ದೇವರು, ಧರ್ಮ ಮತ್ತು ಮತ
– ಗೋವಿಂದ ರಾವ್ ವಿ ಅಡಮನೆ
ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.
‘ದೇವರು’ ಒಂದೇ ಅಂದ ಮೇಲೆ ಅದರಲ್ಲಿ ಅಂತಸ್ಥವಾಗಿರುವ ನಿಯಮಗಳು ಸಾರ್ವಕಾಲಿಕವೂ ಸಾರ್ವದೇಶಿಕವೂ ಆಗಿರಲೇ ಬೇಕಲ್ಲವೇ? ಈ ಮೂಲ ಮತ್ತು ಅನುನಿಯಮಗಳ ಉದ್ದೇಶ ವಿಶ್ವ ವ್ಯಾಪಾರಗಳ ನಿಯಂತ್ರಣ, ಅರ್ಥಾತ್ ವಿಶ್ವವ್ಯಾಪಾರಗಳಲ್ಲಿ ಕ್ರಮಬದ್ಧತೆಯನ್ನು ಕಾಯ್ದುಕೊಳ್ಳುವುದು, ವಿಭಿನ್ನ ಘಟಕಗಳ ನಡುವಿನ (ಜೀವಿ ನಿರ್ಜೀವಿಗಳ ನಡುವಿನ, ಜೀವಿಗಳ ಪೈಕಿ ಚರಾಚರಗಳ ನಡುವಿನ) ಸಾಮರಸ್ಯವನ್ನು ಕಾಯ್ದುಕೊಳ್ಳುವುದು. ಈ ಉದ್ದೇಶ ಸಾಧನೆಗೆ ಧಕ್ಕೆಯಾಗದ ರೀತಿಯಲ್ಲಿ ಬದುಕುವುದೇ ‘ಧರ್ಮ’ ಎಂಬುದು ನನ್ನ ನಿಲುವು. ಇರುವುದು ಒಂದೇ ‘ದೇವರು’ ತತ್ವ, ಒಂದೇ ‘ಧರ್ಮ’. ಈ ಅದ್ವಿತೀಯ ‘ದೇವರಿಗ’ ನಮ್ಮ ಭಾಷೆಯಲ್ಲಿ ನಾಮಕರಣ ಮಾಡಿ ನಾವು ಇಟ್ಟ ಹೆಸರಿನಿಂದ ಕರೆಯಲ್ಪಡುವುದೇ ನಿಜವಾದ ದೇವರು ಅನ್ಯ ಭಾಷಿಕರು ಇಟ್ಟ ಹೆಸರಿನಿಂದ ಕರೆಯಲ್ಪಡುವ ದೇವರು ನಿಜವಾಗಿ ದೇವರೇ ಅಲ್ಲ ಎಂದು ಪ್ರತ್ಯಕ್ಷವಾಗಿಯೇ ಆಗಲಿ ಪರೋಕ್ಷವಾಗಿಯೇ ಆಗಲಿ ವಾದಿಸುವುದೇ ಅಧರ್ಮ ಅನ್ನುವುದು ನನ್ನ ನಿಲುವು, ಇಂಥ ವಿವಾದಗಳು ಸಾಮರಸ್ಯವನ್ನು ಹಾಳುಮಾಡುವುದರಿಂದ. ಅದ್ವಿತೀಯ ‘ದೇವರು’ ತತ್ವವನ್ನು ಮತ್ತು ಅದರ ಕಾರ್ಯವಿಧಾನಗಳ ನಿಯಂತ್ರಕ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗೋಪಾಯಗಳನ್ನು – ಅದು ಯಾರೇ ಸೂಚಿಸಿದವು ಆಗಿರಲಿ – ಧರ್ಮ ಎಂದು ಉಲ್ಲೇಖಿಸುವುದು ತಪ್ಪು ಎಂಬುದು ನನ್ನ ಅಭಿಪ್ರಾಯ.
ಉದಾಹರಣೆಗೆ ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮುಂತಾದವು ವಾಸ್ತವವಾಗಿ ‘ದೇವರು’ ತತ್ವವನ್ನು ಅರ್ಥಮಾಡಿಕೊಳ್ಳಲು ದಾರ್ಶನಿಕರು ಸೂಚಿರುವ ಮಾರ್ಗೋಪಾಯಗಳೇ ವಿನಾ ನಿಜವಾದ ಅರ್ಥದಲ್ಲಿ ಧರ್ಮಗಳೇ ಅಲ್ಲ ಎಂಬುದು ನನ್ನ ಅಭಿಪ್ರಾಯ. ಎಂದೇ, ಇವು ‘ಮತ (ರಿಲಿಜನ್)ಗಳು. ಅಂದ ಹಾಗೆ ‘ಹಿಂದೂ ಧರ್ಮ’ವನ್ನು ನಾನು ಉದ್ದೇಶ ಪೂರ್ವಕವಾಗಿಯೇ ಇಲ್ಲಿ ಉಲ್ಲೇಖಿಸಿಲ್ಲ. ಹಾಗೊಂದು ‘ಧರ್ಮ’ವೇ ಆಗಲಿ ಮತವೇ ಆಗಲಿ ಇಲ್ಲ ಎಂಬುದು ನನ್ನ ಖಚಿತ ನಿಲುವು. ಭರತಖಂಡವನ್ನು ವಾಯವ್ಯ ದಿಕ್ಕಿನಿಂದ ಪ್ರವೇಶಿಸಿದ ಪರಕೀಯರು ಭರತಖಂಡ ವಾಸಿಗಳನ್ನು ಉಲ್ಲೇಖಿಸಲು ಹುಟ್ಟು ಹಾಕಿದ ಪದ ‘ಹಿಂದು’. ಅಂದಮೇಲೆ ಭರತಖಂಡ ವಾಸಿಗಳೆಲ್ಲರೂ ಹಿಂದುಗಳು. ಇವರು ಯಾವುದೇ ಒಂದು ‘ಮತ’ದ ಅಥವ ಪಂಥದ ಅನುಯಾಯಿಗಳಾಗಿರಲಿಲ್ಲ. ‘ದೇವರು’ ತತ್ವವನ್ನು ಅರ್ಥಮಾಡಿಕೊಳ್ಳಲು ತಮಗೆ ತಕ್ಕುದಾದ ಮಾರ್ಗೋಪಾಯಗಳನ್ನು ಅನುಸರಿಸುವ ಸ್ವಾತಂತ್ರ್ಯ ಇವರಿಗಿತ್ತು. ಇದಕ್ಕೆ ಬೇಕಾದ ಏಕಾಗ್ರತೆ ಸಾಧಿಸಲೋಸುಗ ತಮಗೆ ವಿಹಿತವೆನ್ನಿಸುವ ಏನೋ ಒಂದನ್ನು ‘ದೇವರು’ ತತ್ವದ ಪ್ರತೀಕವನ್ನಾಗಿ ಇಟ್ಟುಕೊಳ್ಳುವ ಮತ್ತು ಆಚರಣೆಗಳನ್ನು ಆಚರಿಸುವ ಸ್ವಾತಂತ್ರ್ಯವೂ ಇತ್ತು. ಸ್ಥಳೀಕ ದಾರ್ಶನಿಕರ ಪೈಕಿ ಯಾರನ್ನಾದರೂ ತಮ್ಮ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇವರಿಗಿತ್ತು. ವಿಫುಲವಾಗಿ ಲಭ್ಯವಾಗಿದ್ದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಯಾವುದನ್ನಾದರೂ ತಮಗೆ ಮಾರ್ಗದರ್ಶನ ಮಾಡುವ ‘ಧರ್ಮಗ್ರಂಥ’ ಎಂದು ಒಪ್ಪಿಕೊಳ್ಳುವ ಸ್ವಾತಂತ್ರ್ಯ ಇತ್ತು. ಇವೆಲ್ಲವನ್ನೂ ಅಲ್ಲಗಳೆದು ತಮ್ಮದೇ ಆದ ‘ದಾರಿ’ ರೂಪಿಸಿಕೊಳ್ಳುವ ಸ್ವಾತಂತ್ರ್ಯವೂ ಇತ್ತು. ಈ ಭರತಖಂಡದಲ್ಲಿ ಹುಟ್ಟಿ ವಿಕಸಿಸುತ್ತಿದ್ದ ಎಲ್ಲ ಆಧ್ಯಾತ್ಮಿಕ ಚಿಂತನೆಗಳ ಪ್ರತೀಕಗಳೇ ವೇದಗಳು, ಉಪನಿಷತ್ತುಗಳು, ಪುರಾಣಗಳು——-. ಇಲ್ಲಿ ಅಸಂಖ್ಯ ಪಂಥಗಳಿದ್ದರೂ ಲಕ್ಷ್ಯ ಒಂದೇ ಆಗಿತ್ತು. ಎಂದೇ ಭರತಖಂಡದಲ್ಲಿ ಅಸ್ತಿತ್ವದಲ್ಲಿ ಇದ್ದದ್ದು ಒಂದು ಮತವಲ್ಲ, ಮತಗಳ ಸಂಯುಕ್ತಸಮಾಜ. ಈ ತಥ್ಯ ಇಲ್ಲಿನ ವಾಸಿಗಳಿಗೆ ಸೀಮಿತವಾಗಿದ್ದ ಅದ್ವಿತೀಯತೆ. ಎಂದೇ ಇವೆಲ್ಲವೂ ಇಲ್ಲಿಗೆ ಬಂದ ಪರಕೀಯರಿಗೆ ವಿಚಿತ್ರವಾಗಿ ಕಂಡಿದ್ದರಿಂದಲೋ, ಜನಜೀವನವನ್ನು ನಿಯಂತ್ರಿಸುತ್ತಿದ್ದ ಧಾರ್ಮಿಕಸೂತ್ರವನ್ನು ಅರ್ಥಮಾಡಿಕೊಳ್ಳಲಾಗದೇ ಇದ್ದದ್ದರಿಂದಲೋ, ‘ದೇವರ ಒಂದು ಪ್ರತೀಕ, ಒಬ್ಬ ಗುರು, ಒಂದು ಅನುಲ್ಲಂಘನೀಯ ಪ್ರಶ್ನಾತೀತ ಧರ್ಮಗ್ರಂಥಕ್ಕೆ ಜೋತುಬಿದ್ದು ಕೆಲವು ಸಾಂಪ್ರದಾಯಿಕ ಆಚರಣೆಗಳನ್ನು ಯಾಂತ್ರಿಕವಾಗಿ ಆಚರಿಸುತ್ತಿದ್ದ ಇವರಿಗೆ ಇಲ್ಲಿನ ಆಧ್ಯಾತ್ಮಿಕ ಚಿಂತನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಎಂದೇ, ಅವರು ಭರತಖಂಡವಾಸಿಗಳನ್ನು ‘ಹಿಂದೂ’ ಎಂದೂ ಇಲ್ಲಿ ಅಸ್ತಿತ್ವದಲ್ಲಿ ಇದ್ದ ಮತಗಳ ಸಂಕೀರ್ಣವನ್ನು ‘ಹಿಂದೂಧರ್ಮ’ ಎಂದು ಕರೆದರು. ಯಾವುದೇ ರಾಷ್ಟ್ರವನ್ನು ನಾಶ ಮಾಡಬೇಕಾದರೆ ಯಾವುದೇ ಸಮುದಾಯದ ಜ್ಞಾನಸಂಚಯವನ್ನು ನಾಶ ಮಾಡಿದರೆ ಆ ಸಮುದಾಯ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದಂತೆ. ಪರಕೀಯರು ಸುಯೋಜಿತ ರೀತಿಯಲ್ಲಿ ಮಾಡಿದ್ದು ಇದನ್ನೇ. ತಮ್ಮ ಯತ್ನದಲ್ಲಿ ಅವರು ಬಹುಮಟ್ಟಿಗೆ ಯಶಸ್ವಿಯಾದದ್ದರಿಂದಲೇ ಭರತಖಂಡವಾಸಿಗಳು ತಮ್ಮ ಬದುಕನ್ನು ರೂಪಿಸಿದ್ದ ಆಧ್ಯಾತ್ಮಿಕ ಸೂತ್ರವನ್ನು ಮರೆಯುವಂತಾದದ್ದು, ಭಾರತೀಯವಾದದ್ದು ಎಲ್ಲವೂ ಗೊಡ್ಡುಸಂಪ್ರದಾಯಗಳು ಎಂದು ನಂಬತೊಡಗಿದ್ದು———-. (ನೋಡಿ: ವಿಡಂಬನಾತ್ಮಕ ಬ್ಲಾಗ್: ನಾನೊಬ್ಬ ಹಿಂದೂ, ಆದ್ದರಿಂದ)
ಭರತಖಂಡವಾಸಿಗಳು ‘ಲೋಕಾಃ ಸಮಸ್ತಾಃ ಸುಖಿನೋ ಭವಂತು, ಸರ್ವೇ ಜನಾ ಸುಖಿನೋ ಭವಂತು, ಸರ್ವ ಜೀವಜಂತು ಸುಖಿನೋ ಭವಂತು’ ಎಂಬ ಆಶಯವನ್ನು ಸದಾ ಮನಸ್ಸಿನಲ್ಲಿ ಧಾರಣೆ ಮಾಡಿಕೊಂಡು ಈ ಆಶಯಕ್ಕೆ ವಿರುದ್ಧವಾದದ್ದೇನನ್ನೂ ಮಾಡದಾತನೇ ಧರ್ಮಿ ಎಂದು ನಂಬಿದ್ದವರು. ಇದೇ ನನ್ನ ನಿಲುವು. ಯಾವುದೇ ಮಾನವ ರೂಪಿತ ಅಥವ ಉದ್ಘೋಷಿತ ನಿಯಮ ಈ ಮೂಲ ಆಶಯಕ್ಕೆ ವಿರುದ್ಧವಾದದ್ದಾಗಿದ್ದರೆ ಅದು ‘ಧರ್ಮ ಬಾಹಿರ’ವಾಗುತ್ತದೆ. ಮಾನವ ರೂಪಿತವಾಧ ಯಾವುದೇ ಆಚಾರ, ಅದನ್ನು ಯಾರೇ ಹುಟ್ಟು ಹಾಕಿರಲಿ, ಈ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡುವಂತಿದ್ದರೆ ಅದು ‘ಅಧರ್ಮ’ ಎಂಬುದು ನನ್ನ ನಿಲುವು. ಕುರಾನ್ ಸಾರುವ ವಿಶ್ವ ಭ್ರಾತೃತ್ವ, ಬೈಬಲ್ ಸಾರುವ ವಿಶ್ವವ್ಯಾಪೀ ಅನುಕಂಪ ಈ ಆಶಯಕ್ಕೆ ವಿರುದ್ಧವಾದ ಆಶಯಗಳಲ್ಲ. ದುರದೃಷ್ಟವಶಾತ್, ಈ ತೆರನಾದ ಧರ್ಮಪಾಲನೆ ಸುಲಭವಲ್ಲ. ಎಂದೇ, ಇದು ಸುಲಭವಾಗಲಿ ಎಂಬ ಉದ್ದೇಶದಿಂದ ದಾರ್ಶನಿಕರು ತಾವು ಬದುಕುತ್ತಿದ್ದ ಕಾಲದಲ್ಲಿ, ದೇಶದಲ್ಲಿ, ಸಮುದಾಯದಲ್ಲಿ ಪ್ರಚಲಿತವಾಗಿದ್ದ ಆಚಾರವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು (ಪೈಗಂಬರ್ ಕಾಲದಲ್ಲಿ ಅಲ್ಲಿನ ಸಾಮಾಜಿಕ ಸ್ಥಿತಿಗತಿ ಹೇಗಿತ್ತೆಂಬುದನ್ನೂ ಕ್ರಿಸ್ತನ ಕಾಲದಲ್ಲಿ ಅಲ್ಲಿನ ಸಾಮಾಜಿಕ ಸ್ಥಿತಿಗತಿ ಹೇಗಿತ್ತೆಂಬುದನ್ನೂ ಬಾರತದಲ್ಲಿ ಮಹಾವೀರನ ಮತ್ತು ಬುದ್ಧನ ಕಾಲದಲ್ಲಿ ಇಲ್ಲಿನ ಸಾಮಾಜಿಕ ಸ್ಥಿತಿಗತಿ ಹೇಗಿತ್ತೆಂಬುದನ್ನೂ ಅಧ್ಯಯಿಸಿದರೆ ಅವರು ಹೇಳಿದ್ದರ ಯುಕ್ತತೆ ತಿಳಿಯುತ್ತದೆ) ಸಾಮಾನ್ಯ ಜನ ತಮ್ಮ ದೈನಂದಿನ ಜೀವನದಲ್ಲಿ ಪಾಲಿಸಬೇಕಾದ ನಿಯಮಾವಳಿಯನ್ನು ರೂಪಿಸಿ ಪ್ರಚಾರ ಮಾಡಿದರೆಂದು ನಂಬಿದ್ದೇನೆ. ಸುದೀರ್ಘಕಾಲ ಈ ನಿಯಮಾವಳಿಯ ಪಾಲನೆ, ಅದು ಕುರುಡು ಪಾಲನೆ ಆದರೂ ಅಡ್ಡಿಯಿಲ್ಲ, ಧರ್ಮಪಥದಲ್ಲಿ ಮುನ್ನಡೆಸುತ್ತದೆ ಎಂಬ ನಂಬಿಕೆ ಅವರದ್ದು ಆಗಿರುವಂತೆ ತೋರುತ್ತದೆ. ದುರದೃಷ್ಟವಶಾತ್, ಅವರ ಕಾಲಾನಂತರ ಆವರ ಊತ್ತರಾಧಿಕಾರಿಗಳು ಅದನ್ನೊಂದು ಕುರುಡು ಪಂಥವನ್ನಾಗಿ ಅಥವ ಮತವನ್ನಾಗಿ (ರಿಲಿಜನ್) ಪರಿವರ್ತಿಸಿ ಗತಿಸಿದ ದಾರ್ಶನಿಕರಿಗೆ ‘ಮತಾಚಾರ್ಯ ಅಥವ ಮತ ಸಂಸಂಸ್ಥಾಪಕ’ ಪಟ್ಟ ಕಟ್ಟಿ ಅವರ ಮೂಲ ಆಶಯ ಈಡೇರದಿರುವುದಕ್ಕೆ ಕಾರಣರಾದರು. ಆಧುನಿಕ ವಿಚಾರವಾದಿಗಳು ‘ಮತ’ ಮತ್ತು ‘ಧರ್ಮ’ ಪದಗಳನ್ನು ಸಮಾರ್ಥಕಗಳಾಗಿಸಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲು ಕಾರಣರಾದರು ಎಂಬುದು ನನ್ನ ಅನಿಸಿಕೆ. ನನ್ನ ದೃಷ್ಟಿಯಲ್ಲಿ ‘ಧರ್ಮ’ ಎಂಬ ಪದಕ್ಕೆ ಇಂಗ್ಲಿಷಿನಲ್ಲಿ ಪಾರಿಭಾಷಿಕ ಪದವೇ ಇಲ್ಲ. ‘ರಿಲಿಜನ್’ ಎಂಬ ಪದ ‘ಧರ್ಮ’ ಎಂಬ ಪದಕ್ಕೆ ಸಮಾರ್ಥಕವಲ್ಲ. ವಿಚಾರವಾದಿಗಳೂ ‘ಧರ್ಮಾಂತರ’ ಅನ್ನುವುದಿಲ್ಲ, ‘ಮತಾಂತರ’ ಅನ್ನುತ್ತಾರೆ ಎಂಬುದನ್ನು ಗಮನಿಸಿ.
ಈಗ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಇರುವ ಮತಗಳ ಪೈಕಿ ಯಾವುದು ಶ್ರೇಷ್ಠ ಎಂದು ಚರ್ಚಿಸತೊಡಗುವುದು ಅಪೇಕ್ಷಣೀಯವಲ್ಲ ಎಂಬುದು ನನ್ನ ಅಭಿಮತ. ಇಂಥ ಚರ್ಚೆ ಮೂಲ ಆಶಯಕ್ಕೆ – ‘ಲೋಕಾಃ ಸಮಸ್ತಾಃ ಸುಖಿನೋ ಭವಂತು, ಸರ್ವೇ ಜನಾ ಸುಖಿನೋ ಭವಂತು, ಸರ್ವ ಜೀವಜಂತು ಸುಖಿನೋ ಭವಂತು’ – ಧಕ್ಕೆ ಉಂಟುಮಾಡುವುದರಿಂದ. ಅಂತೆಯೇ, ನಾವು ಯಾವ ಸಮುದಾಯದಲ್ಲಿ ಜನಿಸಿದ್ದೇವೋ ಆ ಸಮುದಾಯ ಯಾವ ‘ಮತ’ವನ್ನು ಒಪ್ಪಿಕೊಂಡಿದೆಯೋ ಆ ‘ಮತ’ದಲ್ಲಿಯೇ ಮುಂದುವರಿಯುವುದು ಬಹುತೇಕ ಸಂದರ್ಭಗಳಲ್ಲಿ ಆತ್ಮೋದ್ಧಾರಕ್ಕೆ ಪೂರಕ ಎಂಬುದು ನನ್ನ ನಂಬಿಕೆ. ಎಲ್ಲ ಮತಾಚರಣೆಗಳಲ್ಲಿಯೂ ದೋಷಗಳು ನುಸುಳಿರುವುದರಿಂದ ಆ ಮತದಲ್ಲಿಯೇ ಇದ್ದುಕೊಂಡು ಅದರ ಸುಧಾರಣೆಗೆ ಶ್ರಮಿಸುವುದು ಯುಕ್ತ ಎಂಬುದು ನನ್ನ ಅಭಿಮತ. (ದುರದೃಷ್ಟವಶಾತ್, ಮಠಾಧಿಪತಿಗಳು ಮತಾಚರಣೆಯ ಸುಧಾರಣೆಯ ಕುರಿತು ಗಮನಹರಿಸುತ್ತಿಲ್ಲ, ಈ ಮುನ್ನ ಉಲ್ಲೇಖಿಸಿದ ಮೂಲ ಆಶಯ ಮರೆತು ಹಿಂದಿನಿಂದ ಏನು ನಡೆದುಬಂದಿದೆಯೋ ಅದನ್ನು ಹಾಗೆಯೇ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ) ಎಲ್ಲ ವಿಶ್ವವ್ಯಾಪಾರಗಳೂ ಕ್ರಮಬದ್ಧವಾಗಿ ನಿಯಮಾನುಸಾರವಾಗಿಯೇ ಜರಗುತ್ತವೆ ಎಂದಾದರೆ ಜನನ-ಮರಣ ವಿದ್ಯಮಾನಗಳು ಮಾತ್ರ ಆಕಸ್ಮಿಕಗಳಾಗಿರಲು ಸಾಧ್ಯವಿಲ್ಲ, ನಿಯಂತ್ರಕ ನಿಯಮವೇನೆಂಬುದನ್ನು ‘ವೈಜ್ಞಾನಿಕವಾಗಿ’ ಪತ್ತೆಹಚ್ಚಲಾಗದಿರುವುದು ನಿಯಮರಾಹಿತ್ಯದ ಸೂಚಕವಲ್ಲ ಎಂಬ ಕಾರಣಗಳಿಗಾಗಿ.
ಯಾವ ಮತದವನೇ ಆಗಿರಲಿ, ಧರ್ಮೋಲ್ಲಂಘನೆ ಮಾಡಿದರೆ ಏನಾಗುತ್ತದೆ? ಅಂದ ಹಾಗೆ, ಇಲ್ಲಿ ನಾನು ಮತಾಚರಣೆಯ ಉಲ್ಲಂಘನೆ ಎಂಬ ಪದಪುಂಜವನ್ನು ಉದ್ದೇಶಪೂರ್ವಕವಾಗಿಯೇ ಬಳಸಿಲ್ಲ. ಧರ್ಮದ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡುವ ಮತಾಚರಣೆಯೂ ಧರ್ಮೋಲ್ಲಂಘನೆಯೇ ಆಗುತ್ತದೆ. ಧರ್ಮೋಲ್ಲಂಘನೆ ಮಾಡಿದರೆ ಏನಾಗುತ್ತದೆ? ಧರ್ಮೋಲ್ಲಂಘನೆಯನ್ನೇ ಕಾಯಕ ಮಾಡಿಕೊಂಡವರು ಭಯಪಡಬೇಡಿ, ನಿಮ್ಮ ಕಾಯಕ ಮುಂದುವರಿಸಿ. ನಿಮಗೆ ಸಿಕ್ಕುವ ಗರಿಷ್ಠ ಶಿಕ್ಷೆ ‘ಧರ್ಮಪಾಲನೆ’ ರೂಢಿಯಾಗುವ ತನಕ ‘ಪುನರಪಿ ಜನನಂ, ಪುನರಪಿ ಮರಣಂ’. ಆತ್ಮದ ಅಸ್ತಿತ್ವವನ್ನೇ ಅಲ್ಲಗಳೆಯುವವರು ನೀವಾಗಿದ್ದರೂ ಚಿಂತೆ ಬೇಡ. ನೀವು ಈ ಮುನ್ನ ನಾನು ಉಲ್ಲೇಖಿಸಿದ ಧರ್ಮಪಾಲನೆಯ ಆಶಯವನ್ನು ನೀವು ಒಪ್ಪಿ ಅದರ ಈಡೇರಿಕೆಗೆ ಶ್ರಮಿಸಿದರೆ ಸಾಕು.ವಿಶ್ವನಿಯಮಗಳಿಗೆ ಹೊರತಾದದ್ದು ಇಲ್ಲವೇ ಇಲ್ಲವಾದ್ದರಿಂದ ನಿಯಮಾನುಸಾರ ಏನಾಗಬೇಕೋ ಅದು ಆಗಿಯೇ ಆಗುತ್ತದೆ. (ನೋಡಿ: ಬ್ಲಾಗ್: ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ ಮತ್ತು ಬ್ಲಾಗ್: ಪುನರ್ಜನ್ಮ – ಒಂದು ವಿವೇಚನೆ)
‘ಧರ್ಮೋ ರಕ್ಷತಿ ರಕ್ಷಿತಃ’ ಅಂದಿದ್ದಾರಲ್ಲವೇ ನಮ್ಮ ದಾರ್ಶನಿಕರು. ದಾರ್ಶನಿಕನಲ್ಲದ ನಾನು ನಂಬುತ್ತೇನೆ ‘ಅಧರ್ಮಿಯನ್ನೂ ಧರ್ಮಿಯಾಗಿಸುತ್ತದೆ ದೇವರು ತತ್ವದಲ್ಲಿ ಅಂತಸ್ಥವಾಗಿರುವ ನಿಯಮಗಳು’. ಎಂದೇ, ನೀವು ಪ್ರಜ್ಞಾಪೂರ್ವಕವಾಗಿ ಆಯ್ದುಕೊಂಡಿರುವ ಜೀವನಪಥದಲ್ಲಿ ಧೈರ್ಯವಾಗಿ ಮುಂದುವರಿಯಿರಿ. ಸಿಹಿ ಅನುಭವವೇ ಆಗಲಿ, ಕಹಿ ಅನುಭವವೇ ಆಗಲಿ, ಆದ ಬಳಿಕ ಅಂತಃಅವಲೋಕನ ಮಾಡಿಕೊಂಡು ಮುಂದಿನ ಹಾದಿ ನಿರ್ಧರಿಸಿ ಮುಂದುವರಿಯಿರಿ.
* * * * * * * *
ಚಿತ್ರಕೃಪೆ : ಅಂತರ್ಜಾಲ
Its nice……
nice……….
ಮಾನ್ಯರೇ, ಧರ್ಮದ ಬಗ್ಗೆ ತಿಳಿಸಿದ್ದಿರಿ. ಆದರೆ, ಈಗಿನ ಕಾಲಕ್ಕೆ ಪ್ರಸ್ತುತವೇ. ಪ್ರಾಮಾಣಿಕತೆ ಹೋಯಿತು. ಇಗೆನಿದ್ದರು ಹಣ. ಈಗಿನ ಮಕ್ಕಳಿಗೆ ಏನಿದ್ದರು ಕಂಪ್ಯೂಟರ್, ಕಾಲ್ ಸೆಂಟರ್, ಎಂ.ಬಿ.ಎ. ಬಿ.ಬಿ.ಎಂ. ಇವುಗಳನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ಓದುವುದು ಅಂಗ್ಲ ಮಾಧ್ಯಮ. ಅದರಲ್ಲಿ ಧರ್ಮದ ಬಗ್ಗೆ ಯಾವುದೇ ಪಟ್ಯ ಇರುವುದಿಲ್ಲ. ಒಂದು ರೀತಿಯಲ್ಲಿ ನಿಮ್ಮ ಲೇಖನ ಈಗಿನ ಪೀಳಿಗೆಗೆ ಅರ್ಥವೂ ಆಗುವುದಿಲ್ಲ. ಹಾಗೆಂದರೇನು? ಎಂದು ಪ್ರಸ್ನಿಸುತ್ತವೆ. ಯಾವುದೇ ಧರ್ಮವಾಗಲಿ ಅದರ ಮೂಲರ್ಥವನ್ನು ಪರಿಗಣಿಸುವುದಿಲ್ಲ. ಧರ್ಮ ಹೋದರೇನು, ಸ್ವಾಭಿಮಾನ ಹೋದರೇನು, ಸ್ವಾಪ್ರತಿಸ್ತ್ಷೆಹೋದರೇನು? ಒಟ್ಟಿನಲ್ಲಿ ಹಣ, ಹೆಸರು ಸಂಪಾದಿಸಬೇಕು ದೇಶ, ಧರ್ಮ ಯಾರಿಗೆ ಬೇಕು. ಮಾನವೀಯತೆ ಬರಬೇಕಾದರೆ ಮನುಷ್ಯನಿಗೆ ಧರ್ಮದ ಅರಿವಿರಬೇಕು. ಅದು ಇಲ್ಲವಾದರೆ. ಪ್ರಾನಿಗಲಿಗಿಂದ ಹೀನವಾಗಿ ನಡೆದುಕೊಳ್ಳುತ್ತಾನೆ. ಒಂದು ರೀತಿಯಲ್ಲಿ ಧರ್ಮದ ಭೂನದಿಯೇ ನಾಶವಾಗಿದೆ. ನಾಮಕಾವಸ್ತೆಗೆ ಹಿಂದುಗಲೆಂದು ನಾವಿದ್ದೇವೆ. ನಮ್ಮಲೇ ಸಾಕಷ್ಟು ಅಂತರವಿದೆ. ಈಗಿನ ಧರ್ಮಪರವಾದ ಅಂದೋಲನ, ಕ್ರಾಂತಿಗಳು ಉಪಯೋಗವಿಲ್ಲದನ್ತಾಗಿವೆ. ನಮ್ಮ ಹಿಂದೂ ಧರಮದಲ್ಲಿಯೇ ನಾಲ್ಕು ವರ್ಣಗಳಿವೆ. ಅವುಗಲ್ಲಲ್ಲಿ ನೂರಾರು ಕವಲುಗಳಿವೆ. ಇದರಿಂದ ಹತಾಶರಾದ ಅಥವಾ ಗೊಂದಲಕ್ಕಿದಾದವರು, ಇದನ್ನೇ ಮುಂದಿಟ್ಟುಕೊಂಡು, ಕಾರಣ ನೀಡಿ, ಅಸೆ ಆಮಿಷಕ್ಕೆ ಬಲಿಯಾಗಿ ಮತಾಂತರ ಮಾಡುತ್ತಾರೆ. ಇದಕ್ಕೆ ಪರಿಹಾರವೂ ಇಲ್ಲ ಉತ್ತರವೂ ಇಲ್ಲ. ಏನಾದರೂ ಧರ್ಮದ ಬಗ್ಗೆ ನಡೆಯುತ್ತಿರುವ ವಿಧ್ಯಮಾನಗಲ್ಲನು ಗಮನಿಸುತ್ತಿದ್ದರೆ. ನೋವಾಗುತ್ತದೆ. ಅಲ್ಲವೇ? ಧನ್ಯವಾದಗಲೊಡನೆ, ವಂದನೆಗಳೊಡನೆ.
ಸರಿಯಾಗಿ ವಿವರಿಸಿದ್ದೀರ ಧರ್ಮ ಮತ್ತು ಮತಗಳ ಬಗ್ಗೆ. ಆದರೆ ಸ್ರಷ್ಟಿಯ ಈ ‘ನಿರ್ವಿಕಾರ’ ಸ್ಥಿತಿಯನ್ನು ‘ವಿಚಿತ್ರತೆ’ ಎಂದು ಉಪಯೋಗಿಸಿದ್ದು ಸರಿಯೆನಿಸಲಿಲ್ಲ. ಯಾಕೆ ಎಂದರೆ ‘ವಿಚಿತ್ರತೆ’ ಎಂದರೆ ಕ್ರಮಬದ್ಧತೆಯಿಂದ (order and reasoning) ಹೊರತಾಗಿದ್ದು. ಆದರೆ ಸ್ರಷ್ಟಿಯಲ್ಲಿನ ಎಲ್ಲ ಘಟನೆಗಳೂ ಒಂದು order ಪ್ರಕಾರ ನಡೆಯುತ್ತದೆ. cause ಮತ್ತು effect ಎಂದು ಹೇಳುವಂತೆ. ಆದ್ರೆ ನೀವು ಹೇಳಿದಂತೆ ಅದು ನಿರ್ವಿಕಾರ, ಮತ್ತು ನಿರ್ಗುಣ. ಬುದ್ಧನೂ ಕೂಡ ಇದನ್ನೇ ಹೇಳಿದ್ದು. ಅದನ್ನೇ ‘ಶೂನ್ಯವಾದ’ ಎಂದು ಜನರು ಅರ್ಥೈಸಿದ್ದು.
ಆದರೆ ಈ ಮಧ್ಯೆ ಬೌದ್ಧ ಧರ್ಮವನ್ನು ‘ಮತ(religion)’ ಎಂದು ಪರಿಗಣಿಸಿದ್ದು ಸರಿ ಅಲ್ಲ ಎಂದೆನಿಸುತ್ತದೆ. ಯಾಕೆಂದರೆ ಬುದ್ಧ ಯಾವುದೇ ದೇವರ ಅಸ್ತಿತ್ವದ ಕುರಿತು ಹೇಳಿಲ್ಲ. ಯಾವುದೇ ಧರ್ಮಗ್ರಂಥವನ್ನೂ ಕೂಡ ಬರೆದಿಲ್ಲ. ಹಾಗೆಯೇ ಯಾವುದೇ ಧರ್ಮಗ್ರಂಥವನ್ನೂ blind ಆಗಿ ಅನುಸರಿಸಬೇಡಿ ಎಂದೂ ಕೂಡ ಹೇಳಿದ.ಹಾಗಾಗಿ buddism ಕೂಡ universal ಎನ್ನಬಹುದು. ಆದರೆ ಅವನ ನಂತರ ಬಂದ ಬುದ್ಧಿಸ್ಟ್ ಗಳು ಬೇರೆ ಬೇರೆ ಆಚರಣೆ, ನಂಬಿಕೆಗಳನ್ನು ರೂಢಿಸಿಕೊಂಡರು.