ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 12, 2011

55

ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ,ಜಾತಿಗಾಗಿಯಲ್ಲ

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಇದನ್ನ ಈ ದೇಶದ ಕರ್ಮ ಅಂತಲೇ ಅನ್ನಬೇಕೇನೋ,  ಅಂದುಕೊಂಡಂತೆ ‘ಮಡೆ ಸ್ನಾನ’ದ ‘ಮಡೆ'(ಮಡೆ=ಎಂಜಲು) ಉರುಳದವರ ಮೇಲೆಯೂ ಬೀಳುತ್ತಿದೆ.ಇಷ್ಟು ದಿನ ಉರುಳಾಡಿದ್ದು ಮನುಷ್ಯರಾದರೆ ಈಗ ಸಮಸ್ತ ಜಾತಿಗಳು ಬಿದ್ದು ಉರುಳಾಡುತ್ತಿವೆ.ಮಡೆ ಸ್ನಾನವನ್ನು ವಿರೋಧಿಸಿ ನಾನು ಈ ಹಿಂದೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ‘ಅದು ಬ್ರಾಹ್ಮಣರ ಎಂಜಲೆಲೆ’ ಅನ್ನುವ ಕಾರಣಕ್ಕೆ ವಿರೋಧಿಸುತಿದ್ದಿರ ಅನ್ನುವಂತಹ ಪ್ರತಿಕ್ರಿಯೆಗಳು ಬ್ಲಾಗಿನಲ್ಲಿ/ಮಿಂಚೆಗಳ ಮೂಲಕ ಬಂದಿವೆ. ನನ್ನ ಲೇಖನದಲ್ಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದೆ, ಅದ್ಯಾವ ಜಾತಿಯವರು ತಿಂದು ಮತ್ತಿನ್ಯಾವಾ  ಜಾತಿಯವ ಅದರ ಮೇಲೆ ಉರುಳಾಡುವುದು ಅಷ್ಟೇ ಅಸಹ್ಯಕರ’  ಅಂತ.

ಅಂದರೆ,ಅದು ಕುಕ್ಕೆಯ ಮಡೆ ಸ್ನಾನವಿರಲಿ ಅಥವಾ ತುರುವೇಕೆರೆಯ ಮಡೆಸ್ನಾನವಿರಲಿ ಎರಡೂ ಅಸಹ್ಯಕರವೇ, ಎರಡೂ ಖಂಡನೀಯವೇ.ಮಡೆ ಸ್ನಾನದ ಪರ-ವಿರೋಧ ಮಾತನಾಡುವವರು ನೆನಪಿಡಬೇಕಾದದ್ದು ‘ಈ ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ ಹೊರತು ಜಾತಿಗಾಗಿಯಲ್ಲ’ ಅನ್ನುವುದು.

ಈ ಎಂಜಲು ಸ್ನಾನವನ್ನ ನಂಬಿಕೆ,ಮತ್ತೆ ಆ ನಂಬಿಕೆಯಿಂದ ಯಾರಿಗೂ ಲಾಭ-ನಷ್ಟವಿಲ್ಲ ಮತ್ತದು ಒತ್ತಾಯಪೂರ್ವಕವೂ ಅಲ್ಲವಾದರಿಂದ ನಿಷೇಧಿಸಲಾಗದು-ನಿಷೇಧಿಸಬಾರದು ಅನ್ನುವವರಿಗೆ ಸತಿ ಪದ್ಧತಿ,ದೇವದಾಸಿ,ವಿಧವಾ ಕೇಶ ಮುಂಡನ,ಬೆತ್ತಲೆ ಸೇವೆಯಂತ ಅನಿಷ್ಟ ಪದ್ಧತಿಗಳು ಸಹ ಒತ್ತಾಯಪೂರ್ವಕಾವಗಿರಲಿಲ್ಲ ಮತ್ತವೆಲ್ಲ ನಿಂತದ್ದು ಸರ್ಕಾರದ ‘ದಂಡ’ ಪ್ರಯೋಗದಿಂದಲೇ ಅನ್ನುವುದು ಮರೆತು ಹೋಗಿದೆಯೇ? ಅಥವಾ ‘ಜಾಣ ಮರೆವೇ?’. ಜನರ ಮನಸ್ಸೇ ಬದಲಾಗಲಿ ಅಂತ ಸರ್ಕಾರಗಳು ಕೂತಿದ್ದರೆ ಇಲ್ಲಿಯವರೆಗೂ ಬಹುಷಃ ಇವೆಲ್ಲ ನಡೆದುಕೊಂಡು ಬರುತ್ತಲೇ ಇರುತಿದ್ದವು.ಹಾಗಾಗಿ ಒಂದು ಮಟ್ಟದ ಸಾಮಜಿಕ ಆದರ್ಶಗಳಿಗಾಗಿ ದಂಡ ಪ್ರಯೋಗ ಅನಿವಾರ್ಯ.

ನನ್ನ ಹಿಂದಿನ ಲೇಖನದಲ್ಲಿ ಹೇಳಿದ್ದನ್ನೇ ಮತ್ತೆ ಹೇಳಬಯಸುತ್ತೇನೆ.ಎಂಜಲು ಸ್ನಾನದ ವಿಷಯದಲ್ಲಿ ಬಲ ಪಂಥೀಯ ಸಂಘಟನೆಗಳದ್ದು ‘ಡಬಲ್ ಸ್ಟಾಂಡರ್ಡ್’. ಮಡೆ ಸ್ನಾವನ್ನ ಅವರು ಅವರ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿರುವ ಪರಿ ನೋಡಿ ಅನ್ನಿಸುವುದು,ಚರ್ಚೆಯನ್ನ ಯಾವ ಮಟ್ಟದಲ್ಲಿ ಬೇಕಾದರೂ ಮಾಡಬಹುದು.ಕುಕ್ಕೆಯ ಮಡೆಸ್ನಾನವನ್ನ ನೀವುಗಳು ತುರುವೇಕೆರೆಯ ಮಡೆಸ್ನಾನದ ಮೂಲಕ ಕೌಂಟರ್ ಮಾಡುವುದಾದರೆ,ನನ್ನ ಪ್ರಶ್ನೆ.ಈ ನಿರುಪದ್ರವಿ ‘ಮಡೆ ಸ್ನಾನ’ದಂತೆಯೇ ತಾನೇ ಆ ‘ವ್ಯಾಲೆಂಟೈನ್ಸ್ ಡೇ’ ಅನ್ನುವುದು…!

ಅಲ್ಲೇನು ಒತ್ತಾಯ ಪೂರ್ವಕಾವಾಗಿ ಸೇರಿರುತ್ತಾರ? ಇಲ್ವಲ್ಲ. ಅವರು ‘ಪ್ರೀತಿಯೋ’ ಅಥವಾ ಇನ್ಯಾವುದೋ ‘ನಂಬಿಕೆ’ಯ ಮೇಲೆ ಸೇರಿರುತ್ತಾರೆ ಅಂತವರನ್ನು ಹಿಡಿದು ರಾಖಿ/ತಾಳಿ ಕಟ್ಟಿಸ ಹೊರಡುವುದೆಷ್ಟು ಸರಿ? ಅದು ಹೇರಿಕೆಯಲ್ಲವೇ? ಅದು ಅವರ ನಂಬಿಕೆಗೆ ಕೊಟ್ಟ ಹೊಡೆತವಲ್ಲವೇ? ಅಥವಾ ‘ವ್ಯಾಲೆಂಟೈನ್ಸ್ ಡೇ’  ಅನ್ನುವುದು ನಮ್ಮ ಸಂಸ್ಕೃತಿಯಲ್ಲ ಅದಕ್ಕೆಅದನ್ನ ವಿರೋಧಿಸುತ್ತೇವೆ ಅನ್ನುತ್ತಲೇ ಕೇವಲ ನಮ್ಮದೇ ಸಂಸ್ಕೃತಿ(?) ಅನ್ನುವ ಕಾರಣಕ್ಕಾಗಿ ‘ವಿಕೃತಿ’ಯನ್ನ ಬೆಂಬಲಿಸುವುದು ‘ಡಬಲ್ ಸ್ಟಾಂಡರ್ಡ್’ ಅಲ್ಲದೆ ಮತ್ತಿನ್ನೇನು?

ಇದ್ಯಾವುದು ಬೇಡ ಸಮರ್ಥಿಸಿಕೊಳ್ಳಲೇಬೇಕು ಅನ್ನುವಂತೆ ಸಮರ್ಥಿಸಿಕೊಳ್ಳುತ್ತಲೇ, ಮತ್ತದೇ ’ಸಾಮರಸ್ಯ,ಸಮಾನತೆ’ ಅಂತ ಸುಳ್ಳೇ ಭಜನೆ ಮಾಡುತ್ತಲೇ ಇರುತ್ತೇವೆ ಅಂದರೆ ಹಾಗೇ ಇರಿ, ಭಜನೆಯ ಮಧ್ಯೇ ಯಾರ್ ಎಲ್ಲಿಗ್ ಎದ್ದ್ ಹೊಗ್ಭೇಕೋ ಅಲ್ಲಿಗೆ ಹೋಗ್ತಾ ಇರ್ತಾರೆ…

ಕೇವಲ ಸ್ವಾಮಿ ವಿವೇಕಾನಂದ,ಮಹರ್ಷಿ ಅರಬಿಂದೋ,ನಾರಾಯಣ ಗುರುಗಳ ಫೋಟೋ ಹಿಡಿದು ಜಯಂತಿ ಮಾಡಿದಾರಗಲಿಲ್ಲ.ಬಹುಷಃ ಇಂದಿಗೆ ಆ ಚೇತನಗಳೇನಾದರೂ ಇದ್ದಿದ್ದರೆ ಮಡೆಸ್ನಾನದ ಬಗ್ಗೆ ಏನು ಮಾತನಾಡುತಿದ್ದರು ಅಂತ ಯೋಚಿಸಿದ್ದಿರಾ? ಅದಕ್ಕೆ ನನ್ನ ಹಿಂದಿನ ಲೇಖನದಲ್ಲಿ ನಾನು ಹೇಳಿದ್ದು ಸೋಗಲಾಡಿ ಸೆಕ್ಯುಲರ್ ಮಂದಿಗೂ ಧರ್ಮ ರಕ್ಷಕರಿಗೂ ಅಂತ ವ್ಯತ್ಯಾಸವೇನಿಲ್ಲ ಅಂತ…! ಇವೆಲ್ಲದರ ಮಧ್ಯೆ ಅಂದು ಲಾಭ-ನಷ್ಟಗಳ ಬಗ್ಗೆ ಮಾತನಾಡಿದ್ದ ಪೇಜಾವರ ಶ್ರೀಗಳು ಈಗ ನಿಷೇಧಕ್ಕೆ ಬೆಂಬಲ ಘೋಷಿಸಿರುವುದಕ್ಕೆ ಅವರನ್ನ ಅಭಿನಂದಿಸಲೇಬೇಕು.ಇದೇ ಮಾದರಿಯನ್ನ ಉಳಿದ ಜಾತಿ-ಉಪಜಾತಿಯ ಮಠಾಧೀಶರು ಯಾಕೆ ತೋರಿಸುತ್ತಿಲ್ಲ!? ಇನ್ನು ಪಾಪ ನಮ್ಮ ಜಾತ್ಯಾತೀತ ಕಾಂಗ್ರೆಸ್ಸು-ಮತ್ತು ಗೌಡರ ಪಕ್ಷದವರ ಬಾಯಿಗಳು ಬಿದ್ದು ಹೋಗಿವೆ.

ಮಡೆ ಸ್ನಾನದ ಜೊತೆ ಜೊತೆಗೆ ಕೇಳಿಬರುತ್ತಿರುವ ಮತ್ತೊಂದು ದನಿ ‘ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ’ ಏಕೆ ಅನ್ನುವ ಬಗ್ಗೆ.ಸಂಪ್ರದಾಯ(?)ದ ಹೆಸರಿನಲ್ಲಿ ಈ ಅನಿಷ್ಟ ಪದ್ಧತಿಯನ್ನು ಇನ್ನು ಎಷ್ಟು ಕಾಲ ಸಮರ್ಥಿಸಿಕೊಳ್ಳ ಬೇಕು? ಅಷ್ಟಕ್ಕೂ ಸಂಪ್ರದಾಯ ಅನ್ನುವುದನ್ನು ಸಾರ್ವಜನಿಕ ಸ್ಠಳಗಳಲ್ಯಾಕೆ ಪ್ರದರ್ಶನಕ್ಕಿಡಬೇಕು? ದೇವರಿಗಿಂತ ದೊಡ್ಡವರ್ಯಾರು ಇಲ್ಲ ಅನ್ನುವುದನ್ನು ನಂಬುವವರಿಗೆ ಮನುಷ್ಯರೆಲ್ಲ ಒಂದೇ ಅನ್ನುವ  ಸತ್ಯದ ಅರಿವಾಗಲು ಇನ್ನೇಷ್ಟು ಕಾಲ ಬೇಕು? ಬೇಕಿದ್ದರೆ ಸಂಪ್ರದಾಯಗಳನ್ನ ಮನೆಯಲ್ಲಿ ಪಾಲಿಸಿಕೊಳ್ಳಬಹುದಲ್ಲ.ಇಂತದ್ದೆನ್ನಲ್ಲ ಸಮರ್ಥಿಸಿಕೊಳ್ಳಲೇ ಬೇಕು ಅನ್ನುವಂತೆ ಸಮರ್ಥಿಸಿಕೊಳ್ಳುತ್ತಲೇ, ’ಸಾಮರಸ್ಯ,ಸಮಾನತೆ’ ಅಂತೆಲ್ಲ ಮಾತನಾಡುವುದು ಇಬ್ಬಗೆ ಧೋರಣೆಯಲ್ಲವೇ?

ಹಿಂದೆ ನಡೆದಿದ್ದು ಹೇಗಾದರೂ ಇರಲಿ.ಅದನ್ನ ಕೆದಕಿ ಕೆದಕಿ ಗಾಯ ಹೆಚ್ಚಿಸುವುದು ಬೇಡ. ಹಾಗೇ ಮಾಡುತ್ತಲೇ ಇರುವ ಸಂಘಟನೆಗಳಿಗೆ ಕೆಲಸವಿಲ್ಲದಂತೆ ಮಾಡಲು ಮತ್ತು ಈ ಮಡೆ ಸ್ನಾನ-ಪ್ರತ್ಯೇಕ ಪಂಕ್ತಿಯಂತ ವಿಷಯಗಳು ಹಿಂದೂಗಳ ’ಸಾಮರಸ್ಯ-ಸಮಾನತೆ-ಚಲನಶೀಲತೆ’ಯ ಮನಸ್ಥಿತಿಗೆ ಹಿಡಿವ ಕೈಗನ್ನಡಿಯಾಗಿಸುವ ಅವಕಾಶವೊಂದು ನಮ್ಮ ಮುಂದಿದೆ.ಹಿಂದೆ ಇದ್ದ ಅಸ್ಪೃಶ್ಯತೆ ಅನ್ನುವ ಕರಾಳ ಅಧ್ಯಾಯವೆಲ್ಲ ಮುಗಿದ ಕಥೆ ಅಂತ ತೋರಿಸುತ್ತ,ನೊಂದ ಮನಸ್ಸುಗಳಿಗೆ ಸಾಂತ್ವಾನದ ಜೊತೆಗೆ ನಂಬಿಕೆಯ ಚಿಗುರನ್ನ ಮೊಳಕೆಯೊಡೆಯಿಸುವ ಹೊಸ ಹಾದಿಯಾಗಿ ಈ ಎರಡೂ ಪದ್ಧತಿಗಳನ್ನ(?) ನಿಷೇಧ ಮಾಡಲು ಒತ್ತಾಯಪಡಿಸೋಣವೇ? (ಈಗ ಸರ್ಕಾರವೂ ನಿಷೇಧದ ಬಗ್ಗೆ ಪರಿಶೀಲನಗೆ ಇಳಿದಿರುವುದು ಸಂತಸದಾಯಕ ವಿಷಯ)

ನಾ ಮೊದಲೇ ಹೇಳಿದ ಹಾಗೆ ಇದೆಲ್ಲ ನಿಲ್ಲಬೇಕಿರುವುದು ’ಜಾತಿ’ ಯ ಕಾರಣಕ್ಕಾಗಿ ಅಲ್ಲವೇ ಅಲ್ಲ.’ಮಾನವೀಯತೆ’ಗಾಗಿ. ಮತ್ತು ಹಾಗೆ ಮಾಡಿದಾಗಲಷ್ಟೆ ‘I am proud to belong to a religion which has taught the world both tolerance and universal acceptance…’ ಅನ್ನುವ ಸ್ವಾಮಿ ವಿವೇಕಾನಂದರ ಮಾತುಗಳನ್ನ ಮತ್ತೊಮ್ಮೆ ಸಾಬೀತು ಮಾಡಿದಂತಾಗುವುದು.ಅಲ್ಲವೇ?

* * * * * * *

ಚಿತ್ರಕೃಪೆ : ಅಂತರ್ಜಾಲ

55 ಟಿಪ್ಪಣಿಗಳು Post a comment
 1. ಡಿಸೆ 12 2011

  ನಿಲ್ಲಬೇಕಾದದ್ದು ಇದೊಂದೇ ಅಲ್ಲ ಇನ್ನೂ ಹಲವಿವೆ.

  ಉತ್ತರ
 2. Balachandra
  ಡಿಸೆ 12 2011

  ಡಿಯರ್ ರಾಕೇಶ್,
  ಮಡೆಸ್ನಾನದ ವಿರೋಧವನ್ನು ವಿರೋಧಿಸುತ್ತಿರುವವರೆಲ್ಲರೂ valentine day ಯನ್ನು ವಿರೋಧಿಸಿದ್ದವರು ಎಂಬ ನಿಮ್ಮ ಅನಿಸಿಕೆ ಆಶ್ಚರ್ಯವಾಗುತ್ತಿದೆ. ಒಂದು ವೇಳೆ ಅದು ನಿಜವೇ ಆದ್ದಲ್ಲಿ ನೀವು ಹೇಳಿದ ಮಾತು ಸರಿ ಎಂದು ಹೇಳುತ್ತೇನೆ. ಅಲ್ಲದೆ ಮಡೆಸ್ನಾನದ ವಿರೋಧವನ್ನು ವಿರೋಧಿಸಿದವರು ಬಲಪಂತೀಯರು ಎಂದು ನೀವು ತೀರ್ಮನಿಸಿರುವದು ಇನ್ನೂ ಸೋಜಿಗ. ಇನ್ನು ಮದೆಸ್ನಾನ ಅಮಾನವೀಯ ಎಂದಾದಲ್ಲಿ ಅದು ಖಂಡಿತ ನಿರ್ಮೂಲನೆಯಾಗಬೇಕು. ಆದರೆ ಇಲ್ಲಿ ನಡೆಯುತ್ತಿರುವದು ಅಮಾನವೀಯವೇ?ದಯವಿಟ್ಟು ವಿವರಿಸಿ. ಅಲ್ಲದೆ ಮಡೆಸ್ನಾನ ನಿಮಗಷ್ಟೇ ಅಸಹ್ಯವಲ್ಲ ನನಗೂ ಅಸಹ್ಯವೇ. ಅದು ಮಾತ್ರ ಅಲ್ಲ. ನನಗೆ ಜನರು ದೇವಸ್ತಾನ, ಚರ್ಚ್, ಮಸೀದಿಗಳಿಗೆ ಹೋಗುವದು, ಯಾರೋ ಹೇಳಿದ, ಯಾರೂ ನೋಡಿರದ ದೇವರಿಗೆ ಪ್ರಾರ್ಥನೆ ಸಲ್ಲಿಸುವದೂ ಸಹಿತ ಅಸಹ್ಯ ಮತ್ತು ಮೂಢನಂಬಿಕೆ ಎನಿಸುತ್ತದೆ. ಸರಕಾರ ಈ ಬಗ್ಗೆ ಕ್ರಮ ಕೈಗೊಂಡು ಎಲ್ಲರನ್ನೂ ಕಡ್ಡಾಯವಾಗಿ ನಾಸ್ತಿಕರಾಗುವಂತೆ ಕಾನೂನು ಜಾರಿಗೊಳಿಸಬಹುದೇ?ಅದೇನೇ ಇರಲಿ, ಮಡೆಸ್ನಾನವನ್ನು ವಿರೋಧಿಸುವ ಬುದ್ಧಿಜೀವಿಗಳು, ಮೊಹರಂ ಆಚರಣೆಯಲ್ಲಿ ನಡೆಸುವ ಕೆಲವು ಅನಿಷ್ಟ ಆಚರಣೆಗಳ ವಿರುದ್ಧ ದನಿಯೇತ್ತುವದಿಲ್ಲ?Bakr-Ed ದಿನ ಸಾವಿರಾರು ಕುರಿಗಳನ್ನು ಬಲಿಕೊಡುವ ಅನಿಷ್ಟ ಅಮಾನವೀಯ ಆಚರಣೆಗಳ ವಿರುದ್ದ ದನಿಯೇತ್ತುವದಿಲ್ಲ?ನೀವು ಎಡಪಂತೀಯರೆಂದು ಭಾವಿಸಿ ಈ ರೀತಿ ಹೇಳುತ್ತಿಲ್ಲ. ಆದರೆ ಯಾವುದೇ ಚರ್ಚೆ biased ಆಗಿರಬಾರದು ಅಷ್ಟೇ.

  ಉತ್ತರ
  • ಸರ್,
   ‘ವ್ಯಾಲೆಂಟೈನ್ಸ್ ಡೇ’ ಬಗ್ಗೆ ಬರೆಯುವಾಗಲೇ ಹೇಳಿದ್ದೇನೆ.ತೀರಾ ಮಡೆ ಸ್ನಾನವನ್ನು ಸಮರ್ಥಿಸಬಹುದಾದರೆ ಚರ್ಚೆಯನ್ನ ಎಲ್ಲಿಗಾದರು ಎಳೆದುಕೊಂಡು ಹೋಗಿ ಹಾದಿ ತಪ್ಪಿಸಬಹುದು ಅನ್ನುವ ಕಾರಣಕ್ಕಾಗಿಯಷ್ಟೆ ಅದನ್ನ ಬಳಸಿಕೊಂಡಿದ್ದೇನೆ.ಇನ್ನು ಮಡೆ ಸ್ನಾನವಾನು ವಿರೋಧಿಸುವವರು ಅದನ್ನ ವಿರೋಧಿಸಿ ಇದನ್ನ ವಿರೋಧಿಸಿ ಅನ್ನುವುದು ನನ್ನ ಮಟ್ಟಿಗೆ ಹಾದಿ ತಪ್ಪಿಸುವ ಇನ್ನೊಂದು ಪ್ರಯತ್ನವಷ್ಟೆ ಅನ್ನಿಸುತ್ತದೆ.ಅದರ ಬಗ್ಗೆ ಬೇಕಿದ್ದರೆ ಬೇರೆ ಚರ್ಚೆಯಾಗಬಹುದು.Biased ಆಗಲು ನಾನಂತು ಇಚ್ಚಿಸುವುದಿಲ್ಲ, ನನ್ನ ಈ ಹಿಂದಿನ ಲೇಖನಗಳಿಂದಾಗಿ ನನಗೆ ಬಲ-ಎಡ ಎರಡೂ ಪಂಥಕ್ಕೆ ಸೇರಿಸಿಯಾಗಿದೆ ನನ್ನನ್ನು.ಯಾವ ಪಂಥಕ್ಕಾದರೂ ಸೇರಿಸಿಕೊಳ್ಳಲಿ ಕಡೆಗೆ ಮಾನವೀಯತೆ ಅನ್ನುವುದು ಗೆಲ್ಲಲಿ ಅನ್ನುವದು ನನ್ನ ಆಶಯ.

   ಉತ್ತರ
   • Balachandra
    ಡಿಸೆ 13 2011

    @Rakesh shetty,
    ನಾನು ಅದನ್ನು ವಿರೋಧಿಸಿ ಇದನ್ನು ವಿರೋಧಿಸಿ ಎಂದು ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ. ಆದರೆ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿದೆ ಅಷ್ಟೇ. ನನಗೆ, ನಿಮಗೆ ಅಥವಾ ಇನ್ಯಾರಿಗೋ ಅಸಹ್ಯವಾಗಿ ಕಂಡ ಮಾತ್ರಕ್ಕೆ ಇನ್ನೊಬ್ಬನ ಸ್ವಾತಂತ್ರ್ಯ ಹರಣ ಮಾಡಬಹುದೇ ಎಂಬುದು ನನ್ನ ಪ್ರಶ್ನೆ ಅಷ್ಟೇ. ಈಗಲೇ ಹೇಳಿದಂತೆ ನನ್ನ ಪ್ರಕಾರ ಎಲ್ಲವೂ ಮೂಢನಂಬಿಕೆ. ದೇವರನ್ನು ಪೂಜಿಸುವದೂ ಕೂಡ. ಹಾಗೆಂದು ಅವುಗಳನ್ನು ತೊಡೆದುಹಾಕುವಂತಿಲ್ಲ. ಅದನ್ನು ನಾನು ಹೇಳಬಯಸಿದ್ದು. ಅವುಗಳನ್ನು ನಿರ್ಮೂಳನೆಗೊಲಿಸುವದರಿಂದ ನನಗ್ಯಾವ ಬೇಸರವೂ ಇಲ್ಲ ಅಥವಾ ಖುಷಿಯೂ ಇಲ್ಲ. ಅವರವರ ನಂಬಿಕೆಗೆ ಧಕ್ಕೆ ಬರಬಾರದೆಂದು ಹೇಳಿದೆನಷ್ಟೇ.

    ಉತ್ತರ
 3. bhadravathi
  ಡಿಸೆ 12 2011

  ಬಾಲಚಂದ್ರ ಅವರೇ, ಮಡೆಸ್ನಾನದಂಥ ಆಚರಣೆಗಳನ್ನು ಸಮರ್ಥಿಸಿ ಕೊಳ್ಳುತ್ತಾ ಮುಹರ್ರಂ ಹಬ್ಬದ ಆಚರಣೆಗಳನ್ನು ತೆಗಳುತ್ತಿದ್ದೀರಿ. ಅದಿರಲಿ. ಮುಹರ್ರಂ ಸಂದರ್ಭದಲ್ಲಿ ಅನಿಷ್ಟ ಆಚರಣೆಗಳು ಆಚರಿಸಲ್ಪಡುತ್ತಿದ್ದರೆ ಅದನ್ನು ಸರಕಾರ ಕಡ್ಡಾಯವಾಗಿ ನಿರೋಧಿಸಬೇಕು. ಆದರೆ ಧಾರ್ಮಿಕ ಆಚರಣೆಗಳನ್ನು ನಿಷೇಧಿಸುವಾಗ discretion ತೋರಿಸುವುದು ಒಳಿತು. ಪರಂಪರಾಗತ ವಾಗಿ ಬಂದ ನಂಬಿಕೆ ಗಳನ್ನು ವಿರೋಧಿಸುವಾಗ ವಿರೋಧ ಎದುರಾಗುತ್ತದೆ. ಮತ್ತೊಂದು ವಿಷಯ. ಬಕ್ರೀದ್ ದಿನ ಸಾವಿರಾರು ಕುರಿಗಳನ್ನು ಬಲಿ ಕೊಡುವುದರ ಬಗ್ಗೆ ಬರೆದಿದ್ದೀರಿ. ಮಾಂಸಾಹಾರ ಒಂದು ಜೀವನ ಪದ್ಧತಿ. ಅದು ಅಸಹ್ಯಕರ ಅಲ್ಲ. ಅಸಹ್ಯಕರವಾದ ಬೇರೆಷ್ಟೋ ಇವೆ. ಕುಡಿತ, ಜೂಜು, ಮುಂತಾದುವನ್ನು ಮೊದಲು ನಿಷೆಧಿಸೋಣ. ಕುಡಿತ, ಜೂಜಿನಿಂದ ಅಸಂಖ್ಯ ಮನೆಗಳು ಹಾಳಾಗಿ ಹೋಗಿವೆ. ನಮಸ್ಕಾರಗಳು.

  ಉತ್ತರ
  • Balachandra
   ಡಿಸೆ 13 2011

   Mr. Bhadravati,
   ಮೊದಲನೆಯದಾಗಿ ನಾನೆಂದೂ ಮಡೆಸ್ನಾನವನ್ನು ಸಮರ್ಥಿಸಿಕೊಂದಿಲ್ಲ, ಅಥವಾ ಮೊಹರಂ ಆಚರಣೆಯನ್ನು ತೆಗಳಿಲ್ಲ. ಆದರೆ ಎರಡೂ ಆಚರಣೆಗಳನ್ನೂ ಒಂದೇ ದ್ರಷ್ಟಿಕೊನದಿಂದ ನೋಡಿದೆ ಅಷ್ಟೇ. ನಿಮಗೆ ನನ್ನ comment ನ ಯಾವ ವಾಖ್ಯ ಆ ರೀತಿ ಆಲೋಚಿಸುವಂತೆ ಮಾಡಿತು ಎಂದು ಅರ್ಥವಾಗುತ್ತಿಲ್ಲ. ದಯವಿಟ್ಟು ಇನ್ನೊಮ್ಮೆ ಓದಿ. ನನ್ನ ದ್ರಷ್ಟಿಯಲ್ಲಿ ನಮ್ಮಲ್ಲಿನ ಎಲ್ಲ ನಂಬಿಕೆಯೂ ಕೂಡ ಮೂಢ. ಹಾಗೆ ಯಾವ ಆಚರಣೆಯಲ್ಲಿ ಶೋಷಣೆ ನಡೆಯುವದು ಅಥವಾ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದೋ ಆದಲ್ಲಿ ಅವುಗಳನ್ನು ಬೇರು ಸಹಿತ ತೆಗೆದುಹಾಕಬೇಕು ಎಂಬುದು ನಮ್ಮ ಆಶಯ. ವರದಕ್ಷಿಣೆ, ಬಾಲ್ಯವಿವಾಹ, ಸತಿ ಪದ್ದತಿಗಳನ್ನು ಕಾನೂನು ಪ್ರಕಾರ ತೊಡೆದುಹಾಕಿರುವದರಲ್ಲಿ ಖಂಡಿತ ಅರ್ಥ ಇದೆ. ಮಡೆಸ್ನಾನ ದ ವಿಚಾರದಲ್ಲಿ ಶೋಷಣೆ ನಡೆದಲ್ಲಿ ಅಥವಾ ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಲ್ಲಿ ಖಂಡಿತ ಅದನ್ನು ನಿರ್ಮೂಲನೆಗೊಳಿಸಬೇಕು. ಹಾಗೆ ಅಲ್ಲಿ ಶೋಷಣೆ ನಡೆಯದೆ ಹೋದಲ್ಲಿ ಅದು ಹೇಗೆ ತಾನೇ ಅಮಾನವೀಯ ಎನ್ನುತ್ತೀರಿ? ನಾನೆಂದೂ ಮಡೆಸ್ನಾನ ಸರಿ ಎಂದು ಹೇಳಿಲ್ಲ, ಅದು ನನಗೆ ಅಸಹ್ಯವೇ. ನನಗೆ ಯಾವ ಆಚರಣೆಯಲ್ಲೂ ನಂಬಿಕೆ ಇಲ್ಲ. ನನಗೆ ಮಡೆಸ್ನಾನವೂ ಒಂದೇ, ದೇವಸ್ತಾನಗಳಲ್ಲಿ ಕುಳಿತು ಭಜನೆ ಮಾಡುವದೂ ಒಂದೇ ಎನಿಸುತ್ತದೆ. ವಯಕ್ತಿಕವಾಗಿ ನಾನೆಂದೂ ಈ ಪದ್ದತಿಗಳನ್ನು support ಮಾಡಲಾರೆ. ಹಾಗೆಂದು ನಂಬಿಕೆಯ ಪ್ರಯುಕ್ತ ಅದನ್ನು ಆಚರಿಸುವವರನ್ನು ‘ಬೇಡ’ ಎಂದೂ ಹೇಳಲಾರೆ(ಯಾವುದೇ ಶೋಷಣೆ ಅಥವಾ ವ್ಯಕ್ತಿ ಸ್ವಾತಂತ್ರ್ಯ ಹರಣ ನಡೆಯದೆ ಹೋದಲ್ಲಿ). ಇನ್ನು ನೀವು discretion ಬಗ್ಗೆ ಹೇಳುತ್ತೀರಿ. ಅದನ್ನೇ ನಾನೂ ಹೇಳಹೊರಟಿದ್ದು. ಮಡೆಸ್ನಾನ ಮಾಡುವವನು ಅದು ತನ್ನ ಅವಿಭಾಜ್ಯ ಹಕ್ಕು ಎಂದು ಹೇಳಬಹುದು. ಆಗ? ಮಡೆಸ್ನಾನ ಕಡ್ಡಾಯವಾಗಿ ಮಾಡಿದಲ್ಲಿ ಅಥವಾ ಒಬ್ಬರ ಸ್ವಾತಂತ್ರ್ಯದ ವಿರುದ್ಧ ಮಾಡಿದಲ್ಲಿ ನಾವೂ ಅದನ್ನು ವಿರೋಧಿಸುತ್ತೇವೆ. ಆದರೆ ವ್ಯಕ್ತಿ ಸ್ವಾತಂತ್ರ್ಯವನ್ನಲ್ಲ. ಮೊಹರಂ ಸಂದರ್ಭದಲ್ಲಿ ಮೈಗೆ ಬಾಸುಂಡೆ ಬರುವಂತೆ ಬಾರಿಸಿಕೊಳ್ಳುವದನ್ನು ನೋಡಿರಬಹುದು. ನಾವೇನೂ ಅದನ್ನು ವಿರೋಧಿಸುವಂತೆ ಹೇಳುತ್ತಿಲ್ಲ. ಅಲ್ಲಿ ಕೊಡುವ ವ್ಯಕ್ತಿ ಸ್ವಾತಂತ್ರ್ಯದಂತೆ ಇಲ್ಲಿಯೂ ಕೂಡ ಕೊಡಬೇಕು ಎಂದು ಹೇಳುತ್ತಿದ್ದೇನೆ ಅಷ್ಟೇ. ಮೊಹರಂ ಬಗ್ಗೆ ಹೇಳಿದ್ದು ಒಂದು reference ಅಷ್ಟೇ.

   ಉತ್ತರ
 4. Kumar
  ಡಿಸೆ 12 2011

  ರಾಕೇಶ್ ಶೆಟ್ಟಿ> ಎಂಜಲು ಸ್ನಾನದ ವಿಷಯದಲ್ಲಿ ಬಲ ಪಂಥೀಯ ಸಂಘಟನೆಗಳದ್ದು ‘ಡಬಲ್ ಸ್ಟಾಂಡರ್ಡ್’.
  ರಾಕೇಶ್ ಶೆಟ್ಟಿ> ಮಡೆ ಸ್ನಾವನ್ನ ಅವರು ಅವರ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿರುವ ಪರಿ ನೋಡಿ ಅನ್ನಿಸುವುದು
  ರಾಕೇಶ್ ಶೆಟ್ಟಿ> ಹಿಂದೆ ಇದ್ದ ಅಸ್ಪೃಶ್ಯತೆ ಅನ್ನುವ ಕರಾಳ ಅಧ್ಯಾಯವೆಲ್ಲ ಮುಗಿದ ಕಥೆ ಅಂತ ತೋರಿಸುತ್ತ,ನೊಂದ
  ರಾಕೇಶ್ ಶೆಟ್ಟಿ> ಮನಸ್ಸುಗಳಿಗೆ ಸಾಂತ್ವಾನದ ಜೊತೆಗೆ ನಂಬಿಕೆಯ ಚಿಗುರನ್ನ ಮೊಳಕೆಯೊಡೆಯಿಸುವ ಹೊಸ ಹಾದಿಯಾಗಿ
  ರಾಕೇಶ್ ಶೆಟ್ಟಿ> ಈ ಎರಡೂ ಪದ್ಧತಿಗಳನ್ನ(?) ನಿಷೇಧ ಮಾಡಲು ಒತ್ತಾಯಪಡಿಸೋಣವೇ?

  ರಾಕೇಶ್,
  ನೀವು ಬಲಪಂಥೀಯ ಸಂಘಟನೆಗಳು ಮಡೆಸ್ನಾನವನ್ನು ಬೆಂಬಲಿಸುತ್ತಿವೆ ಎಂದು ಬರೆದಿರುವಿರಿ.
  ನೀವು ಯಾವ ಆಧಾರದ ಮೇಲೆ ಈ ರೀತಿಯ ನಿರ್ಧಾರಕ್ಕೆ ಬಂದಿರೋ ತಿಳಿಯುತ್ತಿಲ್ಲ.
  ಸಮಾಜ ಸುಧಾರಣೆ ಮತ್ತು ಸಾಮರಸ್ಯದ ವಿಷಯದಲ್ಲಿ ಪ್ರಾರಂಭದಿಂದಲೂ ಮಂಚೂಣಿಯಲ್ಲಿರುವುದು ಬಲಪಂಥೀಯ ಸಂಘಟನೆಗಳೇ.
  ಅದು ಮಹಾರಾಷ್ಟ್ರದಲ್ಲಿ ವಿಶ್ವವಿದ್ಯಾಯಲಯಕ್ಕೆ ಅಂಬೇಡ್ಕರ್ ಹೆಸರಿಡುವ ವಿಷಯದಲ್ಲಿರಲಿ, ನಾಸಿಕದ ಕಾಳಾರಾಮ ಮಂದಿರಕ್ಕೆ ಉಪೇಕ್ಷಿತರಿಗೂ ಪ್ರವೇಶ ನೀಡುವ ವಿಷಯವಿರಲಿ,
  ಕರ್ನಾಟಕದಲ್ಲಿ ಶ್ರೀಗುರೂಜಿ ಜನ್ಮದಿನದಂದು ತಥಾಕಥಿತ ಉಚ್ಚ ಮತ್ತು ಉಪೇಕ್ಷಿತ ಬಂಧುಗಳು ಪರಸ್ಪರರ ಮನೆಗಳಲ್ಲಿ ಊಟ ಮಾಡುವುದಿರಲಿ, ಚಿಂದಿ ಆಯುವ ಮಕ್ಕಳಿಗಾಗಿ ಇರುವ “ನೆಲೆ” ಮನೆಗಳನ್ನು ನಡೆಸುವುದಿರಲಿ, ಉಪೇಕ್ಷಿತ ವಸತಿ (ಸ್ಲಮ್)ಗಳಲ್ಲಿ ಶಾಲೆಗಳನ್ನು, ಅನೌಪಚಾರಿಕ ಶಿಕ್ಷಣ ಕೇಂದ್ರಗಳು/ಸಂಸ್ಕಾರ ಕೇಂದ್ರಗಳನ್ನು ತೆರೆಯುವುದಿರಲಿ, ಸುದೂರದ ವನವಾಸಿ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆ ಇರಲಿ (ಮಧ್ಯಪ್ರದೇಶ, ಬಿಹಾರ, ಚತ್ತೀಸಘಡ್, ನಾಗಾಲ್ಯಾಂಡ್, ಮಿಜ಼ೊರಾಂ, ಮಣಿಪುರ, ಅರುಣಾಚಲ ಪ್ರದೇಶ – ಇವೇ ಮುಂತಾದ ವನವಾಸಿ ಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ಸೇವಾವ್ರತಿಗಳಲ್ಲಿ ಹೆಚ್ಚಿನವರು ಕೇರಳ ಹಾಗೂ ಕರ್ನಾಟಕದ ಹೆಣ್ಣುಮಕ್ಕಳು ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೂ ಹೌದು) – ಈ ಎಲ್ಲಾ ಕಾರ್ಯಗಳಲ್ಲೂ ತೊಡಗಿರುವವರು, ನೀವು ಹಗುರವಾಗಿ ಮಾತನಾಡುತ್ತಿರುವ ಬಲಪಂಥೀಯರು ಅಥವಾ ’ಸಂ”ದವರು!

  ನಾನು ಇಷ್ಟೆಲ್ಲಾ ಹೇಳಿದ ಮೇಲೂ, ನೀವು ಮಡೆಸ್ನಾನದ ವಿಷಯದಲ್ಲಿ ಸಂಘದ ನಿಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸುವುದರಲ್ಲಿ ಅನುಮಾನವಿಲ್ಲ.
  ನಿಮ್ಮ ಅನುಮಾನ ಪರಿಹಾರಕ್ಕೆ, ಈ ಕೆಳಗಿನ ಕೊಂಡಿಗಳನ್ನೊಮ್ಮೆ ನೋಡಿ:
  ೧. http://samvada.org/2011/news/rss-leader-demands-ban-on-made-snana/
  ೨. http://samvada.org/2011/articles/article-by-dugulakshman/
  ೩. http://samvada.org/2011/articles/rohinaksha-article-on-madesnana/

  ಈ ಮೇಲಿನ ಕೊಂಡಿಗಳ ವಿಷಯಗಳೆಲ್ಲವೂ ಸಂಘದ ಅಧಿಕೃತ ಮಾಧ್ಯಮ ಕೇಂದ್ರವಾದ “ಸಂವಾದ”ದಲ್ಲಿ ಪ್ರಕಟಿತಗೊಂಡಿದೆ.
  ಹೀಗಾಗಿ, ಇವನ್ನು ಸಂಘದ ಅಧಿಕೃತ ನಿಲುವೆಂದು ನೀವು ಕಣ್ಮುಚ್ಚಿ ತಿಳಿಯಬಹುದು.

  ನೀವು ಬಲಪಂಥೀಯ ಎಂದು ಎಲ್ಲಾ ಸಂಘಟನೆಗಳ ಕುರಿತಾಗಿ ಉಲ್ಲೇಖಿಸುವುದು ಸರಿಯಿಲ್ಲ ಎಂದೆನಿಸುತ್ತದೆ.
  ಬಲಪಂಥೀಯ ಸಂಘಟನೆಗಳಲ್ಲಿ, ಆರೆಸ್ಸೆಸ್ (ಸಂಘ)ದ ನಿಲುವು, ಕಾರ್ಯಕ್ರಮವಳು, ಉದ್ದೇಶಗಳು ಉಳಿದೆಲ್ಲಕ್ಕಿಂತ ಭಿನ್ನವಾದವುಗಳು.
  “ಸಮಾಜದ ಸರ್ವಾಂಗೀಣ ಉನ್ನತಿ” ಮಾಡುವುದೊಂದೇ ಸಂಘದ ಉದ್ದೇಶ.

  ಉತ್ತರ
  • ನರೇಂದ್ರ :
   ದು.ಗು ಲಕ್ಷ್ಮಣರ ಲೇಖನ ಬಹಳ ಹಿಡಿಸಿತು,ಬಹುಷಃ ನನ್ನ ಬರಹ ಹೇಳಲು ಸೋತದ್ದನ್ನು ಅವರು ಹೇಳಿದ್ದಾರೆ.ಒಳ್ಳೆಯ ಲೇಖನಕ್ಕೆ ಧನ್ಯವಾದ.ಅವರ ಈ ಕೆಳಗಿನ ಹೇಳಿಕೆಯಿದೆ ನೋಡಿ.ಈ ಮಡೆಸ್ನಾನ ಅನ್ನುವ ಪೀಡೆ ತೊಲಗಲು ಇರುವ ಸೂಕ್ತ ಪರಿಹಾರವಿದು.ಆದರೆ ಇದು ಸಾಧ್ಯವೇ?

   “ತಾವು ಊಟ ಮಾಡಿಬಿಟ್ಟ ಎಂಜಲು ಎಲೆಗಳ ಮೇಲೆ ಭಕ್ತರು ಉರುಳು ಸೇವೆ ನಡೆಸುತ್ತಾರೆ ಎಂಬುದು ಗೊತ್ತಾದಾಗ, ಅಂತಹ ಬ್ರಾಹ್ಮಣರು ಸಾಮೂಹಿಕ ಊಟವನ್ನೇ ನಿರಾಕರಿಸುವಂತಹ ಔದಾರ್ಯವನ್ನು ತೋರಿಸಬಹುದಾಗಿತ್ತು. ಹಾಗೆ ಮಾಡಿದ್ದರೆ ಅದೊಂದು ಸುಸಂಸ್ಕೃತ ನಡವಳಿಕೆಯಾಗಿ ಸಮಾಜಕ್ಕೆ ಮಾದರಿ ನಡೆಯಾಗುತ್ತಿತ್ತು, ಆದರೆ…?”

   ಇನ್ನು ನಾನು ಬಲಪಂಥೀಯರ ಬಗ್ಗೇಯೆ ಮಾತನಾಡಲು ಕಾರಣ.ಈ ದೇಶದ ಸೋ-ಕಾಲ್ಡ್ ಸೆಕ್ಯುಲರ್ ಜನರ ಡಬಲ್ ಸ್ಟಾಂಡರ್ಡ್ ಬಗ್ಗೆ ಗೊತ್ತಿರುವಂತದ್ದೆ,ಆದರೆ ಬಲಪಂಥೀಯರು ಅದೇ ಗುಂಪಿಗೆ ಸೇರಿದ್ದು ಯಾಕೆ ಮತ್ತು ಯಾವಾಗ ಅನ್ನುವುದು ನನ್ನ ಸಹಜ ಪ್ರಶ್ನೆ.ಅಲ್ಲಾ ಅವರಿಗಿಷ್ಟವಿಲ್ಲದ ಆಚರಣೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ವಿರೋಧಿಸಿ ನಿಲ್ಲಬಲ್ಲವರು ಈಗ್ಯಾಕೆ ಆ ಪರಿಯ ಸದ್ದು ಮಾಡುತ್ತಿಲ್ಲ. ಅದು ಆರ್.ಎಸ್.ಎಸ್ ಇರಬಹುದು ಅಥವಾ ಇನ್ಯಾವುದೆ ಸಂಘಟನೆ ಇರಬಹುದು, ಇದೇನು ಚಿಕ್ಕ ವಿಷಯವಲ್ಲವಲ್ಲ ಸುಮ್ಮನಿರಲು ಇಂತ ವಿಷಯಗಳ ಬಗ್ಗೆ ದೊಡ್ಡ ಮಟ್ಟದ ವಿರೋಧ ಇರಲೇಬೇಕು.ಈಗ ಬೀದಿಗಿಳಿದು ಬಂದ ಸರ್ಕಾರದ ಮೇಲ್ಯಾಕೆ ಒತ್ತಡ ತರಲಾಗುತ್ತಿಲ್ಲ!? ಸತ್ಯ ಅನ್ನುವುದು ಸೂರ್ಯನಿದ್ದಂತೆ ಗ್ರಹಣ ಹಿಡಿಯಬಹುದೇ ಹೊರತು ಅದನ್ನ ಮುಚ್ಚಿಡಲಾಗದು ಅಲ್ಲವೇ?ಬೇರೆಲ್ಲ ವಿಶಯದಲ್ಲಿ ಹಿಂದುತ್ವವನ್ನ ಗುತ್ತಿಗೆ ಪಡೆದಂತೆ ಮಾಡುವ ಅಂಕಣಕಾರ ಮತ್ತವ್ರ ಪತ್ರಿಕೆ ಈ ವಿಷಯದಲ್ಲಿ ಮಾಡಿದ ರಾಜಕೀಯ ಅಂತದ್ದು ಅನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೆ ಬಿಡಿ.ಅಂತವರಿಗಾಗಿಯೇ ಡಬಲ್ ಸ್ಟಾಂಡರ್ಡ್ ಅನ್ನುವ ಪದಬಳಕೆ.

   ಉತ್ತರ
   • Kumar
    ಡಿಸೆ 13 2011

    > ಅಂತಹ ಬ್ರಾಹ್ಮಣರು ಸಾಮೂಹಿಕ ಊಟವನ್ನೇ ನಿರಾಕರಿಸುವಂತಹ
    > ಔದಾರ್ಯವನ್ನು ತೋರಿಸಬಹುದಾಗಿತ್ತು
    > ಈ ಮಡೆಸ್ನಾನ ಅನ್ನುವ ಪೀಡೆ ತೊಲಗಲು ಇರುವ ಸೂಕ್ತ ಪರಿಹಾರವಿದು. ಆದರೆ
    > ಇದು ಸಾಧ್ಯವೇ?
    ಏಕೆ ಸಾಧ್ಯವಿಲ್ಲ? ನೀವೇ ಆ ರೀತಿ ಊಟ ಮಾಡಿದವರಿಗೆ ಈ ವಿಚಾರದ ಕುರಿತಾಗಿ ತಿಳುವಳಿಕೆ ನೀಡಿದರೆ, ಆಗಬಹುದಲ್ಲವೇ?
    ಪ್ರಯತ್ನಕ್ಕೇ ಕೈಹಾಕದೆ ಸಾಧ್ಯವಿಲ್ಲ ಎನ್ನುವುದು ಶೂರರ ಲಕ್ಷಣವಲ್ಲ. ವಿರೋಧ/ಪ್ರತಿಭಟನೆಗಳಿಂದ ಆಗದ ಕೆಲಸ ’ಪ್ರೀತಿ’ಯಿಂದ ಆಗಿಬಿಡಬಹುದು.

    > ಅದು ಆರ್.ಎಸ್.ಎಸ್ ಇರಬಹುದು ಅಥವಾ ಇನ್ಯಾವುದೆ ಸಂಘಟನೆ ಇರಬಹುದು,
    > ಇದೇನು ಚಿಕ್ಕ ವಿಷಯವಲ್ಲವಲ್ಲ ಸುಮ್ಮನಿರಲು ಇಂತ ವಿಷಯಗಳ ಬಗ್ಗೆ ದೊಡ್ಡ ಮಟ್ಟದ ವಿರೋಧ ಇರಲೇಬೇಕು
    ಕೇವಲ ವಿರೋಧ ಮಾಡುವುದರಿಂದಲೇ ಕೆಲಸಗಳನ್ನು ಸಾಧಿಸಿಬಿಡಲು ಸಾಧ್ಯವಿದ್ದಿದ್ದರೆ, ಇಂದು ನಾವು ಕಾಣುತ್ತಿರುವ ಅನೇಕ ಸಮಸ್ಯೆಗಳೇ ಇರುತ್ತಿರಲಿಲ್ಲ.
    ವಿರೋಧಕ್ಕಿಂತ ಮುಖ್ಯವಾದುದು ರಚನಾತ್ಮಕ ಕಾರ್ಯಕ್ರಮಗಳು.
    ಅಸ್ಪೃಷ್ಯತೆ ಹೋಗಬೇಕೆಂದು ನೀವು ಎಷ್ಟೇ ಭಾಷಣ ಮಾಡಬಹುದು, ಸತ್ಯಾಗ್ರಹ ಕೂಡಬಹುದು.
    ಆದರೆ, ಇವೆಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಆಗುವುದು, ನೀವು ಅಸ್ಪೃಷ್ಯರೆನಿಸಿಕೊಂಡವರ ಮನೆಯಲ್ಲಿ ಕೂತು ಊಟ ಮಾಡಿದಾಗ; ಅವರನ್ನು ನಿಮ್ಮ ಮನೆಗೆ ಕರೆದು, ನಿಮ್ಮ ಮನೆಯ ಊಟದ ಕೋಣೆಯಲ್ಲಿ ನಿಮ್ಮೊಂದಿಗೆ ಊಟಕ್ಕೆ ಕೂಡಿಸಿಕೊಂಡಾಗ.
    ಹೊರಗಿನ ಪ್ರಪಂಚಕ್ಕೆ, ಮಾಧ್ಯಮಕ್ಕೆ ಕಾಣುವುದು ನೀವು ಮಾಡಿದ ಭಾಷಣ ಸತ್ಯಾಗ್ರಹಗಳಷ್ಟೇ. ಆದರೆ, ಅದಕ್ಕಿಂತ ಪರಿಣಾಮಕಾರಿ ಕೆಲಸಗಳು ಮೌನವಾಗಿ ನಡೆದಿರುತ್ತವೆ, ಯಾರ ಗಮನಕ್ಕೂ ಬಂದಿರುವುದಿಲ್ಲ. ಈಗ ಹೇಳಿ ಯಾವುದು ಮುಖ್ಯ.
    ಆರೆಸ್ಸೆಸ್ ನಂಬಿಕೆ ಇಟ್ಟಿರುವುದು, ಈ ರೀತಿಯ ಮೌನ ಕ್ರಾಂತಿಯಲ್ಲಿ, ವಿಕಾಸದ ಕಾರ್ಯದಲ್ಲಿ. ಆರೆಸ್ಸೆಸ್ ಪ್ರತಿಭಟನೆಗಳಲ್ಲಿ, ಸತ್ಯಾಗ್ರಹಗಳಲ್ಲಿ, ರಾಜಕೀಯದಲ್ಲಿ ನಂಬಿಕೆಯಿಟ್ಟಿಲ್ಲ, ಇಡುವುದೂ ಇಲ್ಲ. ಲಕ್ಷಾಂತರ ಉಪೇಕ್ಷಿತ ಬಂಧುಗಳ, ವನವಾಸಿ ಬಂಧುಗಳ ನಡುವೆ ಆರೆಸ್ಸೆಸ್ ಮೌನವಾಗಿ ಕಾರ್ಯ ಮಾಡುತ್ತಿದೆ.
    ನಿಮ್ಮ ಟೀಕೆಗಳು ಅದರ ಕಾರ್ಯದ ದಿಕ್ಕು ಮತ್ತು ಗತಿಯನ್ನು ವ್ಯತ್ಯಾಸ ಮಾಡುವುದಿಲ್ಲ. ನೀವೂ ಬೇಕಿದ್ದರೆ, ಅದರೊಡನೆ ಸೇರಿ ರಚನಾತ್ಮಕ ಕಾರ್ಯದಲ್ಲಿ ಸೇರಿಕೊಂಡು, ಜೀವನ ಸಾರ್ಥಕ ಮಾಡಿಕೊಳ್ಳಬಹುದು.
    “ಕತ್ತಲ ಕೋಣೆಯಲ್ಲಿ ’ಕತ್ತಲೆ’ ಎಂದು ಎಷ್ಟು ಅರಚಾಡಿದರೂ ಕತ್ತಲೆ ಹೋಗುವುದಿಲ್ಲ – ಒಂದು ಸಣ್ಣ ಹಣತೆ ಹಚ್ಚಿ ಸಾಕು”.

    > ಬೇರೆಲ್ಲ ವಿಶಯದಲ್ಲಿ ಹಿಂದುತ್ವವನ್ನ ಗುತ್ತಿಗೆ ಪಡೆದಂತೆ ಮಾಡುವ ಅಂಕಣಕಾರ ಮತ್ತವ್ರ ಪತ್ರಿಕೆ ಈ ವಿಷಯದಲ್ಲಿ
    > ಮಾಡಿದ ರಾಜಕೀಯ ಅಂತದ್ದು ಅನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೆ ಬಿಡಿ.ಅಂತವರಿಗಾಗಿಯೇ ಡಬಲ್ ಸ್ಟಾಂಡರ್ಡ್ ಅನ್ನುವ ಪದಬಳಕೆ.
    ನೀವು ಯಾವ ಪತ್ರಿಕೆಯ ಕುರಿತಾಗಿ, ಯಾವ ಸಂದರ್ಭದ ಕುರಿತಾಗಿ ಮಾತನಾಡುತ್ತಿದ್ದೀರೋ ತಿಳಿಯಲಿಲ್ಲ.
    ಮತ್ತು ಆ ಪತ್ರಿಕೆ, ಅಂಕಣಕಾರರು, ಅವರ ಡಬಲ್ ಸ್ಟಾಂಡರ್ಡ್ (ದ್ವಂದ್ವ ನೀತಿ) ಈಗ ನಾವು ಚರ್ಚಿಸುತ್ತಿರುವ ವಿಷಯಕ್ಕೆ ಹೇಗೆ ಪ್ರಸ್ತುತ ಎಂದು ತಿಳಿಸಿದರೆ ಉಪಕಾರವಾದೀತು.

    ಉತ್ತರ
    • ಅಲ್ಲಿ ಕೂತು ಊಟ ಮಾಡೋ ಮಂದಿಗೆ ಇವೆಲ್ಲ ತಿಳಿಯದೇ ಏನಿಲ್ಲ.ಮಾನವರೆಲ್ಲ ಸಮಾನರು ಅನ್ನುವ ಮನಸ್ಥಿತಿ ಮೂಡಬೇಕಷ್ಟೆ ಅವರೊಳಗೆ…ನಿದ್ದೆ ಮಾಡಿದವರನ್ನ ಎಬ್ಬಿಸಬಹುದು, ಮಲಗಿದಂತೆ ನಟಿಸುವ ಮಂದಿಯನ್ನಲ್ಲ…

     ಇನ್ನ ಜೀವನ ಸಾರ್ಥಕ ಮಾಡಿಕೊಳ್ಳಲು ಆರ್.ಎಸ್.ಎಸ್ನೊಂದಿಗೆ ಕೈ ಜೋಡಿಸಿಯೇ ಆಗಬೇಕಿಲ್ಲ,ಇಂದಿಗೂ ಈ ದೇಶದ ಎಷ್ಟೋ ಜನ ತೆರೆಮರೆಯಲ್ಲಿ ತಮ್ಮ ಪಾಲಿನ ಕೆಲಸವನ್ನ ಸದ್ದಿಲ್ಲದೆ ಮಾಡಿ ಮುಗಿಸುತಿದ್ದಾರೆ ಯಾರ ಸಹಾಯವೂ ಇಲ್ಲದೇ.ಇನ್ನ ಆರ್.ಎಸ್.ಎಸ್ ನ ಕಾರ್ಯಕ್ರಮಗಳ ಅರಿವು ನನಗೂ ಇದೆ,ನನ್ನ ಹಿಂದಿನ ಲೇಖನಗಳಲ್ಲಿ ಅದರ ಉಲ್ಲೇಖವೂ ಇದೆ ಹಾಗೆಂದ ಮಾತ್ರಕ್ಕೆ ಅವರನ್ನ ಪ್ರಶ್ನಿಸುವುದೇ ತಪ್ಪಾ?

     ಇನ್ನ ಆ ಪತ್ರಿಕೆ ಯಾಕೆ ಮುಖ್ಯ ಅಂದರೆ, ಕುಕ್ಕೆಯನ್ನ ಬಡಿಯಲು ತುರುವೇಕೆರೆಯನ್ನ ಮಧ್ಯೆ ತೂರಿಸಿದ್ದರ ಔಚಿತ್ಯವೇನು? ಇನ್ನ ಧರ್ಮದ ಬಗ್ಗೆ ಹೊಗಳಿಕೆಯ ಮಾತನಡುವ ಹಾಗೆ ಅನ್ಯಧರ್ಮದ ತಪ್ಪುಗಳನ್ನ ಎತ್ತಿ ತೋರಿಸುವವರಿಗೆ ಈ ಮಡೆಸ್ನಾನದ ಬಗ್ಗೆ ಮಾತನಾಡಲು ಬಾಯಿಯೇ ಬರುವುದಿಲ್ಲ…!

     ಉತ್ತರ
     • Kumar
      ಡಿಸೆ 14 2011

      > ಜೀವನ ಸಾರ್ಥಕ ಮಾಡಿಕೊಳ್ಳಲು ಆರ್.ಎಸ್.ಎಸ್ನೊಂದಿಗೆ ಕೈ ಜೋಡಿಸಿಯೇ ಆಗಬೇಕಿಲ್ಲ
      ಖಂಡಿತ ಇಲ್ಲ. ನೂರು ಕೋಟಿಗೂ ಮಿಕ್ಕಿ ಜನಸಂಖ್ಯೆ ಇರುವ ಈ ದೇಶದಲ್ಲಿ ಸೇವಾಕಾರ್ಯದಲ್ಲಿ ತೊಡಗಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
      ಅಂತಹ ಯಾರದಾದರೂ ಜೊತೆ ಸೇರಿದರಾಯಿತು, ಇಲ್ಲವೇ ನೀವೂ ಒಂದು ಹೊಸತನ್ನು ಪ್ರಾರಂಭಿಸಿದರೂ ಉತ್ತಮ.
      “ಮಾತಿಗಿಂತ ಕೃತಿ ಮುಖ್ಯ” ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
      ಮತ್ತು ’ಬಲಪಂಥೀಯ ಸಂಘಟನೆಗಳು’ ಮಡೆಸ್ನಾನವನ್ನು ವಿರೋಧಿಸಿಲ್ಲ ಎಂದರಲ್ಲ, ಆ ರೀತಿಯ ಸಾಮಾನ್ಯ ಹೇಳಿಕೆ (General statement) ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ನೀವು ’ಬಲಪಂಥೀಯ ಸಂಘಟನೆ’ಗಳ ವಿಷಯ ಪ್ರಸ್ತಾಪಿಸಿದ್ದರಿಂದ, ನಾನು ಆರೆಸ್ಸೆಸ್ಸಿನ ಉದಾಹರಣೆ ನೀಡಿದೆನಷ್ಟೇ.
      ಮತ್ತು ಕೇವಲ ಪ್ರತಿಭಟನೆ ಮಾಡುವುದಕ್ಕಿಂತ ಅಥವಾ ಘೋಷಣೆ ಹಾಕುವುದು ಇಲ್ಲವೇ ಲೇಖನ ಬರೆಯುವುದರಿಂದ ಏನೂ ಸಾಧನೆಯಾಗುವುದಿಲ್ಲ.
      ಅದಕ್ಕಿಂತ ಉತ್ತಮ ಸಾಧನೆಯಾಗುವುದು ಮೌನವಾಗಿ ಕಾರ್ಯದಲ್ಲಿ ತೊಡಗುವುದರಿಂದ.
      ನೀವೇ ತೆಗಳಿದ ’ಬಲಪಂಥೀಯ ಸಂಘಟನೆ’ಗಳ ಪೈಕಿ ಆರೆಸ್ಸೆಸ್ ಈ ರೀತಿಯ ಕಾರ್ಯ ಮಾಡುತ್ತಿದೆ ಎಂದು ತಿಳಿಸುವುದಕ್ಕೆ ಆರೆಸ್ಸೆಸ್ಸಿನ ಹೆಸರಿಲ್ಲಿ ಪ್ರಸ್ತಾಪಿತವಾಯಿತಷ್ಟೇ.

      > ಇಂದಿಗೂ ಈ ದೇಶದ ಎಷ್ಟೋ ಜನ ತೆರೆಮರೆಯಲ್ಲಿ ತಮ್ಮ ಪಾಲಿನ ಕೆಲಸವನ್ನ ಸದ್ದಿಲ್ಲದೆ ಮಾಡಿ ಮುಗಿಸುತಿದ್ದಾರೆ ಯಾರ ಸಹಾಯವೂ ಇಲ್ಲದೇ
      ಇದರ ಕುರಿತಾಗಿ ಅನುಮಾನವೇ ಇಲ್ಲ. ಆದರೆ, ಈ ಸಂದರ್ಭದಲ್ಲಿ ಈ ವಿಷಯ ಅಪ್ರಸ್ತುತ. ನೀವು ’ಬಲಪಂಥೀಯ” ಸಂಘಟನೆಗಳು ಎಂದು ಸಾರಾಸಗಟಾಗಿ ಎಲ್ಲವನ್ನೂ ತೆಗಳಿಬಿಟ್ಟರಲ್ಲ, ಅದಕ್ಕಾಗಿ ಆರೆಸ್ಸೆಸ್ ಉದಾಹರಿಸಬೇಕಾಯಿತಷ್ಟೇ. ಅದನ್ನು ಅರ್ಥಮಾಡಿಕೊಳ್ಳದೆ, ನೀವು ಮಾತನಾಡುತ್ತಿರುವಂತಿದೆ!

      > ಹಾಗೆಂದ ಮಾತ್ರಕ್ಕೆ ಅವರನ್ನ ಪ್ರಶ್ನಿಸುವುದೇ ತಪ್ಪಾ?
      ಪ್ರಶ್ನಿಸುವುದರಲ್ಲಿ ತಪ್ಪಿಲ್ಲ. ಆದರೆ, ವಸ್ತುಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಮತ್ತು ನಂತರ ಪ್ರಶ್ನಿಸಿ. ನಮ್ಮ ತಿಳುವಳಿಕೆ ತಪ್ಪಾಗಿದ್ದಾಗ, ಮತ್ಯಾರಾದರೂ ತಿಳುವಳಿಕೆ ನೀಡಿದಾಗ, ಅದನ್ನು ಒಪ್ಪಿಕೊಳ್ಳುವ ಔದಾರ್ಯ ತೋರಿಸಿ.
      ಮತ್ತೊಬ್ಬರನ್ನು ಪ್ರಶ್ನಿಸುವುದು ಬಹಳ ಸುಲಭ. ಆದರೆ, ನಮ್ಮನ್ನು ಮತ್ತೊಬ್ಬರು ಪ್ರಶ್ನಿಸಿದಾಗ, ತಡೆದುಕೊಳ್ಳುವುದು ಕಷ್ಟ ಅಲ್ಲವೇ?

      > ಇನ್ನ ಆ ಪತ್ರಿಕೆ ಯಾಕೆ ಮುಖ್ಯ ಅಂದರೆ, ಕುಕ್ಕೆಯನ್ನ ಬಡಿಯಲು ತುರುವೇಕೆರೆಯನ್ನ ಮಧ್ಯೆ ತೂರಿಸಿದ್ದರ ಔಚಿತ್ಯವೇನು?
      ನೀವು ಕನ್ನಡಪ್ರಭ ಪತ್ರಿಕೆಯ ಕುರಿತಾಗಿ ಹೇಳುತ್ತಿರುವಿರೆಂದು ಭಾವಿಸುವೆ.
      ಪ್ರಾಯಶಃ ಅವರು, ಮಡೆಸ್ನಾನಕ್ಕೂ ಜಾತೀಯತೆಗೂ ಸಂಬಂಧವಿಲ್ಲ ಎಂದು ತಿಳಿಸಲು ತುರುವೇಕೆರೆಯ ಪ್ರಸ್ತಾಪ ಮಾಡಿರಬಹುದು.
      ತುರುವೇಕೆರೆಯಲ್ಲೂ ಮಡೆಸ್ನಾನ ನಡೆಯುತ್ತಿರುವುದು ಸತ್ಯವೇ ಅಲ್ಲವೆ? ಮತ್ತು ಕುಕ್ಕೆಯ ಮಡೆಸ್ನಾನದ ಕುರಿತು ಚರ್ಚಿಸುವಾಗ ಅದು ಪ್ರಸ್ತುತವೂ ಹೌದು, ಔಚಿತ್ಯವೂ ಹೌದು.
      ಈ ಸತ್ಯವನ್ನು ಅವರು ಎತ್ತಿ ತೋರಿಸಿದ್ದರಿಂದ ನಿಮಗೇಕೆ ಕೋಪವೆಂದು ತಿಳಿಯುತ್ತಿಲ್ಲ!

      ಉತ್ತರ
      • >> ನಮ್ಮ ತಿಳುವಳಿಕೆ ತಪ್ಪಾಗಿದ್ದಾಗ, ಮತ್ಯಾರಾದರೂ ತಿಳುವಳಿಕೆ ನೀಡಿದಾಗ, ಅದನ್ನು ಒಪ್ಪಿಕೊಳ್ಳುವ ಔದಾರ್ಯ ತೋರಿಸಿ.ಮತ್ತೊಬ್ಬರನ್ನು ಪ್ರಶ್ನಿಸುವುದು ಬಹಳ ಸುಲಭ. ಆದರೆ, ನಮ್ಮನ್ನು ಮತ್ತೊಬ್ಬರು ಪ್ರಶ್ನಿಸಿದಾಗ, ತಡೆದುಕೊಳ್ಳುವುದು ಕಷ್ಟ ಅಲ್ಲವೇ?

       ಖುದ್ದು ಫ಼್ರಾನ್ಸಿನ ಅಧ್ಯಕ್ಷ ಮಂಗಳೂರಿನಲ್ಲಾದ ಘಟನೆಯ ಬಗ್ಗೆ ಮಾತನಾಡುವಷ್ಟು ಸದ್ದು ಮಾಡುವ ತಾಕತ್ತಿರುವ ’ಬಲಪಂಥೀಯ ಸಂಘಟನೆ’ಗಳಿಗೆ,ಮಡೆಸ್ನಾನದಂತ ವಿಷಯದಲ್ಲಿ ಆ ಪರಿ ಸದ್ದು ಯಾಕೆ ಮಾಡಲಾಗುತ್ತಿಲ್ಲ ಅನ್ನುವುದು ಪ್ರಶ್ನೆ. ಒಪ್ಪಿಕೊಳ್ಳುವ ಮನಸ್ಸಿಲ್ಲದಿದ್ದರೆ ದು.ಗು ಲಕ್ಷ್ಮಣರ ಲೇಖನವನ್ನ ಮೆಚ್ಚಿದೆ ಅಂತಲೂ ಹೇಳಬೇಕಿರಲಿಲ್ಲ.

       >>ಕುಕ್ಕೆಯ ಮಡೆಸ್ನಾನದ ಕುರಿತು ಚರ್ಚಿಸುವಾಗ ಅದು ಪ್ರಸ್ತುತವೂ ಹೌದು, ಔಚಿತ್ಯವೂ ಹೌದು.ಈ ಸತ್ಯವನ್ನು ಅವರು ಎತ್ತಿ ತೋರಿಸಿದ್ದರಿಂದ ನಿಮಗೇಕೆ ಕೋಪವೆಂದು ತಿಳಿಯುತ್ತಿಲ್ಲ!
       ಕೋಪವೇನಿಲ್ಲ, ಪಾಪ ಅವರ ಉದ್ದೇಶವೇನಿತ್ತೋ ಯಾರಿಗ್ಗೊತ್ತು.ಆದರೆ ಎರಡೂ ಕಡೆಯದ್ದು ಎರಡೂ ಕಡೆ ನಿಲ್ಲಲ್ಲಿ ಅನ್ನುವುದು ನನ್ನ ಅನಿಸಿಕೆ.

       ಉತ್ತರ
       • Kumar
        ಡಿಸೆ 15 2011

        >>ಇದರಲ್ಲಿ ಜಾತೀಯತೆಯ ವಾಸನೆಯನ್ನು ಮೂಲ ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ ಮತ್ತು ಅದನ್ನು ಹೆಚ್ಚಿನವರು ಒಪ್ಪುತ್ತಿಲ್ಲ.
        > ಹೌದೇ!? ಅದೆಲ್ಲಿ ಅಂತ ದಯವಿಟ್ಟು ಕೋಟ್ ಮಾಡಬಹುದಾ?
        > ನಾನು ದೇವಸ್ಥಾನಗಳಲ್ಲೇಕೆ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಅಂತ ಮೂಲ ಲೇಖನ ಮತ್ತು ಇಲ್ಲೂ ಸಹ ಪ್ರಶ್ನಿಸಿದ್ದೇನೆ.
        ನಿಮ್ಮ ನಿಲುವಿನ ಕುರಿತಾಗಿ ನನ್ನ ಅನಿಸಿಕೆ ತಪ್ಪಾಗಿತ್ತು. ಲೇಖನದಲ್ಲೆಲ್ಲೂ ಜಾತೀಯತೆಯ ವಿಷಯ ಪ್ರಸ್ತಾಪವಾಗಿಲ್ಲ.
        ಮಾನವೀಯತೆಗಾಗಿ ಮಡೆಸ್ನಾನ ನಿಲ್ಲಬೇಕು ಎಂದು ಒತ್ತಾಯಿಸಲಾಗಿದೆ. ಅದಕ್ಕೆ ನನ್ನ ಪೂರ್ಣ ಸಹಮತವಿದೆ.
        ನನ್ನ ಹಿಂದಿನ ಪ್ರತಿಕ್ರಿಯೆ ತಪ್ಪಾಗಿತ್ತು, ಮನ್ನಿಸಿ.

        > ಈ ಅನಿಷ್ಟ ಪದ್ಧತಿಗಳು ಏಕ್ಕೆ,ಹೇಗೆ ಹುಟ್ಟಿಕೊಂಡವು ಅಂತ ಕೆದಕುವುದರ ಬದಲು ಹೇಗೆ ಇದಕ್ಕೆ ಅಂತ್ಯ ಹಾಡಬಹುದು ಅನ್ನುವುದು ಮುಖ್ಯವಾಗುತ್ತದೆಯಲ್ಲವೇ?
        ರೋಗ ಮೂಲ ಹುಡುಕದೆ ಹೋದರೆ, ಮತ್ತೆ ರೋಗ ಹುಟ್ಟಿಕೊಳ್ಳದಂತೆ ಮಾಡಲಾಗುವುದಿಲ್ಲ.
        ಚಿಕಿತ್ಸೆ ನೀಡಬೇಕಾಗಿರುವುದು ರೋಗ ಮೂಲಕ್ಕೇ!

        > ಇದೆಲ್ಲ ಬದಲಾಗಲು ಸಮಯ ಬೇಕು ಅನ್ನುವುದಾದರೆ ಅದಿನ್ನೆಷ್ಟು ಸಮಯ ಬೇಖು,
        > ಸ್ವಾತಂತ್ರ್ಯ ಬಂದು ೬೦ ವರ್ಷಗಳು ಕಳೆದಾಯಿತು, ಇನ್ನು ಎಷ್ಟು ವರ್ಷಗಳು ಬೇಕಾಗಬಹುದು ಜೊತೆಗೆ ಕುಳಿತು ಊಟ ಮಾಡಲು?
        ನಮ್ಮ ಸಮಾಜ ಹಾಳಾಗಲು ಹಲವು ಶತಮಾನಗಳೇ ಹಿಡಿದಿವೆ. ಇನ್ನೂ ಇದನ್ನು ಸರಿಪಡಿಸುವ ಪ್ರಯತ್ನಗಳು ಬೆರಳೆಣಿಕೆಯಷ್ಟು ಮಾತ್ರ ನಡೆದಿದೆ.
        ಸಮಾಜದ ವ್ಯಕ್ತಿಗಳು ಬದಲಾಗದೆ, ಈ ರೀತಿಯ ಅನಿಷ್ಠ ಪದ್ಧತಿಗಳು ದೂರಾಗವು.
        ೬೦ ವರ್ಷಗಳಲ್ಲಿ, ಬದಲಾವಣೆ ಬೇಕೆನ್ನುವ ಕೂಗು ಜೋರಾಗಿ ಕೇಳಿಸಲಾರಂಭಿಸಿದೆಯಲ್ಲಾ, ಅದೂ ಒಂದು ಸಾಧನೆಯೇ!
        ಆದರೆ, ಈ ಕೂಗು ಸಮಾಜವ್ಯಾಪಿಯಾಗಬೇಕು, ಬಿರುಗಾಳಿಯಾಗಬೇಕು. ಆ ರೀತಿ ಆಗಲು, ಮತ್ತೂ ಹೆಚ್ಚೆಚ್ಚು ಪ್ರಯತ್ನಗಳು ನಡೆಯಬೇಕಷ್ಟೆ.
        ಸಮಾಜದ ಒಳಗಿನ ಪ್ರತಿಯೊಬ್ಬ ವ್ಯಕ್ತಿಯ ಬಳಿಯೂ ಮಾತನಾಡಬೇಕು, ಎಚ್ಚರಿಸಬೇಕು, ಕಾರ್ಯೋನ್ಮುಖಗೊಳಿಸಬೇಕು.
        ಇದಲ್ಲದೆ ಇದಕ್ಕೆ ಬೇರೆ ದಾರಿ ಇಲ್ಲ ಎಂದೆನಿಸುತ್ತದೆ. ನೂರು ಕೋಟಿ ಜನರಿರುವ ಸಮಾಜದಲ್ಲಿ ಸುಧಾರಣೆ ಇದ್ದಕ್ಕಿದ್ದಂತೆ ಬರಲು ಸಾಧ್ಯವಿಲ್ಲ. ಸುಧಾರಣೆ ಬರುವವರೆಗೆ ತಾಳ್ಮೆಯಿಂದ ಪ್ರಯತ್ನಿಸುತ್ತಿರಬೇಕು.

        > ಖುದ್ದು ಫ಼್ರಾನ್ಸಿನ ಅಧ್ಯಕ್ಷ ಮಂಗಳೂರಿನಲ್ಲಾದ ಘಟನೆಯ ಬಗ್ಗೆ ಮಾತನಾಡುವಷ್ಟು ಸದ್ದು ಮಾಡುವ ತಾಕತ್ತಿರುವ ’ಬಲಪಂಥೀಯ ಸಂಘಟನೆ’ಗಳಿಗೆ
        ನೀವು ಮತ್ತೆ “Generalised statement” ನೀಡುತ್ತಿದ್ದೀರಿ. ಸದ್ದು ಮಾಡುವುದರಿಂದ ಕೆಲಸವಾಗುತ್ತದೆ ಎಂದು ನಂಬಿಕೊಂಡಿರುವ ಸಂಘಟನೆಗಳು ಸದ್ದು ಮಾಡಿರಬೇಕಷ್ಟೇ.
        ಅದರಿಂದ ಏನು ಸಾಧನೆಯಾಯಿತು, ಯಾವ ಬದಲಾವಣೆಗಳಾದವು ಎಂಬುದನ್ನೂ ನೀವೇ ಹೇಳಬೇಕು.
        ನನ್ನ ಅಭಿಪ್ರಾಯವೆಂದರೆ ಸದ್ದು ಮಾಡುವುದರಿಂದ ಕಾರ್ಯಸಾಧನೆಯಾಗುವುದಿಲ್ಲ.
        ಕಾರ್ಯಸಾಧನೆಯಾಗಲು ಆದಷ್ಟು ಕಡಿಮೆ ಸದ್ದು ಮಾಡಬೇಕು, ಅಥವಾ ಮೌನವಾಗಿ ಕಾರ್ಯ ಮಾಡಬೇಕು ಮತ್ತು ಅತ್ಯಂತ ತಾಳ್ಮೆಯಿರಬೇಕು.

        ಉತ್ತರ
        • ಮನ್ನಿಸುವ ಮಾತೆಲ್ಲ ಎಂತಕ್ಕೆ ಬಿಡಿ.ರೋಗದ ಮೂಲ ಯಾಕೆ ಬೇಡ ಅಂದೆನೆಂದರೆ, ಪರ-ವಿರೋಧಿ ಎರಡೂ ಗುಂಪಿನಲ್ಲಿರುವ extermist ಗಳು ಪರಸ್ಪರ ದೂಷಣೆಯಲ್ಲಿ ತೊಡಗುತ್ತಾರೆಯೇ ಹೊರತು,ಸೌಹಾರ್ದಯುತ ಪರಿಹಾರದ ಬಗ್ಗೆ ಯೋಚಿಸುವುದಿಲ್ಲ ಅಂತ.

         ತಾಳ್ಮೆ,ಪ್ರೀತಿ ಇರಬೇಕು ನಿಜ,ಆದರೆ ಎಲ್ಲವೂ ಒಂದು ಹಂತದವರೆಗಷ್ಟೆ.ಕಿವುಡರಿಗೂ ಕೇಳಿಸಲು ದೊಡ್ಡ ಸದ್ದೇ ಆಗಬೇಕು ಅನ್ನುವ ಭಗತ್ ಸಿಂಗ್ ಮಾತು ಸಹ ಒಪ್ಪತಕ್ಕದ್ದೇ ಅಲ್ಲವೇ? 🙂

         ಉತ್ತರ
  • Balachandra
   ಡಿಸೆ 13 2011

   Mr. Bhadravati,
   ಮೊದಲನೆಯದಾಗಿ ನಾನೆಂದೂ ಮಡೆಸ್ನಾನವನ್ನು ಸಮರ್ಥಿಸಿಕೊಂದಿಲ್ಲ, ಅಥವಾ ಮೊಹರಂ ಆಚರಣೆಯನ್ನು ತೆಗಳಿಲ್ಲ. ಆದರೆ ಎರಡೂ ಆಚರಣೆಗಳನ್ನೂ ಒಂದೇ ದ್ರಷ್ಟಿಕೊನದಿಂದ ನೋಡಿದೆ ಅಷ್ಟೇ. ನಿಮಗೆ ನನ್ನ comment ನ ಯಾವ ವಾಖ್ಯ ಆ ರೀತಿ ಆಲೋಚಿಸುವಂತೆ ಮಾಡಿತು ಎಂದು ಅರ್ಥವಾಗುತ್ತಿಲ್ಲ. ದಯವಿಟ್ಟು ಇನ್ನೊಮ್ಮೆ ಓದಿ. ನನ್ನ ದ್ರಷ್ಟಿಯಲ್ಲಿ ನಮ್ಮಲ್ಲಿನ ಎಲ್ಲ ನಂಬಿಕೆಯೂ ಕೂಡ ಮೂಢ. ಹಾಗೆ ಯಾವ ಆಚರಣೆಯಲ್ಲಿ ಶೋಷಣೆ ನಡೆಯುವದು ಅಥವಾ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದೋ ಆದಲ್ಲಿ ಅವುಗಳನ್ನು ಬೇರು ಸಹಿತ ತೆಗೆದುಹಾಕಬೇಕು ಎಂಬುದು ನಮ್ಮ ಆಶಯ. ವರದಕ್ಷಿಣೆ, ಬಾಲ್ಯವಿವಾಹ, ಸತಿ ಪದ್ದತಿಗಳನ್ನು ಕಾನೂನು ಪ್ರಕಾರ ತೊಡೆದುಹಾಕಿರುವದರಲ್ಲಿ ಖಂಡಿತ ಅರ್ಥ ಇದೆ. ಮಡೆಸ್ನಾನ ದ ವಿಚಾರದಲ್ಲಿ ಶೋಷಣೆ ನಡೆದಲ್ಲಿ ಅಥವಾ ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಲ್ಲಿ ಖಂಡಿತ ಅದನ್ನು ನಿರ್ಮೂಲನೆಗೊಳಿಸಬೇಕು. ಹಾಗೆ ಅಲ್ಲಿ ಶೋಷಣೆ ನಡೆಯದೆ ಹೋದಲ್ಲಿ ಅದು ಹೇಗೆ ತಾನೇ ಅಮಾನವೀಯ ಎನ್ನುತ್ತೀರಿ? ನಾನೆಂದೂ ಮಡೆಸ್ನಾನ ಸರಿ ಎಂದು ಹೇಳಿಲ್ಲ, ಅದು ನನಗೆ ಅಸಹ್ಯವೇ. ನನಗೆ ಯಾವ ಆಚರಣೆಯಲ್ಲೂ ನಂಬಿಕೆ ಇಲ್ಲ. ನನಗೆ ಮಡೆಸ್ನಾನವೂ ಒಂದೇ, ದೇವಸ್ತಾನಗಳಲ್ಲಿ ಕುಳಿತು ಭಜನೆ ಮಾಡುವದೂ ಒಂದೇ ಎನಿಸುತ್ತದೆ. ವಯಕ್ತಿಕವಾಗಿ ನಾನೆಂದೂ ಈ ಪದ್ದತಿಗಳನ್ನು support ಮಾಡಲಾರೆ. ಹಾಗೆಂದು ನಂಬಿಕೆಯ ಪ್ರಯುಕ್ತ ಅದನ್ನು ಆಚರಿಸುವವರನ್ನು ‘ಬೇಡ’ ಎಂದೂ ಹೇಳಲಾರೆ(ಯಾವುದೇ ಶೋಷಣೆ ಅಥವಾ ವ್ಯಕ್ತಿ ಸ್ವಾತಂತ್ರ್ಯ ಹರಣ ನಡೆಯದೆ ಹೋದಲ್ಲಿ). ಇನ್ನು ನೀವು discretion ಬಗ್ಗೆ ಹೇಳುತ್ತೀರಿ. ಅದನ್ನೇ ನಾನೂ ಹೇಳಹೊರಟಿದ್ದು. ಮಡೆಸ್ನಾನ ಮಾಡುವವನು ಅದು ತನ್ನ ಅವಿಭಾಜ್ಯ ಹಕ್ಕು ಎಂದು ಹೇಳಬಹುದು. ಆಗ? ಮಡೆಸ್ನಾನ ಕಡ್ಡಾಯವಾಗಿ ಮಾಡಿದಲ್ಲಿ ಅಥವಾ ಒಬ್ಬರ ಸ್ವಾತಂತ್ರ್ಯದ ವಿರುದ್ಧ ಮಾಡಿದಲ್ಲಿ ನಾವೂ ಅದನ್ನು ವಿರೋಧಿಸುತ್ತೇವೆ. ಆದರೆ ವ್ಯಕ್ತಿ ಸ್ವಾತಂತ್ರ್ಯವನ್ನಲ್ಲ. ಮೊಹರಂ ಸಂದರ್ಭದಲ್ಲಿ ಮೈಗೆ ಬಾಸುಂಡೆ ಬರುವಂತೆ ಬಾರಿಸಿಕೊಳ್ಳುವದನ್ನು ನೋಡಿರಬಹುದು. ನಾವೇನೂ ಅದನ್ನು ವಿರೋಧಿಸುವಂತೆ ಹೇಳುತ್ತಿಲ್ಲ. ಅಲ್ಲಿ ಕೊಡುವ ವ್ಯಕ್ತಿ ಸ್ವಾತಂತ್ರ್ಯದಂತೆ ಇಲ್ಲಿಯೂ ಕೂಡ ಕೊಡಬೇಕು ಎಂದು ಹೇಳುತ್ತಿದ್ದೇನೆ ಅಷ್ಟೇ. ಮೊಹರಂ ಬಗ್ಗೆ ಹೇಳಿದ್ದು ಒಂದು reference ಅಷ್ಟೇ.

   ಉತ್ತರ
 5. Kumar
  ಡಿಸೆ 12 2011

  ಹಾಗೆ ನೋಡಿದರೆ, ಬಲಪಂಥೀಯ-ಎಡಪಂಥೀಯ ಪದಗಳೇ ನಮಗೆ ಪರಕೀಯ.
  ಈ ಪದಗಳು ಯೂರೋಪಿನಲ್ಲಿ ಹುಟ್ಟಿಕೊಂಡದ್ದು ಮತ್ತು ಅದು ಅಲ್ಲಿನ ಅಂದಿನ ಪರಿಸರಕ್ಕೆ ಮಾತ್ರ ಸರಿಯಾದದ್ದು.
  ಜಗತ್ತನ್ನೆಲ್ಲಾ ಈ ಪದಗಳ ವ್ಯಾಪ್ತಿಯೊಳಗೆ ತರುವುದು ಸರಿಯೆನಿಸುವುದಿಲ್ಲ!

  ಉತ್ತರ
 6. ರವಿ ಕುಮಾರ್ ಜಿ ಬಿ
  ಡಿಸೆ 12 2011

  ನಿಷೇಧಿಸಬಾರದು ಅನ್ನುವವರಿಗೆ ಸತಿ ಪದ್ಧತಿ,ದೇವದಾಸಿ,ವಿಧವಾ ಕೇಶ ಮುಂಡನ,ಬೆತ್ತಲೆ ಸೇವೆಯಂತ ಅನಿಷ್ಟ ಪದ್ಧತಿಗಳು ಸಹ ಒತ್ತಾಯಪೂರ್ವಕಾವಗಿರಲಿಲ್ಲ ಮತ್ತವೆಲ್ಲ ನಿಂತದ್ದು ಸರ್ಕಾರದ ‘ದಂಡ’ ಪ್ರಯೋಗದಿಂದಲೇ ಅನ್ನುವುದು ಮರೆತು ಹೋಗಿದೆಯೇ? ಅಥವಾ ‘ಜಾಣ ಮರೆವೇ?’.

  ರಾಕೇಶ್ ,ಬೆತ್ತಲೆ ಸೇವೆ ಒಂದನ್ನು ಬಿಟ್ಟು ಉಳಿದ ಎಲ್ಲವೂ ಕೂಡ ಬಲಾತ್ಕಾರದಿಂದ ಹೇರಲ್ಪ ಪಟ್ಟಿರುವವು.(ಕೆಲವು ಜನ ಸ್ವ ಇಚ್ಚೆಯಿಂದ ಮಾಡಿರಬಹುದು). ನಾವು ನಮ್ಮಲ್ಲೇ ಕಚ್ಚಾಡುತ್ತೆವೆಯೇ ವಿನಃ ಅಲ್ಲಿ ಅವರಿಗೆ ತಿಳುವಳಿಕೆ ನೀಡುವ ಪ್ರಯತ್ನವೇ ಮಾಡೋದಿಲ್ಲ!! ಇದನ್ನ ಬಿ ಬಿ ಸಿ ಯಂತಹ ಮಾದ್ಯಮಗಳು ವೈಭವೀಕರಿಸಿ ನಮ್ಮೆಲ್ಲರ ಮಾನ ಹರಾಜು ಹಾಕಿದರೂ ನಮಗೆ ಬುದ್ದಿ ಬರಲ್ಲ !””An Indian activist is beaten for protesting about a ritual in which lower-caste Indians roll in the food leftovers of those of a higher caste.””. ನಮಗೆ ಕಾಣೋದು ನಮ್ಮ ಸ್ವಪ್ರತಿಷ್ಠೆ ಮಾತ್ರ ! ಇದನ್ನೇ ನಮ್ಮನಮ್ಮೊಳಗೆ ಪರಿಹರಿಸೋದನ್ನ ಬಿಟ್ಟು ಹಾದಿ ರಂಪ ಬೀದಿ ರಂಪ ಮಾಡೋದರಿಂದ ಯಾರ ಮಾನ ಹರಾಜು ಆಗತ್ತೆ? ತಥಾಕಥಿತ ಬುದ್ದಿಜೀವಿಗಳಿಗೆ ಅಷ್ಟೂ ಹೊಳೆಯೋದು ಬೇಡವೆ?.

  ಕೇವಲ ಸ್ವಪ್ರತಿಷ್ಠೆ ,ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡೋರಿಗೆ ಯಾವಾಗ ಬುದ್ದಿ ಬರತ್ತೋ? ” ಏನಕೇನ ಪ್ರಕಾರೇಣ ಪ್ರಸಿದ್ದ ಪುರುಷೋ ಭವ”! ನಾವು ನಿಜಕ್ಕೂ ತಾಂತ್ರಿಕತೆಯನ್ನು ಬಳಸ್ತಾ ಇದೇವ?

  ಉತ್ತರ
  • ರವಿ :
   “ಇದನ್ನ ಬಿ ಬಿ ಸಿ ಯಂತಹ ಮಾದ್ಯಮಗಳು ವೈಭವೀಕರಿಸಿ ನಮ್ಮೆಲ್ಲರ ಮಾನ ಹರಾಜು ಹಾಕಿದರೂ ನಮಗೆ ಬುದ್ದಿ ಬರಲ್ಲ !””An Indian activist is beaten for protesting about a ritual in which lower-caste Indians roll in the food leftovers of those of a higher caste.””. ನಮಗೆ ಕಾಣೋದು ನಮ್ಮ ಸ್ವಪ್ರತಿಷ್ಠೆ ಮಾತ್ರ !”

   ಖಂಡಿತ ನಾನು ಇದನ್ನೇ ಹೇಳ ಹೊರಟಿದ್ದು ರವಿ.ಇಂತ ಸುದ್ದಿಗಳ ಲಾಭ ಆಗುವುದು ಯಾರಿಗೆ ಅಂತ ನನ್ನ ಮೊದಲನೇ ಲೇಖನದಲ್ಲಿ ಹೇಳಿದ್ದೇನೆ.ಅವರನ್ನ ಒಳ ಬಿಟ್ಟುಕೊಂಡೂ ಆಮೇಲೆ ಬೊಬ್ಬೆ ಹಾಕುವುದು ಯಾವ ಕರ್ಮಕ್ಕೆ?

   ಉತ್ತರ
 7. Bhaskara
  ಡಿಸೆ 13 2011

  ರಾಕೇಶ,

  ಮಡೆಸ್ನಾನ ವಿರೋಧ ಜಾತಿಯತೆಯಿಂದ ಆಚೆಹೋಗಿ ಮಾನವೀಯತೆಯ ದೄಷ್ಟಿಯಿಂದ ಆಗಬೇಕು ಅನ್ನುವುದು ಎಲ್ಲರ ಆಶಯ. ಇಲ್ಲಿ ಎಡ-ಬಲ ಪಂಕ್ತಿ ಬಿಟ್ಟು, ಅಥವಾ ಒಂದು ಪತ್ರಿಕೆ/ಪತ್ರಕರ್ತ ಏನು ಹೇಳುತ್ತಿದ್ದಾನೆ ಅನ್ನುವುದನ್ನು ಬಿಟ್ಟು,. ಇನ್ನೋಂದು ದಿಕ್ಕಿನಲ್ಲಿ ಚಿಂತಿಸೋಣ,
  ೧) ಪ್ರತಿಭಟನೆ ಮಾಡಿದ ನಾಗರೀಕರು, ಯಾಕೆ ವರ್ಷ್ದ ಹಿಂದೆಯೆ ಈ ಮಡೆ ಸ್ನಾನ ಮಾಡೂವ ಜನಗಳ ಬಳಿ ಹೋಗಿ ಅದರ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಿಲ್ಲ?
  ೨) ಪ್ರತಿಭಟನೆ ನಡೆಸುವಾಗಲಾದರೂ ಅದು ಮಾನವೀಯತೆಗೆ ವಿರುದ್ದ ಅನ್ನುವ ಸಂದೇಶ ಯಾಕೆ ನೀದುವ ಪ್ರಯತ್ನ ಮಾಡಲಿಲ್ಲ?
  ೩) ಇದೇ ಪ್ರತಿಭಟನಾಕಾರರಿಗೆ ಮಾನವೀಯತೆ ಯ ನಿಜವಾದ ಉದ್ದೇಶ ಇದ್ದಲ್ಲಿ, ಪ್ರಾಣಿಹಿಂಸೆ ಮಾಡಬೇಡಿ, ಕುರಿ, ಕೋಣ,ಕೋಳಿ ಬಲಿ ಕೊಡಬೇಡಿ ಎನ್ನುವ ಸಂದೇಶ ಯಾಕೆ ರವಾನಿಸುತ್ತಿಲ್ಲ? ಬಲಿ ನಡೆಯುವ ದೇಗುಲಗಳ ಮುಂದೆ ಪ್ರತಿಭಟನೆ ಯಾಕೆ ಹಮ್ಮಿಕೋಂಡಿಲ್ಲ?

  ಪ್ರತಿಭಟನೆ, ಧರಣಿ, ಈ ಹಾದಿ ನಿಜವಾದ ಉದ್ದೇಶದಿಂದ ಆದಲ್ಲಿ ಬಹಳ ಒಳ್ಳೆಯದು. ಆದರೆ ಕೇವಲ ೩-೪ ದಿನ ಪ್ರತಿಭಟಿಸುವ ಬದಲು , ಇ ಪದ್ದತಿಯನ್ನು ಬುಡ ಸಮೇತ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಿದಲ್ಲಿ ಅದು ನಿಜಕ್ಕೂ ಸ್ವಾಗತರ್ಹ.

  ಕೇವಲ, ಒಂದು ಜಾತಿ, ಒಂದು ಧರ್ಮ, ಒಂದು ಪತ್ರಿಕೆ, ಒಬ್ಬ ಪತ್ರಕರ್ತ ನನ್ನ ದೂಷಿಸುವುದರಿಂದ , ಕೇವಲ ವ್ಯರ್ಥ ಕಾಲಹರಣವೆ ಹೊರತು, ಮಡೆಸ್ನಾನ ಮಾಡುವ, ಅದನ್ನು ಪೋಷಿಸುವ ಮನಸ್ಸು ಮನೆಗಳನ್ನು ಬದಲಿಸಲು ಸಾಧ್ಯವಿಲ್ಲ.

  ವಿ ಸೂ : ಇದು ನನ್ನ ವೈಯಕ್ತಿಕ ಅಭಿಪ್ರ್ರಯವೆಂದೂ, ಯಾವುದೇ ವ್ಯಕ್ತಿಯ ಪರ / ವಿರೋಧಾಭಾಸ ಇಟ್ಟುಕೊಂಡು ಬರೆದ ಪ್ರತಿಕ್ರಿಯೆಯಲ್ಲವೆಂದು ಸ್ಪಷ್ಟ ಪಡಿಸುತ್ತೆನೆ.

  ಉತ್ತರ
  • ಭಾಸ್ಕರ್,

   ಆಹಾರವನ್ನ ಆಚರಣೆಗೆ ತಳುಕು ಹಾಕುವುದಾ? ಈ ಮಡೆಸ್ನಾನ ನಿಲ್ಲಬೇಕಿರುವುದು ನನ್ನ ಧರ್ಮ ತನ್ನೊಳಗಿನ ಕೊಳೆಯನ್ನ ತೊಳೆದುಕೊಳ್ಳಬಲ್ಲದು,ತೊಳೆದುಕೊಳ್ಳುತ್ತಲೇ ಬೆಳಕು ಹೊಮ್ಮಿಸಬಹುದು ಅನ್ನುವುದಕ್ಕಾಗಿ.

   ಇನ್ನ ಕುಕ್ಕೆಗೆ ಹೋಗಿ ನಿಂತವರ ಪಾಡು ಏನಾಯ್ತು ಅನ್ನುವುದನ್ನ ನೀವೇ ಟಿವಿಯಲ್ಲಿ ನೋಡಿರಬಹುದು

   ಉತ್ತರ
   • Bhaskara
    ಡಿಸೆ 14 2011

    ರಾಕೇಶ,

    ನನು ಆಹಾರವನ್ನು ಆಚರಣೆಗೆ ತಳುಕು ಹಾಕುತ್ತಿಲ್ಲ. ಹಾಗೆಂದು ಮಡೆಸ್ನಾನವನ್ನು ಸಮರ್ಥಿಸುತ್ತಲೂ ಇಲ್ಲ. ಕುಕ್ಕೆ ದೇವಾಲಯಕ್ಕೆ ಒಂದು ದಿನ ಹೋಗಿ ಪ್ರತಿಭಟಿಸುವ ಬದಲು, ಆ ಆಚರಣೆ ಯಲ್ಲಿ ಪಾಲ್ಗೊಳ್ಳುವ ಜನರಿಗೆ ಇದರ ನೈಜತೆಯ ಬಗ್ಗೆ ತಿಳಿ ಹೇಳಲಿ. ಮಡೆಸ್ನಾನ ಮಾಡುವಾತನೆ ಇಲ್ಲವಾದಲ್ಲಿ ಆ ಪದ್ದತಿ ಎಲ್ಲಿಂದ ಬರುತ್ತೆ? ಅಲ್ಲಿ ಉಂಡವರು ಯಾರು , ಬನ್ನಿ ನಮ್ಮ ಎಂಜಲು ಎಲೆಯ ಮೇಲೆ ಉರುಳಿ ಎಂದು ರತ್ನಗಂಬಳಿ ಹಾಸಿ ಕರೆಯುತ್ತಿಲ್ಲವಲ್ಲ? ಅನಗತ್ಯ ಯಾಕೆ ಒಂದು ಜಾತಿಯ ಮೇಲೆ ಗೂಬೆ ಹೊರೆಸುವ ಪ್ರಯತ್ನ? ಕಾರಣ ಇಷ್ಟೆ, ಅ ಜಾತಿಗೆ ಜನ ಬೆಂಬಲವಿಲ್ಲ, ಆಳುವ ಸರ್ಕಾರಗಳು ಆ ಜಾತಿಯ ಬಗ್ಗೆ ಕ್ಯಾರೆ ಅನ್ನುವುದಿಲ್ಲ. ನನ್ನ ಉದ್ದೇಶ ಇಷ್ಟೆ, ಅನ್ಯತಃ ದೂಷಣೆ ಬಿಟ್ಟು, ಜನರಿಗೆ ಇದರ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಯಲಿ. ಆಗ ಅದರ ಫಲಿತಾಂಶ ಆನಂದಿಸಲಿ.

    ಉತ್ತರ
    • >>ಅಲ್ಲಿ ಉಂಡವರು ಯಾರು , ಬನ್ನಿ ನಮ್ಮ ಎಂಜಲು ಎಲೆಯ ಮೇಲೆ ಉರುಳಿ ಎಂದು ರತ್ನಗಂಬಳಿ ಹಾಸಿ ಕರೆಯುತ್ತಿಲ್ಲವಲ್ಲ? ಅನಗತ್ಯ ಯಾಕೆ ಒಂದು ಜಾತಿಯ ಮೇಲೆ ಗೂಬೆ ಹೊರೆಸುವ ಪ್ರಯತ್ನ? ಕಾರಣ ಇಷ್ಟೆ,

     ಭಾಸ್ಕರ್,

     ಸಂವಾದದಲ್ಲಿ ದು.ಗು ಲಕ್ಷ್ಮಣರ ಬರೆದ ಲೇಖನದ ಈ ಸಾಲುಗಳು ನಿಮ್ಮ ಪ್ರಶ್ನೆಗೆ ಉತ್ತರವಾಗುತ್ತದೆ
     “ಮಡೆಸ್ನಾನ ನಡೆಯುವ ಸಂದರ್ಭದಲ್ಲಿ ಬ್ರಾಹ್ಮಣರಿಗಾಗಿ ದೇವಾಲಯದ ಹೊರಾವರಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಅಂತಹ ವ್ಯವಸ್ಥೆ ಇರುವುದಿಲ್ಲ. ಆ ಪಂಕ್ತಿಯಲ್ಲಿ ಬ್ರಾಹ್ಮಣೇತರರು ಕುಳಿತುಕೊಳ್ಳುವಂತೆಯೇ ಇಲ್ಲ. ಅಷ್ಟೇಕೆ, ಕೆಲವು ವರ್ಷಗಳ ಹಿಂದೆ ಆ ಪಂಕ್ತಿಯಲ್ಲಿ ಕೆಳವರ್ಗದ ಬ್ರಾಹ್ಮಣರೆನಿಸಿಕೊಂಡ ಸ್ಥಾನಿಕರು, ಮಾಲೆಯವರು, ವಿಶ್ವಕರ್ಮರು, ದೈವಜ್ಞರು ಕೂಡ ಕುಳಿತುಕೊಳ್ಳುವಂತಿರಲಿಲ್ಲ. ಮೇಲುವರ್ಗದ ಬ್ರಾಹ್ಮಣರೆನಿಸಿಕೊಂಡವರಿಗೆ ಮಾತ್ರ ಅಲ್ಲಿ ಅವಕಾಶವಿತ್ತು. ಇದೀಗ ಆ ಪಂಕ್ತಿಯಲ್ಲಿ ಬ್ರಾಹ್ಮಣರೇತರರು ಕುಳಿತುಕೊಂಡರೆ ಅವರನ್ನು ಬಲವಂತವಾಗಿ ಎಬ್ಬಿಸಲಾಗುತ್ತದೆ. ಹಾಗೆ ಅವರನ್ನು ಎಬ್ಬಿಸಲು ಒಂದು ‘ಗ್ಯಾಂಗ್’ ಕೂಡ ಇದೆ. ಬ್ರಾಹ್ಮಣರಲ್ಲ ಎಂದು ಕಂಡು ಬಂದವರನ್ನು ಈ ಗ್ಯಾಂಗ್ ಯಾವ ಮುಲಾಜೂ ಇಲ್ಲದೆ, ನಿರ್ದಾಕ್ಷಿಣ್ಯವಾಗಿ ಎಬ್ಬಿಸಿ ಹೊರಗೆ ಕಳಿಸುತ್ತದೆ. ಇದನ್ನು ನೋಡಿ ಆಕ್ರೋಶಗೊಂಡ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮದೇ ಆದ ಇನ್ನೊಂದು ಗ್ಯಾಂಗ್ ಕಟ್ಟಿ, ಎಬ್ಬಿಸಿ ಕಳಿಸಿದವರನ್ನು ಮತ್ತೆ ಅದೇ ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕೂರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದಾದ ಮೇಲೆ ಬ್ರಾಹ್ಮಣರೇತರರನ್ನು ಬಲವಂತವಾಗಿ ಅಲ್ಲಿಂದೆಬ್ಬಿಸುವ ದುಸ್ಸಾಹಸ ಅಷ್ಟಾಗಿರಲಿಲ್ಲ. ಆದರೆ ಆ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ, ತೇಜೋವಧೆ ಆರಂಭವಾದಾಗ ಅವರೂ ಈ ಉಪಟಳದಿಂದ ದೂರ ಸರಿಯಬೇಕಾಯಿತು. ಈಗ ಮತ್ತೆ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತುಕೊಳ್ಳುವ ಬ್ರಾಹ್ಮಣರೇತರರನ್ನು ಬಲವಂತವಾಗಿ ಎಬ್ಬಿಸಿ ಕಳುಹಿಸುವ ಕಾರ್ಯ ಸಾಂಗವಾಗಿ ಮುಂದುವರಿದೆ!”

     ಅಂದರೆ, ತಾವು ತಿಂದೇಳುವ ಎಂಜಲೆಲೆಯ ಮೇಲೆ ಜನ ಹೊರಳಾಡುತ್ತಾರೆ ಅಂತ ಗೊತ್ತಿದ್ದು ತಿನ್ನುವವರ ಮನಸ್ಥಿತಿ ಪ್ರಶ್ನಾರ್ಹವಲ್ಲವೇ?

     >>ಮಡೆಸ್ನಾನ ಮಾಡುವಾತನೆ ಇಲ್ಲವಾದಲ್ಲಿ ಆ ಪದ್ದತಿ ಎಲ್ಲಿಂದ ಬರುತ್ತೆ?

     ಮಡೆ ಸ್ನಾನ ಮಾಡುವ ಜನ ಮತ್ತು ಮಾಡುವರಿಗಾಗಿಯೇ ಅಲ್ಲಿ ಊಟ ಮಾಡುವ ಜನ.ಈ ಗುಂಪಿನಲ್ಲಿ ಯಾರು ಹೆಚ್ಚು ಜಾಗೃತರು,ತಿಳುವಳಿಕೆ ಉಳ್ಳವರು ಅನಿಸಿಕೊಂಡಿದ್ದಾರೆ ಹೇಳಿ? ಗೊತ್ತಿಲ್ಲದವರಿಗಷ್ಟೆ ತಿಳಿ ಹೇಳಲು ಸಾಧ್ಯ. ’ಎಂಜಲೆಲೆಯೇ ಸಿಗದಿದ್ದರೆ ಉರುಳಾಡುವುದಾದರೂ ಎಲ್ಲಿ’ ಅನ್ನುವುದು ನನ್ನ ಪ್ರಶ್ನೆ.

     >>ಅ ಜಾತಿಗೆ ಜನ ಬೆಂಬಲವಿಲ್ಲ, ಆಳುವ ಸರ್ಕಾರಗಳು ಆ ಜಾತಿಯ ಬಗ್ಗೆ ಕ್ಯಾರೆ ಅನ್ನುವುದಿಲ್ಲ. ನನ್ನ ಉದ್ದೇಶ ಇಷ್ಟೆ, ಅನ್ಯತಃ ದೂಷಣೆ ಬಿಟ್ಟು, ಜನರಿಗೆ ಇದರ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಯಲಿ. ಆಗ ಅದರ ಫಲಿತಾಂಶ ಆನಂದಿಸಲಿ.

     ಕೋಲು ಕೊಟ್ಟು ಹೊಡೆಸಿಕೊಳ್ಳುವ ಅಭ್ಯಾಸವೇಕೆ ಬೇಕು ಆ ಜಾತಿಗೆ.ತಾವೇ ಖುದ್ದು ಪ್ರತ್ಯೇಕ ಪಂಕ್ತಿಗೆ ನಕಾರ ಸೂಚಿಸಬಹುದಲ್ಲವೇ.ಜನರ ಬಾಯಿಗೇಕೆ ಆಹಾರವಾಗಬೇಕು?

     ಉತ್ತರ
 8. ರವಿ
  ಡಿಸೆ 13 2011

  ಮಡೆಸ್ನಾನ ನಿಲ್ಲಬೇಕಾಗಿರುವುದು ಜಾತಿಗಾಗಿ. ಯಾಕೆಂದರೆ ಒಂದು ಜಾತಿಯ ಉಂಡೆಲೆ ಮೇಲೆ ಇತರರು ಉರುಳು ಸೇವೆ ಮಾಡುವುದು ತಾರತಮ್ಯ ತೋರಿಸುತ್ತದೆ. ಅದ್ದರಿಂದ ಇದು ಮಾನವೀಯತೆಯ ವಿಷಯವೂ ಹೌದು. ಧಾರ್ಮಿಕ ವಿಷಯಗಳಲ್ಲಿ ಯಾವುದು ಅವಮಾನ – ಯಾವುದು ಅಲ್ಲ ಎಂದು ಮೂರನೇ ವ್ಯಕ್ತಿ ಎತ್ತಿ ಹೇಳುವ ಅಗತ್ಯವಿಲ್ಲ. ಬಿಬಿಸಿಗೆ ಆ ಅಧಿಕಾರವೂ ಇಲ್ಲ. ಅದರ ವರದಿಗೆ ತಲೆ ಕೆಡಿಸುವ ಅಗತ್ಯವೇ ಇಲ್ಲ. ಸ್ಥಳೀಯರಿಂದ ಗೊತ್ತಾದ ವಿಷಯವೆಂದರೆ, ಇಲ್ಲಿ ನಿಜಕ್ಕೂ ಮಡೆಸ್ನಾನ ನಿಲುಗಡೆಗೆ ಹಿಂದಿನ ಬಾಗಿಲಿಂದ ಬೆಂಬಲ ನೀಡುತ್ತಿರುವುದು ಹಿಂದೂ ಪರ ಸಂಘಟನೆಗಳ ನಾಯಕರೆ. ಯಾವುದೇ ರಾಜಕೀಯ ಪಕ್ಷಗಳು ಧಾರ್ಮಿಕ ವಿಷಯದಲ್ಲಿ ಮೂಗು ತೋರಿಸುವ ಧೈರ್ಯ ತೋರುತ್ತಿಲ್ಲ. ಇನ್ನೊಂದು ವಿಷಯವೆಂದರೆ ಕುಕ್ಕೆಯ ಸ್ಥಳ ಮಹಿಮೆ. ಹೆಚ್ಚಿನ ಜನರು ಈ ವಿಷಯದ ಬಗ್ಗೆ ಮಾತೆತ್ತುವ ಅಪಾಯವನ್ನೇ ಮಾಡುವುದಿಲ್ಲ. ಹೆಚ್ಚಾಗಿ ಸ್ಥಳೀಯರು. ಈ ಹಿಂದೆ ವಿರೋಧಿಸಿದವರ ಬಗ್ಗೆ, ನಂತರ ಆವರಿಗಾದ ಪಾಡಿನ ಕಥೆಗಳಿವೆ. ಇದು ಎಷ್ಟು ನಿಜ ಎಷ್ಟು ಕಟ್ಟುಕಥೆ ಗೊತ್ತಿಲ್ಲ. ಆದರೆ ಇಲ್ಲಿ ಮಡೆಸ್ನಾನದ ಮೇಲಿನ ನಂಬಿಕೆಗಿಂತ, ನಿಷೇಧದಿಂದಾಗುವ ಅಪಾಯದ ಹೆದರಿಕೆ ಜಾಸ್ತಿ ಇರುವಂತೆ ಅನಿಸಿತು ನನಗೆ.

  ಉತ್ತರ
  • ರವಿ
   ಡಿಸೆ 13 2011

   ನಿಷೇಧ ಕಷ್ಟ. ಬ್ರಾಹ್ಮಣರೇ ಸಾರ್ವಜನಿಕ ಪಂಕ್ತಿಯಲ್ಲಿ ಕೂತರೆ ಸಮಸ್ಯೆ ಪರಿಹಾರ.

   ಉತ್ತರ
 9. krishnappa
  ಡಿಸೆ 14 2011

  ಕನ್ನಡ ಪ್ರಭದಲ್ಲಿ ಬಂದ ಲೇಖನದ ಸತ್ಯಾಸತ್ಯತೆಯ ಬಗ್ಗೆ ‘ಸಂಪಾದಕೀಯ’ದಲ್ಲಿ ಬಂದ ಈ ಪ್ರತಿಕ್ರಿಯೆಯನ್ನು ಗಮನಿಸಬೇಕಾಗಿದೆ.
  ಕನ್ನಡ ಪ್ರಭ ಮುಖಪುಟ ನೋಡಿದಿರ?
  ‘‘ಇಲ್ಲಿ ಕೆಳವರ್ಗದವರ ಉಂಡೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ!’’ ಎಂಬ ತಲೆಬರಹದಲ್ಲಿ ಲೀಡ್ ಸುದ್ದಿಯೊಂದನ್ನು ಕನ್ನಡ ಪ್ರಭದ ಮುಖಪುಟದಲ್ಲಿ ಪ್ರಕಟಿಸಲಾಗಿದೆ. ತುರುವೇ ಕೆರೆ ಬೇಡೆರಾಯ ಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ಈ ಆಚರಣೆ!! ಹೆಡ್ಡಿಂಗ್‌ನ ಕೆಳಗಡೆ ಹೀಗೊಂದು ಕ್ಲಿಕ್ಕರ್. ಅಂದಹಾಗೆ ಇದನ್ನು ವರದಿ ಮಾಡಿದವರು ‘ಉಗಮ ಶ್ರೀನಿವಾಸ್’.
  ಇಡೀ ವರದಿ ಪರೋಕ್ಷವಾಗಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನವನ್ನು ಸಮರ್ಥಿಸಲೆಂದೇ ತಯಾರಾಗಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದರೂ ವರದಿಯ ಸತ್ಯಾಂಶದ ಕುರಿತಂತೆ ನನ್ನ ತುಮಕೂರಿನ ಗೆಳೆಯರಲ್ಲಿ ವಿಚಾರಿಸಿದೆ. ಅವರು ಹೇಳಿದ ಸತ್ಯವನ್ನು ಕೇಳಿ ದಂಗಾದೆ.
  ತುಮಕೂರಿನ ನನ್ನ ಗೆಳೆಯ ರಂಗರಾಜು ಇಡೀ ವರದಿ ಸುಳ್ಳು ಎಂದು ಒಂದೇ ವಾಕ್ಯದಲ್ಲಿ ಅಲ್ಲಗಳೆದರು. ಮತ್ತು ಅಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನೂ ಎನ್ನುವುದನ್ನು ಅವರೇ ಕೆಳಗಿನಂತೆ ವಿವರಿಸಿದರು.
  ‘‘ನಮ್ಮಲ್ಲಿ ಕೆಳವರ್ಗದವರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಉರುಳುವಂತಹ ಯಾವುದೇ ಪದ್ಧತಿಯಿಲ್ಲ. ಇದೊಂದು ಕಪೋಲಕಲ್ಪಿತ ವರದಿಯಾಗಿದೆ. ಬ್ಯಾಟರಾಯನ ದೇವಾಲಯಕ್ಕೆ ಎಲ್ಲ್ಲ ವರ್ಗದ ಭಕ್ತರಿದ್ದಾರೆ. ಪ್ರತಿ ವರ್ಷ ಮಾರ್ಚ್ 6ರಂದು ಮಘ ಮಾಸ ಅಶ್ಲೇಷ ನಕ್ಷತ್ರದಲ್ಲಿ ಇಲ್ಲಿ ಜಾತ್ರೆ ನಡೆಯಲಿದ್ದು, ರಥೋತ್ಸವದ ಹಿಂದಿನ ದಿನ ದೇವಾಲಯದ ಒಕ್ಕಲುತನ ಬ್ರಾಹ್ಮಣರು ಸೇರಿ ತಮ್ಮ ತಮ್ಮ ಲ್ಲಿಯೇ ಮಡೆಸ್ನಾನದಂತಹ ಸಂಪ್ರದಾಯ ವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮಡೆ ಸ್ನಾನಕ್ಕೆ ಬೇರೆ ವರ್ಗಗಳಿಗೆ ಅವಕಾಶ ವಿದ್ದರೂ ಸಂಪ್ರದಾಯವನ್ನು ಹಾಳುಗೆಡವಿ ವರ್ಗ ಸಂಘರ್ಷಕ್ಕೆ ಅವಕಾಶ ಕಲ್ಪಿಸಬಾರದು ಎಂಬ ಉದ್ದೇಶದಿಂದ ಇದುವರೆಗೂ ಹಿಂದುಳಿದ ವರ್ಗದ ಜನ ಮಡೆ ಸ್ನಾನದಂತಹ ಆಚರಣೆಯಿಂದ ದೂರವೇ ಉಳಿದಿದ್ದಾರೆ. ರಥೋತ್ಸವದ ದಿನ ತೇರು ಎಳೆದ ನಂತರ ಎಲ್ಲರೂ ಒಟ್ಟಿಗೆ ಊಟ ಮಾಡಲು ಅವಕಾಶವಿದೆ ಎಂದು ದೇವಾಲ ಯದ ಅರ್ಚಕ ಶ್ರೀನಿವಾಸ್ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದ ವರದಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇವಾಲಯದ ಕಮಿಟಿಯಲ್ಲಿರುವ ಹಿಂದುಳಿದ ವರ್ಗದ ನಿರ್ದೇಶಕರೊಬ್ಬರು, ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗಗಳ ನಡುವೆ ಇರುವ ಸೌಹಾದರ್ತೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ವರದಿ ಮಾಡಲಾಗಿದೆ. ಸುಮಾರು 400 ವರ್ಷಗಳ ಹಿಂದಿನಿಂದಲೂ ಈ ಸಂಪ್ರದಾಯವನ್ನು ಬಹಳ ಅಚ್ಚುಕಟ್ಟಾಗಿ ಸಮಾಜದ ಸ್ವಾಸ್ಥ ಹಾಳಾಗದಂತೆ ನಡೆಸಿಕೊಂಡು ಬರಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಮಡೆಸ್ನಾನಕ್ಕೂ, ತುರುವೇಕೆರೆಯ ಬ್ಯಾಟರಾಯನ ದೇವಾಲಯದಲ್ಲಿ ನಡೆಯುವ ಮಡೆಸ್ನಾನಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಇದನ್ನು ವರದಿ ಪ್ರಕಟಿಸುವ ಮುನ್ನ ಯೋಚಿಸಬೇಕಿತ್ತು ಎಂದಿದ್ದಾರೆ.
  ರಥೋತ್ಸವದ ಹಿಂದಿನ ದಿನ ರಾತ್ರಿ ಬ್ರಾಹ್ಮಣ ಜಾತಿಯಲ್ಲಿಯೇ ಹುಟ್ಟಿದ ರೋಗಿಗಳು, ಮಕ್ಕಳಾಗದವರು ಸೇರಿದಂತೆ ಕುಟುಂಬದಲ್ಲಿ ಸಮಸ್ಯೆಯನ್ನು ಹೊಂದಿರುವಂತಹವರು ಬ್ರಾಹ್ಮಣರು ಊಟ ಮಾಡಿದ ಎಂಜಲೆಲೆಯನ್ನು ಎತ್ತಿಹಾಕಿ ನಂತರ ಉರುಳು ಸೇವೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಇನ್ಯಾವುದೇ ಜಾತಿಗಳ ಜನರಿಗೆ ಅಲ್ಲಿ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ. ಆದರೆ ಇದನ್ನೇ ಕೆಳ ವರ್ಗದವರು ಉಂಡ ಎಲೆಯ ಮೇಲೆ ಬ್ರಾಹ್ಮಣ ಮಡೆಸ್ನಾನ ಎಂದು ಬರೆಯುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ.
  -ಬಿ.ಎಂ.ಬಶೀರ್
  December 5, 2011 7:18 AM

  ಉತ್ತರ
  • Kumar
   ಡಿಸೆ 14 2011

   krishnappa> ಕನ್ನಡ ಪ್ರಭದಲ್ಲಿ ಬಂದ ಲೇಖನದ ಸತ್ಯಾಸತ್ಯತೆಯ ಬಗ್ಗೆ ‘ಸಂಪಾದಕೀಯ’ದಲ್ಲಿ ಬಂದ ಈ ಪ್ರತಿಕ್ರಿಯೆಯನ್ನು ಗಮನಿಸಬೇಕಾಗಿದೆ.
   ಕನ್ನಡಪ್ರಭದ ವರದಿಯ ಸತ್ಯಾಸತ್ಯತೆಯ ಕುರಿತು ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದಗಳು.
   ಆದರೆ, ’ಸಂಪಾದಕೀಯ’ದ ಪ್ರಾಮಾಣಿಕತೆಯ ಕುರಿತಾಗಿಯೇ ಅನುಮಾನಗಳಿವೆ.

   ಅದೇನೇ ಇರಲಿ, ಇಲ್ಲಿರುವ ಮೂಲ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ಮತ್ತೊಮ್ಮೆ ಓದಿ ನೋಡಿ – ಇಲ್ಲಿ ಯಾರೂ ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುತ್ತಿಲ್ಲ.
   ಅದರ ಹಿಂದಿರುವ ಕಾರಣಗಳು ಏನೇ ಇರಲಿ, ಅದೊಂದು ಅಸಹ್ಯದ ಆಚರಣೆ, ಎಂದೇ ಎಲ್ಲರೂ ಇಲ್ಲಿ ತಿಳಿಸಿದ್ದಾರೆ.
   ಆದರೆ, ಇದರಲ್ಲಿ ಜಾತೀಯತೆಯ ವಾಸನೆಯನ್ನು ಮೂಲ ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ ಮತ್ತು ಅದನ್ನು ಹೆಚ್ಚಿನವರು ಒಪ್ಪುತ್ತಿಲ್ಲ.
   ಈಗ ನೀವು ’ಸಂಪಾದಕೀಯ’ದ ವಿಶ್ಲೇಷಣೆಯನ್ನೂ ಹಾಕಿದ್ದೀರಿ – ಅದರಲ್ಲೂ ಕೂಡಾ ಬ್ರಾಹ್ಮಣರು ಎಂಜಲೆಲೆಯ ಮೇಲೆ ಉರುಳುವುದಿಲ್ಲ ಎಂದು ತಿಳಿಸಿಲ್ಲ.
   ಈ ಮಡೆಸ್ನಾನದ ಎಂಜಲೆಲೆಯ ಮೇಲಿನ ಉರುಳಾಟ ಜಾತೀಯತೆಯ ಕಾರಣದಿಂದ ಆಗಿದ್ದಿದ್ದರೆ, ತುರುವೇಕೆರೆಯಲ್ಲೂ ಬ್ರಾಹ್ಮಣರ ಎಂಜಲೆಲೆಯ ಮೇಲೆ ಅಬ್ರಾಹ್ಮಣರು ಉರುಳಾಡುವಂತೆ ಮಾಡಬೇಕಿತ್ತು – ಆದರೆ, ಹಾಗೇನೂ ಆಗಿರುವುದು ಕಾಣುತ್ತಿಲ್ಲ.
   ಮತ್ತೊಂದು ಜಾತಿಯನ್ನು ಅಪಮಾನಿಸಲೆಂದೇ ಈ ಸಂಪ್ರದಾಯ ಹುಟ್ಟಿಕೊಂಡಿದ್ದರೆ, ತುರುವೇಕೆರೆಯಲ್ಲಿ ಏಕೆ ತಮ್ಮ ಜಾತಿಯವರನ್ನೇ ಅಪಮಾನಗೊಳಿಸಲು ಯತ್ನಿಸಿದ್ದಾರೆ?

   ಮಡೆಸ್ನಾನವು ನಾಗರೀಕ ಸಮಾಜವೊಂದರ ನಡವಳಿಕೆಯಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಹುದು.
   ಆದರೆ, ಈ ವಿಷಯವನ್ನು ಜಾತಿಸಂಘರ್ಷಕ್ಕೆ ಉಪಯೋಗಿಸಿಕೊಳ್ಳುವ ಪ್ರಯತ್ನವಿದ್ದರೆ, ಅದಕ್ಕೆ ನನ್ನ ಪ್ರತಿಭಟನೆ ಇದೆ.

   ಉತ್ತರ
   • krishnappa
    ಡಿಸೆ 14 2011

    ಸಂಪಾದಕೀಯದಲ್ಲಿ ಬಂದ ಪ್ರತಿಕ್ರಿಯೆ ಸತ್ಯವೋ ಅಥವಾ ಕನ್ನಡ ಪ್ರಭದ ವರದಿ ಸತ್ಯವೋ ಎಂಬ ಬಗ್ಗೆ ಬೇರೆ ಮಾಧ್ಯಮಗಳು ಬೆಳಕು ಚೆಲ್ಲಬೇಕಾಗಿದೆ ಆದರೆ ಈ ಬಗ್ಗೆ ಯಾವ ಮಾಧ್ಯಮಗಳೂ ಬೆಳಕು ಚೆಲ್ಲಲಿಲ್ಲ. ಈ ಬಗ್ಗೆ ಟಿವಿ ಮಾಧ್ಯಮದವರು ಬೆಳಕು ಚೆಲ್ಲಲು ಸುಲಭ

    ಉತ್ತರ
   • >>ಇದರಲ್ಲಿ ಜಾತೀಯತೆಯ ವಾಸನೆಯನ್ನು ಮೂಲ ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ ಮತ್ತು ಅದನ್ನು ಹೆಚ್ಚಿನವರು ಒಪ್ಪುತ್ತಿಲ್ಲ.

    ಹೌದೇ!? ಅದೆಲ್ಲಿ ಅಂತ ದಯವಿಟ್ಟು ಕೋಟ್ ಮಾಡಬಹುದಾ? ನಾನು ದೇವಸ್ಥಾನಗಳಲ್ಲೇಕೆ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಅಂತ ಮೂಲ ಲೇಖನ ಮತ್ತು ಇಲ್ಲೂ ಸಹ ಪ್ರಶ್ನಿಸಿದ್ದೇನೆ.ನನಗೇನು ಅದರಲ್ಲಿ ತಪ್ಪು ಕಾಣಿಸುತ್ತಿಲ್ಲ. ಆ ಬಗ್ಗೆ ಇಲ್ಲಿ ಪ್ರತಿಕ್ರಿಯಿಸಿದವರ್ಯಾರು ತಮ್ಮ ನಿಲುವು ಹೇಳಿಕೊಂಡಿಲ್ಲ.

    ಇದೆಲ್ಲ ಬದಲಾಗಲು ಸಮಯ ಬೇಕು ಅನ್ನುವುದಾದರೆ ಅದಿನ್ನೆಷ್ಟು ಸಮಯ ಬೇಖು, ಸ್ವಾತಂತ್ರ್ಯ ಬಂದು ೬೦ ವರ್ಷಗಳು ಕಳೆದಾಯಿತು, ಇನ್ನು ಎಷ್ಟು ವರ್ಷಗಳು ಬೇಕಾಗಬಹುದು ಜೊತೆಗೆ ಕುಳಿತು ಊಟ ಮಾಡಲು?

    ಈ ಎಂಜಲೆಲೆಯ ಮೇಲೆ ಬ್ರಾಹ್ಮಣರೋ ಅಥವಾ ಇನ್ಯಾರೋ ಉರುಳಿದರು ಅದೂ ಅಶಯವೇ ಅಂತಲೇ ನಾನು ಹೇಳಿರುವುದು,ನಿಮಗದೆಲ್ಲಿ ಜಾತೀಯತೆಯ ವಾಸನೆ ಬಡಿಯಿತು?

    ಈ ಅನಿಷ್ಟ ಪದ್ಧತಿಗಳು ಏಕ್ಕೆ,ಹೇಗೆ ಹುಟ್ಟಿಕೊಂಡವು ಅಂತ ಕೆದಕುವುದರ ಬದಲು ಹೇಗೆ ಇದಕ್ಕೆ ಅಂತ್ಯ ಹಾಡಬಹುದು ಅನ್ನುವುದು ಮುಖ್ಯವಾಗುತ್ತದೆಯಲ್ಲವೇ? ನನ್ನ ಪ್ರಶ್ನೆ ಜಾತಿಯದ್ದಾಗಿದ್ದರೆ ಲೇಖನದ ಶೀರ್ಷಿಕೆಯಲ್ಲಿ ’ಮಾನವೀಯತೆ’ ಅನ್ನುವ ಪದವೂ ಬರುತ್ತಿರಲಿಲ್ಲ.

    ಉತ್ತರ
  • ಗಿರೀಶ್
   ಡಿಸೆ 15 2011

   ಬಶೀರ್ ಅವರ ಮತದಲ್ಲಿ ನಡೆಯುವ ಸಾಮಾಜಿಕ ಅಪದ್ದಗಳನ್ನು ಇದೇ ರೀತಿ ವಿರೋದಿಸಿದ್ದಾರೆಯೆ? ಬುರ್ಖಾ ಹಾಕುವ ಮಹಿಳೆಗೆ ಸ್ವಾತಂತ್ರ ಕೊಡಿಸಲು ಅವರು ಮುಸ್ಲಿಂರನ್ನು ಎದುರು ಹಾಕಿಕೊಳ್ಳಲಿ ಮೊದಲು. ನಂತರ ಬೇರೆಯವರಿಗೆ ಹೇಳಲು ಬರಲಿ. ಮೊನ್ನೆ ಬಕ್ರೀದ್ ದಿನದಂದು ಸಾರ್ವಜನಿಕವಾಗಿ ಹಿಂಸಿಸಿಕೊಳ್ಳುತ್ತಿದ್ದ ಯುವಕರನ್ನು ತಡೆಯಲಿಲ್ಲವೇಕೆ? ಸಾರ್ವಜನಿಕವಾಗಿ ಈ ರೀತಿಯ ಹಿಂಸೆಯ ಪ್ರದರ್ಶನ ನಿಷೇದಿಸಿದೆಯಲ್ಲವೆ?

   ನಾನು ಸ್ವತಃ ತುರುವೇಕೆರೆಯವನು ಅಲ್ಲಿ ಹಲವಾರು ವರ್ಶಗಳಿಂದ ಆ ಪದ್ದತಿ ನಡೆದು ಬಂದಿದೆ. ವಿದೇಶಗಳಿಂದ ಬರುವ ವೈದ್ಯ ತಂತ್ರಜ್ಞಾರೂ ಕೂಡ ಮಡೆ ಹೊರಳುತ್ತಾರೆ.

   ಉತ್ತರ
   • Balachandra
    ಡಿಸೆ 15 2011

    ಸರಿಯಾಗಿ ಹೇಳಿದಿರಿ ಗಿರೀಶ್. ಸಂಪಾದಕೀಯದಲ್ಲಿ ಬಹಳಷ್ಟು ಸಲ ನಾನು ಇದನ್ನು ಗಮನಿಸಿದ್ದೇನೆ. ಕಪಟ ಜ್ಯೋತಿಷಿಗಳ ವಿರುದ್ಧ, ಮಡೆಸ್ನಾನದ ವಿರುದ್ಧ, ಮಾರುದ್ದ ಬರೆಯುವವರು ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯದ ಬಗ್ಗಾಗಲೀ ಅಥವಾ ಮೊಹರಂ, ಬಕ್ರೀದ್ ಸಮಯದಲ್ಲಿ ಆಚರಿಸುವ ಅನಿಷ್ಟ ಪದ್ದತಿಗಳ ಬಗ್ಗೆ ಜಾಣ ಮೌನವನ್ನು ವಹಿಸುತ್ತಾರೆ. ಇನ್ನು ‘ಪ್ರಾಣಿ ಬಲಿ’ಯ ಕುರಿತು ಸಂವಾದಕ್ಕೆ ವೇದಿಕೆ ಕಲ್ಪಿಸಿಕೊಟ್ಟು, ಬಕ್ರೀದ್ ಸಮಯದಲ್ಲಿ ನಡೆಯುವ ಪ್ರಾಣಿಬಲಿಯ ಬಗೆಗೆ ಕಿಂಚಿತ್ತೂ ಮಾತನಾಡರಾರರು. ಬಲಪಂಥೀಯ ಸಂಘಟನೆಗಳ(ಹಿಂದೂ ಫ್ಯಾಸಿಸ್ಟ್ ಗಳು ಎಂದೇ ಉಲ್ಲೆಕಿಸುವವರು) ಬಗೆಗೆ ಯಾವಾಗಲೂ ಕೆಂಡ ಕಾರುವ ಅವರು Islam terrorism ಬಂದಾಗ ಅದು ಅಮೆರಿಕಾದ ಚಿತಾವಣೆಯಿಂದ ಎಂದು ಅಮೇರಿಕಾದ ಮೇಲೆ ಗೂಬೆ ಕೂರಿಸುತ್ತಾರೆ.

    ಉತ್ತರ
    • ಗಿರೀಶ್
     ಡಿಸೆ 15 2011

     ಸಂಪಾದಕೀಯ ಸುದ್ದಿಮಾತು ಎಂಬ ಅನಾಮಧೇಯ ಬ್ಲಾಗುಗಳು ಇರುವುದೇ ಹಿಂದೂಗಳನ್ನು ಹಣಿಯಲು ಹಳಿಯಲು. ಪ್ರತಿಕ್ರಿಯೆಗಳನ್ನು ಮಾಡರೇಟ್ ಮಾಡುತ್ತಾರೆಂದರೆ ಅಲ್ಲಿಗೆ ಮುಗಿಯಿತು. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇರುವುದಿಲ್ಲ. ಅಂತಹವನ್ನು ಗಮನಿಸುವುದನ್ನು ನಿಲ್ಲಿಸುವುದು ಒಳಿತು.

     ಉತ್ತರ
 10. ಗಿರೀಶ್
  ಡಿಸೆ 15 2011

  ಎಂಜಲೆಲೆಯ ಮೇಲೆ ಹೊರಳಿ ಎಂದು ಯಾರೂ ಆಹ್ವಾನಿಸಿಲ್ಲ. ಯಾವುದೋ ಕಾರಣಕ್ಕೆ ನಂಬಿಕೆಯೊಂದು ಬೆಳೆದು ಬಂದಿದೆ. ತಿಳಿಹೇಳಿ ನಿಲ್ಲಿಸಲಿ. ಇಂದು ಕಸದಬುಟ್ಟಿಯ ಬಳಿ ಕಸ ಆಯುವ ಜನಗಳಿದ್ದಾರೆ. ಅಲ್ಲಿ ಎಂಜಲೆಲೆ ಇಲ್ಲವೆ? ಅದು ಅಸಹ್ಯವಲ್ಲವೆ? ಅವರಿಗೆ ಪುನರ್ವಸತಿ ಕಲ್ಪಿಸಲು ಹೋರಾಡಲಿ, ಹೊರಳುವವರಿಗಿಂತಲೂ ಹೆಚ್ಚು ಜನ ಇಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ. ಆದರೆ ಅದು ಇವರು ಮಾಡುವುದಿಲ್ಲ ಏಕೆಂದರೆ ಅದಕ್ಕೆ ಸೇವಾ ಮನೋಭಾವ ಬೇಕಾಗುತ್ತದೆ. ಹಿಂದುಗಳ ಆಚರಣೆಗಳನ್ನು ಒಂದೊಂದೆ ನಿಲ್ಲಿಸುವುದು ಇವರ ಗುರಿ ಏಕೆಂದರೆ ಹಿಂದುತ್ವ ನಿಂತಿರುವುದೆ ಆಚರಣೆಗಳ ಮೇಲೆ. ಆಚರಣೆ ಇಲ್ಲದಿದ್ದರೆ ಹಿಂದೂ ಇಲ್ಲ. ಅವನಿಲ್ಲದಿದ್ದರೆ ಭಾರತವನ್ನು ಆಕ್ರಮಿಸುವುದು ಅತ್ಯಂತ ಸರಳ ಕೆಲಸ.

  ಉತ್ತರ
  • ರವಿ ಕುಮಾರ್ ಜಿ ಬಿ
   ಡಿಸೆ 15 2011

   ಸರಿಯಾಗಿ ಹೇಳಿದಿರಿ ಗಿರೀಶ್ ,

   ಈ ವಿಷಯ ಯಾರಿಗೂ ತಲೆಗೇ ಹೋಗುತ್ತಿಲ್ಲ ಆಶ್ಚರ್ಯ ! ಎಲ್ಲರೂ ಅನಿಷ್ಟ ಅನಿಷ್ಟ ಅನ್ನುತ್ತಿದ್ದಾರೆಯೇ ಹೊರತು ,ತಿಳಿಹೇಳಲು ಯಾರೂ ತಯಾರಿಲ್ಲ ,ಯಾಕೆಂದರೆ ಪ್ರಚಾರ ಸಿಗೊದಿಲ್ಲವಲ್ಲ! ಇನ್ನು ಈ ಲೇಖನದಲ್ಲೇ ನೋಡಿ ರಾಕೇಶ್ ರವರು ಕೂಡ ತಿಳುವಳಿಕೆ ನೀಡುವಕುರಿತು ಬಾಯಿ ಬಿಚ್ಚೋದಿಲ್ಲ ! ಇನ್ನು ತಿಳುವಳಿಕೆ ನೀಡುವವರು ಬುದ್ದಿವಂತಿಕೆ ಉಪಯೋಗಿಸಬೇಕು(ಆಚರಿಸುವವರಿಗೆ ಹರ್ಟ್ ಆಗದಂತೆ ಮಾಡಬೇಕು) ಇಲ್ಲದಿದ್ದರೆ ನರೇಂದ್ರ ನಾಯಕ್ ಗೆ ನಾಯಿ ಮೂರ್ತಿಗೆ ಹಾಲು ಕುಡಿಸಲು ಹೋದಾಗ ಏಟು ಬಿದ್ದಂತೆ ಏಟು ಬೀಳೋದರಲ್ಲಿ ಸಂಶಯವಿಲ್ಲ ! ಇಲ್ಲದಿದ್ದರೆ ಮದ್ಯಪಾನ ನಿಷೇಧ ಮಾಡಿ ಕಳ್ಳಭಟ್ಟಿ ಹೆಚ್ಚಾದಂತೆ ಆಗುತ್ತದೆಯೇ ಹೊರತು ಬೇರೇನಿಲ್ಲ ! ಸಮಯ ತೆಗೆದುಕೊಳ್ಳತ್ತೆ ತೆಗೆದುಕೊಳ್ಳಲಿ ಬಿಡಿ , ಈಗೇನೂ ಮಡೆಸ್ನಾನ ಮಾಡೋದರಿಂದ ಯಾರಿಗೂ ತೊಂದರೆ ಆಗಿಲ್ಲವಲ್ಲ! ಸಾಂಕ್ರಾಮಿಕ ರೋಗಗಳು ಬಂದ ನಿದರ್ಶನವಂತೂ ಇಲ್ಲವೇ ಇಲ್ಲ ! ಭೈರಪ್ಪನವರು ಹೇಳಿದಂತೆ ಅದು ಅವರವರ ನಂಬಿಕೆ , ಸೈಕೊಲೊಜಿ ಯಂತೆ ಏನೋ ಕೆಲವರಿಗೆ ಉಪಯೋಗ ಆಗಿರಲೂ ಬಹುದು ಕೂಡ ,ತೊಂದರೆಯಂತೂ ಆಗಿಲ್ಲವಲ್ಲ? ಹಾಗಾಗಿ ನಿಷೇಧಿಸುವ ಬದಲು ತಿಳುವಳಿಕೆ ಕೊಡುವ ಕೆಲಸ ಆಗಲಿ , ಇಲ್ಲದಿದ್ದರೆ ಹರಕೆ ಹೊತ್ತವರು ಮಾನಸಿಕವಾಗಿ ಕುಗ್ಗುವ ಅಪಾಯವಿದೆ !

   ಉತ್ತರ
   • ರವಿ,ಗಿರೀಶ್

    ಮೇಲೆ ಭಾಸ್ಕರ್ ಅವರಿಗೆ ಕೊಟ್ಟ ಉತ್ತರವೇ ನಿಮ್ಮಿಬ್ಬರಿಗೂ ನೀಡಲಿಚ್ಚಿಸುತ್ತೇನೆ. ಅಸಲಿಗೆ ತಿಳುವಳಿಕೆ ನೀಡಬೇಕಾಗಿರುವುದು ಯಾರಿಗೆ? ತಾವು ತಿಂದು ಎದ್ದ ಎಲೆಯ ಮೇಲೆ ಜನ ಉರುಳಾಡುತ್ತಾರೆ ಅಂತ ಗೊತ್ತಿದ್ದೂ ತಿನ್ನುವ ಜಾಗೃತ,ವಿದ್ಯಾವಂತ ಬ್ರಾಹ್ಮಣರಿಗೋ ಅಥವಾ ದೇವರ ಹೆಸರಿನಲ್ಲಿ ದೇವರೆ ನಾಚುವಂತೆ, ಪಾಪ ಪ್ರಜ್ನೆಯ ಕೂಪದಲ್ಲಿ ಬಿದ್ದು ಉರುಳಾಡುವ ಜಾಗೃತರಲ್ಲದ ಮಲೆಕುಡಿಯರು ಸೇರಿದಂತೆ ಇತರೇ ಜನರಿಗೋ?

    >>ಹಿಂದುಗಳ ಆಚರಣೆಗಳನ್ನು ಒಂದೊಂದೆ ನಿಲ್ಲಿಸುವುದು ಇವರ ಗುರಿ ಏಕೆಂದರೆ ಹಿಂದುತ್ವ ನಿಂತಿರುವುದೆ ಆಚರಣೆಗಳ ಮೇಲೆ. ಆಚರಣೆ ಇಲ್ಲದಿದ್ದರೆ ಹಿಂದೂ ಇಲ್ಲ. ಅವನಿಲ್ಲದಿದ್ದರೆ ಭಾರತವನ್ನು ಆಕ್ರಮಿಸುವುದು ಅತ್ಯಂತ ಸರಳ ಕೆಲಸ.

    ಹಿಂದೂ ಧರ್ಮದ ಆಚರಣೆ ಅಂತೆಲ್ಲ ’ಮಡೆ ಸ್ನಾನ’ ಅನ್ನುವ ವಿಕೃತಿಯನ್ನ ಸೇರಿಸಿ ನನ್ನ ಧರ್ಮಕ್ಕೆ ಅಪಮಾನ ಮಾಡದಿರಿ ಗಿರೀಶ್.ಈಗಾಗಲೇ ನಮ್ಮನ್ನ ಕಾಡು ಜನರಂತೆ ಬಿಂಬಿಸಿರುವ ಪರಿಯೇ ಸಾಕಾಗಿದೆ,ಇನ್ನೂ ಇಂತ ವಿಕೃತಿಗಳಿಗೆಲ್ಲ ಧರ್ಮದ ಟ್ಯಾಗ್ ಅಂಟಿಸುವುದು ನಮ್ಮ ತಲೆಯ ಮೇಲೆ ನಾವು ಮಣ್ಣು ಹಾಕಿಕೊಂಡಂತೆ ಅನ್ನುವುದು ಯಾಕೆ ಅರ್ಥವಾಗುತ್ತಿಲ್ಲ!?

    >>ಈ ವಿಷಯ ಯಾರಿಗೂ ತಲೆಗೇ ಹೋಗುತ್ತಿಲ್ಲ ಆಶ್ಚರ್ಯ !
    ರವಿ, ಬಿಬಿಸಿ ಲಿಂಕ್ ನೀವು ಕೊಟ್ಟಿದ್ದು ನೋಡಿ ನಿಮಗೆ ಇಂತ ’ಆಚರಣೆ(?)ಗಳಿಂದ ಯಾರಿಗೆ ಲಾಭ-ನಷ್ಟ ಅನ್ನುವ ಅರಿವಾಗಿರಬೇಕು ಅಂದುಕೊಂಡೆ.

    ಉತ್ತರ
 11. ವಿಜಯ್ ಪೈ
  ಡಿಸೆ 15 2011

  ರಾಕೇಶ್..

  ನಿಮ್ಮ ಎರಡೂ ಲೇಖನಗಳು ಮತ್ತು ಇಲ್ಲಿರುವ ಪ್ರತಿಕ್ರಿಯೆಗಳು, ವಿವಿಧ ಪತ್ತಿಕೆಗಳಲ್ಲಿ ಮಡೆಸ್ನಾನದ ಕುರಿತು ಬಂದಿರುವ ಪ್ರತಿಕ್ರಿಯೆಗಳನ್ನು ಕೂಡ ಗಮನಿಸಿದ್ದೇನೆ. ಒಟ್ಟಾರೆ ವಿಷಯವನ್ನು ನೋಡಬೇಕಾಗಿರುವುದು ಮಾನವೀಯತೆ, ಮಾನವ ಘನತೆಯ ದೃಷ್ಟಿಕೋನದಿಂದ..ಜಾತಿಯ ಹಿನ್ನಲೆಯಿಂದಲ್ಲ ..ಅದಕ್ಕಾಗಿ ಮಡೆಸ್ನಾನದ ನಿಷೇಧ ಕಾನೂನಿನಂದಾದರೂ ಆಗಬೇಕು ಎಂಬುದು ನಿಮ್ಮ ಅನಿಸಿಕೆಯಾಗಿದೆ. ಇದನ್ನು ಬಹುಜನರು ಅಲ್ಲಗೆಳೆಯಲಾರರು.

  ಆದರೆ ನೀವು ದಿನಪತ್ರಿಕೆಗಳಲ್ಲಿ ನಮ್ಮ ಪ್ರಾಜ್ಞ ‘ಬುದ್ದಿ’ಜೀವಿಗಳ ಪ್ರತಿಕ್ರಿಯೆಗಳನ್ನು ನೀವು ಗಮನಿಸಿರಬಹುದು. ವಿಶೇಷವಾಗಿ ಪ್ರಜಾವಾಣಿಯಲ್ಲಿ ನಾಗತಿಹಳ್ಳಿ, ಮೊಗಳ್ಳಿ, ಜಿ.ಕೆ.ಗೋ ಪ್ರತಿಕ್ರಿಯೆಗಳನ್ನು ಓದಿ. ಅವು ಮಾನವ ಘನತೆಯ ಮುಸುಕಿನಲ್ಲಿ ಒಂದು ಜಾತಿಯನ್ನು ಬಡಿಯುವವೇ ಆಗಿವೆ. ಓದಿದವರಿಗೆ ಒಂದು ಜಾತಿಯವರು ಇನ್ನೊಂದು ಜಾತಿಯವರನ್ನ ಒತ್ತಾಯದಿಂದ ಎಂಜಲೆಲೆಯಲ್ಲಿ ಉರುಳಾಡಿಸುತ್ತಾರೆ , ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾರೆ ಎಂಬಂತೆ ಇವೆ. ಈ ಥರಹದವರಿಗೆ ಮತ್ತು ಮೊನ್ನೆ ಕುಕ್ಕೆಗೆ ಹೋಗಿ ಹೊಡೆತ ತಿಂದ ಶಿವರಾಂ ಅಂತವರಿಗೆ ಬೆಂಕಿ ಆರಿಸುವದಕ್ಕಿಂತ, ದೊಡ್ಡದು ಮಾಡುವಲ್ಲೇ ಉತ್ಸುಕತೆ. ನಮ್ಮ ಮೊಗಳ್ಳಿ ಗಣೇಶ ಸಾಹೇಬರಿಗೆ ಎಂಜಲು ಮತ್ತು ಮಲ ಒಂದೇ ಅಂತೆ. ಇಷ್ಟೆಲ್ಲ ಹೇಳುವ ಇವರು ಮಲ ಹೊರುವ ಪದ್ದತಿ ರದ್ದು ಮಾಡುವಲ್ಲಿ (ಇವತ್ತು ಇಂಥವೆಲ್ಲ ಕೆಲಸಕ್ಕೆ ಯಂತ್ರಗಳೇ ಇವೆ) , ಆ ಜನರಿಗೆ ತಿಳುವಳಿಕೆ ಕೊಟ್ಟು ಮಲಸುರಿದುಕೊಂಡು ಪ್ರತಿಭಟನೆ ಮೊದಲಾದವುಗಳನ್ನು ತಡೆಯುವಲ್ಲಿ ಹೋರಾಟ ಮಾಡುವುದಿಲ್ಲ ಏಕೊ? ಯಾಕೆಂದರೆ ಆ ಜನ ಹೊರುವ ಮಲ ಬ್ರಾಹ್ಮಣರೊಂದೆಂದೆ ಅಲ್ಲ..ಇವರದ್ದೂ ಕೂಡ!..ಅದಕ್ಕೆ ಬಾಯಿಯಲ್ಲಿ ಬೆಣೆ!

  ಮಾನವ ಘನತೆ ಎಂಬುದು ಧರ್ಮಾತೀತ, ಜಾತ್ಯಾತೀತ, ಲಿಂಗಾತೀತ ಎಂಬುದು ನನ್ನನಿಸಿಕೆ . ಸರ್ಕಾರ ಈ ನೆಲೆಯಲ್ಲಿ ಯಾವುದೇ ಆಚರಣೆಯ ಮೇಲೆ ನಿಷೇಧ ಹೇರಬೇಕಾದರೆ ಅಮಾನವೀಯವಾಗಿ ಕಾಣುವ ಎಲ್ಲ ಆಚರಣೆಗಳ ಮೇಲೂ ಒಂದೇ ಕಾನೂನಿನಿಂದ ನಿಷೇಧ ಹೇರಬೇಕು. ಅದಕ್ಕಿಂತ ಮೊದಲು ಈ ‘ಘನತೆ’ ಯನ್ನು ಹೇಗೆ ಅಳೆಯುವುದು ಎಂಬುದನ್ನು ನಿರ್ಧರಿಸಬೇಕು. ಉದಾ: ನನಗೆ ಮಡೆಸ್ನಾನ, ಮಲ ಸುರಿದುಕೊಳ್ಳುವುದು, ಬಕ್ರಿದ ಅಥವಾ ಉಳಿದ ಹಬ್ಬಗಳ ಪ್ರಾಣಿ ಬಲಿ, ಸ್ಲಟ್ ವಾಕ್ ಎಲ್ಲ ಅಮಾನವೀಯ/ಮಾನವ ಘನತೆಯ ವಿರುದ್ಧವೆ. ನಮ್ಮ ಚಿಂತಕರಿಗೆ ಹೀಗನಿಸುತ್ತಾ? ಇಲ್ಲವಷ್ಟೆ? ಅಸಹಾಯಕ ಪ್ರತಿಭಟನೆ, ಜೀವನ ಪದ್ಧತಿ, ಮಹಿಳಾ ಸ್ವಾತಂತ್ರ್ಯ ಮುಂತಾಗಿ ಕಾರಣ ಕೊಟ್ಟು ‘ಸಾಂವಿಧಾನಿಕ’ ಹೋರಾಟ ಪ್ರಾರಂಭಿಸುತ್ತಾರೆ.

  ಉತ್ತರ
  • ನಮ್ಮ ಸಮಾಜದ ಸಮಸ್ಯೆ ಇರುವುದೇ ಇಲ್ಲಿ ವಿಜಯ್.ಎರಡೂ ಗುಂಪಿನ ಸುದ್ದಿ ಜೀವಿಗಳಿಗೆ ಸಮಸ್ಯೆಗಳ ಪರಿಹಾರ ಬೇಕಿಲ್ಲ.ಪರಿಹಾರ ಸಿಕ್ಕರೆ ಅವ್ರಿಗೆಲ್ಲಿಂದ ಸಿಗಬೇಕು ಪ್ರಚಾರ…!
   ಒಂದಂತೂ ನಿಜ ’ಮಡೆ ಸ್ನಾನ’ದಂತ ಆಚರಣೆ(?)ಗಳು ಮುಂದುವರೆದರೆ ಮತಾಂತರ ಮಾಡುವ ಜನಕ್ಕೆ ಕೋಲು ಕೊಟ್ಟು ಬಾಗಿ ನಿಂತು ಬೆನ್ನಿಗೊಂದು ಪೆಟ್ಟು ಬಿದ್ದಾಗ ಚೀರಾಡಿದಂತಾಗುತ್ತದೆ ಅನ್ನುವುದು ನನ್ನ ಅನಿಸಿಕೆ.

   ಇಬ್ಬರ ಜಗಳ ಮೂರನೆಯವನಿಗೆ ಲಾಭ… ಈ ಬಗ್ಗೆ ಯೋಚಿಸಬೇಕು ಅಲ್ಲವೇ?

   ಉತ್ತರ
   • ಗಿರೀಶ್
    ಡಿಸೆ 16 2011

    ಇಲ್ಲಿ ತಾವು ಮೂರನೆಯವರೆ ರಾಕೇಶ್, ಏಕೆಂದರೆ ನೀವು ಅಲ್ಲಿ ಹೊರಳಿಲ್ಲ. ಹೊರಳುವವರು ಯಾರು ಗಲಾಟೆ ಮಾಡಿಲ್ಲ. ಹೊರಳುವುದನ್ನು ನಿಲ್ಲಿಸಲಿ ಬಿಡಿ. ಯಾರೂ ಯಾರನ್ನೂ ಬಲವಂತವಾಗಿ ಹೊರಳಲು ಹೇಳಿಲ್ಲವಲ್ಲ. ಬ್ರಾಹ್ಮಣರು ಊಟ ಮಾಡುವುದೇ ತಪ್ಪು ಎಂದು ತಾವು ಭಾವಿಸದ್ದಂತಿದೆ ತಮ್ಮ ಮಾತು. ಬ್ರಾಹ್ಮಣರು ದೇವಸ್ತಾನಕ್ಕೆ ಬರಬಾರದು ಊಟ ಮಾಡಬಾರದು ಎನ್ನುವುದು ತಮ್ಮ ಆದೇಶವೆ? ಹೊರಳದಂತೆ ತಡೆಯಿರಿ ಊಟ ಮಾಡುವುದನ್ನಲ್ಲ. ಬೇಟೆರಾಯಸ್ವಾಮಿಯ ಮಡೆ ಸಂತರ್ಪಣೆಯಲ್ಲಿ ಊಟ ಅದೊಂದೇ ದಿನ ಹಾಕುವುದು ಅದಕ್ಕೆ ಬೇರೆಲ್ಲೂ ಜಾಗವಿಲ್ಲ.

    ಉತ್ತರ
    • ಬ್ರಾಹ್ಮಣರು ಊಟ ಮಾಡುವುದೇ ತಪ್ಪು ಎಂದು ನಾನು ಭಾವಿಸಿದೆ ಅಂತ ನೀವು ಭಾವಿಸಿದರೆ ನಾನೇನು ಮಾಡಲಾದೀತು?

     ಊಟ ಮಾಡುವುದು ತಪ್ಪಲ್ಲ, ತಾವು ಊಟ ಮಾಡಿದ ಎಲೆಯ ಮೇಲೆ ಜನ ಬಿದ್ದು ಹೊರಳಾಡುತ್ತಾರೆ ಅಂತ ಗೊತ್ತಿದ್ದು ವಿಶೇಷ ಪಂಕ್ತಿಯಲ್ಲಿ ಕುಳಿತು ಊಟ ಮಾಡುವುದು ಮತ್ತೆ ಉಳಿದ ಭಕ್ತರ ಜೊತೆ ಕುಳಿತು ಸಹ ಭೋಜನ ಮಾಡದೇ ಪ್ರತ್ಯೇಕ ಪಂಕ್ತಿಯಲ್ಲಿ ಕುಳಿತು ಊಟ ಮಾಡುವುದು ಖಂಡಿತ ತಪ್ಪು.

     ಇನ್ನ ನಾನು ಯಾರನ್ನ ಕುರಿತು ’ಮೂರನೆಯವರು’ ಅಂತ ಹೇಳಿದೆ ಅನ್ನುವುದೇ ನಿಮಗೆ ಗೊತ್ತಾಗಿಲ್ಲ ಬಿಡಿ

     ಉತ್ತರ
     • ಗಿರೀಶ್
      ಡಿಸೆ 17 2011

      ನಾನು ೩ನೆಯವರು ಎಂದು ಹೇಳಿರುವುದು ನಿಮ್ಮಂತವರನ್ನೆ ರಾಕೇಶ್. ಏಕೆಂದರೆ ಬೆಂಗಳೂರಿನಲ್ಲೊ ಅಮೇರಿಕಾದಲ್ಲೊ ಕುಳಿತು ಮಡೆಸ್ನಾನ ಬ್ರಾಹ್ಮಣರು ಊಟ ಮಾಡಬಾರದೆಂದು ಆದೇಶ ಕೊಡಿಸುವವರನ್ನೆ. ಇರಲಿ ಬಿಡಿ ಸರ್ಕಾರ ನಿಷೇದಿಸಿದೆ. ಎಂಜಾಯ್ ಮಾಡಿ. ನಿಷೆಧಿಸಿದ್ದು ನನಗೆ ವೈಯಕ್ತಿಕವಾಗಿ ಅತ್ಯಂತ ಸಂತೋಷವಾಗಿದೆ.

      ಉತ್ತರ
      • ಸರ್ಕಾರ ನಿಷೇಧಿಸಿದೆಯೇ? ಯಾವಾಗ? ಎಲ್ಲಿದೆ ಸುದ್ದಿ?
       ಇನ್ನ ವಿರೋಧಿಸುವವರು ಸುಬ್ರಮಣ್ಯದಲ್ಲೆ ಕುಳಿತು ಆದೇಶಿಸಬೇಕು ಅನ್ನುವುದು ವಿಷಯ ತಿರುಗಿಸುವ ಪ್ರಯತ್ನವಷ್ಟೆ

       ಉತ್ತರ
       • ಗಿರೀಶ್
        ಡಿಸೆ 18 2011

        ಎಲ್ಲೊ ಕುಳಿತು ವಿಷಯದ ಅರಿವಿಲ್ಲದೆ ಬರೆಯುವುದು ತೌಡು ಕುಟ್ಟುವುದಷ್ಟೆ.

        ಉತ್ತರ
        • ದಕ್ಷಿಣ ಕನ್ನಡದವನಾಗಿ ಅಲ್ಲಿನ ಜನರ ಆಚಾರ-ವಿಚಾರಗಳ ಅರಿವಿದ್ದೇ ಬರೆದಿದ್ದೇನೆ.ನಿಷೇದಕ್ಕೆ ನಿಮ್ಮ ಸಮ್ಮತಿ ಇದೆ ಅಂದಾದ ಮೇಲೆ, ನನ್ನ ಬರಹದಲ್ಲಿನ ಯಾವ ಅಂಶಕ್ಕೆ ನಿಮ್ಮ ವಿರೋಧ ಹೇಳಬಹುದೇ?

         ಉತ್ತರ
 12. ಗುರು
  ಡಿಸೆ 16 2011

  ಇಲ್ಲಿ ಕಾಮೆಂಟ್ ಗಳನ್ನ ನೋಡಿದ ಮೇಲೆ ಅನ್ನಿಸುತ್ತಿರೋದು, ಇಲ್ಲಿ ಎಲ್ಲರಿಗೂ ಮುಖ್ಯವಾಗಿ ಬೇಕಾಗಿರುವುದು ಮಡೆ ಸ್ನಾನ ನಿಲ್ಲಿಸುವುದಲ್ಲ, ಬದಲಾಗಿ ಬ್ರಾಹ್ಮಣರಿಗೆ ಊಟ ಹಾಕುವುದನ್ನು ನಿಲ್ಲಿವುದು ಅಷ್ಟೇ !!!

  ಉತ್ತರ
  • ಸರ್ಯಾಗ್ ಹೇಳಿದ್ರಿ.ಆದರೆ, ಊಟ ಹಾಕುವುದನ್ನಲ್ಲ, ’ಪ್ರತ್ಯೇಕ ಊಟ’ ಹಾಕುವುದನ್ನ ನಿಲ್ಲಿಸಬೇಕು…!

   ಉತ್ತರ
 13. ಗುರು
  ಡಿಸೆ 16 2011

  ಯಾರಿಗೂ ಎಲೆ ಮೇಲೆ ಉರುಲಾಡಿದರೆ ಏನೂ ಅನ್ನಿಸಲ್ಲ ! ಅದೇ ಬ್ರಾಹ್ಮಣರು ಊಟ ಮಾಡಿದರೆ ಅನಿಷ್ಟದಂತೆ ಅನಿಸುತ್ತದೆ ವಿಚಿತ್ರ ಜೀವಿಗಳು , ಕಲಿ ಕಾಲ !!!

  ಉತ್ತರ
  • Anonymous
   ಡಿಸೆ 18 2011

   ಹೌದು ಸ್ವಾಮಿ ಹಾಗೆ ಅನ್ನಿಸ್ತಾ ಇದೆ. ಕಲಿಗಾಲ ಅದಕ್ಕೆ ಅನ್ಸುತ್ತೆ.. ಒಂದು ಕೆಲಸ ಮಾಡ್ಬೋದು ನೋಡಿ, ಹೀಗೆಲ್ಲ ಮಾಡೋದಕಿನ್ನ, ಎಲ್ಲರನ್ನ ಬ್ರಾಹ್ಮಣರಾಗಿ ದೀಕ್ಷೆ ಕೊಟ್ಟು ಬಿಟ್ರೆ ಯಾರು ಇದೆಲ್ಲದರ ಬಗ್ಗೆ ಮಾತನಾಡೊಲ್ಲ, ಯಾಕಂದ್ರೆ ಎಲ್ಲ ಬ್ರಾಹ್ಮಣರೇ ಇರ್ತಾರಲ್ಲ ಯಾರನ್ನ ಅಂತ ದೂರೋದು ಅಲ್ವ?
   ಆಗ ಯಾರು ಬ್ರಾಹ್ಮಣರಿಗೆ ಯಾಕೆ ಪ್ರತ್ಯೇಕ ಊಟ ಅಂತ ಕೇಳೋಲ್ಲ, ಎಲ್ಲಾ ಬ್ರಾಹ್ಮಣರೇ ಅಲ್ವಾ?
   ಏನಂತಿರ? ಇದಕ್ಕೆ ನಿಮ್ಮೆಲ್ಲರ ಒಪ್ಪಿಗೆ ಇದೆ ತಾನೆ?

   ಉತ್ತರ
   • ಹೌದೌದು ಕಲಿಗಾಲ ಬಂದ್ರೂನೂ ಮನುಷ್ಯರು ಮನುಷ್ಯರಾಗಿ ಮನುಷ್ಯರ ಜೊತೆ ಊಟ ಮಾಡುವುದನ್ನ ಕಲಿಸಬೇಕಿದೆ.ದೀಕ್ಷೆ ಮನಸ್ಸಿಗೆ ಕೊಡ್ಬೇಕು ಮನುಷ್ಯರಿಗಲ್ಲ

    ಉತ್ತರ
    • guru
     ಡಿಸೆ 20 2011

     ರಾಕೇಶ, ನೀವು ಹೊರಗಡೆ ಹೋಟೆಲ್ ನಲ್ಲಿ ಉಣ್ಣಿ. ಅವರು ಉಂಡರೆ ನಿಮಗ್ಯಾಕೆ ಹೊಟ್ಟೆ ಉರಿ?. ಇಲ್ಲಿ ಸುಮ್ನೆ ತವುಡು ಕುಟ್ಟುವುದರ ಬದಲು ಏನಾದರೂ ಕೆಲಸ ಮಾಡಿ ಹೋಗಿ.

     ಉತ್ತರ
     • ರೀ ಗುರುವೇ,

      ಹೆಸರು ಬದಲಿಸಿಕೊಂಡು ಕಮೆಂಟ್ ಮಾಡೋರೆಲ್ಲ ಬುದ್ದಿ ಹೇಳೋಂಗ್ ಆದ್ರೂ ನೋಡಪ್ಪ…ಮುಖವಾಡ ಕಳಚಿಟ್ಟು ನೇರಾ ನೇರ ತಮ್ಮ ಐಡೆಂಟಿಟಿ ತೋರಿಸಿ ಮಾತನಾಡುವ ಧೈರ್ಯ ಮಾಡಿ ಮೊದಲು,ಆಮೇಲೆ ನನಗೆ ಸಲಹೆ ಕೊಡಿ

      ನಾನು ತಾವ್ ಹೇಳಿದ್ದನ್ನೇ ಮಾಡ್ಕೋಂಡ್ ಬರ್ತಿದ್ದೀನಿ.ನಾನು ದುಡ್ಡು ಕೊಟ್ಟೆ ತಿಂತೀನಿ.ಆದ್ರೂ ತಾವು ಓದು-ಬರಹ ತಿಳಿದವ್ರು ಅನ್ನಿಸುತ್ತೆ,ಮನುಷ್ಯರ ಜೊತೆ ಕೂತು ಊಟ ಮಾಡುವಂತ ಒಳ್ಳೆ ಮನಸ್ಸನ್ನ ಆ ಭಗವಂತನೇ ಕರುಣಿಸಲಿ ಅಂತ ಬೇಡಬಲ್ಲೆನಷ್ಟೆ…

      ಉತ್ತರ
    • Anonymous
     ಡಿಸೆ 20 2011

     ರಾಕೇಶ್ ಅವ್ರೆ,

     ಈವಾಗ ಯಾರು ಮನುಷ್ಯರು, ಮನಸ್ಸಿನ ಬಗ್ಗೆ ಯೋಚನೆ ಮಾಡೋದಿಲ್ಲ, ಏನಿದ್ರು ಒಂದು ವಿಷಯದಲ್ಲಿ ಒಂದೇ ಆದ್ರೆ ಸಾಕು, ಅವ್ರು ಹೇಗೆ ಇರಲಿ ನಡಿಯುತ್ತದೆ (ಗೊತಾಯ್ತು ಅನ್ಕೊತಿನಿ ಯಾವ್ದ್ರಲ್ಲಿ ಅಂತ). ಹಾಗೆ ಎಲ್ಲರು ಮನ್ನಸ್ಸಿನ ದೀಕ್ಷೆ ಬಗ್ಗೆ ತಿಳ್ಕೊಂಡಿದ್ರೆ ನಾವೆಲ್ಲ ಇಸ್ಟೊಂದು ಹೇಳೋ ಅವಶ್ಯಕತೆ ಇರುತ್ತಾ ಇರಲಿಲ್ಲ ಅಲ್ವ?

     ಉತ್ತರ
 14. ಡಿಸೆ 22 2011

  Prof SN Balagangadhar’s talk tomo :

  http://mrdg.iisc.ernet.in/news/newsgroups.php?art_group=local.broadcast&article_id=10780

  (Info for the people who just keep repeatedly mentioning his name!)

  ಉತ್ತರ
 15. Bhaskara
  ಡಿಸೆ 23 2011

  raakEsha. Post the talk on Balu in samapda. There are some pl who loves him much 😉

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments