ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 13, 2011

1

ಈ ‘ದಿನಾಚರಣೆ’ಗಳು ಲೇಖನ, ರಾಲಿಗಳಿಗೆ ಮಾತ್ರ ಸೀಮಿತ ಯಾಕೆ?

‍ನಿಲುಮೆ ಮೂಲಕ

-ರಶ್ಮಿ. ಕಾಸರಗೋಡು

2011 ಕ್ಯಾಲೆಂಡರ್ ವರ್ಷ ಮುಗಿಯುತ್ತಾ ಬಂದಿದೆ. ಹಳೆಯ ಕ್ಯಾಲೆಂಡರ್್ನ್ನು ಬದಲಿಸಿ ಹೊಸ ಕ್ಯಾಲೆಂಡರ್್ಗೆ ಜಾಗ ಕಲ್ಪಿಸುವ ಹೊಸ ವರ್ಷಕ್ಕೆ ದಿನ ಎಣಿಕೆ ಆರಂಭವಾಗಿದೆ. ಹೌದು, ಮನೆಯಲ್ಲಿ ಹೊಸ ಕ್ಯಾಲೆಂಡರ್ ನೇತು ಹಾಕುವಾಗ “ವರ್ಷ ಎಷ್ಟು ಬೇಗ ಕಳೆದು ಹೋಯಿತಲ್ವಾ..ಗೊತ್ತೇ ಆಗಿಲ್ಲ” ಎಂಬ ಉದ್ಗಾರ ಸರ್ವೇ ಸಾಮಾನ್ಯ. ನಾವು ಚಿಕ್ಕವರಿರುವಾಗ ಅಂದ್ರೆ ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆ ಹೊಸ ಕ್ಯಾಲೆಂಡರ್ ತಂದ ಕೂಡಲೇ ಅದರಲ್ಲಿನ ಕೆಂಪು ಬಣ್ಣದ ದಿನಾಂಕ ಎಷ್ಟು ಇದೆ ಅಂತಾ ಲೆಕ್ಕ ಹಾಕುತ್ತಿದ್ದೆವು. ಶಾಲೆಗೆ ಎಷ್ಟು ದಿನ ರಜೆ ಸಿಗುತ್ತೆ? ಎಂಹ ಕುತೂಹಲ ನಮ್ಮಲ್ಲಿ. ಕೆಲವೊಮ್ಮೆ ಸಾರ್ವಜನಿಕ ರಜಾದಿನಗಳು ಶನಿವಾರ, ಭಾನುವಾರ ಬಂದರೆ ಒಂದು ರಜೆ ನಷ್ಟವಾಯಿತಲ್ಲಾ ಅಂತಾ ಬೇಸರವೂ ಆಗುತ್ತಿತ್ತು. ಹಾಗಂತ ಕ್ಯಾಲೆಂಡರ್್ನಲ್ಲಿ ರಜೆ ಇರುವ ದಿನಗಳು ಸೇರಿ ಇನ್ನೂ ಹೆಚ್ಚಿನ ರಜೆಗಳು (ಕೇರಳದಲ್ಲಿ ಬಂದ್ ಸರ್ವೇ ಸಾಮಾನ್ಯ ಇಂತಿರುವಾಗ ಅಲ್ಲೂ ಒಂದೆರಡು ರಜೆ, ಅದರೆಡೆಯಲ್ಲಿ ಭಾರೀ ಮಳೆ, ಯಾವುದಾದರೂ ಮಹಾನ್ ವ್ಯಕ್ತಿಗಳು ಸಾವನ್ನಪ್ಪಿದರೆ ಸಿಗುವ ಶೋಕ ರಜೆ, ಓಣಂ, ಕ್ರಿಸ್್ಮಸ್ ಮೊದಲಾದ ಹಬ್ಬಗಳಿಗೆ ಸಿಗುವ 10 ದಿನಗಳ ರಜೆ) ಸಿಕ್ಕಿದರೂ ಶಾಲಾ ದಿನಗಳಲ್ಲಿ ಅದೂ ಕಮ್ಮಿಯೇ.

ಇದಿಷ್ಟು ರಜೆಯ ಲೆಕ್ಕಾಚಾರವಾಗಿದ್ದರೆ, ಕೆಲವೊಂದು ದಿನಾಚರಣೆಗಳು ಕೂಡಾ ಶಾಲಾ ಕಾಲೇಜು ದಿನಗಳಲ್ಲಿ ರಜೆಯಾಗಿ ಪರಿಗಣಿಸಲ್ಪಡುತ್ತಿತ್ತು. ದಿನಾಚರಣೆಗಳ ಬಗ್ಗೆ ಹೇಳುವುದಾದರೆ ಜನವರಿ 12(ಯುವ ದಿನಾಚರಣೆ) ಆರಂಭವಾಗಿ ಡಿಸೆಂಬರ್ 26 (ಸಿಆರ್್ಪಿಎಫ್ ದಿನಾಚರಣೆ)ರ ವರೆಗೆ ಭಾರತದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ದಿನಾಚರಣೆಗಳು ಆಚರಿಸಲ್ಪಡುತ್ತವೆ (ಎಲ್ಲಾ ದಿನಾಚರಣೆಗಳಿಗೆ ರಜೆ ಸಿಗಲ್ಲ ). ಇವುಗಳ ಜತೆಗೆ ಪಾಶ್ಚಾತ್ಯರನ್ನು ಅನುಕರಿಸಿ ನಾವು ಆಚರಿಸುವ ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ, ಗಂಡಸರ ದಿನ ಹೀಗೆ ಅದೆಷ್ಟೋ ದಿನಾಚರಣೆಗಳು ಭಾರತೀಯ ಸಂಸ್ಕೃತಿಯಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಇವುಗಳಲ್ಲಿ ಕೆಲವೊಂದು ದಿನಾಚರಣೆಗಳ ಬಗ್ಗೆ ಸಾಮಾನ್ಯ ವ್ಯಕ್ತಿಗೆ ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಬಾಲಿಕಾ ದಿವಸ್ (ಹೆಣ್ಣು ಮಕ್ಕಳ ದಿನಾಚರಣೆ) ಯಾವಾಗ ಅಂತಾ ಕೇಳಿದರೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಅದೇ ವೇಳೆ ವ್ಯಾಲೆಂಟೈನ್ಸ್ ಡೇ ಯಾವಾಗ ಅಂತಾ ಕೇಳಿದರೆ ಥಟ್ಟನೆ ಫೆ.14 ಅಂತಾ ಹೇಳಿ ಬಿಡುತ್ತೇವೆ. ಯಾಕೆಂದರೆ  ಪ್ರೇಮಿಗಳ ದಿನಾಚರಣೆಯಷ್ಟು ಹೆಣ್ಣು ಮಕ್ಕಳ ಉಳಿವು, ರಕ್ಷಣೆಗಾಗಿ ಡಿ.9ರಂದು ಆಚರಿಸಲ್ಪಡುವ ‘ಬಾಲಿಕಾ ದಿವಸ್್’ ಹೆಚ್ಚು ಪ್ರಚಲಿತದಲ್ಲಿಲ್ಲ. ಯಾಕೆಂದರೆ ಯಾವುದೇ ಸಮೂಹ ಮಾಧ್ಯಮಗಳು ಪ್ರೇಮಿಗಳ ದಿನಾಚರಣೆಗೆ ನೀಡುವ ಪ್ರಾಧಾನ್ಯತೆಯನ್ನು ಅಂಗವೈಕಲ್ಯತೆಯಿರುವವರ ದಿನಕ್ಕೋ, ವೃದ್ಧರ ದಿನಕ್ಕೋ ನೀಡುವುದಿಲ್ಲ. ಇದರ ಪರಿಣಾಮ ಇನ್ನುಳಿದ ದಿನಾಚರಣೆಗಳು ಕೇವಲ ಒಂದು ಲೇಖನ ಅಥವಾ ರ್ಯಾಲಿಗೆ ಸೀಮಿತವಾಗಿ ಕಳೆದು ಹೋಗುತ್ತದೆ.

ಹಾಗೆ ನೋಡಿದರೆ ಪ್ರತಿಯೊಂದು ದಿನಾಚರಣೆಗೂ ಅದರದ್ದೇ ಆದ ಉದ್ದೇಶ, ಸಂದೇಶವೊಂದು ಇದ್ದೇ ಇರುತ್ತದೆ. ಆದರೆ ಈ ಉದ್ದೇಶ, ಸಂದೇಶಗಳು ಸಾಮಾನ್ಯ ಜನರನ್ನು ತಲುಪುತ್ತವೆಯೇ?.

ಉದಾಹರಣೆಗೆ ಮಕ್ಕಳ ದಿನಾಚರಣೆಯನ್ನೇ ತೆಗೆದುಕೊಳ್ಳಿ. ಆ ದಿನವಿಡೀ ಟಿ.ವಿಯಲ್ಲಿ ಮಕ್ಕಳದ್ದೇ ಕಾರ್ಯಕ್ರಮ, ಪತ್ರಿಕೆಗಳಲ್ಲಿ ಪುಟಗಟ್ಟಲೆ ಲೇಖನಗಳು, ಮಕ್ಕಳಿಗೆ ಪ್ರಶಸ್ತಿ ಪ್ರದಾನ ಹೀಗೆ ಹತ್ತು ಹಲವು ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಕೊಂಡಾಡಲಾಗುತ್ತದೆ. ಇದರೊಂದಿಗೆ ಭಾರತದ ಮಕ್ಕಳ ಸ್ಥಿತಿಗತಿಯೇನು? ಸ್ಲಂನಲ್ಲಿರುವ ಮಕ್ಕಳ ಗತಿಯೇನು? ಅಂಗನವಾಡಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿದೆಯೇ?, ಮಕ್ಕಳ ಮೇಲಿನ ದೌರ್ಜನ್ಯಗಳು, ಆಸ್ಪತ್ರೆಯಲ್ಲೇ ಅಸು ನೀಗುವ ಕಂದಮ್ಮಗಳ ಸಾವಿಗೆ ಹೊಣೆ ಯಾರು? ಎಂಬೀ ವಿಷಯಗಳ ಬಗ್ಗೆ ಚರ್ಚೆ ಕೇವಲ ಚರ್ಚೆಯಾಗಿಯೇ ಉಳಿಯುತ್ತದೆ. ಇಲ್ಲವೇ ಲೇಖನಗಳಿಗೆ ಸೀಮಿತವಾಗುತ್ತವೆ. ಮಕ್ಕಳ ದಿನಾಚರಣೆಯಂದು ಬಡಮಕ್ಕಳ ದಯನೀಯ ಸ್ಥಿತಿ ಬಗ್ಗೆ ಒಂದೋ ಫೋಟೋ ಪ್ರಕಟವಾಗಬಹುದು. ಆ ಫೋಟೊ ತೆಗೆದ ಫೋಟೋಗ್ರಾಫರ್್ಗೆ ಅವಾರ್ಡ್ ಲಭಿಸಿದರೂ, ಫೋಟೋದಲ್ಲಿನ ಬಡಮಕ್ಕಳ ಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೆ ಮಕ್ಕಳ ದಿನಾಚರಣೆ ಆಚರಿಸಿ ಏನು ಪ್ರಯೋಜನ?

ಇದರೊಟ್ಟಿಗೆ ಇನ್ನೊಂದು ವಿಷಯ ಹೇಳಬೇಕು ಅಂದ್ರೆ, ಇತ್ತೀಚೆಗಷ್ಟೇ ನಾವು ಏಡ್ಸ್ ದಿನಾಚರಣೆಯನ್ನು ಆಚರಿಸಿದ್ದಾಯ್ತು. ಏಡ್ಸ್ ಹೇಗೆ ಬರುತ್ತದೆ? ಅದನ್ನು ತಡೆಗಟ್ಟಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಾಗೃತಿ ಮೂಡಿಸಿದ್ದೂ ಆಯ್ತು. ವರ್ಷಂಪ್ರತಿ ನಾವು ಹರಕೆ ಹೊತ್ತಂತೆ ಏಡ್ಸ್ ದಿನಾಚರಣೆ ಆಚರಿಸುತ್ತೇವೆ. ಏಡ್ಸ್ ರೋಗಿಗಳನ್ನು ನಮ್ಮರಲ್ಲಿ ಒಬ್ಬರಂತೆ ಕಾಣಿರಿ ಎಂದು ಭಾಷಣ ಬಿಗಿಯುತ್ತೇವೆ. ಆದರೆ ಅವರ ಮಕ್ಕಳು? ಏಡ್ಸ್ ಪೀಡಿತರ ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕಿದ ಎಷ್ಟೋ ಘಟನೆಗಳ ಸುದ್ದಿಯಾಗಿವೆ. ಏಡ್ಸ್ ಇದೆ ಎಂದು ಗೊತ್ತಾದ ಕೂಡಲೇ ವಿದ್ಯಾರ್ಜನೆಗೂ ನಿಷೇಧ ಹೇರುವ ಅಧ್ಯಾಪಕರೂ ನಮ್ಮಲ್ಲಿದ್ದಾರೆ. ಅದೆಷ್ಟೋ ಮಕ್ಕಳು ಈ ಭಯದಿಂದಾಗಿ ಶಾಲೆ ಬಿಟ್ಟಿದ್ದಾರೆ. ಹೀಗಿರುವಾಗ ಏಡ್ಸ್ ಪೀಡಿತ ಮಕ್ಕಳ ಭವಿಷ್ಯ ಏನಾದೀತು? ಈ ಬಗ್ಗೆ ಸರ್ಕಾರವೇನೋ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಬಹುದು. ಆದರೆ ಏಡ್ಸ್ ದಿನಾಚರಣೆ ಆಚರಿಸುವಾಗ ನಾವು ಕಾಂಡೋಮ್ ಬಗ್ಗೆ ಮಾತನಾಡುತ್ತೇವೆಯೇ ಹೊರತು ಏಡ್ಸ್ ಪೀಡಿತ ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತೇವೆ! ಯಾಕೆಂದರೆ ನಮಗೆ ಡಿ.1 ಏಡ್ಸ್ ದಿನಾಚರಣೆ ಅಷ್ಟೇ. ಅದು ಬಿಟ್ಟರೆ ನಮಗೆ ಬಾಕಿ ಎಲ್ಲವೂ ನಗಣ್ಯವಾಗಿ ತೋರುತ್ತದೆ ಅಲ್ವಾ?

ಇನ್ನು, ಮಹಾನ್ ವ್ಯಕ್ತಿಗಳ ಜನ್ಮದಿನ, ಪುಣ್ಯತಿಥಿ ಆಚರಣೆಯೇ ಆಗಿರಲಿ ಅವರ ಫೋಟೋಗೆ ಹಾರ ಹಾಕಿ, ಗಣ್ಯರೊಂದಿಗೆ ಫೋಟೋಗೆ ಪೋಸ್ ನೀಡುವುದನ್ನು ಬಿಟ್ಟರೆ ಆ ಮಹಾನ್ ವ್ಯಕ್ತಿಗಳ ತತ್ವವನ್ನು ಸಾರಲು ಅಥವಾ ಅವರಂತೆ ನಡೆಯಲು ನಾವು ಮುಂದಾಗಿದ್ದೇವೆಯೇ?. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ, ಯಾವುದೇ ದಿನಾಚರಣೆಯಿರಲಿ ಆ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳನ್ನು ಕರೆಸಿ ಜನರನ್ನು ಆಕರ್ಷಿಸುವಂತೆ ಮಾಡಲಾಗುತ್ತದೆಯೇ ವಿನಾ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿಲ್ಲ. ಯಾಕೆಂದರೆ ಇಲ್ಲಿ ಜನಾಕರ್ಷಣೆ ಮುಖ್ಯವೇ ಹೊರತು ಆಚರಣೆಯ ಉದ್ದೇಶ ಜನರನ್ನು ತಲುಪುತ್ತಿದೆಯೇ? ಎಂಬುದರ ಬಗ್ಗೆ ಯಾವುದೇ ಸಂಘಟಕರು ತಲೆಕೆಡಿಸಿಕೊಳ್ಳುವುದಿಲ್ಲ!.

ಇದನ್ನೆಲ್ಲಾ ಗಮನಿಸಿದರೆ ನಿಜವಾಗಿಯೂ ಈ ದಿನಾಚರಣೆಗಳು ಲೇಖನ ಅಥವಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ಅನಿಸದಿರದು. ಯಾಕೆಂದರೆ ಯಾವುದೇ ದಿನಾಚರಣೆ ಆಗಿರಲಿ ಅದರ ಮೂಲ ಉದ್ದೇಶವನ್ನೇ ಮರೆತು ಬರೀ ಆಚರಣೆ ಅಂತಾ ಗಟ್ಟಿಯಾಗಿ ಹಾಡು ಹಾಕಿ, ಡ್ಯಾನ್ಸ್ ಮಾಡಿ, ಪತ್ರಿಕೆಯಲ್ಲಿ ಸುದ್ದಿ ಬಂದರೆ ಸಾಕೆ? ಈ ಬಗ್ಗೆ ಪ್ರತಿಯೊಬ್ಬ ವ್ಯಕ್ತಿ ಚಿಂತಿಸಲೇ ಬೇಕು.

ಒಟ್ಟಿನಲ್ಲಿ  ದಿನಾಚರಣೆ ಯಾವುದೇ ಇರಲಿ, ಅದರ ಮೂಲ ಉದ್ದೇಶವನ್ನು ಮುಂದಿನ ಜನಾಂಗಕ್ಕೆ ಪಸರಿಸುವ ಹೊಣೆ ನಮ್ಮದು. ಈ ನಿಟ್ಟಿನಲ್ಲಿ ಪ್ರತಿಯೊಂದು ದಿನಾಚರಣೆಯನ್ನು ಲೇಖನಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರಿಸದೆ ಆಚರಣೆಯ ಉದ್ದೇಶವನ್ನು ಪ್ರತಿಯೊಬ್ಬ ಮನುಷ್ಯನು ಅರ್ಥೈಸಿಕೊಂಡರೆ ದಿನಾಚರಣೆಗೊಂದು ಮೌಲ್ಯ ಸಿಕ್ಕಿದಂತಾಗುತ್ತದೆ ಅಲ್ಲವೇ? ನೀವೇನಂತೀರಾ?

* * * * * * * *

ಚಿತ್ರಕೃಪೆ : ಅಂತರ್ಜಾಲ

1 ಟಿಪ್ಪಣಿ Post a comment
  1. ಡಿಸೆ 13 2011

    ದಿನಾಚರಣೆಗಳು ಹೆಚ್ಚಿದಷ್ಟೂ ಸರ್ಕಾರೀ ಕೃಪಾಪೋಷಿತ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವವರಿಗೆ ಅನುಕೂಲವಲ್ಲವೇ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments