ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 14, 2011

ಮೆಸೇಜೆಂಬ ಅಂಚೆ

‍ನಿಲುಮೆ ಮೂಲಕ

-ಪ್ರಶಸ್ತಿ.ಪಿ

ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. “ಮೆಸೇಜೆಂಬ ಅಂಚೆ” .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. ಸಂದೇಶ ಹಾಕದು ಜಂಗಮದಾಗೆ, ಅಂಚೆ ಹಾಕದು ಡಬ್ದಾಗೆ. ಅದುಕ್ಕೂ ಇದುಕ್ಕೂ ಎಂತ ಸಂಬಂಧ ಗುಂಡು ಅಂದ್ಲು ಸರಿತಾ. ಹೌದು ಕಣ್ಲಾ, ಏನೂ ತಿಳ್ಯಾಕಿಲ್ಲ, ನೀನೇ ಬುಡ್ಸಿ ಹೇಳಪಾ ಸಾಯಿತಿ ಅಂತ ಕಾಲೆಳೆದ ತಿಪ್ಪೇಶಿ.

ಏ ಥೋ, ಸಾಯಿತಿ ಅಲ್ಲೋ , ಸಾಹಿತಿ.. “ಕೋಣಂಗೆ ಕಿನ್ನರಿ ನಾದನೇ ತಿಳ್ಯಕ್ಕಿಲ್ಲ” ಅಂತ ಹಾಡಕ್ಕೆ ಶುರು ಹಚ್ಕಂಡ ಗುಂಡ..ಎಲ್ಲಾ ನಗಕಿಡಿದ್ರು.  ಕದ್ದಿರೋ ಟ್ಯೂನಿಗೆ ಗೊತ್ತಿರೋ ಗಾದೆ ಸೇರ್ಸಿ ಹೊಸ್ಯೋ ಬದ್ಲು ನೀನು ಬರ್ದಿದ್ದಲಿ ಹೊಸದೇನಿದೆ ಹೇಳು ಅಂದ ತಿಪ್ಪ ಸ್ವಲ್ಪ ಬೇಜಾರಾಗಿ. ಮುಂಚೆ ಎಲ್ಲ ಅಂಚೆ ಕಳಿಸ್ತಿದ್ವಿ, ಈಗ ಮೆಸೇಜು ಅಷ್ಟೆಯ ಬೇರೆಲ್ಲಾ ಅಲ್ಲಿದ್ದಿದ್ದೇ ಇಲ್ಲಿ, ಇಲ್ಲಿದ್ದದ್ದೇ ಅಲ್ಲಿ ಅಂದ ಗುಂಡ. ಮಾರ್ರೆ ವೇದಾಂತ ತರ ಹೇಳೋದು ಬಿಟ್ಟು ಸ್ವಲ್ಪ ಬಿಡ್ಸಿ ಹೇಳೂಕಾತ್ತ ? ಅಂದ ಮಂಜ. ಸರಿತಾ, ಇಳಾನೂ ಅದೇ ಸರಿ ಅನ್ನೋ ತರ ಹೂಂ ಅಂದ್ರು..

ವಿಳಾಸ ಸರಿ ಇದ್ರೂ ಅಂಚೆ ಕಳ್ಸಿದ್ದು ಕಳ್ದೇ ಹೋಗ್ತಿತ್ತು ಕೆಲೋ ಸಲ.ಅದೇ ತರ ಸಂದೇಶಗಳ “ಕಳಿಸುವಿಕೆ ವಿಫಲ” ಎಂಬ Delivery Report ಉ ಅಂದ ಗುಂಡ. ಎಲ್ಲರಿಗೂ ಒಂದ್ಸಲ ಕತ್ಲಲ್ಲಿ ಬಲ್ಬು ಹತ್ಕಂಡಗಾಯ್ತು. ಗುಂಡನ ಮುಖದಲ್ಲಿ ಈಗ ನಗು ಮೂಡಿತು.. ಮುಂದುವರ್ಸಿದ ಹಾಗೆ.

ಇನ್ನು ವಿಳಾಸ ಸರಿ ಬರಿದೆ ರಾಮಪ್ಪ, ಬೆಂಗಳೂರು ಅಂತ ಬರ್ಯೋರು..ಮಗ, ರಾಮಪ್ಪ ಅನ್ನೋನು ಬೆಂಗಳೂರಲ್ಲಿದಾನೆ ಅನ್ನೋ ಖುಷೀಲಿ..  ಯಾವ ಬೀದಿ,ಎಷ್ಟನೇ ಮನೆ, ಏರಿಯಾ, ಕೇರಿ ಏನೂ ಇಲ್ಲೇ ಇಲ್ಲ. ಬರ್ದವನುದ್ದು ಪಾಪ ಸಣ್ಣ ಊರು. ಅಲ್ಲಿ ಇದ್ದಿದ್ದೇ ಹತ್ತು ಮನೆ.ಆದ್ರೆ ಬೆಂಗ್ಳೂರು ಹಂಗಾ? ಅದ್ನ ಯಾವ ರಾಮಪ್ಪಂಗೆ ಕೊಡದು. ಮತ್ತೆ ಕಳ್ಸಿದವಂಗೇ  ವಾಪಾಸು ಹೋಗೋದು ಅದು. ದಂಡ ಬೇರೆ ಹಾಕೋರು!!! ಆ ಪತ್ರ ಬಿಡಿಸ್ಕಳಕ್ಕೆ ದಂಡ ಕಟ್ಟಿ ಬಿಡಿಸ್ಕೋಬೇಕು.. ಅಷ್ಟೆಲ್ಲಾ ಸುತ್ತಿಸಿದ್ದಕ್ಕೆ !!! ಹೂಂ ಸರಿ, ಅದು ಹಳೇ ಪುರಾಣ. ಅದು ಇಲ್ಯಾಕೆ ಅಂದ ತಿಪ್ಪ. ಇಲ್ಲಿ ನೀನು ೧೦ ಅಂಕಿ ಹೊಡಿದೇ ಇದ್ರೆ ಅದೇ ಆಗದು. ಆ ಸಂದೇಶ ಮತ್ತೆ ನಿಂಗೇ ವಾಪಾಸ್ ಬರಕಿಲ್ವಾ ಅಂದ್ಳು ಸರಿತಾ.. ಅರ್ಥ ಆಗ್ತಾ ಇದೆ ತಂಗೂವ ಅನ್ನೋ ನಗೆ ಅವಳಿಗೆ.. ಎಲ್ಲಾ ಎಂದು ಚಪ್ಪಾಳೆ ಕೊಟ್ರು ಅವ್ಳಿಗೆ..

ಅದೇ ತರ ವಿಳಾಸ ತಪ್ಪು ಬರದು ಅಂಚೆ ಯಾರ್ಯಾರಿಗೋ ಹೋಗ್ತಿತ್ತು. ಒಂದೇ ಊರಲ್ಲಿ ಇಬ್ರು  ಕಾಳಪ್ಪ ಇದ್ರೆ, ಬರ್ದೋರು ಅವರ ಕುಟುಂಬದ ಹೆಸರನ್ನೋ, Initial ಅನ್ನೋ ಬರೀದಿದ್ರೆ ಅವ್ನಿಗೆ ಬರ್ದಿದ್ದು ಇವನಿಗೆ, ಇವನಿಗೆ ಬರ್ದಿದ್ದು ಅವನಿಗೆ ಎಲ್ಲಾ ಹೋಗ್ತಿತ್ತು. ಹೂಂ ಸರಿ, ಇದ್ರಲ್ಲಿ ಹೆಂಗೆ ಅಂದ ಮಂಜ. ಮೊನ್ನೆ ಇವ್ನ ಗೆಣೆಕಾರ ಇವ್ನಿಗೆ ರಾಮನಗರ ಪೋಲಿಸಾ ಅಂತ ಫೋನ್ ಮಾಡಿದ್ದ, ಮತ್ತೊಂದು ದಿನ ಬ್ಯಾಂಕಾ ಅಂತ ಸಂದೇಶ ಕಳ್ಸಿದ್ದ.. ಅವ ಇವ್ನ ಹೆಸ್ರನ್ನ ಸರಿ ಉಳ್ಸಿಕೊಂಡಿರ್ಲಿಲ್ಲಂತೆ. ಅಲ್ವಾ ಗುಂಡ ಅಂದ ತಿಪ್ಪ. ಹೂಂ, ಮಂಜು. ನೀವು ರಾಗಿಣಿ ಅಂದ್ಕಂಡು ಇಳಾಗೇ ಐಲು ಅಂತ ಸಂದೇಶ ಕಳ್ಸಿದ್ರಿ ಮೊನ್ನೆ ಅಂದ್ಳು ಸರಿತಾ.. ಏ ಹುಷ್ ಹುಷ್ ಅಂದ ತಿಪ್ಪ.. ಎಲ್ಲ ನಗಕಿಡಿದ್ರು ಮತ್ತೆ 🙂

ಹೂಂ, ವಿಳಾಸ ಬದಲಾದ್ರೆ ಎಷ್ಟೆಲ್ಲಾ ಅನಾಹುತ. ಆದ್ರೆ ವಿಳಾಸ ಬದಲಾದ್ರೂ ಒಂದೊಂದ್ಸಲ ಗೆಳೆಯರು ಸಿಗ್ತಾರೆ ಗೊತ್ತಾ ಇಲ್ಲಿ ಅಂದ ಗುಂಡ. ಹಾಂ ಹೌದು,ನನ್ನ ಅಣ್ಣ ಜಂಗಮ ತಗಂಡ ಹೊಸತ್ರಲ್ಲಿ ಸಿಕ್ಕಾಪಟ್ಟೆ ಉಚಿತ ಸಂದೇಶ ಇತ್ತು. ಮನಸಿಗೆ ಬಂದ ಸಂಖ್ಯೆಗೆಲ್ಲಾ ಹಾಯ್ , ಹಲೋ ಅಂತ ಸಂದೇಶ ಕಳಿಸ್ತಿದ್ದ ಅವ. ಉತ್ರ ಬಂತು ಅಂದ್ರೆ ಹಂಗೇ ಮಾತಾಡದು.. ಅವ್ರು ಯಾರೋ ಏನೋ, ಒಟ್ಟು ಅವ್ರನ್ನ ಗೆಳೆಯ/ಗೆಳತಿ ಮಾಡ್ಕಳದು.. ದಿನಾ ಚಾಟ್ ಮಾಡದು ಮಾಡ್ತಿದ್ದ.. ಕೆಲೋ ಸಲ ಗೊತ್ತಿರೋರ ಸಂಖ್ಯೆಯ ಯಾವುದಾದರೂ ಒಂದು ಅಂಕೆ ತೆಗ್ದು ಬೇರೆ ಹಾಕಿ ಕಳೋದು. ಸಾಲಾಗಿ ಒಂದಾದ ನಂತರ ಅದಕ್ಕಿಂತ ಹೆಚ್ಚಿನ ಸಂಖ್ಯೆಗೆ ಕಳ್ಸೋದು ಮಾಡ್ತಿದ್ದ.. ಓ, Pen Friends ಅಂತ ಇರ್ತಾರಲ್ಲ ಆ ತರ ಅಂದ್ಳು ಇಳಾ.. ಮತ್ತೆ ಗುಂಡನ ವಿಷಯಕ್ಕೇ ಬಂದಿದ್ದಕ್ಕೆ ಎಲ್ಲಾ ಒಮ್ಮೆ ಅವನನ್ನ ನೋಡಿ ನಕ್ಕರು.

ಅವ್ನೂ ನಕ್ಕ. ಹೂಂ. ಆದ್ರೆ ಕೆಲೋ ಸಲ ಪತ್ರ ಬರ್ದಿದ್ದಕ್ಕೆ ಉತ್ರನೇ ಬರ್ತಿರ್ಲಿಲ್ಲ. ಅವ್ರು ಸಿಗ್ಲೇ ಇಲ್ಲ ಅನ್ನೋರು ಆಮೇಲೆ.ಅದಕ್ಕೇ ಅಂತ ಬಂದಿದ್ದು ರಿಜಿಸ್ಟರ್ ಅಂಚೆ. ತಡೆ ನಾ ಹೇಳ್ತೆ, ಈ ಮೊಬೈಲಲ್ಲಿ Delivery Report ಅಲ್ವಾ ಅಂದ ಮಂಜ. ಈಗ ಮಂಜಂಗೂ ಒಂದು ಮೆಚ್ಚುಗೆ ಸಿಗ್ತು ಎಲ್ರ ಕಡೆಯಿಂದ. ಸಿಕ್ಕಿದ್ರೂ ಅವ್ರ ಉತ್ತರ ಕೊಡ್ತಿರ್ಲಿಲ್ಲ… ಇಷ್ಟು ದಿನ ಆದ್ರೂ ಪತ್ರಕ್ಕೆ ಉತ್ರ ಬರ್ಲಿಲ್ಲ ಅಂದ್ರೆ ಏನೋ ಆಗಿದೆ, ಎಲ್ಲವೂ ಸರಿ ಇಲ್ಲ ಅಂತ ಬೇಜಾರು ಶುರು ಆಗ್ತಿತ್ತು. ಈಗ ಮೆಸೇಜಿಗೆ ಉತ್ರ ಬರ್ಲಿಲ್ಲ ಸುಮಾರು ಹೊತ್ತಾದ್ರೂ ಅಂದ್ರೆ ಶುರು ಆಗತ್ತಲ ಆ ತರ ಅಲ್ವಾ ಅಂದ್ಳು ಇಳಾ… ಆದ್ರೆ ಯಾರೂ ಏನೂ ಹೇಳ್ಲಿಲ್ಲ. ಇಳಾ ಮುಖ ಪೆಚ್ಚಾಯ್ತು.. ಎಲ್ಲಾ ಒಟ್ಟಿಗೆ ನಗಕಿಡಿದ್ರು ಅವ್ಳ ಮುಖ ನೋಡಿ ಈಗ.. 🙂

ಹೂಂ, ಕೆಲೋ ಓಬಿರಾಯನ ಕಾಲದವ್ರು ಇರ್ತಾರಪ್ಪ. ಅವ್ರಿಗೆ ಸಂದೇಶ ಹಾಕಿದ್ರೆ ಹೋಗೋದೆ ಇಲ್ಲ. ಇವತ್ತು ಕಳ್ಸಿದ್ದು ನಾಳೆ ಹೋಗತ್ತೆ. ಅವ್ರು ಇನ್ನೊಂದು ವಾರದ ನಂತರ ಅದಕ್ಕೆ ಉತ್ರ ಕೊಡ್ತಾರೆ. Snail Mail ಅನ್ನೋದನ್ನ ಈಗ ಇಂತವ್ರಿಗೆ ಇಡ್ಬೋದೇನೋ ಅಲ್ವಾ ಗುಂಡ ಅಂತ ಗುಂಡಂಗೆ ಮತ್ತೆ ಕಾಲೆಳೆದ ತಿಪ್ಪ.. ಓ , ಅವ್ನ ತರ್ಕಾರಿ ಜಂಗಮ ಕಂಪ್ನೀನೆ ಸರಿ ಇಲ್ಲ ಬಿಡಿ ಅಂದ ಮಂಜ.. ಹೇ ಹಾಗೆಲ್ಲ ಅನ್ಬೇಡ.. ಇದು ಒಂದು ಹಾಕಿದ್ರೆ ಒಂದೇ ಕೊಡದು , ನಿಮ್ಮಂಗೆ ಒಂದು ಕಳ್ಸಿದ್ರೆ ನಾಲ್ಕು ಕಳ್ಸಲ್ಲ ಅಂದ ಗುಂಡ.. ಹೇ ಮತ್ತೆ ಜಗಳಕ್ಕೆ ಶುರು ಹಚ್ಕಂಡ್ರಾ.. ಗುಂಡ ನಿನ್ನ ಮೊಬೈಲನ್ನ ಯಾವಾಗ್ಲೂ ಮಲಗ್ಸೇ ಇಟ್ಟಿರ್ತೀಯ. ಮೊದ್ಲು ಅದ್ನ ಎಬ್ಸೋ ಬ್ಯಾಟ್ರಿ ಹಾಕು, ನಿನ್ನ ಒಳಪಟ್ಟಿ ಯಾವಾಗ್ಲೂ ಕಸದ ತೊಟ್ಟಿ ತರ ತುಂಬಿ ತುಳುಕ್ತಾನೇ ಇರತ್ತೆ. ಅದ್ನ ಸ್ವಲ್ಪ ಖಾಲಿ ಇಟ್ಕ. ಅವಾಗ ಎಲ್ರ ಸಂದೇಶಾನೂ ಬರುತ್ತೆ, ನಿನ್ನ ತರ್ಕಾರಿ ಬಗ್ಗೇನೂ ಯಾರೂ ಮಾತಾಡಲ್ಲ ಆಯ್ತಾ ಅಂತ ಸಮಾಧಾನ ಮಾಡಿದ್ಳು ಇಳಾ.

ಹೂಂ ಗುಂಡು. ಸ್ಯಾನೆ ಸಂಶೋಧನೆ ಮಾಡಿಟ್ಟಿ. ಅವಾಗ ಕಾಗದದ ಜೊತೆ ರಾಖಿ, ಸರ, ಮತ್ತೊಂದು ಎಲ್ಲ ಕಳಿಸ್ತಿದ್ರು. ಆ ತರಾ ಈಗ ಚಿತ್ರ ಸಂದೇಶ ಅಂತಿ? ಜೊತಿಗೆ ಅವಾಗಿನ ಪಾರ್ಸಲ್ಗಳು ಈಗಿನ MMS ಅಂತಿ ? ಅಂದ್ಳು ಸರಿತಾ. ಹೌದಮ್ಮಿ , ಗುಂಡ ಮಾಡದೆಲ್ಲಾ ಚೆಂದ್ ಕಾಣ್ತೀತಿ ನಿಂಗೆ, ನಾನೂ ಒಂದು ಬರೀಕ್ಯತ್ತೀನಿ ನೋಡು ಅಂದ ಟಾಂಗ್ ತಿಪ್ಪ. ಏನ್ ಮಾರ್ರೆ, ಚೂರು ಹೇಳ್ರಿ, ನಾವೂ ಕೇಂಬ ಅಂದ ಮಂಜ. ಅದ್ರ ಟೈಟಲ್ಲು ಹಿಂಗೊಂದಿಷ್ಟು ತರ್ಲೆ ತಲೆಗಳು ಅಂದ. . ಹೂಂ  ಅಂದ್ರು ಎಲ್ಲ..

ಮಾರ್ಚಲ್ಲಿ ಇಪ್ಪತ್ತೆಂಟೇ ದಿನ ಇದ್ರೆ ಹೆಂಗೆ? ಅಂತ ಮೊದ್ಲನೇದು ಅಂದ.ಯಾರಿಗೂ ಅರ್ಥ ಆದಂಗಿರ್ಲಿಲ್ಲ.   ಅಂದ್ರೆ ೪ ವರ್ಶಕ್ಕೊಂದ್ಸಲ ೨೯ ಬರ ಹಂಗೆ…ಆಗ್ಲೂ ಯಾರೂ ಬಾಯಿ ತಿಗಿಲಿಲ್ಲ. ಅದಕ್ಕೆ ಹೇಳದು.. ನಾನು ಬರ್ದಿದ್ದನ್ನ ಅರ್ಥ ಮಾಡ್ಕಳೋ ರೇಂಜಿಗೆ ಇಲ್ಲ ನೀವು. ಅದ್ಕೆ ಸುಮ್ನಿದೀನಿ ನಾನು ಅಂದ ತಿಪ್ಪ.. ಇಳಾಗೆ ತಡ್ಯಕ್ಕಾಗಿಲ್ಲ. ಹಂಗಾದ್ರೆ ಮಾರ್ಚ್ ೨೯ಕ್ಕೆ ಹುಟ್ಟಿದೋರ್ಗೆ ೪ ವರ್ಷಕ್ಕೊಂದ್ಸಲ ಹುಟ್ಟಿದಬ್ಬ ಅಂದ್ಳು. ಹೂ ಪಾಪ, ಏಪ್ರಿಲ್ ಒಂದಕ್ಕೆ ಆಚರಿಸಿಕೊಳ್ಬೋದಲ ಅಂದ್ಳು ಸರಿತಾ. ಎಲ್ರಿಗೂ ಕನ್ಫೂಸೇ.. ನಾಕೊರ್ಷಕ್ಕೊಂದ್ಸಲ ೨೯ ಕ್ಕೆ, ಉಳಿದಿದ್ದ ವರ್ಷ ಒಂದಕ್ಕೆ ಹಾರೈಸದು. ಸ್ವಲ್ಪ ಮಿಸ್ಸಾದ್ರೂ ಫೂಲೇ ಅವ್ರು.. ಹೆ ಹೆ ಹೆ ಅಂದ ತಿಪ್ಪ. ಯಾರಿಗೂ ನಗು ಬರ್ಲಿಲ್ಲ. 🙂 :-)..ತಿಪ್ಪನ ಮುಖ ಸಪ್ಪಗಾಯ್ತು..

ನೀ ಮಾತ್ರ ಬರಿ , ಪೇಪರಿಗೆ ಕಳ್ಸಿ ದೊಡ್ಡ ಸಾಹಿತಿ ಆಗು ನಂಗೊಂಚೂರೂ ಸಪೋರ್ಟ್ ಮಾಡ್ಬೇಡ ಗುಂಡ ಅಂದ.. ಹೇ, ನಾ ಇದ್ನ ಪೇಪರಿಗೆ ಕಳ್ಸತೀನಿ ಅಂತ ಯಾರು ಹೇಳಿದ್ರೋ.. ಸುಮ್ನೆ ಏನೋ ಯೋಚ್ನೆ ಮಾಡ್ತಿದ್ದೆ ಕಣ್ಲ.. ಅಷ್ಟರಲ್ಲಿ ನೀ ಬಂದೆ… ಅಂತೇನೋ ಹೇಳೋದ್ರೊಳಗೆ ಗುಂಡನ ಮೈಯೆಲ್ಲಾ ಒದ್ದೆ ಆಯ್ತು.. ಇದೆಲ್ಲಿಂದ ನೀರು ಬಿತ್ತು ಅಂತ ಅರ್ಥ ಆಗ್ಲಿಲ್ಲ.. ತಲೆ ಹೊರಳಿಸಿ ನೋಡಿದ್ರೆ….

ಏ ಹಾಳಾದೋನೆ, ಏಳೋ ಅಂದ್ರೆ ಅಂಚೆ, ಪಂಚೆ ಅಂತ ಏನೇನೋ ಬಡಬಡಾಯಿಸ್ತಾ ಇದೀಯ .. ಕಾಲೇಜಿಗೆ ಹೊತ್ತಾಗತ್ತೆ ಅಂತ ಎಬ್ಸಿ ಎಬ್ಸಿ ಸಾಕಾಯ್ತು ಅಂತ ಅಮ್ಮ ಇವನ ಮೇಲೆ ಖಾಲಿ ಮಾಡಿದ ಬಕೇಟು ಹಿಡಿದು ಸಹಸ್ರ ನಾಮ ಮಾಡ್ತಾ ಇದ್ರು..

*************

ಚಿತ್ರಕೃಪೆ: marketinghackz.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments