ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 7, 2011

2

ನಮ್ಮ ಯುವಜನತೆಯ ಯೋಚನೆಯ ದಿಕ್ಕು…….???

‍ನಿಲುಮೆ ಮೂಲಕ

-ಅರೆಹೊಳೆ ಸದಾಶಿವರಾವ್

ಪ್ರದಕ್ಷಿಣೆ ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ಇತ್ತೀಚೆಗೆ ಆರಂಭಿಸಿದ ನಂತರದ ಕೆಲವು ಅನುಭವಗಳು ಒಮ್ಮೊಮ್ಮೆ ಮನಸ್ಸಿಗೆ ತುಂಬಾ ಯೋಚನೆಯ ಸರಕನ್ನು ಒದಗಿಸುತ್ತವೆ. ಇದರಲ್ಲಿ ಮುಖ್ಯವಾದದ್ದು ನಮ್ಮ ಇಂದಿನ ಯುವ ಜನತೆಯ ಆಲೋಚನೆಗಳು.
ಇದಕ್ಕೆ ಪೂರ್ವಭಾವಿಯಾಗಿ ಒಂದೆರಡು ಮಾತುಗಳನ್ನು ನಿಮ್ಮೊಡನೆ ಹೇಳಿಕೊಳ್ಳಲೇ ಬೇಕು. ಅದು ನಮ್ಮ ಬಾಲ್ಯದ ದಿನಗಳು. ಕನಸುಗಳು ಮತ್ತು ಕನಸುಗಳು ಮಾತ್ರವೇ ತುಂಬಿಕೊಂಡಿದ್ದ ಕಣ್ಣುಗಳಿಗೆ ಮನೆಯ ಬಡತನ, ಬೆನ್ನ ಹಿಂದಿರುವ ಸಹೋದರತೆಯ ಬಂಧಗಳು ಅಥವಾ ಆ ಮೂಲಕ ಬಂದೊದಗಿದ ಜವಾಬ್ದಾರಿಗಳು……ಇತ್ಯಾದಿಗಳಾವುವೂ ಹೊರೆ ಅನಿಸುತ್ತಿರಲಿಲ್ಲ. ಅದಕ್ಕೆ ಕಾರಣಗಳು ನಾವು ಬಾಲ್ಯವನ್ನು ಅನುಭವಿಸುತ್ತಿದ್ದ ರೀತಿ. ಮನೆಯಂಗಣದಲ್ಲಿಯೋ, ತೋಟದಲ್ಲಿಯೋ, ಗದ್ದೆಯಲ್ಲಿಯೋ ನಮ್ಮದೇ ಯಕ್ಷಗಾನ, ಪಾಠ ಪುಸ್ತಕಗಳ ನಡುವೆ ಕದ್ದು ಓದುತ್ತಿದ್ದ ಕಾದಂಬರಿ, ಸುಧಾ, ತರಂಗ, ಪ್ರಜಾಮತದಂತಹ ಪತ್ರಕೆಗಳು, ಕಥೆ ಪುಸ್ತಕಗಳು……ಇತ್ಯಾದಿಗಳು, ಮೈಲುಗಟ್ಟಳೆ ದೂರ ನಡೆಯುತ್ತಿದ್ದ ಯಕ್ಷಗಾನಕ್ಕೂ ಕಾಲನಡಿಗೆಯಲ್ಲಿಯೇ ಹೋಗಿ ರಾತ್ರಿ ಇಡೀ ಅರ್ದಂಬರ್ಧ ನೋಡುತ್ತಿದ್ದ ಯಕ್ಷಗಾನ-ನಾಟಕಗಳು, ಶಾಲೆಯಲ್ಲಿ ಪ್ರತೀ  ಶನಿವಾರದಂದು ನಡೆಯುತ್ತಿದ್ದ ನಮ್ಮದೇ ಪ್ರತಿಭಾಪ್ರದರ್ಶನಗಳು, ಪ್ರತೀ ಶುಕ್ರವಾರ ಸಂಜೆ ಶಾಲೆಯಲ್ಲಿ ನಡೆಯುತ್ತಿದ್ದ ಭಜನೆ……ಇತ್ಯಾದಿಗಳೆಲ್ಲಾ ನಮಗೆ ಬದುಕು ಎಂದರೆ ಏನು ಎಂಬುದನ್ನು ತೋರಿಸುವಲ್ಲಿ ಸಹಾಯಕವಾಗುತ್ತಿದ್ದುವು. ಇಂತಹ ಪರಿಸರ ನಮ್ಮನ್ನು ಸಾಕಷ್ಟು ಉಲ್ಲಾಸದಿಂದಿರುವಂತೆ ನೋಡಿಕೊಳ್ಳುತ್ತಿದ್ದುವು. ಹಾಗೆಂದೇ ಸಹಜವಾಗಿ ಮುಂದೆ ಸಾಹಿತ್ಯ, ಕಲೆಗಳತ್ತ ನಮ್ಮ ಆಸಕ್ತಿ ಬೆಳೆಯುವಲ್ಲಿ ಇವುಗಳು ಸಹಾಯಕವಾಗುತ್ತಿದ್ದುವು.
ಈ ಎಲ್ಲಾ ಹಿನ್ನೆಲೆಗಳೂ ಮುಂದೆ ನಮ್ಮ ಪ್ರತೀ ಕೃತಿಯಲ್ಲೂ ಸಹಜವಾಗಿ ಆಶಾವಾದವನ್ನು ಬಿಂಬಿಸುತ್ತಿದ್ದುವು. ಅದಕ್ಕೆಂದೇ ಅಂದಿನ ಆರಂಭದ ಕವಿಗಳು, ಕತೆಗಾರರು ಅಥವಾ ಚಿಂತಕರು ಆಶಾವಾದದ ಮಾತಾಡುತ್ತಿದ್ದರು, ನಮ್ಮ ಸುತ್ತ ಮುತ್ತಲಿನ ಪ್ರಕೃತಿಗಳೇ ಎಲ್ಲದಕ್ಕೂ ಸಮೃದ್ಧ ವಸ್ತುವಾಗಿ, ಪ್ರತೀ ಕೆಲಸದಲ್ಲೂ…ಅದು ಸಾಹಿತ್ಯವಿರಲಿ, ಬದುಕಿರಲಿ ಒಂದು ಉಲ್ಲಾಸದ ಮತ್ತು ಉತ್ಸಾಹದ ವಾತಾವರಣಕ್ಕೆ ಕಾರಣವಾಗುತ್ತಿದ್ದುವು.


ಮೇಲೆ ಹೇಳಿದಂತೆ ಇತ್ತೀಚೆಗೆ ಪ್ರದಕ್ಷಿಣೆಯ ಸಂಪಾದಕತ್ವ ಆರಂಭಿಸಿದ ಮೇಲೆ, ನಾನು ಯುವ ಜನರಿಗೆಂದೇ ಒಂದು ವೇದಿಕೆಯನ್ನು ಕಲ್ಪಿಸಿ, ಅಲ್ಲಿ ಅವರ ಬರಹಗಳನ್ನು ಪ್ರಕಟಿಸಲು ಅವಕಾಶ ಒದಗಿಸಿದೆ. ಹಾಗೆ ಅದಕ್ಕೆಂದು ಬಂದ ಬರಹಗಳ ಮೇಲೆ ಕಣ್ಣಾಡಿಸಿದಾಗ ನನಗೆ ಮೇಲಿನೆಲ್ಲಾ ಯೋಚನೆಗಳು ಹಾದು ಹೋದುವು. ಅದಕ್ಕೆ ಇಂಬು ಕೊಡುವಂತೆ ಇತ್ತೀಚೆಗೆ ಕಾಲೇಜೊಂದರಲ್ಲಿ ಆಶುಭಾಷಣ ಸ್ಪರ್ಧೆಯೊಂದಕ್ಕೆ ತೀರ್ಪುಗಾರನಾಗಿ ಹೋಗುವ ಅವಕಾಶ ಬಂದಾಗ, ಅಲ್ಲಿ ಕಾಲೇಜು ವಿದ್ಯಾರ್ಥಿಗಳ ಭಾಷಣಗಳನ್ನೂ ಕೇಳುವ ಅವಕಾಶ ಒದಗಿಬಂದಿತ್ತು. ಈ ಎರಡೂ ಹಂತಗಳಲ್ಲಿಯೂ ಒಂದು ರೀತಿಯ ಆಘಾತಕಾರಿ ಅಂಶಗಳನ್ನು ನಾನು ಗಮನಿಸಿದೆ.
ಇಂದು ನಮ್ಮ ಯುವ ಜನತೆ, ತಮ್ಮ ಕಣ್ಣ ತುಂಬಾ ಕನಸುಗಳನ್ನು ತುಂಬಿಕೊಂಡು, ಹಿಂದೆಂದಿಗಿಂತಲೂ ವೇಗವಾದ ಜಗತ್ತಿಗೆ ಹೊಂದಿಕೊಳ್ಳುತ್ತಿರುವ ಹೆಮ್ಮೆಯ ಜೊತೆಗೆ, ಅವರೊಳಗೆ ವ್ಯವಸ್ಥೆ ಎಂದರೆ ಇಷ್ಟೇ ಎಂಬ ಪೂರ್ವನಿರ್ಧರಿತ ತೀರ್ಮಾನವೊಂದು ಮನೆ ಮಾಡಿದಂತಿದೆ. ನಾನು ಕೇಳಿದ ಭಾಷಣಗಳಲ್ಲಾಗಲಿ, ಓದಿದ ಲೇಖನಗಳಲ್ಲಾಗಲೀ, ಸಮಾಜವನ್ನು ದೂಷಿಸುವ ಕೆಲಸವನ್ನು ಯುವ ಜನತೆ ಹೆಚ್ಚಾಗಿ ಬಳಸಿಕೊಂಡದ್ದನ್ನು ಗಮನಿಸಿದೆ. ಉದಾಹರಣೆಗೆ ಒಂದು ಲೇಖನದಲ್ಲಿ, ಓರ್ವ ಯುವತಿ, ಪುರುಷ ಸಮಾಜವನ್ನು ಬೇಕಾಬಿಟ್ಟಿ ಬೈಯ್ಯುತ್ತಾಳೆ. ಎಲ್ಲಿಯ ತನಕ ಎಂದರೆ, ಆ ಲೇಖನದುದ್ದಕ್ಕೂ ಪುರುಷ ಎಂದರೆ ಮಹಿಳೆಯನ್ನು ಕೇವಲ ಭೋಗವಸ್ತುವನ್ನಾಗಿ ಉಪಯೋಗಿಸಿ ಎಸೆಯುವ ಒಂದು ಅಮಾನವೀಯ ವರ್ಗ ಎಂಬಂತೆ ಬಿಂಬಿಸುತ್ತಾಳೆ. ಮತ್ತೊಂದು ಭಾಷಣದಲ್ಲಿ ಮರೆತು ಹೋದ ದಾರಿ ಎಂಬ ವಿಷಯದ ಬಗ್ಗೆ ಮಾತಾಡುತ್ತಾ ಓರ್ವ ವಿದ್ಯಾರ್ಥಿ, ಜೀವನದಲ್ಲಿ ಪ್ರೀತಿ ಮಾಡುವ ಎಲ್ಲಾ ಹುಡುಗಿಯರೂ ಮೋಸಗಾರರೇ. ಅಂತವರ ಒಡನಾಟದ ಹಾದಿಯನ್ನು ಮರೆತು ಬಿಡಿ ಎಂಬ ಸಲಹೆ ಕೊಡುತ್ತಾನೆ!!. ಇನ್ನು ಯುವ ಕವಿ, ಕವನಗಳನ್ನು ವಾಚಿಸುವುದನ್ನು ನೋಡಿದರೆ, ಅಲ್ಲಿ ಮೊದಲಿನ ಹಾಗೆ ಹೂವು, ಪ್ರಕೃತಿ, ಸಾಗರ, ಬೆಟ್ಟ, ಗುಡ್ಡಗಳಿಗೆ ಮಿಗಿಲಾಗಿ, ದ್ವೇಷ, ಅಸೂಯೆ, ಸಿಟ್ಟು, ಸೆಡವುಗಳೇ ಹೆಚ್ಚಿನ ಸ್ಥಾನ ಪಡೆದಿರುತ್ತವೆ. ಏನಿಲ್ಲವೆಂದರೆ ಇಂದಿನ ತುಕ್ಕುಹಿಡಿದ ರಾಜಕಾರಣವನ್ನು ಒಂದಷ್ಟು ಹಿಗ್ಗಾ ಮುಗ್ಗಾ ಬೈದು ಬಿಟ್ಟರೆ, ನಮ್ಮನ್ನು ನಾವು ಬುದ್ದಿಜೀವಿಗಳ ವರ್ಗಕ್ಕೆ ಸೇರಿಸಿಕಂಡ ಹಮ್ಮು ಕೆಲವು ಯುವ ಮನಸುಗಳಲ್ಲಿ ಕಾಣುತ್ತೇವೆ.
ನಮ್ಮ ಸಮಾಜ ಹಾಗಾದರೆ ಅಷ್ಟೂ ಕೆಟ್ಟಿದೆಯೇ? ಇಲ್ಲಿ ಆಶಾವಾದಕ್ಕೆ ಇನ್ನು ಸ್ಥಾನವೇ ಇಲ್ಲವೇ? ನಮ್ಮ ಯುವಜನತೆ ನಮ್ಮ ವ್ಯವಸ್ಥೆಯ ಬಗ್ಗೆ ಇಷ್ಟು ರೋಸಿಹೋಗಿದ್ದಾರೆಯೇ? ಇದಕ್ಕೆಲ್ಲಾ ಕಾರಣಗಳೇನು ಎಂದು ಹುಡುಕ ಹೊರಟರೆ, ಬಹುಶ: ಥಟ್ಟನೇ ಹೊಳೆಯುವ ಉತ್ತರವೆಂದರೆ ನಮ್ಮ ದಿನ ನಿತ್ಯದ ಜೀವನದಲ್ಲಿ ಇಂದು ತೀರಾ ಪ್ರಭಾವಿಯಾಗಿರುವ ಕೆಲವು ಅಂಶಗಳು ಎನಿಸುತ್ತದೆ.
ಮುಖ್ಯವಾಗಿ ಗಮನಿಸಿದರೆ, ಇಂದಿನ ಜೀವನ ಶೈಲಿ. ಗಡಿಬಿಡಿಯ ಶೈಲಿಯಿಂದ ಓದು ಮರೆಯಾಗಿದೆ ಅಥವಾ ಅದು ಪರೀಕ್ಷೆ ಪಾಸು ಮಾಡುವ ಮಟ್ಟಿಗೆ ಸೀಮಿತವಾಗಿದೆ. ದಿನಪತ್ರಿಕೆಯನ್ನೂ ಓದುವುದು ಕಡಿಮೆಯಾಗಿದೆ. ಬಿಡುವಿನ ವೇಳೆ ಕೇವಲ, ದೂರದರ್ಶನದ ಮುಂದೆ ಅದಾವುದೋ ಅಸಂಬದ್ಧ ರಿಯಾಲಿಟಿ ಶೋಗಳಿಗೇ ಮೀಸಲು. ಅಥವಾ ಹೊಸತನವನ್ನು ಮೈಗೂಡಿಸಿಕೊಂಡಂತೆ ಬಿಂಬಿಸುವ ಸಿನಿಮಾಗಳು. ಇಲ್ಲಿ ಎಲ್ಲೆಡೆಯಲ್ಲಿಯೂ ಮೊದಲಿನಂತೆ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಹೇಳುವ ಅಥವಾ ಬಿತ್ತುವ ವ್ಯವಸ್ಥೆಗಳು ಇಲ್ಲವಾಗಿ ಹೋಗಿವೆ. ಹೀಗೆಯೇ ಒಮ್ಮೆ ಕಣ್ಣಾಡಿಸುತ್ತಿದ್ದಾಗ, ಸುವರ್ಣ ಟಿವಿಯ ರಿಯಾಲಿಟಿ ಶೋ ಒಂದನ್ನು ಗಮನಿಸಿದೆ. ಪ್ಯಾಟೆ ಹುಡ್ಗೀರು-ಹುಡ್ಗರನ್ನು ಕೂಡಿಹಾಕಿಕೊಂಡು ಅವರು ನಡೆಸುವ ಶೋಗಳನ್ನು ನೋಡಿದರೆ, ಯಾವ ಸಂಸ್ಕಾರವನ್ನು ನಾವು ಸನಾತನವಾದದ್ದು ಮತ್ತು ಜೀವನಶೈಲಿಗೆ ಪೂರಕವೆಂದುಕೊಂಡಿದ್ದೆವೋ, ಅದು ಸುಳ್ಳು ಎಂದು ಸಾರಿ ಹೇಳುವ ರೀತಿಯಲ್ಲಿ ಕಾಣುತ್ತದೆ. ಅದನ್ನು ನೋಡಲು ನಮ್ಮ ಮಕ್ಕಳು, ಬೇಗ ಬೇಗನೇ ಕಾಟಾಚಾರಕ್ಕೆ ಹೋಂ ವರ್ಕ್ ಮುಗಿಸಿ, ಊಟವನ್ನೂ ಬಿಟ್ಟು ಕುಳಿತುಕೊಳ್ಳುವುದನ್ನೂ ಗಮನಿಸಿದ್ದೇನೆ.
ಅಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣಗಳೇ ಎಲ್ಲವನ್ನೂ ಕುಲುಷಿತಗೊಳಿಸುತ್ತವೆ. ನಮಗೆ ಆಸಕ್ತವಾದದ್ದು ಮಾತ್ರ ಇತರರಿಗೂ ಆಸಕ್ತವಾಗಿರಬೇಕೆಂದೇನೂ ಇಲ್ಲವೆಂಬುದನ್ನು ನಾನೂ ಒಪ್ಪುತ್ತೇನೆ. ಹಿಂದಿನ ಕವಿಗಳ ಭಾವಗೀತೆಗಳು, ಜೀವನ ಸಂದೇಶಗಳು, ಸಾಹಿತ್ಯ, ಸಂಸ್ಕಾರಗಳು ಕೇವಲ ಪಠ್ಯದಲ್ಲಿ ಅಂಕಗಳಿಸಲು ಇರುವ ಸರಕಾದರೆ, ಜೀವನ ಮೌಲ್ಯ-ಸಂದೇಶಗಳನ್ನು ನಾವು ಎಲ್ಲಿ ನಿರೀಕ್ಷಿಸಬಹುದು…???
ರಕ್ತ, ದ್ವೇಷ, ಕತ್ತಿ, ಮಚ್ಚು ಅಥವಾ ಭ್ರಮನಿರಸನಗಳು ಕಂಡಷ್ಟು, ಪ್ರೀತಿ, ಪ್ರಕೃತಿ, ಪರಿಸರ ಅಥವಾ ಮಾನವೀಯತೆಗಳು ಇಂದಿನ ಯುವ ಸಾಹಿತ್ಯದಲ್ಲಿ ಕಾಣುತ್ತಿಲ್ಲ ಎಂಬುದು ನಿಜಕ್ಕೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ನೀವು ಒಂದು ಯುವ ಕವಿ ಗೊಷ್ಠಿಗೆ ಹೋಗಿ ನೋಡಿ, ಅಲ್ಲಿ ಸಹಜ ಕವಿತೆಗಳಿಗಿಂತ, ಇಂದಿನ ವ್ಯವಸ್ಥೆಯಲ್ಲಿ ಏನೂ ಸರಿ ಇಲ್ಲ ಎಂದು ಬಿಂಬಿಸುವ ಸಾಹಿತ್ಯವೇ ಹೆಚ್ಚು ಮಂಡಿತವಾಗುತ್ತದೆ. ಇದೆಲ್ಲವೂ ನಮ್ಮ ಯುವ ಜನತೆಯ ಮನಸ್ಸಿನಲ್ಲಿ ಏನೊ ಒಂದು ರೀತಿಯ ಭ್ರಮನಿರಸನವನ್ನು ತುಂಬಿಸಿದಂತೆ ಕಾಣುತ್ತದೆ ಅಥವಾ ತಾವು ಸಮಾಜದಲ್ಲಿ ತೀರಾ ತಿರಸ್ಕ್ರತರು ಎಂಬ ಭಾವ ಬಂದಿರುವಂತೆ ತೋರುತ್ತದೆ.
ಇನ್ನು ಯುವಕರ ಜೊತೆಗೆ ಯುವತಿಯರ ಮನೋಸ್ಥಿತಿ. ಅದರ ಬಗ್ಗೆ ಹೇಳದಿದ್ದರೆ ಲೇಖನ ಅಪೂರ್ಣವಾದೀತು. ಯುವತಿಯವg ಸಾಹಿತ್ಯ, ಭಾಷಣಗಳನ್ನು ನೋಡಿದರೆ, ಪುರುಷರನ್ನು ದೂಷಿಸದ ಹೊರತು ಅದು ಅಪೂರ್ಣ ಎಂದೇ ಭಾವಿಸಿದಂತೆ ಕಾಣುತ್ತದೆ!!. ಇದನ್ನು ನಾನು ಯಾವುದೇ ಪೂರ್ವಾಗ್ರಹವಿಲ್ಲದೆ ಹೇಳುತ್ತಿದ್ದೇನೆ. ಅದೇಕೋ ಪುರುಷರು ನಮ್ಮ ಮೇಲೆ ದೌರ್ಜನ್ಯವೆಸಗುತ್ತಲೇ ಇರುತ್ತಾರೆ ಎಂದೇ ಹೆಚ್ಚಿನ ಯುವ ಮನಸುಗಳು ನಿರ್ಧರಿಸಿಬಿಟ್ಟಿರುತ್ತವೆ. ಅದಕ್ಕೆ ಪುರುಷರಾಗಿ ನಾವು ಕಾಣದ ಕಾರಣಗಳೂ ಇರಬಹುದೇನೋ!!. ಆದರೂ, ಇಂದು ಪರಿಸ್ತಿತಿ ಹಾಗೆ ಉಳಿದಿಲ್ಲ ಎಂಬುದು ನನ್ನ ಭಾವನೆ. ಪುರುಷನೂ ಸ್ತ್ರೀ ಶಕ್ತಿಯನ್ನು ಅರ್ಥ ಮಾಡಿಕೊಂಡು, ಆಕೆಗೂ ಸಮಾನ ಅವಕಾಶವನ್ನು ಒದಗಿಸುತ್ತಿರುವುದನ್ನು ಹಲವು ರಂಗಗಳಲ್ಲಿ ಕಾಣುತ್ತಿದ್ದೇವೆ. ಎಲ್ಲೋ ಒಬ್ಬ ಮೋಹನನಂತವರು ಇಲ್ಲವೆಂದಲ್ಲ. ಹಾಗೆ ಗಮನಿಸಿದರೆ ಅಂಥ ಮೋಹನರು ಪುರುಷ-ಮಹಿಳೆ ಎರಡೂ ವರ್ಗಗಳಲ್ಲಿ ಒಬ್ಬಿಬ್ಬರು ಕಾಣ ಸಿಗುತ್ತಾರೆ. ದೇವತೆಗಳ ಲೋಕದಲ್ಲಿ ರಾಕ್ಷಸರು ಕಾಣಸಿಗುವಂತೆ!! ಹಾಗೆಂದ ಮಾತ್ರಕ್ಕೆ ಪುರುಷ-ಮಹಿಳೆಯರು ಪರಸ್ಪರರ ಮೇಲೆ ಕೆಸರೆರಚಾಟ ಮಾಡಿದರೆ ಯಾವುದೂ ಸರಳವಾಗದೇ, ಬರಿಯ ಹತಾಶೆ, ಸಿಟ್ಟುಗಳು ಮಾತ್ರವೇ ಮುಂದುವರಿಯುತ್ತವೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ನಮ್ಮ ಯುವ ಮನಸುಗಳು-ಅದು ಪುರುಷರಿರಲಿ, ಮಹಿಳೆಯರಿರಲಿ-ಯಾವುದೋ ಒಂದು ಆದರ್ಶದ ಹೆಸರಿನಲ್ಲಿ, ಸಮಾಜದ ಹುಳುಕುಗಳನ್ನೇ ಮುಖ್ಯವಾಗಿ ಗಮನಿಸುತ್ತಾ, ಜೀವನದಲ್ಲಿರುವ ಸುಂದರಗಳಿಗೆಗಳನ್ನು ಕಳದುಕೊಳ್ಳುವುದರಲ್ಲಿ ಅರ್ಥವಿಲ್ಲ ಎನಿಸುತ್ತದೆ. ಹಾಗೆ ಅವರನ್ನು ಈ ರೀತಿಯ ಪೂರ್ವಾಗ್ರಹಗಳಿಂದ ಹೊರ ತರಲು, ಮನೆಯಿಂದಲೇ ಆರಂಭವಾಗಿ, ಪ್ರಾಥಮಿಕ ಶಾಲೆಗಳಿಂದ ಮುಂದುವರಿಯಬೇಕು. ಕಾಲೇಜು ಜೀವನ ಆರಂಭವಾಗುವ ಹೊತ್ತಿಗೆ ಮಗುವಿನ ಮನಸ್ಸು, ಒಂದು ರೀತಿಯ ಮುಂದಿನ ಬದುಕಿಗೆ ತಯಾರಿ ಮಟ್ಟದಿಂದ ಹೊರಬಂದಿರುತ್ತದಾದ್ದರಿಂದ, ಗಿಡವಾಗಿರುವಾಗಲೇ ಬಗ್ಗಿಸಿ, ಹದಕ್ಕೆ ತಂದರೆ, ಯುವ ಮನಸ್ಸು ಇಷ್ಟೊಂದು ನಿರಾಶಾವಾದಿಯಾಗದು ಎನಿಸುತ್ತದೆ.
ಇಲ್ಲಿ ನಾನು ಮುಖ್ಯವಾಗಿ ಸಾಹಿತ್ಯಾತ್ಮಕವಾಗಿ ಯುವ ಜನತೆಯ ಮನಸನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ. ಬದುಕಿನ ಎಲ್ಲಾ ರಂಗದಲ್ಲೂ ಈ ರೀತಿಯ ನಿರಾಶೆಯಲ್ಲಿ ಯುವ ಜನತೆಇರುವುದನ್ನು ಗಮನಿಸಿಬಹುದು. ಬದುಕಿನ ಮೂಲ ಸೆಲೆ ಸಾಹಿತ್ಯಾಧಾರಿತ. ಅದು ತಿಳಿದೋ, ತಿಳಿಯದೆಯೋ, ಪ್ರತೀ ಮನುಷ್ಯನಲ್ಲೂ ಒಂದೊಂದು ರೀತಿಯಲ್ಲಿ ಹಾಸು ಹೊಕ್ಕಾಗಿರುತ್ತದೆ ಎಂಬ ಹಿನ್ನೆಲೆಯಲ್ಲಿ, ಸಾಹಿತ್ಯಾತ್ಮಕ ಬದುಕು, ಒಂದು ಜೀವನದ ವಿಶ್ಲೇಷಣೆಗೆ ಪೂರಕ ಮತ್ತು ಒಪ್ಪ ಬಹುದಾದ ಮಾತು ಎಂಬ ಭಾವನೆ ನನ್ನದು. ಹಾಗಾಗಿ ಯುವ ಮನಸುಗಳು, ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ ಮತ್ತು ಬದುಕಿನಲ್ಲಿ ಮುನ್ನಡಿ ಇಡುವಾಗ, ಆಶಾವಾದಿಗಳಾದರೆ ಸ್ವಸ್ಥ ಜೀವನ, ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ನೀವೂ ಒಪ್ಪಬಹುದು ಎಂದು ಕೊಂಡಿದ್ದೇನೆ.

* * * * * * * *

ಚಿತ್ರಕೃಪೆ : ಯೂತ್ ವೆಬ್ಸ್.ಕಾಂ

2 ಟಿಪ್ಪಣಿಗಳು Post a comment
 1. ಡಿಸೆ 7 2011

  ಮಾನ್ಯರೇ, ನಿಮ್ಮ ಲೇಖನ ಉತ್ತಮವಾಗಿದೆ. ನಮ್ಮ ಕಾಲವೇ ಬೇರೆ. ಈಗಿನ ಯುವಕರ ಕಾಲವೇ ಬೇರೆ. ಅದಕ್ಕೆ ಮೂಲ ಕಾರಣ. ಪ್ರಸ್ತುತ ಚಾಲ್ತಿಯಲ್ಲಿರುವ ಪಟ್ಯ ಪುಸ್ತಕಗಳು ಸುಮಾರು ೨೦ ವರ್ಷದ ಯುವತಿಗೆ ಮಕ್ಕಳನ್ನು ಹೇಗೆ ಬೆಳಸಬೇಕು, ಅರಿಗೆ ಪಾಠ ಹೇಗೆ ಹೇಳಿಕೊಡಬೇಕು. ದೇವರು ಧರ್ಮದ ಬಗ್ಗೆ ಹೇಗೆ ತಿಳಿ ಹೇಳಬೇಕು. ವಸ್ತ್ರಗಲ್ಲನ್ನು ಹೇಗೆ ತೊಡಬೇಕು. ದೇವರೆಂದರೆ ಏನು? ಹಬ್ಬ ಹರಿದಿನಗಳನ್ನು ಹೇಗೆ ಆಚರಿಸಬೇಕು. ಪೂಜೆ ಹೇಗೆ ಮಾಡಬೇಕು. ಇವುಗಳನ್ನು ತಾಯಿಯೇ ಕಲಿತಿರುವುದಿಲ್ಲ. ಬೆಳಿಗ್ಗೆ ತಡವಾಗಿ ಏಳುವುದು. ಮುಖವನ್ನು ತೊಳೆಯದೇ ಕೂಡಲೇ ಕಾಫೀ kudiyuvudu. ಸಾಧ್ಯವಾಗದಿದ್ದರೆ. ಹೋಟೆಲಿನಿಂದ ಉಪಹಾರ ತರಿಸುವುದು. ಇಲ್ಲವಾದರೆ ಹೊತೆಲಿನಲ್ಲಿಯೇ ಮಾಡಿಕೊಲ್ಲಿರೆಂದು ಗಂಡ ಮಕ್ಕಳಿಗೆ ಹೇಳುವುದು. ಯಾವಾಗಲು ನೈಟಿ ಅಥವಾ ರಾತ್ರಿ ಉಡುಪು ಧರಿಸುವುದು ತಂದೆ ತಾಯಿಗೆ ಸಮಸ್ಕಾರ ನಡವಳಿಕೆ ಬರದಿದ್ದರೆ. ಮಕ್ಕಳು ಉತ್ತಮ ನದವಲಿಕೆಯವರಾಗುವುದು ಹೇಗೆ. ಇನ್ನು ದುಡಿಯುವ ತಂದೆ ತಾಯಿಗಳದರೆ ಮುಗಿದೇಹೋಯಿತು. ಇಂತಹವರ ಮಕ್ಕಳೇ ಅಪರಾಧಿಗಲಾಗುವುದು. ಇನ್ನು ವಯಸ್ಸಿಗೆ ಬಂದ ನಂತರ ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಸೂಕ್ತ. ಇಲ್ಲವಾದರೆ. ನಿರುದ್ಯೋಗಿಗಳು ಎನುಮಾಡಲು ಸಾಧ್ಯ. ಸ್ನೇಹಿತರ ಜೊತೆ ಸೇರಿ ಐಶರಾಮಿ ಜೀವನಕ್ಕಾಗಿ ಅಪರಾದ ಮಾಡುತ್ತಾರೆ. ಇದಕ್ಕೆಲ್ಲ ಈಗಿನ ತಂದೆ ತಾಯಂದಿರು. ಸರಕಾರ, ಸಮಮಾಜ ಎಲ್ಲವೂ ಕಾರಣ ಅಲ್ಲವೇ?

  ಉತ್ತರ
 2. Ananda Prasad
  ಡಿಸೆ 7 2011

  ಪ್ಯಾಟೆ ಹುಡ್ಗೀರ್ ಹಳ್ಳೀ ಲೈಫ್, ಪ್ಯಾಟೆ ಮಂದಿ ಕಾಡಿಗ್ ಬಂದ್ರು ಎಂಬ ರಿಯಾಲಿಟಿ ಶೋ ನಡೆಸುವ ಸುವರ್ಣ ಟಿವಿ ವಾಹಿನಿ ಭಾರತೀಯತೆ, ಹಿಂದುತ್ವ ಮೊದಲಾದವುಗಳನ್ನು ಪ್ರತಿಪಾದಿಸುವ ಭಾ.ಜ.ಪ.ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಒಡೆತನದಲ್ಲಿದೆ. ಇಂಥವರೇ ಇಂಥ ಅರ್ಥಹೀನ, ಅಸಭ್ಯ ರಿಯಾಲಿಟಿ ಶೋ ನಡೆಸುವುದು ವಿಪರ್ಯಾಸ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ಹಾಗೆ. ಇಂದಿನ ಸಿನಿಮಾಗಳು ಬಹುತೇಕ ಕತ್ತಿ, ಮಚ್ಚು, ಲಾಂಗು, ಹಿಂಸೆಯನ್ನೇ ವೈಭವೀಕರಿಸುತ್ತವೆ. ಇಂಥ ಸಿನಿಮಾಗಳಿಂದ ಯುವ ಜನಾಂಗದ ಮೇಲೆ ದುಷ್ಪರಿಣಾಮ ಆಗಿಯೇ ಆಗುತ್ತದೆ. ಆದರೆ ಹಣದ ಮುಂದೆ ಎಲ್ಲವೂ ಗೌಣ. ಹಣವೇ ಜೀವನದಲ್ಲಿ ಪ್ರಧಾನವಾದಾಗ ಇಂಥ ವಿಕೃತಿಗಳು ಉಂಟಾಗುತ್ತವೆ. ಪರಮ ದೈವಭಕ್ತರೂ, ದೇವಾಲಯಗಳಿಗೆ ಭೇಟಿ ಕೊಟ್ಟು ಕೋಟಿ ಕೋಟಿ ದಾನ ಮಾಡುವ ರಾಜಕಾರಣಿಗಳೇ ಪರಮ ಭ್ರಷ್ಟಾಚಾರದಲ್ಲಿ ತೊಡಗಿರುವಾಗ ಇಂದಿನ ಯುವ ಜನಾಂಗ ಇಂಥವನ್ನೆ ಮಾದರಿಯಾಗಿ ತೆಗೆದುಕೊಳ್ಳುವುದರಲ್ಲಿ ಅಚ್ಚರಿಯಿಲ್ಲ. ಪರಿಸ್ಥಿತಿ ಹೀಗಿರುವಾಗ ನೈತಿಕ ಮೌಲ್ಯಗಳನ್ನು ಯಾರು ಕೇಳುತ್ತಾರೆ? ಸಮಾಜದಲ್ಲಿ ನೈತಿಕ ಮೌಲ್ಯ ಹೇಳುವವರೇ ಪಾಪಿಗಳು ಎಂಬಂಥ ಸನ್ನಿವೇಶ ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತಿದೆ. ದೇಶದ ಖನಿಜ ಸಂಪತ್ತನ್ನು ಕೊಳ್ಳೆ ಹೊಡೆದು ಸಾವಿರಾರು ಕೋಟಿಗಳನ್ನು ಕೂಡಿ ಹಾಕಿ ಸರ್ವಾಧಿಕಾರಿಯಂತೆ ಮೆರೆಯುವ ಪರಮ ಭ್ರಷ್ಟರೇ ಚುನಾವಣೆಗಳಲ್ಲಿ ಭಾರಿ ಬಹುಮತದಿಂದ ಗೆಲ್ಲುವಾಗ ನಮ್ಮ ಜನರಿಗೆ ನೈತಿಕ ಮೌಲ್ಯಗಳು ಬೇಡ ಎಂಬ ಪರಿಸ್ಥಿತಿ ಬಂದಿದೆ ಎನಿಸುವುದಿಲ್ಲವೇ ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments