ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 2, 2011

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 13- ಯಂತ್ರಗಳು, ಯಾಂತ್ರಿಕರು…

‍ನಿಲುಮೆ ಮೂಲಕ

ರಾಮಚಂದ್ರ ಪಿ

ಆಧುನಿಕ ವಿಜ್ಞಾನವು ಇತ್ತ ಕೊಡುಗೆಗಳನ್ನು ನಾವು ಜೀವನದಲ್ಲಿ ಉಪಯೋಗಿಸಿಕೊಳ್ಳಲೇ ಬೇಕಷ್ಟೆ. ಕಲೆಗೂ ಕೆಲವು ಕೊಡುಗೆಗಳನ್ನು ವಿಜ್ಞಾನವು ಇತ್ತಿದೆ. ಇತರ ಕಲೆಗಳಂತೆ ಯಕ್ಷಗಾನದಲ್ಲೂ ಅವುಗಳ ಉಪಯೋಗವಾಗುತ್ತಿದೆ.

ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಮೊದಲು, ವಿಜ್ಞಾನವಿತ್ತ ಹಲವು ಸಲಕರಣೆಗಳೂ, ‘ಅನುಕೂಲಗಳೂ’ ನನಗೆ ಉಪಟಳವಿತ್ತಿವೆ.

ನಾವು ಉತ್ತರ ಕನ್ನಡ ಪ್ರವಾಸ ಕೈಕೊಂಡ ಮಾರನೆಯ ವರ್ಷ ಡೇರೆಯ ಅಗತ್ಯ ನಮಗಾಯಿತು. ಅದಕ್ಕೆ ಮೊದಲೇ ಶ್ರೀ ಕೊರಗಪ್ಪ ಶೆಟ್ಟರು ತಮ್ಮ ಮೇಳಕ್ಕೆ ಒಂದು ಡೇರೆಯನ್ನು ಮಾಡಿಸಿಕೊಂಡಿದ್ದರು. ನಮ್ಮ ಮನೆಯಲ್ಲೇ ಬೇಕಾದ ವಸ್ತುಗಳನ್ನು ತರಿಸಿ ಹೊಸ ಡೇರೆಯೊಂದನ್ನು ತಂದೆಯವರು ಮಾಡಿಸಲು ತೊಡಗಿದರು. ಮೊದಲು ಹೊರಗಿನ ಆವರಣ ಮಾತ್ರ ಸಾಕು ಎಂದಿದ್ದುದು, ಅನಂತರ- ಆಟವಾಡುವ ಸ್ಥಳದ ಅರ್ಧ ಬಯಲನ್ನು ಮುಚ್ಚುವ ದೊಡ್ಡ ಡೇರೆಯಾಗಿಯೇ ಪರಿವರ್ತನೆಗೊಂಡಿತು. ಆಗ ಅದಕ್ಕೆ ತಕ್ಕಂತೆ ಕಟ್ಟಿ- ಬಿಚ್ಚಿ- ಜೋಡಿಸಿ ಸಾಗಿಸಬಲ್ಲ ಒಂದು ರಂಗಸ್ಥಳವೂ ಬೇಕು ಎನಿಸಿತು. ಅನಂತರ ಬಂದುದು ವಿದ್ಯುತ್ತಿನ ವ್ಯವಸ್ಥೆ; ಧ್ವನಿವರ್ಧಕದ ಏರ್ಪಾಡು.

ಈ ನಡುವೆ ಸಂಚಾರ- ಸಾಗಾಟಗಳಿಗೆ ಅನುಕೂಲವಾಗುವಂತೆ ಒಂದು ‘ಷೆವರ್ಲೆ’ ವ್ಯಾನನ್ನೂ ಕೊಂಡಿದ್ದೆ. ಆದರೆ, ಖರೀದಿ ಮಾಡಿದ ಸ್ಥಳದಿಂದ ನಮ್ಮ ಮನೆಯನ್ನು ತಲುಪುವ ಮೊದಲೇ ಅದು ಅಪಘಾತಕ್ಕೆ ಒಳಗಾಗಿ ತನ್ನ ಉದರದೊಳಗಿನ ವಿವಿಧ ಭಾಗಗಳ ಪರಿಚಯವನ್ನೂ (ಗ್ಯಾರೇಜಿನಲ್ಲಿ) ನನಗೆ ಮಾಡಿಸಿಕೊಟ್ಟಿತು.

ಬರಿಯ ರಥಿಕ ನಾನಾದರೆ ಸಾಲದು, ಸಾರಥಿಯೂ ಆಗುವುದು ಅಗತ್ಯ ಎಂದು ತಿಳಿದು ವ್ಯಾನನ್ನು ಓಡಿಸಲೂ ಕಲಿಯಬೇಕಾಯಿತು. ಹಲವಾರು ವರ್ಷಗಳವರೆಗೆ ಸೇವೆ ಸಲ್ಲಿಸಿದ ಆ ವ್ಯಾನಿನಲ್ಲಿ ‘ಡ್ರೈವಿಂಗ್’ ಎಂದರೆ ಎಷ್ಟು “ಸುಖಕರ”ವಾದ ವೃತ್ತಿ ಎಂಬುದರ ಮರ್ಮವನ್ನು ನಾನರಿಯುವಂತಾಯಿತು.

ಒಂದು ಶಿಬಿರದಿಂದ ಇನ್ನೊಂದು ಶಿಬಿರಕ್ಕೆ ಐವತ್ತು ಮೈಲುಗಳ ಅಂತರವಿದ್ದರೂ ಬೆದರದೆ ಸಾಗುವ ಅನುಕೂಲ- ಆಗಾಗ ಕೈ ಕೊಡುತ್ತಿದ್ದರೂ – ಆ ವ್ಯಾನಿನಿಂದ ನಮಗಾಯಿತು.

ಮೈಕಾಸುರ

ಧ್ವನಿವರ್ಧಕಗಳನ್ನು ನಾವು ಉಪಯೋಗಿಸತೊಡಗುವಾಗ, ಸ್ವಲ್ಪ ವಿಳಂಬವಾಗಿತ್ತು. ಆದರೆ ಅದಕ್ಕೆ ಮೊದಲು ಕೆಲವು ಕಡೆ ಕರೆಸಿ ಆಡಿದ ಆಟಗಳಲ್ಲೂ, ಮಳೆಗಾಲಗಳಲ್ಲಿ ಮುಂಬಯಿಗೆ ತೆರಳಿದ್ದಾಗಲೂ ‘ಮೈಕ್’ನ ಒಳಗಿನಿಂದ ನನ್ನ ಮಾತು ಹೊರಡಬೇಕಾದರೆ ಹೇಗೆ ನಿಲ್ಲಬೇಕು, ಎಲ್ಲಿ ಕುಣಿಯಬೇಕು ಎಂಬುದನ್ನು ತಿಳಿದುಕೊಂಡಿದ್ದೆ. ಆದುದರಿಂದ ವೈಯಕ್ತಿಕವಾಗಿ ನನಗೆ ಅಷ್ಟೊಂದು ಶ್ರಮವಾಗಲಿಲ್ಲವಾದರೂ, ಇತರರ ಮಟ್ಟಿಗೆ ‘ಮೈಕಾಸುರನೆಲ್ಲಿರುವ?’ ಎಂದು ಆಗಾಗ ನೆನಪು ಮಾಡಿಕೊಳ್ಳುವ ಪ್ರಮೇಯ ಬಂದೊದಗಿ ಆರಂಭದ ದಿನಗಳಲ್ಲಿ ಕಷ್ಟವಾಯಿತು.

ರಂಗಸ್ಥಳದ ಯಾವ ಭಾಗದಲ್ಲಿ ಅದನ್ನು ತೂಗು ಹಾಕಿದರೆ, ಸಂದರ್ಭವಶಾತ್ ಸಭೆಗೆ ಬೆನ್ನು ತೋರಿಸಿ ಮಾತನಾಡಿದವನ ಮಾತೂ ಕೇಳಿಸುವಂತಾಗಬಹುದು ಎಂದು ಕಂಡು ಹಿಡಿಯಲು ಕೆಲವು ದಿನಗಳೇ ಹಿಡಿಯಿತು. ಹಾಗೆಯೇ ತಾರಸ್ಥಾಯಿಯಲ್ಲಿ ಸ್ವರ ಹೊರಡಿಸುವ ಭಾಗವತರು ಮತ್ತು ವಿಶಿಷ್ಟ ನಾದದ ಚೆಂಡೆ ಇವುಗಳೆಲ್ಲಕ್ಕೂ ಹೊಂದಾಣಿಕೆಯಾಗುವಂತೆ ಅದನ್ನು ಜೋಡಿಸಿಕೊಳ್ಳಲೂ ಕಲಿಯಬೇಕಾಯಿತು.ರಂಗಸ್ಥಳಕ್ಕೆ ಮತ್ತು ಡೇರೆಯ ಇತರ ಕಡೆಗಳಿಗೆ ಬೆಳಕನ್ನು ಒದಗಿಸುವ “ಜನರೇಟರ್” ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ವಿದ್ಯುತ್ತಿನ ವಿತರಣೆ ಹೇಗೆ ಆಗುತ್ತದೆ? ಎಂಬುದನ್ನು ಅನಂತರದ ವರ್ಷ ಕಲಿಯುವ ಅವಕಾಶ ಬಂತು.ಆಗ ‘ದೊಂದಿ’ ಯುಗದಿಂದ ಪೆಟ್ರೊಮೆಕ್ಸ್ ಯುಗಕ್ಕೆ ಬಂದ ಬಣ್ಣಗಾರಿಕೆ ಸಾಲದು; ವಿದ್ಯುದ್ದೀಪಗಳಿಗೆ ಅನುಗುಣವಾಗಿ, ಮುಖಕ್ಕೆ ಬಳಿಯುವ ಬಣ್ಣದ ಛಾಯೆಯಲ್ಲೂ ಬದಲಾವಣೆಯಾಗಬೇಕಾಗುತ್ತದೆ ಎಂಬುದೂ ತಿಳಿಯಿತು. ಅದನ್ನು ಇತರರಿಗೂ ತಿಳಿಸಿ ಕೊಡಬೇಕಾಯಿತು.

ರಂಗಸ್ಥಳಕ್ಕೆ ಹೆಚ್ಚಿನ ಪ್ರಕಾಶವನ್ನು ಒದಗಿಸುವ ದೀಪಗಳಿಂದಾಗಿ ಜನರ ಕಣ್ಣು ಕುಕ್ಕುವಂತಾಗಬಾರದು- ಅವುಗಳನ್ನು ಹೊರ ಭಾಗದಿಂದ ಮುಚ್ಚಿರಬೇಕು. ಕುಳಿತುಕೊಳ್ಳುವಲ್ಲಿ ಸಂಪೂರ್ಣ ಕತ್ತಲೆ ಮಾಡಲು ಸಾಧ್ಯವಿಲ್ಲದ ಕಾರಣ ಎರಡೂ ಕಡೆಯ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದೂ ತಿಳಿದುಕೊಳ್ಳಬೇಕಾಯಿತು.

ದಾರಿಯಲ್ಲೇ ಬಾಯ್ಬಿಟ್ಟು ಕೈಕೊಡುವ ಟೈರನ್ನು ತೇಪೆ ಹಾಕಲೂ ಕಲಿತೆ. ಎಂಜಿನಿನ ತಡೆಗೆ ಇರುವ ಕಾರಣ- ನಿವಾರಣೆಗಳನ್ನೂ ಅರಿತೆ. ಜೊತೆಗೆ, ಯಾವ ರಸ್ತೆಯಲ್ಲಿ ಯಾವ ಕಡೆಗೆ ಕೈ ತೋರಬೇಕು? ಪೊಲೀಸರು ಯಾವ ರಸ್ತೆಯ ಅಂಚಿನಲ್ಲಿ ಹೊಂಚು ಹಾಕುತ್ತಾರೆ- ಎಲ್ಲಿ ಧೈರ್ಯವಾಗಿ ಎದುರು ನಿಂತು, ನಮ್ಮನ್ನು ನಿಲ್ಲಿಸುತ್ತಾರೆ ಎಂಬುದನ್ನೂ ತಿಳಿದುಕೊಂಡೆ.ವಾಲ್ಟ್‌ಗಳ ಪರಿಚಯವೂ ಆಯಿತು. ಧ್ವನಿ ಹಿಗ್ಗಿಸುವ ಚೌಕಟ್ಟಿನಲ್ಲಿ ಇರುವ ನಾಲ್ಕು ಗುಂಡಿಗಳನ್ನು ತಿರುವುವುದೇಕೆ? ಎಂದೂ ತಿಳಿಯಿತು.ಡೀಸೆಲ್ ಎಂಜಿನಿಗೆ ‘ಸ್ಪಾರ್ಕ್ ಪ್ಲಗ್’ ಏಕೆ ಬೇಡ? ಎಂಬುದನ್ನೂ ತಿಳಿದುಕೊಳ್ಳಬೇಕಾಯಿತು. ಸ್ವಿಚ್ ಬೋರ್ಡ್ ಏನು ಎಂಬುದೂ ಗೊತ್ತಾಯಿತು.

ಒಂದೊಂದು ಹೊಸ ಸಲಕರಣೆ ಬರುವಾಗಲೂ, ಅದು ಹೇಗೆ ಕೆಲಸ ಮಾಡುತ್ತದೆ? ಎಂದು ಕುತೂಹಲ ತೋರುತ್ತಿದ್ದ ನನ್ನನ್ನು-

“ಅವೆಲ್ಲವನ್ನೂ ತಿಳಿದು ಏನು ಮಾಡುತ್ತೀಯಾ?” ಎಂದವರಿದ್ದಾರೆ.

“ಯಕ್ಷಗಾನಕ್ಕೆ ಅವೆಲ್ಲ ಬೇಕು ಎಂದಾದರೆ ನಾನೂ ಅವುಗಳ ವಿಷಯ ತಿಳಿದುಕೊಳ್ಳಬೇಕು. ನಾನೂ ಯಕ್ಷಗಾನದ ಒಂದು ಕಣ ತಾನೆ?” ಎಂದಿದ್ದೆ.

ಈಗ, ಅವುಗಳಾವುವೂ ನನ್ನ ಉಪಯೋಗಕ್ಕೆ ಇಲ್ಲ. ಅವುಗಳ ಅಗತ್ಯವೂ ನನಗೆ ಇಲ್ಲ. ಆದರೆ, ಆಗಿನ ಪರಿಚಯ ಮತ್ತು ಅನುಭವಗಳಿಂದ-

ಯಾವುದನ್ನು ಎಲ್ಲಿ ಉಪಯೋಗ ಮಾಡಿಕೊಳ್ಳಬಹುದು? ಹೇಗೆ ಅವುಗಳ ಪ್ರಯೋಜನ ಪಡೆಯಬಹುದು? ಇನ್ನೂ ಯಾವ ವಸ್ತುಗಳು ಉಪಯೋಗಕ್ಕೆ ಬರುವಂತೆ ಮಾಡಬಹುದು? ಎಂದು ಆಸಕ್ತರಿಗಾದರೂ ಸಲಹೆ ಕೊಡುವಂತಾಗಿದ್ದೇನೆ..

ಜೋಡಾಟ
ಯಕ್ಷಗಾನದಲ್ಲಿ ಎರಡು ಮೇಳಗಳೊಳಗೆ ಸ್ಪರ್ಧೆಯನ್ನು ಏರ್ಪಡಿಸುವ ಕ್ರಮವಿದೆ. ಅಕ್ಕಪಕ್ಕದಲ್ಲೇ ಎರಡು ರಂಗಸ್ಥಳಗಳನ್ನು ರಚಿಸಿ, ಆಯ್ಕೆ ಮಾಡಿದ ಒಂದೇ ಪ್ರಸಂಗವನ್ನು ಎರಡೂ ಮೇಳಗಳವರೂ ಆಡಿ ತೋರಿಸುವ ಆ ಕ್ರಮಕ್ಕೆ ‘ಜೋಡಾಟ’ ಎನ್ನುತ್ತಾರೆ. ಸಾಮಾನ್ಯವಾಗಿ ನಡೆಯುವ ಆಟಕ್ಕಿಂತ, ನಾಲ್ಕು ಪಾಲು ಜನ ಸೇರುವ ಸಂದರ್ಭ ಅದು. ಪ್ರತಿಯೊಂದು ವಿಚಾರದಲ್ಲೂ ಎರಡು ಮೇಳಗಳೊಳಗೆ ಕಠಿಣ ಸ್ವರ್ಧೆ ಇರುತ್ತದೆ. ಸ್ಪರ್ಧೆಯಲ್ಲಿ ಗೆದ್ದ ಮೇಳಕ್ಕೆ ಇರುವುದು ಪ್ರಶಂಸೆಯ ಹೆಗ್ಗಳಿಕೆ ಮಾತ್ರ. ಕುಣಿಸಿ ನೋಡುವ ಜನರ ಬಾಯಿಂದ “ಆ… ಮೇಳ ಚೆನ್ನಾಗಿತ್ತು” ಎಂಬ ಹೊಗಳಿಕೆಯನ್ನು ಆಟದ ಮರುದಿನ ಹತ್ತು ಊರುಗಳಲ್ಲಿ ಕೇಳಿದರೆ, ನಮ್ಮ ಬದುಕು ಸಾರ್ಥಕವಾಯಿತು ಎಂದುಕೊಳ್ಳಬೇಕು.ಅಂತಹ ಜೋಡಾಟಗಳು ಜರುಗುವುದೂ ಅಪರೂಪ. ಆದುದರಿಂದ ಜನರೂ ಹೆಚ್ಚಾಗಿ ಸೇರುತ್ತಿದ್ದರು. ಅಲ್ಲಿನ ಆಕರ್ಷಣೆ ಏನಿದ್ದರೂ ಕಣ್ಣಿನದು. ಎರಡು ರಂಗಸ್ಥಳಗಳಲ್ಲಿ, ಒಂದೇ ಬಾರಿಗೆ ಹತ್ತಿಪ್ಪತ್ತು ಜನರು ಬಂದು, ಝಗಝಗಿಸುವ ವೇಷಭೂಷಣಗಳಿಂದ ಮೆರೆದು ಕಣ್ಸೆಳೆದು ಹೋಗಬೇಕಾದ ಸಂದರ್ಭ. ಕಿವಿಗಂತೂ ಅಲ್ಲಿ ಕೆಲಸ ಕೊಡದಿರುವುದೇ ಒಳ್ಳೆಯದು. ಅರ್ಥ ಹೇಳುವುದನ್ನು ತಪ್ಪಿಸುವಂತಿಲ್ಲ. ಆದರೆ, ಆ ಅರ್ಥ, ಪ್ರಾಯಶಃ ಹೇಳಿದವನಿಗೂ ಕೇಳಲಾರದ ಪರಿಸ್ಥಿತಿ.ಒಂದು ರಂಗಸ್ಥಳದಲ್ಲಿ ಪಾತ್ರಧಾರಿಯ ಅರ್ಥವಿವರಣೆ ಪ್ರಾರಂಭವಾದಾಗಲೇ, ಪಕ್ಕದ ರಂಗಸ್ಥಳದಲ್ಲಿ ಭಾಗವತರು ಪದ್ಯವನ್ನು ಆರಂಭಿಸುವುದು, ಚೆಂಡೆಯ ಬಡಿತದಲ್ಲಿ, ಈ ಅರ್ಥ ಮಾಯವಾಗುವುದು ಸ್ವಾಭಾವಿಕ ಕ್ರಮ. ಆಗ, ಕಾಣಿಸುವುದಷ್ಟನ್ನೇ ಸಕಲ ವೈಭವಗಳಿಂದ ಕಾಣಿಸುವುದು ಕ್ಷೇಮ ಎನಿಸುತ್ತದೆ. ಜನರೂ ಅದನ್ನು ನಿರೀಕ್ಷಿಸುತ್ತಾರೆ.

ಜೀವನ್ಮರಣದ ಹೋರಾಟ

ಸ್ವರ್ಧೆ ಬೆಳೆದು ವೈಷಮ್ಯಕ್ಕೂ ದಾರಿ ಆದುದಿದೆ. ಮೇಳಗಳ ಯಜಮಾನರೂ, ವೇಷಧಾರಿಗಳೂ ದ್ವೇಷ ಸಾಧಿಸಿ, ಜಗಳ ಆಡಿ ಹೊಡೆದಾಡಿಕೊಂಡುದಿದೆ.ಜೋಡಾಟ, ಊರವರಿಗೊಂದು ಹಬ್ಬವಾದರೂ, ಮೇಳದ ಯಜಮಾನರಿಗೆ- ಕಲಾವಿದರಿಗೆ ಜೀವನ್ಮರಣದ ಹೋರಾಟವಾಗುತ್ತದೆ. “ನಾವು ಮೆರೆಯಬೇಕು” ಎಂಬ ಒಂದೇ ಹಟ ತೊಟ್ಟು, ಬಟ್ಟೆಯ ಅಂಗಡಿಯ ಜವುಳಿಯನ್ನೆಲ್ಲ ಖರೀದಿ ಮಾಡಿ, ಹೊಸ ಉಡುಗೆ-ತೊಡುಗೆಗಳನ್ನು ತಯಾರಿಸಿ, ಹೊಸ ಕಿರೀಟಗಳನ್ನು ಸಿದ್ಧಗೊಳಿಸಿಕೊಳ್ಳುವುದು, ಅವರವರ ಮೇಳದ ದೇವಸ್ಥಾನಗಳಲ್ಲಿರುವ ಹಸಿರು ಕೊಡೆ- ಚಿನ್ನಾಭರಣಗಳನ್ನು ತಂದು ಉಪಯೋಗಿಸುವುದು, ಸಿಡಿಮದ್ದು ಸಿಡಿಸುವುದು, ಮಾಲೆಗಳನ್ನು ಹಾಕಿಸುವುದು, ಹೇಗಾದರೂ ನಮ್ಮ ಮೇಲ್ಮೆಯ ಪ್ರದರ್ಶನವಾಗಬೇಕು ಎನ್ನುವುದು- ಇವುಗಳಿಂದಾಗಿ ಒಂದು ಜೋಡಾಟ ಮುಗಿಯುವ ಹೊತ್ತಿಗೆ ಮೇಳದ ಯಜಮಾನ ಹಿಂಡಿ ಹಿಪ್ಪೆಗಾಯಿ ಆಗಿಹೋಗುತ್ತಿದ್ದ. ಅವನ ಸ್ನೇಹಿತರೂ ಸಂಬಂಧಿಕರೂ ಅಷ್ಟೇ ಶ್ರಮಕ್ಕೊಳಗಾಗುತ್ತಿದ್ದರು.ಆದರೆ, ಜೋಡಾಟಕ್ಕೆ ಕರೆ ಬಂದರೆ ಬೇಡ ಎನ್ನಲು ಯಾರಿಗೂ ಧೈರ್ಯ ಇರಲಿಲ್ಲ. ಅದು ಮಾನಾಪಮಾನದ ಪ್ರಶ್ನೆ ಆಗುತ್ತಿತ್ತು.

ಕಲಾವಿದರ ದೇಹ ಮತ್ತು ಯಜಮಾನನ ಹಣ ಇವುಗಳ ಶಕ್ತಿಯ ಪ್ರದರ್ಶನವೆಂದರೆ ಜೋಡಾಟ ಹೊರತು ಅದನ್ನು ಕಲಾ ಪ್ರದರ್ಶನವೆಂದು ಕರೆಯಲು ಮನಸ್ಸಾಗುವುದಿಲ್ಲ.

ಅಪರೂಪಕ್ಕೆ ಜೋಡಾಟವಾಗುವುದಿದ್ದರೆ, ಎಲ್ಲಾದರೂ, ಕೆಲವು ವರ್ಷಕ್ಕೆ ಒಂದು ಬಾರಿ ಮೂರು- ನಾಲ್ಕು ಮೇಳಗಳ ಸ್ಪರ್ಧೆಯ ಆಟಗಳೂ ಈಗೀಗ ಎಂಬ ಹಾಗೆ ನಡೆಯತೊಡಗಿವೆ. ಈಗಲಂತೂ, ಪುಕ್ಕಟೆಯಾಗಿ ತೋರಿಸುವ ಬಯಲಾಟ (ತೆಂಕುತಿಟ್ಟಿನ ಮಟ್ಟಿಗೆ) ಮಾಯವೇ ಆಗಿ ಹೋಗಿದೆ. ಆದ್ದರಿಂದ ಮೂರು ಮೇಳದ ಆಟವನ್ನಾಡಿಸುವವರು – ಕೇವಲ ಹಣ ಗಳಿಸುವ – ಒಂದೇ ದೃಷ್ಟಿಯನ್ನಿಟ್ಟಿರುತ್ತಾರೆ.

ಜೋಡಾಟದಲ್ಲಿ ಪಾತ್ರಧಾರಿಯಾದವನು ಅರ್ಥ ಹೇಳುವಾಗ ಸಾಧ್ಯವಿದ್ದಷ್ಟೂ ಸ್ವರವೇರಿಸಿ ಮಾತನಾಡಬೇಕು ಎಂದು ಭಾವಿಸುವ ಕಲಾವಿದರು ಬಹಳ ಮಂದಿ ಇದ್ದಾರೆ. ನಾನು ಅದಕ್ಕೆ ತೀರಾ ವ್ಯತಿರಿಕ್ತವಾದ ಒಂದು ತಂತ್ರವನ್ನು ಉಪಯೋಗಿಸಿದೆ.

ಗೊಂದಲದಲ್ಲಿ ಎಷ್ಟು ಗಟ್ಟಿಯಾಗಿ ಮಾತನಾಡಿದರೂ ಕೇಳಿಸದು, ಎಂಬ ವಿಚಾರ ಖಚಿತವಿತ್ತು. ಕುಣಿತಕ್ಕೂ ಅಂಗಗಳ ಅಭಿನಯಕ್ಕೂ ಹೆಚ್ಚಿನ ಪ್ರಾಮುಖ್ಯ ಕೊಟ್ಟು, ಮಾತುಗಳನ್ನು ಬರಿಯ ತುಟಿ ಚಲನೆಯಲ್ಲೇ ತೀರಿಸಿಬಿಡತೊಡಗಿದೆ. ಅಭಿನಯ ಮಾತ್ರ, ಬಹಳಷ್ಟು ಕಷ್ಟಪಟ್ಟು ಏರು ಧ್ವನಿಯಲ್ಲೇ ಮಾತನಾಡುವಂತಿರುತ್ತಿತ್ತು. ಅದರಿಂದಾಗಿ ನಾನು ಧ್ವನಿ ಹೊರಡಿಸದಿದ್ದರೂ, ಬಹಳ ಚೆನ್ನಾಗಿ ಮಾತನಾಡುತ್ತೇನೆ ಎಂಬ ಅಭಿಪ್ರಾಯ ಜೋಡಾಟದಲ್ಲಿ ನನ್ನನ್ನು ನೋಡುವ ಜನರಿಗೆ ಬಂದಿತು.

ಜೋಡಾಟಗಳಲ್ಲಿ ಸೋಲು-ಗೆಲುವುಗಳನ್ನು ಅಳೆಯುವ ಮಾನವಾವುದೆಂದು ಇದುವರೆಗೂ ನನಗೆ ತಿಳಿದಿಲ್ಲ.

ಆದರೆ, ಕುಣಿದವರು, ಚೆನ್ನಾಗಿ ಕುಣಿದಂತೆ ಕಾಣಬೇಕು ಎಂಬ ಕಠಿಣ ನಿಯಮ ನನ್ನ ಜೊತೆಯ ಕಲಾವಿದರಿಗಿತ್ತು.

ಆದುದರಿಂದ, ಜೋಡಾಟದಲ್ಲಿ ಅವರನ್ನೇನು ನೋಡುವುದು ಎಂದು ಯಾರೂ ಹೇಳುವಂತಾಗಲಿಲ್ಲ.

ಯಕ್ಷಗಾನದ ಅದೊಂದು ಅಂಗದಲ್ಲಿ, ನನಗಷ್ಟರಿಂದಲೇ ತೃಪ್ತಿಯಾಗಿದೆ. 25 ವರ್ಷಗಳ ಕುಣಿತದಲ್ಲೂ ಅದೇ ಅಭಿಪ್ರಾಯವನ್ನು ನಾನು ಇರಿಸಿಕೊಂಡಿದ್ದೇನೆ. ಇನ್ನು ಬದಲಾಯಿಸಲೂ ಸಿದ್ಧನಿಲ್ಲ. ಬದಲಾಯಿಸುವ ಅಗತ್ಯವೂ ಇಲ್ಲ.

ಯಕ್ಷಗಾನದ- ಅಂದರೆ ನಮ್ಮಲ್ಲಿನ ಯಕ್ಷಗಾನದ -ಪರಿಚಯ ಜಿಲ್ಲೆಯಿಂದ ಹೊರಗಿನವರಿಗೆ ಆದುದು ಕಡಿಮೆ. ನಾವೇನೋ, ನಮ್ಮವರು ಹೋಗದಿದ್ದ ಜಿಲ್ಲೆಯ ಉತ್ತರಭಾಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೂ ಹೋಗಿ ಬಂದೆವು. ಆದರೆ, ಕನ್ನಡ ನಾಡಿನ ಇತರ ಭಾಗಗಳಿಗೆಲ್ಲ ಭೇಟಿಯನ್ನೇಕೆ ಕೊಡಬಾರದು? ದಕ್ಷಿಣ ಕನ್ನಡಿಗರು ಬಹು ಸಂಖ್ಯೆಯಲ್ಲಿರುವ ಮುಂಬಯಿ ನಗರಕ್ಕೆ ಮಾತ್ರ- ನಮ್ಮ ಪ್ರವಾಸ ಸಂದರ್ಶನವೇಕೆ ಮುಕ್ತಾಯಗೊಳ್ಳಬೇಕು? ಎಂಬ ಪ್ರಶ್ನೆ ನನ್ನನ್ನು ಬಹಳ ದಿನಗಳಿಂದ ಕಾಡುತ್ತಲಿತ್ತು.

ಜಿಲ್ಲೆಯ ಕೆಲವು ತಾಲ್ಲೂಕುಗಳ ಮಿತಿಯನ್ನೇ ದಾಟಲು ಅಂಜುತ್ತಿದ್ದ ಪರಿಸ್ಥಿತಿ ಮಾಯವಾಗಿ, ಕೈಗೊಂಡ ಕೆಲವು ಪ್ರಯೋಗಗಳಾದರೂ ಯಶಸ್ವಿಯಾಗುವ ಸೂಚನೆ ತೋರಿದಾಗ, ಹೊರಗೆ ಹೊರಡುವ ಸಂದರ್ಭವೂ ಬಂದಿತು.

(ಅದಕ್ಕೆ ಮೊದಲು ಆಕಾಶವಾಣಿಯಲ್ಲಿ ತಾಳಮದ್ದಳೆ ಒಂದು ಧ್ವನಿ ಮುದ್ರಣಕ್ಕಾಗಿ ಮಾತ್ರ ಧಾರವಾಡಕ್ಕೆ ನಾನು ಹೋದವನು. ಮುಂಬಯಿಯ ಆಟಗಳಿಗಾದರೂ ಮೇಳದ ಎಲ್ಲ ಜನರನ್ನೂ ಕಟ್ಟಿಕೊಂಡು ಹೋದವನಲ್ಲ.)

ಮಂಜೇಶ್ವರದಲ್ಲಿ ಶ್ರೀ ಪರಮಶಿವಮ್ ಅವರ ಬಳಿ, ಮುದ್ರೆಗಳ ಪ್ರಯೋಗ ನಡೆಸಿದ್ದ ಕೆಲವೇ ದಿನಗಳು ಕಳೆದ ತರುವಾಯ-

ಒಂದು ದಿನ ಇದ್ದಕ್ಕಿದ್ದಂತೆ (ದಸರಾದ ದಿನ ಸಮೀಪಿಸಿತ್ತು) ನನ್ನ ಅಳಿಯ ಗೋಪಾಲಕೃಷ್ಣನಿಂದ ಒಂದು ಕಾಗದ ಬಂದಿತು.

“ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ, ಯಕ್ಷಗಾನದ ಒಂದು ಕಾರ್ಯಕ್ರಮಕ್ಕೆ ಅವಕಾಶ ದೊರಕಿಸಿಕೊಂಡಿದ್ದೇನೆ. ಬರುತ್ತೀರಾ?” ಎಂದು ಅವನು ಪ್ರಶ್ನಿಸಿದ್ದ. ಹೆಚ್ಚಿನ ವಿವರಗಳೇನನ್ನೂ ತಿಳಿಯದೆ, ಏನು ಹೇಳಲೂ ಸಾಧ್ಯವಾಗದು ಎಂದಾಗ, ವಿವರ ಚರ್ಚಿಸಲು ಅವನೇ ಊರಿಗೆ ಬಂದ.

 (ಮುಂದಿನ ವಾರಕ್ಕೆ)

ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. 1928 -1997)

ಕೃಪೆ : ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ  ಮತ್ತು ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟ್ (ರಿ).

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments