿಗೆ ಬಂದರೆ ಈ ಸ್ಥಳದ ಹೆಚ್ಚಿನ ಅಭಿವೃದ್ಧಿಯಾಗಬಹುದೇನೋ ಎಂದು .
* * * * * * *
ಚಿತ್ರಕೃಪೆ : ಪ್ರಹಸ್ತಿ