ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ
-ಪ್ರವೀಣ್. ಟಿ. ಎಲ್
ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.
ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ.
ಅಂದರೆ ಸಾಹಿತಿಗಳು ಹಾಗೂ ಸಾಹಿತ್ಯ ಪ್ರಕಾರವು ಯಾವಾಗಿನಿಂದ ಮತ್ತು ಏಕೆ ಜಾತಿ ರಾಜಕೀಯದ ಗುಂಪುಗಳಿಗೆ ಮಹತ್ವಪೂರ್ಣ ಎನಿಸತೊಡಗಿದ್ದಾರೆ ಎಂಬುದು ಕುತೂಹಲಕಾರಿ ಪ್ರಶ್ನೆ. ಅಂದರೆ ಕಲ್ಪಿತ ಕಥೆಗಳನ್ನು ವಾಸ್ತವಿಕ ಟೀಕೆಗಳು ಹಾಗೂ ಸಾಹಿತಿಯ ರಾಜಕೀಯ ನಿಲುವನ್ನು ಪ್ರತಿಬಿಂಬಿಸುತ್ತವೆ ಎಂಬುದಾಗಿ ಈ ಜಾತಿ ಗುಂಪುಗಳು ಏಕೆ ವಿವಾದವನ್ನಾಗಿ ಮಾಡತೊಡಗಿವೆ? ಇದು ಒಂದೊ ನಮ್ಮ ಆಧುನಿಕ ರಾಜಕೀಯವು ಬೆಳೆದು ಬರುತ್ತಿರುವ ವೈಖರಿಗೆ ಸಂಬಂಧಿಸಿರಬಹುದು, ಇಲ್ಲ ಸಾಹಿತ್ಯವು ತನ್ನನ್ನು ಹೇಗೆ ಬಿಂಬಿಸಿಕೊಂಡಿದೆ ಎಂಬುದಕ್ಕೂ ಸಂಬಂಧಿಸಿರಬಹುದು. ಇಲ್ಲ ಇವೆರಡರ ಪರಸ್ಪರರ ದ್ವಂದ್ವಾತ್ಮಕ ಸಂಬಂಧದ ಪರಿಣಾಮವೂ ಇರಬಹುದು. ಆಧುನಿಕ ಸಾಹಿತ್ಯವು ರಾಜಕೀಯ ಬದ್ಧತೆಯನ್ನು ತನ್ನ ಒಂದು ಮೌಲ್ಯವನ್ನಾಗಿ ಸ್ವೀಕರಿಸಿದೆ. ಹಾಗೂ ಸಾಹಿತ್ಯ ಪ್ರಕಾರಗಳನ್ನು ಸಾಮಾಜಿಕ ಸತ್ಯಗಳು (ಇತಿಹಾಸಗಳು), ಹಾಗೂ ಸಾಹಿತ್ಯ ಕೃತಿಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸಾಧನಗಳು ಎಂದೇ ನಾವೆಲ್ಲ ಭಾವಿಸಿದ್ದೇವೆ. ಈ ರೀತಿಯಲ್ಲಿ ಸಾಹಿತ್ಯವಂತೂ ರಾಜಕೀಯದ ಜೊತೆಗೆ ತನ್ನ ಈ ದ್ವಂದ್ವಾತ್ಮಕ ಸಂಬಂಧವನ್ನು ಸಾರಿಕೊಂಡೇ ಬಂದಿದೆ. ತಮ್ಮ ಕಥೆಯು ಸಾಮಾಜಿಕ ವಾಸ್ತವವನ್ನು ಬಿಂಬಿಸುತ್ತದೆ ಎಂಬುದನ್ನು ಸಾಹಿತಿಗಳೂ ನಂಬಿದ್ದಾರೆ. ಹಾಗಿರುವಾಗ ತಮ್ಮ ಕಥೆ ಕೇವಲ ಕಥೆ ಎಂಬುದಾಗಿ ಹೇಳುವ ಸ್ಥಿತಿಯಲ್ಲಿ ಅವರೂ ಇಲ್ಲ. ಈ ನಂಬಿಕೆಯನ್ನು ಇಟ್ಟುಕೊಂಡ ಸಾಹಿತಿಗಳಿಗೆ ಈ ಮೇಲಿನಂಥ ಘಟನೆಗಳಲ್ಲಿ ಸಾಹಿತ್ಯಕ್ಕೂ ಸಾಮಾಜಿಕ ವಾಸ್ತವಕ್ಕೂ ಇರುವ ಸಂಬಂಧದ ಕುರಿತು ಇಬ್ಬಂದಿ ನಿಲುವು ಹುಟ್ಟುತ್ತದೆ.
ಇದಕ್ಕೆ ನಿದರ್ಶನವಾಗಿ ‘ಗಾಂಧಿಬಂದ’ದ ಲೇಖಕರೇ ತಮ್ಮ ಕುರಿತು ಬಂದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ (ಪ್ರಜಾವಾಣಿಯ ‘ಸಂಗತ’ದಲ್ಲಿ ದಿನಾಂಕ 29/11/2011ರಂದು) ‘ಕಥಾವಿನ್ಯಾಸ’ವಿರುವ ಪಾತ್ರಗಳ ಮಾತುಗಳನ್ನು ‘ಜಾತಿನಿಂದನೆ’ ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸುವ ಮೂಲಕ ಕಲಾಕೃತಿಯನ್ನು ವಾಸ್ತವವೆಂದು ಪರಿಗಣಿಸುವುದು ಸರಿಯಲ್ಲ ಎಂದು ಪ್ರತಿಪಾದಿಸುತ್ತಾರೆ. ಆಶ್ಚರ್ಯವೆಂದರೆ ಅದೇ ಲೇಖನದಲ್ಲಿಯೇ ‘ಬ್ರಾಹ್ಮಣ ಸಮಾಜದ ಗಂಡಸರು ಮತ್ತು ಹೆಂಗಸರಿಗೆ ಅನೈತಿಕ ಸಂಬಂಧಗಳ ಕಲ್ಪನೆಯೇ ಇಲ್ಲ’ ಎಂಬ ಶಿವಳ್ಳಿ ಬ್ರಾಹ್ಮಣ ಪರಿಷತ್ನ ಮಾತುಗಳನ್ನು ‘ಬಾಲಿಶ’ ಎಂದು ತೋರಿಸಲು ‘ಅನಂತಮೂರ್ತಿಯವರ ಸಂಸ್ಕಾರ’ ಕಾದಂಬರಿಯನ್ನು ನೋಡುವಂತೆ ಸಲಹೆ ನೀಡುತ್ತಾರೆ. ಅಂದರೆ ತಮ್ಮ ಕೃತಿಗೆ ಆರೋಪ ಎದುರಾದಾಗ, ಅದರಿಂದ ತಪ್ಪಿಸಿಕೊಳ್ಳಲು ‘ಗಾಂಧಿಬಂದ’ ಒಂದು ಕಲಾಕೃತಿಯಷ್ಟೇ ಎಂದು ಸಮಜಾಯಿಷಿ ನೀಡಿದ ಲೇಖಕರೇ ಮತ್ತೊಂದು ಕಾದಂಬರಿಯನ್ನು ‘ಸಮಾಜದ ವಾಸ್ತವ’ವನ್ನು ತಿಳಿದುಕೊಳ್ಳಲಿಕ್ಕೆ ಸಾಕ್ಷೀಕರಿಸುವುದನ್ನು ನೋಡುತ್ತೇವೆ. ಸಾಹಿತಿಗಳು, ವಿಮರ್ಶಕರು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸುಸಂದರ್ಭವಾಗಿದೆ ಎಂದು ಭಾವಿಸುತ್ತೇನೆ.
ಸೃಜನಶೀಲ ಕೃತಿಯೊಂದನ್ನು ಸಾಮಾಜಿಕ ವಾಸ್ತವದ ಪ್ರತಿಬಿಂಬವೆಂದು ಬಿಂಬಿಸುತ್ತಿರುವುದಕ್ಕೂ ಈ ರೀತಿಯ ನಿಷೇದದ ಒತ್ತಾಯಕ್ಕೂ ಒಂದು ತಾರ್ಕಿಕ ಸಂಬಂಧವಿರುವಂತೆ ಭಾಸವಾಗುತ್ತಿದೆ. ಬಹುಶಃ ಯಾವ ರಾಜಕೀಯ ಸಂಸ್ಕೃತಿಯ ಭಾಗವಾಗಿ ಒಂದೆಡೆ ಸಾಹಿತ್ಯವೂ ಮತ್ತೊಂದೆಡೆ ಅದರ ಸತ್ಯಗಳನ್ನು ಆಧರಿಸಿದ ಸಾಮಾಜಿಕ ಗುಂಪುಗಳೂ ಅಸ್ತಿತ್ವಕ್ಕೆ ಬಂದು ಕ್ರಿಯಾಶೀಲವಾಗಿವೆಯೊ ಅಂಥ ರಾಜಕೀಯ ವ್ಯವಸ್ಥೆಯೇ ಈ ತರ್ಕವನ್ನು ಸೃಷ್ಟಿಸುತ್ತಿರಬಹುದು. ಹಾಗಾಗಿಯೇ ಆಧುನಿಕ ಸಾಹಿತ್ಯ ಕೃತಿಯನ್ನು ಬರೆಯುವವರು ಹಾಗೂ ಓದುವವರು ಜಾನಪದ ಕಲೆಗಳ ಕಲಾವಿದರಿಗಿಂತ ಪ್ರೇಕ್ಷಕರಿಗಿಂತ ಬೇರೊಂದು ಸಾಂಸ್ಕೃತಿಕ ಸಂದರ್ಭಕ್ಕೆ ಸೇರಿದಂತೆ ಕಾಣುತ್ತಾರೆ ಅಥವಾ ಆಧುನಿಕ ಕಥಾ ಸಾಹಿತ್ಯವು ತನ್ನ ಅಸ್ತಿತ್ವಕ್ಕೆ ಬೇರೊಂದೇ ಮನೋಭಾವನೆಯನ್ನು ಬೇಡುತ್ತಿರುವಂತೆ ಕಾಣಿಸುತ್ತಿದೆ.
************************
(ವಿ.ಕ.ದಲ್ಲಿ ಪ್ರಕಟಿತ)
chitrakrupe: nobelprize.org