ಸಂಸ್ಕೃತಿ ಸಂಕಥನ – ೧೩ ಬಾಲಗಂಗಾಧರರ ಸೂಕ್ಷ್ಮದರ್ಶಕದಲ್ಲಿ ಕೋಲಾರದ ಘಟನೆ
– ರಮಾನಂದ ಐನಕೈ
ಇತ್ತೀಚೆಗೆ ಕೋಲಾರದ ಭಗವದ್ಗೀತಾ ಅಭಿಯಾನದ ಸಂದರ್ಭದಲ್ಲಿ ಸ್ವರ್ಣವಲ್ಲೀ ಸ್ವಾಮೀಜಿಯವರಿಗೆ ಹಾಗೂ ಭಗವದ್ಗೀತೆಗೆ ಅವಮಾನ ಮಾಡಿದ ಘಟನೆಯ ಹಿಂದೆ ಅನೇಕ ತಪ್ಪು ತಿಳುವಳಿಕೆಗಳು ಕೆಲಸ ಮಾಡಿವೆ. ಮೇಲ್ನೋಟಕ್ಕೆ ನೋಡಿದರೆ ಇದೊಂದು ರಾಜಕೀಯ ಚದುರಂಗದಾಟ ಎಂಬುದು ಸ್ಪಷ್ಟ. ಹಿಂದೆ ಇದೇ ಭಗವದ್ಗೀತಾ ಅಭಿಯಾನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಲ್ಲೆಲ್ಲೂ ನಡೆಯದ ಭಯಂಕರ ವಿರೋಧ ಕೋಲಾರದಲ್ಲೇ ಏಕೆ ನಡೆಯಿತು? ಅದನ್ನು ಅರಿತುಕೊಳ್ಳುವ ಅಗತ್ಯ ಇದೆ.
ಕೋಲಾರದಲ್ಲಿ ಕಾರ್ಮಿಕ ವರ್ಗ ಪ್ರಬಲವಾಗಿದೆ. ಹಾಗಾಗಿ ಇಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಪ್ರಾಬಲ್ಯ ಇದೆ. ಜೊತೆಗೆ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಕೃಷ್ಣಪ್ಪ ಇದೇ ಜಿಲ್ಲೆಯವರು. ದಲಿತ ಹೋರಾಟವೂ ಈ ಜಿಲ್ಲೆಯಲ್ಲಿ ಹೆಚ್ಚು ಜೀವಂತವಾಗಿದೆ. ಈ ಕಾರಣಕ್ಕಾಗಿ ಅವರು ಭಗವದ್ಗೀತಾ ಅಭಿಯಾನವನ್ನು ಭಾರತೀಯ ಜನತಾ ಪಾರ್ಟಿಯ ಪ್ರೊಪಗಾಂಡಾ ಎಂಬಂತೆ ಗ್ರಹಿಸಿರುವ ಸಾಧ್ಯತೆ ಇದೆ. ಇಂದು ಭಾರತೀಯ ಸಮಾಜಶಾಸ್ತ್ರವನ್ನು ನಿರ್ಣಯಿಸುತ್ತಿರುವುದು ಇಂಥ ತಪ್ಪು ತಿಳುವಳಿಕೆಗಳೆ. ಭಗವದ್ಗೀತೆ ಅಂದರೆ ಬ್ರಾಹ್ಮಣರದ್ದು, ಮೇಲ್ವರ್ಗದ್ದು ಎಂಬ ನಂಬಿಕೆ ಇದೆ. ಇತ್ತೀಚೆಗೆ ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷರ ಸಂದರ್ಶನದಲ್ಲೂ ಇದು ಸ್ಪಷ್ಟವಾಗಿದೆ. ಭಾಜಪಾ ಮೇಲ್ವರ್ಗದವರ ಪಕ್ಷ. ಹಾಗಾಗಿ ಭಗವದ್ಗೀತೆಯ ಪ್ರಚಾರದ ಮೂಲಕ ಪಕ್ಷ ಬಲಪಡಿಸುತ್ತಿದ್ದಾರೆಂಬ ತಿಳುವಳಿಕೆಯೂ ಇರಬಹುದು.
ಈ ಅಭಿಯಾನ ನಿಲ್ಲಬೇಕು. ಸ್ವಾಮೀಜಿಯವರು ವಾಪಸ್ ಶಿರಸಿಗೆ ಪ್ರಯಾಣ ಬೆಳೆಸ ಬೇಕೆಂಬುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಎಸ್.ಎಫ್.ಐ. ಕಾರ್ಯಕರ್ತರ ಮೂಲಕ ಗಲಾಟೆ ಮಾಡಿಸಿದ್ದು. ಆದರೆ ಪರಿಸ್ಥಿತಿ ಕೈಮೀರಿತು. ಸ್ವಾಮೀಜಿಯವರಿಗೆ ಹಾಗೂ ಭಗವದ್ಗೀತೆಗೆ ಅವಮಾನವಾಯಿತು. ಇದು ರಾಜ್ಯದ ಜನಸಾಮಾನ್ಯರಿಗೆ ಭಾವನೆಯ ಪ್ರಶ್ನೆಯಾದರೆ ವಿಚಾರವಂತರಿಗೆ ಇರುಸುಮುರುಸಿನ ಸಂಗತಿಯಾಯಿತು. ರಾಜ್ಯ ದಲ್ಲಿ ಎಷ್ಟೊಂದು ಮಠಗಳಿವೆ. ಎಲ್ಲ ಸ್ವಾಮೀಜಿ ಯವರೂ ವೇದಿಕೆಯ ಮೇಲೆ ಪ್ರವಚನ ನೀಡುವಾಗ ಭಗವದ್ಗೀತೆಯ ಶಕ್ತಿಯನ್ನು, ಪಾವಿತ್ರ್ಯವನ್ನು ಉಲ್ಲೇಖಿಸುತ್ತಾರೆ. ಆದರೆ ಈಗ ಭಗವದ್ಗೀತೆಗೆ ಅವಮಾನವಾದಾಗ ದನಿಯಿಲ್ಲದವರಂತೆ ಮೌನ ವಾಗಿದ್ದಾರೆ ಏಕೆ? ಭಗವದ್ಗೀತೆ ಎಂಬುದು ಯಾವುದೇ ಜಾತಿ, ಜನಾಂಗದ ಸೊತ್ತಲ್ಲ. ಇಡೀ ಭಾರತೀಯರಿಗೆ ಜೀವನ ಶಿಕ್ಷಣ ನೀಡುವ ನೀತಿ ಕಥೆ. ಅದು ಬ್ರಾಹ್ಮಣರ ಬಗ್ಗೆ ಬೋಧಿಸುವ ಗ್ರಂಥವೂ ಅಲ್ಲ. ಜಗತ್ತಿನ ಅನೇಕ ಮಹಾತ್ಮರು ಈ ಗೀತೆಯನ್ನು ಜ್ಞಾನಭಂಡಾರ ಎಂದುಕೊಂಡಿದ್ದಾರೆ. ಹೀಗಿದ್ದಾಗ ಯಾವುದೇ ಮಠಾಧೀಶರು ಸ್ವರ್ಣವಲ್ಲೀ ಸ್ವಾಮೀಜಿಯವರ ರಕ್ಷಣೆಗೆ ಬಾರದೇ ಇದ್ದದ್ದು ಸೋಜಿಗ. ಇನ್ನೊಂದು ಕಡೆ ಸ್ವರ್ಣವಲ್ಲೀ ಮಠದ ಕಡೆಯಿಂದಲೂ ಎಲ್ಲಾ ಮಠಾಧೀಶರ ಬೆಂಬಲ ಕೋರಬೇಕಾಗಿತ್ತು. ಆಗ ಅವರ ನಿಲುವುಗಳಾದರೂ ಸ್ಪಷ್ಟವಾಗುತ್ತಿತ್ತೇನೋ!
ಈಗ ನಮ್ಮ ಮುಂದಿರುವ ಪ್ರಶ್ನೆ ಅಂದರೆ ಇಂಥ ಸಂದರ್ಭಗಳು ಏಕೆ ನಿರ್ಮಾಣವಾಗುತ್ತವೆ? ಇಂಥ ಕ್ಷಣಗಳಲ್ಲಿ ಏಕೆ ಮಾತನಾಡಬೇಕಾದವರು ಮೌನಿಗಳಾಗುತ್ತಾರೆ ಮತ್ತು ಮೌನವಾಗಿರಬೇಕಾದವರು ಮಾತನಾಡುತ್ತಾರೆ? ಇಡೀ ಭಾರತೀಯರು ನಂಬಿಕೊಂಡು ಬಂದ ಭಗವದ್ಗೀತೆ ಏಕೆ ವಿವಾದಕ್ಕೆ ಎಡೆಯಾಗುತ್ತಿದೆ? ಅಥವಾ ಗೀತೆಯ ನೀತಿ ಸಾರಲು ಹೊರಟ ಸ್ವಾಮೀಜಿಯೊಬ್ಬರು ಏಕೆ ಅನಾಥಪ್ರಜ್ಞೆ ಅನುಭವಿಸಬೇಕಾಗುತ್ತದೆ? ಗೀತೆಯ ಕುರಿತು ಅಪಾರ ಗೌರವ ಹೊಂದಿದ ಅಸಂಖ್ಯಾತ ವಿಚಾರವಂತರು ಅಪಾಯದಲ್ಲಿರುವವರಂತೆ ಮೌನಿಗಳಾಗುತ್ತಾರೆ. ಗೀತೆಯ ಬಗ್ಗೆ ಏನೂ ಗೊತ್ತಿಲ್ಲದವರು ಸುಳ್ಳು ಸುಳ್ಳೇ ವ್ಯಾಖ್ಯಾನ ನೀಡುತ್ತಾರೆ. ಇದು ನಮ್ಮ ಸಮಾಜವಿಜ್ಞಾನದ ತೊಂದರೆ. ಪಾಶ್ಚಾತ್ಯರ ಅನುಭವವೇ ನಮ್ಮ ನಿಜ ಎಂದು ಅವರೇ ಬರೆದ ಸಮಾಜ ಶಾಸ್ತ್ರಕ್ಕೆ ಜೋತುಬಿದ್ದಿದ್ದರ ಫಲ. ಆದ್ದರಿಂದ ಕೋಲಾರದ ಘಟನೆಯನ್ನು ಎಲ್ಲರಿಗೂ ಒಂದೇ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗಲಾರದು.
ಇದಕ್ಕೆಲ್ಲ ಸೂಕ್ತ ಉತ್ತರ ಸಿಗಬೇಕಾದರೆ ನಾವು ಪ್ರೊ. ಬಾಲಗಂಗಾಧರರ ಸ್ಮೃತಿ-ವಿಸ್ಮೃತಿಯಲ್ಲಿ ಪ್ರವೇಶ ಮಾಡಬೇಕು. ಭಾರತೀಯ ಜಾತಿಗಳ ಬಗ್ಗೆ ಸೃಷ್ಟಿಸಿಕೊಂಡ ಪೂರ್ವಾಗ್ರಹಗಳನ್ನು ಗುರುತಿಸಿಕೊಳ್ಳ ಬೇಕು. ಭಾರತ ರಿಲಿಜನ್ನೇ ಇಲ್ಲದ ಸಂಸ್ಕೃತಿ ಎಂಬು ದನ್ನು ಅರ್ಥ ಮಾಡಿಕೊಳ್ಳಬೇಕು. ರಿಲಿಜನ್ನೇ ಇಲ್ಲದ ದೇಶದಲ್ಲಿ ಸೆಕ್ಯುಲರಿಸಂ ಅವಾಂತರಕಾರಿ ಎಂಬುದನ್ನು ಅರಿಯಬೇಕು.
ಕೋಲಾರದ ಘಟನೆ ಈಗ ಎಡ ಮತ್ತು ಬಲ ಪಂಥೀಯರ ವಾಗ್ವಾದದ ಆಖಾಡವಾಗಿ ಮಾರ್ಪಟ್ಟಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಗೀತೆಯನ್ನು ವಿರೋಧಿಸುವಲ್ಲಿ ಎರಡು ಮುಖ್ಯ ಕಾರಣಗಳನ್ನು ನಾವು ಗುರುತಿಸಬಹುದು.
1) ಬ್ರಾಹ್ಮಣರು ಅಥವಾ ಮೇಲ್ವರ್ಗ.
2) ಸೆಕ್ಯುಲರ್ ಚಿಂತನೆ.
ಮೊದಲನೆಯದಾಗಿ ಭಗವದ್ಗೀತೆ ಬ್ರಾಹ್ಮಣರ ಸೊತ್ತು ಎಂಬ ತಪ್ಪು ತಿಳುವಳಿಕೆ ಇದೆ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಗೀತೆಯ ಕೃಷ್ಣ-ಅರ್ಜುನ ಯಾರೂ ಬ್ರಾಹ್ಮಣರಲ್ಲ. ಕ್ಷತ್ರಿ ಯರು. ಮಹಾಭಾರತ ಬರೆದವ ವ್ಯಾಸ ಒಬ್ಬ ಅಂಬಿಗ. ಇದರಲ್ಲಿ ಬ್ರಾಹ್ಮಣರ ಕುರಿತಾಗಿ ಹೇಳು ವುದು ಏನಿದೆ? ಒಂದೊಮ್ಮೆ ಭಗವದ್ಗೀತೆ ಬ್ರಾಹ್ಮಣರ ಸೃಷ್ಟಿಯಾಗಿದ್ದರೆ ಕೃಷ್ಣ-ಅರ್ಜುನ-ವ್ಯಾಸ ಎಲ್ಲರನ್ನೂ ಏಕೆ ಬ್ರಾಹ್ಮಣರನ್ನಾಗೇ ಮಾಡಿರುತ್ತಿದ್ದರು. ಭಾರತ ದಲ್ಲಿ ಜಾತಿ ವ್ಯವಸ್ಥೆ ಇದೆ ಎಂಬ ನಂಬಿಕೆಯಲ್ಲೇ ತೊಂದರೆ ಇದೆ. ಜಾತಿ ಬೇರೆ, ವರ್ಣ ಬೇರೆ. ಪಾಶ್ಚಾತ್ಯರು ಇಲ್ಲಿಗೆ ಬಂದು ಸಮಾಜವಿಜ್ಞಾನ ಬರೆಯುವಾಗ ವರ್ಣಗಳನ್ನು ಜಾತಿಗೆ ಮತಾಂತರ ಮಾಡಿದರು. ಅಂದರೆ ಜಾತಿ ಮತ್ತು ವರ್ಣ ಅರ್ಥ ಮಾಡಿಕೊಳ್ಳುವಲ್ಲಿ ಗೊಂದಲಕ್ಕೀಡಾದರು. ವರ್ಣಗಳ ಪ್ರಕಾರ ಬ್ರಾಹ್ಮಣ ಎಂಬುದು ‘ಗುಣ’ವೇ ಹೊರತು ಜಾತಿ ಅಲ್ಲ. ‘ಶೂದ್ರ’ ಅನ್ನುವುದು ಗುಣವೇ ಹೊರತು ಜಾತಿ ಅಲ್ಲ. ವರ್ಣಾಶ್ರಮದ ಬ್ರಾಹ್ಮಣ ಹಾಗೂ ಜಾತಿಯಿಂದ ಬ್ರಾಹ್ಮಣ ಎರಡನ್ನೂ ಒಂದೇ ಎಂದು ತಿಳಿದುಕೊಂಡಿರುವುದರಿಂದ ಆದ ತೊಂದರೆ ಇದು. ಗೀತೆ ಕೇವಲ ಜಾತಿ ಬ್ರಾಹ್ಮಣರ ಸೊತ್ತಾಗಿದ್ದರೆ ಸಾವಿರಾರು ವರ್ಷ ಅಸ್ತಿತ್ವದಲ್ಲಿರಲು ಸಾಧ್ಯವಿತ್ತೇ? ನಾವು ನಂಬಿಕೊಂಡು ಬಂದಿರುವ ತಪ್ಪು ಸಮಾಜ ವಿಜ್ಞಾನದಿಂದಾಗಿ ಈ ರೀತಿಯ ಗೊಂದಲ ಸೃಷ್ಟಿಸಿ ಕೊಳ್ಳುತ್ತಿದ್ದೇವೆ. ಶಾಶ್ವತವಾಗಿ ಸಮಾಜದಲ್ಲಿ ಸಮಾ ನತೆ ಸಾಧ್ಯವಾಗದ ಪರಿಸ್ಥಿತಿಯನ್ನು ಗಟ್ಟಿಯಾಗಿಸುತ್ತಿ ದ್ದೇವೆ. ತಪ್ಪು ತಿಳುವಳಿಕೆಗಳಿಂದ ಸೃಷ್ಟಿಸಿಕೊಂಡ ಪ್ರಗತಿ ಪರತೆಯ ಹೆಸರಿನಲ್ಲಿ ಜಗತ್ತಿನಲ್ಲಿರುವ ಅಮೂಲ್ಯ ಜ್ಞಾನ ಭಂಡಾರವನ್ನು ಧಿಕ್ಕರಿಸುವುದು ಮನುಷ್ಯ ತನಗೆ ತಾನೇ ಮಾಡಿಕೊಳ್ಳುತ್ತಿರುವ ಅನ್ಯಾಯ.
ಎರಡನೆಯ ಕಾರಣವೆಂದರೆ ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಸೆಕ್ಯುಲರಿಸಂ ಕೂಡಾ ಇಂತಹ ಅಪಾಯಗಳಿಗೆ ಎಡೆಮಾಡಿ ಕೊಡುತ್ತದೆ. ಏಕೆಂದರೆ ಸೆಕ್ಯುಲರ್ ದೃಷ್ಟಿಕೋನದವರಿಗೆ ಭಗವದ್ಗೀತಾ ಅಭಿಯಾನ ಒಂದು ರಿಲೀಜಿಯಸ್ ಚಟುವಟಿಕೆಯಾಗಿ ಕಂಡುಬಂದರೆ ಅಚ್ಚರಿಯೇನಲ್ಲ. ಆದರೆ ಭಾರತ ದಂತಹ ದೇಶದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ಕೂಡಾ ರಿಲೀಜಿಯಸ್ ಚಟುವಟಿಕೆ ಅಲ್ಲ. ಏಕೆಂದರೆ ಭಾರತದಲ್ಲಿ ರಿಲಿಜನ್ ಇಲ್ಲ. ನಮ್ಮ ಧರ್ಮ ಎಂಬುದು ರಿಲಿಜನ್ ಅಲ್ಲ. ಧರ್ಮ ಅಂದರೆ ಸಂಪ್ರದಾಯ. ರಿಲಿಜನ್ ಇಲ್ಲದ ಸಂಸ್ಕೃತಿಯಲ್ಲಿ ರಿಲೀಜಿಯಸ್ ಚಟುವಟಿಕೆ ನಡೆಯಲು ಹೇಗೆ ಸಾಧ್ಯ? ಹಿಂದೂಯಿಸಂ ಎಂಬುದು ಒಂದು ರಿಲಿಜನ್ ಎಂದವರು ಪಾಶ್ಚಾತ್ಯರು. ಹಿಂದು ಎನ್ನುವುದು ರಿಲಿಜನ್ ಅಲ್ಲ. ಭಗವದ್ಗೀತೆ ಆದರೆ ಏಕೈಕ ಧರ್ಮ ಗ್ರಂಥವೂ ಅಲ್ಲ. ಆದ್ದರಿಂದ ಗೀತಾ ಪಠಣ ಅಂದರೆ ರಿಲಿಜನ್ನಿನ ಬೋಧನೆ ಖಂಡಿತಾ ಅಲ್ಲ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎರಡೂ ರಿಲಿಜನ್ಗಳು, ಕುರಾನ್ ಹಾಗೂ ಬೈಬಲ್ ಅವುಗಳ ಏಕೈಕ ಪವಿತ್ರ ಗ್ರಂಥಗಳು. ಆ ಗ್ರಂಥಗಳು ಕೇವಲ ರಿಲಿಜನ್ನನ್ನು ಮಾತ್ರ ಬೋಧನೆ ಮಾಡುತ್ತವೆ. ಗೀತೆಯಲ್ಲಿ ಇಂಥ ಬೋಧನೆಗಳಿಲ್ಲ. ಗೀತೆಯಲ್ಲಿ ಇದ್ದದ್ದು ಲೌಕಿಕ ಹಾಗೂ ಅಲೌಕಿಕ ಪ್ರಪಂಚದಲ್ಲಿ ಬದುಕಲು ಬೇಕಾದ ನೀತಿಪಾಠ.
ಇಂಥ ನೀತಿಪಾಠ ಕಲಿಯುವ ಹಕ್ಕು ಎಲ್ಲರಿಗೂ ಇದೆ. ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೋ ಬೇಡವೋ ಎಂಬುದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಒಂದರ್ಥದಲ್ಲಿ ಅದರ ಅಗತ್ಯವೂ ಇರಲಿಕ್ಕಿಲ್ಲ. ಆದರೆ ಮಹಾಭಾರತದ ಕಥೆ ಶಾಲಾ ಪಠ್ಯಗಳಲ್ಲಿವೆ. ಈ ಗೀತೆ ಕೂಡಾ ಮಹಾಭಾರತದ ಒಂದು ಉಪಕಥೆ. ಇದೂ ಒಂದು ನೀತಿಕಥೆ. ಇದರ ಬಗ್ಗೆ ಯಾಕೀ ಧೋರಣೆ? ಇಂದಿನ ಶಾಲಾ ಪಠ್ಯಗಳಲ್ಲಿ ಸ್ವಾತಂತ್ರ್ಯ, ಸಮಾನತೆ ಕುರಿತು ಎಷ್ಟೋ ಪಾಠಗಳಿವೆ. ಈ ಸ್ವಾತಂತ್ರ್ಯ, ಸಮಾನತೆ ಎಂಬುದು ಕ್ರಿಶ್ಚಿಯನ್ ಥಿಯಾಲಜಿಯಿಂದ ಹುಟ್ಟಿಬಂದವು ಗಳು. ವಿಪರ್ಯಾಸ ನೋಡಿ, ಅವು ನಮಗೆ ನೀತಿ ಪಾಠಗಳು. ಜೀವನದ ನಿರ್ಣಾಯಕ ಕ್ಷಣಗಳನ್ನು ಎದುರಿಸಲು ಜೀವನ ಪಾಠ ಹೇಳಿಕೊಡುವ ಗೀತೆ ಜಾತಿ ಬೋಧನೆಯ ಗ್ರಂಥ ಎಂಬ ಆರೋಪ!
ಇಷ್ಟೆಲ್ಲ ವಿಚಾರ ಮಾಡಿದ ಮೇಲೆ ಒಂದು ಪ್ರಶ್ನೆ ಎದುರಾಗುತ್ತದೆ. ಸ್ವರ್ಣವಲ್ಲೀ ಸಂಸ್ಥಾನದ ಬ್ರಾಹ್ಮಣ ಸ್ವಾಮೀಜಿ ಯವರ ಹೊರತಾಗಿ ಬೇರೆ ಯಾವುದೇ ಸ್ವಾಮಿಗಳು ಈ ಅಭಿಯಾನ ನಡೆಸಿದ್ದರೆ ಪ್ರತಿ ಕ್ರಿಯೆ ಹೀಗೇ ಇರುತ್ತಿತ್ತೇ? ನಮ್ಮ ನಾಡಗೀತೆಯೆಂದು ಮಾನ್ಯತೆ ಪಡೆದ ರಾಷ್ಟ್ರ ಕವಿ ಕುವೆಂಪು ಅವರ ‘ಜಯ ಭಾರತ ಜನನಿಯ ತನು ಜಾತೆ’ಯಲ್ಲಿ ಶಂಕರ, ರಾಮಾನುಜ, ವಿದ್ಯಾರಣ್ಯ, ಮಧ್ವ ಮುಂತಾಗಿ ಅನೇಕ ಮೇಲ್ವರ್ಗದವರ ಹೆಸರು ಬರುತ್ತದೆ. ಅದೇಕೆ ಇವರ ಸೆಕ್ಯುಲರಿಸಂಗೆ ವಿರೋಧವಾಗಲಾರದು? ಹೀಗೆ ದಿನನಿತ್ಯ ನಮ್ಮ ದೃಷ್ಟಿ ಕೋನಗಳಲ್ಲೇ ಸಾವಿ ರಾರು ವಿರೋಧಾಭಾಸಗಳು, ಅಸಂಗತತೆಗಳು ಕಾಣುತ್ತವೆ.
ಹಾಗಾಗಿ ನಮ್ಮನ್ನು ನಮ್ಮ ಸಮಾಜವನ್ನು ಹಾಗೂ ನಮ್ಮ ಸಾಮಾಜಿಕ ಸಂಗತಿಗಳನ್ನು ಬೇರೆ ರೀತಿಯಲ್ಲಿ ನೋಡಲು ಕಲಿಯುವ ಅನಿವಾರ್ಯತೆ ಇದೆ. ಜಾತಿಯನ್ನು ಭೂತವಾಗಿಸುವುದಕ್ಕಿಂತ ಮನುಷ್ಯರೆಲ್ಲ ಒಂದೇ ಜಾತಿ ಹಾಗೂ ಪ್ರತಿ ಯೊಬ್ಬರೂ ಅವರವರ ಸಂಪ್ರದಾಯದಲ್ಲಿ ಬದುಕುತ್ತಿದ್ದಾರೆ ಎಂದು ಸರಳವಾಗಿ ಗ್ರಹಿಸುವಲ್ಲಿ ನೆಮ್ಮದಿ ಇದೆ.
ಪ್ರೊ. ಬಾಲಗಂಗಾಧರರು ಹೇಳುವಂತೆ ಈಗ ನಮ್ಮ ಭಾರತೀಯ ಸಮಾಜವಿಜ್ಞಾನದ ಪುನರ್ಪರಿಶೀಲನೆ ಮಾಡುವ ಅಗತ್ಯ ಎದುರಾಗಿದೆ. ಆ ಮೂಲಕ ಸಹನೆಯಿಂದ ನಮ್ಮ ತಪ್ಪು ತಿಳುವಳಿಕೆ ಯನ್ನು ಗುರುತಿಸಿಕೊಂಡು ಪರಸ್ಪರ ಅದನ್ನು ಹೋಗಲಾಡಿಸಿಕೊಳ್ಳುವ ಮಾರ್ಗದಲ್ಲಿ ಸಮಾನತೆ ಅಡಗಿದೆ. ಇದನ್ನು ಕಂಡುಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ.
* * * * * * * *
ಚಿತ್ರಕೃಪೆ : ಅಂತರ್ಜಾಲ