ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 5, 2011

2

ಪುನರ್ಜನ್ಮ – ಒಂದು ವಿವೇಚನೆ

‍ನಿಲುಮೆ ಮೂಲಕ

– ಗೋವಿಂದ ರಾವ್ ವಿ ಅಡಮನೆ

ಪುನರ್ಜನ್ಮ – ತಥ್ಯವೇ, ಮಿಥ್ಯಾಕಲ್ಪನೆಯೇ? ‘ಅತಿ ಸೂಕ್ಷ್ಮವಾದ ನಯವಾದ ಸದಾ ಚಲಿಸುತ್ತಿರುವ ಕಣಗಳಿಂದ ನಿರ್ಮಿತವಾದ ಆತ್ಮವು ವ್ಯಕ್ತಿ ಸತ್ತಾಗ ಚೆದರಿ ಹೋಗುತ್ತವೆ’, ‘ಪ್ರಾಣ ಿರುವಾಗ ಮಾನವ ಸಂತೋಷವಾಗಿ ಬದುಕಲಿ, ಸಾಲ ಮಾಡಿ ಆದರೂ ತುಪ್ಪ ತಿನ್ನಲಿ, ದೇಹ ಬೂದಿ ಆದ ನಂತರ ಅದು ಹಿಂತಿರುಗುವುದೆಂತು?’  ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಅಲ್ಲಗಳೆಯುವ ಭೋಗಪ್ರಿಯ ವಾದಗಳನ್ನು ನಂಬೋಣವೇ? ಅಥವ ‘ಒಬ್ಬ ವ್ಯಕ್ತಿ ಜೀರ್ಣವಾದ ವಸ್ತ್ರವನ್ನು ತೊರೆದು ಹೊಸ ವಸ್ತ್ರ ಧರಿಸುವಂತೆ ಆತ್ಮವು ಜೀರ್ಣವಾದ ಶರೀರವನ್ನು ತೊರೆದು ಹೊಸ ಶರೀರವನ್ನು ಧರಿಸುತ್ತದೆ’, ‘ಶರೀರ ರಥ, ಆತ್ಮ ರಥಿ. ರಥ ಮುರಿದಾಗ ರಥಿ ಹೊಸದೊಂದು ರಥವೇರಿ ಪಯಣ ಮುಂದುವರಿಸುತ್ತಾನೆ’ ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಸಾರುವ ಆಧ್ಯಾತ್ಮಪ್ರಿಯ ವಾದಗಳನ್ನು ನಂಬೋಣವೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸುವುದೇ ಮೂರ್ಖತನವಾದೀತೇ? ಕೆಲವು ಸಂಶಯವಾದಿಗಳು ವಾದಿಸುತ್ತಿರುವಂತೆ ‘ಪುನರ್ಜನ್ಮದ ಪರಿಕಲ್ಪನೆ ನಿಜವಾಗಿರಲು ಸಾಧ್ಯವಿಲ್ಲ, ಆದ್ದರಿಂದ ಅದು ನಿಜವಲ್ಲ’ ಎಂದು ನಾವೂ ಹೇಳೋಣವೇ?

ಅನಾದಿ ಕಾಲದಿಂದಲೂ ನಡೆಯುತ್ತಿರುವ ಈ ಚರ್ಚೆಯ ಕುರಿತು ಆಧುನಿಕ ವಿಜ್ಞಾನಿಗಳ, ವಿಚಾರವಾದಿಗಳ ನಿಲುವೇನು? ಸಮ್ಮೋಹಿತ ನಿವರ್ತನ ತಂತ್ರದಿಂದ ಪುನರ್ಜನ್ಮ ಸ್ಮರಣೆ ಯ ಕುರಿತು ಈಗಾಗಲೇ ಚರ್ಚಿಸಿದ್ದೇನೆ. ಅಧಿಮನಃಶಾಸ್ತ್ರಜ್ಞರು (ಪ್ಯಾರಸೈಕಾಲಜಿಸ್ಟ್ಸ್) ಪುನರ್ಜನ್ಮ ಒಂದು ತಥ್ಯ ಎಂದು ಸಮರ್ಥಿಸಲು ನೀಡುವ ಇತರ ಸಾಕ್ಞ್ಯಾಧಾರಗಳನ್ನೂ ಅವನ್ನು ಅಲ್ಲಗಳೆಯುವ ವಾದಗಳನ್ನೂ ಅವಲೋಕಿಸಿದರೆ ನೀವು ನಿಮ್ಮದೇ ಆದ ತೀರ್ಮಾನ ಕೈಗೊಳ್ಳಲು ಸಾಧ್ಯವಾದೀತು. ಎಂದೇ ಅವುಗಳ ಪಕ್ಷಿನೋಟವನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ.

ಮಕ್ಕಳು ನಿರೂಪಿಸುವ ಪೂರ್ವಜನ್ಮ ಸ್ಮರಣೆಗಳು: ಸುಮಾರು ೨-೪ ವರ್ಷ ವಯಸ್ಸಿನ ಮಕ್ಕಳು ಸ್ವಪ್ರೇರಣೆಯಿಂದ ತಮ್ಮ ಹಿಂದಿನ ಜನ್ಮಕ್ಕೆ ಸಂಬಂಧಿಸಿದ ವ್ಯಕ್ತಿಗಳ, ಸ್ಥಳಗಳ, ಘಟನೆಗಳ ಆಮೂಲಾಗ್ರ ವಿವರಗಳನ್ನು ಹೇಳಿದ ಸಾವಿರಾರು ವಿದ್ಯಮಾನಗಳು ಜಗತ್ತಿನಾದ್ಯಂತ, ವಿಶೇಷವಾಗಿ ಪೌರಾತ್ಯ ರಾಷ್ಟ್ರಗಳಲ್ಲಿ ವರದಿಯಾಗಿವೆ. ಇಂಥ ವರದಿಗಳ ಸತ್ಯಾಸತ್ಯತೆಯನ್ನು ಸುಮಾರು ನಾಲ್ಕು ದಶಕ ಕಾಲ ಅಧ್ಯಯಿಸಿದ ಡಾ ಇಯಾನ್ ಪ್ರೆಟಿಮ್ಯಾನ್ ಸ್ಟೀವನ್ಸನ್ (೧೯೧೮-೨೦೦೭) ಪ್ರಕಟಿಸಿದ ‘ಟ್ವೆಂಟಿ ಕೇಸಸ್ ಸಜೆಸ್ಟಿವ್ ಆಫ್ ರಿಇನ್ಕಾರ್ನೇಶನ್’ ಪುಸ್ತಕದಲ್ಲಿ ಆಸಕ್ತಿಯನ್ನು ತೀವ್ರವಾಗಿ ಕೆರಳಿಸಬಲ್ಲ ುದಾಹರಣೆಗಳು ಇವೆ. ಪುನರ್ಜನ್ಮ ಒಂದು ತಥ್ಯ ಎಂದು ಒಪ್ಪಿಕೊಂಡರೆ ಮಾತ್ರ ಈ ವಿದ್ಯಮಾನಗಳನ್ನು ವಿವರಿಸಲು ಸಾಧ್ಯವೇ ವಿನಾ ಯಾವುದೇ ಪ್ರಚಲಿತ ವೈಜ್ಞಾನಿಕ ಸಿದ್ಧಾಂತಗಳ ನೆರವಿನಿಂದ ಅಲ್ಲ ಎಂಬುದು ಸ್ಟೀವನ್ಸನ್ ಅಭಿಮತ. ಪ್ರತೀ ವಿದ್ಯಮಾನ ನಿಜ ಎಂದು ಹೇಳಲು ಬಹುಸಂಖ್ಯೆಯಲ್ಲಿ ಸಾಕ್ಷಿಗಳು ಇದ್ದದ್ದು, ಇಂಥ ಸುಳ್ಳು ಹೇಳಲು ಮಕ್ಕಳಿಗೇ ಆಗಲಿ ಅವರ ಜನ್ಮದಾತೃಗಳಿಗೇ ಆಗಲಿ ಯಾವುದೇ ಪ್ರಬಲ ಪ್ರೇರಣೆ ಇದ್ದಂತೆ ತೋರದೇ ಇದ್ದದ್ದು, ಪ್ರಸಾಮಾನ್ಯ ಸಂಪರ್ಕ ಅಥವ ಸಂವಹನದಿಂದ ಪಡೆಲಾಗದಷ್ಟು ವಿವರವಾದ ಮತ್ತು ಸರಿಯಾದ ಮಾಹಿತಿ ಮಕ್ಕಳಲ್ಲಿ ಇದ್ದದ್ದು, ಹಿಂದಿನ ಜನ್ಮದಲ್ಲಿ ಇದೆಯೆಂದು ಹೇಳಲಾದ ಈ ಜನ್ಮದಲ್ಲಿ ಕಲಿಯಲು ಅವಕಾಶ ಇಲ್ಲದೇ ಇದ್ದ ವ್ಯಕ್ತಿತ್ವ ಲಕ್ಷಣಗಳನ್ನೂ ಕುಶಲತೆಗಳನ್ನೂ ಈ ಮಕ್ಕಳು ಪ್ರದರ್ಶಿಸುತ್ತಿದ್ದದ್ದು, ಹಿಂದಿನ ಜನ್ಮದಲ್ಲಿ ಆಗಿತ್ತು ಎಂದು ಹೇಳಲಾದ ದುರ್ಘಟನೆಗಳನ್ನು ಪುಷ್ಟೀಕರಿಸುವ ಅಂಗವಿಕಲತೆ ಅಥವ ಹುಟ್ಟುಮಚ್ಚೆ ಇದ್ದದ್ದು – ಇವು ಅವನ ತೀರ್ಮಾನಕ್ಕೆ ಕಾರಣಗಳು. ಸ್ಟೀವನ್ಸನ್ ಅಧ್ಯಯಿಸಿದ ಮಕ್ಕಳನ್ನು ಇತರ ಸಂಶೋಧಕರು ಅಧ್ಯಯಿಸಿ ತಾಳೆ ನೋಡದೇ ಇರುವುದರಿಂದ ಅವನ ತೀರ್ಮಾನವನ್ನು ವೈಜ್ಞಾನಿಕ ಜಗತ್ತು ಒಪ್ಪಿಕೊಳ್ಳುವದಿಲ್ಲ. ಎಂದೇ, ‘ ಆತ ಬಲು ಸುಲಭವಾಗಿ ಇತರರನ್ನು ನಂಬುವ ಸ್ವಭಾವದವನಾಗಿದ್ದಿರಬೇಕು’ ಎಂಬ ಟೀಕೆ ಇದೆ. ಆಧುನಿಕ ವಿಜ್ಞಾನದ ಪ್ರಕಾರ ಸ್ಟೀವನ್ಸನ್ ಸಂಗ್ರಹಿಸಿದ ಮಾಹಿತಿಗಳೆಲ್ಲವೂ ಉಪಾಖ್ಯಾನ (ಆನೆಕ್ಡೋಟ್) ರೂಪದವು ಆಗಿರುವುದರಿಂದ ಅವನ್ನು ಪರಮೋತ್ಕೃಷ್ಟ ಸಾಕ್ಷ್ಯಾಧಾರ ಎಂದು ಪರಿಗಣಿಸಿ ಸರ್ವಮಾನ್ಯ ಸಾರ್ವತ್ರೀಕರಣ ರೂಪಿಸಲು ಸಾಧ್ಯವಿಲ್ಲ. ಹುಟ್ಟುಮಚ್ಚೆಗೆ ಸಂಬಂಧಿಸಿದಂತೆ ಸಂಗ್ರಹಿಸಿದ ಮಾಹಿತಿ ಅವು ಕಾಕತಾಳೀಯ ಅಲ್ಲ ೆಂದು ಘಂಟಾಘೋಷವಾಗಿ ಸಾರಲು ಅಗತ್ಯವಾದಷ್ಟು ಸಂಖ್ಯೆಯಲ್ಲಿ ಇಲ್ಲ ಎಂಬುದು ಸಂದೇಹವಾದಿಗಳ ಅಭಿಮತ.  ಪುನರ್ಜನ್ಮ ಪರಿಕಲ್ಪನೆಯಲ್ಲಿ ನಂಬಿಕೆಯು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಪೌರಾತ್ಯ ರಾಷ್ಟ್ರಗಳಲ್ಲಿ ಇಂಥ ವಿದ್ಯಮಾನಗಳು ಅಧಿಕ ಸಂಖ್ಯೆಯಲ್ಲಿ ಜರಗುತ್ತಿರುವಂತೆ ಮೇಲ್ನೋಟಕ್ಕೆ ತೋರುತ್ತಿರುವುದೂ ಪೂರ್ವಜನ್ಮ ಸ್ಮರಣೆ ಇದ್ದ ಮಕ್ಕಳ ಪೈಕಿ ಬಹು ಮಂದಿ ಅಪಘಾತ ಕೊಲೆ ಮೊದಲಾದ ಕಾರಣಗಳಿಂದಾಗಿ ಅಕಾಲಿಕ ಮರಣಕ್ಕೆ ಈಡಾದವರೇ ಆಗಿದ್ದದ್ದೂ ಈ ವಿದ್ಯಮಾನಗಳ ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ಮೂಡಿಸುತ್ತವೆ. ಸ್ಟೀವನ್ಸನ್ ನಿಗೆ ಇದರ ಅರಿವು ಇದ್ದುದರಿಂದಲೇ ಆತ ಪುನರ್ಜನ್ಮ ತಥ್ಯವೇ ಅಲ್ಲವೇ ಎಂಬ ಪ್ರಶ್ನೆಗೆ ಖಚಿತ ುತ್ತರ ನೀಡಲಿಲ್ಲ. ಅವನು ತನ್ನ ಸಂಶೋಧನ ಪ್ರಬಂಧಕ್ಕೆ ನೀಡಿದ ಶೀರ್ಷಿಕೆಯೇ ಇದಕ್ಕೆ ಸಾಕ್ಷಿ.

ಮೃತ್ಯು ಸದೃಶ ಸನ್ನಿವೇಶದಲ್ಲಿ ಅನುಭವಗಳು (ನಿಯರ್ ಡೆತ್ ಎಕ್ಸ್ ಪೀರಿಯೆನ್ಸಸ್): ರಕ್ತ ಪರಿಚಲನೆ, ಉಸಿರಾಟ ಮತ್ತು ಕಣ್ಣಿನ ಪಾರದರ್ಶಕ ಪಟಲ (ಕಾರ್ನಿಯ) ಪ್ರತಿವರ್ತನ (ರಿಪ್ಲೆಕ್ಸ್) ಸ್ಥಗಿತಗೊಳ್ಳುವುದಕ್ಕೆ ವೈದ್ಯಕೀಯ ಮೃತ್ಯು (ಕ್ಲಿನಿಕಲ್ ಡೆತ್) ಎಂದು ಹೆಸರು,  ಜೀವಧಾರಣೆಗೆ ಅಗತ್ಯವಾದ ಅನೈಚ್ಛಿಕ ಚಟುವಟಿಕೆಗಳನ್ನೂ ಒಳಗೊಂಡಂತೆ ಮಿದುಳಿನ ಎಲ್ಲ ಚಟುವಟಿಕೆಗಳೂ ಪುನಶ್ಚೇತನಗೊಳಿಸಲಾಗದಂತೆ ಅಂತ್ಯಗೊಳ್ಳುವುದಕ್ಕೆ ಮಿದುಳು ಮೃತ್ಯು (ಬ್ರೇನ್ ಡೆತ್) ಎಂದು ಹೆಸರು. ಮಿದುಳು ಮೃತ್ಯು ಆದ ಬಳಿಕ ವ್ಯಕ್ತಿ ಸತ್ತಿದ್ದಾನೆ ಎಂದು ಘೋಷಿಸಬಹುದು ಅನ್ನುತ್ತದೆ ಕಾನೂನು. ವೈದ್ಯಕೀಯ ಮೃತ್ಯು ಆಗಿದೆ ಎಂದು ವೈದ್ಯರು ಘೋಷಿಸಿದ ಬಳಿಕ (ಅರ್ಥಾತ್)ಸಾವನ್ನು ಸಮೀಪಿಸಿ ಬದುಕಿ ಬಂದವರ ಸಂಖ್ಯೆ -ವಿಶೇಷತಃ ಹೃದಯ ಪುನಃಚಾಲ್ತಿಯ ನವೀನ ತಂತ್ರಗಳ ಆವಿಷ್ಕಾರವಾದ ಬಳಿಕ – ಗಣನಿಯವಾಗಿದೆ. ಇಂಥವರ ಪೈಕಿ ಕೆಲವರು ವೈದ್ಯಕೀಯ ಮೃತ್ಯು ಆದ ಮತ್ತು ಪುನರುಜ್ಜೀವನ ಆದ ಕ್ಷಣಗಳ ನಡುವಿನ ಅವಧಿಯ ಅನುಭವಗಳನ್ನು ವರದಿ ಮಾಡಿದ್ದಾರೆ. ದೇಹವಳಿದ ನಂತರವೂ ಉಳಿಯುವ ‘ಆತ್ಮ’ ಎಂಬುದೊಂದಿದೆ ಮತ್ತು ಸಾವಿನ ನಂತರವೂ ಅದರ ಪಯಣ ಮುಂದುವರಿಯುತ್ತದೆ ಎಂಬುದಕ್ಕೆ ಪುರಾವೆ ಎಂದು ಈ ವರದಿಗಳನ್ನು ಪರಿಗಣಿಸುವವರೂ ಇದ್ದಾರೆ.  ಮೃತ್ಯು ಸದೃಶ ಅನುಭವಗಳ ಕುರಿತಾದ ಆಸಕ್ತಿಯ ಮತ್ತು ಸಂಶೋಧನೆಗಳ ಹೆಚ್ಚಳಕ್ಕೆ ಮನಃಶಾಸ್ತ್ರಜ್ಞ ಹಾಗೂ ವೈದ್ಯ ರೇಮನ್ಡ್ ಮೂಡಿ (೧೯೪೪ಜ) ಪ್ರಕಟಿಸಿದ (೧೯೭೬) ‘ಲೈಫ್ ಆಫ್ಟರ್ ಡೆತ್’ ಪುಸ್ತಕ ಕಾರಣವಾಯಿತು. ಬಹುತೇಕ ಅಧ್ಯಯನಗಳ ಪ್ರಕಾರ ಇಂಥ ಅನುಭವಗಳಲ್ಲಿ ಇರುವ ಸಾಮಾನ್ಯ ಅಂಶಗಳು ಇಂತಿವೆ: ಅಹಿತಕರ ಸದ್ದು ಅಥವ ಗದ್ದಲದ ಅನುಭವ, ಭೌತಜಗತ್ತಿನಿಂದ ದೂರವಾದ ಅನುಭವ, ಸತ್ತಿದ್ದೇನೆ ಎಂಬ ಅರಿವು ಮೂಡುವಿಕೆ, ಶಾಂತಿ ಮತ್ತು ನೋವಿಲ್ಲದಿರುವಿಕೆಯ ಅನುಭವ, ದೇಹದಿಂದ ಹೊರಬಂದು ಭೌತದೇಹ ಮತ್ತು ಅದರ ಸುತ್ತಣ ಪರಿಸರದಲ್ಲಿ ಜರಗುತ್ತಿರುವ ಘಟನೆಗಳನ್ನು ‘ನೋಡುವ’ ಅನುಭವ, ಸೋಪಾನ ಪಂಕ್ತಿಯ ಅಥವ ಅಗಲಕಿರಿದಾದ ಹಾದಿಯ ಅಥವ ಸುರಂಗದ ಮೂಲಕ ಮೇಲೇರಿದ ಅನುಭವ, ಪ್ರಖರ ಬೆಳಕಿನತ್ತ ತೀವ್ರಗತಿಯ ಚಲನೆಯ ಅಥವ ಪ್ರಖರ ಬೆಳಕಿನಲ್ಲಿ ಹಠಾತ್ತನೆ ಮುಳುಗಿದ ಅನುಭವ, ಬೆಳಕಿನೊಂದಿಗೆ ಸಂವಹನದ ಅನುಭವ, ಉಪಾಧಿರಹಿತ ಪ್ರೇಮದ ಅಥವ ಶಾಂತಿಯ ತೀವ್ರಾನುಭವ, ‘ಬೆಳಕಿನ ಸ್ವರೂಪವುಳ್ಳ/ಬಿಳಿ ಉಡುಪು ಧರಿಸಿದ/ಅಭೌತ’ ಜೀವಿಗಳನ್ನು ಭೇಟಿಯಾಗುವಿಕೆ, ಹಿಂದೆಂದೋ ವಿಧಿವಶರಾಗಿದ್ದ ಪ್ರೀತಿಪಾತ್ರರೊಂದಿಗೆ ಪುನರ್ಮಿಲನ, ಆಗ ತಾನೇ ಮುಗಿಸಿದ ಜೀವನದ ಪುನಃಪರಿಶೀಲನೆ, ತನ್ನ ಜೀವನ ಮತ್ತು ವಿಶ್ವ ಸ್ವರೂಪದ ಕುರಿತಾದ ಜ್ಞಾನದ ಪರಿಚಯವಾಗುವುಕೆ, ಇಷ್ಟ ಇಲ್ಲದಿದ್ದರೂ ಪುನಃ ಅದೇ ದೇಹಕ್ಕೆ ಹಿಂದಿರುಗುವಂತೆ ತನ್ನಿಂದ ಅಥವ ಇತರರಿಂದ ತೀರ್ಮಾನ, ೆರಡು ಸ್ಥಿತಿಗಳ ನಡುವಿನ ಸೀಮಾರೇಖೆಯನ್ನು ಸಮೀಪಿಸುವಿಕೆ. ಮಿದುಳು-ಮೃತ್ಯುವನ್ನು ವ್ಯಕ್ತಿ ಕೃತಕವಾಗಿ ಅನುಕರಿಸುವಂತೆ ವೈದ್ಯರು ಮಾಡಿದಾಗಲೂ ಮೃತ್ಯು ಸದೃಶ ಅನುಭವಗಳು ಆಗಿರುವುದು, ದೇಹದಿಂದ ಹೊರಬಂದು ಸುತ್ತಲಿನ ಪರಿಸರವನ್ನು ‘ನೋಡಿ’ ಮಾಡಿದ ವರದಿಗಳಲ್ಲಿ ವಿವರಗಳು ಸರಿಯಾಗಿದ್ದದ್ದು, ಹುಟ್ಟುಗುರುಡರಿಗೂ ಮೃತ್ಯು ಸದೃಶ ಅನುಭವ ಆಗಿರುವುದು, ಇಂಥ ಅನುಭವ ಆದ ಬಳಿಕ ವ್ಯಕ್ತಿಗಳ ಜೀವನದೃಷ್ಟಿ ಮತ್ತು ಶೈಲಿ ಬದಲಾದದ್ದು, ವಿಭಿನ್ನ ಸಂಸ್ಕೃತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಆದ ಅನುಭವಗಳಲ್ಲಿ ಸಂಸ್ಕೃತಿ ಪ್ರಭಾವಿತವಲ್ಲದ ಸಾಮಾನ್ಯ ಅಂಶಗಳಿರುವುದು, ಇಂಥ ಅನುಭವ ಆದವರ ಪೈಕಿ ಬಹುಮಂದಿ ಮುಂದೆ ಜೀವನದಲ್ಲಿ ಹೆಚ್ಚು ಪರಾನುಭೂತಿಗಳಾಗಿರುವುದು – ಇವು ಮೃತ್ಯು ಸದೃಶ ಅನುಭವಗಳು ಆಗುವುದು ನಿಜ ಎಂದು ಒಪ್ಪಿಕೊಳ್ಳಲು ಇರುವ ಪ್ರಬಲ ಪುರಾವೆಗಳು ಅನ್ನುತ್ತಾರೆ ಪುನರ್ಜನ್ಮ-ಪರ ವಾದಿಗಳು. ಅನುಭವಗಳಲ್ಲಿ ವ್ಯಕ್ತಿ ವ್ಯತ್ಯಾಸಗಳು ಇರುವುದು, ಕೆಲವರಿಗೆ ‘ನರಕ ಸದೃಶ’ ಅನುಭವಗಳು ಆಗಿರುವುದು, ಕೆಲವರಿಗೆ ಯಾವ ಅನುಭವವೂ ಆಗದಿರುವುದು ಇಂಥ ಅನುಭವಗಳು ಆಗಿರುವವರ ಪೈಕಿ ಬಹುಮಂದಿ ಹೃದಯಾಘಾತವಾದ ಬಳಿಕ ವೈದ್ಯಕೀಯವಾಗಿ ಪುನರುಜ್ಜೀವನ ಪಡೆದವರೇ ಆಗಿರುವುದು, ತೀವ್ರ ವೇಗೋತ್ಕರ್ಷ ಆಗುತ್ತಿರುವ ಯುದ್ಧವಿಮಾನಗಳ ಚಾಲಕರ ಪೈಕಿ ಅನೇಕರಿಗೆ ಹೆಚ್ಚುಕಮ್ಮಿ ಇಂತಹುದೇ ಅನುಭವಗಳು ಆಗಿರುವುದು ಇವೇ ಮೊದಲಾದ ಕಾರಣಗಳಿಂದಾಗಿ ಮೃತ್ಯು ಸದೃಶ ಸನ್ನಿವೇಶಗಳಲ್ಲಿ ಆಗುವ ಅನುಭವಗಳು ದೇಹದಿಂದ ಭಿನ್ನವಾದ ಆತ್ಮ ಒಂದಿದೆ ಎಂಬುದನ್ನು ಪ್ರಾಮಾಣೀಕರಿಸುವ ಪುರಾವೆಗಳು ಆಗುವುದಿಲ್ಲ ಅನ್ನುತ್ತಾರೆ ವಿಚಾರವಾದಿಗಳು. ಹೃದಯಾಘಾತದ ಅಥವ ಅರಿವಳಿಕೆ ಔಷಧಿಯ ಪರಿಣಾಮ ಇವಲ್ಲ ಎಂಬುದೂ ಸಾಬೀತಾಗಿಲ್ಲ. ಕೆಲವು ಮಾದಕ ದ್ರವ್ಯ ಸೇವನೆ ಮಾಡಿದವರಿಗೂ ಇಂಥ ಅನುಭವಗಳು ಆಗಿರುವುದು ಇವು ನರಶಾರೀರಿಕ (ನ್ಯೂರೋಫಿಸಿಯಲಾಜಿಕಲ್) ಪ್ರಕ್ರಿಯೆಗಳು ಆಗಿರುವ ಸಾಧ್ಯತೆಯನ್ನು ಸೂಚಿಸುತ್ತವೆ ಅನ್ನುತ್ತಾರೆ ವೈದ್ಯವಿಜ್ಞಾನಿಗಳು. ಇಂಥ ಅನುಭವ ಆಗಿದೆ ಎಂದು ವರದಿ ಮಾಡಿದ ಎಲ್ಲರಿಗೂ ನಿಜವಾಗಿಯೂ ಅನುಭವ ಆಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದೂ ಸಾಧ್ಯವಿಲ್ಲ. ಅನುಭವ ಆದ ಎರಡು ವರ್ಷಗಳ ಬಳಿಕ ಕೆಲವರು ಅದನ್ನು ವರದಿ ಮಾಡಿದ್ದೂ ಇದೆ. ನರಸಂಬಂಧೀ ಗದ್ದಲ (ನ್ಯೂರಲ್ ನಾಇಸ್) ಮತ್ತು ರೆಟಿನೋಕಾರ್ಟಿಕಲ್ ಮ್ಯಾಪಿಂಗ್ ಗಳ ನೆರವಿನಿಂದ ಅಗಲಕಿರಿದಾದ ಸುರಂಗ ಅಥವ ಪಥದ ಮೂಲಕ ಬೆಳಕಿನತ್ತ ಸಾಗುವ ಅನುಭವ, ಅತೀ ಒತ್ತಡಕ್ಕೀಡಾದಾಗ ದೇಹದಲ್ಲಿ ಬಿಡುಗಡೆ ಆಗುವ ‘ಎನ್ ಡೋರ್ಫಿನ್’ ಎಂಬ ನೋವು ನಿವಾರಕ ರಾಸಾಯನಿಕದಿಂದಾಗಿ ಶಾಂತಿಯ ಅನುಭವ,  ಮಿದುಳಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯ ಆಗುವುದರ ಪರಿಣಾಮ ಮಿದುಳಿ ಕೋಶಗಳ ನಡುವಿನ ಸಂಪರ್ಕಗಳ ಮೇಲೂ ಆಗುವುದರಿಂದ ಗದ್ದಲದ ಅನುಭವ, ಕೆಟಮೈನ್ ಎಂಬ ಭ್ರಮಾಜನಕ ಅರಿವಳಿಕೆಯೂ ಮೃತ್ಯು ಸದೃಶ (ವಿಶೇಷವಾಗಿ ದೇಹದಿಂದ ಹೊರಬಂದಂಥ) ಅನುಭವ ಆಗುವುದನ್ನು ವೈದ್ಯವಿಜ್ಞಾನ ಸಂಶೋಧನೆಗಳು ವಿವರಿಸಿದ್ದಾರೆ. ವಿವಿಧ ನರಸಂಬಂಧಿತ ವ್ಯವಸ್ಥೆಗಳಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೂ ದೃಶ್ಯ ಮತ್ತು ಶ್ರವ್ಯ ಅರಿವು ಅಥವ ಗ್ರಹಿಕೆ ಆಗುವ ಸಾಧ್ಯತೆಯನ್ನೂ ಮಿದುಳು ಮೃತ್ಯು ‘ಆದಂತೆ’ ತೋರುವವರೂ ಪ್ರಜ್ಞಾಪೂರ್ವಕವಾಗಿ ಆಲೋಚಿಸುವ ಸಾಧ್ಯತೆಯನ್ನೂ ವೈದ್ಯಕೀಯ ಸಂಶೋಧನೆಗಳೂ ದೃಢ ಪಡಿಸಿವೆ. ಈ ಎಲ್ಲ ವಾದ ಪ್ರತಿವಾದಗಳಿಂದಾಗಿ ಮೃತ್ಯು ಸದೃಶ ಸನ್ನಿವೇಶಗಳಲ್ಲಿ ಆಗುವ ಅನುಭವ ಆತ್ಮದ ಅಸ್ತಿತ್ವಕ್ಕೆ ಇರುವ ಪುರಾವೆ ಎಂಬ ಪೂರ್ವಜನ್ಮ ಪರವಾಗಿರುವವರ ಅಂಬೋಣ ಸರ್ವಮಾನ್ಯವಾಗಿಲ್ಲ.

ಬಾಲ ಅದ್ಭುತಗಳು (ಚೈಲ್ಡ್ ಪ್ರಾಡಿಜೀಸ್):  ಅಸಾಧಾರಣ, ಅಸಾಮಾನ್ಯ ಅಥವ ಅಪರೂಪದ ಸಾಮರ್ಥ್ಯ/ಪ್ರತಿಭೆ ಉಳ್ಳವರೇ ‘ಅದ್ಭುತ’ಗಳು. ವಿಶೇಷ ತರಬೇತಿ ಪಡೆದ ವಯಸ್ಕರು ಪ್ರದರ್ಶಿಸಬಹುದಾದ ಸಾಮರ್ಥ್ಯ/ಪ್ರತಿಭೆಯನ್ನು ಯಾವ ಮಕ್ಕಳು ೧೫ ವರ್ಷ ವಯಸ್ಸಾಗುವ ಮೊದಲೇ ಪ್ರಕಟಿಸುತ್ತಾರೋ ಅವರೇ ಬಾಲ ಅದ್ಭುತಗಳು. ಪ್ರಚಲಿತ ಸಿದ್ಧಾಂತಗಳ ನೆರವಿನಿಂದ ೀ ವಿದ್ಯಮಾನವನ್ನು ತೃಪ್ತಿಕರವಾಗಿ ವಿವರಿಸಲು ಸಾಧ್ಯವಿಲ್ಲ, ಯಾವುದೋ ಪೂರ್ವಜನ್ಮದ ಸಂಸ್ಕಾರಬಲವೇ ಈ ವಿದ್ಯಮಾನಕ್ಕೆ ಕಾರಣ ಎಂಬುದು ಪುನರ್ಜನ್ಮಪರ ವಾದಿಗಳ  ಅಂಬೋಣ. ನಿರ್ದಿಷ್ಟ ವಯಸ್ಸುಗಳಲ್ಲಿ ಮಕ್ಕಳು ಇಂತೆಯೇ ವರ್ತಿಸಬೇಕೆಂದು ಸಮಾಜ ನಿರೀಕ್ಷಿಸುತ್ತದೆ. ಜನ್ಮದಾತೃಗಳ ಪೈಕಿ ಬಹುಮಂದಿ ಈ ರೂಢಮಾದರಿಗೆ (ಸ್ಟೀರಿಯೋಟೈಪ್) ಅನುಗುಣವಾಗಿ ಇರಲು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ವಿಶೇಷ ಸಾಮರ್ಥ್ಯ/ಪ್ರತಿಭೆ ಇದ್ದರೂ ಅದು ಪ್ರಕಾಶಿಸಲು ಅಗತ್ಯವಾದ ಪರಿಸರದಿಂದ ವಂಚಿತರಾಗುವುದರಿಂದ ಸಾಮಾನ್ಯ ಮಕ್ಕಳಂತೆಯೇ ಬೆಳೆಯುತ್ತಾರೆ. ಮುಂದೆ ಎಂದಾದರೂ ಯುಕ್ತ ಪರಿಸರ ಲಭ್ಯವಾದರೆ ಅವರಲ್ಲಿನ ಸುಪ್ತಪ್ರತಿಭೆ ಪ್ರಕಾಶಿಸುತ್ತದೆ (ಲೇಟ್ ಬ್ಲೂಮರ್ಸ್-ತಡವಾಗಿ ಅರಳುವವರು), ಲಭ್ಯವಾಗದಿದ್ದರೆ ಕಮರಿ ಹೋಗುತ್ತದೆ. ‘ಬಾಲ ಅದ್ಭುತ’ಗಳ ಜನ್ಮದಾತೃಗಳು ತಮ್ಮ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರೂ ತಾವು ಗುರುತಿಸಿದ ಸಾಮರ್ಥ್ಯ ವರ್ಧನೆಗೆ ಅಗತ್ಯವಾದ ಪರಿಸರ ಒದಗಿಸಿದ್ದವರೂ ಆಗಿದ್ದರು ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಎಂದೇ, ಬಾಲ ಅದ್ಭುತಗಳು ಪರಿಸರದ ಸೃಷ್ಟಿಗಳು ಪೂರ್ವಜನ್ಮ ಸಂಸ್ಕಾರದ ಸೃಷ್ಟಿಗಳಲ್ಲ ಅನ್ನುತ್ತಾರೆ ವಿಚಾರವಾದಿಗಳು. ವಿಶೇಷ ಪ್ರತಿಭೆ ಇದೆಯೇ ಇಲ್ಲವೇ ಎಂಬುದು ಮಿದುಳಿನ ಸಂರಚನೆಗಳನ್ನೂ ಜೀನ್ ಗಳ ಮೂಲಕ ಪಡೆಯಬಹುದಾದ ವಿಶಿಷ್ಟ ಲಕ್ಷಣಗಳನ್ನೂ ಪ್ರಕ್ರಿಯೆಗಳನ್ನೂ ಅವಲಂಬಿಸಿರುತ್ತದೆಯೇ ವಿನಾ ಪೂರ್ವಜನ್ಮ ಸಂಸ್ಕಾರವನ್ನಲ್ಲ. ಮಕ್ಕಳು ಏನನ್ನು ಎಷ್ಟರ ಮಟ್ಟಿಗೆ ಕಲಿಯುತ್ತಾರೆ ಎಂಬುದು ಅವರಿಗೆ ದೊರೆಯುವ ಪರಿಸರವನ್ನು ಅವಲಂಬಿಸಿರುತ್ತದೆಯೇ ವಿನಾ ಪೂರ್ವಜನ್ಮ ಸಂಸ್ಕಾರವನ್ನಲ್ಲ ಎಂಬುದು ಇವರ ವಾದ.

ಎಡ್ಗರ್ ಕೇಸೀ ಮಾಡಿದ ಜೀವನ ಪಠನಗಳು (ಲೈಫ್ ರೀಡಿಂಗ್ಸ್): ಸ್ವ-ಚೋದಿತ ಸಮ್ಮೋಹನ ಸ್ಥಿತಿಯಲ್ಲಿ ಇದ್ದಾಗ ಮಾತ್ರ ಇತರರ ರೋಗ, ದೌರ್ಬಲ್ಯ, ಅಹಿತಕರ ಸ್ಥಿತಿಗತಿ, ಅದಕ್ಕೆ ಕಾರಣ ಮತ್ತು ಚಿಕಿತ್ಸೆ ಅಥವ ನಿವಾರಣೋಪಾಯ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡಲೋಸುಗ ಆಯಾ ವ್ಯಕ್ತಿಗಳ ದೇಹದಲ್ಲಿ ಹಾಗೂ ಅವರ ಮನಸ್ಸಿನ ಅಜಾಗೃತ ಭಾಗದಲ್ಲಿ ಇರುವ ಅಂಶಗಳನ್ನೂ ನಿರ್ದಿಷ್ಟ ಪೂರ್ವಜನ್ಮಗಳಲ್ಲಿನ ನಿರ್ದಿಷ್ಟ ಗುಣ ಅಥವ ಕ್ರಿಯೆಗಳನ್ನೂ ತಿಳಿದು ಹೇಳಬಲ್ಲ ವಿಶಿಷ್ಟ ಸಾಮರ್ಥ್ಯ ಉಳ್ಳವನೆಂದು ಖ್ಯಾತನಾದವ ಅಮೇರಿಕದ ಎಡ್ಗರ್ ಕೇಸೀ (೧೮೭೭-೧೯೪೫).  ವ್ಯಕ್ತಿಗಳ ಪೂರ್ವಜನ್ಮದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಈತ ನೀಡಿದ ಉತ್ತರಗಳೇ ‘ಜೀವನ ಪಠನ’ಗಳು. ಜೀವನಮಾರ್ಗ (ಕರಿಅರ್) ಮತ್ತು ಉದ್ಯೋಗ (ಆಕ್ಯುಪೇಷನ್) ಆಯ್ಕೆ, ಬಿದ್ದ ಕನಸುಗಳ ಅರ್ಥ, ವೈವಾಹಿಕ ಸಂಬಂಧಗಳು, ಮಾನಸಿಕ ಮತ್ತು ಆದ್ಯಾತ್ಮಿಕ ಆರೋಗ್ಯ ಇವೇ ಮೊದಲಾದವುಗಳಿಗೆ ಸಂಬಂಧಿಸಿದ ‘ಜೀವನ ಪಠನ’ಗಳೂ ಇವೆ.  ಸ್ವ-ಸಮ್ಮೋಹಿತ ಸ್ಥಿತಿಯಲ್ಲಿ ಇದ್ದಾಗ ಕೇಸೀಯ ಸೂಕ್ಷ್ಮ ಶರೀರ ಭೌತ ದೇಹವನ್ನು ಬಿಟ್ಟು ಪಯಣಿಸುತ್ತಿದ್ದದ್ದು, ಜನನ-ಮರಣ ಚಕ್ರದಿಂದ ಮುಕ್ತಿ ಪಡೆದ ಆತ್ಮಗಳೊಂದಿಗೆ ಸಂವಹನಕ್ಕೆ ಮಾಧ್ಯಮವಾಗುತ್ತಿದ್ದದ್ದು, ದೈವೇಚ್ಛಾಪ್ರಕಾಶನ ಸಾಮರ್ಥ್ಯ ಪಡೆಯುತ್ತಿದ್ದದ್ದು, ಇತರರ ಮನಸ್ಸಿನಲ್ಲಿ ಹುದುಗಿರುತ್ತಿದ್ದ ಸುಪ್ತ ದಾಖಲೆಗಳನ್ನೂ ‘ಆಕಾಶೀಯ (ಆಕಾಶಿಕ್) ದಾಖಲೆ’ಗಳನ್ನೂ (ಅಂದರೇನು ಎಂಬುದು ಯಾರಿಗೂ ಅರ್ಥವಾಗಿಲ್ಲ) ಓದುವ ಸಾಮರ್ಥ್ಯ ಲಭಿಸುತ್ತಿದ್ದದ್ದು ಇವನ ವಿಶಿಷ್ಟ ಸಾಮರ್ಥ್ಯಕ್ಕೆ ಕಾರಣ ಎಂದು ಇವನನ್ನು ನಂಬುವವರು ಹೇಳುತ್ತಾರೆ. ಅಗತ್ಯವಾದ ಮಾಹಿತಿಯನ್ನು ಸಂಬಂಧಿತ ವ್ಯಕ್ತಿಯ ಸುಪ್ತ ಮನಸ್ಸಿನಿಂದ ಮತ್ತು ಆಕಾಶೀಯ ದಾಖಲೆಗಳಿಂದ ಪಡೆಯುತ್ತಿರುವುದಾಗಿ ಎಡ್ಗರ್ ಕೇಸಿ ಹೇಳಿಕೊಂಡಿದ್ದಾನೆ. ಪುನರ್ಜನ್ಮ ಒಂದು ತಥ್ಯ ಎಂದು ಸಾಬೀತು ಪಡಿಸುವ ಪುರಾವೆಗಳು ಎಂದು ‘ಜೀವನ ಪಠನ’ಗಳನ್ನು ಪುನರ್ಜನ್ಮಪರ ವಾದಿಗಳು ಪರಿಗಣಿಸುತ್ತಾರೆ. ಇದಕ್ಕೆ ಅವರು ನೀಡುವ ಕಾರಣಗಳು ಇಂತಿವೆ: ಅವನು ಯಾವ ುದ್ದೇಶಕ್ಕಾಗಿ ಜೀವನ ಪಠನ ಮಾಡುತ್ತಿದ್ದನೋ ಅದು ಈಡೇರುತ್ತಿತ್ತು. ವಿಭಿನ್ನ ಸಮಯಗಳಲ್ಲಿ ವಿಭಿನ್ನ ವ್ಯಕ್ತಿಗಳಿಗೆ ನೀಡಿದ ಜೀವನ ಪಠನಗಳಲ್ಲಿ ಇರುತ್ತಿದ್ದ ಚಾರಿತ್ರಿಕ ಅಂಶಗಳಲ್ಲಿ (ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಸಾಧ್ಯವಾಗದೇ ಇರುತ್ತಿದ್ದರೂ) ಆಂತರಿಕ ಸ್ಥಿರತೆ ಇರುತ್ತಿತ್ತು. ಕೆಲವು ಜೀವನ ಪಠನಗಳಲ್ಲಿ ಇದ್ದ ಪರೀಕ್ಷಿಸಬಹುದಾದ ಚಾರಿತ್ರಿಕ ಅಂಶಗಳು ಸರಿಯಾಗಿದ್ದವು. ಅವನ ಭವಿಷ್ಯವಾಣಿಗಳ ಪೈಕಿ ಕೆಲವು ಮತ್ತು ಜೀವನ ಪಠನಗಳಲ್ಲಿ ಇದ್ದ ಚಾರಿತ್ರಿಕ ಅಂಶಗಳ ಪೈಕಿ ಕೆಲವು ಅವನ ಮರಣಾನಂತರ ನಿಜವಾದವು. ದೈಹಿಕ ರೋಗಗಳಿಗೆ ಆತ ಸೂಚಿಸಿದ ಅಸಾಂಪ್ರದಾಯೊಕ ಚಿಕಿತ್ಸಾಕ್ರಮ ನಿರೀಕ್ಷಿತ ಫಲ ನೀಡುತ್ತಿತ್ತು. ಆತ ನೀಡಿದ ಪೂರ್ವಜನ್ಮಾಧಾರಿತ ವೃತ್ತಿ ಮಾರ್ಗದರ್ಶನಗಳು ಯಶಸ್ವಿಯಾದವು. ಶಿಸುಗಳ ಮುಂದಿನ ವ್ಯಕ್ತಿತ್ವದ ಕುರಿತಾದ ಭವಿಷ್ಯವಾಣಿಗಳು ನಿಜವಾದವು. ಸಂಸ್ಕೃತದ ಜ್ಞಾನ ಿಲ್ಲದೇ ಇದ್ದಾಗ್ಯೂ ‘ಕರ್ಮ’ ಮತ್ತು ‘ಆಕಾಶ’ ಈ ಎರಡು ಸಂಸ್ಕೃತ ಪದಗಳ ಧಾರಾಳ ಬಳಕೆ ಜೀವನ ಪಠನಗಳಲ್ಲಿ ಇತ್ತು. ಅಷ್ಠೇ ಅಲ್ಲ, ಹಣ ಸಂಪಾದನೆ ಆತನ ಗುರಿ ಆಗಿರದೇ ಇದ್ದದ್ದು ಆತನ ಸಾಚಾತನವನ್ನು ತೋರಿಸುತ್ತದೆ ಎಂಬುದು ಇವರ ಅಂಬೋಣ.

ವಿಚಾರವಾದಿಗಳ ಪ್ರಕಾರ ವೈಜ್ಞಾನಿಕ ನಿಖರತೆ ಇಲ್ಲದ ಸಮಕಾಲೀನ ವಾರ್ತಾಪತ್ರಿಕೆಗಳಲ್ಲಿ ಇರುತ್ತಿದ್ದ ಲೇಖನಗಳು, ಪ್ರಮಾಣಪತ್ರಗಳು, ಉಪಾಖ್ಯಾನಗಳು ಶಪಥಪತ್ರಗಳು (ಆಫಿಡೆವಿಟ್ಸ್) ಇವೇ ಮುಂತಾದವು ಕೇಸೀಯ ಜ್ಞಾನದ ಆಕರಗಳು. ಆತ ಸೂಚಿಸುತ್ತಿದ್ದ ಪರ್ಯಾಯ ವೈದ್ಯಕೀಯ ಚಿಕಿತ್ಸೆಗಳು ‘ಕಪಟ ವೈದ್ಯಕೀಯ ಚಿಕಿತ್ಸೆಗಳು (ಕ್ವ್ಯಾಕರಿ) ಅನ್ನುತ್ತಾರೆ ಇವರು. ‘೯ ನೇ ತರಗತಿಗೆ ತನ್ನ ಶಾಲಾ ಜೀವನವನ್ನು ಮೊಟಕುಗೊಳಿಸಿದ ಕೇಸೀ ತನ್ನ ‘ಸರ್ವಗ್ರಾಹೀ’ ಓದುಗಾರಿಕೆಯಿಂದ ಸಂಚಯಿಸಿದ್ದ ಜ್ಞಾನವನ್ನು ಆಧರಿಸಿ ಬಹು ವಿವರಗಳಿಂದ ಕೂಡಿದ್ದ ಕಟ್ಟುಕತೆಗಳನ್ನು ಹೊಸೆಯುತ್ತಿದ್ದ. ಚಿಕ್ಕಂದಿನಿಂದಲೇ ಅತಿರೇಕದ ಕಲ್ಪನಾಲೋಕದಲ್ಲಿ ವಿಹರಿಸುವ ಪ್ರವೃತ್ತಿ ಇದ್ದ ಈತ ದೇವದೂತರೊಂದಿಗೆ ಆಗಾಗ್ಗ್ಯೆ ಮಾತನಾಡುವ ಮತ್ತು ತನ್ನ ಮೃತ ಅಜ್ಜನ ದರ್ಶನ ಪಡೆಯುತ್ತಿದ್ದವನಾಗಿದ್ದ’ ಅಂದಿದ್ದಾನೆ ವಿಜ್ಞಾನ ಸಾಹಿತಿ, ಇತಿಹಾಸಕಾರ ಮತ್ತು ವಿಚಾರವಾದೀ ಸಂಘದ ಸಂಸ್ಥಾಪಕ ಮೈಕೆಲ್ ಬ್ರ್ಯಾಂಟ್ ಶರ್ಮರ್ (೧೯೫೪ ಜ).  ‘ಬಹುಶಃ’, ‘ನನಗನ್ನಿಸುತ್ತದೆ’ ಮುಂತಾದ ಪದಗಳ ಜಾಗರೂಕ ಬಳಕೆಯಿಂದ ಯಾವುದೇ ಧನಾತ್ಮಕ ಹೇಳಿಕೆ ಕೊಡದೇ ಇರುವಷ್ಟು ಜಾಣನಾಗಿದ್ದ ಕೇಸೀ ಅನ್ನುತ್ತಾನೆ ವಿಚಾರವಾದೀ ಜಾದೂಗಾರ ಜೇಮ್ಸ್ ರೇಂಡಿ(೧೯೨೮ ಜ). ವಿಚಾರವಾದಿಗಳು ಅವನ ‘ಜೀವನ ಪಠನ’ಗಳನ್ನು ಸಾರಾಸಗಟಾಗಿ ತಿರಸ್ಕರಿಸಲು ಕಾರಣಗಳು ಇಂತಿವೆ: ಆತನ ಅನೇಕ ಭವಿಷ್ಯವಾಣಿಗಳು ನಿಜವಾಗಿಲ್ಲ. ಆತ ಹೇಳಿದ ಈಜಿಪ್ಟ್ ನ ‘ಗ್ರೇಟ್ ಪಿರಮಿಡ್’ ನಿರ್ಮಾಣದ ಕಾಲ ತಪ್ಪೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ, ಐದು ಮಾನವಕುಲಗಳು (ಕೆಂಪು, ಕಪ್ಪು, ಕಂದು, ಬಿಳಿ ಮತ್ತು ಹಳದಿ) ಭೂಮಿಯ ಮೇಲೆ ಏಕಕಾಲದಲ್ಲಿ ಆವಿರ್ಭವಿಸಿದವು ಎಂಬ ಆತನ ಹೇಳಿಕೆಯನ್ನು ಸಮರ್ಥಿಸಬಲ್ಲ ಯಾವುದೇ ವೈಜ್ಞಾನಿಕ ಪುರಾವೆ ದೊರೆತಿಲ್ಲ, ಈಜಿಪ್ಟ್ ನ ಗೀಸಾ ಪಿರಮಿಡ್ಡಿನ ಬಳಿಯ ಸ್ಫಿಂಕ್ಸ್ ಪ್ರತಿಮೆಯ ಬಳಿ ಗ್ರಂಥಾಲಯವಿದೆ ಎಂಬ ಆತನ ಹೇಳಿಕೆಯನ್ನ ದೃಢೀಕರಿಸಬಲ್ಲ ಯಾವುದೇ ಪುರಾವೆ ದೊರೆತಿಲ್ಲ.

ಆತನ ಹೇಳಿಕೆಗಳಲ್ಲಿ ವ್ಯಾಪಕ ಓದಿನಿಂದ ಗಳಿಸಲಾಗದೇ ಇರುವ ಹೊಸ ತತ್ವಗಳೇನೂ ಇಲ್ಲವಾದ್ದರಿಂದ ಅವನ್ನು ಪುನರ್ಜನ್ಮ ಇದೆ ಎಂದು ಸಾಬೀತು ಪಡಿಸುವ ಪುರಾವೆಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ವಿಚಾರವಾದಿಗಳ ಅಭಿಮತ. ಇಂಥ ಹೇಳಿಕೆಗಳ ಪೈಕಿ ಕೆಲವು ಇಂತಿವೆ: ಭೌತದೇಹದಿಂದ ಭಿನ್ನವಾದ ಸೂಕ್ಷ್ಮದೇಹ, ಅರ್ಥಾತ್ ಆತ್ಮ ಇದೆ.  ವಿಶ್ವದಲ್ಲಿ ಇರುವ ಒಟ್ಟು ಆತ್ಮಗಳ ಸಂಖ್ಯೆ ಒಂದು ಸ್ಥಿರ. ಇತರ ಗ್ರಹಗಳಲ್ಲಿ ಮತ್ತು ಅಗೋಚರ ಆಯಾಮಗಳಲ್ಲಿಯೂ ಆತ್ಮಗಳು ಇವೆ. ಕೆಲವು ಉಪಾಧಿಗಳಿಗೆ ಒಳಪಟ್ಟು ಇವು ತಮ್ಮ ಕರ್ಮಾನುಸಾರ ಒಂದು ಗ್ರಹದಿಂದ ಇನ್ನೊಂದಕ್ಕೆ ಒಂದು ಆಯಾಮದಿಂದ ಇನ್ನೊಂದಕ್ಕೆ ಚಲಿಸುತ್ತವೆ. ಭೂಮಿಯಲ್ಲಿ ವಿಶೇಷ ವೈಯಕ್ತಿಕ ಸಂಬಂಧ ಇದ್ದವರು ಮುಂದಿನ ಜನ್ಮಗಳಲ್ಲಿಯೂ ಒಟ್ಟಿಗೆ ಇರುವ ಸಾಧ್ಯತೆ ಹೆಚ್ಚು. ಕುಕೃತ್ಯ ಸತ್ಕೃತ್ಯಗಳಿಗೆ ತಕ್ಕುದಾದ ಫಲ ಯಾವುದಾದರೊಂದು ಜನ್ಮದಲ್ಲಿ ದೊರೆಯುವುದು ಖಚಿತ, ಕುಕೃತ್ಯದಿಂದ ಇತರರಿಗೆ ನೋವಾಗುವುದರಿಂದ ಅದೇ ನೋವನ್ನು ತಾನೇ ಅನುಭವಿಸಬೇಕಾದ ಸನ್ನಿವೇಶ ಸೃಷ್ಟಿಯಾಗುವುದೇ ಅದರ ಫಲ. (ಪರಿಸರದ ಸಮತೋಲವನ್ನು ಕೆಡಿಸುವುದೂ ಕುಕೃತ್ಯವೇ ಆಗಿದೆ, ಅದು ಸಮಸ್ತ ಜೀವರಾಶಿಗೆ ನೋವನ್ನು ಉಂಟು ಮಾಡುವುದರಿಂದ.) ನಿಜವಾದ ಪಶ್ಚಾತ್ತಾಪ ಕುಕರ್ಮಫಲದ ತೀವ್ರತೆಯನ್ನು ಕಮ್ಮಿ ಮಾಡುತ್ತದೆ. ಪಶ್ಚಾತ್ತಾಪ ತಾನು ಉಂಟುಮಾಡಿದ ನೋವಿನ/ಹಾನಿಯ ತೀವ್ರತೆಯನ್ನು ತಗ್ಗಿಸುವ ಅಥವ ಪೂರ್ಣವಾಗಿ ನಿವಾರಿಸುವ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ಪಶ್ಚಾತ್ತಾಪವೇ ವಿನಾ ಯಾಂತ್ರಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದು ಅಲ್ಲ. ಸತ್ಕೃತ್ಯದ ಫಲವೂ ಇದೇ ರೀತಿ ಇರುತ್ತದೆ. ಜೀವನದಲ್ಲಿ ಯಾವುದೇ ಸನ್ನಿವೇಶ ಎದುರಾದಾಗ ಏನು ಮಾಡಬೇಕು ಎಂಬುದನ್ನು ಆತ್ಮವೇ ನಿರ್ಧರಿಸಬೇಕು. ಒದಗಿ ಬಂದ ಸನ್ನಿವೇಶದಲ್ಲಿ ಏನು ಮಾಡುತ್ತದೆ ಎಂಬುದನ್ನು ಆಧರಿಸಿ ಮುಂದಿನ ಭವಿಷ್ಯ ರೂಪುಗೊಳ್ಳುತ್ತದೆ. ಯಾವುದೇ ಯಾಂತ್ರಿಕ ಆಚರಣೆಗಳಿಂದ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದೇ ಕರ್ಮ ಸಿದ್ಧಾಂತದ ತಿರುಳು. ಸ್ವಪ್ರಯತ್ನದಿಂದ ಮಾತ್ರ ಕರ್ಮಬಂಧನದಿಂದ ಮುಕ್ತಿ ಪಡೆಯಲು ಸಾಧ್ಯ ಮತ್ತು ಇದೇ ಜೀವನದ ಗುರಿ ಆಗಿರಬೇಕು. ಯುಕ್ತ ಅನುಭವಗಳನ್ನು ಒದಗಿಸುವುದರ ಮೂಲಕ ಆತ್ಮವನ್ನು ಸಂಸ್ಕರಿಸಿ ವಿಶ್ವಸೃಷ್ಟಿಗೆ ಕಾರಣವಾದ ಮೂಲ ಚೈತನ್ಯದೊಂದಿಗೆ ಅದು ಐಕ್ಯವಾಗುವಂತೆ ಮಾಡುವುದು ಪುನರ್ಜನ್ಮದ ಉದ್ದೇಶವೇ ವಿನಾ ದಂಡಿಸುವುದು-ಪುರಸ್ಕರಿಸುವುದು ಅಲ್ಲ. ಕೆಲವು ಉಪಾಧಿಗಳಿಗೆ ಅನುಗುಣವಾಗಿ ಭೂಮಿಯಲ್ಲಿ ಯಾವಾಗ ಎಲ್ಲಿ ಜನಿಸಬೇಕೆಂಬುದನ್ನು ತೀರ್ಮಾನಿಸುವ ಹಕ್ಕು ಆತ್ಮಕ್ಕಿದೆ. ಎಂದೇ, ಜನನ ಆಕಸ್ಮಿಕವಲ್ಲ. ಭೂಮಿಯ ಮೇಲೆ ಜನಿಸಿದ ಉದ್ದೇಶ ಸಾಧನೆಯಾದಾಗ ಅಥವ ಸಾಧನೆ ಆಗುವುದೇ ಇಲ್ಲ ಎಂಬುದು ಖಾತರಿ ಆದಾಗ ಸಾವು ಘಟಿಸುತ್ತದೆ. ಎಂದೇ, ಸಾವೂ ಆಕಸ್ಮಿಕವಲ್ಲ.

ಇತರ ಪರೋಕ್ಷ ಸಾಕ್ಷ್ಯಾಧಾರಗಳು: ಆತ್ಮದ ಶಾಶ್ವತತೆಯ ಪರಿಕಲ್ಪನೆ ಪುನರ್ಜನ್ಮ ಪರಿಕಲ್ಪನೆಯ ಬುನಾದಿ. ಆತ್ಮ ದೇಹವನ್ನು ಬಿಟ್ಟು ಹೋಗುವುದೇ ಸಾವು ಅನ್ನುವುದಾದರೆ ಸಾಯುವಾಗ ದೇಹದ ತೂಕದಲ್ಲಿ ವ್ಯತ್ಯಾಸ ಆಗಬೇಕು (ಆತ್ಮಕ್ಕೆ ತೂಕ ಇದ್ದರೆ!) ಎಂಬ ಪ್ರಕಲ್ಪನೆಯನ್ನು (ಹೈಪಾತಿಸಿಸ್) ಪ್ರಾಯೋಗಿಕವಾಗಿ ಪರೀಕ್ಷಿಸುವ ಪ್ರಯತ್ನ ಮಾಡಿದವ ಅಮೇರಿಕದ ವೈದ್ಯ ಡಂಕನ್ ಮ್ಯಾಕ್ ಡೂಗಲ್ (೧೮೬೬-೧೯೦೭). ಕ್ಷಯರೋಗ ಉಲ್ಬಣಿಸಿ ಸಾಯುವ ಪ್ರಕ್ರಿಯೆಯಲ್ಲಿ ಇದ್ದ ಾರು ಮಂದಿ ವೃದ್ಧಾಶ್ರಮವಾಸಿಗಳನ್ನು ಹಾಸಿಗೆ ಸಹಿತ ಔದ್ಯಮಿಕ ತುಲಾಯಂತ್ರಗಳ ಮೇಲಿರಿಸಿ ತೂಕಗಳಲ್ಲಿ ಆಗುವ ವ್ಯತ್ಯಾಸವನ್ನು ಈತ ಅಳತೆ ಮಾಡಿದ. ಸತ್ತ ಕೆಲವೇ ನಿಮಿಷಗಳಲ್ಲಿ ಕೆಲವು ದೇಹಗಳ ತೂಕ ಕಮ್ಮಿ  ಆದರೆ ಕೆಲವದ್ದರದ್ದು ಸತ್ತ ಕೆಲವು ಗಂಟೆಗಳ ಬಳಿಕ ಕಮ್ಮಿ ಆದದ್ದನ್ನು ಗಮನಿಸಿದ. ವೀಕ್ಷಿತ ವ್ಯತ್ಯಾಸಗಳು ಸಮವಾಗಿ ಇಲ್ಲದೇ ಇದ್ದದ್ದರಿಂದ ಸರಾಸರಿ ವ್ಯತ್ಯಾಸ ಲೆಕ್ಕಿಸಿದ. ಅದು ೨೧ ಗ್ರಾಮ್ ಆಗಿದ್ದದ್ದರಿಂದ ಮಾನವನ ಆತ್ಮದ ತೂಕ ೨೧ ಗ್ರಾಮ್ ಎಂದು ಘೋಷಿಸಿದ. ನಾಯಿಗಳನ್ನು ಬಳಸಿ ಮಾಡಿದ ಎಲ್ಲ ಪ್ರಯೋಗಗಳಲ್ಲಿ ತೂಕ ವ್ಯತ್ಯಾಸ ಕಂಡು ಬರದೇ ಇದ್ದದ್ದರಿಂದ ‘ನಾಯಿಗಳಿಗೆ ಆತ್ಮ ಇರುವುದಿಲ್ಲ’ ಎಂದೂ ಘೋಷಿಸಿದ. ತನ್ನ ಪ್ರಯೋಗಗಳ ವರದಿಯನ್ನು ‘ಅಮೇರಿಕನ್ ಮೆಡಿಸಿನ್, ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಿದ (೧೯೦೭). ಈ ಪ್ರಯೋಗಗಳಲ್ಲಿ ಅನುಸರಿಸಿದ ವಿಧಾನಗಳ ಲೋಪದೋಷಗಳನ್ನು ವಿಜ್ಞಾನಿಗಳು ಎತ್ತಿ ತೋರಿಸಿದ ಸಮಕಾಲೀನ ವಿಜ್ಞಾನಿಗಳು ಪ್ರಯೋಗ ಫಲಿತಾಂಶವನ್ನು ತಿರಸ್ಕರಿಸಿದರೂ ‘ಆತ್ಮಕ್ಕೆ ತೂಕ ಇರುವ’ ವಿಷಯ ಬಲು ಜನಪ್ರಿಯವಾಗಿ ಅನೇಕ ಪುಸ್ತಕಗಳ ಹುಟ್ಟಿಗೂ ‘೨೧ ಗ್ರಾಮ್’ ಎಂಬ ಚಲನಚಿತ್ರದ ನಿರ್ಮಾಣಕ್ಕೂ ಕಾರಣವಾಯಿತು.

ಭೂತಪ್ರೇತಗಳ ದರ್ಶನ, ಅತೃಪ್ತ ಆತ್ಮಗಳು ಜೀವಂತ ವ್ಯಕ್ತಿಗಳ ದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಿಕೆ, ಮೃತ ಪ್ರಿಯರ ಆತ್ಮಗಳೊಂದಿಗೆ ಮಾಧ್ಯಮಗಳ ಮುಖೇನ ಸಂವಹನ ಇವೇ ಮೊದಲಾದ ಪ್ರಕ್ರಿಯೆಗಳ ಪೈಕಿ ಯಾವುದೊಂದಕ್ಕೂ ವೈಜ್ಞಾನಿಕ ಸಾಕ್ಷ್ಯಾಧಾರ ಇಲ್ಲ. ಎಂದೇ, ಆತ್ಮದ ಅಸ್ತಿತ್ವವನ್ನು ಸಾಬೀತು ಪಡಿಸಬಲ್ಲ ಪುರಾವೆಗಳೆಂದು ವಿಚಾರವಾದಿಗಳು ಇವನ್ನು ಪರಿಗಣಿಸುವುದಿಲ್ಲ. ಅರ್ಥಾತ್, ಸಾವಿನ ನಂತರ ‘ಆತ್ಮ’ ಆಸ್ತಿತ್ವದಲ್ಲಿ ಉಳಿದು ಇನ್ನೊಂದು ದೇಹಕ್ಕೆ ಪಯಣಿಸುವ ಪ್ರಕ್ರಿಯೆಯನ್ನು ಪುಷ್ಟೀಕರಿಸಬಲ್ಲ ಸಂಶಯಾತೀತವಾದ ವೈಜ್ಞಾನಿಕ ಪುರಾವೆಗಳು ಇಲ್ಲ.

ದೇಹದಿಂದ ಭಿನ್ನವಾದ ಅಭೌತಿಕ ಆತ್ಮ ಒಂದಿದೆ ಎಂಬುದನ್ನು ಒಪ್ಪಿಕೊಂಡು ಚಿಂತನೆ ಮಾಡಿದ ದಾರ್ಶನಿಕರು ಮನಸ್ಸಿನ ಕಾರ್ಯವಿಧಾನಗಳ ಕುರಿತಂತೆ ನಮ್ಮ ಜ್ಞಾನವಲಯವನ್ನು ವಿಸ್ತರಿಸುವುದಕ್ಕೆ ಬದಲಾಗಿ ಮೂಢನಂಬಿಕೆಗಳ ಮತ್ತು ಅಜ್ಞಾನದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ ಅನ್ನುತ್ತಾರೆ ವಿಚಾರವಾದಿಗಳು.  ನನ್ನ ದೃಷ್ಟಿಯಲ್ಲಿ ಮೂಢನಂಬಿಕೆಗಳ ಕಂದಾಚಾರಗಳ ಹೆಚ್ಚಳಕ್ಕೆ ನಾವೇ ಕಾರಣರು ದಾರ್ಶನಿಕರಲ್ಲ, ದಾರ್ಶನಿಕರ ಹೇಳಿಕೆಗಳನ್ನು  ಮೂಲ ರೂಪದಲ್ಲಿ ಓದದೆಯೇ, ಓದಿದರೂ ಸ್ವಾನುಭವದ ನಿಕಷಕ್ಕೆ ಒರೆದು ಮನನ ಮಾಡದೆಯೇ, ಸ್ವಘೋಷಿತ ‘ಸ್ವಾಮೀಜಿ’ಗಳು’ ‘ಗುರೂಜೀ’ಗಳು ವ್ಯಾಪರೀ ಮನೋಭಾವ ಉಳ್ಳ ‘ಪುರೋಹಿತ’ರು ಮಾಡುವ ವ್ಯಾಖ್ಯಾನಗಳನ್ನು ಕುರುಡಾಗಿ ನಂಬುತ್ತಿರುವುದೇ ಅನಾಹುತಗಳಿಗೆ ಕಾರಣ. ಆತ್ಮದ ಮತ್ತು ಧರ್ಮದ (ಇದಕ್ಕೆ ಇಂಗ್ಲಿಷ್ ಸಮಾನಾರ್ಥಕ ಪದ ಇಲ್ಲ) ಪರಿಕಲ್ಪನೆಗಳ ದುರುಪಯೋಗಕ್ಕೂ ಮತ (ರಿಲಿಜನ್) ಹಾಗೂ ಆತ್ಮದ ಪರ-ವಿರೋಧ ಸಾಹಿತ್ಯ ಸೃಷ್ಟಿಸುವ ದಂಧೆಗಳ ಬೆಳೆವಣಿಗೆಗೂ ಇದೇ ಕಾರಣ – ಇದು ನನ್ನ ಅಭಿಪ್ರಾಯ.

ಪುನರ್ಜನ್ಮದ ಕುರಿತು ಖಚಿತವಾದ ನಿಲುವು ತಳೆಯಲು ಈ ಎಲ್ಲ ವಾದ-ಪ್ರತಿವಾದಗಳ ಅವಲೋಕನ ನಿಮಗೆ ನೆರವು ನೀಡಲಿಲ್ಲ ಎಂದಾದರೆ ಪುನರ್ಜನ್ಮ ಒಂದು ತಥ್ಯ ೆಂದು ಒಪ್ಪಕೊಳ್ಳದಿರುವುದರ ಮತ್ತು ಒಪ್ಪಿಕೊಳ್ಳುವುದರ ಪರಿಣಾಮಗಳೇನು ಎಂಬುದರ ಕುರಿತು ಆಲೋಚಿಸಿ. ನಾನು ಮುಂದಿನ ಬ್ಲಾಗಿನಲ್ಲಿ ಒದಗಿಸುವ ಸಾಮಗ್ರಿಯನ್ನು ನಿಮ್ಮ ಚಿಂತನೆಗೆ ‘ಆಹಾರ’ವಾಗಿ ಬಳಸಿಕೊಳ್ಳಿ.

* * * * * * * *

ಚಿತ್ರಕೃಪೆ : ಅಂತರ್ಜಾಲ

2 ಟಿಪ್ಪಣಿಗಳು Post a comment
  1. ಡಿಸೆ 5 2011

    ಉತ್ತಮವಾದ ಲೇಖನ

    ಉತ್ತರ
  2. Ananda Prasad
    ಡಿಸೆ 6 2011

    ದೇವರು ಎಂಬುದು ಯಾವ ರೀತಿ ಮಾನವನ ಕಲ್ಪನೆಯೂ ಅದೇ ರೀತಿ ಪುನರ್ಜನ್ಮವೂ ಮಾನವನ ಕಲ್ಪನೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗ್ಗೆ ನಂಬುವವರು ಹಾಗೂ ನಂಬದವರ ನಡುವೆ ಕೊನೆಯಿಲ್ಲದ ವಾಗ್ವಾದ ನಡೆಯುತ್ತಲೇ ಇರುತ್ತದೆ. ನಂಬದೆ ಇರುವವರು ಸಣ್ಣ ಸಂಖ್ಯೆಯಾದರೆ ನಮ್ಬುವವರದು ದೊಡ್ಡ ಸಂಖ್ಯೆ. ನನಗಂತೂ ಈ ಎರಡನ್ನೂ ನಂಬಲು ಸಾಧ್ಯವಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments